ಈ ವಾರದ ಪ್ರಸ್ತುತಿ ಕಥೆಗಳಲ್ಲೊಂದು ಕಥೆ, ಸ್ವಲ್ಪ ಆತ್ಮ ಕಥೆ ಸಹ. ಇದನ್ನು ಬರೆಯುವಾಗ ನನಗೆ ಸ್ವಲ್ಪ ಮುಜುಗರವಾಗುತ್ತಿದೆ. ಯಾಕೆ ಅಂತ ಮುಂದೆ ಓದಿದರೆ ನಿಮಗೇ ಗೊತ್ತಾಗುತ್ತದೆ. ಅದಲ್ಲದೆ ಈ ವಾರವೂ ಒಂದು ಪುಸ್ತಕ ಪರಿಚಯ ಬರೆಯಲೂ ಹಿಂದೇಟು ಹಾಕುತ್ತಿದ್ದೇನೆ.ದಯವಿಟ್ಟು ಎಂದಿನಂತೆ ಓದಿ ಕಮೆಂಟ್ ಮಾಡಲು ಮರೆಯ ಬೇಡಿ! (ಸಂ)
ಇತಿಹಾಸದ ದಾಖಲೆ ’ಅನಿವಾಸಿ’ ಬ್ಲಾಗ್ ಜಾಲತಾಣ ಯು ಕೆ ಕನ್ನಡಿಗರ ತಂಗುದಾಣ ಎನ್ನುವ ಉಪಶೀರ್ಷಿಕೆಯನ್ನು ಹೊತ್ತು ೨೦೧೪ರಲ್ಲಿ ಶುರುವಾದಾಗಿನಿಂದ ತಪ್ಪದೇ ವಾರಕ್ಕೊಮ್ಮೆಪ್ರತಿ ಶುಕ್ರವಾರದಂದು ಒಂದು ಬರಹವನ್ನೊ, ಕವಿತೆ, ಕಥೆ, ವಿಮರ್ಶೆ, ಹರಟೆ, ಪುಸ್ತಕ ಪರಿಚಯ ಹೀಗೇ ಯವುದೇ ಒಂದು ಹೊಸ ಬರಹವನ್ನು ಪ್ರಕಟಿಸುತ್ತಲೇ ಬಂದಿದೆ. ತಪ್ಪಿದರೆ ವಾರಾಂತ್ಯದಲ್ಲಿ. ಕೆಲವೊಮ್ಮೆ ವಿಶೇಷ ಪ್ರಸಂಗಗಳಲ್ಲಿ ಉತ್ಸಾಹಿ ಸಂಪಾದಕರ ಸರತಿ ಬಂದಾಗ, ಪ್ರಸಿದ್ಧ ಸಾಹಿತಿ ಅಥವಾ ಕವಿವರ್ಯರ ಜನ್ಮದಿನ ಬಂದಾಗ ವಾರಕ್ಕೆರಡು ಸಲ ಸಹ. ಸೂರ್ಯ ಪೂರ್ವದಲ್ಲಿ ಉದಯವಾಗುವದು ತಪ್ಪಿರಬಹುದು, ಆದರೆ ಅನಿವಾಸಿ ಮಾತ್ರ ಒಮ್ಮೆಯೂ ಉದಯವಾಗಲು ತಪ್ಪಿಸಿಲ್ಲ, ಎಂದು ಹೇಳಲಿಕ್ಕೆ ಹೊರಟಿದ್ದೆ, ಆದರೆ ಒಂದೇ ಒಂದು ಸಲ ಮಾತ್ರ ಅಚಾತುರ್ಯದಿಂದ ಒಂದು ಸಂಚಿಕೆ ತಪ್ಪಿ ಹೋಗಿತ್ತು, ಅಂದರೆ ೨೪ ತಾಸಿನ ಸೂರ್ಯಗ್ರಹಣ ಹಿಡಿದಿತ್ತು ಅನ್ನಿ. ಓದುಗರಲ್ಲಿ, ಪಾಳಿ ಸಂಪಾದಕರಲ್ಲಿ ಕೋಲಾಹಲ! ನನ್ನನ್ನು ಯಾಕೆ ಹಿಡಿದುಕೊಂಡರೋ ಏನೋ, ಯಾಕೆ ಈ ಸಲ ಅನಿವಾಸಿ ಬಂದಿಲ್ಲ ಅಂತ, ನನಗೇ ಈ-ಮೇಲು ಫೋನ್ ಕರೆಗಳ ಸುರಿಮಳೆ! ಆಗ ಪುಣ್ಯಕ್ಕೆ ವಾಟ್ಸಪ್ ಹಾವಳಿ ಇರಲಿಲ್ಲ! ಅದು ಯಾರ ಸರತಿಯಿತ್ತು ಅಂತ ನೆನಪಿಲ್ಲ. ಅವರು ಒಳಗೊಳಗೇ ಛಿಮಾರಿ ಹಾಕಿಕೊಂಡಂತೆ ಒದ್ದಾಡಿ ಬಿಟ್ಟರು!
ಇತ್ತೀಚೆಗೆ ಮತ್ತೆ ಒಬ್ಬರು ತಮ್ಮ ಪಾಳಿ (ಸರತಿ) ಪ್ರಕಾರ ’ಮೊಟ್ಟೆ ಇಡಲು’ ಮರೆತಾಗ ಇನ್ನೊಬ್ಬರ ಮೊರೆ ಹೋಗ ಬೇಕಾಯಿತು. ಮಾತುಕೊಟ್ಟಿದ್ದ ಅವರಿಗೂ ಅನಿವಾರ್ಯ ಕಾರಣಗಳಿಂದ ಆ ಗಡುವಿನಲ್ಲಿ ಬರೆದು ಕಳಿಸಲು ಅವರಿಗೂ ಅದು ಸಾಧ್ಯವಾಗದಾಗ ಈ ವಾರ ನಾನು ಪ್ರಕಟಿಸಬೇಕಾಗಿದ್ದ ಲೇಖನವನ್ನು ಆ ದಿನಕ್ಕೆ ಉಪಯೊಗಿಸಿದ್ದೆ. ಹೀಗಾಗಿ ಈ ವಾರಕ್ಕೆ ಏನು ಪ್ರಕಟಿಸುವಾ ಅಂತ ಯೋಚಿಸುತ್ತಾ ಇದ್ದೆ. ’ಸ್ಟಾಕ’ ಸರಕು ಯಾವುದೂ ಇರಲಿಲ್ಲ. ಅಷ್ಟು ದೊಡ್ಡ ಸರಕಿನ ಮೂಟೆ ಗೋದಾಮಿನಲ್ಲಿ ಇಟ್ಟಿರಲು ನಾನೇನೂ ಆ ಪ್ರತಿಭಾವಂತ ಲೇಖಕ-ಲೇಖಕಿಯರಂತೆಯೇ? ಏನೋ ಒಂದನ್ನು ’ಕಾಸಿ ಬಡಿಯುವವ’ನಿದ್ದೆ. ಅದು ಸಹ ಅಷ್ಟು ಸಮರ್ಕಪವಾಗಿ ಕೂಡಲಿಲ್ಲ. ಮತ್ತೆ ಇತಿಹಾಸದ ಪುನರಾವರ್ತನೆ ಆಗುವದರಲ್ಲಿತ್ತು. ಆಗ ಕೈಕೂಡಿಸಿ ನನ್ನನ್ನು ಬಚಾವು ಮಾಡಿದ್ದು ಒಬ್ಬ ಗತ ಇತಿಹಾಸಕಾರರೇ! ಕುತೂಹಲ ಕೆರಳಿತೇ? ಅದು ನನ್ನ ತಂದೆಯೇ!.
ಅನಿರೀಕ್ಷಿತವಾಗಿ ಕೈಗೆ ಬಂತು ಪುಸ್ತಕ Written in stone ಎನ್ನುವ ಆಂಗ್ಲ ನುಡಿಗಟ್ಟು ಇದೆ. ಅಂದರೆ ಒಮ್ಮೆ ಹೇಳಿದ್ದು, ನಿರ್ಧರಿಸಿದ್ದು ಅದನ್ನು ಬದಲಾಗಿಸಲಾಗುವದಿಲ್ಲಂತ. ಒಮ್ಮೊಮ್ಮೆ ಅದನ್ನು carved in stone ಎನ್ನುತ್ತಾರೆ. ಭಾರತದಲ್ಲಿ ಕಾಗದ ಮತ್ತು ಅದರ ಮೇಲೆ ಪ್ರಿಂಟಿಂಗ್ ಮಾಡುವುದು ತಡವಾಗಿ ಬಂದಿತು ಅಂತ ವಸುಧೇಂದ್ರರವರು ತಮ್ಮ ’ರೇಶ್ಮೆ ಬಟ್ಟ’ ಚರ್ಚಿಸುತ್ತ ಹೇಳಿದಂತೆ ನೆನಪು. ಅದಕ್ಕೇ ನಮ್ಮ ದೇಶದಲ್ಲಿ ಐತಿಹಾಸಿಕ ದಾಖಲೆಗಳು ತಾಮ್ರ ಶಾಸನ, ಶಿಲಾ ಶಾಸನ ಅಥವಾ ತಾಳೆಗೆರೆಯ ಬರಹಗಳನ್ನು ಆಧರಿಸಿ ರೂಪಗೊಂಡಿರುವದು ಸಹಜ. ನನ್ನ ದಿವಂಗತ ತಂದೆಯವರು ಒಬ್ಬ ಇತಿಹಾಸಜ್ಞರು, ಶಾಸನತಜ್ಞರು ಅಂತ ಪ್ರಸಿದ್ಧರಾಗಿದ್ದರು. ನಾನು ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಅವರ ಶಿಲಾಶಾಸನದ ಪ್ರತಿಗಳ ವೈಯಕ್ತಿಕ ಸಂಗ್ರಹವನ್ನು ನೋಡಿದ್ದು ನೆನಪಿದೆ. ಶಾಸನಗಳ ಪ್ರಾರಂಭದಲ್ಲಿ ಮೊದಲು ’ಓಮ್, ಸ್ವಸ್ತಿ, ಶ್ರೀ’ ಇತ್ಯಾದಿ ಹೇಳಿದ ನಂತರ ಒಂದು ಶಿವ ಅಥವಾ ವಿಷ್ಣು ದೇವಸ್ತುತಿಯಿರುತ್ತದೆ: ’ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲಸ್ಥಂಭಾಯ ಶಂಭವೇ’ ಅಂತ ಶಿವಾರಾಧಕರಿಂದ. ಈ ಎರಡು ಸಾಲಿನ ಶ್ಲೋಕವನ್ನಷ್ಟೇ ಕಲಿತು ಮನನ ಮಾಡಿ ಅದ್ರ ಆಧಾರದ ಮೇಲೆಯೇ ಕುಕನೂರಿನ ಸುತ್ತಮುತ್ತಲ್ಲಿನ, ಗುಡಿಗಳ ಮುಂದೆ, ಕಣ್ಣಿಗೆ ಕಂಡ, ವಿಪುಲವಾಗಿಲ್ಲಲ್ಲಿ ಸಿಕ್ಕ ಶಿಲಾಶಾಸನಗಳನ್ನು ಓದುವದನ್ನು ಅವರು ಸ್ವಾಧ್ಯಾಯದಿಂದಲೇ ಕಲಿತು ಕರಗತ ಮಾಡಿಕೊಂಡಿದ್ದಂತರಂತೆ. ನನಗೆ ಅವರ ವಿವಿಧ ಭಾಷೆಗಳಲ್ಲಿ ಬರೆದ ಐತಿಹಾಸಿಕ ಸಂಶೋಧನಾತ್ಮಕ ಲೇಖನ ಮತ್ತು ಪುಸ್ತಕಗಳ ಪರಿಚಯವಿದ್ದರೂ, (ಒಂದೆರಡು ಕಥೆಗಳನ್ನು ಬಿಟ್ಟರೆ) ಅವರು ಕಥೆಗಾರರು ಸಹ ಆಗಿದ್ದರು ಎನ್ನುವದರ ಬಗ್ಗೆ ಗಂಧವೇ ಇರಲಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆ ರಹಸ್ಯ ಬಯಲಾದದ್ದು, ಅಕಸ್ಮಾತ್ತಾಗಿ ಕಳೆದವಾರದಲ್ಲಷ್ಟೇ ನನ್ನ ಕೈಗೆ ಬಂದ ಅವರ ಕಥಾಸಂಗ್ರಹದ ಅಚ್ಚಾದ ಪ್ರತಿ! ಅದರ ಬಗ್ಗೆ ಹೇಳುವ ಮೊದಲು ನನ್ನ ಕನ್ನಡ ಕಲಿಕೆಯ ಬಗ್ಗೆ ಒಂದು ಚಿಕ್ಕ ವಿಷಯವನ್ನು ಹೇಳಬೇಕೆಂದಿರುವೆ.
ತಮಿಳು ಬಾಲಿಶ ತಲೆಗಳ ನಡುವೆ ಶಿರ್ಷಿಕೆ ನಿಮಗೆ ಬಿ ಜಿ ಎಲ್ ಸ್ವಾಮಿ ಅವರ ಇದೇ ತರದ ಹೆಸರಿನ ಪುಸ್ತಕವನ್ನು ನೆನಪಿಗೆ ತರಬಹುದು. ಅವರು ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ತಮಿಳು ನಾಡಿಗೆ ಹೋಗುವ ಮೊದಲೇ ನಾನು ಹುಟ್ಟಿದ್ದು ಧಾರವಾಡದಲ್ಲಿಯಾದರೂ ಕೂಡಲೇ ಊಟಿಯಲ್ಲಿ ಬಾಲ್ಯಾವಸ್ಥೆಯನ್ನು ಆರಂಭಿಸಿದ್ದೆ! ನನಗೆ ಕನ್ನಡದಲ್ಲಿ ಅಕ್ಷರಾಭ್ಯಾಸವಾದದ್ದೇ ನೆನಪಿಲ್ಲ. ತಿರುವಳ್ಳುವರ ಮೊದಲ ದ್ವಿಪದಿ ’ಅಗರ ಮೊದಲೆಳುತ್ತೆಲ್ಲಾಮ್’ ಹೇಳುವಂತೆ ತಮಿಳು ಶಾಲೆಗಳಲ್ಲಿಯೇ ಟೀನೇಜರ್ ಆಗುವ ವರೆಗೆ ಕಲಿತೆ. ತಮಿಳು ಮಗ್ಗಿಗಳಿಂದ ಹಿಡಿದು (ಇಂದಿಗೂ ಗುಣಾಕಾರಕ್ಕೆ ಅವುಗಳೇ ಮೊದಲು ನೆನಪಾಗುವವು) ಸಂಗಮ್ ತಮಿಳಿನ ಭೋ ಪರಾಕ್ ಹೇಳುತ್ತ ಬೆಳೆದೆ. ನಿಮಗೆಲ್ಲ ಗೊತ್ತಿರುವಂತೆ ತಮಿಳಿನಲ್ಲಿ ಮಹಾಪ್ರಾಣದ ಉಚ್ಚಾರವಿಲ್ಲ. ಕಾಗುಣಿತ ಎಂದರೇನು ಸಹ ಗೊತ್ತಿರದ ನನಗೆ ವ್ಯಂಜನಗಳ ನಾಲ್ಕೂ ಅಕ್ಷರಗಳಿಗೆ ಒಂದನ್ನೇ ಉಪಯೋಗಿಸಿ ರೂಡಿ. ನಾವು ಮೂವರು ಅಣ್ಣತಮ್ಮಂದಿರು ನಮ್ಮೊಳಗೆ ಮಾತನಾಡುತ್ತಿದ್ದುದು ತಮಿಳಿನಲ್ಲಿಯೇ. ಇಲ್ಲಿಯ ನಮ್ಮ ಮಕ್ಕಳಲ್ಲೂ ಸಾಮಾನ್ಯವಾಗಿ ಇದೇ ತರಹದ ಅನುಭವವನ್ನು ಕಾಣುತ್ತೇವೆ ಎನ್ನ ಬಹುದು, ಕೆಲವು ಅಪವಾದಗಳನ್ನು ಬಿಟ್ಟರೆ. ಅದಕ್ಕೇ ನಮ್ಮ ತಂದೆ ನಮ್ಮನ್ನು ’ಅಲ್ಪಪ್ರಾಣಿಗಳು’ ಕೊಂಗರ ಭಾಷೆಯನ್ನು ಮಾತಾಡ ಬೇಡಿ, ಅಂತೆಲ್ಲ ಟೀಕಿಸುತ್ತಿದ್ದರು. ತಾವಾಯಿತು, ತಮ್ಮ ಲೇಖನಗಳಾಯಿತು ಅಂತ ಯಾವಾಗಲೂ ಬರಹದಲ್ಲಿ ಮುಳುಗಿರುತ್ತಿದ್ದ ಅವರು ಒಂದು ಉಪಕಾರವನ್ನು ಮಾಡದಿರಲಿಲ್ಲ. ಕನ್ನಡ ಅಕ್ಷರಗಳನ್ನು ಕಲಿಸಿದ್ದು ಮತ್ತೆ ತಾವು ವಿಪುಲವಾಗಿ ಕನ್ನಡ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣಗಳು ಮತ್ತು ಕರ್ಮವೀರದಂಥ ನಿಯತ ಕಾಲಿಕಗಳಲ್ಲಿ ಮತ್ತು ಎರಡು ಮೂರು ಪತ್ರಿಕೆಗಳ ದೀಪಾವಳಿ ವಿಶೇಷಾಂಕಗಳಲ್ಲಿ ಬರೆಯುತ್ತಿದ್ದ ಲೇಖನಗಳನ್ನು ನಮಗೆ ಕೊಟ್ಟು ಅವ್ಯ್ಗಳ ಕಾಪಿ ಮಾಡಿಸುತ್ತಿದ್ದರು, ನಮಗೆ ಕನ್ನಡದ ರೂಢಿಯಾಗಲೆಂದು. ಆದರೆ ಕಥೆ ಪುಸ್ತಕ ಕನ್ನಡ ಪಠ್ಯ ಪುಸ್ತಕಗಳನ್ನು ಧಾರವಾಡಕ್ಕೆ ಹನ್ನೆರಡನೇ ವರ್ಷದಲ್ಲಿ ಬರುವ ವರೆಗೆ ಕಂಡಿರಲಿಲ್ಲ.
ಕ್ಲಾಸ್ ತುಂಬ ಹಲ್ ಕಟ್ಟರು! ಹಟಾತ್ತನೆ ಪಠ್ಯಕ್ರಮದ ಮಾಧ್ಯಮ ಒಮ್ಮೆಲೆ ತಮಿಳಿನಿಂದ ಕನ್ನಡಕ್ಕೆ ಒವರ್ನೈಟ್ ಬದಲಾದ ಕೂಡಲೇ ನಮಗೆ ಆದದ್ದು systemic shock! ಯಾರಾದರೂ ಮಾತನಾಡಿಸಿದರೆ ಉತ್ತರ ಹೇಳಲು ಬಾಯಿ ತೆರೆದಾಗ ಬಾಯಿಂದ ಹೊರಬೀಳುತ್ತಿದ್ದುದು ಸೆಂದಮಿಳಿನ ’ಜಿಬ್ಬರಿಷ್’ ಅಂತ ಸಹಪಾಠಿಗಳ ಕಂಪ್ಲೇಂಟ್! ಏನು ಬಡಬಡಿಸುತಾ ಇದ್ದೀಯಾ, ಅನ್ನಬೇಕು ಅರ್ಥವಾಗದ ಹುಡುಗರೆಲ್ಲ! ತಮಿಳು ನಾಡಿನಲ್ಲಿ ಅವರಿಗೆ ಅಡ್ಡ ಹೆಸರಿಲ್ಲ. ಉತ್ತರ ಕರ್ನಾಟಕದ ಗಂಡುಮೆಟ್ಟಿನ ಸ್ಥಳವಾದ ಧಾರವಾಡದಲ್ಲಿ ಒಂದಕ್ಕೆ ನಾಲ್ಕು ಅಥವಾ ಆರರವರೆದೆ ಒಂದು ಕ್ಲಾಸಿನಲ್ಲಿ ಕುಲಕರ್ಣಿ, ಪಾಟೀಲ, ’ಮನಿ’ಗಳು (ಮುಂದಿನ ಮನಿ, ಹಿತ್ತಲಮನಿ, ಮಿಟ್ಟಿಮನಿ,ಮೇಲ್ಮನಿ, ದೊಡ್ಮನಿ ಇತ್ಯಾದಿ) ವಿವಿಧ ’ಕಟ್ಟಿ’ಗಳ ಅಡ್ಡಹೆಸರಿನ ನಾಮಧೇಯ ಹೊತ್ತ ಸಾಧು ಹುಡುಗರು ಇದ್ದರು. ಇದೆಲ್ಲ ನಮಗೆ ಹೊಸತು; ಮತ್ತು ತಮಾಷೆ, ಸಹ! ಕ್ಲಾಸಿನಲ್ಲಿ ಪೀರಿಯಡ್ ಗಳ ಮಧ್ಯೆ, ’ಬ್ರೆಕ್’ ವಿರಾಮದಲ್ಲಿ ಗೋಲಿ (marbles) ಆಟ. ಅಂದರೆ ಜಗಳಾಟ. ಒಬ್ಬ ಹುಡುಗನಿಗೆ ರೇಗಿಸುತ್ತಿದ್ದಾಗ ಆತ ಎಲ್ಲರನ್ನೂ ಬೈಯುತ್ತ ’ಅಂವ ಒಬ್ಬ ಹಲಕಟ್ಟ, ಇಂವ ಒಬ್ಬ ಹಲಕಟ್ಟ, ಎಲ್ಲರೂ ಸೂ...ಮಕ್ಕಳು’ ಅಂತ ಶಿಷ್ಟ ಭಾಷೆಯಲ್ಲಿ ಮಂತ್ರ ಪುಷ್ಪ ತೂರುತ್ತಿದ್ದ. ಆ ದಿನ ಸಂಜೆಗೆ ಮನೆಗೆ ಹೋಗಿ ನಾವು ಆ ದಿನದ ಶಾಲೆಯ ವೃತ್ತಾಂತವೆಲ್ಲವನ್ನೂ ತಾಯಿಗೆ ಒಪ್ಪಿಸುವುದು. ಆಕೆ ಎಲ್ಲವನ್ನು ಲಕ್ಷ್ಯಗೊಟ್ಟು ಕೇಳಿ ಸಾಂತ್ವನ ಮಾಡುತ್ತ ಹುರಿದುಂಬಿಸುತ್ತಿದ್ದರು. ತಾಳ್ಮೆಯಿಂದ ಕೇಳುತ್ತಿದ್ದರು ಅವ್ವ. ಆಕೆಗೆ ಗೊತ್ತು, ಕನ್ನಡ ನಾಡಿನಲ್ಲಿ ತಮಿಳು ತಲೆಗಳಾಗಿದ್ದ ನಮ್ಮ ಪರದಾಟ! ಟಾಕು ಮಸಿ ದೌತಿ, ಬರೆಯಲು ಕಾಗದ, ಇವುಗಳ ಸಮುದ್ರದಲ್ಲಿ ತಂದೆಯವರು ಯಾವಾಗಲೋ ಕಳೆದು ಹೋಗಿರುತ್ತಿದ್ದರು ಆಗಲೇ. ಆ ದಿನ ನಾನು ಕೊಟ್ಟ ವರದಿ ನಮ್ಮ ಕ್ಲಾಸಿನಲ್ಲಿ ಒಂದೇ ಅಡ್ಡ ಹೆಸರಿನ ನಾಮಧಾರಿಗಳ ಲೇಟೆಸ್ಟ್ ’ಸ್ಕೋರ್’ ಹೇಳುತ್ತ, ’ನಮ್ಮ ಕ್ಲಾಸಿನಾಗ ಈಗ ನಾಲ್ಕು ಹಲಕಟ್ಟರು ಭರ್ತಿಯಾಗ್ಯಾರ’ ಅಂತ. ಅದನ್ನು ಕೇಳಿ ಬಿದ್ದು ಬಿದ್ದು ನಕ್ಕ ನಮ್ಮ ತಾಯಿ ’ಬರೀ ನಾಲ್ಕೇ? ನೀವು ಹೋಗೋ ಆ ಸಾಲಿ ಪ್ರಸಿದ್ಧ ಅದs. ಒಂದಿಪ್ಪತ್ತು ಹಲಕಟ್ಟರಾದರೂ ಸಿಗತಾರ ಆ ಸಾಲ್ಯಾಗ!’ ಅಂತ ಹೇಳಿ, ಆ ’ಬಿರುದಿನ’ ಅರ್ಥವನ್ನು ತಿಳಿಸಿ ಹೇಳಿದ್ದು ಇನ್ನೂ ನೆನಪಾಗುತ್ತದೆ, ಇದನ್ನು ಬರೆಯುವಾಗ. ವಾಯವ್ಯ, ಅವಯವದಂತೆ ಅವ್ವುಯ್ಯನೂ ಒಂದು ಭಾಗವನ್ನೇ ಸೂಚಿಸುತ್ತದೆಯೇ ಅಂತ ನಮಗೆ ಗೊಂದಲ. ಅವೆಲ್ಲವನ್ನು ಹಿಂದೆ ಹಾಕಿ ಅದು ಹೇಗೆ ಕನ್ನಡ ಕಲಿತೆವು ಅನ್ನುವ ವಿಷಯ ನನಗೆ ಇನ್ನೂ ವಿಸ್ಮಯದಾಯಕ!
ಅದ್ಯಾವ ಪುಸ್ತಕ? ನನ್ನಕೈಗೆ ಸಿಕ್ಕ ಪುಸ್ತಕವೆಂದರೆ ಈಗ ತಾನೆ ಅಚ್ಚಿನ ಮನೆಯಿಂದ ಹೊರಬಿದ್ದ ೧೯೫೧ ರಿಂದ ೧೯೫೩ರರ ಮಧ್ಯದಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ಕರ್ಮವೀರ ವಾರ ಪತ್ರಿಕೆಯಲ್ಲಿ ನನ್ನ ತಂದೆಯವರು (ಡಾ ಪಾಂಡುರಂಗ ದೇಸಾಯಿ) ಮಕ್ಕಳಿಗಾಗಿ ವಾರ ತಪ್ಪದೆ ಬರೆದ ಕಥೆಗಳ ಗುಚ್ಛ. ಬೇರೆ ಒಂದು ಪ್ರಾಜೆಕ್ಟ್ ಸಲುವಾಗಿ ಧಾರವಾಡದ ಕಿಟಲ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದ ಲೇಖಕ-ವಿಮರ್ಶಕ ಡಾ ಜಿ ಎಂಹೆಗಡೆಯವರು ಹುಬ್ಬಳ್ಳಿಗೆ ಹೋಗಿ ಹೋಗಿ ಈಗ ಝಿರಾಕ್ಸ್ ಮಾಡಿ ಪುಡಿಪುಡಿಯಾಗುತ್ತಿರುವ ಹಾಳೆಗಳ ಪ್ರತಿಗಳನ್ನು ಸಂಗ್ರಹಿಸಿ ಸಂಪಾದಿಸಿದ್ದು. ಅದು ಇನ್ನೂ ಲೋಕಾರ್ಪಣೆಯಾಗಿಲ್ಲ. ನನಗೆ ತುರ್ತು ಸುದ್ದಿ ತಲುಪಿಸೋಣ ಎಂದು ಫೋನು ಮಾಡಿದಾಗ ಅವರಿಗೆ ತಿಳಿಸಿ ಅಕಸ್ಮಾತ್ತಾಗಿ ಒಂದು ವಾರದ ನಂತರ ಯು ಕೆ ಗೆ ಪ್ರಯಾಣಮಾಡುತ್ತಿದ್ದ ನನ್ನ ಮಿತ್ರರಿಗೆ ಆ ಪುಸ್ತಕದ ಎರಡು ಪ್ರತಿಗಳನ್ನು ಕಳಿಸಿದರು. ಅದರ ಹೊದಿಕೆಯನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಅದರ ಹಿನ್ನುಡಿಯಲ್ಲಿ ಮೂಲ ಲೇಖಕರ ವಿವರದೊಂದಿಗೆ ಕಥೆಗಳ ವಿಸ್ತಾರದ ಪರಿಚಯ ಸಹ ನಿಮಗೆ ಓದಲು ಸಿಗುತ್ತದೆ. ಅವುಗಳ ಬಗ್ಗೆ ಸವಿಸ್ತಾರದ ವಿಮರ್ಶೆ ಮಾಡಲಾರೆ ಮತ್ತು ನನ್ನಿಂದ ಅದು ಉಚಿತವೂ ಅಲ್ಲ. ಅದನ್ನು ಓದುಗರಿಗೆ ಪ್ರಾಜ್ಞರಿಗೆ ಬಿಟ್ಟಿದ್ದು. ನನಗೆ ಮಾತ್ರ ನನ್ನ ತಂದೆ ಮಕ್ಕಳ ಕಥೆಗಳನ್ನು ಸಹ ಬರೆದಿದ್ದರು ಎನ್ನುವ ಸುದ್ದಿ ಗೊತ್ತೇ ಇರಲಿಲ್ಲ, ಅದು ಮಾತ್ರ ಸತ್ಯ. ಇತಿಹಾಸದ ಸಂಬಂದಿಸಿದ ಕಥೆ ಕಾದಂಬರಿ, ಮತ್ತು ವೈಚಾರಿಕ, ಸಂಶೋಧನಾತ್ಮಕ ಕೃತಿಗಳನ್ನು ಬರೆದುದ್ದುದು ಮಾತ್ರ ನನಗೆ ಗೊತ್ತಿತ್ತು. ಈಗ ೭೫ ವರ್ಷಗಳ ಹಿಂದಿನ ವಿವಿಧ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಅವರು ಬರೆದ ಕಥೆಗಳು ಇದರಲ್ಲಿವೆ. ಕೆಲವುಗಳಲ್ಲಿ ಹಿತೋಪದೇಶದಲ್ಲಿದ್ದಂತೆ ಮಾತಾಡುವ ಪ್ರಾಣಿಗಳ ಪಾತ್ರಗಳನ್ನು ಸೃಜಿಸಿದ್ದಿದೆ. ಪುಸ್ತಕದ ಪರಿಚಯವನ್ನಷ್ಟೇ ಮಾಡುವುದು ಈ ಲೇಖನದ ನನ್ನ ಉದ್ದೇಶವಾಗಿತ್ತು. ಆಸಕ್ತರಿಗೆ ಬೇಕಾದ ಉಳಿದ ವಿವರಗಳು ಕವರ್ ಚಿತ್ರದಲ್ಲಿ ಸಿಗುತ್ತವೆ. ಸಂಪಾದಿಸಿ ಪ್ರಕಟಿಸಿದ ಡಾ ಜಿ ಎಂ ಹೆಗಡೆಯವರಿಗೆ ಮತ್ತು ಇಲ್ಲಿಗೆ ತಂದು ಪೋಸ್ಟ್ ಮಾಡಿದ ನನ್ನ ಮಿತ್ರ ಡಾ ಶಿವಶಂಕರ್ ಅವರಿಗೂ ಹೃತ್ಪೂರ್ವಕ ಕೃತಜ್ಞತೆಗಳು.