ನನ್ನ ಬಗ್ಗೆ ಒಂದಿಷ್ಟು….
ನಾನು ಸುಹಾಸ್ ಪುರುಷೋತ್ತಮ ಕರ್ವೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶವಾದ ಕಾರವಾರದ ಸದಾಶಿವಗಡ ಎಂಬ ಗ್ರಾಮದವನು.
Electronics & Communication ನಲ್ಲಿ ಇಂಜಿನಿಯರಿಂಗ್ ಪದವೀಧರನಾದ ಬಳಿಕ ‘ಟೆಕ್ ಮಹೀಂದ್ರಾ’ ದಲ್ಲಿ ‘Business Analyst’ ಆಗಿ ಉದ್ಯೋಗ. ವಾರಿಂಗ್ಟನ್ ನಲ್ಲಿ ನನ್ನ ಪತ್ನಿ ‘ಪ್ರತಿಮಾ’ ಹಾಗೂ ಮಗ ‘ಈಶಾನ’ ಜೊತೆಗೆ ವಾಸವಾಗಿರುವ ನಾನು; ಕವಿತೆ, ಹಾಡು ಹಾಗೂ ನಾಟಕದ ಹವ್ಯಾಸವನ್ನು ಬೆಳೆಸಿ ಬಂದವನು.
++++++++++++++++++++++++++++++++++++++++++++++++++++++++++++++++++++++++++++++++
|| ತಾಯಿ ||
ನಾನು ತಾಯಿಯಾದೆ ಆನಂದದಲ್ಲಿ ತೇಲಾಡಿದೆ
ಕೂಸಿನ ಪ್ರತಿ ಕ್ಷಣದಲ್ಲೂ ನಾನು ಒಡನಾಡಿಯದೆ || ಧ್ರ ||
ಮೊದಲ ಹೆಜ್ಜೆಯ ಮೊದಲ ದನಿಯ
ಶಾಲೆಗೆ ಹೊರಟಾಗ ನಮ್ಮಿಬ್ಬರ ಕಣ್ಣೀರ ಹನಿಯ
ಮರೆಯಲಿ ಹೇಗೆ? ಮರೆಯಲಾಗುವುದುಂಟೆ?
ಮೀಸೆ ಚಿಗುರಿದರೂ ಅದರ ಆರೈಕೆ ಕಡಿಮೆಯಾಗುವುದುಂಟೆ? || ೧ ||
ಸಪ್ತಸಮುದ್ರದಾಚೆ ಇಂದು ನನ್ನ ಕೂಸಿನ ವಾಸ
‘ತಾಯಿ’ ಎಂದು ಹತ್ತಿರ ಹೋದರೂ ಕೇವಲ ಕೆಲವೇ ತಿಂಗಳ ಸಹವಾಸ
ಜೊತೆಗಿರುವುದಕ್ಕೂ ಕೂಡ ಈಗ ಒಂದು ‘ಮಿತಿ’
ಕೂಸೇ.. ಬಾ ನೀನು ಮರಳಿ ನಾನಾಗಲಾರೆ ನಿನ್ನ ‘ಅತಿಥಿ’ || ೨ ||
ಆಧಾರವಾಗಿದ್ದೆ ಪುಟ್ಟ ಕಾಲ್ಗಳ ಓಟದ
ನೀ ‘ಒಲ್ಲೆ’ ಎಂದರೂ ಕೈತುತ್ತು ಊಟದ
ಬೇಕೆನಿಸುತ್ತಿದೆ ಮುದಿ ವಯಸ್ಸಿನಲ್ಲಿ ನಿನ್ನ ಆಸರೆ
ಸ್ವಾರ್ಥಿಯಲ್ಲ, ಮುಗ್ಧ ಮನಸ್ಸಿನ ಇದೊಂದು ಸಣ್ಣ ಅನಿಸಿಕೆ || ೩ ||
————————————————********************—————————–
|| ಮನುಜ ||

ಹುಚ್ಚರ ಸಂತೆಯಲ್ಲಿ
ಹೆಚ್ಚೆಚ್ಚು ಬೇಕೆಂದು
‘ವಿಷಯಾ’ಸಕ್ತನಾಗಬೇಡೋ ಮನುಜ ಆಗಬೇಡ || ೧ ||
ಇದ್ದಷ್ಟರಲ್ಲೇ ಸಮಾಧಾನಿಯಾಗು
‘ಛಲ’ವಿದ್ದರೆ ದುಡಿದು ಸಂಪಾದಿಸು
‘ಮೋಸ’ಮಾಡಿ ಗಳಿಸಬೇಡೋ ಮನುಜ ಗಳಿಸಬೇಡ || ೨ ||
ಏಕೆ ದಿನವೂ ದೇವಾಲಯಕ್ಕೆ ಹೋಗಬೇಕು
ಕೂತಾಗ ನಿಂತಾಗ ದೇವರ ಧ್ಯಾನ ಸಾಕು
ದೇವರ ನೆನೆಯದೆ ‘ಫಲ’ ಬಯಸಬೇಡೋ ಮನುಜ ಬಯಸಬೇಡ || ೩ ||
ತಾನೇ ದೊಡ್ಡವನು ಎಂದು ಹೇಳಿಕೊಳ್ಳಬೇಡ
ಹಿರಿಯರ ಗೌರವ ಕೊಡಲು ಮರೆಯಬೇಡ
ನಡೆ-ನುಡಿಯಲಿ ಅಹಂಕರಿಯಾಗಬೇಡೋ ಮನುಜ ಆಗಬೇಡ || ೪ ||
————————————————-***********************—————————————-
llನಿಸರ್ಗ- ಮದುಮಗಳುll
ನಿಸರ್ಗವೇ ನೋಡಲು ನೀನು ಮದುಮಗಳು

ನಿನ್ನ ಸೌಂದರ್ಯ ವರ್ಣಿಸಲು ಸಾಲುವವೇ ಶಬ್ದಗಳು? || ಧ್ರ ||
ಈ ಬೆಟ್ಟದ ಸಾಲುಗಳು ನಿನ್ನ ಕಣ್ಣುಗಳಿದ್ದಂತೆ
ಸಾಲ್ಗಳ ನಡುವೆ ಮೂಡುವ ಅರುಣ ನಿನಗಿಟ್ಟ ಕುಂಕುಮದಂತೆ
ಈ ಗಿಡ-ಮರಗಳು ನಿನ್ನ ಭುಜ-ಬಾಹುಗಳು
ಮರಕ್ಕೆ ಸುತ್ತಿದ ಬಳ್ಳಿಗಳು ನಿನ್ನುದ್ದ ಜಡೆಗಳು || ೧ ||
ಹೊಳೆಯುವ ಆಭರಣಗಳು ಮುಂಜಾನೆ ಮಂಜಿನ ಹನಿಗಳು
ಮದುವೆಯ ಸೀರೆಯಂತಿರುವ ಸುಂದರ ಜಲಪಾತಗಳು
ರತ್ನಗಂಬಳಿಯಂತೆ ತಪ್ಪಲಲ್ಲಿ ಹರಿಯುವ ನದಿಗಳು
ನಿನಗಿಟ್ಟ ದ್ರಷ್ಟಿ ಬೊಟ್ಟಂತೆ ಈ ಅಮಾವಾಸ್ಯೆಗಳು || ೨ ||
ಸುಹಾಸ್ ಪುರುಷೋತ್ತಮ ಕರ್ವೆ.
