ಎರಡು ಕವನಗಳು: ಅಮ್ಮ (ನವೀನ್ ಗಂಗೋತ್ರಿ) ಹಾಗೂ ಮಗು-ನಗು (ಡಾ ಪ್ರೇಮಲತ ಬಿ)

ಇತ್ತೀಚೆಗಷ್ಟೇ ನಮ್ಮ ಸುತ್ತಲಿನ ಜಗತ್ತು ಆಚರಿಸಿದ ‘ಮಾತೆಯರ ದಿನದ’ ಅಂಗವಾಗಿ, ತಾಯಿ ಹಾಗೂ ಅವಳ ಜೀವನದ ಮಹದೋದ್ದೇಶವಾದ ಮಗುವಿನ ಕುರಿತ ಎರಡು ಕವನಗಳು ಇಲ್ಲಿವೆ. ಒಂದು ನಮ್ಮ ಪರಿಚಿತರೇ ಅದ ಪ್ರೇಮಲತಾ ಅವರದ್ದು (ಮಗು-ನಗು). ಇನ್ನೊಂದು ನಮ್ಮ ಅತಿಥಿ ಕವಿ ನವೀನ್ ಗಂಗೋತ್ರಿಯವರದ್ದು (ಅಮ್ಮ). ಓದಿ, ಅಮ್ಮನೆಂಬ ಭಾವ ನದಿಯಲ್ಲಿ ಮುಳುಗೇಳಿ.

 

Amma 2015-05-16-19-06-24

 

Naveen
ಶ್ರೀ.ನವೀನ್ ಗಂಗೋತ್ರಿ

 ಅಮ್ಮ

thaayi magu_n
ಚಿತ್ರ ಕೃಪೆ : ಶ್ರೀ.ಸಿಂಧೂರ್ ಭಟ್ ತಡ್ಡಲಸೆ

ಅಮ್ಮನಂಗುಲಿಗಳಲಿ
ಜಗದೆಲ್ಲ ಒಳಿತುಗಳು
ತುತ್ತಾಗಿ ಕೂರುವವು ಮುತ್ತಿನಂತೆ
ನಂಬುಗೆಯ ಪರ್ವತವೆ
ಅಂಗೈಯಲಿಳಿಯುವುದು
ನಂದಗೋಪನ ಮನೆಯ ಬೆಣ್ಣೆಯಂತೆ

ತಾಯೆಂಬ ಹಿರಿ ಜೀವ
ಜೀವನವನೂಡಿಪುದು
ಮಗುವ ಕಿರಿ ಜೀವಕ್ಕೆ ಜೀವವಾಗಿ
ಜೀವನೆಂಬುದು ಇಲ್ಲಿ
ಜೀವದಿಂದಾಗುವುದು
ಅಮ್ಮನಿರುವಳು ಜೀವದೊರತೆಯಾಗಿ

ಅಂತರಗಳಿಲ್ಲದಿಹ
ಎಲ್ಲದರ ಅರಿವಿರುವ
ಅದ್ವೈತ ಸಂಬಂಧ ತಾಯ್ಗೆ ಮಗುವು
ತನ್ನೊಳಗೆ ತನುಗೊಳಿಸಿ
ಎದೆಯಿಂದ ಹಾಲಿಳಿಸಿ
ಕೈಯಲೂ ತುತ್ತಿಡುವ ಮಮತೆ ಮಡಿಲು

                                          ಶ್ರೀ . ನವೀನ್ ಗಂಗೊತ್ರಿ

++++++++++++++++++++++++++++++++++++++++++++++++++++++++++++

ಪ್ರೇಮಲತಾರ ಈ ಕವನ ಅಮ್ಮನ ಕಣ್ಣಿನಲ್ಲಿ ಮಗುವಿನ ಕೇಕೆಯನ್ನು ಅರಳಿಸುತ್ತಿದೆ. ಈ ಕವನ ಯುಗಾದಿ ಕಾರ್ಯಕ್ರಮದಲ್ಲಿ ಪ್ರಸ್ತುತವಾಗಿತ್ತು.

ಮಗು-ನಗು

Photoನನ್ನೊಲವಿನ ಮುದ್ದಿನ ಮಗುವೇ

ಸುಮಧುರ ಗಾನ ಏನಂತ ನಗುವೇ!

ಮನೆಯೆಲ್ಲ ಅನುರುಣಿಸಿ ಸಂತಸ

ಈ ಬಾಳಿಗೆ ತಂದೆ ನೀ ಹೊಸ ವಸಂತ!

 

ಸವಿಜೊಲ್ಲ ಸುರಿಸಿ,ಬೊಚ್ಚು ಬಾಯಿ

ಕಣ್ಣರಳಿಸಿ ನಕ್ಕರೆ, ಉಂಡಂತೆ ಸಿಹಿ!

ಪ್ರತಿಧ್ವನಿಸಿ ನಿನ್ನ ಕೇಕೆಯಲಿ ಮನೆ

ಹರಿಸಿದೆ ಸಂತಸದ ಹೊಸ ಹೊಳೆ!

 

ನಿನ್ನ ಕಣ್ಣಲ್ಲಿ ಕೌತುಕ ಅರೆಗಳಿಗೆ

ನಕ್ಕು ಮರೆತುಬಿಡುವೆ ಎಲ್ಲ ಮರುಗಳಿಗೆ!

ಹೇಳುವರು ಜನ ನಿನ್ನ ನಗು ಬಲು ಮುಗ್ಢ

ಆದರೆ ನಾ ಕಂಡಿರುವೆ ಅದರಲ್ಲಿ ನೂರು ಅರ್ಥ!

 

ಹೀರಬೇಕೆಂದು ನಿನ್ನ ನಗುವಿನ ಸಿಹಿ

ಹಾತೊರೆವುದು ಮನವಾಗಿ ಒಂದು ದುಂಬಿ!

ಕನಸಲ್ಲೂ ಪಕ್ಕನೆ ನೀ ನಕ್ಕು ಬಿಡುವೆ

ಎದೆಯುಬ್ಬಿ ಸಂತಸದ ಹಬ್ಬ ನನಗೆ!

 ಡಾ ಪ್ರೇಮಲತ ಬಿ

 

ಭರವಸೆ

ಯುಗಾದಿ  ಹಬ್ಬದ ಕವಿ ಗೋಷ್ಠಿ ‘ಅನಿವಾಸಿ’ ಯ ಬಾಳಿನಲ್ಲಿ ಹೊಸ ಭರವಸೆ ಹುಟ್ಟಿಸುವಲ್ಲಿ ಸಫಲವಾಯಿತು. ಈ ಆಶಯವನ್ನು ಪ್ರತಿಬಿಂಬಿಸುತ್ತಿದೆ ಶಿವಪ್ರಸಾದರ ಕವನ…

ಹುಚ್ಚು ಮಾಧ್ಯಮಗಳ ಹಾವಳಿಯಲ್ಲಿ
ಕುಗ್ಗಿಹೊಗಿವೆ ನಮ್ಮ ಕ್ರಿಯಾತ್ಮಕ ಚಿಂತನೆಗಳು
ಕಂಪ್ಯೂಟರ್ಗಳ ಸಾಮ್ರಾಜ್ಯದಲಿ
ಒಣಗಿಹೋಗಿವೆ ಶಾಹಿ ಕುಡಿಕೆಗಳು
ಸೊರಗಿವೆ ಬಣ್ಣ ಬಣ್ಣದ ಲೇಖನಿಗಳು

ಇ-ಮೇಲ್ ಮೊಬೈಲ್ ಗಳ ಧಾಳಿಯಲ್ಲಿ
ಮಲಗಿವೆ ಪತ್ರ ವ್ಯವಹಾರಗಳು
ಆಂಗ್ಲಭಾಷೆಯ ಪ್ರವಾಹದಲಿ
ಕೊಚ್ಚಿಹೋಗಿವೆ ನಮ್ಮಿ ಭಾಷೆಗಳು
ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು

ತಲೆಯೆತ್ತಿವೆ ಆತಂಕವಾದೀ ಶಕ್ತಿಗಳು
ಉಗ್ರಗಾಮಿಗಳ ಪಿತೂರಿಗಳು
ನಡುಗಿಸಿವೆ ನಾಗರೀಕತೆಯ ಖಾಯಿಲೆಗಳು
ಎಡ್ಸ್ ಡಯಾಬಿಟಿಸ್ ಬ್ಲಡ್ ಪ್ರೆಶರ್ ಗಳು

ಮಾಯವಾಗಿವೆ ಹಚ್ಚ ಹಸುರಿನ ಕಾಡುಗಳು
ಕರಗಲಿವೆ ಹಿಮದ ಗೆಡ್ಡೆಗಳು
ಇಲ್ಲಿವೆ ಪ್ರಕೃತಿ ವಿಕೋಪಗಳು
ಧಗೆ ಬಿಸಿಲು ಸುನಾಮಿ ಭೂಕಂಪಗಳು

ಈ ತಲ್ಲಣ ಗೊಳಿಸುವ ಹಿನ್ನೆಲೆಯಲ್ಲಿ
ಅನಿಶ್ಚಿತ ಇಂದು ನಾಳೆಗಳಲಿ
ಮುರಿದುಬಿದ್ದ ವಿಶ್ವಾಸಗಳಲಿ
ಸರಿ ತಪ್ಪುಗಳ ದ್ವಂದಗಳಲ್ಲಿ

ಇನ್ನೂ ಉಳಿದಿವೆ…
ಭರವಸೆಗಳು, ಛಲಗಳು
ನಿರ್ಧಾರ, ನಂಬಿಕೆ ಮತ್ತು ಆಶಯಗಳು