ನಾಲ್ಕು ಚುಟುಕಗಳು

ವಿರೋಧಾಭಾಸಗಳು ಜೀವನದಲ್ಲಿ ಹಾಸುಹೊಕ್ಕಾಗಿರುತ್ತವೆ. ಯಾವುದು ಸರಿ, ಯಾವುದು ತಪ್ಪು? ಯಾವುದು ಒಳ್ಳೆಯದು, ಯಾವುದು ಕೆಟ್ಟದು? ಪ್ರಪಂಚ ಕಪ್ಪು-ಬಿಳುಪೇ ಯಾ ಹಲವು ವರ್ಣಗಳ ಛಾಯೆಯೇ? ಪ್ರೇಮಲತಾರ ಚುಟುಕಗಳು ಥಟ್ಟನೆ ನಿಮ್ಮನ್ನು ಆಕ್ರಮಿಸದೇ ಹೋದರೂ, ಕೀಟದಂತೆ ಕೊರೆದು ಈ ತರಹದ ವಿಚಾರಗಳನ್ನು ನಿಮ್ಮ ತಲೆಯಲ್ಲಿ ಮೊಳಕೆಯೆಬ್ಬಿಸಿ ಮರವಾಗಿಸುವುದರಲ್ಲಿ ಸಂದೇಹವಿಲ್ಲ.

ವಿರಕ್ತಿ

ಅಮ್ಮನೆಂದಳು,Image result for hermit
ಮದುವೆ,ಸಂಸಾರ.ಮಕ್ಕಳು
ಏನೆಲ್ಲ ಪರಿಪಾಟ,ಮಾಯೆ
ಇಷ್ಟೆಲ್ಲ ಜನ, ಎಷ್ಟೊಂದು ತ್ಯಾಜ್ಯ
ಯಾಕೆ ಬೇಕೋ, ಕಾಣೆ!!
ಹದಿನಾರಕ್ಕೆ ಮದುವೆ,ನಾಕು ಮಕ್ಕಳು
ಎಂಟು ಮೊಮ್ಮಕ್ಕಳ ಪಡೆದ ಮೇಲೆ!!!

ಮಹಿಮೆ

ಅಪ್ಪನೆಂದನು
ಜೀವನವೆಲ್ಲ ಬರಿ ದುಡಿಮೆ
ಮಕ್ಕಳ ಪಾಲನೆಯ ಗೊಡವೆ
ಹೆತ್ತಪ್ಪನಿಗೆ ದುಡಿದು ತರುವ
ಗಂಡುಸಂತಾನ ನನ್ನೊಡವೆ
ಬೀಗರೆದುರು ಬೀಗಿ ಮದುವೆ
ಮಾಡಿದೊಡನೆ ಗೊತ್ತಾಯ್ತು ಮಗನ ಮಹಿಮೆ!!

ವಿ-ರಾಗ
ಅವನು;Image result for gold ornament
ಬಂಗಾರದ ಗೊಡವೆಯೇಕೆ ಪ್ರಿಯೆ
ಅದು ಬರಿ ಹಳದಿ ಲೋಹ!!
ಅವಳು;
ಮುತ್ತೇಕೆ, ಮತ್ತೇಕೆ ಬಿಡು ನಿನ್ನ
ಸಂಗವೇಕೆ, ನಶ್ವರ ಈ ಲೋಕ!!!

ನಾ-ಆಸ್ತಿಕ
Image result for bhagavad gitaಆಸ್ತಿಕನೊಬ್ಬ ನಾಸ್ತಿಕನಲ್ಲಿ ಕೇಳಿದನೊಮ್ಮೆ
’ನೀವು ನಾಸ್ತಿಕರಾಗಲು ಕಾರಣ?’
ನಾಸ್ತಿಕ ಕಣ್ಮುಚ್ಚಿ ತಡವರಿಸದೆ ಉತ್ತರಿಸಿದ
’ಅದೆಲ್ಲ ದೈವ ನಿಯಾಮಕ’!!!

-ಡಾ. ಪ್ರೇಮಲತ ಬಿ.

ವಿನ್ಸೆಂಟನನು ನೆನೆದು

ವಿನ್ಸೆಂಟ್ ವ್ಯಾನ್ ಗೊಘ್ ೧೯ನೇ ಶತಮಾನದ ಪ್ರಭಾವಶಾಲಿ ಕಲಾವಿದ. ಈತ ಜೀವನದ ಎರಡನೇ ದಶಕದವರೆಗೂ ಚಿತ್ರ ಬರೆಯಲು ತೊಡಗಲಿಲ್ಲ. ಚಿತ್ತಕ್ಷೋಭೆಗೊಳಗಾಗಿ ತನ್ನ ೩೭ನೇ ವಯಸ್ಸಿನಲ್ಲಿ ವ್ಯಾನ್ ಗೊಘ್ ಆತ್ಮಹತ್ಯೆ ಮಾಡಿಕೊಂಡು ಓಗೊಡದ ನಾಡಿಗೆ ತೆರಳಿದ. ಅಷ್ಟರಲ್ಲಿ ಈ ಮಹಾನ್ ಪ್ರತಿಭಾವಂತ ಎರಡು ಸಾವಿರಕ್ಕೂ ಮಿಕ್ಕಿ ಚಿತ್ರಗಳನ್ನು ರಚಿಸಿದ್ದ. ಆಮ್ಸ್ಟರ್ಡ್ಯಾಂನ ವ್ಯಾನ್ ಗೊಘ್ ಚಿತ್ರ ಪ್ರದರ್ಶನಾಲಯವನ್ನು ನೋಡಿ ಬಂದ ಸ್ಫೂರ್ತಿಯಲ್ಲಿ ನಾನು ಬರೆದ ಕವನ…

ಟ್ಯೂಲಿಪ್ ಹೂವುಗಳಲ್ಲಿ  ವ್ಯಾನ್ ಗೊಘ್
ಟ್ಯೂಲಿಪ್ ಹೂವುಗಳಲ್ಲಿ ವ್ಯಾನ್ ಗೊಘ್

ಎಲ್ಲಿತ್ತು ಆ ಪ್ರತಿಭೆ ಅಷ್ಟೊಂದು ಕಾಲ?

ಭುಗಿಲೆದ್ದಿತೇ ಭಾವನೆಗಳ ಪೂರ?

ಮುದುಡಿದ ಮನಸಿನ ಒಳಗಿಂದ

ಉಕ್ಕಿತೇ ಉಸಿರಂತೆ ಬಣ್ಣಗಳ ಜಾಲ?

ಎಷ್ಟು ಪ್ರಜ್ವಲ! ಎಷ್ಟು ವೈವಿಧ್ಯ!!

ಅಷ್ಟೇ ಪ್ರಾಂಜಲ ಭಾವ ಆ ಚಿತ್ರಗಳಲ್ಲಿ

ಸೂರ್ಯಕಾಂತಿಯ ಬೆಡಗು, ಬಾದಾಮಿ ಹೂವಿನ ಮೊಗ್ಗು;

ಆದರೆ ಹುದುಗಿತ್ತು ಮನದಲ್ಲಿ ಕಾರ್ಮೋಡದ ಬಳ್ಳಿ

 

Image result for starry night van goghಇದ್ದನಲ್ಲ ಪ್ರೀತಿಯ ತಮ್ಮ?

ತೋಡಿಕೊಳ್ಳಲಿಲ್ಲೇಕೆ ಮನದ ಮರ್ಮ?

ತಿಳಿಯಾಗುತಿತ್ತಲ್ಲ ಕೊಳ, ದೂರಾಗುತಿತ್ತಲ್ಲ ಕಾಲ

ಸಿಗುತಿತ್ತಲ್ಲ ಜಗಕೆ ಇನ್ನೂ ನಿನ್ನ ಮಾಯಾಜಾಲ!

 

  • ರಾಂ