ಎರಡು ಕವಿತೆಗಳು – ಸವಿತಾ ಮದುಸೂಧನ್

ಈ ವಾರದ ಕವನಗಳು ಸವಿತಾ ಮಧುಸೂದನ್ ಯುಗಾದಿ ಕಾರ್ಯಕ್ರಮಕ್ಕೆ ರಚಿಸಿದವಾಗಿವೆ. ಆಧ್ಯಾತ್ಮಿಕ ಅರ್ಥವುಳ್ಳ ಈ ಕವನಗಳು ಕುವೆಂಪು ಅವರಿಂದ ಪ್ರೇರೇಪಿತವಾದಂತಿದೆ. ಆಕಾಶ ದೀವಿಗೆ, ನಮ್ಮನ್ನು ಬಡಿದೆಬ್ಬಿಸುವಲ್ಲಿ ಸಂದೇಹವಿಲ್ಲ. ಸಮ್ಮೋಹನ ನಮ್ಮನ್ನಾವರಿಸುವ ಮೋಹವನ್ನು ಹರಿದು ಹೊರಬರುವ ಹಾದಿ ಹುಡುಕೆಂದು ಆರ್ತ್ರನಾದಗೈಯುತ್ತಿದೆ!

ಆಕಾಶ ದೀವಿಗೆ 

ಈ ಗಾಡಂಧಕಾರದಲಿ ಕಾದಿಹುದು
ಪುನರುತ್ಥಾನದ ಸ್ವಾಗತಗೈಯಲು;
ಅದೋನೋಡಿ! ಮುಗಿಲೆತ್ತರದ ತಾಳೆಗಳು
ತೇಜಪುಂಜ ಭಾಸ್ಕರನ ಚಿತ್ತಾರವ ಬಿಡಿಸಿಹವು

ಚಂಚಲ ಮೇಘಗಳ ಚಿತ್ತಸ್ಥಿರ ವೀಕ್ಷಕ
ಅಂಬರಿನಿಂದ ಆವೃತನಾದ ಬಾಲರವಿಯು ಸಾರುತಿಹನು-
“ಏಳಿ, ಎದ್ದೇಳಿ, ಅನಂತ ಚೇತನಕೆ ಎಚ್ಚರಗೊಳ್ಳಿ
ನಿರ್ವಿಕಾರರಾಗಿ ಅತ್ಯುನ್ನತ ಮುಗಿಲಿನೆತ್ತರಕೇರಿ”

ಸಮ್ಮೋಹನ 

ಯಾವ ಸ್ವಪ್ನ ಸೆರೆಹಿಡಿದಿಹುದೋ
ಅದಾವ ಮಾಯೆ ಮನ ಸೆಳೆದಿಹುದೋ!
ಉದಧಿಯಲಿ ಉದಿಸಿರುವ
ವಜ್ರ ವೈಢೂರ್ಯವನ್ನಾಲಿಸುವ ನೀ
ಮನಸೋತು ಮೈ ಮರೆತಂತಿದೆ,
ಆ ಹೊಳಪಿನಲ್ಲಿ ಕಣ್ಣು ಮಬ್ಬಾಗಿದೆ

ಭೋರ್ಗರೆಯುವ ಭವಸಾಗರದಿ
ಎದ್ದಿವೆ ತೆರೆಗಳು ದೈತ್ಯಾಕಾರದಿ
ಬೆನ್ಹತ್ತಿ ಬರುತಲಿವೆ ಜೋಕೆ!
ಕಡಲ ತಳಕೆ ತರಂಗಗಳ ಶಿಬಿಕೆ.
ಈಜಿ,  ಕಿರಿದ್ವೀಪವ ಸೇರಲಾಗದೇ?
ಪುನಃ ಪ್ರಾರ್ಥಿಸಿ ದಡವ ಅರಸಲಾಗದೇ?

– ಡಾ. ಸವಿತಾ ಮಧುಸೂದನ್ 

3 thoughts on “ಎರಡು ಕವಿತೆಗಳು – ಸವಿತಾ ಮದುಸೂಧನ್

  1. ಸವಿತಾ ಅವರ ಎರಡೂ ಅರ್ಥಗರ್ಭಿತ ಕವನಗಳಲ್ಲಿ ಹೊಳಪು ಪ್ರಜ್ವಲಿಸುತ್ತದೆ. (ಅದಕ್ಕೆ ಅವರ ಕಸುಬಿನ ಹಿನ್ನೆಲೆಯಿದೆಯೇನೋ ಎಂದೆನಿಸುತ್ತದೆ!) ಆಧ್ಯಾತ್ಮದ ಛಾಯೆಯ ಬಗ್ಗೆ ಮಿತ್ರರು ಈಗಾಗಲೇ ಉಲ್ಲೇಖಿಸಿದ್ದಾರೆ. ಅದಕ್ಕೆ ನನಗೆ ಕಂಡ ಎರಡರ ಬಗ್ಗೆ ಒಂದು ಮಾತು ಬರೆಯುತ್ತೇನೆ.
    ‘ಹೊಳಪಿನಲ್ಲಿ ನಮ್ಮ ಕಣ್ಣುಗಳು ಮಬ್ಬಾಗಿರುವಾಗ’ ( ಸಮ್ಮೋಹನ) ನಮಗೆ ಆಕಾಶದ ದೀವಿಗೆ ಬಾಸ್ಕರ ಹೇಗೆ ಕಂಡಾನು? (ಮೊದಲನೆಯ ಕವಿತೆ) ತಾಳೆಗಳು ಬಿಡಿಸಿದ ಚಿತ್ತಾರ (silhouette)ದಿಂದಲೇ ಅವನ ಅಸ್ತಿತ್ವವನ್ನು ನಾವರಿಯಬೇಕು. ಸುಂದರ ಕಲ್ಪನೆ. ಅಚ್ಚುಕಟ್ಟಾದ ವರ್ಣನೆ.

    Like

  2. ಇಲ್ಲಿನ ಆದ್ಯಾತ್ಮವಿಲ್ಲದ ಪರಿಸರದಲ್ಲಿ ಬದುಕುತ್ತ, ಆದ್ಯಾತ್ಮದ ಆಳ ಅರ್ಥವಿರುವ ಸಾಲುಗಳನ್ನು ಬರೆದಿರುವ ಸವಿತಾರ ಕವನನಳು ನಿಜಕ್ಕೂ ಅಚ್ಚರಿಯನ್ನು ತಂದಿವೆ. ಇಂತಹ ಆಳಕ್ಕೆ ಇಳಿಯುವ ಕಲೆಯ ಸಿದ್ದಿಯಿದ್ದಲ್ಲಿ ನೆಮ್ಮದಿಗೆ ಚ್ಯುತಿಯಿಲ್ಲ.
    ನಿಮ್ಮ ಬರಹದಿಂದ ನಮ್ಮ ವೇದಿಕೆಗೆ ಹೊಸ ಆಯಾಮ ಬಂದಿದೆ. ಸವಿತಾ ಅವರೆ ಮತ್ತೆ ಮತ್ತೆ ಬರೆಯಿರಿ.

    Like

  3. ಸವಿತಾ ಅವರ ಕವನಗಳ ವಸ್ತು ನಿರೂಪಣೆಯಂತೆ ಆಳವಾಗಿವೆ. ಸಮ್ಮೋಹನದ ಕೊನೆಗೆ ಬರುವ ಸಾಲಗಳು ಪ್ರಶ್ನಾರ್ಥಕ ವಾಗಿರದೆ ಇದ್ದಲ್ಲಿ ಇನ್ನೂ ಹೆಚ್ಚು ಅರ್ಥ ಬರುತ್ತಿತ್ತು ಎಂದು ಅನಿಸುತ್ತದೆ..
    ಸುಂದರ ಪೂರಕ ಚಿತ್ರಗಳು! !

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.