मै ने गान्धी को नहीं मारा – ಕೇಶವ ಕುಲಕರ್ಣಿ ಬರೆದ ಕವನ

ಕೇಶವ ಕುಲಕರ್ಣಿ ಅನಿವಾಸಿಯ ಅವಿಭಾಜ್ಯ ಅಂಗ. ಅವರ ಕವನಗಳಲ್ಲಿ ವಿಡಂಬನೆ ಹಾಸುಹೊಕ್ಕಾಗಿರುತ್ತದೆ. ಪದಗಳ ಮೋಡಿ ಈ ಕವನವನ್ನು ಬೇರೊಂದು ಸ್ತರಕ್ಕೇರಿಸುವುದರಲ್ಲಿ ಸಫಲವಾಗಿದೆ. ಚಿಕ್ಕದಾದರೂ ಮನಸನ್ನು ತಟ್ಟಿ, ಆತ್ಮವಲೋಕನ ಮಾಡಿಸುವುದರಲ್ಲಿ ಸಂದೇಹವಿಲ್ಲ. ಯುಗಾದಿ ಕವಿ ಗೋಷ್ಠಿಯಲ್ಲಿ ಬಿ. ಆರ್. ಲಕ್ಷ್ಮಣರಾಯರಿಂದ ಸೈ ಎನಿಸಿಕೊಂಡ ಕವನವನ್ನು ನಿಮ್ಮ ಮುಂದೆ ತರಲು ಹೆಮ್ಮೆಯೆನಿಸುತ್ತಿದೆ.

ಇದ್ದ

ನಮ್ಮಜ್ಜ-ಅಜ್ಜಿಯರ
ನಮ್ಮಪ್ಪ-ಅಮ್ಮರ
ನನ್ನ-ನಿನ್ನ
ನಡುವೆ
ಇದ್ದ

ನಮ್ಮಜ್ಜ
ತನಗೆ ವಾರಸುದಾರರಿಲ್ಲವೆಂದು
ತನ್ನ ಮೂರನೇ ಹೆಂಡತಿಯಲ್ಲಿ
ನನ್ನಪ್ಪನನ್ನು ಬಿತ್ತುವ ವೇಳೆ
ಎದ್ದ

ನನ್ನಪ್ಪ
ಮೆಟ್ರಿಕ್ಯುಲೇಷನ್ನು ಮುಗಿಸಿ
ಬ್ರಿಟೀಷರ ಕೆಳಗೆ
ಮಾಮಲೆದಾರನಾಗಿ
ಸಂಬಳವೆಣಿಸುತ್ತಿರುವಾಗ
ಗೆದ್ದ

ನಾನು
ಪುಗಸಟ್ಟೆ M.B.B.S ಮುಗಿಸಿ
ದೇಶಬಿಟ್ಟು ಇಂಗ್ಲಂಡಿಗೆ
ಬಂದಾಗ
ಬಿದ್ದ

7 thoughts on “मै ने गान्धी को नहीं मारा – ಕೇಶವ ಕುಲಕರ್ಣಿ ಬರೆದ ಕವನ

 1. ನನ್ನ ಈ ತಡವಾದ ವ್ಯಾಖ್ಯಾನಕ್ಕೆ ಕ್ಷಮಿಸಿ.
  ಓಂದು ಸಮಯ ಈ ಆಂಗ್ಲರು (ಅಥವ ಇತರ ಪರದೇಶದವರು) ನಮ್ಮ ದೇಶಕ್ಕೆ ಬರದೇ ಇದ್ದರೆ, ಇಂದಿನ ಭಾರತವು ಹೇಗೆ ಇರುತ್ತಿತ್ತು? ಗಾಂಧಿಯವರ ಅವಶ್ಯಕತೆ ಇರುತ್ತಿತ್ತೆ? ನಮ್ಮಗಳ ಅಲ್ಲದೆ ನಮ್ಮ ಅಪ್ಪ ಅಮ್ಮ ತಾತಂದಿರ ಮತಧರ್ಮಗಳು ಏನಿರುತ್ತಿತ್ತು? ಇವುಗಳನ್ನು ಊಹಿಸಿದಾಗ ನನಗೇನನಿಸುವುದೆಂದರೆ, ಆಂಗ್ಲರ ಆಳ್ವಿಕೆ ಅನಿವಾರ್ಯ ಮತ್ತು ಅವಶ್ಯಕವಾಗಿತ್ತು. ಆವರ ’ಚಕ್ರಾಧಿಪತ್ಯ’ ಪ್ರಪಂಚದಲ್ಲೆಲ್ಲಾ ಹರಡಿ ಭಾರತದ ರಾಜ್ಯಭಾರವನ್ನು ನಡೆಸಲು ಭಾರತೀಯರೇ ಆದ ಕಾರ್ಯನಿರ್ವಾಹಕರನ್ನು ತರಬೇತಿಗೊಳಿಸಿ ನಿಯೋಜಿಸುವುದು ಆಂಗ್ಲರಿಗೆ ಅನಿವಾರ್ಯವಾಯಿತು. ಇದರಿಂದ ಗಾಂಧಿಯವರಂತಹ ಅಂದಿನ ಯುವಕರಿಗೆ ಆರ್ಥಿಕ, ಸಾಮಾಜಿಕ ಮತ್ತು ನ್ಯಾಯಗಳ ಸಂಬಂಧದ ವಿದ್ಯೆಗಳಲ್ಲಿ ಶಿಕ್ಷಣಗಳಿಸುವ ಅವಕಾಶಗಳು ದೊರಕಿದವು. ಇದರಿಂದ ಭಾರತಕ್ಕೆ ಸ್ವರಾಜ್ಯ ದೊರಕುವುದು ಅನಿವಾರ್ಯವಾಯಿತು. ಆಂಗ್ಲರಪೂರ್ವ ರಾಜ್ಯಭಾರಗಳಿಂದ ಭಾರತಕ್ಕೆ ಸ್ವರಾಜ್ಯವು ದೊರಕುತಿತ್ತೆ?
  — ರಾಜಾರಾಮ.

  Like

 2. ಬರೀ 35 ಶಬ್ದಗಳ ಈ ಕವನದ ಬಗ್ಗೆ ಅದರ ಹತ್ತು ಪಟ್ಟು ವಿಮರ್ಶೆ! ಇತ್ತೀಚಿನ ವರೆಗೆ ಜಗತ್ತಿನ ಅತ್ಯಂತ ಕಿರಿದಾದ ಪದ್ಯ ಎಂದು ಹೆಸರಾದ ಎರಡೇ ಸಾಲಿನ ‘ಚಿಗಟ'(ಚಿಕ್ಕಾಡು)ದ ಮೇಲಿನ ಆಂಗ್ಲ ಕವನ Adam, Had’em ನೆನಪಾಗುತ್ತದೆ!

  Like

 3. ಪದ್ಯದ ಕೊನೆಯ ಭಾಗ – ” ತನ್ನ ಇಚ್ಚೆಯಿಂದ ದೇಶ ಬಿಟ್ಟು, ಹಳೆಯ ಹಗೆಯನ್ನು ಗೆದ್ದು, ಶತ್ರುವನ್ನು ಮಿತ್ರನಂತೆ ನಡೆಸಿಕೊಂಡು, ಅವನ ಕಷ್ಟದಲ್ಲಿ ಸೇವೆ ಮಾಡುತ್ತಿರುವ ಸ್ವದೇಶಿಯನ್ನು ನೋಡಿ ಈ ಮಹಾತ್ಮ ಎದ್ದು ನಕ್ಕ ”

  ದಾಕ್ಷಾಯಿನಿ

  Like

 4. ಕವನವನ್ನು ಓದಿದಾಗ ನನಗೆ ಅರ್ಥವಾಗಿರಲಿಲ್ಲ. ದೇಸಾಯಿಯವರ ಅರ್ಥೈಸುವಿಕೆಯಿಂದ ಬಹಳಷ್ಟು ತಿಳಿಯಿತು.ಕೆಲವು ನವ್ಯ ಕವಿತೆಗಳು, ನವ್ಯ ಮಾದರಿಯ ಚಿತ್ರಗಳನ್ನು ಅರ್ಥ ಮಾಡಿಕೊಳ್ಳಲು ನಾನು ಕೂಡ ಕಷ್ಟ ಪಡುತ್ತೇನೆ. ಆದರೆ ಆಂಗ್ಲರಿಂದ ಬಿಡುಗಡೆ ಪಡೆದು, ಸ್ವ-ಇಚ್ಛೆಯಿಂದ ಇಲ್ಲಿಗೆ ಬಂದಿರುವ ನಮಗೆ ಈ ಅಪರಾಧಿ ಭಾವ ಅಗತ್ಯವೇ?
  ಸಾಮಾನ್ಯರಾದ ಮೂರು ತಲೆಮಾರುಗಳು ಯಾವುದರಲ್ಲೂ ತೊಡಗಿಕೊಳ್ಳದೇ ಅವರವರ ಪಾಡನ್ನು ನೋಡಿಕೊಂಡು ಬದುಕಿರುವುದು ಒಂದೆಡೆಯಾದರೆ, ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿಯೂ, ಭಾರತವನ್ನು ಬದಲಾಯಿಸಲಾಗದ ಇನ್ನೆಷ್ಟು ಮಂದಿ ಈ ರೀತಿ ನಿಟ್ಟುಸಿರು ಬಿಟ್ಟಿರಬೇಡ?
  ಈ ಅತಂತ್ರವಿರದಿದ್ದಲ್ಲಿ मॆरा भरत महान?

  Like

 5. ಕೇಶವ್ ಅವರ ಕವಿತೆಯಲ್ಲಿ ಅಡಗಿರುವ ಗೂಡಾರ್ಥವನ್ನು ಅರಿಯಲು ಓದುಗನಿಗೆ ಸ್ವಲ್ಪ ತ್ರಾಸ ಆಗತೈತಿ. ಆದ್ರೆ ಸರ್, ಒಮ್ಮೆ ತಿಳೀತಂದ್ರೆ, ಮೂಗಿನ ಮೇಲ್ ಬೆರಳಿಡಬೇಕ್ ಅನ್ನಿಸ್ತದ . ಗಾಂಧಿಯ ದೇಶದಲ್ ಹುಟ್ಟಿ, ಬೆಳೆದು ಓದಿದ ಪ್ರಜೆಯೊಬ್ಬನ ಮನದ ತಿಕ್ಕಾಟವನ್ನು , ತಮ್ಮ ಜಾಣತನದ ಮಾತುಗಳಲ್ಲಿ, ಬಹಳ ಚಲೋ ಮುಂದಿಟ್ಟಾರ ಅನ್ನಿಸ್ತದ. ತಮ್ಮ ಅಜ್ಜ, ತಂದೆ ತಲಮಾರಿನವರು ತಮ್ಮದೇ ಆದ ಹೋರಾಟದಲ್ಲಿದ್ದರು. ಗಾಂಧಿ ದೇಶವನ್ನು ಆಂಗ್ಲರ ಕೈಯಿಂದ ಬಿಡಿಸಲು ಪ್ರಯತ್ನಪಡುತ್ತಿದ್ದಾಗ, ಹಿಂದಿನವರು ತಮ್ಮ ಜೀವನದ ಕಷ್ಟ-ಸುಖಗಳ ಹೋರಾಟದಲ್ಲಿ ಮಗ್ನರಾಗಿದ್ದರು. ತಮ್ಮ ಪೀಳಿಗೆ ಜನ್ಮವೆತ್ತಿದಾಗ ಸ್ವತಂತ್ರವಾಗಿದ್ದ ದೇಶದ ಸವಲತ್ತುಗಳನ್ನುಂಡು, ಬಿಟ್ಟಿ ಶಿಕ್ಷಣ ಪಡೆದು, ಮತ್ತೊಮ್ಮೆ ಅದೇ ಆಂಗ್ಲರ ದೇಶಕ್ಕೆ ಬಂದು ಅವರ ಸೇವೆಯಲ್ಲಿ ತೊಡಗಿದ ಕವಿಯ ಮನದ ಅಪರಾಧಿ ಮನೋಭಾವನೆಯನ್ನು ಕಡೆಯ ಸಾಲುಗಳಲ್ಲಿ ವ್ಯಕ್ತಪಡಿಸುತ್ತಾರೆ. ಆದರೆ, ಇಂದು ನಮ್ಮ ದೇಶದ ಪರಿಸ್ಥಿತಿ ಹೇಗಿದೆಯೆಂದರೆ, ಗಾಂಧಿ ಮತ್ತೊಮ್ಮೆ ಜನ್ಮವೆತ್ತಿ ಬಂದರೆ, ಆತನೂ ಓಡಿಹೋಗುವ ಪರಿಸ್ಥಿತಿಯಿದೆ. ಹಾಗಾಗಿ ಕವಿ ತಾನು ಗಾಂಧಿಯನ್ನೇನು ಕೊಂದಿಲ್ಲ ಎಂಬ ಸಮಾಧಾನದ ನಿಟ್ಟುಸಿರನ್ನು ಬಿಡುವ ಭಾವವನ್ನು ಓದುಗ ಗಮನಿಸಬಹುದು. ಒಳ್ಳಿ ಕವನ ಬರೆದಿದ್ದೀರಲ್ರಿ.
  ಉಮಾ

  Like

 6. ನಾವೀನ್ಯತೆ, ವಿಡಂಬನೆ, ಗೂಡಾರ್ಥಗಳಿಂದ ತುಂಬಿದ ಈ ಕವನ ಉತ್ಕೃಷ್ಠ ಹೊಸ ಕವಿತೆ ಎಂದು ನನ್ನ ಮತ.
  ಇದು ಓದುಗನಲ್ಲಿ ವಿಚಾರ ಪ್ರಚೋದಿಸುವದರಲ್ಲಿ ಸಫಲವಾಗಿದೆ. ಶೀರ್ಷಿಕೆಯಿಂದ ಹಿಡಿದು ಕೊನೆಯ ಶಬ್ದದವರೆಗೆ ಕವಿಯ ಮನಸ್ಸಿನಲ್ಲಿ ಏನಿರಬಹುದು ಎಂದು ಊಹಿಸುತ್ತಲೇ ಇದ್ದೆ. ನಾನು ಅರ್ಥೈಸಿದ್ದು ಕೊಟ್ಟಿದ್ದೇನೆ. ಗಾಂಧೀಜಿಯವರ ಜೀವನಕ್ಕೆ ಪರ್ಯಾಯವಾಗಿ ಕವಿಯ ಮೂರು ತಲೆಮಾರಿನವರ ಒಂದೊಂದು ಜೀವನ ಚಿಕ್ಕ ಚಿಕ್ಕ ೫-೬ ಸಾಲುಗಳಲ್ಲಿ ಚಿತ್ರಿತವಾಗಿವೆ. ಅವರೆಲ್ಲರ ಜೀವನವನ್ನೂ ಬಾಪು ತಟ್ಟಿದರೂ ತಮ್ಮದೇ ವೈಯಕ್ತಿಕ ಜೀವನದಲ್ಲಿ ಕೇಂದ್ರೀಕರಿಸಿದ ಹಿಂದಿನ ತಲೆಮಾರಿನವರಿನಲ್ಲಿ ದೇಶಪ್ರೇಮ ಎಷ್ಟರಮಟ್ಟಿಗಿತ್ತೋ? ವಾರಸು, ಸಂಬಳ, ಪಿಂಚಣಿಯಲ್ಲೇ ಅವರ ಗಮನ; ಇತ್ತ ದೇಶವನ್ನೇ ಬಿಟ್ಟು ಅನಿವಾಸಿಯಾಗಿ ವಲಸೆ ಬಂದರೂ ಕವಿಯ ಆತ್ಮ ಸಾಕ್ಷಿ ಆತನನ್ನು ಬಾಧಿಸುತ್ತದೆ: ನಾನು ದೇಶದ್ರೋಹಿಯೇ? ಹಿರಿಯರ ತ್ಯಾಗದಿಂದ ಲಾಭ ಪಡೆದು ಪುಕ್ಕಟೆ ಶಿಕ್ಷಣ ಪಡೆದಿದ್ದಾಯಿತು. ಈಗ ಸ್ವಾರ್ಥಿಯಾದನೆ? ನಾನು ಗಾಂಧಿತ್ವದ ಕೊಲೆಯಲ್ಲಿ ಭಾಗಿಯೇ? ಎಂಬ ಸಂದಿಗ್ಧತೆಯಲ್ಲಿ ಸಿಲಿಕಿದರೂ, ಗಾಂಧಿಯ ಹೆಸರಿನಲ್ಲಿ ದೇಶವನ್ನು ದೋಚುವ ಅಧಮರು ಅಲ್ಲಿ ಇರುವಾಗ ತಾನು ನಿರಪರಾಧಿ ಎಂಬುದನ್ನು ಹಿಂದಿನ ಹಿಂದಿ ಸಿನಿಮಾದ ಶೀರ್ಷಿಕೆಯೊಂದರಿಂದಲೇ ಸಾಬೀತು ಮಾಡಲು ಹೊರಟ ಕವಿಯ ಚಾತುರ್ಯಕ್ಕೆ ತಲೆದೂಗಲೇ ಬೇಕು.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.