ಸತಿಯ ಹಾಡು – ರಾಜಾರಾಮ್ ಕಾವಳೆ

ನಾನು ಒಂದು ದಿನ ನನ್ನ ಹೆಂಡತಿಗೆ ಉದಾಸೀನತೆಯಿಂದ, ‘ಏನು ಇವತ್ತೂನು ಕಾಲೀಫ್ಲವರಿನ ಪಲ್ಲ್ಯವೇ?’ ಎಂದು ಕೇಳಿದೆ.

ಅದಕ್ಕೆ ಅವಳು, ‘ಇನ್ನಾವ ತರಕಾರಿ ಈ ದೇಶದಲ್ಲಿ ಹೇರಳವಾಗಿ ದೊರಕುತ್ತದೆ? ಇರೋತರಕಾರಿಗಳನ್ನೇ ಉಪಯೋಗಿಸಿ ಅಡುಗೆಮಾಡುವುದು ನನ್ನ ಕರ್ಮ. ನನ್ನಹಾಗೆ ಇಷ್ಟು ವರ್ಷಗಳಷ್ಟುಸತತವಾಗಿ ಅಡುಗೆಮಾಡುತ್ತಾ ಇರುವವರು ನನ್ನ ಬಂಧುಬಳಗದವರಲ್ಲಿ ಯಾರೂ ಇಲ್ಲ’ ಎಂದಳು.

ತಕ್ಷಣ ನನಗೆ ರಾಷ್ಟ್ರಕವಿ ಮಾನ್ಯ ಶಿವರುದ್ರಪ್ಪನವರ ‘ಎದೆತುಂಬಿ ಹಾಡಿದೆನು’ ಎಂಬ ಪದ್ಯದಲ್ಲಿನ, ‘ಹಾಡುವುದು ಅನಿವಾರ್ಯ ಕರ್ಮ ಎನಗೆ’ ಮತ್ತು ‘ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?’ ಎಂಬ ಸಾಲುಗಳು ಜ್ಞಾಪಕಕ್ಕೆ ಬಂದವು.

ನನ್ನ ಸತಿಯು ಅಡುಗೆಮಾಡುವುದು ಮತ್ತು ಆ ಹಕ್ಕಿಯು ಹಾಡುವುದು, ಇವೆರಡೂ ಅವುಗಳಿಗೆ ಒಂದು ಕರ್ಮವಾಗಿದೆಯಲ್ಲವೇ? ಎಂದು ಅನಿಸಿತು. ಆ ಪದ್ಯದಲ್ಲಿ ‘ಹಾಡುವುದು’ ಎಂಬ ಪದದ ಬದಿಲು ‘ಅಡುಗೆಮಾಡುವುದು’ ಎಂಬ ಪದವನ್ನು ಅಳವಡಿಸಿ ಈ ಪದ್ಯವನ್ನು ಬರೆದಿದ್ದೇನೆ.

ಈ ಪದ್ಯವನ್ನು ಒಂದುವರೆ ವರ್ಷಗಳ ಹಿಂದೆಯೇ ಬರೆದಿದ್ದೆ. ಈಗ ಇದನ್ನು ಶಿವರುದ್ರಪ್ಪನವರ ಕುಮಾರರಾದ ಡಾ. ಶಿವಪ್ರಸಾದರವರಿಗೆ ಸ್ವಲ್ಪ ಅರೆಮನಸ್ಸಿನಿಂದ ತೋರಿಸಿದೆ. ಅದಕ್ಕೆ ಅವರು, ‘ಈ ಪದ್ಯವನ್ನು ಎರಡು ವರ್ಷಗಳ ಹಿಂದೆಯೇ ನನಗೆ ತೋರಿಸಿದ್ದರೆ, ಅದನ್ನು ನಮ್ಮ ತಂದೆಯವರಿಗೆ ತೋರಿಸುತ್ತಿದ್ದೆ. ಅದಕ್ಕೆ ಅವರು ನಿಮ್ಮ ಊಹೆಯ ಕಾರ್ಯಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು’ ಎಂದು ಹೇಳಿದರು. ಆದುದರಿಂದ ಮಾನ್ಯ ಶಿವರುದ್ರಪ್ಪನವರ ಕ್ಷಮೆಬೇಡಿ ಈ ಪದ್ಯವನ್ನು ಬರೆದಿದ್ದೇನೆ.

ಸತಿಯ ಹಾಡು

(ಮಾನ್ಯ ಜಿ ಎಸ್ ಶಿವರುದ್ರಪ್ಪನವರ ಕ್ಷಮೆಬೇಡಿ)

ಎಡೆಬಿಡದೆ ಮಾಡಿದೆನು ಅಡುಗೆ ನಾನು
ಮನ ತೃಪ್ತಿ ಮಾಡಿದಿರಿ ಊಟ ನೀವು.
ಇಂದು ಮಾಡಿದ ಅಡುಗೆಯನು ಎಂದಿನಂತೆಯೆ ಕುಳಿತು
ಮಾಡಿದಿರಿ ಊಟವ ಎನಗದುವೆ ಬಹುಮಾನ,
ಅಡುಗೆಮಾಡುವಳಿಗೆ ಬೇಕೆ ಬಿರುದು ಸನ್ಮಾನ

ಎಲ್ಲ ಉಣಲೆಂದು ನಾನು ಅಡುಗೆಮಾಡುವುದಿಲ್ಲ
ಅಡುಗೆಮಾಡುವುದು ಅನಿವಾರ್ಯ ಕರ್ಮ ಎನಗೆ.
ಉಣುವರಿಹರೆಂದು ನಾಬಲ್ಲೆ, ಅದರಿಂದ
ಮಾಡುವೆನು ಅಡುಗೆಯನು ಎಂದಿನಂತೆ,
ಯಾರು ಉಣದಿದ್ದರೂ ಎನಗಿಲ್ಲ ಚಿಂತೆ.

ಜಿಎಸ್ಸೆಸ್ ನೆನಪು — ಅವರ ಒಂದು ‘ಸ್ಪೆಷೆಲ್‘ ಕವನ ಮತ್ತು ಡಾ. ಜಿ. ಎಸ್. ಶಿವಪ್ರಸಾದ್ ಅವರ ’ಶ್ರದ್ಧಾಂಜಲಿ’

ರಾಷ್ಟಕವಿ ಜಿ ಎಸ್ ಶಿವರುದ್ರಪ್ಪನವರು ಕಣ್ಮರೆಯಾಗಿ ಇಂದಿಗೆ ಸರಿಯಾಗಿ ಎರಡು ವರ್ಷಗಳಾದವು. ಈ ಸಂದರ್ಭದಲ್ಲಿ ಅವರ ಒಂದು ವಿಶಿಷ್ಟ ಕವನವನ್ನು ‘ಅನಿವಾಸಿ‘  ಪ್ರಕಟಿಸುತ್ತಿದೆ. ಎಷ್ಟೋ ತಂದೆಯರು ಮಕ್ಕಳಿಗೆ ಬಟ್ಟೆ ಹಣ ಇತ್ಯಾದಿ ಉಡುಗೊರೆ ಕೊಡುವದು ಸಾಮಾನ್ಯ. ಆದರೆ ಜಿಎಸ್ಸೆಸ್ ಅವರು ಮಗನಿಗೆ ಕೆಳಗಿನ ಕವನವನ್ನು ಸ್ಪೆಷೆಲ್ ಉಡುಗೊರೆಯಾಗಿ ಕೊಟ್ಟರು. ಕಳೆದ ಭಾನುವಾರದ ವರೆಗೆ ಇದು ಪ್ರಕಟವಾಗಿರಲಿಲ್ಲ.

GSS Photo Prasad cropped

 

 

 

 

 

Poem

 

 

 

 

 

 

 

 

 

 

 

 

(ಚಿತ್ರ: ಡಾ ಶಿವಪ್ರಸಾದ. ಹಕ್ಕುಗಳನ್ನು ಕಾದಿರಿಸಲಾಗಿದೆ)

 

(ಈ ಕವನವನ್ನು ಉಡುಗೊರೆಯಾಗಿ ಪಡೆದ ಮಗ ಶಿವಪ್ರಸಾದ ಹೇಳುತ್ತಾರೆ: ”ನಾನು ೨೦೦೯ ದೀಪಾವಳಿ ಸಮಯಕ್ಕೆ ಬೆಂಗಳೂರಿಗೆ ಭೇಟಿ ನೀಡೀದಾಗ ಅವರನ್ನು ಪರಿವಾರದೊಂದಿಗೆ ಬಂಡಿಪುರ ಹಾಗು ಉದಕಮಂಡಲ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದೆ. ಪ್ರವಾಸದಿಂದ ಬಂದ ನಂತರ ನಾನು ಇಂಗ್ಲಂಡಿಗೆ ಹೊರಡುವ ಮುನ್ನ ತಂದೆಯವರು ನನ್ನನ್ನು ಕೋಣೆಯೊಳಗೆ ಕರೆದು ತಾವು ಬರೆದ ’To Prasad ಸಫಾರಿ ನೆನಪಿಗೆ’ ಎಂಬ ಕವನವನ್ನು ನನಗೆ ಒಪ್ಪಿಸಿದರು. ಈ ಕವನಕ್ಕೆ ಒಂದು ಔಪಚಾರಿಕ (formal) ಶೀರ್ಷಿಕೆ ಇಲ್ಲವೆಂಬುದನ್ನು ಗಮನಿಸಬಹುದು. ಈ ಕವನ ಜಿಎಸ್ಸೆಸ್ ಅವರು ನನಗೆ ಕೊಟ್ಟ ವಿಶಿಷ್ಟವಾದ ಉಡುಗೊರೆ ಎಂದು ನಾನು ಭಾವಿಸಿದ್ದೇನೆ. GSS ಅವರ ಹಸ್ತಾಕ್ಷರಗಳನ್ನುಕೆಲವು ಆಪ್ತರು ಗುರುತಿಸಬಹುದು.)

*              *                    *                   *                         *                         *                   *

ಶ್ರದ್ಧಾಂಜಲಿ

ದೀಪವಿರದ ದಾರಿಯಲ್ಲಿ
ಭರವಸೆಯ ದೀಪವಿರಿಸಿ
ಸೋತು ನಿಂತ ಹೆಜ್ಜೆಗಳಿಗೆ
ಹೆಸರನಿಟ್ಟು, ಉಸಿರಕೊಟ್ಟು

ವೈಚಾರಿಕತೆಯ ತೈಲವನಿರಿಸಿ
ಜ್ಞಾನವೆಂಬ ಹಣತೆ ಹಚ್ಚಿ
ಪ್ರೀತಿ ಕರುಣೆಯಂಬ ಶಿಲೆಗೆ
ಕಾವ್ಯವೆಂಬ ಹೂವ ಮುಡಿಸಿ

ಸಮಾನತೆಯ ಮಂತ್ರ ಹಿಡಿದು
ಜಾತಿಯೆಂಬ ಕಳೆಯ ತೆಗೆದು
ಹಮ್ಮು ಬಿಮ್ಮು ಕಿತ್ತು ಎಸೆದು
ಅನುಕಂಪೆಯ ಹೃದಯ ತೆರೆದು

ನೋವು ನಲಿವುಗಳ ಕಣಿವೆ ಹಾದು
ಕಾಣದ ಕಡಲಿಗೆ
ಹಂಬಲಿಸಿ ಹಾತೊರೆದು
ನೀಲಿಯಲಿ ಕರಗಿ ನಮ್ಮೆಲ್ಲ ತೊರೆದು

ಸಾಹಿತ್ಯದ ಸಂಪುಟಗಳಲಿ
ಕನ್ನಡಿಗರ ಹೃದಯದಲ್ಲಿ
ಮಧುರ ಗೀತೆ ಸ್ವರಗಳಲ್ಲಿ
ಅಮರರಾಗಿ ಉಳಿದಿರಿಲ್ಲಿ.

                  –    ಡಾ. ಜಿ. ಎಸ್. ಶಿವಪ್ರಸಾದ್