ನಾನು ಒಂದು ದಿನ ನನ್ನ ಹೆಂಡತಿಗೆ ಉದಾಸೀನತೆಯಿಂದ, ‘ಏನು ಇವತ್ತೂನು ಕಾಲೀಫ್ಲವರಿನ ಪಲ್ಲ್ಯವೇ?’ ಎಂದು ಕೇಳಿದೆ.
ಅದಕ್ಕೆ ಅವಳು, ‘ಇನ್ನಾವ ತರಕಾರಿ ಈ ದೇಶದಲ್ಲಿ ಹೇರಳವಾಗಿ ದೊರಕುತ್ತದೆ? ಇರೋತರಕಾರಿಗಳನ್ನೇ ಉಪಯೋಗಿಸಿ ಅಡುಗೆಮಾಡುವುದು ನನ್ನ ಕರ್ಮ. ನನ್ನಹಾಗೆ ಇಷ್ಟು ವರ್ಷಗಳಷ್ಟುಸತತವಾಗಿ ಅಡುಗೆಮಾಡುತ್ತಾ ಇರುವವರು ನನ್ನ ಬಂಧುಬಳಗದವರಲ್ಲಿ ಯಾರೂ ಇಲ್ಲ’ ಎಂದಳು.
ತಕ್ಷಣ ನನಗೆ ರಾಷ್ಟ್ರಕವಿ ಮಾನ್ಯ ಶಿವರುದ್ರಪ್ಪನವರ ‘ಎದೆತುಂಬಿ ಹಾಡಿದೆನು’ ಎಂಬ ಪದ್ಯದಲ್ಲಿನ, ‘ಹಾಡುವುದು ಅನಿವಾರ್ಯ ಕರ್ಮ ಎನಗೆ’ ಮತ್ತು ‘ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?’ ಎಂಬ ಸಾಲುಗಳು ಜ್ಞಾಪಕಕ್ಕೆ ಬಂದವು.
ನನ್ನ ಸತಿಯು ಅಡುಗೆಮಾಡುವುದು ಮತ್ತು ಆ ಹಕ್ಕಿಯು ಹಾಡುವುದು, ಇವೆರಡೂ ಅವುಗಳಿಗೆ ಒಂದು ಕರ್ಮವಾಗಿದೆಯಲ್ಲವೇ? ಎಂದು ಅನಿಸಿತು. ಆ ಪದ್ಯದಲ್ಲಿ ‘ಹಾಡುವುದು’ ಎಂಬ ಪದದ ಬದಿಲು ‘ಅಡುಗೆಮಾಡುವುದು’ ಎಂಬ ಪದವನ್ನು ಅಳವಡಿಸಿ ಈ ಪದ್ಯವನ್ನು ಬರೆದಿದ್ದೇನೆ.
ಈ ಪದ್ಯವನ್ನು ಒಂದುವರೆ ವರ್ಷಗಳ ಹಿಂದೆಯೇ ಬರೆದಿದ್ದೆ. ಈಗ ಇದನ್ನು ಶಿವರುದ್ರಪ್ಪನವರ ಕುಮಾರರಾದ ಡಾ. ಶಿವಪ್ರಸಾದರವರಿಗೆ ಸ್ವಲ್ಪ ಅರೆಮನಸ್ಸಿನಿಂದ ತೋರಿಸಿದೆ. ಅದಕ್ಕೆ ಅವರು, ‘ಈ ಪದ್ಯವನ್ನು ಎರಡು ವರ್ಷಗಳ ಹಿಂದೆಯೇ ನನಗೆ ತೋರಿಸಿದ್ದರೆ, ಅದನ್ನು ನಮ್ಮ ತಂದೆಯವರಿಗೆ ತೋರಿಸುತ್ತಿದ್ದೆ. ಅದಕ್ಕೆ ಅವರು ನಿಮ್ಮ ಊಹೆಯ ಕಾರ್ಯಕ್ಕೆ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು’ ಎಂದು ಹೇಳಿದರು. ಆದುದರಿಂದ ಮಾನ್ಯ ಶಿವರುದ್ರಪ್ಪನವರ ಕ್ಷಮೆಬೇಡಿ ಈ ಪದ್ಯವನ್ನು ಬರೆದಿದ್ದೇನೆ.
ಸತಿಯ ಹಾಡು
(ಮಾನ್ಯ ಜಿ ಎಸ್ ಶಿವರುದ್ರಪ್ಪನವರ ಕ್ಷಮೆಬೇಡಿ)
ಎಡೆಬಿಡದೆ ಮಾಡಿದೆನು ಅಡುಗೆ ನಾನು
ಮನ ತೃಪ್ತಿ ಮಾಡಿದಿರಿ ಊಟ ನೀವು.
ಇಂದು ಮಾಡಿದ ಅಡುಗೆಯನು ಎಂದಿನಂತೆಯೆ ಕುಳಿತು
ಮಾಡಿದಿರಿ ಊಟವ ಎನಗದುವೆ ಬಹುಮಾನ,
ಅಡುಗೆಮಾಡುವಳಿಗೆ ಬೇಕೆ ಬಿರುದು ಸನ್ಮಾನ
ಎಲ್ಲ ಉಣಲೆಂದು ನಾನು ಅಡುಗೆಮಾಡುವುದಿಲ್ಲ
ಅಡುಗೆಮಾಡುವುದು ಅನಿವಾರ್ಯ ಕರ್ಮ ಎನಗೆ.
ಉಣುವರಿಹರೆಂದು ನಾಬಲ್ಲೆ, ಅದರಿಂದ
ಮಾಡುವೆನು ಅಡುಗೆಯನು ಎಂದಿನಂತೆ,
ಯಾರು ಉಣದಿದ್ದರೂ ಎನಗಿಲ್ಲ ಚಿಂತೆ.