ಹೊಸ ವರ್ಷ 2020 – ಎರಡು ಕವನಗಳು 

‘ಅನಿವಾಸಿ’ಯ ಓದುಗರೆಲ್ಲರಿಗೂ ಹೊಸ ವರ್ಷದ ಹಾರ್ದಿಕ  ಶುಭಾಶಯಗಳು. ಹೊಸವರುಷಾರಂಭ, ಹೊಸ ಸಂಕಲ್ಪಗಳನ್ನು ಮಾಡಿ ಹೊಸ ಯೋಜನೆಗಳನ್ನು ಹಾಕಿಕೊಳ್ಳುವಂತೆ ಮಾಡುವ ಒಂದು ಅಧ್ಭುತ ಪ್ರಚೋದಕ ಶಕ್ತಿ. ಈ ಕೇಂದ್ರೀಕೃತ ಶಕ್ತಿಯನ್ನು ಉಪಯುಕ್ತವಾಗಿ ಬಳಸಿ , ಮನೋಧೃಢತೆ  ಮತ್ತು ಪರಿಶ್ರಮದ ಹಾದಿ ಹಿಡಿದರೆ ನಮ್ಮ ದಾರಿಯಲ್ಲಿ  ಹೊಸತನವನ್ನು ಕಾಣುವುದರ ಜೊತೆಗೆ, ಕನಸುಗಳು ಸಾಕಾರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕಳೆದ ವರ್ಷ ‘ಅನಿವಾಸಿ’ಯಲ್ಲಿ ಬರಹಗಳ ಸುಗ್ಗಿ.  ಅನೇಕ ಲೇಖನಗಳು ಮತ್ತು ಕವಿತೆಗಳೊಂದಿಗೆ ಶ್ರೀಮಂತವಾದ ಅನಿವಾಸಿ ತಾಣ, ಬರಹಗಾರರ ಆಸಕ್ತಿ ಮತ್ತು  ಸಂಪಾದಕರ ಪರಿಶ್ರಮ ಹಾಗೂ ಕಾರ್ಯಕ್ಷಮತೆಗೆ ಕನ್ನಡಿ ಹಿಡಿದಿತ್ತು. ಈ ಭದ್ರ ಬುನಾದಿಯ ಮೇಲೆ ನಾವು ಹೊಸ ವರ್ಷ ೨೦೨೦ ಕ್ಕೆ ಕಾಲಿಡುತ್ತಿದ್ದೇವೆ.  ಹೊಸವರ್ಷದ ಪ್ರಾರಂಭದಲ್ಲಿ ನಾನು ಹೊಸ ಸಂಪಾದಕನಾಗಿರುವುದು ಕಾಕತಾಳೀಯವಾದರೂ ನನಗೆ ಸಂತೋಷ ತಂದಿರುವ ಸಂಗತಿ. ಈ ಗುರುತರ ಜವಾಬ್ದಾರಿಯನ್ನು ನಂಬಿಕೆಯಿಂದ ನನಗೆ ವಹಿಸಿರುವ ‘ಅನಿವಾಸಿ’ ಬಳಗಕ್ಕೆ ಮತ್ತು ಅದರ ಪೋಷಕರಿಗೆ ನಾನು ಆಭಾರಿಯಾಗಿದ್ದೇನೆ. ಹೊಸ ಬರಹಗಾರರು ಮತ್ತು ಸಾಹಿತ್ಯಾಸಕ್ತರು ‘ಅನಿವಾಸಿ’ಯ ಸದಸ್ಯರಾಗುತ್ತಿರುವುದು, ‘ಅನಿವಾಸಿ’ಯ ಕನಸುಗಳಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ. ಬನ್ನಿ ಎಲ್ಲರೂ  ಸೇರಿ ‘ಅನಿವಾಸಿ’ಯನ್ನು ಮತ್ತಷ್ಟು ಸಮೃಧ್ದಗೊಳಿಸೋಣ.

ಈ ವಾರ ನಾನು ಮತ್ತು ರಮ್ಯಾ ಭಾದ್ರಿಯವರು ಬರೆದಿರುವ ಹೊಸ ವರ್ಷದ ಕುರಿತಾದ ಕವಿತೆಗಳನ್ನು ಪ್ರಕಟಗೊಳಿಸುತ್ತಿದ್ದೇವೆ. ಈ ಹೊಸ ವರ್ಷದ ಒಂದು ವಿಶೇಷತೆ ಎಂದರೆ , ಇದು ೨೧ ನೇ ಶತಮಾನದ ಹದಿ ಹರೆಯ ವರುಷಗಳಿಗೆ (Teenage) ಕೊನೆಹಾಡುತ್ತಿದ್ದೆ. ಈ ಸಂಧರ್ಭದಲ್ಲಿ ನನ್ನೊಳಗೆ ಮೂಡಿದ ಕೆಲವು ಅನಿಸಿಕೆಗಳನ್ನು ಕವನರೂಪದಲ್ಲಿ ಮಂಡಿಸುವ ಪ್ರಯತ್ನ ಮಾಡಿದ್ದೇನೆ.
ಹೊಸ ವರ್ಷದ ಹೊಸ ಕಿರಣಗಳು ಭೂರಮೆಯನ್ನು ಸ್ಪರ್ಶಿಸಲು, ಪ್ರಕೃತಿಯಲ್ಲಾಗುವ ನವೋಲ್ಲಾಸದ ಬದಲಾವಣೆಗಳನ್ನು  ರಮ್ಯಾ ಭಾದ್ರಿ ಯವರು ತಮ್ಮ  “ಹೊಸ ವರುಷ ಬರುವುದು ತರುತ ಹರುಷ ” ಎಂಬ ಕವನದಲ್ಲಿ ಬಣ್ಣಿಸಿದ್ದಾರೆ. ಈ ಎರೆಡೂ ಕವನಗಳೂ ನಿಮ್ಮ ಮನ ಮುಟ್ಟಲಿ ಎಂದು ಆಶಿಸುತ್ತಾ ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ  ಶುಭಾಶಯಗಳನ್ನು ಕೋರುತ್ತೇನೆ -ಸಂ

೧.ಶತಮಾನ

ಬರೆದವರು: ಶ್ರೀನಿವಾಸ ಮಹೇಂದ್ರಕರ್

polution

ಹದಿಹರೆಯ ವರುಷಗಳ (Teens ) ದಾಟಿ ಸಾಗಿದೆ
ಶತಮಾನ, ಜವಾಬ್ದಾರಿಯ ಯವ್ವನದೆಡೆಗೆ
ತೆರೆಯಬೇಕಲ್ಲವೇ ಉಳಿತಾಯ ಖಾತೆ ಶುಭ್ರ
ಗಾಳಿಗಾಗಿ, ಹೂಡಬೇಕಲ್ಲವೇ ಠೇವಣಿ ಬರುವ
ಪೀಳಿಗೆಯ ಬದುಕಿಗಾಗಿ, ಕನಸ ಸಾಕಾರಕಾಗಿ.

 ಪೂರ್ವಜರ ನಾಗರೀಕತೆಯ ಬುನಾದಿಯಮೇಲೆ
ನಡೆದ ಯಡವಟ್ಟುಗಳ ವಿಸ್ಮೃತಿಯಿಂದ ಹೊರ-
ಬರಬೇಕಾಗಿದೆ. ವಿಶ್ವ ಮಾನವ ಪ್ರಜ್ಞೆ ಮತ್ತೆ
ಜಾಗರವಾಗಬೇಕಾಗಿದೆ ಭವ್ಯ ಭವಿತವ್ಯಕ್ಕಾಗಿ.
ಪಟ್ಟಾಂಗ  ನಾಯಕರ ಕೈತುರಿಗೆ ಪಾಲಾಗದೆ
ತೊರೆಯಬೇಕಾಗಿದೆ ಮದ್ದು ಗುಂಡುಗಳೆಂಬ ಮಾದಕಗಳ.

ಕನಸು ಕಾಣುವ ವಯಸ್ಸಿನಿಂದ ನನಸಾಗಿಸುವತ್ತ
ದುಡಿಮೆಯ ಗರಿಮೆಯ ಅರಿತು ಸಮೃದ್ಧಿಯತ್ತ
ಪ್ರೀತಿ ಸ್ನೇಹಗಳು ಗಿಡದಿಂದ ಮರವಾಗುವತ್ತ
ಊರ ಸರಹದ್ದು ದಾಟಿ, ಹೊಸ ಜಗತ್ತಿನತ್ತ
ಸಾಗುತ್ತಿದೆ ಈ ಶತಮಾನ ಹದಿಹರೆಯ ವರುಷಗಳ ದಾಟಿ.

ನಾವು ಶತಮಾನದಿಂದಲೋ, ಅದು ನಮ್ಮಿಂದಲೋ
ಎನುವ  ಜಿಜ್ಞಾಸೆಯ  ನಡುವೆ  ನಡೆದು ಸಾಗಲಿ
ಕೊಡುಕೊಳೆ  ನಮ್ಮಿಬ್ಬರ ನಡುವೆ.
ಈ ಹೊಸ ವರುಷ ನಮ್ಮ ಅನುಕ್ರಮ ನಡುಗೆಗೆ
ನಾಂದಿಯಾಗಲಿ ಒಂದು ಗುರಿಯ ಕಡೆಗೆ
ಕತ್ತಲಿಂದ ಬೆಳಕಿನೆಡೆಗೆ, ಹಸನು ಬದುಕಿನಡೆಗೆ.

೨.ಹೊಸ ವರುಷ ಬರುವುದು ತರುತ ಹರುಷ

ಬರೆದವರು: ರಮ್ಯ ಭಾದ್ರಿ

sunrise-1200-800

ನಭದಲ್ಲಿರುವ ನೇಸರನನ್ನು ಮಗದೊಮ್ಮೆ ಸುತ್ತುವ ಕಾತುರದಿ
ಭೂಮಿಯು ನವ ಸಂವತ್ಸರಕ್ಕೆ ಕಾಲಿಡುವ ಸುಂದರ ಘಳಿಗೆಯಲಿ
ಆದಿತ್ಯನು ಈ ಆಗಮನವನ್ನು ಆನಂದದಿ ಆಲಂಗಿಸುತ್ತಾ
ತನ್ನ ಎಳೆಯ ಹೊಂಗಿರಣಗಳಿಂದ ಭೂರಮೆಯನ್ನು ಸ್ಪರ್ಶಿಸಲು
ಸೃಷ್ಟಿಯ ಕಣ ಕಣದಲ್ಲೂ ಮೂಡುಹುದು ಹೊಸದೊಂದು ಸಂಚಲನ
ಅದುವೇ ಹೊಸ ವರುಷ, ಬರುವುದು ತರುತ ಹರುಷ

ಹೊಸ ಹುರುಪಿನಿಂದ ಧುಮ್ಮಿಕ್ಕಿ ಭೋರ್ಗರೆಯುವ ಝರಿಗಳು
ವೈಯ್ಯಾರದಿ ಹರಿಯುತ ಸಾಗರವನ್ನು ಸೇರುವ ನದಿಗಳು
ನವೋಲ್ಲಾಸದಿ ವನಸಿರಿಯಲ್ಲಿ ಅರಳುವ ಮಂದಾರ ಪುಷ್ಪಗಳು
ಚಿಗುರೊಡೆದ ಹಸಿರೆಲೆಗಳ ಮೇಲಿನ ಇಬ್ಬನಿಯೊಡನೆ
ಮಳೆಹನಿಯ ಸಮಾಗಮದ ಅಮೃತ ಬಿಂದು ಮಣ್ಣಿನೊಳಗೊಂದಾದಾಗ
ಹೊಮ್ಮುವ ಕಂಪು ಎಲ್ಲೆಡೆಯೂ ತಂಪೆರೆದು ಸೊಂಪಾದ ಗಿಡ ಮರಗಳೊಳಗಿಂದ
ನವೀನ ಭಾವದಿ ಕೋಗಿಲೆಗಳು ಇಂಪಾಗಿ ಹಾಡುವವು ಹೊಸದೊಂದು ರಾಗ
ಅದುವೇ ಹೊಸ ವರುಷ , ಬರುವುದು ತರುತ ಹರುಷ

ಪ್ರಕೃತಿಯ ಈ ರಮ್ಯ ರಾಗದಿಂಚರ ಮನವನ್ನು ರಂಜಿಸುತ್ತಿರಲು
ಜೀವ ರಾಶಿಗಳಲ್ಲಿ ನವ ಚೇತನವು ಪುಟಿದು ಹೊಸ ಸ್ಪೂರ್ತಿಯ ತಳೆದು
ನವ ಕಲ್ಪನೆಗಳನ್ನು ಮನಗಾಣುತ್ತಾ
ಕಳೆದ ಕಹಿ ನೆನಪುಗಳ ಕಣ್ಣೀರಿನ ಭಾರವನ್ನು ಇಳಿಸಿಕೊಂಡು
ಸುಂದರ ಕ್ಷಣಗಳನ್ನು ಮೆಲಕು ಹಾಕಿಕೊಂಡು
ಕಣ್ಣುಗಳಲ್ಲಿ ಹೊಸ ಕನಸುಗಳನ್ನು ತುಂಬಿಕೊಂಡು
ಬದುಕಿನ ನಿರೀಕ್ಷೆ ಹಾಗು ಅನಿರೀಕ್ಷೆಗಳನ್ನು ಹೊಸದಾಗಿ ಕಂಡಾಗ
ಅದುವೇ ಹೊಸ ವರುಷ , ಬರುವುದು ತರುತ ಹರುಷ.

ನಿರೀಕ್ಷಿಸಿ : ಮುಂದಿನ ವಾರದ ಸಂಚಿಕೆಯಲ್ಲಿ ಮಕ್ಕಳುಗಳು ಬರೆದಿರುವ ಇಂಗ್ಲಿಷ್ ಕವನಗಳು ಮತ್ತು ಅವುಗಳ ಕನ್ನಡ ಅನುವಾದಗಳನ್ನು ಪ್ರಕಟಿಸಲಾಗುವುದು.

ಋತುಗೀತೆಗಳು- ಅನಿವಾಸಿಯ ಮೂವರು ಕವಿಗಳಿಂದ..

ಚಿತ್ರ -ಅಮಿತ ರವಿಕಿರಣ

( ಋತುಚಕ್ರ ಬದಲಾದಂತೆ ನಮ್ಮ ಭಾವನಾ ಜಗತ್ತಿನ ಬಣ್ಣವೇ ಬದಲಾಗುವುದು ಕೂಡ ನಿಸರ್ಗದತ್ತವಾದ ಕ್ರಿಯೆಯಿರಬಹುದು.  ಚೈತ್ರದಲ್ಲಿ ಚಿಗುರುವ ಎಲೆಗಳು ಹೊಸತನ್ನು, ಭರವಸೆಯನ್ನು ಹೊತ್ತುತಂದರೆ, ಹನಿಯುವ ಮಳೆ, ಸೂರ್ಯನ ಕಿರಣ, ಕಮಾನು ಬಿಲ್ಲು  ವಸಂತಮಾಸದಲ್ಲಿ ಕನಸಿನ ಸಾಮ್ರಾಜ್ಯವನ್ನೇ ಸೃಷ್ಟಿಸಿಬಿಡುತ್ತವೆ. ತೀಡಿ ಬೀಸುವ ಗಾಳಿಯಲ್ಲಿ ಉದುರುವ ಶರತ್ಕಾಲದ ಚಿನ್ನದ ಬಣ್ಣದ ಎಲೆಗಳು ಇಡೀ ಜೀವನದ  ಕ್ಷಣಿಕತೆಯನ್ನೂ, ಅಗಾಧತೆಯನ್ನೂ, ಕಾಲಚಕ್ರದ ಪುನಾರಾವರ್ತನೆಯನ್ನೂ ಬಿಂಬಿಸಿ ಬದುಕಿನ ಎಲ್ಲ ಘಟ್ಟಗಳ, ಸಾವು-ಮರುಹುಟ್ಟುಗಳ ಆಧ್ಯಾತ್ಮಿಕ ದರ್ಶನಗಳನ್ನು ಭಾವುಕ ಜನರಲ್ಲಿ ಮೂಡಿಸುತ್ತವೆ.

ಇವೇ ವಿಚಾರಗಳು ಮತ್ತೆ ಕೆಲವರಲ್ಲಿ ಪರಿಸರದ ಬಗೆಗಿನ ಕಾಳಜಿಗಳನ್ನು ಮತ್ತು ಮನುಷ್ಯ ನಡೆದ ದಾರಿಯ ಮೌಲ್ಯಾವಲೋಕನವನ್ನು ಮಾಡಲು ಪ್ರಚೋದಿಸಬಹುದು.

ಇನ್ನು ಕೆಲವರಲ್ಲಿ ಶರತ್ಕಾಲದಲ್ಲಿ ಜಾರುತ್ತ ಹೋಗುವ ಹಗಲಿನ ಬೆಳಕು, ಬೆಳೆಯುತ್ತ ಹೋಗುವ ಕತ್ತಲಿನ ಕಪ್ಪು  ಮತ್ತು ಈ ಕತ್ತಲನ್ನು ಸೆಣೆಸಿ ಮತ್ತ ಬೆಳಕಿನೆಡೆ ತುಡಿವ ಮನುಷ್ಯನ ಮನಸ್ಸಿನ ಸಂಕಲ್ಪವಾಗಿ ಬರುವ ದೀಪಾವಳಿ-ಬೆರಗಿನ ಬಣ್ಣಗಳನ್ನು ಹರಡುತ್ತದೆ.

 ಈ ಋತುಮಾನಕ್ಕೆ ಹೊಂದುವಂತೆ ವಿಜಯ್ ನರಸಿಂಹ, ನಾನು ಮತ್ತು ಅರ್ಪಿತ ರಾವ್-ನಿಮಗಾಗಿ  ಅತಿ ಭಿನ್ನ ವಿಚಾರಗಳ ಮೂರು ಋತುಗೀತೆಗಳನ್ನು ಬರೆದು ನೀಡುತ್ತಿದ್ದೇವೆ.  ಮೊದಲ ಕವನಕ್ಕೆ ಶರತ್ಕಾಲದ ಸುಂದರ ಫೋಟೋಗಳನ್ನು ಒದಗಿಸದವರು ಶ್ರೀಮತಿ ಅಮಿತಾ ರವಿಕಿರಣ್. ಮಿಕ್ಕ ಚಿತ್ರಗಳು ಗೂಗಲ್ ಕೃಪೆ. ಓದಿ  ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ-ಸಂ)

 

  ಪುನರಪಿ ಜನನಂ ಪುನರಪಿ ಮರಣಂ…

ಶರತ್ಕಾಲದ ಷರತ್ತಿಗೆ ಬದ್ಧರಾಗಿ

ನಿನ್ನ ತೊರೆದು ಹಾರುತಿರುವ ಎಲೆಗಳು ನಾವು

ನಮ್ಮನು ಹೆತ್ತ ಗಿಡ, ಮರಗಳೇ

ನಿಮಗಿದೋ ಋತು ನಿಮಿತ್ತ ವಿದಾಯ

 

                          ಚಿತ್ರ -ಅಮಿತ ರವಿಕಿರಣ

ಚಿಗುರಾಗಿ, ಕಿರಿದಾಗಿ ಮುದುಡಿ

ದಿನಂಪ್ರತಿ ಹಿಗ್ಗಿ ಹಿರಿದಾಗಿ,

ತಿಳಿ ಹಸಿರು, ಪಚ್ಚೆ ಹಸಿರು

ಬಹುಕಾಲ ಮೈತಳೆದು

ಗಾಳಿಗೆ ಬಾಗುತ, ಮಳೆಯಲಿ

ತೋಯ್ದು ನಲಿಯುತ

ಬಿಸಿಲಿಗೆ ಮೈಯೊಡ್ಡಿ ನಿಲ್ಲುತ

ನಿನ್ನ ಮೈ ಹೊದಿಕೆಯಂತೆ

ಅಂಟಿಕೊಂಡು ನೀ ಹೆತ್ತ

ಫಲ ಪುಷ್ಪಗಳೊಡನೆ ಆಡಿ

ಕಳೆದೆವು ಒಂದು ಸಂವತ್ಸರ

ಇದೀಗ ಮುಗಿಯುತಿದೆ ಸಡಗರ

ಹಳದಿ, ನಸುಗೆಂಪು ರಕ್ತಚಂದನ

ಓಕುಳಿಯಾಡಿ ಹಣ್ಣೆಲೆಯೆಂಬ ಹೆಸರು ಹೊತ್ತು

ಕೊನೆಗೆ ತೊಟ್ಟು ಮುರಿದು

                              ಚಿತ್ರ -ಅಮಿತ ರವಿಕಿರಣ

ಒಂದೇ ಒಂದು ಸಂವತ್ಸರದ

ಅಲ್ಪಾಯುಷಿಗಳು ನಾವು

ನಿನ್ನ ತೊರೆಯುವ ಕಾಲ

ಇನ್ನು ಯಾವ ದಿಕ್ಕಿಗೊ?

ಯಾವ ಜಾಗಕೊ ?

ಗಾಳಿಯ ನಿರ್ಧಾರ

ಪುಣ್ಯವಿದ್ದರೆ ಮಣ್ಣೊಳಗೆ ಬೆರೆತು

ನಿನ್ನದೇ ಬೇರಿಗೆ ನೆರವಾಗಿ ವಸಂತದಲ್ಲಿ

ಪುನರ್ಜನ್ಮ ತಳೆಯುವೆವು 

‘ಪುನರಪಿ ಜನನಂ ಪುನರಪಿ ಮರಣಂ’

ಇಲ್ಲವಾದಲ್ಲಿ ಮತ್ತಾವುದೋ

ಮರ ಗಿಡಗಳಿಗೆ ನೆರವಾಗುವೆವು

ಕಾಲನ ಕರೆಗೆ ಓಗೊಡದವರು

ಯಾರಿಹರು ಹೇಳು?

ಋತುಚಕ್ರಕೆ ನಮಿಸುತ

ನಿಮಗಿದೋ ಪ್ರಕೃತಿ ನಿಮಿತ್ತ ವಿದಾಯ

                                                                                                     ✍ವಿಜಯನರಸಿಂಹ

೨

(ಇದೀಗ  ಮತ್ತೆ ಭೂಗೋಲದ ಅರ್ಧಕ್ಕಿಂತಲೂ ಹೆಚ್ಚಿನ ಪ್ರಪಂಚಕ್ಕೆ ಶರತ್ಕಾಲ ಮತ್ತು ಚಳಿಗಾಲ ಕಾಲಿಕ್ಕಿದೆ.ಅದರ ಜೊತೆಯಲ್ಲೆ ಕೆಲವು ವಿಶ್ಲೇಷಣೆ ಮತ್ತು ವಿಶಾದಗಳು ಕೂಡ ಇಣುಕಿವೆ.

ಪರ್ ಫ್ಲೋರೋ ಕಾರ್ಬನ್ನುಗಳು ಇಂದು ನೀರು ನಿರೋಧಕ (water resistant) , ನೀರು ಪ್ರತಿರೋಧಕ (water repellent) ಮತ್ತು ಚಳಿಯನ್ನು ತಡೆಯಬಲ್ಲ ಹಲವು ಬಟ್ಟೆಗಳಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ. ಆದರೆ ಇದು ಪ್ರಕೃತಿಗೆ ಮಾರಕ  ಮತ್ತು ಕ್ಯಾನ್ಸರ್ ಕೊಡಬಲ್ಲ ಭೂತ ಎನ್ನುವ  ಹಲವು ಕಾಳಜಿಗಳು ಕೇಳಿಬರುತ್ತಿವೆ. ಮತ್ತೆ ಕೆಲವು ಮೂಲಗಳು, ಉತ್ಪಾದಕ ಘಟಕಗಳು ಮತ್ತು ಕೆಲವು ವೈಜ್ಞಾನಿಕ ಮೂಲಗಳು ಇದನ್ನು ಅಲ್ಲೆಗೆಳೆದರೂ ಈ ಬಗ್ಗೆ ಬಹಳಷ್ಟು ವಿವಾದಗಳಿವೆ. ಅದನ್ನು ಧರಿಸಿದಾಗ ಯಾವುದೇ ಹಾನಿಗಳಿಲ್ಲದಿದ್ದರೂ ತಯಾರಿಕೆಯ ವೇಳೆಯಲ್ಲಿ ಅದು ನಿಸರ್ಗಕ್ಕೆ ಮಾರಕವಾಗಬಲ್ಲದು ಎಂಬ ನಂಬಿಕೆಗಳಿವೆ. ಈ ಬಗ್ಗೆ ಓದುವಾಗ ಬರೆದ ಕವನ)

ಪರ್ ಫ್ಲೋರೋ ಕಾರ್ಬನ್ನುಗಳು…

ಇಲ್ಲೀಗ ಆಶಾಡ

ಸುಯ್ಯೆಂಬ ಗಾಳಿಯೊಡಗೂಡಿ ಎಲೆಗಳಿಗೆ

ನೆಲ ಸೇರುವ ಹುನ್ನಾರ…

ದೂರವಿಲ್ಲವಿನ್ನು ಚಳಿಗಾಲ….

ಕೋಟು, ಹ್ಯಾಟು, ಕೈ ಗ್ಲೋವು, ಬೂಟುಗಳು

ಹೊರಬರುವ ವರ್ಷದ ಪರಿಪಾಟ…

ಗೂಡಿನ ತುಂಬ ನೇತಾಡುವ ಬಟ್ಟೆಗಳು

ಗಾಳಿಯ ಹೊಡೆತಕ್ಕೆ ರಕ್ಷಣೆ

ಮಳೆಯ ಜಡಿತಕ್ಕೆ ಪ್ರತಿರೋಧ

ನೀರಹನಿಗಳನು ಹರಳುಗಟ್ಟಿಸಿ ಜಾರಿಸುವ

ಫ್ಲೋರೋಕಾರ್ಬನ್ನುಗಳ ಹೊರಕವಚಗಳು

ಯಾವುದುಡಲೆಂದು ಕಣ್ಣಾಡಿಸುತ್ತ

ಚರಿತ್ರೆಯ ತುಂತುರಲ್ಲಿ ಮೀಯುತ್ತ ನೆನೆದೆ

ಮನುಷ್ಯ ಮಾಡಿದನೆಂತ ಅಪರಾಧ… !

ಒಂದೊಮ್ಮೆ  ಆಫ್ರಿಕಾದಿಂದ ಉತ್ತರಕ್ಕೆ

ಶೀತಲಯುಗ ಕೊರೆದ ಬಿಳಿ ಹಿಮದ ಪಶ್ಚಿಮಕ್ಕೆ

ಸ್ಪರ್ಧೆಗಳಿಗೆ ಸ್ಪರ್ಧೆಯಾಗಿ ಹೋದ

ಬಯಸುತ್ತ ಬದಲಾವಣೆ ನಿರ್ದಯಿ ಅನ್ವೇಷಕ

ಸೀಲು-ತಿಮಿಂಗಲಗಳ  ಕೊಂದು

ತೊಗಲು -ಕೊಬ್ಬನ್ನು ಹೊದ್ದು

ದಾರಿಯುದ್ದಕ್ಕೂ ಬರೆಯುತ್ತ ತನ್ನದೇ ವಿಕಾರ

 

ಆಧುನಿಕತೆಯ ನೆಪದಲ್ಲಿ ಐವತ್ತರ ದಶಕದಲಿ

ಪರ್ ಫ್ಲೋರೋಕಾರ್ಬನ್ನುಗಳ ಉರುಳಲ್ಲಿ ಹೊರಳಿ..

 

ಇದೀಗ ಪರಿಸರ ಕೆಟ್ಟಾಗ ನರಳಿ

ನೀರು ನಿರೋಧಕ, ಪ್ರಕೃತಿಗೆ ಮಾರಕ

ಸಾವಿರ ಬಗೆಯ ಕ್ಯಾನ್ಸರ್ಗಳಿಗೆ ಪೂರಕ

ಬಿಡಿಸಿಕೊಳ್ಳಲಾಗದೆ, ತೊಟ್ಟದ್ದ ಕಳೆದುಕೊಳ್ಳಲಾಗದೆ

ಚುಚ್ಚುವ ಅಪರಾಧಿ ಪ್ರಗ್ನೆಗಳು

ಪರ್ ಫ್ಲೋರೋ ಆಕ್ಟಾನಿಕ್ ಆಸಿಡ್ ಗಳು

ಒಂದೊಂದು ಧಿರಿಸಿನಲು ಸಾವಿರ ಕ್ಯಾನ್ಸರ್ ಕಣಗಳು

ಸಾಗರದ ನೀರು, ಉಣ್ಣುವನ್ನದಿ ಸೇರಿ

ಒಮ್ಮೆ ಉಸಿರೆಳೆದರೂ ಒಳ ಸೇರುವ ವಿಷಕ್ಕೆ

ಪರಿಹಾರ ಹುಡುಕುತ್ತ….

ದಕ್ಕದ ಉತ್ತರ, ಬಿಕ್ಕುವ ಎಚ್ಚರ

ಹೊರಬರಲಾಗದ ಕಂದಕಗಳಲಿ

ಮಳೆ, ಗಾಳಿ, ಚಳಿಗೆ ಮೈ ಮುಚ್ಚದೆ  ಇಂದು ವಿಧಿಯಿಲ್ಲ… !

                                                                                                       ————ಡಾ.ಪ್ರೇಮಲತ ಬಿ

೩

ಹಣತೆ

ದೀಪ ಹಚ್ಚಬೇಕು
ಕೇವಲ ಬೆಳಕು ಹರಡಲಲ್ಲ
ಕತ್ತಲ ಮೂಲೆಯಲ್ಲಿ ಕುಳಿತು ಅವಿತಿರುವ ನಿನ್ನ
ಮನದ ಭಯವ ಹೊಡೆದೋಡಿಸಲು

ದೀಪ ಹಚ್ಚಬೇಕು
ಕೇವಲ ಅಜ್ಞಾನ ಹೋಗಲಾಡಿಸಲಲ್ಲ
ಜ್ಞಾನದ ದಾಹವನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸಲು

 

ದೀಪ ಹಚ್ಚಬೇಕು
ಕೇವಲ ಹಬ್ಬ ಆಚರಿಸಲಲ್ಲ
ಮನಸ್ಸಿನ ಖೇದವನ್ನು ತೊರೆದು ಹೊಸತನವನ್ನು ಪಡೆಯಲು

ದೀಪ ಹಚ್ಚಿ ಬೆಳಕು ಹರಿಸಿ
ಮನದ ಆಸೆ ನೀಗಿಸಲು , ಹೊಸತನವ ಪಡೆಯಲು .
ಹಣತೆಗೊಂದು ಹಣತೆ ತಾಗಿ ಸಣ್ಣ ಬೆಳಕು ದೊಡ್ಡದಾಗಿ
ಮನೆಯ ಮಿನುಗಿ  ಮನವ ಬೆಳಗಿ ಹರಿದು ಹರಿದು ಹೊಮ್ಮಿ ಚೆಲ್ಲಿ
ನವೋಲ್ಲಾಸ ನೀಡಲು , ದೀಪ ಬೆಳಗಬೇಕು ಜ್ಯೋತಿ  ಹರಡಬೇಕು 

                                                                                         ——————-  – ಅರ್ಪಿತ ರಾವ್, ಬ್ಯಾನ್ಬರಿ

( ಮುಂದಿನ ವಾರ- ಪಾರಿವಾಳದ ಕಣಿವೆ )