ಕೇಶವ ಕುಲ್ಕರ್ಣಿ ಮತ್ತು ಲಾಸ್ಯ ಬಸವರಾಜಪ್ಪ ರವರು ಬರೆದಿರುವ ಎರಡು ಕವಿತೆಗಳು  

ಆರುವರ್ಷದ ಮಗುವೊಂದು ಮೂವತ್ತು ದಿನಗಳ ಈ  ಲಾಕ್ಡೌನ್ ಸಾಕಾಗಿದೆ,   ತಾನು ಮನೆಯಿಂದ ಹೊರನಡೆದು ಆಟವಾಡಬೇಕು ಮತ್ತು ಸ್ನೇಹಿತರೊಂದಿಗೆ ಬೆರೆಯಬೇಕು  ಎಂದು ಅಳಲು ತೋಡಿಕೊಳ್ಳುತ್ತಿರುವ ಹಾಡಿನ ವಿಡಿಯೋ ಒಂದನ್ನು ಬಿಬಿಸಿ ನಲ್ಲಿ ನೋಡಿದಾಗ, ಅದು ಬರಿ ಮಕ್ಕಳ ಅಳಲಲ್ಲ ವಯಸ್ಕರಿಂದ ವಯೋವೃದ್ಧರ ವರೆಗೂ ಎಲ್ಲರ ಅಳಲು ಎಂಬುದು ಭಾಸವಾಗುತ್ತಿತ್ತು. ನಿಜವಲ್ಲವೇ? ವಾಟ್ಸ್ ಆಪ್ ಚಾಲೆಂಜ್ ಗಳು , ಜೂಮ್ ಕರೆಗಳು, ವರ್ಚುಯಲ್ ಪಾನಗಳು, ಟಿಕ್ ಟಾಕ್ ವಿಡಿಯೋ ಗಳು, ಒಂದೇ ಎರಡೇ? ಇಷ್ಟೆಲ್ಲ ಮಾಡಿದರೂ ನಮ್ಮ ಸಮಾಜ ಸಹಜ ಸ್ಥಿತಿಗೆ ಯಾವಾಗ ಮರಳುವುದೋ ಎಂಬ ಕೊರಗು ನೆರಳಂತೆ ಜೊತೆಯಾಗಿದೆ. ನಮ್ಮೆಲ್ಲರ ತುಡಿತವನ್ನು, ನಾಡಿ ಮಿಡಿತವನ್ನು  ‘ಅನಿವಾಸಿ’ಯ ಕವಿ ಕೇಶವ ಕುಲ್ಕರ್ಣಿ ರವರು  ತಮ್ಮ ‘ಆಶಯ’ ಎಂಬ ಕವಿತೆಯಲ್ಲಿ ಕಟ್ಟಿ ಹಾಕಿದ್ದಾರೆ.  ಕರೋನಾದ ರುದ್ರ ನರ್ತನ, ಅದರಿಂದಾಗಿರುವ ಆಕ್ರಂದನ, ಅಸ್ತ ವ್ಯಸ್ತವಾಗಿರುವ ಜನಜೀವನ, ಮಹಾ ನಗರಗಳ ಸ್ಮಶಾನ ಮೌನ, ಇವೆಲ್ಲವನ್ನು ಸಹಿಸಲಾರದೆ ಮಹಾಮಾರಿಗೆ ಛೀಮಾರಿ ಹಾಕುತ್ತಲೇ ನಮ್ಮನ್ನು ತೊರೆದು ಹೊರಟುಬಿಡು ಎಂದು ಅರಿಕೆ ಮಾಡಿಕೊಳ್ಳುತ್ತಿದ್ದಾರೆ ‘ಅನಿವಾಸಿಯ’ ಹೊಸ ಕವಯತ್ರಿ ಲಾಸ್ಯ ಬಸವರಾಜಪ್ಪ ತಮ್ಮ ‘ಕರೋನ – ನಿನ್ನಲ್ಲೊಂದು ಅರಿಕೆ‘ ಎಂಬ ಕವಿತೆಯಲ್ಲಿ. ಈ ಇಬ್ಬರು ಕವಿಗಳ ಆಶಯ ಬಹುಬೇಗ ಸಾಕಾರವಾಗಲಿ, ಅರಿಕೆ ಫಲಪ್ರದವಾಗಲಿ, ಬದುಕಿನ ಸಹಜತೆ ಮರಳಲಿ ಎಂದು ಹಾರೈಸುತ್ತೇನೆ.  ಕವಿತೆಗಳಿಗೆಂದೇ ಮೀಸಲಾಗಿರುವ ಈ ವಾರದ ಅನಿವಾಸಿ ಸಂಚಿಕೆ ನಿಮಗೆ ಇಷ್ಟವಾಗುತ್ತದೆ ಎಂದು ನಂಬಿದ್ದೇನೆ . (ಸಂ)

ಆಶಯ

ಕೇಶವ ಕುಲ್ಕರ್ಣಿ

ಮತ್ತೆ ಮಕ್ಕಳು ಅಜ್ಜ-ಅಜ್ಜಿಯ
ಕೈಯ ಹಿಡಿದು ಆಡಲಿ
ದೂರ ಬದುಕುವ ಮನೆಯ ಮಂದಿ
ಮತ್ತೆ ಭೇಟಿಯ ಮಾಡಲಿ

ಗೆಳೆಯ ಗೆಳತಿಯರೆಲ್ಲ ಕೂಡಿ
ಹಾಡಿ ಕುಣಿದು ನಲಿಯಲಿ
ಬಂಧು ಬಳಗದ ಜಾತ್ರೆಯಲ್ಲಿ
ಮದುವೆ ಸಂಭ್ರಮ ಜರುಗಲಿ

ವಿದ್ಯೆವಿನಯವ ಹೇಳಿಕೊಡುವ
ಶಾಲೆ ಮತ್ತೆ ತೆರೆಯಲಿ
ಗಾನಸಭೆಗಳು ಸಿನಿಮಂದಿರಗಳು
ತುಂಬಿ ತುಂಬಿ ತುಳುಕಲಿ

ಮತ್ತೆ ಮುಖದಲ್ಲಿ ನಗುವು ಮೂಡಲಿ
ಮತ್ತೆ ಮೂಡಣ ಮೊಳಗಲಿ
ಮತ್ತೆ ಮನದಲ್ಲಿ ಶಾಂತಿ ಕಾಣಲಿ
ಮತ್ತೆ ಪಡುವಣ ಪುಟಿಯಲಿ 

ಕೊರೋನ – ನಿನ್ನಲ್ಲೊಂದು ಅರಿಕೆ

ಲಾಸ್ಯ ಬಸವರಾಜಪ್ಪ

ಕವಯಿತ್ರಿ ಲಾಸ್ಯ ಬಸವರಾಜಪ್ಪ ‘ಅನಿವಾಸಿ’ ಗೆ ಹೊಸ ಸೇರ್ಪಡೆ. ಮೂಲತಃ ಮೈಸೂರಿನವರಾದ ಲಾಸ್ಯ , ವೃತ್ತಿಯಿಂದ ಐಟಿ  ಉದ್ಯೋಗಿ, ಪ್ರವೃತ್ತಿ ಯಿಂದ ಕವಿ. ಇಬ್ಬರು ಮಕ್ಕಳು ಮತ್ತು ಪತಿಯೊಂದಿಗೆ ಲಂಡನ್ ನ ಆರ್ಪಿಂಗ್ಟನ್ ನಲ್ಲಿ ಸುಮಾರು ೫ ವರ್ಷಗಳಿಂದ ನೆಲೆಸಿದ್ದಾರೆ. ಇವರ ಕವನಗಳು ‘ಕರ್ಮವೀರ’, ‘ಆಂದೋಲನ’, ಮುಂತಾದ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ, ಮತ್ತು ತಮ್ಮ ಅನುಭವಗಳನ್ನು ತಮ್ಮ ಬ್ಲಾಗ್ ಮೂಲಕ ಹಂಚಿಕೊಳ್ಳುತ್ತಾರೆ. ‘ಅನಿವಾಸಿ’ ಗುಂಪಿನ ಪರಿಚಯ ಬೆಳೆದಿದ್ದಕ್ಕೆ ಸಂತಸ ವ್ಯಕ್ತಪಡಿಸುವ ಲಾಸ್ಯ, ಗುಂಪಿನ ಸದಸ್ಯರಿಗೆಲ್ಲಾ ಶುಭಹಾರೈಸುತ್ತಾರೆ.

ಹೇ ಕೊರೋನ, ಸಾಕು ನಿಲ್ಲಿಸು ನಿನ್ನ ರುದ್ರ ನರ್ತನ
ಭಯಭೀತರಾಗಿದ್ದಾರೆ ಎಲ್ಲ ದೇಶದ ಜನ
ಮುಗಿಲು ಮುಟ್ಟಿದೆ ವಿಶ್ವದ ಆಕ್ರಂದನ
ಬೇಕಿದೆ ನೊಂದ ಮನಗಳಿಗೀಗ ಕೊಂಚ ಸಾಂತ್ವನ

ಕಣ್ಣಿಗೆ ಕಾಣದ ಹೆಮ್ಮಾರಿ,
ಮಾಗಿದ ಮುಪ್ಪಿನ ಜೀವಗಳೇ ನಿನಗೇಕೆ ಗುರಿ?
ರಕ್ತದಾಹಿಯೇ ನೀನು, ಏಕಿಷ್ಟು ಕ್ರೂರಿ?

ಬದುಕಿನ ಮುಸ್ಸಂಜೆಯಲಿ, ನೆನಪುಗಳ ತಡವುತ್ತಾ
ಕಳೆದು ಹೋದ ದಿನಗಳ ಮೆಲುಕು ಹಾಕುತ್ತಾ
ಮೊಮ್ಮಕ್ಕಳ ಜೊತೆ ಮಕ್ಕಳಾಗಿ ಆಟವಾಡುತ್ತಾ
ಕಾಲ ಹಾಕುತ್ತಿರುವ ಹಣ್ಣೆಲೆಗಳ ಮೇಲೆ ನಿನಗೇಕಿಲ್ಲ ಕರುಣೆ?
ಅರ್ಥವಾಗದೇ ಹೊಸ ಚಿಗುರು-ಹಳೆ ಬೇರುಗಳ ಅಂತರಂಗದ ಬವಣೆ?

ಕಳ್ಳ ಬೆಕ್ಕಿನ ಹೆಜ್ಜೆಯಲಿ ಭೂಮಂಡಲವ ಆವರಿಸಿ
ಆಪೋಷನಕ್ಕೆ  ಅಣಿಯಾಗುತ್ತಿರುವ ಓ ಮಹಾಮಾರಿ ಕೊರೋನ
ನಿನ್ನ ಆರ್ಭಟಕೆ ಹೆದರಿ ಅಸ್ತವ್ಯಸ್ತವಾಗಿದೆ ಜನಜೀವನ 
ತಲ್ಲಣಿಸಿದೆ ಜಗ, ಎಲ್ಲೆಡೆ ಹರಡಿದೆ ಸ್ಮಶಾನ ಮೌನ 

ಕಿಟಕಿ ಬಾಗಿಲ ಮುಚ್ಚಿ, ಗುಮ್ಮಕ್ಕೆ ಹೆದರಿ ನಡುಗುತ್ತಾ,
ಸತ್ತ ಗೆಳೆಯರ ಸಂಸ್ಕಾರಕ್ಕೂ ಹೋಗಲಾರದೆ ಅಸಹಾಯಕತೆಯಲ್ಲಿ ನಲುಗುತ್ತಾ,
ಗೆಳೆಯ-ಗೆಳತಿಯರ ಒಡನಾಟವಿಲ್ಲದೆ ಸೊರಗುತ್ತಾ, ನಿನಗೆ ಹಿಡಿಶಾಪ ಹಾಕುತ್ತಾ,
ಮೂಕ ವೇದನೆಯಲ್ಲಿ ಮುಳುಗಿದೆ ಪ್ರಪಂಚ
ಇರಲಿ ದಯೆ ಅವರ ಮೇಲೆ ಇನ್ನಾದರೂ ಕೊಂಚ

ಅಗಲಿರುವರು ಆಗಲೇ ನಮ್ಮಿಂದ ಲಕ್ಷಾಂತರ
ಹೊರಟು ಬಿಡು ಇನ್ನಾದರೂ ಎಲ್ಲರಿಂದ ದೂರ
ದುಡಿವ ಕೈಗಳು ಹೊರಲಾರವು ಆರ್ಥಿಕ ಕುಸಿತದ ಭಾರ
ಭಯ-ಆತಂಕ ಮನೆ ಮಾಡಿ ಆಗಿದೆ ಹೆಮ್ಮರ
ಹೊಮ್ಮಲಿ ಕಾರ್ಮುಗಿಲ ಅಂಚಿನಿಂದ ಸುಮಧುರ ಸುಸ್ವರ!

‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯ ಪುನರಾವಲೋಕನ

ಡಾ. ಜಿ. ಎಸ್. ಶಿವಪ್ರಸಾದ್

ಕೆಲವು ತಿಂಗಳ ಹಿಂದೆ ಡಾ. ಎಸ್.ಎಲ್. ಭೈರಪ್ಪನವರ ಬರಹಗಳನ್ನು ಕುರಿತು ಲಂಡನ್ನಿನ ನೆಹರು ಕೇಂದ್ರದಲ್ಲಿ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದ್ದು ಆ ಸಂದರ್ಭದಲ್ಲಿ ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ‘ ಕಾದಂಬರಿಯನ್ನು ಕುರಿತು ಮಾತನಾಡುವ ಅಪೂರ್ವ ಅವಕಾಶ ನನಗೆ ಒದಗಿ ಬಂದಿತು. ನಾನು ಆಗ ಆಡಿದ ಮಾತುಗಳನ್ನು ಈಗ ಬರವಣಿಗೆಯ ಮೂಲಕ ದಾಖಲಿಸುತ್ತಿದ್ದೇನೆ. ಭೈರಪ್ಪನವರು ಸುಮಾರು ಐವತ್ತು ವರ್ಷಗಳ ಹಿಂದೆ ( ೧೯೬೮) ಬರೆದ ಈ ಕಾದಂಬರಿಯನ್ನು ಈಗ ಪುನರಾವಲೋಕಿಸಲು ಕೆಲವು ಕಾರಣಗಳಿವೆ. ಈ ಕಥೆಯಲ್ಲಿ ಪೂರ್ವ ಮತ್ತು ಪಶ್ಚಿಮಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಭೈರಪ್ಪನವರು ವಿಮರ್ಶೆ ಮಾಡಿದ್ದಾರೆ. ಎರಡು ಸಂಸ್ಕೃತಿಗಳ ನಡುವೆ ಸಂಭವಿಸುವ ಘರ್ಷಣೆಗಳನ್ನು ಕಥೆಯಲ್ಲಿ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮ ರಾಜಕೀಯ ಮತ್ತು ಸಾಮಾಜಿಕ ಪರಿಸರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಬಗ್ಗೆ  ಜನಸಾಮಾನ್ಯರಲ್ಲಿ ಜಾಗೃತಿ ಮೂಡಿದೆ. ಈ ಹಿನ್ನೆಲೆ ಗಳಲ್ಲಿ ಈ ಕಥೆಯನ್ನು ಮರುಪರಿಶೀಲಿಸಲಾಗಿದೆ.

ನಾನು ಹಿಂದೆ ವಿದ್ಯಾರ್ಥಿಯಾಗಿದ್ದಾಗ ಈ ಕಾದಂಬರಿಯನ್ನು ಓದಿದ್ದು, ಇತ್ತೀಚಿಗೆ ಮತ್ತೆ ಈ ಕಾದಂಬರಿಯನ್ನು ಓದಿದಾಗ ಅದರಲ್ಲಿನ ಕೆಲವು ವಿಶೇಷ ಅಂಶಗಳನ್ನು ನಾನು ಗ್ರಹಿಸಿದ್ದೇನೆ. ಕಾದಂಬರಿಯಲ್ಲಿ ಭೈರಪ್ಪನವರು ತರುವ ಮುಖ್ಯ ಪಾತ್ರವಾದ  ಕಾಳಿಂಗ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ವ್ಯಾಸಂಗಕ್ಕೆಂದು ಅಮೇರಿಕಾಗೆ ತೆರಳಿ ಅಲ್ಲಿ ಕೆಲಕಾಲ ವಾಸವಾಗಿದ್ದು ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ತನ್ನದಾಗಿಸಿಕೊಂಡು ಅಲ್ಲಿಯ ಬಿಳಿ ಹೆಂಗಸು ಹಿಲ್ಡಾಳನ್ನು ಪ್ರೀತಿಸಿ ಮದುವೆಯಾಗಿ ಸಂಸಾರ ಸಮೇತ ಭಾರತಕ್ಕೆ ಮರಳಿ ಬರುತ್ತಾನೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ಮತ್ತು ಆಧುನಿಕ ಯೋಜನೆಗಳನ್ನು  ಭಾರತದಲ್ಲಿ ಅನುಷ್ಠಾನಗೊಳಿಸುವ ಸುಂದರ ಕನಸುಗಳನ್ನು ಅವನು ಮತ್ತು ಹಿಲ್ಡಾ ಹೊತ್ತು ಕಾಳೇನಹಳ್ಳಿಗೆ ಧಾವಿಸುತ್ತಾರೆ. ಆನಂತರ ಇಲ್ಲಿ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಗಳನ್ನು ಸಾಮಾನ್ಯ ಓದುಗರು ತಮ್ಮ ಭಾರತೀಯತೆಯ ದೃಷ್ಟಿ ಕೋನದಿಂದ ಅರಿತುಕೊಳ್ಳಬಹುದು. ಕಳೆದ ಎರಡು ದಶಕಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ  ನನಗೆ ಭಾರತೀಯತೆ ಮತ್ತು  ಪಾಶ್ಚಿಮಾತ್ಯ    ಮೌಲ್ಯ ಈ ಎರಡೂ ದೃಷ್ಟಿ ಕೋನಗಳು ಲಭ್ಯವಾಗಿರುವುದರಿಂದ ನಾನು ‘ತಬ್ಬಲಿಯು ನೀನಾದೆ ಮಗನೆ’ ಮರುವಿಮರ್ಶೆಗೆ ಕೈ ಹಾಕಿದ್ದೇನೆ.

ಈ ಕಥೆಯಲ್ಲಿ ನಿರ್ದಿಷ್ಟವಾದ ಎರಡು ಅಧ್ಯಾಯಗಳನ್ನು ಗುರುತಿಸಬಹುದು . ಕಥೆಯ ಮೊದಲ ಅಧ್ಯಾಯದಲ್ಲಿ ಕಾಳೇನಹಳ್ಳಿ ಮುಖ್ಯಸ್ಥ ಕಾಳಿಂಗ ಗೌಡಜ್ಜನ ಮುಗ್ಧತೆ, ಆಶಯಗಳು, ಹತಾಶೆ ಅವನ ಧಾರ್ಮಿಕ ನಂಬುಗೆಗಳು ಮತ್ತು ಆಘಾತಗಳನ್ನು ಕಾಣಬಹುದು. ಎರಡನೇ ಅಧ್ಯಾಯದಲ್ಲಿ ಗೌಡಜ್ಜ ತೀರಿದ ಬಳಿಕ ಅವನ ಮೊಮ್ಮಗ ಕಾಳಿಂಗ ಮತ್ತು ಬಿಳಿ ಸೊಸೆ ಹಿಲ್ಡಾರ ಅನುಭವಗಳು, ಸಂಕಟಗಳು ಹಾಗೂ ಎರಡು ಸಂಸ್ಕೃತಿಗಳ ನಡುವೆ ಇರುವ ಕಂದರಗಳು ಓದುಗರ ಕಲ್ಪನೆಗೆ ನಿಲುಕುತ್ತವೆ . ಭೈರಪ್ಪನವರು ಮುನ್ನುಡಿಯಲ್ಲಿ ಹೇಳುವಂತೆ ಈ ಕಥೆಯ ಹಿನ್ನೆಲೆಯಾದ ಕಾಳೇನಹಳ್ಳಿ ಭಾರತದ ಯಾವುದೇ ಕ್ಷೇತ್ರವಾಗಿರಬಹುದು. ಈ ಹಳ್ಳಿ ಯಾವ ಜಿಲ್ಲೆಗೆ ಅಥವಾ ಪ್ರದೇಶಕ್ಕೆ ಸೇರಿರಬಹುದು ಎಂಬ ವಿಚಾರವನ್ನು ಓದುಗರ ಊಹೆಗೆ ಬಿಟ್ಟಿದ್ದಾರೆ. ಈ ಕಥೆಯಲ್ಲಿ ಬರುವ  ಸಾಂಸಾರಿಕ ಬಿಕ್ಕಟ್ಟು ಸಂಘರ್ಷಣೆಗಳು ಭಾರತೀಯತೆ ಎಂಬ ಚೌಕಟ್ಟಿನ ಒಳಗೆ ಸೀಮಿತಗೊಂಡಿರುವುದರಿಂದ ಭಾರತದ ಯಾವ ಮೂಲೆಯಲ್ಲಿಯಾದರೂ ನೆಲೆಸಿರುವ ಭಾರತೀಯರ ಬದುಕಿಗೆ ಪ್ರಸ್ತುತವಾಗುತ್ತದೆ. ಈ ಕಾದಂಬರಿ ಇತರ ಭಾಷೆಗೆ ಅನುವಾದಗೊಂಡಾಗಲೂ ಅದು ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತದೆ.

“ಧರಣಿ ಮಂಡಳ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು”

ಎಂದು ಮೊದಲುಗೊಳ್ಳುವ ಪುಣ್ಯಕೋಟಿ ಗೋವಿನಹಾಡು ಈ ಕಥೆಗೆ ಮೌಲಿಕವಾದ ತಳಹದಿಯನ್ನು ನೀಡಿರುವುದಲ್ಲದೆ ಒಂದು ರೂಪಕವಾಗಿ ಕೂಡ ಪರಿಣಮಿಸಿದೆ. ಗೌಡಜ್ಜ ಅನಕ್ಷರಸ್ತ ಮುಗ್ಧನಾಗಿದ್ದರೂ ಅವನಿಗೊಂದು ಸಂಸ್ಕಾರ ಮತ್ತು  ವ್ಯವಹಾರ ಜ್ಞಾನವಿರುವುದನ್ನು ಕಾಣಬಹುದು. ಅವನು ಸ್ಥಳೀಯ ಶಾಲಾ ಮಾಸ್ತರರಿಂದ ಕೇಳಿದ ಪದ್ಯ;  

“ಹಾದಿ ಬೀದಿಯಲಿರುವ ಕಸದ ಹುಲ್ಲನು ಹುಡುಕಿ ಮೇದು ಮನೆಗೈದು ಅಮೃತವೀವೆ
ಅದನುಂಡು ನನಗೆರಡು ಬಗೆವ ಮಾನವ ಹೇಳು, ನೀನಾರಿಗಾದೆಯೋ ಎಲೆಮಾನವ

ಅವನ ನಂಬಿಕೆಗಳಿಗೆ ಭಧ್ರವಾದ ಬುನಾದಿಯನ್ನು ಒದಗಿಸುತ್ತದೆ. ಹಿಂದೂ ಧರ್ಮದಲ್ಲಿ ಅತೀ ಪೂಜನೀಯವಾದ ಗೋವಿನ ಬಗ್ಗೆ ಅವನ ಪ್ರೀತಿ ಗೌರವಗಳು ಇಮ್ಮಡಿಯಾಗುತ್ತವೆ. ಗೋವು ಗೌಡಜ್ಜನ ಭಾವನೆಗಳಲ್ಲಿ ಒಂದು ದೇವತೆಯಾಗಿ ಹಾಗೂ   ಅವನ ತಾಯಿಯಾಗಿ ಕಾಣತೊಡಗುತ್ತದೆ. ತನ್ನ ಬದುಕಿನ ಪ್ರತಿಯೊಂದು ಕ್ಷಣವನ್ನು ಗೋವಿನ ಏಳಿಗೆಗಾಗಿ ಮೀಸಲಿಡುತ್ತಾನೆ. ತನ್ನ ಮನೆಯಲ್ಲಿ ನಡೆದ ಕೆಲವು ಪವಾಡ ಸದೃಶ ಸನ್ನಿವೇಶಗಳು ಉದಾಹರಣೆಗೆ ಮೊಮ್ಮಗ ತಾಯಿಯ ಎದೆಹಾಲು ಇಲ್ಲದೆ ಕ್ಷೀಣವಾಗುತ್ತಿರುವಾಗ ಪುಣ್ಯಕೋಟಿ ಹಸುವಿನ ಮೊಲೆಗೆ ಮಗುವಿನ ಬಾಯಿಟ್ಟು ಹಾಲು ಚಿಮ್ಮಿಸುವ ಘಟನೆ ಅವನ ನಂಬಿಕೆಗಳನ್ನು ಮತ್ತಷ್ಟು ಧೃಢವಾಗಿಸುತ್ತದೆ

ಪಶುಗಳನ್ನು ಪಶುಗಳಂತೆ ಪರಿಗಣಿಸಿ ಗೌಡಜ್ಜನ ಭಾವನೆಗಳಿಗೆ ಸ್ಪಂದಿಸಲಾರದ ಮತ್ತು ಹಿಂದೂ ಧರ್ಮದ ಸೂಕ್ಷ್ಮತೆಗಳನ್ನು ಗ್ರಹಿಸಲಾರದ ಕೆಲವು ಸರ್ಕಾರಿ ಆಫೀಸರ್ಗಳು ಗೌಡಜ್ಜನಿಗೆ ಕೆಲವು ಬಿಕ್ಕಟ್ಟುಗಳನ್ನು ಮತ್ತು ಸವಾಲುಗಳನ್ನು ಒಡ್ಡುತ್ತಾರೆ . ಉದಾಹರಣೆಗೆ ಗೌಡಜ್ಜನ ಮಗ ಕೃಷ್ಣ ಮತ್ತು ಪುಣ್ಯಕೋಟಿ ಗೋವು ಇಬ್ಬರೂ ಕಿರುಬನ ಆಕ್ರಮಣಕ್ಕೆ ತುತ್ತಾಗಿ ಅವರ ಶವಸಂಸ್ಕಾರ ಮಾಡಿರುವ ಗೋಮಾಳದ ಮೇಲೆ ಸಾರ್ವಜನಿಕ ಮೋಟಾರು ರಸ್ತೆಯನ್ನು ನಿರ್ಮಿಸಲು ಸರ್ಕಾರ ಆದೇಶ ನೀಡಿದಾಗ ಮತ್ತು ಗೋಮಾಳ ಪ್ರದೇಶಗಳನ್ನು ಕೃಷಿಭೂಮಿಯಾಗಿ ಪರಿವರ್ತನೆ ಮಾಡಲು ಸರ್ಕಾರ ಮುಂದಾದಾಗ ಗೌಡಜ್ಜನ ನಂಬಿಕೆಗಳಿಗೆ ಕೊಡಲಿ ಪೆಟ್ಟು ಬೀಳುತ್ತದೆ. ಸರ್ಕಾರದ ಈ ಧೋರಣೆಗಳು ಮತ್ತು ಅದರ ಹಿನ್ನೆಲೆಗಳು ಅವನಿಗೆ ಅರ್ಥವಾಗುವುದಿಲ್ಲ. ಈ ರೀತಿಯಾದ ಕೆಲವು ಘಟನೆಗಳಿಂದ ಅವನಿಗೆ ನಿರಾಶೆಯುಂಟಾಗಿ ಮಾನಸಿಕ ಆಘಾತಗಳು ಉಂಟಾಗುತ್ತವೆ. ಇಷ್ಟಾದರೂ ಗೌಡಜ್ಜ “ಗೋವಾದಿ”ಯಾಗಿ ತನ್ನ ಸಕಲ ಪ್ರಯತ್ನಗಳಿಂದ ಪುಣ್ಯಕೋಟಿಗೆಂದೇ ಮೀಸಲಾದ ಒಂದು ದೇವಸ್ಥಾನವನ್ನು ಕಟ್ಟಿಸಿ ಸಂತೃಪ್ತನಾಗುತ್ತಾನೆ 

ಭೈರಪ್ಪನವರು ಕಥೆಯ ಉದ್ದಕ್ಕೂ ಪ್ರಗತಿ ಮತ್ತು ಜನರ ನಂಬಿಕೆ ಹಾಗೂ ಭಾವನೆಗಳ ನಡುವೆ ಸಂಭವಿಸುವ ತುಮುಲಗಳನ್ನು ಮತ್ತು ಘರ್ಷಣೆಗಳನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿದಿಟ್ಟಿದ್ದಾರೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಸರ್ಕಾರ ತೆಗದುಕೊಳ್ಳುವ ಕೆಲವು ಕ್ರಮಗಳು ಒಬ್ಬ ವ್ಯಕ್ತಿಯ ಒಂದು ಆರ್ಥಿಕ ಪರಿಸ್ಥಿತಿಗೆ ಅಥವಾ ನಂಬಿಕೆ ಮತ್ತು ಭಾವನೆಗಳಿಗೆ ನಷ್ಟವನ್ನು ಉಂಟುಮಾಡಬಹುದು. ಹೀಗಾದಾಗ ಸರ್ಕಾರ ಸೂಕ್ತವಾದ ಪರಿಹಾರ ಧನವನ್ನು ನೀಡುತ್ತದೆ. ಇದರಿಂದ  ಆರ್ಥಿಕ ನಷ್ಟವನ್ನು ತುಂಬಬಹುದಾದರೂ ನಂಬಿಕೆ ಮತ್ತು ಭಾವನೆಗಳಿಗಾದ ನಷ್ಟವನ್ನು ತುಂಬಲು ಸಾಧ್ಯವೇ ? ಎಂಬ ಪ್ರಶ್ನೆ ಓದುಗರಲ್ಲಿ ಮೂಡುತ್ತದೆ.

ಗೌಡಜ್ಜನ ಮೊಮ್ಮಗ ಕಾಳಿಂಗ ತನ್ನ ವಂಶಸ್ಥರು ಪಾರಂಪಾರಿಕವಾಗಿ ನಡೆಸಿಕೊಂಡು ಬಂದಿರುವ ಪಶುಸಂಗೋಪನೆ ಮತ್ತು ಕೃಷಿ ಇವುಗಳ ಬಗ್ಗೆ ಹೆಚ್ಚಿನ ಶಿಕ್ಷಣಕ್ಕಾಗಿ ತನ್ನ ಹಳ್ಳಿಯನ್ನು ತೊರೆಯುತ್ತಾನೆ. ಗೌಡಜ್ಜನ ನಿರೀಕ್ಷೆಗಳನ್ನು ನಿರ್ಲಕ್ಷಿಸಿ ಉನ್ನತ ವ್ಯಾಸಂಗಕ್ಕೆಂದು ಅಮೇರಿಕಾಗೆ ತೆರಳುತ್ತಾನೆ. ಗೌಡಜ್ಜನ  ಸಂಸಾರದಲ್ಲಿ ಉಂಟಾಗುವ  ಏರುಪೇರುಗಳಿಂದ ನಿರಾಶೆ  ಆವರಿಸಿಕೊಂಡರೂ  ಗೌಡಜ್ಜ ಅವುಗಳನ್ನು ಎದುರಿಸಿ ಮುಂದೆ ಸಾಗುತ್ತಾನೆ. ತನ್ನದೇ ಆದ ನಂಬಿಕೆಗಳನ್ನು ಕಟ್ಟಿಕೊಂಡು ಅದನ್ನು ಉಳಿಸಿಕೊಂಡು ಒಬ್ಬ ಆದರ್ಶವಾದಿಯಾಗುತ್ತಾನೆ. ಭೈರಪ್ಪನವರು ಈ ಗೌಡಜ್ಜನ ಪಾತ್ರವನ್ನು ಲೌಕಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಒತ್ತು ನೀಡಿ ಬೆಳೆಸಿದ್ದಾರೆ ಎನ್ನಬಹುದು. ಎಲ್ಲ ಕಥೆಗಳಲ್ಲೂ ಸಮಾಜಕ್ಕೆ ಅಗತ್ಯವಿರುವ ಒಂದು ನೈತಿಕ  ಸಂದೇಶವನ್ನು ಓದುಗರು ನಿರೀಕ್ಷಿಸುವುದು ಸಹಜ. ಇದನ್ನು ಪೂರೈಸುವುದು ಲೇಖಕನ ಹೊಣೆ. ಈ ಕಥೆಯಲ್ಲಿ ಗೌಡಜ್ಜನಲ್ಲದೆ ಪುರೋಹಿತ ವೆಂಕಟರಮಣ ಕೂಡಾ ತನ್ನ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಬದ್ಧನಾಗಿ ಅವುಗಳನ್ನು ತನ್ನ ಬದುಕಿನಲ್ಲಿ ಅನುಷ್ಠಾನ ಗೊಳಿಸುವ ಮೂಲಕ  ಓದುಗರ ನಿರೀಕ್ಷೆಗೆ ನಿಲುಕುತ್ತಾನೆ. 

‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯಲ್ಲಿ ಸೌಂದರ್ಯ ಅಥವಾ ಅಲಂಕಾರ ಶಾಸ್ತ್ರ (Aesthetics) ಅಡಗಿದೆಯೇ ಎಂಬ ವಿಚಾರ ಬಂದಾಗ ಕಥೆಯಲ್ಲಿನ ಹಲವು ಸೊಗಸಾದ ಭಿತ್ತಿಗಳು ನಮ್ಮ ನೆನಪಿನಲ್ಲಿ ಸುಳಿಯುತ್ತವೆ. ಗೌಡಜ್ಜನ ಮಗ ಕೃಷ್ಣೇಗೌಡ ಎತ್ತರವಾದ ಆಳು. ಹಣೆಗೆ ತಿಲಕವಿಟ್ಟು ಕೊರಳಿಗೆ ಬಿಲ್ಲ ಸರ  ಮತ್ತು ಬೆರಳುಗಳಿಗೆ ಮುದ್ರೆಯುಂಗುರ ತೊಟ್ಟು ಬಾಯಿತುಂಬಾ ವೀಳ್ಯಜಗಿದು ಕೆಂದುಟಿಗಳನ್ನು ಜೋಡಿಸಿ ಅರುಣಾದ್ರಿ ಬೆಟ್ಟದ ತಪ್ಪಲಿನ ಹಸಿರುಹುಲ್ಲುಗಾವಲಿನಲ್ಲಿ ಕೊಳಲುನ್ನುಊದಿದಾಗ ಪುಂಡ ಹಸುಗಳು ಅವನ ಸುತ್ತ ನೆರದು ಪಿಳ್ಳಂಗೋವಿಯ ಸ್ವರಕ್ಕೆ ಅವು ಮರುಳಾಗುವ ಚಿತ್ರಣ ನಮಗೆ ತಟ್ಟನೆ ನೀಲಿವರ್ಣದ ಶ್ಯಾಮ ಯಮುನೆಯ ತಟದಲ್ಲಿ ಮರದ ಕೆಳೆಗ ನಿಂತು ಹಸುಗಳ ನಡುವೆ ಕೊಳಲನ್ನೂದುವ ಹಲವಾರು ಖ್ಯಾತ  ಕುಂಚದ ಕಲೆಗಳನ್ನು ನೆನಪಿಗೆ ತರುತ್ತದೆ. 

ಭೈರಪ್ಪನವರು ತರುವ ಹಳ್ಳಿ ಚಿತ್ರಣಗಳು ಕಣ್ಣಿಗೆ ಕಟ್ಟಿದಂತೆ ಗೋಚರಿಸುತ್ತವೆ. ಮೇಲೆ ಪ್ರಸ್ತಾಪ ಮಾಡಿದ ಪ್ರಶಾಂತ ಚಿತ್ರಕ್ಕೆ ಅಭಿಮುಖವಾಗಿರುವ ರೌದ್ರ ಸನ್ನಿವೇಶವನ್ನು ಕೂಡ ಭೈರಪ್ಪನವರು ಚಿತ್ರಿಸಿದ್ದಾರೆ. ಮಾರಿಕೇರಿ ಮಾರಮ್ಮನ ಜಾತ್ರೆಯನ್ನು ವೀಕ್ಷಿಸಲು ಗೌಡಜ್ಜನ ಮೊಮ್ಮಗ ಕಾಳಿಂಗ, ಅವನ ಹೆಂಡತಿ ಹಿಲ್ಡಾ ಮತ್ತು ಮಗ ಜ್ಯಾಕ್ ಆಗಮಿಸುತ್ತಾರೆ. ಈ ಜಾತ್ರೆಯಲ್ಲಿ ಕೋಣನ ಬಲಿಕೊಡುವ ದೃಶ್ಯ ಬಹಳ ಪರಿಣಾಮಕಾರಿಯಾಗಿದೆ. ಮಾರಮ್ಮನ ಜಾತ್ರೆಯಲ್ಲಿ ಸೇರಿದ ಜನ ಜಂಗುಳಿ, ಉರಿಯುವ ಬಿಸಿಲು, ಮೈಗೆ ಮುಖಕ್ಕೆ ಕುಂಕುಮ ಲೇಪಿಸಿಕೊಂಡು ಬರುವ  ಭೀಮಕಾಯದ ಗಂಡಾಳು ಬೇವಿನ ಸೊಪ್ಪಿನಿಂದ ಬುಸುಗುಟ್ಟುತ್ತಿರುವ ಕೋಣಗಳ ಮೇಲೆ ನೀರು ಸಿಂಪಡಿಸಿ ಎಳೆದು ಹಿಡಿದ ಕೋಣಗಳ ಮೇಲೆ ತಮ್ಮಟೆಯ ರುದ್ರ ಬಡಿತಗಳ  ಹಿನ್ನೆಲೆಯಲ್ಲಿ  ಹರಿತವಾದ ಕೊಡಲಿಯಿಂದ  ಪ್ರಹಾರ ಮಾಡಿ ಒಂದೊಂದು ಕೋಣಗಳ ಶಿರಚ್ಛೇದನ ಮಾಡುತ್ತಾನೆ. ಅಲ್ಲಿ ರಕ್ತದ ಕಾಲುವೆ ಹರಿದು ಸತ್ತ ಕೋಣಗಳ ಶವದ ರಾಶಿಯೇ ಬೆಳದು ಹೋಗುವ ಒಂದು ಭೀಕರ ಸನ್ನಿವೇಶವನ್ನು ಭೈರಪ್ಪನವರು ಚಿತ್ರಿಸಿದ್ದಾರೆ. “ಡಿಯರ್ ಈ ಅನಾಗರಿಕ ಹಿಂಸೆಯ ದೃಶ್ಯ ಸಾಕು ನಡಿ ಮನೆಗೆ ಹೋಗೋಣ” ವೆಂದು  ಹಿಲ್ಡಾ ತನ್ನ ಗಂಡ ಕಾಳಿಂಗನಿಗೆ ಸೂಚಿಸುವಲ್ಲಿ ಈ ರೌದ್ರ ಸನ್ನಿವೇಶ ಕೊನೆಗೊಳ್ಳುತ್ತದೆ.

“ಗೋವಿನ ಸಂರಕ್ಷಣೆಗಾಗಿ  ಶಸ್ತ್ರಧಾರಣೆ  ಮಾಡಬೇಕು” “ಯಾರ ಮನೇಲಿ ಹಸು ದುಃಖ ಪಡುತ್ತೋ ಅವನು ನರಕಕ್ಕೆ ಹೋಗುತ್ತಾನೆ” ಎಂಬ ವಿಚಾರಗಳನ್ನು ತಂದು ಭೈರಪ್ಪನವರು ಗೋವು ಹಿಂದುಗಳಿಗೆ ಎಷ್ಟು ಪವಿತ್ರ ಎಂಬುದನ್ನು ಮನದಟ್ಟು ಮಾಡುತ್ತಾರೆ. ಕಥೆಯ ಮೊದಲರ್ಧದಲ್ಲಿ ಬೆಳಸಿದ ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತರಾರ್ಧದಲ್ಲಿ ತೀಕ್ಷ್ಣ ವಿಮರ್ಶೆಗೆ ಒಳಪಡಿಸುತ್ತಾರೆ.

ಕಥೆಯ ಎರಡನೆ ಭಾಗದಲ್ಲಿ ಅಮೇರಿಕಾದ ಸ್ನಾತಕೋತ್ತರ ಪದವಿ ಪಡೆದ ಕಾಳಿಂಗ ಪಾಶ್ಚಿಮಾತ್ಯ ಸಾಂಸ್ಕೃತಿಕ ಮೌಲ್ಯಗಳನ್ನು ತನ್ನದಾಗಿಸಿಕೊಂಡು ಹೆಂಡತಿ ಹಿಲ್ಡಾ ಜೊತೆ ತನ್ನ ಸ್ವಗ್ರಾಮಕ್ಕೆ ಮರಳುತ್ತಾನೆ. ಆಧುನಿಕ ಉತ್ತಮ ಕೃಷಿ ತಂತ್ರಜ್ಞಾನದ ಮೂಲಕ ಉತ್ಪನ್ನಗಳನ್ನು ಹೆಚ್ಚು ಗೊಳಿಸುವ ಕನಸುಗಳನ್ನು ಹೊತ್ತು ತರುತ್ತಾನೆ. ಅವನ ಬಾಲ್ಯಗೆಳಯ ವೆಂಕಟರಮಣ ಶಾಲಾ  ಮೇಷ್ಟ್ರಾಗಿ ಕಾಳೇನಹಳ್ಳಿಯಲ್ಲಿ ನೆಲೆಸಿರುತ್ತಾನೆ. ತಂದೆ ಜೋಯಿಸರಾದ್ದರಿಂದ ಸಂಸ್ಕೃತಪಾಠ ಕಲಿತು ಪುರೋಹಿತ್ಯದಲ್ಲಿ ತೊಡಗಿ, ಗೌಡಜ್ಜ ಕಟ್ಟಿಸಿದ ಪುಣ್ಯಕೋಟಿ ದೇವಸ್ಥಾನದಲ್ಲಿ ಅರ್ಚಕನಾಗಿರುತ್ತಾನೆ. ಹಿಲ್ಡಾ ಜೊತೆ ಮಾತಾನಾಡುವ ಮಟ್ಟಿಗೆ ಇಂಗ್ಲೀಷ್ ಬಲ್ಲವನಾಗಿರುತ್ತಾನೆ. ಅವನ ಮಡಿ ಮೈಲಿಗೆ ಮತ್ತು ಸಂಪ್ರದಾಯಿಕ ಚಿಂತನೆಗಳು,  ಕಾಳಿಂಗ ಮತ್ತು ಹಿಲ್ಡಾರ ವೈಚಾರಿಕ, ವೈಜ್ಞಾನಿಕ ಪಾಶ್ಚಿಮಾತ್ಯ ಆಲೋಚನೆಗಳ  ಜೊತೆ  ಆಗಾಗ್ಗೆ ಸಂಘರ್ಷಿಸುತ್ತವೆ. ಹಿಲ್ಡಾ ಒಂದು ಹೆಣ್ಣಾಗಿ ಗಂಡಸಿನಂತೆ ದುಡಿಯುವುದು, ಮೆಶೀನುಗಳಿಂದ ಹಾಲು ಕರೆಯುವುದು,  ಮಾಂಸಾಹಾರ ಅದರಲ್ಲೂ ಗೋಭಕ್ಷಣೆ ಮಾಡುವುದು ವೆಂಕಟರಮಣನನ್ನು ಕೆರಳಿಸುತ್ತವೆ. ವೆಂಕಟರಮಣ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನಾಗರಿಕ ಸಂಸ್ಕೃತಿಯೆಂದು ಪರಿಗಣಿಸುತ್ತಾನೆ. ಹಿಲ್ಡಾ ವೆಂಕಟರಮಣನ ನಂಬಿಕೆಗಳನ್ನು ವೈಜ್ಞಾನಿಕ ವಸ್ತುನಿಷ್ಠೆಗಳ ಮೂಲಕ ಪ್ರಶ್ನಿಸುತ್ತಾ ಹೋಗುತ್ತಾಳೆ. ಗೋವನ್ನು ಮನುಷ್ಯರ ಹಿತದೃಷ್ಟಿಗಿಂತ ಮೇಲಿಟ್ಟು ನೋಡುವ ಮಾನವೀಯತೆಯ ನಿಲುವನ್ನು ಅಣಕಿಸುತ್ತಾಳೆ. ಮಾಂಸಾಹಾರ ಪಾಪವಾದರೆ ಇತರ ಮಾಂಸಾಹಾರಗಳಾದ ಆಡು, ಕುರಿ, ಕೋಳಿ, ಮೀನುಗಳನ್ನು ತಿನ್ನುವ ಭಾರತೀಯರಿಗೆ ಗೋಮಾಂಸವಷ್ಟೇ ಏಕೆ ವರ್ಜ್ಯ ? ಎಂದು ವಾದಿಸುತ್ತಾಳೆ. ಈ ಇಬ್ಬರ ನಡುವಿನ ವಾಗ್ವಾದ ವೆಂಕಟರಮಣನನ್ನು ಎಷ್ಟರ  ಮಟ್ಟಿಗೆ ಕೆರಳಿಸುವುದೋ ಅಷ್ಟರ ಮಟ್ಟಿಗೆ ಹಿಲ್ಡಾಳನ್ನು ಕೆರಳಿಸುತ್ತದೆ. ಅದೇ ಸಿಟ್ಟಿನಲ್ಲಿ ಹಿಲ್ಡಾ ತನ್ನ ಸ್ವತ್ತಿನಲ್ಲಿರುವ ಪುಣ್ಯ ಕೋಟಿ ತಳಿಯ ಗೋವನ್ನು ತನ್ನ ಕೆಲಸದಾಳು ಜಮಾಲಾನ ಸಹಾಯದಿಂದ ಕೊಂದು ಗೋಮಾಂಸದ ಅಡುಗೆ ಮಾಡಿಸಿಕೊಂಡು ತಿಂದು ಬಿಡುತ್ತಾಳೆ. ಈ ವಿಚಾರ ಹಳ್ಳಿಯವರಿಗೆ ತಲುಪಿ ಕಾಳಿಂಗ ಮತ್ತು ಅವನ ಹೆಂಡತಿಗೆ ಯಾವ ರೀತಿ ಮತ್ತು ಎಷ್ಟರ ಮಟ್ಟಿಗೆ ಶಿಕ್ಷೆ ವಿಧಿಸಬೇಕು ಎಂಬ ವಿಚಾರದ ಬಗ್ಗೆ ಹಳ್ಳಿಜನಗಳು ಹೇಗೆ ಭಾವೋದ್ವೇಗದಿಂದ ಪ್ರತಿಕ್ರಿಯೆ ತೋರುತ್ತಾರೆ ಎಂಬುದನ್ನು ಭೈರಪ್ಪನವರು ಸ್ವಾರಸ್ಯಕರವಾಗಿ ಕಥೆಯಲ್ಲಿ ದಾಖಲಿಸಿದ್ದಾರೆ.  ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲದ  ಹಳ್ಳಿ ಜನಗಳ ಮುಗ್ಧತೆ, ಹಿಲ್ಡಾ ಮತ್ತು ಕಾಳಿಂಗನ ಮನೆಯಲ್ಲಿ ಬಂದೂಕ ವಿಟ್ಟುಕೊಂಡಿರುವುದರ ಬಗ್ಗೆ ಭಯ , ಅಸಹಾಯಕತೆ, ಆಕ್ರೋಶ ಈ ಭಾವನೆಗಳನ್ನೊಳಗೊಂಡ ಸನ್ನಿವೇಶದಲ್ಲಿ ಹಾಸ್ಯದ ಎಳೆಯ ಜೊತೆಗೆ ಗಂಭೀರ ಗ್ರಾಮೀಣ ರಾಜಕೀಯದ ಒಳನೋಟವನ್ನು ಕಾಣಬಹುದು.

ಕಾಳಿಂಗನ ತಾಯಿ ತಾಯವ್ವ, ತನ್ನ ಮಗ ಮತ್ತು ಬಿಳಿ ಸೊಸೆಯ ಧರ್ಮಹೀನ ಬದುಕನ್ನು ವೀಕ್ಷಿಸುತ್ತ ತನ್ನ ಗ್ರಾಮೀಣ ಸಮಾಜ ಅಂಗೀಕರಿಸಲಾಗದ ನಡೆ ನುಡಿಗಳನ್ನು  ಕಂಡಾಗ ಅವಳಿಗೆ  ತೀವ್ರ ಅಸಮಾಧಾನ ಉಂಟಾಗುತ್ತದೆ. ಮಗ ಮತ್ತು ಸೊಸೆಯ ಮೇಲಿನ ಪ್ರೀತಿ ಮತ್ತು ದ್ವೇಷ ಅವಳ ಅಂತರಂಗದಲ್ಲಿ ಭಾವನೆಗಳ ಅಲ್ಲೋಲ ಕಲ್ಲೋಲವನ್ನು ಉಂಟುಮಾಡುತ್ತದೆ. ತಾನು ಮೂಕಿಯಾದುದರಿಂದ ತನ್ನ ಭಾವನೆಗಳನ್ನು ವ್ಯಕ್ತಪಡಿಸಲಾಗದೆ ನಿಸ್ಸಹಾಯಕಳಾಗಿ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಮೂಕ ಸಾಕ್ಷಿಯಾಗಿ ಪರಿತಪಿಸುವುದು ಕಥೆಗೆ ವಿಶೇಷವಾದ ಆಯಾಮವನ್ನು ತಂದು ಕೊಟ್ಟಿದೆ. ಪರಿವರ್ತನೆಯೆಂಬ  ಅನಿವಾರ್ಯ ಪ್ರವಾಹದಲ್ಲಿ ಹಳೆ ಮೌಲ್ಯಗಳು ಕೊಚ್ಚಿಕೊಂಡು ಹೋಗುವಾಗ ಅದನ್ನು ನಂಬಿಕೊಂಡವರ  ಖೇದವನ್ನು ಮಾತಿನಲ್ಲಿ ಕೂಡ ಅಭಿವ್ಯಕಪಡಿಸಲು ಸಾಧ್ಯವಿಲ್ಲದಿರುವಾಗ ಮೂಕಿ ತಾಯವ್ವ ಹೇಗೆ ತನ್ನ ಅಸಮ್ಮತಿಯನ್ನು ತಿಳಿಸಬಲ್ಲಳು? ಹಲವಾರು ಅನ್ಯಾಯಗಳ ಬಗ್ಗೆ ಮೌನವಾಗಿ ಪ್ರತಿಭಟನೆ ನಡೆಸುವ ಗಾಂಧಿ  ತತ್ವಕ್ಕೆ ತಾಯವ್ವನ ಮೂಕಸಾಕ್ಷಿ ಪ್ರತೀಕವಾದಂತಿದೆ.

ಕಥೆಯ ಕೊನೆಯಲ್ಲಿ ಹಿಲ್ಡಾ ಕೆಲವು ವಯಸ್ಸಾದ ಗೋವುಗಳನ್ನು  ಕೆಲವು ದಲ್ಲಾಳಿಗಳ ಮೂಲಕ  ಕಸಾಯಿಖಾನೆಗೆ ಮಾರಿಕೊಳ್ಳುತ್ತಾಳೆ. ಕಥೆಯಲ್ಲಿನ ಈ ಹಂತದಲ್ಲಿ ಕಾಳಿಂಗ ತನ್ನ ತಂದೆ, ತಾಯಿ, ಅಜ್ಜ ಅಜ್ಜಿಯರನ್ನು ಕಳೆದುಕೊಂಡಿರುತ್ತಾನೆ. ಹಳ್ಳಿಗರ ಆಕ್ರೋಶಕ್ಕೆ ತುತ್ತಾಗಿ ಅವರ ಮತ್ತು ತನ್ನ ಆಪ್ತಗೆಳೆಯ ವೆಂಕಟರಮಣನ ಸ್ನೇಹ ವಿಶ್ವಾಸಗಳನ್ನೂ ಕಳೆದುಕೊಳ್ಳುತ್ತಾನೆ. ಅವನ ಪ್ರೀತಿಯ ಮಡದಿ  ಹಿಲ್ಡಾ ಅಮೆರಿಕಾಗೆ ವಾಪಸ್ಸು ತೆರಳುವ ಮಾತುಗಳನ್ನಾಡುತ್ತಾಳೆ. ಈ ಆಘಾತಗಳಲ್ಲದೆ ಕಾಳಿಂಗ ತನಗೆ ಮತ್ತು ತನ್ನ ಮಗಳು ಎಸ್ತರಿಗೆ ಕೆಚ್ಚಲಿನ ಹಾಲುಣಿಸಿ ಬದುಕಿಸಿದ ಪುಣ್ಯಕೋಟಿ ಹಸುಗಳನ್ನು  ಕಸಾಯಿಖಾನೆಗೆ ಕಳೆದುಕೊಂಡು ತಬ್ಬಲಿಯಾಗುತ್ತಾನೆ! ಅವನಿಗೆ ಹಿಲ್ಡಾ ಹಸುಗಳನ್ನು ಮಾರಿರುವ ವಿಚಾರ ತಿಳಿದಕೊಡಲೆ ಗೋವುಗಳನ್ನರಸಿಕೊಂಡು ಅವು ಮುಂಬೈನಲ್ಲಿ ಇರಬಹುದೆಂಬ ಸುಳಿ ಸಿಕ್ಕಾಗ ಅಲ್ಲಿಯ ಕಸಾಯಿಖಾನೆಗೆ ತ್ವರಿತದಲ್ಲಿ ತೆರಳುತ್ತಾನೆ. ಅಲ್ಲಿ ನೆರೆದ ನೂರಾರು ಗೋವುಗಳಲ್ಲಿ ತನ್ನ ಪುಣ್ಯಕೋಟಿ ಗೋವುಗಳನ್ನು ಗುರುತಿಸಲು ಎಷ್ಟು ಪ್ರಯತ್ನಿಸಿದರೂ ಅವನಿಗೆ ಸಾಧ್ಯವಾಗುವುದಿಲ್ಲ. ಈ ಒಂದು ಹಂತದಲ್ಲಿ ‘ತಬ್ಬಲಿಯು ನೀನಾದೆ ಮಗನೆ’ ಎಂಬ ಕಥೆಯ ನಿಜವಾದ ಅರ್ಥ ಓದುಗರ ಕಲ್ಪನೆಗೆ ದೊರೆಯುತ್ತದೆ .

ಭೈರಪ್ಪನವರ  ಕೆಲವು ಕೃತಿಗಳಲ್ಲಿ  ಕಥೆಗೆ ಒಂದು ನಿರ್ದಿಷ್ಟವಾದ ಅಂತ್ಯವಿಲ್ಲ ಎನ್ನುವ ವಿಚಾರವನ್ನು ಗಮನಿಸಬಹುದು. ಇದನ್ನು ಭೈರಪ್ಪನವರೇ ಒಂದು ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ   ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯು ಈ ಹಿನ್ನೆಲೆಯಲ್ಲಿ ಹೊರತಾಗಿಲ್ಲ ಎನ್ನಬಹುದು. ಕಥೆಯಲ್ಲಿ ಹಿಲ್ಡಾ ಕೊನೆಗೆ ಭಾರತದಲ್ಲೇ ಉಳಿದಳೇ ಅಥವಾ ಅಮೆರಿಕಾಗೆ ವಾಪಸ್ಸು ತೆರಳಿದಳೇ ? ಕಾಳಿಂಗ ತಾನು ಕಂಡ ಕೃಷಿ ಅಭಿವೃದ್ಧಿ ಕನಸುಗಳು ನನಸಾದವೇ ? ಕುಪಿಸ್ಥರಾಗಿದ್ದ ಹಳ್ಳಿಯವರು ಹಿಲ್ಡಾ ಮತ್ತು ಕಾಳಿಂಗನನ್ನು ಮುಂದಕ್ಕೆ  ಸಹಿಸಿಕೊಂಡರೆ? ಈ ವಿಚಾರಗಳನ್ನು ಭೈರಪ್ಪನವರು ಓದುಗರಿಗೆ ಬಿಟ್ಟಿರುತ್ತಾರೆ. ಲೇಖಕರು ತಮ್ಮ ನಿರ್ಣಾಯಕ ಅಭಿಪ್ರಾಯಗಳನ್ನು ಓದುಗರ ಮೇಲೆ ಹೇರದೆ ಓದುಗರೇ ತಮ್ಮ ಅನುಭವದ ಮೇಲೆ ಅದನ್ನು ಕಂಡುಕೊಳ್ಳಲು ಅನುವುಮಾಡಿಕೊಡುವುದು ಉತ್ತಮ ಲೇಖಕನ ಜವಾಬ್ದಾರಿ.

ಭೈರಪ್ಪನವರೇ ಹೇಳುವಂತೆ ಅವರ ಕಾದಂಬರಿಗಳನ್ನು ಅರ್ಥಮಾಡಿಕೊಳ್ಳಲು ಓದುಗರಿಗೆ ಭಾರತೀಯತೆಯ ಅರಿವಿರಬೇಕು. ಭಾರತೀಯ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಪರಿಚಯವಿರಬೇಕು. ಈ ಕಾದಂಬರಿಯಲ್ಲಿ ಆ ಭಾರತೀಯತೆಯ ಎರಡು ಚಹರೆ ಗಳನ್ನು ಕಾಣಬಹುದು. ಮೊದಲನೆಯದಾಗಿ ಪುರೋಹಿತ ವೆಂಕಟರಮಣನ ಮೂಲಕ ಅಭಿವಕ್ತಗೊಳ್ಳುವ ವೇದ, ಶಾಸ್ತ್ರ, ಪುರಾಣಗಳನ್ನು ಆಧರಿಸಿದ  ಸಾಂಪ್ರದಾಯಿಕ  ಭಾರತೀಯತೆಯನ್ನು ಕಾಣಬಹುದು.   ಹಾಗೆಯೇ  ಗೌಡಜ್ಜನ ಕಲ್ಪನೆಗೆ ಮತ್ತು  ಅರಿವಿಗೆ ಎಟುಕಬಹುದಾದ ಸರಳವಾದ ಜಾನಪದ ನೀತಿ ಬೋಧಕ  ಪುಣ್ಯಕೋಟಿ ಮತ್ತು ಇತರ ದಂತಕಥೆ  ಹಾಡುಗಳಿಂದ ಮೂಡುವ ಭಾರತೀಯತೆಯನ್ನೂ ಕಾಣಬಹುದು. 

ಭೈರಪ್ಪನವರು ಈ ಕಥೆಯನ್ನು ಬರೆದು ಐವತ್ತು ವರ್ಷಗಳಾಗಿವೆ. ನಮ್ಮ ಗ್ರಾಮೀಣ ಜನ ಜೀವನದಲ್ಲಿ ಈ ಕಳೆದ ಐದು ದಶಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿರಬಹುದು. ಈಗ ಕೃಷಿ ಕ್ಷೇತ್ರ ಮತ್ತು ಹಾಲು ಉತ್ಪಾದನೆ ಕೈಗಾರಿಕೆಗಳಲ್ಲಿ  ಅಭಿವೃದ್ಧಿಯನ್ನು ಕಂಡಿದ್ದೇವೆ. ಜಾಗತೀಕರಣದ  ಹಿನ್ನೆಲೆಯಲ್ಲಿ ಮೊಬೈಲ್ ಫೋನುಗಳ ಮೂಲಕ ಜನರ ಪರಸ್ಪರ ಸಂಪರ್ಕ ಸುಧಾರಿಸಿದೆ. ಸಹಕಾರಿ ಸಂಘಗಳು ಗ್ರಾಮೀಣ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಇತರ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಹೀಗೆ ಸಾಕಷ್ಟು  ಪ್ರಗತಿಪರ ಮತ್ತು ಆರ್ಥಿಕ ಬದಲಾವಣೆಗಳನ್ನು ಕಂಡಿದ್ದರೂ ನಗರಗಳಿಗೆ ಹೋಲಿಸಿದರೆ ನಮ್ಮ ಗ್ರಾಮೀಣ ಸಾಮಾಜಿಕ ಜೀವನ, ನಂಬಿಕೆ ಮತ್ತು ಸಂಪ್ರದಾಯಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುತ್ತಿಲ್ಲ. ಕಾಲ್ಪನಿಕವಾಗಿ ಅದೇ ಕಾಳಿಂಗ ಮತ್ತು ಹಿಲ್ಡಾ ಈಗಿನ ಕಾಲಕ್ಕೆ ಬಂದು ಕಾಳೇನಹಳ್ಳಿಯಲ್ಲಿ ನೆಲೆಸಿದರೆ ಅವರು ಭೈರಪ್ಪನವರ ಕಥೆಯಲ್ಲಿ ಸೃಷ್ಟಿಸಿದ ಬಿಕ್ಕಟ್ಟುಗಳನ್ನು ಎದುರಿಸುವ ಸಾಧ್ಯತೆಗಳಿವೆ. ಅನ್ಯ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಹಿಂದಿಗಿಂತ ಇಂದು ಹೆಚ್ಚು ಅಸಹಿಷ್ಣುತೆ ಕಂಡುಬರುತ್ತಿದೆ. ಇದು ಸರಿಯೇ? ಅಥವಾ ತಪ್ಪೇ ? ಎಂದು ಚರ್ಚಿಸುವುದು ಈ ಬರವಣಿಗೆಯ ಮಿತಿಯ ಹೊರಗಿದೆ. ಅಂದ ಹಾಗೆ ‘ತಬ್ಬಲಿಯು ನೀನಾದೆ ಮಗನೆ’ ಕಥೆಯನ್ನು ಹಿಂದೆ ಕಾರ್ನಾಡರು ಚಲನ ಚಿತ್ರ ಮಾಡಿ, ಆ ಚಿತ್ರದಲ್ಲಿ ನಾಸಿರುದ್ದೀನ್ ಷಾ ಅವರು ಪುರೋಹಿತನಾದ ವೆಂಕಟರಮಣನ ಪಾತ್ರವನ್ನು ಉತ್ತಮವಾಗಿ ನಟಿಸಿ ಈ ಪಾತ್ರಕ್ಕೆ ಜೀವಕಳೆ  ತುಂಬಿದ್ದರು. ಈಗಿನ ಪರಿಸ್ಥಿಯಲ್ಲಿ ಒಬ್ಬ ಮುಸ್ಲಿಂ ನಟ ಪುರೋಹಿತನ ಪಾತ್ರ ವಹಿಸುವುದು ಊಹಿಸಿಲಾರದ ಸಂಗತಿ!

ಇನ್ನೊಂದು ವಿಚಾರ, ಭೈರಪ್ಪನವರು ಗೌಡಜ್ಜನ ಮೂಲಕ ಎತ್ತಿ ಹಿಡಿಯುವ ಗೋಸಂರಕ್ಷಣಾ ಕಾರ್ಯವನ್ನು ಇಂದು ಆಳುತ್ತಿರುವ ಸರ್ಕಾರವೇ ತನ್ನ  ವಶಕ್ಕೆ ತೆಗೆದುಕೊಂಡಿದೆ. ಧಾರ್ಮಿಕ ನಂಬಿಕೆಗಳ ಹೊರಗೆ ಪರಿಸರ ಹಿತದೃಷ್ಟಿಯಿಂದ ನೋಡಿದಾಗ ಗೋಮಾಂಸ ಭಕ್ಷಣೆಯಿಂದ ಹೆಚ್ಚು ಪರಿಸರ ಮಾಲಿನ್ಯ ಒದಗಬಹುದು ಎಂಬ ವಿಚಾರ ವೈಜ್ಞಾನಿಕವಾಗಿ  ನಮಗೀಗ ತಿಳಿದಿದೆ. ಸಸ್ಯಾಹಾರ ತರುವ ಅನೇಕ ಅರೋಗ್ಯ ಅನುಕೂಲತೆಗಳು ಬೆಳಕಿಗೆ ಬಂದಿವೆ.  ಈ ರೀತಿಯ ಸಸ್ಯಾಹಾರ ಪ್ರಚೋದನೆ ಅನ್ಯಧರ್ಮಿಗಳಿಗೂ ಮತ್ತು ವಿಚಾರವಂತರಿಗೂ ನಿಲಕುವ ತರ್ಕಬದ್ಧವಾದ ಆಲೋಚನೆ ಎನ್ನಬಹುದು.  ಸಸ್ಯಾಹಾರವನ್ನು  ಪಾಶ್ಚಿಮಾತ್ಯ ದೇಶಗಳಲ್ಲಿ ಕೂಡ ಪ್ರಚೋದಿಸಲಾಗಿದೆ

ಭಾರತಕ್ಕೆ ಭೇಟಿ ನೀಡುತ್ತಿರುವ ಅಸಂಖ್ಯಾತ ಪಾಶ್ಚಿಮಾತ್ಯರಿಗೆ ನಮ್ಮ ಸಂಸ್ಕೃತಿಯ ಸೂಕ್ಷ್ಮತೆಗಳ ಅರಿವಿದೆ. ಅನಿವಾಸಿ ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯ ಮಧ್ಯೆ ಬದುಕುತ್ತಾ ಅಲ್ಲಿಯ  ಉತ್ತಮ ಮೌಲ್ಯಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಾಗತೀಕರಣದ ಹಿನ್ನೆಲೆಯಲ್ಲಿ ‘ತಬ್ಬಲಿಯು ನೀನಾದೆ ಮಗನೆ’ ಕಥೆಯನ್ನು ಮತ್ತೆ ಓದಿದಾಗ ಈ ಐದು ದಶಕಗಳಲ್ಲಿ ನಮ್ಮ ಸಮಾಜ ಎಷ್ಟರ ಮಟ್ಟಿಗೆ ಮತ್ತು ಯಾವ ರೀತಿ ಬದಲಾಗಿದೆ ಎಂಬುದನ್ನು ಓದುಗರು ಗ್ರಹಿಸಬಹುದು, ಹಾಗೆಯೇ ಆ ವಿಚಾರಗಳ ಬಗ್ಗೆ ಚಿಂತಿಸಬಹುದು. 

ಒಂದು ಕಥೆ ಜನರ ಭಾವನೆಗಳನ್ನು ಮತ್ತು ಹೃದಯವನ್ನು ಮುಟ್ಟಿ ಉತ್ಕೃಷ್ಟವಾದ ಕಥೆ ಎಂದು ಪರಿಗಣಿಸಲು ಕೆಲವು ಅಂಶಗಳನ್ನು ಒಳಗೊಂಡಿರಬೇಕು. ಕಥೆಯಲ್ಲಿ ಮನುಷ್ಯರ ನಡುವಿನ ಭಾವನೆಗಳ ಏರುಪೇರುಗಳಿರಬೇಕು. ಸುಖ ದುಃಖ, ಹತಾಶೆ ಭರವಸೆ ಮತ್ತು ದ್ವೇಷ ಪ್ರೀತಿ ಮುಂತಾದ ರಸಗಳಿರಬೇಕು. ನಮ್ಮ ಬದುಕಿನಲ್ಲಿ ಕಾಣುವ ಸಾಮಾನ್ಯ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತನೆಗಳಿರಬೇಕು. ಕಥೆಯಲ್ಲಿನ ಸನ್ನಿವೇಶಗಳು ನಮ್ಮ ದಿನನಿತ್ಯ ಬದುಕಿಗೆ ಪ್ರಸ್ತುತವಾಗಿರಬೇಕು, ಕಾಲ್ಪನಿಕ ಪ್ರಪಂಚದಿಂದ ದೂರವಿರಬೇಕು. ಓದುಗರಿಗೆ ಒಂದು ಕ್ಷೇತ್ರದ ಭೌಗೋಳಿಕ ಸಾಂಸ್ಕೃತಿಕ ಮತ್ತು ಕಥೆ ನಡೆಯುವ ಕಾಲ ಘಟ್ಟದ ಪರಿಚಯ ಮಾಡಿಕೊಡಬೇಕು. ಸಾಂಪ್ರದಾಯಿಕ ನಿಲುವನ್ನು  ಮತ್ತು ಸೈಧಾಂತಿಕ ತತ್ವಗಳನ್ನು ವಿಮರ್ಶೆಗೆ ಒಳಪಡಿಸಬೇಕು. ಕಥೆಯಲ್ಲಿ ಆಳ ವಿಸ್ತಾರಗಳಿರಬೇಕು. ಈ ಅಂಶಗಳಿದ್ದಲ್ಲಿ ಅದು ಉತ್ತಮವಾದ ಕಥೆಯಾಗಬಲ್ಲದು. ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯು ಈ ಎಲ್ಲ ಮೇಲಿನ ಅಂಶಗಳನ್ನು ಒಳಗೊಂಡಿದೆ ಎನ್ನಬಹುದು.  

ಫೋಟೋ ಕೃಪೆ :  ಡಾ. ಜಿ. ಎಸ್. ಶಿವಪ್ರಸಾದ್