ಕವನ-ಭಾವಯಾನ

ಬರೆಯಬೇಕು!

ಬರೆಯಲೇಬೇಕು ಹಾಗೆಂದು ಮಾಡಿಟ್ಟುಕೊಂಡ ವಿಷಯಗಳ ಪಟ್ಟಿ ದಿನದಿಂದ ದಿನಕ್ಕೆ ಉದ್ದವಾಗುತ್ತಲೇ ಇದೆ ಆದರೆ ಬರೆಯಲು ಮಾತ್ರ
ಆಗುತ್ತಿಲ್ಲ. ನನ್ನ ಪ್ರಾಥಮಿಕ ಶಾಲೆಯಲ್ಲಿ ಇದ್ದ ಅಕ್ಕವರು ಇಂಥಹ ‘ಆಗಲ್ಲ ಆಗ್ತಿಲ್ಲ’ ಅನ್ನೋ ಪದಗಳನ್ನ ಕೇಳಿದಾಗ ಹೇಳುತ್ತಿದ್ದ
‘ಕಳ್ಳಂಗೊಂದು ಪಿಳ್ಳೆ ನೆವ’ ಅನ್ನೋ ಗಾದೆ ಇತ್ತೀಚಿಗೆ ಪದೇ ಪದೇ ನೆನಪಾಗುತ್ತದೆ.
ಸಮಯವೇ ಸಿಗ್ತಿಲ್ಲ ಎನು ಮಾಡಲಿ? ಅನ್ನುವ ಮಾತನ್ನು ಮನಸು ಬುದ್ಧಿಗೆ, ಬುದ್ಧಿ ಮನಸಿಗೆ ಆಗೀಗ ಹೇಳಿಕೊಳ್ಳುತ್ತಲೇ
ಪ್ರೌಡಶಾಲಾ ದಿನಗಳಲ್ಲಿ ಭೂಗೋಳ ಮತ್ತು ಕನ್ನಡ ಪಾಠ ಮಾಡುತ್ತಿದ್ದ ಲಕ್ಷ್ಮಣ್ ಸರ್ ‘ಸಮಯ ಯಾರಿಗೂ ಈ ತನಕ ಸಿಕ್ಕಿಲ್ಲ,
ಮಾಡ್ಕೋಬೇಕು, ಏನಾದ್ರೂ ಕಲೀಬೇಕು, ಸಾಧಿಸಬೇಕು, ಬೇಕು ಅಂದ್ರ!’ ಅಂತ ಹೇಳತಿದ್ದುದು ಕೂಡ ಇಂಥ ಸಂದರ್ಭದಲ್ಲಿ
ನೆನಪಾಗುತ್ತದೆ.
ಜೊತೆಗೆ ಈ ಸೋಶಿಯಲ್ ಮೀಡಿಯಾ ಅನ್ನುವ ವರರೂಪಿ ಶಾಪದ ಛಾಯೆಯಿಂದ ದೂರ ಉಳಿಯಬೇಕೆಂದರೂ ಆಗದು. ಅಲ್ಲೂ
ಕೆಲವರಂತೂ ಅದೆಷ್ಟು ಚಂದ ಬರೆಯುತ್ತಾರೆಂದರೆ, ಬರೀ ಎರಡೇ ಸಾಲುಗಳಲ್ಲಿ ಸೀದಾ ಮನದ ಬಾಗಿಲ ಕದ ತಟ್ಟಿಬಿಡುತ್ತಾರೆ. ಹೊಟ್ಟೆಕಿಚ್ಚು
ಹುಟ್ಟಿಸುತ್ತಾರೆ. ಮರೆತೇಹೋದಂತಿರುವ ಬರವಣಿಗೆಯ ಕಡೆಗೆ ಗಮನ ಕೊಡುವಂತೆ ಮಾಡುತ್ತಾರೆ. ಒಂದೂ ಮಾತಾಡದೆ ಸಾವಿರ
ವಿಷಯಗಳ ಹಚ್ಚೆ ಹಾಕಿಬಿಡುತ್ತಾರೆ.
ಇತ್ತೀಚಿಗೆ ಅಂತಹುದೇ ಒಂದು ಫೇಸ್ಬುಕ್ ಖಾತೆಯ ಪೋಸ್ಟುಗಳ ಮಾಯೆಗೆ ನಾನು ಒಳಗಾಗಿರುವೆ. ಬೆಟ್ಟದ ಹೂವು ಎಂಬ ಹೆಸರಿನಿಂದ
ಬರೆಯುವ ಇವರು ಅವಳೋ/ ಅವನೋ ಗೊತ್ತಿಲ್ಲ. ಹಿಂದಿ, ಉರ್ದು ಪದ್ಯಗಳ ಸಾಲುಗಳನ್ನು ತುಂಬಾ ಸುಂದರವಾಗಿ
ಅನುವಾದಿಸುತ್ತಾರೆ.
ಒಮ್ಮೆ ಓದಿದರೆ ಆಯ್ತು, ಮತ್ತೆ ನಾವೇ ಹುಡುಕಿ ಹೋಗಿ ಓದುವಷ್ಟು ಬೆಚ್ಚಗಿರುತ್ತವೆ ಆ ಅನುವಾದಗಳು, ಜೊತೆಗೆ ಅವರೂ ಆಗೀಗ
ಅವರ ಸ್ವಂತದ ಕವಿತೆಗಳನ್ನೂ ಪೋಸ್ಟ್ ಮಾಡುತ್ತಾರೆ. ಕೆಲವೊಮ್ಮೆ ಹೇಳದೆ ಕೇಳದೆ ಫೇಸ್ಬುಕ್ ಗೆ ರಜೆ ಹಾಕಿ ನಾಪತ್ತೆಯಾಗುತ್ತಾರೆ.
ಇಂಥಹ ಹಲವು ಅನಾಮಿಕ, ಅನಾಮಧೇಯ ಅಕೌಂಟ್ ಗಳು ಚಂದದ ಪದ್ಯಗಳನ್ನು ಪೋಸ್ಟ್ ಮಾಡುತ್ತವೆ. ಆದರೆ ನನಗೆ ಬರೆಯಲು
ಹಚ್ಚಿದ್ದು ಮಾತ್ರ ಈ ಬೆಟ್ಟದ ಹೂವು.
ಅವರ ಪೋಸ್ಟ್ಗಳಿಂದಾಗಿ ನಾನು ಗುಲ್ಜಾರ್ ರನ್ನು ಓದಲು ಶುರು ಮಾಡಿದೆ, ಮತ್ತೆ ಆಗೊಮ್ಮೆ ಈಗೊಮ್ಮೆ ಅವರ ಕವಿತೆ, ನುಡಿ,
ಶಾಯರಿ, ಗಝಲ್ಗಳ ಭಾವಾನುವಾದ ಮಾಡಲು ಪ್ರಯತ್ನಿಸಿದೆ. ನಿಮ್ಮ ಓದಿಗೆ ಈ ಸಂಚಿಕೆಯಲ್ಲಿ ನಾನು ಅಂತರ್ಜಾಲದಲ್ಲಿ ಓದಿ
ಭಾವಾನುವಾದ ಮಾಡಿರುವ ಕೆಲವನ್ನು ಇಲ್ಲಿ ಲಗತ್ತಿಸಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ಮರೆಯದಿರಿ.
ನಿಮ್ಮ
ಅಮಿತಾ ರವಿಕಿರಣ್

ತುಟಿಗಳಾಡಿದ ಪದಗಳಾಗಿದ್ದರೆ
ತಪ್ಪು ಹುಡುಕಬಹುದಿತ್ತು ಆದರೆ
ಅದೆಲ್ಲ ಹೇಳಿದ್ದು ಆಕೆಯ ಕಣ್ಣಾಲಿಗಳು.


ಕಣ್ಣುಗಳಾಗಿದ್ದಕ್ಕೆ ಸತ್ಯ ಹೇಳಿಬಿಟ್ಟವು,
ತುಟಿ ಉಸುರಿದ ಮಾತುಗಳಿಗಾಗಿ
ದೇವರ ಆಣೆ ಇತ್ತ ಮೇಲೂ
ವಾದ ವಿವಾದ ನಡೆಯುತ್ತವೆ ಇಲ್ಲಿ..


ಹೂವಿನಂತೆ ನಿನ್ನ ತುಟಿ ಅರಳಿ,
ನಿನ್ನ ದನಿಯ ಕಂಪು ಘಮಘಮಿಸಲಿ


ಈ ಒಂಟಿತನ ಎಷ್ಟು ಹಿತವಾಗಿದೆ ಗೊತ್ತಾ,
ಸಾವಿರ ಪ್ರಶ್ನೆಗಳ ಕೇಳುತ್ತಾದರೂ
ಉತ್ತರ ಬೇಕೆಂಬ ಹಠ ಮಾಡುವುದಿಲ್ಲ.


ಈ ಜಗದ ಕಣ್ಣಗೆ ನಾನು ವಿಚಿತ್ರ,
ವಿಕ್ಷಿಪ್ತಳೂ ಹೌದು
ಕಾರಣ, ನನಗೆಲ್ಲವೂ ನೆನಪಿರುತ್ತದೆ.


ನಿನ್ನಾ ಎಷ್ಟು ನಂಬ್ತೀನಿ ಗೊತ್ತಾ?
ತುಟಿ ಉಸುರುವಾಗ,
ಮನದ ತುಂಬಾ, ಸಂಶಯದ ಬಿಳಿಲುಗಳಲ್ಲಿ
ಭಯ ಜೋಕಾಲಿಯಾಡುತ್ತಿರುತ್ತದೆ.


ಪ್ರೀತಿ ಎಂದರೇನು?
ಎಂಬುದಷ್ಟೇ ನನ್ನ ಪ್ರಶ್ನೆಯಾಗಿತ್ತು.
ಅಸಫಲ ಇಚ್ಛೆಯ ನಿಟ್ಟುಸಿರು ಅನ್ನುವ ಉತ್ತರ
ನೀ ತೊರೆದ ಗಳಿಗೆ ತಿಳಿಸಿತು.


ಏನಾದರೊಂದು
ಮಾತಾಡುತ್ತಲೇ ಇರು,
ನೀ ಸುಮ್ಮನಿದ್ದರೆ
ಜನ ಕೇಳುತ್ತಾರೆ!


ಐದು ಕವನಗಳು – ಕೇಶವ ಕುಲಕರ್ಣಿ

ಅಜ್ಜಿ

ಅಜ್ಜಿಯ ಬೆನ್ನು ಬಾಗಿಬಿಟ್ಟಿದೆ
ಅನುಕ್ಷಣವೂ ಬಾಗಿ ಬಾಗಿ
ನಿಲ್ಲುವ ಭಂಗಿಯೇ ಮರೆತುಹೋಗಿದೆ

ಅಜ್ಜಿಯ ಕಣ್ಣು ಪೊರೆಗಟ್ಟಿದೆ
ಗಂಡ ಮಕ್ಕಳ ಮೊಮ್ಮಕ್ಕಳ ಆಡಿಸಿ
ನೋವನ್ನೆಲ್ಲ ನುಂಗಿ ಕುರುಡಾಗಿದೆ

ಧಗಧಗಿಸುವ ಒಲೆ ಹೊಗೆಯಾಡಿದೆ
ಉರಿಯ ಆರಿಸಲು ಹೋದ ಕಣ್ಣೀರು
ಕಣ್ಣನ್ನೇ ನುಂಗಿದೆ

ಅಜ್ಜಿಯ ಕೈ ಒರಟು ದೊಣ್ಣೆಯಾಗಿದೆ.
ತವಡು ಕುಟ್ಟಿ ಕುಟ್ಟಿ, ಕಳೆಯ ಕೆತ್ತಿ ಕೆತ್ತಿ
ಭಾಗ್ಯದ ಗೆರೆಗಳನ್ನು ಕೆತ್ತಿ ಕೆತ್ತಿ ಕೆರೆದಂತಿದೆ

ಅಜ್ಜಿಯ ಕಿವಿ ಕಿವುಡಾಗಿದೆ
ಸಂಚಿನ ಮಿಂಚಿನ ಹೊಡೆತಕೆ
ಹುರುಳಿಲ್ಲದ ಗುಡುಗಿನಬ್ಬರಕೆ ನಿಶ್ಚಿಂತವಾಗಿದೆ

ಮಾತು ಮೌನದಲಿ ಗೋರಿಯಾಗಿ
ಎದೆ ಗಟ್ಟಿಯಾಗಿ ದಣಿವರಿಯದೇ
ಬಡಿದುಕೊಳ್ಳುತಿದೆ

ಮಾತು ಮೌನದಲಿ ಗೋರಿಯಾಗಿ
ಎದೆ ಗಟ್ಟಿಯಾಗಿ ಬಡಿದುಕೊಳ್ಳುತಿದೆ
ದಣಿವರಿಯದೇ

ನಾನ್ಯಾವ ಸೀಮೆಯ ಕವಿ?

ಪಂಪನನ್ನು ಓದಲಿಲ್ಲ
ರನ್ನನನ್ನು ಕಲಿಯಲಿಲ್ಲ
ಕೇಳಲಿಲ್ಲ ನಾ ಕುಮಾರವ್ಯಾಸನನ್ನು
ಬಸವನನ್ನು ವಾಚಿಸಲಿಲ್ಲ
ಪುರಂದರನನು ಕೀರ್ತಿಸಲಿಲ್ಲ
ಹಾಡಲಿಲ್ಲ ನಾ ಜನಪದವನ್ನು

ಕುವೆಂಪುವಿನ ಕಂಪು ತಾಕಲೇ ಇಲ್ಲ
ಅಂಬಿಕಾತನದತ್ತ ಇತ್ತ ಹಾಯಲೇ ಇಲ್ಲ
ಅಡಿಗ ಮುಡಿಯಿಂದೊಳಗೆ ಇಳಿಯಲೇ ಇಲ್ಲ

ಕೆ ಎಸ್ ಎನ್ ಮಲ್ಲಿಗೆ ಮಿಡಿದರೂ
ಜಿ ಎಸ್ ಎಸ್ ಕಡಲನೇ ಕಡಿದರೂ
ಪುತಿನ ಗೋಕುಲವನೇ ಕಟ್ಟಿದರೂ
ಹೃದಯಕ್ಕಿಳಿದು ರಕ್ತವಾಗಲಿಲ್ಲ

ಮುಂದೆ ಬಂದವರ ಹೆಸರು ಲೆಕ್ಕ ಎರಡೂ ಸಿಗಲಿಲ್ಲ

ಯಾಕೆ ಯಾರಾದರೂ
ನನ್ನ ಕವನಗಳನ್ನು ಓದಿ
ಸಮಯವನ್ನು ಹಾಳು ಮಾಡಿಕೊಳ್ಳಬೇಕು?

ಹಲವು ಪದಗಳ ಬೆಸೆದು
ಕೆಲವು ಸಾಲುಗಳಲ್ಲಿ
ಕ್ಲೀಷೆಯಾದ ಪ್ರತಿಮೆಗಳನ್ನು ಹೊಸೆಯುವ
ನನ್ನನ್ನು ಕವಿ ಎಂದಾದರೂ ಏಕೆ ಕರೆಯಬೇಕು?

ಕವಿತೆ

ಗರ್ಭ ಧರಿಸುವ ಮೊದಲೇ
ಸುರಿದು ಹೋದ ಕವನಗಳ
ಲೆಕ್ಕ ಇಟ್ಟವರಾರು?

ಗರ್ಭ ಕಟ್ಟಿದ್ದರೂ ಅರಿವಾಗುವ
ಮುನ್ನ ಬಿರಿದ ಭ್ರೂಣಗಳ
ನೆನಪಿಟ್ಟುಕೊಳ್ಳುವುದಾದರೂ ಹೇಗೆ?

ಮೊದಲಾದರೆ ಹತ್ತಾರು ಮಕ್ಕಳು
ಒಂದಿಬ್ಬರಾದರೂ ನಾಕಾರು ಜನರ
ಮನದಲ್ಲಿ ಹೆಸರು ಮಾಡುತ್ತಿದ್ದರು

ಈಗ ಹಡೆಯುವುದೇ ಒಂದೋ
ಎರಡೋ, ಗೂಡು ಬಿಡುವವರೆಗೆ
ತಿದ್ದಿ ತೀಡುತ್ತಲೇ ಇರಬೇಕು

ಹೊಟ್ಟೆಯಲ್ಲಿರುವ ಮಗು

ಭ್ರೂಣವಿದೆ
ಭ್ರೂಣದ ಎದೆಯೂ ಮಿಡಿಯುತ್ತಿದೆ’
ಎಂದು ಕಪ್ಪು ಬಿಳುಪಿನ ಚಿಕ್ಕ ಆಕೃತಿಯನ್ನು
ಸ್ಕ್ಯಾನಿನ ಸ್ಕ್ರೀನಿನ ಮೇಲೆ ತೋರಿಸುತ್ತಿದ್ದೆ.
‘ಕರೆಯಿರಿ ಅವರನ್ನು,’ ಎಂದು ಕಿರುಚಿದಳಾಕೆ.
ಸ್ಖ್ಯಾನ್ ಮಾಡುತ್ತಿದ್ದ ನನಗೆ ಗಾಬರಿಯಾಗಿ,
‘ಯಾರನ್ನು? ಗಂಡನನ್ನಾ?’
‘ಇಲ್ಲ, ನನ್ನ ಅತ್ತೆಯನ್ನು,
ಹತ್ತು ವರ್ಷದಿಂದ ಬಂಜೆ ಬಂಜೆ ಎಂದು ಹಂಗಿಸುತ್ತಿದ್ದಾಳೆ,’
ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಳು

‘ಇದು ಕಣ್ಣು
ಇದು ಮೂಗು
ಇದು ಬಾಯಿ
ಇದು ಕೈ
ಇದು ಕಾಲು,’
ಎಂದು ಸ್ಕ್ಯಾನ್ ಮಾಡುತ್ತ ತೋರಿಸುತ್ತಿದ್ದೆ

‘ಮೂಗು ನನ್ನಂತೆ
ಕಣ್ಣು ನನ್ನ ಅಪ್ಪನಂತೆ
ಬಾಯಿ ನನ್ನ ಅಜ್ಜಿಯಂತೆ,’ ಎಂದಳು

‘ಇಲ್ಲವೇ,
ಕಣ್ಣು ನನ್ನಂತೆ
ಮೂಗು ನನ್ನ ಅಮ್ಮನಂತೆ
ಬಾಯಿ ಮಾತ್ರ ನಿನ್ನಂತೆ,’ ಎಂದ

ಇಬ್ಬರೂ ಅಲ್ಲೇ ಸರಸದ ಜಗಳ ಶುರು ಮಾಡಿದರು
ಸ್ಕ್ಯಾನಿನಲ್ಲಿ ಕೈಕಾಲಾಡಿಸುತ್ತಿರುವ ಮಗು ನಕ್ಕಂತಾಯಿತು

ಹೀಗೊಬ್ಬ ಮುದುಕ

ಹೀಗೊಂದು ಸಾಂಸೃತಿಕ ಸಮಾರಂಭವೊಂದರಲ್ಲಿ
ಡ್ರಿಂಕ್ಸ್ ಕೊಳ್ಳುತ್ತಿದ್ದೆ; ಅಪರಿಚಿತ ಮುದುಕನೊಬ್ಬ
ನನಗೊಂದು ಡ್ರಿಂಕ್ಸ್ ಕೊಡಿಸಬಹುದೇ ಎಂದು ಕೇಳಿದ.
ಅದಕ್ಕೇನಂತೆ, ಎಂದು ಒಂದು ಡ್ರಿಂಕ್ಸ್ ತಂದುಕೊಟ್ಟು
ಚಿಯರ್ಸ್ ಹೇಳಿ ಪರಸ್ಪರ ಪರಿಚಯ ಮಾಡಿಕೊಂಡೆವು

`ಬಹಳಷ್ಟು ಸಲ
ನಾನಿನ್ನು ಬದುಕಿರುವುದು ವೇಸ್ಟು
ಸತ್ತಿರಬೇಕಿತ್ತು ಎನಿಸುತ್ತೆ, ಏಕೆಂದರೆ
ಈ ಒಂಟಿತನ, ಈ ಸುಸ್ತು, ಈ ಕಾಯಿಲೆಗಳು, ಈ ಔಷಧಿಗಳು,
ಆಸ್ಪತ್ರೆಗಳ ಎಡತಾಕುಗಳು
ಬದುಕಿದ್ದೂ ಸತ್ತ ಹೆಣಗಳ ತರಹ,

ಆದರೆ ಇಂಥ ಪಾರ್ಟಿಗಳಲ್ಲಿ
ನಿಮ್ಮಂಥ ಯಂಗ್ ಪೀಪಲ್ ಸಿಕ್ಕಿದಾಗ
ನನ್ನಂತೆ ವಯಸ್ಸಾಗಿರುವ ಸಿಂಗಲ್ ಮಾಲ್ಟ್ ಕುಡಿದಾಗ
ಮೈಯೆಲ್ಲ ಘಮ್ಮೆನಿಸುವ ಬಿಸಿಬಿಸಿ ಬಿರಿಯಾನಿಯ ತಿಂದಾಗ
ಚಿಕ್ಕ ಮಕ್ಕಳು ಇತ್ತಿಂದತ್ತ ಅತ್ತಿಂದಿತ್ತ ಓಡಾಡುತ್ತಿರುವಾಗ
ಶೃಂಗಾರಭೂಷಿತೆಯರಾದ ಆ ಮಕ್ಕಳ ತಾಯಂದಿರು ಕಿಲಕಿಲ ನಗುತ್ತಿರುವಾಗ
ಸಾಯದಿರುವುದಕ್ಕಿಂತ ಬದುಕುವುದೇ ವಾಸಿ ಎನಿಸುತ್ತದೆ,`

ಎಂದು, ತನ್ನ ಗ್ಲಾಸನ್ನೂ ನನ್ನ ಕೈಗೆ ಕೊಟ್ಟು
ನನ್ನ `ಅಪ್ಪಣೆ` ಪಡೆದಂತೆ ಮಾಡಿ
ನನ್ನ ಹೆಂಡತಿಯ ಜೊತೆ
ಡಾನ್ಸ್-ಫ್ಲೋರಿಗಿಳಿದ