ಗೌರಿ ಪ್ರಸನ್ನ ಮತ್ತು ರಾಧಿಕಾ ಜೋಶಿ ರವರು ಬರೆದ ಎರಡು ಲೇಖನಗಳು 

ನಮ್ಮ ನಡೆ-ನುಡಿ, ಆಚಾರ-ವಿಚಾರ ಹಾಗು ಜೀವನದಲ್ಲಿ ಬಂದೊದಗುವ ಅನೇಕ ಸವಾಲುಗಳನ್ನು ಎದುರಿಸುವಿಕೆ ಇವೆಲ್ಲವುದರ ಉಗಮ ನಮ್ಮ ಬಾಲ್ಯ. ನಮ್ಮ ತಂದೆ ತಾಯಂದಿರು ನಮ್ಮ ಮೇಲೆ ಬೀರಿರುವ ಪ್ರಭಾವ ಅದಾವುದೋ ರೂಪದಲ್ಲಿ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ಪ್ರತ್ಯಕ್ಷವಾಗುತ್ತಿರುತ್ತದೆ ಮತ್ತು ಅನೇಕ ಬಾರಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ದಾರಿದೀಪವಾಗಿರುತ್ತದೆ. ನಾವು ಚಿಕ್ಕವರಿದ್ದಾಗ ಅನೇಕ ಸಂಗತಿಗಳು ನಮ್ಮ ಬುದ್ದಿಯ ಪರಿಮಿತಿಗೆ ಬಾರದೇ ಹೋಗಿ, ನಾವು ಬೆಳೆದು  ನಮ್ಮ ದೈನಂದಿನ ಜೀವನದಲ್ಲಿ ಆ ಸಂಗತಿಗಳ ತಾತ್ಪರ್ಯ ಹೊಳೆದಾಗ, ನಮ್ಮ ತಂದೆ ತಾಯಂದಿರ ಮೇಲಿನ ಗೌರವ ಹೆಚ್ಚುತ್ತದೆ ಮತ್ತು ಹೆಮ್ಮೆಯೆನಿಸುತ್ತದೆ. 
ಈ ವಾರ ‘ಅನಿವಾಸಿ’ಯಲ್ಲಿ ಎರಡು ಲೇಖನಗಳು ವಿಭಿನ್ನ ಮಗ್ಗಲುಗಳನ್ನು ಹೊಂದಿದ್ದರೂ, ತಾಯಿಯನ್ನೂ ಹಾಗೂ  ಬಾಲ್ಯವನ್ನೂ  ನೆನೆಯುವುದರ ಮೂಲಕ ಪರಸ್ಪರ  ಪೂರಕವಾಗಿವೆ. “ನನ್ನ ಹೆಮ್ಮೆಯ ಅಮ್ಮ” ಎಂಬ ಲೇಖನದಲ್ಲಿ ಗೌರಿ ಪ್ರಸನ್ನ ರವರು ತಮ್ಮ ತಾಯಿಯ ಪ್ರೇರಣಾತ್ಮಕ ಜೀವನವನ್ನು ನೆನೆಯುತ್ತಾ, ಅವಳ ಮಗಳಾಗಿದ್ದಕ್ಕೆ ತಮಗೆ ಹೆಮ್ಮೆ ಇದೆ ಎಂದು ಹೇಳುತ್ತಿದ್ದರೆ , ಇತ್ತ ” ಗೃಹ ಬಂಧನ ” ಎಂಬ ಲೇಖನದಲ್ಲಿ ರಾಧಿಕಾ ಜೋಶಿ ರವರು ತಮ್ಮ ತಾಯಿ ಮತ್ತು ತಂದೆಯ ಜೀವನ ಕ್ರಮಗಳು, ಲಾಕ್ ಡೌನ್ ಸಂಧರ್ಭದಲ್ಲಿ ಹೇಗೆ ದಾರಿದೀಪವಾಗಿವೆ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ.  ಈ ಎರಡು ಲೇಖನಗಳೂ ಓದುಗರನ್ನು ತಮ್ಮ ಬಾಲ್ಯದ ನೆನಪುಗಳಿಗೆ ಕರೆದೊಯ್ಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಲ್ಲರೂ ಈ ನೆನಪುಗಳಲ್ಲಿ ಮಿಂದು ಬನ್ನಿ ಎಂದು ಹಾರೈಸುತ್ತೇನೆ. 
(ಸಂ)

ನನ್ನ ಹೆಮ್ಮೆಯ ಅಮ್ಮ

ಲೇಖಕಿ: ಗೌರಿ ಪ್ರಸನ್ನ

ಓಂ ನಮೋ ಭಗವತೇ ವಾಸುದೇವಾಯ. ಅಮ್ಮ: ಜಗದೆಲ್ಲ ಬಂಧಗಳು – ಸಂಬಂಧಗಳು ನಾವು ಈ ಭುವಿಯಲ್ಲಿ ಜನ್ಮ ತಾಳಿದ ನಂತರ ಶುರುವಾಗುವಂಥವು. ಆದರೆ ಅಮ್ಮನೊಡನೆ ?! ಜೀವವೇ ಇರದ ಅಂಗಾಂಗಳು ಮೊಳೆಯದೆ ಇದ್ದ ಒಂದು ಅಂಡಾಣುವಿನ ಸ್ಥಿತಿಯಲ್ಲಿದ್ದಾಗಿನಿಂದಲೇ ನಂಟು. ನಾನವಳ ಗರ್ಭದಲ್ಲಿ ಮೊಳಕೆಯೊಡೆದ  ದಿನದಿಂದಲೇ ಅವಳ ದಿನಚರಿ, ಊಟ, ಉಡುಗೆ , ನಿದ್ದೆ- ಎಚ್ಚರ, ಪಥ್ಯ – ತಥ್ಯ, ಕನಸು- ಕನವರಿಕೆ, ಹಂಬಲ- ಹರಕೆ, ಪ್ರಾರ್ಥನೆಗಳೆಲ್ಲವೂ ನನಗನುಗುಣವಾಗಿಯೇ. 
ಅದಕ್ಕೆಂದೇ ಭಾರತೀಯ ಸಂಸ್ಕೃತಿಯಲ್ಲಿ ಅಮ್ಮನಿಗೆ ಉನ್ನತ ಸ್ಥಾನ. “ಮಾತೃ ದೇವೋ ಭವ” ಎಂದು ವೇದಗಳು ಸಾರುತ್ತಿವೆ. ‘ಕೌಸಲ್ಯ ಸುಪ್ರಜಾ ರಾಮ’ ಎಂದು ಪರಮಾತ್ಮನನ್ನು ಋಷಿ ಮುನಿಗಳು ಕೌಸಲ್ಯೆಯ ಮಗನಾಗಿ ಕಾಣುತ್ತಿದ್ದಾರೆ. ಜಗದ ಬಂಧ ಹರಿದೊಗೆದು ಮುಕ್ತನಾದ ಸನ್ಯಾಸಿಯೂ ಮಾತೃ ಪಾದುಕೆಗೆ ಪ್ರಣಾಮ ಮಾಡುತ್ತಾನೆ.

“ತೊಟ್ಟಿಲಾಗಲಿ – ಬಟ್ಟಲಾಗಲಿ , ಜಾವಳಾಗಲೀ – ಜುಟ್ಟು ಆಗಲಿ, ಮದುವೆ ಆಗಲಿ – ಮುಂಜುವೆ ಆಗಲಿ, ಲಕ್ಷ್ಮಿ ನಾರಾಯಣನ ಕೃಪೆಯಿಂದ ಅಟ್ಟಡುಗೆ ಅಕ್ಷಯವಾಗಲಿ “- ಇದು ಮನೆಯಲ್ಲಿ ಮಾಡಿದ ಮೆಂತ್ಯಹಿಟ್ಟನ್ನೋ , ಚಟ್ನಿಪುಡಿಯನ್ನೋ , ಅಳ್ಳಿಟ್ಟನ್ನೋ ಡಬ್ಬದಲ್ಲಿ ತುಂಬಿಡುತ್ತ ಅಮ್ಮ ತಪ್ಪದೆ ಹೇಳುವ ಕನ್ನಡದ ಮಂತ್ರವಾಗಿತ್ತು. ಸಣ್ಣವಳಿದ್ದಾಗ ಅದರರ್ಥ ಅಷ್ಟು ಗೊತ್ತಾಗದಿದ್ದರೂ ಅವಳ ಬಾಯಿಂದ ಕೇಳಿ ಕೇಳಿ ಬಾಯಿಪಾಠವಾಗಿತ್ತು. ಅದರ ಹಿಂದಿರುವ ಅನ್ನ ನೀಡಿದ ಭಗವಂತನ ಬಗೆಗಿರುವ ಕೃತಜ್ಞತೆ , ಒಳ್ಳೆಯದರ ಆಶಯ – ಹಾರೈಕೆಗಳು ಎಲ್ಲ ಈಗ ಅರ್ಥವಾಗಿ ಅಚ್ಚರಿ ಹುಟ್ಟಿಸುತ್ತವೆ. ಹರಿಕಥಾಮೃತಸಾರದ ಸಂಧಿಗಳು , ಲಕ್ಷ್ಮಿ ಶೋಭಾನೆ, ವಿಜಯ ಕವಚ. ದುರ್ಗಾ- ಧನ್ವಂತರಿ ಇತ್ಯಾದಿ ಸುಳಾದಿಗಳು , ನಳ ಚರಿತ್ರೆ , ದಾಸರ ಪದಗಳು, ಹೀಗೆಯೇ ಹತ್ತು ಹಲವು ರೂಪದಲ್ಲಿ ಇಡೀ ದಿನ ಅವಳ ನಾಮಸಂಕೀರ್ತನೆ ಸಾಗುತ್ತಿತ್ತು – ಕೆಲಸಗಳ ಜೊತೆಜೊತೆಗೆ. ಅವಳು ಮಾಡದ ಪೂಜೆ ಪುನಸ್ಕಾರಗಳಿಲ್ಲ, ವ್ರತ ನಿಯಮಗಳಿಲ್ಲ. ಚೈತ್ರಾ ಗೌರಿ, ಶೀಗೀ ಗೌರಿ, ಜೇಷ್ಠ ಗೌರಿ , ಗಡಗಿ ಗೌರಿ, ಗೊತ್ತಿಲ್ಲ ಅದೆಷ್ಟು ಗೌರಿಯರೋ. ಹೂರಣದ ಆರತಿ, ಖೊಬ್ರಿಬೆಲ್ಲದ ಆರತಿ, ಸಕ್ರಿ ಅಚ್ಚಿನ ಆರತಿ, ಅದೆಷ್ಟು ಆರತಿಗಳೋ.

ಕುಲ್ಕರ್ಣ್ಯಾರ ಮನಿದು, ಜಹಗೀರದಾರರ ಮನಿದು, ಆಚಾರ್ಯರ ಮನಿದು ಹೀಗೆ ಇಡೀ ಬಲಕುಂದಿಯ ಎಲ್ಲರ ಮನೆಯ ‘ದಾರಗಳು’ ನಮ್ಮ ಗೌರಿಯ ಒಡಲಲ್ಲೇ. ಮಟ ಮಟ ಮಧ್ಯಾಹ್ನ ೧೨ ಹೊಡೆದರೂ ನಾರಣಪ್ಪನ ಗುಡಿಗೆ ಬರಿಗಾಲಲ್ಲಿ ಹೋಗಿಬರದೆ ಒಂದಗಳನ್ನೂ ಬಾಯಿಗೆ ಹಾಕದ ಶ್ರದ್ದೆ. ಆದರೆ ತನ್ನ ನಂಬುಗೆಗಳನ್ನ ನಮ್ಮ ಮೇಲೆಂದೂ ಹೇರದ ವೈಶಾಲತೆ. ನಮ್ಮ ಬಾಲಿಶ ವೈಚಾರಿಕ ಕ್ರಾಂತಿಗಳಿಗೆಲ್ಲ ಸದಾ ಅವಳ ಬೆಂಬಲ. ಗಳಗನಾಥ, ಅ ನ ಕೃ , ವಾಣಿ , ಎಲ್ಲರ ಪುಸ್ತಕ ಓದಿದಾಕಿ, ಈಗಲೂ ಪುಸ್ತಕ ಪ್ರಿಯೆ.
ಯಾವುದಕ್ಕೂ ಹಪಹಪಿಸದೆ, ಗೊಣಗದೆ, ಅತಿಯಾಸೆ ಪಡದೆ ಇದ್ದುದರಲ್ಲಿ ತೃಪ್ತಳಾಗಿ ದುಡಿಯುವ ಕರ್ಮಯೋಗಿಯಾಗಿಯೇ ನಾನವಳನ್ನು ಕಂಡದ್ದು. ಕಸ ಮುಸುರೆ, ಉಡಸಾರಣೆ ಉಪಕರಣಿ, ದೀಪ ರಂಗೋಲಿಗಳು , ಭಾವಿಯ ನೀರು , ಒಲೆಯ ಮೇಲಿನ ಅಡುಗೆ, ಒಳ್ಳು ರುಬ್ಬು ಗುಂಡು ಹಾರೆಗಳ ಒಡನಾಟ, ಹಳ್ಳ – ಹಸನು, ಅವಲಕ್ಕಿ – ಅಳ್ಳಿಟ್ಟು, ಉಪ್ಪಿನಕಾಯಿ – ತೊಕ್ಕು , ಗುಳಂಬ ಹಪ್ಪಳ, ಸಂಡಿಗೆಗಳ ಸಂಭ್ರಮ …ಹಬ್ಬ ಹರಿದಿನಗಳ, ಶ್ರಾದ್ಧ ಪಕ್ಷಗಳ ಮಡಿ ಹುಡಿ …ಇಷ್ಟಾದರೂ ಕೆಲಸ ಹೆಚ್ಚಾಯಿತು ಎಂದು ಅವಳು ಸಿಡಿಗುಟ್ಟಿದ್ದು ನನಗಂತೂ ನೆನಪಿಲ್ಲ.

ವರ್ಷಕ್ಕೊಮ್ಮೆ ತಗೆದುಕೊಳ್ಳುವ ಎರಡೂ ನಾಲ್ಕೋ ಹೊಸ ಕಾಟನ್ ಸೀರೆಗಳನ್ನೂ ಕೂಡ ತಾನು ಮೊದಲು ಉಡದೆ ಊರಿನ ಶೋಭಾಕ್ಕನಿಗೋ, ನಂದಾ ಮಾಂಶಿಗೊ, ವೇಣವ್ವನಿಗೋ “ಘಳಿಗಿ ಮುರುದು” ಕೊಡಲು ಕೊಡಬೇಕು. ಮಲ್ಲಿಗೆ ಮಾಲೆಯ ಸಣ್ಣ ತುಂಡನ್ನು ತನ್ನ ತುರುಬಿಗೆ ಹಾಕಿಕೊಂಡು ಉದ್ದುದ್ದ ಮಾಲೆಗಳನ್ನು ನಮಗೆಲ್ಲ ಕೊಡಬೇಕು. ‘ಸಣ್ಣವರು ಉಡಲಿ ತೊಡಲಿ’ ಎಂಬ ಆಶಯ. ಆದರೆ ತಾನು ಮಾತ್ರ ಹುಟ್ಟಿನಿಂದಲೇ ದೊಡ್ಡವಳು, ದೊಡ್ಡ ಮಗಳು,  ದೊಡ್ಡ ಸೊಸೆ, ದೊಡ್ಡ ಅಕ್ಕ, ದೊಡ್ಡ ಅತ್ತೆ, ದೊಡ್ಡಮ್ಮ …ನಿಜಕ್ಕೂ ‘ದೊಡ್ಡವಳೆ’…
ನಮ್ಮೂರ ಅನಾಥೆ, ಕುರುಡಿ ಗುರುಬಸವ್ವನಿಗೆ ಅಮ್ಮನ ಚಟ್ನಿ ಭಕ್ರಿಯೆ ಬೇಕು. ಎದುರು ಮನಯೆ ಗೌಡರ ಕೂಸು ಶರಣು ಅಮ್ಮನ ಮೆಂತ್ಯಹಿಟ್ಟಿದ್ದರೆನೇ ಅನ್ನ ತಿನ್ನುವದು. ಬ್ಯಾಗಾರ ಮಲ್ಲಪ್ಪನ ಮನೆಯಲ್ಲಿ ಜ್ವರ ಬಂದು ಮಲಗಿದವರಿಗೆಲ್ಲ ಅಮ್ಮನ ನಿಂಬೆಹಣ್ಣಿನ ಉಪ್ಪಿನಕಾಯಿಂದಲೇ ಬಾಯಿ ರುಚಿ ಬರಬೇಕು. ಎರಡು ರೂಪಾಯಿಯ ಮೊಸರು ಹಾಕಲು ಬರುವ ಈರವ್ವ ಮನೆಯ ಎಂಟು ಜನ ಮಕ್ಕಳಿಗೂ ಅಮ್ಮ ಬೆಲ್ಲದ  ತುಣುಕನ್ನೋ, ಖೊಬ್ರಿಯ ಚೂರನ್ನೋ ಕೊಡದೆ ಕಳಿಸಲಾರಳು. ಆಚಾರರ ಮನೆಯ ಕರುವಿಗೂ ಅಮ್ಮನ ಕಲಗಚ್ಚೆ ಪ್ರೀತಿ.

“ಯಾವದ್ವಿತ್ತೋಪಾರ್ಜನ ಶಕ್ತ: ತಾವನ್ನಿಜ ಪರಿವಾರೋರಕ್ತ:
ಪಶ್ಚಾಜ್ಜೀವತಿ ಜಝ೯ರ ದೇಹೇ ವಾರ್ತಾ೦ಕೋಪಿನ ಪ್ರಚ್ಚತಿ ಗೇಹೇ “

ಎಂದ ಆದಿ ಶಂಕರರ ಮಾತನ್ನೇ ಸುಳ್ಳೆಂದು ಸಾಬೀತು ಮಾಡಿದಾಕಿ ನನ್ನ ಈ ಹಡೆದವ್ವ. ಸುಮಾರು ೧೫ ವರ್ಷಗಳಿಂದ ಹಾಸಿಗೆ ಹಿಡಿದ ನನ್ನ ತಂದೆಯನ್ನು ಓರ್ವ ತಾಯಿಯಾಗಿ ಕೂಸಿನಂತೆ ಜೋಪಾನ ಮಾಡಿದವಳು ಅವಳು. ಎಲ್ಲ ಯಾತ್ರಾ ತೀರ್ಥಗಳನ್ನು , ದೈವದರ್ಶನಗಳನ್ನು ತನ್ನ ಕರ್ತವ್ಯದಲ್ಲೇ ಕಂಡುಕೊಂಡವಳು. ” ಕರ್ಮಣ್ಯೇವಾಧಿಕಾರಾಸ್ತೆ ಮಾ ಫಲೇಷು ಕದಾಚನ ” ಎಂದ ಕೃಷ್ಣನ ಮಾತುಗಳನ್ನು ಚಾಚು ತಪ್ಪದೆ ಪಾಲಿಸಿದವಳು –  ಪಾಲಿಸುತ್ತಿರುವವಳು. ಅಮ್ಮ, ಹೆಮ್ಮೆಯಿದೆ ನನಗೆ ನಿನ್ನ ಮಗಳೆಂದು ಹೇಳಿ ಕೊಳ್ಳಲು.

ಗೃಹ ಬಂಧನ 

ಲೇಖಕಿ ರಾಧಿಕಾ ಜೋಶಿ ರವರು ‘ಅನಿವಾಸಿ’ ಯಲ್ಲಿ ಹೊಸ ಬರಹಗಾರಾಗಿದ್ದಾರೆ. ಮೂಲತಃ ಹುಬ್ಬಳ್ಳಿಯವರಾದರೂ ಮೈಸೂರೀನಲ್ಲಿ ವಿದ್ಯಾಭ್ಯಾಸ ಮುಗಿಸಿ, CA ಮಾಡಲು ಬೆಂಗಳೂರಿಗೆ ಬಂದು,  ಕೊನೆಗೆ ಲಂಡನಿನ್ನ ನಿವಾಸಿ ಆಗಿದ್ದಾರೆ.  ಇಬ್ಬರು ಮಕ್ಕಳು ಹಾಗೂ ಪತಿಯೊಡನೆ ಸುಮಾರು 10 ವರುಷಗಳಿಂದ ಹ್ಯಾರೋದಲ್ಲಿವಾಸವಾಗಿದ್ದಾರೆ.  ‘ಅನಿವಾಸಿ’ ಗುಂಪಿನ ಸದಸ್ಯರಿಗೆ ತಮ್ಮ ಅಭಿನಂದನೆಗಳನ್ನು ವ್ಯಕ್ತ ಪಡಿಸುವ ರಾಧಿಕಾ ತಮ್ಮ ಬರಹಗಳನ್ನು ಬ್ಲಾಗ್ ತಾಣದಲ್ಲಿ ಪ್ರಕಟಿಸುತ್ತಾರೆ

ನೆನಪಿನ ಬಾವಿಯಲ್ಲಿ ಇಣುಕಿ ನೋಡಿದಾಗ ನೀರಿನ ಮೇಲಿದ್ದ ಒಣಗಿದ ಎಲೆಗಳು, ಧೂಳು ಎಲ್ಲವೂ ಕೆಳಗಿದ್ದ ನೀರನ್ನು ಮುಚ್ಚಿತ್ತು. ಸ್ವಚ್ಛ ನೀರು ನೋಡ ಬಯಸಿ ನಾನು ಒಂದು ಕಲ್ಲನ್ನು ಎಸೆದಾಗ ನೀರು ಅಷ್ಟೇ ಅಲ್ಲದೆ ಬಾವಿಯ ಆಳವು ಗೊತ್ತಾಯಿತು. ನಮಗೆ ತಿಳಿಯದೆ ನಮ್ಮ ಮನಸ್ಸಿನ ಆಳದಲ್ಲಿ ಅದೆಷ್ಟೋ ನೆನಪುಗಳನ್ನು ಕೂಡಿಟ್ಟು ಅವುಗಳ ಮಹತ್ವ ನಮಗೆ ಆಗ ತಿಳಿಯದೇ ಈಗ ಸಮಯ ಬಂದಾಗಲೆಲ್ಲ ಅವುಗಳ ಆಳ ತಿಳಿಯುತ್ತದೆ.

ನಮ್ಮ ತಾಯಂದಿರು ಊಟ ಬಡಿಸಿ ಎಲ್ಲರ ಊಟ ಮುಗಿದಮೇಲೆ ತಾವು ಊಟ ಮಾಡುವುದು ಸಾಮಾನ್ಯ ಪದ್ಧತಿ. ನಾವೆಲ್ಲ ಆಗ ಅವರ ಮಕ್ಕಳು, ಗಂಡಸರು, ಹಾಗು ಹಿರಿಯರಿಗೆ ಊಟ ಬಡಿಸುವ ಮೂಲಕ ಮರ್ಯಾದೆ ಕೊಡುತ್ತಾರೆ ಅಥವಾ ಹೆಂಗಸರ ಕೆಲಸವೇ ಅಷ್ಟು ಎಂದು ತಿಳಿದಿದ್ದರೆ ಮತ್ತೊಂದು ಅರ್ಥ ನನಗೆ ಈತ್ತೀಚೆಗಷ್ಟೇ ತಿಳಿಯಿತು. ನಮ್ಮ ತಾಯಿ ಎಲ್ಲರಿಗೂ ಊಟ ಬಡಿಸುವ ಮೂಲಕ ತಾವು ಎಷ್ಟು ಊಟ ಮಾಡುತ್ತಾರೆ ಅಷ್ಟು ಉಳಿಸಿ, ಉಳಿದದನ್ನು ಎಲ್ಲರಿಗೆ ಹಂಚಿ ,ಅನ್ನ ವ್ಯರ್ಥವಾಗದಂತೆ ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ತಂಗಳು ಪೆಟ್ಟಿಗೆ ಇರುತ್ತಿರಲಿಲ್ಲ, ತಾಜಾ ಹಾಗು ಬಿಸಿ ಊಟ ಮಾಡುವುದು ಆರೋಗ್ಯಕ್ಕೆ ಹಿತಕರ ಎಂಬ ನಂಬಿಕೆ. ಈ ಲೇಖನ ಬರೆಯುವ ಸಂದರ್ಭದಲ್ಲಿ ಪ್ರಪಂಚವನ್ನೇ ನಡುಗಿಸುತ್ತಿರುವ ಅದೃಶ್ಯವಾದ ಒಂದು ವೈರಾಣು ಕೋವಿಡ್ ೧೯,ಇಡೀ ಪ್ರಪಂಚವನ್ನು ತಿಂಗಳು ಗಟ್ಟಲೆ ಗೃಹ ಬಂಧನದಲ್ಲಿ ಇಟ್ಟಿದೆ.

ಪೀಳಿಗೆಗಳು ಬದಲಾಗುತ್ತಿದ್ದಂತೆ ಆದ್ಯತೆಗಳು ಬದಲಾಗಿತ್ತವೆ. ನಮ್ಮ ತಾಯಿ, ದೊಡ್ಡಮ್ಮ, ಚಿಕ್ಕಮ್ಮ ಎಲ್ಲರೂ ಆಗಿನ ಕಾಲದ ಪದವೀಧರರಾಗಿದ್ದರೂ, ಮನೆಯ ಹೊರಗೆ ಹೋಗಿ ಕೆಲಸ ಮಾಡುವ ಅವಶ್ಯಕತೆ ಅವರಿಗೆ ಕಾಣ ಬರಲಿಲ್ಲ. ನಾವೆಲ್ಲರೂ ಶ್ರೀಮಂತಿಕೆಯಲ್ಲಿ ಬೆಳೆಯಲಿಲ್ಲ. ನನ್ನ ಮುಂದಿನ ಮಾತುಗಳು ಪ್ರಗತಿಶೀಲ ಮಹಿಳೆಯ ಲಕ್ಷಣಗಳನ್ನು ಕೊಡುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ಕೆಲವು ಸನ್ನಿವೇಶ ಹಾಗು ಸಂದರ್ಭಗಳು ನನ್ನ ಪ್ರಸ್ತುತ ಜೀವನಶೈಲಿಯನ್ನು ಬದಲಾಯಿಸಲು ಯೋಚನೆ ಮಾಡುವಂತೆ ಮಾಡಿವೆ.

ನಮ್ಮ ತಂದೆಯ ಮಾಸಿಕ ಆದಾಯ ಕೇವಲ ೮೦ರೂಗಳು. ಅದರಲ್ಲೇ ಮನೆ ಬಾಡಿಗೆ, ನಮ್ಮ ಶಾಲಾ ಖರ್ಚು, ತಿಂಗಳ ದಿನಸಿ ಮತ್ತು ಇನ್ನಿತರ ವೆಚ್ಚಗಳು. ಆಗಿನ ಕಾಲದಲ್ಲಿ ಎಲ್ಲವು ಇತಿಮಿತಿಯಲ್ಲಿ ಇರುತ್ತಿತ್ತು. ಆದರೂ ಮನೆ ನಡೆಸುವುದು ಕಷ್ಟವೇ ಇತ್ತು. ಅನಿರೀಕ್ಷಿತ ಬಂಧು ಮಿತ್ರರರ ಆಗಮನ, ಹಬ್ಬ ಹರಿದಿನಗಳ ಖರ್ಚು ಎಲ್ಲವೂ ನೀಗಿಸುವುದು ಒಂದು ಸವಾಲೇ ಆಗಿತ್ತು. ಆದರೆ ನಮಗೆ ಎಂದೂ ಇವೆಲ್ಲದರ ಬಗ್ಗೆ ಸ್ವಲ್ಪವೂ ಸುಳಿವಿರುತ್ತಿರಲಿಲ್ಲ. ಮದುವೆ ಮುಂಜವಿ ಸಮಾರಾಧನೆ ಸಧರ್ಭಗಳಲ್ಲಿ ಕೆಲವೊಮ್ಮೆ ನಾವು ಹೋಗುತ್ತಿರಲಿಲ್ಲ ಏಕೆಂದರೆ ಹಬ್ಬಗಳು ಹಾಗು ಹೆಚ್ಚಿನ ವೆಚ್ಚದಿಂದ ಮದುವೆ ವರವಧುವಿಗೆ ಅಥವಾ ಮನೆಯವರಿಗೆ ಉಡುಗೊರೆ ಕೊಡುವಷ್ಟು ದುಡ್ಡು ಇರುತ್ತಿರಲಿಲ್ಲ. ನಮ್ಮ ತಾಯಿ ಯಾವುದಾರೂ ನೆಪ ಮಾಡಿ ಕಾರ್ಯಕ್ರಮವನ್ನು ತಪ್ಪಿಸುತ್ತಿದ್ದರು ಅಥವಾ ಮನೆಯಿಂದ ಒಬ್ಬರೇ ಹಾಜರಾಗುತ್ತಿದ್ದರು. ಆದರೆ ನಮ್ಮ ಅವಶ್ಯಕತೆಗಳಿಗೆ ಯಾವತ್ತೂ ಕೊರತೆ ಬಂದಿರಲಿಲ್ಲ. ಹೊಸ ಬಟ್ಟೆ, ಶಾಲಾ ಪುಸ್ತಕಗಳು ಮತ್ತು ಇನ್ನಿತರ ವಸ್ತುಗಳಿಗೆ ಬರ ಇರಲಿಲ್ಲ. ತಂದೆ ತಾಯಿ ಇಬ್ಬರು ದುಡಿಯುವ ಮಕ್ಕಳ ಹತ್ತಿರ ಎಷ್ಟು ಆಟಿಕೆಗಳು, ಬಟ್ಟೆಗಳು ಇರೊತ್ತಿದ್ದವೋ ಅಷ್ಟು ಇರುತ್ತಿರಲಿಲ್ಲ ಆದ್ರೆ ಹೂ ಕೇರ್ಸ್ !!

ತಂದೆಗೆ ಕೆಲಸದ ಒತ್ತಡ ಇದ್ದರೂ ಅದು ನಮಗೆ ಎಂ ತಿದೂ ಳಿಯುತ್ತಿರಲಿಲ್ಲ. ಸಾಂಪ್ರದಾಯಿಕ(ಕನ್ಸರ್ವೇಟಿವ್) ಜೀನನಶೈಲಿ ಆದ ನಮ್ಮೆಲ್ಲರ ಬದುಕಿನಲ್ಲಿ ಒಂದು ರೀತಿಯ ಶಾಂತತೆ ಇತ್ತು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದಷ್ಟೇ ಅವರ ಧ್ಯೇಯವಾಗಿತ್ತೇ ಹೊರತು ಅವರು ಮುಂದೆ ನಾವು ಏನಾಗುತ್ತೀವಿ ಎಂದು ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಾವು ಒಳ್ಳೆಯ ದಾರಿ ಹಿಡಿದು ನಮ್ಮ ಭವಿಷ್ಯ ನಾವೇ ನಿರೂಪಿಸಿಕೊಳ್ಳುತ್ತೇವೆ ಎಂಬ ನಂಬಿಕೆ ಇರುತ್ತಿತ್ತು. ನಾವು ದೊಡ್ಡವರಾದ ಮೇಲೆ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಸೀಟ್ ಬಗ್ಗೆ ಬಹಳ ಆತಂಕ ಇತ್ತು ಬಿಡಿ. ನಾನು ಎರಡೂ ಆಗಲಿಲ್ಲ.

ನಮ್ಮ ತಾಯಿಗೆ ನಮ್ಮಂತೆ ಎಷ್ಟು ಡಿಗ್ರಿ ಮಾಡಿದೀವಿ ಕೆಲಸಕ್ಕೆ ಹೋಗ್ಲೇಬೇಕು ಎಂಬ ಛಲ ಇರಲಿಲ್ಲ. ನಾವೆಲ್ಲ ಒಳ್ಳೆಯ ಗುಣಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡುವಂತೆ ನಮ್ಮನ್ನು ಬೆಳೆಸಿದಿರು. ಪ್ರಗತಿಶೀಲ ಮಹಿಳೆ ಹಾಗು ಜವಾಬ್ದಾರಿ, ಪೋಷಕರ ಲಕ್ಷಣ ಎಂದು ನನಗೆ ಈಗ ಅನಿಸುತ್ತಿದೆ. ಕಡಿಮೆ ಆದಾಯದಲ್ಲಿ ಹೇಗೆ ಜೀವನ ಸಾಗಿಸುವುದು ಎಂಬ ಭೀತಿ ನನ್ನ ಕೆಲವು ಸ್ನೇಹಿತೆಯರಿಗೆ ಬಂತು(ಕಾಂಟ್ರಾಕ್ಟಿಂಗ್ ಮಾಡುವ ಜನ ತಮ್ಮ ಕೆಲಸ ಅಕಾಲಿಕವಾಗಿ ಕೊನೆಗೊಂಡಾಗ) ಹಾಗೇ ಕೆಲವರು ಈ ಕಠಿಣ ಸಮದಲ್ಲಿ ನಿಶ್ಚಲವಾಗಿದ್ದರು.

ಅನಗತ್ಯ ಖರ್ಚು, ಅಮಿತ ಹೋಟೆಲ್ ಊಟ, ಅಗತ್ಯವಿಲ್ಲದ ವಸ್ತುಗಳ ಖರೀದಿ ಇವೆಲ್ಲದರ ಬಗ್ಗೆ ಯೋಚನೆ ಮಾಡುವಂತೆ ಜೀವನದ ಈ ೪ ವಾರಗಳು ನನಗೆ ತಿಳಿಸಿವೆ. ನಾವು ಕಲಿತಂತೆ ಮಕ್ಕಳು ಕಲಿಯುತ್ತಾರೆ. ನಮ್ಮ ಅಭ್ಯಾಸಗಳು, ರೂಢಿ ಮಾಡಿಕೊಂಡಿರುವ ಜೀವನ ಸರಳ ಹಾಗು ಸೂಕ್ತವಾಗಿರಬೇಕು.

ಪ್ರತಿಯೊಂದು ಸಾಮಾಜಿಕ ಕಾರ್ಯಕ್ರಮಕ್ಕೆ ಅಂದವಾಗಿ ತಯಾರಾಗಬೇಕು ಎಂಬ ಆಸೆ ಎಲ್ಲಾ ಮಹಿಳೆಯರಲ್ಲೂ ಇರುತ್ತದೆ ಆದರೆ  ಪ್ರತಿಬಾರಿಯೂ ಹೊಸ ಉಡುಗೆ, ಆಭರಣ ಖರೀದಿ  ಆವಶ್ಯಕವೇ? ಪ್ರತಿ ವಾರ ಹೊರಗೆ ಊಟಕ್ಕೆ ಹೋಗುವುದು ಉಚಿತವೇ? ದಿನನಿತ್ಯ ಅಡುಗೆ ಮಾಡಿ ಹಾಗು ಆಫೀಸಿಗೆ ಹೋಗಿ ರೋಸುಹೋಗಿರುವ ಮಹಿಳೆಯ ಕಷ್ಟ ನನಗೆ ಅರ್ಥವಾಗಿತ್ತದೆ.

ನಮ್ಮ ಮನೆಯ ಅಟ್ಟದ ಮೇಲೆ ಸುಮಾರು ೧೦ ದೊಡ್ಡ ರಟ್ಟಿನ ಡಬ್ಬಿಗಳಲ್ಲಿ ಸಾಮಾನು ಇವೆ. ಸುಮಾರು ೩ ವರುಷಗಳಿಂದ ಅವುಗಳನ್ನು ತೆಗೆದು ನೋಡಿಲ್ಲ. ಇದರ  ಅರ್ಥ ಅದರಲ್ಲಿರುವ ಯಾವುದೇ ಸಾಮಾನಿನ ಅವಶ್ಯಕತೆ ಇಲ್ಲ. ಅನವಶ್ಯಕ ವಸ್ತುಗಳ ಮೇಲೆ ಅದೆಷ್ಟು ದುಡ್ಡು  ಸುರದಿದ್ದೀವಿ? ಬೇಕು ಬೇಡಗಳ ವ್ಯಾಖ್ಯಾನ ನಾನು ತಿಳಿದುಕೊಂಡು ನಮ್ಮ ಮಕ್ಕಳಿಗೆ ತಿಳಿಸಬೇಕು. 

ಮನೆಯಲ್ಲಿ ಕುಳಿತುಕೊಂಡು ಬರುವ ಮುಂದಿನ ದಿನಗಳ ಬಗ್ಗೆ ಯೋಚಿಸುವಾಗ ನನಗೆ ನನ್ನ ಬಾಲ್ಯದ ದೃಶ್ಯಗಳೇ ಕಣ್ಣ ಮುಂದೆ ಬರುತ್ತಿವೆ. ಆಗ ಅವುಗಳ ಆಳವಾದ ಅರ್ಥವನ್ನು ತಿಳಿಯದೆ ಇದ್ದೆ. ಆದರೆ ಈಗ ಸ್ವಲ್ಪ ಮಟ್ಟಿಗೆ ಪ್ರಭುದ್ಧತೆ ಬಂದು(ಬಂದಿದೆ ಅಂದುಕೊಳ್ತೀನಿ ) ಅವುಗಳ ತಾತ್ಪರ್ಯ ಕಂಡುಹಿಡಿಯಲು ಹೊರಟಿದ್ದೇನೆ.

‘ಕೋವಿಡ್: ಸಿಂಹದ ಬಾಯಿಂದ’ ನೈಜ ಕಥೆ ಮತ್ತು ‘ಕರಾಳ ಕರೋನ’ ಕವಿತೆ

ಕೊರೋನಾ ವೈರಸ್ ಈಗ   ಜಗತ್ತಿನಾದ್ಯಂತ ಒಂದು ಮಿಲಿಯನ್ ಗೂ ಹೆಚ್ಚು ಜನರಿಗೆ ಹರಡಿದ್ದು, ಬಿಲಿಯನ್ ಗಟ್ಟಲೆ ಜನರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಅನೇಕ ಕಡೆಗಳಲ್ಲಿ ಇದರ ಪಸರಿಸುವಿಕೆ ಗರಿಷ್ಠ ಮಟ್ಟ ತಲುಪುತ್ತಿರುವಾಗ, ವೈದ್ಯಕೀಯ ಮತ್ತು ಪ್ರಮುಖ ಸೇವಾ ಕ್ಷೇತ್ರಗಳಲ್ಲಿರುವ ನಮ್ಮ ಸ್ನೇಹಿತರು ಹಾಗೂ ಬಂಧುಗಳು ಈ ವೈರಾಣುವಿನ ಸಂಪರ್ಕ ದಲ್ಲಿ ಬರಬಹುದು ಮತ್ತು ಕೋವಿಡ್೧೯ ಖಾಯಲೆಗೆ ಗುರಿಯಾಗಬಹುದು. ಹೀಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಕನ್ನಡಿಗ ವೈದ್ಯರೊಬ್ಬರು  ವೈರಾಣುವಿನ ಕಪಿಮುಷ್ಠಿಗೆ ಸಿಲುಕಿದ ಹಾಗೂ ಅದರಿಂದ ಪಾರಾಗಿಬಂದ ನೈಜ ಕಥೆಯನ್ನು ಈ ವಾರ ಅನಿವಾಸಿಗಾಗಿ ಡಾ|| ರಾಮಶರಣ ಲಕ್ಷ್ಮೀನಾರಾಯಣ ರವರು  ಬರೆದಿದ್ದಾರೆ. 
ಕರೋನ ವೈರಸ್ ನ ಕರಾಳ ಸ್ವರೂಪವನ್ನು ‘ಕರಾಳ ಕರೋನ‘ ಎಂಬ ಕವಿತೆಯಲ್ಲಿ ಡಾ||  ಜಿ.  ಎಸ್.  ಶಿವಪ್ರಸಾದ್ ರವರುಬಣ್ಣಿಸಿದ್ದಾರೆ.  ಡಾ।। ಲಕ್ಷೀನಾರಾಯಣ ಗುಡೂರ್ ರವರು ಈ ಕವಿತೆಯ ಸಾರವನ್ನು ತಮ್ಮ ರೇಖಾಚಿತ್ರದಲ್ಲಿ ಸೆರೆಹಿಡಿದಿದ್ದಾರೆ.  (ಸಂ)

ಕೋವಿಡ್: ಸಿಂಹದ ಬಾಯಿಂದ

ಯು.ಕೆ. ಕನ್ನಡಿಗ ವೈದ್ಯರೊಬ್ಬರು ಕೊರೋನಾ ಸೋಂಕು ತಗಲಿ, ಬಳಲಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನೈಜ ಕಥಾನಕ ಇದು. ಇಲ್ಲಿ ಬರುವ ಪಾತ್ರಗಳ ಹೆಸರನ್ನು ಬದಲಾಯಿಸಲಾಗಿದೆ. ಸೋಂಕು ಪೀಡಿತ ವೈದ್ಯರ ರೋಗ ಲಕ್ಷಣಗಳು ಹಾಗೂ ಅವರ ಅನುಭವ ಯಾವುದನ್ನೂ ಕಲ್ಪಿಸಿಕೊಳ್ಳಲಾಗಿಲ್ಲ. ಅವರ ಮನೋಸ್ಥಿತಿಯನ್ನು ಲೇಖಕರು ಕಥೆಗೆ ಬೇಕಂತೆ ಹೊಂದಿಸಿದ್ದಾರೆ.                                                                                        ಲೇಖಕರು: ಡಾ||ರಾಮಶರಣ್ ಲಕ್ಷ್ಮಿನಾರಾಯಣ್

“ನಿನಗೆ ಇಂಗ್ಲೀಷ್ ಅಡುಗೆ ಇಷ್ಟವಾಗಲಿಕ್ಕಿಲ್ಲ ಡಾ. ನಾಗ್ಸ್, ಅದಕ್ಕೇ ಹಲಾಲ್ ವೆಜ್ ಊಟ,” ಎನ್ನುತ್ತಲೇ ಸಿಸ್ಟರ್ ಸೂಸನ್ ಕೋಣೆ ಒಳಗೆ ಬಂದಳು. ನರ್ಸ್ ವಿಶೇಷ ಮುತುವರ್ಜಿಯಿಂದ ತರಿಸಿದ ಅನ್ನ-ದಾಲ್ ಬಾಯಿಗೆ ಹಾಕುವಂತಿರಲಿಲ್ಲ. ಬರೇ  ಕಾಳು ಮೆಣಸಿನ ಖಾರ, ಅರೆ ಬೆಂದ ಅನ್ನ ತಿಂದ ನಾಗೇಂದ್ರ ಅರ್ಧ ಗಂಟೆಯಲ್ಲೇ ಎಲ್ಲವನ್ನು ಕಕ್ಕಿದ.  ಹೊಟ್ಟೆ ಚುರುಗುಟ್ಟುತ್ತಿತ್ತು. ಹಸಿವೆ ಆದರೂ, ನರ್ಸಿಗೆಕರುಣೆ ಇದ್ದರೂ, ಊಟ ತಂದುಕೊಡಲು ಆಸ್ಪತ್ರೆಯೇನು ಹೋಟೆಲ್ಲೇ? ಇಲ್ಲಿ ಸಂಜೆಯ ಊಟದ ಆರ್ಡರ್ ಬೆಳಗ್ಗೆಯೇ ಆಗಿರುತ್ತದೆ. ಇನ್ನು ರಾತ್ರಿಯೆಲ್ಲ ಜ್ಯುಸ್ ಹೀರುತ್ತಲೇ ಕಳೆಯಬೇಕಷ್ಟೆ ಎನ್ನುವ ಸತ್ಯಕ್ಕೆ ಶರಣಾಗಿ ಅಡ್ಡಾದ ನಾಗೇಂದ್ರ. ದಿವಸಗಳಿಂದ ಕಾಡಿದ ಜ್ವರ, ಕೆಮ್ಮು, ಉಸಿರಾಟದ ತೊಂದರೆಗಳಿಂದ ಬಸವಳಿದ ನಾಗೇಂದ್ರನಿಗೆ ತಲೆ ತಿರುಗಿದಂತಾಯ್ತು. ಹಾಗೆಯೇ ಕಳೆದ ಎರಡು ವಾರಗಳಿಂದ ನಡೆದ ವಿದ್ಯಮಾನಗಳೆಲ್ಲ ಸಿನಿಮಾ ರೀಲಿನಂತೆ ಬಿಚ್ಚಿಕೊಳ್ಳತೊಡಗಿದವು.

 ಗುರುವಾರ ಬೆಳಗ್ಗೆ ತಡ ಆಯಿತು ಅಂತ ಸಿಡಿ-ಮಿಡಿಗೊಳ್ಳುತ್ತಲೇ ಎದ್ದ ನಾಗೇಂದ್ರ. ರೈಲಿಗೆ ಇನ್ನು ಕೇವಲ 45 ನಿಮಿಷ ಇತ್ತು. ರಾತ್ರೆಯೇ ಟ್ಯಾಕ್ಸಿಗೆ ಬರಲು ಹೇಳಿದ್ದ. ಸಧ್ಯ ಹಿಂದಿನ ದಿನವೇ ಚೀಲ ತುಂಬಿಟ್ಟದ್ದಕ್ಕೆ ತನ್ನ ಬೆನ್ನು ತಾನೇ ತಟ್ಟಿಕೊಂಡ. ಗಡಿಬಿಡಿಯಲ್ಲಿ ಪ್ರಾತಃವಿಧಿಗಳನ್ನು ಮುಗಿಸಿ ತಯ್ಯಾರಾಗುವಷ್ಟಲ್ಲಿ ಹೊರಗಡೆ ಟ್ಯಾಕ್ಸಿ ಬಂತು. ಮಕ್ಕಳಿನ್ನೂ ಸಕ್ಕರೆ ನಿದ್ರೆಯಲ್ಲಿದ್ದರು. ಅರೆ ನಿದ್ದೆಯಲ್ಲೇ ಕರುಣ ಬೈ ಹೇಳಿದ್ದನ್ನೂ ಕೇಳಿಸಿಕೊಳ್ಳದವನಂತೆ ಹೊರಗೆ ಧಾವಿಸಿದ.  ನಾಗೇಂದ್ರ ರಾಯಲ್ ಕಾಲೇಜಿನ ವಾರ್ಷಿಕ ಮೀಟಿಂಗ್ ಎಂದು ಲಂಡನ್ನಿಗೆ ಹೊರಟಿದ್ದ. ಎರಡು ದಿನದ ಕಾರ್ಯಕ್ರಮ, ಕಾಲೇಜಿನವರೇ ಪಕ್ಕದ ಹೋಟೆಲ್ಲಿನಲ್ಲಿ ವಸತಿ ಸೌಕರ್ಯ ಒದಗಿಸಿದ್ದರು ಎಂದಿನಂತೆ. ನಾಗೇಂದ್ರನಿಗೆ ಈ ಹೋಟೆಲ್ ತುಂಬಾ ಇಷ್ಟ. ಸ್ಪ್ಯಾನಿಷ್ ಕಂಪನಿ ನಡೆಸುವ ಹೋಟೆಲ್ ಐಷಾರಾಮವಾಗಿತ್ತು, ಹಾಸಿಗೆ ಮೃದುವಾಗಿ ಆರಾಮದಾಯಕವಾಗಿರುತ್ತಿತ್ತು; ಬೆಳಗಿನ ಉಪಾಹಾರ ರುಚಿಕಟ್ಟಾಗಿ ಆರೋಗ್ಯಕರವಾಗಿರುತ್ತಿತ್ತು. ಒಂದು ರಾತ್ರಿಯ ವಸತಿಗೆ ಇದಕ್ಕಿಂತೇನೂ ಜಾಸ್ತಿ ಬೇಕಲ್ಲವೇ?

ರಾಬ್ ಆಗಲೇ ಬಂದು ತನ್ನ ಲ್ಯಾಪ್ ಟಾಪ್ ತಯ್ಯಾರಿಟ್ಟಿದ್ದ. ಒಬ್ಬೊಬ್ಬರೇ ಸದಸ್ಯರು ಮುಂದಿನ 20 ನಿಮಿಷಗಳಲ್ಲಿ ಬಂದು ಸೇರಿದರು. ಉಭಯಕುಶಲೋಪರಿ ಮುಗಿಸಿದ ಮೇಲೆ ಎಲ್ಲರ ಬಾಯಲ್ಲೂ ಕೋವಿಡ್ ಮಾತೇ, ಇಟಲಿಯಲ್ಲಿ ಹಾಗೆ- ಹೀಗೆ ಅಂತ. ನಮ್ಮ ಸ್ಪೆಷಲ್ಟಿ ತಮ್ಮ ಮಾರ್ಗದರ್ಶನ ಪ್ರಕಟಿಸಬೇಕಲ್ಲವೇ ಎಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಎರಡು ದಿನಗಳ ಕೆಲಸ ಸರಾಗವಾಗಿ ಮುಗಿದು ಅಂದುಕೊಂಡಕ್ಕಿಂತಲೂ ಬೇಗನೆ ಶುಕ್ರವಾರ ನಾಗೇಂದ್ರ ಮನೆಗೆ ಬಂದಿದ್ದಕ್ಕೆ ತನ್ನಲೇ ಬೀಗಿಕೊಂಡ. ದೊಡ್ಡ ಮಗಳಿಗಿನ್ನೂ  ಕೆಮ್ಮು ಇತ್ತು. ಎಂದಿನಂತೇ ಮೃದುಲಾ ಎಲ್ಲರ ಮುಂದೇ ಕೆಮ್ಮುತ್ತ ತಿರುಗಿದ್ದಕ್ಕೆ ಕರುಣಾಳ ಹತ್ತಿರ ಬೈಸಿಕೊಂಡಳು. ಅಕ್ಕ ಬೈಸಿಕೊಂಡಳೆಂದು ಚಿಕ್ಕ ಮಗ ಮೃಣಾಲ್ ಅವಳನ್ನು ಅಣಕಿಸಿ, ಬೆನ್ನ ಮೇಲೆ ಗುದ್ದಿಸಿಕೊಂಡು ಸಣ್ಣ ಕುರುಕ್ಷೇತ್ರವನ್ನೇ ಸೃಷ್ಟಿಸಿದರು ಎಂದಿನಂತೇ.

ಸೋಮವಾರ ಏಳುವಾಗ ನಾಗೇಂದ್ರನಿಗೆ ಸಣ್ಣ ತಲೆನೋವು, ಆಲಸ್ಯ. ಕೆಲಸಕ್ಕೆ ಹೋದಾಗ ನಿರುತ್ಸಾಹ. ವಾರ್ಡ್ನಲ್ಲಿ ನರ್ಸ್ ಹತ್ತಿರ ಪ್ಯಾರಾಸಿಟಮೋಲ್ ತೊಕೊಂಡು ಮಧ್ಯಾಹ್ನ ಕ್ಲಿನಿಕ್ ಹೇಗೋ ಮುಗಿಸಿದ. ಮಂಗಳವಾರ ಮತ್ತೆ ಸ್ವಲ್ಪ ಚಳಿ ಎನ್ನಿಸುತ್ತಿತ್ತು, ಮಧ್ಯಾಹ್ನದ ಹೊತ್ತಿಗೆ ಮೈ-ಕೈ ನೋವು, ತಲೆ ನೋವು ಜಾಸ್ತಿ ಆಗಿದ್ದಕ್ಕೆ ಸೆಕ್ರೆಟರಿಗೆ ಹೇಳಿ ಮನೆಗೆ ಬಂದುಬಿಟ್ಟ. ರಾತ್ರಿ ಚಳಿ ಜಾಸ್ತಿ ಆಯ್ತು, ಜ್ವರ ಶುರು ಆಯ್ತು, ನಿದ್ದೆಯೂ ಬರಲಿಲ್ಲ. ಸಣ್ಣಗೆ ಒಣ ಕೆಮ್ಮು. ಮಾರನೇ ದಿನ ಡಬಲ್ ಕ್ಲಿನಿಕ್ ಬೇರೆ, ಕೆಮ್ಮು ಜ್ವರ ಕೊಟ್ಟುಬಿಟ್ಟಳಲ್ಲ ಎಂದು ಮಗಳಿಗೆ ಹಿಡಿ ಶಾಪ ಹಾಕಿ ಮುದುರಿ ಡುವೆ ಹೊದ್ದು, ಹಾಸಿಗೆ ಪಕ್ಕದ ವಿದ್ಯುತ್ ಹೀಟರ್ ಹಾಕಿ ಮುದುರಿ ಬಿದ್ದುಕೊಂಡ. ಜ್ವರ-ಕೆಮ್ಮು ಬಂದಾಗೆಲ್ಲ ಕರುಣಾ, ಕರುಣೆಯಿಲ್ಲದೇ ಅತಿಥಿ ಕೋಣೆಗೆ ತಳ್ಳಿ ಬಿಡುತ್ತಾಳೆ. ಬೆಳಗ್ಗೆ ಏಳಲಾಗದಷ್ಟು ನೋವು-ಜ್ವರ. ಪ್ಯಾರಾಸಿಟಮೋಲ್ ತೊಕೊಂಡರೂ ಈ ಸಲ ಯಾಕೋ ಜ್ವರ ಇಳಿಯುತ್ತಲೇ ಇಲ್ಲ. ಬ್ರುಫೆನ್ ಮೊರೆ ಹೋದಾಗಲೇ ಜ್ವರ ಕೆಲವು ಗಂಟೆ ತಹಬಂದಿಗೆ ಬಂದಿತ್ತು.

ಸಾಯಂಕಾಲ ಕರುಣಾಳ ಮುಖ ಕುಂದಿತ್ತು. ಎಂದಿಗಿಂತಲೂ ಹೆಚ್ಚಿನ ಕಕ್ಕುಲತೆಯಿಂದ ವಿಚಾರಿಸಿಕೊಂಡಳು. ಅವಳಕಣ್ಣಲ್ಲಿ ತುಂಬಿದ ನೀರು ಕಂಡು ನಾಗೇಂದ್ರನ ಎದೆಯಲ್ಲೇಕೋ ಸಣ್ಣ ನಡುಕ. ಕರುಣಾ ಹಾಗೆಲ್ಲ ಧೈರ್ಯಗೆಡುವವಳಲ್ಲ. ಅವಳಿಗೆ ಯಾರೋ ಸುದ್ದಿ ಕೊಟ್ಟಿದ್ದರು, ನಾಗೇಂದ್ರನ ಸಹೋದ್ಯೋಗಿ ಮೈಕೆಲ್ ಕರೋನ ಸೋಂಕಿನಿಂದ ತೀವ್ರ ಚಿಕಿತ್ಸಾ ಘಟಕದಲ್ಲಿದ್ದಾನೆಂದು. “ನೀನೇನಾದ್ರೂ ಅವನ ಸಂಪರ್ಕಕ್ಕೆ ಬಂದಿದ್ಯ? ನೀನು ಈ ಕೋಣೆಯಿಂದ ಹೊರಗೆಬರಬೇಡ, ನಾನೇ ಎಲ್ಲಇಲ್ಲಿಗೇ ತಂದುಕೊಡ್ತೇನೆ”, ಅಂತ ತಾಕೀತು ಮಾಡಿ ಹೋದಳು. ಯಾವಾಗಲೂ ಬಂದು ಅಪ್ಪಿಕೊಳ್ಳುವ ಮೃಣಾಲ್ ಕೂಡ ಬಾಗಿಲಲ್ಲೇ ಗುಡ್ ನೈಟ್ ಹೇಳಿ ಓಡಿಬಿಟ್ಟ. ರಾತ್ರೆಯಿಡಿ ಜ್ವರ, ಚಳಿ, ಮೈಕೈ ನೋವು, ಜೊತೆಗೆ ವಿಚಿತ್ರಕನಸುಗಳು.

ಹಗಲಿಡೀ ಮನೆಯಲ್ಲಿಒಬ್ಬನೆ; ಮಕ್ಕಳು ಶಾಲೆಯಲ್ಲಿ, ಕರುಣಾ ಸರ್ಜರಿಯಲ್ಲಿ. ಮನದ ತುಂಬೆಲ್ಲ ದುಗುಡ. ಪ್ರತಿಸಲಬರುವ ಫ್ಲ್ಯೂಗಿಂತ ಈ ಸಲದ ಜ್ವರಕ್ಕೆ ಲಕ್ಷಣವೇ ಬೇರೆ ಅನಿಸುತ್ತಿತ್ತು. ಯಾಕೋ ಅಸಮಾಧಾನ, ಚಡಪಡಿಕೆ. ತನಗೂ ಕೊರೋನ ಹೊಡೆದಿಯೇ ಎಂಬ ಸಂಶಯ. ಹಾಳಾದ ಡಯಾಬಿಟಿಸ್ ಎರಡು ವರ್ಷದಿಂದ ತಗಲು ಹಾಕ್ಕೊಂಡಿದೆ. ಜೊತೆಗೆ ಸ್ವಲ್ಪ ರಕ್ತದೊತ್ತಡ ಬೇರೆ. ಇಂಥವರಿಗೆ ಕೊರೋನ ಹತ್ತೋದು, ಉಸಿರಾಟದ ತೊಂದರೆ ಜಾಸ್ತಿಯಾಗೋದು ಅಂತ ಕೇಳಿದ್ದ. ಇದರ ಜೊತೆಗೆ ಇಡೀ ದಿನ ವಾಟ್ಸ್ಯಾಪ್ ನಲ್ಲಿ ಬರೋ ಸಂದೇಶಗಳೆಲ್ಲ ನಾಗೇಂದ್ರನ ಎದೆಯನ್ನು ತುಸುತುಸುವೇ ಹಿಚುಕುತ್ತಿದ್ದವು. ಬಾಯಿರುಚಿಯೇ ಇರಲಿಲ್ಲ, ನೀರು ಕಂಡರೂ ವಾಕರಿಕೆ ಬರುತ್ತಿತ್ತು. ಮೂಗಿನ ಹೊಳ್ಳೆಯ ಸುತ್ತಲೂ ಹಿಮಪಾತದಲ್ಲಿ ನಿಂತ ತಣ್ಣಗಿನ ಕೊರೆತದ ಅನುಭವ. ಪ್ಯಾರಾಸಿಟಮೋಲ್-ಬ್ರುಫೆನ್ ನಾಲಿಗೆಯ ಮೇಲೆ ದಪ್ಪನೆಯ ಪದರವನ್ನೆ ಕಟ್ಟಿದಂತಾಗಿತ್ತು. ಕರುಣಾಳ ಒತ್ತಾಯಕ್ಕೆ ಎರಡು ಚಮಚ ಟೊಮ್ಯಾಟೋ ಸೂಪ್ ಕುಡಿದ. ರಾತ್ರೆ ಗೆಳೆಯ ವಿವೇಕ ಫೋನ್ ಮಾಡಿದ. ನಾಗೇಂದ್ರನ ಚಡ್ಡಿ ದೋಸ್ತು, ಇಬ್ಬರೂ ಜೊತೆಗೇ ಇಂಗ್ಲೆಂಡಿಗೆ ಬಂದಿದ್ದರು 20 ವರ್ಷಗಳ ಹಿಂದೆ.  ನಾಗೇಂದ್ರನ ಸುದ್ದಿಕೇಳಿ ಅವನ ಮುಖವೂ ಕಪ್ಪಿಟ್ಟಿತೆಂದು ನಾಗೇಂದ್ರನಿಗೆ ಅನಿಸಿತು. ಅಷ್ಟರಲ್ಲೇ ಸಹೋದ್ಯೋಗಿ ಪಾರ್ಥ ಗಂಗೂಲಿ, ಮೈಕೆಲ್ ನ ಸ್ಥಿತಿಗಂಭೀರವಾಗಿ, ಹತ್ತಿರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿಫ್ಟ್ ಮಾಡಿದರೆಂದು ಸಂದೇಶ ಕಳಿಸಿದ. ಇದನ್ನುಓದುತ್ತಲೇ ನಾಗೇಂದ್ರನ ಜಂಘಾಬಲವೇ ಉಡುಗಿದಂತಾಯಿತು. ಕರುಣಾಳನ್ನು ಕರೆದು ತೋರಿಸಿದ. ಅವಳೋ, ಗಳಗಳನೆ ಅಳಲು ಶುರು ಮಾಡಿಬಿಟ್ಟಳು. ಅವಳನ್ನು ಸಮಾಧಾನ ಮಾಡುವಲ್ಲಿ ನಾಗೇಂದ್ರನಿಗೆ ಸಾಕೋಬೇಕಾಯಿತು. ಮಕ್ಕಳಿಬ್ಬರೂ ಬಾಗಿಲಲ್ಲೇ ಗರಬಡಿದವರಂತೆ ನಿಂತಿದ್ದರು. ಕರುಣಾ ಓಡಿ, ಕಾರಿನಲ್ಲಿದ್ದ ತನ್ನ ಹತ್ಯಾರು ತಂದು ಪುಪ್ಪುಸದ ಪರೀಕ್ಷೆ, ಆಮ್ಲಜನಕದ ಮಟ್ಟವನ್ನು ನೋಡಿ ಎಲ್ಲ ಸರಿ ಇದೆಯೆಂದು ಖಚಿತಪಡಿಸಿಕೊಂಡು ತನ್ನ ಶಯನಾಗಾರಕ್ಕೆ ತೆರಳಿದಳು.

ರಾತ್ರೆಗಳನ್ನು ನಾಗೇಂದ್ರ ದ್ವೇಷಿಸತೊಡಗಿದ್ದ. ಬಾರದ ನಿದ್ದೆಯಲ್ಲಿ ಬೇಡದ ಯೋಚನೆಗಳೇ ತಲೆ ತಿನ್ನುತ್ತಿದ್ದವು. ಇದರೆಡೆ ಮೈಕೆಲ್ನ ಸುದ್ದಿ ಅವನ ಬುಡವನ್ನೇ ಅಲ್ಲಾಡಿಸಿತ್ತು. ನನಗೂ  ಅದೇ ಸ್ಥಿತಿ ಬಂದರೆ ಎಂಬ ಕರಾಳ ಚಿಂತನೆಯೇ ತಲೆ ತುಂಬ. ತಮ್ಮ ಗುಂಪಿನ ಅನಧಿಕೃತ ಸಲಹೆಗಾರ ಅಲ್ತಾಫ್ ಹೇಳಿದಂತೆ ವಿಲ್ ಮಾಡಿಸಿಬೇಕಿತ್ತು, ಇಂದು-ನಾಳೆ ಅಂತ ಎಂದಿನಂತೆ  ಕಾಲಹರಣ ಮಾಡಿದೆನಲ್ಲ ಎಂದು ಶಪಿಸಿಕೊಂಡ. ಪ್ರಯಾಣಕ್ಕೆ ಹೋಗುವಾಗಲೆಲ್ಲ ಕರುಣಾ ಎಚ್ಚರಿಸುತ್ತಿದ್ದಳು, ಎಲ್ಲ ಬ್ಯಾಂಕ್ ಖಾತೆಗಳ ವಿವರ ಬರೆದಿಡು; ಎಲ್ಲ ಹಣಕಾಸಿನ ಸೈಟ್, ಪಾಸ್ಸ್ವರ್ಡ್ ಎಲ್ಲ ವಿವರಗಳನ್ನು ಬರೆದು ಎಲ್ಲಿದೆ ಅಂತ ಹೇಳಿಡು  ಅಂತ ಹೇಳುತ್ತಿದ್ದಳು. ಅದನ್ನೂ  ನಾಗೇಂದ್ರ ನಿರ್ಲಕ್ಷ್ಯ ಮಾಡಿದ್ದ. ಇನ್ನು ತಡ ಮಾಡಬಾರದು ಅಂತ ಅವನಿಗೆ ಅನ್ನಿಸ ತೊಡಗಿತು. ಬಸವಳಿಸುವ ಜ್ವರದ ಬೇಗೆಯಲ್ಲೇ ಎಲ್ಲ ಬ್ಯಾಂಕಿಂಗ್ ವಿವರಗಳನ್ನು ಕೈಲಾದಷ್ಟು ಬರೆದಿಟ್ಟ. ಇದು ತನ್ನ ಮರಣ ಶಾಸನವೇ ಎಂದು ಅವನಿಗೆ ಅನಿಸತೊಡಗಿತು. ಹಲವಾರು ಬಾರಿ ಆಮ್ಲಜನಕ ಮಟ್ಟ ನೋಡಿಕೊಂಡ.  ಮೆಲ್ಲನೆ ಅದು ೯೬ ರಿಂದ ೯೪ಕ್ಕೆ ಇಳಿದಿತ್ತು.

ಬೆಳಗ್ಗೆ ಎದ್ದ ಕರುಣಾ ಕೂಡಲೇ ತನಗೆ ಪರಿಚಯವಿದ್ದ ಹತ್ತಿರದ ಆಸ್ಪತ್ರೆಯ ವೈದ್ಯನೊಬ್ಬನಿಗೆ ಫೋನಾಯಿಸಿದರೆ, ಆತ ”NHS111ಗೆ ಫೋನ್ಮಾಡು,” ಅಂತ ಕೈತೊಳಕೊಂಡ. ಅವರೋ ಅರ್ಧಗಂಟೆಕಾಯಿಸಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ, ನಾಗೇಂದ್ರನ ಸಹನೆಯನ್ನು ಪರೀಕ್ಷಿಸಿ, “ಮನೆಯಲ್ಲೇ ತೆಪ್ಪಗಿರು,” ಎಂಬ  ಮಹಾನ್ ಸಲಹೆಕೊಟ್ಟು ಫೋನ್ ಕುಕ್ಕಿದರು. ಮೆಲ್ಲನೆ ಆಮ್ಲಜನಕದ ಮಟ್ಟ 90 ರೆಡೆ ಪುಟ್ಟ ಪುಟ್ಟ ಹೆಜ್ಜೆ ಹಾಕತೊಡಗಿತ್ತು. ತಡೆಯಲಾಗದೇ ನಾಗೇಂದ್ರ ಪಾರ್ಥನಿಗೆ ಸಂದೇಶ ಕಳಿಸಿದ. ಮರುಕ್ಷಣದಲ್ಲಿ ಪಾರ್ಥ ಫೋನ್ಮಾಡಿ, “ನಾಗ್ಸ್. ನನಗ್ಯಾಕೋ ಈ ಕೊರೋನಾ ಪರಿಸ್ಥಿತಿಯಲ್ಲಿ ನಿನ್ನನ್ನು ಯಾವುದೇ ತಪಾಸಣೆಯಿಲ್ಲದೇ ಮನೆಯಲ್ಲೇಕೊಳೆಯಲು ಬಿಡುವುದು ಸರಿ ಕಾಣೋದಿಲ್ಲ, ಈ ಕ್ಷಣ ನೀನು ನಮ್ಮಆಸ್ಪತ್ರೆಗೆ ಬಾ. ನಾನೇ ಬಾಗಿಲಲ್ಲಿ ಕಾಯುತ್ತಿರುತ್ತೇನೆ,” ಅಂತ ಆಜ್ಞೆ ಕೊಟ್ಟ. ಕೂಡಲೇ ಸುದ್ದಿ ತಿಳಿದ ಕರುಣಾ ಸರ್ಜರಿಯಿಂದ ಬಂದು, ನಾಗೇಂದ್ರನನ್ನು ಧಾವಂತದಿಂದ ಆಸ್ಪತ್ರೆಗೆ ಕರೆದೊಯ್ದಳು. ದೇವರೇ ಬಂದರೂ ಈ ದೇಶದಲ್ಲಿ ರೂಲ್ ಪಾಲಿಸಲೇ ಬೇಕು. ಸ್ವಾಗತಕಕ್ಷೆಯ ಹೆಂಗಸಿಗೆ ತನ್ನ ಗೋತ್ರಪ್ರವರಗಳನ್ನೆಲ್ಲ ಒಪ್ಪಿಸಿದ ಮೇಲೆ, ಪಕ್ಕದ ಬಾಗಿಲಿನಿಂದ ಒಬ್ಬನೇ ಒಳಗೆ ಹೋಗಲು ಆಜ್ಞಾಪಿಸಿದಳು. ಇದರ ಮಧ್ಯೆ ಒಬ್ಬಳು ನರ್ಸಮ್ಮ ಪ್ರತ್ಯಕ್ಷಳಾಗಿ “ಹೀಗೆಲ್ಲ ಆಸ್ಪತ್ರೆಗೆ ಬರಬಾರದು, ಇದು ಸದ್ಯದ ಸರ್ಕಾರದ ಆಜ್ಞೆಗೆ ಮೀರಿದ ನಡವಳಿಕೆ,” ಎಂದೆಲ್ಲ ತಗಾದೆ ತೆಗೆದಾಗ ಪಾರ್ಥನೇ ಅವಳನ್ನು ಸಮಜಾಯಿಸಿ ಸಾಗ ಹಾಕಿದ. ಕೂಡಲೇ ಬಂದ ಇನ್ನೊಬ್ಬ ನರ್ಸ್ ತಡಬಡನೇ ನಾಡಿ, ರಕ್ತದೊತ್ತಡ ಆಮ್ಲಜನಕದಮಟ್ಟ ಎಲ್ಲವನ್ನೂ ತಪಾಸಣೆ ಮಾಡಿ, ಮೂಗು-ಗಂಟಲನ್ನು ಕೆರೆದು, ಕ್ಷ-ಕಿರಣದ ವ್ಯವಸ್ಥೆ ಮಾಡಿ, ನರದೊಳಗೆ ಸೂಜಿ ತುರಿಕಿಸಿ ರಕ್ತ ತಪಾಸಣೆಗೆ ಕಳಿಸಿದಳು. ರಾತ್ರೆಯಿಂದ ಏನೂ ತಿಂದಿಲ್ಲವೆಂದು ಟೋಸ್ಟ್-ಚಹಾದ ವ್ಯವಸ್ಥೆಯನ್ನೂ ಮಾಡಿದಳು. ಪಾರ್ಥ ಯಾವಾಗಲೂ ಹಸನ್ಮುಖಿ. ಏನಾದರೂ ತಮಾಷೆ ಮಾಡಿಕೊಂಡೇ ಇರುವಂಥವನು. ಇವತ್ತು ಅವನ ಮುಖ ಗಂಭೀರವಾಗಿತ್ತು. ನಾಗೇಂದ್ರನಿಗೆ ಇದು ಒಳ್ಳೆ ಶಕುನದಂತೆ ಕಾಣಲಿಲ್ಲ. “ನಾಗ್ಸ್, ಕ್ಪ-ಕಿರಣದಲ್ಲಿ ನ್ಯೂಮೋನಿಯಾ ಥರ ಕೆಲವು ಛಾಯೆಗಳಿವೆ, ನಿನ್ನ ಬಿಳಿ ರಕ್ತಕಣ ಸ್ವಲ್ಪ ಕಡಿಮೆ ಇದೆ. ನಿನಗೆ ರಕ್ತ ನಾಳದಲ್ಲೇ ಆಂಟಿಬಯೋಟಿಕ್ಸ್ ಕೊಡೋಣ. ಆಮ್ಲಜನಕಾನೂ ಬೇಕು. ವಾರ್ಡಿಗೆ ಸೇರಿಸ್ತಿದ್ದೀನಿ. ಸದ್ಯಕ್ಕೇನೂ ಒಂಟಿ ಕೊಠಡಿ ಸಿಗೋ ಸಾಧ್ಯತೆ ಇಲ್ಲ,” ಎಂದು ತನ್ನ ಕೆಲಸಕ್ಕೆ ತೆರಳಿದ. ಕರುಣಾ ಹೊರಗೇ ಕಾಯ್ತಾ ಇದ್ದಳು. ಅವಳಿಗೆ ನಾಗೇಂದ್ರನನ್ನು ನೋಡುವ ಅವಕಾಶನೂ ಇರಲಿಲ್ಲ. ಕೊರೋನಾ ಎಂದು ರೋಗಿಗಳನ್ನು ಬಿಟ್ಟರೆ ಯಾರನ್ನೂ ಆಸ್ಪತ್ರೆ ಒಳಗೆ ಬಿಡುತ್ತಿರಲಿಲ್ಲ. ಅವಳಿಗೆ “ಅತ್ಯವಶ್ಯಕ ಸಾಮಾನುಗಳನ್ನು ವಾರ್ಡಿಗೆ ತಂದು ನರ್ಸಿನ ಕೈಯಲ್ಲಿ ಕೊಡು,” ಎಂದು ಫೋನಾಯಿಸಿ ಹಾಸಿಗೆಯಲ್ಲೊರಗಿದ. ಒಂದೆಡೆ ಆಸ್ಪತ್ರೆಯಲ್ಲಿದೇನೆ ಎಂಬ ಸಮಾಧಾನ, ಇನ್ನೊಂದೆಡೆ ತನ್ನ ತಲೆಯ ಮೇಲೆ ನೇತಾಡುವ ಕತ್ತಿಯಿನ್ನೂ ಮಾಯವಾಗಿಲ್ಲವೆಂಬ ತಲ್ಲಣ. ವಾರ್ಡಿನಲ್ಲಿ ನಾಲ್ಕೈದು ಜನ ಕೆಮ್ಮುತ್ತಿದ್ದರು. ಪಕ್ಕದ ಹಾಸಿಗೆಯ ಕೆವಿನ್ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದಾನಂತೆ, ಅವನಿಗೂ ಜ್ವರ ಬಿಡದೇ ಬರುತ್ತಿತ್ತು. ಬೆಳಿಗ್ಗೆ ತಿಂದದ್ದೆಲ್ಲ ನಾಗೇಂದ್ರ ಕಕ್ಕಿದ. ಇವನೇನೂ ತಿನ್ನುತ್ತಿಲ್ಲಅಂತ ನರ್ಸ್ ಸಲೈನ್ ಹಚ್ಚಿಟ್ಟಳು. ವಾಂತಿ ಆಗಬಾರದೆಂದು ಕೊಟ್ಟ ಔಷದಿಗೆ ಮೈಯೆಲ್ಲಾ ಝುಮ್-ಝುಮ್ಗುಟ್ಟಿ, ಇನ್ನು ಅದನ್ನು ಕೇಳಬಾರದು ಅಂತ ನಿಶ್ಚಯಿಸಿದ. ರಾತ್ರಿ ಬಂದ ನರ್ಸ್ ಇನ್ನೊಮ್ಮೆ ಎಲ್ಲರ ಮೂಗು ಗಂಟಲುಗಳನ್ನೆಲ್ಲ ಕೆರೆದು ಇದನ್ನು ಬೇರೆ ಪ್ರಯಾಗಶಾಲೆಗೆ ಕಳಿಸುತ್ತಿದ್ದೇವೆಂದು ಡಂಗುರ ಬೀರಿದಳು. ಯಾಕೆ, ಎಲ್ಲಿಗೆ ಎಂದು ಕೇಳುವ ಶಕ್ತಿ ಯಾರಲ್ಲೂ ಇರಲಿಲ್ಲ.

ಮುಂದಿನ ಇಪ್ಪತ್ನಾಕು ಗಂಟೆ ನಾಗೇಂದ್ರನಿಗೆ  ಯುಗಗಳಾದವು. ಹಾಸಿಗೆಯಲ್ಲಿ ಸತ್ತ ಹಾಗೆ ಬಿದ್ದವನಿಗೆ ಸುತ್ತ ಅಪ್ಪ-ಅಮ್ಮ, ಬಂಧುಗಳು, ಮಿತ್ರರು ಅಂತಿಮ ಪ್ರದಕ್ಷಿಣೆ ಹಾಕುತ್ತಿದ್ದಾರೆಂದೆನಿಸುತ್ತಿತ್ತು. ನಾಗೇಂದ್ರ ಹತಾಶ ಜೀವಿಯೇನಲ್ಲ. ಕೊರೋನದ ಸುದ್ದಿಗಳೆಲ್ಲ ಕರಾಳವಾಗಿರುವಾಗ, ಉದಾತ್ತ ಯೋಚನೆಗಳು ಬರುವುದು ಕಷ್ಟವೇ. ಅದನ್ನೆಲ್ಲ ದೂರವಿಡಲು ಫೋನಿನ ಅಂತರ್ಜಾಲದ ಸಂಪರ್ಕವನ್ನೇ ಕಡಿದುಹಾಕಿದ್ದ. ಆದರೆ ಪಾರ್ಥ ತಂದ ಮೈಕೆಲ್ನ ಮರಣದ ಸುದ್ದಿ ನಾಗೇಂದ್ರನ ಮನೋಸ್ಥಿತಿಯನ್ನು ಇನ್ನೂ ಹದಗೆಡಿಸಿತ್ತು. ಮೈಕೆಲ್ ಸಾಮಾನ್ಯನೇನಲ್ಲ. ಎವರೆಸ್ಟ್ ಪರ್ವತದ ಬುಡಮುಟ್ಟಿ ಬಂದವನು. ಅಂತಹ ಗಟ್ಟಿ ಮನುಷ್ಯನನ್ನೇ ಈ ಮಾರಿ ಬಲಿ ತೆಗೆದುಕೊಂಡರೆ,  ನನ್ನಂಥ ಹುಲು ಮಾನವನ ಗತಿ ಕೈಲಾಸವೇ ಎಂದು ಹತಾಶನಾಗಿಬಿಟ್ಟ. ರಾತ್ರೆ ನರ್ಸ್ ಬಂದವಳೇ ಎಲ್ಲರೂ ಮುಖಕ್ಕೆ ಮಾಸ್ಕ್ ಹಾಕಿ ಎಂದು ಹುಕುಂ ಕೊಟ್ಟಳು. ಇದು, ಯುದ್ಧಕಾಲದಲ್ಲಿ ಕೊಡುವ ಬಾಂಬ್ ಸೈರನ್ ಥರ ಕೇಳಿಸಿತು ನಾಗೇಂದ್ರನಿಗೆ. ಏನೋ ವಿಪತ್ತು ಕಾದಿದೆ ಎಂದು ಖಚಿತವಾದಂತಿತ್ತು. ರಾತ್ರೆ ಪಾಳಿಯ ವೈದ್ಯನೊಬ್ಬ ಮೈ-ಮುಖಗಳನ್ನೆಲ್ಲ ಮುಚ್ಚಿಕೊಂಡು ತನ್ನೆಡೆಗೆ ಬರುವುದನ್ನುಗಮನಿಸಿದ. ಇವನೇನು ದೇವದೂತನೋ ಯಮದೂತನೋ ಎಂದು ಅವನಿಗರಿಯದಾಯಿತು. ಹಾಸಿಗೆಯ ಬುಡದಲ್ಲಿ ನಿಂತು ಮೃದುವಾದ ಸ್ವರದಲ್ಲಿ, “ನಿನ್ನೆ ಕಳಿಸಿದ ಪರೀಕ್ಷೆಯಲ್ಲಿ ನಿನಗೆ ಕೋವಿಡ್ ರೋಗ ಖಚಿತವಾಗಿದೆ. ನಿನ್ನ ಮನೆಯವರೆಲ್ಲ ಇನ್ನು 14 ದಿವಸ ಮನೆಬಿಟ್ಟು ಹೋಗುವಂತಿಲ್ಲ. ಅವರಿಗೆ ಕೂಡಲೇ ತಿಳಿಸಬೇಕು. ನೀನೇ ತಿಳಿಸುತ್ತೀಯೋ ಇಲ್ಲಾ ನಿನಗೆ ಸುಸ್ತಾಗಿದ್ದಾರೆ ನಾನೇ ನಿನ್ನಹೆಂಡತಿಗೆ ತಿಳಿಸುತ್ತೇನೆಂದು,” ಸಹಾಯ ಹಸ್ತ ಚಾಚಿದ. ಈ ಮಧ್ಯರಾತ್ರಿಯಲ್ಲಿ ಕರುಣಾಳನ್ನು ಫೋನ್ ಮಾಡಿ ಎಬ್ಬಿಸುವುದು ಅಸಾಧ್ಯ ಎಂಬುದನ್ನು ನಾಗೇಂದ್ರ ಬಲ್ಲ. ಆ ವೈದ್ಯನಿಗೆ ಧನ್ಯವಾದಗಳನ್ನರುಹಿ, ತಾನೇ ಸುದ್ದಿ ತಿಳಿಸುವುದಾಗಿ ಹೇಳಿದ. ಪರೀಕ್ಷೆಯ ಫಲಿತಾಂಶ ಕೇಳಿ ಒಂದು ಬಗೆ ಮನ ನಿರುಮ್ಮಳವಾದರೂ, ಬಂದೇನೇ ಈ ಮಾರಿಯ ಬಾಯಿಂದ ಸುರಕ್ಷಿತವಾಗಿ ಎಂಬ ದುಗುಡ ಇನ್ನೊಂದೆಡೆ. ಯೋಚಿಸುತ್ತಿರುವಾಗಲೇ, ಇಬ್ಬರು ದಾಯಿಯರು ಬಂದು ನಾಗೇಂದ್ರನನ್ನು ಒಂಟಿಕೋಣೆಗೆ ಸ್ಥಲಾಂತರಿಸಿದರು.

ಪವಾಡವೆಂಬಂತೆ ಮತ್ತೆರಡು ದಿನಗಳಲ್ಲಿ ಮೈ ಹಗುರವಾಗತೊಡಗಿತು. ಜ್ವರ ಇಳಿದು ಹುರುಪು ಹೆಚ್ಚಾಯಿತು. ಮರುದಿನ ಬಂದ ವೈದ್ಯ ಆಮ್ಲಜನಕದ ಅಗತ್ಯ ಕಡಿಮೆಯಿದೆಯೆಂದು ಇನ್ನೂ ಧೈರ್ಯ ತುಂಬಿದ. ಕಣ್ಮುಂದೆ ಯಮರಾಜನ ಬದಲು ಮೃದುಲಾ-ಮೃಣಾಲ್ ರ ನಗುಮುಖ ಕುಣಿಯತೊಡಗಿತು. ಮಾರನೇ ದಿನ ಬಂದ ಪಾರ್ಥ, “ನಾಡಿ, ರಕ್ತದೊತ್ತಡ, ಆಮ್ಲಜನಕದ ಲೆವೆಲ್ ಎಲ್ಲ ಸರಿಯಾಗಿದೆ. ಇವತ್ತು ಸಾಯಂಕಾಲ ಮನೆಗೆ ಹೋಗಬಹುದು,” ಎಂದು ಮುಗುಳ್ನಕ್ಕ. ನಾಗೇಂದ್ರನ ಕಣ್ಣುಗಳಿಂದ ಧಾರಾಕಾರವಾಗಿ ಕಂಬನಿ ಸುರಿದವು. ಪಾರ್ಥ ಹತ್ತಿರ ಬಂದು ಸಂತೈಸಲಾರ, ಬಿಡಲಾರ. ದೂರದಿಂದಲೇ, “ರಿಲ್ಯಾಕ್ಸ್ ಯಾರ್ ನಾಗ್ಸ್. ಥ್ಯಾಂಕ್ ದಿ ಗಾಡ್. ಇಟ್ ಆಲ್ ಎಂಡೆಡ್ ವೆಲ್. ಇನ್ನು ಎರಡು ವಾರ ಆಸ್ಪತ್ರೆ ಕಡೆ ಮುಖ ಹಾಕಬೇಡ,” ಎಂದು ಧೈರ್ಯ ಹೇಳಿ ರಜೆ ಚೀಟಿ ಬರೆದು ಕೊಟ್ಟ.

ಕಿಟಕಿಯ ಹೊರಗೆ ಎಂದಿಗೂ ಕವಿದಿರುವ ಕಾರ್ಮೋಡದ ತೆರೆ ಸರಿದು, ಹೊಂಬಿಸಿಲು ಮೂಡಿತ್ತು. ಅಂತರ್ಜಾಲದ ಸಂಪರ್ಕಕ್ಕೆ ಬಂದ ಫೋನ್ ನೂರಾರು ಸಂದೇಶಗಳನ್ನು ಮುಂದೆ ಸುರುವಿ ಹಾಕಿತ್ತು. ಎಲ್ಲದರ ಮೊದಲಿತ್ತು ಗೆಳೆಯನೊಬ್ಬನ ಸಂದೇಶ, “ಸಿಂಹದ ಬಾಯಿಂದ ಹೊರಬಂದಿದದ್ದಕ್ಕೆ ಅಭಿನಂದನೆಗಳು” 

ವಿ.ಸೂ: ಡಾ. ನಾಗೇಂದ್ರ ಗುಣಮುಖರಾಗಿದ್ದು, ಸಾಧ್ಯವೇ ಕೆಲಸಕ್ಕೆ ಹಿಂದಿರುಗಲಿದ್ದಾರೆ. ಕೊರೋನಾ ಸೋಂಕು ಹೆಚ್ಚಿನವರಲ್ಲಿ ಮರಣಕ್ಕೆ ದಾರಿಯಲ್ಲ ಎಂಬುದಕ್ಕೆ ಈ ಕಥೆಯೇ ಸಾಕ್ಷಿ. ಓದುಗರು ಇದನ್ನು ಓದಿ, ರೋಗ ಲಕ್ಷಣಗಳನ್ನು ತಿಳಿದು ಹೆಚ್ಚಿನ ಜಾಗರೂಕತೆ ತೆಗೆದುಕೊಳ್ಳಲಿ, ಸೋಂಕು ಬಂದರೆ ಧೈರ್ಯವಾಗಿ ಎದುರಿಸುವ ಮನೋಭಾವನೆ ಇರಲಿ ಎಂಬುದೇ ಲೇಖಕರ ಆಷಯ.

ಕರಾಳ ಕರೋನ

ಡಾ. ಜಿ. ಎಸ್. ಶಿವಪ್ರಸಾದ್

ಕರೋನ ಬರುವಿಕೆಯ ಭೀತಿಯಲ್ಲಿ
ಕದವ ಮುಚ್ಚಿ ಕುಳಿತ್ತಿದ್ದೇವೆ
ಇಂದು-ಎಂದು , ಹೇಗೆ, ಕಣ್ ತಪ್ಪಿಸಿ
ಬರುವನೆಂಬ ಶಂಕೆಯಲಿ ನಡುಗಿದ್ದೇವೆ

ಕಟ್ಟಾಜ್ಞೆಯ ಹಿಡಿದ ಯಮದೂತ
ಬಾಗಿಲಬಳಿ ನಿಂದು ಕದವ ತಟ್ಟಿದ್ದಾನೆ
ಬಾಗಿಲು ಮುರಿದು ಮುನ್ನುಗ್ಗಿ
ಸೆರೆ ಹಿಡಿವ ಸಂಚು ಹೂಡಿದ್ದಾನೆ

ಮನೆ ಮನೆಗೆ ಲಗ್ಗೆ ಇಟ್ಟು
ಎಲ್ಲರ ಮೈಮನಗಳ ಆವರಿಸಿದ್ದಾನೆ
ಅಮೂರ್ತ ಭೀಕರ ಭಯೋತ್ಪಾದಕ
ಅಲ್ಲಿ-ಇಲ್ಲಿ, ಎಲ್ಲೆಲ್ಲೂ ಅವತರಿಸಿದ್ದಾನೆ

ಜಾತಿ, ಮತ, ಧರ್ಮ
ದೇಶ ಗಡಿಗಳ ಹಂಗಿಲ್ಲ
ಎಲ್ಲರನ್ನೂ ನುಂಗುವ ತವಕ
ಇವನ ದಾಹಕ್ಕೆ ಕೊನೆಯಿಲ್ಲ

ಕಾಣದ ವೈರಿಯ ಬಳಿ
ಖಡ್ಗ, ಕವಚ, ಕಹಳೆಗಳಿಲ್ಲ
ರಣ ರಂಗದಲಿ ರಕ್ತಪಾತಗಳಿಲ್ಲ,
ಸಮರದಲಿ ಒಪ್ಪಂದಕ್ಕೆ ಆಸ್ಪದವಿಲ್ಲ

ಮೊರೆ ಹೋದ ದೇವ ದೇವತೆಗಳು
ತಮ್ಮ ಗುಡಿಗಳ ಮುಚ್ಚಿದ್ದಾರೆ
ಪವಾಡ ಪುರುಷರು, ಬಾಬಾಗಳು
ಅಂಜಿ ಆಶ್ರಮಗಳಲಿ ಅಡಗಿಕೊಂಡಿದ್ದಾರೆ

ಕೆಮ್ಮು ದಮ್ಮುಗಳ ನಡುವೆ
ನಿಶಬ್ದ, ನಿರ್ಜನ ಬೀದಿಗಳು
ಸೆರೆಮನೆಯಾದ ಮನೆ ಮಠಗಳು
ಭುಗಿಲೆದ್ದು ನರ್ತಿಸುವ ಚಿತೆಯುರಿಗಳು

ಹೋರಾಡಿ ನಿಶಕ್ತರಾದ ಹಲವರಿಗೆ
ಸಮರದಲಿ ಸೋಲು ಅನಿವಾರ್ಯ
ಗೆದ್ದು ಬದುಕುಳಿದವರಿಗೆ ನಾಳೆ
ಹೊಸ ಭರವಸೆಯ ಅರುಣೋದಯ

ಕವಿ: ಡಾ. ಜಿ. ಎಸ್. ಶಿವಪ್ರಸಾದ್, ಶೆಫೀಲ್ಡ್ , ಯು. ಕೆ .

ರೇಖಾಚಿತ್ರ ಕೃಪೆ : ಲಕ್ಷ್ಮಿನಾರಾಯಣ ಗುಡೂರ್