ಕೇಶವ ಕುಲ್ಕರ್ಣಿ ಮತ್ತು ಲಾಸ್ಯ ಬಸವರಾಜಪ್ಪ ರವರು ಬರೆದಿರುವ ಎರಡು ಕವಿತೆಗಳು  

ಆರುವರ್ಷದ ಮಗುವೊಂದು ಮೂವತ್ತು ದಿನಗಳ ಈ  ಲಾಕ್ಡೌನ್ ಸಾಕಾಗಿದೆ,   ತಾನು ಮನೆಯಿಂದ ಹೊರನಡೆದು ಆಟವಾಡಬೇಕು ಮತ್ತು ಸ್ನೇಹಿತರೊಂದಿಗೆ ಬೆರೆಯಬೇಕು  ಎಂದು ಅಳಲು ತೋಡಿಕೊಳ್ಳುತ್ತಿರುವ ಹಾಡಿನ ವಿಡಿಯೋ ಒಂದನ್ನು ಬಿಬಿಸಿ ನಲ್ಲಿ ನೋಡಿದಾಗ, ಅದು ಬರಿ ಮಕ್ಕಳ ಅಳಲಲ್ಲ ವಯಸ್ಕರಿಂದ ವಯೋವೃದ್ಧರ ವರೆಗೂ ಎಲ್ಲರ ಅಳಲು ಎಂಬುದು ಭಾಸವಾಗುತ್ತಿತ್ತು. ನಿಜವಲ್ಲವೇ? ವಾಟ್ಸ್ ಆಪ್ ಚಾಲೆಂಜ್ ಗಳು , ಜೂಮ್ ಕರೆಗಳು, ವರ್ಚುಯಲ್ ಪಾನಗಳು, ಟಿಕ್ ಟಾಕ್ ವಿಡಿಯೋ ಗಳು, ಒಂದೇ ಎರಡೇ? ಇಷ್ಟೆಲ್ಲ ಮಾಡಿದರೂ ನಮ್ಮ ಸಮಾಜ ಸಹಜ ಸ್ಥಿತಿಗೆ ಯಾವಾಗ ಮರಳುವುದೋ ಎಂಬ ಕೊರಗು ನೆರಳಂತೆ ಜೊತೆಯಾಗಿದೆ. ನಮ್ಮೆಲ್ಲರ ತುಡಿತವನ್ನು, ನಾಡಿ ಮಿಡಿತವನ್ನು  ‘ಅನಿವಾಸಿ’ಯ ಕವಿ ಕೇಶವ ಕುಲ್ಕರ್ಣಿ ರವರು  ತಮ್ಮ ‘ಆಶಯ’ ಎಂಬ ಕವಿತೆಯಲ್ಲಿ ಕಟ್ಟಿ ಹಾಕಿದ್ದಾರೆ.  ಕರೋನಾದ ರುದ್ರ ನರ್ತನ, ಅದರಿಂದಾಗಿರುವ ಆಕ್ರಂದನ, ಅಸ್ತ ವ್ಯಸ್ತವಾಗಿರುವ ಜನಜೀವನ, ಮಹಾ ನಗರಗಳ ಸ್ಮಶಾನ ಮೌನ, ಇವೆಲ್ಲವನ್ನು ಸಹಿಸಲಾರದೆ ಮಹಾಮಾರಿಗೆ ಛೀಮಾರಿ ಹಾಕುತ್ತಲೇ ನಮ್ಮನ್ನು ತೊರೆದು ಹೊರಟುಬಿಡು ಎಂದು ಅರಿಕೆ ಮಾಡಿಕೊಳ್ಳುತ್ತಿದ್ದಾರೆ ‘ಅನಿವಾಸಿಯ’ ಹೊಸ ಕವಯತ್ರಿ ಲಾಸ್ಯ ಬಸವರಾಜಪ್ಪ ತಮ್ಮ ‘ಕರೋನ – ನಿನ್ನಲ್ಲೊಂದು ಅರಿಕೆ‘ ಎಂಬ ಕವಿತೆಯಲ್ಲಿ. ಈ ಇಬ್ಬರು ಕವಿಗಳ ಆಶಯ ಬಹುಬೇಗ ಸಾಕಾರವಾಗಲಿ, ಅರಿಕೆ ಫಲಪ್ರದವಾಗಲಿ, ಬದುಕಿನ ಸಹಜತೆ ಮರಳಲಿ ಎಂದು ಹಾರೈಸುತ್ತೇನೆ.  ಕವಿತೆಗಳಿಗೆಂದೇ ಮೀಸಲಾಗಿರುವ ಈ ವಾರದ ಅನಿವಾಸಿ ಸಂಚಿಕೆ ನಿಮಗೆ ಇಷ್ಟವಾಗುತ್ತದೆ ಎಂದು ನಂಬಿದ್ದೇನೆ . (ಸಂ)

ಆಶಯ

ಕೇಶವ ಕುಲ್ಕರ್ಣಿ

ಮತ್ತೆ ಮಕ್ಕಳು ಅಜ್ಜ-ಅಜ್ಜಿಯ
ಕೈಯ ಹಿಡಿದು ಆಡಲಿ
ದೂರ ಬದುಕುವ ಮನೆಯ ಮಂದಿ
ಮತ್ತೆ ಭೇಟಿಯ ಮಾಡಲಿ

ಗೆಳೆಯ ಗೆಳತಿಯರೆಲ್ಲ ಕೂಡಿ
ಹಾಡಿ ಕುಣಿದು ನಲಿಯಲಿ
ಬಂಧು ಬಳಗದ ಜಾತ್ರೆಯಲ್ಲಿ
ಮದುವೆ ಸಂಭ್ರಮ ಜರುಗಲಿ

ವಿದ್ಯೆವಿನಯವ ಹೇಳಿಕೊಡುವ
ಶಾಲೆ ಮತ್ತೆ ತೆರೆಯಲಿ
ಗಾನಸಭೆಗಳು ಸಿನಿಮಂದಿರಗಳು
ತುಂಬಿ ತುಂಬಿ ತುಳುಕಲಿ

ಮತ್ತೆ ಮುಖದಲ್ಲಿ ನಗುವು ಮೂಡಲಿ
ಮತ್ತೆ ಮೂಡಣ ಮೊಳಗಲಿ
ಮತ್ತೆ ಮನದಲ್ಲಿ ಶಾಂತಿ ಕಾಣಲಿ
ಮತ್ತೆ ಪಡುವಣ ಪುಟಿಯಲಿ 

ಕೊರೋನ – ನಿನ್ನಲ್ಲೊಂದು ಅರಿಕೆ

ಲಾಸ್ಯ ಬಸವರಾಜಪ್ಪ

ಕವಯಿತ್ರಿ ಲಾಸ್ಯ ಬಸವರಾಜಪ್ಪ ‘ಅನಿವಾಸಿ’ ಗೆ ಹೊಸ ಸೇರ್ಪಡೆ. ಮೂಲತಃ ಮೈಸೂರಿನವರಾದ ಲಾಸ್ಯ , ವೃತ್ತಿಯಿಂದ ಐಟಿ  ಉದ್ಯೋಗಿ, ಪ್ರವೃತ್ತಿ ಯಿಂದ ಕವಿ. ಇಬ್ಬರು ಮಕ್ಕಳು ಮತ್ತು ಪತಿಯೊಂದಿಗೆ ಲಂಡನ್ ನ ಆರ್ಪಿಂಗ್ಟನ್ ನಲ್ಲಿ ಸುಮಾರು ೫ ವರ್ಷಗಳಿಂದ ನೆಲೆಸಿದ್ದಾರೆ. ಇವರ ಕವನಗಳು ‘ಕರ್ಮವೀರ’, ‘ಆಂದೋಲನ’, ಮುಂತಾದ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ, ಮತ್ತು ತಮ್ಮ ಅನುಭವಗಳನ್ನು ತಮ್ಮ ಬ್ಲಾಗ್ ಮೂಲಕ ಹಂಚಿಕೊಳ್ಳುತ್ತಾರೆ. ‘ಅನಿವಾಸಿ’ ಗುಂಪಿನ ಪರಿಚಯ ಬೆಳೆದಿದ್ದಕ್ಕೆ ಸಂತಸ ವ್ಯಕ್ತಪಡಿಸುವ ಲಾಸ್ಯ, ಗುಂಪಿನ ಸದಸ್ಯರಿಗೆಲ್ಲಾ ಶುಭಹಾರೈಸುತ್ತಾರೆ.

ಹೇ ಕೊರೋನ, ಸಾಕು ನಿಲ್ಲಿಸು ನಿನ್ನ ರುದ್ರ ನರ್ತನ
ಭಯಭೀತರಾಗಿದ್ದಾರೆ ಎಲ್ಲ ದೇಶದ ಜನ
ಮುಗಿಲು ಮುಟ್ಟಿದೆ ವಿಶ್ವದ ಆಕ್ರಂದನ
ಬೇಕಿದೆ ನೊಂದ ಮನಗಳಿಗೀಗ ಕೊಂಚ ಸಾಂತ್ವನ

ಕಣ್ಣಿಗೆ ಕಾಣದ ಹೆಮ್ಮಾರಿ,
ಮಾಗಿದ ಮುಪ್ಪಿನ ಜೀವಗಳೇ ನಿನಗೇಕೆ ಗುರಿ?
ರಕ್ತದಾಹಿಯೇ ನೀನು, ಏಕಿಷ್ಟು ಕ್ರೂರಿ?

ಬದುಕಿನ ಮುಸ್ಸಂಜೆಯಲಿ, ನೆನಪುಗಳ ತಡವುತ್ತಾ
ಕಳೆದು ಹೋದ ದಿನಗಳ ಮೆಲುಕು ಹಾಕುತ್ತಾ
ಮೊಮ್ಮಕ್ಕಳ ಜೊತೆ ಮಕ್ಕಳಾಗಿ ಆಟವಾಡುತ್ತಾ
ಕಾಲ ಹಾಕುತ್ತಿರುವ ಹಣ್ಣೆಲೆಗಳ ಮೇಲೆ ನಿನಗೇಕಿಲ್ಲ ಕರುಣೆ?
ಅರ್ಥವಾಗದೇ ಹೊಸ ಚಿಗುರು-ಹಳೆ ಬೇರುಗಳ ಅಂತರಂಗದ ಬವಣೆ?

ಕಳ್ಳ ಬೆಕ್ಕಿನ ಹೆಜ್ಜೆಯಲಿ ಭೂಮಂಡಲವ ಆವರಿಸಿ
ಆಪೋಷನಕ್ಕೆ  ಅಣಿಯಾಗುತ್ತಿರುವ ಓ ಮಹಾಮಾರಿ ಕೊರೋನ
ನಿನ್ನ ಆರ್ಭಟಕೆ ಹೆದರಿ ಅಸ್ತವ್ಯಸ್ತವಾಗಿದೆ ಜನಜೀವನ 
ತಲ್ಲಣಿಸಿದೆ ಜಗ, ಎಲ್ಲೆಡೆ ಹರಡಿದೆ ಸ್ಮಶಾನ ಮೌನ 

ಕಿಟಕಿ ಬಾಗಿಲ ಮುಚ್ಚಿ, ಗುಮ್ಮಕ್ಕೆ ಹೆದರಿ ನಡುಗುತ್ತಾ,
ಸತ್ತ ಗೆಳೆಯರ ಸಂಸ್ಕಾರಕ್ಕೂ ಹೋಗಲಾರದೆ ಅಸಹಾಯಕತೆಯಲ್ಲಿ ನಲುಗುತ್ತಾ,
ಗೆಳೆಯ-ಗೆಳತಿಯರ ಒಡನಾಟವಿಲ್ಲದೆ ಸೊರಗುತ್ತಾ, ನಿನಗೆ ಹಿಡಿಶಾಪ ಹಾಕುತ್ತಾ,
ಮೂಕ ವೇದನೆಯಲ್ಲಿ ಮುಳುಗಿದೆ ಪ್ರಪಂಚ
ಇರಲಿ ದಯೆ ಅವರ ಮೇಲೆ ಇನ್ನಾದರೂ ಕೊಂಚ

ಅಗಲಿರುವರು ಆಗಲೇ ನಮ್ಮಿಂದ ಲಕ್ಷಾಂತರ
ಹೊರಟು ಬಿಡು ಇನ್ನಾದರೂ ಎಲ್ಲರಿಂದ ದೂರ
ದುಡಿವ ಕೈಗಳು ಹೊರಲಾರವು ಆರ್ಥಿಕ ಕುಸಿತದ ಭಾರ
ಭಯ-ಆತಂಕ ಮನೆ ಮಾಡಿ ಆಗಿದೆ ಹೆಮ್ಮರ
ಹೊಮ್ಮಲಿ ಕಾರ್ಮುಗಿಲ ಅಂಚಿನಿಂದ ಸುಮಧುರ ಸುಸ್ವರ!

8 thoughts on “ಕೇಶವ ಕುಲ್ಕರ್ಣಿ ಮತ್ತು ಲಾಸ್ಯ ಬಸವರಾಜಪ್ಪ ರವರು ಬರೆದಿರುವ ಎರಡು ಕವಿತೆಗಳು  

 1. ಕೊರೋನ ಕಳವಳ ದಿಂದ ನಾಲ್ಕು ಗೋಡೆಗಳ ನಡುವೆ ಸಾಗಿರುವ ಜೀವನದ ರೀತಿ, ವೈರಾಣು ತಂಡಿತ್ತಿರುವ ವಿಷಮ ಪರಿಸ್ಥಿತಿ, ಮುಂದಿನ ಭವಿಷ್ಯದ ಭೀತಿ ಇವೆಲ್ಲದರ ಚಿತ್ರಣ ಲಾಸ್ಯಾರ ಕವನದಲ್ಲಿ ಕಣ್ಣಿಗೆ ಕಟ್ಟುವತಂತ್ತಿದ್ದು ಹಾಗೂ ಇದೆಲ್ಲವೂ ಅಂತ್ಯ ಗೊಂಡು ನೆಮ್ಮದಿಯ ಬದುಕು ಮರಳಿಸಲಿ ಎಂಬ ಆಶಾಕಿರಣ ದೊಂದಿಗೆ ಕೊನೆ ಗೊಂಡಿರುವುದು ಚೆನ್ನಾಗಿದೆ👌

  ಈ ಸಂಕಷ್ಟುವು ಬೇಗ ಕಳೆದು ಸಂತೋಷದ ದಿನಗಳು ಬಂದು ಮತ್ತೆ ಪ್ರಪಂಚವು ಎಂದಿನಂತೆ ಜರುಗಲಿ ಎಂಬ ಆಶವಾದವು ಕೇಶವ್ ರವರ ಕವನದಲ್ಲಿ ಬಹಳ ಚೆನ್ನಾಗಿ ಮೂಡಿ ಬಂದಿದೆ👌

  Like

 2. ಈ ಕರೋನಾದ ಕರಿ ನೆರಳಿನಡಿಯೇ ಒಂದು ಬೆಳಕಿನ ಕಿರಣ ಅರಸುವ, ಆ ಬಂಧನದಿಂದ ಹೊರ ಬರುವ ಸುಂದರ ಆಶಯ ಕೇಶವ ಕುಲಕರ್ಣಿಯವರ ಕವನದಲ್ಲಿ.ಅದೇ ಆಶಯ ಕಂಡೆ ನಾ ಲಾಸ್ಯಾ ಅವರ ಅಸಹಾಯ ಕ್ರೋಧದೊಡಲಲ್ಲಿ.ಈಗ ಒಂದಂತೂ ಎಲ್ಲರೂ ಒಪ್ಪಲೇ ಬೇಕಿಲ್ಲಿ, ನಿಸರ್ಗಕ್ಕೆ, ಈ ಪ್ರಕೃತಿ ಗೆ ಯಾವುದೇ ಕಟ್ಟು ಇಲ್ಲ, ಯಾವ ಬಂಧನವೂ ಇಲ್ಲ.ಅದು ನಿತ್ಯ ನೂತನ, ಚಿರನೂತನ.
  ” ಯಾವ ಕಟ್ಟು ಆ ಮೊಗ್ಗಿಗೆ
  ಯಾವ ಬಂಧ ಆ ಅರಳಿಗೆ
  ಜೊಂಪೆ ಜೊಂಪೆ ಹೂ ತೂಗೆ
  ಪರವಶದಿ ಕೊಂಬೆ ಬಾಗಿದರೆ
  ಯಾವ ಕಟ್ಟು ಅಲ್ಲಿ ವಿಧಿಸುವಿ”
  ಅಲ್ವಾ? ನಾವೂ ಆ ಥರ ಬಂಧನರಹಿತರಾಗುವ ದಾರಿ ಕಾಯೋಣ.ಇರುಳಿನ ಗರ್ಭದಲ್ಲಿಯೇ ಬೆಳಕು ಹುದುಗಿರುವುದನ್ನು ಮರೆಯುವಂತಿಲ್ಲ. ಆ ಆಶಯವನ್ನು, ಭರವಸೆಯನ್ನು ಬಲಗೊಳಿಸುವ ಸುಂದರ ಕವನಗಳನ್ನು ನೀಡಿದ ಕೇಶವ ಕುಲಕರ್ಣಿಯವರಿಗೂ, ಲಾಸ್ಯಾ ಅವರಿಗೂ ಧನ್ಯವಾದಗಳು.
  ಸರೋಜಿನಿ ಪಡಸಲಗಿ

  Like

 3. ಲಾಸ್ಯರವರಿಗೆ ಅನಿವಾಸಿ ಬಳಗದಿ೦ದ ಸ್ವಾಗತ.
  ಕರೋನಾ ವೈರಸ್ ನ ಕರಾಳ ಕೈಗಳು ಪ್ರಪ೦ಚವನ್ನು ಹಿಡಿದು, ಅಲುಗಾಡಿಸಿ, ಕಿವಿಚಿ ಹತ್ತಿಸಿರುವ ಕಿಚ್ಚಿನ ಬಗ್ಗೆ ತಮ್ಮ ಕ್ರೋಧವನ್ನು ಲಾಸ್ಯರವರ ಕವನ ಬಿ೦ಬಿಸಿದರೆ, ಕೇಶವರವರು ಈ ಪಿಡುಗಿನಿ೦ದ ಬೇಗನೆ ಹೊರಬರುವ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.
  ಪ್ರಸ್ತುತ ಸ್ಥಿತಿಯನ್ನು ತಮ್ಮದೇ ರೀತಿಯಲ್ಲಿ ಮನವರಿಕೆ ಮಾಡಿಕೊಡುವ ಕವನಗಳು

  Like

 4. ಕಳೆದ ಕೆಲವು ದಿನಗಳಿಂದ ಮೋಡಕವಿದ ಇಂಗ್ಲೆಂಡಿನಲ್ಲಿ ಸೂರ್ಯ ರಾರಾಜಿಸುತ್ತಿದ್ದಾನೆ . ಇಂತಹ ದಿನಗಳಲ್ಲಿ ನನ್ನ ಮನೆಯ ಸುತ್ತ ಇರುವ ಪೀಕ್ ಡಿಸ್ಟ್ರಿಕ್ಟ್ ನ್ಯಾಷನಲ್ ಪಾರ್ಕಿನಲ್ಲಿ ವಿಹಾರಿಗಳನ್ನು ಅಧಿಕ ಸಂಖ್ಯೆಯಲ್ಲಿ ಕಾಣ ಬಹುದು. ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ಖಾಲಿ ಖಾಲಿ . ಪ್ರಕೃತಿಯಲ್ಲಿರುವ ಲವಲವಿಕೆ ನಮ್ಮಲಿಲ್ಲ! ಇಂತಹ ದಿನಗಳಲ್ಲಿ ನಾನು ನನ್ನ ವಾಕಿಂಗ್ ಶೊ ಏರಿಸಿ ಮಡ ದಿಯ ಜೊತೆ ಹಸಿರಿನ ನಡುವೆ ಉಲ್ಲಾಸದಿಂದ ಓಡಾಡಿ ಒಂದು ಕೆಫೆಯಲ್ಲಿ ಕೂತು ಸ್ಯಾಂಡ್ವಿಚ್ ತಿಂದು ಕಾಫೀ ಹೀರುವುದು ನನ್ನ ಆಶಯ. ಮಳೆ ಚಳಿಗೆ ರೋಸತ್ತು ವಸಂತ ಋತುವಿನ ಆಗಮನವನ್ನು ನಿರೀಕ್ಷಿಸುತ್ತಿದ್ದು ಈಗ ಹೊರಗೆ ವಿಹರಿಸಲಾಗದ ನನಗೆ ಬಹಳ ನಿರಾಸೆಯಾಗಿದೆ.

  ಈ ಹಿನ್ನೆಲೆಯಲ್ಲಿ ಕೇಶವ ಅವರ ಕವನವನ್ನು ಓದಿದ ನನಗೆ ನಾವೆಲ್ಲ ಸೆರೆಮನೆಯ ಖೈದಿಗಳಂತೆ ಆಗಿರುವ ಭಾವನೆ ಮೂಡಿಬಂತು. ನಮ್ಮ ಆಶಯ ಈಡೇರಬೇಕಾದರೆ ತಾಳ್ಮೆ ಮತ್ತು ಎಲ್ಲರ ಸಹಕಾರ ಮುಖ್ಯ. ಕಾರೋನ ವೆಂಬ ಕತ್ತಲೆ ಶೀಘ್ರದಲ್ಲಿ ಕಳೆಯಲಿ ಎಂದು ಆಶಿಸೋಣ . ಕೇಶವ ಅವರ ಕವನದ ೩ ಪದಗಳ ೪ ಸಾಲಿನ ಸರಳ ವಿನ್ಯಾಸ, ಕಾವ್ಯ ರಚನೆಯ ಸೂತ್ರಗಳನ್ನು ನೆನಪಿಗೆ ತಂದಿದೆ.

  ಬದುಕಿನ ಸಂಧ್ಯಾ ಕಾಲದಲ್ಲಿ ನೆಮ್ಮದಿಯನ್ನು ನಿರೀಕ್ಷಿಸುವ ಹಿರಿಯರಿಗೆ ಒದಗಿರುವ ಆತಂಕವನ್ನು ಮತ್ತು ಕರೋನ ಒಡ್ಡಿರುವ ಸವಾಲುಗಳನ್ನು ಹಾಗೂ ಹಿನ್ನೆಲೆಯ ತಲ್ಲಣಗಳನ್ನು ಲಾಸ್ಯ ತಮ್ಮ ಕವನದಲ್ಲಿ ಯಶಸ್ವಿಯಾಗಿ ಬಣ್ಣಿಸಿದ್ದಾರೆ . ಲಾಸ್ಯ ಅವರಿಗೆ ನಮ್ಮ ಈ ವೇದಿಕೆಗೆ ಸ್ವಾಗತ.

  Like

 5. ಹೊಸ ನಾಳೆಯೊಂದು ಕರೋನಾದಿರುಳ ಸೀಳಿ ಮರಳಿ ಮೂಡಿ ಬರಲಿದೆ ಎನ್ನುವ ಆಶಯದ ಸಾಲುಗಳು: ಕೇಶವರು ಕರೆದಿರುವ ನಾಳೆಯಲ್ಲಿ, ಮತ್ತು ಲಾಸ್ಯ ಹೋಗೆನ್ನುತ್ತಿರುವ ‘ಕರೋನ‘ ದಲ್ಲಿ.

  Murali

  Like

 6. ಮತ್ತೆ ಕರೋನಾ ಕವಿತೆಯೇ? ಎಂದು ಮೂಗು ಮುರಿಯುವ ಮೊದಲು ಈ ’ಅನಿವಾಸ” ಸ್ಪೆಷಲ್ ಗಳನ್ನು ಓದಿ, ಅವೆರಡೂ ಸೂಸುವ ಹೊಸ ಆಶಯಗಳನ್ನು ನೋಡಿರಿ. ಕರೋನಾ ವಿರುದ್ಧದ ಸಮರಕ್ಕೆ ಇಡೀ ಜಗತ್ತೇ ಸನ್ನದ್ಧವಾಗಿದೆ. ಜಗತ್ತಿನಲ್ಲಿ ದೀರ್ಘ ಕಾಲ ಬದುಕಿದವರು ಇದನ್ನು War ಎಂದು ಕರೆಯುತ್ತಾರೆ ಮತ್ತು ಅದಕ್ಕೆ ಹೋಲಿಸುತ್ತಾರೆ. ಮಹಾಯುದ್ಧಗಳ ಮೇಲೆ ಅದೆಷ್ಟು ಕವನಗಳು ಬಂದಿಲ್ಲ. ಇಂಥ ದಟ್ಟ ಅನುಭವದಿಂದ ಕರೋನಾ ಮೇಲೆ ಇನ್ನೂ ನೂರಾರು ಕವನಗಳನ್ನು (ಎಲ್ಲ ಇಲ್ಲಿ ಅಲ್ಲ!) ಓದಲಿದ್ದೇವೆ. ಪಳಗಿದ ಕೇಶವ ಅವರ ಸರಳ ಕವಿತೆಯಲ್ಲಿ ”We want our life back!” ಎಂದು ಹಂಬಲಿಸುವಂತಿದೆ. ಲಾಸ್ಯ ಬಸವರಾಜಪ್ಪ ತಮ್ಮ ಇಂಗ್ಲಿಷ್ ಬ್ಲಾಗ್ ದಲ್ಲಿಯೂ ಕನ್ನಡದಲ್ಲಿಯಂತೆಯೇ ಉಭಯ ಭಾಷೆಯಲ್ಲಿ ಲಾಸ್ಯವಾಡುತ್ತಾರೆ. ಬೇರೆ ಕಡೆ ಲೇಖನಗಳನ್ನು ಪ್ರಕಟಿಸಿದ್ದರೂ ಈ ಅನಿವಾಸಿ ಲೇಬಲ್ ಒಂದು ರೀತಿಯಿಂದ ನಿಮಗೆ ಸ್ಪೆಷಲ್, ಲಾಸ್ಯ ಅವರೆ! ನೀವೀಗ ವಾಸಿಸುತ್ತಿರುವ ಯುಕೆದ ತಂಗುದಾಣ ಇದು, ಅಲ್ಲವೆ? ನಿಮಗೆ ಸ್ವಾಗತ, ಸುಸ್ವಾಗತ. ಮಕ್ಕಳಷ್ಟೇ ಅಲ್ಲ ಹಿರಿಯರ ಬಗ್ಗೆಯೂ ಲಾಸ್ಯ ಅವರಿಗೆ ಕಳಕಳಿ. Every dark cloud has a silver lining ಎನ್ನುವ ಆಶಾವಾದದೊಂದಿಗೆ ತಮ್ಮ ’ಅರಿಕ”ಯನ್ನು ಮುಗಿಸುತ್ತಾರೆ. ಇಬ್ಬರಿಗೂ ಅಭಿನಂದನೆಗಳು. ಶ್ರೀವತ್ಸ ದೇಸಾಯಿ

  Like

 7. ಕೇಶವ್ ಅವರ ಮುಗ್ಧ ಮಗುವಿನಂತಹ ಆಶಯ
  ಮತ್ತು ಲಾಸ್ಯ ಅವರ ಅರಿಕೆ ಬಹಳ ಚೆನ್ನಾಗಿ ಮೂಡಿ ಬಂದಿವೆ

  Like

  • ಕೇಶವನ ಕಾವ್ಯದ ಆಶಯ ಸ್ಫೂರ್ತಿ ನೀಡಿದ ಮಗುವಿನಷ್ಟೇ ಸರಳ, ನಿರ್ಮಲ. ನಮ್ಮೆಲ್ಲರ ಆಶಯಗಳನ್ನು ಸಾರ್ಥಕವಾಗಿ ಹರಳಾಗಿಸುವಲ್ಲಿ ಯಶಸ್ವಿಯಾಗಿದೆ.
   ಮೊದಲ ವಾರದಲ್ಲೇ ಕಾವ್ಯದೊಂದಿಗೆ ಪರಿಚಿತರಾಗಿರುವ ಲಾಸ್ಯ ಅವರಿಗೆ ಸ್ವಾಗತ. ವಾಸ್ತವವನ್ನು ನಿಷ್ಠವಾಗಿ ನಿರೂಪಿಸಿದೆ ನಿಮ್ಮ ಕವನ.
   – ರಾಂ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.