ಇದೇ ಸೆಪ್ಟಂಬರ್ ೨೬ರಂದು ಮ್ಯಾಂಚೆಸ್ಟರ್, ಯು ಕೆ ದಲ್ಲಿ ’ಕನ್ನಡ ವೈಭವ” ಎನ್ನುವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಬಳಗ ಯು ಕೆ ಮತ್ತು ಕನ್ನಡ ಸಂಘ ನಾರ್ತ್UK ಸಹಯೋಗದಿಂದ ಅದ್ದೂರಿಯಿಂದ ಆಚರಿಸಲಾಯಿತು. ಈ ಸಲ ಎಲ್ಲ ಮಹಿಳೆಯರ ಸಾಧನೆಯನ್ನು ಸ್ಮರಿಸುತ್ತ ’ಸ್ಪಂದನ-ಸ್ತ್ರೀ ವಂದನ’ ಎಂದು ಕೊಂಡಾಡಲಾಯಿತು. ಅದರ ವರದಿಯನ್ನು ಡಾ.ವೈಶಾಲಿ ದಾಮ್ಲೆ ಅವರು ಅಚ್ಚುಕಟ್ಟಾಗಿ ಅತ್ಯಲ್ಪ ಸಮಯದಲ್ಲಿ ನಮಗೆ ಒದಗಿಸಿದ್ದಾರೆ. ಅವರು ಹಿಂದಿನ ಅನಿವಾಸಿ ಓದುಗರಿಗೆ ಅಪರಿಚಿತರೇನಲ್ಲ. ಉತ್ತರ ಯು.ಕೆ.ಯ ಬೋಲ್ಟನ್ ಪಟ್ಟಣದಲ್ಲಿ ವಾಸವಿದ್ದಾರೆ. ವೃತ್ತಿಯಲ್ಲಿ ಮನೋವೈದ್ಯೆಯಾಗಿದ್ದು ಹವ್ಯಾಸಿ ಬರಹಗಾರ್ತಿಯಾಗಿದ್ದಾರೆ. ಕನ್ನಡದ ಹಲವು ವೃತ್ತಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಟಿವಿ ಮತ್ತು ರೇಡಿಯೋಗಳಲ್ಲಿ ಸಂದರ್ಶನ ಮತ್ತು ಸಂವಾದಗಳಲ್ಲಿ ಭಾಗವಹಿಸಿದ ಅನುಭವವಿದೆ. ಕನ್ನಡ ಸಂಘ ನಾರ್ತ್ ಯುಕೆ (KSNUK) ಯ ಸ್ವಯಂ ಸೇವಕರಾಗಿದ್ದು, KBUK ಸಹಯೋಗದೊಂದಿಗೆ ಮಾಂಚೆಸ್ಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. (ಸಂ)
ಕನ್ನಡ ಬಳಗ UK (KBUK) ಮತ್ತು ಕನ್ನಡ ಸಂಘ ನಾರ್ತ್ UK (KSNUK) ಸಹಯೋಗದಲ್ಲಿ 'ಕನ್ನಡ ವೈಭವ; ಸ್ಪಂದನ- ಸ್ತ್ರೀ ವಂದನ' ಕಾರ್ಯಕ್ರಮವು 26/09/2026 ರಂದು ಮಾಂಚೆಸ್ಟರ್ ನ Wythenshawe Forum ನಲ್ಲಿ ಅದ್ದೂರಿಯಾಗಿ ನೆರವೇರಿತು. United Kingdom ನ ವಿವಿಧ ಭಾಗಗಳಿಂದ ಆಗಮಿಸಿದ್ದ ೬೦೦ ಕ್ಕೂ ಹೆಚ್ಚು ಕನ್ನಡಿಗರು ಸೇರಿ ಆಚರಿಸಿದ ಈ ಕನ್ನಡದ ಹಬ್ಬ, ಅನಿವಾಸಿ ಕನ್ನಡಿಗರ ಕನ್ನಡಪ್ರೇಮ ಮತ್ತು ಅವರ ಒಗ್ಗಟ್ಟಿಗೆ ಹಿಡಿದ ಕನ್ನಡಿಯಾಗಿತ್ತು.

ಬೆಳಗ್ಗಿನ ಕಾರ್ಯಕ್ರಮವು ಪೂಜೆ ಮತ್ತು ಪ್ರಾರ್ಥನೆಗಳೊಂದಿಗೆ ಪ್ರಾರಂಭವಾಯಿತು. ದೀಪ ಬೆಳಗಿ ಸಭಾ ಕಾರ್ಯಕ್ರಮದ ಉದ್ಘಾಟನೆ ಆದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು. ವೇದಿಕೆಯ ಮೇಲೆ ಸಾಹಿತಿ ಶ್ರೀಮತಿ ಎಂ ಆರ್ ಕಮಲಾ, ಗಾಯಕಿ ಅನುರಾಧಾ ಭಟ್ ಮತ್ತು ಶಿಕ್ಷಣ ತಜ್ಞ - ವಾಗ್ಮಿ ಗುರುರಾಜ ಕರ್ಜಗಿ ಈ ಮೂವರು ಆಮಂತ್ರಿತ ಮುಖ್ಯ ಅತಿಥಿಗಳಲ್ಲದೆ ಎರಡೂ ಸಂಘಟನೆಗಳ ಪ್ರತಿನಿಧಿಗಳಿದ್ದರು. ಅವರ ಪರವಾಗಿ ಎಲ್ಲರನ್ನೂ ಸ್ವಾಗತಿಸುತ್ತ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸುಮನಾ ಗಿರೀಶ್ ಅವರು ಯುಕೆ ಬಳಗ ಮತ್ತು 'ಸಂಘಗಳ' ಧ್ಯೇಯ ಸಾಧನೆಗಳನ್ನು, ಪರಿಚಯಿಸಿ ನಾವೆಲ್ಲಾ ಏಕಾಕಿಯಾಗಿರದೆ ವಿವಿಧ ಗುಂಪಿನ ಕನ್ನಡಿಗರು ಸಹಕರಿಸಿ ಒಗ್ಗಟ್ಟಿನಲ್ಲಿರಬೇಕಾದ ಆವಶ್ಯಕತೆ ಇಂದಿನ ಕಾಲದಲ್ಲಿ ಇದೆ ಎಂದು ಹೇಳಿದರು. ಸ್ಥಾವರಕ್ಕಳಿವುಂಟು ಜಂಗಮಕ್ಕಿಲ್ಲ ಎನ್ನುವ ವಚನವನ್ನು ನೆನಪಿಸಿದರು.
ನಂತರ ಕಾರ್ಯಕ್ರಮದಲ್ಲಿ ಚಿಣ್ಣರ ತೊದಲು ನುಡಿಯ ಹಾಡುಗಳು, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಛದ್ಮವೇಷ ಮುಂತಾದ ಹಲವಾರು ಕಾರ್ಯಕ್ರಮಗಳು ನೆರೆದವರ ಮನಸೂರೆಗೊಂಡವು. UK ಯಲ್ಲಿ ಹುಟ್ಟಿ-ಬೆಳೆಯುತ್ತಿರುವ ಮಕ್ಕಳ ಕನ್ನಡ ಪ್ರೀತಿ ಮತ್ತು ಅವರ ಉತ್ಸಾಹ ಹಿರಿಯರಿಗೂ ಮಾದರಿಯಾಗುವಂತಿತ್ತು.
ಬೆಳಿಗ್ಗೆಯ ಉದ್ಘಾಟನೆಯ ನಂತರ ಇನ್ನೊಂದು ಕಡೆ KBUK General Body Meeting ಕಾರ್ಯಕ್ರಮ ಸಾಂಗವಾಗಿ ನಡೆಯಿತು
ಮಧ್ಯಾಹ್ನದ ಸಮಯದಲ್ಲಿ ಕರ್ನಾಟಕ ಶೈಲಿಯ ಭೂರಿ-ಭೋಜನವನ್ನು ಸವಿಯುತ್ತಾ ಬಂದವರೆಲ್ಲಾ ತಮ್ಮ ಸ್ನೇಹಿತರೊಂದಿಗೆ ವಿಚಾರ-ವಿನಿಮಯ ಮಾಡುತ್ತಿರುವ ರೀತಿ ನಮ್ಮ ತವರಿನ ಹಬ್ಬದ ವಾತಾವರಣವನ್ನು ನೆನಪಿಸಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶಿತವಾದ ನೃತ್ಯ ರೂಪಕ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸಮೂಹ ನೃತ್ಯ ಮುಂತಾದುವು ನೆರೆದವರ ಮನರಂಜಿಸಿದುವು. ಆತಿಥೇಯರಾದ ಮಾಂಚೆಸ್ಟರ್ ತಂಡದವರು ಸ್ತ್ರೀ-ಶಕ್ತಿ ಮತ್ತು ಕನ್ನಡ ವೈಭವದ ಪರಿಕಲ್ಪನೆಯ ಮೇಲೆ ಪ್ರಸ್ತುತಪಡಿಸಿದ ಕಾರ್ಯಕ್ರಮವು ಎಲ್ಲರ ಮೆಚ್ಚುಗೆ ಗಳಿಸಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ| ಗುರುರಾಜ ಕರ್ಜಗಿ ಅವರು ತಮ್ಮ ಭಾಷಣದಲ್ಲಿ ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳುವ ಬಗ್ಗೆ ಮಾತನಾಡಿದರು. ಹೇಗೆ ಒಂದು ಕಿರುನಗೆ, ಒಂದು ಪ್ರೇರಣಾತ್ಮಕವಾದ ಮಾತು ಕೂಡಾ ಕಷ್ಟದಲ್ಲಿರುವವರಿಗೆ ಆಸರೆಯಾಗಬಲ್ಲದು, ಅವರ ಜೀವನದ ದಿಕ್ಕನ್ನೇ ಬದಲಿಸಬಲ್ಲುದು ಎಂಬುದನ್ನು ತಮ್ಮ ಜೀವನಾನುಭವ ಹಾಗೂ ಅನೇಕ ಕಥೆಗಳ ಮೂಲಕ ಮನಮುಟ್ಟುವಂತೆ ವಿವರಿಸಿದರು. ತಂದೆತಾಯಿಗಳು ಸಂಸ್ಕಾರವಂತರಾದಾಗ ಮಾತ್ರ ಅವರು ತಮ್ಮ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಲು ಸಾಧ್ಯ, ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಯಾವುದೇ ಕಾರ್ಯವೂ, ಕೊಡುವ ಯಾವುದೇ ವಸ್ತುವೂ ದಾನವಾಗುತ್ತದೆ, ಪ್ರತಿಫಲಾಪೇಕ್ಷೆ ಇಲ್ಲದೆ ಒಳ್ಳೆಯದನ್ನು ಮಾಡುವ ಮೌಲ್ಯವನ್ನು ನಾವೆಲ್ಲಾ ರೂಢಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದರು.

ಎಂ ಆರ್ ಕಮಲ ಅವರು ಮಾತನಾಡಿ, ‘ಕಾಲ ಬದಲಾದಂತೆ ಕನ್ನಡವೂ ಬದಲಾಗುತ್ತಿದೆ, ಬೆಳೆಯುತ್ತಿದೆ. ನಾವೂ ಅದರ ಜೊತೆ ಬೆಳೆಯಬೇಕು ' ಎಂದರು. ಅನಿವಾಸಿ ಭಾರತೀಯರ ಮಕ್ಕಳು ತಮ್ಮ ಇತಿ-ಮಿತಿಗಳಲ್ಲಿಯೂ ಕನ್ನಡವನ್ನು ಕಲಿಯುವ ಮತ್ತು ಮಾತನಾಡುವ ರೀತಿಯನ್ನು ಪ್ರಶಂಸಿಸಿದರು

ಕಾರ್ಯಕ್ರಮದ ಇನ್ನೊಬ್ಬ ಆಹ್ವಾನಿತ ಅತಿಥಿಯಾಗಿ ಆಗಮಿಸಿದ್ದ Zee ಸರೆಗಮಪ ಖ್ಯಾತಿಯ ಅನುರಾಧಾ ಭಟ್ ಅವರ ಸಂಗೀತ ಸಂಜೆ ಆಹ್ಲಾದಕರವಾಗಿತ್ತು. ಕನ್ನಡದ ಹಿರಿಯ ಗಾಯಕಿ ಎಸ್, ಜಾನಕಿಯವರಿಗೆ ಗೌರವಾರ್ಥವಾಗಿ ಸಮರ್ಪಿಸಿದ ಹಾಡುಗಳು ಸಂಗೀತ ರಸಿಕರ ಮೆಚ್ಚುಗೆಗೆ ಪಾತ್ರವಾದುವು. ಕಾರ್ಯಕ್ರಮದ ಉತ್ತರಾರ್ಧದಲ್ಲಿ ಹಾಡಿದ ಫಾಸ್ಟ್ ಹಾಡುಗಳಿಗೆ ನೆರೆದವರೆಲ್ಲ ಹೆಜ್ಜೆ ಹಾಕಿ ಮಜಾ ಮಾಡಿದರು.

ಅನಿವಾಸಿ ಕನ್ನಡಿಗ ಬರಹಗಾರರ ವೇದಿಕೆಯಾಗಿರುವ "ಅನಿವಾಸಿ" ಯ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯನ್ನು ಪ್ರಸ್ತುತಪಡಿಸಲಾಯಿತು. ಅದು ಸಾಹಿತ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು. UK ಯ ಅನೇಕ ಸಾಹಿತ್ಯಾಸಕ್ತರು ತಮ್ಮ ಕವನಗಳನ್ನು ಅತಿಥಿಗಳಾದ ಎಂ.ಆರ್. ಕಮಲ ಹಾಗೂ ಡಾ. ಗುರುರಾಜ ಕರ್ಜಗಿ ಅವರ ಎದುರು ಪ್ರಸ್ತುತ ಪಡಿಸಿದರು. (ಇದರ ವಿಸ್ತೃತ ವರದಿಯನ್ನು ಮುಂದಿನ ವಾರದ ಅನಿವಾಸಿ ಸಂಚಿಕೆಯಲ್ಲಿ ಓದುವಿರಂತೆ.)
ರುಚಿಯಾದ ನಾರ್ತ್ ಇಂಡಿಯನ್ ಊಟದೊಂದಿಗೆ ಕಾರ್ಯಕ್ರಮದ ಸಮಾಪ್ತಿಯಾಯಿತು
ಒಟ್ಟಿನಲ್ಲಿ ಇದು ಸಾಹಿತ್ಯ, ಸಂಗೀತ, ನೃತ್ಯ, ರೂಪಕ, ಉಪನ್ಯಾಸ, ರುಚಿಕರ ಊಟ, ಸ್ನೇಹಿತರ ಒಡನಾಟ ಎಲ್ಲವನ್ನೂ ಒಳಗೊಂಡ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿ ಮೂಡಿಬಂತು. ನೆರೆದವರೆಲ್ಲರೂ ಇನ್ನೂ ಬಹಳ ದಿನಗಳ ಕಾಲ ನೆನೆದು ಮೆಲುಕು ಹಾಕುವಂಥ, ಕನ್ನಡದ ಸಮಾರಂಭಗಳೆಂದರೆ ಹೀಗಿರಬೇಕು ಎಂದು ಎಲ್ಲರೂ ಉದಾಹರಿಸಬಹುದಾದಂಥ ಉತ್ಕೃಷ್ಟ ಕಾರ್ಯಕ್ರಮವಾಗಿ ಎಲ್ಲರ ಮೆಚ್ಚುಗೆ ಗಳಿಸಿತು.
–ಡಾ. ವೈಶಾಲಿ ದಾಮ್ಲೆ, ಬೋಲ್ಟನ್, ಯುಕೆ
Dr Prasad writes:
ಸಂಕ್ಷಿಪ್ತವಾದ, ಚೊಕ್ಕವಾದ, ವರದಿ. ಅತಿಥೇಯ ಕಾರ್ಯಕಾರಿ ಸಮಿತಿಯಲ್ಲಿ ಇದ್ದ ವೈಶಾಲಿ ಅವರು ಬರೆದಿರುವುದರಿಂದ ಇದು ಇನ್ನು ಅಧಿಕೃತವಾಗಿದೆ. ಮ್ಯಾಂಚೆಸ್ಟರ್ ತಂಡಕ್ಕೆ ಮತ್ತು ಕನ್ನಡ ಬಳಗಕ್ಕೆ ಅಭಿನಂದನೆಗಳು. ಸ್ಥಳೀಯ ತಂಡದವರು ನಡೆಸಿಕೊಟ್ಟ ಸ್ತ್ರೀ ಶಕ್ತಿ ಮತ್ತು ಕನ್ನಡ ವೈಭವ ವಿಶೇಷವಾಗಿತ್ತು. ಒಟ್ಟಾರೆ ಸ್ಮರಣೀಯ ಕಾರ್ಯಕ್ರಮ. ಮತ್ತೆ ನೆನಪಿಸಿದ, ಸಮಯೋಚಿತವಾದ ಬರಹಕ್ಕೆ ವೈಶಾಲಿ ಅವರಿಗೆ ಧನ್ಯವಾದಗಳು.
LikeLike