ಬರ್ಲಿನ್ ನಗರ:  ದುರಂತ ಕಥೆಗಳ ಸಂಪುಟ      

ಯುರೋಪಿನ ಪ್ಯಾರಿಸ್, ಮಿಲಾನ್, ಪ್ರಾಗ್ ಮುಂತಾದ ನಗರಗಳಿಗೆ ಹೋಲಿಸಿದರೆ ಬರ್ಲಿನ್ ನಗರ ಚಂದದ ನಗರವೇನಲ್ಲ. ಹೀಗಾಗಿಅದನ್ನು ನೋಡಬೇಕೆಂಬ ಹಂಬಲ ಹಿಂದೆ ನನಗಿರಲಿಲ್ಲ. ಕೆಲವು ವರ್ಷಗಳ ಹಿಂದೆ ಜರ್ಮನಿಯ ಇತರ ಸುಂದರ ತಾಣಗಳನ್ನುನೋಡುತ್ತಿರುವಾಗ ನನ್ನ ಅರಿವಿಗೆ ಬಂದ ಮಹಾಯುದ್ಧ, ಫ್ಯಾಸಿಸಂ ಆಡಳಿತ, ಹಾಲೋಕಾಸ್ಟ್ ಹತ್ಯಾ ಕಾಂಡ ಮತ್ತು ಮಹಾ ಯುದ್ಧದಪರಿಣಾಮಗಳು ನನ್ನಲ್ಲಿ ಬರ್ಲಿನ್ ನೋಡುವ ಆಸಕ್ತಿಯನ್ನು ಉಂಟುಮಾಡಿದವು. ಈ ಬೇಸಿಗೆ ರಜೆಯಲ್ಲಿ ನಾನು ನನ್ನಪರಿವಾರದವರೊಂದಿಗೆ ಬರ್ಲಿನ್ ಪ್ರವಾಸ ಕೈಗೊಂಡೆ. ಮ್ಯಾಂಚೆಸ್ಟರಿನಿಂದ ಬರ್ಲಿನ್ನಿಗೆ ಸುಮಾರು ಒಂದೂವರೆ ಗಂಟೆ ಪಯಣ. ನಾವುಇಳಿಯುತ್ತಿದ್ದಂತೆ ನಮ್ಮ ಜೊತೆಗಿದ್ದ ನನ್ನ ಮಗಳು ಅನನ್ಯ ಜರ್ಮನಿಯ ಜನ ತಂತ್ರಜ್ಞಾನದಲ್ಲಿ ನಿಪುಣರು, ಇಲ್ಲಿ ಎಲ್ಲವು ಸರಳ ಮತ್ತುಸರಾಗ, ಬಹಳ ಉಪಯುಕ್ತವಾದಿ (Utilitarian) ದೇಶ ಎಂದೆಲ್ಲ ತಿಳಿಸಿದಳು. ಹಿಂದೆ ಒಂದೆರಡು ಬಾರಿ ಅವಳು ಬರ್ಲಿನ್ನಿಗೆ ಬಂದುಹೋಗಿದ್ದಳು. ಜರ್ಮನ್ ತಂತ್ರಜ್ಞಾನ ನಿಖರತೆ ಮತ್ತು ನುಣುಪಿಗೆ ಹೆಸರುವಾಸಿ ಎಂದು ನನಗೆ ತಿಳಿದಿತ್ತು. ಈ ವಿಚಾರಗಳನ್ನು ಹರಟುತ್ತಇಮಿಗ್ರೇಷನ್ ಸಾಲಿನಲ್ಲಿ ನಿಂತೆವು. ಬ್ರಿಟನ್ ಪಾಸ್ಪೋರ್ಟ್ ಹೊಂದಿರುವ ನಾವುಗಳು ಯುರೋಪಿನ ಒಕ್ಕೂಟದ ಹೊರಗಿರುವ ಇತರದೇಶಗಳ ನಿವಾಸಿಗಳ ಜೊತೆ ಸಾಲಿನಲ್ಲಿ ನಿಲ್ಲಬೇಕಾಯಿತು.

ಜರ್ಮನ್ನರು ಮತ್ತು ಯುರೋಪಿಯನ್ನರು ತಮ್ಮ ಈ-ಗೇಟಿನಲ್ಲಿ ಹಾದು ಒಂದೆರಡು ನಿಮಿಷದಲ್ಲಿ ಮಾಯವಾದರು. ಕೇವಲ ಮೂರುಜನ ಇಮಿಗ್ರೇಷನ್ ಸಿಬ್ಬಂಧಿಗಳು ಇನ್ನೂರಕ್ಕೂ ಹೆಚ್ಚು ಜನರಿದ್ದ ಕ್ಯೂ ವನ್ನು ನಿಭಾಯಿಸುತ್ತಿದ್ದರು. ಒಬ್ಬೊಬರ ಬೆರಳಚ್ಚು, ಮುಖದ ಚಿತ್ರ, ಎಷ್ಟು ದಿನ ಇರುತ್ತೀರಾ, ಎಲ್ಲಿ ಉಳಿಯುತ್ತೀರಾ ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಪರವಾನಗಿ ಮುದ್ರೆ ಒತ್ತುವ ವೇಳೆಗೆ ಕ್ಯೂ ನಲ್ಲಿ ನಿಂತ ಜನರುಚಡಪಡಿಸುತ್ತಿದ್ದರು. ನಮ್ಮ ಸರದಿ ಬರುವ ಹೊತ್ತಿಗೆ ಸುಮಾರು ಎರಡು ಗಂಟೆಗಳಾದವು!! ಬಾಯಾರಿಕೆ ದಣಿವು ಆವರಿಸಿ ಬಂತು. ಯುರೋಪ್ ಒಕ್ಕೂಟವನ್ನು ಬಿಟ್ಟು ಹೊರಬಂದ ಬ್ರಿಟನ್ನಿಗರಿಗೆ ಇದು ತಕ್ಕ ಶಾಸ್ತಿ ಎಂದೆನಿಸತೊಡಗಿತು. ಬ್ರೆಕ್ಸಿಟ್ಟಿಗೆ ಕಾರಣರಾದ ಬ್ರಿಟನ್ನಿನಪ್ರಜೆಗಳನ್ನು ಮತ್ತು ರಾಜಕಾರಣಿಗಳನ್ನು ಶಪಿಸುತ್ತ ಹೊರಬಂದೆವು.

ನಾನು ಒಬ್ಬ ಶಿಸ್ತಿನ ಪ್ರವಾಸಿ. ನಾನು ಯಾವುದೇ ಹೊಸ ಜಾಗವನ್ನು ತಲುಪುವ ಮುನ್ನ ಆ ನಗರದ ಸಾರಿಗೆ ವ್ಯವಸ್ಥೆ, ನೋಡಬೇಕಾದಪ್ರೇಕ್ಷಣೀಯ ಸ್ಥಳಗಳು, ಮ್ಯೂಸಿಯಂಗಳು ಇವುಗಳ ವಿವರಣೆಗಳನ್ನು ಯು ಟ್ಯೂಬ್, ಪುಸ್ತಕ, ಮತ್ತು ಅಂತರ್ಜಾಲದಲ್ಲಿ ಸಾಕಷ್ಟುಸಂಶೋಧನೆ ಮಾಡಿ ಕೆಲವೊಮ್ಮೆ ಬೇಕಾದ ಟಿಕೆಟನ್ನು ಮುಂಗಡವಾಗಿ ಪಡೆದಿರುತ್ತೇನೆ. ಲಗೇಜ್ ಪಡೆದ ಕೂಡಲೇ ಏರ್ಪೋರ್ಟಿನಕೆಳಹಂತದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಸೀದಾ ನಡೆದೆವು. ಲಂಡನ್ ನಗರವನ್ನು ಹೊರತು ಪಡಿಸಿ ಯುರೋಪಿನ ಮುಖ್ಯನಗರಗಳಲ್ಲಿಏರ್ಪೋರ್ಟಿನಿಂದ ನಗರ ಮಧ್ಯಕ್ಕೆ ಸಮರ್ಪಕವಾದ ಫಾಸ್ಟ್ ಡಬ್ಬಲ್ ಡೆಕ್ಕರ್ ರೈಲುಗಳ ಸೌಲಭ್ಯವಿರುವುದು ಸಾಮಾನ್ಯ. ಕೇವಲ ಐದುಯುರೋ ದರದಲ್ಲಿ ಸುಖಾಸೀನ ಉಳ್ಳ ಈ ರೈಲು 20-25 ನಿಮಿಷದಲ್ಲಿ ಈ ಅಂತರವನ್ನು ಕ್ರಮಿಸಿಬಿಡುತ್ತದೆ. ಇಲ್ಲಿಯ ರೈಲುಗಳು ನುಣುಪಾದ ಹಳಿಗಳ ಮೇಲೆ ಸಾಗಿ, ಸದ್ದಿಲ್ಲದೆ ಸರಾಗವಾಗಿ, ಟೈಮಿಗೆ ಸರಿಯಾಗಿ ಕೆಲಸ ಮಾಡುತ್ತವೆ. ರೈಲು ಹತ್ತಿದ ಬಳಿಕ ಜರ್ಮನಿಯಉಪಯುಕ್ತವಾದದ ಪರಿಚಯವಾಯಿತು. ರೈಲು 12:02 ಎಂದರೆ 12:02 ಸಮಯಕ್ಕೆ ಸರಿಯಾಗಿ ಹೊರಡುತ್ತದೆ. ಒಂದು ನಿಮಿಷವೂ ತಡವಿಲ್ಲ ಮತ್ತು ಅದು ತಲುಪುವ ವೇಳೆಯೂ ಅಷ್ಟೇ ನಿಖರ!

ರೈಲು ಇಳಿದು ಬರ್ಲಿನ್ ಹ್ಯಾಪುಟ್ ಬಾನ್ ಹಾಫ್ ನಿಲ್ದಾಣದಿಂದ ಒಂದು ಟ್ಯಾಕ್ಸಿ ಹಿಡಿದು ನಾವು ಕಾದಿರಿಸಲಾಗಿದ್ದ ಅಪಾರ್ಟ್ಮೆಂಟಿಗೆ ಹೊರಟೆವು. ನಮ್ಮ ಟ್ಯಾಕ್ಸಿ ಡ್ರೈವರ್ ಅಲ್ಬೇನಿಯ ಮೂಲದವನಾಗಿದ್ದು ಅವನು ಬರ್ಲಿನ್ ನಗರಕ್ಕೆ ವಲಸೆ ಬಂದ ವಿಚಾರವನ್ನು ನಮ್ಮೊಂದಿಗೆ ಪ್ರಸ್ತಾಪಿಸಿ ತನ್ನ ಹೆಂಡತಿ ಯು.ಕೆಯ ಮ್ಯಾಂಚೆಸ್ಟರ್ ನಗರದಲ್ಲಿದ್ದು ತಾನೂ ಕೂಡ ಒಂದು ದಿನ ಬ್ರಿಟನ್ನಿಗೆ ವಲಸೆ ಬರುವ ಕನಸನ್ನುಹಂಚಿಕೊಂಡ. ಕೂಡಲೇ ನನ್ನ ತಲೆಯಲ್ಲಿ ಸಾವಿರಗಟ್ಟಲೆ ನಿರಾಶ್ರಿತರು ಫ್ರಾನ್ಸ್ ದೇಶದಿಂದ ಹೊರಟು ಒಂದು ರಬ್ಬರ್ ದೋಣಿಯಲ್ಲಿ ಕುಳಿತುಇಂಗ್ಲಿಷ್ ಚ್ಯಾನಲ್ ಸಮುದ್ರವನ್ನು ದಾಟಿ ಪೊಲೀಸರ ಕಣ್ಣು ತಪ್ಪಿಸಿ, ರಾತ್ರೋ ರಾತ್ರಿ ಮಳೆ ಚಳಿಯಲ್ಲಿ ಆಗಮಿಸುವ, ಕೆಲವೊಮ್ಮೆಸಮುದ್ರಮಾರ್ಗದಲ್ಲಿ ಮುಳುಗಡೆಯಾಗುವ ಅನೇಕ ಭಿತ್ತಿಗಳು ಹಾದು ಹೋದವು. ಬರ್ಲಿನ್ ಅಂತಹ ನಗರದಲ್ಲಿ ಸುಮ್ಮನೆ ಟ್ಯಾಕ್ಸಿಓಡಿಸಿಕೊಂಡು ನೆಮ್ಮದಿಯ ಜೀವನ ಮಾಡುವ ಬದಲು ಇಂಗ್ಲೆಂಡಿಗೆ ಬರುವ ಅವನ ಹಂಬಲ ನನಗೆ ಅಚ್ಚರಿಯನ್ನು ಉಂಟುಮಾಡಿತು. ಮನುಷ್ಯ ತಾನಿರುವ ತಾಣದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲವೇ, ವಲಸೆ ಕೆಲವರಿಗೆ ಅನಿವಾರ್ಯವೇ ಎಂಬ ಅನೇಕಪ್ರಶ್ನೆಗಳು ಉಂಟಾಗಿ ಅದರ ಹಿನ್ನೆಲೆ ಕಾರಣಗಳು ಅತ್ಯಂತ ಸಂಕೀರ್ಣವಾದದ್ದು ಎಂದೆನಿಸಿತು.

ಬರ್ಲಿನ್ ನಗರವನ್ನು ನಾವು ಅರ್ಥಮಾಡಿಕೊಳ್ಳ ಬೇಕಾದರೆ ಆದರೆ ಕೆಲವು ಮುಖ್ಯ ಹಿನ್ನೆಲೆ ವಿಚಾರಗಳನ್ನು ಅರಿತುಕೊಳ್ಳುವುದು ಅಗತ್ಯ. ಇಲ್ಲಿ ಮುಖ್ಯವಾಗಿ ಎರಡು ವಿಚಾರಗಳು. ಎರಡನೇ ಮಹಾ ಯುದ್ಧದ ಮುಂಚಿನ ಬರ್ಲಿನ್ ಮತ್ತು ಯುದ್ಧದ ನಂತರ ವಿಭಜನೆಯಾದಬರ್ಲಿನ್. ಕೊನೆಗೆ ಏಕೀಕರಣವಾದ ಜರ್ಮನಿಯ ರಾಜಧಾನಿಯಾದ ಬರ್ಲಿನ್ ಹೇಗೆ ರಕ್ತ, ಕಣ್ಣೀರು, ಬೆವರು ಮತ್ತು ಬೂದಿಯಿಂದಮೇಲೆದ್ದು ಒಂದು ಪ್ರತಿಷ್ಠಿತ ನಗರವಾಯಿತು ಎಂಬುದನ್ನೂ ಗಮನಿಸಬೇಕಾಗಿದೆ. ಚರಿತ್ರೆಯ ಹಿನ್ನೆಲೆಯಲ್ಲಿ ನೋಡಿದಾಗ ಬರ್ಲಿನ್ ಅಂತ್ಯಂತಸ್ವಾರಸ್ಯಕರವಾದ ಮತ್ತು ರೋಮಾಂಚನ ನೀಡುವ ಪ್ರೇಕ್ಷಣೀಯ ಸ್ಥಳ. ಇಲ್ಲಿ ಚರಿತ್ರೆಯು ಅಧಿಕೃತವಾಗಿ ಕಪ್ಪು ಬಿಳುಪು ಚಿತ್ರಗಳಲ್ಲಿ ಮತ್ತುದಾಖಲೆಯ ಸಂಪುಟಗಳಾಗಿ ಆಸಕ್ತರಿಗೆ ಲಭ್ಯವಾಗಿದೆ. ಜರ್ಮನ್ನರು ತಮ್ಮ ಕರಾಳ ಇತಿಹಾಸವನ್ನು ಪ್ರಾಮಾಣಿಕವಾಗಿ ನಿಸ್ಸಂಕೋಚವಾಗಿಬಹಿರಂಗ ಪ್ರದರ್ಶನಕ್ಕೆ ಇಟ್ಟು ಚರ್ಚೆಗೆ ಅವಕಾಶಮಾಡಿಕೊಟ್ಟಿದ್ದಾರೆ. ಪ್ರವಾಸಿಗರು ಅದನ್ನು ತಮ್ಮ ತಮ್ಮ ದೃಷ್ಟಿಕೋನದಲ್ಲಿ ನೋಡಿಅರ್ಥೈಸಿಕೊಳ್ಳಬಹುದು. ಪ್ರಪಂಚದ ನಾನಾ ಭಾಗಗಳಲ್ಲಿ ಚರಿತ್ರೆಯನ್ನು ತಿರುಚಿ ತಮ್ಮ ಸಿದ್ಧಾಂತಕ್ಕೆ ಹೊಂದುವಂತೆ ಮಾಡಿಕೊಂಡುಹಳೆಯದನ್ನು ಬಚ್ಚಿಡುವ ಮುಚ್ಚಿಡುವ ಅಪ್ರಾಮಾಣಿಕತೆ ಇಲ್ಲಿ ಕಂಡು ಬರುವುದಿಲ್ಲ. ಬರ್ಲಿನ್ ನಗರದಲ್ಲಿನ ಹಲವಾರು ಮ್ಯೂಸಿಯಂಗಳಲ್ಲಿ, ಸ್ಮಾರಕಗಳಲ್ಲಿ ಮಾಹಿತಿಗಳು, ಪುರಾವೆಗಳು ಯಥೇಚ್ಛವಾಗಿ ಲಭ್ಯವಾಗಿವೆ. ಬರ್ಲಿನ್ ಪ್ರವಾಸ ಮಾಡುವುದಕ್ಕೆ ಮುಂಚೆ ಈ ವಿಚಾರಗಳಹಿನ್ನೆಲೆ ಅಧ್ಯಯನ, ಅರಿವು ಪ್ರವಾಸಕ್ಕೆ ಶೈಕ್ಷಣಿಕ ಅನುಭವವನ್ನು ನೀಡುತ್ತದೆ ಮತ್ತು ಅಲ್ಲಿಯ ಅನೇಕ ವಾಕಿಂಗ್ ಟೂರ್ಆಯ್ಕೆಮಾಡಿಕೊಳ್ಳುವುದು ಒಳಿತು. ನಿರರ್ಗಳವಾಗಿ ಮಾತನಾಡುವ ಮಾರ್ಗದರ್ಶಿಗಳು ಚರಿತ್ರೆಯ ಸೂಕ್ಷ್ಮವಿಶೇಷ ಒಳನೋಟವನ್ನು ಮುಕ್ತವಾಗಿ ತೆರೆದಿಡುತ್ತಾರೆ. ಅಲ್ಲಿ ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ಬೆರೆಸದೆ ಚರಿತ್ರೆಯನ್ನುವಾಸ್ತವದ ಎಚ್ಚರದಲ್ಲಿ ಬಳಸುತ್ತಾರೆ. ಸರಿ ತಪ್ಪುಗಳು ನೋಡುಗರಿಗೆ, ಕೇಳುಗರಿಗೆ ಬಿಟ್ಟಿದ್ದು. ಚರಿತ್ರೆಯನ್ನು ಅರ್ಥಮಾಡಿಕೊಳ್ಳಬೇಕಾದರೆ, ನಾವು ಆ ಕಾಲಘಟ್ಟವನ್ನು ಮತ್ತು ಅದರ ಹಿಂದೆ ಮುಂದೆ ನಡೆದ ಸಂಗತಿಗಳನ್ನೂ ಅರಿತುಕೊಳ್ಳಬೇಕು.

ಹಿಟ್ಲರ್ ನೇತೃತ್ವದಲ್ಲಿ ಶುರುವಾದ ಎರಡನೇ ಮಹಾ ಯುದ್ಧವು ಬರ್ಲಿನ್ ಪತನವಾದ ಹಲವಾರು ತಿಂಗಳು ಬಳಿಕ ಕೊನೆಗೊಂಡಿತು. ಯುದ್ಧನಂತರದ ಜರ್ಮನಿಯನ್ನು ಯಾರು ನಿಭಾಯಿಸಬೇಕು ಎಂಬ ಬೃಹತ್ ಪ್ರಶ್ನೆ ಮೂಡಿಬಂತು. ಆಗ ಜರ್ಮನಿಯ ಪೂರ್ವ ಭಾಗವನ್ನುಸೋವಿಯತ್ ಒಕ್ಕೂಟವು ತನ್ನ ವಶಕ್ಕೆ ಪಡೆದುಕೊಂಡಿತು. ಪಶ್ಚಿಮ ಜರ್ಮನಿಯನ್ನು ಅಮೆರಿಕ, ಬ್ರಿಟನ್, ಫ್ರಾನ್ಸ್ ವಶಕ್ಕೆ ತೆಗೆದುಕೊಂಡುಬಾನ್ ನಗರವನ್ನು ರಾಜಧಾನಿಯಾಗಿ ಆಯ್ಕೆ ಮಾಡಿಕೊಂಡು ಸಲಹಿತು. ಬರ್ಲಿನ್ ಪೂರ್ವ ಜರ್ಮನಿಯ ರಾಜಧಾನಿಯಾಗಿದ್ದರೂ ಆನಗರವನ್ನು ಪೂರ್ವ ಮತ್ತು ಪಶ್ಚಿಮ ಬರ್ಲಿನ್ ಎಂದು ವಿಂಗಡಿಸಲಾಯಿತು. ಯುದ್ಧ ಮುಗಿದ ನಾಲ್ಕು ವರ್ಷಗಳ ನಂತರ ಜರ್ಮನಿಯಪುನರುತ್ಥಾನದ ಬಗ್ಗೆ ರಷ್ಯಾ ಮತ್ತು ಅಮೆರಿಕ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾದವು. ಇದು ನಮಗೆಲ್ಲ ತಿಳಿದ ಚಾರಿತ್ರಿಕ ಶೀತಲಸಮರಕ್ಕೆ (Cold War) ನಾಂದಿಯಾಯಿತು. ಪಶ್ಚಿಮ ಜರ್ಮನಿಯಲ್ಲಿ ಹೆಚ್ಚು ಕೈಗಾರಿಕೆ, ಪ್ರಗತಿ, ಆರ್ಥಿಕ ಬೆಳವಣಿಗೆಗಳು ಉಂಟಾಗಿಪೂರ್ವ ಜರ್ಮನಿಯ ಸುಶಿಕ್ಷಿತರು, ಕಲಾವಿದರು, ಪ್ರಾಜ್ಞರು, ವಿಜ್ಞಾನಿಗಳು ಪಶ್ಚಿಮ ಜರ್ಮನಿಗೆ ವಲಸೆ ಹೊರಡಲು ಶುರು ಮಾಡಿದರು. ರಷ್ಯಾ ದೇಶದ ಆಶ್ರಯದಲ್ಲಿ ಪೋಲೆಂಡ್, ಹಂಗರಿ, ಜಕಸ್ಲೋವಾಕಿಯಾ ಮತ್ತಿತರ ಪೂರ್ವ ಯುರೋಪಿಯನ್ ದೇಶಗಳು ಈಸ್ಟರ್ನ್ ಬ್ಲಾಕ್ (Eastern Bloc) ಎಂಬ ಹೆಸರಿನಲ್ಲಿ ಒಕ್ಕೂಟವಾಗಿ ಮತ್ತು ಪಶ್ಚಿಮ ಯುರೋಪಿನಲ್ಲಿ ಅಮೆರಿಕ ಮೈತ್ರಿದೇಶಗಳು ನೇಟೊ (Nato) ಒಕ್ಕೂಟವಾಗಿ ಇವೆರಡು ಒಕ್ಕೂಟಗಳ ನಡುವೆ ಸೈಧಾಂತಿಕ ಭಿನ್ನಾಭಿಪ್ರಾಯಗಳು ಮೂಡಿ ಈಸ್ಟರ್ನ್ ಬ್ಲಾಕ್ ಒಂದು ಕಾಲ್ಪನಿಕ ಕಬ್ಬಿಣದಪರದೆಯ (Iron Curtain) ಹಿಂದೆ ಸರಿಯಿತು. ವಾಸ್ತವದಲ್ಲಿ ಎರಡು ಒಕ್ಕೂಟಗಳ ನಡುವೆ ಮುಳ್ಳು ತಂತಿ ಬೇಲಿ, ಗೋಡೆ ಇವುಗಳುಹುಟ್ಟಿಕೊಂಡಿತು. ಎರಡೂ ಒಕ್ಕೂಟಗಳಿಗೂ ಬರ್ಲಿನ್ ನಗರವನ್ನು ಬಿಟ್ಟುಕೊಡುವ ಉದ್ದೇಶವಿರಲಿಲ್ಲ. ಪಶ್ಚಿಮ ಬರ್ಲಿನ್ ನಗರದಲ್ಲಿ ಹೆಚ್ಚುಸಮೃದ್ಧಿ, ಉದ್ಯೋಗ ಅವಕಾಶ, ಮುಕ್ತ ಮಾರುಕಟ್ಟೆ ಇದ್ದು ಪೂರ್ವ ಜರ್ಮನಿಯ ಜನರು ತಂಡೋಪತಂಡವಾಗಿ ಪಶ್ಚಿಮ ಬರ್ಲಿನಿಗೆ ಬಂದುನೆಲೆಸಲು ಮೊದಲುಗೊಂಡರು. ಈ ಒಂದು ವಲಸೆಯನ್ನು ನಿಲ್ಲಿಸುವ ಸಲುವಾಗಿ ಸೋವಿಯತ್ ರಷ್ಯಾ ಪ್ರಖ್ಯಾತ ಬರ್ಲಿನ್ ಗೋಡೆಯನ್ನು (Berlin Wall) ನಿರ್ಮಿಸಲು ನಿರ್ಧರಿಸಿತು. ಈ ಗೋಡೆ ಎರಡು ವಿಭಿನ್ನ ದೇಶ, ಧರ್ಮ ಮತ್ತು ಸಂಸ್ಕೃತಿಯನ್ನು ಬೇರ್ಪಡಿಸುವಗೋಡೆಯಾಗಿರಲಿಲ್ಲ. ಬದಲಿಗೆ ಒಂದೇ ದೇಶದ, ಒಂದೇ ಭಾಷೆಯ, ಒಂದೇ ಪರಿವಾರದ, ಮಿತ್ರರ, ಹಿತೈಷಿಗಳ ನಡುವೆ ಕಟ್ಟಿದ ಗೋಡೆಇದಾಗಿತ್ತು. ನಾಜಿ ಆಡಳಿತ ಮತ್ತು ಯುದ್ಧದ ಪರಿಣಾಮಗಳನ್ನೂ ಎದುರಿಸಿ ಇನ್ನೇನು ಜರ್ಮನಿ ದೇಶವು ಮುಕ್ತವಾಯಿತು ಎಂದು ನಿಟ್ಟುಸಿರುಬಿಡುತ್ತಿರುವಾಗ ಧುತ್ತನೆ ಮೇಲೆದ್ದ ಈ ಗೋಡೆ ಮನಸ್ಸುಗಳನ್ನು ಹೃದಯಗಳನ್ನು ವಿಭಜಿಸಿತು. ಇದು ಸ್ವಲ್ಪ ಮಟ್ಟಿಗೆ ಭಾರತ ಮತ್ತು ಪಾಕಿಸ್ತಾನನಡುವಿನ ಚಾರಿತ್ರಿಕ ವಿಭಜನೆಯ ನೋವು, ಅಸಹಾಯಕತೆ, ಖಿನ್ನತೆ ಇವುಗಳನ್ನು ನೆನಪಿಗೆ ತರುತ್ತದೆ. ಬರ್ಲಿನ್ ಗೋಡೆ ಒಂದು ನೇರಗೆರೆಯಾಗಿರಲಿಲ್ಲ. ಅದು ಅಂಕು ಡೊಂಕಾಗಿ ಹಬ್ಬಿದ ಗೋಡೆಯಾಗಿತ್ತು. ಇಲ್ಲಿ ಇನ್ನೊಂದು ವಿಶೇಷವೆಂದರೆ ಪಶ್ಚಿಮ ಬರ್ಲಿನ್ ನಿವಾಸಿಗಳುಒಂದು ದಿನದ ಮಟ್ಟಿಗೆ ಪೂರ್ವ ಜರ್ಮನಿಗೆ ಹೋಗಿ ಅಲ್ಲಿ ತಮ್ಮ ಬಂಧು ಮಿತ್ರರನ್ನು ನೋಡಿಕೊಂಡು ಬರಬಹುದಾಗಿತ್ತು. ಆದರೆ ಪೂರ್ವಬರ್ಲಿನ್ ನಿವಾಸಿಗಳು ಈ ಗೋಡೆಯನ್ನು ದಾಟುವಂತಿರಲಿಲ್ಲ. ಅದು ಕಟ್ಟಾಜ್ಞೆಯಾಗಿತ್ತು. ಪೂರ್ವ ಬರ್ಲಿನ್ ನಗರವೇ ಒಂದು ಬಹಿರಂಗಜೈಲಿನಂತೆ ಕೆಲಸ ಮಾಡುತ್ತಿತ್ತು. ಆ ಗೋಡೆಯ ಮಧ್ಯೆ ಭದ್ರತಾ ಬಾಗಿಲುಗಳಿದ್ದು ಅಲ್ಲಿಯ ಸಭಾಂಗಣದಲ್ಲಿ ಹತ್ತಿರದವರು, ಪ್ರೇಮಿಗಳು, ಬಂಧುಗಳು ಆಲಿಂಗಿಸಿ ಬೀಳ್ಕೊಡುತ್ತಿದ್ದಾಗ ಭಾವೋದ್ವೇಗದಿಂದ ಕಣ್ಣೀರು ಉಕ್ಕಿ ಹರಿಯುತ್ತಿತ್ತು. ಈ ಸಭಾಂಗಣವನ್ನು ‘ಕಣ್ಣೀರಿನಅರಮನೆ’ಯೆಂದು (Palace of tears) ಕರೆಯಲಾಗಿದ್ದು ಇಂದು ಅದನ್ನು ಒಂದು ಮ್ಯೂಸಿಯಂ ಆಗಿ ಉಳಿಸಿಕೊಳ್ಳಲಾಗಿದೆ.

ರಷ್ಯನ್ನರು 1961ರ ಆಗಸ್ಟಿನಲ್ಲಿ ಗೋಡೆಯ ಮೊದಲ ಆವೃತ್ತಿಯನ್ನು ನಿಲ್ಲಿಸಲಾಗಿದ್ದು ಅದನ್ನು ಮುಂದಕ್ಕೆ ಹೆಚ್ಚು ಸಂಕೀರ್ಣಗೊಳಿಸಲಾಯಿತು. ಈ ಗೋಡೆ ಸಾಧಾರಣ ಇಟ್ಟಿಗೆಯ ಗೋಡೆಯಲ್ಲ. ಈ ಹನ್ನೆರಡು ಅಡಿ ಕಾಂಕ್ರೀಟ್ ಗೋಡೆಯು ಸುಮಾರು 140 ಕಿಲೀಮೀಟರ್ ಉದ್ದವಾಗಿದ್ದು, ಇಲ್ಲಿ ಒಳಗೋಡೆ ಮತ್ತು ಹೊರಗೋಡೆ ಎಂಬ ಪರ್ಯಾಯ ಅಡಚಣೆಯನ್ನು ನಿರ್ಮಿಸಲಾಯಿತು. ಇವೆರಡರ ಮಧ್ಯೆ ಇನ್ನೂರು ಮುನ್ನೂರು ಅಡಿ ಮರಳನ್ನು ಹಾಸಿ ಅಲ್ಲಿ ಬೇಟೆ ನಾಯಿಗಳನ್ನು ಬಿಟ್ಟಿದ್ದರು. ಗೋಡೆಯ ಬದಿಯಲ್ಲಿ ಚೂಪಾದ ತಂತಿ ಬೇಲಿಯನ್ನು ಅಳವಡಿಸಿ ಕಾಲಿಟ್ಟರೆ ಚುಚ್ಚುವ ಉಕ್ಕಿನ ಮೊಳೆಗಳ ಹಾಸನ್ನು ಹಾಸಿದ್ದರು. ಇಷ್ಟು ಸಾಲದು ಎಂಬಂತೆ ಮಧ್ಯೆ ಮಧ್ಯೆ ಸೆಂಟರಿ ಗೋಪುರಗಳನ್ನು ಕಟ್ಟಿ ಅಲ್ಲಿ ಹಗಲು ರಾತ್ರಿ ಕಾವಲು ಕಾಯುವ ಬಂದೂಕ ಹಿಡಿದ ಸೈನಿಕರು ಯಾರಾದರೂ ಈ ಗೋಡೆಯನ್ನು ದಾಟುವ ಪ್ರಯತ್ನ ಮಾಡಿದ್ದಲ್ಲಿ ಕೂಡಲೇ ಅವರನ್ನು ಗುಂಡಿಕ್ಕಿ ಕೊಲ್ಲಬಹುದಿತ್ತು!

ಒಟ್ಟಾರೆ ಸುಮಾರು 200 ಪೂರ್ವ ಜರ್ಮನಿಯ ಜನಸಾಮಾನ್ಯರು ಗೋಡೆಯನ್ನು ದಾಟಲು ಯತ್ನಿಸಿ ಸತ್ತಿದ್ದಾರೆನ್ನಲಾಗಿದೆ. ಕಮ್ಯುನಿಸ್ಟರ ಉಸಿರುಕಟ್ಟುವ, ದಮನಕಾರಿ ಆಡಳಿತದಿಂದ ತಪ್ಪಿಸಿಕೊಳ್ಳಲು ಪೂರ್ವ ಜರ್ಮನಿಯ ಜನಸಾಮಾನ್ಯರು ಏನೆಲ್ಲಾ ಪ್ರಯತ್ನ ಮಾಡಿದರು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟ. ಬರ್ಲಿನ್ ಗೋಡೆಯ ಕೆಳಗೆ ಗುಪ್ತವಾಗಿ ಸುರಂಗಗಳನ್ನು ಕೊರೆದು ನೂರಾರು ಜನ ಪಶ್ಚಿಮ ಜರ್ಮನಿಗೆ ಓಡಿಹೋದರು. ಇನ್ನು ಕೆಲವರು ಹಾಟ್ ಏರ್ ಬಲೂನುಗಳಲ್ಲಿ ಗೋಡೆಯನ್ನು ದಾಟಿದರು. ಸ್ವಾತಂತ್ರ್ಯದ ರುಚಿ ಜನರನ್ನು ಅಯಸ್ಕಾಂತದಂತೆ ಸೆಳೆದಿತ್ತು. ರಷ್ಯನ್ನರು ಪೂರ್ವ ಬರ್ಲಿನ್ ಜನರನ್ನು ಈ ರೀತಿ ನಿಯಂತ್ರಿಸಿದ್ದನು ಗಮನಿಸಿದಾಗ ಅವರಿಗೂ ನಾಜಿಗಳಿಗೂ ಏನು ವ್ಯತ್ಯಾಸ ಎಂಬ ಆಲೋಚನೆ ಮೂಡಿ ಬರುತ್ತದೆ. ಹಿಟ್ಲರ್ ಬಿಗಿ ಮುಷ್ಠಿಯಿಂದ ಮುಕ್ತವಾದ ಪೂರ್ವ ಜರ್ಮನ್ನರು ಈ ರಷ್ಯನ್ನರಿಂದ ಮತ್ತೊಂದು ದುರಂತಕ್ಕೆ ಒಳಗಾಗಿದ್ದು ಶೋಚನೀಯ. ಈ ಗೋಡೆಯನ್ನು ಕಟ್ಟುವಾಗ ಅನೇಕ ಪ್ರತಿಭಟನೆಗಳು ಉಂಟಾದವು. ರಷ್ಯಾ ಮತ್ತು ಅಮೆರಿಕ ಸೈನ್ಯ, ಟ್ಯಾಂಕುಗಳು ಗೋಡೆಯ ಆಚೆ ಈಚೆ ಸಮರಕ್ಕೆ ರೆಡಿಯಾಗಿ ನಿಂತವು. “ಚೆಕ್ ಪಾಯಿಂಟ್ ಚಾರ್ಲಿ” ಎಂಬ ಚಾರಿತ್ರಿಕ ತಾಣದಲ್ಲಿ ಎರಡು ಮಹಾ ಶಕ್ತಿಗಳು ಮುಖಾ ಮುಖಿಯಾದವು. ಸಧ್ಯ ಇದು ಇನ್ನೊಂದು ಮಹಾ ಯುದ್ಧಕ್ಕೆ ಕಾರಣವಾಗಲಿಲ್ಲ. ಅಮೆರಿಕ ಮತ್ತು ರಷ್ಯಾ ಸೈನ್ಯಗಳು ಒಗ್ಗಟ್ಟಿನಿಂದ ಹಿಟ್ಲರನ್ನು ಸೋಲಿಸಿದ್ದು, ಎರಡನೇ ಮಹಾ ಯುದ್ಧ ನಂತರ ಈ ಎರಡು ರಾಷ್ಟ್ರಗಳ ನಡುವೆ ವೈಷಮ್ಯ ಉಂಟಾಗಿದ್ದು ದುರದೃಷ್ಟಕರ. ಕಮ್ಯುನಿಸ್ಟ್ ಆಡಳಿತವನ್ನು ಪೂರ್ವ ಜರ್ಮನ್ ಜನರ ಮೇಲೆ ಒತ್ತಾಯವಾಗಿ ಹೇರಲಾಗಿತ್ತು ಮತ್ತು ಪ್ರತಿಭಟನೆಯನ್ನು ನಿಷೇಧಿಸಲಾಗಿತ್ತು. ಇದೆಲ್ಲ ಜರ್ಮನಿಯ ಜನರ ಆಯ್ಕೆಯಾಗಿರಲಿಲ್ಲ. ಅವರಿಗೆ ಈ ವಿಭಜನೆ ಬೇಕಿರಲಿಲ್ಲ. ಇದು ಹಿಟ್ಲರ್ ತಂದ ಪರಿಣಾಮಗಳು ಎಂದು ಪರಿಗಣಿಸಬಹುದು. ಎರಡನೇ ಮಹಾ ಯುದ್ಧದಲ್ಲಿ ಮೈತ್ರಿಕೂಟಗಳಾಗಿದ್ದ ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಯುದ್ಧ ನಂತರದಲ್ಲಿ ಜರ್ಮನಿಯ ಈ ವಿಭಜನೆಗೆ ಕಾರಣವಾಗಿದ್ದವು. ‘ಹಾಳೂರಿಗೆ ಉಳಿದವನೇ ಗೌಡ’ ಎಂಬಂತೆ ಹೊರಗಿನವರು ಜರ್ಮನಿಯನ್ನು ಆಳುತ್ತಿದ್ದರು. ಹಿಂದಿನ ಚರಿತ್ರೆಯನ್ನು ಗಮನಿಸಿದಾಗ ಮೊದಲನೇ ಮತ್ತು ಎರಡನೇ ಮಹಾ ಯುದ್ಧದಲ್ಲಿ ಜರ್ಮನಿಯು ರಷ್ಯಾ ದೇಶದ ಜನರಿಗೆ ಸಾಕಷ್ಟು ಸಾವು, ನೋವು ಮತ್ತು ಹಾನಿಯನ್ನು ಉಂಟುಮಾಡಿದ್ದರು. ಹೀಗಾಗಿ ರಷ್ಯಾಗೆ ಜರ್ಮನಿಯ ಮೇಲೆ ದ್ವೇಷವಿದ್ದುದು ಸಹಜವೇ. ನಾನು ಬರ್ಲಿನ್ ಪ್ರವಾಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನಮಗೆ ಪರಿಚಯವಾದ ರಷ್ಯನ್ ಪ್ರಜೆಯೊಬ್ಬ ಎರಡನೇ ಮಹಾ ಯುದ್ಧದಲ್ಲಿ ತಾವು ಹೇಗೆ ಜರ್ಮನಿಯನ್ನು ನಾಜಿ ಆಡಳಿತದಿಂದ ಮುಕ್ತಗೊಳಿಸಿದೆವು ಎಂಬುದನ್ನು ವಿವರಿಸಿ, ನಂತರ ಹೇಗೆ ಮುಂದಕ್ಕೆ ಜರ್ಮನಿಯು ರಷ್ಯಾ ದೇಶದ ಜನಕ್ಕೆ ವಿಶ್ವಾಸ ಘಾತುಕರಾಗಿದ್ದರೆ ಎಂದು ತಿಳಿಸಿದ. ಅವನ ಮಾತುಗಳಲ್ಲಿ ಜರ್ಮನಿಯ ಬಗ್ಗೆ ಅವನಿಗಿದ್ದ ತಿರಸ್ಕಾರ ಮತ್ತು ನಿಕೃಷ್ಟ ಭಾವನೆ ಎದ್ದು ಕಾಣುತ್ತಿತ್ತು. ಇಬ್ಬರು ಚಾರಿತ್ರಿಕ ವೈರಿಗಳ ನಡುವೆ ಯಾರು ಸರಿ ಯಾರು ತಪ್ಪಿಸ್ಥರು ಎಂಬುದನ್ನು ನಿರ್ಧರಿಸುವುದು ಕಷ್ಟದ ಕೆಲಸ. ಕೆಲವೊಮ್ಮೆ ಕಾಲಘಟ್ಟವೆಂಬ ಚೌಕಟ್ಟನ್ನು ಇಟ್ಟು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಚರಿತ್ರೆ ಭವಿಷ್ಯದ ಸರಿಯಾದ ಹಾದಿಯನ್ನು ಕಂಡುಕೊಳ್ಳಲು ನೆರವಾಗಬೇಕು. ಹಿಂದೆ ಏನಾಯಿತು ಎಂಬುದನ್ನು ಹಿಂದಕ್ಕೇ ಬಿಟ್ಟು, ಮುಂದಕ್ಕೆ ಏನು ಆಯ್ಕೆಗಳಿವೆ, ಏನು ಮಾಡಬಹುದು ಎಂದು ಆಲೋಚಿಸುವಲ್ಲಿ ವಿವೇಕವಿದೆ. ರಷ್ಯಾ ಮತ್ತು ಜರ್ಮನಿಯ ನಡುವಿನ ಹಿಂದಿನ ಸಂಘರ್ಷಣೆಯ ಹಿನ್ನೆಲೆಯಲ್ಲಿ ಈಗ ಯುರೋಪಿನ ದ್ವಾರದಲ್ಲಿ ನಡೆಯುತ್ತಿರುವ ರಷ್ಯಾ ಮತ್ತು ಯೂಕ್ರೈನ್ ದೇಶಗಳ ನಡುವಿನ ಯುದ್ಧದಲ್ಲಿ ಜರ್ಮನಿಯ ಪಾತ್ರವೇನು, ಅದು ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಬರ್ಲಿನ್ ಗೋಡೆ ಎದ್ದಿರುವುದು ಮಾನವ ಇತಿಹಾಸದಲ್ಲಿ ನಾಚಿಕೆಗೇಡಿನ ವಿಷಯವೆಂದು, ಈ ಗೋಡೆಯನ್ನು ಕೆಳಕ್ಕೆ ಉರುಳಿಸ ಬೇಕೆಂದು, ಜರ್ಮನಿಯ ವಿಭಜನೆಯನ್ನು ಕೊನೆಗಾಣಿಸಿ ಪೂರ್ವ ಜರ್ಮನಿಯ ಜನರಿಗೆ ಸ್ವಾತಂತ್ರ್ಯವನ್ನು ನೀಡಬೇಕೆಂದು ಕೆನಡಿಯಿಂದ ಹಿಡಿದು ರೇಗನ್ ವರೆಗೆ ಅನೇಕ ಅಮೆರಿಕ ಅಧ್ಯಕ್ಷರು ಬರ್ಲಿನ್ನಿಗೆ ಬಂದು ಕರೆ ಕೊಟ್ಟರು. 1987ರಲ್ಲಿ ಸಂಗೀತಗಾರ, ಖ್ಯಾತ ಕಲಾವಿದ ಡೇವಿಡ್ ಬೋವಿ ಬರ್ಲಿನ್ ಗೋಡೆಯ ಬಳಿ ತನ್ನ ಸಂಗೀತ ಕಚೇರಿಯನ್ನು ಏರ್ಪಡಿಸಿ ಗೋಡೆಯ ಎರಡು ಕಡೆ ಜನಕ್ಕೆ ಕೇಳುವ ಅವಕಾಶ ಮಾಡಿಕೊಟ್ಟು ಭ್ರಾತುತ್ವ ಭಾವನೆಯನ್ನು ಜನರಲ್ಲಿ ಮೂಡಿಸಿದ. ಕಚೇರಿ ಮುಗಿದ ನಂತರ ಗೋಡೆಯ ಬಳಿ ರಷ್ಯನ್ ಆಡಳಿತದ ವಿರುದ್ಧ ಪ್ರತಿಭಟನೆ ಸಂಘರ್ಷಗಳು ನಡೆದವು. ಹಲವಾರು ಖ್ಯಾತ ಸಂಗೀತಗಾರರು, ಕಲಾವಿದರು ಜರ್ಮನಿಯ ಏಕೀಕರಣಕ್ಕೆ ಮತ್ತು ಬರ್ಲಿನ್ ಗೋಡೆಯ ಪತನಕ್ಕೆ ಪ್ರಚೋದನೆ ನೀಡಿದರು. 1989ರ ಹೊತ್ತಿಗೆ ಪೋಲೆಂಡ್ ಹಂಗೇರಿ ಮುಂತಾದ ದೇಶಗಳು ರಷ್ಯನ್ ಆಡಳಿತದಿಂದ ಸಡಿಲಗೊಂಡವು. ರಷ್ಯಾ ದೇಶದಲ್ಲಿನ ಆಂತರಿಕ ಆರ್ಥಿಕ ಬಿಕ್ಕಟುಗಳಿಂದ ಈಸ್ಟರ್ನ್ ಬ್ಲಾಕ್ ನಿಭಾಯಿಸುವುದು ಕಷ್ಟಕರವಾಗ ತೊಡಗಿತು. ಅನೇಕ ಪೂರ್ವ ಜರ್ಮನಿಯ ಜನರು ರಷ್ಯನ್ನರ ಈ ಬಲಹೀನ ಪರಿಸ್ಥಿಯಲ್ಲಿ ನೆರೆ ರಾಷ್ಟ್ರಗಳಾದ ಹಂಗೇರಿ, ಚೆಕೋಸ್ಲಾವಾಕಿಯ ಮೂಲಕ ಪೂರ್ವ ಜರ್ಮನಿಯನ್ನು ಬಿಟ್ಟು ಅಧಿಕ ಸಂಖ್ಯೆಯಲ್ಲಿ ಪಶ್ಚಿಮ ಜರ್ಮನಿಗೆ ವಲಸೆ ಹೊರಡಲು ಮೊದಲಾದರು. ಪೂರ್ವ ಜರ್ಮನಿಯ ಜನರು ದಂಗೆ ಎದ್ದರು, ಇದನ್ನು ಶಾಂತಿಯುತವಾದ ಕ್ರಾಂತಿ ಎಂದು ಕರೆದರು. 1989ರ ನವೆಂಬರ್ 9ನೇ ತಾರೀಕು ಬರ್ಲಿನ್ ಇತಿಹಾಸದಲ್ಲಿ ಒಂದು ಗಮನಾರ್ಹ ದಿನ. ಅಂದು ಪೂರ್ವ ಬರ್ಲಿನ್ ಕಮ್ಯುನಿಸ್ಟ್ ವಕ್ತಾರನಾದ ಗುಂಟರ್ ಶಾಬಾಸ್ಕಿ ಬರ್ಲಿನ್ ಗೋಡೆಯ ಎಲ್ಲ ಬಾಗಿಲುಗಳನ್ನು ಕೂಡಲೇ ತೆರೆಯಲಾಗುವುದೆಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದ. ಜನ ಬಾಗಿಲುಗಳ ಮೂಲಕ ಬರ್ಲಿನ್ ಗೋಡೆಯನ್ನು ದಾಟಿದರು, ಗೋಡೆಯ ಆಚೆಕಡೆ ಪಶ್ಚಿಮ ಬರ್ಲಿನ್ ಜನರು ಒಳಬಂದವರನ್ನು ಆಲಿಂಗಿಸಿ ಸ್ವಾಗತಿಸಿದರು. ಬರ್ಲಿನ್ ಗೋಡೆ ಕೊನೆಗೂ ಉರುಳಿತು! ಬರ್ಲಿನ್ ಗೋಡೆ ಉರುಳಿದ ಸಮಯದಲ್ಲಿ ಮಿಖಾಯಿಲ್ ಗೋರ್ಬಚವ್ ಸೋವಿಯತ್ರಷ್ಯಾ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ ಮಹಾ ಕಾರ್ಯದರ್ಶಿಯಾಗಿದ್ದ. ಇದ್ದುದರಲ್ಲಿ ಗೋರ್ಬಚವಿನ ಉದಾರ ನೀತಿಗಳು, ಹೊಸ ಚಿಂತನೆಗಳು ಬರ್ಲಿನ್ ಗೋಡೆ ಉರುಳಲು ಮತ್ತು ಜರ್ಮನಿಯ ಏಕೀಕರಣಕ್ಕೆ ಸಹಕಾರ ನೀಡಿದವು. ಕಾಲ ಕ್ರಮೇಣ ಬಹುಪಾಲು ಬರ್ಲಿನ್ ಗೋಡೆಯನ್ನು ಹೊಡೆದು ಕೆಳಕ್ಕೆ ಉರುಳಿಸಲಾಯಿತು. ಬರ್ಲಿನ್ ನಗರದಲ್ಲಿ ಕೆಲವುಕಡೆ ಅದನ್ನು ಸ್ಮಾರಕದಂತೆ ಉಳಿಸಿಕೊಳ್ಳಲಾಗಿದೆ. ಇಂದಿನ ಬರ್ಲಿನ್ ನಗರದಲ್ಲಿ ಗಮನವಿಟ್ಟು ನೋಡಿದಾಗ ಮಾತ್ರ ಕಾಲಡಿಯಲ್ಲಿ ಹಾವಿನಂತೆ ಹರಿದು ಹೋಗುವ ಗೋಡೆಯ ಅಡಿಪಾಯದ ಕಲ್ಲುಗಳು ಅವಶೇಷವಾಗಿ ಉಳಿದಿವೆ. ಹಿಂದೊಮ್ಮೆ ನಮ್ಮ ನಗರ ಹೀಗೆ ಇಬ್ಭಾಗವಾಗಿತ್ತು ಎಂಬ ವಿಚಾರವನ್ನು ಪಿಸುಮಾತಿನಲ್ಲಿ ಈ ಕಲ್ಲುಗಳು ನುಡಿಯುತ್ತವೆ. ಆಧಿನಿಕ ಬರ್ಲಿನ್ ನಗರದಲ್ಲಿ ಹೆಜ್ಜೆ ಇಟ್ಟ ಕಡೆಯೆಲ್ಲಾ ಒಂದು ದಾರುಣ ಕಥೆ ಇದೆ. ಇಡೀ ನಗರವೇ ದಾರುಣ ಕಥೆಗಳ ಸಂಪುಟ.

ಆಧುನಿಕ ಬರ್ಲಿನ್ ನಗರದ ಪೂರ್ವ ಪ್ರದೇಶದಲ್ಲಿ ಸುಮಾರು ಒಂದೂವರೆ ಕಿಲೋಮೀಟರು ಅಷ್ಟು ಬರ್ಲಿನ್ ಗೋಡೆಯನ್ನು ಉಳಿಸಿಕೊಂಡು ಅದರ ಮೇಲೆ ತರಾವರಿಯ ಬಣ್ಣ ಬಣ್ಣದ ಗ್ರಾಫಿಟಿ ಚಿತ್ರಗಳನ್ನು ಖ್ಯಾತ ಕಲಾವಿದರು ಬಿಡಿಸಿದ್ದಾರೆ. ಅನೇಕ ಚಿತ್ರಗಳು ಆಕ್ರಮಣ, ಬಂಧನೆ, ಬಿಡುಗಡೆ, ಸ್ವಾತಂತ್ರ್ಯ ಇವುಗಳ ರೂಪಕವಾಗಿ ಮೂಡಿದೆ. ಇಲ್ಲಿ ಖ್ಯಾತ ಕಲಾವಿದ ದಿಮಿತ್ರಿ ವ್ರುಬೆಲ್ ಅವರ “ಸಾಮಾಜಿಕ ಭ್ರಾತುತ್ವದ ಚುಂಬನ” (Socialist Fraternal Kiss) ಎಂಬ ಪ್ರಖ್ಯಾತ ನಿಗೂಢ ಕಲೆಯಿದೆ. ಇದು ರಷ್ಯಾದ ನಾಯಕ ಬ್ರೇಜ್ನೆವ್ ಮತ್ತು ಪೂರ್ವ ಜರ್ಮನಿಯ ನಾಯಕ ಎರಿಕ್ ಹಾಂಕರ್, ಈ ಇಬ್ಬರೂ ಗಂಡಸರು ಗಾಢ ಚುಂಬನದಲ್ಲಿ ತೊಡಗಿರುವ ಚಿತ್ರವಾಗಿದೆ. ಈ ಗ್ರಾಫಿಟಿ ಕಾಲ್ಪನಿಕವಲ್ಲ. ಇದು ಹಿಂದೆ ತೆಗೆದ ನಿಜ ಫೋಟೋವನ್ನು ಆಧರಿಸಿ ಮೂಡಿಸಿದ ಚಿತ್ರ! ಗೋಡೆ ಉರುಳುವ ಮುನ್ನ ಸೋವಿಯತ್ ರಷ್ಯಾ ಮತ್ತು ಪೂರ್ವ ಜರ್ಮನಿ ನಡುವೆ ಇದ್ದ ರಾಜಕೀಯ ನಂಟಸ್ತನ ಮತ್ತು ಅದರ ಆತ್ಮೀಯತೆಯನ್ನು ಈ ಚಿತ್ರ ಅತ್ಯಂತ ಪರಿಣಾಮಕಾರಿಯಾಗಿ ಸೆರೆ ಹಿಡಿದಿದೆ. ಇಂದಿನ ಆಧುನಿಕ ಬರ್ಲಿನ್ ನಗರದ ಪೂರ್ವ ಮತ್ತು ಪಶ್ಚಿಮ ಪ್ರದೇಶಗಳು ಎರಡು ಸಂಸ್ಕೃತಿಗಳ ವೈವಿಧ್ಯತೆಯನ್ನು ವೈರುಧ್ಯತೆಗಳನ್ನು ಎತ್ತಿ ತೋರುತ್ತದೆ. ಪಶ್ಚಿಮ ಬರ್ಲಿನ್ ನಗರದಲ್ಲಿ ಒಳ್ಳೊಳ್ಳೆ ಪಾರ್ಕುಗಳು, ಯುರೋಪಿಯನ್ವಿನ್ಯಾಸಉಳ್ಳ ಚೆಂದದ ಕ್ಲಾಸ್ಸಿಕ್ ಕಟ್ಟಡಗಳು, ಶ್ರೀಮಂತಿಕೆ ಎದ್ದು ಕಾಣುತ್ತದೆ. ನಗರ ಮಧ್ಯದಲ್ಲಿ ಹರಿಯುವ ಸ್ಪ್ರೀ ನದಿಯನ್ನು ದಾಟಿ ಪೂರ್ವಕ್ಕೆ ನಡೆದರೆ ಅಲ್ಲಿ ಏಕರೂಪತೆಯೇ ಪ್ರಧಾನವಾಗಿ ಕಾರ್ಡ್ ಬೋರ್ಡ್ ಡಬ್ಬಗಳಂತೆ ತೋರುವ ಕಟ್ಟಡಗಳಿವೆ. ಎಲ್ಲ ಮನೆಗಳ, ಕಿಟಕಿಗಳ, ಬಾಗಿಲುಗಳ, ಛಾವಣಿಗಳ, ವಿನ್ಯಾಸ ಒಂದೇ. ಕೆಲವು ಕಡೆ ಬಣ್ಣವೂ ಒಂದೇ. ಇದು ಕಮ್ಯುನಿಸ್ಟ್ ಸಿದ್ಧಾಂತವನ್ನು ಬಿಂಬಿಸುವ ವಿನ್ಯಾಸವೆನ್ನ ಬಹುದು. ಪೂರ್ವ ಬರ್ಲಿನ್ನಿನ ಅಲೆಕ್ಸಾಂಡರ್ ಚೌಕದಲ್ಲಿ ನಿಂತಿರುವ ಬರ್ಲಿನ್ ಟೀವಿ ಟವರ್ ಸೋವಿಯತ್ ಆಳ್ವಿಕೆಯ ಒಂದು ದೊಡ್ಡ ಕುರುಹಾಗಿ ಬೀಗುತ್ತ ನಿಂತಿದೆ. ಹಿಂದೆ ಕಮ್ಯುನಿಸ್ಟರ ಆಡಳಿತದಲ್ಲಿ ಇವರ ರೇಡಿಯೋ ಸ್ಟೇಷನ್ನಿನ ತರಂಗಗಳು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲೂ ಪೂರ್ವ ಮತ್ತು ಪಶ್ಚಿಮ ಜರ್ಮನಿಯ ಮಧ್ಯೆ ತಾಂತ್ರಿಕ ಪೈಪೋಟಿ ನಡೆದಿತ್ತು. ತಮ್ಮ ಸಾರ್ವಭೌಮತ್ವದ ಪ್ರತೀಕವಾಗಿ ಸೋವಿಯತ್ ಒಕ್ಕೂಟವು 1,200 ಅಡಿ ಎತ್ತರದ ರೇಡಿಯೋ ಮತ್ತು ಟೀವಿ ಟವರನ್ನು ಕಟ್ಟಿದರು. ಅದರ ವಿನ್ಯಾಸ ರಷ್ಯಾದ ಸ್ಪೂಟ್ನಿಕ್ ಸೆಟಲೈಟನ್ನು ನೆನಪಿಗೆ ತರುತ್ತದೆ. ಇದು ಇಂದಿನ ಏಕೀಕರಣಗೊಂಡ ಜರ್ಮನಿಯಲ್ಲಿ ಅತ್ಯಂತ ಎತ್ತರದ ಕಟ್ಟಡವಾಗಿ ನಿಂತಿದೆ. ಬರ್ಲಿನ್ ನಗರದ ಯಾವ ಮೂಲೆಯಲ್ಲಿ ನಿಂತರೂ ಈ ಟಿವಿ ಟವರ್ ಪೆಡಂಭೂತದಂತೆ ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತದೆ. ಕಮ್ಯುನಿಸ್ಟರ ಹದ್ದಿನ ಕಣ್ಣು ಎಲ್ಲರ ಮೇಲೆ ಇದೆ ಎಂದು ಹಿಂದೆ ಸಾರುತ್ತಿದ್ದ ಟವರ್ ಇಂದು ಏಕೀಕರಣಗೊಂಡ ಬರ್ಲಿನ್ ನಗರದ ಪ್ರಮುಖ ಪ್ರೇಕ್ಷಣೀಯ ತಾಣವಾಗಿದೆ. ಮೇಲಿಂದ ನೋಡಿದಾಗ ದೊರಕುವ ವಿಹಂಗಮ ನೋಟವು ನಾವು ಅರಿತ ಗತ ಚರಿತ್ರೆಯನ್ನು ಅರ್ಥಮಾಡಿಕೊಳ್ಳಲು ಪೂರಕವಾಗಿದೆ. ಬರ್ಲಿನ್ ಗೋಡೆ ಹೇಗೆ ನಗರವನ್ನು ಆವರಿಸಿತ್ತು, ಎರಡನೇ ಮಹಾಯುದ್ಧದಲ್ಲಿ ರಷ್ಯಾ ಸೇನೆ ಯಾವ ದಿಕ್ಕಿನಿಂದ ಬಂದು ಹಿಟ್ಲರನ್ನು ಪರಾಭವಗೊಳಿಸಿದರು ಎಂಬುದು ಸ್ಪಷ್ಟವಾಗುತ್ತದೆ.

ಎರಡನೇ ಮಹಾ ಯುದ್ಧ ನಂತರದ ಬರ್ಲಿನ್ ನಗರವನ್ನು ನಿರ್ಮಿಸಲು ಟರ್ಕಿಯ ಜನರನ್ನು ಕರೆತರಲಾಗಿದ್ದು ಅವರು ತಮ್ಮ ಇಸ್ಲಾಂ ಸಂಸ್ಕೃತಿಯ ಛಾಪುಗಳನ್ನು ನಗರಕ್ಕೆ ನೀಡಿದ್ದಾರೆ. ಬಹುಳ ಸಂಸ್ಕೃತಿ ಇರುವ ಬರ್ಲಿನ್ ನಗರವನ್ನು ಹಿಂದೆ ಜನಾಂಗೀಯ ಸ್ವಚ್ಛತೆಯ ನೆಪದಲ್ಲಿ ಹಿಟ್ಲರ್ ಹತ್ಯಾಖಾಂಡವಾಗಿಸಿ ಆರ್ಯನ್ನರಿಗಷ್ಟೇ ಜರ್ಮನಿ ಎಂಬ ಸಿದ್ಧಾಂತವನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದ್ದ. ಇಂತಹ ನಗರ, ದೇಶ ಕಳೆದ ಕೆಲವು ವರ್ಷಗಳ ಹಿಂದೆ ಏಂಗಲ ಮರ್ಕಲ್ ಅವರ ನೇತೃತ್ವದಲ್ಲಿ ಅಫ್ಘಾನ್ ಸಿರಿಯಾ ಯುದ್ಧಗಳ ಹಿನ್ನೆಲೆಯಲ್ಲಿ ವಲಸೆ ಬಂದ ಮಿಲಿಯನ್ ಗಟ್ಟಲೆ ಇತರ ಜನಾಂಗದ ನಿರಾಶ್ರಿತರನ್ನು ಬರಮಾಡಿಕೊಂಡು ಆಶ್ರಯ ನೀಡಿರುವುದು ನೈತಿಕತೆಯ ದೃಷ್ಟಿಯಿಂದ

ಬಹಳ ಒಳ್ಳೆಯ ನಿಲುವಾಗಿದೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದಂತಿದೆ. ನಿರಾಶ್ರಿತರಿಂದ ಬಗೆ ಬಗೆಯ ಸಮಸ್ಯೆಗಳು ಇರುತ್ತವೆಯಾದರೂ ಇಂದು ಜರ್ಮನಿ ದೇಶವು ಸಹನೆ ಮತ್ತು ಸೌಹಾರ್ದತೆಯಿಂದ ಅವರನ್ನು ಸಲಹಿದಲ್ಲಿ ಮುಂದಕ್ಕಾದರೂ ಈ ವಲಸಿಗರು ದೇಶದ ಔನ್ನತಿಗೆ ತಮ್ಮ ಕೊಡುಗೆಯನ್ನು ನೀಡುವುದರಲ್ಲಿ ಸಂದೇಹವಿಲ್ಲ. ಎರಡು ಮಹಾ ಯುದ್ಧಗಳು ಮತ್ತು ವಿಭಜನೆಗೆ ಒಳಗಾಗಿ ಕೇವಲ 36 ವರ್ಷಗಳ ಹಿಂದೆ ಏಕೀಕರಣಗೊಂಡ ಜರ್ಮನಿ ದೇಶವು ಕೈಗಾರಿಕಾ ಕ್ಷೇತ್ರದಲ್ಲಿ ಅದ್ಭುತಸಾಧನೆಯನ್ನು ಗಳಿಸಿದೆ. ಅಮೆರಿಕ ಮತ್ತು ಚೈನಾದ ನಂತರ ಪ್ರಪಂಚದ ಮೂರನೇ ಸಮೃದ್ಧವಾದ ದೇಶ ಅದಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಈ ದೇಶ ಚೇತರಿಸಿಕೊಂಡಿರುವುದು ಅಚ್ಚರಿಯ ಸಂಗತಿ ಮತ್ತು ಶ್ಲಾಘನೀಯ.

Leave a comment