ನೀವೊಂದು ಚಿತ್ರವನ್ನೋ, ಲೇಖನವನ್ನೋ ಹಾಕಿದಿರೆಂದುಕೊಳ್ಳಿ ಮೊದಲು ಬರುವ ಪ್ರತಿಕ್ರಿಯೆ ಯಾರದಿರುತ್ತದೆ ವಿಚಾರ ಮಾಡಿದ್ದೀರಾ? ಅದೂ ಕವನ / ಚುಟುಕ ರೂಪದಲ್ಲಿ? ಹತ್ತೆಣಿಸುವುದರಲ್ಲಿ ಎರಡು ಕವನ ಬರೆದು ಹಾಕಬಲ್ಲವರು ಸಧ್ಯಕ್ಕೆ ಅನಿವಾಸಿಯಲ್ಲಿ ಒಬ್ಬರೇ – ಮುರಳಿ ಹತ್ವಾರ್ ಅವರು. ಇದಕ್ಕಿಂತ ಹೆಚ್ಚು ಪರಿಚಯ ಕೊಡುವುದು ಬೇಕಾಗಿಯೇ ಇಲ್ಲ! ಇಂದಿನ ಪ್ರಸ್ತುತಿಯಲ್ಲಿ ಮುರಳಿಯವರ ನಾಲ್ಕು ಕವನಗಳಿವೆ. ಹೊಸದೇನಪ್ಪಾ ಅದರಲ್ಲಿ ಅಂದಿರಾ? ಈ ಬಾರಿ ಮುರಳಿ ತಮ್ಮ ಕವನಗಳ ಗಾಯನವನ್ನು AI ಮಹಾಶಯನಿಂದ ಮಾಡಿಸಿದ್ದಾರೆ. ಕವನಗಳನ್ನು ಓದಿ, ಕೇಳಿ (ಕೊಟ್ಟಿರುವ ಕೊಂಡಿಗಳು ಕೆಲಸ ಮಾಡುತ್ತವೆಯೆಂಬ ಆಶಯ ಇರುವುದರಿಂದ…) ಎಂದಿನಂತೆ ನಿಮ್ಮ ಅನಿಸಿಕೆ ತಿಳಿಸಲು ಮರೆಯಬೇಡಿ. – ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ)
*************************

ಮಾರ್ಗೇಟಿನ ಮುಂಜಾನೆ
ನೋಡುತೆಲ್ಲವ ನಡೆಯುತಿರಬೇಕು
ನಮ್ಮೊಳಗೆ ಆಗಾಗ
ಮಾರ್ಗೇಟಿನ ಈ ಮುಂಜಾನೆಯಂತೆ
ನೀರ ಹಕ್ಕಿಯ ಹಾಡಿಗೆ
ತಲೆದೂಗಿವೆ ಸಾಗರದ ಅಲೆ-ಅಲೆ
ಅಬ್ಬರವಿಲ್ಲದೆ
ನೀರನಪ್ಪಿದೆ ನೀಲ ಅಂಬರ
ಬಣ್ಣದ ಬಾಗಿನ ಕೊಟ್ಟು
ಸಪ್ಪಳವಿಲ್ಲದೆ
ಮಣ್ಣಿನ ಕಣ ಕಣ
ಹೊನ್ನಾಗಿಸಿದೆ ರವಿ ಕಿರಣ
ಆಡಂಬರವಿಲ್ಲದೆ
ತಿರುಗುತಿದೆ ಗಾಳಿಯ ಮಾತಿನಂತೆ
ನೀರೊಳು ನಿಲ್ಲಿಸಿದ ಯಂತ್ರದ ರೆಕ್ಕೆ
ಬೇರೆ ಸದ್ದಿಲ್ಲದೆ
ನೋಡುತೆಲ್ಲವ ನಡೆಯುತಿರಬೇಕು
ನಮ್ಮೊಳಗೆ ಆಗಾಗ
ಮಾರ್ಗೇಟಿನ ಈ ಮುಂಜಾನೆಯಂತೆ
ಅರಿವಲುಳಿವದು ಆಗ
ನೀರು ತುಂಬಿದ ಯಂತ್ರಗಳು ನಾವು
ಸುತ್ತುತಿರಬೇಕು ಅವನಣತಿಯಂತೆ
ಅಹಮಿಲ್ಲದೆ
ನೋಡುತೆಲ್ಲವ ನಡೆಯುತಿರಬೇಕು
ನಮ್ಮೊಳಗೆ ಆಗಾಗ
ಮಾರ್ಗೇಟಿನ ಈ ಮುಂಜಾನೆಯಂತೆ
ಮುರಳಿ ಹತ್ವಾರ್
10.07.2022
https://drive.google.com/file/d/1TAi7Proq1cRaYMketUVh4lnjCCz-U8zQ/view?usp=drive_link
*************************

ಇಡ್ಲಿಗೆ ಸೋತ ಮನ.......
ಚಟ್ನಿ-ಸಾಂಬಾರು ಮೇಳದಲ್ಲಿ
ಹರಿಯುವ ಬೆಣ್ಣೆಯ ರಾಗದಲ್ಲಿ
ಮರೆತ ನಿನ್ನೆಗಳ ಮತ್ತೆ ಹಾಡಿಸಿತು
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
ಬೆಳೆದೂರಿನ ಬೀದಿ-ಬೀದಿಗಳಲ್ಲಿ
ಹೋಟೇಲು, ಕ್ಯಾಂಟೀನು, ಗಾಡಿಗಳಲಿ
ನಿತ್ಯ ಉಣಿಸಿದ ಕೈಗಳ ನೆನಪಿಸಿತು
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
ಮಾತೊಂದು ಮೊನಚೆಂದು ನೊಂದು
ಮೌನದಾಳಕೆ ಇಳಿದ ಮನವನೆತ್ತಿ
ತಣಿ-ತಣಿಸಿ ಮತ್ತೆ ಕುಣಿಕುಣಿಸಿತು
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
ಬಿಸಿ ತುಪ್ಪದೊಂದಿಗೆ ಬೆರೆತು
ಹಾಲುಹಲ್ಲಿನ ಬಾಯಿ ತುಂಬುತ
ನಗುನಗುವ ನಾಳೆಯ ಇಣುಕಿಸಿತು
ಭಾನುವಾರದ ಬೆಳಗಿನ ಬಿಸಿ ಇಡ್ಲಿ!!
ಚಟ್ನಿ-ಸಾಂಬಾರು ಮೇಳದಲ್ಲಿ
ಹರಿಯುವ ಬೆಣ್ಣೆಯ ರಾಗದಲ್ಲಿ
ಮರೆತ ನಿನ್ನೆಗಳ ಮತ್ತೆ ಹಾಡಿಸಿತು
ಭಾನುವಾರದ ಬೆಳಗಿನ ಬಿಸಿ ಇಡ್ಲಿ!
ಮುರಳಿ ಹತ್ವಾರ್
10/07/2023
https://drive.google.com/file/d/177-5oeMGXpB4yZQt-6OA-LRUYl08kuJj/view?usp=drive_link
*************************

ರೆಕ್ಕೆ ಇದ್ದರೆ ಸಾಕೆ
ರೆಕ್ಕೆ ಇದ್ದರೆ ಸಾಕೆ
ಜಿಗಿದು ಹಾರಲು ನಭಕೆ
ಮೊದಲಿಳಿದ ಮೆತ್ತನೆ ಗೂಡು
ಅದರಡಿಯ ಕೊಂಬೆ
ಅದರಂಟಿನ ಹೆಮ್ಮರ
ದಪ್ಪ ಬೇರಿಳಿದ ಗಟ್ಟಿ ನೆಲ
ಬೇಕಲ್ಲವೇ ರೆಕ್ಕೆಯ ಸೊಕ್ಕಿಗೆ?
ಆ ಹಸಿರ ರೆಂಬೆಯ ಕೂಟ
ಅದರೊಳಾಡಿದ ಆಟ
ದಣಿವಿರಿದ ದನಿಯ ಪಾಠ
ಹಾರುವ ಹಸಿವಿನ ಊಟ
ಬೇಕಲ್ಲವೇ ಹಂಬಲದ ದಿಕ್ಕಿಗೆ?
ಮತ್ತೆ ಮತ್ತೆ ಮೇಲೆರುವ ಓಟ
ತಾರುಣ್ಯದ ಮದನನ ಮಾಟ
ಜೊತೆ ಕೂಡುವ ನಯನದ ನೋಟ
ಆಲಿಂಗನದ ನಗು-ಅಳುವಿನ ತೋಟ
ಬೇಕಲ್ಲವೇ ಬೆಂಬಲದ ತೆಕ್ಕೆಗೆ?
ಗುರಿಗಂಟಲು ರೆಕ್ಕೆಯ ಪುಕ್ಕ-ಪುಕ್ಕ
ದನಿಪುದದೊಂದೇ ಅಕ್ಕ-ಪಕ್ಕ
ಅದೇ ನೆಲ, ಅದೇ ಬಲ
ಹಂಬಲವೂ ಅದೇ, ಬೆಂಬಲವೂ
ಬೇಕಿಲ್ಲ ಬೇರೆ, ಸುಮೇರಿನ ರಥಕೆ
ವಿಶ್ವಮಾನವತೆಯ ಪಥಕೆ
ಮುರಳಿ ಹತ್ವಾರ್
10/06/2025
https://drive.google.com/file/d/1Rz1-bk8_6QUCZlJF30n4NqGTBQQJxZas/view?usp=drive_link
*************************

ಮಿರ್ಚಿ
ಹಿಟ್ಟಿನಂಗಿಯ ತೊಟ್ಟು
ಕಾದೆಣ್ಣೆಗೆ ಮೈಕೊಟ್ಟು
ಗೆದ್ದೆದ್ದ ಮಿರ್ಚಿಯ ಮುಂದ
ಉದ್ದುದ್ದ ಭಕ್ತರ ವೃಂದ!
ಜೊತೆ ಕೂಡೆ
ಮಂಡಾಳು ಒಗ್ಗರಣೆ,
ಮಸಾಲೆ ವಡೆ,
ಆಲೂ ಬೋಂಡ;
ಕೊನೆಗೊಂದು
ಬಿಸಿ ಚಹಾ
ಹಾ! ಹಾ!
ಎಂಥಾ ಆನಂದ
ಸಂತಸದ ನಗೆಯಲಿ
ತಿರುಗಿ ಬರುವದು
ಮತ್ತೆ
ಸಂತೃಪ್ತ ಮನದ
ಭಕ್ತ ವೃಂದ
ಮುರಳಿ ಹತ್ವಾರ್
30.01.2021
https://drive.google.com/file/d/1wCiuemVhHZcKeCtkVG2B1EsoGgNbLJXr/view?usp=drive_link
*************************
ಮೇಲಿನ ಕೊಂಡಿಗಳು ಈ ಕೆಳಗೆ ಸಹ ಹಾಕಿದ್ದೇನೆ.
https://drive.google.com/file/d/1TAi7Proq1cRaYMketUVh4lnjCCz-U8zQ/view?usp=drive_link, https://drive.google.com/file/d/1Rz1-bk8_6QUCZlJF30n4NqGTBQQJxZas/view?usp=drive_link, https://drive.google.com/file/d/1wCiuemVhHZcKeCtkVG2B1EsoGgNbLJXr/view?usp=drive_link, https://drive.google.com/file/d/177-5oeMGXpB4yZQt-6OA-LRUYl08kuJj/view?usp=drive_link
*************************