ಅನಿವಾಸಿ ಓದುಗರಿಗೆಲ್ಲ ನಮಸ್ಕಾರ,
ನೀವೆಲ್ಲರೂ spring season ಆಗಮನವನ್ನು ಖುಷಿಯಿಂದ ಬರಮಾಡಿಕೊಂಡು, ತಮ್ಮ ಕುಟುಂಬದೊಡನೆ Easter ರಜೆಯನ್ನು ಕಳೆಯುತ್ತಿರುವ ಈ ಹೊತ್ತಿನಲ್ಲಿ, ವಾರದ ಅನಿವಾಸಿ ಬ್ಲಾಗ್ ಶೀರ್ಷಿಕೆ ನೋಡಿ ಈಗ್ಯಾಕೆ ಇಲ್ಲಿ ಸೀಕ್ರೆಟ್ ಸ್ಯಾಂಟಾ ನೆನಪು ಮಾಡ್ತೀರಿ? ಎಂದು ಮನಸಲ್ಲೇ ಅಂದುಕೊಂಡಿರಬಹುದು.ಆದರೆ ಇದು ಡಿಸೆಂಬರ್ ಸಂಭ್ರಮ ನೆನಪಿಸುವ ಪೋಸ್ಟ್ ಖಂಡಿತ ಅಲ್ಲ. ಈ ವಾರ ಅನಿವಾಸಿಯ ಅಂಗಳಕ್ಕೆ ಹೊಸ ಸದಸ್ಯರೊಬ್ಬರ ಆಗಮನವಾಗುತ್ತಿದೆ ಮತ್ತವರ ಪರಿಚಯ ಮಾಡಿಕೊಡುವ ಅವಕಾಶ ನನಗೆ ಒದಗಿ ಬಂದಿದ್ದು ಬಹಳ ಖುಷಿಯ ಸಂಗತಿ.
ಬನ್ನಿ ಅವರ ಪರಿಚಯ ಮತ್ತು ಅವರು ಬರೆದ ಈ ಕಥೆಯನ್ನು ಓದೋಣ.
– ಅಮಿತಾ ರವಿಕಿರಣ್

ನನ್ನ ಹೆಸರುಪೂರ್ಣಿಮಾ ಭಟ್ಟ ಸಣ್ಣಕೇರಿ. ಸಣ್ಣಕೇರಿ ಎಂಬ ಪುಟಾಣಿ ಗ್ರಾಮ ನನ್ನೂರು. ಪತ್ರಿಕೋದ್ಯಮದಲ್ಲಿ ಪದವಿ. ಕೆಲ ಕಾಲ ಶಿರಸಿಯ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ. ಪ್ರಜಾವಾಣಿ ಬಳಗದಲ್ಲಿ ಕೆಲವು ವರ್ಷ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಣೆ.
‘ಕತೆ ಜಾರಿಯಲ್ಲಿರಲಿ’ ಮೊದಲ ಕಥಾ ಸಂಕಲನ. ಇದು ‘೨೦೨೫ರ ಈ ಹೊತ್ತಿಗೆ ಪ್ರಶಸ್ತಿ’ ಪಡೆದುಕೊಂಡಿದೆ. ಕತೆ, ಕವಿತೆ, ಲೇಖನ ಪತ್ರಿಕೆಗಳಲ್ಲಿ-ವಿಶೇಷಾಂಕಗಳಲ್ಲಿ ಅಚ್ಚಾಗಿವೆ.
ಇಂಗ್ಲೆಂಡಿನ ರಾಜಧಾನಿ ಲಂಡನ್ನಿನಲ್ಲಿ ವಾಸ್ತವ್ಯ. ಮ್ಯಾನ್ಯುಫಾಕ್ಚರಿಂಗ್ ಕಂಪನಿಯೊಂದರಲ್ಲಿ ಡೇಟಾ ನಿರ್ವಹಣೆಯ ವೃತ್ತಿ. ಜತೆಗೆ ಬೆಂಗಳೂರಿನಲ್ಲಿನ ಶಾಲಾ ಮಕ್ಕಳಿಗೆ ಆನ್‌ಲೈನ್ ಕನ್ನಡ ಪಾಠ ನೆಚ್ಚಿನ ಕೆಲಸ.
—————————————————————————————————————————————————–
ಏನ ಹೇಳಲಿ ಈ ಕತೆಯ ಕುರಿತು..?
ಯಾಕೆ ಬರೆದೆ, ಯಾವಾಗ ಬರೆದೆ ಅನ್ನುವುದನ್ನು ಹೇಳತೊಡಗಿದರೆ ಅದು ಇನ್ನೊಂದು ಕಾದಂಬರಿಯಾದೀತು. ಮನಕ್ಕೆ ತುಂಬ ಹತ್ತಿರವಾದ ಕತೆಯಿದು. ಬರೆವ ಸಮಯದಲ್ಲಿ ನಕ್ಕಿದ್ದೇನೆ, ಅಷ್ಟೇ ಬಿಕ್ಕಿದ್ದೇನೆ. ನಿಮಗೆ ಏನನ್ನಿಸಿತು ಅನ್ನುವುದನ್ನು ಹೇಳಿದರೆ, ಈ ಹೊತ್ತಿಗೆ ಅಷ್ಟು ಸಾಕು.
ಸೀಕ್ರೆಟ್ ಸ್ಯಾಂಟಾ
-ಪೂರ್ಣಿಮಾ ಭಟ್ಟ ಸಣ್ಣಕೇರಿ
“ಆರ್ ಯೂ ಔಟ್ ಆಫ್ ಯುವರ್ ಮೈಂಡ್ ಸನ್ನೀ?” ಎಂದು ಸುಮಾರು ಕಿರುಚಿದ ಹಾಗೇ ಮಾತಾಡಿದ ನನ್ನ ಧ್ವನಿ ಇನ್ನೂ ತಾರಕಕ್ಕೇ ಏರತೊಡಗಿತು.
“ಬ್ರೆಸ್ಟ್ ರೀಕನ್‌ಸ್ಟ್ರಕ್ಶನ್, ನಿಪ್ಪಲ್ ಕನ್‌ಸ್ಟ್ರಕ್ಶನ್, ಬೂಬ್ಸ್ ಶೇಪಿಂಗ್... ಇನ್ನೂ ಏನಾದರೂ ಉಳಿದಿದ್ಯಾ ಇಲ್ಲಿಗೇ ಮುಗೀತಾ ನಿನ್ನ ಲಿಸ್ಟು?” ನನ್ನ ಇಡೀ ದೇಹ ಥರಗುಡುತ್ತಿತ್ತು. ಈ ಎರಡು ವರ್ಷಗಳಲ್ಲಿ ಇಷ್ಟು ಧ್ವನಿ ಎತ್ತರಿಸಿ ಮಾತನಾಡಿದ್ದು ಇದು ಮೊದಲನೇ ಸಲವಾಗಿತ್ತು. ಒಂದೇ ಧ್ಯಾನದಲ್ಲಿ ತಾಳ್ಮೆ ಮೀರದಹಾಗೆ ತಾಸುಗಟ್ಟಲೇ ಹಿಡಿದ ಭಾರದ ಡಂಬೆಲ್ಸ್ ಸಮತೋಲನ ತಪ್ಪಿ ಕಾಲ ಮೇಲೆ ಬಿದ್ದ ಅನುಭವ ನನಗೆ.
ಮಂಚದ ಬುಡದಲ್ಲಿನ ಹೆಡ್ ಬೋರ್ಡಿಗೆ ಬೆನ್ನು ಆನಿಸಿದ್ದ ಸನ್ಮುಕ್ತಾ ಇವತ್ತು ಒಂದು ತೀರ್ಮಾನ ಆಗಲೇಬೇಕೆಂದು ಅಲ್ಲಿ ಬೇರುಬಿಟ್ಟು ಕುಳಿತಂತೆ ಇದ್ದಳು. ಬಲಗೈ ಎದೆಯ ನಡುವೆ ಹಾದು ಎಡದೋಳನ್ನು ಮೆಲ್ಲನೆ ಸವರುತ್ತಿತ್ತು. ಚಾಚಿದ ಕಾಲಿನ ಬೆರಳುಗಳನ್ನು ಆಗಾಗ ಸುರುಳಿ ಮಾಡಿ ನೆಟ್ಟಗಾಗಿಸುತ್ತಿದ್ದಳು ಅವಳಿಗೇ ಗೊತ್ತಿಲ್ಲದಂತೆ.
“ನನಗೆ ಜಾಸ್ತಿ ಪೊಯಟಿಕಲೀ ಪೊಲಿಟಿಕಲ್ ಆಗಿ ಮಾತಾಡಲು ಬರೋದಿಲ್ಲ ಕಣೋ. ನನ್ನ ಫೀಲಿಂಗ್ಸ್ ನಿನಗೆ ಹೇಗೆ ಅರ್ಥ ಮಾಡಿಸಲಿ? ನನ್ನ ಕಡೆಯಿಂದ ಡಿಸೈಡ್ ಮಾಡಿಯಾಗಿದೆ. ತಾಸುಗಟ್ಟಲೆ ರಿಸರ್ಚ್ ಮಾಡಿದ್ದೇನೆ. ಎರಡು ಪ್ಲ್ಯಾಸ್ಟಿಕ್ ಸರ್ಜನ್ ಜತೆ ಸಪರೇಟ್ ಆಗಿ ಮಾತಾಡಿದ್ದೇನೆ. ನಿನಗೆ ಕಾಣ್ತಿರೋ ಯಾವ ಕಾಂಪ್ಲಿಕೇಶನ್ನೂ ನನಗೆ ಕಾಣ್ತಿಲ್ಲ. ಹಠ ಯಾಕೆ ಮಾಡ್ತೀಯಾ ಅಮ್ಮೂ?” ಸಮಾಧಾನದಲ್ಲೇ ಹೇಳಿದರೂ ಮಾತುಗಳು ಮಂಜಿನ ಚೂರಿಯಂತೆ ಹರಿತವಾಗಿದ್ದವು.
‘ಛೇ! ನಾನ್ಯಾಕೆ ಸವಕಲು ಸಿಮಿಲಿಗಳನ್ನೇ ನೆನಪಿಸಿಕೊಳ್ಳುತ್ತಿದ್ದೇನೆ’ ಎಂದು ಸಶಬ್ದವಾಗಿ ಹಣೆ ಬಡಿದುಕೊಂಡೆ.
“ಅದ್ಯಾಕೆ ಹಣೆ ಚಚ್ಚಿಕೊಳ್ತೀಯಾ? ಮೊದಲ ಸಲ ಬ್ರಾ ಹಾಕಿಕೊಂಡ ಸಂಭ್ರಮ, ಹೈಸ್ಕೂಲಿನಲ್ಲಿ ಯೂನಿಫಾರ್ಮಿನ ಚೌಕುಳಿ ಬ್ಲೌಸಿನ ಸಂದಿಯಲ್ಲಿ ಇಣುಕಿದ ಸ್ಟ್ರಾಪ್ ಒಳತಳ್ಳುವಾಗ ಆದ ನಾಚಿಕೆ, ಧ್ರುವನಿಗೆ ಕೊನೆಯ ಬಾರಿ ಫೀಡ್ ಮಾಡುವಾಗ ನೀನು ಮಾಡಿದ ವಿಡಿಯೋ ನನಗೆ ಕೊಡುವ ಖುಶಿ... ಇದೆಲ್ಲ ಭಾವನೆಗಳನ್ನ - ಹೌ ಕೆನ್ ಐ ಪಾಸ್ ದೆಮ್ ಟೂ ಯೂ? ಹೇಳಿಲ್ವಾ ಕವಿ ಥರ ವಿವರಣೆ ಕೊಡೋದು ನನಗಾಗಲ್ಲ ಅಂತ” ಈ ಬಾರಿ ಅವಳ ಧ್ವನಿ ಆರ್ದ್ರವಾಗಿತ್ತು.
“ಈ ಎರಡು ವರ್ಷ ಅನುಭವಿಸಿದ್ದು ಸಾಲದಾ? ಇನ್ನಷ್ಟು ಆಸ್ಪತ್ರೆ ಓಡಾಟ, ಕೌಂಟ್ಲೆಸ್ ಅಪಾಯಿಂಟ್ಮೆಂಟ್ಸ್, ಫೋನಿನಲ್ಲಿ ಇನ್ನೂ ಒಂದಷ್ಟು ಪಿಲ್ಸ್ ರಿಮೈಂಡರ್ಸ್ ಇದೆಲ್ಲಾ ಬೇಕಾ ಸನ್ನೀ? ಸ್ವಲ್ಪ ಯೋಚನೆ ಮಾಡು. ಹೀಗೆ ಆರಾಮಾಗಿದ್ದುಬಿಡೋಣ” ಮಾತು ಮುಗಿಸೋಣವೆಂದುಕೊಂದಷ್ಟೂ ಮೆದುಳಿಗೂ ನಾಲಿಗೆಗೂ ಲಿಂಕ್ ತಪ್ಪಿದಂತಿತ್ತು ನನಗೆ.
“ಗಂಟೆ ಆಗ್ಲೇ ಎಂಟು. ನಿಂಗೆ ಯಾವತ್ತಿನಂತೆ ಮೆಕ್ಸಿಕನ್ ಬರೀಟೋ ಬೌಲಾ? ನಾನಿವತ್ತು ಸೂಪ್ ಮತ್ತು ಸಲಾಡ್ ಮಾತ್ರ” ಎಂದು ಫೋನಿತ್ತಿಕೊಂಡಳು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲು, ಮುಂದೇನಿದೆ ಮಾತಾಡುವುದಕ್ಕೆ ಎನ್ನುವಂತೆ.
*
ಬಾಲ್ಕನಿಗೆ ಬಂದು ಕೂತೆ. ಎಚ್.ಎಸ್.ಆರ್ ಲೇಔಟಿನ ಸುತ್ತಮುತ್ತಲಿನ ಐಟಿ ಕಂಪನಿಗಳ ಬಹುಮಹಡಿ ಕಟ್ಟಡಗಳು ದೀಪಗಳಿಂದ ಜಗಮಗಿಸುತ್ತಿದ್ದವು. ಎರಡು ವಾರದ ಹಿಂದೆ ಈ ಬ್ರೆಸ್ಟ್ ರೀಕನ್‌ಸ್ಟ್ರಕ್ಶನ್ ವಿಷಯವನ್ನು ಮೊದಲ ಬಾರಿ ಸನ್ಮುಕ್ತಾ ಪ್ರಸ್ತಾಪ ಮಾಡಿದಾಗ ಅರ್ಧ ವಿಷಯ ತಲೆಯೊಳಗೆ ಹೋಗಲೇ ಇಲ್ಲ. ಒಂದೂವರೆ ದಶಕದ ದಾಂಪತ್ಯದಲ್ಲೂ ಅಷ್ಟೆ, ಅವಳ ಪಾತ್ರ ಜಾಸ್ತಿ ಇದ್ದುದು ಚಿಂತನ ಮಂಥನದಲ್ಲಿ. ನನ್ನ ಪಾತ್ರ ಕಾರ್ಯ ನೆರವೇರಿಸುವಲ್ಲಿ.
ದೊಡ್ಡ ಸಾಫ್ಟ್‌ವೇರ್ ಕಂಪನಿಯಲ್ಲಿ ಲಕ್ಷ ಸಂಪಾದಿಸುತ್ತಿದ್ದರೂ ನನ್ನ ಹುಕಿಗಾಗಿ ಸಣ್ಣದೊಂದು ಪ್ರಾಡಕ್ಟ್ ಶುರುಮಾಡಿ, ಗೆಳೆಯರಿಂದ, ಕಲೀಗ್‌ಗಳಿಂದ ಮೆಚ್ಚುಗೆ ಪಡೆದುಕೊಂಡು ಅಷ್ಟಕ್ಕೇ ಸುಮ್ಮನಾಗಿ ಕುಳಿತಿದ್ದೆ ನಾನು. ಸನ್ಮುಕ್ತಾ ಯಾವ್ಯಾವ ದಾರಿಯಲ್ಲಿ ಹೋದರೆ ಗಮ್ಯ ಸುಗಮವಾಗಬಹುದು, ಎಲ್ಲಿ ನನ್ನ ಪ್ರಾಡಕ್ಟ್ ಒಂದು ಕಂಪನಿಯಾಗಿ ಬೆಳೆಯಬಲ್ಲದು ಎಂಬುದನ್ನೆಲ್ಲ ಲೆಕ್ಕಾಚಾರ ಹಾಕಿದವಳು. ಕೋಟಿಗಟ್ಟಲೆ ಇನ್ವೆಸ್ಟ್‌ಮೆಂಟಿನ ಕಠಿಣ ದಾರಿಯನ್ನು ಹೂಹಾದಿಯನ್ನಾಗಿಸಿದವಳು.
ಎರಡು ವರ್ಷದ ಹಿಂದೆ, ಒಂದು ಸುಡು ಬೇಸಿಗೆಯಲ್ಲಿ ಸನ್ಮುಕ್ತಾಳಿಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾದದ್ದು. ಸ್ವಲ್ಪಕಾಲ ದಿಕ್ಕುತಪ್ಪಿದ ಜೋಡಿಹಕ್ಕಿಗಳಂತೆ ಅಲ್ಲಿಲ್ಲಿ ಅಲೆದರೂ ಹೇಗೋ ಮತ್ತೆ ಗೂಡನ್ನು ಸೇರಿಕೊಂಡಿದ್ದೆವು. ರೇಡಿಯೇಶನ್, ಕೀಮೋ, ಸ್ಕ್ಯಾನುಗಳು, ಡಯೆಟ್ ಪ್ಲ್ಯಾನುಗಳು, ಮಾತ್ರೆಗಳು ಈ ಎಲ್ಲವಕ್ಕೂ ನಮ್ಮ ದಿನಚರಿಯನ್ನು ಹೊಂದಿಸಿಕೊಂಡಿದ್ದೆವು. ದಿನವೂ ಸಂಭವಿಸುವ ರಾತ್ರಿಯ ವಿಹಾರ ನಮ್ಮಿಬ್ಬರಿಗೂ ಥೆರಪ್ಯುಟಿಕ್. ಮಾತ್ರೆಯ ಬಾಧೆ ತಾಳಲಾರದೆ ಗೋಳೆಗುಟ್ಟಿ ಸನ್ಮುಕ್ತಾ ಅತ್ತ ರಾತ್ರಿಗಳಲ್ಲಿ ನಿದ್ದೆ ನನ್ನ ಬಳಿ ಸುಳಿಯುತ್ತಲಿರಲಿಲ್ಲ. ಮಾರನೆಯ ದಿನ ಮತ್ತೆ ಅವಳ ಕಣ್ಣಲ್ಲಿ ಹೊಳಪು ಕಂಡರೆ ನಾನು ಅಂದು ಸ್ವತಃ ಸೂರ್ಯ.
ಕಾಲಕ್ಕೆ ಕೂಡ್ರುವ ಪದ್ಧತಿಯಿಲ್ಲವಲ್ಲ. ಕ್ಯಾನ್ಸರ್‌ಅನ್ನು ಬುಡಸಮೇತ ಕೀಳಲು ಸನ್ಮುಕ್ತಾಳಿಗೆ ಆಸ್ಪತ್ರೆಯಲ್ಲಿ ಮ್ಯಾಸ್ಟೆಕ್ಟಮಿ ಪ್ರೊಸೀಜರ್ ಮಾಡಿದರು. ಅದರ ನಂತರ ಸಪಾಟಾದ ಒಂದು ಭಾಗದ ಎದೆಯನ್ನು ನೋಡಿದಾಗಲೆಲ್ಲ ನಾನು ಸನ್ಮುಕ್ತಾಳ ಕಣ್ಣನ್ನು ತುಸು ತಪ್ಪಿಸಿದ್ದನ್ನು, ಈಗಲೂ ತಪ್ಪಿಸುವುದನ್ನು ಬಿಟ್ಟರೆ ಬಾಕಿ ಎಲ್ಲವೂ ನಾರ್ಮಲ್ ಎಂದುಕೊಂಡಿದ್ದೆವು ನಾವಿಬ್ಬರೂ. ಹದಿನೈದು ವರ್ಷಗಳ ಏರಿಳಿತಗಳ ಬಂಧ ನಮ್ಮನ್ನು ಸದಾ ಹಿತವಾಗಿ ನೇವರಿಸುತ್ತಿತ್ತಲ್ಲ, ಅದಕ್ಕೇ ಉಳಕಿ ಎಲ್ಲ ನಾರ್ಮಲ್ ನಾರ್ಮಲ್.
ಅದೆಲ್ಲಿಂದ ತಲೆಯಲ್ಲಿ ಹುಳು ಬಿಟ್ಟುಕೊಂಡಳೋ ಗೊತ್ತಿಲ್ಲ ಸನ್ಮುಕ್ತಾ. ಸಪಾಟಾದ ಎದೆಗೆ ಬ್ರೆಸ್ಟ್ ರೀಕನ್‌ಸ್ಟ್ರಕ್ಶನ್ ಸರ್ಜರಿ ಆಗಲೇಬೇಕೆಂದು ಹಠ ಹಿಡಿದಿದ್ದಾಳೆ. ಹಾಂ...! ಅವಳೇ ಹೇಳಿದ್ದಲ್ಲವೇ ನನಗೆ, ಅವಳ ಡೆವೆಲಪ್ಮೆಂಟ್ ಟೀಮಿನ ಅಮೇರಿಕನ್ ಕೌಂಟರ್‌ಪಾರ್ಟ್ ಮೆಗ್ ಮೊದಲು ಈ ಬಗ್ಗೆ ಹೇಳಿದ್ದು ಎಂದು..
ಶುರುವಿನಲ್ಲಿ ಸನ್ಮುಕ್ತಾ ಈ ಬಗ್ಗೆ ಮಾತಾಡಿದಾಗ ನಾನೂ ಹಾರಿಕೆಯ ಉತ್ತರ ಕೊಟ್ಟೆ. ಮಾತು ಮರೆಸಲು ನೋಡಿದೆ. ಸನ್ಮುಕ್ತಾಳಲ್ಲಿ ಈ ಬಗ್ಗೆ ಮಾತಾಡುವ ಸಲಿಗೆಯಿಲ್ಲ ಎಂದಲ್ಲ. ಜೀವನ ಇನ್ಮುಂದೆ ಹೀಗೆಯೇ ಎಂದು ನಿರ್ಧರಿಸಿಯಾಗಿತ್ತೇನೋ. ಕಷ್ಟಕಾಲದಲ್ಲಿ ಹೆಂಡತಿಯ ಹಿಂದೆ ನಿಂತವ ಎನ್ನಿಸಿಕೊಳ್ಳುವ ಹಂಬಲವೂ ಎಲ್ಲೋ ಚೂರು ಇದ್ದಿತ್ತೇನೋ. ಇಷ್ಟೆಲ್ಲ ಎದುರಿಸಿದ್ದೇವೆ ಆದರೂ ಜೀವನ ನಾರ್ಮಲ್ ಆಗಿಯೇ ಇದೆ ಎನ್ನುವ ಗಟ್ಟಿತನವನ್ನು ಇನ್ನಷ್ಟು ಕಲ್ಲಾಗಿಸಬೇಕಿತ್ತೇನೋ. ದೇಹದ ಅದೊಂದು ಭಾಗವಿಲ್ಲದಿದ್ದರೆ ಏನು ಮಹಾ? ನಿನ್ನೊಟ್ಟಿಗೆ ಚೆಂದವಾಗಿಯೇ ಬಾಳುವೆ, ಅವರಿವರು ಮಾತಿನ ಕಲ್ಲೆಸೆಯಲು ಬಿಡಲಾರೆ ಎಂಬ ಭಾವನೆಯನ್ನು ಸನ್ಮುಕ್ತಾಳಿಗೆ ದಾಟಿಸುವ ಸೋಗು ಗಾಢವಾಗಿತ್ತೇನೋ.
ಇಷ್ಟು ವರ್ಷದ ಜತೆತನದಲ್ಲಿ ಯಾವತ್ತೂ ಎರಡು ದಿನಕ್ಕಿಂತ ಜಾಸ್ತಿ ಮುಂದುವರೆದ ಭಿನ್ನಾಭಿಪ್ರಾಯಗಳು ನಮ್ಮ ನಡುವೆ ಇರಲಿಲ್ಲ. ಈ ಬಾರಿ ಮಾತ್ರ ಎರಡು ವಾರಕ್ಕೂ ಮಿಕ್ಕಿ ತಿಕ್ಕಾಟ ನಡೆಯುತ್ತಿದೆಯಲ್ಲ. ನನ್ನ ನಿರಾಶೆ, ಹತಾಶೆ ಮಿಗುವರೆಯಿತು.
ಬಾಲ್ಕನಿಯಿಂದ ಡೈನಿಂಗ್ ಟೇಬಲಿನತ್ತ ಬಂದಾಗ ಸ್ವಿಗ್ಗಿಯಿಂದ ಬಂದ ಬರೀಟೋ ಬೌಲ್ ಮಾತ್ರ ಕಂಡಿತು. ಒಮ್ಮೆ ಅಡುಗೆಮನೆಯ ಸಿಂಕಿನ ಬಳಿ ಹೋಗಿ ಸನ್ಮುಕ್ತಾ ಊಟ ಮುಗಿಸಿದ್ದಾಳೆ ಎಂಬುದನ್ನು ಖಾತ್ರಿ ಮಾಡಿಕೊಂಡೆ. ಆರನೇ ಫ಼್ಲೋರಿನ ಗೆಳೆಯನ ಮನೆಗೆ ಹೋಗಿದ್ದ ಮಗ ಧ್ರುವ ಕೂಡಾ ಮನೆಗೆ ವಾಪಸ್ಸಾಗಿ ತನ್ನ ರೂಮಿನ ಕಂಪ್ಯೂಟರ್‌ನಲ್ಲಿ ಮುಳುಗಿದ್ದ. ಅವನ ಕಂಪ್ಯೂಟರಿನ ಎಕ್ಸೆಲ್ ಶೀಟಿನ ಮೇಲೆ ‘ಎಕ್ಸಾಂ - ಹೆಡ್ ಆನ್ ಕೊಲಿಶನ್’ ಎಂಬುದು ದಪ್ಪಕ್ಷರದಲ್ಲಿ ಕಾಣುತ್ತಿತ್ತು.
ಬರೀಟೋ ಬೌಲ್ ಬರಿದು ಮಾಡಿ ಮತ್ತೆ ಬಾಲ್ಕನಿಗೆ ಹೋಗಿ ಕುಕ್ಕರಿಸಿದೆ. ಅಸಂಬದ್ಧ ಯೋಚನೆಗಳು, ಇವಳ ಕ್ಯಾನ್ಸರಿನ ವಿಷಯ ಗೊತ್ತಾದಾಗ ಶುರುವಿನ ದಿನಗಳಲ್ಲಿದ್ದಂತೆ. ಸಾಕಾಯಿತಪ್ಪ ಈ ಬಗ್ಗೆಯೇ ಯೋಚಿಸಿ. ನನಗಿಂತ ಜಾಸ್ತಿ ವ್ಯಾಲಿಡೇಶನ್ ಬೇಕಾ ಇವಳಿಗೆ? ನಾನೇ ಇವಳ ಸಪಾಟನ್ನು ಸ್ವೀಕರಿಸಿಯಾಗಿದೆ ಇನ್ನೆಲ್ಲಿಯ ರಗಳೆ ಇವಳದ್ದು ಎಂದು ಛೇಗುಟ್ಟಿದೆ ಶಬ್ದಸಹಿತವಾಗಿ. ತಕ್ಷಣ ನನ್ನ ಮೇಲೇ ನನಗೆ ಹೇವರಿಕೆ ಬಂತು. ಎಂಥ ಕೆಟ್ಟ ವಿಡಂಬನೆಯಪ್ಪಾ ಎಂದು ತಲೆ ಕೊಡವಿದೆ.
ಕುಟುಂಬಕ್ಕೆ ಇಂಬಾದ ಬಾಳಸಂಗಾತಿ ಅನುಭವಿಸಲಿರುವ ಮೆಡಿಕಲ್ ಕಾಂಪ್ಲಿಕೇಶನ್, ತೊಡಕುಗಳೇ ನನ್ನನ್ನು ನಿಜವಾಗಿಯೂ ಕಾಡುತ್ತಿವೆಯಾ ಅಥವಾ ‘ನಾನು ಹೇಳಿದ ಮಾತು ನೀನು ಕೇಳುತ್ತಿಲ್ಲ’ ಎನ್ನುವುದೇ ನನ್ನ ಕೋಪದ ಮೂಲವಾ ಎಂದು ನನ್ನ ಕಾಳಜಿಯ ಉದ್ದೇಶವನ್ನೇ ಮತ್ತೆ ಮತ್ತೆ ಪ್ರಶ್ನಿಸಿಕೊಂಡೆ. ಪ್ರಶ್ನೆಗಳು ಜಟಿಲವಾಗುತ್ತ ನಡೆದವು.
ಹತ್ತು ವರ್ಷದ ಹಿಂದೆ ನಡೆದ ಘಟನೆಯನ್ನು ಇವತ್ತಿಗೆ ತಳುಕು ಹಾಕುವ ಅಗತ್ಯವಿಲ್ಲ. ಆದರೂ ನೆನಪಿಗೆ ಬರುತ್ತಿದೆ. ದೊಡ್ಡ ಐಟಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ ನಿರ್ವಹಿಸುತ್ತಿದ್ದ ಕಾಲ. ಆರು ವಾರದ ಸಲುವಾಗಿ ಇಂಗ್ಲೆಂಡಿನ ಬರ್ಮಿಂಗ್ಹಮ್ ಆಫೀಸಿಗೆ ಹೋಗಿದ್ದೆ, ನವೆಂಬರ್ ತಿಂಗಳಿನಿಂದ ಡಿಸೆಂಬರ್‌ವರೆಗೆ. ವರ್ಷಾಂತ್ಯ ಬಂತೆಂದರೆ ಅಲ್ಲಿನವರಿಗೆ ಮೋಜಿನ ಸಮಯ. ಆಫೀಸಿನಲ್ಲಿ ಸೀಕ್ರೆಟ್ ಸ್ಯಾಂಟಾ ಗಿಫ್ಟ್ ಎಕ್ಸ್‌ಚೇಂಜ್ ಸಂಭ್ರಮ ನಡೆದಿತ್ತು. ಆಫೀಸಿನ ಮೂಲೆಯಲ್ಲಿ ಸಿಂಗರಿಸಿಕೊಂಡು ನಿಂತಿದ್ದ ಕ್ರಿಸ್ಮಸ್ ಟ್ರೀಯ ಬುಡದಲ್ಲಿ, ಒಂದು ದಿನ ಮುಂಚಿತವಾಗಿ ಎಲ್ಲರೂ ಉಡುಗೊರೆಗಳನ್ನು ತಂದಿಡಬೇಕು. ಕ್ರಿಸ್ಮಸ್ ಈವ್ ಆದ ಡಿಸೆಂಬರ್ ಇಪ್ಪತ್ನಾಲ್ಕರಿಂದ ಆಫೀಸಿಗೆ ರಜೆ. ಹಾಗಾಗಿ ಇಪ್ಪತ್ಮೂರರಂದು ಸಂಜೆ ತಮ್ಮ ತಮ್ಮ ಹೆಸರಿದ್ದ ಉಡುಗೊರೆಯನ್ನು ಪ್ರತಿಯೊಬ್ಬರೂ ಪಾಳಿಯ ಪ್ರಕಾರ ಎಲ್ಲರೆದುರು ತೆರೆದು ತೋರಿಸಬೇಕು. ವಿಚಿತ್ರ ಸ್ಲೋಗನ್ನುಗಳಿದ್ದ ಜಂಪರ್, ಪೈರೆಟ್ ಐಪ್ಯಾಚ್, ಬೆತ್ತಲೆ ಜೋಡಿಯಿದ್ದ ಕರ್ಟನ್ ಹೀಗೆ ಇನ್ನೂ ಕೆಲವು ಉಡುಗೊರೆಗಳನ್ನು ಸಹೋದ್ಯೋಗಿಗಳು ತೆರೆದಾದ ಮೇಲೆ ನನ್ನ ಸರದಿ ಬಂತು. ನನ್ನ ಹೆಸರು ಯಾರಿಗೆ ಬಂದಿತ್ತು ಗೊತ್ತಿಲ್ಲ... ನಾನು ನಿಧಾನಕ್ಕೆ ಗಿಫ್ಟ್ ಪೇಪರನ್ನು ಬಿಚ್ಚಿ ಪೊಟ್ಟಣವನ್ನು ತೆಗೆದೆ. ಮೆತ್ತಮೆತ್ತಗಿನ ಅನುಭವವಾದಂತಾಯ್ತು. ಕೊನೆಯ ಪದರವನ್ನೂ ಬಿಡಿಸಿದೆ. ನನ್ನ ಮಧ್ಯಮಗಾತ್ರದ ಕೈಯಿಂದ ಹೊರ ತುಳುಕುವಷ್ಟು ದೊಡ್ಡ ಸ್ತನ! ಆರ್ಟಿಫೀಶಿಯಲ್ ಬ್ರೆಸ್ಟ್. ಹೂಬೇಹೂಬ್ ನಿಜವಾದ ಮೊಲೆಯಂತೆಯೇ ಇದೆ. ನನ್ನ ಮುಖವೆಲ್ಲ ಕೆಂಪಡರಿತು. ಸಹೋದ್ಯೋಗಿಗಳೆಲ್ಲ ‘ಹೋ’ ಎಂದು ಕಿರುಚಿ ಕಿಚಾಯಿಸಿದರು. ನಾಚಿಕೆಯೋ, ಕಲ್ಚರಲ್ ಆಘಾತವೋ ಕೆಲವು ನಿಮಿಷಗಳಷ್ಟು ಕಾಲ ಮಾತೇ ಆಡಲಿಲ್ಲ ನಾನು. ನನ್ನ ಸೀಕ್ರೆಟ್ ಸ್ಯಾಂಟಾ ಉಡುಗೊರೆಯನ್ನು ಯಾರೂ ನೋಡೇ ಇಲ್ಲವೇನೋ ಎಂಬಂತೆ ಕದ್ದು ಲ್ಯಾಪ್‍ಟಾಪ್ ಬ್ಯಾಗಿನೊಳಗೆ ಸೇರಿಸಿದೆ. ಮೊದಲೇ ನಿಗದಿಯಾಗಿದ್ದಂತೆ ಮರುದಿನ ಭಾರತಕ್ಕೆ ಹೊರಟುಬಂದೆ. ಮನೆಗೆ ಬಂದ ಮಾರನೆಯ ರಾತ್ರಿ ಧ್ರುವ ಮಲಗಿದ ನಂತರ ಸನ್ಮುಕ್ತಾಳಿಗೆ ಒಮ್ಮೆ ಸ್ಯಾಂಟಾ ಕೊಟ್ಟ ಉಡುಗೊರೆ ತೋರಿಸಿ ಅದನ್ನು ಕವರ್ ಸಮೇತವಾಗಿ ನನ್ನ ವಾರ್ಡ್ರೋಬಿನ ಇನ್ನರ್ ಡ್ರಾದ ಮೂಲೆಯಲ್ಲಿ ತುರುಕಿದೆ. ಸನ್ಮುಕ್ತಾ ಅಂದು ಮನಸೋಯಿಚ್ಛೆ ನಕ್ಕಿದ್ದಳು.
ಎಷ್ಟು ಹೊತ್ತು ಹೊರಗೆ ಕೂತಿದ್ದೆನೋ. ಪಕ್ಕದ ಲೇಔಟಿನಲ್ಲಿ ಗಾರ್ಡ್ ಎಡೆಬಿಡದೆ ಹೊಡೆಯುತ್ತಿದ್ದ ಸೀಟಿ ನನ್ನನ್ನು ಮತ್ತೆ ಈ ಲೋಕಕ್ಕೆ ಕರೆತಂದಿತು. ಬೆಡ್ರೂಮಿಗೆ ಬಂದೆ. ಸನ್ಮುಕ್ತಾ ನಿದ್ದೆ ಮಾಡಿಲ್ಲ ಎಂಬುದು ನನಗೆ ಗೊತ್ತು. ಗಾಢ ನವಿಲು ಬಣ್ಣದ ಕಿಟಕಿಯ ಪರದೆಯ ಕಡೆ ಮುಖ ಮಾಡಿ ಮಲಗಿದವಳ ಮಗ್ಗುಲಿಗೆ ಬಂದು ಕೂತೆ. ‘ಸನ್ನೀ’ ಎಂದು ನಿಧಾನವಾಗಿ ಕರೆದೆ. ಹಣೆಯ ಮೇಲೆ ಬೆರಳಾಡಿಸಿದೆ. ಇಡೀ ದೇಹವನ್ನು ಜರುಗಿಸಿ ಜಾಗ ಮಾಡಿದವಳೇ ಕಾಲರ್ ಹಿಡಿದು ಜಗ್ಗಿ ನನ್ನನ್ನೂ ತನ್ನ ಪಕ್ಕ ಒರಗಿಸಿಕೊಂಡಳು.
“ಸನ್ನೀ, ನಿನ್ನ ಆಪರೇಶನ್ ಆಗಿ ಹದಿನೆಂಟು ತಿಂಗಳಾಯ್ತು. ಅಷ್ಟೊಂದು ತಿಂಗಳು ಆಸ್ಪತ್ರೆಗೆ ಟೆಸ್ಟ್‌ಗಳಿಗೆ ಹೋಗಿದ್ದು, ಪ್ರತೀ ರಿಪೋರ್ಟ್ ಓದುವ ಮೊದಲೂ ಕೈಕಾಲು ತಣ್ಣಗಾಗಿದ್ದು ಎಲ್ಲವೂ ಮರೆತೆಯಾ? ಈಗಲೂ ತುಂಬ ಸುಂದರಿ ನೀನು. ನನಗೆ ಅಪ್ಸರೆಯೇ. ಧ್ರುವನಿಗಂತೂ ದೇವತೆ ನೀನು. ದ್ಯಾಟ್ಸ್ ವಾಟ್ ಹೀ ಸೇಸ್ ರೈಟ್? ಈ ಎರಡು ವಾರ ನಮ್ಮ ಜೀವನದಲ್ಲಿ ಇರಲೇಯಿಲ್ಲ ಎಂದುಕೊಂಡು ಸುಮ್ಮನಾಗಿಬಿಡೋಣ”
“ಐ ಹ್ಯಾವ್ ಕ್ಲೋಸ್ಡ್ ದಿಸ್ ಸಬ್ಜೆಕ್ಟ್. ಸರ್ಜರಿ ಶೆಡ್ಯೂಲ್ ಆಗಿದೆ. ನನ್ನ ಸರ್ಜನ್ನಿನ ನಂಬರನ್ನ ಆಗಲೇ ಶೇರ್ ಮಾಡಿದ್ದೇನೆ. ಒಮ್ಮೆ ನೀನೂ ಮಾತಾಡಿ ನೋಡು” ಅವಳದ್ದೂ ಹಠ.
“ಇಷ್ಟು ಮುಂದುವರೆದ ಮೇಲೆ ಇನ್ನೇನಿದೆ?” ಅಹಂಅನ್ನು ಹತ್ತಿಕ್ಕುವ ಸರ್ವಪ್ರಯತ್ನ ನನ್ನಿಂದ ಜಾರಿಯಲ್ಲಿತ್ತು.
“ಹೊರಗಿನ ಗಾಳಿ ನಿನ್ನ ತಲೆಯನ್ನ ಹಗುರಾಗಿಸಿತು ಎಂದು ಭಾವಿಸಿ ಮಾತಾಡುವ ಎಂದೆ” ಪಟ್ಟು ಬಿಡಲೊಲ್ಲಳು.
“ಯಾಕೆ ಸನ್ನೀ? ಮರೆತೆಯಾ ನಮ್ಮ ಮಾತುಕತೆ... ಬರೀ ಏರುಗತಿಯೇ ಆದರೆ ನಮ್ಮ ಬೇರನ್ನ ಮರೆಯುತ್ತೇವೆಂದು, ಬೇರಿಗೆ ಹುಳಹಿಡಿದು ಬದುಕಿನ ಮರ ಬೀಳುತ್ತದೆಂದು ಅಲ್ಲಲ್ಲಿ ಪಾಸ್ ತೆಗೆದುಕೊಳ್ಳುತ್ತೇವಲ್ಲ? ಅಲ್ಲವ..? ನೀನು ತಿಳಿಹೇಳು ನನಗೆ. ಇಷ್ಟೂ ವರ್ಷ ಕಾಲ ಇದೇ ಅಲ್ಲವೇ ನಾವು ಮಾಡಿದ್ದು?”
“ಅಬಾ, ಎಷ್ಟಪ್ಪ ಮಾತು! ಈ ಬಾರಿ ನಿಂಗೆ ತಿಳಿಹೇಳುವ ವಿವೇಕ ನನ್ನಲ್ಲಿಲ್ಲ” ಅವಳು ಮಾತಾಡಿದ ನಂತರ ವಿಷಾದ ತುಂಬಿತು ರೂಮನ್ನ.
ಪ್ರಯತ್ನಪೂರ್ವಕವಾಗಿ ಕೊರಳ ಇಳಿಜಾರ ನೇವರಿಸಹೋದೆ. ಸಟ್ಟನೆ ಕೈ ತಳ್ಳಿದಳು.
“ಇನ್‍ಟ್ಯಾನ್ಜಿಬಿಲಿಟಿ ಆಫ್ ದಿ ಫೀಲಿಂಗ್ಸ್... ರಿಮೆಂಬರ್? ಹಾಗೇ ಇರಲಿ ಬಿಡು ಅಮ್ಮೂ... ಭಾವನೆಗಳ ಬಂಧವೂ ಬೇಡ”
“ಬದುಕನ್ನ ಬಂದಹಾಗೇ ಅಪ್ಪಿಕೊಂಡಾಗಿದೆ ಸನ್ನೀ, ಕಾಣದ ಇನ್ನೊಂದು ತಿರುವು ಬೇಡ” ಕೊನೆಯ ಪ್ರಯತ್ನವೆಂಬಂತೆ ಹೇಳಿದೆ.
“ನಾನು ದಿನವೂ ಅರಳಲು ಪ್ರಯತ್ನಿಸಿ ನರಳುತ್ತಿರುವುದು ನಿಂಗೆ ಕಂಡಿಲ್ಲ ಎಂದಾದರೆ ನಿನಗೆ ಕಣ್ಣಿದ್ದೂ ಪ್ರಯೋಜನವೇನು...?” ನೇರ ಮಾತು ಅವಳದ್ದು.
“...”
“ವಾರ್ಡ್‌ರೋಬಿನ ಬಟ್ಟೆಗಳು ನನ್ನನ್ನು ಅಣಕಿಸುತ್ತವೆ ಕಣೋ... ಬೋರ್ಡ್‌ರೂಮಿನಲ್ಲಿ ಎಲ್ಲರೆದುರು ಫ್ರೀಜ್ ಆಗಿಬಿಡುತ್ತೀನಿ. ಇದಕ್ಕೆಲ್ಲ ಒಂದು ಫುಲ್‌ಸ್ಟಾಪ್ ಬೇಕಲ್ಲ.”
“ಐ ಥಾಟ್, ವಿ ಹ್ಯಾವ್ ಗಾನ್ ಪಾಸ್ಟ್ ಆಲ್ ದೀಸ್. ಗೋ ಫ್ಲ್ಯಾಟ್ ಫೋಟೋಶೂಟ್ ಬಗ್ಗೆ ಬೇರೆ ಮಾತಾಡಿದ್ದೆವಲ್ಲ...?” ನನಗೆ ಇನ್ನೂ ಇವಳನ್ನು ಇಲ್ಲೇ ತಡೆಹಿಡಿಯುವ ಹುಕಿ.
“ಸೋ ಕಾಲ್ಡ್ ಇನ್‌ಕ್ಲೂಸಿವ್‌ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ...? ಗೋ ಫ್ಲ್ಯಾಟ್ ಫೋಟೋಶೂಟಂತೆ! ಕ್ಲಿವೇಜ್ ತೋರಿಸುವ ಡ್ರೆಸ್ ಹಾಕಿದಾಗಲೆಲ್ಲ ಎಷ್ಟು ಬಾರಿ ಕಾಂಪ್ಲಿಮೆಂಟ್ ಕೊಟ್ಟಿಲ್ಲ ನೀನು!” ಕಳ್ಳನನ್ನು ಹಿಡಿದಂತೆ ಮಾತಾಡಿದಳು.
ಥತ್! ನನ್ನನ್ನ ಡೈಲೆಮಾದಲ್ಲಿ ಹಾಕುತ್ತಿದ್ದಾಳಲ್ಲ ಮತ್ತೆ ಇವಳು ಎನ್ನಿಸಿತು. ಮಾತುಗಳು ಇನ್ನಷ್ಟು ರಾಡಿ ಮಾಡುವ ಮೊದಲು ಬ್ರಶ್ ಮಾಡುವ ನೆಪಮಾಡಿ ಬಾತ್ರೂಮಿಗೆ ನಡೆದೆ. ಹಲ್ಲುಕಿರಿದಂತಾಗಿದ್ದ ಬ್ರಶ್ಶನ್ನು ಮೂಲೆಗೆ ರಪ್ಪನೆ ಎಸೆದೆ. ಅವಳಿಗೆ ಏಕಾಂತ ಬೇಕಿತ್ತೋ ನನಗೆ ಬೇಕಿತ್ತೋ ಗೊತ್ತಿಲ್ಲ, ಮಗನ ರೂಮಿಗೆ ಹೋಗಿ ಅವನ ಮಗ್ಗುಲಿನಲ್ಲಿ ಜಾಗ ಮಾಡಿ ಮಲಗಿದೆ.
ಬೆಳಗ್ಗೆ ಐದಕ್ಕೇ ಎಚ್ಚರವಾಯಿತು. ಊರಿಗೆ ಹೋಗಿ ಬರುವ ನಿರ್ಧಾರ ಮಾಡಿದೆ. ಐದು ಗಂಟೆಗಳ ನಾನ್‌ಸ್ಟಾಪ್ ಡ್ರೈವ್. ಎರಡು ದಿನಗಳ ‘ಓಓಓ’ ಸೆಟ್ಅಪ್ ಮಾಡಿ, ಆಫೀಸಿಗೆ ಬರಲಾಗುವುದಿಲ್ಲ ಎಂದು ಇಮೇಲ್ ಬರೆದು ‘ಸೆಂಡ್ ಆಲ್’ ಬಟನ್ನೊತ್ತಿದೆ. ಬೆಕ್ಕಿನ ಹೆಜ್ಜೆಯಿಟ್ಟು ರೂಮಿನೊಳಗೆ ಹೋಗಿ ವಾರ್ಡ್‌ರೋಬಿನ ಇನ್ನರ್ ಡ್ರಾ ತೆಗೆದು ಹತ್ತುವರ್ಷದಿಂದ ಮುಟ್ಟದೇ ಇದ್ದ ಸಿಕ್ರೇಟ್ ಸ್ಯಾಂಟಾ ಗಿಫ಼್ಟನ್ನು ಎತ್ತಿಟ್ಟುಕೊಂಡೆ.
‘ಸನ್ನೀ, ಅಮ್ಮನನ್ನು ನೋಡಿಬರುವೆ’ ಎಂದು ಮೆಸೇಜಿಸಿ ಕಾರು ಹತ್ತಿದೆ.
ದಣಪೆ ದಾಟಿ ಅಂಗಳಕ್ಕೆ ಬಂದಾಗ ಅಮ್ಮ ಕೊಟ್ಟಿಗೆಯಲ್ಲಿದ್ದಳು. “ಅರೇ...ಯಾರು ಬಂದರು ನೋಡು ಗಿರಿಜೆ” ಎನ್ನುತ್ತ ಅಂಗಳಕ್ಕೆ ಬಂದಳು ಅಮ್ಮ. ಗಿರಿಜೆ ಎಲ್ಲ ಗೊತ್ತಾದವಳಂತೆ ಅಂಗಳದತ್ತ ತಿರುಗಿ ಅಂಬಾ ಅಂದಿತು. ಆಗಲೇ ಹೊಳೆದಿದ್ದು ಊರಿಗೆ ಬಂದು ಆರು ತಿಂಗಳಾಗಿದೆ ಎಂದು. ಅರವತ್ತು ಸೀಮೆಯಲ್ಲರಸಿದ ನೆಮ್ಮದಿ ಅವಿತಿದ್ದು ಮಾತ್ರ ಅಮ್ಮನ ಮಡಿಲಲ್ಲಿ ಅನ್ನುವ ಮಾತು ಮನಸ್ಸಿನಲ್ಲಿ ಹೊಳೆದು ತುಟಿಗಳು ಅಗಲವಾದವು. ಒಳ್ಳೆಯ ಎತ್ತರದ ಅಮ್ಮ ಕೆಂಪು ಸೀರೆ, ಕಪ್ಪು ಪೋಲಕದಲ್ಲಿ ಎಂದಿಗಿಂತ ಚೆಂದ ಕಂಡಳು.
ನಾ ಕಂಡಷ್ಟು ದಿನವೂ ಅಮ್ಮನ ಮೇಲೆ ಕೆಸಕ್ಕನೆ ಹಚಗುಟ್ಟುತ್ತಿದ್ದ ಅಪ್ಪ ಅರವತ್ತಕ್ಕೆ ತೀರಿಕೊಂಡಿದ್ದ.
ಬರೀ ಒಳ್ಳೆಯತನ ಮಾತ್ರ ಮನುಷ್ಯನಲ್ಲಿರಲು ಸಾಧ್ಯವೇ? ಎಂದು ಪ್ರಶ್ನಿಸಿಕೊಂಡ ಅಮ್ಮ ಎಲ್ಲವನ್ನೂ ಹೊಟ್ಟೆಯಲ್ಲಿ ಹಾಕಿಕೊಂಡಂತಿದ್ದಳು. ಪರಿಸ್ಥಿತಿ ಯಾವುದೇ ಇರಲಿ, ಜೊತೆಯಿರುವ ಜೀವಗಳ ಅನುತನು ನೋಡುವುದು ಹೇಗೆಂದು ಅಮ್ಮ ಮಾತನಾಡದೇ ಕಲಿಸಿಕೊಟ್ಟಿದ್ದಳು.
ಅಪ್ಪ ಹೋದ ಮೇಲೆ ಕೊಟ್ಟಿಗೆ, ಮನೆ ಸುತ್ತಲ ಜಮೀನು, ಕಾರ್ಯಕಟ್ಟಲೆ, ಆಗೀಗ ನಮ್ಮೊಡನೆ ವಿಡಿಯೋ ಕಾಲ್ಗಳು ಎಂದುಕೊಂಡು ಆರಾಮವಾಗಿದ್ದಳು. ಮೊದಲು ಕಳೆದ ಕಷ್ಟದ ದಿನಗಳ ಕನಸು ಬಿದ್ದು ನಿದ್ದೆ ಕೆಡಿಸದಿರಲಿ ಎಂದು ದಿನವೂ ಅರ್ಧ ನಿದ್ದೆಗುಳಿಗೆ ನುಂಗುವುದನ್ನು ಮಾತ್ರ ಮರೆಯುತ್ತಿರಲಿಲ್ಲ.
ವರ್ಷಕ್ಕೊಮ್ಮೆ ವಾರದ ಮಟ್ಟಿಗೆ ನಮ್ಮೊಟ್ಟಿಗೆ ಬಂದಿದ್ದು ಮೊಮ್ಮಗನಿಗೆ ಅಚ್ಚೆ ಮಾಡುತ್ತಿದ್ದಳು. ಅದರಾಚೆಗೆ ಅವಳೂ ಏನೂ ನಿರೀಕ್ಷಿಸುತ್ತಿರಲಿಲ್ಲ, ನಾವೂ ಅವಳನ್ನು ಪರೀಕ್ಷೆಗೊಡ್ಡುತ್ತಿರಲಿಲ್ಲ.
ಒಂದೊಳ್ಳೆಯ ಸ್ನಾನ ಮಾಡಿ ಅಮ್ಮನ ಅಕ್ಕರಾಸ್ಥೆಯ ಜಮೀನಿನಲ್ಲಿ ತಿರುಗಾಡಿದೆ. ತಿಳಿಸಾರನ್ನು ಲೋಟದಲ್ಲಿ ಸೊರಸೊರ ಶಬ್ದಮಾಡಿ ಕುಡಿದೆ. ಗಾಡ್ರೆಜ್ ಬೀರುವಿನ ಬಾಗಿಲನ್ನು ಸಶಬ್ದವಾಗಿ ತೆಗೆದು ಅಮ್ಮ ಜೋಡಿಸಿಟ್ಟುಕೊಂಡ ಸೀರೆಗಳ ಮೇಲೆ ಪ್ರೀತಿಯಿಂದ ಕೈಯಾಡಿಸಿದೆ. ಹಿತ್ತಿಲ ಬಾಗಿಲಲ್ಲಿದ್ದ ಕೈತೊಳೆವ ಸಿಂಕಿನ ಮೇಲ್ಭಾಗದ ಕನ್ನಡಿ ಪಳಪಳ ಹೊಳೆಯುತ್ತಿರುವುದ ನೋಡಿ ಬೆರಗಾದೆ. ಮೊದಲು ಯಾವತ್ತೂ ಈ ಕನ್ನಡಿಯ ಹೊಳಪು ನನ್ನ ಕಣ್ಣಿಗೆ ಬೀಳದ್ದಕ್ಕೆ ಬೇಸರಪಟ್ಟೆ.
‘ನಾಳೆ ಬೆಳಗ್ಗೆ ಒತ್ತು ಶ್ಯಾವಿಗೆ ಮಾಡಲಾ’ ಎಂದು ಕೇಳಿದ ಅಮ್ಮ ನನ್ನ ಉತ್ತರವನ್ನು ಮೊದಲೇ ಊಹಿಸಿದವಳಂತೆ ಎದ್ದು ದೇವರಮನೆಯ ಪಕ್ಕದ ಪಡಸಾಲೆಯಲ್ಲಿ ಮಲಗಿದಳು. ಜಗುಲಿಯಲ್ಲಿ ಟಿ.ವಿ ಚ್ಯಾನೆಲ್ ಬದಲಾಯಿಸುತ್ತ ಬಿದ್ದುಕೊಂಡೇ ಇದ್ದ ನನ್ನ ತಲೆಯಲ್ಲಿ ನೂರು ಆಲೋಚನೆಗಳು ಬಟ್ಟೇಗುಣಿ ತಿರುಗುತ್ತಿದ್ದವು. ಕಟಾಂಜನದ ಮಧ್ಯೆ ಮಾಲೆ ಹಾಕಿ ಕೂತ ಅಪ್ಪನ ಫೋಟೋದ ಮೇಲೆ ಬೇಡವೆಂದರೂ ಕಣ್ಣು ಹೊರಳುತ್ತಿತ್ತು. ನಾನು ಏನೋ ನಿರ್ಧರಿಸಿದಂತೆ ಎದ್ದೆ. ಗಡಿಯಾರ ಹನ್ನೊಂದೂವರೆ ತೋರಿಸುತ್ತಿತ್ತು. ಬ್ಯಾಗಿನಲ್ಲಿದ್ದ ಸೀಕ್ರೆಟ್ ಸ್ಯಾಂಟಾ ಗಿಫ್ಟನ್ನು ಕವರಿನ ಸಮೇತ ತೆಗೆದು ಕೊಟ್ಟಿಗೆಯ ಪಕ್ಕ ಬಂದೆ. ಕೈಗೆ ಸಿಕ್ಕ ಕೋಲಿನ ಸಹಾಯದಿಂದ ಮಣ್ಣು ಕಲ್ಲು ಏನನ್ನೂ ಲೆಕ್ಕಿಸದೇ ಸಣ್ಣದೊಂದು ಗುದ್ದ ತೋಡಿ ಗಿಫ್ಟನ್ನು ಅದರೊಳಗಿಟ್ಟೆ. ಸುತ್ತಲಿದ್ದ ಮಣ್ಣನ್ನು ಗುದ್ದವೇ ಕಾಣದಂತೆ ಮುಚ್ಚಿದೆ. ಎದ್ದು ನಿಂತೆ. ಮೈ ಇದ್ದಕ್ಕಿದ್ದಂತೆ ಹಗುರಾದಂತಾಯಿತು. ಒನ್ನಮೂನೆ ಸ್ಖಲನದ ಸುಖ!
ಮತ್ತೆ ಜಗುಲಿಗೆ ಬಂದು ಹಾಸಿಗೆಯ ಪಕ್ಕದಲ್ಲಿದ್ದ ಮೊಬೈಲನ್ನು ಎತ್ತಿಕೊಂಡು ಸನ್ಮುಕ್ತಾಳ ಸರ್ಜನ್ನರ ನಂಬರನ್ನು ಸೇವ್ ಮಾಡಿಕೊಂಡೆ. ಮೆಸೇಜ್ ಟೈಪ್ ಮಾಡತೊಡಗಿದೆ... ‘ಡಾಕ್, ದಿಸ್ ಇಸ್ ಸನ್ಮುಕ್ತಾಸ್ ಹಸ್ಬಂಡ್ ಅಮಿತ್. ಐ ವಿಲ್ ಬೀ ಇನ್ಫ಼್ರಂಟ್ ಆಫ್ ದ ಥಿಯೇಟರ್ ಡ್ಯೂರಿಂಗ್ ದ ಸರ್ಜರಿ ಟುಮೊರೋ.’
