ಬಾಬ್ ಎಂಬ  ಡೊಂಕು ಬಾಲದ ನಾಯಕರ ಕಥಾನಕ.

-ಅಮಿತ ರವಿಕಿರಣ್  

 

ಶಾಲೆಯಿಂದ ಮಗಳನ್ನು ಕರೆದುಕೊಂಡು ವಾಪಸ್ ಮನೆಗೆ ಬರುವಾಗ ದೂರದಿಂದಲೇ ಪ್ಯಾಟ್ರಿಕ್ ಮತ್ತು ಬಾಬ್ (BOB) ಕಾಣಿಸಿದರು. ಪ್ರತಿಸಲದಂತೆ ಮಗಳು ನನ್ನ ಕೈ ಬಿಡಿಸಿಕೊಂಡು ಅವರತ್ತ ಓಡಿ ಹೋದಳು. ಪ್ಯಾಟ್ರಿಕ್ ನನ್ನೆಡೆಗೆ ನೋಡುತ್ತಾ ನಿಮ್ಮನ್ನೇ ಕಾಯುತ್ತಿದ್ದೆ, ನೋಡಿ ನಿನ್ನೆ ರಾತ್ರಿಯಿಂದ ಇವ ಊಟವೇ ಮಾಡಿಲ್ಲ ಅನ್ನುತ್ತಾ ಕಿಸೆಯಿಂದ ತಿಂಡಿ ಪೊಟ್ಟಣ ತೆಗೆದು ನನ್ನ ಮಗಳ ಹತ್ತಿರ ಕೊಟ್ಟು "ನೀ ತಿನ್ನಿಸಿ ನೋಡ್ತೀಯ, ಆಡುವ ಗುಂಗಿನಲ್ಲಿ ಸ್ವಲ್ಪ ತಿಂದರೂ ತಿನ್ನಬಹುದು" ಅಂದ. ನನ್ನ ಮಗಳು ನಿಯತಿ ಮತ್ತು ಬಾಬ್ ಒಂದು ಒಣ ಕಟ್ಟಿಗೆಯ ತುಂಡನ್ನು ಹಿಡಿದು ಆಟ ಆಡುತ್ತ ಮಧ್ಯ ಮಧ್ಯ ನಿಯತಿ ಅವನಿಗೆ ತಿಂಡಿ ತಿನ್ನಿಸುತ್ತ ಹದಿನೈದು ನಿಮಿಷದಲ್ಲಿ ಬಾಬ್ ಪೂರ್ತಿ ಪೊಟ್ಟಣ ತಿಂದು ಮುಗಿಸಿದ್ದನ್ನ ನೋಡಿ ಪ್ಯಾಟ್ರಿಕ್ ಮುಖದಲ್ಲಿ ಸಮಾಧಾನದ ನಗು ಹರಡಿತ್ತು. 

ಬಾಬ್ ಮತ್ತು ಪ್ಯಾಟ್ರಿಕ್ ಪರಿಚಯವಾದದ್ದು ೨ ವರುಷಗಳ ಹಿಂದೆ. ಆಗ ನನ್ನ ಮಗಳು ನರ್ಸರಿಯಲ್ಲಿದ್ದಳು, ''ಅಮ್ಮ ನನಗೊಂದು pet ಬೇಕು" ಎಂದು ಗಂಟು ಬಿದ್ದಿದ್ದಳು. ಓಹ್ ಪೆಟ್ಟು ಬೇಕಾ, ಬಾ ನಾನಾ ಹತ್ತಿರ ಡಿಸೈನ್ ಡಿಸೈನ್ ಪೆಟ್ಟುಗಳ ಸಂಗ್ರಹ ಇದೆ, ನನ್ನ ಅಮ್ಮ ನನಗೆ ಕೊಟ್ಟಿದ್ದು, ನಾನು ಈ ವರೆಗೆ ಯಾರಿಗೂ ಕೊಡದೆ ನನ್ನಲ್ಲೇ ಎಲ್ಲಾ ಉಳಿದು ಹೋಗಿವೆ. ಬಾ ಪೆಟ್ಟು ಕೊಡುವೆ ಎಂದು ತಮಾಷೆ ಮಾಡಿ ಆ ಗಳಿಗೆ ನೂಕಿ ಬಿಡುತ್ತಿದ್ದೆ. ಊರಿನಲ್ಲಿ ಆಗಿದ್ದರೆ ಬೆಕ್ಕೋ, ಕೋಳಿಮರಿ, ನಾಯಿಮರಿ ತಂದು ಸಾಕಬಹುದಿತ್ತು. ಆದರೆ ಇಲ್ಲಿ? ನಾಯಿ ಸಾಕುತ್ತಿರುವವರ ಅನುಭವಗಳನ್ನ ಕೇಳಿಯೇ, ಅಯ್ಯೋ! ಇಷ್ಟೊಂದು ಕಷ್ಟವೇ? ಎಂದು ಎನ್ನಿಸಿ ಯಾವತ್ತೂ ಗೋಲ್ಡ್ ಫಿಶ್ ಗಿಂತ ಮೇಲಿನದನ್ನು ಯೋಚಿಸಲಾಗಿರಲಿಲ್ಲ. ಆದರೆ ಆಗಾಗ ಈ ವಿಷಯವಾಗಿ ನನಗೆ ಬೇಸರವೂ ಆಗ್ತಿತ್ತು. ಮಲೆನಾಡ ಸೆರಿಗಿನಲ್ಲಿರುವ ನನ್ನ ತವರಿನಲ್ಲಿ ಸಾಕು ಪ್ರಾಣಿಗಳು ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದ್ದವು, ನಾವು ಸಾಕಿದ ಪ್ರತೀ ನಾಯಿ, ಬೆಕ್ಕುಗಳ ಸುತ್ತ, ಆಕಳು, ಕರುಗಳ ಜೊತೆ ನಮ್ಮ ನೂರಾರು ನೆನಪುಗಳಿವೆ. ಅಂಥ ಅನುಭವಗಳನ್ನ ನನ್ನ ಮಕ್ಕಳಿಗೆ ಅವರು ಬಯಸಿದ್ದಾಗ್ಯೂ ಕೊಡಲಾಗುತ್ತಿಲ್ಲವಲ್ಲ ಎಂಬ ಸಣ್ಣ ನಿರಾಸೆ ನನಗೆ ಇದ್ದೇ ಇತ್ತು. 

ಆ ದಿನ ಎಂದಿನಂತೆ ನರ್ಸರಿಯಿಂದ ವಾಪಸ್ ಬರುವ ಹೊತ್ತು. ಮೇಪಲ್ ಮರಗಳ ಕೆಳಗೆ ಕುಳಿತು ಅರಳುಗಣ್ಣುಗಳಿಂದ ಆಚೀಚೆ ಬರುವವರನ್ನು ನೋಡುತ್ತಾ ಅವರು ರಸ್ತೆಯ ತುದಿಯಲ್ಲಿ ತಿರುಗಿ ಮರೆಯಾಗುವ ತನಕ ಅವರತ್ತ ಕಣ್ಣು ನೆಟ್ಟು ಮತ್ತೆ ಇನ್ನ್ಯಾರೋ ಬಂದರೆನಿಸಿದರೆ ಪಟ್ಟನೆ ಕತ್ತು ಹೊರಳಿಸಿ ನೋಡುತ್ತಿದ್ದ ಕಪ್ಪು ಬಿಳುಪಿನ ಬಾಬ್ ಯಾಕೋ ನಮ್ಮ ಮನೆಯಲ್ಲಿದ್ದ 'ಬುಧ' ಎಂಬ ನಾಯಿಯನ್ನು ನೆನಪಿಸಿ ಬಿಟ್ಟಿದ್ದ.

 ಮೊದಲ ಭೇಟಿಯಲ್ಲೇ ಬಾಬ್ ನನ್ನ ಮಗಳಿಗೂ ತನ್ನ ಗುಂಗು ಹಿಡಿಸಿದ್ದ. ಮಾತೆತ್ತಿದರೆ ಬಾಬ್ ಅನ್ನುವಷ್ಟು ಸಲಿಗೆ. ಆಗ ಬಾಬ್ ನ ಬಲಗಾಲು ಮುರಿದಿತ್ತು. “ಗುಡ್ಡದಲ್ಲಿ ನಡೆದಾಡಲು ಕರೆದುಕೊಂಡು ಹೋಗಿದ್ದೆ, ಇವ ತನಗೆ ರೆಕ್ಕೆಯೂ ಇದೆ ಅಂದುಕೊಂಡು ಹಾರಾಡಲು ಹೋಗಿ ಬಿದ್ದು ಕಾಲು ಮುರಿದುಕೊಂಡ. ಈಗ ಪ್ಲಾಸ್ಟರ್ ಬಿಚ್ಚಿದ್ದಾರೆ ಆದರೆ ಇನ್ನು ಓಡಾಡಲು ಆಗುತ್ತಿಲ್ಲ. ಅದಕ್ಕೆ ತನ್ನ ಬಳಿ ಯಾರಾದರೂ ಆಡಲಿ, ಮಾತಾಡಲಿ ಅನ್ನುವ ಅತಿಯಾಸೆ ಇವನಿಗೆ, ಶಾಲೆ ಮಕ್ಕಳು ಬರುವ ಹೊತ್ತು ಹೇಗೆ ಗೊತ್ತಾಗುತ್ತದೋ ಗೊತ್ತಿಲ್ಲ, ಒದರಲು ಶುರು ಮಾಡುತ್ತಾನೆ, ಇನ್ನೆರಡು ಘಂಟೆ ಹೊರಗೆ ಇರಬೇಕು ನಾನು,” ಎಂದು ಪಾಟ್ರಿಕ್ ಒಂದೇ ಸಮನೆ ಮಾತಾಡಿದ. ನಾವು ಆ ನೆರಳಲ್ಲೇ ಬಾಬ್ ಪಕ್ಕದಲ್ಲೇ ಕುಳಿತು ಅವನ ಕತ್ತು ಸವರಿ ಮುದ್ದು ಮಾಡಿ ಬಂದಿದ್ದೆವು. ಹೀಗೆ ಆಗಿತ್ತು ನಮ್ಮ ಮೊದಲ ಭೇಟಿ.

ಆ ದಿನದಿಂದ, ಶಾಲೆಯಿಂದ ಬರುವಾಗ ಬಾಬ್ ನೊಂದಿಗೆ ೧೦ ನಿಮಿಷವಾದರೂ ಆಟ ಆಡಿ ಬರುವ ರೂಡಿ ಆಯಿತು. ಬಾಬ್ ಒಬ್ಬ ತುಂಟ ಪೋರನಂತೆ. ಆಟ ಆಡುತ್ತಲೇ ಇರಬೇಕು. ಕಣ್ಣುಗಳು ಸದಾ ನೂರು ವಾಲ್ಟಿನ ಬಲ್ಬಿನಂತೆ ಕುತೂಹಲದಿಂದ ಮಿನುಗುತ್ತಲೇ ಇರುತ್ತವೆ. ಅವನ ಹತ್ತಿರ ಒಂದು ರಬ್ಬರ್ ಚಂಡು, ದಪ್ಪ ಹಗ್ಗದ ತುಂಡು ಇದೆ ಅದವನ ಆಟಿಕೆಗಳು, ಆದರೆ ಅವನಿಗೆ ಈ ಮಕ್ಕಳು ಎಸೆಯುವ ಕಟ್ಟಿಗೆ ತುಂಡು, ಪೇಪರ್ ಚೂರುಗಳೆಂದರೆ ವೀಪರೀತ ಪ್ರೀತಿ. ಹಾಗೆ ದೂರ ಎಸೆದ ಕಟ್ಟಿಗೆಯನ್ನು ಆರಿಸಿ ತಂದು ಹಲ್ಲಿನಿಂದ ಕಚ್ಚಿ ಚೂರು ಚೂರು ಮಾಡಿ ಎಸೆದು ವಿಜಯದ ನಗೆ ಬೀರಿ ಮತ್ತೆ ಮಾಡು ಅಂತ ಪುಟ್ಟ ಮಕ್ಕಳಂತೆ ಗೋಗರೆಯುತ್ತ ನಿಲ್ಲುವ ಹೊತ್ತಿಗೆ ಇತ್ತ ಪ್ಯಾಟ್ರಿಕ್ ಹೆಮ್ಮೆಯಿಂದ ಬಾಬ್ ಬಗ್ಗೆ ಹೇಳಿಕೊಳ್ಳಲು ಶುರು ಮಾಡುತ್ತಾನೆ. ಈ ಜಾಣ ಮಕ್ಕಳ ಅಪ್ಪ ಅಮ್ಮಂದಿರು ಸ್ನೇಹಿತರು ಸಂಭಂದಿಕರೆದುರು ತಮ್ಮ ಮಕ್ಕಳನ್ನು ಹೊಗಳುತ್ತಾರಲ್ಲ ಹಾಗೆ. ಮಧ್ಯ ಮಧ್ಯ ತನ್ನ ಒಂಟಿತನ, ತನ್ನ ಆರೋಗ್ಯದ ಬಗ್ಗೆ ಹೇಳುತ್ತಾನೆ. ಕೆಲವೊಮ್ಮೆ ವಿಷಾದ ಆವರಿಸಿಕೊಳ್ಳುವುದು ನನ್ನ ಅರಿವಿಗೆ ಬರುತ್ತದೆ ಕೂಡ. ಮರು ನಿಮಿಷದಲ್ಲೇ ಬಾಬ್ ನ ಸುದ್ದಿ ಅವನ ಹೊಗಳಿಕೆ ಶುರುವಾಗುತ್ತದೆ. 

“ನನಗೆ ಹೋದವಾರ ಜ್ವರವಿತ್ತು, ಬಾಬ್ ನನ್ನ ಪಕ್ಕವೇ ಮಲಗಿದ್ದ, ನಾ ಕೆಮ್ಮಿದರೂ ಏಳುತ್ತಿದ್ದ ನನಗೆನನ್ನ ಮಕ್ಕಳು ಹತ್ತಿರವಿಲ್ಲದಿದ್ದರೆ ಏನಾಯಿತು ಇವನಿದ್ದಾನಲ್ಲ ನನ್ನ ಕಾಳಜಿ ಮಾಡಲು.” ಹಾಗೆಲ್ಲ ಹೇಳುವಾಗ ನನಗೆ ಪಿಚ್ಚೆನಿಸುತ್ತದೆ. ಮತ್ತೆ ಅವನು ಹೇಳುವುದು ಸುಳ್ಳಲ್ಲ ಎಂಬುದೂ ನನಗೇನು? ಆ ಏರಿಯಾದಲ್ಲಿರುವ ಎಲ್ಲರಿಗು ಗೊತ್ತು.

ನನ್ನ ಮನೆ ಹತ್ತಿರ ಒಂದು old age home ಇದೆ ಅಲ್ಲಿರುವ ಸುಮಾರು ಅಜ್ಜಿಯರಿಗೆ ಬಾಬ್ ಎಂದರೆ ಪ್ರಾಣ, ಅವನಿಗೆ ಒಳ್ಳೊಳ್ಳೆ ಬಿಸ್ಕೆಟ್,  ಕೇಕ್ ತಂದು ಕೊಡುತ್ತಾರೆ ಅದನ್ನು ನಾನೂ ನೋಡಿದ್ದೇನೆ. ಪಾಟ್ರಿಕ್ ಹೇಳುವಂತೆ, ಅಲ್ಲಿ ಒಂದು ಅಜ್ಜಿ ಗಟ್ಟಿಮುಟ್ಟಾಗಿದ್ದಾಳೆ ಬಾಬ್ ಸೀದಾ ಅವಳ ಮೇಲೆ ಮುದ್ದಿನಿಂದ ಜಿಗಿದು ಆಕೆಯ ಹೊಟ್ಟೆ ಮೇಲೆ ಕಾಲಿಟ್ಟು ನಿಂತು ಅವಳ ಹತ್ತಿರ ತಲೆ ನೇವರಿಸಿಕೊಳ್ಳುತ್ತಾನೆ, ವೀಲ್ಚೇರ್ ಮೇಲೆ ಇರುವ ಅಜ್ಜಿಯಾ ಹತ್ತಿರ ಸುಮ್ಮನೆ ನಡೆದು ಹೆಚ್ಚಿನ ಆರ್ಭಟ ವಿಲ್ಲದೆ ವಿಧೇಯ ಮಗುವಿನಂತೆ ಅಕ್ಕ ಪಕ್ಕ ಸುತ್ತುತ್ತಾನೆ. ಇನ್ನೊಬ್ಬರು ಅಜ್ಜಿ ಹಾಸಿಗೆ ಹಿಡಿದಿದ್ದಾರೆ ಅವರ ಹತ್ತಿರ ಹೋಗುವಾಗ ಸೀದಾ ಮಂಚದ ಮೇಲೆ ಕಾಲಿಟ್ಟು ನಿಂತು ಮುದ್ದು ಮಾಡಿಸಿಕೊಂಡು ಬರುತ್ತಾನೆ. ಅದಕ್ಕೆ ಅವರು ಅವನಿಗೆ ತಿಂಡಿ ತರುವುದು. ಇವನಿಗೂ ಇದು ಅಭ್ಯಾಸ ಆಗಿ ಹೋಗಿದೆ. ಯಾರು ಹೇಳಿದ್ದು ಪ್ರಾಣಿಗಳಿಗೆ ಸಭ್ಯತೆ ಇಲ್ಲ ಅಂತ! ನೋಡು ನನ್ನ ಹುಡುಗ ಎಷ್ಟು ಜಾಣ. ಎಂದು ಹೆಮ್ಮೆಯಿಂದ ಬಾಬ್ ಕಡೆಗೆ ನೋಡುತ್ತಾನೆ ಬಾಬ್ ಎಲ್ಲ ಅರ್ಥವಾದವರಂತೆ ಬಾಲ ಅಲ್ಲಾಡಿಸಿ ಕಣ್ಣರಳಿಸುತ್ತಾನೆ. 

ಪ್ರತಿದಿನ ಭೇಟಿ ಬಾಬ್ ನನ್ನು ಭೇಟಿ ಮಾಡುವುದು ಅಭ್ಯಾಸ ಆಗಿಬಿಟ್ಟಿತ್ತು, ಆ ದಿನ ನಿತ್ಯದ ೧೦ ಆಟ ಮುಗಿಸಿ ಇನ್ನೇನು ಹೋರಡಬೇಕು ಅನ್ನುವಷ್ಟರಲ್ಲಿ ಬಾಬ್ ಒಂಥರಾ ವಿಚಿತ್ರ ಧ್ವನಿ ತೆಗೆದು ಕುಸು ಕುಸು ಮಾಡತೊಡಗಿದ, “Oh he is crying…ಒಹ್ god!” ಅವನಿಗೆ ನೀವು ಹೋಗ್ತೇನೆ ಅಂದಿದ್ದು ಇಷ್ಟ ಆಗ್ತಿಲ್ಲ ಅಂದು ನಗಲು ಶುರು ಮಾಡಿದ. ನನಗು ಬಾಬ್ನ ನ ಈ ವಿಚಿತ್ರ ನಡುವಳಿಕೆ ನೋಡಿ ನಗು ಬಂದಿತ್ತು. ಮತ್ತೆ ಆ ದಿನ ಶುರುವಾದ ಈ ಅಳುವ ಕ್ರಮ ಈಗಲೂ ಜಾರಿಯಲ್ಲಿದೆ. 

  ಬಾಬ್ ಸ್ವಲ್ಪ ಚಟುವಟಿಕೆ ಕಡಿಮೆ ಮಾಡಿದರೂ ಸಾಕು, ಪ್ಯಾಟ್ರಿಕ್ ಅವನನ್ನು ಕರೆದುಕೊಂಡು ಟ್ರಿಪ್ ಹೊರಡುತ್ತಾನೆ. ಸಮುದ್ರ ತೀರದಲ್ಲಿ ಕ್ಯಾರಾವ್ಯಾನ್ ನಲ್ಲಿ ತಿಂಗಳುಗಟ್ಟಲೆ ಉಳಿದು ಬರುತ್ತಾರೆ. ಬಂದ ನಂತರ ಬಾಬ್ ನ ವೀರಗಾಥೆಗಳನ್ನು ಕಣ್ಣೆದುರೇ ನಡೆದಂತೆ ಬಣ್ಣಿಸುತ್ತಾನೆ. ಈ ಒಂದು ವರುಷದ lockdown ಸಮಯದಲ್ಲಿ ಇಬ್ಬರು ಅದೆಷ್ಟು ಹಳಹಳಿಸಿದ್ದಾರೋ. ಪ್ಯಾಟ್ರಿಕ್ ನ ಕಡುಹಸಿರು ಬಣ್ಣದ ಕಾರಿನ ಮುಂದಿನ ಸೀಟಿನಲ್ಲಿ ಬಾಬ್ ಗತ್ತು ಗಾಂಭೀರ್ಯದಿಂದ ಕುಳಿತುಕೊಳ್ಳುವುದನ್ನು ನೋಡಿದ್ರೆ ಅವನ ಮೇಲೆ ಮುದ್ದು ಉಕ್ಕುತ್ತದೆ. 

ಮೊನ್ನೆ ಒಂದು ದಿನ ಹೀಗೆ ಮಾತಾಡುತ್ತ “ನನ್ನ ಮಗಳು ನಿಯತಿ ಕೂಡ ಒಂದು ನಾಯಿ ಮರಿ ಬೇಕು ಅಂತಾಳೆ, ಆದ್ರೆ ನಮಗೆ ಧೈರ್ಯ ಇಲ್ಲ, ಅದನ್ನು ನೋಡಿಕೊಳ್ಳಬಲ್ಲೆವೇ? ಅಂತ ಅನಿಸುತ್ತೆ,” ಎಂದೆ. ಅದಕ್ಕೆ ಪಾಟ್ರಿಕ್ ಗಂಭೀರವಾಗಿ “ನಾವು ಮಕ್ಕಳನ್ನು ಬೆಳೆಸುತ್ತೇವೆ, ಕೇಳಿದ್ದೆಲ್ಲ ಕೊಡಿಸುತ್ತೇವೆ , ನಮಗಾದ ನೋವು ಅವರಿಗಾಗಬಾರದು ಅಂತ ದಿನ ರಾತ್ರಿ ಕಷ್ಟಪಟ್ಟು ಕೆಲಸ ಮಾಡ್ತೇವೆ ಒತ್ತಡದಲ್ಲಿ ಬದುಕುತ್ತೇವೆ , ಆದರೆ ಮಕ್ಕಳು ಏನು ಮಾಡ್ತಾರೆ ಹೇಳು ? ಒಂದೇ ನಮ್ಮನ್ನು ಒಂಟಿ ಯಾಗಿ ಬಿಟ್ಟು ತಮ್ಮ ಕನಸುಗಳನ್ನ ಅರಸಿ ಹೊರಡುತ್ತಾರೆ, ಅಥವಾ ಚಟಗಳಿಗೆ ಬಿದ್ದು ದಾರಿ ಹೆಣವಾಗಿ ಹೋಗ್ತಾರೆ.” 

ಬಾಬ್ ನೋಡು ನಾನು ಬರುವುದನ್ನ ಎದುರು ನೋಡ್ತಾನೆ. ಸದಾ ಹಿಂದೆ ಮುಂದೆ ಓಡಾಡ್ತಾನೆ. ಆದರೆ ಎಲ್ಲಿದ್ದಾರೆ ನಾ ಬೆಳೆಸಿದ ನನ್ನ ಮಕ್ಕಳು? ಎಂದು ಬೇಸರಿಸಿದ . 'Dog shelter home' ಗೆ ಹೋಗಿ ಒಂದು ಸಣ್ಣ ಮರಿಯನ್ನು ತಂದುಕೊಡಿ, ಅವಳ ಬಾಲ್ಯ ಇನ್ನು ಸುಂದರವಾಗುತ್ತದೆ ಎಂದು ಹೇಳಿ ಅವನೇನೋ ಸುಮ್ಮನಾದ. 

ಆದರೆ ನನ್ನ ತಲೆಯಲ್ಲಿ ಮಹಾಪೂರ ಹರಿಬಿಟ್ಟ ನಾನು ಬಿಟ್ಟು ಬಂದಿರುವ ನನ್ನ ಅಪ್ಪ ಅಮ್ಮ, ನನ್ನ ಮನೆ, ಮಗಳಾಗಿ ನನಗಿರುವ ಕರ್ತವ್ಯ. ಏನೇನೋ ತಲೆಯಲ್ಲಿ ಸುಳಿದಾಡಿತು. ನಮ್ಮ ತಂದೆ ತಾಯಿ ನಮ್ಮ ಬಗ್ಗೆ ಹೀಗೆ ಅಂದುಕೊಂಡರೆ? ನಾ ಅವರನ್ನು ಪ್ರೀತಿಸುವುದು ಸುಳ್ಳಲ್ಲ ಆದ್ರೆ ಜೊತೆಗಿರಲು ಆಗುವುದಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳಲು ಸ್ವಲ್ಪ ಹೊತ್ತು ಹಿಡಿಯಿತು.  

ಬಾಬ್ ಗೆ ಈಗ ಒಬ್ಬ girlfriend ಆಗಿದ್ದಾಳೆ ಆಕೆಯ ಹೆಸರು violet ಎಂದು. Weekend ಗಳಲ್ಲಿ ಪ್ಯಾಟ್ರಿಕ್ ಅವನನ್ನು ಹೊರಗೆ ಕರೆದುಕೊಂಡು ಹೋಗಿ ವೈಲೆಟ್ ಜೊತೆ ಪಾರ್ಕಿನಲ್ಲಿ ಆಟ ಆಡಲು ಬಿಡುತ್ತಾನೆ. 

ಪ್ಯಾಟ್ರಿಕ್ ಗೆ ಬಾಬ್ ಸಿಕ್ಕ ಘಟನೆಯು ತುಂಬಾ ಮಜವಾಗಿದೆ. ಇಲ್ಲಿ ಕುರಿ ಕಾಯುವ shephard ಗಳು ನಾಯಿಯನ್ನು ಸಾಕುತ್ತಾರೆ. ಆ ನಾಯಿಗಳ ಕೆಲಸ ಕುರಿಗಳನ್ನ ನರಿಗಳಿಂದ ರಕ್ಷಿಸುವುದು ಅವುಗಳು ಹಳ್ಳ ಕೊಳ್ಳಗಳಿಗೆ ಬೀಳದಂತೆ ಎಚ್ಚರಿಸಿ ಅವುಗಳನ್ನ ಒಂದೇ ಕಡೆ ಇರುವಂತೆ ನೋಡಿಕೊಳ್ಳುವುದು. ಈ ನಾಯಿಗಳು ಮರಿ ಹಾಕಿದಾಗ ಒಂದಿಷ್ಟು ವಾರಗಳ ನಂತರ ಅವುಗಳ ಪರೀಕ್ಷೆ ನಡೆಸಲಾಗುತ್ತದಂತೆ, ಮತ್ತು ಆ ದಿನದ ಫಲಿತಾಂಶವೇ ಆ ನಾಯಿಮರಿಯ ಮುಂದಿನ ಭವಿಷ್ಯ ನಿರ್ಧರಿಸುತ್ತದೆ.

ಓಡುವ ಕುರಿ ಮಂದೆಯ ಹಿಂದೆ ಈ ಪುಟ್ಟ ನಾಯಿ ಮರಿಗಳನ್ನು ಓಡಿಸಲಾಗುತ್ತದೆ. ಕೆಲವು ನಾಯಿ ಮರಿಗಳು ಗುಂಪಿನಲ್ಲಿರುವ ದೊಡ್ಡ ನಾಯಿಗಳನ್ನು ಅನುಕರಿಸಿ ಕುರಿಮಂದೆಯ ಹಿಂದೆಯೇ ಜೋರಾಗಿ ಓಡಿ ಬೊಗಳುತ್ತಾ ಸಾಗುತ್ತವೆ ಆದರೆ ಕೆಲವೊಂದು ನಾಯಿಮರಿಗಳು ಮನೆ ಕಡೆಗೆ ಓಡಿ ಬರುತ್ತವಂತೆ. ಹಾಗೆ ಮನೆ ಕಡೆಗೆ ಓಡಿ ಬಂದ ನಾಯಿ ಮರಿಗಳನ್ನು ಶಫರ್ಡ್ ಗಳು ತಮ್ಮ ಜೊತೆಗೆ ಇಟ್ಟುಕೊಳ್ಳುವುದಿಲ್ಲ. ಅವುಗಳನ್ನ ಬೇಗ ಆದಷ್ಟು ಬೇಗ ಸಾಗಿ ಹಾಕಿಬಿಡುತ್ತಾರೆ. ಹಾಗೆ ಕುರಿಗಳ ಹಿಂದೆ ಹೋಗದೆ ಕೂಗುತ್ತಾ ಹೆದರಿ ಮನೆಗೆ ಬಂದು ಮುದುಡಿ ಮಲಗಿದ ಮುದ್ದು ನಾಯಿ ಮರಿ ನಮ್ಮ ಈ ಬಾಬ್ ಅಂದು ಕುರಿಗಳನ್ನು ನೋಡಿಕೊಳ್ಳಕಾಗ್ದಿದ್ರು ಇವತ್ತು ಕ್ಯಾನ್ಸರ್ ಸರ್ವೈವರ್ ಪ್ಯಾಟ್ರಿಕ್ ನ  ಸಂಪೂರ್ಣ ಜವಾಬ್ದಾರಿ ಹೊತ್ತು ಅವನೊಂದಿಗೆ ಸರಿಸಮವಾಗಿ ನಡೆಯುತ್ತಿದ್ದಾನೆ. ಅದಕ್ಕೆ 10 ಪಟ್ಟು ಹೆಚ್ಚು ಪ್ರೀತಿಯೂ ಗಳಿಸುತ್ತಿದ್ದಾನೆ.

ಬಾಬ್ ಈಗಲೂ ನಮಗಾಗಿ ಕಾಯುತ್ತಾನೆ , ನಾವು ಅವನಿಗೆ ಕೊಡುವ ಬರೀ ಕೆಲ ನಿಮಿಷದ ಬದಲು, ಬದುಕಿನ ಅತಿ ಸುಂದರ ಪಾಠ ಹೇಳಿಕೊಟ್ಟ ಜೀವಿ ಬಾಬ್. ಈಗ ಒಂದೈದಾರು ತಿಂಗಳ ಹಿಂದೆ ಮನೆ ಮುಂದೆ ಸಿಕ್ಕ ಬಾಬ್ ಕಣ್ಣುಗಳು ಗಾಜಿನ ಗೋಲಿಯಂತೆ ಹೊಳೆಯುತ್ತಿದ್ದ ಕಣ್ಣುಗಳು, ಖಾಲಿ  ಖಾಲಿ ಅನ್ನಿಸಿದವು. ಹುಷಾರಿಲ್ವಾ? ಬಾಬ್ ಸಪ್ಪಗಿದ್ದಾನೆ ಅಲ್ಲ? ಎಂದು ಕೇಳಿದ್ದೆ ತಡ 'ಬಾಬ್ ಗೆ ಕುರುಡು ಆವರಿಸುತ್ತಿದೆ. ಸ್ವಲ್ಪ ದಿನಗಳಲ್ಲಿ ಅವನಿಗೆ ಏನೇನೂ ಕಾಣುವುದಿಲ್ಲ’  ಎಂದು ಹೇಳಿದ ಮರುಗಳಿಗೆಯೇ, ನಾನಿದ್ದೇನಲ್ಲ ಅವನ ಕಣ್ಣಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ ಪ್ಯಾಟ್ರಿಕ್ ದನಿಯಲ್ಲಿ ಮಮಕಾರ ಉಕ್ಕುತ್ತಿತ್ತು. 

ಈಗ ಬಾಬ್ ಪೂರ್ತಿ ದೃಷ್ಟಿ ಕಳೆದುಕೊಂಡಿದ್ದಾನೆ. ಆದರೆ ಪ್ಯಾಟ್ರಿಕ್ ಮಾತ್ರ ಅವನನ್ನು ನಿತ್ಯದಂತೆ ವಾಕಿಂಗ್ ಕರೆದುಕೊಂಡು ಹೋಗುತ್ತಾನೆ. ಆದರೆ ಕಣ್ಣು ಕಾಣದ ಅವನಿಗೆ ಮೂಗು, ಕಿವಿಗಳೇ ದಾರಿದೀಪ. ಎಲ್ಲವನ್ನು ಮೂಸುತ್ತ ಮೂಸುತ್ತ, ಏನಾದರೂ ಸದ್ದು ಕೇಳಿದ ಕೂಡಲೇ ಅವ ಪ್ರತಿಕ್ರಿಯಿಸುತ್ತಾನೆ ಈ ಕಾರಣದಿಂದಲೇ ಅವರ    ವಾಕುಗಳು ಬೇಗನೆ ಮುಗಿಯುವುದೇ ಇಲ್ಲ.

ಎಷ್ಟೋ ಸಲ ಅವನನ್ನು ಮನೆಗೆ ಕರೆದುಕೊಂಡು ಹೋಗುವುದೇ ಪ್ಯಾಟ್ರಿಕ್ ಗೆ ದೊಡ್ಡ ಸವಾಲು.
ತುಂಬ ಕಷ್ಟವೆನಿಸಿದರೆ ಪ್ಯಾಟ್ರಿಕ್ ತನ್ನ ಕ್ಯಾರವಾನ್ ಗೆ ಮರಳಿ ಬಿಡುತ್ತಾನೆ. ವಾಹನಗಳು ಇರದ, ಜನ ಸಂಚಾರವೇ ಇಲ್ಲದ  ಹೊಲಗಳಲ್ಲಿ ಬಾಬ್ ಸ್ವಚ್ಛಂದವಾಗಿ ವಿಹರಿಸಲು ಕಣ್ಣುಗಳು ಬೇಕೆಂದೇನೂ ಇಲ್ಲವಂತೆ. ಇದೆಲ್ಲ ಕೇಳುವಾಗ ನನ್ನ ಕಣ್ಣು ಒದ್ದೆಯಾಗುತ್ತವೆ. ಬಾಬ್ ಮಾತ್ರ ಆ ಕುತೂಹಲದ ನಗು ಇನ್ನೂ ಉಳಿಸಿಕೊಂಡಿದ್ದಾನೆ. ಬಾಬ್ ನನ್ನ ಮತ್ತು ಮಗಳ best friend.

ಆ ನಾಯಿಗೆ ನನ್ನ ದೇಶ, ಭಾಷೆ, ಚರ್ಮದ ಬಣ್ಣ, ನಮ್ಮ ಧಿರಿಸು ಯಾವುದೂ ಮುಖ್ಯವಲ್ಲ. ನಾವು ಅದಕ್ಕೆ ಕೊಡುವ ಪ್ರೀತಿಯಷ್ಟೇ ಬೇಕು. ಅಷ್ಟೇ! ಇನ್ನ್ಯಾವ ನಿರೀಕ್ಷೆಯೂ ಇಲ್ಲ. ಒಮ್ಮೆಯೂ ಅವನಿಗೆ ನಾ ತಿಂಡಿಯನ್ನ ಹಾಕಿಲ್ಲ, ಆಟಿಕೆಯ ಉಡುಗೊರೆಯನ್ನೂ ಕೊಟ್ಟಿಲ್ಲ. ಆದರೂ ಅವ ನಮಗಾಗಿ ಕಾಯುತ್ತಾನೆ, ಆ ಹತ್ತು ನಿಮಿಷ ನಮ್ಮೊಂದಿಗೆ ಕಳೆಯಲು. ಅವನ ಇಚ್ಛೆಯಂತೆ ಪ್ಯಾಟ್ರಿಕ್ ಚಳಿ ಗಾಳಿ ಮಳೆ ಎನ್ನದೆ ಶಾಲೆ ಬಿಡುವ ಹೊತ್ತಿನಲ್ಲಿ ಹೊರಗೆ ಬಂದು ನಿಲ್ಲುತ್ತಾನೆ. ಬಾಬ್ ಪರಿಚಯವಾಗಿ ಈಗ 6 ವರ್ಷಗಳಾದವು.

ಬಾಬ್ ನ ಅಭಿಮಾನಿ ಬಳಗ ತುಂಬಾ ದೊಡ್ಡದು. ದೇಶ ಬಿಟ್ಟು ದೇಶ ಕ್ಕೆ ಬಂದಿರುವ ನನಗೆ ಬರೀ ಮನುಷ್ಯ ಬಾಂಧವ್ಯಗಳಷ್ಟೇ ಅಲ್ಲ. ಕಾಲ ಕಾಲಕ್ಕೆ ಅರಳುವ ಹೂ, ಚಿಗುರಿ ಬರಿದಾಗಿ ಮತ್ತೆ ಹಸಿರಾಗುವ ಮರಗಿಡಗಳು, ಹಕ್ಕಿ ಚಿಟ್ಟೆ ಮಾತು ಬಾರದ ಈ ಪ್ರಾಣಿಗಳೂ, ನನ್ನ ಮನಸ್ಸನ್ನು, ಬದುಕನ್ನೂ ಬೆಚ್ಚಗಿಟ್ಟಿವೆ.

One thought on “ಬಾಬ್ ಎಂಬ  ಡೊಂಕು ಬಾಲದ ನಾಯಕರ ಕಥಾನಕ.

  1. ಇದು ನಿಜಕ್ಕೂ ಹೃದಯವನ್ನು ಒದ್ದೆ ಮಾಡುವ ಲೇಖನ. ಮಗಳು, ಪ್ಯಾಟ್ರಿಕ್ ಮತ್ತು ಬಾಬ್ ಅವರ ನಡುವಣ ದಿನನಿತ್ಯದ ಕ್ಷಣಗಳನ್ನು ಹಿಡಿದು, ಓದುಗನ ಮನಸ್ಸಿನ್ನು ಆರ್ದ್ರ ಮಾಡುತ್ತಾರೆ, ಅಮಿತಾ .

    ಪೆಟ್ಟು ಮತ್ತು pet ಪದಗಳ ಆಟ ಮುಗುಳ್ನಗೆಯನ್ನು ತರುತ್ತದೆ, ಅದರ ಹಿಂದೆ ಇರುವ ಲೇಖಕಿಯ ನೋವು-ನಗುಗಳ ಮಿಶ್ರಣವನ್ನು ಸೂಕ್ಷ್ಮವಾಗಿ ತೋರಿಸುತ್ತದೆ.

    “ನನ್ನ ಬಾಲ್ಯದಂತೆ ಸಾಕುಪ್ರಾಣಿಗಳ ಪ್ರೀತಿ-ಸ್ನೇಹವನ್ನು ನನ್ನ ಮಗಳು ಅನುಭವಿಸಲ್ಲ” ಎನ್ನುವ ಅಸಮಾಧಾನ, ಪ್ಯಾಟ್ರಿಕ್ ತನ್ನ ಒಂಟಿತನವನ್ನು ಬಾಬ್ ಮೂಲಕ ಹಂಚಿಕೊಳ್ಳುವುದು, ಅವನಲ್ಲಿ ತಾಯಿಯ ಕಾಳಜಿಯನ್ನು ಕಾಣುವುದು, old age home ಅಜ್ಜಿಯರೊಂದಿಗೆ ಬಾಬ್ ಬೆಳೆಸಿಕೊಂಡ ಅನುಬಂಧ, ಪ್ರಾಣಿಗಳಲ್ಲಿ ಇರುವ ಸಂವೇದನೆ, ಸಹಾನುಭೂತಿ, ಬಾಬ್-ನ ಅಳುವ ಶಬ್ದ, ಬಾಬ್ ನ lockdown ದಿನಗಳು, ಬಾಬ್-ಗೆ ಬಂದ ಕುರುಡುತನ – ಒಂದೇ ಎರಡೇ? ಎಷ್ಟೊಂದು ಸಂಗತಿಗಳು!

    ಅಮಿತಾ ತಮ್ಮ ಜೀವನವನ್ನು ಕನ್ನಡಿನಂತೆ ಎದುರಿಗೆ ತಂದು ನಿಲ್ಲಿಸುತ್ತಾರೆ: ತಮ್ಮ ತವರು, ತಂದೆ-ತಾಯಿ, ಕರ್ತವ್ಯಗಳ ನೆನಪು ಮತ್ತು ವಲಸೆ ಜೀವನದ ವಾಸ್ತವಿಕ ಅಸಾಧ್ಯತೆಗಳ ನಡುವಿನ ಹೋರಾಟ. ಈ ಅನುಭವವನ್ನು ಅನಿವಾಸಿ ಓದುಗರು ತಮ್ಮ ಬದುಕಿನೊಂದಿಗೆ ಹೋಲಿಸಿಕೊಂಡು ನೋಡುವಂತಿದೆ. “ಪ್ರಾಣಿಗೆ ದೇಶ, ಧರ್ಮ, ಬಣ್ಣ, ಭಾಷೆ ಮುಖ್ಯವಲ್ಲ; ನಮಗಿರುವ ಪ್ರೀತಿಯಷ್ಟೇ ಬೇಕು” ಎಂಬ ಒಂದು ಸರಳಸತ್ಯವನ್ನು ಕ್ಲೀಷೆಯಿಲ್ಲದೇ ಹೇಳುತ್ತಾರೆ. ಇದು ಕೇವಲ ಬಾಬ್ ಬಗ್ಗೆ ಮಾತ್ರವಲ್ಲ, ಮನುಷ್ಯರ ನಡುವಣ ಬಾಂಧವ್ಯಕ್ಕೂ ಅನ್ವಯಿಸುವ ಮಾತಲ್ಲವೇ?

    ಅಮಿತಾ ಅವರ ಬರವಣಿಗೆ ಶೈಲಿ ಕಥೆಯಂತೆ ಸಾಗುತ್ತಾ ಪ್ರಬಂಧದ ಆಳತೆಯೊಂದಿಗೆ ಲಯಿಸುತ್ತಾ ಹೋಗುವುದು ಒಂದು ವಿಶೇಷ. ಎಲ್ಲವನ್ನೂ ಸೇರಿಸಿಕೊಂಡಿರುವ ಕಾವ್ಯಾತ್ಮಕ ಪ್ರಬಂಧ.

    • ಕೇಶವ

    Like

Leave a Reply to Keshav Kulkarni Cancel reply

Your email address will not be published. Required fields are marked *