ಇಬ್ಬರು ವ್ಯಕ್ತಿಗಳು ಭೇಟಿಯಾಗುವ ಕತೆಗಳು – ಕೇಶವ ಕುಲಕರ್ಣಿ

ಬಹಳ ವರ್ಷಗಳಾದ ಮೇಲೆ ಅಥವಾ ದಶಕಗಳು ಗತಿಸಿದ ಮೇಲೆ ಬೇರ್ಪಟ್ಟ ಪ್ರೇಮಿಗಳು ಮತ್ತೆ ಭೇಟಿಯಾದರೆ ಏನಾಗಬಹುದು ಎನ್ನುವ ಪ್ರಶ್ನೆ ಕತೆ ಬರೆಯುವವರಿಗೆ ಮತ್ತು ಸಿನೆಮಾ ಮಾಡುವವರಿಗೆ ತುಂಬ ಇಷ್ಟದ ವಿಷಯ. ಕತೆಯಲ್ಲಿ ಇಬ್ಬರದೂ ಈಗಾಗಲೇ ಮದುವೆಯಾಗಿರಬಹುದು, ಆಗದೆಯೂ ಇರಬಹುದು. ಒಬ್ಬರದು ಮಾತ್ರ ಆಗಿ, ಇನ್ನೊಬ್ಬರು ಭಗ್ನಪ್ರೇಮಿಯಾಗಿರಬಹುದು. ಒಬ್ಬರ ವಿಚ್ಚೇದನವಾಗಿರಬಹುದು. ಒಬ್ಬರಿಗೆ ಕೊನೆಗಾಲದ ಕ್ಯಾನ್ಸರ್ ಆಗಿರಬಹುದು. ಅವರಿಬ್ಬರು ಅಚಾನಕ್ಕಾಗಿ ಭೇಟಿಯಾಗಲು ಒಂದು ಕಾರಣ ಅಥವಾ ಘಟನೆ ಬೇಕು ಆಷ್ಟೇ,  ಕತೆ ಅಲ್ಲಿಂದ ಹಿಂದೆ ಮತ್ತು ಮುಂದೆ ಸಾಗುತ್ತ, ಓದುಗರನ್ನು/ನೋಡುಗರನ್ನು ತಮ್ಮ ಟೀನೇಜ್ ಮತ್ತು ಹದಿಕರೆಯದ ದಿನಗಳಿಗೆ ಕರೆದೊಯ್ಯುತ್ತ, ಯಾರದೋ ನೆನಪನ್ನು ತರುತ್ತ, ಮನಸ್ಸಿನಲ್ಲೊಂದು ಪ್ರೀತಿಯ ಸಂವೇದನೆಯನ್ನು ಹುಟ್ಟಿಸುತ್ತವೆ. ಇಂಥ ಬಹುತೇಕ ಸಿನೆಮಾಗಳು ವಾಸ್ತವದ ತಳಹದಿಯಲ್ಲಿ ಇದ್ದರೂ ರೋಮ್ಯಾಂಟಿಸಿಸಂನ ಭಾಷೆಯನ್ನು ಉಪಯೋಗಿಸುತ್ತವೆ. 

ಇಂಥ ನೂರಾರು ಪರ್-ಮ್ಯುಟೇಶನ್ ಮತ್ತು ಕಾಂಬಿನೇಶನ್-ನಿಂದ ಇಂಗ್ಲೀಷ್ ಭಾಷೆಯಲ್ಲಿ ನೂರಾರು ಕಾದಂಬರಿಗಳು ಮತ್ತು ಸಿನೆಮಾಗಳು ಬಂದಿವೆ. ಹಿಂದಿ ಭಾಷೆಯಲ್ಲಿ ಗುಲ್ಜಾರ್ ಬರೆದು ನಿರ್ದೇಶಿಸಿದ `ಇಜಾಜತ್` ಸಿನೆಮಾ ಆಗಿನ ದಿನಗಳಲ್ಲಿ ತುಂಬ ಕಾಡಿದ ಸಿನೆಮಾ. ಆ ಚಿತ್ರದಲ್ಲಿ ವಿಚ್ಛೇದನಗೊಂಡ ದಂಪತಿಗಳು ರೈಲುನಿಲ್ದಾಣದ ವೇಟಿಂಗ್-ರೂಮಿನಲ್ಲಿ ಭೇಟಿಯಾಗುವ ಕತೆ –  ಆ ಸಿನೆಮಾದ ಅಂತ್ಯ ಬಹಳ ಇಷ್ಟವಾಗಿತ್ತು. ಓ ಹೆನ್ರಿ ಕಥೆಯನ್ನು ಆಧರಿಸಿದ ಋತುಪರ್ಣ ಘೋಷ್ ನಿರ್ದೇಶನದ `ರೇನ್-ಕೋಟ್` ಸಿನೆಮಾ (ಅಜಯ್ ದೇವಗಣ್ ಮತ್ತು ಐಶ್ವರ್ಯಾ ರೈ) ಕೂಡ ಇಂಥದೇ ಕತೆ. `೯೬` ಎನ್ನುವ ತಮಿಳು ಸಿನೆಮಾ (ಕನ್ನಡದಲ್ಲಿ ಅದನ್ನೇ ೯೯ ಎಂದು ರಿಮೇಕ್ ಮಾಡಿದರು)ದಲ್ಲಿ ಪ್ರೇಮಿಗಳು ದಶಕಗಳಾದ ಮೇಲೆ ರಿ-ಯುನಿಯನ್ನಿನ ನೆಪದಲ್ಲಿ ಭೇಟಿಯಾಗುತ್ತಾರೆ. ಅವಳ ಮದುವೆಯಾಗುತ್ತದೆ, ಮಕ್ಕಳಾಗಿವೆ. ಆದರೆ ಈತ ಭಗ್ನಪ್ರೇಮಿ. ರೀ-ಯುನಿಯನ್ ಮುಗಿದ ಮೇಲೆ ಒಂದು ರಾತ್ರಿಯನ್ನು ಅವರು ಒಟ್ಟಿಗೇ ಕಳೆಯುತ್ತಾರೆ. ಕತೆ ಪದರು ಪದರಾಗಿ ತೆರೆದುಕೊಳ್ಳುತ್ತ ಆಪ್ತವಾಗುತ್ತ ಸಾಗುತ್ತದೆ. 

ಆದರೆ ಪ್ರೇಮಿಗಳಲ್ಲದ ಇಬ್ಬರು ವ್ಯಕ್ತಿಗಳ ನಡುವಿನ ಕತೆಗಳು ಮತ್ತು ಸಿನೆಮಾಗಳು ವಿರಳವೆಂದೇ ಹೇಳಬಹುದು. ಅಂಥ ಕತೆಗಳನ್ನು ಬರೆಯುವುದು, ಅದರಲ್ಲೂ ಸಿನೆಮಾ ಮಾಡುವುದು ತುಂಬ ಕಷ್ಟದ ಕೆಲಸ. ಎರಡೂ ವ್ಯಕ್ತಿಗಳು ಒಂದೇ ಲಿಂಗದವರಾಗಿರಬೇಕು (ಸಹೋದರ/ಪಿತೃ ಬಾಂಧವ್ಯವಿಲ್ಲದಿದ್ದರೆ). ಅವರು ಅಪರಿಚಿತರಿರಬಹುದು. ತುಂಬ ವರ್ಷಗಳಾದ ಮೇಲೆ ಭೇಟಿಯಾದ ಗೆಳೆಯರಿರಬಹುದು. ದಶಕಗಟ್ಟಲೇ ಭೇಟಿಯಾಗದ ಅಪ್ಪ-ಮಗನಿರಬಹುದು, ದಾಯಾದಿಗಳಿರಬಹುದು, ಸಹೋದರ-ಸಹೋದರಿಯರಿರಬಹುದು. ಇಂಥ ಕತೆಗಳ ವ್ಯಾಪ್ತಿ ಮತ್ತು ಆಳ ಎರಡೂ ಆಯಾ ಕತೆಗಾರನ ಅನುಭವ, ಓದು  ಮತ್ತು ಏನನ್ನು ಹೇಳಬೇಕು ಎನ್ನುವ ತುಡಿತದ ಮೇಲೆ ಅವಲಂಬಿಸಿಸಿರುತ್ತದೆ. 

ಇದನ್ನೆಲ್ಲ ಬರೆಯಲು ಕಾರಣ, ಇತ್ತೀಚೆಗೆ ಅಂಥ ಎರಡು ಸಿನೆಮಾಗಳನ್ನು ನೋಡಿದೆ. 

ಅಡಿಯೋಸ್ ಅಮಿಗೋ

ಸ್ಪ್ಯಾನಿಷ್ ಭಾಷೆಯಲ್ಲಿ ‘ಅಡಿಯೋಸ್ ಅಮಿಗೋ’ ಎಂದರೆ ‘ವಿದಾಯ ಗೆಳಯನೇ`’ ಎಂದು. ಆದರೆ ಇದು ಸ್ಪ್ಯಾನಿಷ್ ಚಿತ್ರವಲ್ಲ, ಕೇರಳದಲ್ಲಿ ಜರಗುವ ಶುದ್ಧ ಮಲಯಾಳಂ ಚಿತ್ರ! 

ಸಂಪೂರ್ಣವಾಗಿ ವಿಭಿನ್ನ ಹಿನ್ನೆಲೆಯ ಇಬ್ಬರು ಅಪರಿಚಿತರು ಆಕಸ್ಮಿಕವಾಗಿ ಭೇಟಿಯಾದರೆ ಏನಾಗಬಹುದು?  

ಒಬ್ಬ ಶ್ರೀಮಂತ ಮತ್ತು ಇನ್ನೊಬ್ಬ ಬಡವ. 

ಒಬ್ಬ ತುಂಬ ತೊಂದರೆಯಲ್ಲಿದ್ದಾನೆ, ಇನ್ನೊಬ್ಬ ಬೇಕಾಬಿಟ್ಟಿ ಬದುಕುತ್ತಿದ್ದಾನೆ. 

ಒಬ್ಬ ನಿರಾತಂಕದಲ್ಲಿರುವಂತೆ ತೋರುತ್ತಾನೆ, ಇನ್ನೊಬ್ಬ ಆತಂಕದಲ್ಲೇ ಕಾಯುತ್ತಿದ್ದಾನೆ. 

ಒಬ್ಬ ಹಣವನ್ನು ಹೇಗೆ ಬೇಕೆಂದ ಹಾಗೆ ಖರ್ಚು ಮಾಡುತ್ತಾನೆ,,ನ್ನೊಬ್ಬ ತನ್ನ ತಾಯಿಯ ಆಸ್ಪತ್ರೆಯ ಬಿಲ್‌ಗಳಿಗಾಗಿ ಹತಾಶರಾಗಿದ್ದಾನೆ. 

ಇಂಥ ವ್ಯತಿರಿಕ್ತ ಅಪರಿಚಿತರು ಬಸ್-ಸ್ಟ್ಯಾಂಡಿನಲ್ಲಿ ಭೇಟಿಯಾಗುತ್ತಾರೆ. ಕೇರಳದಾದ್ಯಂತ ಬಸ್, ಕಾರು ಮತ್ತು ದೋಣಿಯಲ್ಲಿ ೨೪ ಗಂಟೆಗಳ ಕಾಲ ಸುಮಾರಾಗಿ ಗೊತ್ತುಗುರಿಯಿಲ್ಲದ ಅರ್ಥಹೀನ ಪ್ರವಾಸಕ್ಕೆ ಹೋಗುತ್ತಾರೆ. ಇಡೀ ಸಿನೆಮಾ ನಮ್ಮನ್ನು ಉದ್ದೇಶರಹಿತ ಪ್ರಯಾಣಕ್ಕೆ ಕರೆದೊಯ್ಯುತ್ತದೆ.

ಇಂಥ ಸಂಪೂರ್ಣ ವಿರುದ್ಧದ ಇಬ್ಬರ ಯಾತ್ರೆ, ಕಪ್ಪುಬಿಳಿಪಾಗಿ ಸಾಗುವುದಿಲ್ಲ. ಶ್ರೀಮಂತ ಮತ್ತು ಬಡವರ ನಡುವಿನ ವ್ಯತ್ಯಾಸವನ್ನು ಅನ್ವೇಷಿಸುವುದಿಲ್ಲ. ಯಾವುದೇ ಪಾತ್ರವನ್ನು ನಿರ್ಣಯಿಸುವುದಿಲ್ಲ. ಬೋಧನೆ ಇಲ್ಲ. ನೈತಿಕತೆಯ ಪಾಠಗಳಿಲ್ಲ.  ನಾನ್-ಜಡ್ಜ್-ಮೆಂಟಲ್ ಆಗಿ ದೈನಂದಿನ ಜೀವನದ ಸಾಮಾನ್ಯ ದೃಶ್ಯಗಳಲ್ಲಿ ವೈಭವೀಕರಣವಿಲ್ಲದೇ ತೋರಿಸುತ್ತ ಮನುಷ್ಯನ ಒಳಪದರುಗಳನ್ನು ಬಿಡಿಸುತ್ತ ಹೋಗುತ್ತದೆ. 

ಮೇಯಗನ್

ಮೇಯೞಗನ್, ಹೆಸರೇ ಹೇಳುವಂತೆ, ತಮಿಳು ಸಿನೆಮಾ. ಕನ್ನಡದಲ್ಲಿ ತಿಲಾಂಜಲಿ ಕೊಟ್ಟಿರುವ `ೞ` (ಳ) ಇರುವ ಅಚ್ಚ ತಮಿಳು ಹೆಸರಿನ ಸಿನೆಮಾ. 

ಈ ಸಿನೆಮಾದಲ್ಲೂ ಇಬ್ಬರು ಭೇಟಿಯಾಗುತ್ತಾರೆ. ಆದರೆ ಸಂಪೂರ್ಣ ಅಪರಿಚಿತರಲ್ಲ. ಆದರೆ ಕೆಲವು ದಶಕಗಳ ಮೇಲೆ ಭೇಟಿಯಾಗುತ್ತಾರೆ. 

ಒಬ್ಬ ನಗರ ನಿವಾಸಿಯ ಪ್ರತಿರೂಪ, ಇನ್ನೊಬ್ಬ ಹಳ್ಳಿಯ ಭೂಪ. 

ಒಬ್ಬ ತುಂಬ ಮಿತಭಾಷಿ, ಇನ್ನೊಬ್ಬ ಅರಳು ಹುರಿದಂತೆ ಮಾತಾಡುವ.

ಒಬ್ಬ ರಿಸರ್ವ್ಡ್, ಇನ್ನೊಬ್ಬ ಓಪನ್. 

ಒಬ್ಬನದು ಯಾರನ್ನೂ ಹೆಚ್ಚಾಗಿ ನಂಬದ ಬದುಕು, ಇನ್ನೊಬ್ಬನ ಬದುಕೇ ನಂಬುಗೆಯ ಮೇಲೆ ನಿಂತಿರುವುದು. 

ಒಬ್ಬನದು ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದ ನಡೆ,  ಇನ್ನೊಬ್ಬನದು ಎಲ್ಲರೂ ನಮ್ಮವರೇ ಎನ್ನುವ ಬಾಳು. 

ಒಬ್ಬನದು ಇತರರೊಂದಿಗೆ ಸಂಪರ್ಕ ಸಾಧಿಸಲು ಹೆಣಗಾಡುವ ಸ್ವಭಾವ, ಇನ್ನೊಬ್ಬ ಪ್ರಾಣಿಗಳನ್ನೂ ಮಾತನಾಡಿಸಬಲ್ಲ. 

ದಶಕಗಳಾದ ಮೇಲೆ ಈ ನಗರವಾಸಿ ತಾನು ಹುಟ್ಟಿಬೆಳೆದ ಹಳ್ಳಿಗೆ ಹೋಗಬೇಕಾಗುವ ಪ್ರಸಂಗ ಬರುತ್ತದೆ, ಒಂದು ಮದುವೆಯ ಕಾರಣಕ್ಕಾಗಿ. ಅಲ್ಲಿ ನಗರವಾಸಿಯ ಉಪಚಾರವನ್ನು ನೋಡಿಕೊಳ್ಳಲು ಈ ಹಳ್ಳಿಯ ಭೂಪ. ಹಳ್ಳಿಯ ಭೂಪನಿಗೆ ನಗರವಾಸಿಯನ್ನು ನೋಡುತ್ತಿದ್ದಂತೆ ತನ್ನ ಅತ್ಯಂತ ಆಪ್ತಬಂಧು ಬಂದಂತೆ ವ್ಯವಹರಿಸುತ್ತಾನೆ.  ಆದರೆ ನಗರವಾಸಿಗೆ ಈ ಹಳ್ಳಿಯ ಭೂಪ ಯಾರೆಂದು ಏನು ಮಾಡಿದರೂ ಗೊತ್ತಾಗುತ್ತಿಲ್ಲ, ಅವನನ್ನೇ ನೀನಾರೆಂದು ಕೇಳಲು ಸಂಕೋಚ. ಮದುವೆಯ ಮಂಟಪದಲ್ಲಿ ಏನೆಲ್ಲ ಸಾಹಸ ಮಾಡಿದರೂ ಈ ಹಳ್ಳಿಯ ಭೂಪ ತನಗೆ ಹೇಗೆ ಸಂಬಂಧವಾಗಬೇಕು, ಅವನ ಹೆಸರೇನು ಎಂದು ಹರಸಾಹಸ ಮಾಡಿದರೂ ಗೊತ್ತಾಗುವುದೇ ಇಲ್ಲ!

ಈ ಸಿನೆಮಾದ ನಿರೂಪಣೆ ಮಾಸ್ತಿಯವರ ಅವರ ಸಣ್ಣ ಕಥೆಗಳಂತಿದೆ –  ಸರಳ, ಅಷ್ಟೇ ಆಳ. ಈ ಚಿತ್ರವೂ `ಅಡಿಯೋಸ್ ಅಮಿಗೋ` ಚಿತ್ರದಂತೆ ಬಹುತೇಕಕ ೨೪ ಗಂಟೆಗಳಲ್ಲಿ ನಡೆಯುತ್ತದೆ. ಪದರು ಪದರಾಗಿ ಮನುಷ್ಯನ ದೊಡ್ಡತನ ಮತ್ತು ಸಣ್ಣತನಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ಸಾಗುತ್ತದೆ. ನಗರಪ್ರಜ್ಞೆ ಮತ್ತು ಗ್ರಾಮೀಣ ನಂಬುಗೆಗಳು ರೋಮ್ಯಾಂಟಿಕ್ ಪದರುಗಳಲ್ಲಿ ಬಿಡಿಸಿಕೊಳ್ಳುತ್ತ ಹೋಗುತ್ತದೆ (ಕೆಲವೊಮ್ಮೆ ವ್ಯಾಚ್ಯವೂ ಆಗುತ್ತದೆ). 

(ಅಂದ ಹಾಗೆ  `ಮೇಯೞಗನ್` ಸಿನೆಮಾದ ನಿರ್ದೇಶಕನ ಮೊದಲ ಸಿನೆಮಾ ನಾನು ಮೇಲೆ ಹೇಳಿದ ೯೬). 

ಇಂಥ ಕೆಲವು ಕತೆಗಳು

ಆರ್ ಕೆ ನಾರಾಯಣರು ಬರೆದ `ಜ್ಯೋತಿಷಿಯ ದಿನ` ಕತೆಯೊಂದಿದೆ. ಅದರಲ್ಲಿ ವಿದ್ಯುಚ್ಛಕ್ತಿ ಇಲ್ಲದ ಆಗಿನ ಕಾಲದಲ್ಲಿ ಕತ್ತಲಾಗುವ ಹೊತ್ತಿನಲ್ಲಿ ಜ್ಯೋತಿಷಿಯ ಬಳಿ ವ್ಯಕ್ತಿಯೊಬ್ಬ ಬಂದು ತನ್ನನ್ನು ತುಂಬ ವರ್ಷಗಳ ಹಿಂದೆ ಹೆಚ್ಚು-ಕಡಿಮೆ ಕೊಂದೇ ಹಾಕಿದ ವ್ಯಕ್ತಿ ಎಲ್ಲಿರಬಹುದೆಂದು ಕೇಳುತ್ತಾನೆ. ಜ್ಯೋತಿಷಿಗೆ ಭವಿಷ್ಯ ಕೇಳಲು ಬಂದ ವ್ಯಕ್ತಿ ಯಾರು ಎನ್ನುವುದು ಗೊತ್ತು, ಆದರೆ ಆ ವ್ಯಕ್ತಿಗೆ ಜ್ಯೋತಿಷಿ ಯಾರೆಂದು ಗೊತ್ತಿಲ್ಲ, `ಮೇಯೞಗನ್` ಸಿನೆಮಾದಲ್ಲಿ ಆಗುವಂತೆ. ಆ ಕತೆಯ ವಸ್ತು, ಅದನ್ನು ಬರೆದ ಶೈಲಿ ಮತ್ತು ಕೊನೆಯವರೆಗೂ ಕಾದಿಡುವ ರಹಸ್ಯ ಈಗಲೂ ಕತೆ ಬರೆಯುವವರಿಗೆ ಹೇಳಿ ಮಾಡಿಸಿದ ಪಾಠದಂತಿದೆ.  

ವಿವೇಕ ಶಾನಭಾಗರು ಬರೆದ `ನಿರ್ವಾಣ` ಎನ್ನುವ ಕತೆಯೊಂದಿದೆ (ಘಾಚರ್ ಘೋಚರ್ ಸಂಕಲನ). ನಗರ ಜೀವನದ, ಕಾರ್ಪೋರೇಟ್ ಬದುಕಿನ ಪುಳ್ಳುತನವನ್ನು ಎಲ್ಲಿಯೂ ವ್ಯಾಚ್ಯವಾಗಿಸದೇ ಸಶಕ್ತವಾಗಿ ಬರೆದ ಕತೆ.  ಈ ಕತೆಯಲ್ಲೂ ಇಬ್ಬರು ವ್ಯಕ್ತಿಗಳು ಭೇಟಿಯಾಗುತ್ತಾರೆ, `’ಅಡಿಯೋಸ್ ಅಮಿಗೋ’ ತರಹ. `ಮೇಯೞಗನ್` ತರಹ. ಕಾರ್ಪೋರೇಟ್ ಜಗತ್ತಿನಲ್ಲಿ ಮ್ಯಾನೇಜರ್ ಜಾಗದಲ್ಲಿ ಇರುವ ಇಬ್ಬರು ಪರದೇಶದ ಹೊಟೇಲೊಂದರಲ್ಲಿ ಭೇಟಿಯಾಗುತ್ತಾರೆ. ಇಬ್ಬರೂ ಬಹಳ ವರ್ಷಗಳಾದ ಮೇಲೆ ಸಿಕ್ಕವರು. ಕಥಾನಾಯಕನಿಗೆ ಅವನನ್ನು ಮುಂಚೆ ನೋಡಿದ ಮಾತನಾಡಿಸಿದ ನೆನಪಿದೆ, ಆದರೆ ಪೂರ್ತಿ ನೆನಪಾಗುತ್ತಿಲ್ಲ. ಇರಲಿ, ಏನಂತೆ, ಇದೆಲ್ಲ ಕಾರ್ಪೋರೇಟ್ ಜಗತ್ತಿನಲ್ಲಿ ಸಾಮಾನ್ಯವಲ್ಲವೇ? ಇಬ್ಬರೂ ಸೇರಿ ಆತನ ರೂಮಿನಲ್ಲಿ ಗುಂಡು ಹಾಕುತ್ತಾ ಪರಸ್ಪರ ಉಭಯ ಕುಶಲೋಪರಿಯನ್ನು ಮಾತನಾಡುತ್ತಾರೆ. ಮಾತನಾಡುತ್ತ ಕಥಾನಾಯಕನಿಗೆ ಆತ ತಾನು ಅಂದುಕೊಂಡ ಆತನಲ್ಲ ಎಂದು ಗೊತ್ತಾಗುತ್ತದೆ! ಮುಂದೆ ಇನ್ನೂ ಏನೇನೋ ಆಗುತ್ತೆ, ಸಸ್ಪೆನ್ಸ್ ಹಾಗೇ ಇರಲಿ. 

ಇನ್ನೂ ಕೆಲವು ಕತೆಗಳಿರುತ್ತವೆ. ಆ ಕತೆಗಳಲ್ಲಿ ಒಂದೇ ವ್ಯಕ್ತಿ ಎರಡು ಹೋಳಾಗಿ ಎರಡು ವಿರುದ್ಧ ವ್ಯಕ್ತಿತ್ವದ ಮನುಷ್ಯರಾಗಿ, ಬೇರೆ ಬೇರೆಯಾಗಿ, ಮತ್ತೆ ಎದುರಾಗುತ್ತಾರೆ. ಹಾಗೆ ಎದುರಾದಾಗ ಎಂಥ ತೀವ್ರ ಸಂಘರ್ಷವಾಗುತ್ತದೆ ಅಲ್ಲವೇ!  ಕಾರ್ನಾಡರ `ನಾಗಮಂಡಲ` ಮತ್ತು ಕಂಬಾರರ `ಸಿರಿಸಂಪಿಗೆ` ಇದಕ್ಕೆ ಉದಾಹರಣೆಗಳು. ಅಮೋಲ್ ಪಾಲೇಕರ್ ನಿರ್ದೇಶಿಸಿದ `ಪಹೇಲಿ` (ಶಾರೂಕ್ ಖಾನ್ ನಟನೆ)ಯದೂ ಇಂಥದೇ ಕತೆ. ಎ ಕೆ ರಾಮಾನುಜನ್ ಬರೆದ `ಮತ್ತೊಬ್ಬನ ಆತ್ಮ ಚರಿತ್ರೆ`ಯನ್ನೂ ಇಂಥ ಕತೆಗಳ ಸಾಲಿಗೆ ಸೇರಿಸಬಹುದೇನೋ. 

ನಿಮಗೂ ಇಂಥ ಕಥೆಗಳು ಮತ್ತು ಸಿನೆಮಾಗಳು ಗೊತ್ತಿದ್ದರೆ, ಅವು ನಿಮ್ಮನ್ನು ಸ್ವಲ್ಪವಾದರೂ ಕಾಡಿದ್ದರೆ ನಿಮ್ಮ ಪ್ರತ್ರಿಕ್ರಿಯೆಯಲ್ಲಿ ಬರೆಯಲು ಮರೆಯಬೇಡಿ. 

2 thoughts on “ಇಬ್ಬರು ವ್ಯಕ್ತಿಗಳು ಭೇಟಿಯಾಗುವ ಕತೆಗಳು – ಕೇಶವ ಕುಲಕರ್ಣಿ

Leave a Reply to Anonymous Cancel reply

Your email address will not be published. Required fields are marked *