ನಮಸ್ಕಾರ ಅನಿವಾಸಿ ಬಂಧುಗಳಿಗೆ. ತಮಗೆಲ್ಲ ಅಕ್ಷಯತೃತೀಯಾ ಹಾಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.
‘ಭಕ್ತಿ ಇಲ್ಲದ ಬಡವನು ನಾನಯ್ಯ
ಕಕ್ಕಯ್ಯನ ಮನೆಯಲೂ ಬೇಡಿದೆ,
ದಾಸಯ್ಯನ ಮನೆಯಲೂ ಬೇಡಿದೆ,
ಚೆನ್ನಯ್ಯನ ಮನೆಯಲೂ ಬೇಡಿದೆ,
ಎಲ್ಲ ಪುರಾತನರು ನೆರೆದು
ಭಕ್ತಿ ಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು
ಕೂಡಲ ಸಂಗಮದೇವಾ’.
ವಚನದಲ್ಲಿ ನಾಮಾಮೃತ ತುಂಬಿದ ಬಸವಣ್ಣನವರನ್ನು ತುಂಬು ಮನದಿಂದ ನೆನೆಯೋಣ. ಲೋಕದ ಡೊಂಕ ತಿದ್ದುವ ಉಸಾಬರಿ ಬಿಟ್ಟು ನಮ್ಮ ನಮ್ಮ ತನುವ- ಮನವ ಸಂತೈಸಿಕೊಂಡು , ಇವನಾರವ ಎನ್ನದೇ ಇವ ನಮ್ಮವ ಎಂದು ಜಗವನಪ್ಪಿಕೊಂಡು ಜಗದೀಶನಿಗೆ ಪ್ರಿಯರಾಗೋಣ. ಏನಂತೀರಿ?
ಇಂದಿನ ಓದಿಗಾಗಿ ಹಳೆಯ ಹರಟೆಯೊಂದನ್ನು ನಾನು ಹಂಚಿಕೊಳ್ಳುತ್ತಿರುವೆ. ಓದಿ ನಿಮ್ಮ ಅನಿಸಿಕೆಗಳನ್ನು ನೀವು ಹಂಚಿಕೊಳ್ಳಿ.
~ ಸಂಪಾದಕಿ
ಆಕಳಿಕೆ – ತೂಕಡಿಕೆ
‘ಸಮಯಾ ಸಮಯವುಂಟೇ ಭಕ್ತವತ್ಸಲ ನಿನಗೆ’ಅಂತ ಕನಕದಾಸರು ಹಾಡಿದ್ಹಂಗ ಈ ಆಕಳಿಕಿಗೆ ಸಮಯಾಸಮಯ ಅಂತ ಏನೂ ಇಲ್ಲ...ಕಾರ್ಯಕಾರಣ ಸಂಬಂಧವೂ ಇಲ್ಲ.ಎಲ್ಲೆ ಬೇಕಾದರೂ ಯಾವಾಗ ಬೇಕಾದ್ರೂ ಬಂದಬಿಡತಾವ;ಮಾನ ಕಳೆದುಬಿಡತಾವ.ಯಾವುದರೇ ಕಾರ್ಯಕ್ರಮದಾಗ ಭಾಷಣಕಾರರು ಗಂಭೀರವಾಗಿ ವಿಷಯ ಮಂಡಸೂ ಮುಂದ ಮುಂದಿನ ಸೀಟಿನಾಗ ವಕ್ಕರಿಸಿದ ನೀವು ‘ಆsss’ಅಂತ ಆಕಳಿಸಿ ಬಾಯಾಗs ವಿಶ್ವರೂಪ ತೋರಿಸಿದ್ರ ಎದುರಿಗಿನವರು ಕಕ್ಕಾಬಿಕ್ಕಿ ಆಗಿಬಿಡತಾರರೀ..ಕ್ಲಾಸ್ ರೂಮ್ ನಾಗ ಟೀಚರ್ ಏನೋ ಗಹನವಾದ ವಿಷಯವನ್ನು ನಿಮ್ಮ ತಲೆಬುರುಡಿನಾಗ ತುಂಬಲಿಕ್ಕೆ ಅಂತ ಹರಸಾಹಸ ಮಾಡಕೋತ ಹೆಣಗಾಡತಿರಬೇಕಾದ್ರ ನೀವು’ಆsss’ ಅಂತ ಆಕಳಿಸಿದ್ರ ಅವರ ಸಿಟ್ಟು ನೆತ್ತಿಗೇರಿ ನಿಮ್ಮನ್ನು ಸ್ಟ್ಯಾಂಡ್ ಅಪ್ ಆನ್ ದ ಬೆಂಚೋ ಇಲ್ಲ ಗೆಟ್ ಔಟ್ ಫ್ರಾಮ್ ಮೈಕ್ಲಾಸೋ ಖಂಡಿತ ಮಾಡಿಬಿಡತಾರರೀ. ಇನ್ನ ಕೆಲವೊಮ್ಮೆ ವಯಸ್ಸಾದ ಹಿರಿಯರು ನೀವು ಮಾತಿಗೆ ಸಿಕ್ಕದ್ದೇ ತಡ ತಮ್ಮ ಪುರಾನಾ ಜಮಾನಾದ ಪುರಾಣದ ಕಂತಿ ಬಿಚ್ಚಿದ್ರು ಅಂದ್ರ...ನಿಮ್ಮೂ ಶುರುವಾಗತಾವ ಆಕಳಿಕಿ ಸಾಲಾಗಿ.ಆದ್ರ ಪಾಪ! ಕೆಲವೊಬ್ಬರಂತೂ ಅವನ್ನ ಸಂಪೂಣ೯ ದಿವ್ಯನಿಲ೯ಕ್ಷ್ಯ ಮಾಡಿ ತಮ್ಮ ಕಥಿ ಹಂಗೇ ಮುಂದುವರೆಸಿರತಾರ ಅನ್ರಿ..ನೀವೋ ಆಕಳಿಸಿ ಆಕಳಿಸಿ ಬಾಯಿನೋವು ಬಂದು ಕಣ್ಣೀರು ಕಪಾಳಕ್ಕ ಹರಿಸಿ ದಣಿಯುತ್ತೀರಿ.ಮತ್ತ ಯಾವಾಗರೇ ಯಾರದರೇ ಪರಿಚಿತರ ಮನಿಗೆ ಹೋಗಿರತೀರಿ ಅಂತಿಟ್ಟುಕೋರಿ.ಅವರ ಮನ್ಯಾಗ ಆಗಷ್ಟೇ ಮಗಂದೋ ,ಮಗಳದೋ ಮದುವಿ ಆಗಿರತದ..ಮದುವಿ ಫರಾಳ ತಿನ್ನಲಿಕ್ಕೆ ಕೊಡದಿದ್ದರೂ ಸರಿ ಮದುವಿ ಆಲ್ಬಂ- ವಿಡಿಯೋ ತಪ್ಪಲಾರದ ತೋರಸತಾರ.ಆ ಹುಡುಗನೋ ಹುಡುಗಿನೋ ಬಿಟ್ರ ನಿಮಗ ಯಾರೂ ಗೊತ್ತಿರಂಗಿಲ್ಲ..ಆದ್ರೂ ಮೂರಮೂರ ತಾಸು ಕೂತ ಅದನ್ನ ನೋಡ ಅಂದ್ರ ಆಕಳಿಕಿ ಬರದ s ಬಿಟ್ಟಾವ?!
ಹೀಂಗ ಆಕಳಿಸೋದು ಸಭ್ಯತೆ ಅಲ್ಲ ಅಂತ ನಾನೂ ಒಪ್ಪಗೋತಿನಿ.ಆದ್ರ ಅವುಗಳ ನಿಯಂತ್ರಣ ನಮ್ಮಕೈಯಾಗ ಇಲ್ಲ ಅಲ್ರೀ.ತಮ್ಮ ಮನಸ ಬಂದಾಗ ಹಿಂದಮುಂದ ಏನೂ ಸೂಚನೆ ಕೊಡದ ಧಬಕ್ ಅಂತ ಬಂದಿಳಿಯೋ ಅತಿಥಿಗಳಗತೆ ನುಗ್ಗಿ ಬಂದ್ರ ಅದರಾಗ ನಮ್ಮ ತಪ್ಪೇನದ ಅಲ್ಲೇನ್ರಿ? ಇದೆಲ್ಲ ಎಲ್ಲಾರಿಗೂ ಗೊತ್ತಿದ್ರೂ ನಾವು ಮಾತಾಡೂಮುಂದ ಎದುರಿಗಿನವರು ಆಕಳಿಸಿದ್ರ ನಮ್ಮ ಕಣ್ಣು ಕೆಂಪಾಗೋದಂತೂ ಗ್ಯಾರಂಟಿ .ಎಷ್ಟೋ ಸಲ ನಾನೇ ನನ್ನ ಮಕ್ಕಳಿಗೆ ಬಯ್ಯತಿರತೀನಿ...’ನಾನಿಲ್ಲೆ ಗಂಟಲ ಒಣಗಿಸಿಕೊಂಡು ,ತಲಿ ಕೆಡಿಸಿಕೊಂಡು ಇಷ್ಟ ಸೀರಿಯಸ್ಸಾಗಿ ಏನೋ ಹೇಳಲಿಕ್ಹತ್ತೀನಿ..ನೀವು ಆಕಳಿಸಕೋತ ಹೆಂಗ ಕೂತೀರಿ ನೋಡ್ರಿ ನಿಲ೯ಜ್ಜರ ಹಂಗ ‘ಅಂತ.
ಕಳೆದ ಸಲ ವಲ್ಡ್೯ ಕಪ್ ಮ್ಯಾಚ್ ನಡದಾಗ ಪಾಕಿಸ್ತಾನದ ಕ್ರಿಕೆಟ್ ಟೀಮಿನ ಕಪ್ತಾನ್ ಸರಫರಾಜ್ ಆಕಳಿಸಕೋತ ಕೂತಿದ್ದು ಒಂದು ಬ್ರೇಕಿಂಗ್ ನ್ಯೂಸೇ ಆಗಿಬಿಟ್ಟಿತ್ತಲಾ....ಪಾಪ! ಅವರೂ ಮನಷಾರೇ.ಇಷ್ಟೆಲ್ಲಾ ಹಗಲೂ ರಾತ್ರಿ ಪ್ರಾಕ್ಟೀಸ್ ಮಾಡಿ ಆಡೂಮುಂದಾಗ ಸೋಲೂ ಹಂತದಾಗ ಬ್ಯಾಸರಕೀಲೇ ಒಂದು ಆಕಳಿಸೋ ಸ್ವಾತಂತ್ರ್ಯನೂ ಅವರಿಗಿಲ್ಲ ಅಂದ್ರ ಹೆಂಗರೀ?
ಇನ್ನ ಆಫೀಸಿನಾಗ ಬಾಸ್ ಏನರೇ ಲೆಕ್ಚರ್ ಕೊಡೂಮುಂದ ಆಕಳಿಸಿದ್ರೋ ಮುಗೀತು.ನಿಮ್ಮ ಭತ್ಯೆ ಕಟ್ ಅಂತನೇ ಲೆಖ್ಖ.ಮುಂದ ನಿಮಗ್ಯಾವ ಸಿ.ಎಲ್.ಸ್ಯಾಂಕ್ಷನ್ ಆಗಂಗಿಲ್ರಿ.ನಿಮ್ಮ ಆಕಳಿಕೆ ಸೀದಾ ಅವನ ಅಹಂನ್ನೇ ನುಂಗಿಬಿಟ್ಟಿರತದ.ಅದಕ್ಕಽ ಎಚ್ಚರಿಕೆಲೆ ಇರಬೇಕು.ಆದ್ರ ಮಜಾ ಅಂದ್ರ ಯಾವಾಗ ನೀವು ಎಚ್ಚರಕಿಲೇ ಇರಬೇಕು ಅನಕೋತಿರೋ ಅವಾಗೇ ಇವುಗಳ ಹಾವಳಿ ಭಾಳ ಇರತದ.ಬೆಳತನಕಾ ದೋಸ್ತ್ ರ ಜೋಡಿ ಹರಟಿ ಹೊಡಿಯೂಮುಂದ ,ರಾತ್ರೆಲ್ಲ ನಿದ್ದಿಗೆಟ್ಟು ಓಣ್ಯೋಣಿ ತಿರಗೂಮುಂದ,ಟಿವಿ ಮುಂದ ಕೂತು ಸುಟ್ಟು ಸುಡುಗಾಡು ಸಿನೆಮಾ ನೋಡೂಮುಂದ,ಮೊಬೈಲ್ ನಾಗ ಕ್ಯಾಂಡಿಕ್ರಷ್ ,ಪಬ್ಜಿ ಆಡೂಮುಂದ ತಪ್ಪಿನೂ ಒಂದರೇಽ ಆಕಳಿಕಿ ಬಂದ್ರ ಕೇಳ್ರಿ.
ಸೂರ್ಯೋದಯಕ್ಕ ಮುಂಚೆ ಅರುಣನ ಆಗಮನ ಆಗೂಹಂಗ ನಿದ್ದಿ ಬರೂದರ ಮುನ್ಸೂಚನೆ ಈ ಆಕಳಿಕೆಗಳು ಅನ್ನಬಹುದು.ಆದ್ರ ಇದಕ್ಕ ತೀರ ವಿರುದ್ಧವಾಗಿ ಒಂದೊಂದುಸಲ ಮಧ್ಯಾಹ್ನಮೂರಮೂರು ತಾಸು ಮಲಕೊಂಡು ಎದ್ದಮ್ಯಾಲೂ ಒಂದರಹಿಂದ ಒಂದು ಹಂಗೇ ಸಾಲುಹಿಡದು ಬರತಿರತಾವ.ಕೆಲವೊಮ್ಮೆ ಬ್ಯಾಸರ ಆಗಿದ್ರನೂ ಬರತಾವ.ಕೆಲವೊಮ್ಮೆ ವಿಪರೀತ ದಣಿದಾಗ,ದೇಹ ಬಳಲಿದಾಗ ಬಂದ್ರ ಕೆಲವೊಮ್ಮೆ ಏನೂ ಕೆಲಸ ಇಲ್ಲದಽ ಸೋಮಾರಿಗಳಾಗಿ ಸೋಫಾದ ಮ್ಯಾಲೆ ಮೈ ಚೆಲ್ಲಿದಾಗನೂ ಬರತಾವ...ಅತೀ ಬ್ಯಾಸಗ್ಯಾಗ..ಅತೀ ಥಂಡ್ಯಾಗ....ಹೀಂಗs ಅಂತ ಹೇಳಲಿಕ್ಕೆ ಬರಂಗಿಲ್ರಿ .
ಯಾರರೇ ಪ್ರೀತಿಪಾತ್ರರು ಭೆಟ್ಟಿ ಆಗಿ ವಾಪಸ್ ಹೋದಾಗನೂ ಹೀಂಗಽ ಆಕಳಿಕಿ ಬರತಾವ.ಮೈತುಂಬ ,ಮನಿತುಂಬ ಕೆಲಸ ನೋಡಿ ತಲಿ ದಿಮ್ ಅಂದನೂ ಆಕಳಿಕಿ ಬರತಾವ.ಕೆಲವೊಮ್ಮೆ ಸುಮ್ಮೇ ನಮ್ಮ ಬಾಜೂಕಿನವರು ಆಕಳಿಸತಾರ ಅಂತ ನಮಗೂ ಆಕಳಿಕಿ ಬರತಾವ.ಇನ್ನ ಕೆಲವೊಮ್ಮೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಾಗ ,ಹರಿದಾಸರ ಹರಿಕಥಿಯೊಳಗ,ಸತ್ಯನಾರಾಯಣ ಕಥಿ ಅಂತಹ ದೀರ್ಘ ಪೂಜಾಕಥಿಗಳನ್ನು ಕೇಳೂಮುಂದ ಎಲ್ಲಿರತಾವೋ ಏನೋ ಓಡೋಡಿ ಬರತಾವ.ಅದಕ್ಕಽ ಅಂಥಾ ಕಾರ್ಯಕ್ರಮದಾಗೆಲ್ಲ ನಾ ಆದಷ್ಟು ಹಿಂದಿನ ಸೀಟೇ ಪ್ರಿಫರ್ ಮಾಡತೀನ್ರಿ.ನಂಗ ಈ ಪೂಜಾವಿಧಿಗಳೆಲ್ಲ ಝಟ್ ಪಟ್ ಅಂತ ಮುಗದ್ರ ಭಾಳ ಭಕ್ತಿ,ಏಕಾಗ್ರತೆ ಎಲ್ಲಾ ಇರತದರಿ.ಅದೇನರೆ ಅಧ೯ತಾಸಕಿಂತ ಜಾಸ್ತಿ ಇತ್ತೋ ....ಆಕಳಿಕಿ ಶುರುನೇ.ಸತ್ಯನಾರಾಯಣ ಪೂಜಾದ ಆ ಕಲಾವತಿ – ಲೀಲಾವತಿ ಕಥಿ ಕೇಳಕೋತ ಆಕಳಿಕಿ ಬಂದ್ರ ಒಳಗೊಳಗೇ ಪುಕಪುಕ ಆಗತಿರತದ್ರಿ.’ನನ್ನ ಕಥಿ ಕೇಳೂಮುಂದ ಆಕಳಿಸಿ ನನಗ ಅಪಮಾನ ಮಾಡಿದಿ’ ಅಂತ ಸತ್ಯನಾರಾಯಣ ಎಲ್ಲರೇಽ ಸಿಟ್ಟಿಗೆದ್ದು ಹಡಗಿನಲ್ಲಿದ್ದ ಧನಕನಕಗಳನ್ನು ಎಲಿ-ತೊಪ್ಪಲು-ಕಲ್ಲುಗಳನ್ನಾಗಿ ಪರಿವತ೯ನೆ ಮಾಡಿದ್ಹಂಗ ಇರೋ ಒಂದೆರಡು ನನ್ನ ಬಂಗಾರದೊಡವೆಗಳನ್ನುಹಿತ್ತಾಳೆಯನ್ನಾಗಿ,ಇರೋ ಒಂದೆರಡು ರೇಶ್ಮೆಸೀರೆಗಳನ್ನು ಹಳೆಯ ಹರಿದ ಸೀರೆಗಳನ್ನಾಗಿ ಮಾಡಿಬಿಟ್ಟ್ರ.....ಅಂತ ಗಾಭರಿ ಆಗತಿರತದ.ಆದ್ರ ಆ ಗಾಭರಿಗೆ ಇನ್ನೊಂದೆರಡು ಆಕಳಿಕೆ ಹೆಚ್ಚಿಗೆ ಬರತಾವು ನೋಡ್ರಿ...
ನಿಮಗೊಂದು ಮಜಾ ಸುದ್ದಿ ಗೊತ್ತೇನ್ರಿ? ತಾಯಿ ಗಭ೯ದಾಗಿರೋ ಮಗು ಸಹಿತ ಆಕಳಸತದಂತ.ವೈದ್ಯಕೀಯ ಶಾಸ್ತ್ರದ ಪ್ರಕಾರ ಅದು ಮೆದುಳಿನ ಒಳ್ಳೆಯ ಬೆಳವಣಿಗೆಯ ಲಕ್ಷಣ ಅಂತ.ಈ ಆಕಳಿಸೋ ಪ್ರಕ್ರಿಯೆ ಬರೇ ನಮ್ಮ ಮನುಷ್ಯ ಜಾತಿಯೊಳಗ ಅಲ್ರೀ...ಭಾಳಷ್ಟು ಪ್ರಾಣಿಗಳೊಳಗೂ ಅದ ಅಂತ.
ಇನ್ನ ಈ ಆಕಳಿಕೆಗಳಿಗೂ ಮತ್ತ ಪರೀಕ್ಷಾಗೂ ನೇರಾನೇರ ಸಂಬಂಧ ಅದನೋಡ್ರಿ.ಪರೀಕ್ಷಾ ಟೈಮದಾಗ ಕೈಯಾಗ ಪುಸ್ತಕ ಹಿಡದ್ರ ಸಾಕು ಆಕಳಿಕಿ ಶುರು..ನಂಗಂತೂ ಗಣಿತದ ಪ್ರಶ್ನೆಪತ್ರಿಕೆ ನೋಡಿದರ ಸಾಕು..ಅದರಾಗ ಎಷ್ಟು ಲೆಖ್ಖ ಮಾಡಲಿಕ್ಕೆ ಕೊಟ್ಟಾರೋ ಅದರ ದುಪ್ಪಟ್ಟು ಆಕಳಿಕೆ ಬರೂವರೀ.
ನಿಮಗೆಲ್ಲ ರಾಮಾಯಣದ ಕಥಿ ಗೊತ್ತೇ ಇರತದ.ಅದರಾಗ ನಮ್ಮಹನುಮಂತ ಲಂಕಾಪ್ರವೇಶ ಮಾಡೂಮುಂದ ಸುರಸಾ ಎಂಬ ರಕ್ಕಸಿಯ ಕಥಿ ಬರತದ.ನನ್ನ ಬಾಯಲ್ಲಿ ಪ್ರವೇಶಿಸಿ ಹೊರಬಂದರೆ ಮಾತ್ರ ನಿನಗೆ ಲಂಕಾಪ್ರವೇಶ ಅಂತ ಹೇಳಿದ ಅಕಿ ಆ ಅಂತ ಆಕಳಿಸತಾಳ.ಹನುಮ ತನ್ನ ಗಾತ್ರವನ್ನುಬೃಹದಾಕಾರವಾಗಿ ಬೆಳೆಸತಾನ.ಅದಕ್ಕ ತಕ್ಕಂಗ ‘ಆ’ಅಂತ ಬಾಯಿ ಅಗಲಿಸಿದ ಅಕಿನ ಬಾಯೊಳಗೆ ಹೋದ ಹನುಮ ತಕ್ಷಣವೇ ಪೂತಿ೯ ಸಣ್ಣವನಾಗಿ ಅಕಿ ಬಾಯಿ ಮುಚ್ಚುವುದರೊಳಗಾಗಿ ಹೊರಬಂದುಬಿಡುವ ಕಥಿ ಭಾಳ ಸ್ವಾರಸ್ಯಕರವಾಗೇದ.ಅಂದ್ರ ಜೀವನ-ಮೃತ್ಯುಗಳೆರಡೂ ಒಂದು ಆಕಳಕಿ ಅಳತೀ ಒಳಗಽ ಅವ ಅನ್ನೂ ತತ್ವ ನಮಗ ಅಥ೯ ಆಗತದ.
ಆಕಳಿಕಿ ಸುದ್ದಿ ಆತು..ಇನ್ನ ತೂಕಡಿಕಿ ಸುದ್ದಿನೂ ಒಂಚೂರು ಮಾತಾಡೇ ಬಿಡೂಣು.ಇವೆರಡೂ ಒಂಥರಾ ಅವಳಿ ಸೋದರರು ಇದ್ಹಂಗ. ಈ ತೂಕಡಿಕಿನೂ ಅಷ್ಟೇ ...ಯಾವ ಮಾಯದಾಗ ಬರತದೋ ಗೊತ್ತೇ ಆಗಂಗಿಲ್ಲರೀ.ಒಂಥರಾ ಗಾಢನಿದ್ದೆನೂ ಅಲ್ಲದ,ಎಚ್ಚರಿಕೆನೂ ಅಲ್ಲದ ಈ ತೂಕಡಿಕಿ ಮಜಾ ಅನುಭವಿಸಿದವರಿಗೇ ಗೊತ್ತು..ಎಷ್ಟೋ ಸಲ ಸಂತ್ಯಾಗ ತೂಕಡಿಸೋ ಮಂದಿನೂ ಇರತಾರ.ಕೆಲವು ಸಲ ನಮ್ಮ ಮನ್ಯಾಗ ಟಿವಿ ಜೋರ್ ದನಿ ತಗದು ಒದರತಿರತದ್ರಿ.ಅಡಿಗಿ ಮನ್ಯಾಗ ನನ್ನ ಮಿಕ್ಸಿ,ಕುಕ್ಕರ್ ಸೀಟಿ ಧಾಂಧಲೆ ನಡದಿರತದ.ನನ್ನ ಅವಳಿ ಮಕ್ಕಳದು ಯಾವುದೋ ಸಣ್ಣ ವಿಷಯಕ್ಕೆ ಜೋರ ಜಗಳ ನಡದಿರತದ.ಆದ್ರ ನಮ್ಮ ಮನಿಯವರು ಹಂಗಽ ಸೋಫಾಕ್ಕೊರಗಿ ತೂಕಡಿಸತಿರತಾರ. ಕೆಲವೊಬ್ಬರಿಗೆ ಈ ಗದ್ದಲದ ಬ್ಯಾಗ್ರೌಂಡ್ ನಾಗ ಭಾಳ ಛಂದ ನಿದ್ದಿ ಬರತದರಿ....ಪುಷ್ಪಕ ವಿಮಾನದ ಕಮಲಹಾಸನಗತೆ.ಈ ಬಸ್ಸು-ಟ್ರೇನುಗಳ ಪ್ರವಾಸ ಅಂತೂ ತೂಕಡಿಕೆಯ ತವರು ಎನ್ನಬಹುದು.ನಾ ಅಂತೂ ಎಷ್ಟೋ ಸಲ ಸಿಟಿ ಬಸ್ ನಾಗೂ ತೂಕಡಿಸಕೋತ ಓಡಾಡಿ ಎರಡೆರಡು ಸ್ಟಾಪ್ ದಾಟಿ ಇಳಿದ ಪ್ರಸಂಗಗಳೂ ಭಾಳ ಅವರೀ.ಎಷ್ಟೋ ಸಲ ನಮ್ಮ ಬಾಜೂಕ ಕೂತವರು ತೂಕಡಿಸಕೋತ ನಮ್ಮ ಮೈಮ್ಯಾಲ ತಮ್ಮ ಭಾರ ಹಾಕಿ ,ಎಷ್ಟೋ ಸಲ ನಾವು ತೂಕಡಿಸಕೋತ ಅವರ ಮ್ಯಾಲೆ ಜೋಲಿ ಹೊಡೆದು ಭಯಂಕರ ಮುಜುಗರದ ಪ್ರಸಂಗಗಳನ್ನೂ ಅನುಭವಿಸುವುದಾಗತದ.ಇನ್ನಽ ಎಷ್ಟೋ ಬಾಲಿವುಡ್ ಮೂವಿಗಳೊಳಗ ಹೀಂಗಽ ಬಸ್ ನಾಗ ತೂಕಡಿಸಿ ಹಿರೋನ ಹೆಗಲ ಮೇಲೆ ತಲೆಯಿಡೋ ಹಿರೋಯಿನ್ ,ಅವಳ ಹಾರಾಡುತ್ತಿರೋ ಮುಂಗುರುಳನ್ನು ನೇವರಿಸೋ ಹಿರೋ ..ಹಿನ್ನೆಲೆಯಲ್ಲಿ ಒಂದು ಹಾಡು...ಲವ್ ಸ್ಟೋರಿಗೆ ನಾಂದಿ ಆಗಿಬಿಡತದ್ರಿ ಈ ತೂಕಡಿಕಿ.
ಆದ್ರ ಎಷ್ಟೋ ಸಲ ಈ ತೂಕಡಿಕಿಯಿಂದ ಅವಘಡಗಳೂ ಆಗತಾವ.ರಾತ್ರಿ ಬಸ್ ಡ್ರೈವ್ ಮಾಡುತ್ತಿರುವ ಡ್ರೈವರ್ ತೂಕಡಿಸಿದರ ಮುಗೀತು..ಲಕ್ಷ್ಮಿ ರಮಣ ಗೋವಿಂದ..ನೈಟ್ ಡ್ಯೂಟಿ ಮಾಡುವ ನಸ್೯ ಡಾಕ್ಟರ್ ತೂಕಡಿಸಿದ್ರ ಪೇಶಂಟ್ ಗಳ ಗತಿ ಅಧೋಗತಿ.ತೂಕಡಿಸುತ್ತ ಮಗುವಿಗೆ ಹಾಲೂಡಿಸಿದ ತಾಯಿ...ಉಸಿರುಗಟ್ಟಿದ ಮಗು ಇಂಥವೆಲ್ಲ ಸುದ್ದಿಗಳನ್ನು ಆಗಾಗ ಕೇಳಕೋತನ ಇರತೀವಿ.ತೂಕಡಿಸಿಕೋತ ಕೂತ ಸೆಕ್ಯೂರಿಟಿ ಗಾಡ್೯ಗಳ ಮುಂದೆನೇ ಮನೆ ,ATM ಗಳ ಕಳ್ಳತನಗಳೂ ನಡೆಯುವುದುಂಟು.
ತೂಕಡಿಕಿ ಮಾತು ಬಂದಾಗ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮರೆಯುವ ಹಾಗೆಯೇ ಇಲ್ಲ.ಸಭೆ -ಸಮಾರಂಭಗಳಲ್ಲಿ ,ಸದನದ ಕಲಾಪಗಳಲ್ಲಿ ಅವರು ತೂಕಡಿಸಿ ಸುದ್ದಿಯಾಗುವುದು ಸವೇ೯ಸಾಮಾನ್ಯವಾಗಿತ್ತು.ಅದಕ್ಕಽ ಬಲ್ಲವರು ‘ತೂಕಡಿಸಿ ತೂಕಡಿಸಿ ಬೀಳದಿರೋ ತಮ್ಮಾ ...ಓ ಮಂಕುತಿಮ್ಮಾ ‘ಅಂತ ಹಾಡಿರಬೇಕು.
ಏನ ಇರಲಿ ,ಮನಷಾ ಅಂದಮ್ಯಾಲೆ ದಿನಕ್ಕ ಒಮ್ಮೆರೆ ಆಕಳಿಸಲಾರದ,ತೂಕಡಿಸಲಾರದ ಇರಲಿಕ್ಕೆ ಆದೀತ?ಈಗ ಈ ಬರಹವನ್ನು ಓದಕೋತ ನೀವೆಲ್ಲಾರೂ ಅದೆಷ್ಟು ಸಲ ಆಕಳಿಸಿ..ತೂಕಡಿಸಿರತೀರೋ ಭಗವಂತಗಽ ಗೊತ್ತು.
ಇತಿ ಶ್ರೀ ಮಾನವೇತಿಹಾಸ ವತ೯ಮಾನ ಪುರಾಣೇ ಆಕಳಿಕಿ-ತೂಕಡಿಕಿ ಅಧ್ಯಾಯಂ ಸಂಪೂರ್ಣಂ..
~ ಗೌರಿಪ್ರಸನ್ನ
ಸಮಯಾ ಸಮಯವುಂಟೇ? ನೀವು ಅನಿವಾಸಿಯಲ್ಲಿ ಹಾಕಿ ಒಂದು ವಾರದ ಮೇಲೆ ಓದುತ್ತಿರುವೆ. ಕ್ಷಮೆ ಇರಲಿ. ಕಾಲೇಜಿನ್ಯಾಗ ಪಾಠ ಕೇಳುವಾಗ ಒಂದಾದ ಮ್ಯಾಲೊಂದು ಆಕಳಿಕೆ ಬಂದೂ ಬಂದೂ ಬಾಯಿ ಮುಚ್ಚಿಕೊಂಡು ಆಕಳಿಸೂದನ್ನ ಅಭ್ಯಾಸ ಮಾಡಿಕೊಂಡೀನ್ರಿ. ಭಾಳ ಆಕಳಿಸಿದ್ರ ಕಣ್ಣಾಗ್ಯಾಕ ನೀರ ಬರತಾವೋ? ಭಾಳ ನಿದ್ದೀ ಮಾಡಿದ್ರೂ ಆಕಳಿಕಿ ಬರತಾವ, ಭಾಳೊತ್ತ ನಿದ್ದೀ ಮಾಡಿಲ್ಲಾಂದ್ರೂ ಆಕಳಿಕಿ ಬರತಾವ.ಹಿಂದೂಸ್ಥಾನಿ ಸಂಗೀತ ಕಚೇರಿಯೊಳಗ ಒಮ್ಮೆ ನನ್ನ ಬಾಜೂಕಿದ್ದಾವ ಒಂದಾದ ಮ್ಯಾಲೊಂದು ಆಕಳಿಕಿ ಹೊಡದು ನನ್ನ ರಸಭಂಗ ಮಾಡ್ಲಿಕತ್ತಿದ್ದ. `ಸರ, ಮಲಗಿಬಿಡ್ರಲ್ಲ?` ಎಂದೆ. `ನೀವು ಅಷ್ಟ ತಲಿ ಅಲ್ಲಾಡಸಲೀಕತ್ತೀರಿ, ಎಲ್ಲಿ ನೀವು ತಪ್ಪ ತಿಳಕೊಳ್ಲತೀರೋ?` ಎಂದು ನಕ್ಕು ನಿದ್ದಿಗೆ ಹೋದ ಪುಣ್ಯಾತ್ಮ. ಸತ್ಯನಾರಾಯಣ ಕತಿ ಕೇಳೂಮುಂದ ನಾ ಒಂದೋ ಆಕಳಸತೀನಿ (ಬಾಯಿ ಮುಚ್ಚಿ), ಇಲ್ಲಾ ಭಕ್ತೀಲೇ ಕೇಳವರ ತರ ಕಣ್ಣ ಮುಚ್ಚಿ ನಿದ್ದೀ ಹೊಡೀತೀನಿ. ನಾ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡೂಮುಂದ ಗರ್ಭದಾಗಿನ ಕೂಸು ಆಕಳಿಸುದನ್ನ ಸಾಕಷ್ಟ ಸಲ ನೋಡೀನಿ.
ಇನ್ನ ತೂಕಡಿಕಿ ವಿಷಯದಾಗ ನಾನು ಪುಣ್ಯಜೀವಿ. ಎಲ್ಲಿ ಬೇಕೆಂದರೂ ತೂಕಡಿಸಬಲ್ಲೆ. ಸಿಟಿ ಬಸ್ಸಿನ್ಯಾಗ ನಿಂತಕೊಂಡು ತೂಕಡಿಸದಿದ್ದೆ. ಎಷ್ಟ ಮಂದಿ ಇರಲಿ, ಎಷ್ಟ ಗದ್ದಲ ಇರಲಿ, ಹತ್ತು ನಿಮಿಷ ತೂಕಡಿಸೂ ಮಜಾನ ಬ್ಯಾರೆ ಬಿಡ್ರಿ. ಇನ್ನ ಬ್ಯಾರೆಯವರು ಕಾರು ಓಡಿಸಿದ್ರ ನಾನು ಬಾಜು ನೀಟಿನ್ಯಾಗ ಕೂತ ತೂಕಡಿಕೆ!
ದೇವೇಗೌಡ್ರರ ಬಗ್ಗೆ ಎಲ್ಲೋ ಓದಿದ ಜೋಕು ನೆನಪಾಯಿತು: ತಾವು ಸಂಸತ್ತಿನಲ್ಲಿ ಕೂತಾಗ ತೂಕಡಿಕೆ ಬಂದು ಎಲ್ಲರೂ ತಮ್ಮನ್ನೇ ದುರುಗುಟ್ಟಿಕೊಂಡು ನೋಡುತ್ತಿರುವಂತೆ ಕನಸುಬಿದ್ದು ಗಾಬರಿಯಾಗಿ ಎಚ್ಚರಾಗಿ ಸುತ್ತ ನೋಡಿದರಂತೆ, ಹೌದು, ಸಂಸತ್ತಿನಲ್ಲೇ ಕೂತಿದ್ದರಂತೆ!
ನೀವು ಯಾವುದೇ ವಿಷಯದ ಬಗ್ಗೆ ಹರಟೆಯ ಪ್ರಬಂಧ ಬರೆಯಬಲ್ಲಿರಿ. ಯಾಕ ನೀವು ದಿನಪತ್ರಿಕೆಯೊಂದಕ್ಕೆ ಅಂಕಣ ಬರೆಯಬಾರದು, `ಅನಿವಾಸಿಯ ಹರಟೆಕಟ್ಟೆ`?
ಭಾಳ ಇಷ್ಟ ಆತ್ರಿ ನಿಮ್ಮ ಬರಹ.
– ಕೇಶವ
LikeLike