ಸಂಕಟ (ಕಥೆ) – ಲಕ್ಷ್ಮೀನಾರಾಯಣ ಗುಡೂರ

ಅನಿವಾಸಿಯ ಬಂಧುಗಳಿಗೆ ನಮಸ್ಕಾರ. ಇಂದು ನನ್ನ ಹತ್ತಿರ ಬೇರೆ ಏನೂ ಸರಕು ಇರಲಿಲ್ಲವಾದ್ದರಿಂದ, ಈ ಹಿಂದೆ ನಾನೇ ಬರೆದ ಕಥೆಯೊಂದನ್ನು ಹಾಕುತ್ತಿರುವೆ. ನಾನು ಕಥೆಗಾರನಲ್ಲವೆಂದು ಗೊತ್ತಿದ್ದೂ ನನ್ನ ಒಂದು ಪ್ರಯತ್ನವನ್ನು ನಿಮ್ಮಂತಹ ಪ್ರಬುದ್ಧರ ಮುಂದೆ ಇಡುತ್ತಿರುವೆ. ದಯವಿಟ್ಟು ನಿಮ್ಮ ಅಭಿಪ್ರಾಯ, constructive criticism ತಿಳಿಸಿ, ಓದಿದ ನಂತರ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ)

28.06.2020

ಹೆಚ್ಚು ಕಡಿಮೆ ಆರು ತಿಂಗಳಾದ ಮೇಲೆ ಮತ್ತೆ ಇಲ್ಲಿ ಬರೆಯುತ್ತಿರುವೆ. ಬರೆಯುವ ವಿಷಯ ಬಹಳವಿದೆ – ಎಲ್ಲಿಂದ ಪ್ರಾರಂಭಿಸುವುದೋ ಗೊತ್ತಿಲ್ಲ. ಅದರ ಬಗ್ಗೆ ಚಿಂತಿಸುತ್ತ ಹತ್ತು ದಿನಗಳು ಹೋದವು. ಇವತ್ತೂ ಕೈಯಲ್ಲಿ ಐ-ಪ್ಯಾಡಿದೆ … ಆದರೆ ಬೆರಳುಗಳು ಓಡುತ್ತಿಲ್ಲ. ನನ್ನ ಯೂನಿವರ್ಸಿಟಿ ಅಪ್ಲಿಕೇಶನ್ನಿನಿಂದ ಶುರುವಾದದ್ದು, ಇಂಟರ್ವ್ಯೂ, ಏ-ಲೆವೆಲ್ ಮಾಕ್ ಪರೀಕ್ಷೆ, ಮುಂದಿನ ತಯಾರಿಗಳ ಮೂಲಕ ಹಾಯ್ದು ನಿನ್ನೆ ಫೈನಲ್ ಪರೀಕ್ಷೆಗಳು ಮುಗಿಯುವವರೆಗೆ ಸತತವಾಗಿ ಒಂದಾದ ಮೇಲೊಂದರಂತೆ ಬಂದು, ನನ್ನ ಸ್ಥಿತಿ ಆ ಬಿಬಿಸಿಯ ಅಟ್ಟೆನ್ಬರಾ ಅವರ ಬ್ಲೂ ಪ್ಲಾನೆಟ್ಟಿನ ತಿಮಿಂಗಿಲದ ಹಾಗಿತ್ತು – ಮಧ್ಯ ಮಧ್ಯ ಮೇಲೆ ಬಂದು ಉಸಿರೆಳೆದುಕೊಳ್ಳುವುದು ಮತ್ತೆ ಓದು / ಕೆಲಸದ ಜೀವನದಲ್ಲಿ ಮುಳುಗು ಹಾಕುವುದು. ಇವತ್ತು ಖಾಲಿ ಇದ್ದೇನೆ, ಬ್ಲಾಗಿನಲ್ಲೇನಾದರೂ ಬರೆಯೋಣ ಅನ್ನಿಸಿ ಎತ್ತಿಕೊಂಡೆ.

ಅಮ್ಮ ಕರೆಯುತ್ತಿದ್ದಾಳೆ ಕೆಳಗಿನಿಂದ. ನೋಡಿ ಬಂದು ಮತ್ತೆ ಬರೆಯುತ್ತೇನೆ.

ವೃತ್ತಿಯಲ್ಲಿ ವೈದ್ಯಳಾಗಿದ್ದ ಅಮ್ಮನಿಗೆ ಕೋವಿಡ್ ಆಗಿದ್ದು, ನಾಲ್ಕು ತಿಂಗಳ ಹಿಂದೆ ಫೆಬ್ರುವರಿಯಲ್ಲಿ. ನನ್ನ ಮಾಕ್ ಎಕ್ಸಾಮ್ ಮುಗಿದಂದು. ಪರೀಕ್ಷೆಯ ಕೊನೆಯ ದಿನ ಅವತ್ತು. ಬೆಳಗ್ಗೆ ನಾನು ಹೊರಡುವಾಗಲೇ ಅಮ್ಮ ತಲೆ ಹಿಡಿದುಕೊಂಡು ಕೂತಿದ್ದಳು. “ಯಾಕೋ ಸ್ವಲ್ಪ ತಲೆನೋವು ಕಣೆ, ಕೆಮ್ಮು, ಜ್ವರ ಯಾವ್ದೂ ಇಲ್ಲ ಪುಣ್ಯಕ್ಕೆ; ಇಲ್ಲಂದರೆ ಕೋವಿಡ್ಡೋ ಏನೋ ಅನ್ನೋ ಚಿಂತೆ ಮಾಡಬೇಕಾಗಿರ್ತಿತ್ತು. ಎಲ್ಲ ಕಡೆ ಅದೊಂದು ಶುರುವಾಗಿದೆಯಲ್ಲ, ನಮ್ಮ ಆಸ್ಪತ್ರೆಯಲ್ಲಿ ಸಾಕಷ್ಟು ಪೇಶಂಟ್ಗಳು ಬರುತ್ತಿದ್ದಾರೆ! ನಿನ್ ಪರೀಕ್ಷೆ ಬೇರೆ. ಕೊನೇ ದಿನ, ಮುಗಿಸಿ ಬಿಡು. ನೋಡೋಣ” ಅನ್ನುತ್ತ ಪ್ಯಾರಾಸೆಟಮಾಲ್ ನುಂಗಿ ನನಗೆ ಬೈ ಹೇಳಿದಳು. ಪಪ್ಪ ಆಗಲೇ ಕಾರು ಸ್ಟಾರ್ಟ್ ಮಾಡಿಯಾಗಿತ್ತು. ನಾನು ಬಾಗಿಲು ದಾಟುವಾಗಲೇ “ದೇವರಿಗೆ ಕೈ ಮುಗಿದು ಹೋಗು, ಗುಡ್ ಲಕ್” ಅಂತ ಅಮ್ಮನ ಕೂಗು ಕೇಳಿಸಿ, ಬಾಗಿಲ ಮೇಲಿದ್ದ ಗಣಪತಿಯ ಕಡೆ ನೋಡಿ ಒಮ್ಮೆ ಎದೆಗೆ, ಕಣ್ಣಿಗೆ ಕೈ ಮುಟ್ಟಿಸಿಕೊಂಡು “ಅಮ್ಮಾ, ಬಾಗಿಲು ಹಾಕ್ಕೋ; ಪಪ್ಪ ಆಗಲೇ ಕಾರಲ್ಲಿದಾನೆ” ಅಂದು ಬಾಗಿಲು ಮುಚ್ಚಿ ಹೊರಟೆ.

ಸಂಜೆ ಶಾಲೆಯಿಂದಲೇ ಗೆಳತಿಯರೊಂದಿಗೆ ಹೊರಗೆ ಊಟಕ್ಕೆ ಹೋಗುವ ಬಗ್ಗೆ ಅಮ್ಮನಿಗೆ ಗೊತ್ತಿದ್ದುದರಿಂದ, ಒಂದು ಮೆಸೇಜು ಕಳಿಸಿ ನಾವು ನಾಲ್ವರೂ ಇಟಾಲಿಯನ್ ರೆಸ್ಟಾರೆಂಟಿಗೆ ಹೋದೆವು. ಒಂಬತ್ತೂವರೆಗೆ ಪಪ್ಪನ ಮೆಸೇಜು ಬಂತು – “Waiting in the car outside”. ಗೆಳತಿಯರಿಗೆ ವಿದಾಯ ಹೇಳಿ ಬಂದು ಕಾರಲ್ಲಿ ಕೂತಾಗ ಒಂಬತ್ತು-ಮುಕ್ಕಾಲು. ಪಪ್ಪ ಯಾಕೋ ಚಿಂತೆಯಲ್ಲಿರುವಂತೆ ಅನ್ನಿಸಿತು. ಒಂದೆರಡು ಸಲ ಕೇಳಿದರೂ ಅದಕ್ಕುತ್ತರ ಬರಲಿಲ್ಲ; ನನ್ನ ಕಳೆದ ದಿನದ ಬಗ್ಗೆ ಮಾತಾಡುತ್ತ ಡ್ರೈವ್ ಮಾಡಿದ ಪಪ್ಪ.

ಮನೆಗೆ ಬಂದಾಗ ಅಮ್ಮ ಇರಲಿಲ್ಲ. ಆಗಲೇ ನನಗೆ ನೆನಪಾಗಿದ್ದು ಅಮ್ಮನ ಬೆಳಗಿನ ತಲೆನೋವು. “ಅಮ್ಮ ಎಲ್ಲಿ?” ಊಟದ ಟೇಬಲ್ಲಿನ ಮುಂದೆ ಕುಳಿತ ಪಪ್ಪನ ಮುಖ ನೋಡುತ್ತ ಕೇಳಿದೆ.

“ಮಧ್ಯಾಹ್ನ ಜ್ವರ ಹೆಚ್ಚಾಗಿ, ಉಸಿರಾಟಕ್ಕೆ ತೊಂದರೆ ಅನ್ನಿಸಿದಾಗ ಅವಳನ್ನು ಆಸ್ಪತ್ರೆಗೆ ಕರಕೊಂಡು ಹೋಗಬೇಕಾಯ್ತು. ಆಕ್ಸಿಜೆನ್ ಸ್ಯಾಚುರೇಶನ್ ಕಡಿಮೆಯಾಗಿತ್ತು. ಎಕ್ಸ್-ರೇ, ಸಿಟಿ ಸ್ಕ್ಯಾನ್ ಮತ್ತು ಕೋವಿಡ್ ಟೆಸ್ತ್ ಮಾಡಿದ್ರು, ಮೊದಲಿನ ಎರಡರಲ್ಲೂ ಪಾಸಿಟಿವ್ ಅಂತ ಬಂದುದರಿಂದ ಅಲ್ಲೇ ಅಡ್ಮಿಟ್ ಮಾಡಿಕೊಂಡಿದ್ದಾರೆ. ಕೋವಿಡ್ ರಿಸಲ್ಟ್ ಬರಲಿಕ್ಕೆ ಎರಡು ದಿನ ಬೇಕಾಗಬಹುದಂತೆ. ನಿನ್ನ ಪರೀಕ್ಷೆ ಮುಗಿದು, ಊಟ ಮುಗಿಸಿಕೊಂಡು ಬರ್ತೀಯಲ್ಲ ಅಂತ ಮುಂಚೆ ಹೇಳ್ಳಿಲ್ಲ” ಅಂದ ಪಪ್ಪ.

ನನ್ನ ಎದೆ ಡವಡವ ಹೊಡೆದುಕೊಂಡರೂ, ತೋರಿಸಿಕೊಳ್ಳದೆ “ಹೇಗಿದ್ದಾಳೆ ಈಗ” ಅಂದೆ. “ಸ್ವಲ್ಪ ಹೊತ್ತಿನ ಮುನ್ನ ಫೋನು ಮಾಡಿದ್ಲು, ಆಮೇಲೆ ಮಾಡ್ತಾಳಂತೆ ಎದ್ದಿದ್ದರೆ” ಅನ್ನುವುದರಲ್ಲಿ ನನ್ನ ಫೋನು ಸದ್ದು ಮಾಡಿತು. ಸುಸ್ತಿನ ಧ್ವನಿಯಲ್ಲಿ ಮಾತಾಡಿದ ಅಮ್ಮ, ಎರಡು ನಿಮಿಷದಲ್ಲಿ ಒಂದಿಪ್ಪತ್ತು ಬಾರಿ ಕೆಮ್ಮಿದಳು.

“ಸರಿ, ಮಲಕ್ಕೊ. ಗುಡ್ ನೈಟ್” ಫೋನು ಕಟ್ ಮಾಡಿದೆ. ನಾನೂ ಮಲಗಲು ಹೋದೆ.

ಬೆಳಗ್ಗೆ ಎದ್ದಾಗ ಹನ್ನೆರಡು-ಇಪ್ಪತ್ತು. ಹೇಗೂ ವೀಕೆಂಡು ಅಲ್ಲಿಂದ ಹಾಫ್ ಟರ್ಮ್ ರಜೆ. “ಅಮ್ಮು, ನಾನು ರಾತ್ರಿಯಿಡೀ ಮಲಗಲಿಕ್ಕೇ ಆಗಿಲ್ಲ, ಒಂದೆರಡು ಗಂಟೆ ಮಲಗಿರ್ತೀನಿ” ಅಂತ ಬಾಗಿಲಲ್ಲೇ ಹೇಳಿ ಮಲಗಲು ಹೋದ ಪಪ್ಪ. ಇಡೀ ದಿನ ಮನೆಯೆಲ್ಲ ಭಣಭಣ, ಅತಿಯಾದ ನಿಶ್ಶಬ್ದ. ಅಮ್ಮನ ಮಾತಿಲ್ಲ, ಕೆಲಸಗಳಿಗೆ ಸಹಾಯ ಮಾಡುತ್ತ ಅವಳ ಹಿಂದೆಯೇ ಸುತ್ತುವ ಅಪ್ಪನ ಜೋಕುಗಳಿಲ್ಲ. ಅವತ್ತು ಶನಿವಾರ ಮಧ್ಯಾಹ್ನದ ರೂಟೀನ್ ಅಜ್ಜಿ-ತಾತನ ಜೊತೆಯ ಚಾಟಿಂಗಿಗೂ ನಾನೊಬ್ಬಳೇ ಇದ್ದೆ. ಅಜ್ಜಿ-ತಾತನಿಗೆ ಈಗಲೇ ಹೇಳಿ ಗಾಬರಿಮಾಡಬಾರದು ಎಂದು ಹಿಂದಿನ ರಾತ್ರಿಯೇ ಹೇಳಿದ್ದ ಪಪ್ಪ.

ಇನ್ನೆರಡು ದಿನ ಹೀಗೆಯೇ ಕಳೆಯಿತು. ಕೋವಿಡ್ ಸ್ವಾಬ್ ಪಾಸಿಟಿವ್ ಅಂತ ಬಂದಿತ್ತು. ಫೋನಿನ ಮೇಲೆಯೇ ಅಮ್ಮನೊಡನೆ ಮಾತು. ಇನ್ನೂ ಸುಸ್ತು, ಕೆಮ್ಮು ಹೆಚ್ಚಾದಂತೆಯೇ ಅನ್ನಿಸುತ್ತಿತ್ತು. ಮನೆಯಲ್ಲಿ ಸ್ಮಶಾನಮೌನ. ಫೋನಿನಲ್ಲಿ ಕೇಳಿಸುತ್ತಿದ್ದ ಅಮ್ಮನ ಕೆಮ್ಮು ಮಾತ್ರ ಮನೆಯಲ್ಲಿ ಕೇಳಿಸುವ ಸದ್ದಾಗಿತ್ತು.

ಏನಿದು ಕೋವಿಡ್, ಏನು ಅದಕ್ಕೆ ಉಪಾಯ ಅಂತ ಗೂಗಲ್ ಮಾಡಿ ನೋಡಿದರೆ, ಜಾಸ್ತಿ ಏನೂ ವಿಷಯ ಸಿಗುತ್ತಿರಲಿಲ್ಲ. ಅಮ್ಮ ಇದ್ದ ವಾರ್ಡಿನ ಡಾಕ್ಟರು ಆರನೆಯ ದಿನ ಬೆಳಿಗ್ಗೆ ಫೋನು ಮಾಡಿ, ಹೊಸ ಐ-ಪ್ಯಾಡುಗಳನ್ನು ಕೊಂಡಿರುವುದಾಗಿಯೂ, ಪೇಷಂಟುಗಳ ಜೊತೆಗೆ ಮನೆಯವರು ಫೇಸ್ ಟೈಮಿನಲ್ಲಿ ಮಾತಾಡಬಹುದೆಂದೂ ತಿಳಿಸಿದಾಗ ಒಂದು ದೊಡ್ಡ ಚಿಂತೆ ಕಳೆದಂತಾಗಿ ಪಪ್ಪನ ಕಣ್ಣಿನಲ್ಲಿ ಜೀವ ಮರಳಿ ಬಂದಂತೆನಿಸಿತು. ಅವತ್ತೆಲ್ಲ ಮಾತೂ ಜಾಸ್ತಿಯಾಗಿದೆ ಅನ್ನಿಸಿದ್ದೂ ನಿಜ. ಸಂಜೆ ಅಮ್ಮನನ್ನು ನೋಡಿದಾಗ ಪಪ್ಪ ಅತ್ತೇಬಿಡುತ್ತನೆನ್ನಿಸಿದರೂ, ಅದು ನನ್ನ ಕಣ್ಣೀರನಿಂದ ಮಂಜಾಗಿದ್ದ ದೃಷ್ಟಿಯ ದೋಷವಿರಬಹುದೇ ಅಂದುಕೊಂಡು ಸುಮ್ಮನಾಗಿದ್ದೆ.

ಹಾಫ್ ಟರ್ಮ್ ರಜೆ ಮುಗಿದು, ಶಾಲೆ ಶುರುವಾಗಿ ಎರಡು ದಿನ ಆಗಿತ್ತು. ಮಂಗಳವಾರ ಮಧ್ಯಾಹ್ನ ಮನೆಗೆ ಬಂದಾಗ ಪಪ್ಪ ತಲೆಯನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಸೋಫಾದ ಮುಂದೆ ನೆಲದ ಮೇಲೆ ಕೂತಿದ್ದ. ಒಂದು ಕ್ಷಣ ಎದೆ ಧಸ್ಸೆಂದರೂ, ಎಷ್ಟು ಸಾಧ್ಯವೋ ಅಷ್ಟು ನಾರ್ಮಲ್ ಧ್ವನಿಯಲ್ಲಿ “ಏನಾಯ್ತು ಪಪ್ಪಾ?” ಅಂದರೂ, ಆ ಧ್ವನಿ ನನ್ನದೇನಾ ಆನ್ನುವ ಅನುಮಾನ ಬರದೇ ಇರಲಿಲ್ಲ.

ಅಳು ತಡೆಯುತ್ತ ಗೊಗ್ಗರು ಧ್ವನಿಯಲ್ಲಿ “ಅಮ್ಮನಿಗೆ ಸೀರಿಯಸ್ಸು ಪುಟ್ಟಾ; ಇವತ್ತು ಬೆಳಿಗ್ಗೆ ಐಸಿಯುಗೆ ಶಿಫ್ಟ್ ಮಾಡಿದ್ದರು. ಈಗ ವೆಂಟಿಲೇಟರ್ ಮೇಲೆ ಹಾಕಬೇಕೇನೋ ಅನ್ನುವ ಮಾತಾಡಿದರು ಡಾಕ್ಟರು …” ಇಷ್ಟು ಹೇಳುವಲ್ಲಿಗೆ ಮುಗಿಯಿತು ಪಪ್ಪನ ಹಿಡಿತ, ಕಣ್ಣೀರಿನ ಕಟ್ಟೆ ಒಡೆಯಿತು, ತಲೆಯನ್ನು ಕೆಳಗೆ ಮಾಡಿ ಕುಳಿತ. ಸದ್ದಿಲ್ಲದೇ ಅಳುತ್ತಿದ್ದಾನೆ ಅನ್ನುವುದನ್ನು ಮುಚ್ಚಿಡಲಾರದೇ ಹೋದವು ಆಗಾಗ ಬರುತ್ತಿದ್ದ ಬಿಕ್ಕುಗಳು. ನಾನಂತೂ ಪಪ್ಪನ ಭುಜದ ಮೇಲೆ ತಲೆಯಿಟ್ಟು ಜೋರಾಗಿಯೇ ಅತ್ತೆ, ಅದುವರೆಗೆ ಹಿಡಿದಿಟ್ಟಿದ್ದ ದುಃಖವನ್ನೆಲ್ಲ ಹೊರಹಾಕಿದೆ.

ಅಲ್ಲಿಂದ ನಮ್ಮ ಜೀವನ ಯಾಂತ್ರಿಕವಾಯಿತು. ಅಳು ಕಡಿಮೆಯಾಗಿ, ಮೌನ ಹೆಚ್ಚಿತು. ಪಪ್ಪನ ಕೆಲಸ, ನನ್ನ ಶಾಲೆ, ಅಮ್ಮನ ಐಸಿಯು ಹೋರಾಟ ಮುಂದುವರೆದೆವು. ದಿನಕ್ಕೆರಡು ಬಾರಿ ಫೇಸ್ ಟೈಮಿನಲ್ಲಿ ಅಮ್ಮನನ್ನು ನೋಡುವುದು, ಬದುಕಿರುವಳೆನ್ನುವ ಸಮಾಧಾನಕ್ಕಿಂತ ಹತ್ತಾರು ಟ್ಯೂಬುಗಳನ್ನು ಚುಚ್ಚಿಸಿಕೊಂಡು ಸೊರಗಿ ಅಸ್ಥಿಪಂಜರದಂತಾಗಿರುವ ಅವಳನ್ನು ನೋಡುವ ಸಂಕಟವೇ ಹೆಚ್ಚಾಯಿತು. ಎಷ್ಟೋ ಸಲ ತಪ್ಪಿಸಿದರೆ ದುಃಖ ಕಡಿಮೆಯಾಗಬಹುದೇನೋ ಅನ್ನಿಸಿದರೂ, ಪಪ್ಪ ಒಬ್ಬನೇ ಆಗುತ್ತಾನಲ್ಲ ಅನ್ನುವ ಕಾರಣಕ್ಕೆ ನನ್ನನ್ನು ನಾನು ಎಳೆದುಕೊಂಡು ಹೋಗುತ್ತಿದ್ದೆ. ಉಳಿದೆಲ್ಲ ಹೊತ್ತು ಪಪ್ಪ ತನ್ನ ಕೆಲಸದಲ್ಲಿ ಕಳೆದರೆ, ಪರೀಕ್ಷೆ ಹತ್ತಿರ ಬಂದಂತೆ ನನ್ನ ಓದಿನ ಭರದಲ್ಲಿ ನಾನು ಮುಳುಗಿದೆ. ಆಗೀಗ ಅಡಿಗೆ ಮಾಡುವಾಗ, ಪ್ರತಿಸಲ ಊಟ ತಿಂಡಿ ಮಾಡುವಾಗ ಪಪ್ಪ ಮತ್ತು ನಾನು ಜೊತೆಯಾಗಿಯೇ ಮಾಡುವುದು. ಅಮ್ಮನ ನಗು, ಮಾತುಕತೆ, ಹಾಸ್ಯದ ಬಗ್ಗೆ ಮಾತಾಡುತ್ತಾ ಅವಳೊಂದಿಗೆ ಕಳೆದ ಒಳ್ಳೆಯ ದಿನಗಳ ನೆನಪನ್ನು ಹಸಿರಾಗಿಡುವ ಪ್ರಯತ್ನ ನಡೆಸುತ್ತಿದ್ದೆವು. ಅಜ್ಜಿ-ತಾತಗೂ ವಿಷಯ ಹೇಳಿಯಾಗಿತ್ತು; ಅವರೂ ಈ ನಡುವೆ ಪರಿಸ್ಥಿತಿಯೊಡನೆ ಹೊಂದಾಣಿಕೆ ಮಾಡಿಕೊಂಡು ದೂರದೇಶದಲ್ಲಿ ಇಬ್ಬರೇ ಇರುವ ನಮ್ಮ ಧೈರ್ಯಗೆಡದಂತೆ ನೋಡುವ ಯತ್ನದಲ್ಲೇ ಇರುತ್ತಿದ್ದರು.

ಈಸ್ಟರ್ ರಜೆ ಮುಗಿದು ಎರಡು ವಾರವಾಗಿತ್ತು. ಅಮ್ಮನಿಗೆ ಟ್ರೆಕಿಯಾಸ್ಟಮಿ (ಉಸಿರಾಟಕ್ಕೆ ಅನುಕೂಲವಾಗುವಂತೆ ಕತ್ತಿನಲ್ಲಿ ಮುಂದೆ ಗಾಯಮಾಡಿ ನೇರವಾಗಿ ವಿಂಡ್ ಪೈಪಿಗೆ ಆಕ್ಸಿಜೆನ್ ಕೊಳವೆ ಹಾಕುವುದೆಂದು ಗೂಗಲ್ ಮಾಡಿದಾಗ ಗೊತ್ತಾಗಿದ್ದು) ಮಾಡಿ ಮೂರು ದಿನಕ್ಕೆ, ಶುಕ್ರವಾರ ಮಧ್ಯಾಹ್ನ ಐಸಿಯು ಟೀಮಿನೊಂದಿಗೆ ನಮ್ಮ ಮಾತಿದೆ ಅಂತ ಪಪ್ಪ ಹೇಳಿದ್ದ. ಎಲ್ಲ ಫೋನು-ಕಂಪ್ಯೂಟೆರಿನ ಮೇಲೆಯೆ ಮಾತುಕತೆ. ಡಾಕ್ಟರರು ತಮ್ಮ ಪ್ರಯತ್ನ ತಾವು ಮುಂದುವರೆಸುವುದಾಗಿ ಭರವಸೆ ಕೊಡುತ್ತಲೇ, ಯಾವಾಗ ಬೇಕಾದರೂ ಜೀವ ಹೋಗಬಹುದೆಂದು ಹೇಳಿದಾಗ ಪಪ್ಪನ ಮುಖ ಕಲ್ಲಿನಂತಾಗಿದ್ದರೆ, ನನ್ನ ಹೊಟ್ಟೆಯಲ್ಲಿ ಯಾರೋ ಕೈ ಹಾಕಿ ಹಿಂಡಿದಂತಾಗಿತ್ತು.

ಮೇ ಎರಡನೆಯ ವಾರ, ನನ್ನ ಫೈನಲ್ ಪರೀಕ್ಷೆಗಳು ಶುರುವಾಗಲು ಐದು ದಿನವಿರಬೇಕಿತ್ತು. ಅಮ್ಮ ಇನ್ನೂ ಐಸಿಯುನಲ್ಲೇ ಇದ್ದಳು. ಅವತ್ತು ಬೆಳಿಗ್ಗೆ ಎದ್ದಾಗ, ಪಪ್ಪ ಯಾರೊಡನೆಯೋ ಜೋರಾಗಿ ಮಾತಾಡುತ್ತಿರುವುದು ಕೇಳಿಸಿತು. ಈ ನಡುವೆ ಕೇಳಿಲ್ಲದ ಆಶಾವಾದದ ಛಾಯೆ ಇದ್ದಂತನಿಸಿ, ಓಡಿ ಕೆಳಗಿಳಿದು ಬಂದೆ. ಐಸಿಯು ಡಾಕ್ಟರು ಹೊಸದೊಂದು ಟ್ರೀಟ್ಮೆಂಟ್ ಟ್ರಯಲ್ ಶುರುವಾಗಿದೆಯೆಂದೂ, ಅಮ್ಮನನ್ನು ಅದರಲ್ಲಿ ಸೇರಿಸಿದ್ದಾರೆಂದೂ ಹೇಳುತ್ತಿದ್ದರು. ಆ ಟ್ರಯಲ್ಲಿನ ಮೊದಮೊದಲಿನ ಫಲಿತಾಂಶಗಳು ಚೆನ್ನಾಗಿದ್ದುದು ಕಂಡುಬರುತ್ತಿದೆಯೆಂದೂ ಆದರೆ ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಹೇಗಾಗುವುದೋ ಕಾಯ್ದು ನೋಡಬೇಕೆಂದೂ ಒತ್ತಿ ಒತ್ತಿ ಹೇಳಿದರು. ನಮ್ಮಿಬ್ಬರಿಗಂತೂ ಕತ್ತಲೆಯ ಗುಹೆಯ ಕೊನೆಯಲ್ಲೊಂದು ಬೆಳಕಿನ ಕಿರಣ ಕಂಡಂತಾಗಿತ್ತು.

ಇದಾಗಿ ಎರಡು ವಾರಕ್ಕೆಲ್ಲ ಅಮ್ಮನ ಪರಿಸ್ಥಿತಿ ಸುಧಾರಿಸಲಾರಂಭಿಸಿ, ಅಮ್ಮ ವೆಂಟಿಲೇಟರಿನಿಂದ ಹೊರಬಂದಳು. ಪಪ್ಪ ಮತ್ತೆ ಮಾತಾಡಲಾರಂಭಿಸಿದ. ದಿನಕ್ಕೆರಡು ಬಾರಿ “ಏನನ್ಕೊಂಡೀಯೇ ನಿಮ್ಮಮ್ಮನ್ನ? ಅವಳ ಜೀವನೋತ್ಸಾಹ ನೋಡಿನೇ ನಾನು ಮದುವೆಯಾಗಿದ್ದು” ಅನ್ನಲಾರಂಭಿಸಿದ. ನನಗೂ ಪರೀಕ್ಷೆಯಿಲ್ಲದೇ ಶಾಲೆಯ ಅಸೆಸ್ಮೆಂಟಿನ ಮೇಲೆಯೇ ನಿರ್ಧಾರವಾಗಲಿರುವ ಫಲಿತಾಂಶವನ್ನು ಎದುರಿಸುವ ಧೈರ್ಯ ಬಂತು ನಿಜವಾಗಿಯೂ. ನಿರೀಕ್ಷಿತ ಗ್ರೇಡುಗಳು ಬಂದದ್ದು ಸಮಾಧಾನವನ್ನೇ ತಂದಿತು ಕೂಡ.
ಅಮ್ಮ ವಾರ್ಡಿಗೆ ಹೋಗಿ, ಹತ್ತು ದಿನವಿದ್ದು, ಡಿಸ್ಚಾರ್ಜ್ ಆಗಿ ಮನೆಗೆ ಬಂದು ಒಂದು ವಾರವಾಯಿತು. ಇನ್ನೂ ಅಮ್ಮನಿಗೆ ಬಹಳವೇ ನಿಶ್ಶಕ್ತಿಯಿದೆಯಾದರೂ ನಮ್ಮಿಬ್ಬರಲ್ಲಿ ಬಲಬಂದಿದೆ. ನನ್ನ ಶೈಕ್ಷಣಿಕ ವರ್ಷ ಮುಗಿದಿರುವುದರಿಂದ ಮನೆಯಲ್ಲೇ ಉಳಿದು ಅಮ್ಮನ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿದೆ. ಅಮ್ಮನಿಗೆ ಮಾತಾಡಲೂ ಇನ್ನೂ ಸುಸ್ತಿದ್ದರೂ, ನಾನೇ ಇಬ್ಬರ ಪರವಾಗಿ, ತಿಂಗಳುಗಟ್ಟಲೆ ಆಡದೆ ಉಳಿದ ಮಾತುಗಳನ್ನು ಆಡಿ ಮುಗಿಸುತ್ತಿರುವೆ. ಅಮ್ಮನೂ ಕ್ಯಾಚಪ್ ಮಾಡುತ್ತಿದ್ದಾಳೆ. ಮನೆಯಲ್ಲಿ ಮತ್ತೆ ಗದ್ದಲವಿದೆ, ನನ್ನದು ಮತ್ತು ಪಪ್ಪನದು ಸಧ್ಯಕ್ಕೆ.

************************************************************
20.08.2020
ಬಿದ್ದು ಹೊರಳಾಡಿ ಅತ್ತುಬಿಡಬಬೇಕನ್ನಿಸುತ್ತದೆ, ಎಷ್ಟು ಬಾರಿ. ದುಃಖ ಉಮ್ಮಳಿಸಿ ಬಂದರೂ, ಕಣ್ಣಲ್ಲಿ ನೀರು ಬರುತ್ತಿಲ್ಲ. ಗುಂಡು ಬಡಿದು ಬಿದ್ದು ಬೇಟೆಗಾರನ ದಾರಿ ನೋಡುತ್ತಿರುವ ಜಿಂಕೆಗೂ ಹೀಗೇ ಅನ್ನಿಸುತ್ತಿರಬೇಕು. ಅಮ್ಮ ಹತ್ತಿರದವಳಾದರೂ, ನನ್ನ ಮನಸ್ಸಿಗೆ ಬೇಜಾರಾದರೆ ನಾನು ಓಡುತ್ತಿದ್ದುದು ಅಪ್ಪನ ಹತ್ತಿರವೇ. ಕಳೆದ ಆರು ವಾರಗಳಲ್ಲಿ ಎಷ್ಟು ಬಾರಿ ಪಪ್ಪಾ ಅಂದು ಅವರ ರೂಮಿನ ಕಡೆ ಹೋಗಿಯಾಗಿದೆ. ಉತ್ತರವಿಲ್ಲದೇ ವಾಪಸು ಬರುವಾಗ, ಅಮ್ಮನ ರೂಮಿನ ಕಡೆಗೆ ಹಾಯ್ದ ಕಣ್ಣುಗಳು ತುಂಬಿ ಬರುತ್ತವೆ. ಮೊದಮೊದಲು ಆ ಕಣ್ಣುಗಳು ತುಂಬಿ ಕೆನ್ನೆಯ ಮೇಲೆ ಇಳಿದ ಕಣ್ಣೀರಿನ ಗುರುತು ಮುಖ ತೊಳೆದರೂ ಹೋಗುವುದಿಲ್ಲ ಅನ್ನಿಸಿತ್ತು. ಆಮೇಲಾಮೇಲೆ, ಕಣ್ಣಲ್ಲಿ ದುಃಖ ಸಂಕಟ ಕಾಣುತ್ತವಷ್ಟೆ. ಫೈರ್ ಪ್ಲೇಸಿನ ಮೇಲಿರುವ ಹಿತ್ತಾಳೆಯ ಪಾಲಿಶ್ ಮಾಡಿದ ತಂಬಿಗೆಯಲ್ಲಿ ಕಾಣುವ ಕಣ್ಣುಗಳು ನನ್ನವೇನಾ ಅನ್ನುವಷ್ಟು ನಿಸ್ಸತ್ವವಾಗಿವೆ. ಈ ವರ್ಷದ ನವೆಂಬರಿಗೆ ಅಮ್ಮ-ಪಪ್ಪನ ಮದುವೆಯ ಸಿಲ್ವರ್ ಜುಬಿಲಿ ಆಗಬೇಕಿತ್ತು.

ಹೋದ ಸಲದ ಎಂಟ್ರಿಯಲ್ಲಿ ಅಮ್ಮ ಕರೆದಳೆಂದು ಹೋಗಿದ್ದೆ ಅಂದೆನಲ್ಲ, ಅದರ ಬಗ್ಗೆ ಹೇಳಬೇಕು; ಯಾಕೆಂದರೆ ಈಗ ಹಿಂದೆ ನೋಡಿದಾಗ ಅದೊಂದು ಟರ್ನಿಂಗ್ ಪಾಯಿಂಟ್ ಇನ್ ಟೈಮ್ ಅನ್ನಿಸುತ್ತಿದೆ.

ಅಮ್ಮ ಕರೆದದ್ದು, ಪಪ್ಪ ಟಾಯ್ಲೆಟ್ಟಿಗೆ ಹೋಗಿ ಸ್ವಲ್ಪ ಹೊತ್ತಾಯ್ತು, ಅಷ್ಟು ಹೊತ್ತು ಹೋಗೋದಿಲ್ಲ ಅವರು ಸಾಧಾರಣವಾಗಿ ಕರಿ ಒಂದ್ಸಲ ಅಂತ ಹೇಳ್ಳಿಕ್ಕೆ. ಗೆಸ್ಟ್ ರೂಮಿನ ಆನ್ ಸ್ವೀಟ್ ಬಾಗಿಲು ಬಡಿದು “ಪಪ್ಪ, ಆರ್ ಯೂ ಓಕೇ? ಅಮ್ಮ ಕೇಳಿದ್ಲು” ಅಂದೆ. “ಬಂದೆ, ಬಂದೆ; ಟೂ ಮಿನಿಟ್ಸ್” ಅಂದ ಪಪ್ಪ.

ಅಮ್ಮನ ಕಣ್ಣಿಗೆ ಪಪ್ಪ ಸೊರಗಿರುವುದು ಮನೆಗೆ ಬಂದ ಮೊದಲ ದಿನವೇ ಬಿದ್ದಿದ್ದು ನನಗೆ ಆಶ್ಚರ್ಯವೇನಾಗಿರಲಿಲ್ಲ. ಅಮ್ಮ ಅನ್ನುವುದಕ್ಕೆ ಮುನ್ನ ನನಗೆ ಹೊಳೆದಿರಲಿಲ್ಲವಾದರೂ, ಹೌದಲ್ಲ ಅನ್ನಿಸದೇ ಇರಲಿಲ್ಲ. ಆದರೆ, ಹಿಂದಿನ ಕೆಲ ತಿಂಗಳುಗಳ ಪರಿಸ್ಥಿತಿಯ ಅರಿವಿನಿಂದ, ಅದಕ್ಕೆ ಕಾರಣ ಹುಡುಕುವ ಅಗತ್ಯವಿರಲಿಲ್ಲ ಅಮ್ಮನಿಗೆ.

ಜುಲೈ 15, ಸೋಮವಾರ: ಸತತ ಒಂದುವಾರದಿಂದ ಮೋಡ, ಮಳೆಗಳಿದ್ದು ವಾತಾವರಣ ಕತ್ತಲು-ಕತ್ತಲಾಗಿದ್ದುದು, ಅವತ್ತು ಬೆಳಗ್ಗೆ ಬಿಸಿಲೊಡೆದಿತ್ತು. ಅಮ್ಮ ಬೆಳಗ್ಗೆ ಎದ್ದು ನಮ್ಮ ಫಸ್ಟ್ ಫ್ಲೋರಿನ ಲ್ಯಾಂಡಿಂಗಿನಲ್ಲಿರುವ ದೊಡ್ಡ ಕಿಟಕಿಯ ಪರದೆ ತೆಗೆದು, ಬಿಸಿಲಿನಲ್ಲಿ ಪುಸ್ತಕ, ಕಾಫಿ ಕಪ್ಪಿನೊಡನೆ ಕಾಲುಚಾಚಿಕೊಂಡು ಜೋಕಾಲಿಯಲ್ಲಿ ಕುಳಿತಿದ್ದಳು. ಪಪ್ಪ ಬಂದು ಎಂದಿನಂತೆ ಅವಳ ತೊಡೆಯ ಮೇಲೆ ತಲೆಯಿಟ್ಟು ಮಲಗಿ, ಮುಖಕ್ಕೆ ಬಿಸಿಲು ಬಿದ್ದು ಕಣ್ಣು ಮುಚ್ಚಿದ. ಒಂದು ಕ್ಷಣ ಮುಖ ನೋಡಿದ ಅಮ್ಮ ಪುಸ್ತಕ ಪಕ್ಕಕ್ಕಿಟ್ಟು “ಎಲ್ಲಿ ಕಣ್ ತೆಗೀರಿ” ಎದ್ದು ಹಲ್ಲುಜ್ಜುತ್ತಿದ್ದ ನನಗೂ ಕೇಳಿಸಿತು. ಟವೆಲಿನಿಂದ ಒರೆಸಿಕೊಳ್ಳುತ್ತ ಬಂದು ನೋಡಿದೆ – ಪಪ್ಪನ ಮುಖ-ಕಣ್ಣು ಹಳದಿಯಾಗಿದೆಯಲ್ಲ ಅನಿಸಿ, ಅಮ್ಮನ ಕಡೆ ನೋಡಿದೆ. ಅಮ್ಮ ತನ್ನ ವೃತ್ತಿಸಹಜ ಪ್ರತಿಕ್ರಿಯೆಯಂತೆ, ಅಲ್ಲೇ ಪಪ್ಪನ ದೈಹಿಕ ಪರೀಕ್ಷೆ ಶುರುಮಾಡಿಬಿಟ್ಟಿದ್ದಳು. ಗಂಟೆ ಎಂಟಾಗುತ್ತಲೇ ಅವಳೇ ಆಸ್ಪತ್ರೆಗೆ ಫೋನು ಮಾಡಿ, ಅಪಾಯಿಂಟ್ಮೆಂಟ್ ತೊಗೊಳ್ಳುವುದಲ್ಲದೆ, ಗುರುತಿನ ಗ್ಯಾಸ್ಟ್ರೋಎಂಟರಾಲಜಿಸ್ಟರೊಡನೆಯೂ, ರೇಡಿಯಾಲಜಿಸ್ಟ್ ಜೊತೆಗೂ ಮಾತನಾಡಿ ಅರ್ಜೆಂಟಾಗಿ ಸಿಟಿ ಸ್ಕ್ಯಾನ್ ಇತ್ಯಾದಿ ಪರೀಕ್ಷೆಗಳ ತಯಾರಿಯನ್ನೂ ಮಾಡಿದಳು.
ಅಲ್ಲಿಂದ ಎರಡು ವಾರದಲ್ಲಿ ಎಲ್ಲ ಮುಗಿದೇ ಹೋಯಿತು. ಪಪ್ಪನಿಗೆ ಗಾಲ್ ಬ್ಲಾಡರಿನ ನಳಿಗೆಯ (ಬೈಲ್ ಡಕ್ಟ್) ಕೊಲಾಂಜಿಯೋಕಾರ್ಸಿನೋಮಾ ಅನ್ನುವ ಕ್ಯಾನ್ಸರ್ ಆಗಿದೆ, ಅದು ತುಂಬಾ ಮುಂದುವರೆದು ಎಲ್ಲೆಡೆ ಹಬ್ಬಿದೆಯೆಂದೂ ಕೇಳಿ ಅರ್ಥಮಾಡಿಕೊಳ್ಳುವುದರಲ್ಲೇ ಅಪ್ಪ ಹೊರಟೇಬಿಟ್ಟ. ಆಸ್ಪತ್ರೆಗೆ ಸೇರಿದ ಅಪ್ಪನ ಮುಖವನ್ನು ನಾನು ಮತ್ತೆ ನೋಡಿದ್ದು ಫ್ಯುನರಲ್ ಪಾರ್ಲರಿನಲ್ಲಿಯೇ. ಅಮ್ಮ ಆಸ್ಪತ್ರೆಯಲ್ಲಿದ್ದಾಗ ನಾನು ಹಿಡಿದಿಟ್ಟಿದ್ದ ದುಃಖವೆಲ್ಲ ಉಮ್ಮಳಿಸಿ ಬಂದು, ಅವಳ ಭುಜದ ಮೇಲೆಯೇ ತಲೆಯಿಟ್ಟು ಬಿಕ್ಕಿಬಿಕ್ಕಿ ಅತ್ತುಬಿಟ್ಟೆ.

“ವೈ ಅಸ್, ಅಮ್ಮಾ, ವೈ ಅಸ್? ವಾಟ್ ಹಾವ್ ವಿ ಡನ್ ಟು ಡಿಸರ್ವ್ ದಿಸ್?”

*****************************************************
10.09.2020
ನನಗೆ ಮೆಡಿಕಲ್ ಸೀಟು ಸಿಕ್ಕಿದೆ. ಎಲ್ಲೇ ಇರಲಿ ಪಪ್ಪನಿಗೆ ಖುಶಿಯಿದೆ ಅಂತ ಖಂಡಿತ ಹೇಳಬಲ್ಲೆ. ಅಮ್ಮನಿಗೂ ಸಹ ಹಾಗೇ ಅನ್ನಿಸುತ್ತದೆಯಂತೆ, ಅವಳೇ ಎರಡು-ಮೂರು ಸಲ ಹೇಳಿದ್ದಾಳೆ. ಪಪ್ಪ ಇನ್ನೂ ಮನೆಯಲ್ಲೇ ಇದ್ದಾನೆ, ಫೈರ್ ಪ್ಲೇಸಿನ ತಂಬಿಗೆಯಲ್ಲಿ. ಮನದಲ್ಲಂತೂ ಸರಿಯೇ. ಈ ವರ್ಷದ ರೋಲರ್ ಕೋಸ್ಟರ್ ಘಟನೆಗಳಿಂದಾಗಿ ನಾನು ಡೆಫರ್ಮೆಂಟ್ ತೊಗೊಂಡು, ಮುಂದಿನ ವರ್ಷಕ್ಕೆ ಯುನಿವರ್ಸಿಟಿ ಸೇರಿಕೊಳ್ಳಲು ನಿರ್ಧರಿಸಿರುವೆ. ನಾನು ಅಮ್ಮ ಸೇರಿ ಎಲ್ಲೆಡೆ ಸುತ್ತಾಡುವ, ಪಪ್ಪನಿಗೆ ಇಷ್ಟವಾದದ್ದನ್ನು (ಅವನ ಬಕೆಟ್ ಲಿಸ್ಟ್ ಅಂತೆ) ನೋಡುವ ಪ್ಲಾನ್ ಹಾಕಿದ್ದೇವೆ. ನಮ್ಮ ಪಟ್ಟಿಯಲ್ಲಿ ನ್ಯೂ ಡೆಲ್ಲಿಗೆ ಹೋಗಿ ಅಲ್ಲಿ ರಸ್ತೆಬದಿಯ ಪಾನಿಪೂರಿ, ಮಸಾಲಪೂರಿ, ಮೊಮೊ ತಿನ್ನುವುದಿದೆ; ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ದೋಸೆ ಕಾಫಿ ಸವಿಯುವುದಿದೆ; ತ್ರೀ ಈಡಿಯಟ್ಸ್ ಸಿನಿಮಾದಲ್ಲಿ ತೋರಿಸುವ ಲದ್ದಾಖ್ ಸರೋವರದ ದಂಡೆಯ ಮೇಲೆ ಓಡುವುದಿದೆ; ಯಾಣಕ್ಕೆ, ಸೇಂಟ್ ಮೇರೀಸಿಗೆ ಹೋಗಿ, ಯಾರೂ ಇಲ್ಲದಿರುವಾಗ ಜೋರಾಗಿ ಕೂಗುವುದಿದೆ; ಅಜ್ಜಿ-ತಾತನ ಜೊತೆ ಅಡುಗೆಮನೆಯಲ್ಲಿ ನೆಲದ ಮೇಲೆ ಕೂತು ಊಟ ಮಾಡುತ್ತಾ ಗಂಟೆಗಟ್ಟಲೆ ಹರಟೆ ಹೊಡೆಯುವುದಿದೆ. ಆ ಪಟ್ಟಿ ನಾವು ಹೋಗುವವರೆಗೂ ಬೆಳೆಯುವ ಸಾಧ್ಯತೆಯಂತೂ ಖಂಡಿತ ಇದೆ. ಇದೆಲ್ಲವನ್ನೂ ಪಪ್ಪನ ಅಸ್ಥಿಯನ್ನ ಶ್ರೀರಂಗಪಟ್ಟಣದ ಕಾವೇರಿಯಲ್ಲಿ, ಅವನ ಇಷ್ಟದ ಗೋಸಾಯಿ ಘಾಟಿನ ನದಿಯಲ್ಲಿ ಹರಿಯಬಿಡುವ ಮುನ್ನ ಮಾಡಬೇಕಿದೆ.
ಅಮ್ಮ ಊಟಕ್ಕೆ ಕರೀತಿದ್ದಾಳೆ. ಮತ್ತೆ ಸಿಗೋಣ.

*******************************************************

4 thoughts on “ಸಂಕಟ (ಕಥೆ) – ಲಕ್ಷ್ಮೀನಾರಾಯಣ ಗುಡೂರ

  1. It is tricky to comment on a story of this nature without spilling out any spoilers! Despite you claiming not a story teller, it is effective in engaging the reader till the young diarist signs of her entries with ‘The end’! Your style adopted in the story along with the technique through diary entries has additional impact and touches the readers’ heart. So is the choice of just three characters in a nuclear family. We travel with the protagonist and experience her emotions which is not overdone. We will definitely look forward more stories from you, now that this should’ve boosted your confidence! 👍👏👏

    Like

  2. ಗುಡೂರ್ ಅವರ ಕಥೆ ಹೃದಯ ಹಿಂಡಿದೆ. ಕೋವಿಡ್ ಕಾಲದಲ್ಲಿ ಆಸ್ಪತ್ರೆ ತಲುಪಲಾಗದ ರೋಗಿಯ ಮನೆಯವರ ಮಾನಸಿಕ ತುಮುಲಗಳನ್ನು ಮನಮುಟ್ಟುವಂತೆ ಪ್ರತಿಫಲಿಸುವಲ್ಲಿ ಸಫಲವಾಗಿದೆ. ಕಥೆಯಲ್ಲಿ ಹತಾಶೆಯಿದೆ, ಸುರಂಗದಾಚೆ ಬೆಳಕಿದೆ, ಗುರಿಮುಟ್ಟಿದ ಸಾರ್ಥಕತೆಯಿದೆ, ಕೊನೆಯಲ್ಲಿ ಓದುಗ ಊಹಿಸಿದ ತಿರುವಿದೆ. ಇಷ್ಟೆಲ್ಲಾ ಇದ್ದರೂ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ತಿಮಿಂಗಲದ ಪ್ರತಿಮೆ ಇಷ್ಟವಾಯಿತು.

    ರಾಂ

    Like

  3. ಗುಡೂರ್ ಅವರಿಗೆ ಕತೆ ಬರೆಯುವ ಶೈಲಿಯಲ್ಲಿ ಪ್ರಬುದ್ಧತೆ ಇದೆ, ಮುನ್ನುಡಿಯಲ್ಲಿ ಬರೆದದ್ದು ಅವರ ವಿನಯವನ್ನು ತೋರಿಸುತ್ತದೆ. ಕತೆ ಸರಳವಾಗಿದ್ದರೂ ಮನಮುಟ್ಟುತ್ತದೆ. ಹದಿನೆಂಟರ ಹುಡುಗಿಯ ಕಣ್ಣಿಂದ ನೋಡಿ ಬರೆದದ್ದು ತುಂಬ ಇಷ್ಟವಾಯಿತು. ಇನ್ನಷ್ಟು ಕತೆಗಳು ಬರಲಿ, ಗುಡೂರ್ ಅವರೇ. – ಕೇಶವ

    Like

  4. ಗುಡೂರ್ ಅವರೇ ನಿಮ್ಮ ಸಂಕಟ ಎಂಬ ಕಥೆಯನ್ನು ಓದಿದೆ. ಪ್ಯಾಂಡೆಮಿಕ್ ಕಳೆದಿದ್ದರೂ ಅದು ಮೂಡಿಸಿದ ವ್ಯಥೆಗಳು ಹಾತಾಶೆಗಳು ಮತ್ತು ಹಳೇ ನೆನಪುಗಳು, ದೈಹಿಕ ಗಾಯದ ಕಲೆಗಳಂತೆ ಹಳೆಯ ನೋವಿನ ಕುರುಹಾಗಿ ನಿಲ್ಲುತ್ತದೆ. ನೋವಿನ ಕಥೆಗಳು ಒಂದು ರೀತಿಯಲ್ಲಿ ಕಾಲಾತೀತವಾದದ್ದು. ಈ ಹಿನ್ನೆಲೆಯಲ್ಲಿ ನಿಮ್ಮ ಕಥೆ ಇನ್ನೂ ಪ್ರಸ್ತುತ. ಫೈರ್ ಪ್ಲೇಸ್ ಮೇಲೆ ಕುಳಿತಿರುವ ಅರ್ನ್ ಗಳು ಹಳೆ ಭಾವನೆಗಳ ಹೊಳೆಯನ್ನು ಹರಿಸುತ್ತದೆ, ಒಂದು ಬದುಕಿನ ಕಥೆಯ ರೂಪಕವಾಗಿ ಉಳಿಯುತ್ತದೆ. ಬದುಕಿನ ಅನಿಶ್ಚಿತ ತಿರುವುಗಳು, ಬದುಕಿನ ನಶ್ವರತೆ ನಿಮ್ಮ ಕಥೆಯಲ್ಲಿ ಬಹಳ ಮನೋಜ್ಞವಾಗಿ ಮೂಡಿ ಬಂದಿದೆ. ಒಂದು ಡೈರಿಯಲ್ಲಿ ದಾಖಲಿಸಿದ ವೈಯುಕ್ತಿಕ ದಿನಚರಿಗಳನ್ನು ತೆರೆಯುತ್ತಾ ನಿರೂಪಿಸುವ ಕಥನ ಶೈಲಿ ವಿಶೇಷವಾಗಿದೆ. ಒಟ್ಟಾರೆ ಹೃದಯಸ್ಪರ್ಶಿ ಕಥೆ. ಸಾಕಷ್ಟು ಇಂಗ್ಲಿಷ್ ಮತ್ತು ವೈದ್ಯಕೀಯ ಪದಗಳಿರುವುದರಿಂದ ಇದು ಅನಿವಾಸಿ ವೈದ್ಯರು ಬರೆದಿರುವ ಕಥೆ ಎಂಬುದನ್ನು ಓದುಗರು ಸುಲಭವಾಗಿ ಗುರುತಿಸಬಹುದು. ಅದು ದೋಷವಲ್ಲ, ಬದಲಿಗೆ ಕಥೆಗೆ ಒಂದು ಅಥೆಂಟಿಸಿಟಿಯನ್ನು ಒದಗಿಸಿದೆ.

    Like

Leave a Reply to lramasharan Cancel reply

Your email address will not be published. Required fields are marked *