ನವೋಲ್ಲಾಸದ ನವರಾತ್ರಿ

ನಮಸ್ಕಾರ ಅನಿವಾಸಿ ಬಂಧುಗಳೇ. ತಮಗೆಲ್ಲರಿಗೂ ನಾಡಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಭುವನೇಶ್ವರಿಯ ಕೃಪೆ ನಮ್ಮೆಲ್ಲರನ್ನು ಪೊರೆಯಲಿ. 
 ಇಂದಿನ ಸಂಚಿಕೆಯಲ್ಲಿ ನಮ್ಮ ಹೆಮ್ಮೆಯ ಹಾಡುಗಾರ್ತಿ ಅಮಿತಾ ಅವರು ನವರಾತ್ರಿಗೆಂದೇ ವಿಶೇಷವಾಗಿ ಹಾಡಿದ 'ಶಕ್ತಿ' ಎಂಬ ವರಕವಿಯ ಹಾಡು ನಿಮಗಾಗಿ. ಅಪರೂಪದ ಹಾಡು- ಅತ್ಯಪರೂಪದ ಹಾಡುಗಾರಿಕೆ. ಕೇಳಿ ಆನಂದಿಸಿ. ಆಸಕ್ತರಿಗಾಗಿ ಹಾಡಿನ ಸಾಹಿತ್ಯವೂ ಸಹ ಇದೆ.
ನಾನು ಗೌರಿಪ್ರಸನ್ನ , ಅಂದಿನಿಂದ ಇಂದಿನವರೆಗಿನ ನಾ ಕಂಡ ನವರಾತ್ರಿಯ ನೆನಪಿನ ಮೆರವಣಿಗೆಯನ್ನು ನಿಮಗೂ ತೋರಿಸಬಂದಿದ್ದೇನೆ. ನೋಡಿ ನಿಮ್ಮ ನೆನಪುಗಳೂ ಹೊರಗಿಣುಕಿದರೆ ನಮಗೂ ತೋರಿಸಿ. ಎಲ್ಲ ಸೇರಿ ಖುಷಿಪಡೋಣ. ಖುಷಿಯೇ ತಾನೇ ನಿಜದ ಹಬ್ಬ? 

~ ಸಂಪಾದಕಿ

ಶಕ್ತಿ

ನಮಸ್ತೇ,
ಈ ಸಲದ ಶರನ್ನವರಾತ್ರಿಯ ಸಂಭ್ರಮದಲ್ಲಿ ಬೇಂದ್ರೆ ಅಜ್ಜ ದೇವಿಯ ಕುರಿತು ಬರೆದ ಅಸಂಖ್ಯ ಪದ್ಯಗಳಲ್ಲಿ ಆಯ್ದ ಕೆಲವು ಕವಿತೆಗಳಿಗೆ ರಾಗ ಹಾಕಿ, ಅವರನ್ನ ಇಷ್ಟ ಪಡುವ, ಅವರ ಹಾಡು,ಸಾಹಿತ್ಯ ಉಸಿರಾಡುವ ಕೆಲವರೊಂದಿಗೆ ಹಂಚಿಕೊಳ್ಳೋಣ ಅನ್ನಿಸಿತು. ಇದು ಆ ಸರಣಿಯ ಎರಡನೇ ಹಾಡು.
 'ಶಕ್ತಿ' ಎಂಬ ಶೀರ್ಷಿಕೆಯಡಿಯಲ್ಲಿ ಇರುವ ಈ ಕವಿತೆಯಲ್ಲಿ ಬೇಂದ್ರೆ ಅಜ್ಜ ಜೀವನದ ಮಹಾಮಾತೆಯರಾದ ಸರಸ್ವತಿ ದುರ್ಗೆ, ಲಕ್ಷಿಯರನ್ನು ಕುರಿತು ಪ್ರಾರ್ಥಿಸಿದ್ದಾರೆ. ಇದು ಅವರ ತಾಯಿ ಅಂಬಿಕೆ ಮೆಚ್ಚಿದ ಅವರ ಮೊದಲ ಕವಿತೆಯೂ  ಹೌದು!
ಬಿಡುವಾದಾಗ ಖಂಡಿತ ಒಮ್ಮೆ ಕೇಳಿ.
ಪ್ರೀತಿಯಿಂದ , ಅಮಿತಾ

ನೆನಪುಗಳ ಜಂಬೂಸವಾರಿ

ಅಕ್ಟೋಬರ್ ನ ಚುಮುಚುಮು ಚಳಿಯೊಂದಿಗೆ ಶರನ್ನವರಾತ್ರಿಯ ಪಾದಾರ್ಪಣೆ. ಭರ್ತಿ ಹತ್ತುದಿನಗಳ ಹಬ್ಬ. ಸಡಗರ, ಸಂಭ್ರಮ, ರಂಗುರಂಗಿನ ದಿರಿಸು, ವಿಧವಿಧ ತಿನಿಸು. ಪೂಜೆ-ಪುನಸ್ಕಾರ-ಅಲಂಕಾರ- ಮೈಸೂರಿನ ಜಂಬೂಸವಾರಿ- ನಾಡದೇವಿಯ ಮೆರೆಸುವ ನಾಡಹಬ್ಬ - ಜಾತ್ರೆ-ರಾಮಲೀಲಾ- ಶ್ರೀನಿವಾಸ ಕಲ್ಯಾಣದ ಭಕ್ತಿ ಆರಾಧನೆ- ದುರ್ಗೆಯ ನವರೂಪಗಳ ಶಕ್ತಿ ಉಪಾಸನೆ -ಗರಬಾ,ದಾಂಡಿಯಾಗಳ ನೃತ್ಯ ನಿವೇದನೆ, ಪಟ್ಟದ ಗೊಂಬೆಗಳಿಂದೊಡಗೂಡಿದ ಸಾಲು ಸಾಲು ಗೊಂಬೆಗಳ  ದೃಶ್ಯಾವಳಿ.. ಹೆಮ್ಮೆಯೆನಿಸುತ್ತದೆ ನಾವೆಂಥ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ವಾರಸುದಾರರೆಂದು.
 ಬಾಲ್ಯದ ನವರಾತ್ರಿಯ ಖುಷಿಯ ನೆನಪೆಂದರೆ ಭರ್ತಿ ಹತ್ತುದಿನಗಳ ಥರಾವರಿ ಭೋಜ್ಯ ವಿಶೇಷಗಳೇ ಆಗಿತ್ತೆನ್ನಿ.(ಈಗ? ಎಂದು ಕೇಳಬೇಡಿ. ಬಹುಶ: ಈಗಲೂ ಅದುವೇ. ಆದರೀಗ ಮಾಡಿ ಬಡಿಸುವ ಹೊರೆಯ ಜೊತೆಗೆ)   ವಿಜಯದಶಮಿಯಂದು ಆಗಿನ ನಮ್ಮ ಬಿಜಾಪೂರದ ಏಕೈಕ  ಪ್ರಸಿದ್ಧ ಕೋವಳ್ಳಿ ಹಾಲಿನ  ಡೇರಿಯಿಂದ 4-6 ಕಿಲೋ ಚಕ್ಕಾ( ಮೊಸರನ್ನು ರಾತ್ರಿಯಿಡೀ ಬಟ್ಟೆಯಲ್ಲಿ ಕಟ್ಟಿ ತೂಗುಹಾಕಿ ನೀರಿನಂಶ ತೆಗೆದು ಗಟ್ಟಿಯಾದ ಮೊಸರು) ತಂದು ಒಂದು ಕೊಳಗ ಥಣ್ಣಗಿನ ಏಲಕ್ಕಿ-ಕೇಸರಿಯುಕ್ತ ಶ್ರೀಖಂಡ ಬಿಸಿ ಬಿಸಿ ಉಬ್ಬಿದ ಪುರಿ, ಬಿಸಿಬೇಳೆ ಅನ್ನದೊಂದಿಗೆ ಸವಿಯಲು ಸಿದ್ಧವಾಗುತ್ತಿತ್ತು.  ಅದಿಲ್ಲದಿದ್ದರೆ ಜಿನಗಾರ ಓಣಿಯ ತಾಜಾ ‘ಖವಾ’ ದ  ಉಂಡೆ ಗಾತ್ರದ ಹೊಂಬಣ್ಣದ ಗುಲಾಬ್ ಜಾಮೂನ್ ಗಳು ನಮ್ಮಜ್ಜಿಯ ನೇತೃತ್ವದಲ್ಲಿ ಸಕ್ಕರೆಯ ಪಾಕದಲ್ಲಿ ಮುಳುಗೇಳುತ್ತಿದ್ದವು. ಅವತ್ತು ಕಡಬು-ಹೋಳಿಗೆ ಇರುತ್ತಿರಲಿಲ್ಲ. ಕಾರಣ ಗೊತ್ತೆ? ಹಬ್ಬದ ಮರುದಿನ ಏಕಾದಶಿ. ಮುಸುರೆ ತಿನ್ನುವಂತಿಲ್ಲ. ಇಂಥ ಸಿಹಿಗಳನ್ನು ‘ಛಲೋ ಕೈ’ ಲೆ ಮಾಡಿದರೆ ಮಕ್ಕಳು ಮರುದಿನವೂ ತಿನ್ನುತ್ತವೆಂಬ ತಾಯಂಥಕರಣದ ಅಜ್ಜಿಯ ಮುಂದಾಲೋಚನೆ. ಅದಕ್ಕೇ ಹೂರಣವೇನಿದ್ದರೂ ಪಾಡ್ಯ ಅಥವಾ ಮಾನವಮಿಗೇ ಮೀಸಲು.

 ಸಂಜೆಯಾದೊಡನೆ ವೆಂಕಟೇಶ ಪಾರಿಜಾತ, ಇಬ್ರಾಹಿಂಪುರದ ವೆಂಕಪ್ಪನ ಗುಡಿಗೆ ಟಾಂಗಾಸವಾರಿ, ಲಕ್ಷ್ಮೀಗುಡಿಯೆದುರಿಗಿನ ಆ ಪುಟ್ಟ ಜಾತ್ರೆಯಲ್ಲಿ ಗೆಳತಿಯರೊಡನೆ ಗಲಗಲ.. ಇರೂಬರೂ ಪುಸ್ತಕಗಳನ್ನೆಲ್ಲ ಸರಸ್ವತಿ ಪೂಜಾ ಅಂತ ದೇವರ ಮುಂದೆ ಮಣೆಯ ಮೇಲಿಟ್ಟು ಕೈ ಮುಗಿದುಬಿಡುವ ಆ ನಿರಾಳ. ಮಾನವಮಿಯಂದು ಮನೆಯಲ್ಲಿನ ಹೊಲಿಗೆ ಯಂತ್ರ, ಗಾಡಿಗಳು, ಚಾಕು ಕತ್ತರಿಯಂಥ ಕಬ್ಬಿಣಗಳಿಗೆಲ್ಲ  ಚೆಂಡು ಹೂವನ್ನೋ, ಶೇವಂತಿಗೆಯನ್ನೋ ತಲೆಗೇರಿಸಿಕೊಂಡು ಹಳದಿಯ ಹೊನ್ನಾಗಿಬಿಡುವ ಭಾಗ್ಯ.. ದಸರಾದ ದಿನ ಮನೆ ಮನೆಗೆ ಹೋಗಿ ‘ ಬಂಗಾರ ತಗೊಂಡು ಬಂಗಾರದ್ಹಂಗ ಇರೂಣು’ ಅಂತ ಬನ್ನಿ ಕೊಡುವ ಸಂಭ್ರಮ.
ಮುಂದೆ ದೆಹಲಿಗೆ ಬಂದಮೇಲೆ ಅಲ್ಲಿಯ ನವರಾತ್ರಿಯ,  ದಶೇರಾಗಳ ಸಂಭ್ರಮವೇ ಬೇರೆ.  ಅಷ್ಟಮಿಯವರೆಗೆ ‘ವ್ರತ್’ ಇಟ್ಟು (ದೇವಿಯ ಹೆಸರಲ್ಲಿ ಉಪವಾಸವಿದ್ದು) ಅಷ್ಟಮಿಯ ದಿನ ‘ಕಂಜಕ್” ಎಂದು ಪುರಿ, ಹಲ್ವಾ, ಕಡಲೆಕಾಳಿನ ಸಮೇತ ಪುಟ್ಟ ಬಾಲೆಯರನ್ನು ಕರೆದು ಪಾದ ತೊಳೆದು ಪೂಜಿಸಿ ದಕ್ಷಿಣೆಯ ಜೊತೆಗೆ ಏನಾದರೂ ಗಿಫ್ಟ್ ಕೊಡುವ ಪದ್ಧತಿ. ಓಹ್! ಅವತ್ತು ನನ್ನ ಅವಳಿ-ಜವಳಿಗಳಿಗೆ ಡಿಮ್ಯಾಂಡೋ ಡಿಮ್ಯಾಂಡು..ಕಮಾಯಿಯೋ ಕಮಾಯಿ. ನನಗೆ ಅಂದು ಚಪಾತಿ-ಪುರಿ ಲಟ್ಟಿಸುವ ಗೋಜಿರುತ್ತಿರಲಿಲ್ಲ. ಸುಮಾರು 50- 60 ಪುರಿಗಳು, ಬುಟ್ಟಿ ‘ಶಿರಾ’ ಜಮಾ ಆಗಿರುತ್ತಿತ್ತು .

ರಾತ್ರಿ ಬೇಗ ಊಟ ಮುಗಿಸಿ ರಾಮಲೀಲಾ ಮೈದಾನಕ್ಕೆ ಹೊರಡುವ ಸಡಗರ. ಅಲ್ಲಿ ಮೊದಲ ಸಲ ಆ ಮೇಲಾ ನೋಡಿದಾಗಲೇ ನನಗರ್ಥವಾದದ್ದು ನಮ್ಮ ಬಾಲಿವುಡ್ ಮೂವಿಗಳಲ್ಲಿ ‘ ಬಚಪನ್ ಮೆ ಮೇಲೆ ಮೆ ಬಿಛಡ್ ಗಯೆ ಥೆ’ ಅನ್ನುವ ಥೀಮು ಹೇಗೆ ಬಂತು ಎಂದು. ನಿಜಕ್ಕೂ ಅದರಲ್ಲಿ ಕಿಂಚಿತ್ತೂ ಅತಿಶಯೋಕ್ತಿಯಿಲ್ಲ. ಈಗಲೂ ಅಲ್ಲಿ ಸ್ಟೇಜ್ ಬಳಿ ಯಾವುದಾದರೂ ಗಾಬರಿಯಾಗಿ ಅಳುತ್ತ ನಿಂತಿರುವ ಮಗುವೋ, ಆತಂಕದಲ್ಲಿರುವ ಅಪ್ಪ-ಅಮ್ಮನೋ, ‘ಶ್ರೀವಾಸ್ತವ್, ಗುಪ್ತಾ, ಮಿತ್ತಲ್, ಚೋಪ್ಡಾ’ ಹೀಗೆ ಯಾರದೋ ಹೆಸರನ್ನು ಮೈಕ್ ನಲ್ಲಿ ಕೂಗಿ ಸ್ಟೇಜ್ ಬಳಿ ಕರೆಯುತ್ತಿರುವ ಸ್ವಯಂ ಸೇವಕರೋ ನಿಮಗೆ ಸಿಕ್ಕೇ ಸಿಗುತ್ತಾರೆ.  ದೆವ್ವನಂಥಾ ಆ ಮೈದಾನದಲ್ಲಿ ಅದೆಷ್ಟು ಥರಾವರಿ ಸ್ಟಾಲ್ ಗಳು..ಯಕಶ್ಚಿತ್ ಸೂಜಿಯಿಂದ ಹಿಡಿದು  Yamah , Suzuki  ಅಂಥ ಗಾಡಿಗಳವರೆಗೂ . ಬಟ್ಟೆ-ಬರೆ, ಪಾತ್ರೆ-ಪಗಡೆ, ಕರಕುಶಲ ವಸ್ತುಗಳು, ಆಟಿಕೆ ಸಾಮಾನುಗಳು, ಸ್ವೀಟು-ನಮಕೀನ್ ಗಳು, ಉಪ್ಪಿನಕಾಯಿ- ಮೊರಬ್ಬಗಳು, ಮಸಾಲೆ-ಸಾಂಬಾರ್ ಪದಾರ್ಥಗಳು, ಚುಸ್ಕಿ,ಕುಲ್ಫಿ,ಐಸ್ ಕ್ರೀಂ ತಳ್ಳುಗಾಡಿಗಳು, ಬಾಯಲ್ಲಿ ನೀರೂರಿಸುವ ಚಾಟ್ ಅಂಗಡಿಗಳು,  ಸಣ್ಣ-ದೊಡ್ಡ ನೂರಾರು ರೈಡ್ ಗಳು ಒಂದೆಡೆಯಾದರೆ ಮತ್ತೊಂದೆಡೆ ವಿಶಾಲವಾದ, ಭವ್ಯವಾದ ಸ್ಟೇಜ್ ಹಾಗೂ ಅದರ ಮೇಲೆ ನಡೆಯುವ ರಾಮಲೀಲಾ. ಪ್ರತಿ ನವರಾತ್ರಿಗೂ ಅದೇ ರಾಮಾಯಣ ಆದರೂ ಪ್ರತಿ ಸಲವೂ ಹೊಸತೆನಿಸುವ, ಅರಿಯದ್ದನ್ನೇನೋ ಹೊಳೆಯಿಸಿಬಿಡುವ ಸೊಬಗಿನ ಸೋನೆ. ಭರ್ಜರಿ ಆಕಾರದ ಮುಗಿಲೆತ್ತರದ  ರಾವಣನಂತೂ ರಾಮನ ಬಾಣದ ಬೆಂಕಿಗಾಗಿಯೇ, ತಪ್ಪುಗಳ ಸುಡುವ ಪಾವನ ಪಾವಕರೂಪಿಗಾಗಿಯೇ  ಕಾದವರಂತೆ ಆ ಬಯಲಲ್ಲಿ ನಿಂತಂತೆ ಅನ್ನಿಸುತ್ತದೆ.

ಈಗ ಇಲ್ಲಿ ಯುಕೆ ಗೆ ಬಂದ ಮೇಲಂತೂ ನಮ್ಮ ಹಬ್ಬ ಇನ್ನೂ ಸಮೃದ್ಧ.  ರಾಯರ  ಮಠದ ಶ್ರೀನಿವಾಸ ಕಲ್ಯಾಣ-ಚಂಡೀ ಹೋಮ, ಕುಂಕುಮಾರ್ಚನೆಗಳಲ್ಲಿ, ಅವರಿವರ ಮನೆಯ ಗೋಲು-ಅರಿಶಿಣಕುಂಕುಮಗಳಲ್ಲಿ, ರಾತ್ರಿ ಹಿಂದೂ ಟೆಂಪಲ್ ನಲ್ಲಿ ನಡೆವ ಗರಬಾ-ದಾಂಡಿಯಾಗಳಲ್ಲಿ, ದುರ್ಗಾ ಪೆಂಡಾಲ್ ನ ಪುಷ್ಪಾಂಜಲಿ-ಸಿಂಧೂರ್ ಉತ್ಸವಗಳಲ್ಲಿ ಇದರ ಮೇಲೆ ಮನೆಯ ದೇವರ ಪೂಜೆ-ದೀಪ-ನೈವೇದ್ಯಗಳ ಗದ್ದಲದಲ್ಲಿ ಅದ್ಹೇಗೆ ಪಾಡ್ಯದಿಂದ ದಶಮಿ ಬಂತೋ, ಮುಗೀತೋ ತಿಳಿಯುವುದೇ ಇಲ್ಲ.
 

ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು. ‘ಬನ್ನಿ ತಗೊಂಡು ಬಂಗಾರದ್ಹಂಗ ಇರೂಣು’ 

~ ಗೌರಿಪ್ರಸನ್ನ.

One thought on “ನವೋಲ್ಲಾಸದ ನವರಾತ್ರಿ

  1. ನವರಾತ್ರಿ ನಾಡ ಹಬ್ಬದ ನೆಳಪುಗಳು ಯಾರಿಗೆ ಪ್ರಿಯವಲ್ಲ? ಧಾರವಾಡದಲ್ಲಿ ಲಕ್ದ್ಮೀ ನಾರಾಯಣ ಜಾತ್ರೆಯೇ ನನಗೆ ಅದರ ಮೊದಲ ಅನುಭವ. (“ಬರಿ ಸೂಟಿಗಷ್ಟೇ ಊಟಿ”ಯಾಗಿದ್ದ ಊಟಿಯಲ್ಲಿ ಎಲ್ಲಿತ್ತು ಅದು?) ಅದರಲ್ಲಿ ಕಳೆದು ಹೋಗುವದರಲ್ಲಿದ್ದು ಬಚಾವಾದೆ! ನಂತರ ಈ ದೇಶದ ಹೊಸತರಲ್ಲಿ ಯಾರೂ ಹೆಚ್ಚು ಪರಿಚಯವಿರದೆ ನಿಜವಾಗಿಯೂ ನಿಮ್ಮ ವರ್ಣನೆಯ ನಿಜವಾಗಿಯೂ ವಾಸ್ತವದಲ್ಲಿ ಶ್ರೀವಾಸ್ತವ ಮಗು ಆಗಿದ್ದೆ! ಈಗ ಪರವಾಗಿಲ್ಲ, ಕನ್ನಡ ಬಳಗ ಬೆಳೆದಂತೆ! ಬೇಂದ್ರೆ- ಅಮಿತಾ ಜೋಡಿ ಅಂಕಣಕ್ಕೆ ಶಕ್ತಿ- ಮೆರಗು ಕೊಟ್ಟಿದೆ. ಎಲ್ಲಿ ಗುಳುಂ ಹೋದವೋ ಆ ಚಿತ್ರಗಳು? ಶ್ರೀವತ್ಸ

    Like

Leave a Reply to shrivatsadesai Cancel reply

Your email address will not be published. Required fields are marked *