ಉಫಿಜಿ ಎಂಬ ಕಲೆಯ ಉಗ್ರಾಣ – ಲಕ್ಷ್ಮೀನಾರಾಯಣ ಗುಡೂರ

ನನಗೆ ಇಟಲಿ ಹಲವಾರು ಕಾರಣಗಳಿಗೆ ಇಷ್ಟ. ಆ ದೇಶಕ್ಕೂ, ಭಾರತಕ್ಕೂ ಇರುವ ಸಾಮ್ಯತೆಗಳು ಒಂದು ಮುಖ್ಯ ಕಾರಣ. ಉಳಿದೆಲ್ಲ ಅಲ್ಲಿಂದ ಮುಂದೆ – ಉಪಕಾರಣಗಳು ಅನ್ನಬಹುದು. ಅಲ್ಲಿನ ಪುರಾಣಕಥೆಗಳು, ಕಲೆ, ಕಟ್ಟಡಗಳು, ಇತಿಹಾಸ, ದೇವರ ಜಾಗಗಳು, ಜನರ ಸಾಮಾಜಿಕ ಜೀವನ, ಊಟ-ತಿಂಡಿಗಳ ಬಗೆಗಿನ ಉತ್ಸಾಹ … ಹೀಗೆ ಪಟ್ಟಿ ಮುಂದುವರಿಯುತ್ತದೆ.   

ಹೀಗೆಯೇ ಪ್ರಯಾಣದಲ್ಲಿ ಒಮ್ಮೆ ಸಿಕ್ಕ ಕರ್ನಾಟಕ ಮೂಲದ ಇಟಲಿಯ ನಿವಾಸಿಯೊಬ್ಬರು ನನಗೆ ಹೇಳಿದಂತೆ, ಅಲ್ಲೂ ಭಾರತೀಯರಂತೆಯೇ 6ಕ್ಕೆ ಬರುವೆನೆಂದು ಹೇಳಿ 8ಕ್ಕೆ ಹೋಗಬಹುದು, ಹೇಳದೆಯೆ ನಿಮ್ಮ ಮಿತ್ರನನ್ನು ಅವರ ಮನೆಗೆ ಔತಣಕ್ಕೆ ಕರೆದೊಯ್ಯಬಹುದು! ಬ್ರಿಟಿಶರ ಜೀವನಕ್ರಮಕ್ಕೆ ಹೊಂದಿಕೊಂಡಿರುವ ನಾನು ಹಾಗೇನೂ ಮಾಡಿಲ್ಲವೆನ್ನಿ.  

ಚಿತ್ರಕಲೆ ಹಾಗೂ ಛಾಯಾಗ್ರಹಣದಲ್ಲಿ ಆಸಕ್ತಿಯಿರುವ ನನಗೆ ಎಷ್ಟು ಬಾರಿ ಬೇಕಾದರೂ ಹೋಗಿ ಅಲ್ಲಿನ ಸ್ಥಳಗಳನ್ನು, ಅದರಲ್ಲೂ ಗ್ಯಾಲರಿಯಾಗಳನ್ನು (museum) ನೋಡಲು ಬೇಜಾರಾಗದು.

ಅಲ್ಲಿ ಯಾವ ಊರಿಗೆ ಹೋದರೂ, ಮೇಲೆ ಹೇಳಿದ ಪಟ್ಟಿಯ ಹೆಚ್ಚು ಕಡಿಮೆ ಎಲ್ಲಾ ಅಂಶಗಳೂ ನೋಡಲು ಸಿಗುತ್ತವೆ.  ಈ ಬಾರಿ (ಎರಡನೇ ಬಾರಿ, ಮೊದಲೊಮ್ಮೆ ಯಾವುದೋ ಕೋರ್ಸಿಗೆ ಹೋಗಿದ್ದೆ – ಲೇ.) ಕುಟುಂಬಸಹಿತನಾಗಿ ಫ್ಲಾರೆನ್ಸ್ ನೋಡಲು ಹೋಗಿದ್ದೆ. ಮೊದಲ ಸಲ ಹೋದಾಗ ಮೈಕೆಲೇಂಜಲೋ ಕೆತ್ತಿರುವ ವಿಶ್ವವಿಖ್ಯಾತ ಡೇವಿಡ್ ಮೂರ್ತಿಯಿರುವ ಅಕಾದೆಮಿಯಾ ಗ್ಯಾಲರಿಗೆ ಹೋಗಿ ಆಗಿತ್ತು. ಹೀಗಾಗಿ, ಈ ಬಾರಿ ಹೋದಾಗ ಮನೆಯವರನ್ನೆಲ್ಲ ಅಲ್ಲಿಗೆ ಕಳಿಸಿ, ಇನ್ನೊಂದು ದೊಡ್ಡ ಗ್ಯಾಲರಿಯಾ ಆದ ಉಫಿಜಿ (Uffizi Galleria) ವಸ್ತುಸಂಗ್ರಹಾಲಯಕ್ಕೆ ನಾನೊಬ್ಬನೇ – ನನ್ನ ಕ್ಯಾಮರಾದೊಂದಿಗೆ – ಹೋದೆ. ಈ ಲೇಖನ ಅದರ ಬಗ್ಗೆ ಮಾತ್ರ.

ಆರ್ನೊ ನದಿಯ ದಂಡೆಯ ಮೇಲಿರುವ ಮಹಾನ್ ಕಟ್ಟಡಗಳ ಸಂಕುಲವೇ ಈಗಿನ ಉಫಿಜಿ ಸಂಗ್ರಹಾಲಯ.  ಇದು 16ನೆಯ ಶತಮಾನದ ಇಟಲಿಯ ವಾಸ್ತುಶಿಲ್ಪ ನೈಪುಣ್ಯದ ಉತ್ತಮ ಉದಾಹರಣೆ ಅನ್ನಬಹುದು.  
ಉಫಿಜಿಯ ಇತಿಹಾಸ:  
1550ರ ಇಸವಿಯಲ್ಲಿ ಫ್ಲಾರೆನ್ಸ್ ನಗರದ ಡ್ಯೂಕ್ ಆಗಿದ್ದ ಕಾಸಿಮೊ I ಡಿ’ಮೆಡಿಚಿ, ಹಂಚಿ ಹೋಗಿದ್ದ ನಗರದ ನ್ಯಾಯಾಲಯಗಳನ್ನೆಲ್ಲ ಒಂದೇ ಕಚೇರಿಯ ಆವರಣಕ್ಕೆ ತರಲೆಂದು, ಆಗಿನ ವಾಸ್ತುಶಿಲ್ಪಿ ಜಿಯಾರ್ಜಿಯೋ ವಸಾರಿಯ ಉಸ್ತುವಾರಿಯಲ್ಲಿ ಕಟ್ಟಿಸಿದ Office ಅಥವಾ Uffici / Uffizi ಕಟ್ಟಡಗಳೇ ಇವು. ದೊಡ್ಡ ದೊಡ್ಡ ಕಿಟಕಿಗಳ ನೈಸರ್ಗಿಕ ಗಾಳಿ-ಬೆಳಕಿನ ಅಗಲವಾದ ಆವಾರಗಳು ಇಲ್ಲಿಯ ವೈಶಿಷ್ಟ್ಯ. ಇದರ ನಿರ್ಮಾಣ modular ಆಗಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಕೊಠಡಿಗಳನ್ನು ನಿರ್ಮಿಸಬಹುದಾದ future-proofing ಇಲ್ಲಿದೆ.  ಈ ಕಟ್ಟಡ ಇಂಗ್ಲಿಷಿನ U ಆಕಾರದಲ್ಲಿದ್ದು, ಪೂರ್ವ ಮತ್ತು ಪಶ್ಚಿಮ ಭಾಗಗಳು ಮಾತ್ರ ನೆಲದ ಮೇಲಿವೆ. ನದಿಯಂಚಿನಲ್ಲಿ ಇರುವ ಇವೆರಡನ್ನೂ ಜೋಡಿಸುವ, U ಅಕ್ಷರದ ಬುಡದ ಭಾಗ ಮೇಲಿನ ಅಂತಸ್ತುಗಳಿಗೆ ಮಾತ್ರವೇ ಸೀಮಿತವಾಗಿದೆ, ಅಲ್ಲದೇ ಎತ್ತರದ ಭಾರೀ ಕಂಬಗಳ ಮೇಲೆ ಕಟ್ಟಲಾಗಿದೆ. ಮಧ್ಯದ ತೆರೆದ ಅಂಕಣವು ಒಂದೆಡೆ ನದಿಯ ಮೇಲಿರುವ ಪುರಾತನ ಕಲ್ಲಿನ ಸೇತುವೆಯ (ಪಾಂಟೆ ವೆಕ್ಕಿಯೋ) ಮೂಲಕ ಹಸಿರು ಹೊದಿಸಿರುವ ಬೆಟ್ಟಗಳ, ತೋಟಗಳ ಕಡೆಗೆ ಹೋದರೆ, ಇನ್ನೊಂದು ತುದಿ ಫ್ಲಾರೆನ್ಸಿನ ಮುಖ್ಯ ಮಂದಿರ ಸಾಂತಾ ಮರಿಯಾ ದೆಲ್ ಫಿಯೊರೆಯ ಕಡೆಗೆ ಕರೆದೊಯ್ಯುತ್ತದೆ. ಕಟ್ಟಡದೊಳಗಿನ ಒಳಛಾವಣಿಯನ್ನು ಅಸಂಖ್ಯಾತ ಚಿತ್ರಗಳಿಂದ ಅಲಂಕರಿಸುವ ಕಾರ್ಯ 1581ರಲ್ಲಿ ಶುರುವಾಯಿತು. ಕಾಸಿಮೊ I ಡಿ’ಮೆಡಿಚಿಯ ಮರಣಾನಂತರ ಅವನ ಮಗ ಡ್ಯೂಕ್ ಫ್ರಾನ್ಸೆಸ್ಕೋ I ಮತ್ತವನ ತಮ್ಮಂದಿರು ಈ ಕಟ್ಟಡದ ಕಾರ್ಯವನ್ನು ಇನ್ನೊಬ್ಬ ವಾಸ್ತುಶಿಲ್ಪಿ ಬರ್ನಾರ್ಡೋ ಬುಆಂಟಾಲೆಂಟಿಯ ನೇತೃತ್ವದಲ್ಲಿ ಮುಗಿಸಿ, ಅದನ್ನು ಗ್ಯಾಲರಿಯಾ ಆಗಿ ಬದಲಾಯಿಸುತ್ತಾರೆ.
ತಿರುಗಿ ವರ್ತಮಾನಕ್ಕೆ:
ನಾನೊಬ್ಬನೇ ಹೋಗುವ ವಿಚಾರವಿದ್ದುದರಿಂದ, ಮುಂಚೆಯೇ ಟಿಕೆಟ್ ತೆಗೆಸಿಕೊಂಡಿದ್ದೆ, ಅಷ್ಟೇ ಅಲ್ಲ ಬೆಳಗ್ಗೆ ಬಾಗಿಲು ತೆರೆಯುತ್ತಲೆ ಒಳಕಾಲಿಡುವ ಪ್ರಯತ್ನವನ್ನೂ ಮಾಡುವವನಿದ್ದೆ.  ಅಲ್ಲಿಗೆ ಹೋದಾಗ, ಆ ರೀತಿ ವಿಚಾರ ಮಾಡಿದವ ನಾನೊಬ್ಬನೇ ಇರಲಿಕ್ಕಿಲ್ಲ ಅನ್ನುವ ಅನುಮಾನ ಗಟ್ಟಿಯಾಗಿ ಸಾಬೀತಾಯಿತು. ಆದರೂ, ಅಲ್ಲಿನ ಕಾರ್ಯಕರ್ತರ ಚಾಕಚಕ್ಯತೆಯಿಂದಾಗಿ ಐದಾರು ನಿಮಿಷದಲ್ಲಿಯೇ ಒಳಗಿದ್ದೆ. ಬೆಳಗ್ಗೆ ಬೇಗ ಎದ್ದು ಓಡಿದ್ದು ನಿಜಕ್ಕೂ ಒಳ್ಳೆಯದೇ ಆಯಿತೆನ್ನಿ, ಪ್ರಾಕಾರಗಳೆಲ್ಲ ಜನರಿಲ್ಲದೆ, ಪ್ರತಿಯೊಂದು ಮೂರ್ತಿ, ಚಿತ್ರವನ್ನು ಮನಸೋಇಚ್ಛೆ ನೋಡುವುದು ಸಾಧ್ಯವಾಯಿತು.  

ಮೂರು ಮಹಡಿಗಳ ಆರು ಪ್ರಾಕಾರಗಳು ಮತ್ತು ಅವಕ್ಕಂಟಿದ ಕೊಠಡಿಗಳಲ್ಲಿ ಸುಮಾರು 2300 ವರ್ಷಗಳ ಇತಿಹಾಸ ತುಂಬಿದೆ.  ಗ್ರೀಕರ ಮತ್ತು ರೋಮನ್ನರ ಸಂಗಮವರಿ ಕಲ್ಲಿನ ಮೂರ್ತಿಗಳು ಅಂದಿನ ಶಿಲ್ಪಿಗಳ ಕೌಶಲ್ಯವನ್ನು ಹಾಡಿಹೊಗಳುತ್ತವೆ.  ಹಾಲುಗಲ್ಲು ಮತ್ತು ಕಡುಗಪ್ಪು ಸಂಗಮವರಿ ಕಲ್ಲಿನ ಮೂರ್ತಿಗಳನ್ನು ನೋಡುತ್ತ ಗಂಟಗಟ್ಟಲೆ ಕೂಡುವವರಿದ್ದಾರೆ.  ಇವುಗಳ ಜೊತೆಯಲ್ಲೆ ಸುಮಾರು ಸಾವಿರ ವರ್ಷಗಳಿಂದ ಇತ್ತೀಚಿನ (!) ರೆನೈಸ್ಸಾನ್ಸ್ ಪ್ರಕಾರದವರೆಗಿನ ಕಲಾವಿದರ ತೈಲಚಿತ್ರಗಳಿವೆ. ಇವುಗಳಲ್ಲಿ ಬಹುಪಾಲು ಗ್ರೀಕರ, ರೋಮನ್ನರ ಪೌರಾಣಿಕ, ಐತಿಹಾಸಿಕ ಪಾತ್ರಗಳ / ವ್ಯಕ್ತಿಗಳ ಮೂರ್ತಿಗಳೇ ಹೆಚ್ಚು. ನಂತರದ ಚಿತ್ರಕಲೆಗಳಲ್ಲಿ ಬೈಬಲ್ಲಿನ ಕಥೆಗಳು ಕಂಡುಬರುತ್ತವೆ.  

ಪ್ರಾಕಾರಗಳ ಒಳತಾರಸಿಯನ್ನೆಲ್ಲ ಒಂದಿಂಚೂ ಬಿಡದಂತೆ ಪೌರಾಣಿಕ ಪಾತ್ರಗಳ ಪೇಂಟಿಂಗುಗಳ ಜೊತೆಗೆ, ಇದನ್ನು ಕಟ್ಟುವಾಗಿನ ಸಮಯದ ಮೆಡಿಚಿ ಕುಟುಂಬದ ಪ್ರಮುಖರ ಚಿತ್ರಗಳಿಂದ ತುಂಬಲಾಗಿದೆ. 

ಮೂರು ಅಂತಸ್ತುಗಳನ್ನು ಎರಡು ಬಾರಿ ಮೇಲಿಂದ ಕೆಳಗೆ, ಈ ತುದಿಯಿಂದ ಆ ತುದಿಯವರೆಗೆ ಮನಃಪೂರ್ವಕವಾಗಿ ನೋಡಿ, ಬೇಕಾದ್ದನ್ನು ಕ್ಯಾಮರಾದಲ್ಲಿ, ಫೊನಿನಲ್ಲಿ ಸೆರೆಹಿಡಿಯುತ್ತ ಓಡಾಡಿ ಮುಗಿಸಿದೆ. ಮೂರನೆಯ ಬಾರಿಯ ಸುತ್ತುವಿಕೆಯ ಸಮಯಕ್ಕೆ ಆಗಲೇ ಸಾವಿರಾರು ಜನ-ಜಾತ್ರೆ ಸೇರಿಯಾಗಿತ್ತು. ಈ ಬಾರಿ ನನಗೆ ಫೋಟೊ ತೆಗೆದುಕೊಳ್ಳುವ ಅವಸರವಿರಲಿಲ್ಲವಾಗಿ, ಸುಮ್ಮನೆ ಜನರ ಮಧ್ಯ ಓಡಾಡಿ, ಅಲ್ಲಲ್ಲಿ ಬೆಂಚಿನಮೇಲೆ ಕೂತು ನೋಡಿ ಕೆಳಗೆ ಬಂದೆ.
ಎಲ್ಲಾ ಮ್ಯೂಸಿಯಮ್ಮುಗಳಲ್ಲಿ ಇರುವಂತೆ ಅಲ್ಲಿಯೂ ಒಂದು ನೆನಪುಕಾಣಿಕೆ ಅಂಗಡಿ ಇತ್ತಲ್ಲ, ಅಲ್ಲಿಗೆ ಹೋದೆ. ಎದುರಿಗೆ ಕಲಾವಿದ ಸಾಂಡ್ರೋ ಬಾಟಿಚೆಲ್ಲಿಯ ವಿಶ್ವಪ್ರಸಿದ್ದ ವೀನಸ್ಸಳ ಹುಟ್ಟು (The Birth of Venus by Botticelli, circa 1480s) ಪೇಂಟಿಂಗಿನ ದೊಡ್ಡ ಚಿತ್ರ ಕಾಣಿಸಬೇಕೇ? ಅದನ್ನು ಹೇಗೆ ಬಿಟ್ಟೆ ಅಂದುಕೊಳ್ಳುತ್ತಾ, ಮತ್ತೆ ತಿರುಗಿ ಎರಡನೆಯ ಮಹಡಿಗೆ ಓಡಿದೆ (ಸುಳ್ಳು – ಲಿಫ್ಟಿನಲ್ಲಿ ಹೋದೆ – ಲೇ.). ಅದುವರೆಗೂ ಮುಚ್ಚಿದ್ದ ಕೊಠಡಿಯೊಂದು ಈಗ ತೆರೆದಿದ್ದು ಅದರ ಮುಂದೆ ಒಂದರವತ್ತು ಜನರ ಸಾಲಿತ್ತು. ಸರಿ, ಮತ್ತೇನು, ನೋಡದೆಯಂತೂ ಹೋಗುವಂತಿಲ್ಲವಲ್ಲ, ನಿಂತೆ. ಒಳಗೆ ಒಂದು ನೂರರಷ್ಟು ಇದ್ದ ಗುಂಪಿನ ಮಧ್ಯ ನುಗ್ಗಿಕೊಂಡು ಹೋಗಿ ಆ ಸುಮಾರು ಮೂರು ಮೀಟರ್ ಅಗಲ, ಎರಡು ಮೀಟರ್ ಎತ್ತರದ ಚಿತ್ರದ ಮುಂದೆ ನಿಂತಾಗ ಆದ ಅನುಭವ ವರ್ಣಿಸಲಾಗದು.
ಅರ್ಧ ದಿನದ, ಮೂರು-ಮತ್ತೊಂದು ಸಲದ ಓಡಾಟ ಮುಗಿಸಿ ಹೊರಬಂದು, ಅಲ್ಲಿಯೇ ಕಟ್ಟೆಯ ಮೇಲೆ ಕುಳಿತೆ – ನನ್ನ ಆ ಬೆಳಗ್ಗಿನ overwhelming ಅನುಭವದ ಮೆಲುಕು ಹಾಕುತ್ತ.

ಮಧ್ಯದ ತೆರೆದ ಅಂಕಣದಲ್ಲಿ ದಿನವೂ ಸಂಗೀತಗಾರರು ಅಮೋಘವಾಗಿ ಹಾಡುತ್ತಲೋ, ವಾದ್ಯಗಳನ್ನು ನುಡಿಸುತ್ತಲೋ ಕೇಳುಗರ ಮನತಣಿಸುತ್ತಿರುತ್ತಾರೆ. ಒಂದರ್ಧ ಗಂಟೆ ಕೂತು ಕೇಳಿ, ಅವರ ಮುಂದಿನ ವಯೋಲಿನ್ ಡಬ್ಬಿಗೊಂದಿಷ್ಟು ಕಾಣಿಕೆ (definitely worth, by any means – ಲೇ.) ಹಾಕಿ, ಮನೆಯ ಉಳಿದ ಸದಸ್ಯರನ್ನು ಹುಡುಕುತ್ತಾ ಹೊರಟೆ. ಅವರೆಲ್ಲ ಅಕಾದೆಮಿಯಾ ಗ್ಯಾಲರಿ ಮುಗಿಸಿ ಬಂದು, ಒಂದು ಪುಟ್ಟ ಜೆಲಾಟೇರಿಯಾದಲ್ಲಿ ಝಂಡಾ ಊರಿದ್ದರು. ನಾನೂ ಒಂದು ಬಟ್ಟಲು ತೊಗೊಂಡು, ಅವರೊಡನೆ ಕೂತು, ಇಟಾಲಿಯನ್ನರಂತೆ (ಅಥವಾ ಭಾರತೀಯರಂತೆ) ಕೈಗಳನ್ನು ಬೀಸಿ, ಜೋರಾಗಿ ಆಡುತ್ತಿದ್ದ ಮಾತಿನಲ್ಲಿ ಸೇರಿಕೊಂಡೆ.
ಮತ್ತೇನಾದರೂ ಫ್ಲಾರೆನ್ಸಿಗೆ ಹೋದರೆ (ಇನ್ನೂ ಸಾಕಷ್ಟು ಊರುಗಳಿವೆ ನಿಜ – ಲೇ.), ಇನ್ನೂ ಎರಡಿವೆ ಗ್ಯಾಲರಿಯಾಗಳು ನೋಡಲು!

- ಲಕ್ಷ್ಮೀನಾರಾಯಣ ಗುಡೂರ

(ವಿಸೂ: ಮೇಲೆ ಹಾಕಿರುವ ಎಲ್ಲಾ ಚಿತ್ರಗಳೂ ನಾನೇ ಸೆರೆಹಿಡಿದವು. ಜಾಗ ಹಿಡಿಯುತ್ತದೆಂದು ಕೆಲವೇ ಚಿತ್ರಗಳನ್ನು ಹಾಕಿದ್ದು, ಪ್ರತಿಯೊಂದರ ಹೆಸರು ಹಾಕುವುದನ್ನು ಕೈಬಿಟ್ಟಿದ್ದೇನೆ. ಕ್ಷಮೆಯಿರಲಿ. ಅಲ್ಲದೇ, ನನ್ನ ಚಿತ್ರಗಳು ಎದುರಿಗೆ ನೋಡಿದಾಗ ಆಗುವ ಆನಂದದ ಅನುಭವದ ಕಾಲುಭಾಗಕ್ಕೂ ನ್ಯಾಯ ಒದಗಿಸವು. – ಲೇ.)
***************************************************

2 thoughts on “ಉಫಿಜಿ ಎಂಬ ಕಲೆಯ ಉಗ್ರಾಣ – ಲಕ್ಷ್ಮೀನಾರಾಯಣ ಗುಡೂರ

  1. Beauty is in the eye of the beholder. ತಾವೇ ಒಬ್ಬ ‘ಕುಂಚ’ ಕಲಾಕಾರ, ಕಲಾರಾಧಕ ಮತ್ತು ಉತ್ತಮ ಫೋಟೋಗ್ರಾಫರ್ ಇರುವಾಗ ಗುಡೂರ್ ಅವರ ‘ಉಫೀಜಿ (ಚಿ?) ಕಲೆಯ ಉಗ್ರಾಣ’ದ ಲೇಖನ ಮಿಸ್ ಮಾಡಿಕೊಳ್ಳಲಾದೀತೇ? ನಾನು ಫ್ಲ್ಯಾರೆನ್ಸಿಗೆ ಹೋದದ್ದು ನಾಲ್ಕು ದಶಕಗಳ ಹಿಂದೆ. ಆಮೇಲೆ ಹೋಗಿಲ್ಲ. ಮತ್ತು ಹೋದ ಸಲ ಬರೀ ಡೇವಿಡ್ ದರ್ಶನದಲ್ಲೇ ಸಮಯ ಮುಗಿದಿತ್ತು. ( ಒಂದು ವಕ್ರ ಪ್ರಶ್ನೆ. ಆತನ ಕಣ್ಣುಗಳಲ್ಲಿ ಒಂದು ದೋಷವಂತೆ! ಕಂಡು ಹಿಡಿದಿರಾ?) ಬಾಟ್ಟಿಚೆಲ್ಲಿ ಸಹ ಮಿಸ್ಸಾಗಿತ್ತು. ವೀನಸ್ಸಿನ ನಿಮ್ಮದೇ ಕ್ಲೋಸ್ ಅಪ್ ಚಿತ್ರ ಸಹ ಕೊಟ್ಟಿದ್ದೀರಿ. ಸಮಾಧಾನ. ಅದನ್ನು PC ಯಲ್ಲೇ ಸೂಕ್ಷ್ಮವಾಗಿ ನೋಡಬೇಕು. ಚಿತ್ರ ಇನ್ನೂ ಮಾಸಿಲ್ಲ! ಅದೇ ತರ ಅವಷ್ಟು ಸಂಗರಮರವರಿ ಶಿಲ್ಪಗಳನ್ನೂ ಅನಿವಾಸಿಯಲ್ಲಿ ಮೊಂಟಾಜ್ ಮಾಡಿದ್ದು ಸರಿಯೇ. ಶ್ರೇಷ್ಠ ಶಿಲ್ಪಿಗಳು ಬಟ್ಟೆಯ ನಿರಿಗೆಗಳನ್ನು ಅಮೃತಶಿಲೆಯಲ್ಲಿ ಮೂಡಿಸುವ ವೈಖರಿಯನ್ನು ಇಲ್ಲಿ ನೋಡಬೇಕು. ಹಳೆಯ ಲಾರ್ಡ್ ಇತ್ಯಾದಿ ಶ್ರೀಮಂತರು ಗ್ರಾಂಡ್ ಟೂರ್ ಮಾಡಿ ಇಟಲಿಯ ಮತ್ತಿತರ ಕಲಾಕೃತಿಗಳನ್ನು ಸಂಗ್ರಹಿಸುವ ಹವ್ಯಾಸ ಇದ್ದು ಈ ದೇಶದ stately homes ನಲ್ಲೂ ವಿಪುಲವಾಗಿ ನೋಡಲು ಸಿಗುತ್ತವೆ. ಮೆಂಬರ್ ಆದರೆ ಮತ್ತೆ ಮತ್ತೆ ನೋಡ ಬಹುದು. ನಿಮ್ಮ ಲೇಖನದಲ್ಲಿ ಪೂರಕ ವರ್ಣನೆ ಕಲಾಕೃತಿಗಳು, ಮರೆತ ಅವನ್ನು ನೋಡಲು ಮತ್ತೆ ಧಾವಿಸಿದ ರೀತಿ ಎಲ್ಲವನ್ನೂ ಸಜೀವಗೊಳಿಸಿದೆ. ಕಲಾರಸಿಕರು ಮತ್ತೆ ಮತ್ತೆ ಓದಿ ನೋಡಬೇಕಾದ ಲೇಖನ. ಸಾಧ್ಯವಾದರೆ ಪ್ರತ್ಯಕ್ಷ ಹೋಗಿ ನೋಡಿರಿ. ಪ್ರಸಿದ್ಧ ಹೇಳಿಕೆಯನ್ನು ತಿರುಚಿ ನೇಪಲ್ಸ್ ಬದಲು “See Florence and die” ಅಂತ ಕಿವಿಮಾತು ಹೇಳುವೆ! ಆದರೆ ನಮ್ಮಿಬ್ಬರಂತೆ ಪಾಂಟೆ ವೆಕ್ಕಿಯೋ ಹತ್ತಿರ ದಾರಿ ತಪ್ಪಿಸಿಕೊಂಡು ( ಬಾಪ್ಟಿಸ್ಟ್ರಿ ಯ ಸ್ವರ್ಗದ ದಾರಿ ಕಂಡು) ಪೇಚಾಡ ಬೇಡಿರಿ! ಶ್ರೀವತ್ಸ

    Liked by 1 person

Leave a Reply

Your email address will not be published. Required fields are marked *