ಸುಗಂಧಿ ಅರಳಿಸಿದ ನೆನಪು

-ಅಮಿತಾ ರವಿಕಿರಣ್ 

ಸುಗಂಧಿ ಅರಳಿಸಿದ ನೆನಪು
ನೆನಪುಗಳೆಂದರೇ ಹಾಗೆ, ಬಾಟಲಿಯ ತಳದಲ್ಲಿ ಉಳಿದು ಹೋದ ಅತ್ತರಿನ ಹಾಗೆ. ವಜ್ಜೆಯಾಗದ ಲಗ್ಗೇಜಿನ ಹಾಗೆ,
ಡಬ್ಬಿಯಿಲ್ಲದೆಯೂ ಒಯ್ಯುವ ಬುತ್ತಿ ಅನ್ನದ ಹಾಗೆ. ನೆನಪುಗಳು ಮಧುರ, ಜಟಿಲ. ಕೆಲವೊಮ್ಮೆ ಹಳೆಯ ನೆನಪುಗಳು
ವರ್ತಮಾನವನ್ನು ಸಿಂಗರಿಸಿದರೆ, ಕೆಲವು ಉತ್ಸಾಹವನ್ನ ಭಂಗಿಸುತ್ತವೆ.ಅವು ಬರೀ ನಿರ್ಲಿಪ್ತ ನೆನಪುಗಳು. ಅವಕ್ಕೆ ಯಾವ
ಹಂಗೂ ಇಲ್ಲ. ಕೆಲವಂತೂ ಸುಮ್ಮನೆ ನಿಲ್ಲುವ ಶಿಲಾ ಪ್ರತಿಮೆಗಳಂತೆ ತಟಸ್ಥ.
ಒಂದಷ್ಟು ಮಾತ್ರ ಕಾಡುವ ನೆನಪುಗಳು. ನೆನಾಪಾದಗಲೆಲ್ಲ ನಮ್ಮ ಇಹವನ್ನು ಮರೆಸಿ ನೆನಪಲ್ಲಿ ಉಳಿದು ಬಿಡು ಎಂದು
ಗೋಗರೆಯುವ ನೆನಪುಗಳವು. ಮತ್ತಷ್ಟು ತುಂಟ ನೆನಪುಗಳು ಸುಮ್ಮನೆ ಕುಳಿತಲ್ಲಿ ನಿಂತಲ್ಲಿ ಗಂಟುಮೋರೆಯಲೂ ಘಮ್ಮನೆ
ನಗು ಅರಳಿಸುವಂಥವುಗಳು.


ನೆನಪುಗಳು ಸಿಹಿ ಕಹಿ,ಒಗರು ಇಂತಹ ನವರಸದ ನೆನಪುಗಳ ಕಡತದಂತಿರುವ, ನವಿಲುಗರಿ ಅಂಟಿಸಿದ ನಾಸೀಪುಡಿ
ಬಣ್ಣದ ನನ್ನ ಹಳೆಯ ಡೈರಿಯ ಒಂದಷ್ಟು ಪುಟಗಳು. ಮತ್ತು ಪುಟಗಳ ನಡುವೆ ಒಣಗಿ ಗರಿ ಗರಿ ಹಪ್ಪಳದಂತೆ ಬಿದ್ದುಕೊಂಡ
ಹೂ ಪಕಳೆ, ಎಲೆ,ಗರಿಗಳು .
ನನಗೊಂದು ಅಭ್ಯಾಸ ನಾ ಎಲ್ಲೇ ಹೋಗಲಿ ಆ ಸ್ಥಳದಿಂದ ಒಂದು ಹೂವು ಎಲೆ ಹುಲ್ಲು ಕಡ್ಡಿ ಕಲ್ಲು ಅಂಥದ್ದೇನಾದ್ರೂ ತಂದು ಆ
ಡೈರಿ ಪುಟಗಳ ನಡುವೆ ಇಟ್ಟು ಬಿಡೋದು, ಅದನ್ನು ನೋಡಿದಾಗ, ಕಳೆದು ಹೋದ ಆ ದಿನ ಕಣ್ಣ ಮುಂದೆ ದಿಗ್ಗನೆ ಎದ್ದು
ನಿಲ್ಲುತ್ತದೆ ವರ್ತಮಾನದಲ್ಲಿ ಭೂತಕಾಲ ಜೀವಿಸುವ ಕೆಟ್ಟ ಉತ್ಸಾಹವಿದು.


೧೦ ನೇ ತರಗತಿ ಬಿಳ್ಕೊಡುಗೆ ಸಮಾರಂಭದಲ್ಲಿ ಕೊಟ್ಟ ಕೆಂಪು ಗುಲಾಬಿ, ಅರೆಂಗಡಿಯ ಅತ್ತೆ ಮನೆಯಲ್ಲಿ ಅರಳುವ ಆ
ಕೋಳಿಮೊಟ್ಟೆ ಹೂವಿನ ಪಕಳಿ, ನನ್ನ ಹಳೆಮನೆಯ ದಾರಿಯಲ್ಲಿ ಸಿಗುವ ಸಕ್ಕರಿ ನಾಗೇಶಪ್ಪನ ಮನೆಯ ಅಂಗಳದಲ್ಲಿ
ಅರಳುತಿದ್ದ ಗುಮ್ಮೋಹರ್, ಬೂರುಗ ಮರದ ಕೆಂಪು,ಗುಲಾಬಿ ಹೂ ಗಳು, ಮಲ್ಲಿಗೆಯನ್ನು ಹೋಲುವ ಕವಳಿ ಹೂಗಳು,
ಸಂಗೀತ ವಿದ್ಯಾಲಯದಲ್ಲಿ ನನ್ನ ಜನ್ಮದಿನದಂದು ಮೊತ್ತ ಮೊದಲ ಬಾರಿಗೆ ಆ ಮಿಂಚು ಕಂಗಳ ಹುಡುಗ ತಂದಿತ್ತ ಹಳದಿ
ಹೂಗಳ ಪುಷ್ಪ ಗುಚ್ಚ ಎಲ್ಲವು ನನ್ನ ಸಂಗ್ರಹದಲ್ಲಿ ಸೇಫ್ ಸೇಫ್. ಹನಿಮೂನಿಗೆ ಹೋದಾಗ ಮಡಿಕೇರಿಯ ರಾಜಸೀಟ್ ಪಕ್ಕದ
ಹೆಸರು ಗೊತ್ತಿರದ ದೊಡ್ಡದೊಂದು ವೃಕ್ಷದ ಮುಳ್ಳು ಮುಳ್ಳು ಎಲೆಯನ್ನು ಕೂಡ ಸೂಟಕೆಸಿನಲ್ಲಿ ಹಾಕಿಕೊಂಡು ಬಂದಿದ್ದೆ.
ಪತಿದೇವರು ಯುಕೆ ಗೆ ಹೊರಡುವಾಗ ಅದನ್ನು ಅದರಲ್ಲೇ ಇಟ್ಟು, ತೆಗೆಯಬೇಡಿ ಎಂದು ವಿನಂತಿಸಿದ್ದೆ ಇವರು
ಅದನ್ನು ಪಾಲಿಸಿದ್ದರೂ ಕೂಡ. ನಾ ಇಲ್ಲಿ ಬಂದಾಗ ಮತ್ತೆ ಅದನ್ನು ನೋಡಿದಾಗ ನನಗಾದ ಖುಷಿ
ಅಷ್ಟಿಷ್ಟಲ್ಲ.

ಇದೆಲ್ಲಕ್ಕಿಂತ ನನ್ನ ಮನಸ್ಸ ತುಂಬಾ ತುಂಬಿಕೊಂಡು ಅದೆಷ್ಟೋ ಮಧುರ ಸಂಗೀತಮಯ ಸಂಜೆಗಳಿಗೆ ನನ್ನ ಜೊತೆಯಾದ
ಹೂವೊಂದಿದೆ, ಮಳೆಗಾಲದಲ್ಲಿ ಅದೂ ಶ್ರಾವಣದಲ್ಲಿ ಅರಳುವ ಸುಗಂಧಿ ಹೂ.
ನನ್ನ ಅಮ್ಮ ಹೇಳುತ್ತಾರೆ ಶ್ರಾವಣದಲ್ಲಿ ಎಲ್ಲಾ ಹೂಗಳು ತವರುಮನೆಗೆ ಹೋಗುತ್ತವಂತೆ, ಅದಕ್ಕೆ ಪೂಜೆಗೆ ಹೂವಿರುವುದಿಲ್ಲ
ಅಂತ. ಆದರೆ ಸಂಜೆ ಹೊತ್ತಿಗೆ
 ಅದೊಂದು ಶ್ವೇತ ಸುಂದರಿ ಸುಗಂಧಿ ಅರಳಿದಳೆಂದರೆ ಸಾಕು, ಮನೆಯ ಸುತ್ತಮುತ್ತಲು ಕಂಪು ಬಿಮ್ಮನೆ ಆವರಿಸಿಕೊಳ್ಳುತ್ತದೆ.
 ಹೂವಿಲ್ಲ ಅನ್ನುವ ಖೇದ ಬೇಡ ಅನ್ನುವಂತೆ ಹಿತ್ತಲ ಮೂಲೆಯಲ್ಲಿ ಅರಳಿ ನಗುತ್ತದೆ.


ಹೂಗಳ ಕುರಿತು ಹುಚ್ಚು ಪ್ರೀತಿ ಇದ್ದ ನನಗೆ, ಸುಗಂಧಿ ಹೂವಿನ ಮೊದಲ ದರ್ಶನ ಆಗಿದ್ದು, ರಜೆಯಲ್ಲಿ ದೊಡ್ಡಮ್ಮನ ಮನೆಗೆ
ಹೋದಾಗ. ಹಿತ್ತಲಿಗೆ ಹೋಗಿ ಬಿಳಿ ಬಿಳಿ ಮೊಗ್ಗುಗಳನ್ನು ಕೊಯ್ದು ತಂದ ದೊಡ್ಡಮ್ಮ ಶನಿವಾರ ಸಂಜೆಯ ಭಜನೆಗೆ ಹೋಗುವ
ಮೊದಲು ನೀರಲ್ಲಿ ತೋಯಿಸಿಟ್ಟ ಬಾಳೆನಾರಿನಲ್ಲಿ ಮಲ್ಲಿಗೆ ಕಟ್ಟಿದಂತೆ ಆ ಹೂಗಳನ್ನೂ ದಂಡೆ ಕಟ್ಟಿ ವೆಂಕಟರಮಣನ ಗುಡಿಗೆ
ಕೊಡಲು ಪುಟ್ಟ ಬಾಳೆಲೆಯಲ್ಲಿ ಸುತ್ತಿ ಕೊಡುತ್ತಿದ್ದರು.
ಎಂಥಾ ನಾಜೂಕು, ಮುಟ್ಟಿದರೆ ಎಲ್ಲಿ ಮಾಸುತ್ತದೊ ಅನ್ನುವಂತಹ ಚೆಲುವು ಈ ಪುಷ್ಪಕ್ಕೆ.
ಆ ಗಿಡದ ಗೆಡ್ಡೆ ತಂದು ನಮ್ಮ ಹಿತ್ತಲಲ್ಲಿ ನೆಟ್ಟು, ಹೂವಿಗಾಗಿ ನಾನು ತಂಗಿ ಮತ್ತು ಅಮ್ಮ ಮೂರು ವರ್ಷ ಕಾದಿದ್ದೆವು.
ಆ ಹೂವು ನನ್ನ ಸಂಗೀತಕ್ಕೊರ (ಸಂಗೀತ ಗುರುಗಳು) ಮನೆಯಲ್ಲಿ ಇತ್ತು. ಮಳೆಗಾಲದಲ್ಲಿ ಗುರುವಾರ ಸಂಜೆಯ ಭಜನೆ,
ತಾಳದ ನಾದ ಮಳೆ ಸದ್ದಿನೊಂದಿಗೆ ಈ ಸುಗಂಧಿ ಘಮ. ನಾನು ಅನುಭವಿಸಿದ ಆ ಧನ್ಯತೆಯ ವಿವರಿಸಲು ಪದಗಳು
ಸಿಗುತ್ತಿಲ್ಲ.

ಭಜನೆ ಮುಗಿದು ಪ್ರಸಾದ ಕೊಡುತಿದ್ದ ಸಮಯದಲ್ಲಿ ಅಕ್ಕೋರು ಒಂದು ಹೂ ಕೊಟ್ಟರೂ ಕೊಡಬಹುದು ಅಂತ ಆಸೆ ಕಣ್ಣಿನಿಂದ
ನೋಡುತ್ತಿದ್ದೆ ಆ ಶುಭ್ರ ಸುಂದರಿ ಸುಗಂಧಿಯತ್ತ. ಆ ಹೂವು ಪ್ರಸಾದದೊಂದಿಗೆ ನಮ್ಮ ಕೈಗೆ ಸಿಕ್ಕಿತೋ. ಅದು ನಮ್ಮ lucky day ಆಗಿರುತ್ತಿತ್ತು. ಮೊದಲೆರಡು ಬಾರಿ
ಆಘ್ರಾಣಿಸಿ,ನಂತರ ನನ್ನಷ್ಟೇ ಇದ್ದ ನನ್ನ ಜಡೆಯ ಒಂದು ಎಳೆ ಯ ಹಿಡಿದು ಮೆತ್ತಗೆ ಸಿಲುಕಿಸಿ ಮನೇ ಮುಟ್ಟುವ ತನಕ ನೂರು
ಬಾರಿ ಮುಟ್ಟಿ ನೋಡಿ ಆ ರಾತ್ರಿ ಮಲಗುವ ಮುನ್ನ ಡೈರಿ ಪುಟದಲ್ಲಿ ಹಾಕಿ ಮುಚ್ಚಿಟ್ಟರೆ ನನ್ನ ಆ ದಿನ ಸಾರ್ಥಕ. ಗುರುವಾರ
ಮುಡಿದ ಹೂ ಘಮ ಶನಿವಾರದ ತನಕ ಮಂದ ಮಂದ.
ಈಗ ಮಳೆಗಾಲ, ಪ್ರತಿ ಮಳೆಗಾಲದಲ್ಲೂ ಅಮ್ಮ ಅಥವಾ ತಂಗಿ ಈ ಹೂವಿನ ಒಂದಷ್ಟು ಫೋಟೋ ಕಳಿಸಿದಾಗೆಲ್ಲ
ಈ ಸುಗಂಧಿ ಹೂವಿನ ಸುತ್ತಲಿನ ಎಲ್ಲಾ ನೆನಪಿನ ಪಕಳೆಗಳು ಅರಳುತ್ತವೆ. ಜೊತೆಗೆ ನನ್ನ ತವರುಮನೆಯ ಸುಖ
ಸಮಾಧಾನಗಳೂ.
ಮತ್ತೆ ಈ ಸುಗಂಧಿ ಹೀಗೆ ಪ್ರತಿ ಬಾರಿ ನೆನೆಸಿದಾಗಲೆಲ್ಲ ಕಾಡುತ್ತಾಳೆ.

2 thoughts on “ಸುಗಂಧಿ ಅರಳಿಸಿದ ನೆನಪು

  1. ಕವನ ಅಥವಾ ಕಾವ್ಯ ನವೋದಯದ ರಮ್ಯತೆಯಿಂದ, ಗೇಯತೆಯಿಂದ, ರೂಪಕಗಳಿಂದ ಬಿಡಿಸಿಕೊಂಡು, ನವ್ಯದಲ್ಲಿ ಗಂಭೀರವಾಗುತ್ತ, ಗೂಢವಾಗುತ್ತ, ಸಂಕೀರ್ಣವಾಗುತ್ತ, ಹೊಸ ರೂಪಕಗಳನ್ನು ಹೊಸ ಪ್ರತಿಮೆಗಳನ್ನು ಹೊತ್ತು ಭಾರವಾಗುತ್ತ ಜನಸಾಮಾನ್ಯರಿಂದ ದೂರವಾಗಿ ಕಣ್ಮರೆಯಾಗುವಾಗ, ನವ್ಯೋತ್ತರ ಕಾವ್ಯ ಇನ್ನಷ್ಟು ಗದ್ಯಕ್ಕೆ ಹತ್ತಿರವಾಗುತ್ತ, ಕ್ಲೀಷೆಯಾಗಿರುವ ರೂಪಕಗಳನ್ನೇ ಬಳಸಿಕೊಂಡು, ಸುತ್ತ ಮುತ್ತ ಎಲ್ಲರಿಗೂ ಗೊತ್ತಿರುವ ಚಿತ್ರಗಳನ್ನೇ ಬಳಸಿಕೊಂಡು ಮತ್ತೆ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸಾಮಾಜಿಕ ತಾಣಗಳ ಮೂಲಕ ಹೆಚ್ಚು ಹೆಚ್ಚು ಜನರನ್ನು ತಲುಪುತ್ತಿದೆ. ಇತ್ತೀಚೆ ಉದ್ದುದ್ದ ವ್ಯಾಚ್ಯ ಕವನಗಳು/ಕವನಗಳಂತೆ ಇರುವ ಗದ್ಯಗಳು ಸಾಕಷ್ಟು ಜನಪ್ರಿಯವಾಗುತ್ತಿದೆ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ. ಅವನ್ನು ಕೇಳಲು ಜನ ದುಡ್ಡುಕೊಟ್ಟು ಬರುತ್ತಿದ್ದಾರೆ. ಕವಿಯ ಜೊತೆ ತಾವೂ ಭಾವುಕರಾಗುತ್ತಾರೆ. ಅಮಿತಾ ಅವರ ಕವನದಂತಿರುವ ಈ ಗದ್ಯ ಇದನ್ನೆಲ್ಲ ನೆನಪಿಸಿತು.

    ಅಮಿತಾ ಅವರು ತರುವ ಪ್ರತಿಮೆಗಳು ಅನನ್ಯ: ಬಾಟಲಿಯ ತಳಕ್ಕೆ ವಾಸನೆಯನ್ನು ಮಾತ್ರ ಬಿಟ್ಟು ಹೋದ ಅತ್ತರು, ವಜ್ಜೆಯಾಗದ ಲಗ್ಗೇಜು (ಆದಿಪ್ರಾಸ), ಬಟ್ತೆಯಲ್ಲಿ ಒಯ್ಯುವ ಬುತ್ತಿ (ಡಬ್ಬಿಯಿಲ್ಲದೆಯೂ), ನವಿಲುಗರಿಗಂಟಿಸಿದ ನಾಸೀಪುಡಿ, ಹಾಳೆಗಳ ನಡುವಿನ ಒಣಗಿದ ಎಲೆ-ಹೂಗಳು, ಒಂದೇ ಎರಡೇ!

    ಎಲ್ಲರೂ ಗುಲಾಬಿಗಳ ಬಗ್ಗೆ ಕವನ ಬರೆಯುವಾಗ, ವರ್ಡ್ಸ್-ವರ್ತ್ ಡೆಫೋಡಿಲ್ಲುಗಳ ಬಗ್ಗೆ ಕವನ ಬರೆದಂತೆ, ಅಮಿತಾ ಅವರು ಅಷ್ಟೇನೂ ಪ್ರಖ್ಯಾತವಲ್ಲದ (ಅದರಲ್ಲೂ ಕವಿಗಳಲ್ಲಿ) ಸುಗಂಧಿ ಹೂವಿನ ಬಗ್ಗೆ ದೊಡ್ಡ ಗಪದ್ಯವನ್ನು ಬರೆದಿದ್ದಾರೆ. ವನವಾಸದಲ್ಲಿದ್ದ ದ್ರೌಪದಿ ಸುಗಂಧಿ ಹೂವಿನ ಪರಿಮಳಕ್ಕೆ ಮರುಳಾಗಿ ಭೀಮನನ್ನು ಕಳಿಸುವ ಪ್ರಸಂಗವನ್ನೂ ಇಲ್ಲಿ ಸೇರಿಸಬಹುದಿತ್ತು!

    – ಕೇಶವ

    Like

  2. ಅಮಿತಾ ಅವರ Nostalgia ತುಂಬಿದ ಘಮಘಮಿಸುವ ಬರವಣಿಗೆ. ಮೊಗ್ಗು ಬಿರಿಯುವ ಮುನ್ನವೇ ಸುಗಂಧಿಯ ಪರಿಮಳ ಹೊರಸೂಸುವಂಥ ಪೀಠಿಕೆ, ‘ಬಾಟಲಿಯ ತಳದಲ್ಲಿ ಉಳಿದು ಹೋದ ಅತ್ತರಿನ ಹಾಗೆ. ವಜ್ಜೆಯಾಗದ ಲಗ್ಗೇಜಿನ ಹಾಗೆ,
    ಡಬ್ಬಿಯಿಲ್ಲದೆಯೂ ಒಯ್ಯುವ ಬುತ್ತಿ ಅನ್ನದ ಹಾಗೆ. ನೆನಪುಗಳು’ … ಕೊನೆಯಲ್ಲಿ ಮಳೆಯಲ್ಲಿ ತೊಯ್ದ ಹೂವಿನ ಚಿತ್ರಗಳು. ಒಂದು ಸುಖಕರ ಅನುಭವ. ತಮ್ಮ ಡೈರಿ ಪುಟಗಳನ್ನು ಬಿಚ್ಚಿ ನೋಡಿ ಬರೆದಂತಿದೆ. ಇದನ್ನೋದುವಾದ ಅವರೇ ವಾಚಿಸಿದ ಜಯಂತ ಕಾಯ್ಕಿಣಿಯವರ ಕವನವೂ ನೆನಪಾಯಿತು. ಅದು ಅಮಿತಾ ಅವರ ಹಾಡಿನ ಪುಸ್ತಕದ ಬಗ್ಗೆಯೇ ಬರೆದಿದ್ದಾರೇನೋ ಅನ್ನುವಂತಿದೆ. ಅದರ ಲಿಂಕ್ ಕೆಳಗಿದೆ. ಅದೇ ತರ ಡೀನ್ ಮಾರ್ಟಿನ್ನನ ‘Memories are made of these’ ಅನ್ನುವ ಪ್ರಸಿದ್ಧ ಹಾಡಿದೆ. ಕೋಡಕ್ ಫಿಲ್ಮ್ ಕಂಪನಿಯವರು ಸಹ ‘ಮೆಮೊರಿಸ್’ ಮೇಲೆ ಸೌಧವನ್ನೇ ಕಟ್ಟಿದ್ದರು. ಇರಲಿ. ಆ ಕವನದ ಕೊನೆಯಲ್ಲಿದ್ದಂತೆ ‘ಅನಿವಾಸಿ’ಯ ಅನೇಕ ಖಾಲಿ ಪುಟಗಳು ‘ಎತ್ತಿ ಬರೆದು ತುಂಬಿಸಿಕೋ’ ಅಂತ ನಿಮಗಾಗಿ ಕಾಯುತ್ತಿವೆ ಅಮಿತಾ. ಇನ್ನೂ ಹೀಗೇ ಬರೆದು ತುಂಬಿಸಿ ಪುಟಗಳನ್ನೂ ಘಮಘಮಿಸಿರಿ!

    Like

Leave a Reply

Your email address will not be published. Required fields are marked *