ನಿನ್ನೆಗಳು ಬರೆದ ನಾಳೆಗಳು – ಮುರಳಿ ಹತ್ವಾರ್ ಬರೆದ ಕವನ

ಕವಿ: ಮುರಳಿ ಹತ್ವಾರ್

ಮುರಳಿ ಹತ್ವಾರ್ ಅವರ ಕವನಗಳು ನನಗೆ ಗೋಪಾಲಕೃಷ್ಣ ಅಡಿಗರ ಕವನಗಳನ್ನು ನೆನಪಿಸುತ್ತವೆ. ಹಾಗೆಂದು ಅವರು ಅಡಿಗರನ್ನು ಅನುಕರಿಸಿ ಬರೆಯುತ್ತಿಲ್ಲ. ಅಡಿಗರು ಹಾಕಿದ ಹಾದಿಯಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿದ್ದಾರೆ ಈ ಕವನದಲ್ಲಿ.  ಐದು ನಿಮಿಷದಲ್ಲಿ ಎರಡು ವಾಕ್ಯ ಬರೆದು, ಐದು ಸಲ ತುಂಡರಿಸಿ, ಹತ್ತು ಸಾಲು ಮಾಡಿ, ಅದಕ್ಕೊಂದು ಹೆಸರನಿಟ್ಟು, ಪತ್ರಿಕೆಗಳಲ್ಲಿ, ಜಾಲಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ತುಂಬಿ ತುಳುಕುತ್ತಿರುವ ಈ ಇ-ಯುಗದಲ್ಲಿ ಹತ್ವಾರ್ ಅವರು ಶ್ರದ್ಧೆಯಿಂದ, ತಾದಾತ್ಮ್ಯದಿಂದ ಒಂದೊಂದೇ ಪದಗಳನ್ನು ಹೆಕ್ಕಿ ಬರೆಯುತ್ತಾರೆ. `ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ?` ಎನ್ನುವ ಅಡಿಗರ ಕವನದಂತೆ, ಹತ್ವಾರ್ ಅವರು ಈ ಕವನವನ್ನು ಧ್ಯಾನಿಸಿ ಬರೆದಿದ್ದಾರೆ. 

ಸ್ಟೀಫನ್ ಹ್ವಾಕಿಂಗ್ ಬರೆದ ಕೊನೆಯ ಪುಸ್ತಕ

`ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದತ್ತ ಸಂಬಂಧವಯ್ಯ` ಎನ್ನುವ ಅಲ್ಲಮನ ನುಡಿಯಂತೆ, ಎತ್ತಣ ಕನ್ನಡ ಕವನ ಎತ್ತಣ ಸ್ಟೀಫನ್ ಹ್ವಾಕಿಂಗ್ ಎನ್ನಬಹುದೇ? ಈ ಶತಮಾನ ಕಂಡ ಅದ್ವಿತೀಯ ಚಿಂತಕ, ಭೌತವಿಜ್ಞಾನಿ, ಅಂತರಿಕ್ಷಜ್ಞ ಸ್ಟೀಫನ್ ಹ್ವಾಕಿಂಗ್ ಬರೆದ ಈ ಕೊನೆಯ ಪುಸ್ತಕವನ್ನು ಓದಿ, ಚಿಂತಿಸಿ, ಮಥಿಸಿ, ಧ್ಯಾನಿಸಿ ಕನ್ನಡಕ್ಕೊಂದು ಅಪರೂಪದ ಕವನವನ್ನು ಕೊಟ್ಟಿದ್ದಾರೆ. ಒಂದೇ ಸಲಕ್ಕೆ ತೆರೆದುಕೊಳ್ಳದೇ ಇರಬಹುದು. ಮತ್ತೆ ಮತ್ತೆ ಓದಿದಂತೆ ಪದರುಗಳನ್ನು ಬಿಚ್ಚುತ್ತ ಪರಮಣುವೊಂದು ಅನಂತವಾಗುವ ದಿವ್ಯ ಅನುಭೂತಿಯನ್ನು ನಾನಂತೂ ಪಡೆದುಕೊಂಡಿದ್ದೇನೆ. ಇನ್ನು ನೀವುಂಟು, ಈ ಕವನವುಂಟು – ಸಂ

ನಿನ್ನೆಗಳು ಬರೆದ ನಾಳೆಗಳು

ಅಣು ಬೆಳೆದ ತೃಣದ ಹುಟ್ಟಿನ
ಹಿಂದಡಗಿದೆಯಂತೆ ಇದರ ಗುಟ್ಟು
ಬೆಳಕಿಗಿಂತಲೂ ವೇಗದಲಿ ಹೋಗೆ
ಸಿಗಬಹುದಂತೆ ಅದರ ತುದಿ ಜುಟ್ಟು
ಹೋದ ಮನಸುಗಳು ಬೇಯಿಸಿವೆ
ಹಸಿ-ಹಸಿ ಸಿದ್ಧಾಂತಗಳ ಒಬ್ಬಟ್ಟು

ಎಲ್ಲವೂ ಸೂತ್ರಗಳ ನಿಯಮವಂತೆ
ಅಪ್ರಮೇಯನೂ ಅದರ ಬಂಧಿಯಂತೆ!
ಶೂನ್ಯದಿಂದೆಂದೋ ಘನ ಘಣಿಸಿ
ಮತ್ತೆ ಗುಣಿಗುಣಿಸಿ ಭುವಿಯುದಿಸಿ
ಲಕ್ಷಲಕ್ಷ ಕ್ಷಣಗಳು ಕರಗಿದ ಮೇಲೆ
ಮನುಕುಲದ ಮೊದಲಳುವಂತೆ!

ಬಿಡೆನೆನ್ನುವ ಬಂಧನದಲೆಗಳು
ಕಾಲ, ಲೋಕ, ಗಗನ, ನಾಕಗಳ
ಹಿಡಿಹಿಡಿದೆಳೆಯುತಿವೆಯಂತೆ
ನಮ್ಮರಿವಿನ ಕಾಲದೋಟದ ದಿಕ್ಕು
ಹಿಂದೋಡಿ ಆಡುವ ಕಾಲವೂ
ಮುಂದೆಂದೋ ಬರಬಹುದಂತೆ!

ಸೆಳೆವಲೆಗಳ ಬಲದೊಂದು ತುದಿ
ಬಿಡದೆಲ್ಲನುಂಗೋ ಕರಿಕಿಂಡಿಯಂತೆ
ಇಂದು-ನಿನ್ನೆ-ನಾಳೆಗಳ ಹಂಗಿಲ್ಲದ
ಇರುವು-ಅರಿವು-ಮರೆವುಗಳ ಇಂಗಿಲ್ಲದ
ಇರುಳು ಲೋಕದ ಕರುಳಿನ ತಿರುಳು
ತಿಳಿದು ಹೇಳುವವ ನಾಳಿನ ದೊರೆಯಂತೆ!

ಜಗದ ಹುಟ್ಟನು ಹುಡುಕುವ ಹಮ್ಮು
ಅವನೊಳ ತಳತಳ ಗಬ್ಬು ಕತ್ತಲು
ಕೊನೆಯಿಲ್ಲದ ಆಸೆ ಮೋಸಗಳ ಸೆಳೆತ
ಧಿಕ್ಕರಿಸಿ ಚಿಮ್ಮುವ ಬೆಳಕನು ಬೆಳೆಯುವ
ಹೊಸ ಸೂತ್ರಗಳ ಬರೆಯಬಲ್ಲನೇ?
ತನ್ನ ಅಳಿವ ತಾ ತಡೆಯಬಲ್ಲನೇ?

ಯಾರು ಏನೇ ಹೇಳಲಿ. ಮನೆ, ಮಡದಿ, ಮಕ್ಕಳು;
ಕಾರು-ಬಾರುಗಳು, ಕೂಡಿಟ್ಟ ಡೆಪಾಸಿಟ್ಟುಗಳು
ಎಣಿಸಿ, ಎಣಿಸಿ, ಎಣಿಸಿ ಕಡೆಗೊಮ್ಮೆ
ಎಣಿಕೆಯಿಲ್ಲದ ಕೋಟಿ-ಕೋಟಿ ಜೀವಗಳಂತೆ
ಸುಟ್ಟು ಕರಗಿ ತೊಲಗುವದೇ ನನ್ನ
ನಿನ್ನೆಗಳು ಬರೆದ ನಾಳೆಗಳು!

ಎಷ್ಟು ಬರೆದರೂ ಮೂಡದ ಅಕ್ಷರಗಳು
ಹೇಗೆ ಹಿಡಿದರೂ ಕಾಣದ ಬರಹಗಳು
ಬದುಕಿನ ಬಿಳಿ ಹಾಳೆಗಳು
ನಿನ್ನೆಗಳು ಬರೆದ ನಾಳೆಗಳು!

10 thoughts on “ನಿನ್ನೆಗಳು ಬರೆದ ನಾಳೆಗಳು – ಮುರಳಿ ಹತ್ವಾರ್ ಬರೆದ ಕವನ

  1. ಸೈದ್ಧಾಂತಿಕ, ತಾತ್ವಿಕ ಮೌಲ್ಯಗಳನ್ನು ಕ್ರೊಢಿಕರಿಸಿ ಬರೆದ ಗಹನ ಕವನ.ಅಣು ತೃಣವಾಗಿ, ಘನವಾಗಿ ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ಚಿಂತನೆ
    ಯ ಮೌಲಿಕಕ ಕವನ.ಶೂನ್ಯದಿಂದ ಆರಂಭಗೊಂಡ ಸೃಷ್ಟಿ ಮತ್ತೆ ಕೊನೆಗೆ ಶೂನ್ಯವೇ.ನಿಲ್ಲದ ಸಮಯ, ಓಡೋ ಕಾಲಕ್ಕೆ ಯಾವ ವ್ಯಾಮೋಹದ ಬಂಧವಿಲ್ಲ.ಮತ್ತೆ ಪ್ರಳಯ, ಮತ್ತೆ ಮರುಸೃಷ್ಟಿ.ಎಲ್ಲ ಬಲ್ಲವನೂ ತನ್ನ ಅಳಿವನ್ನ ತಡೆಯಲು ಸಾಧ್ಯವಿಲ್ಲ. ಏನೇ ಆದರೂ ಕಳೆದ ನಿನ್ನೆಗಳ ನೆಲೆಗಟ್ಟಿನಲ್ಲಿ ಸಾಗುವ ನಾಳೆಗಳ ಬಗ್ಗೆ ಬಲ್ಲವರಾರು? ಒಂದು ಮಾತ್ರ ಖಂಡಿತ, ನಿನ್ನೆ ಗಳು ಬರೆದ ನಾಳೆಗಳಲ್ಲಿ ಜೀವನದ ಅಂತ್ಯವಂತೂ ಇದೆ.ತುಂಬಾ ಗಹನ ವಿಚಾರಗಳ ಗೂಢ ಕವನ.ಅಭಿನಂದನೆಗಳು ಮುರಳಿ ಹತ್ವಾರ್ ಅವರೇ.
    ಸರೋಜಿನಿ ಪಡಸಲಗಿ

    Like

    • ಕವಿತೆಯನ್ನು ಓದಿ, ಅರ್ಥಪೂರ್ಣ ಅಭಿನಂದನೆಗಳನ್ನು ಹಂಚಿಕೊಂಡ ನಿಮ್ಮ ವಿಶಾಲ ಮನಸಿಗೆ ಧನ್ಯವಾದಗಳು. ಮುರಳಿ

      Like

  2. ಈ ಕವಿತೆಯನ್ನು ಪ್ರಕಟಿಸಿದ ಅನಿವಾಸಿ ಸಂಪಾದಕ ಬಳಗಕ್ಕೆ ಧನ್ಯವಾದಗಳು. ಹಾಗು, ಇದನ್ನು ಓದಿ, ಮೆಚ್ಚಿ, ತಮ್ಮ ಮನಸಿನ ಮಾತುಗಳನ್ನು ಹಂಚಿಕೊಂಡ ಓದುಗರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಮಾತುಗಳನ್ನು ಜೋಪಾನವಾಗಿ ಕಟ್ಟಿಡುತ್ತೇನೆ. ನಡುಗುವ ಇರುಳುಗತ್ತಲಲ್ಲಿ ಬಾಳ ದಾರಿ ಸಾಗುವ ದಿನಗಳಲ್ಲಿ ಬೆಚ್ಚಗಿನ ದಾರಿ ದೀಪ ನಿಮ್ಮೆಲ್ಲರ ದೊಡ್ಡ ಮನಸಿನ ನುಡಿಗಳು.

    ಮುರಳಿ ಹತ್ವಾರ್

    Like

  3. ಭೂಮಿಯ ಹುಟ್ಚು,ಮನುಕುಲದ ಹುಟ್ಟು ರಟ್ಟುಮಾಡುವ ಮನುಜನ ಕುತೂಹಲ ಸಂಶೋದನಾ ಶಕ್ತಿ.
    ಕೊನೆಗೆ ಸೃಷ್ಚಿಕರ್ತನ ಹುಟ್ಟನ್ನೂ ಬೇಧಿಸಿರುವ ಮನುಜನಿಗೆ ಸಾಗುವ ವಯಸ್ಸನ್ನು ಹಿಡಿದಿಡುವ,ಸಾವನ್ನು ಗೆಲ್ಲುವ ಶಕ್ತಿಯೂ ಇದೆಯೇ..?ಕತ್ತಲನ್ನು ನೀಗಿ ಬರಿ ಬೆಳಕನ್ನೆ ಬೆಳೆಯುವ ಸವಾಲು ಕೂಡ ನಮ್ಮೆದುರೇ ಉಂಟು.
    ಸಧ್ಯಕ್ಕೆ ಏನೆ ಆದರೂ ನಾಳೆಗಳು ಅದೇ ಖಾಲಿ ಬಿಳಿಹಾಳೆಗಳು.ಕುತೂಹಲಕಾರಿ ಸೂಕ್ಷ್ಮ ಸಂವೇದನೆಯ ಸಾಧನೆಯ ಹಿಂದಿನ ನಿನ್ನೆಗಳು ಸೃಷ್ಟಿಸುವ ನಾಳೆಗಳು, ನೆನ್ನೆಮೊನ್ನೆಗಳ ಮುನ್ನವ ಯೋಚಿಸುವ ಇಂದು ನಾಳೆಗಳ ನಡುವಿನ ತಪ್ಪದ ಕತ್ತಲಿನ ಕುತೂಹಲ ಸೊಗಸಾಗಿ ಘಾಡವಾಗಿ ಗುಡುಗಿದೆ.ಮುರುಳಿಧರ ಹತ್ವಾರ ನನ್ನ ಹತ್ತಾರು ಗಳೆಯರ ನಡುವಿನ ಹತ್ತಿರದ ಗೆಳೆಯ ದೂರದ ಲಂಡನ್ನಿನಲಿ ಹತ್ತಿರವೇ ಇರುವನು.

    Liked by 1 person

  4. Vow , nicely written. Read it many times already. You brought concepts of gravity , time travel , big bang ,black hole with philosophical touch into poetry. I really enjoyed reading Murali sir 👏👏. I read his other famous book” Brief history of time” few years ago. That’s how I could relate and appreciate your poetry more. ಇಂತಹ ಕವಿತೆಗಳು ಮತ್ತಷ್ಟು ಬರಲಿ.

    Liked by 1 person

  5. ನಮಸ್ಕಾರ ಹತ್ವಾರ್ ಅವರೇ. ಇದುವರೆಗೆ ಅನಿವಾಸಿ ವೇದಿಕೆ ಕಂಡ ಕವನಗಳಲ್ಲಿ ಇದು ಅದ್ವಿತೀಯವಾದದ್ದು. ಈ ಶತಮಾನದ ಅದ್ವಿತೀಯ ಬೌತವಿಜ್ಞಾನಿ ಸ್ಟಿಫನ್ ಹಾಂಕಿಂಗ್ ಅಂತಹ ವ್ಯಕ್ತಿಯ ಪುಸ್ತಕದ ಸಾರವನ್ನೆಲ್ಲ ಅರಗಿಸಿಕೊಂಡು, ಒಂದು ಕವನದಲ್ಲಿ ಕ್ರೋಢೀಕರಿಸುವುದು ಸುಲಭವಲ್ಲ. ಅಂತಹ ಸವಾಲನ್ನು ಸ್ವೀಕರಿಸಿ ಅದನ್ನು ಯಶಸ್ವಿಯಾಗಿ ಮುಗಿಸಿದ್ದೀರಿ. ನಿಮ್ಮ ಪದಗಳ ಆಯ್ಕೆ ಬಹಳ ಸೊಗಸಾಗಿದೆ. ತನ್ನ ತಾರುಣ್ಯದಲ್ಲೇ ಅಪರೂಪದ ರೋಗಕ್ಕೀಡಾದ ಹಾಕಿಂಗ್ ಕಡೆಯವರೆಗೂ ಛಲ ಬಿಡದೆ, ವೈಜ್ಞಾನಿಕ ಜಗತ್ತಿನಲ್ಲಿ ತನ್ನ ಛಾಪನ್ನು ಮೂಡಿಸಿದ ವ್ಯಕ್ತಿ. “ನೆನ್ನೆಗಳು ಬರೆದ ನಾಳೆಗಳು” ಕವನ ಆತನ ಸಿದ್ಧಾಂತಗಳನ್ನು ಬಹಳ ಸೊಗಸಾಗಿ ವರ್ಣಿಸುತ್ತದೆ. ಬಿಗ್-ಬ್ಯಾಂಗ್ ಮಹಾಸ್ಫೋಟದಿಂದ ಜನ್ಮಿಸಿದ ಈ ವಿಶ್ವದ ಬಸಿರಿನಲ್ಲಿ ಅಡಗಿರುವ ನಾಳೆಯ ರಹಸ್ಯಗಳನ್ನು ಬರೆದ ನೆನ್ನೆಗಳ ಗುಟ್ಟನ್ನು ಅತ್ಯಂತ ಪರಿಣಾಮಕಾರಿಯಾಗಿ ವರ್ಣಿಸಿದ್ದೀರಿ.
    ಧನ್ಯವಾದಗಳು. ನಿಮ್ಮ ಲೇಖನಿಯಿಂದ ಇನ್ನು ಇಂತಹ ಉತ್ತಮ ಕವನಗಳು ಹೊರಬೀಳುತ್ತಿರಲಿ.
    ಉಮಾ ವೆಂಕಟೇಶ್

    Liked by 1 person

    • ನಿಮ್ಮ ಮೆಚ್ಚುಗೆಯ ಮಾತುಗಳು ಮನ ಮುಟ್ಟಿತು. ಧನ್ಯವಾದಗಳು.

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.