ಹಾರುವ ಹಕ್ಕಿಗಳು ತೇಲುವ ವಿಮಾನಗಳು

ಈ ವಾರ ಅನಿವಾಸಿಯಲ್ಲಿ ಎರಡು ಲೇಖನಗಳು ಮತ್ತು ಕಣ್ಣೋಟ. ಮೊದಲಿಗೆ, ಕಳೆದ ಶನಿವಾರ ಲೆಸ್ಟರ್ ನಲ್ಲಿ ನಡೆದ ಯುಗಾದಿ ಕಾರ್ಯಕ್ರಮದ ಸಂಕ್ಷಿಪ್ತ ವರದಿ. ಎರಡನೆಯದು, ಯೋಗಿಂದ್ರ ಮರವಂತೆಯವರ ಲೇಖನ. 
 
ಎಂದಿನಂತೆ, ಕಣ್ಣೋಟದಲ್ಲಿ ಎರಡು ಚಿತ್ರಗಳು – ಈ ವಾರದ ಚಿತ್ರಗಳು ಮ್ಯಾಂಚೆಸ್ಟರ್ ನ ಶಾಂತಲಾ ರಾವ್ ತಮ್ಮ ಮೊಬೈಲ್ ಫೋನಿನಲ್ಲಿ ಸೆರೆ ಹಿಡಿದವು. ಮೊಬೈಲ್ ತಂತ್ರ ಬೆಳೆದಂತೆ, ಅದರ ಕ್ಯಾಮೆರಾ ಶಕ್ತಿಯೂ ಬೆಳೆದಿದೆ. ಅದರ ಎರಡು ಉದಾಹರಣೆ ಶಾಂತಲಾ ಅವರ ಫೋಟೋಗಳು. ಅದಕ್ಕೆ ಪೂರಕವಾಗಿ, ಧಾರವಾಡದ ಕನ್ನಡದಲ್ಲಿ ಅವರೇ ಬರೆದ ಹಿನ್ನೆಲೆ ಮತ್ತು ಅವರ ಅನಿಸಿಕೆ. 

 

 
ಸವಿಗಾನದ ರಸದೌತಣ 

ಬಾಳೆಎಲೆ. ಅನ್ನದ ಮೇಲೆ ಬಿಸಿ ಸಾರು. ಆಚೆ ಈಚೆ ಕೋಸುಂಬರಿ, ಪಲ್ಯ, ಹೋಳಿಗೆ, ಹಯಗ್ರೀವ; ಪೂರಿಯ ಜೋಡಿ ಮಾವಿನ ಶೀಕರಣೆ. ಮತ್ತೆ-ಮತ್ತೆ ಕೇಳಿ ಬಡಿಸುವ ಉಪಚಾರ. ಇನ್ನೇನು ಬೇಕು ಹೇಳಿ? ಕೈಯಾಯ್ತು, ಬಾಯಾಯ್ತು. ಬಾಳೆಎಲೆ ಕೀಸಿ-ಕೀಸಿ ಉಂಡವರೇ ಎಲ್ಲ. ನಮ್ಮದು ನಾಲ್ಕನೇ ಪಂಕ್ತಿಯಾದರೂ ಉಪಚಾರದಲ್ಲಿ ಅವಸರವಿರಲಿಲ್ಲ. ನಾವು ನೆಂಟರೂ ಅಲ್ಲ, ಇದು ಯಾರ ಮನೆ ಮದುವೆಯೂ ಅಲ್ಲ. ಇದು, ಕಳೆದ ಶನಿವಾರ (೨೭/೪/೧೯) ಇಂಗ್ಲೆಂಡಿನ ಮಧ್ಯ ಭಾಗದ ಲೆಸ್ಟರ್ ಊರಿನ ಕನ್ನಡಿಗರು ಆಯೋಜಿಸಿದ್ದ ಯುಗಾದಿ ಕಾರ್ಯಕ್ರಮದ ಮಧ್ಯಾಹ್ನದ ಊಟದ ಸಂಭ್ರಮ. ನೂರಾರು ಸಂತೃಪ್ತ ಮುಖಗಳಲ್ಲಿ ಆಯೋಜಕರ ಆಲೋಚನೆ, ಶ್ರಮ ಮತ್ತು ಆತಿಥ್ಯಕ್ಕೆ ಕೃತಜ್ಞತೆ ಸೂಸುತ್ತಿತ್ತು.

 

ಔತಣ ಹೊಟ್ಟೆಯ ಒತ್ತೊತ್ತಿ ತುಂಬಿದರೆ, ಕಣ್ಣು, ಕಿವಿ ತುಂಬಿದ್ದು, ಸ್ಥಳೀಯ ಕಲಾವಿದರ, ಬಹುವಿಧದ ನೃತ್ಯ, ಹಾಡುಗಳು. ಅದು ಮುಗಿಯುತ್ತಿದ್ದಂತೆ ಮತ್ತೆ ಹೊಟ್ಟೆಗೆ ಸಿಹಿ-ಕಾರ-ಕಾಪಿ. ಇವೆಲ್ಲ ಸಂಜೆಯ ಮುಖ್ಯ ಅಂಕಕ್ಕೆ ಪೀಠಿಕೆ.

 

ಅದು, ಕರ್ನಾಟಕದ ಇಂದಿನ ಅತಿ ಪ್ರಸಿದ್ಧ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಮತ್ತು ಅವರ ತಂಡದವರ ಹಾಡುಗಾರಿಕೆ. ಮೈಸೂರಿನಿಂದ ಮುಂಬೈಗೆ ಹಾರಿ, ಸಾವಿರಾರು ಜಾಹಿರಾತುಗಳ ಜಿಂಗಲ್ಸ್ ಹಾಡಿ, ಎ. ಆರ್. ರಹಮಾನರ ‘ಜೈ ಹೋ’ ಹಾಡಿನ ಮೊದಲ ಸಾಲು ಹಾಡಿ ವಿಶ್ವವಿಖ್ಯಾತರಾದ ವಿಜಯ ಪ್ರಕಾಶ್, ಹಿನ್ನೆಲೆ ಹಾಡು; ಟಿವಿ ಕಾರ್ಯಕ್ರಮಗಳ ನಿರೂಪಣೆ, ಜಡ್ಜ್, ಹೀಗೆ ಕನ್ನಡಿಗರ ಮನದಲ್ಲಿ ಬೆಳೆದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ತಮ್ಮ ತಂದೆಯನ್ನು ಕಳೆದುಕೊಂಡರೂ, ಅವಶ್ಯ ಕ್ರಿಯೆಗಳೆಲ್ಲ ಮುಗಿದ ತಕ್ಷಣ, ಕಲೆಯನ್ನು ಹಂಚುವ ತಮ್ಮ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಅದು ಅವರ ವೃತ್ತಿಪರತೆ. ಅಂದಿನ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ಬೆಂಗಳೂರಿನ ಓಗರ ರೆಡಿ ಫುಡ್ಸ್ ಮಾಲೀಕರು ಸಹ ಇತ್ತೀಚಿಗೆ ತಮ್ಮ ತಂದೆಯನ್ನು ಕಳೆದುಕೊಂಡರೂ, ವಿಜಯ ಪ್ರಕಾಶರ ಒತ್ತಾಸೆಗೆ ಒಪ್ಪಿ ಬಂದೆ ಎಂದು ಹೇಳಿಕೊಂಡರು. ಒಂದು  ನಿಮಿಷ ಮೌನದೊಂದಿಗೆ ಅವರಿಬ್ಬರ ಶೋಕಕ್ಕೆ ಸಭೆ ಸ್ಪಂದಿಸಿದ್ದು ಸಮಯೋಚಿತವಾಗಿತ್ತು.

 

ಹಾಡಿನಲ್ಲಿ ವಿಜಯಪ್ರಕಾಶರ ಜೊತೆಗೆ ಅನುರಾಧ ಭಟ್ ಮತ್ತು ಶಶಿಕಲಾ ಇದ್ದರು. ಇವರಿಬ್ಬರೂ ಹಿನ್ನೆಲೆ ಗಾಯಕರಾಗಿ ಸಾಕಷ್ಟು ಹೆಸರು ಮಾಡಿದವರೇ. ಸುಮಾರು ಮೂರು ಗಂಟೆಗಳ ಕಾಲ ತಡೆಯಿಲ್ಲದೆ ಹರಿದ ಹಾಡುಗಳ ಮಳೆಯಲ್ಲಿ ಸಭಿಕರು ಕುಣಿದು, ಕುಪ್ಪಳಿಸುತ್ತ ನೆನೆದರು. ಲಘು ಹಾಸ್ಯದ ಮಾತುಗಳಲ್ಲಿ ಸಭಿಕರನ್ನು ಛೇಡಿಸುತ್ತ, ಉತ್ಸಾಹಿಸುತ್ತ ತನ್ನೊಂದಿಗೆ ಕರೆದೊಯ್ಯುತ್ತಿದ್ದ ವಿಜಯಪ್ರಕಾಶರ ಶೈಲಿ ಅವರ ಕಂಠದಷ್ಟೇ ಅಪೂರ್ವ.

 

ಬೇರೆ-ಬೇರೆ ಭಾಷೆಗಳ ಹಾಡುಗಳಲ್ಲಿ ಬೆಳೆದರೂ, ತನ್ನೊಳಗಿನ ಕನ್ನಡತನವನ್ನು ಮೆರೆಸುತ್ತಿರುವ ವಿಜಯಪ್ರಕಾಶ್ ಮತ್ತು ಬೇರೆ ಭಾಷೆ ಸಂಸ್ಕೃತಿಯ ದೇಶದಲ್ಲೂ ಕನ್ನಡತನವನ್ನ ಉಳಿಸಿ, ಬೆಳೆಸಿ, ಹಂಚುತ್ತಿರುವ ಸಭಿಕರ ನಡುವೆ ಹಾಡುಗಳಲ್ಲಿ ನಡೆದ ಸಂವಾದ ಮತ್ತು ಸ್ಪಂದನ, ಬಹಳ ವರ್ಷಗಳ ನಂತರ ತವರಿಗೆ ಮರಳಿದ ಅಕ್ಕ-ತಂಗಿಯರಿಬ್ಬರು ಯಾರಿಗೆ ಅಮ್ಮನ ಮೇಲಿನ ಪ್ರೀತಿ ಹೆಚ್ಚು ಎಂದು ವಾದಿಸಿದಂತಿತ್ತು. ಕಡೆಗೆ ಗೆದ್ದದ್ದು ಕನ್ನಡಮ್ಮನ ಪ್ರೀತಿ.

 

 

 

———————————————–

ಹಾರುವ ಹಕ್ಕಿಗಳು ತೇಲುವ ವಿಮಾನಗಳು

ತನ್ನಿಷ್ಟದ ಪ್ರಪಂಚವನ್ನು ಕಟ್ಟುವಲ್ಲಿ, ಪ್ರಕೃತಿಯೊಂದಿಗಿನ ಸಮರಸವ ಮರೆತು ಮೆರೆಯುತ್ತಿರುವ ಮಾನವ ತನಗೆ ಬಳುವಳಿಯಾಗಿ ದೊರೆತ ತನ್ನ ಸುತ್ತಲಿನ ಸಿರಿಯನ್ನು ಒಂದೊಂದಾಗಿ ನುಂಗುತ್ತಿದ್ದಾನೆ. ಮಾನವನ ಬುದ್ಧಿಗೆ ಯಂತ್ರಗಳ ಶಕ್ತಿ ಸಿಕ್ಕು ಅವು ಹೆಚ್ಚಿದಂತೆ, ಅವನ ಸಾವಿರಾರು ವರ್ಷಗಳ ಕಲ್ಪನೆಗಳಿಗೆ ರೆಕ್ಕೆ-ಪುಕ್ಕ ಸಿಕ್ಕಿ, ಕಳೆದ ಶತಮಾನದ ಆರಂಭಕ್ಕೆ ಮೊದಲು ಹಾರಿದ ಯಂತ್ರದ-ಹಕ್ಕಿ ಆಗಸದ ದಾರಿ ತೆರೆದು ಕೊಟ್ಟಿತು. ಅಲ್ಲಿಗೆ ಹಕ್ಕಿಗಳ ಸ್ವಚ್ಛಂದ ಹಾರಾಟದ ಕೊನೆಗೆ ನಾಂದಿಯಾಯಿತು. ಹಾರುವ ಜನ ಬೆಳೆದಷ್ಟೂ ಹೆಚ್ಚಿದ ವಿಮಾನಗಳು ನುಂಗಿದ ಹಕ್ಕಿಗಳ ಲೆಕ್ಕ ಇಲ್ಲ. ಹಾಗೆಯೇ,  ದೊಡ್ಡ-ದೊಡ್ಡ ನಗರಗಳ ಎತ್ತೆತ್ತರದ ಕಟ್ಟಡಗಳು ಕೊಲ್ಲುತ್ತಿರುವ ಹಕ್ಕಿಗಳ ಲೆಕ್ಕವೂ. ಹೀಗೆ, ಮಾನವ ಮತ್ತು ಹಕ್ಕಿಯ ನಡುವಿನ ದ್ವಂದ್ವವನ್ನ ಯಂತ್ರದ-ಹಕ್ಕಿಯ ರೆಕ್ಕೆ ಹಿಡಿದು ಹೇಳುತ್ತಾ ಯೋಗೀಂದ್ರ ಮರವಂತೆ ಮತ್ತೊಮ್ಮೆ ಅನಿವಾಸಿಯತ್ತ ಹಾರಿದ್ದಾರೆ.

ಯೋಗೀಂದ್ರರು, ಬ್ರಿಸ್ಟಲ್ಲಿನ ದೊಡ್ಡ ವಿಮಾನ ತಯಾರಾಕ ಸಂಸ್ಥೆಯೊಂದರ ಉದ್ಯೋಗಿ. ಇವರ ಬರಹಗಳು ಕನ್ನಡದ ಪ್ರತಿಷ್ಠಿತ ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಕೆಂಡಸಂಪಿಗೆ.ಕಾಮ್ ಗಳಲ್ಲಿ ಪ್ರಕಟವಾಗಿವೆ. ಇತ್ತೀಚಿಗೆ, ಉದಯವಾಣಿ ಯುಗಾದಿ ವಿಶೇಷಾಂಕದಲ್ಲಿ ಇವರ ಪ್ರಬಂಧವೊಂದಕ್ಕೆ ಬಹುಮಾನ ಸಿಕ್ಕಿದೆ. 
_______________

image.pngಇದು ಬ್ರಿಸ್ಟಲ್. ಇಲ್ಲೊಂದು ವಿಮಾನ ಕಚೇರಿ. ಅದರೊಳಗಿನ ಹಲವು ಕಟ್ಟಡಗಳು,ಅವುಗಳಲ್ಲಿ  ಹಲವು ಕಿಟಕಿಗಳು.ಅವುಗಳಲ್ಲೊಂದು ಕಿಟಕಿಯ ಬಳಿ ಸದ್ಯಕ್ಕೆ ನಾನು. ಎಲ್ಲರ ಅನುಭವದ  ಕಿಟಕಿಗಳ ಹಾಗಿನದೇ ಇದೂ ಒಂದು, ಹೊರಗಿನದನ್ನು  ತೋರಿಸುವ ಕಾಣಿಸುವ ಕೇಳಿಸುವ ಕೆಲಸ ಇದಕ್ಕೆ, ಆದರೆ ಅವೆಲ್ಲವೂ ಒಂದು ಚೌಕಟ್ಟಿನೊಳಗೇ. ಎಷ್ಟು ತೋರಿಸುತ್ತದೆ ಎಷ್ಟು ಬಿಡುತ್ತದೆ ಎನ್ನುವುದಕ್ಕೆ ಒಂದು ಮಿತಿ ಪರಿಧಿ ಇದೆ. ಈ ಕಿಟಕಿಯಿಂದ ಹಕ್ಕಿಗಳಿಗಿಂತ ಹೆಚ್ಚು ವಿಮಾನಗಳೇ  ಕಾಣಿಸುತ್ತವೋ  ಕೇಳಿಸುತ್ತವೋ ಎನ್ನುವ ಅನುಮಾನ ನನಗೆ. ಇಲ್ಲಿ ಚಿತ್ರಗಳೂ ಕಾಣಿಸಬಲ್ಲವು ಸದ್ದುಗಳು ಕೇಳಿಸಬಲ್ಲವು. ವಿಮಾನಗಳು ಕಚೇರಿಯ ಆವರಣದೊಳಗೆ ಇರುವ ಇಳಿಯುವ ಪಥದಿಂದ (ರನ್ ವೆ)  ಆಕಾಶವನ್ನು ಸರಸರನೆ ಹತ್ತಿ ಇಳಿಯುತ್ತಿರುತ್ತವೆ. ಯಾರು ಕಲಿಸಿದರೋ ಇವಕ್ಕೆ ಹತ್ತುವುದು ಇಳಿಯುವುದು. ಕಣ್ಣಿಗೆ ಕಾಣುವ ಕಬ್ಬಿಣದ ಏಣಿಯಲ್ಲಿ ಹತ್ತಿಳಿಯುವಾಗ ಎಡವುವ ನಾನು ಈ ವಿಮಾನಗಳು ಕಾಣದ ಗಾಳಿಯ ಮೆಟ್ಟಿಲುಗಳ ಮೇಲೆ ಪರಿಣತಿಯಲ್ಲಿ ಹತ್ತಿಳಿಯುವುದನ್ನು ಅವಕ್ಕಾಗಿ ನೋಡುತ್ತೆನೆ. ನಮ್ಮ ಕಂಪೆನಿಯ ಶಾಖೆಗಳು ಫ್ರಾನ್ಸ್, ಜರ್ಮನಿ ಸ್ಪೇನ್ ಗಳಲ್ಲಿ ಹಬ್ಬಿರುವುದರಿಂದ, ಅಲ್ಲಿಂದ ಇಲ್ಲಿ ಬರುವುದು  ಇಲ್ಲಿನವರು ಅಲ್ಲಿ ಹೋಗುವುದು ವಿಮಾನಗಳ ಮೂಲಕವೇ ನಿತ್ಯವಿಧಿಯಂತೆ ನಡೆಯುತ್ತಿದೆ . ಆಸುಪಾಸಿನ ಕೆಲವು ಹವ್ಯಾಸಿ ವಿಮಾನ ಚಾಲಕರು ಪಾತಿದೋಣಿಯಂತಹ (ಸಣ್ಣ ದೋಣಿ) ಪುಟ್ಟ ವಿಮಾನ ತೆಗೆದುಕೊಂಡು ನಮ್ಮ ರನ್ ವೆ ಬಳಸಿ ಮೇಲೆ ನೆಗೆಯುತ್ತಾರೆ. ಬ್ರಿಸ್ಟಲ್ ನ ಪೊಲೀಸರು ಊರಿನ ಮೇಲೆ ಹದ್ದಿನ ಕಣ್ಣಿಡಲು ಬಳಸುವ ಹೆಲಿಕಾಪ್ಟರ್ ಗೆ ಕೂಡ ನಮ್ಮ ಕಚೇರಿಯೇ ನಿಲ್ದಾಣ. ಮತ್ತೆ ಅಪಘಾತ ತುರ್ತು ಚಿಕಿತ್ಸೆಗೆಂದು  (air ambulance) ಬ್ರಿಸ್ಟಲ್ ನ   ನಗರಸಭೆ ಬಳಸುವ  ಹೆಲಿಕಾಪ್ಟರ್ ದಿನಕ್ಕೊಂದು ಬಾರಿಯಾದರೂ ಗಾಳಿಯನ್ನು ಕತ್ತರಿಸುತ್ತ ಸುತ್ತುತ್ತಿರುತ್ತದೆ. ರನ್ ವೆ ಸುತ್ತಲಿನ ವಿಶಾಲ ಬಯಲಿನ ಒಂದು ಮೂಲೆಯಲ್ಲಿ ಹದಿನಾರು  ವರ್ಷಗಳ ಹಿಂದೆ (2003ರಲ್ಲಿ ) ಕೊನೆಯ ಹಾರಾಟ ಮುಗಿಸಿ  ನಿವೃತ್ತಿಯ ನಿಟ್ಟುಸಿರು ಬಿಟ್ಟು “ಕಾಂಕರ್ಡ್” ಚಕ್ರಗಳನ್ನು  ನೆಲದಲ್ಲಿ ಖಾಯಂ ಆಗಿ ಹೂತಿದೆ. ಬಾಣದ ಮಂಚದ ಮೇಲೆ ಮಲಗಿದ ಇಚ್ಚಾಮರಣಿಯ ಪರಿಸ್ಥಿತಿಯೇ ಅದರದು .”ಕಾಂಕರ್ಡ್” ವಿಮಾನ ನೋಡಲೆಂದೇ ಬಸ್ಸು ತುಂಬಿಸಿಕೊಂಡು ಪ್ರವಾಸ ಬರುವವರೂ ಇದ್ದಾರೆ. ಶಬ್ದದ ವೇಗದ ಎರಡು ಪಟ್ಟು ವೇಗದಲ್ಲಿ ಹಾರುತ್ತಿದ್ದ “ಕಾಂಕರ್ಡ್”ಗೆ  ನಮ್ಮ ಕಚೇರಿಯಿಂದ ಹಾರಿ ಇಳಿಯುವ ಪುಟ್ಟ ವಿಮಾನಗಳ ನಡಿಗೆ ಓಟ ವೇಗ ನೋಡಿ ಬಿಳಿ ಮೀಸೆಯ ಅಡಿಯಲ್ಲಿ , ಕೆನ್ನೆಯ ಸುಕ್ಕಿನ ಒಳಗೆ ನಗೆ ಬರುವುದುಂಟು. ರನ್ ವೆ ಗೆ ಅತಿ ಹತ್ತಿರದ ಕಟ್ಟಡದ ಒಂದರಲ್ಲಿ ಕುಳಿತಿರುವ ನನಗೆ ವಿಮಾನಗಳ ಹೆಲಿಕಾಪ್ಟರ್ ಗಳ ರೆಕ್ಕೆಯ ಪಟಪಟ ಸದ್ದು ಕಿವಿಯಲ್ಲಿ ಗುಂಯ್ ಗುಟ್ಟುತ್ತಿರುತ್ತದೆ. ಇಲ್ಲಿ ನಾನು ಕೆಲಸ ಮಾಡಲು ಶುರು ಮಾಡಿದ ದಿನಗಳಲ್ಲಿ ಪ್ರತಿ ವಿಮಾನ ಏರಿ ಇಳಿಯುವಾಗ ಮಾಡುವ ಸದ್ದಿಗೆ ಇದೇನು ನಮ್ಮ ಕಟ್ಟಡದ ಮೇಲೆ ಎರಗಿತೋ ಏನೋ ಎಂದು ಹೆದರಿ ವಿಮಾನ ಇಳಿಯುವವರೆಗೂ ಕಣ್ಣು ಕಿವಿಗಳಲ್ಲೇ ಹಿಂಬಾಲಿಸುತ್ತಿದ್ದೆ. ನೂರಾರು ಏಕರೆಗಳಷ್ಟಿರುವ ಕಚೇರಿಯ ಮೇಲಿನ ಬಾನಿನಲ್ಲಿ ಹಾರಾಡಿಕೊಂಡು ಬದುಕಿರುವ ಹಕ್ಕಿಗಳ ಗುಂಪಿಗೆ ನಾವು ವಿಮಾನ ಹೆಲಿಕಾಪ್ಟರ್ಗಳೆನ್ನುವ ‘ಪಕ್ಷಿ’ ಗಳನ್ನು ಸೇರಿಸಿದ್ದೇವೆ. ಹಕ್ಕಿಗಳನ್ನು ದೂರದಿಂದ ನೋಡಿ ಕೇಳಿ ಗುರುತು ಹಿಡಿಯಬಲ್ಲ ಪಕ್ಷಿ ಶಾಸ್ತ್ರಜ್ಞರಂತೆಯೇ ವಿಮಾನಗಳ ಸದ್ದು ದೂರದ ನೋಟದಿಂದಲೇ ಇದು ಇಂತಹದ್ದು ಎಂದು ಹೇಳಬಲ್ಲವರಿದ್ದಾರೆ. ಮೊಂಡು ಮೂಗಿನವು, ಉದ್ದ ರೆಕ್ಕೆಯವು, ಡೊಳ್ಳು ಹೊಟ್ಟೆಯವು, ಅಗಲ ಬಾಲದವು ಹೀಗೆ ತರ ತರಹದ ವಿಮಾನ ಹಕ್ಕಿಗಳು! ವಿಧ ವಿಧದ ಹಕ್ಕಿಗಳ ವಿಶಿಷ್ಟ ಕೂಗಿನಂತೆ ಬೇರೆ ಬೇರೆ ತರದ ವಿಮಾನಗಳು ತಮ್ಮದೇ ಸದ್ದು ಕೇಕೆಗಳಿಂದ ಹತ್ತಿ ಇಳಿಯುತ್ತವೆ. ಹೊತ್ತಲ್ಲದ ಹೊತ್ತಿನಲ್ಲಿ ಇಳಿಯುವ, ಕಿವಿ ಹಿಡಿಯದಷ್ಟು ಸದ್ದು ಮಾಡುತ್ತಾ ಹಾರುವ ವಿಮಾನ, ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಹೋರಾಟ ವಿಮಾನ ಎನ್ನುವುದನೆಲ್ಲ ನೋಡಿ ಶುಭ ಅಶುಭಗಳ ಶಕುನ ಹೇಳುವವರೂ ನಮ್ಮಲ್ಲಿ ತಯಾರಾಗಿದ್ದಾರೆ. ನಮ್ಮ ಕಲ್ಪನೆ ಏನೇ ಇದ್ದರೂ ಹಕ್ಕಿಗಳು ವಿಮಾನಗಳೂ ಸರಿ ಸುಮಾರಿಗೆ ಒಂದೇ ಸಂತತಿಯವು ಆಗಿ ಕಂಡರೂ ಹಕ್ಕಿಗಳು ವಿಮಾನಗಳನ್ನು ತಮ್ಮ ಗುಂಪಿಗೆ ಎಂದೂ ಸೇರಿಸಿಕೊಳ್ಳಲಿಕ್ಕಿಲ್ಲ ಎಂದು ಅನಿಸುತ್ತದೆ. ಅಥವಾ ವಿಮಾನಗಳು ಹಕ್ಕಿಗಳನ್ನು ತಮ್ಮವು ಎಂದು ಸ್ವೀಕರಿಸಲಿಕ್ಕಿಲ್ಲ .

image.png

ಮನುಷ್ಯನಿಗೆ ಹಾರಲು ಕಲಿಸಿದ್ದೇ ಹಕ್ಕಿಗಳು ಅಲ್ಲವೇ? ಅಲ್ಲವೆಂದು ಮನುಷ್ಯರು ಹೇಳಿದರೂ ಹಕ್ಕಿಗಳು ನಂಬಲಿಕ್ಕಿಲ್ಲ.   ಶತಮಾನದ ಹಿಂದೆ ಮೊತ್ತಮೊದಲ ಬಾರಿಗೆ ಆಕಾಶಕ್ಕೆ ಹಾರಲು ಯತ್ನಿಸಿದ ಸಾಹಸಿಗಳು ಕನಸುಗಾರರು ದೊಡ್ಡ ರೆಕ್ಕೆಗಳನ್ನು ತಮ್ಮ ಎಡ ಬಲಗಳಿಗೆ ಕಟ್ಟಿಕೊಂಡು ನೆಗೆಯಲು ಯತ್ನಿಸಿದ್ದರು .ಅಂತಹವರಲ್ಲಿ ಹೆಚ್ಚಿನವರು ಹಾರದೇ ಬಿದ್ದರು, ಮತ್ತೆ ಕೆಲವರು ತುಸು ದೂರ ನೆಗೆದು  ತೇಲಿದರು. ಕೆಲವು ಕಾಲದವರೆಗೆ ಈ ಪ್ರಯತ್ನ ಮುಂದುವರಿಯಿತು ಕೂಡ. ಇದು ರೈಟ್ ಸಹೋದರರ ಯಂತ್ರಚಾಲಿತ ವಿಮಾನ ಆಕಾಶವನ್ನು ಏರುವುದಕ್ಕಿಂತಲೂ ಮೊದಲಿನ ಕತೆ. ಒಂದು ನೈಸರ್ಗಿಕ  ಸೃಷ್ಟಿಯಿಂದ ಸ್ಫೂರ್ತಿ ಪಡೆದ ಮನುಷ್ಯ ಕಷ್ಟಪಟ್ಟು ಹೊಡೆದ ನಕಲು – ವಿಮಾನ. ಎಷ್ಟು ಚಂದದ ನಕಲೇ ಆದರೂ ಅಸಲಿ ಆಗುವುದಿಲ್ಲವಲ್ಲ. ಹಕ್ಕಿಗಳ ಸುಲಲಿತ , ಸರಳ , ಪರಿಸರ-ಸ್ನೇಹಿ ಹಾರಾಟ ವಿಮಾನಗಳಿಗೆ ಎಂದೂ ದಕ್ಕಲಿಕ್ಕಿಲ್ಲ. ಜೊತೆಗೆ ವಿಮಾನಗಳು ಇದ್ದಷ್ಟು ದಿನವೂ ಅದರ ಆಘಾತ, ಸದ್ದು, ಮಾಲಿನ್ಯಗಳಿಗೆ ಅಂಜುತ್ತ ಹಕ್ಕಿಗಳು ಬದುಕಬೇಕಾಗಿರುವುದೂ  ಅನಿವಾರ್ಯ. ಆದರೆ ಹಕ್ಕಿಗಳಿಂದಾಗಿ ವಿಮಾನಗಳ ಬದುಕೂ ಸುಭದ್ರ ಆಗಿ ಉಳಿದಿಲ್ಲ. ಹಕ್ಕಿಗಳು ಹಾರುವಷ್ಟು ದಿನವೂ ವಿಮಾನಗಳು ಜೀವ ಭಯದಲ್ಲಿ ತತ್ತರಿಸುತ್ತ ನಿಲ್ದಾಣಗಳಲ್ಲಿ ಏರಿ ಇಳಿಯುತ್ತವೆ. ಹಕ್ಕಿಗಳ ಆಘಾತ (bird strike) ವಿಮಾನಗಳಿಗೆ ಅತ್ಯಂತ ಮಾರಕವಾದದ್ದು.  ಅರ್ಧ ಅಥವಾ ಒಂದು ಕೆಜಿ ತೂಕದ ಮಾಂಸದ ಮುದ್ದೆಯೋ ವಸ್ತುವೋ  ಘಂಟೆಗೆ ನೂರೈವತ್ತು  ಮೈಲಿವೇಗದಲ್ಲಿ ಬಂದು ಗಟ್ಟಿಯ ಲೋಹಕ್ಕೆ ಬಡಿದರೆ ಹಕ್ಕಿ ಸಾಯುವುದರ ಜೊತೆಗೆ ಲೋಹವೂ   ಘಾಸಿಗೊಳ್ಳುತ್ತದೆ. ಹಕ್ಕಿಗಳು ಆಕಾಶದಲ್ಲೇ ನಿಂತು ರೆಕ್ಕೆ ಬಡಿಯುತ್ತಿದ್ದರೂ ವೇಗವಾಗಿ ಬರುವ ವಿಮಾನದ ಘಾತ ಹಕ್ಕಿಗೂ ವಿಮಾನಕ್ಕೂ ಎರಡಕ್ಕೂ ಆಪತ್ಕಾರಿಯೇ. ಹೀಗೆ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ ಅಥವಾ ಹಕ್ಕಿಗಳ ಗುಂಪು ಛಿದ್ರವಾಗುವುದರ ಜೊತೆಗೆ ವಿಮಾನಕ್ಕೆ ಬಡಿದ ಜಗದಲ್ಲಿ ತೀವ್ರ ಆಘಾತವಾಗಿರುತ್ತದೆ.  ವಿಮಾನಶಾಸ್ತ್ರದಲ್ಲಿ ಹಕ್ಕಿಗಳ ಆಘಾತದ ಅಧ್ಯಯನವೂ ಒಂದು ವಿಭಾಗ. ಹಕ್ಕಿಗಳ ಸಮೂಹ ಆಕಾಶಕ್ಕೆ ಏರುತ್ತಿರುವ ಅಥವಾ ನೆಲಕ್ಕೆ ಇಳಿಯುತ್ತಿರುವ ವಿಮಾನದ ರೆಕ್ಕೆಗೆ, ಎಂಜಿನ್ ಗೆ ಬಡಿದು ಅಪಘಾತಗೊಂಡ ವಿಮಾನಗಳ ಉದ್ದದ ಪಟ್ಟಿಯೇ ಇದೆ. ವಿಮಾನಗಳ ವಿನ್ಯಾಸದಲ್ಲಿ ಹಕ್ಕಿಗಳ ಗಾತ್ರ ತೂಕ ಬಗೆಯನ್ನು ಕಲ್ಪಿಸಿ  ಲೆಕ್ಕಾಚಾರ ಮಾಡಿ ಒಂದು ವೇಳೆ ಹಾಗೊಂದು ಆಘಾತ ಆದರೆ ವಿಮಾನ ಎಷ್ಟು ತುರ್ತಾಗಿ ಸುರಕ್ಷಿತವಾಗಿ ನಿಲ್ದಾಣವನ್ನು ಸೇರಬಹುದು ಎನ್ನುವ ಪರಿಗಣನೆ ಇರುತ್ತದೆ .

image.png

 

ವಿಮಾನಗಳು ಆಕಾಶಕ್ಕೆ ಲಗ್ಗೆ ಇಟ್ಟ ಲಾಗಾಯ್ತಿನಿಂದ ವಿಮಾನದ ಆಘಾತಕ್ಕೋ, ಶಬ್ದಕ್ಕೋ ಅಥವಾ ವಿಮಾನ ಉಗುಳುವ ಹೊಗೆಗೋ ಬಲಿಯಾಗಿ ಉರುಳಿದ ಹಕ್ಕಿಗಳ ಲೆಕ್ಕ ಇಟ್ಟವರು ಒಬ್ಬರೂ ಇಲ್ಲ. ಅಥವಾ ಹಕ್ಕಿಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದವರೂ ಯಾರೂ ಇಲ್ಲ. ಹಾರುವ ವಸ್ತು ವಿಷಯಗಳಲ್ಲೇ ಪರಿಪೂರ್ಣ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಹೊಂದಿದ ಹಕ್ಕಿಯೊಂದು ಹುಟ್ಟಲು ಮರದ ರೆಂಬೆಯ ಮೇಲೆ ಕುಳಿತು ಕಣ್ಣು ಮಿಟುಕಿಸಿ ಮಾತಾಡುವ ಒಂದು ಗಂಡು ಇನ್ನೊಂದು ಹೆಣ್ಣು ಹಕ್ಕಿಗಳ ನಡುವಿನ ಪ್ರೀತಿ ಸಾಕು. ಮತ್ತೆ ಅವುಗಳ ಸಹಜ ಸುಂದರ ಹಾರಾಟ ಶುರು ಆಗಲು ಬಲಿತ ರೆಕ್ಕೆಗಳು ಅವುಗಳ ಸುಲಲಿತ  ಚಲನೆ ಅಷ್ಟೇ ಬೇಕು. ಹಕ್ಕಿಯೊಂದರ ಸಾಹಸಗಳನ್ನು ತಾನೂ ಮಾಡಬಲ್ಲೆ ಎಂದು ತೋರಿಸುವ ವಿಮಾನವೊಂದು ತಯಾರಾಗಲು ವರ್ಷಗಳ ಸಮಯ ಮತ್ತು ದುಡಿತ ಬೇಕು. ಮತ್ತೆ ಆ ವಿಮಾನಗಳು ನೆಗೆಯಲು ತೇಲಲು ಜ್ಞಾನ ವಿಜ್ಞಾನ ಪರೀಕ್ಷೆ ಲೆಕ್ಕಾಚಾರಗಳೂ ಬೇಕು. ಒಂದೇ ಮನೆತನದಲ್ಲಿ ಹುಟ್ಟಿದ  ಹಕ್ಕಿಗಳು ಮತ್ತು ವಿಮಾನಗಳ ನಡುವೆ ಎಷ್ಟು ಹೋಲಿಕೆಗಳು  ಹಾಗು ಎಷ್ಟು ವಿರೋಧಗಳು. ತಾವು ಹಾರುವುದನ್ನು ನೋಡುತ್ತಾ ತಮ್ಮಂತೆ ಹಾರುವ ಯಂತ್ರವನ್ನು ಮನುಷ್ಯರು ನಿರ್ಮಿಸುತ್ತಿದ್ದಾಗ ಹಕ್ಕಿಗಳಿಗೆ ಮುಂದೆ ತಮ್ಮ ಸಂಕುಲಕ್ಕೆ ಆ ಯಂತ್ರಗಳಿಂದ ಬರಬಹುದಾದ ಆಪತ್ತು ತಿಳಿದಿರಲಿಲ್ಲ. ವಿಮಾನವನ್ನು ಅಂದು  ನಿರ್ಮಿಸಿದವರು ತಾವು ಅನುಕರಿಸಿದ ಗುರು, ಹಕ್ಕಿಗಳೇ ಮುಂದೆ ತಮ್ಮನ್ನು ಆಕಾಶದಲ್ಲಿ ಕಾಡಬಹುದು ಎಂದೂ ಅಂದುಕೊಂಡಿರಲಿಲ್ಲ.

__________________________________________________________________________________
ಕಣ್ಣೋಟ
image.png
ಶರಣ್ರೀ 🙏!

 

ಈ ಜಗತ್ತಿನ ಚಲನ ವಲನ ಎಲ್ಲ ಆ ಸೂರ್ಯಾನ್ಮ್ಯಾಲೇ ನಿರ್ಭರ ಅಲ್ಲರೀ ? ಆ ಸೂರ್ಯಾ ತನ್ನ ಬೆಳ್ಕನಿಂದ ಈ ಭೂಮಿ ಮ್ಯಾಲೇ ಎಷ್ಟ್ ಛಂದ್ ಛಂದ ಬಣ್ಣ ಬಳೀತಾನೋ ಅಷ್ಟ ಛಂದ ಬಣ್ಣದ ಆಟಾ ಮುಗಿಲ್ನ್ಯಾಗ ಆಡ್ತಾನಾ.

 

ಹುಟ್ಟಬೇಕಾದ್ರ ಒಂದ್ ಥರಾ ಛಂದ್ಇದ್ರ ಮುಳಗಬೇಕಾದ್ರ ಇನ್ನೊಂದ್ ಥರಾ ಛಂದ್ ನೋಡ್ರಿ. ಇಳಿಯೋ ಸೂರ್ಯ ಒಂದ್ ಅಧ್ಭುತ ಸಂದೇಶ ಕೊಡ್ತಾನ ನಮಗೆಲ್ಲ! ಅದೇನಪಾ ಅಂದ್ರ ‘ಏರಬೇಕಾದ್ರ ಎಷ್ಟ್ ಖುಷಿ ಇರ್ತೇತ್ಯೋ ಇಳಿಬೇಕಾದ್ರು ಅಷ್ಟ ಖುಷಿ ಇರ್ಲಿ ‘ ಅಂತ! ಜೀವನಾ ಅಂದ್ರ ಏರೋದು ಇಳಿಯೂದು ಅಲ್ಲೇನ್ರಿ? 🙂

 

ಸೂರ್ಯಾಸ್ಥ ನೋಡೂ ಎಷ್ಟ್ ಜಾಗಾ ಅದಾವ್ ಅಲ್ರಿ? – ನಮ್ಮ್ ‘ಆಗುಂಬೆಯಾ ಪ್ರೇಮಸಂಜೆಯಾ’ ಹಾಡ್ ನೆನಪಾತ್ ರೀ 😀 ಅದೂ ವಸಂತ ಋತು ಬಂದ್ರಂತೂ ಹಬ್ಬಾನ ಹಬ್ಬಾ. ಸೂರ್ಯಾಸ್ಥ ಛಂದನೋ ಏನ್ ಸೂರ್ಯ ಮುಗಿಲಿನ ಎತ್ತರಕ್ಕ ಏರಿದ್ದು ನೋಡಿ ಖುಷಿ ಆಗಿ ಅರಳಿದ್ದ ಹೂವು ಹುಲ್ಲು ಛಂದನೋ ಅಂತ ಗೊತ್ತಾಗಂಗಿಲ್ಲ !

 

ಇದನ್ನ ನಾನು ನನ್ನ ಸೇರಿಹಿಡದೇನಿ ನೋಡ್ರಿ!

image.png

 

image.png
__________________________________________________________________________________
ವಿ.ಸೂ: ಇಂದಿಗೆ ನನ್ನ ಲೆಕ್ಕದ ಮೂರು ತಿಂಗಳು ಮುಗಿಯಿತು. ಲೇಖನಗಳು, ಕವನಗಳು, ಅಭಿಪ್ರಾಯಗಳು, ಆಗಾಗ ಮೆಚ್ಚುಗೆಯ ಮಾತು, ಮತ್ತೆ, ಅಪರೂಪಕ್ಕೊಮ್ಮೆ, ಟೀಕೆಯ ಚುಚ್ಚುಗಳಲ್ಲಿ ನನ್ನನ್ನು ಸಲಹಿದ ಅನಿವಾಸಿ ಓದುಗರಿಗೆ ಮತ್ತು ಲೇಖಕ ಬಳಗಕ್ಕೆ ನನ್ನ ವಿನಮ್ರ ನಮನಗಳು. ಹಾಗೆಯೇ, ಈ ಅವಕಾಶ ಕೊಟ್ಟ ಮತ್ತು ಅಲ್ಲಲ್ಲಿ ಕಂಡ ತಪ್ಪುಗಳನ್ನು ಒಪ್ಪಾಗಿಸುವಲ್ಲಿ ತಾಳ್ಮೆಯಿಂದ ತಿದ್ದಿದ ಶ್ರೀವತ್ಸ ದೇಸಾಯಿ ಮತ್ತು ಇತರ ಹಿರಿಯ ಅನಿವಾಸಿ ಸಂಪಾದಕ ತಂಡಕ್ಕೆ ಧನ್ಯತೆಯ ನಮನಗಳು. ಅನಿವಾಸಿಯ ಈ ತಾಣ ಬೆಳೆಯಲಿ; ಬರುವ  ದಿನಗಳಲ್ಲಿ ಯುಕೆಯಲ್ಲಿ ಕನ್ನಡವನ್ನು ಮುಂದಿನ ಪೀಳಿಗೆಗೆ ಕಲಿಸಿ, ಉಳಿಸುವಲ್ಲಿ ದೊಡ್ಡ ಪಾತ್ರ ವಹಿಸಲಿ ಎಂದು ಹಾರೈಸುತ್ತ … Good Bye for now.

 

ಮಾತುಮಾತಲ್ಲಿ ರೂಪಕಗಳ ಗಿರೀಶ ಕಾಸರವಳ್ಳಿ 

ವಿಶ್ವವಿಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಆಲೋಚನೆ, ಅನುಭವವನ್ನು  ಮಾತು-ಮಾತಿನಲ್ಲಿ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ, ಅನಿವಾಸಿ ಬಳಗಕ್ಕೆ ಚಿರಪರಿಚಿತರಾದ ಡಾ. ಶಿವಪ್ರಸಾದ್. ಓದಿ. ನೋಡಿ. ನಿಮ್ಮ ಅನಿಸಿಕೆಯನ್ನು ಅನಿವಾಸಿಯಲ್ಲಿ ಹಂಚಿಕೊಳ್ಳಿ. 
ಇದರ ಜೊತೆಗೆ, ಪತ್ತಾರರು ಸೆರೆಹಿಡಿದ ಚೈತ್ರದ ಹೂಗಳ ಕಣ್ಣೋಟ.

 

image.png

 

ಪದ್ಮಶ್ರೀ ಡಾ. ಗಿರೀಶ್ ಕಾಸರವಳ್ಳಿ ಅವರು ಯು.ಕೆ. ಕನ್ನಡ ಬಳಗದ ಯುಗಾದಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಇಂಗ್ಲೆಂಡಿಗೆ ಆಗಮಿಸಿದಾಗ ಅವರನ್ನು ಸಂದರ್ಶಿಸುವ ಒಂದು ಅಪೂರ್ವ ಅವಕಾಶ ನನಗೆ ಒದಗಿ ಬಂದಿತು. ಗಿರೀಶ್ ಕಳೆದ ನಾಲ್ಕು ದಶಕಗಳಿಂದ ಉತ್ಕೃಷ್ಠ ಕಲಾತ್ಮಕ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಅವರು ನಿರ್ದೇಶಿಸಿದ ಹದಿನಾಲ್ಕು ಚಿತ್ರಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆ. ಅವರು ತೆಗೆದ ನಾಲ್ಕು ಚಿತ್ರಗಳಿಗೆ ಸ್ವರ್ಣ ಕಮಲ ಪ್ರಶಸ್ತಿ ದೊರಕಿದೆ. ಇವುಗಳಲ್ಲದೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಕುವೆಂಪು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಹೀಗೆ ಅನೇಕ ಪುರಸ್ಕಾರಗಳು ದೊರಕಿದೆ. ಇಂತಹ ಒಬ್ಬ ಮಹಾನ್ ನಿರ್ದೇಶಕರಾದ ಗಿರೀಶ್ ಅವರನ್ನು ಸಂದರ್ಶನದ ಬಗ್ಗೆ ವಿನಂತಿಸಿಕೊಂಡಾಗ ಅವರು ಯಾವ ಬಿಗುಮಾನಗಳಿಲ್ಲದೆ ಕೂಡಲೇ ಸಮ್ಮತಿಸಿದರು.

 

ಹಾಗೆ ನೋಡಿದರೆ ನಾನು ಪತ್ರಕರ್ತನೂ ಅಲ್ಲ ಅಥವಾ ಚಿತ್ರ ವಿಮರ್ಶಕನೂ ಅಲ್ಲ! ನಾನು ಉಳಿದವರಂತೆ ಅವರ ಕಲಾತ್ಮಕ ಚಿತ್ರಗಳ ಅಭಿಮಾನಿಯಷ್ಟೇ. ಗಿರೀಶ್ ಅವರು ಮಿತಭಾಷಿ, ಅಂತರ್ಮುಖಿ ಎಂದು ಕೇಳಿ ತಿಳಿದಿದ್ದ ನನಗೆ ಅವರೊಡನೆ ಕೆಲವು ಸಮಯ ಇಂಗ್ಲೆಂಡಿನಲ್ಲಿ ಕಳೆದಾಗ ನನ್ನ ಅನಿಸಿಕೆಗಳು ಬದಲಾದವು. ಅವರೊಡನೆ ರಾಜಕೀಯ, ಸಾಹಿತ್ಯ, ಸಿನೆಮಾ ಹೀಗೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದಾಗ ಅವರ ಅರಿವಿನ ವಿಸ್ತಾರ ನನಗೆ ನಿಲುಕಿತು. ಅವರ ಸೌಜನ್ಯ ಮತ್ತು ನೇರ, ಸರಳ ವ್ಯಕ್ತಿತ್ವದಿಂದಾಗಿ ಅವರ ಸ್ನೇಹ, ಸಹವಾಸ ಸುಲಭವೆನಿಸಿತು. ಇಂಗ್ಲೆಂಡಿನ ಅನಿವಾಸಿ ಕನ್ನಡಿಗರೊಂದಿಗೆ ನಿಸ್ಸಂಕೋಚವಾಗಿ ಬೆರತ ಗಿರೀಶ್ ಎಲ್ಲರಿಗೂ ಹತ್ತಿರವಾಗಿಬಿಟ್ಟರು. ನನಗೆ ಹತ್ತಿರವಾದದ್ದು ಅವರ ಸ್ಥಿತಪ್ರಜ್ಞತೆ! ಯಾವುದೇ ವಿಚಾರದ ಬಗ್ಗೆ ಭಾವುಕರಾಗಿ ಅಥವಾ ಉದ್ವೇಗದಿಂದ ಹರಟಿದ್ದು ನಾನು ಕಾಣಲಿಲ್ಲ. ಅವರ ಸಿನಿಮಾ ಬಗ್ಗೆ ಮಾತನಾಡುವಾಗ ಅಲ್ಲಿ ತೀವ್ರ ಭಾವನೆಗಳನ್ನು ಆಸಕ್ತಿಯನ್ನು ಗುರುತಿಸಬಹುದಾಗಿತ್ತು. ನಿನ್ನೆ ಮತ್ತು ನಾಳೆಗಳ ಬಗ್ಗೆ ತಲೆ ಕೆಡೆಸಿಕೊಳ್ಳದೆ ವರ್ತಮಾನದಲ್ಲಿನ ಬದುಕನ್ನು ಅನುಭವಿಸಿ, ಇಂದಿನ ಆಗು-ಹೋಗುಗಳಿಗೆ ಸ್ಪಂದಿಸಿ ಅದನ್ನು ತಮ್ಮ ಚಿತ್ರಗಳ ಮೂಲಕ ದಾಖಲಿಸಿ ಪ್ರೇಕ್ಷಕರೊಂದಿಗೆ ಸಂವಾದದಲ್ಲಿ ತೊಡಗುವ ಹಂಬಲ ಗಿರೀಶ್ ಅವರದ್ದು. ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ನಿರ್ದೇಶಕನೆಂಬ ಯಶಸ್ಸಿನ ಅಮಲು ಅವರಲ್ಲಿ ಕಂಡುಬರುವುದಿಲ್ಲ. “ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನವೆಂಬ” ನಿರ್ಲಿಪ್ತ ಮನೋಭಾವ ತಳೆದವರು ಗಿರೀಶ್.

 

ಸ್ತ್ರೀ ಸ್ವಾತಂತ್ರ, ಸಾಮಾಜಿಕ ನ್ಯಾಯ, ಇಲ್ಲದವರ ಬಗ್ಗೆ ಅನುಕಂಪೆ, ಗೊಡ್ಡು ಸಂಪ್ರದಾಯಗಳನ್ನು ಧಿಕ್ಕರಿಸಿ, ವ್ಯವಸ್ಥೆಯ ಹುಳುಕುಗಳ ಬಗ್ಗೆ ಧ್ವನಿ ಎತ್ತಿ, ವೈಚಾರಿಕ ನಿಲುವನ್ನು ಪ್ರಚೋದಿಸುವ ಡಾ ಜಿ. ಎಸ್ ಎಸ್. ಅವರ ಕಾವ್ಯ ಮತ್ತು ಚಿಂತನೆಗಳ ಬಗ್ಗೆ ಅರಿವಿದ್ದ ನನಗೆ ಈ ಅಂಶಗಳನ್ನು ಗಿರೀಶ್ ಅವರ ಚಿತ್ರಗಳಲ್ಲಿ ಮತ್ತು ಅವರ ಸಂವಾದದಲ್ಲಿ ಗುರುತಿಸಲು ಸಾಧ್ಯವಾಯಿತು. “ಸ್ತ್ರೀ ಎಂದರೆ ಅಷ್ಟೇ ಸಾಕೆ” ಎಂಬ ಕವನದ ಸಾಲುಗಳ ಹಿನ್ನೆಲೆಯಲ್ಲಿ ದ್ವೀಪ ಚಿತ್ರದ ನಾಗಿಯನ್ನು ಕಾಣಬಹುದು. “ಜಲವಿಲ್ಲದ ನೆಲಗಳಲ್ಲಿ ಕಮರುತಿರುವ ಕುಡಿಗಳೇ” ಎಂಬ ಕವನದ ಸಾಲಿನಲ್ಲಿ ಕನಸೆಂಬ ಕುದುರೆಯನೇರಿ ಚಿತ್ರದ ಈರ್ಯನನ್ನು ಗುರುತಿಸಬಹುದು.

 

ಸಾಹಿತ್ಯಕ್ಕಿಂತ ಸಿನಿಮಾ ಹೆಚ್ಚು ಪ್ರಬಲವಾದ ಮಾಧ್ಯಮ ಎಂಬ ವಿಚಾರದ ಅರಿವು ಮತ್ತು ಅರವತ್ತು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಮತ್ತು ಕಲೆಗಳಲ್ಲಿ ಸಂಭವಿಸಿದ ನವೋದಯದ ಹೊಸ ಅಲೆ ಗಿರೀಶ್ ಅವರ ಸಿನಿಮಾ ಆಸಕ್ತಿಯನ್ನು ಕೆರಳಿಸಿತು ಎಂಬ ವಿಚಾರದೊಂದಿಗೆ ನಮ್ಮ ಸಂವಾದ ಶುರುವಾಯಿತು. ವಂಶವೃಕ್ಷ, ಸಂಸ್ಕಾರ ಈ ರೀತಿಯ ಚಿತ್ರಗಳು ಅವರನ್ನು ಫಾರ್ಮಸಿ ಕ್ಷೇತ್ರದಿಂದ ಸಿನಿಮಾದೆಡೆಗೆ ಸೆಳೆದಿದ್ದು ಸ್ವಾರಸ್ಯಕರವಾದ ಸಂಗತಿ. ಕಾಲಘಟ್ಟದ ಮಹಿಮೆ ಹಲವಾರು ಕವಿಗಳನ್ನು, ಸಾಹಿತಿಗಳನ್ನು ಮತ್ತು ಗಿರೀಶರಂಥ ಪ್ರತಿಭಾವಂತ ನಿರ್ದೇಶಕರನ್ನು ರೂಪಿಸಿರುವುದು ನಿಜವಾದ ಸಂಗತಿ.

 

ಶಬ್ದಗಳ ಮೂಲಕ ಅಭಿವ್ಯಕ್ತಗೊಂಡ ಸಾಹಿತ್ಯವನ್ನು ಸಿನಿಮಾಗಳಲ್ಲಿ ದೃಶ್ಯಗಳ ಮೂಲಕ ಕಟ್ಟುವ ಪ್ರಯತ್ನವಾದ್ದರಿಂದ ಸಾಕಷ್ಟು ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ ಎನ್ನುತ್ತಾರೆ ಗಿರೀಶ್. ಅವರ ಬಹುತೇಕ ಸಿನಿಮಾಗಳು ಕಥೆ ಕಾದಂಬರಿಗಳನ್ನು ಆಧರಿಸಿವೆ ಎಂಬ ವಿಚಾರವನ್ನು ಅವರ ಸಿನಿಮಾ ವೀಕ್ಷಕರು ಗಮನಿಸಬಹುದು. ಒಂದು ಕಾಲಘಟ್ಟಕ್ಕೆ ಸೀಮಿತವಾದ ಕಥೆಯನ್ನು ಸಮಕಾಲೀನ ಸ್ಥಿತಿಗೆ ಅನ್ವಯವಾಗುವಂತೆ ಅವರು ಮಾರ್ಪಾಡುಗಳನ್ನು ಮಾಡುತ್ತಾರೆ. ಒಂದು ಕಥೆ ಕಾಲದ ಚೌಕಟ್ಟಿನಲ್ಲಿ ಸ್ತಬ್ಧಗೊಳ್ಳದೆ ಸಂವಾದವನ್ನು ಮುಂದುವರಿಸುವ ಸಾಧನವಾಗಬೇಕೆಂಬುದು ಗಿರೀಶ್  ಅವರ ಉದ್ದೇಶ. ಈ ಮಾರ್ಪಾಡುಗಳು ಪ್ರಾಮಾಣಿಕ ಪ್ರಯತ್ನಗಳಾಗಿರಬೇಕು, ವ್ಯಾವಹಾರಿಕ ಅನುಕೂಲ ಕಾರಣಗಳಿಂದಾಗಿ ಬದಲಾಯಿಸಬಾರದು ಎನ್ನುವದು ಅವರ ನಂಬಿಕೆ.

 

ಒಂದು ಸಿನಿಮಾಗೆ ಸಮಾಜದಲ್ಲಿ ಪರಿವರ್ತನೆಗಳನ್ನು ತರುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ, ‘ಸಿನಿಮಾಗೆ ಪ್ರಬಲವಾದ ಶಕ್ತಿಯಿದೆ ಅದು ಅಭಿಪ್ರಾಯವನ್ನು ಬೇರೆಯವರ ಮೇಲೆ ಹೇರದೆ ಒಳ ಸಂವಾದವನ್ನು ಹುಟ್ಟು ಹಾಕಬೇಕು, ಒಂದು ಕಥೆ ಒಬ್ಬ ವ್ಯಕ್ತಿಯ ಆಲೋಚನಾ ಕ್ರಮವನ್ನು ಅರಳಿಸಬೇಕು ಹೊರತು ಕೆರಳಿಸಬಾರದು.  ಹೀಗಾಗದಿದ್ದಲ್ಲಿ ಅದು ಫ್ಯಾಸಿಸ್ಟ್ ಜೀವನಕ್ರಮದ ಸಿನಿಮಾ ಎಂದು ಗುರುತಿಸಬೇಕಾಗುತ್ತದೆ’ ಎನ್ನುತ್ತಾರೆ ಗಿರೀಶ್. ಸಿನಿಮಾ ಅಭಿಪ್ರಾಯಗಳು ನಮ್ಮನ್ನು ಅರಳಿಸಿದಾಗ ನಮ್ಮ ಆಲೋಚನಾ ಕ್ರಮದಿಂದ ಸಿನಿಮಾ ಕೂಡ ಬೆಳೆಯುವ ಸಾಧ್ಯತೆಯನ್ನು ಅವರು ಗಮನಿಸಿದ್ದಾರೆ. ಸಿನಿಮಾ ಒಂದು ಸಂಸ್ಕೃತಿಯ ಕನ್ನಡಿಯಾಗಿರಬೇಕು, ಅದು ವಾಣಿಜ್ಯ ದೃಷ್ಟಿಯಿಂದ ವಾಸ್ತವ ಬದುಕಿಗೆ ದೂರವಾಗಿ ಯಾವುದೋ ಕಾಲ್ಪನಿಕ ಪ್ರಪಂಚವನ್ನು ಕಟ್ಟುವ ಪ್ರಯತ್ನವಾಗಬಾರದು ಎಂದು ಇನ್ನೊಂದು ವೇದಿಕೆಯಲ್ಲಿ ಗಿರೀಶ್ ಪ್ರಸ್ತಾಪಿಸಿದ್ದನ್ನು ನಾನು ಇಲ್ಲಿ ನೆನೆಯುತ್ತೇನೆ.

 

ಒಂದು ಕಲಾತ್ಮಕ ಚಿತ್ರ ಒಂದೇ ನೋಟಕ್ಕೆ ಸಿಗದಿರುವುದರ ಬಗ್ಗೆ ಅವರಿಗೆ ಚಿಂತೆ ಇಲ್ಲ. ಮತ್ತೆ ಮತ್ತೆ ವೀಕ್ಷಿಸಿದಾಗ ಚಿತ್ರ ಬೇರೆ ಅರ್ಥಗಳನ್ನು ಕಂಡುಕೊಳ್ಳುವ ಅವಕಾಶ ತೆರೆದಾಗ ಅದು ಉತ್ಕೃಷ್ಟ ಕಲೆಯಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಕಥೆಯಿಂದ ನೇರ ಉತ್ತರ ಪಡೆಯಲಿಲ್ಲ ಎಂದು ಟೀಕೆ ಮಾಡುವುದರ ಬದಲು ಪ್ರೇಕ್ಷಕನೇ ಉತ್ತರವನ್ನು ಕಂಡುಕೊಳ್ಳಬೇಕು, ಹೀಗೆ ಪ್ರೇಕ್ಷಕನಿಗೂ ಒಂದು ಜವಾಬ್ದಾರಿ ಇದೆ ಎಂಬ ಗಂಭೀರವಾದ ವಿಚಾರವನ್ನು ಅವರು ಸಂದರ್ಶನದಲ್ಲಿ ಪ್ರಸ್ತಾಪಿಸಿದರು.

 

image.png

 

ಗಿರೀಶ್ ಅವರು ತಮ್ಮ ಚಿತ್ರಗಳಲ್ಲಿ ಬಹಳಷ್ಟು ರೂಪಕಗಳನ್ನು ಬಳಸುತ್ತಾರೆ. ಅದು ಚಿತ್ರಕ್ಕೆ ಹೇಗೆ ಪೂರಕವಾಗುತ್ತದೆ ಎಂಬ ವಿಚಾರ ಬಂದಾಗ ರೂಪಕಗಳಿಗೆ ಒಂದು ವಿಶೇಷ ಶಕ್ತಿ ಇದೆ. ಅದು ಇಂದಿನ ಕಥೆಯನ್ನು ನೆನ್ನೆಯ ಕಥೆಯಾಗಿಸಬಹುದು ಅಥವಾ ನಾಳೆಯ ಕಥೆಯಾಗಿಸಬಹುದು. ಚೋಮ ಅಥವಾ ತಬರ ಎಂಬ ರೂಪಕಗಳ ಮೂಲಕ ಇಡೀ ಕಾಲಘಟ್ಟವನ್ನು ಪರಿಚಯಿಸುವ ಶಕ್ತಿ ಇದೆ. ರೂಪಕಗಳಿಲ್ಲದ ಚಿತ್ರಗಳು ಬರೀ ವಸ್ತು ಸ್ಥಿತಿಯನ್ನು ಹೇಳುವ ಸಾಕ್ಷ್ಯಚಿತ್ರಗಳಾಗುತ್ತವೆ ಎಂಬುದು ಅವರ ಅಭಿಪ್ರಾಯ.

 

ಗಿರೀಶ್ ಅವರು ಮಕ್ಕಳ ಪಾತ್ರಗಳನ್ನು ತಂದು ಅದಕ್ಕೆ ಮಾನ್ಯತೆ ನೀಡಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಅವರ ಪ್ರಕಾರ ದೊಡ್ಡವರ ಜಗತ್ತು ವ್ಯಾವಹಾರಿಕವಾದರೆ ಮಕ್ಕಳ ಜಗತ್ತು ಭಾವನಾತ್ಮಕ. ಮಕ್ಕಳು ಮುಗ್ಧ ಮಾನವೀಯ ನೆಲೆಯಲ್ಲಿ ಸಮಾಜವನ್ನು ಅರ್ಥಮಾಡಿಕೊಳ್ಳುತ್ತಾರೆ, ಅದು ಮನುಷ್ಯ ಸಂಬಂಧವಾದ ಜಗತ್ತು. ದೊಡ್ಡವರ ಮತ್ತು ಮಕ್ಕಳ ಗ್ರಹಿಕೆಗಳನ್ನು ಒಂದರ ಪಕ್ಕ ಇನ್ನೊಂದನ್ನಿಟ್ಟು ಒರೆಹಚ್ಚಿ ನೋಡಿದಾಗ ಯಾವುದು ಸರಿ ಯಾವುದು ತಪ್ಪು ಎಂದು ವಿಶ್ಲೇಷಿಸುವುದು ಕಷ್ಟ, ಈ ಸರಿ ತಪ್ಪುಗಳ ನಡುವೆ ಎಲ್ಲೋ ಸತ್ಯ ಅಡಗಿರಬಹುದು ಎಂಬ ನಿಗೂಢವಾದ ವಿಚಾರಗಳನ್ನು ಅವರ ಹೇಳಿದಾಗ ನನಗೆ ಮಧ್ಯಪೂರ್ವ ದೇಶದಲ್ಲಿ ನಡೆಯುತ್ತಿರುವ ಯುದ್ಧ, ಸಹಿಷ್ಣುತೆ, ಧರ್ಮ, ರಾಜಕೀಯ, ನಿರಾಶ್ರಿತರು ಹೀಗೆ ಹಲವಾರು ಚಿತ್ರಗಳು ಸ್ಮೃತಿಪಟಲದಲ್ಲಿ ಮೂಡಿ ಮಾಯವಾದವು.

 

ಗಿರೀಶ್ ಅವರ ಪ್ರಕಾರ ಒಂದು ಉತ್ತಮವಾದ ಹಾಗೂ ಪುರಸ್ಕಾರಗಳಿಗೆ ಯೋಗ್ಯವಾದ ಸಿನಿಮಾ ಎಂದರೆ ಆ ಚಿತ್ರದಲ್ಲಿನ ಕಥೆಯ ನಿರ್ವಹಣೆ ಯಾವ ರೀತಿ ಇದೆ? ಚಿತ್ರ ಪಾತ್ರಗಳನ್ನು ಎಳೆ ಎಳೆಯಾಗಿ ಬಿಡಿಸಿ ನೋಡಲು ಅವಕಾಶ ಮಾಡಿಕೊಟ್ಟಿದೆಯೇ? ಕಥೆಯಲ್ಲಿ ಅದರದೇ ಆದ ಪರಿಭಾಷೆ ಇದೆಯೇ? ಇದು ಎಷ್ಟರ ಮಟ್ಟಿಗೆ ಸಾರ್ವತ್ರಿಕವಾಗಿದೆ? ಎಷ್ಟರ ಮಟ್ಟಿಗೆ ಪ್ರಾಯೋಗಿಕವಾದ ಸ್ವರೂಪ ಪಡೆದುಕೊಂಡಿದೆ? ಈ ವಿಚಾರಗಳು ಅವರು ಚಿತ್ರೋತ್ಸವದ ನಿರ್ಣಯ ಮಂಡಳಿಯಲ್ಲಿ ಕುಳಿತಾಗ ಬಹಳ ಮುಖ್ಯವಾಗುತ್ತವೆ ಎಂದು ತಿಳಿಪಡಿಸಿದರು. ಉತ್ತಮ ದರ್ಜೆಯ ಪ್ರಾಯೋಗಿಕ ಸಿನೆಮಾ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಆದರೆ ಅದರ ಪ್ರದರ್ಶನಕ್ಕೆ ಅವಕಾಶ ಕಡಿಮೆಯಾಗಿರುವುದರ ಬಗ್ಗೆ ಅವರಿಗೆ ಅಸಮಾಧಾನವಿದ್ದಂತೆ ತೋರುತ್ತದೆ. ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳ ಮಹಾಪೂರದಲ್ಲಿ ಕಲಾತ್ಮಕ ಹಾಗೂ ಪ್ರಾಯೋಗಿಕ ಚಿತ್ರಗಳ ಅಳಿವು ಉಳಿವಿನ ಬಗ್ಗೆ ಗಿರೀಶ್ ಅವರಿಗೆ  ಹೆಚ್ಚಿನ ಕಾಳಜಿ ಇಲ್ಲದಿರುವುದು ಅವರ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ.

 

ಕ್ರಿಯಾಶೀಲರಾದ ಗಿರೀಶ್ ಅವರಿಗೆ ನಿವೃತ್ತಿ ಎಂಬ ನಿಬಂಧನೆ ಇಲ್ಲ. ಗಿರೀಶ್ ಅವರು ಈ ವರ್ಷ ಒಂದು ಹೊಸ ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ನೆಮ್ಮದಿಯ ಸಂಗತಿಯಾಗಿದೆ. ‘A picture is worth a thousand words’ ಎಂಬ ಉಕ್ತಿ ನಮಗೆಲ್ಲ ತಿಳಿದಿದೆ. ಹೀಗಾಗಿ ನಾನು ಸಂದರ್ಶನದ ಬಗ್ಗೆ ಇನ್ನು ಹೆಚ್ಚು ಬರೆಯಬೇಕಿಲ್ಲ.  ಈ ಸಂದರ್ಶನವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಅದನ್ನು ಸಂಪೂರ್ಣವಾಗಿ ಯೂಟ್ಯೂಬಿನಲ್ಲಿ ವೀಕ್ಷಿಸಲು ಅನುವು ಮಾಡಿಕೊಟ್ಟ ನನ್ನ ಮಿತ್ರರಾದ ಡಾ.ದೇಸಾಯಿ ಅವರಿಗೆ ಮತ್ತು ಗಿರೀಶ್ ಅವರನ್ನು ಇಂಗ್ಲೆಂಡಿಗೆ ಆಹ್ವಾನಿಸಿದ ಯು.ಕೆ. ಕನ್ನಡ ಬಳಗಕ್ಕೆ ನನ್ನ ಧನ್ಯವಾದಗಳು. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಆಹ್ವಾನವನ್ನು ಮನ್ನಿಸಿ ಇಲ್ಲಿಗೆ ಆಗಮಿಸಿ ಈ ಸಂದರ್ಶನವನ್ನು ನಡೆಸಿಕೊಟ್ಟ ಗಿರೀಶಕಾಸರವಳ್ಳಿ ಅವರಿಗೆ ಅನಂತ ವಂದನೆಗಳು.

 

ಸಂದರ್ಶನದ ಯೂಟ್ಯೂಬ್ ವಿಡಿಯೋ ಕೊಂಡಿಗಳು (ಲಿಂಕ್): 

 

 

__________________________________________________________________________________
ಕಣ್ಣೋಟ
image.png
ಈ ವಾರದ ಚಿತ್ರಗಳು, ಟೆಲ್ಫರ್ಡ್ ವಾಸಿ, ಸರ್ಜನ್ ಜಯಪ್ರಕಾಶ್ ಪತ್ತಾರ, ಚೈತ್ರದ ಹೂಗಳ ಅಂದವನ್ನ ಅವರ ಕ್ಯಾಮೆರಾ ಕಣ್ಣಿಂದ ಕಂಡ ಚಿತ್ರಗಳು.

 

ಪತ್ತಾರರ ಚಿತ್ತಾರ ೧

image.png

70mm f/9 1/320 sec ISO 800

 

ಪತ್ತಾರರ ಚಿತ್ತಾರ ೨

image.png

70mm 1/160 sec f/22 ISO 100