ಬ್ರಸೀಲ್ ಡೈರಿ: ಆನಂದ ಕೇಶವಮೂರ್ತಿ

ಲೇಖಕರು: ಆನಂದ ಕೇಶವಮೂರ್ತಿ

 ಪ್ರವಾಸ ಕಥನ ಬರೆಯುವುದು ಸುಲಭವಲ್ಲ.  ಗೂಗಲಿಸಿದರೆ ಸಾಕು ನೂರಾರು ಜಾಲತಾಣಗಳಿಂದ ಮಾಹಿತಿ ಸಿಗುತ್ತದೆ, ಲಕ್ಷಾಂತರ ಫೋಟೋಗಳು ಸಿಗುತ್ತವೆ. ಪ್ರವಾಸ ನಮಗೆ ಅಪ್ಯಾಯಮಾನವಾಗುವುದು ನಮ್ಮ ಅನುಭವಗಳಿಂದ. ನಿಮಗೆ ಗೂಗಲಿನಲ್ಲಿ ಸಿಗದಿರುವ ಕೆಲವು ವಿಷಯಗಳನ್ನು ಆನಂದ ಹಂಚಿಕೊಂಡಿದ್ದಾರೆ. 

`ಅನಿವಾಸಿ ಯುಕೆ` ಬಳಗದ ಲೇಖಕರ ಬಳಗಕ್ಕೆ ಇನ್ನೊಬ್ಬ ಲೇಖಕರ ಸೇರ್ಪಡೆ! ತುಂಬ ಓದುವ ಆನಂದ ಕೇಖವಮೂರ್ತಿಯವರು ಮೊಟ್ಟಮೊದಲ ಸಲ `ಅನಿವಾಸಿ`ಗೆ ಬರೆದಿದ್ದಾರೆ. ಆನಂದ ಅವರು ಇನ್ನೂ ಹೆಚ್ಚು ಬರೆಯಲಿ ಎಂದು ಆಶಿಸುತ್ತೇನೆ. ಆನಂದ ಮತ್ತು ಅನ್ನಪೂರ್ಣಾ ಅವರು ತಮ್ಮ ಬ್ರಸೀಲ್ ಪ್ರವಾಸದ ಡೈರಿಯಿಂದ ಆರಿಸಿದ ತುಣುಕುಗಳು ಇಲ್ಲಿವೆ.  – ಸಂ

ಇಂಗ್ಲೀಷೂ ಬ್ರಸೀಲೂ:

ಅಮೆಜಾನ್ ಎಕೋ ಲಾರ್ಡ್ ಇಂದ ಮಾನುಅಸ್ (Manaus) ನಗರದ ಹೋಟೆಲ್ ಗೆ ಹೋಗುತ್ತಾ ಇದ್ದೀವಿ. ಬೋಟಿನಲ್ಲಿ ರಿಯೋ ನೀಗ್ರೋ ನದಿ ದಾಟಿ ಟ್ಯಾಕ್ಸಿಯಲ್ಲಿ ಹೋಟೆಲ್ ಹೋಗುತ್ತಿರುವಾಗ ಮುಂದಿನ ದಿನದ ಕಾರ್ಯಕ್ರಮ ಬಗ್ಗೆ ಯೋಚನೆ ಶುರುವಾಯಿತು. ಯಾಕೆಂದರೆ ಟ್ಯಾಕ್ಸಿ ಡ್ರೈವರ್ ನಮ್ಮ ಗೈಡ್ ಅಲ್ಲ ಅಂತ ಗೊತ್ತಾಯ್ತು. ಅವನ ಕೆಲಸ ನಮ್ಮನ್ನು ಹೋಟೆಲ್ ತಲುಪಿಸುವುದು ಮಾತ್ರ ಅಂತ ಹೇಳಿದ. ಪುಣ್ಯ ಅವನಿಗೆ ಇಂಗ್ಲಿಷ್ ಬರುತ್ತಿತ್ತು.

ನಮ್ಮ ನಿಗದಿತ ಕಾರ್ಯಕ್ರಮದ ಪ್ರಕಾರ ಮುಂದಿನ ದಿನ ನಾವು 150 ಕಿಲೋ ಮೀಟರ್ ದೂರದ Presidente Fugueiredo ರಾಷ್ಟ್ರೀಯ ಉದ್ಯಾನವನದಲ್ಲಿ ಫಾಲ್ಸ್ ನೋಡಲು ಹೋಗಬೇಕಿತ್ತು. ಆದರೆ ಎಷ್ಟು ಹೊತ್ತಿಗೆ ಮತ್ತು ಯಾರು ಕರೆದುಕೊಂಡು ಹೋಗುತ್ತಾರೆ ಅಂತ ಗೊತ್ತಿರಲಿಲ್ಲ. ಹೋಟೆಲ್ ತಲುಪಿದಾಗ ಅವರಿಗೂ ಇದರ ಮಾಹಿತಿ ಇರಲಿಲ್ಲ. ನಮ್ಮ ಟ್ಯಾಕ್ಸಿ ಡ್ರೈವರ್ ಗೆ ನಮ್ಮ ಮುಂದಿನ ದಿನದ ಪ್ರವಾಸ ಇರುವ coupon ತೋರಿಸಿದವು. ಅವನು ತಕ್ಷಣ ಆ ಕಂಪನಿಗೆ ಫೋನ್ ಮಾಡಿ ಬೆಳಗ್ಗೆ 8 ಗಂಟೆಗೆ ತಯಾರು ಇರಿ, ನೀರಿನಲ್ಲಿ ಇಳಿಯಲು ಬೇಕಾಗುವ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಅಂತ ತಿಳಿಸಿದ.

ಮುಂದಿನ ದಿನ ಬೇಗ ಎದ್ದು ತಿಂಡಿ ತಿಂದು ನೀರಿಗಿಳಿಯಲು ಸರಿಯಾದ ಬಟ್ಟೆ ಟವಲ್ ಇಟ್ಟುಕೊಂಡು ಕಾಯುತ್ತಾ ಕುಳಿತೆವು. ಸುಮಾರು ಎಂಟೂವರೆ ಗಂಟೆಗೆ ಒಬ್ಬ ಹೋಟೆಲ್ ಒಳಗೆ ಬಂದು ಯಾರನ್ನೋ ಹುಡುಕುತ್ತಿದ್ದ. ನಮ್ಮನ್ನೇ ಹುಡುಕುತ್ತಿರಬಹುದು ಎಂದು ಅನುಮಾನಿಸಿ ಅವನನ್ನು ಮಾತಾಡಿಸಿದೆ, ಗೊತ್ತಾಯ್ತು ಅವನಿಗೆ ಇಂಗ್ಲೀಷ್ ಕೊಂಚವೂ ಬರುವುದಿಲ್ಲ ಅಂತ. ಅವನು ಇಂಗ್ಲೀಷ್ ಬರುವ ಇನ್ನೊಬ್ಬನನ್ನು ಕರೆದುಕೊಂಡು ಬಂದ. ಅವನು ನಮಗೆ ಅವನ ಜೊತೆ ಹೋಗಲು ತಿಳಿಸಿ ಅವತ್ತಿನ ಕಾರ್ಯಕ್ರಮ ಬಗ್ಗೆ ಹೇಳಿದ. ಸ್ವಲ್ಪ ಸಮಾಧಾನವಾಯಿತು. ಆದರೆ ದಿನಪೂರ್ತಿ ಇಂಗ್ಲೀಷ್ ಬರದ ಇವನ ಜೊತೆ ಹೇಗೆ ಮಾತಾಡೋದು ಅಂತ ಸ್ವಲ್ಪ ಯೋಚನೆಯಾಯಿತು. ಕಾರಿನಲ್ಲಿ ಇನ್ನೂ ಇಬ್ಬರು ಹುಡುಗರು ಮತ್ತು ಒಂದು ಹುಡುಗಿ ಇದ್ದರು. ಆ ಇಬ್ಬರು ಹುಡುಗರಿಗೆ ಇಂಗ್ಲಿಷ್ ಚೆನ್ನಾಗಿ ಬರುತ್ತಿತ್ತು. ಹುಡುಗಿಗೆ ಇಂಗ್ಲಿಷ್ ಅರ್ಥ ಆಗ್ತಾ ಇತ್ತು. ನಾವು ಆ ಇಟಾಲಿಯನ್ ಹುಡುಗರ ಜೊತೆ ಹಾಗೂ ಬ್ರಝೀಲಿಯನ್ ಹುಡುಗಿಯ ಜೊತೆ ದಿನಪೂರ್ತಿ ಚೆನ್ನಾಗಿ ಮಾತಾಡಿಕೊಂಡು ಇದ್ದೆವು. ಆ ಇಟಾಲಿಯನ್ ಹುಡುಗರು ಒಂದು NGO ಮೂಲಕ ಬ್ರೆಜಿಲಿನ ರೈತರಿಗೆ ಸಹಾಯ ಮಾಡಲು ಬಂದಿದ್ದರು. ನಮ್ಮ ಗೈಡಿಗೆ ಇಂಗ್ಲಿಷ್ ಬರೆದಿರುವುದು ನಮಗೆ ಯಾವುದೇ ತೊಂದರೆ ಆಗಲಿಲ್ಲ.

ಬ್ರಸೀಲಿನ ಅಂಗಡಿ

ರಾಷ್ಟ್ರೀಯ ಉದ್ಯಾನವನ:

Presidente Fugueiredo ರಾಷ್ಟ್ರೀಯ ಉದ್ಯಾನವನದಲ್ಲಿ ಸ್ನಾನ ಮಾಡಲು ಅನುಕೂಲವಾಗಿರುವ ನೀರಿನ ಜಲಪಾತಗಳು ಹಾಗೂ ಸುಮಾರು 150 ಮಿಲಿಯನ್ ವರ್ಷಗಳ ಹಿಂದೆ ಸಮುದ್ರ ಕೊರೆದಿರುವ ಗುಹೆಗಳು ಇವೆ. ಕೆಮ್ಮಣ್ಣುಗುಂಡಿಯ ಕಲ್ಹತ್ತಿಗಿರಿ ಜಲಪಾತ, ಬೆಂಗಳೂರು ಸನಿಹದ pearl valley ಜಲಪಾತ, ಹೊಗೇನಕಲ್ ಜಲಪಾತದ ತರಹ ಇಲ್ಲೂ ಜಲಪಾತದ ಕೆಳಗೆ ನಿಂತು ಆಸ್ವಾದಿಸಬಹುದು; ಸುಮಾರು ನಾಲ್ಕು ಗಂಟೆಗಳ ಕಾಲ ಚೆನ್ನಾಗಿ ಜಲಪಾತದ ಕೆಳಗೆ ಕೂತು ಮೈ ಕೈಯನ್ನು ಮಸಾಜ್ ಮಾಡಿಸಿಕೊಂಡು ಖುಷಿ ಪಟ್ಟೆವು. ಕತ್ತಲಾಗುತ್ತಾ ಬಂದಿದ್ದರಿಂದ ಇಲ್ಲದ ಮನಸ್ಸಿನಿಂದ ನಾವೆಲ್ಲ ಆ ಜಲಪಾತದ ಕೆಳಗಿಂದ ಮತ್ತೆ Manaus ಕಡೆಗೆ ಹೊರಟೆವು.

ಅಂದು ರಾತ್ರಿ ಬ್ರಝೀಲಿಯನ್ ಊಟ ಮಾಡಿ ಸಾಕಾಗಿದ್ದರಿಂದ ಒಂದು ಇಟಾಲಿಯನ್ ರೆಸ್ಟೋರೆಂಟ್ ಗೆ 20 ನಿಮಿಷ ನಡೆದು ಕೊಂಡು ಹೋದೆವು. ಇಲ್ಲಿಯೂ ವೇಟರ್ ತುಂಬಾ ಸಂಯಮದಿಂದ ತನ್ನ ಫೋನ್ ನಲ್ಲಿ ಗೂಗಲ್ ಟ್ರಾನ್ಸ್ಲೇಟ್ ಉಪಯೋಗಿಸಿ ನಮಗೆ ವೆಜಿಟೇರಿಯನ್ pizza ಆಯ್ಕೆ ಮಾಡಲು ಸಹಾಯ ಮಾಡಿದ.

ರಮಣೀಯ ಬ್ರಸೀಲ್

ರಿಯೋ:

ಹಿಂದಿನ ವರ್ಷ ನಾನು ಕೆಲಸದ ಮೇಲೆ ಬ್ರಸೀಲ್ ನ ಸಾವು ಪೋಲೋ ನಗರಕ್ಕೆ ಹೋದಾಗ ಅಲ್ಲಿನ ನನ್ನ ಕೆಲವು ಸ್ನೇಹಿತರು ರಿಯೋ ಡಿ ಜನೈರೋ ದಲ್ಲಿ ನಡೆಯುವ ಕ್ರೈಂ; ಪ್ರವಾಸಿಗಳಿಂದ ದುಡ್ಡು ಆಭರಣ ಮತ್ತು ಬೆಲೆಬಾಳುವ  ವಸ್ತುಗಳನ್ನು ದೋಚುವ ಬಗ್ಗೆ ಬಹಳಷ್ಟು ವಿಚಾರಗಳನ್ನು ತಿಳಿಸಿದ್ದರು. ಅಲ್ಲಿ ಪೊಲೀಸರಿಂದ ಯಾವುದೇ ಸಹಾಯ ಅಪೇಕ್ಷಿಸುವುದು ನಿರುಪಯೋಗ ಅಂತಲೂ ತಿಳಿಸಿದ್ದರು.  ಹೀಗಾಗಿ ಅತ್ಯಂತ ಭಯ ಮತ್ತು ಆತಂಕ ದಿಂದ ನಾವು ಅಕ್ಟೋಬರ್ 20 ರಿಯೋ ಡಿ ಜನೈರೋ ತಲುಪಿದೆವು.

ವಿಮಾನ ಇಳಿದು ನಮ್ಮ ಲಗೇಜ್ ತೆಗೆದುಕೊಂಡು ಹೊರಗೆ ಬಂದಾಗ ನನ್ನ ಹೆಸರು ಹಿಡಿದುಕೊಂಡು ನಿಂತಿದ್ದ ವೇರ(Vera)ಳನ್ನು ನೋಡಿ ನಿರಾಳವಾಯಿತು. ವೇರ ನಮ್ಮನ್ನು ಕೋಪಕಬಾನದಲ್ಲಿ ಇದ್ದ ಹೋಟೆಲಿಗೆ ಬಿಟ್ಟು ಮುಂದಿನ ದಿನ ಬೆಳಗ್ಗೆ ಬಟಾನಿಕಲ್ ಗಾರ್ಡನ್ ಕರೆದುಕೊಂಡು ಹೋಗುತ್ತೇನೆ ಎಂದು ತಿಳಿಸಿ ಹೋದಳು.

ಗುಹೆ

ಕೋಪ ಕಬಾನ:

ಮುಂದಿನ ದಿನ ವೇರಳು ಬಟಾನಿಕಲ್ ಗಾರ್ಡನ್ ಹಾಗೂ ಭಾನುವಾರ ಮಾತ್ರ ಇರುವ ಮಾರ್ಕೆಟ್ ಗೆ ಕರೆದುಕೊಂಡು ಹೋದಳು. ಅಲ್ಲಿ ಆಫ್ರಿಕಾದಿಂದ ಬಂದ ಜನರು ಮಾಡುವ ರಸ್ತೆ ಬದಿ ತಿನಿಸುಗಳನ್ನು ತಿಂದೆವು. ವೇರ ಹೇಳಿಕೊಟ್ಟಂತೆ ರಿಯೋ ಡಿ ಜನೈರೋ ಮೆಟ್ರೋದಲ್ಲಿ ನಮ್ಮ ಹೋಟೆಲಿಗೆ ವಾಪಸ್ ಬಂದೆವು. ಆಗಿನ್ನೂ ಸಾಯಂಕಾಲ, ಬೆಳಕಿತ್ತು; ಹಾಗಾಗಿ ಹೋಟೆಲಿನ ಲಾಕರಿನಲ್ಲಿ ನಮ್ಮ ಎಲ್ಲಾ ಆಭರಣಗಳನ್ನು, ಕ್ಯಾಮೆರಾ ಉಳಿದ ಬೆಲೆಬಾಳುವ ವಸ್ತುಗಳನ್ನು ಇಟ್ಟು ಸ್ವಲ್ಪವೇ ಹಣ ಜೋಬಲ್ಲಿ ಇಟ್ಟುಕೊಂಡು ಕೋಪ ಕಬಾನ ನೋಡಲು ಹೊರಟೆವು. ಕೋಪ ಕಬಾನ ಶಾಂತಿಯುತವಾಗಿ ಕಾಣಿಸಿತು. ನಾನು ನೋಡಿರುವ ಬೀಚುಗಳಲ್ಲಿ ಇದು ತುಂಬಾ ರಮಣೀಯ ಅಂತ ನನ್ನ ಅಭಿಪ್ರಾಯ. ದೊಡ್ಡದಾದ, ಸ್ವಚ್ಛವಾದ, ಸಮುದ್ರದ ಅಲೆಗಳು ಇರುವ ಬೀಚು; ಸಮುದ್ರದ ಉಪ್ಪು ನೀರು ತೊಳೆದುಕೊಳ್ಳಲು ಸಿಹಿ ನೀರಿನ ಶವರುಗಳು ಅಲ್ಲಲ್ಲಿ ಇವೆ; ನಾವು ಅಲ್ಲಿದ್ದ ಸುಮಾರು ಒಂದೂವರೆ ಗಂಟೆಗಳಲ್ಲಿ ಯಾರೂ ಅನುಮಾನಾಸ್ಪದವಾಗಿ ಓಡಾಡುತ್ತಿರಲಿಲ್ಲ. ಇದರಿಂದ ನಮಗೆ ಸ್ವಲ್ಪ ಧೈರ್ಯ ಬಂತು, ಆದರೆ ಯಾವ ಪೊಲೀಸ್ ಅವರನ್ನೂ ನೋಡದೆ, ಇನ್ನೂ ಸ್ವಲ್ಪ ಭಯ ಕಾಡುತ್ತಿತ್ತು.

ಮೆಕ್ಸಿಕನ್ ರೆಸ್ಟೋರಂಟಿನಲ್ಲಿ ಪೋರ್ತುಗೀಸ್ ಮೆನು ಹಿಡಿದ ಕಂಗ್ಲೀಷರು:

ಸರಿ, ಇನ್ನು ಊಟ ಮಾಡುವ ಅಂತ ಅಲ್ಲೇ ಹುಡುಕುತ್ತಿರುವಾಗ ಒಂದು ಮೆಕ್ಸಿಕನ್ ಹೋಟೆಲ್ ಕಾಣಿಸಿತು.

ನಮ್ಮ ಅಮೆರಿಕ ಮತ್ತು ಯುರೋಪ್ ಅನುಭವದ ಮೇಲೆ ಮೆಕ್ಸಿಕನ್ ಹೋಟೆಲಿನಲ್ಲಿ ವೆಜಿಟೇರಿಯನ್ ಊಟ ಸಿಗುತ್ತದೆ ಅಂತ ಒಳಹೊಕ್ಕೆವು. ನಾವು ಇಂಗ್ಲೀಷ್ ಮೆನು ಅಂತ ಕೇಳಿದೊಡನೆ ಅವರಿಗೆ ದಿಗಿಲಾಯಿತು. ನಮ್ಮ ಟೇಬಲ್ ಮೇಲೆ ಪೋರ್ಚುಗೀಸ್ ಮೆನು ಇಟ್ಟು ಅವರು ಕಾಣೆಯಾದರು. ಗೂಗಲ್ ಟ್ರಾನ್ಸ್ಲೇಟ್ ಉಪಯೋಗಿಸಬೇಕು, ಆದರೆ ನಾನು ಫೋನನ್ನು ಹೋಟೆಲಿನಲ್ಲಿ ಬಿಟ್ಟು ಬಂದಿದ್ದೆ. ಬೆಲೆಬಾಳುವ ವಸ್ತುಗಳನ್ನು ತಗೊಂಡು ಹೋಗಲು ಭಯ ನೋಡಿ. ಏನಾದರೂ ಅರ್ಥವಾಗುತ್ತಾ ಅಂತ ಅದೇ ಪೋರ್ಚುಗೀಸ್ ಮೆನು ತಿರುವು ಹಾಕುತ್ತಾ ಕುಳಿತಿದ್ದೆವು. ಒಂದು ಐದಾರು ನಿಮಿಷ ಕಳೆದಿರಬಹುದು ಒಬ್ಬ ತರುಣ ಮತ್ತು ಒಬ್ಬಳು ಹುಡುಗಿ ನಮ್ಮ ಟೇಬಲ್ ಗೆ ಬಂದು ಆಂಗ್ಲ ಭಾಷೆಯಲ್ಲಿ ನಾವು ನಿಮಗೆ ಆರ್ಡರ್ ಮಾಡಲು ಸಹಾಯ ಮಾಡುತ್ತೇವೆ ಅಂತ ಹೇಳಿದರು. ನಮಗಂತೂ ಅತ್ಯಂತ ಖುಷಿ ಆಯ್ತು. ವೆಜಿಟೇರಿಯನ್ ಊಟ ಆರ್ಡರ್ ಮಾಡಿದ ಮೇಲೆ ನಾವಿಬ್ಬರೂ ಮಕ್ಕಳ ಜೊತೆ ( ಏಕೆಂದರೆ ಇಷ್ಟು ಹೊತ್ತಿಗೆ ಗೊತ್ತಾಯ್ತು ಹುಡುಗನಿಗೆ 17 ಮತ್ತು ಹುಡುಗಿಗೆ 12 ವಯಸ್ಸು ಅಂತ)  ಹರಟೆ ಹೊಡೆಯಲು ಶುರು ಮಾಡಿದೆವು; ಅವರಿಗೆ ನಾವು ಭಾರತದವರು, ಇಂಗ್ಲೆಂಡ್ ದೇಶದಿಂದ ಬಂದವರು ಅಂತ ಕೇಳಿ ತುಂಬಾ ಆಶ್ಚರ್ಯವಾಯ್ತು. ನಾವು ಹೇಗೆ ಇಂಗ್ಲೆಂಡ್ ದೇಶಕ್ಕೆ ಹೋಗಿ ಅಲ್ಲಿ ಏನು ಮಾಡುತ್ತಿವೆ ಇತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಹೀಗೆ ಸುಮಾರು ಹದಿನೈದು ನಿಮಿಷ ಮಾತಾಡುತ್ತಿದ್ದಾಗ ಅವರ ತಂದೆ ಮತ್ತು ಚಿಕ್ಕಪ್ಪ ಬಂದು ಅವರನ್ನು ಮನೆಗೆ ಓದಿಕೊಳ್ಳಲು ಕಳಿಸಿದರು. ಹೀಗೆ ನಮಗೆ ಪೋರ್ಚುಗೀಸ್ ಬರದಿದ್ದರೂ ಬ್ರೆಝಿಲ್ ಜನರ ಔದಾರ್ಯತೆ ಮತ್ತು ಸಹಾಯ ಮಾಡುವ ಗುಣ ಸ್ವಲ್ಪ ಮಟ್ಟಿಗೆ ಅರ್ಥವಾಯಿತು.

ಕಾಚಕಾ ಮದ್ಯ:

ಮುಂದಿನ ಸಾಯಂಕಾಲ ಸ್ವಲ್ಪ ಧೈರ್ಯ ಬಂದಿದ್ದರಿಂದ ಸುಮಾರು 8.00 ಗಂಟೆಗೆ ಕೋಪ ಕಬಾನ ರಾತ್ರಿ ಹೊತ್ತು ಹೇಗೆ ಇರುತ್ತೆ ನೋಡಲು ಜೋಬಲ್ಲಿ ಸ್ವಲ್ಪ ಹ್ಯಾಸ್ (Real) ಇಟ್ಟುಕೊಂಡು ಹೊರಟೆವು. ಬೀಚ್ ಗೆ ಲೈಟ್ ಇಲ್ಲದಿದ್ದರಿಂದ ಬೀಚ್ ಕಾಣುತ್ತಾ ಇರಲಿಲ್ಲ. ಸುಮಾರು ಮೂರು ಅಥವಾ ನಾಲ್ಕು ಕಿಲೋಮೀಟರ್ ಉದ್ದ ಇರುವ ಬೀಚ್ promenade ನಲ್ಲಿ ತುಂಬಾ ಜನ ಇದ್ದರು. ನಮ್ಮಲ್ಲಿ ಪಾನಿಪುರಿ ಮಾರುವ ಗಾಡಿಗಳಂತಹ ಗಾಡಿಗಳಲ್ಲಿ caipirinha ಮಾಡಿಕೊಳ್ಳುತ್ತಿದ್ದರು. ರೋಡಲ್ಲಿ ಮದ್ಯ ಮಾರುತ್ತಿರುವುದನ್ನು ನೋಡುತ್ತಿರುವುದು ನಮಗೆ ಇದೇ ಮೊದಲು. ಇನ್ನು ಯಾವುದೇ ದೇಶದಲ್ಲೂ ನೋಡಿಲ್ಲ. ನಮಗೆ ರುಚಿ ನೋಡಲು ಆಸೆ, ಆದರೆ ಭಾಷೆ ಬರುವುದಿಲ್ಲ. ಸುಮ್ಮನೆ ನೋಡುತ್ತಾ ನಿಂತೆವು. ನಿಂಬೆಹಣ್ಣಿನ ಚೂರುಗಳು, ಸಕ್ಕರೆ, ಸ್ಟ್ರಾಬೆರಿ, ಕಿವಿ ಹಣ್ಣುಗಳನ್ನು ಒಂದು drinks shaker ಒಳಗೆ ಹಾಕಿ, masher ಇಂದ ಚೆನ್ನಾಗಿ ಜಜ್ಜಿ ಅದಕ್ಕೆ ice, custurd ಮತ್ತು cachaça (ಕಬ್ಬಿನ ಹಾಲಿನಿಂದ ತಯಾರು ಮಾಡುವ ಮದ್ಯ) ಹಾಕಿ, ಮುಚ್ಚಳ ಹಾಕಿ ಚೆನ್ನಾಗಿ ಅಲ್ಲಾಡಿಸಿ ಒಂದು ಲೋಟಕ್ಕೆ ಬಗ್ಗಿಸಿ ಕೊಡುತ್ತಿದ್ದ. ನಮಗೂ ಬೇಕು ಆದರೆ ಹೇಗೆ ಹೇಳುವುದು ಅಂತ ಯೋಚಿಸುತ್ತಾ ನಿಂತೆವು. ಅವನು ಮಾಡಿ ಕೊಟ್ಟಿದ್ದನ್ನು ಇಬ್ಬರು ಹುಡುಗಿಯರು ಕುಡಿಯುತ್ತಾ ಅವನ ಜೊತೆ ಹರಟೆ ಹೊಡೆಯುತ್ತಾ ಇದ್ದರು. ನಾವು ಇಂಗ್ಲೀಷ್ ಅಂದ ಕೂಡಲೇ ಅವರ ಮುಖ ಸಪ್ಪಗಾಯಿತು.  ಯಾಕೆಂದರೆ ಅವರು ಯಾರಿಗೂ ಇಂಗ್ಲಿಷ್ ಬರುತ್ತಾ ಇರಲಿಲ್ಲ. ನಾವು ಕೈ ಸನ್ನೆ ಬಾಯಿ ಸನ್ನೆ ಇಂದ ನೀವು ಕುಡಿಯುತ್ತಾ ಇರುವುದು ಏನು ಅಂತ ಕೇಳಿದೆವು. ಅವರು ಪೋರ್ಚುಗೀಸ್ ನಲ್ಲಿ ಹೇಳಿದ್ದು ನಮಗೆ ಗೊತ್ತಾಗಲಿಲ್ಲ. ಆವಾಗ ಆ ಹುಡುಗಿ ತಾನು ಕುಡಿಯುತ್ತಿರುವುದನ್ನು ನಮಗೆ ಇನ್ನೊಂದು ಸ್ಟ್ರಾ ಹಾಕಿ ಕೊಟ್ಟಳು; ನಾವು ಅದನ್ನು ಸ್ವಲ್ಪ ಕುಡಿದು ಅದನ್ನೇ ಇನ್ನೊಂದು ಕೊಡು ಅಂತ ಸನ್ನೆ ಭಾಷೆಯಿಂದ ಹೇಳಿದೆವು. ಹೀಗೆ ನಮ್ಮ ಬ್ರಸೀಲ್ ಜನರ ಜೊತೆ ಅನುಭವ ಮುಂದುವರೆಯಿತು.

ಆ ರಾತ್ರಿ ನಾವು ಕೋಪ ಕಬಾನ ಬೀಚ್ ರಸ್ತೆಯಲ್ಲಿ ಯಾವುದೇ ಹೆದರಿಕೆ ಇಲ್ಲದೆ ಓಡಾಡಿದೆವು. ಅಲ್ಲೊಬ್ಬ ಇಲ್ಲೊಬ್ಬ ಗನ್ ಇಟ್ಟುಕೊಂಡು ಪೊಲೀಸ್ ಇದ್ದರು (ಈಗ ಗೊತ್ತಾಗಿದೆ ಅವರು ಮಿಲಿಟರಿ ಅಂತ). ರಿಯೋ ಡಿ ಜನೈರೋ ಈಗ ಶಾಂತಿಯುತವಾಗಿ ಇದೆ. ಆದರೂ ಪ್ರವಾಸಿಗರು ಜಾಗರೂಕತೆಯಿಂದ ಇರುವುದು ಲೇಸು.

View Post

ಇಗುವಾಸ್ಸು ಜಲಪಾತ:

ರಿಯೋ ದಲ್ಲಿ ಉಳಿದ ರಮಣೀಯ ಸ್ಥಳಗಳನ್ನು ನೋಡಿ ನಾವು ಮುಂದೆ ಇಗುವಾಸ್ಸು ಜಲಪಾತ ನೋಡಲು ಬಂದೆವು. ಇಲ್ಲಿ ನಮಗೆ ನಿಜವಾದ ಮೆಕ್ಸಿಕೋ ರೆಸ್ಟೋರೆಂಟ್ ಸಿಕ್ಕಿತ್ತು; ಆದರೆ ವೇಟರ್ಗೆ ಇಂಗ್ಲೀಷ್ ಬರುತ್ತಿರಲಿಲ್ಲ!! ಪಾಪ ಆ ವೇಟರ್ ತುಂಬಾ ಸಹನೆಯಿಂದ ಗೂಗಲ್ ಟ್ರಾನ್ಸ್ಲೇಟ್ ಉಪಯೋಗಿಸಿ ನಮ್ಮ ಆರ್ಡರ್ ಬರೆದುಕೊಂಡ. ಅದಾದ ಮೇಲೆ ಊಟ ಹೇಗಿದೆ ಎಂದು ಮತ್ತೆ ಗೂಗಲ್ ಟ್ರಾನ್ಸ್ಲೇಟ್ ನಿಂದ ಬಂದು ನಮ್ಮನ್ನು ವಿಚಾರಿಸಿಕೊಂಡ. ಊಟ ಚೆನ್ನಾಗಿತ್ತು ನಾವು ಆ ವೇಟರ್ ಗೆ ಬಹಳಷ್ಟು ಧನ್ಯವಾದ ಹೇಳಿದೆವು.

೨.೭ ಕಿಮೀ ಉದ್ದ ಮತ್ತು 250 ಜಲಪಾತಗಳ ಬೃಹತ್ ಜಲಪಾತ Iquazu ಜಲಪಾತ. ಅದಕ್ಕೇ ಇದು ಜಗತ್ತಿನ ಏಳು ವಿಸ್ಮಯಗಳಲ್ಲಿ ಒಂದು. ಜೀವನದಲ್ಲಿ ಒಮ್ಮೆ ನೋಡು ಜೋಗದ ಗುಂಡಿ ಅನ್ನುವ ಹಾಗೆ ಅನುಕೂಲ ಇದ್ದರೆ ಒಮ್ಮೆ ಜಲಪಾತ ಖಂಡಿತ ನೋಡಿ.

ಮಾನುಅಸ್ ನಗರ:

ನಾವು ಬ್ರಸೀಲ್ ದೇಶದ Manaus ಊರಿನಲ್ಲಿ ಐದು ದಿನ ಉಳಿದುಕೊಂಡೆವು. ಇದು ರಿಯೋ ನೀಗ್ರೋ ನದಿಯ ತೀರದಲ್ಲಿದೆ. ರಿಯೋ ನೀಗ್ರೋ ನದಿಯ ಪಾತ್ರ ಎರಡರಿಂದ ಆರು ಕಿಲೋ ಮೀಟರ್ ಅಗಲ. ಈ ನದಿ Manuas ಇಂದ ಸ್ವಲ್ಪ ಮುಂದೆ ಅಮೆಜಾನ್ ನದಿಯನ್ನು ಸೇರುತ್ತದೆ; ಕರಿಯ ಬಣ್ಣದ ರಿಯೋ ನೀಗ್ರೋ ನದಿ ನೀರು, ಕೆಂಪು ಮಣ್ಣಿನ ಬಣ್ಣದ ಅಮೆಜಾನ್ ನದಿ ಸೇರುವ ಜಾಗ ರಮಣೀಯವಾಗಿದೆ; ಎರಡು ನದಿಗಳು ಬೆರೆಯುವುದು ಸುಮಾರು 3ರಿಂದ 5 ಕಿಲೋಮೀಟರ್ ವರೆಗೆ ನಡೆಯುತ್ತದೆ.

ಸುಮಾರು ಮೂರು ಲಕ್ಷ ಜನರಿರುವ Manuas ನಗರದಲ್ಲಿ ನಾವು mall ಗೆ ಹೋಗಿದ್ದೆವು. ಅಲ್ಲಿ ಮತ್ತೆ  ವೆಜಿಟೇರಿಯನ್ ಊಟ ಕೇಳುವುದಕ್ಕೆ ಪಟ್ಟ ಪಾಡು ಅಷ್ಟಿಷ್ಟಲ್ಲ; ಇಷ್ಟರಲ್ಲಿ ಕಾರ್ನೆ(carne) ಅಂದರೆ ಮಾಂಸ ಅಂತ ತಿಳಿದುಕೊಂಡಿದ್ದೆ. No-carne ಅಂತ ಹೇಳಿದರೂ ನಮಗೆ ಅನುಮಾನ, ಅವರಿಗೆ ತಿಳಿಯಿತೋ ಇಲ್ಲವೋ ಅಂತ. ಮಾಲ್ ನಲ್ಲಿ ವೈಫೈ ಇದ್ದಿದ್ದರಿಂದ ಗೂಗಲ್ ಟ್ರಾನ್ಸ್ಲೇಟ್ ಉಪಯೋಗಿಸಿ ಬೇರೆಯವರು ಮೂರು ನಿಮಿಷ ತಗೊಳ್ಳೋದು ನಾವು 12 ನಿಮಿಷ ತಗೊಂಡು ನಮಗೆ ಬೇಕಾದ ವೆಜಿಟೇರಿಯನ್ ಊಟ ಆರ್ಡರ್ ಮಾಡಿದ್ವಿ. ಇಲ್ಲೂ ಸಹ ನಮ್ಮ ಹಿಂದೆ ಜನ ಕಾಯುತ್ತಿದ್ದರೂ ಅಂಗಡಿಯವರು ನಮಗೋಸ್ಕರ ತುಂಬಾ ತಾಳ್ಮೆಯಿಂದ ಗೂಗಲ್ ಟ್ರಾನ್ಸ್ಲೇಟ್ ನಲ್ಲಿ ಟೈಪ್ ಮಾಡಿ ಅಥವಾ ಮಾತಾಡಿ ಅದನ್ನು ಇಂಗ್ಲೀಷ್ ಗೆ ತರ್ಜುಮೆ ಮಾಡಿ ತೋರಿಸುತ್ತಿದ್ದರು.

ಬ್ರಸೀಲಿನಲ್ಲಿ ಶಮ್ಮಿಕಪೂರ್:

Manuas ನಗರಕ್ಕೆ ಬರುವ ಮೊದಲು ಮೂರು ರಾತ್ರಿ ನಾವು ಅಮೆಜಾನ್ ಕಾಡಿನಲ್ಲಿ ಇರುವ ಅಮೆಜಾನ್ ಲಾಡ್ಜ್ ಪಾರ್ಕ್ ನಲ್ಲಿ ಇದ್ದೆವು. ಇದು ರಿಯೋ ನೆಗ್ರೋ ನದಿಯ ತೀರದಲ್ಲಿ ಇದ್ದರೂ ಈ ಎಲ್ಲ ಪ್ರದೇಶವನ್ನು Amazon Rain Forest ಅಂತ ಹೇಳುತ್ತಾರೆ. ಈ ಪ್ರದೇಶ equator ಹತ್ತಿರ ಇರುವುದರಿಂದ ಸೆಕೆ ಜಾಸ್ತಿ ಮಳೆ ಜಾಸ್ತಿ. ಈ ದಟ್ಟ ಕಾಡಿನಲ್ಲಿ ಓಡಾಡಿದ್ದು ತುಂಬಾ ಚೆನ್ನಾಗಿತ್ತು. ನಮ್ಮ guide ಅಲ್ಲಿನ ಬೇರೆ ಬೇರೆ ಮರಗಳು, parasite ಮರಗಳು, ರಬ್ಬರ್ ಮರಗಳು, ಕರ್ಪೂರ ತಯಾರಿಸುವ ಮರಗಳು ಎಲ್ಲವನ್ನು ವಿವರವಾಗಿ ತೋರಿಸಿದ. ಆ guide ಹೆಸರು ಶಮ್ಮಿ.  ಅವನು ನಮಗೆ ನಾನು ಶಮ್ಮಿ ಕಪೂರ್ ಅಂತ ಪರಿಚಯಿಸಿಕೊಂಡು ಕೆಲವೊಂದು ಶಮ್ಮಿ ಕಪೂರ್ ಚಿತ್ರಗಳ ಹಿಂದಿ ಹಾಡುಗಳನ್ನು ಹೇಳಿ ಮನರಂಜಿಸಿದ. ಅವನು ಗಯಾನ ದೇಶದವನು, ಅಮ್ಮ ಭಾರತೀಯ ಮೂಲದವರು, ತಂದೆ ಆಫ್ರಿಕನ್ ಮೂಲದವರು. ಗಯಾನಾದಲ್ಲೂ ಬಾಲಿವುಡ್ ತುಂಬಾ ಪ್ರಸಿದ್ಧಿ; ಹಾಗಾಗಿ ನನಗೆ ಶಮ್ಮಿ ಕಪೂರ್ ಹಾಡುಗಳು ಗೊತ್ತು ಅಂತ ಹೇಳಿದ.

ಅಮೇಜಾನ್ ತೀರದಲ್ಲಿ:

ಲಾಡ್ಜ್ ಪಾರ್ಕ್ ನಲ್ಲಿ ಮೂರು ದಿನ ಇರುವ ನಮಗೆ ಬೇರೆ ಬೇರೆ ದೇಶದವರ ಪರಿಚಯ ಆಯಿತು ಸ್ಪೇನ್ ನವರು ಅಮೆರಿಕಾದವರು ಜರ್ಮನಿಯವರು ಇತ್ಯಾದಿ. ರೂಮುಗಳಲ್ಲಿ ಟಿವಿ ಇಲ್ಲದ ಕಾರಣ ಹಾಗೂ ವೈಫೈ ಕೇವಲ ರಿಸೆಪ್ಷನ್ ಹಾಗೂ ಬಾರ್ ಇರುವ ಜಾಗದಲ್ಲಿ ಇದ್ದಿದ್ದರಿಂದ ಎಲ್ಲ ಪ್ರವಾಸಿಗರು ಒಟ್ಟು ಸೇರಲು ಕಾರಣವಾಗಿತ್ತು. ಇದು ನಮಗೆ ಕೇರಳದ ವೈತಿರಿ ಜಾಗದಲ್ಲಿ ಇದ್ದ ಒಂದು ರಿಸಾರ್ಟ್ ನೆನಪು ತಂದಿತು.

ಭಯಂಕರ ಶಖೆ ಮತ್ತು ಗಾಳಿಯಲ್ಲಿನ ತೇವಾಂಶ ಸೇರಿ ದಿನಕ್ಕೆ ಒಂದು-ಎರಡು ಲೀಟರ್ ಬೆವರು ಬರುತ್ತಿತ್ತು. ಅವಾಗ ಅಮೆಜಾನ್ ಲಾಡ್ಜ್ ಪಾರ್ಕ್ ನಲ್ಲಿ ಬೆಟ್ಟದಿಂದ ಇಳಿದು ಬರುವ ಝರಿಯ ನೀರಿನಲ್ಲಿ ಕೂತುಕೊಳ್ಳಲು ಅಪ್ಯಾಯಮಾನವಾಗಿತ್ತು.

ಗೇರು ಹಣ್ಣನ್ನು (ಉಪ್ಪು ಹಚ್ಚಿಕೊಂಡು) ತಿನ್ನುತ್ತಾ ಬಾಲ್ಯದ ನೆನಪು ಬಂತು; ಬೆಂಗಳೂರನ್ನು ನೆನೆಸಿಕೊಳ್ಳುತ್ತಾ ಎಳನೀರು ಕುಡಿದೆವು, ಹಲಸಿನ ಹಣ್ಣು ತಿಂದೆವು; ಎಳನೀರಿಗೆ ತೂತು ಮಾಡುವ ಹೊಸ ವಿಧಾನವನ್ನು ಇಲ್ಲಿ ನೋಡಿದೆ.

ಸಸ್ಯಹಾರಿಗಳಿಗೆ ಕಿವಿಮಾತು:

ಬ್ರೆಜಿಲ್ ನಲ್ಲಿ ಬರೀ ವೆಜಿಟೇರಿಯನ್ ಊಟ ಮಾಡುವವರಿಗೆ ಖಂಡಿತವಾಗಿ ಕಷ್ಟ ಆಗುತ್ತೆ. ಬ್ರಝೀಲಿಯನ್ ಊಟದ ಜಾಗಗಳಲ್ಲಿ ಎರಡು ವಿಧ ಒಂದು ಎಷ್ಟು ಬೇಕಾದರೂ ತಿನ್ನಬಹುದಾದ buffet, ಇನ್ನೊಂದು ಪ್ಲೇಟಿನಲ್ಲಿ ಎಲ್ಲವನ್ನು ಹಾಕಿ ಅದರ ಭಾರದ ಮೇಲೆ ಹಣ ಕೊಡುವುದು. ಎರಡರಲ್ಲೂ ಊಟ ಒಂದೇ ತರಹ ಅನ್ನ ಅಲ್ಲದೆ ಬೇರೆ ಬೇರೆ ಮಾಂಸದ ಊಟಗಳು ಇರುತ್ತವೆ. ಕಪ್ಪು ಹುರಳಿಯಿಂದ (black beans) ಮಾಡಿದ ನೀರಾದ ಪಲ್ಯ, ಇದನ್ನು ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತದೆ. ತಿನ್ನುವ ಮೊದಲು ಕೇಳಿ, ಯಾಕೆಂದರೆ ಅದರಲ್ಲಿ ಹಂದಿಯ ಅಥವಾ ದನದ ಮಾಂಸ ಹಾಕಿರುತ್ತಾರೆ. ಸಸ್ಯಾಹಾರಿಗಳಿಗೆ ಸಲಾಡೇ ಗತಿ.

8 thoughts on “ಬ್ರಸೀಲ್ ಡೈರಿ: ಆನಂದ ಕೇಶವಮೂರ್ತಿ

 1. ಕನ್ನಡಿಗ, ಸಸ್ಯಾಹಾರಿ ಪ್ರವಾಸಿಗಳಿಗೆ ಉಪಯೋಗವಾಗುವ ಅನೇಕ ಕಿವಿಮಾತುಗಳನ್ನ ಹೇಳಿದ್ದೀರಿ. ಒಂದೂವರೆ ದಶಕದ ಹಿಂದೆ ಬ್ಯಾಕ್ ಪ್ಯಾಕ್ ವಿಧಾನದಲ್ಲಿ ಯುರೋಪ್ ದೇಶಗಳನ್ನು ಸುತ್ತುವಾಗ ನನಗೂ ಇಂತಹ ಕೆಲ ಅನುಭವಗಳಾಗಿದ್ದವು. ನಿಮ್ಮ ಈ ಡೈರಿಯ ತುಣುಕುಗಳನ್ನು ಓದಿದಾಗ ಅವೆಲ್ಲಾ ನೆನಪಿಗೆ ಬಂತು! ಡೈರಿಯಿಂದ ಮತ್ತಷ್ಟು ಅನುಭವಗಳು ಹೊರಬರಲಿ! ಧನ್ಯವಾದಗಳು.
  ವಿನತೆ ಶರ್ಮ

  Like

 2. ಹಲೋ ಆನಂದ್
  ನಿಮ್ಮ ಬ್ರೆಝಿಲ್ ಡೈರಿ ಯನ್ನು ಆಸಕ್ತಿಯಿಂದ ಓದಿದ್ದೇನೆ. ಮೂರು ವರ್ಷದ ಕೆಳಗೆ ನಾನು ಪೆರು, ಇಗ್ವಾಸ್ಸು, ರಿಯೋ ಮತ್ತು ಅಮೇಜಾನ್ ಕಾಡುಗಳನ್ನು ಸುತ್ತಿದ್ದೇನೆ. ನೀವು ಪ್ರಸ್ತಾಪಿಸಿರುವ ಹಲವಾರು ಸುಂದರ ತಾಣಗಳು ನನಗೆ ಪರಿಚಿತವಾದುದರಿಂದ ನನ್ನ ಸವಿ ನೆನಪುಗಳನ್ನು ನೀವು ನೆನಪಿಗೆ ತಂದಿದ್ದೀರಿ. ನಾನು ಪೂರ್ಣಿಮಾ ಮತ್ತು ನನ್ನ ಸ್ನೇಹಿತರು ಸಣ್ಣ ಗುಂಪೊಂದರಲ್ಲಿ ಸಕಲ ವ್ಯವಸ್ಥೆ ಗಳನ್ನು ಮಾಡಿಕೊಂಡು ಎಸ್ಕಾರ್ಟೆಡ್ ಪ್ರವಾಸ ಮಾಡಿರುವುದರಿಂದ ನಮಗೆ ಭಾಷೆ ಮತ್ತು ಊಟಕ್ಕೆ ಹೆಚ್ಚಿನ ತೊಂದರೆಯಾಗಲಿಲ್ಲ. ನಾವು ನಿಮ್ಮಷ್ಟು ಸಾಹಸಿಗರಲ್ಲ. ನಿಮ್ಮ ಅನುಭವ; ಕುತೂಹಲ ಮತ್ತು ಸಣ್ಣ ಪುಟ್ಟ ‘ಅನಾಹುತ”ಗಳಿಂದ ತುಂಬಿ ಸ್ವಾರಸ್ಯಕರವಾಗಿದೆ. ಪ್ರವಾಸ ಕಥನ ಬರಿಯ ಒಂದು ಡೈರಿ ಯಾಗದೆ ವೈಯುಕ್ತಿಕ ಅನುಭವಗಳ ಜೊತೆ ನೋಟ ನಿಲುವು ನಿಸರ್ಗ ಇವುಗಳನ್ನು ಬೆಸೆದಾಗ ಓದಲು ಅರ್ಹವಾದ ಬರವಣಿಗೆಯಾಗುತ್ತದೆ. ಈ ದೆಸೆಯಲ್ಲಿ ನಿಮ್ಮ ಲೇಖನ ಲವಲವಿಕೆಯಿಂದ ಕೂಡಿದೆ. ಹೀಗೆ ಬರೆಯುತ್ತಿರಿ.

  Like

 3. ಆನಂದ್ ಬ್ರೆಝಿಲಿನ ಯಾತ್ರೆಯನ್ನು ಚೆನ್ನಾಗಿ ವರ್ಣಿಸಿದ್ದೀರಿ. ನಿಮ್ಮ ಅನುಭವದ ರಸಾಯನ ಓದುವವರಿಗೆ ಸಿಹಿಯಾಗಿಯೇ ಇದೆ. ಬ್ರೆಝಿಲ್ ದೇಶದ ಅನುಭವ ಅನನ್ಯವೇ ನಿಜ. ಅಲ್ಲಿನ ಹಸಿರು ಸಂಪತ್ತನ್ನು ನೋಡಿಯೆ ಅನುಭವಿಸಬೇಕು. ಇನ್ನು ಇಗ್ವಾಸು ಜಲಪಾತದ ಸೌಂಧರ್ಯವನ್ನು ಪದಗಳಲ್ಲಿ ಸೆರೆ ಹಿಡಿಯುವುದು ಕಷ್ಟಸಾಧ್ಯದ ಕೆಲಸ. ಆದರೂ ನಿಮ್ಮ ಲೇಖನದಲ್ಲಿ ಚೆನ್ನಾಗಿಯೇ ಬರೆದಿದ್ದೀರಿ. ಇನ್ನು ಸಸ್ಯಾಹಾರಿಗಳ ಫಜೀತಿ ಎಲ್ಲೆಡೆ ಇರುವ ಸಮಸ್ಯೆಯೇ. ಅಮೆಝನ್ ನದಿಯ ಪ್ರವಾಸ ನಿಮ್ಮ ಜೀವನದ ಅನನ್ಯ ಅನುಭವಗಳಲ್ಲಿ ಒಂದಿರಬೇಕಲ್ಲವೇ! ಆ ನದಿಯ ಮಹಾತ್ಮೆಯನ್ನು, ಅಲ್ಲಿನ ಸಸ್ಯಸಂಪತ್ತನ್ನು ನೋಡಿದವರೆಲ್ಲ ಮರೆಯಲಾಗದು ಎಂದಿದ್ದಾರೆ. ನನಗೆ ಆ ಅನುಭವ ಇನ್ನು ಆಗಿಲ್ಲ. ಅಲ್ಲಿಗೆ ಹೋಗುವ ಘಳಿಗೆ ಬಂದಿಲ್ಲ. ಒಟ್ಟಿನಲ್ಲಿ ದಕ್ಷಿಣ ಅಮೆರಿಕೆಯ ದೇಶಗಳ ಸಂಸ್ಕೃತಿ, ಭೂಗೋಳ, ಎಲ್ಲವು ವೈಶಿಷ್ಟಪೂರ್ಣವಾದದ್ದು ಎಂದು ನನ್ನ ಅನಿಸಿಕೆ. ಉತ್ತಮ ಲೇಖನಕ್ಕೆ ಧನ್ಯವಾದಗಳು. ಮುಂದೆಯೂ ಹೀಗೆ ಲೇಖನಗಳು ಹೊರಬರಲಿ.
  ಉಮಾ ವೆಂಕಟೇಶ್

  Like

 4. ಆನಂದ ಕೇಶವಮೂರ್ತಿಯವರೇ, ನಿಮ್ಮ ಬ್ರಸಿಲ್ ಪ್ರವಾಸಕಥನ ಸ್ವಾಸ್ಯಕರವಾಗಿದೆ. ಪ್ರವಾಸದ ಎಲ್ಲ ವಿಷಯಗಳನ್ನೂ ‘ಟಚ್’ ಮಾಡಿದ್ದೀರಿ. ಸಸ್ಯಾಹಾರ ಊಟ ಬೇಕಾದವರ ಪರದಾಟ ಮತ್ತು ಆರ್ಡರ್ ತಡವಾದ ವಿಷಯ ಮಾತ್ರ touched to the quick! Same here ಅನ್ನಿ! negro ನದಿಯ ಉಚ್ಚಾರ ಸ್ಪಷ್ಟ ಪಡಿಸಿ. ಒಂದು ಕಡೆ ಮಾತ್ರ ನೆಗ್ರೋ ಅಂತ ಇದೆ, ನಾನು ಅದೇ ಸರಿಯೆಂದು ತಿಳಿದುಕೊಂಡಿದ್ದೆ. ಇನ್ನೊಂದು ‘n word’ ಆಯಿತಲ್ಲ. ದಕ್ಷಿಣ ಅಮೇರಿಕಾಗೆ ಹೊರಡಲು ಉತ್ಸುಕರಾದ ಕನ್ನಡಿಗರ ಸಾಲೇ ಇರುವಂತಿದೆ. ಪ್ರಾರಂಭ ಮಾಡಿದ್ದೀರಿ, ಇನ್ನು ಬೇರೆ ಲೇಖನಗಳನ್ನೂ ಎದುರು ನೋಡಲೆ?

  Like

  • ಧನ್ಯವಾದ, ಅದು ನೀಗ್ರೋ ನದಿ; ಹಾಗೇ ಕರೆಯುತ್ತಾರೆ

   Like

 5. ನೀವಿಬ್ಬರೂ ಸಾಹಸೀ ದಂಪತಿಗಳು! ನಿಮ್ಮ ಪ್ರವಾಸೀ ಅನುಭವಗಳನ್ನು ಓದಲು ಯಾವಾಗಲೂ ಚೆನ್ನಾಗಿರುತ್ತದೆ. ನಿಮ್ಮ ಮೊದಲ ಬರಹದಲ್ಲೇ ಜಾಗವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ.
  ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು .

  Like

 6. ನಿಮ್ಮ ವಿವರಣೆ ಚೆನ್ನಾಗಿದೆ. ಸಸ್ಯಾಹಾರಿ ಊಟ ಹುಡುಕುವುದು ನಮಗೂ ಸಹ ದೊಡ್ಡ ಸಮಸ್ಯೆ. ಇದರ ಬಗ್ಗೆ ನಾನು ನನ್ನ ಲೇಖನಗಳಲ್ಲಿ ಪ್ರಸ್ತಾವನೆ ಮಾಡಿದ್ದೇನೆ. ಈ ಹಾಲಿಡೇ ಟೂರ್ ಕಂಪನಿ ಇಂದ
  ಅಥವಾ ನೀವೇ ಎಲ್ಲ ವ್ಯವಸ್ಥೆ ಮಾಡಿದ್ದರ? ಈಗ ಬ್ರೆಜಿಲ್ ಬಗ್ಗೆ ಸ್ವಲ್ಪ ಐಡಿಯಾ ಬಂತು. MTR ಅಥವಾ ಅಶೋಕ ready to eat ಊಟ ಇಲ್ಲಿ ಉಪಯೋಗ ಆಗಬಹುದು.!,
  ಭೇಟಿಯಾದಾಗ ಇದರ ಬಗ್ಗೆ ಇನ್ನೂ ಮಾಹಿತಿ ಕೊಡಿ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.