
ಡಾ. ರಾಮಶರಣ ಲಕ್ಷ್ಮೀನಾರಾಯಣ ಅವರು ಅನಿವಾಸಿ ಬಳಗದಲ್ಲಿ ಬಹಳ ಸಕ್ರಿಯರು. ಇತ್ತೀಚೆ ಜರುಗಿದ ಅನಿವಾಸಿಗಳ ಸಂವಾದದಲ್ಲಿ ಕನ್ನಡದ ಖ್ಯಾತ ಸಾಹಿತಿ, ಅನುಪಮಾ ನಿರಂಜನರ ಬಗ್ಗೆ ಮಾತಾಡಿ, ಅಂದಿನ ಮುಖ್ಯ ಅತಿಥಿಗಳಾದ ಸುಧಾ ಬರಗೂರ್ ಅವರು ತುಂಬ ಶ್ಲಾಘಿಸಲ್ಪಟ್ಟರು. ಆ ಭಾಷಣದ ಬರಹರೂಪ ಇಲ್ಲಿದೆ – ಸಂ
೭೦-೮೦ ರ ದಶಕದಲ್ಲಿ ಬೆಳೆದ ನಮ್ಮ ಪೀಳಿಗೆಯವರಿಗೆ ಕನ್ನಡ ಓದುವ ಗೀಳು ಬೆಳೆಸಿದವರಲ್ಲಿ ಅನುಪಮ ನಿರಂಜನ ಒಬ್ಬರು. ಅವರ ಕಾದಂಬರಿ-ಕಥೆಗಳು ನಾಡಿನ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಬಂದ ಧಾರಾವಾಹಿಗಳ ಪುಟಗಳನ್ನೂ ಕತ್ತರಿಸಿ, ಒಟ್ಟಾಗಿ ಹೊಲೆದು ಪುಸ್ತಕ ಮಾಡಿಡುವುದು ನನ್ನಮ್ಮನ ಹವ್ಯಾಸ. ಅಂತಹ ಕಂತೆಗಳಲ್ಲಿ ಅನುಪಮಾ ನಿರಂಜನರ “ಹಿಮದ ಹೂ” ಕಾದಂಬರಿ ಓದಿದ ನೆನಪು. ಅವರು ಸ್ತ್ರೀವಾದಿ. ಅವರ ಮನೋಗುಣಕ್ಕೆ ತಕ್ಕುದಾಗಿ ಈ ಕೃತಿಯ ಪ್ರಧಾನ ಪಾತ್ರಗಳು ಒಬ್ಬ ಶಿಕ್ಷಕಿ ಹಾಗೂ ಆಕೆಯ ವಿದ್ಯಾರ್ಥಿನಿ. ಈ ವಿದ್ಯಾರ್ಥಿನಿ ರಕ್ತ ಕ್ಯಾನ್ಸರಿನಿಂದ ಬಳಲುವಾಗ, ನಾಯಕಿ ಹಾಗೂ ಬಾಲಕಿಯ ನಡುವಿನ ಸಂಬಂಧ, ಮಾನಸಿಕ ತುಮುಲಗಳನ್ನು ಸೂಕ್ಷ್ಮವಾಗಿ ಅನ್ವೇಷಿಸುತ್ತ, ಓದುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವ ಶೈಲಿ ಮನ ಮುಟ್ಟಿತ್ತು. ಅನುಪಮಾ ಅವರ ಇತರ ಕೃತಿಗಳಲ್ಲಿ ಬರುವಂತೆಯೇ ಇಲ್ಲೂ ಅವರ ವೈದ್ಯ ವೃತ್ತಿ ಮತ್ತು ಜೀವನಾನುಭವಗಳು ಮೇಳೈಸಿವೆ.
ಮಲೆನಾಡು, ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕಣ್ಮಣಿಗಳಲ್ಲಿ ಅನುಪಮಾ ಒಬ್ಬರು. ೧೯೩೪ ರಲ್ಲಿ ತೀರ್ಥಹಳ್ಳಿಯಲ್ಲಿ ವೆಂಕಟಲಕ್ಷ್ಮಿಯಾಗಿ ಅವರ ಜನನ. ನನಗೆ ನೆನಪಿದ್ದಂತೆ ಅವರ ತಂದೆ ಸರ್ಕಾರಿ ಉದ್ಯೋಗಿ. ಮಹಾ ಕಟ್ಟುನಿಟ್ಟಿನ ಮನುಷ್ಯ. ಅನುಪಮ ಅವರು ಓದಿನಲ್ಲಿ ಮುಂದು. ಚಿಕ್ಕಂದಿನಿಂದಲೇ ಅವರದ್ದು ಹೋರಾಟದ ಮನೋಭಾವ. ಗಂಡು-ಹೆಣ್ಣು ಮಕ್ಕಳ ನಡುವಿನ ತಾರತಮ್ಯವನ್ನ ಕಟುವಾಗಿ ವಿರೋಧಿಸಿದ್ದು ೨೧ನೇ ಶತಮಾನಕ್ಕೆ ತಕ್ಕುದಾದೀತು.

೧೯೫೬ರಲ್ಲಿ ಅವರು ಮೈಸೂರಿನ ವೈದ್ಯ ಶಾಲೆಯಿಂದ ಎಂ.ಬಿ.ಬಿ.ಎಸ್ ಪದವೀಧರೆಯಾಗಿ ಹೊರಬಿದ್ದರು. ಅದಾಗಲೇ ಅವರು ಪತ್ರಕರ್ತ-ಲೇಖಕ ನಿರಂಜನರ ಸಖ್ಯ ಬೆಳಸಿದ್ದರು. ಪದವೀಧರರಾದ ವರ್ಷವೇ ಮನೆ ಜನರ ವಿರೋಧವಿದ್ದರೂ ನಿರಂಜನರೊಡನೆ ಮದುವೆಯಾದರು. ನಿರಂಜನರು ಮೆಲ್ವರ್ಗದವರು, ತಂದೆಯಿಲ್ಲದೇ ಹುಟ್ಟಿದವರು. ಅನುಪಮಾ, ನೇಕಾರ ಮನೆತನದವರು. ಅಂದಿನ ಕಾಲದಲ್ಲೇ ಜಾತಿ, ಅಂತಸ್ತುಗಳನ್ನು ಮೆಟ್ಟಿ, ಬಂಧು- ಬಾ೦ಧವರ ವಿರೋಧವನ್ನು ಎದುರಿಸಿ ನಿಲ್ಲುವ ಮನೋಸ್ಥೈರ್ಯವನ್ನು ತೋರಿದ್ದಾರೆ.
ನಿರಂಜನ, ಅನುಪಮಾ ಅವರದ್ದು ಮಾದರಿ ದಾಂಪತ್ಯವೆಂದೇ ಹೇಳಬಹುದು. ಇಬ್ಬರೂ ಒಬ್ಬರಿಗೊಬ್ಬರು ಸಮ್ಮಾನ ಗೌರವಗಳನ್ನು ಕೊಟ್ಟು-ಪಡೆದವರು. ಅವರದ್ದು ಕಮ್ಯುನಿಸ್ಟ್-ಎಡಪಂಥೀಯ ಧೋರಣೆ. ಅದರಂತೇ ಬಾಳಿದವರು. ವೈದ್ಯರಾದರೂ ಅವರ ಜೀವನ ಆಡಂಬರದ್ದಾಗಿರಲಿಲ್ಲ. ಕಾಲಿಗೊಂದು, ಕೈಗೊಂದು ಚಾಕರರಿರಲಿಲ್ಲ.
ಎಣಿಕೆಯಂತೇ ನಿರಂಜನ, ಅನುಪಮ ಅವರ ಬರಹಗಳ ಪ್ರಥಮ ನಿರ್ದಯಿ ವಿಮರ್ಶಕರಾಗಿದ್ದರು; ಅಂತೆಯೇ ಪ್ರೋತ್ಸಾಹಕರೂ ಆಗಿದ್ದರು. ಇದನ್ನು ಅನುಪಮಾ ಅವರೇ ತಮ್ಮ ಆತ್ಮಕಥೆ “ನೆನಪು: ಸಿಹಿ-ಕಹಿ”ಯಲ್ಲಿ ಹೇಳಿದ್ದಾರೆ. ಇವನ್ನು ಹೀರಿ ಬೆಳೆದ ಅನುಪಮಾ ತಮ್ಮದೇ ಶೈಲಿಯನ್ನು ಬೆಳೆಸಿಕೊಂಡರು. ಸ್ತ್ರೀ ವಾದ, ಅಬಲೆಯರ ಶೋಷಣೆ, ನವ್ಯತೆ, ಬಂಡಾಯ ಇತ್ಯಾದಿ ಮನೋಧರ್ಮಗಳನ್ನು ಒಳಗೂಡಿದ ಕೃತಿಗಳನ್ನು ರಚಿಸಿ, ಸ್ವಂತಿಕೆಯನ್ನು ಬೆಳೆಸಿಕೊಂಡವರು. ವೈದ್ಯಕೀಯ ಜ್ಞಾನ ಬಳಸಿ, ಮನೋವೈಜ್ಞಾನಿಕ ಕೃತಿಗಳ ಸೊಬಗನ್ನು ಅವರು ಕನ್ನಡಕ್ಕಿತ್ತರು.
ಅನುಪಮಾ ಅವರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಸಂಬಂಧಿಕರ ವಿರೋಧ ಕಟ್ಟಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರು ಜನಸೇವೆ, ಸಾಹಿತ್ಯ ಸೇವೆಗಳನ್ನೂ ಕೊನೆಯ ಉಸಿರಿನವರೆಗೆ ಮಾಡಿದರು. ೧೯೭೨ರಲ್ಲಿ ಅವರ ಸಂಗಾತಿ ನಿರಂಜನ ಪಾರ್ಶ್ವ ವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದರು. ಅನುಪಮಾ, ವೃತ್ತಿ, ಮಕ್ಕಳ ಜವಾಬ್ದಾರಿ, ಮನೆ ನಿರ್ವಹಣೆಗಳನ್ನು ಹೊತ್ತು, ಅವಿರತ ಸಾಹಿತ್ಯ ಸೇವೆ ಮಾಡಿ ೨೫ ಕಾದಂಬರಿ, ೯ ಕಥಾ ಸಂಕಲನಗಳನ್ನು ಪ್ರಕಟಿಸಿದರು.

ಅವರ “ದಿನಕ್ಕೊಂದು ಕಥೆ” ಆಗ ಮಕ್ಕಳಿಗೆಲ್ಲ ಜನಪ್ರಿಯವಾದ ಕೃತಿ. ಮಕ್ಕಳಿಗಾಗಿ ಕಥೆಗಳನ್ನು ಬರೆಯಲು ಲೇಖನಿಯೆತ್ತಿಕೊಂಡಾಗ ನಿರಂಜನರು, “೩೬೫ ಕಥೆಗಳನ್ನು ಬರೆಯಿರಿ, ದಿನಕ್ಕೊ೦ದಾಗುತ್ತದೆ”, ಎಂದರಂತೆ. ಅಂತೆಯೇ ಪ್ರಪಂಚದ ಎಲ್ಲೆಡೆಯ ಕಥೆಗಳನ್ನು ಬರೆದು, ಅವನ್ನು ಚೈತ್ರದಿಂದ ಫಾಲ್ಗುಣದವರೆಗೆ ೧೨ ಸಂಪುಟಗಳನ್ನಾಗಿಸಿ ಪ್ರಕಟಿಸಿದರು. ಅಸಂಖ್ಯಾತ ಕನ್ನಡ ಕಣ್ಮಣಿಗಳು ಇವನ್ನು ಓದಿ ತಮ್ಮ ಅರಿವಿನ ಪರಿಧಿಯನ್ನು ಹಿಗ್ಗಿಸಿಕೊಂಡಿದ್ದಾರೆ. ಇಂದಿಗೂ ಈ ಕಥೆಗಳನ್ನು ಮಕ್ಕಳಿಗೆ ಓದಿ ರಂಜಿಸಬಹುದು, ನಾವೂ ಓದಿ ಬಾಲ್ಯಕ್ಕೆ ಮರಳಿ ಪುಳಕಿತರಾಗಬಹುದು.
ವೈದ್ಯಕೀಯ ಸಾಹಿತ್ಯಕ್ಕೆ ಅನುಪಮಾ ಅವರ ಕೊಡುಗೆ ಅಪಾರ. ಮುಖ್ಯವಾಗಿ ಇದರಲ್ಲೂ ತಾಯಿ, ಮಗುವಿನ ಸ್ವಾಸ್ಥ್ಯಕ್ಕೆ ಸಂಬಂಧಿಸಿದ, ವನಿತೆಯರ ಆರೋಗ್ಯ, ದಾಂಪತ್ಯ ವಿಜ್ಞಾನಕ್ಕೆ ಕೈಪಿಡಿಯಾಗುವ ಕೃತಿಗಳೇ ಹೆಚ್ಚು. ಈ ಕೃತಿಗಳು ಪತ್ರಿಕೆಗಳಲ್ಲಿ ಸರಣಿಯಾಗಿ ಬಂದು ಕನ್ನಡದ ಮೂಲೆ -ಮೂಲೆಗಳನ್ನು ತಲುಪಿವೆ. ೧೯೭೮ರಲ್ಲಿ ಸ್ತನದ ಕ್ಯಾನ್ಸರ್ ಅವರನ್ನು ತಟ್ಟುತ್ತದೆ. ಇದರಿಂದಾಗಿಯೇ ಅವರು ೩ ಸಲ ಶಸ್ತ್ರ ಚಿಕಿತ್ಸೆಗೊಳಗಾಗುತ್ತಾರೆ. ಅನಾರೋಗ್ಯದ ನಡುವೆಯೇ ಅವರು ಕ್ಯಾನ್ಸರ್ ಬಗ್ಗೆ “ಕ್ಯಾನ್ಸರ್ ಜಗತ್ತು” ಎಂಬ ಪುಸ್ತಕವನ್ನು ಬರೆಯುತ್ತಾರೆ.
ಅನುಪಮಾ ಅವರಿಗೆ ಪ್ರವಾಸದ ಹುಚ್ಚಿತ್ತು. ಅಮೇರಿಕ, ಯುರೋಪ್ ಸುತ್ತಿ ಅವರು “ಅಂಗೈಯಲ್ಲಿ ಯುರೋ-ಅಮೇರಿಕ” ಎಂಬ ಪುಸ್ತಕ ಬರೆದರು. ಈ ಪ್ರವಾಸಗಾಥೆ “ವನಿತಾ” ಎಂಬ ಮಾಸಿಕದಲ್ಲಿ ಹರಿದು ಬಂತು. ಅದನ್ನು ಓದಿದ್ದು ನನಗಿನ್ನೂ ಹಚ್ಚ ಹಸಿರಾಗಿದೆ. ಅವರು ಲಂಡನ್ ನಗರಕ್ಕೆ ಬಂದಾಗ, ಅವರಿಗೆ ಕೈಯಲ್ಲಿ ಕೊಡೆಯಿಟ್ಟುಕೊಂಡೇ ತಿರುಗಿ, ಯಾವಾಗ ಇಲ್ಲಿ ಮಳೆ ಬರುತ್ತೋ ಊಹಿಸಲಸಾಧ್ಯ ಎಂದು ಕಿವಿ ಮಾತು ಹೇಳಿದ್ದರಂತೆ. ನನಗೆ ಈಗಲೂ ಈ ಮಾತು ನೆನಪಾಗುತ್ತಲೇ ಇರುತ್ತದೆ, ಇಲ್ಲಿನ ಹವಾಮಾನ ಅನುಭವಿಸಿ.
ಹುಟ್ಟಾ ಹೋರಾಟಗಾರ್ತಿ ಅನುಪಮಾ, ಸಾಹಿತ್ಯ ಕ್ಷೇತ್ರದಲ್ಲಿನ ಅಸಮಾನತೆಯ ವಿರುದ್ಧವೂ ಹೋರಾಡಿದಾದರು. ಅರ್ಹರಾದರೂ ಅವರಿಗೆ ಸಂದ ಬೇಕಾದ ಪ್ರಶಸ್ತಿಗಳು ಸಿಗದೇ ಹೋಗಿರಬಹುದು. ಸಾಹಿತ್ಯ ಅಕಾಡೆಮಿ, ಸೋವಿಯತ್ ಲ್ಯಾ೦ಡ್ ನೆಹರೂ ಪ್ರಶಸ್ತಿಗಳು ಅವರನ್ನರಸಿ ಬಂದವು. ಕ್ಯಾನ್ಸರ್ ವಿರುದ್ಧ ಹೋರಾಡುತ್ತ, ೧೯೯೧ರಲ್ಲಿ ಓಗೊಡದ ನಾಡಿಗೆ ತೆರಳಿದರು. ೨೦೧೦ರಲ್ಲಿ ಕರ್ನಾಟಕ ಸರ್ಕಾರ ಅವರ ನೆನಪಿನಲ್ಲಿ ಕನ್ನಡ ವೈದ್ಯ ಸಾಹಿತ್ಯ ಪುರಸ್ಕಾರವನ್ನು ಪ್ರಾರಂಭಿಸಿದ್ದು ಸೂಕ್ತ.
ಬಹಳ ಉತ್ತಮ ಮಾಹಿತಿಯನ್ನು ಸಂಕ್ಷಿಪ್ತವಾಗಿ ಕಲೆಹಾಕಿದ್ದೀರಿ
LikeLike
4ಲೇಖನ ಬಹಳ ಚೆನ್ನಾಗಿ ಬಂದಿದೆ. ನಿರೂಪಣೆ ಸೊಗಸಾಗಿದೆ. ಲೇಖಕಿಗೆ ನ್ಯಾಯ ಒದಗಿಸಿರುವೆ ಲೆಕ್ಕ ಣಿಯ ಮೂಲಕ. ಅಭಿನಂದನೆಗಳು. ಅಮ್ಮ.
LikeLike
ರಾಮ್,
ಈ ಅನುಪಮ ಲೇಖಕಿಯ ಬಗೆಗಿನ ವಿವರಗಳನ್ನ ಚೆನ್ನಾಗಿ ರೂಪಿಸಿದ್ದೀರ. ಅವರ ಅನೇಕ ಕೃತಿಗಳನ್ನ ಓದಿದ್ದೀನಿ. ಅವರ ಇಬ್ಬರು ಹೆಣ್ಣುಮಕ್ಕಳು (ತೇಜಸ್ವಿನಿ ಮತ್ತು ಸೀಮಂತಿನಿ) ಕೂಡ ಅವರ ಅಪ್ಪಅಮ್ಮಂದಿರಷ್ಟೇ ಆಸಕ್ತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿದ್ದಾರೆ.
ವಿನತೆ
LikeLike
Short, consice but very informative article.Very nicely written.
LikeLike
ರಾಮಶರಣ್ ಅವರೇ, ಅನುಪಮಾ ನಿರಂಜನ ಅವರು ಕನ್ನಡ ಸಾಹಿತ್ಯದ ಅನುಪಮ ಲೇಖಕಿಯರಲ್ಲಿ ಒಬ್ಬರು. ಆಕೆಯ ಬಾಲ್ಯ, ಯವ್ವನದ ದಿನಗಳು ಬಹಳ ಕಷ್ಟಕರವಾಗಿತ್ತೆಂದು ಓದಿದ್ದೇನೆ. ನಿರಂಜನರ ಸಹಾಯದಿಂದ ವೈದ್ಯಕೀಯ ಶಿಕ್ಷಣವನ್ನು ಮುಗಿಸಿ ಒಬ್ಬ ಯಶಸ್ವಿ ವೈದ್ಯೆಯಾಗಿದ್ದರೆನ್ನುವುದು ಸತ್ಯವಾದ ಮಾತು. ಆಕೆಯ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿದ್ದಾಗ, ಶಾಲಾ-ಕಾಲೇಜಿನ ದಿನಗಳಲ್ಲಿದ್ದ ನಾನು ಆಕೆಯ ಕಟ್ಟಾ ಅಭಿಮಾನಿಯಾಗಿದ್ದೆ. ಆಕೆಯ ಕಥೆಗಳಲ್ಲಿ, ಆಕಾಶಗಂಗೆ, ಸಸ್ಯಶಾಮಲಾ, ಋಣ, ಚಿತ್ತಮೋಹನ, ನಟಿ, ಮಾಧವಿ, ಮೂಡಣ-ಪಡುವಣ ಹೀಗೆ ಹಲವಾರು ಕಥೆಗಳು ಸುಧಾ ವಾರಪತ್ರಿಕೆಯಲ್ಲಿ ಬಹಳ ಜನಪ್ರಿಯವಾಗಿದ್ದವು. ಜೊತೆಗೆ ಆಕೆಯ ವೈದ್ಯಕೀಯ ವಿಜ್ಞಾನದ ಬಗ್ಗೆ ಬರೆದ ಜನಪ್ರಿಯ ಲೇಖನಗಳು, ಪುಸ್ತಕಗಳು ಕೂಡ ನನಗೆ ಅತ್ಯಂತ ಪ್ರಿಯವಾದವು. ಒಟ್ಟಿನಲ್ಲಿ ೭೦-೮೦ ರ ದಶಕದಲ್ಲಿ ಕನ್ನಡ ಸಾಹಿತ್ಯ ಕಂಡ ಅತ್ಯುತ್ತಮ ಮಹಿಳಾ ಲೇಖಕಿಯರಲ್ಲಿ ಅನುಪಮಾ ನಿರಂಜನ ಒಬ್ಬರು. ಅವರ ಬಗ್ಗೆ ನೀವು ಬರೆದ ಮತ್ತು ನಿರೂಪಿಸಿದ ಈ ಲೇಖನ ಬಹಳ ಸೊಗಸಾಗಿದೆ. ಧನ್ಯವಾದಗಳು. ಅನುಪಮರ ಪತಿ ನಿರಂಜನರು ಕೂಡ ಬಹಳ ಪ್ರಭಾವಶಾಲಿ ಲೇಖಕರೇ! ಅವರ ಸ್ವಾಮಿ ಅಪರಂಪಾರ ನನಗೆ ಬಿಎಸ್.ಸಿ ಪದವಿಯ ಅಧ್ಯಯನದಲ್ಲಿ ಕನ್ನಡ ಭಾಷೆಯ ಪಠ್ಯ ಪುಸ್ತಕವಾಗಿತ್ತು. ಆಕೆ ನಿಜಕ್ಕೂ ಹುಟ್ಟು ಹೋರಾಟಗಾರ್ತಿ.
ಉಮಾ ವೆಂಕಟೇಶ್
LikeLike