ಅವನತಿಯ ಹಾದಿಯಲ್ಲಿರುವ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ವಿಶ್ವ ಸಂಸ್ಥೆ ಘೋಷಿಸಿದ್ದು ನಮಗೆಲ್ಲ ಆಘಾತಕಾರಿ ವಿಷಯ. ಭಾಷೆಯನ್ನು ಉಳಿಸಿ ಬೆಳೆಸುವುದು ಕಷ್ಟ ಸಾಧ್ಯ. ಕಾಡನ್ನು ಮರ ನೆಟ್ಟು ಹೇಗೆ ಬೆಳೆಸಲಾಗದೋ, ಹಾಗೇ ಭಾಷೆಯನ್ನು ಸಸಿ ನೆಟ್ಟು ಬೆಳೆಸುವುದು ಅವಶ್ಯ. ಬಾಲ್ಯದಲ್ಲಿ ಕನ್ನಡದ ಸಂಸ್ಕಾರ ಮಾಡಿ, ನೀರೆರೆರೆದು ಪೋಷಿಸುವುದು ನನ್ನ ದೃಷ್ಟಿಯಲ್ಲಿ ತಂದೆ-ತಾಯಿಗಳ ಕರ್ತವ್ಯಗಳಲ್ಲೊಂದು. ನಮ್ಮೆಲ್ಲರ ಮನದಾಳದಲ್ಲಿ ಮಾತೃ ಭಾಷಾ ಪ್ರಜ್ಞೆ ಜಾಗೃತವಾಗಿಯೇ ಇರುತ್ತದೆ. ಕಾಲ ಕಾಲಕ್ಕೆ ಗೆಳೆಯರೊಂದಿಗೆ ಕಲೆತಾಗ, ತವರಿಗೆ ಹೋದಾಗ ಇನ್ನು ಮಕ್ಕಳಿಗೆ ಕನ್ನಡ ಕಲಿಸಲೇ ಬೇಕೆಂಬ ತುಡಿತ ತೀವ್ರವಾಗುವದು ಸಹಜ. ದೈನಂದಿನ ಬಾಳಿನ ಹೋರಾಟಕ್ಕೆ ಮರಳುತ್ತಿದಂತೇ, ಸಿಗುವ ಸಮಯಕ್ಕೆ ಕತ್ತರಿ ಹಾಕಿದಂತೇ ತುಡಿತ ಕಾವಿಳಿದ ಜ್ವಾಲಾಮುಖಿಯಂತೆ ಸುಪ್ತವಾಗಿ ಬಿಡುತ್ತದೆ.
ಈ ಚಕ್ರವ್ಯೂಹದಿಂದ ಹೊರ ಬರುವುದು ಸುಲಭವಲ್ಲ. ಸತತವಾಗಿ ಸಮಯ ತೆರುವು ಮಾಡಿಕೊಂಡು ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯ ನಮ್ಮ ಭಾಷೆಯನ್ನು ಉಳಿಸುವಲ್ಲಿ ನಮ್ಮ ಅಳಿಲು ಸೇವೆಯಾದಿತು. ಎಲ್ಲರು ಭಾಷಾ ತಜ್ಞರಲ್ಲ; ಕಲಿಸುವ ಕಲೆ ಎಲ್ಲರಿಗೂ ಸಿದ್ಧಿಸಿಲ್ಲ. ಈ ದಿಸೆಯಲ್ಲಿ ಯುಕೆ ಕನ್ನಡ ಬಳಗ ಹುಟ್ಟಿಹಾಕಿದ “ಕನ್ನಡ ಕಲಿ” ಕಾರ್ಯಕ್ರಮ ಒಂದು ಉತ್ತಮ ಪ್ರಯತ್ನ. ಉತ್ಸಾಹಿತರಿಗೆ ಬೇಕಾಗುವ ಬೋಧನಾ ಸಾಮಗ್ರಿ, ತಂತ್ರಗಳನ್ನು ಕನ್ನಡ ಕಲಿ ಒದಗಿಸಿಕೊಟ್ಟಿದೆ. ಅಕ್ಷರಜ್ಞಾನ, ಸಂಭಾಷಣಾ ತಂತ್ರಗಳನ್ನು ಹಂತ ಹಂತವಾಗಿ ಪರಿಚಯಿಸಿ, ಬೆಳೆಸುವ ಪರಿಯ ಹಂದರವನ್ನು ಹಾಕಿ ಕೊಟ್ಟಿದೆ. ಈ ದೇಶದಲ್ಲಿ ಹಲವಾರು ಕಡೆ “ಕನ್ನಡ ಕಲಿ“ ವಾರಾಂತ್ಯ ಶಾಲೆಗಳನ್ನು ಹಲವಾರು ಪ್ರಾರಂಭಿಸಿದರು. ಕೆಲವೆಡೆ ಕುಂಟುತ್ತಾ ಸಾಗಿದೆ, ಕೆಲವೆಡೆ ನಿಂತು ಹೋಗಿದೆ. ಅದಕ್ಕೆ ಕಾರಣಗಳು ಹಲವಾರು ಇರಬಹುದು. ಇಬ್ಬರು ಮಕ್ಕಳ ತಂದೆಯಾಗಿ ನಾನು ಕಂಡಿದ್ದೇನೆಂದರೆ, ಪೋಷಕರಾದ ನಮಗೆ ಆರಂಭ ಶೂರತ್ವ ಜಾಸ್ತಿ. ಪ್ರಾರಂಭದ ಉತ್ಸಾಹ ಬಲು ಬೇಗ ಬತ್ತಿ ಹೋಗುತ್ತದೆ. ಮಕ್ಕಳು ಹೊರಗಡೆ ಬಳಸುವ ಇಂಗ್ಲೀಷ್ ನಲ್ಲಿ ಮಾತನಾಡುವುದು ನಮಗೆ ಸುಲಭ; ತಗ್ಗಿನೆಡೆ ನುಗ್ಗುವ ನೀರಿನಂತೆ. ಹೊರನಾಡಿನಲ್ಲಿ ಕನ್ನಡ ಕಲಿತು ಆಗುವುದೇನಿದೆ ಎಂಬ ಉದಾಸೀನತೆಯೂ ಅರಿವಿಲ್ಲದಂತೆ ಈ ಮನಸ್ಥಿತಿಗೆ ಕುಮ್ಮಕ್ಕು ಕೊಡುತ್ತದೆ. ನಾವು ಮಕ್ಕಳನ್ನು ಸತತವಾಗಿ, ಕನ್ನಡ ಕಲಿಕೆಯ ತರಗತಿಗಳಿಗೆ ಕರೆದೊಯ್ಯಬೇಕು. ಅಲ್ಲಿ ಕೊಡುವ ಮನೆ ಪಾಠವನ್ನು ತಪ್ಪಿಸದೇ ಮಾಡಲು ಉತ್ತೇಜಿಸಬೇಕು. ಇದು ನಮಗೊಂದು ಹೊರೆ ಎಂದೆಣಿಸದೇ, ಮಕ್ಕಳೊಡನೆ ಕುಳಿತು ವಾರಕ್ಕೆ ಒಂದು ಗಂಟೆಯಾದರೂ ವಿನಿಯೋಗಿಸಿದರೆ ಹನಿ-ಹನಿಗಳು ಹಳ್ಳವಾದೀತು.
ಮಾತೃಭಾಷೆಯನ್ನು ಕಲಿತರೆ ಆಗುವ ಉಪಯೋಗಗಳು ಹಲವಾರು. ವಾರಾಂತ್ಯದ ಕ್ಲಾಸುಗಳು ಇದಕ್ಕೆ ಸಮಗ್ರ ಪರಿಹಾರವಲ್ಲ; ಸಮಯದ ಪರಿಣಾಮಕಾರಿ ಉಪಯೋಗವೂ ಅಲ್ಲ. ದಿನ ನಿತ್ಯ ಮನೆಯಲ್ಲಿನ ಕನ್ನಡದ ಬಳಕೆ ಅತ್ಯಗತ್ಯ. ತಂತ್ರಜ್ಞಾನದ ಉಪಯೋಗ ಕನ್ನಡಿಗರು ಈ ದಿಸೆಯಲ್ಲಿ ಮಾಡಬೇಕಾದ ಅನಿವಾರ್ಯತೆ ಇಂದು ನಮಗಿದೆ. ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಉಪಯೋಗಿಸದ; ಯೂಟ್ಯೂಬ್ ನೋಡದ ಮಕ್ಕಳಿಲ್ಲ. ಜಗತ್ತಿನ ಹಲವಾರು ಭಾಷೆಗಳಲ್ಲಿ ಉನ್ನತ ಮಟ್ಟದ ಗ್ರಾಫಿಕ್ ಬಳಸಿದ ಪ್ರಚಲಿತ ಯಾ ಮನ ಮುದಗೊಳಿಸುವ ವಿಡಿಯೋಗಳು ನಮ್ಮ ಮುಷ್ಟಿಯಲ್ಲೇ ಇವೆ. ಆದರೆ ಮಕ್ಕಳ ಮನಸ್ಸನ್ನು ಹಿಡಿದಿಡಿಸುವ ಕನ್ನಡದ ವಿಡಿಯೋಗಳು ಮಕ್ಕಳಿಗೆ ಇನ್ನೂ ಲಭ್ಯವಿಲ್ಲ. ಭಾರತದಲ್ಲೇ, ಪ್ರಚಲಿತ ಕಾರ್ಟೂನ್ಗಳು ಹಿಂದಿ, ತಮಿಳು, ತೆಲಗಿನಲ್ಲಿ ಬಿತ್ತರಿಸುತ್ತಾರೆ, ಕನ್ನಡದಲ್ಲಲ್ಲ! ಬುದ್ಧ ಇಂದಿದ್ದರೆ, ಐಟಿ ಇಂಜಿನಿಯರ್ ಇಲ್ಲದ ಮನೆಯಿಂದ ಸಾಸುವೆ ತರೆನ್ನುತ್ತಿದ್ದನೇನೋ? ಜೀವನದ ಹಲವಾರು ಮಜಲುಗಳಲ್ಲಿ ಕನ್ನಡವನ್ನು ಸಂಯೋಜಿಸಿದರೆ ಮುಂದಿನ ಪೀಳಿಗೆಗೆ ಕನ್ನಡದ ದೀಪವನ್ನು ದಾಟಿಸಬಹುದು. ಇದೊಂದು ಒಟ್ಟಂದದ ಕೈಂಕರ್ಯ.
ರಾಂ ಬರಹ ತುಂಬ ಮಾರ್ಮಿಕವಾಗಿದೆ. ಇಂಗ್ಲೀಷ್ ಭಾಷೆ ಜಾಗತಿಕ ಭಾಷೆಯಾಗಿ, ಪೆಡಂಭೂತವಾಗಿ, ಭಾರತದ ಆರ್ಥಿಕವಾಗಿ ಮುಂದುವರೆದ ನಗರ ಜನರ ಭಾಷೆಯಾಗಿ ಬೆಳೆಯುತ್ತಿದೆ, ಭಾರತದ ಉಳಿದ ಭಾಷೆಗಳನ್ನು ತುಳಿದು ಹೂಂಕರಿಸುತ್ತಿದೆ. ಅಂಥಹುದರಲ್ಲಿ ಇಂಗ್ಲೀಷ್ ಭಾಷೆಯ ತವರು ಮನೆಯಲ್ಲಿ ಹುಟ್ಟಿ ಬೆಳೆದ ಕನ್ನಡದ ಪಿತೃಗಳ ಮಕ್ಕಳು ಕನ್ನಡ ಓದಲು ಬರೆಯಲು ಮಾತಾಡಲು ಕಲಿಯುತ್ತಾರೆಂದರೆ ಅದು ಹೆಮ್ಮೆ ಪಡಬೇಕಾದ ವಿಷಯವೇ ಅಲ್ಲವೆ? – ಕೇಶವ
LikeLike
ನಮ್ಮಲ್ಲಿನ ಕೆಲವು ತಂದೆ ತಾಯಿಗಳೇ ಮಕ್ಕಳು ತಮ್ಮನ್ನು ಮಮ್ಮಿ ಡ್ಯಾಡಿ ಎಂದು ಸಂಭೋದಿಸುವಂತೆ ಸೂಚನೆ ನೀಡುತ್ತಾ ಬೆಳಸುತ್ತಾರೆ. ಹೀಗೆ ಮೊದಲುಗೊಂಡ ‘ಕನ್ನಡ ಮೊದಲನೇ ಪಾಠ’ ಯಾವದಿಕ್ಕಿಗೆ ಸಾಗುವುದು ಎಂಬುದನ್ನು ಎಲ್ಲರು ಊಹಿಸಬಹುದು. ಕನ್ನಡ ಭಾಷೆ ನಮಗೆ ಎಷ್ಟು ಪ್ರಸ್ತುತ ಎಂಬ ವಿಚಾರದಲ್ಲಿ ಅನಿವಾಸಿಗಳಾದ ನಮ್ಮಲ್ಲಿ ಒಮ್ಮತವಿಲ್ಲ. ಮಕ್ಕಳಿಗೆ ಕನ್ನಡ ಪ್ರಜ್ಞೆ ಅರಿವಾಗಬೇಕಾದಲ್ಲಿ ಅದು ತಂದೆ ತಾಯಿಗಳಿಗೆ ಪ್ರಸ್ತುತವಾಗಿರಬೇಕು. ಈ ವಿಚಾರ ಅನಿವಾಸಿಗಳಿಗೆ ನಿವಾಸಿಗಳಿಗಿಂತ ಮುಖ್ಯವಾದ ವಿಚಾರ. ಇಂಗ್ಲಿಷ್ ಭಾಷೆಯನ್ನಾಡದ ಮನೆ ಹಿರಿಯರು ಮಕ್ಕಳನ್ನು ಕಂಡಾಗ ಕನ್ನಡದಲ್ಲಿ ಮಾತನಾಡಿಸುವುದರ ಮೂಲಕ ಕೆಲವು ಮನೆಗಳಲ್ಲಿ ಅನಿವಾಸಿ ಮಕ್ಕಳು ಕನ್ನಡವನ್ನು ಕಲಿತಿದ್ದಾರೆ. ‘ಕನ್ನಡ ಕಲಿ’ ಹೀಗೆ ಬೇರೆ ಬೇರೆ ಸ್ವರೂಪಗಳಲ್ಲಿ ಕೂಡ ನಿಲುಕಬಹುದು. ಕನ್ನಡ ಕಲಿಯುವ ವಿಚಾರದ ಬಗ್ಗೆ ಒಳ್ಳೆ ಚಿಂತನೆಯನ್ನು ರಾಮ್ ಒದಗಿಸಿದ್ದಾರೆ.
LikeLiked by 1 person
ಕಳೆದ ತಿಂಗಳು ನಡೆದ ಯು ಕೆ ಕನ್ನಡ ಬಳಗದ ಆಶ್ರಯದಲ್ಲಿ ಯುಗಾದಿ ಸಮಾರಂಭದಲ್ಲಿ ಕನ್ನಡ ಪ್ರಜ್ಜೆಯ ಬಗ್ಗೆ ನಡೆದ ವಿಚಾರ ಸಂಕೀರಣದಲ್ಲಿರಾಮಶರಣ ಅವರು ಮಂಡಿಸಿದ ವಿಷಯ ಇದು. ಸತತವಾಗಿ ಮಕ್ಕಳ ಕಿವಿಯಲ್ಲಿ ಕನ್ನಡ ಶಬ್ದಗಳು ಬೀಳದೆ, ಕೇಳಿದ ಪ್ರಶ್ನೆಗಳಿಗೆ ಅವರು ಕನ್ನಡದಲ್ಲೇ ಉತ್ತರಿಸುವ ಅಭ್ಯಾಸವುರದಿದ್ದರೆ ಮುಂದಿನ ಪೀಳಿಗೆಯಲ್ಲಿ ಕನ್ನಡ ಕಾಣುವದು ಕಷ್ಟ ಎಂಬ ವಿಷಯದ ಬಗ್ಗೆ ಪ್ರತಿಯೊಬ್ಬ ಪಾಲಕ ವಿಚಾರಿಸ ಬೇಕಾದುದು ಇದು. ಗೊತ್ತಿದ್ದ ವಿಷಯವೇ ಸರಿ. ಅವರು ಸತ್ಯವನ್ನು ಹೇಳುತ್ತ ಎಚ್ಚರಿಕೆ ಕೊಟ್ಟಿದ್ದಾರೆ. ಕನ್ನಡ ಕಲಿ ಸ್ವತಃ ನಡೆಸಿದ ಅನುಭವದಿಂದಲೇ ಅವರು ಈ ಮಾತುಗಳನ್ನು ಆಡುತ್ತಿರುವರೆಂದು ಅನಿಸುತ್ತದೆ..
LikeLiked by 1 person
ರಾಮಶರಣ್ ಅವರೆ, ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯವಾದದ್ದು. ತಗ್ಗಿನೆಡೆ ನುಗ್ಗುವ ನೀರಿನಂತೆ, ನಮ್ಮ ಮಕ್ಕಳ ಆಸಕ್ತಿ ಮತ್ತು ಕ್ರಿಯಾಶೀಲತೆಗಳು, ಇಂಗ್ಲೀಷಿನೆಡೆ ನುಗ್ಗುತ್ತವೆ. ಇದರಲ್ಲಿ ಅವರ ತಪ್ಪೇನಿಲ್ಲ. ಮಕ್ಕಳ ತಂದೆ-ತಾಯಿಯರು ಅವರಲ್ಲಿ ನಮ್ಮ ಸಿರಿಗನ್ನಡ ಭಾಷೆಯ ಬಗ್ಗೆ , ಮತ್ತು ಅವರ ಅಸ್ತಿತ್ವ ಅದರಲ್ಲಿ ಮನೆಮಾಡಿರುವ ಬಗ್ಗೆ ತಿಳಿಹೇಳಬೇಕು. ಮನೆಯೆ ಮೊದಲ ಪಾಠಶಾಲೆ ಅಲ್ಲವೇ! ಕಳೆದ ವಾರ ಕನ್ನಡ ಸಾಹಿತ್ಯರಂಗದಲ್ಲಿ, ಇಲ್ಲಿನ ಮಕ್ಕಳು, ಕನ್ನಡ ಕಲಿ ಕಾರ್ಯಕ್ರಮದಲ್ಲಿ ನಮ್ಮ ಭಾಷೆಯನ್ನು ಕಲಿತು ಸುಲಭವಾಗಿ, ಸೊಗಸಾಗಿ ಕನ್ನಡದಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ಬಗ್ಗೆ ನಾಟಕವನ್ನು ಪ್ರಸ್ತುತಪಡಿಸಿದರು. ನೋಡಿ ಬಹಳ ಸಂತೋಷವಾಯಿತು. ಈ ಕಾರ್ಯಕ್ರಮವನ್ನು ಯು.ಕೆ ಕನ್ನಡ ಬಳಗದ ಸದಸ್ಯರು ಯಶಸ್ವಿಯಾಗಿ ಮುನ್ನಡೆಸಿದರೆ, ಅಲ್ಲಿನ ನಮ್ಮ ಮಕ್ಕಳೂ ಕನ್ನಡ ಕಲಿಯುವುದರಲ್ಲಿ ಯಶಸ್ವಿಯಾಗುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಶಾಲೆಯಲ್ಲಿ ಅವರು ಫ಼್ರೆಂಚ್, ಜರ್ಮನ್ ಮತ್ತು ಸ್ಪಾನಿಶ್ ಭಾಷೆಗಳನ್ನು ಕಲಿಯುತ್ತಾರಲ್ಲವೇ! ನಮ್ಮ ಭಾಷೆಯನ್ನು ಕಲಿಯಲು ಯಾಕೆ ಸಾಧ್ಯವಿಲ್ಲ? ಅವರ ಮಾತಾಪಿತೃಗಳು ಅವರನ್ನು ಈ ದಿಶೆಯಲ್ಲಿ ಮುನ್ನಡೆಸಿಲ್ಲ. ಅವರ ಕನ್ನಡ ಪ್ರಗ್ನ್ಯೆ ಜಾಗೃತವಾಗಬೇಕು. ನಮ್ಮ ಭಾಷೆಯ ಅವಸಾನವಾದರೆ, ನಮ್ಮ ಸಂಸ್ಕೃತಿಯೂ ನಶಿಸುತ್ತದೆ! ಉತ್ತಮವಾದ ವಿಚಾರವನ್ನು ಮುಂದಿಟ್ಟಿದ್ದೀರಿ. ಧನ್ಯವಾದಗಳು.
ಉಮಾ ವೆಂಕಟೇಶ್
LikeLiked by 1 person