ಸಾಮಾಜಿಕ ಜಾಲತಾಣಗಳು ಮತ್ತು ಕನ್ನಡಪ್ರಜ್ಞೆ – ವೈಶಾಲಿ ದಾಮ್ಲೆ

(ಇತ್ತೀಚೆ ನಡೆದ ಕನ್ನಡ ಬಳಗದಲ್ಲಿ `ಅನಿವಾಸಿ`ತಂಡವು ಮೈ ಶ್ರೀ ನಟರಾಜರ ಆತಿಥ್ಯದಲ್ಲಿ ಕನ್ನಡ ಪ್ರಜ್ಞೆತ ಬಗ್ಗೆ ವಿಚಾರ ಸಂಕಿರಣ ನಡೆಸಿತು. ಅಲ್ಲಿ ವೈಶಾಲಿ ದಾಮ್ಲೆ ಸಾಮಾಜಿಕ ತಾಣಗಳ ಕುರಿತು ಮಾತಾಡಿದರು. ಅದರ ಬರಹ ರೂಪ ಇಲ್ಲಿದೆ – ಸಂ)

ಇಂದಿನ ಆಧುನಿಕ ಜಗತ್ತಿನಲ್ಲಿ, ಮಾಹಿತಿ ತಂತ್ರಜ್ಞಾನವು ಮನುಷ್ಯನಿಗೆ ಅಶನ, ವಸನ, ವಸತಿಗಳಷ್ಟೇ ಮೂಲಭೂತವಾದ ಅವಶ್ಯಕತೆಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಅನಿಸುತ್ತದೆ. ಕಳೆದ ಸುಮಾರು ಹತ್ತು ವರ್ಷಗಳ ಹಿಂದೆ ಸೃಷ್ಟಿಯಾದ ಸಾಮಾಜಿಕ ಜಾಲತಾಣಗಳು ಎಂಬ ಹೊಸ ಪ್ರಪಂಚವು ನಮ್ಮಂಥ ಅನಿವಾಸಿಗಳ ಜೀವನಕ್ಕೆ ಹೊಸ ಆಯಾಮವನ್ನು ನೀಡಿದೆ. ತಾಯ್ನಾಡಿನಿಂದ ನಾವು ಭೌತಿಕವಾಗಿ ಸಾವಿರಾರು ಮೈಲಿ ದೂರದಲ್ಲಿದ್ದರೂ, ಭಾವನಾತ್ಮಕವಾಗಿ ಹಾಗೂ ವೈಚಾರಿಕವಾಗಿ ಮಾತೃಭೂಮಿ ಹಾಗೂ ಮಾತೃಭಾಷೆಯೊಂದಿಗಿನ ನಮ್ಮ ಅನುಬಂಧವನ್ನು ಬಲಿಷ್ಠಗೊಳಿಸುವಲ್ಲಿ ಸಾಮಾಜಿಕ ಜಾಲತಾಣಗಳು ಮಹತ್ತರ ಪಾತ್ರ ವಹಿಸಿವೆ.

ಕರ್ನಾಟಕದ ಬಹುತೇಕ ವಿದ್ಯಮಾನಗಳ ಚರ್ಚೆಗಳು ಫೇಸ್ ಬುಕ್ ವಾಟ್ಸ್ ಆಪ್ಗಳಲ್ಲಿ ನಡೆಯುತ್ತವೆ. ಹೀಗಾಗಿ, ದಿನಪತ್ರಿಕೆಗಳನ್ನು ಓದದೆಯೂ, ಟಿವಿ ವಾಹಿನಿಗಳನ್ನು ನೋಡದೆಯೂ ಕರ್ನಾಟಕದ ಆಗುಹೋಗುಗಳನ್ನು ತಿಳಿದುಕೊಳ್ಳಲು ನಮಗೆ ಇನ್ನೊಂದು ಮಾಧ್ಯಮ ಸಿಕ್ಕಂತಾಗಿದೆ. ಅಷ್ಟು ಮಾತ್ರವಲ್ಲ, ಈ ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇನ್ನೊಂದು ಹೆಸರಾಗಿವೆ. ಸಾಮಾನ್ಯವಾಗಿ ಯಾವುದೋ ಒಂದು ರಾಜಕೀಯ ಪಕ್ಷದ ಅಥವಾ ಜಾತಿ-ಪಂಗಡದ ಕೈಗೊಂಬೆಯಾಗಿರುವ ಸಾಂಪ್ರದಾಯಿಕ ಸುದ್ದಿ ಮಾಧ್ಯಮಗಳ ಏಕಸ್ವಾಮ್ಯಕ್ಕೆ ದೊಡ್ಡ ಸವಾಲೆಸೆದಿವೆ. ಒಂದೇ ವಿಷಯಕ್ಕೆ ಸಂಬಂಧಿಸಿದ ಹಲವು ರೀತಿಯ ಚರ್ಚೆಗಳು ಇಲ್ಲಿ ನಡೆಯುವುದರಿಂದ, ಓದುಗರು ಒಂದೇ ವಿಷಯವನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ಪರಾಮರ್ಶಿಸಬಹುದಾಗಿದೆ.

ತಮ್ಮ ಪ್ರತಿಭೆಯನ್ನು ತೋರ್ಪಡಿಸಿಕೊಳ್ಳಲು, ಪ್ರೋತ್ಸಾಹಿಸಲು ಸೂಕ್ತ ಮಾಧ್ಯಮಗಳಿಲ್ಲದೆ ತೆರೆಮರೆಯಲ್ಲೇ ಉಳಿದ ಒಬ್ಬಿಬ್ಬರು ಪ್ರತಿಭಾನ್ವಿತರ ಪರಿಚಯವಾದರೂ ನಮ್ಮ ನಿಮ್ಮೆಲ್ಲರಿಗೂ ಇದೆ. ಈಗಿರುವ ಫೇಸ್ ಬುಕ್, ಬ್ಲಾಗ್ ನಂತಹ ಮಾಧ್ಯಮಗಳು ಇಂತಹ ಪ್ರತಿಭೆಗಳಿಗೊಂದು ಯೋಗ್ಯ ವೇದಿಕೆಯಾಗಿವೆ. ಇದರಿಂದಾಗಿ ಬಹಳಷ್ಟು ಯುವಕ-ಯುವತಿಯರು ಮಾತ್ರವಲ್ಲ ಗೃಹಿಣಿಯರೂ ಕೂಡ ಕಲೆ-ಸಾಹಿತ್ಯಗಳಲ್ಲಿ ತಮಗಿರುವ ಒಲವನ್ನು ಹಂಚಿಕೊಳ್ಳಲು, ಉಳಿಸಿ -ಬೆಳೆಸಲು ಸಾಧ್ಯವಾಗಿದೆ.

ಕನ್ನಡ ಪುಸ್ತಕಗಳ ಹಾಗೂ ಚಲನಚಿತ್ರಗಳ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ಕೂಡಾ ಈ ತಾಣಗಳು ಪ್ರಮುಖ ಪಾತ್ರ ವಹಿಸಿವೆ. ಕನ್ನಡದ ಯುವಪ್ರತಿಭೆಗಳಿರುವ ಹಲವಾರು ಕನ್ನಡ ಚಿತ್ರಗಳು ಸೋಷಿಯಲ್ ಮಿಡಿಯಾದಿಂದ ಪ್ರಚಾರ ಪಡೆದು ಭಾರತ ಮಾತ್ರವಲ್ಲ ಹೊರದೇಶಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನಗಳನ್ನು ಕಂಡ ನಿದರ್ಶನಗಳು ಬಹಳಷ್ಟಿವೆ.

ಕನ್ನಡ ಪುಸ್ತಕಗಳ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆಗೆ ಇತ್ತೀಚೆಗಿನ ಉದಾಹರಣೆ, ಭೈರಪ್ಪನವರ ಹೊಸ ಕಾದಂಬರಿ ‘ಉತ್ತರಕಾಂಡ’. ಕಾದಂಬರಿಯ ಬಿಡುಗಡೆಗೆ ಮುನ್ನವೇ ಅದರ ಅದರ ಬಗ್ಗೆ ಹಲವು ರೀತಿಯ ವಿಚಾರ-ವಿನಿಮಯಗಳು ನಡೆದದ್ದು , ಕಾದಂಬರಿಯ ಪ್ರತಿಗಳು ಬಿಸಿದೋಸೆಯಂತೆ ಖರ್ಚಾಗಿ ಮರುಮುದ್ರಣ ಕಂಡದ್ದು, ಮತ್ತೊಮ್ಮೆ ಭೈರಪ್ಪನವರ ಜನಪ್ರಿಯತೆ ಕಂಡು ‘ಬುದ್ಧಿಜೀವಿ’ಗಳ ನಿದ್ದೆ ಕೆಟ್ಟದ್ದು, ಇತ್ಯಾದಿ ಸುದ್ದಿಗಳು ಹಲವು ದಿನಗಳ ಕಾಲ ನನ್ನ ಭೈರಪ್ಪಾಭಿಮಾನಿ ಸ್ನೇಹಿತರ ಫೇಸ್ ಬುಕ್ ಗೋಡೆಯ ಮೇಲೆ ರಾರಾಜಿಸುತ್ತಿದ್ದವು. ಒಂದು ಕಾಲದಲ್ಲಿ, ಕನ್ನಡದ ಆಳವಾದ ಜ್ಞಾನವಿದ್ದ ಓದುಗರಿಗಷ್ಟೇ ಮೀಸಲಾಗಿದ್ದ ಭೈರಪ್ಪರಂಥ ಪ್ರಬುಧ್ಧ ಸಾಹಿತಿಗಳ ಸಾಹಿತ್ಯದತ್ತ ಈಗ ಹೆಚ್ಚು ಹೆಚ್ಚು ಯುವಜನರು ಆಕರ್ಷಿತರಾಗುತ್ತಿರುವುದಕ್ಕೆ, ಇಂತಹ ಮೇರುಸಾಹಿತ್ಯ ಸಮಾಜದ ಎಲ್ಲಾ ಸ್ತರದ ಜನರನ್ನೂ ತಲುಪುವುದಕ್ಕೆ ಸಾಮಾಜಿಕ ಜಾಲತಾಣಗಳು ಪ್ರಮುಖ ಕಾರಣ ಎಂದು ನನ್ನ ಅನಿಸಿಕೆ.

ಇನ್ನು ನಮ್ಮ ನೆರೆರಾಜ್ಯಗಳ ಜನರಲ್ಲಿರುವಂತೆ, ಕರ್ನಾಟಕದ ಜನತೆಯನ್ನು ನೋಡಿದರೆ ನಾವೆಲ್ಲರೂ ಒಂದು, ನಾವು ಕನ್ನಡಿಗರು ಎಂಬ ಏಕತೆ ನಮ್ಮಲ್ಲಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಎತ್ತಿನಹೊಳೆ ಪ್ರಾಜೆಕ್ಟ್ ದಕ್ಷಿಣ ಕನ್ನಡದ ಸಮಸ್ಯೆ, ಮಹದಾಯಿ ವಿವಾದ ಉತ್ತರ ಕರ್ನಾಟಕದ ಸಮಸ್ಯೆ ಎನ್ನುವಂಥಾ ಪ್ರತ್ಯೇಕತೆ ನಮ್ಮ-ನಮ್ಮಲ್ಲೇ ಬಹಳಷ್ಟಿದೆ. ಆದರೆ ಇದಕ್ಕೆ ಅಪವಾದವೆಂಬಂತಹ ಒಂದು ಪ್ರಸಂಗ ಇತ್ತೀಚೆಗೆ ನಡೆಯಿತು. ತಮಿಳುನಾಡಿನಲ್ಲಿ ಜಲ್ಲಿಕಟ್ಟು ವಿವಾದದ ಕಾವೇರಿದ್ದಾಗ, ದಕ್ಷಿಣ ಕನ್ನಡದಲ್ಲಿ ಶತಮಾನಗಳಿಂದ ನೆಡೆದುಕೊಂಡು ಬರುತ್ತಿರುವ, ಕಂಬಳ ಎಂಬ ಕ್ರೀಡೆಯ ಬಗ್ಗೆಯೂ ಬಹಳ ವಾದ-ವಿವಾದಗಳು ನಡೆದುವು. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಕ್ರೀಡೆ ನಮ್ಮ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ, ಇದನ್ನು ಸಂರಕ್ಷಿಸಬೇಕು ಎಂದು ಕಂಬಳ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಇದರ ಪ್ರಚಾರದಲ್ಲಿ, ಕಂಬಳದ ಬಗ್ಗೆ ಅರಿವು ಮೂಡಿಸುವಲ್ಲಿ, ಸಾಮಾಜಿಕ ಜಾಲತಾಣಗಳು ಬಹುದೊಡ್ಡ ಪಾತ್ರ ವಹಿಸಿದ್ದವು. ಈ ಹೋರಾಟದಲ್ಲಿ ದಕ್ಷಿಣ ಕನ್ನಡ ಮಾತ್ರವಲ್ಲದೆ, ಕರ್ನಾಟಕದ ಎಲ್ಲಾ ಪ್ರಾಂತ್ಯಗಳ ಕನ್ನಡಿಗರೂ ಕೈ ಜೋಡಿಸಿದರು. ಇದು, ಕನ್ನಡಿಗರು ತಮ್ಮಲ್ಲಿರುವ ಭೇದ-ಭಾವಗಳನ್ನು ಮರೆತು ಒಂದಾಗುವಲ್ಲಿ, ಕನ್ನಡ ಪ್ರಜ್ಞೆಯನ್ನು ಉಳಿಸಿ- ಬೆಳೆಸುವಲ್ಲಿ ಸಾಮಾಜಿಕ ಜಾಲತಾಣಗಳು ಹೇಗೆ ಸಹಕಾರಿಯಾಗಿವೆ ಎಂಬುದಕ್ಕೆ ಜೀವಂತ ಸಾಕ್ಷಿ.

ಹೊರರಾಜ್ಯಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಜನ ಹಿಂದಿ ಅಥವಾ ಇಂಗ್ಲಿಷ್ ನಲ್ಲಷ್ಟೇ ವ್ಯವಹರಿಸುವುದನ್ನು ನಾವೆಲ್ಲಾ ಕಂಡಿದ್ದೇವೆ, ಕಂಡು ದುಃಖ ಪಟ್ಟಿದ್ದೇವೆ. ಆದರೆ ನಮ್ಮ ಹತೋಟಿಯಲ್ಲಿರದಿರುವ ವಿಷಯದ ಬಗ್ಗೆ ಕೊರಗುವ ಬದಲು, ಅವರಿಗೆ ಕನ್ನಡ ಬರುವುದಿಲ್ಲವೆಂದು ಇಂಗ್ಲಿಷ್ ನಲ್ಲೇ ವ್ಯವಹರಿಸುವುದನ್ನು ಬಿಟ್ಟು ಅವರಿಗೆ ಒಂದಷ್ಟಾದರೂ ಕನ್ನಡ ಕಲಿಸುವ ಜವಾಬ್ದಾರಿ ನಮ್ಮ ಮೇಲೆಯೂ ಇದೆ ಎಂದು ನಾವು ತಿಳಿದುಕೊಳ್ಳಬೇಕು, ಬೆಂಗಳೂರಿಗರು ಹೇಗೆ ಹೊರರಾಜ್ಯದವರಿಗೆ ಕನ್ನಡದ ಅರಿವು ಮೂಡಿಸುವಲ್ಲಿ ಸಹಕರಿಸಬೇಕು ಎಂಬಂತಹ ಆರೋಗ್ಯಕರ ಚರ್ಚೆಗಳು ಈಗಿನ ಯುವಜನತೆಯ ಮಧ್ಯೆ ಸೋಷಿಯಲ್ ಮೀಡಿಯಾದ ಮೂಲಕ ನಡೆಯುತ್ತಿವೆ. ಬೆಂಗಳೂರಿಗರ ಈ ಪ್ರಯತ್ನದಿಂದ ಕೆಲವಷ್ಟು ಜನ ಅಲ್ಪಸ್ವಲ್ಪವಾದರೂ ಕನ್ನಡ ಮಾತಾಡುವುದನ್ನು ಕಲಿತಿದ್ದಾರೆಂದೂ ಓದಿದ್ದೇನೆ.

ಕನ್ನಡದ, ಕರ್ನಾಟಕದ ವಿಷಯ ಬಂದಾಗ ಹಬ್ಬಗಳ ಉಲ್ಲೇಖವಾಗದಿದ್ದರೆ ಹೇಗೆ? ಹೊರದೇಶದ ಇತಿಮಿತಿಗಳಲ್ಲೇ ಹಬ್ಬಗಳನ್ನು ಆಚರಿಸುವ ಅನಿವಾಸಿಗಳಿಗೆ ಈಗ ದೂರದೇಶದಲ್ಲಿದ್ದೂ ತಮ್ಮ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುವ, ಸ್ನೇಹಿತರ ಬಂಧು ಬಾಂಧವರ ಆಚರಣೆಗಳನ್ನು ನೋಡಿ ಖುಷಿಪಡುವ ಭಾಗ್ಯ ಸಾಮಾಜಿಕ ಜಾಲತಾಣಗಳಿಂದ ದೊರಕಿದೆ. ಒಂದು ವೈಯಕ್ತಿಕ ಉದಾಹರಣೆಯನ್ನು ಕೊಡುವುದಾದರೆ, ನಮ್ಮ ಮನೆಯಲ್ಲಿ ಕೆಲವು ವರ್ಷಗಳಿಂದ ದೀಪಾವಳಿಯನ್ನು ಸಡಗರದಿಂದ ಆಚರಿಸುತ್ತೇವೆ. ನಮ್ಮ ಬ್ರಿಟಿಷ್ ಸ್ನೇಹಿತರು ಸೀರೆ, ಚೂಡಿದಾರಗಳನ್ನು ಧರಿಸಿ, ‘ದೀಪಾವಳಿಯ ಶುಭಾಶಯಗಳು’ ಎಂದು ಅಚ್ಚಗನ್ನಡದಲ್ಲಿ ನಮಗೆ ಶುಭಾಶಯ ಕೋರಿದರೆ, ಅವರ ಮಕ್ಕಳು ದೀಪಾವಳಿಯ ಬಗ್ಗೆ ಕಥೆ, ಪ್ರಬಂಧಗಳನ್ನು ಬರೆದು ತಮ್ಮ ಶಾಲೆಗಳಲ್ಲಿಯೂ ದೀಪಾವಳಿಯ ಸಂದೇಶವನ್ನು ಸಾರುತ್ತಾರೆ. ಆಚರಣೆಯ ಸಮಯದಲ್ಲಿ ತೆಗೆದ ದೀಪಾಲಂಕಾರ, ರಂಗೋಲಿ, ಹೂವಿನ ಅಲಂಕಾರಗಳ ಫೋಟೋಗಳನ್ನು ನಾನು ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಹಂಚಿಕೊಳ್ಳುತ್ತೇನೆ. ನನ್ನ ಇಬ್ಬರು ಬ್ರಿಟಿಷ್ ಸ್ನೇಹಿತೆಯರು ಕೂಡ ಹಬ್ಬದ ಫೋಟೋಗಳನ್ನು ಶೇರ್ ಮಾಡಿ, ಇಂತಹ ಒಂದು ಸುಂದರ ಹಾಗೂ ಅರ್ಥಪೂರ್ಣ ಆಚರಣೆಯಲ್ಲಿ ಭಾಗಿಯಾಗುವ ಅವಕಾಶ ಕೊಟ್ಟ ನನಗೆ ಕೃತಜ್ಞತೆ ಹೇಳಿದ್ದರು. ಇದರಿಂದ ಪ್ರೇರೇಪಿತಳಾದ ಅಮೆರಿಕಾದಲ್ಲಿರುವ ನನ್ನ ಚಿಕ್ಕಪ್ಪನ ಮಗಳು, ಕಳೆದ ದೀಪಾವಳಿಯ ಸಮಯದಲ್ಲಿ, ಅವಳ ಯುನಿವರ್ಸಿಟಿಯ ಕೆಲವು ಗೆಳೆಯ-ಗೆಳತಿಯರನ್ನು ತನ್ನ ಫ್ಲ್ಯಾಟ್ ಗೆ ಆಮಂತ್ರಿಸಿ, ಹಬ್ಬವನ್ನಾಚರಿಸಿದಳು. ಫೇಸ್ ಬುಕ್ ನಲ್ಲಿ ತನ್ನ ಹಬ್ಬದಾಚರಣೆಯ ಸಂಭ್ರಮವನ್ನು ಹಂಚಿಕೊಂಡು, ‘inspired by my cousin’ ಎಂದು ನನ್ನನ್ನು ಟ್ಯಾಗ್ ಮಾಡಿದ್ದಳು. ಹೀಗೆ ನನ್ನ ದೀಪಾವಳಿಯ ಆಚರಣೆ ಸಾಗರದಾಚೆ ಅಮೆರಿಕೆಯಲ್ಲಿಯೂ ಮಿಂಚಿದ್ದು, ಇನ್ನೊಬ್ಬರಿಗೆ ಸ್ಪೂರ್ತಿಯಾಗಿದ್ದು ಒಂದು ಸಿಹಿ ನೆನಪು. ಒಟ್ಟಿನಲ್ಲಿ, ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಕುವೆಂಪುರವರು ಹೇಳಿರುವಂತೆ ನಮ್ಮ ಕರ್ಮಭೂಮಿಯಲ್ಲಿದ್ದುಕೊಂಡೂ, ಜನ್ಮಭೂಮಿಯೊಂದಿಗಿನ ನಮ್ಮ ಬಾಂಧವ್ಯವನ್ನು ಬಲಿಷ್ಠಗೊಳಿಸುವಲ್ಲಿ, ನಮ್ಮ ಸಂಸ್ಕೃತಿ, ಆಚರಣೆಗಳ ಮಹತ್ವವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವಲ್ಲಿ, ನಾವು ವಲಸೆ ಬಂದಿರುವ ದೇಶದ ಜನರಲ್ಲಿ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವಲ್ಲಿ, ಸಾಮಾಜಿಕ ಜಾಲತಾಣಗಳ ಪಾತ್ರ ದೊಡ್ಡದು

ಹಾಗಂತ ಈ ಜಾಲತಾಣಗಳಿಂದ ಯಾವ ದುಷ್ಪರಿಣಾಮ ಅಥವಾ ತೊಂದರೆಗಳೂ ಇಲ್ಲವೆಂದಲ್ಲ. ಈ ತಾಣಗಳ ಮೂಲಕ ಮಕ್ಕಳ, ಹದಿಹರೆಯದ ಹುಡುಗಿಯರ ದುರ್ಬಲತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಕಾಮುಕರಿದ್ದಾರೆ, ಯುವಜನತೆಯನ್ನು ಭಯೋತ್ಪಾದನೆಯಂಥ ಭೀಕರ ಕೃತ್ಯಗಳತ್ತ ಆಕರ್ಷಿಸುವ ಗುಂಪುಗಳಿದ್ದಾವೆ. ಇಂತಹುದ್ದನ್ನು ತಡೆಗಟ್ಟುವ ಕಾನೂನನ್ನು ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದ್ದರೆ, ಈ ಜಾಲತಾಣಗಳ ಇನ್ನೊಂದು ಮುಖದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಹೆತ್ತವರ ಮೇಲಿದೆ. ಸಂವಹನ ಕ್ರಾಂತಿಗೆ ಕಾರಣವಾಗಿರುವ ಈ ಮಾಧ್ಯಮಗಳು ಈಗ ಜೀವನದ ಅವಶ್ಯಕ ಅಂಶಗಳಾಗಿವೆಯಾದರೂ, ಇವು ನಮ್ಮ ಬದುಕನ್ನೇ ಆಕ್ರಮಿಸದಂತೆ ನೋಡಿಕೊಳ್ಳುವುದೂ ನಮ್ಮೆಲ್ಲರ ಕರ್ತವ್ಯ. ಕುಟುಂಬದ ಜನರೊಂದಿಗಿರಬೇಕಾದ ಆತ್ಮೀಯತೆ, ದೊಡ್ಡವರಿಗೆ ತೋರಿಸಬೇಕಾದ ಗೌರವ ಮುಂತಾದ ಮೂಲಭೂತ ಮೌಲ್ಯಗಳನ್ನು ನಮ್ಮ ಮಕ್ಕಳು ಮರೆಯದಂತೆ ಅವರನ್ನು ಬೆಳೆಸಬೇಕಾಗಿರುವುದು ಈಗ ಹೆತ್ತವರಿಗಿರುವ ದೊಡ್ಡ ಸವಾಲು. ಇನ್ನು, ಒಳ್ಳೆಯದರೊಂದಿಗೆ ಕೆಟ್ಟದ್ದೂ ಇರುವುದು ಜಗದ ನಿಯಮ ಎನ್ನುವಂತೆ, ಈ ಡಿಜಿಟಲ್ ಜಗತ್ತಿನಲ್ಲಿ ಇರುವ ಪೊಳ್ಳು ವಿಚಾರಗಳೂ ಹಲವಾರು. ಹಾಗಾಗಿ ಹಂಸಕ್ಷೀರ ನ್ಯಾಯದಲ್ಲಿ ಉಲ್ಲೇಖವಾಗಿರುವ ಹಂಸದಂತೆ ಈ ಡಿಜಿಟಲ್ ಪ್ರಪಂಚದಲ್ಲಿರುವ ಹಾಲು ಹಾಗೂ ನೀರನ್ನು ಬೇರ್ಪಡಿಸಿ ತೆಗೆದುಕೊಳ್ಳಬೇಕಾದದ್ದು ಇಂದಿನ ಅಗತ್ಯ.

ಒಟ್ಟಿನಲ್ಲಿ, ಜಗತ್ತಿನ ಮಟ್ಟಿಗೆ ಸಾಮಾಜಿಕ ಜಾಲತಾಣಗಳು ಫೋಟೋ ಗಳನ್ನು ಅಪ್ ಲೋಡ್ ಮಾಡುವ, ಸ್ಟೇಟಸ್ ಅಪ್ ಡೇಟ್ ಗಳನ್ನು ಹಂಚಿಕೊಳ್ಳುವ ಒಂದು ಮಾಧ್ಯಮವಾಗಿರಬಹುದು. ಆದರೆ ಅನಿವಾಸಿಗಳ ಮಟ್ಟಿಗೆ ಇವು, ನಮ್ಮ ಹಾಗೂ ನಮ್ಮ ಜನ್ಮಭೂಮಿಯ ನಡುವಿನ ಜೀವನಾಡಿಯಾಗಿವೆ. ”ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ” ಎಂದು ಕವಿ ಕೆ ಎಸ್ ನಿಸಾರ್ ಅಹ್ಮದ್ ಅವರು ಹೇಳಿರುವಂತೆ, ನಮ್ಮನ್ನು ಕನ್ನಡದ ನೆಲ-ಜಲದೊಂದಿಗೆ, ಕನ್ನಡವೆಂಬ ಭಾವನೆಯೊಂದಿಗೆ, ಜೀವನಶೈಲಿಯೊಂದಿಗೆ ಬೆಸೆಯುವ ಸೇತುವೆಗಳಾಗಿವೆ. ಕನ್ನಡದ ಕಸ್ತೂರಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಸಾಧನಗಳಾಗಿವೆ.

One thought on “ಸಾಮಾಜಿಕ ಜಾಲತಾಣಗಳು ಮತ್ತು ಕನ್ನಡಪ್ರಜ್ಞೆ – ವೈಶಾಲಿ ದಾಮ್ಲೆ

  1. ವೈಶಾಲಿಯವರ ಬರಹ ಒಂದು ರೆಸರ್ಚ್ ಪೇಪರ್ ತರಹ, ಎಷ್ಟೊಂದು ವಿಷಯಗಳನ್ನು ಆರಿಸಿ ಪೂಣಿಸಿ ಒಂದು ಚಂದದ ಸೂತ್ರ ಮಾಡಿದ್ದಾರೆ.

    ಸಮ್ಮಾಜಿಕ ತಾಣಗಳು ನಮ್ಮ ಭಾಷೆಯ ಬೆಳವಣಿಗೆಗೆ ಹೇಗೆ ಪೂರಕ ಎಂದು ಸೊಗಸಾಗಿ ಬರೆದಿದ್ದಾರೆ.

    – ಕೇಶವ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.