‘ಟೆನೆರಿಫ್’ ಎಂಬ ಸಮ್ಮೋಹಕ ದ್ವೀಪ – ಪ್ರೇಮಲತಾ ಬರೆದ ಪ್ರವಾಸ ಕಥನ

ಸ್ಪೇನ್ ದೇಶದ ದಕ್ಷಿಣ ಭಾಗದಲ್ಲಿ ಕೆನೆರಿಯ ದ್ವೀಪಗಳಿವೆ. ಈ ಏಳು ದ್ವೀಪಗಳಲ್ಲಿ ಟೆನೆರಿಫ಼್ ದ್ವೀಪ ಅತಿ ದೊಡ್ಡದು ಮತ್ತು ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವಂತದ್ದು.  ನಮ್ಮಲ್ಲಿ ಪ್ರತಿ ವರ್ಷ ಕಾಶಿ –ರಾಮೇಶ್ವರಕ್ಕೆ ತಪ್ಪದೆ ಹೋಗುವಂತೆ, ಪ್ರಪಂಚದ ನಾನಾ ದೇಶಗಳಿಂದ ಟೆನೆರಿಫ಼್ ದ್ವೀಪಕ್ಕೆ ಬರುವವರಿದ್ದಾರೆ!.

ಮಕ್ಕಳಿಗೆ ಬಂದ  ಕಳೆದ ಫ಼ೆಬ್ರವರಿಯ ಶಾಲಾ ರಜೆಯಲ್ಲಿ ಸ್ಪೈನ್ ದೇಶದ ಟೆನೆರಿಫ಼್ ದ್ವೀಪಕ್ಕೆ ಹೋಗಲು ತಯಾರಿ ನಡೆಯಿತು. ಈ ದ್ವೀಪ ಪ್ರವಾಸಿಗರಿಗೆ ಅತಿ ಪ್ರೀಯವಾದ ತಾಣ. ಇಂಗ್ಲೆಂಡಿನ ಚಳಿಗಾಲದಲ್ಲಿ ನರಳಿ ಸ್ವಲ್ಪ ಸೂರ್ಯನ ಶಾಖದಲ್ಲಿ ಮೀಯಲು ಉತ್ಸುಕರಾಗಿ ಹೊರೆಟೆವು. ಇಂಗ್ಲೆಂಡಿನ ಆಂಗ್ಲರಿಗೆ “ಸ್ಪೇನ್“ ಮತ್ತು ’ಬಿಸಿಲು’ ಒಂದು ರೀತಿಯಲ್ಲಿ ಪರ್ಯಾಯ ಪದಗಳು. ಅದರಲ್ಲೂ ದಕ್ಷಿಣ ಭಾಗದ ಸ್ಪೇನಿನ ದ್ವೀಪಗಳಲ್ಲಿ ಸೂರ್ಯನ ಬಿಸಿಲು ಹುಡುಕಿ ಹೊರಟವರಿಗೆ ನಿರಾಸೆಯಿಲ್ಲ. ಹಾಗಾಗಿ ಹಲವರು ಈ ದ್ವೀಪದಲ್ಲಿ ಮನೆಗಳನ್ನು, ಫ್ಲಾಟುಗಳನ್ನು  ಕೊಂಡುಕೊಂಡು ಇಡೀ ಚಳಿಗಾಲವನ್ನು ಇಲ್ಲಿ ಕಳೆಯುತ್ತಾರೆ. ಮಿಕ್ಕಂತೆ, ಈ ಮನೆಗಳನ್ನು ಇತರೆ ಪ್ರವಾಸಿಗರಿಗೆ ಬಾಡಿಗೆ ನೀಡಿ ಖರ್ಚು ಹುಟ್ಟಿಸಿಕೊಳ್ಳುತ್ತಾರೆ.

ಈ ದ್ವೀಪ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನು ಮನರಂಜಿಸಲು ಸಿದ್ದವಾದ ತಾಣ. ಪ್ರವಾಸೋದ್ಯಮ ಈ ದ್ವೀಪಗಳ ಮುಖ್ಯ ಆದಾಯಮೂಲ ಕೂಡ. ಈ ಕೆನೆರಿಯ ದ್ವೀಪಗಳ ವೈಶಿಷ್ಟವೆಂದರೆ ಈ ಏಳೂ ದ್ವೀಪಗಳು ಅಗ್ನಿಪರ್ವತಗಳ ಸಿಡಿತದಿಂದ ಸಮುದ್ರದಲ್ಲಿ  ಉದ್ಭವವಾದಂತವು. ಪ್ರಾಚೀನ ಕಾಲದ ಲ್ಯಾಟಿನ್ನಿನಲ್ಲಿ ’ಕೆನೆರಿಯ ದ್ವೀಪ’ ಅಂದರೆ ’ನಾಯಿಗಳ ದ್ವೀಪ’ ಎಂದು. ಇಲ್ಲಿ ಅಂತಹ ನಾಯಿಗಳೇನೂ ಇಲ್ಲ. ಸಮುದ್ರದ ಭಾರೀ ಗಾತ್ರದ  ಅಪಾರ ಸಂಖ್ಯೆಯ ’ಸೀಲು” ಗಳನ್ನು ಉದ್ದೇಶಿಸಿ  ಹಿಂದಿನ ಕಾಲದಲ್ಲಿ ರೋಮನ್ನರಿಟ್ಟ ಹೆಸರೇ  ಈಗಲೂ ಉಳಿದಿದೆ. ವಿಪರ್ಯಾಸ ಅಂದರೆ ಈಗ ಆ ಜಾತಿಯ ಸೀಲ್ ಗಳು ಸಂಪೂರ್ಣ ಅವನತಿಯಾಗಿರುವುದು! ಕೆನೆರಿಯ ದ್ವೀಪಗಳ ಹೆಸರಿನ ಬಗ್ಗೆ ಇನ್ನೂ ಅನೇಕ ಪ್ರತೀತಿಗಳಿವೆ.

tanarife

ಉತ್ತರ ಟೆನೆರಿಫ್ ನ ಒಂದು ವಿಹಂಗಮ ನೋಟ

ಈ ದ್ವೀಪಗಳ ಆದಿವಾಸಿಗಳು ಗ್ವಾಂಚೆಸ್ ಅನ್ನುವ ಜನರು. ಇವರು ನಾಯಿಯ ತಲೆಯಿದ್ದ ದೇವರನ್ನು ಪೂಜಿಸುತ್ತಿದ್ದರೆಂಬ ಕಾರಣಕ್ಕೆ ಈ ಹೆಸರು ಬಂದಿರಬಹುದು ಎಂದು ಕೂಡ ಕೆಲವರು ಹೇಳುತ್ತಾರೆ.ಅನುಬಿಸ್ ಎನ್ನುವ ನಾಯಿಯ ತಲೆಯಿರುವ ಈಜಿಪ್ಟ್ ದೇಶದ ದೇವರಿಂದ ಈ ದ್ವೀಪಗಳಿಗೆ ನಾಯಿಗಳ ದ್ವೀಪ ಎಂಬ ಹೆಸರು ಬಂತು ಎಂಬ ಮಾತು ಕೂಡ ಕೇಳಿಬಂದಿದೆ.

ಟೆನೆರಿಫ಼್ ಸುಮಾರು ೮ ಮಿಲಿಯನ್ ವರ್ಷಗಳಷ್ಟು ಹಳೆಯದು. ಮೂರು ಮಿಲಿಯನ್ ವರ್ಷಗಳಲ್ಲಿ ಒಂದಾದ ಮೇಲೆ ಒಂದರಂತೆ ಅಗ್ನಿಪರ್ವತಗಳು ಸಿಡಿದು ಈ ದ್ವೀಪದ ಸೃಷ್ಟಿಯಾಗಿದೆ.

ಆಗ್ನಿಪರ್ವತದ ಆಸ್ಪೋಟ, ಅದರ ಹಿಂದೆ ಶಿಲೆಗಳ ಕೊರೆತ, ವಿಶಿಷ್ತ್ಟ ಆಕೃತಿಯ ನೆಲವನ್ನು ಸೃಷ್ಟಿಸಿದೆ. ಇಲ್ಲಿನ ನೆಲ ಬರಡು ಬರಡು. ಬರಿಯ ಬಂಡೆಗಳು, ಕಲ್ಲು, ಕೊರಕಲುಗಳು ತುಂಬಿರುವ ಈ ದ್ವೀಪದಲ್ಲಿ ಹತ್ತು ತಿಂಗಳಾದರೂ ಮಳೆ ಬರುವುದಿಲ್ಲವಂತೆ. ಎಲ್ಲೆಲ್ಲಿಯೂ ಕತ್ತಾಳೆ, ಶಾಖವನ್ನು ತಡೆಯುವ ಶಕ್ತಿಯಿರುವ ಪೈನ್ ಮರಗಳು.

ಆಗ್ನಿ ಪರ್ವತದ ಸಿಡಿತಗಳಿಂದಾಗಿ ನಿರ್ಮಿತವಾದ ಈ ದ್ವೀಪಗಳು ಮೊದಲು ಬರಿ ಬಂಡೆಗಳಾಗಿದ್ದವಂತೆ. ಹುಲ್ಲುಗರಿಕೆ ಅಥವಾ ಕುರುಚಲು ಪೊದೆಗಳು ಇಲ್ಲಿ ಬೆಳೆಯಲು ಹಲವು ಮಿಲಿಯನ್ ವರ್ಷಗಳೇ ತಗುಲಿವೆ ಎನ್ನುತ್ತಾರೆ. ಮಾನವರು ಈ ದ್ವೀಪಗಳನ್ನು ತಮ್ಮದಾಗಿಸಿಕೊಂಡು ಹಲವು ಹೊಸ ತಳಿಗಳನ್ನು ಈ ದ್ವೀಪಕ್ಕೆ ಪರಿಚಯಿಸಿದ್ದಾರೆ. ಕಾಲಾನುಕ್ರಮದಲ್ಲಿ ಬಂಡೆಗಳು ಕರಗಿ, ನಶಿಸಿ, ಸೃಷ್ಟಿಸಿದ ಫಲವತ್ತಾದ ಮಣ್ಣಿನಲ್ಲಿ ಮಾನವರು ಕೃಷಿಯನ್ನು ಆರಂಭಿಸಿದ್ದಾರೆ.

ಹಸಿರನ್ನು ಅಗ್ನಿಪರ್ವತಗಳ ದ್ವೀಪದಲ್ಲಿ ಕಾಣಿಸಲು ಮಾನವನ ಪ್ರಯತ್ನ  ನಿರಂತರವಾಗಿ ಸಾಗಿದೆ. ಗಾಲ್ಫಿನ ಮೈದಾನಗಳು, ಶಾಖವನ್ನು ತಡೆಯಬಲ್ಲ ಕಣಿಗಿಲೆ, ಕತ್ತಾಳೆಯ ವಿವಿಧ ಪೊದೆಗಳು, ಗಂಟೆ ಹೂವು, ಪೇಪರ್ ಹೂವಿನ ಅರ್ಥಾತ್ ಬೋಗನವಿಲ್ಲಾ ಬಳ್ಳಿಗಳ ಮೇಲೆ ಸರ್ಕಾರ ಅಪಾರ ಹಣ ಸುರಿದಿದೆ.ಸಮುದ್ರದ ನೀರಿನಿಂದ ಉಪ್ಪಿನ ಅಂಶವನ್ನು ಬೇರ್ಪಡಿಸಿ, ಅದನ್ನೇ ಮನೆ ಬಳಕೆಗೆ, ಹೂ ದೋಟಗಳಿಗೆ ಹಾಯಿಸಿ ಬದುಕುತ್ತಾರೆ.ಇಲ್ಲಿನ ಭೂಮಿ ಒಣ ಮರುಭೂಮಿಯಾದರು, ಅಗ್ನಿಪರ್ವತದ ಸ್ಪೋಟದಿಂದ ಖನಿಜಭರಿತವಾಗಿದೆ . ಹೀಗಾಗಿ ಕಣ್ಣು ಹಾಯಿಸುವಷ್ಟು ದೂರಕ್ಕೂ ಪರದೆಗಳನ್ನು ಹಾಯಿಸಿ ಅದರ ನೆರಳಿನಲ್ಲಿ ಅಪಾರವಾಗಿ ಬಾಳೆಯನ್ನು ಬೆಳೆಯುತ್ತಾರೆ.ಇದನ್ನು ಇಡೀ ದ್ವೀಪದಲ್ಲಿ ಮತ್ತು ದೇಶದಲ್ಲಿ ಸರಬರಾಜು ಮಾಡುತ್ತಾರೆ. ಅಷ್ಟೇ ಅಲ್ಲದೆ, ಟೆನೆರಿಫಿನ ರಾಜಧಾನಿಯಾದ ಸಾಂತಾಕ್ರೂಜಿನ ಬಂದರುಗಳಿಗೆ ಪೆಟ್ರೋಲ್  ತುಂಬಿಸಿಕೊಳ್ಳಲು ಬರುವ ಮೆಡಿಟರೇನಿಯನ್ ಸಮುದ್ರದ ಹಡಗುಗಳಿಗೂ ಸರಬರಾಜು ಮಾಡುತ್ತಾರೆ.  ತಂಬಾಕು, ತರಕಾರಿ, ಕಬ್ಬು,  ಬಾದಾಮಿ ಮತ್ತು ಅಂಜೂರದ ಹಣ್ಣುಗಳನ್ನು ಕೂಡ ಬೆಳೆಯುತ್ತಾರೆ. ಅಪಾರವಾಗಿ ನಡೆವ ಈ ಕೃಷಿಯ ಪರಿಣಾಮವಾಗಿ, ಇಲ್ಲಿರುವ ಮಣ್ಣಿನ ಫಲವತ್ತತೆ ಕಡಿಮೆಯಾಗುವ ಬಗ್ಗೆ ಮುನ್ನೆಚ್ಚರಿಕೆ ಕೇಳಿಬಂದಿದೆ.

ಭೂಗೋಳದ ಪರಿಮಿತಿಯಲ್ಲಿ ಈ ದ್ವೀಪವು ಆಫ್ರಿಕ ಖಂಡಕ್ಕೆ ಸೇರುತ್ತದೆ.ಆದರೆ ಈ ಏಳೂ  ಕೆನೆರಿಯ ದ್ವೀಪಗಳನ್ನು ಗೆದ್ದು ವಶಪಡಿಸಿಕೊಂಡು,  ಅವನ್ನು ಸ್ಪೇನ್ ದೇಶ ತನ್ನ ಆಡಳಿತಕ್ಕೆ ಒಳಪಡಿಸಿಕೊಂಡಿದೆ. ಈ ದ್ವೀಪಗಳ ವಿಶೇಷತೆಯನ್ನು ವೃದ್ಧಿಪಡಿಸಿ ಸಿರಿವಂತ ದ್ವೀಪಗಳನ್ನಾಗಿಸಿದೆ.

ಹಾಗಾದರೆ ಕುಡಿಯುವ ನೀರು? ಇದನ್ನು ತಿಳಿಯಲು ಈ ದ್ವೀಪದ ಉತ್ತರ ಭಾಗಕ್ಕೆ ಹೋಗಬೇಕು. ಉತ್ತರ ಭಾಗ, ದಕ್ಷಿಣ ಭಾಗದಷ್ಟು ಒಣ ಭೂಮಿಯಲ್ಲ. ಇಲ್ಲಿ ಹಸಿರನ್ನು ಕಾಣಬಹುದು. ಕಿತ್ತಳೆ, ನಿಂಬೆ, ಆಲೂಗೆಡ್ಡೆ, ಬಾರ್ಲಿ, ಟೊಮಟೊಗಳನ್ನು ಬೆಳೆಯುವಷ್ಟು ಇಲ್ಲಿನ ವಾತಾವರಣ ಹದವಾಗಿದೆ.  ಆದರೆ ಇದು ಮಳೆಯಿಂದ ಸಾದ್ಯವಾದದ್ದಲ್ಲ! ಈ ಭಾಗ ಸಮುದ್ರ ಮಟ್ಟದಿಂದ ಬಹಳ ಎತ್ತರದಲ್ಲಿದ್ದು, ಇಲ್ಲಿನ ಪೈನ್ ಮರಗಳು ನೀರನ್ನು ಹಾದುಹೋಗುವ ಮೋಡಗಳಿಂದ ಸೂಜಿಮೊನೆಯಂತ ಎಲೆಗಳಿಂದ ಹೀರಿ ನೆಲಕ್ಕೆ ಕಳಿಸುವ ಪರಿಣಿತಿಯನ್ನು ಹೊಂದಿದ್ದು, ದಿನಕ್ಕೆ ಪ್ರತಿ ಮರವೂ ಸುಮಾರು ಹತ್ತು ಲೀಟರುಗಳಷ್ಟು ನೀರನ್ನು ಸಂಗ್ರಹಿಸುವುದರಿಂದ, ಆ ಸಿಹಿ ನೀರನ್ನು ಶೇಖರಿಸಿ, ಬಾಟಲುಗಳಿಗೆ ತುಂಬಿ ಮಾರಾಟ ಮಾಡುತ್ತಾರೆ! ಇಲ್ಲಿ ಬೆಳೆದಿರುವ ಈ ವಿಶೇಷ ಜಾತಿಯ ಪೈನ್ ಮರಗಳಿಗೆ ಕೆನೆರಿಯ ಪೈನ್ ಮರಗಳೆಂದೇ ಹೆಸರು.

ಕೆಲವು ಜಾತಿಯ ಜೇಡ, ಹಲ್ಲಿಗಳ ಹೊರತಾಗಿ ಇಲ್ಲಿ ಬದುಕಿ ಬೆಳೆದು ರಕ್ಷಿತವಾಗಿರುವ ಜೀವಜಾಲ ಯಾವುದೂ ಇಲ್ಲ.

ಟೆನರಿಫ್ ಒಟ್ಟು ಜನಸಂಖ್ಯೆ ೯೦೬,೮೫೪ ಮಾತ್ರ. ೨೦೩೪ ಚದರ ಕಿ.ಮೀ. ವಿಸ್ತಾರವಾದ ಟೆನೆರಿಫ್, ಕೆನೆರಿಯ ದ್ವೀಪಗಳಲ್ಲೆ ಅತ್ಯಂತ ದೊಡ್ಡ ದ್ವೀಪ. ಬಂದರುಗಳಿರುವ ಎರಡು ದೊಡ್ಡ ನಗರಗಳು ಇಲ್ಲಿವೆ. ಇಂದಿನ ರಾಜಧಾನಿಯಾದ ಸಂತಾಕ್ರೂಜ್ ನಗರ ಮತ್ತು ಹಳೆಯ ರಾಜಧಾನಿ ಲ ಲಗುನ. ಲ ಲಗುನದಲ್ಲಿ ಟೆನೆರಿಫ್ ದ್ವೀಪಗಳಲ್ಲಿಯೇ ಪುರಾತನವಾದ ಯೂನಿವರ್ಸಿಟಿಯಿದೆ. ಟೆನೆರಿಫ಼ ಪುಟ್ಟ ದ್ವೀಪದಲ್ಲಿಯೇ, ದಕ್ಶಿಣಕ್ಕೊಂದು ಮತ್ತು ಉತ್ತರದಲ್ಲೊಂದು ವಿಮಾನ ನಿಲ್ದಾಣಗಳಿವೆ.

ಟೆನೆರಿಫ್ ನ ಟೈಡೆ ಅಗ್ನಿ ಪರ್ವತ

೧೨,೭೧೮ ಅಡಿ ಎತ್ತರವಿರುವ ಟೈಡೆ ಅಗ್ನಿಪ್ರರ್ವತ ಇಡೀ ಸ್ಪೇನ್ ದೇಶದಲ್ಲೇ ಅತಿ ಎತ್ತರದ ಪರ್ವತ. ಈ ಪ್ರರ್ವತಕ್ಕೆ  ಪ್ರತಿ ವರ್ಷ ೩ ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೇಬಲ್ ಕಾರಿನಲ್ಲಿ ( ಪ್ರತಿಬಾರಿ ೩೪-೩೮ ಜನರಂತೆ) ಈ ಅಗ್ನಿಪರ್ವತ ಶಿಖರದ ತುದಿಯಲ್ಲಿರುವ ಅದರ ಬಾಯಿಯೊಳಕ್ಕೆ (೧೧,೬೬೩ ಅಡಿ) ಒಂದು ಮೈಲಿ ಕೆಳಗಿನವರೆಗೂ ಹೋಗಬಹುದು. ಹವಾಮಾನ ಸರಿಯಿಲ್ಲದಿದ್ದರೆ ಅದೂ ಇಲ್ಲ. ಇಲ್ಲಿಂದ ಮೇಲಕ್ಕೆ ಚಾರಣ ಮಾಡಿದರೆ ಅದರ ಬಾಯಲ್ಲಿ ಇಣುಕಿ ನೋಡಬಹುದು.

ಆದರೆ ಕೊನೆಯ ೬೬೦ ಅಡಿಗಳನ್ನು ಹತ್ತಲು ಪರ್ಮಿಟ್ಟಿನ ಅಗತ್ಯವಿದೆ.ಮಧ್ಯೆ ಮಧ್ಯೆ ಹೊಗೆಯಾಡುವ ಹಲವು ರಂಧ್ರಗಳಿದ್ದು, ಭೂಗರ್ಭದಲ್ಲಿ ಈಗಲೂ ಕುದಿಯುತ್ತಿರುವ ಶಾಖವನ್ನು ನೆನಪಿಸುತ್ತದೆ.  ಗಂಧಕಾಮ್ಲದ (Sulphuric acid) ವಾಸನೆ, ಕೊಳೆತ ಮೊಟ್ಟೆಯ ವಾಸನೆಯಾಗಿ ದಾರಿಯುದ್ದಕ್ಕೂ ಕಾಡುತ್ತದೆ. ಪರ್ವತದ ಕೆಳಭಾಗದಲ್ಲಿ ೨೨ ಡಿಗ್ರಿ ಹವಾಮಾನವಿದ್ದರೆ, ಶಿಖರದಲ್ಲಿ ಕೇವಲ ೩ ಡಿಗ್ರಿಯಿದ್ದು,  ಗಂಟೆಗೆ ೫೦ಮೈಲಿ ವೇಗದಲ್ಲಿ ಗಾಳಿ ಬೀಸುತಿತ್ತು. ಸುತ್ತಲೂ ಉಂಡೆ-ಉಂಡೆಯಾಗಿ ಹಲವಾರು ಮೈಲಿಗಳ ಉದ್ದಕ್ಕೂ ಲಾವಾ ಹರಿದು ಗಟ್ಟಿಯಾಗಿ ಕಲ್ಲುಗಳಾಗರುವುದನ್ನು ಕಂಡೆವು. ಹೀಗೆ ಹರಿದು ಗಟ್ಟಿಯಾದ ಲಾವಾದ ಕಲ್ಲುಗಳನ್ನು ಕಡಿದು, ಕೊರೆದು ರಸ್ತೆಗಳನ್ನು ನಿರ್ಮಿಸಿದ್ದಾರೆ. ಹಲವು ಬಂಡೆಗಳಲ್ಲಿನ ಕಬ್ಬಿಣದ ಅಂಶ ಹೊರಗಿನ ಹವಾಮಾನಕ್ಕೆ ತೆರೆದುಕೊಂಡ ಕಾರಣ ನೀಲಿ, ಹಸಿರು ಬಂಡೆಗಳಾಗಿದ್ದರೆ, ಸಾವಿರಾರು ವರ್ಷಗಳ ಕೊರೆತಕ್ಕೆ ಒಳಗಾಗಿ ಹಲವು ರೂಪುಗಳನ್ನು ತಾಳಿದ ಬಂಡೆಗಳು ನಮ್ಮ ಕಲ್ಪನೆಯನ್ನು ಕೆದಕುತ್ತವೆ.

tanarife 2                                ಟೈಡೆ ಅಗ್ನಿ ಪರ್ವತ ಮತ್ತು ಕುರುಚಲು ಪೊದೆಗಳು

ಸಮುದ್ರದ ತಳದಿಂದ ಮೇಲಕ್ಕೆ ೨೪.೬೦೦ ಅಡಿ ಎತ್ತರವಿರುವ ಈ ಪರ್ವತವು, ಹವಾಯಿ ದ್ವೀಪದಲ್ಲಿರುವ ಮೊನಾ ಕೇಯಾ, ಮೊನಾ ಲೊವಗಳ ನಂತರ ಅಗ್ನಿಪರ್ವತದ ದ್ವೀಪಗಳಲ್ಲೇ ಅತಿ ಎತ್ತರದ ಅಗ್ನಿಪರ್ವತವೆನಿಸಿದೆ .  ಎತ್ತರದಲ್ಲಿ, ಟೆನೆರಿಫ಼ ಪ್ರಪಂಚದಲ್ಲೇ ೧೦ನೆ ಎತ್ತರದ ದ್ವೀಪವಾಗಿದೆ. ಈ ಪರ್ವತದಲ್ಲಿ ಇತ್ತೀಚೆಗೆ ಆದ ಸ್ಪೋಟವೆಂದರೆ ಅದು ೧೯೦೯ರಲ್ಲಿ. ಆಗ ಸಂಭವಿಸಿದ ದುರಂತದ ನಂತರ ಟೈಡೆ ಪರ್ವತವನ್ನು ಅಪಾಯಕಾರಿ ಪ್ರರ್ವತಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಸುತ್ತ ಮುತ್ತಲ ೭೩ ಚದರ ಮೈಲಿ ಪ್ರಾಂತ್ಯವನ್ನು ಯುನೆಸ್ಕೋ ಜೂನ್ ೨೯, ೨೦೦೭ರಲ್ಲಿ, ಸಂರಕ್ಷಿತ ಪ್ರಾಂತ್ಯವೆಂದು ಘೋಷಿ ಸಲಾಗಿದೆ. ಹಾಗಾಗಿ, ಇಲ್ಲಿಂದ ಒಂದು ಸಣ್ಣ ಕಲ್ಲನ್ನು ಕೂಡ ಹೊರಗೊಯ್ಯಲು ಬಿಡುವುದಿಲ್ಲ.

ಹಲವು ಪರ್ವತಗಳಿಗಿರುವಂತೆ ಈ ಪರ್ವತಕ್ಕೂ ಅಂಟಿದಂತೆ ಕೆಲವು ಪೌರಾಣಿಕ ಕತೆಗಳಿವೆ. ಗ್ವಾಯಿಟೆ ಎಂಬ ರಾಕ್ಷಸನು ಮ್ಯಜಿಕ್ ಎಂಬ ಬೆಳಕಿನ ದೇವನನ್ನು ಅಪಹರಿಸಿ ಈ ಪರ್ವತದ ಹೊಟ್ಟೆಯಲ್ಲಿ ಬಚ್ಚಿಟ್ಟು ಇಡೀ ಪ್ರಪಂಚವನ್ನು ಅಂಧಕಾರದಲ್ಲಿ ಮುಳುಗಿಸಿದನಂತೆ. ಈ ದ್ವೀಪದ ವಾಸಿಗಳು ತಮ್ಮ ಪರಮ ದೈವವಾದ ಅಚಮನನ್ನು ಪ್ರಾರ್ಥಿಸಿದರಂತೆ. ಅಚಮನು, ಗ್ವಯಿಟೆಯ ಜೊತೆ ಕಾದಾಡಿ ಶಾಖ ಮತ್ತು ಬೆಳಕಿನ ದೈವವಾದ ಮ್ಯಜಿಕನನ್ನು ಬಿಡುಗಡೆ ಮಾಡಿ, ಟೈಡೆ ಪರ್ವತದ ಹೊಟ್ಟೆಯಲ್ಲಿ ಗ್ವಾಯಿಟೆಯನ್ನು ಬಂಧಿಸಿದನಂತೆ. ಈ ಅಗ್ನಿ ಪರ್ವತ ಸ್ಪೋಟವಾದಾಗಲೆಲ್ಲ ಜನರು ಪಟಾಕಿಗಳನ್ನು ಹಚ್ಚಿ ಅವನು  ಹೊರಬರದಂತೆ ಹೆದರಿಸುವುದನ್ನು ಈಗಲೂ ಮಾಡುತ್ತಾರೆ. ಇವನನ್ನು ಕರೀ ನಾಯಿಯ ರೂಪದಲ್ಲಿ ಪ್ರತಿಪಾದಿಸುತ್ತಾರೆ.

tanarife 3                                    ಅಗ್ನಿ ಪರ್ವತದ ಶಿಖರದಲ್ಲಿ ಲೇಖಕಿ ಮಗನೊಂದಿಗೆ

ಕಾಕತಾಳೀಯವೆಂಬಂತೆ, ಹವಾಯಿಯಲ್ಲೂ ಕೂಡಾ ಜನರು ಇಂತಹ ಒಂದು ಕತೆಯಲ್ಲಿ ನಂಬಿಕೆಯಿಟ್ಟಿದ್ದಾರೆ. ವ್ಯತ್ಯಾಸ ಅಂದರೆ, ಹವಾಯಿಯಲ್ಲಿ ಇದು ಹೆಣ್ಣು ದೇವತೆ.

ಟೈಡೆ ಪರ್ವತದಲ್ಲಿ ೨೦೦೩ ರಲ್ಲಿ ಕೂಡ ಅಗ್ನಿ ಸ್ಫೋಟದ ಚಟುವಟಿಕೆ ಕಾಣಿಸಿಕೊಂಡು ಜನರಲ್ಲಿ ಭೀತಿಯನ್ನುಂಟು ಮಾಡಿತ್ತು . ಮುಂದಿನ ಹಲವು ನೂರು ವರ್ಷಗಳಲ್ಲಿ ಇದು ಮತ್ತೆ ಆಸ್ಪೋಟಿಸುತ್ತದೆ ಎಂದೂ, ಇದು ದಕ್ಷಿಣ ಇಟಲಿಯಲ್ಲಿರುವ ಪ್ರಸಿದ್ಧ ಅಗ್ನಿಪರ್ವತಗಳಾದ, ವೆಸೂವಿಯೆಸ್ ಮತ್ತು ಎತ್ನಾ ಪರ್ವತಗಳಂತೆ  ಜನರನ್ನು ದೊಡ್ಡ ದುರಂತಕ್ಕೆ ಈಡು ಮಾಡುತ್ತದೆಯೆಂದು ಇಲ್ಲಿನವರೆಗಿನ ವಿದ್ಯಮಾನಗಳಿಂದ ತಿಳಿದುಬಂದಿದೆ. ಈ ಪರ್ವತದ ಕಟ್ಟು ಸ್ಥಿರವಾಗಿರದ ಕಾರಣ ಒಂದು ಭಾಗ  ಸಮುದ್ರದಲ್ಲಿ ಕುಸಿದು ಅಟ್ಲಾಂಟಿಕ್ ಸಮುದ್ರದಲ್ಲಿ ಭಾರೀ ಸುನಾಮಿಯನ್ನು ಉಂಟು ಮಾಡಿ, ಅದರಿಂದ ಉತ್ಪನ್ನವಾಗುವ ದೈತ್ಯಾಕಾರದ ಅಲೆಗಳು, ಉತ್ತರ ಅಮೆರಿಕೆಯ ಪೂರ್ವದಿಕ್ಕಿನಲ್ಲಿರುವ ದೊಡ್ಡ ನಗರಗಳನ್ನೇ ಕಬಳಿಸುವ ಸಾಧ್ಯತೆಗಳಿವೆ ಎಂದು ಭೂಗರ್ಭಶಾಸ್ತ್ರಜ್ಯರು ಭವಿಷ್ಯವಾಣಿ ನುಡಿದಿದ್ದಾರೆ.

ಇಲ್ಲಿ ಮಂಗಳ ಗ್ರಹದ ವಾತಾವರಣವನ್ನು ಅರಿಯಲು ಸುಮಾರು ಸಂಶೋಧನೆಗಳಾಗಿವೆ. ಭಾರೀ ಆಸ್ಪೋಟಗಳ ನಂತರ ಅಲ್ಲಿ ಬದುಕಬಲ್ಲಂತಹ ಸಸ್ಯ ಮತ್ತು ಸಣ್ಣ ಪ್ರಾಣಿ ಸಮುದಾಯಗಳ ಸಂಶೋಧನೆ ಮತ್ತು ಖನಿಜಗಳ ಸಂಶೋದನೆಗಳಲ್ಲಿ  ಅಮೆರಿಕಾದ  ಬಾಹ್ಯಾಕಾಶ ಸಂಸ್ಥೆ “ನಾಸಾ“ ಆಸಕ್ತಿ ತೋರಿದೆ.

ಇತರೆ ಕೆನೆರಿಯ ದ್ವೀಪಗಳು

ಫೋರ್ಟೆವೆನ್ಟುರ, ಗ್ರಾಂಡ್ ಕೆನೆರಿಯಾ, ಲ್ಯಂಜರೋಟಿ , ಲ ಗೊಮೇರ, ಲ ಪಾಮ, ಮತ್ತು  ಎಲ್ ಹೀರೋ  ಕೆನೆರಿಯ ದ್ವೀಪಗಳು ವರ್ಷಕ್ಕೆ ೧೨ ಮಿಲಿಯನ್ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತವೆ.

ಮೊರಕ್ಕೋದಿಂದ ಬರೇ ೬೨ ಮೈಲಿ ದೂರದಲ್ಲಿರುವ ಈ ದ್ವೀಪಗಳ ಬಗ್ಗೆ ಸ್ಪೇನ್ ಮತ್ತು ಮೊರಕ್ಕೋಗಳ ಮಧ್ಯೆ ವೈಮನಸ್ಯಗಳಿವೆ. ಇಲ್ಲಿನ ಕಬ್ಬಿನ ಬೆಳೆ ಮತ್ತು ಸಕ್ಕರೆಯ ಉತ್ಪಾದನೆ ಈ ಪುಟ್ಟ ದ್ವೀಪಗಳಿಗೆ ಪೋರ್ಚುಗೀಸರಿಂದ, ಡಚ್ಚರಿಂದ, ಕಡಲ್ಗಳ್ಳರಿಂದ ಯುದ್ದಗಳನ್ನು ಕೂಡ ತಂದಿವೆ. ಕೆನೆರಿಯ ಜನ ಸಮುದಾಯ, ಸ್ಪೇನ್,ಇಂಗ್ಲೀಷ್,ಇಟಾಲಿಯನ್, ಡಚ್,  ಮೊರೊಕ್ಕೋ ಮತ್ತು  ಇತರ ಆಫ್ರಿಕಾ ದೇಶದ ಜನರನ್ನು ಹೊಂದಿದ್ದು, ಅವರೆಲ್ಲಾ ಸಹಬಾಳ್ವೆಯಿಂದ ಜೀವಿಸುತ್ತಿದ್ದಾರೆ . ಈ ದ್ವೀಪದಲ್ಲಿ ನಮ್ಮ ಭಾರತೀಯರೂ ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ!

ದಕ್ಷಿಣ ಭಾರತದಲ್ಲಿ ಈ ದ್ವೀಪದ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲವಾದರೂ, ಉತ್ತರ ಭಾರತದಲ್ಲಿ ಈ ಸಣ್ಣ ದ್ವೀಪಗಳಿಗೆ ನಮ್ಮ ಭಾರತೀಯರನ್ನು ಕರೆತರುವ ದಲ್ಲಾಳಿಗಳ ದೊಡ್ಡ ಗುಂಪೇ ಇದೆಯಂತೆ. ಟೆನೆರಿಫ಼್ ದ್ವೀಪದಲ್ಲಿಯೇ ಸುಮಾರು ೫೦೦೦ ಮಂದಿ ಭಾರತೀಯರಿದ್ದಾರೆ! ಇತರೆ ದ್ವೀಪಗಳಲ್ಲೂ ಇವರು ಹಂಚಿ ಹೋಗಿದ್ದಾರೆ. ಟೆನೆರಿಫ಼ನ ಉತ್ತರ, ದಕ್ಷಿಣ ಮತ್ತು ಮಧ್ಯ ಭಾಗದಲ್ಲಿ ಹರಡಿಕೊಂಡಿರುವ ಈ ಭಾರತೀಯರು, ವ್ಯಾಪಾರ, ವಹಿವಾಟು, ಹೊಟೆಲ್ಲುಗಳು ಇತ್ಯಾದಿ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು ಇಪ್ಪತ್ತೈದು  ವರ್ಷಗಳಿಂದ ಇಲ್ಲಿ ನೆಲೆ ನಿಂತು ಬಟ್ಟೆ ಅಂಗಡಿ, ಎಲೆಕ್ಟ್ರೊನಿಕ್ ಉಪಕರಣಗಳ ಅಂಗಡಿ ಮತ್ತು ಹೊಟೆಲುಗಳನ್ನು ನಡೆಸುತ್ತಿರುವ ಪುಣೆ, ಕಲಕತ್ತ ಮತ್ತು ಗುಜರಾತ್ ರಾಜ್ಯಗಳಿಂದ ಬಂದಿರುವ ಹಲವರನ್ನು ಮಾತಾಡಿಸಿದೆವು. ಸ್ಪೈನ್ ದೇಶದ ಸ್ಪಾನಿಶ್  ಭಾಶೆಯನ್ನು ಕಲಿಯುವುದು ಸುಲಭ  ಎಂದು ಅಭಿಪ್ರಾಯ ಪಡುವ ಇವರು,  ಇಲ್ಲಿಯ ನೆಲ, ಭಾಷೆ ಮತ್ತು ಸಂಪ್ರದಾಯಗಳಿಗೆ ಒಗ್ಗಿಕೊಂಡು, ತಮ್ಮ ಮನೆಗಳಲ್ಲಿ ಭಾರತೀಯತೆಯನ್ನು ಉಳಿಸಿಕೊಂಡು,  ಎಲ್ಲ ಅನಿವಾಸಿ ಭಾರತೀಯರಂತೆಯೇ ಇಬ್ಬಂದಿಯ ಬದುಕಿನಲ್ಲಿ ತೊಡಗಿಕೊಂಡಿದ್ದಾರೆ.

ಆಂಗ್ಲ ಭಾಷೆ ಅಥವಾ ಹಿಂದಿ ಮಾತಾಡಲು ಕೂಡಾ ಗೊತ್ತಿರದ ಜನರನ್ನು ಭಾರತದಿಂದ ಕರೆತರಲು ಅಪಾರ ಹಣಪಡೆದು, ಇನ್ನಿಲ್ಲದ ಕನಸುಗಳ ಪಟ್ಟಿಯನ್ನು ತೋರಿಸಿ ಸವಿಮಾತನ್ನಾಡಿ ಮಧ್ಯಸ್ತಿಕೆಯನ್ನು ವಹಿಸಿ ಭಾರತದಿಂದ ಜನರನ್ನು ಇಲ್ಲಿಗೆ ಕರೆತಂದು, ನಡುನೀರಲ್ಲಿ ಕೈ ಬಿಡುವ  ದಲ್ಲಾಳಿಗಳ ಬಗ್ಗೆ ಎಚ್ಚರದಿಂದಿರಬೇಕೆಂದು ಸಂದೇಶ ಸಾರುತ್ತಾರೆ. ಹೀಗೆ ಕನಸುಗಳನ್ನು ಹೊತ್ತು ಇಲ್ಲಿ ಬಂದು ಬವಣೆ ಪಡುವ ಜನರ ಬಗ್ಗೆ ಮರುಕವಿದೆ.
ಟೆನೆರಿಫ಼ ಸೇರಿದಂತೆ ಏಳೂ  ಕೆನೆರಿಯ ದ್ವೀಪಗಳು ಪ್ರಕೃತಿಯ ಆಟದ, ವಿಕೋಪದ ಪರಿಣಾಮವಾಗಿ ನಿರ್ಮಾಣವಾಗಿವೆ. ಪ್ರಕೃತಿಗೆ ಯಾರೂ ಸಾಟಿಯಲ್ಲ. ಆದರೆ ಮಾನವನ ವಿಶೇಷತೆ, ಕಲ್ಲನ್ನು ಹೂವಿನಂತೆ ಅರಳಿಸಿ ಬದುಕು ಮಾಡಿಕೊಂಡಿರುವುದನ್ನು ಇಲ್ಲಿ ಡಣಾಡಾಳಾಗಿ ಕಾಣಬಹುದು.

7 thoughts on “‘ಟೆನೆರಿಫ್’ ಎಂಬ ಸಮ್ಮೋಹಕ ದ್ವೀಪ – ಪ್ರೇಮಲತಾ ಬರೆದ ಪ್ರವಾಸ ಕಥನ

 1. ಸಮ್ಮೋಹಕ ಶೀರ್ಷಿಕೆಯ ಜೊತೆಗೊಪ್ಪುವ ಈ ಲೇಖನದಲ್ಲಿ, ಪ್ರವಾಸಿಯ ಅನುಭವ, ದ್ವೀಪದ ಸೌ೦ದರ್ಯದ ವರ್ಣನೆಯೊ೦ದಿಗೆ ಭುಗೋಳ ಮತ್ತು ಚರಿತ್ರೆಯ ಪರಿಚಯವೂ ಇದೆ.
  ಟೆನರೀಫ಼್ ನಮ್ಮ ಮು೦ದಿನ ಪ್ರವಾಸ ತಾಣ.

  Like

 2. Premlatha avarige, abhinandanegalu.Nimma lekhan Itihaasa,bhugolugalinda roopisiddudu swarasyavagi moodi bandive. Yella tarahada mahitegaLu aLavadisikonDiruviri. Navu Yi deshagaLige pravaasa maaDalu tavakaragiruvevu.
  Aravind Kulkarni

  Like

 3. ಇತಿಹಾಸ, ಪುರಾಣ ಮತ್ತು ಭೋಗೋಳ ಗೊತ್ತಿಲ್ಲದೇ ಭೂಗೋಲ ಸುತ್ತಿದರೂ ಸುತ್ತದಿದ್ದರೂ ಅಂಥಹ ವ್ಯತ್ಯಾಸವೇನೂ ಆಗುವುದಿಲ್ಲ. ನೀವು ಬರೆದಂತೆ, ಹೋಗುವ ಸ್ಥಳದ ಬಗ್ಗೆ ಅರಿತುಕೊಂಡು ಪ್ರವಾಸ ಮಾಡಿದರೆ ಅದರ ಮಜವೇ ಬೇರೆ. ನಿಮ್ಮ ಈ ಲೇಖನ ತುಂಬ ಉಪಯುಕ್ತ. ಇನ್ನೂ ಹೆಚ್ಚಿನ ಪ್ರವಾಸ ಕಥನಗಳು ಬರುತ್ತಿರಲಿ.

  Like

 4. ಯಾವುದೇಊರಿಗೆ ಅಥವಾ ದೇಶಕ್ಕೆ ಹೋದ ಪ್ರವಾಸ ಕಥನವೇ ಇರಲಿ, ನನಗೆ ಅದು ಸ್ವಾರಸ್ಯಕರವೇ. ಅದರಲ್ಲೂ ‘ಯಾತ್ರಿಕ‘ ತೀಕ್ಷ್ಣ ದೃಷ್ಟಿಯಿಂದ ಮತ್ತು ಕುತೂಹಲತೆಯಿಂದ ನೋಡಿ, ಬೆರಗಾಗಿ, ಅನುಭವಿಸಿ ಬರೆದಾಗ ಓದುಗನಿಗೆ ಸ್ಥಳಮಹಾತ್ಮೆಯ ಪರಿಚಯದೊಂದಿಗೆ ಇನ್ನೂ ಮುದ ಕೊಡುತ್ತದೆ.ಈ ಲೇಖನದಲ್ಲಿ ಪ್ರೇಮಲತಾ ಅವರ ಮಾಹಿತಿ ಪೂರ್ಣ ಲೇಖನದಲ್ಲಿ ತಮ್ಮ ವಿಶಿಷ್ಟ ಶೈಲಿಯಲ್ಲಿ ’ಬರಡು’ ಕೆನೆರಿಯದ ಒಂದು ದ್ವೀಪದ ವರ್ಣನೆಯ ಜೊತೆಗೆ ಅದರ ಹೆಸರಿನ ಉತ್ಪತ್ತಿ, ಭೂಗೋಲ, ಇದಿಷ್ಟೇ ಅಲ್ಲ, ಇತ್ತೀಚೆಯ ಮನುಷ್ಯರ ಸಾಗಾಟ ಮಾಡುವ ದಲ್ಲಾಳಿಗಳ ವರ್ತನೆ ಇವೆಲ್ಲವನ್ನೂ ಕೂಡಿಸಿ ತಮ್ಮ ತಾಜಾ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಜಗತ್ತಿನಲ್ಲಿ ಎಷ್ಟೊಂದು ನೋಡುವದಿದೆ. ನಾಲ್ಕನೆಯ ಶತಮಾನದ ಸೇಂಟ್ ಅಗಸ್ಟಿನ್ ಅಂದನಂತೆ: The world is a book and those who do not travel read only one page. ಇಂದು ವಿಮಾನ ಪ್ರವಾಸ ಬಲು ಸುಲಭ. ಜನ ಚಳಿಯನ್ನು ತಪ್ಪಿಸಿ ಬಿಸಿಲು ದೇಶಕ್ಕೆ ಹೋಗುವದು ಸಾಮಾನ್ಯ. ನಾನು ಕೆಲ ವರ್ಷಗಳ ಹಿಂದೆ ಲಾಂಝರೋಟಿಗೆ ಹೋದಾಗ ಬಿಸಿಲು, ಬೀರು, ಬೆಲೆ ಇವುಗಳನ್ನಷ್ಟೇ ಒಂದೇ ಪುಟದಲ್ಲಿ ಓದಿ ಪದೇ ಪದೇ ಸ್ಪೇನಿಗೆ ಹೋಗುವ ಪಾಶ್ಯಾತ್ಯ ಯಾತ್ರಿಕರನ್ನೇ ಹೆಚ್ಚಾಗಿ ಕಂಡಿದ್ದೆ. ಈ ಲೇಖನವನ್ನೋದಿ ಅಲ್ಲಿ ಕಳೆದ ಒಂದು ವಾರದ ನೆನಪಾಯಿತು. ಒಂದು ಕಡೆ ಲಾವಾರಸದ ಪೆಂಟೆಗಳಿಂದ ತುಂಬಿದ ಭವ್ಯ ಬರಡುಗಾವಲು. ಇನ್ನೊಂದು ಕಡೆ ಸೆಜಾರ್ ಮ್ಯಾನ್ರೀಕಿಯ ಕೈವಾಡದ ಸೌಂದರ್ಯ. ಒಮ್ಮೆಯಾದರೂ ಈ ಅಗ್ನಿಪರ್ವತ ದ್ವೀಪಗಳಲ್ಲಿ ಒಂದಕ್ಕಾದರು ಎಲ್ಲರೂ ಭೆಟ್ಟಿಕೊಡಬೇಕು ಎಂದೆನಿಸುತ್ತದೆ. ಆ ಚಪಲ ಹುಟ್ಟಿಸಿದ ಲೇಖಕಿಗೆ ಧನ್ಯವಾದಗಳು.

  Like

 5. Chennaada lekhana, maahitiyinda tumbide. Bhaarateeyaru bandu hege nelesidaru annuva bagge neevu heliruva maatu chinte huttisuttade. Thank you for shedding light on that point. Population explosion and numerous issues of India is just increasing the rate of human trafficking.

  Like

 6. ಪ್ರೇಮಲತಾ ಪ್ರವಾಸಿ ಲೇಖನಗಳು ನನ್ನ ಅಚ್ಚುಮೆಚ್ಚಿನ ವಿಷಯಗಳಲ್ಲಿ ಒಂದು. ವಿವಿಧ ದೇಶಗಳ ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ, ಕಲೆ ಹೀಗೆ ಹಲವು ಹತ್ತು ಮುಖಗಳ ಪರಿಚಯವಾಗುತ್ತದೆ. ಪ್ರತಿಯೊಂದು ದೇಶಕ್ಕೂ ಅದರದೇ ಆದ ವೈಶಿಷ್ಟ್ಯತೆ ಇದೆ. ಇದರ ಜೊತೆಗೆ ನಿಸರ್ಗದ ಮಡಿಲಲ್ಲಿ, ಪ್ರಕೃತಿಯ ಅದ್ಭುತ ಬಲಗಳಿಂದಾಗುವ ಬದಲಾವಣೆಗಳ ಪರಿಚಯವೂ ಆಗುತ್ತದೆ. ನಿಮ್ಮ ಟೆನರೀಫ಼್ ದ್ವೀಪದ ಲೇಖನ ಇದನ್ನೇ ಓದುಗರಿಗೆ ಒದಗಿಸುತ್ತದೆ. ನಿಮ್ಮ ಲೇಖನ ಓದಿದಾಗ, ನನಗೆ ಈಗ ೩ ವರ್ಷಗಳ ಹಿಂದೆ ಭೇಟಿ ನೀಡಿದ ಪ್ರಸಿದ್ಧ ಹವಾಯಿ ದ್ವೀಪದ ನೆನಪಾಯಿತು. ಅಗ್ನಿಪರ್ವತಗಳು ನಮ್ಮ ಭೂಮಿಯ ಅತ್ಯಧ್ಬುತ ಸೃಷ್ಟಿ ಎಂದು ನನ್ನ ಅಭಿಪ್ರಾಯ. ಹಿಂದೆ ನಮ್ಮ ಭೂಮಿ ಶೀತದ ಕಪಿಮುಷ್ಟಿಗೆ ಸಿಲುಕಿದ್ದಾಗ, ಈ ಅಗ್ನಿಪರ್ವತದ ರೌದ್ರಾವತಾರದ ನೆರವಿನಿಂದಲೇ, ಇಂದು ನಮ್ಮ ಈ ಸುಂದರ ಗ್ರಹದಲ್ಲಿನ ವೈವಿಧ್ಯಮಯ ಜೀವರಾಶಿ ಸೃಷ್ಟಿಯಾದದ್ದು. ಹಾಗಾಗಿ ಈ ಅಗ್ನಿಪರ್ವತಗಳ ಬಗ್ಗೆ ನನಗೆ ಅಪೂರ್ವವಾದ ಗೌರವವಿದೆ. ಈಗ ಸುಮಾರು ೩೫ ವರ್ಷಗಳಿಂದ ಸತತವಾಗಿ ಲಾವಾರಸವನ್ನುಗುಳುತ್ತಿರುವ ಹವಾಯಿಯ ಕಿಲ್ವಯಾ ಜ್ವಾಲಾಮುಖಿಯನ್ನು ಪ್ರತ್ಯಕ್ಷವಾಗಿ ಕಂಡಾಗ, ನನ್ನ ಮನದಲ್ಲೆದ್ದ ಭಾವನೆಗಳನ್ನು ವರ್ಣಿಸುವುದು ಅಸಾಧ್ಯ. ಟೆನರೀಫ಼್ ದ್ವೀಪದ ಜ್ವಾಲಾಮುಖಿಯ ಬಗ್ಗೆ ನೀವು ಬರೆದ ಲೇಖನವೂ ನನ್ನಲ್ಲಿ ಅಂತಹುದೇ ಗೌರವ ಭಾವನೆಗಳನ್ನು ಎಬ್ಬಿಸಿತು. ಉತ್ತಮವಾದ ಲೇಖನ. ಮಾಹಿತಿಪೂರ್ಣವಾಗಿದೆ.
  ಉಮಾ ವೆಂಕಟೇಶ್

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.