ರಾಂಗ್ ನಂಬರ್ – ಕೇಶವ ಕುಲಕರ್ಣಿ ಬರೆದ ಕತೆ

ಸಿಂಗಾಪುರ ಕನ್ನಡ ಸಂಘದ `ಸಿಂಚನ ಸಾಹಿತ್ಯ ಸ್ಪರ್ಧೆ`ಯ `ಅನಿವಾಸಿ` ವಿಭಾಗದಲ್ಲಿ ಎರಡನೇ ಬಹುಮಾನ ಪಡೆದ ಕತೆ ಇದು. ಈ ಕತೆಯನ್ನು ನಾನು ಬರೆಯುತ್ತ ಬರೆಯುತ್ತ ಅವರು ಹಾಕಿಕೊಟ್ಟ ಮೂರು ಪುಟ ದಾಟಿಬಿಟ್ಟಿತು. ನಂತರ ಆ ಕತೆಯನ್ನು ಮೊಟಕುಗೊಳಿಸಿ ಕಳಿಸಿದೆ, ಅದಕ್ಕೀಗ ಬಹುಮಾನ ಬಂದಿದೆ. ಕಸಾಸಾಂವಿವೇಗೆ ನಾನು ಚಿರಋಣಿ. ಮತ್ತೆ ನನ್ನನ್ನು ಬರೆಯಲು ಪ್ರೋತ್ಸಾಹಿಸಿದ, ಓದಿ ಹುರಿದುಂಬಿಸಿದ ಕಸಾಸಾಂವಿವೇಯ ಮಿತ್ರರೆಲ್ಲರಿಗೆ ನನ್ನ ಕೃತಜ್ಞತೆಗಳು. ಇಲ್ಲಿ ಪೂರ್ತಿ ಕತೆಯನ್ನು ಪ್ರಕಟಿಸುತ್ತಿದ್ದೇನೆ.

Sinchana prize banner

ಮೊಬೈಲು ರಿಂಗಾಯಿತು. ಅನಾಮಿಕ ಕರೆ – No Caller ID. ಆಸ್ಪತ್ರೆಯ ಕರೆಗಳು ಬರುವುದು ಹೀಗೆಯೇ. ಆನ್-ಕಾಲ್ ಇರುವುದು ಏನಾದರೂ ಮರೆತು ಬಿಟ್ಟಿದ್ದೇನಾ ಎಂದು ನನ್ನ ಬಗ್ಗೆ ನನಗೇ ಶಂಕೆಯಾಗಿ ಫೋನ್ ಎತ್ತಿಕೊಂಡೆ. ಇನ್ನೂ `ಹಲೋ` ಕೂಡ ಹೇಳಿರಲಿಲ್ಲ.

ಆ ಕಡೆಯಿಂದ ಹೆಣ್ಣು ಧ್ವನಿಯೊಂದು, `I’m breaking up with you (ನಾನು ನಿನ್ನನ್ನು ಬಿಡುತ್ತಿದ್ದೇನೆ),’ ಎಂದು ಗುಡುಗಿತು.

‘Who is it? (ಯಾರದು?),’ ಎಂದು ಕೇಳಿದೆ.

‘I hate you. I’m breaking up with you (ನನಗೆ ನಿನ್ನನ್ನು ಕಂಡರೆ ಆಗೊಲ್ಲ, ನನ್ನ ನಿನ್ನ ಸಂಬಂಧ ಮುಗಿಯಿತು),’ ಎಂದು ಇನ್ನೂ ಜೋರಾಗಿ  ಕಿರುಚಿದಳು .

‘I think it`s a wrong number (ಇದು ರಾಂಗ್ ನಂಬರ್ ಅನಿಸುತ್ತೆ),’ ಎಂದು ನಂತರ ಕನ್ನಡದಲ್ಲಿ ಹೇಳಿದೆ. ‘ಇದು ರಾಂಗ್ ನಂಬರ್ ಅನ್ಸುತ್ತೆ.’

ಇಂಗ್ಲೆಂಡಿನಲ್ಲಿ ಕನ್ನಡದಲ್ಲಿ ಮಾತಾಡಿದರೆ ಅವಳಿಗೆ ತನ್ನ ತಪ್ಪಿನ ಅರಿವಾಗಬಹುದು ಎಂದುಕೊಂಡು.

‘ಸ್ಮಾರ್ಟ್ ಆಗಿ ಆಡಬೇಡ. ನಾನ್ಯಾರತ್ರ ಮಾತಾಡ್ತಿದೀನಿ ಅಂತೆ ನಂಗೆ `ಚೆನ್ನಾಗೇ` ಗೊತ್ತು,` ಎಂದು ಕನ್ನಡದಲ್ಲೇ ಕೊಂಕು ಮಾತಿನಲ್ಲಿ ಉಗಿದಳು!

ನನಗೆ ಬೆವರಿಳಿದು ಹೋಯಿತು. ನಾನು ಮೊಬೈಲನ್ನು ಹಾಗೇ ಹಿಡಿದುಕೊಂಡೆ, ಏನು ಆಗುತ್ತಿದೆ ಎಂದೇ ಗೊತ್ತಾಗುತ್ತಿರಲಿಲ್ಲ.

`ಕೇಳಿಸ್ತೋ ಇಲ್ವೋ? ಇನ್ಮುಂದೆ ನಿನ್ನ ಮುಖ ನಂಗೆ ತೋರಿಸಬೇಡ, ಗೊತ್ತಾಯ್ತಾ?,` ಈಗ ಜೋರಾಗಿ ಅರಚಿದಳು. ಅವಳು ಕೋಪದಲ್ಲಿ ಕುದಿಯುತ್ತಿರುವುದು ಫೋನಿನಿಂದ ಈ ಕಡೆಯಿಂದಲೂ ಗೊತ್ತಾಗುತ್ತಿತ್ತು.

ತನ್ನ ಪ್ರಿಯಕರ ಎದುರಿಗೆ ಸಿಕ್ಕರೆ ಇದನ್ನು ಹೇಳುವುದು ಬಹುಷಃ ಅವಳಿಗೆ ಸಾಧ್ಯವಿರಲಿಲ್ಲ, ಅಥವಾ ಎದುರಿಗೆ ಸಿಕ್ಕರೆ ಅವನ ಹುಸಿಮಾತುಗಳಿಗೆ ಮತ್ತೆ ಕರಗಿ ಹೋಗಿಬಿಡಬಹುದು ಎನ್ನುವ ಹೆದರಿಕೆ ಇರಬಹುದು, ಹಾಗೆ ಕರಗಿ ಹೋಗುವುದು ಅವಳಿಗೆ ಇಷ್ಟವಿಲ್ಲ ಅನಿಸುತ್ತೆ. ಅದಕ್ಕೆಂದೇ ರಾತ್ರಿ ಹನ್ನೊಂದುವರೆಗೆ ಫೋನಿನಲ್ಲೇ ಹೇಳಿ ಸಂಬಂಧವನ್ನು ಮುರಿದುಬಿಡಲು ನಿರ್ಧರಿಸಿದ್ದಾಳೆ. ಆದರೆ ಅವಳು ತನ್ನ ಪ್ರಿಯಕರನ ನಂಬರನ್ನು ಬಿಟ್ಟು ಬೇರೆಯವರ ನಂಬರಿಗೆ ಫೋನು ಮಾಡುವಷ್ಟು ಪೆದ್ದಳೇ? ನಂಬರುಗಳನ್ನು ಒತ್ತುವಾಗ ಕೋಪದ ಭರದಲ್ಲಿ ಯಾವುದೋ ನಂಬರನ್ನು ಅದಲು ಬದಲು ಮಾಡಿದ್ದಾಳೆ ಅಥವಾ ಬೇರೆ ನಂಬರನ್ನು ಒತ್ತಿದ್ದಾಳೆ. ಅದು ನನಗೆ ಬಂದಿದೆ! ಆದರೆ ಮೊಬೈಲಿನಲ್ಲಿ ಎಲ್ಲರ ನಂಬರ್ ಮೊದಲೇ ಸ್ಟೋರ್ ಮಾಡಿರುತ್ತೇವಲ್ಲ, ನಂಬರ್ ಒತ್ತುವ ಪ್ರಸಂಗವೆಲ್ಲಿ ಬರುತ್ತದೆ? ಅವಳು ಮೊಬೈಲಿನಿಂದ ಮಾಡಿದ್ದಾಳೋ, ಲ್ಯಾಂಡ್-ಲೈನಿನಿಂದ ಮಾಡಿದ್ದಾಳೋ ಯಾರಿಗೆ ಗೊತ್ತು? ಆದರೆ ಇದರಿಂದ ನನಗೇನಾಗಬೇಕಾಗಿದೆ? ನಾನೇಕೆ ಅವಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೇನೆ? ಅವಳು ಕನ್ನಡದಲ್ಲಿ ಮಾತಾಡಿದಳು ಅಂತಾನಾ? ಕನ್ನಡವಳಾದರೇನಂತೆ? ನನಗ್ಯಾಕೆ ಅವಳ ಉಸಾಬರಿ?

ನನ್ನ ಮೌನ ಕೇಳಿ ಅವಳ ಕೋಪ ಇನ್ನೂ ತಾರಕಕ್ಕೇರಿತು, `ಯಾಕೆ ಮಾತಾಡ್ತಾಯಿಲ್ಲ? Finally you showed your true colours. Enough is enough. I’m breaking with you (ನೀನು ನಿನ್ನ ನಿಜ ಬಣ್ಣವನ್ನ ತೋರಿಸೇ ಬಿಟ್ಟೆ, ಆಗಿದ್ದೆಲ್ಲ ಸಾಕು, ನಾನು ನಿನ್ನನ್ನ ಬಿಡುತ್ತಿದ್ದೇನೆ),’ ಎಂದು ಮೂರನೇ ಸಪ್ತಕದ ಸ್ವರಗಳಲ್ಲಿ ಭುಸುಗುಟ್ಟಿದಳು.

ಅಷ್ಟರಲ್ಲಿ ಪಕ್ಕದಲ್ಲೇ ಮಲಗಿದ್ದ ನನ್ನ ಹೆಂಡತಿಗೆ ಅರೆ-ಎಚ್ಚರೆವಾಯಿತು, `ಇಷ್ಟೊತ್ತಲ್ಲಿ ಯಾರ ಫೋನು? ನಿಮ್ಮ ಅಮ್ಮ ಏನಾದ್ರೂ ಹೋಗಿಬಿಟ್ರಾ? ` ಎಂದಳು.

ನನ್ನ ಅಮ್ಮನ ಕಾಯಿಲೆ ಹೆಚ್ಚು-ಕಮ್ಮಿಯಾಗಿ ಬೆಂಗಳೂರಿನಲ್ಲಿರುವ ನನ್ನ ತಮ್ಮ ನಿನ್ನೆಯಷ್ಟೇ ಅಮ್ಮನನ್ನು ಅಪೋಲೋ ಹಾಸ್ಪಿಟಲ್ಲಿನಲ್ಲಿ ಅಡ್ಮಿಟ್ ಮಾಡಿದ್ದ.

ಮೊಬೈಲನ್ನು ಚಕ್ಕನೇ ಡಿಸ್-ಕನೆಕ್ಟ್  ಮಾಡಿ, `ಇಲ್ಲ ಕಣೆ, ಫೋನು ಇಂಡಿಯಾದಲ್ಲ. ಯಾವುದೋ ರಾಂಗ್ ನಂಬರ್,` ಎಂದು ಫೋನನ್ನು ಪಕ್ಕಕ್ಕಿಟ್ಟೆ.

ಎರಡೇ ಸೆಕೆಂಡಿನಲ್ಲಿ ಮತ್ತೆ ಮೊಬೈಲು ರಿಂಗಾಯಿತು. ಅದೇ ಅನಾಮಿಕ ಕರೆ!

`ಪೀಡೆ, ದರಿದ್ರ ಮುಂಡೇದು, ಅವಳ ಲವರ್ ಏನೋ ಮಾಡಿದರೆ ನನಗ್ಯಾಕೆ ಫೋನು ಮಾಡಬೇಕು?, ಬಹುಷಃ ರಿ-ಡಯಲ್ ಒತ್ತಿದ್ದಾಳೆ ಪಿಶಾಚಿ!` ಎಂದು ಮನಸ್ಸಿನಲ್ಲೇ ಬಯ್ದುಕೊಳ್ಳುತ್ತ, ಮೊಬೈಲನ್ನು ಇನ್ನೇನು ಡಿಸ್-ಕನೆಕ್ಟ್ ಮಾಡುವುದರಲ್ಲಿದ್ದೆ; ಅಷ್ಟರಲ್ಲಿ ನನ್ನ ಹೆಂಡತಿ ಮೊಬೈಲನ್ನು ನನ್ನ ಕೈಯಿಂದ ಚಕ್ ಅಂತ ಕಿತ್ತುಕೊಂಡಳು.

ಆ ಕಡೆಯಿಂದ, `How dare you disconnect the phone (ಫೋನ್ ಕಟ್ ಮಾಡೋಕ್ಕೆ ಎಷ್ಟೋ ಕೊಬ್ಬು ನಿನಗೆ)?  ನಿನ್ನ ಹೆಂಡತಿಗೆ  ಗೊತ್ತಾಗಿ ಹೋಗುತ್ತೆ ಅಂತ ಹೆದರಿಕೆನಾ? ಏನು ನಿನ್ನ ಹೆಂಡತಿ ನಿನ್ನ ಪಕ್ಕಾನೇ ಇದಾಳಾ? ಅದಕ್ಕೇ ಬಾಯಿಂದ ಮಾತೇ ಬರ್ತಾಯಿಲ್ವಾ…` ಯಾವ ಉತ್ತರಕ್ಕೂ ಕಾಯದೇ ಇನ್ನೂ ಹೆಚ್ಚಿನ ಕೋಪದಲ್ಲಿ ಕೀರಲು ಧ್ವನಿಯಲ್ಲಿ ಕೂಗಾಡುತ್ತಳೇ ಇದ್ದಳು.

ನನ್ನ ಹೆಂಡತಿ ನನ್ನನ್ನು ಕೊಲ್ಲುವಂತೆ ದುರುಗುಟ್ಟಿ ನೋಡುತ್ತಿದ್ದಳು. ನನಗೆ ತಲೆಸುತ್ತು ಬಂದಂತಾಗಿ ಹಾಸಿಗೆಯಲ್ಲೇ ಬಿದ್ದು ಬಿಟ್ಟೆ!

ಅತ್ತ ಕಡೆಯಿಂದ ಆ ಹೆಂಗಸಿನ ಕಿರುಚಾಟ ನಿಲ್ಲಿಸಿದ್ದು ಗೊತ್ತಾಯಿತು. ಇತ್ತ ಕಡೆಯಿಂದ ನನ್ನ ಹೆಂಡತಿ ಒಂದೇ ಒಂದು ಅಕ್ಷರವನ್ನೂ ಮಾತಾಡಿರಲಿಲ್ಲ, ಈ ಕಡೆಯಿಂದ ನಾನೇ ಕೇಳಿಸಿಕೊಂಡಂತೆ ಇರಲಿ ಎಂದು ಇರಬೇಕು. ಫೋನ್ ಡಿಸ್-ಕನೆಕ್ಟ್ ಆಗಿದ್ದು ಗೊತ್ತಾಯಿತು.

ಅಲ್ಲಿಯ ಕಿರುಚಾಟ ನಿಲ್ಲುತ್ತಿದ್ದಂತೇ, `ಏನಿದು? Who is she (ಯಾರವಳು)? ಯಾವಾಗಿಂದ ಈ ಆಟ ನಡೀತಿದೆ?` ಎಂದು ನನ್ನ ಹೆಂಡತಿ ಜೋರಾಗಿ ಕಿರುಚಿದಳು.

ನಾನು ಬಿದ್ದುಕೊಂಡಲ್ಲೇ ಮಾಮೂಲಿ ಮಾತಿನ ಧಾಟಿಯಲ್ಲಿ, `ಅದು ರಾಂಗ್ ನಂಬರ್ ಕಣೆ. ಯಾರಿಗೋ ಫೋನು ಮಾಡಲು ಹೋಗಿ ನನ್ನ ಮೊಬೈಲಿಗೆ ಬಂದಿದೆ, ಅಷ್ಟೇ!` ಎಂದೆ.

`ನಿಂಗೆ ಸುಳ್ಳು ಹೇಳೋಕೂ ಬರಲ್ವಲ್ಲೋ! ನಿಜಾ ಹೇಳು. ಯಾರದು? ನಿನ್ನ ಅಫೇರ್ ಯಾವಾಗಿಂದ ನಡೀತಿದೆ?` ಅವಳ ಧ್ವನಿ ಜೋರಾಗಲು ಶುರುವಾಯಿತು.

`Please believe me (ದಯವಿಟ್ಟು ನಂಬು). ಜೋ (ಅಂದರೆ ಜ್ಯೋತಿ, ೧೭ ವರ್ಷದ ಒಬ್ಬಳೇ ಮಗಳು) ಮೇಲಾಣೆ – ಅವಳು ಯಾರಂತ ನಂಗೆ ಗೊತ್ತಿಲ್ಲ,` ಎಂದೆ.

`ನಾನೇನು ಪೆದ್ದು ಅಂದ್ಕೊಂಡಿದೀಯಾ? ಇಲ್ಲಿ (ಅಂದರೆ ಇಂಗ್ಲಂಡಿನಲ್ಲಿ) ಕನ್ನಡದಲ್ಲಿ ಮಾತಾಡುವವರು ಎಷ್ಟು ಮಹಾ ಇದಾರೆ? ಕನ್ನಡದವಳು ರಾಂಗ್ ನಂಬರಿಗೆ ಫೋನ್ ಮಾಡಿದ್ರೂ ಕನ್ನಡ ಮಾತಾಡೋ `ಗಂಡಸಿನ` ಮೊಬೈಲಿಗೇ ಬರುತ್ತೆ, ಅಲ್ಲಾ!` ಎಂದು ನನ್ನ ಹೆಂಡತಿ ದೊಡ್ಡ ದನಿಯಲ್ಲಿ ಶುರುಮಾಡಿದಳು.

ವಾಪಸ್ಸು ಫೋನು ಮಾಡಿ ಸ್ಪಷ್ಟೀಕರಣ ಮಾಡೋಣವೆಂದರೆ, ಬಂದ ಕರೆ – ಅನಾಮಿಕ ಕರೆ! ಏನು ಮಾಡುವುದು?

ನನ್ನ ಹೆಂಡತಿಯ ಕಿರುಚಾಟ ಕೇಳಿ, ಪಕ್ಕದ ಬೆಡ್-ರೂಮಿನಿಂದ ಮಗಳು ಜೋ ಬಂದಳು, `Is everything alright (ಎಲ್ಲಾ ಸರಿಯಾಗಿದೆಯಾ)?`.

ನನ್ನ ಹೆಂಡತಿ ಮೊಬೈಲನ್ನು ನನ್ನ ಮಗಳತ್ತ ಎಸೆದು, ಆಗಿರುವ ರಾದ್ಧಾಂತವನ್ನು ಇನ್ನೂ ನಾಟಕೀಕರಿಸಿ ತೋರಿಸಿದಳು.

`You are so cheap, Daddy! (ನೀನು ಎಷ್ಟು ಕೆಳಮಟ್ಟಕ್ಕೆ ಹೋಗಿದ್ದೇಯಾ, ಅಪ್ಪಾ!` ಎಂದು ಜೋ ತಾಯಿಯನ್ನು ತಬ್ಬಿಕೊಂಡು ಅಳತೊಡಗಿದಳು.

ಇದೆಲ್ಲವನ್ನೂ ಮಾರನೇ ದಿನವೇ ಶಾಂಗೆ ಹೇಳಿದೆ. ಕಾಸ್ಟಾ ಕಾಫೀ ಕುಡಿಯುತ್ತಾ ಎಲ್ಲ ಕೇಳಿಸಿಕೊಂಡ.

ಶಾಂ, ಅಂದರೆ ಶ್ಯಾಮಕುಮಾರ್, ಇಂಡಿಯಾದಲ್ಲಿ ಮೆಡಿಕಲ್ ಮಾಡುವಾಗ ನನ್ನ ಸಹಪಾಠಿ, ಅದಕ್ಕಿಂತ ಹೆಚ್ಚಾಗಿ ಆಪ್ತಮಿತ್ರ. ಅವನು ನನಗಿಂತ ನಾಕೈದು ವರ್ಷ ಮೊದಲೇ ಇಂಗ್ಲಂಡಿಗೆ ಬಂದವ. ನಾನು ಇಂಗ್ಲಂಡಿಗೆ ಬರಲು ಎಲ್ಲ ತರಹದ ಸಹಾಯ ಮಾಡಿದ್ದಾನೆ. ಅವನ ಮತ್ತು ನಮ್ಮ ಸಂಸಾರ ಒಟ್ಟಿಗೆ ಡಿನ್ನರಿಗೆ, ಸಿನೆಮಾಗೆ, ಪ್ರವಾಸಗಳಿಗೆ ಹೋಗುತ್ತೇವೆ.  ಏನೇ ಕೆಲಸ ಮಾಡಿದರೂ ಅವನ ಮತ್ತು ಅವನ ಹೆಂಡತಿಯ ಸಲಹೆ ನಮಗೆ ಬೇಕೇ ಬೇಕು. ನನ್ನ ಮಗಳು ಮತ್ತು ಅವನ ಮಗಳು ಒಳ್ಳೆ ಗೆಳತಿಯರು ಸಹ. ಅವನಿಗಿಂತ ಒಳ್ಳೆಯ ಸಲಹೆ ಇನ್ನಾರೂ ನನಗೆ ಕೊಡಲಾರರು ಎಂದೇ ಅವನನ್ನು `ಕಾಸ್ಟಾ ಕಾಫೀ`ಗೆ ಕರಿಸಿದ್ದು.

ಶಾಂ ನಿಧಾನವಾಗಿ ಕ್ಯಾಪುಚಿನೋ ಹೀರುತ್ತ, `ರಾಂಗ್ ನಂಬರಿನಲ್ಲೂ ಕನ್ನಡದಲ್ಲಿ ಮಾತಾಡೋದೂ ಅಂದ್ರೆ, ಯಾರಿಗಾದ್ರೂ ನಂಬೋದು ಕಷ್ಟಾನೇ. ಅದರಲ್ಲೂ ಮಧ್ಯರಾತ್ರಿ ಫೋನು ಬಂದಿದೆ ಅಂತೀಯ, ಭಾಭಿ (ನನ್ನ ಹೆಂಡತಿ) ಫೋನಿನಲ್ಲಿ ಎಲ್ಲ ಕೇಳಿಸಿ ಕೊಂಡಿದ್ದಾಳೆ  ಅಂತೀಯ, ಬಂದದ್ದು ರಾಂಗ್ ನಂಬರ್ ಅಂತ ಹೇಗೋ ನಂಬಿಸೋದು? ರಾಂಗ್ ನಂಬರ್ ಬಂದಿದ್ದು ನಿಜಾ ಅಂದ್ರೂನೂ chances of these kind of calls may be one in million (ಲಕ್ಷಕೊಂದು ಕರೆಯಲ್ಲಿ ಹೀಗಾಗಬಹುದೇನೋ)…` ಎಂದ.

`ನನ್ನ ನಸೀಬಿಗೆ ಆ ಒನ್ ಇನ್ ಮಿಲಿಯನ್ ನಾನೇ ಆಗಬೇಕಿತ್ತಾ? ದರಿದ್ರ ಫೋನು! ಈಗ ನಾನೇನು ಮಾಡಬೇಕು ಹೇಳು. ನಾವೆಷ್ಟು ಆರಾಮಾಗಿ ಇದ್ವಿ. ನೀನೇ ನೋಡಿದ್ದೀಯಲ್ಲ! ಹೋದ ವಾರ ನಮ್ಮ ಮನೆ ಪಾರ್ಟಿ ಹೇಗೆ ಎಂಜಾಯ್ ಮಾಡಿದ್ವಿ ಅಂತ. ನಾನೂ ನನ್ನ ಹೆಂಡತೀನೂ ಸೇರಿ ಎಷ್ಟೊತ್ತು ಡಾನ್ಸ್ ಮಾಡಿದ್ವೀ ಅಂತ. I am so proud of my family (ನನಗೆ ನನ್ನ ಸಂಸಾರವೆಂದರೆ ಹೆಮ್ಮೆ),` ಅಂದೆ.

ಶಾಂ ಹೌದೆಂದು ತಲೆ ಅಲ್ಲಡಿಸಿದ.

ನಂತರ ನಿಧಾನವಾಗಿ, `ಯಾರೋ ಅವಳು? ನಂಗೂ ಗೊತ್ತಿಲ್ಲದಂತೆ ಶುರು ಇಟ್ಕೊಂಡಿದೀಯಾ? ಯಾವಾಗಿಂದ ನಡೀತಿದೆ? Middle life crisis (ಮಧ್ಯ ವಯಸ್ಸಿನ ತಳಮಳ),` ಎಂದು ಕಣ್ಣು ಮಿಟುಕಿಸಿದ.

`ಏನೋ! ನೀನೂ ನನ್ನ ಹೆಂಡತಿ ತರಾನೇ ಮಾತಾಡ್ತೀಯಾ! ನಿನ್ನ ಮೇಲಾಣೆ. ನಂಗೆ ಯಾವ ಅಫೇರೂ ಇಲ್ಲ, ಸುಡುಗಾಡೂ ಇಲ್ಲ ಮಾರಾಯಾ! ನಾ ನಿನ್ಹತ್ರ ಬಂದಿದ್ದು ನಿನ್ನ ಅಡ್ವೆಸ್ ಕೇಳೋಕ್ಕೆ. ನೀನು ನೋಡಿದ್ರೆ ನೀನೂ ನಂಬೊಲ್ಲ ಅಂತೀಯಾ. ಏನು, ನಿನಗೆ ಇದೆಲ್ಲ ತಮಾಷೆ ಅನಿಸ್ತಿದೆಯಾ?` ಎಂದು ರೇಗಿದೆ.

`ಆಯ್ತಪ್ಪಾ ಶ್ರೀರಾಮಚಂದ್ರ, ಏಕಪತ್ನೀ ವೃತಸ್ಥ!` ಎಂದು ನಾಟಕೀಯವಾಗಿ ಹೇಳಿ, `ಯೋಚನೆ ಮಾಡಿ ಆಮೇಲೆ ಫೋನ್ ಮಾಡ್ತೀನಿ. ವರಿ ಮಾಡ್ಕೋಬೇಡ, ಎಲ್ಲಾ ಸರಿ ಹೋಗುತ್ತೆ,` ಅಂದ.

ಇದೆಲ್ಲವನ್ನು ತನ್ನ ಹೆಂಡತಿಗೂ ನನ್ನ ಅನುಮತಿಯಿಲ್ಲದೇ ಹೇಳುವುದಿಲ್ಲವೆಂದು ಭರವಸೆ ಕೊಟ್ಟ. ಹೆಂಡತಿಯ ಹತ್ತಿರ ಇಂಥಹ ವಿಷಯಗಳನ್ನು ಬಹಳ ದಿನಗಳ ಕಾಲ ಅವನು ಹೇಳದೇ ಇರಲಾರ ಎನ್ನುವುದು ನನಗೆ ಚೆನ್ನಾಗಿ ಗೊತ್ತು.

ಇದೆಲ್ಲ ನಡೆದು ತಿಂಗಳಾಗುತ್ತ ಬಂದಿದೆ. ಇಲ್ಲಿಯವರೆಗೂ ಆ ರಾಂಗ್ ನಂಬರಿನಿಂದ ಒಂದೇ ಒಂದು ಫೋನ್ ಬಂದಿಲ್ಲ.

ಮನೆಗೆ ಬಂದರೆ ಸಾಕು, ಅವಳು ಯಾರು, ಎಲ್ಲಿಯವಳು, ಇಂಡಿಯಾದಲ್ಲಿ ಯಾವ ಊರು, ಇಲ್ಲಿ ಯಾವ ಊರು, ವಯಸ್ಸೆಷ್ಟು, ಎಲ್ಲಿ ಕೆಲಸ ಮಾಡುತ್ತಾಳೆ, ಯಾವಾಗಿನಿಂದ ಇದೆಲ್ಲ ನಡೀತಿದೆ, ಅವಳಿಗೆ ಮದುವೆಯಾಗಿದೆಯಾ, ನೋಡೋದಕ್ಕೆ ಚೆನ್ನಾಗಿದಾಳಾ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ, ಜಗಳದ ಮೇಲೆ ಜಗಳ.

ನನ್ನ ಹೆಂಡತಿಯ ಹತ್ತಿರ ಅದು ರಾಂಗ್ ನಂಬರ್ ಎಂದು ಅದೆಷ್ಟು ಸಲ ಯಾವ್ಯಾವುದೋ ರೀತಿಯಲ್ಲಿ ಹೇಳಿ ನೋಡಿದೆ, ಅದೇ ತರಹ ಆದ ನೈಜಘಟನೆಗಳನ್ನು ಜಾಲದಿಂದ ಓದಿ ಹೇಳಿದೆ. ಏನು ಮಾಡಿದರೂ ನನ್ನನ್ನು ನಂಬಲು ತಯಾರಿರಲಿಲ್ಲ.

ಈಗೀಗ ಮನೆ ಒಂಥರಾ ಸ್ಮಶಾನದಂತಾಗಿದೆ! ಹೆಂಡತಿ ಮಾತಾಡುವುದನ್ನು ಅದಷ್ಟು ಕಡಿಮೆ ಮಾಡಿದ್ದಾಳೆ. ಮಗಳಂತೂ ನನ್ನ ಹತ್ತಿರ ಹಾಂ ಹೂಂ ಬಿಟ್ಟರೆ ಬೇರೆ ಮಾತಾಡುತ್ತಿಲ್ಲ. ಅಡಿಗೆ ಒಂದೇ ಆದರೂ ನನ್ನ ಊಟದ ಸಮಯವೇ ಬೇರೆ, ಅವಳ ಊಟದ ಸಮಯವೇ ಬೇರೆ. ಮಗಳಂತೂ ಫ್ರೆಂಡ್ಸು, ಎಕ್ಸಾಮು ಅಂತ ಬಿಜಿ. ನಾನು ನನ್ನ ಹೆಂಡತಿ ಬೇರೆ ಬೇರೆ ಬೆಡ್-ರೂಮಿನಲ್ಲಿ ಮಲಗುವುದು.

ಅದೊಂದು ರಾತ್ರಿ. ಮಗಳು ಮಲಗಿದ್ದಾಳೆ ಎಂದು ಖಾತ್ರಿ ಮಾಡಿಕೊಂಡು ನನ್ನ ಹೆಂಡತಿ ನನ್ನ ಬೆಡ್-ರೂಮಿಗೆ ಬಂದು, `ನಿನ್ನ ಹತ್ತಿರ ಏನೋ ಮಾತಾಡಬೇಕಿತ್ತು`, ಅಂದಳು.

ನಾನು ಓದುತ್ತಿರುವ ಪುಸ್ತಕದಿಂದ ತಲೆ ಎತ್ತದೇ, `ಹೂಂ,` ಎಂದೆ.

ನನ್ನ ಕೈಯಿಂದ ಪುಸ್ತಕ ಕಿತ್ತುಕೊಂಡು, `ಥೂ, ಕನ್ನಡ ಪುಸ್ತಕ` ಎಂದು ಎತ್ತಿಟ್ಟಳು.

`ನೀನು ಇದುವರೆಗೂ ಅವಳು ಯಾರು, ಯಾವಾಗಿನಿಂದ ಅಫೇರ್ ನಡಿತಿದೆ ಅಂತ ಒಂದೂ ಹೇಳಿಲ್ಲ, ಹೇಳುವ ಹಾಗೂ ಕಾಣುತ್ತಿಲ್ಲ. ಬಹುಷಃ ಅವಳು ಯಾರೋ ನನಗೆ ಪರಿಚಯದವಳೇ ಇರಬೇಕು, ಅದಕ್ಕೇ ನೀನು ಅವಳು ಯಾರು ಅಂತ ಹೇಳಲು ತಯಾರಿಲ್ಲ. ಇರಲಿ ಬಿಡು, ಅದಕ್ಕೇ, ನಾನೇ ಒಂದು ಡಿಸಿಷನ್ನಿಗೆ ಬಂದಿದೀನಿ,` ಎಂದು ಸ್ವಲ್ಪ ತಡೆದು, `ನಾನು ನಿನ್ನ ಅಫೇರ್ ಬಗ್ಗೆ ಮಾರ್ಕ್ ಹತ್ರ ಮಾತಾಡಿದೆ. ಮಾರ್ಕ್ ಅವನ ಡೈವೋರ್ಸ್ ಲಾಯರ್ ಹತ್ರ ಮಾತಾಡಿದ್ದಾನೆ. ಎಲ್ಲ ಪೇಪರ್ ಇನ್ನು ಸ್ವಲ್ಪ ದಿನದಲ್ಲಿ ಬರುತ್ತೆ. ಬೇಗ ಮುಗಿದಷ್ಟೂ ಒಳ್ಳೇದು. ನೀನು ನಿನ್ನ ಆ ಗರ್ಲ್-ಫ್ರೆಂಡ್ ಹತ್ರ ಹೋಗಬಹುದು. ನನಗೂ ನನ್ ಲೈಫ್ ಇದೆ. ನನ್ನನ್ನ ನಾನು ನೋಡಿಕೋಬೇಕಲ್ವಾ?`

ಮಾರ್ಕ್, ನನ್ನ ಹೆಂಡತಿಯ ಸಹೋದ್ಯೋಗಿ, ಅರೆ-ಭಾರತೀಯ. ಅವನ ಅಪ್ಪ ಭಾರತದಿಂದ ವಲಸೆ ಬಂದ ಪ್ರಾಣಿ, ತಾಯಿ ವೇಲ್ಸ್-ನವಳು. ಅವನ ಪೂರ್ತಿ ಹೆಸರು ಮಾರ್ಕ್ ಬಾಲಸುಬ್ರಮಣಿಯನ್. ಆಸು ಪಾಸು ನನ್ನಷ್ಟೇ ವಯಸ್ಸು. ಅವನ ಇಬ್ಬರು ಮಕ್ಕಳು ನನ್ನ ಮಗಳಿಗಿಂತ ದೊಡ್ಡವರು. ಆತ ನನ್ನ ಹೆಂಡತಿಗಷ್ಟೇ ಅಲ್ಲ, ನನಗೂ ಒಳ್ಳೆಯ ಗೆಳೆಯ. ಅವನು ಮತ್ತು ಅವನ ಇಂಗ್ಲೀಷ್ ಹೆಂಡತಿ ಅವರಿಷ್ಟದ ಇಂಡಿಯನ್ ಫುಡ್ ತಿನ್ನಲು ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ಅವರ ಕೆಲವು ಮನೆ ಪಾರ್ಟಿಗಳಿಗೆ ನಾವೂ ಹೋಗಿದ್ದೇವೆ. ನಾನು ಮಾರ್ಕ್ ಒಂದೇ ಕ್ರಿಕೆಟ್ ಕ್ಲಬ್ಬಿನಲ್ಲಿ ಆಡುತ್ತೇವೆ. ಆಗಾಗ ಪಬ್ಬಿಗೆ ಹೋಗಿ ಗಂಟೆಗಟ್ಟಲೇ ಹರಟುತ್ತೇವೆ. ಒಂಥರ ಅವನು ನಮ್ಮ ಫ್ಯಾಮಿಲಿ ಫ್ರೆಂಡ್ ಅನ್ನಬಹುದು. ಆದರೆ ಈಗ ಒಂದು ವರ್ಷದ ಹಿಂದೆ ಅವನ ಡೈವೋರ್ಸ್ ಆಯಿತು. ಯಾಕೆ ಎಂದು ನಾನೂ ಕೇಳಿಲ್ಲ, ಅವನೂ ಹೇಳಿಲ್ಲ. ಮಾರ್ಕ್ ತನಗೆ ಡೈವೋರ್ಸ್ ಕೊಡಿಸಿದ ಲಾಯರನ್ನು ಈಗ ನನ್ನ ಹೆಂಡತಿಗೆ ಒಪ್ಪಿಸಿದ್ದಾನೆ.

`ಜೋ ಬಗ್ಗೆ ಯೋಚಿಸಿದ್ದೀಯಾ?` ಎಂದು ಕೇಳಿದೆ.

`ಹೌದು. ಜೋ ಹತ್ರ ಆಗಲೇ ಹೇಳಿದೀನಿ and she is happy with my decision (ಅವಳಿಗೆ ನನ್ನ ನಿರ್ಧಾರದಿಂದ ಖುಷಿಯಾಗಿದೆ). ಅವಳು ಇನ್ನೊಂದೆರೆಡು ತಿಂಗಳಲ್ಲಿ ಯುನಿವರ್ಸಿಟಿ ಅಂತ ಹೇಗೂ ಬೇರೆ ಊರಿಗೆ ಹೋಗ್ತಾಳೆ. ಅವಳಿಗೆ ಇದರಿಂದ ಅಷ್ಟೊಂದು ಅಫೆಕ್ಟ್ ಆಗೊಲ್ಲ ಅನ್ಸುತ್ತೆ. ಇನ್ನು ಇಷ್ಟು ದೊಡ್ಡ ಮನೆ ಇಟ್ಕೊಂಡು ಏನು ಮಾಡೋದು?` ಎಂದಳು.

ಎಲ್ಲಿಂದ ಎಲ್ಲಿಗೆ ಹೋಯಿತೀ ಬದುಕು! ಒಂದು ರಾಂಗ್ ನಂಬರಿನಿಂದಾಗಿ ನನಗಿಲ್ಲದ ಸಂಬಂಧವನ್ನು ಕಲ್ಪಿಸಿಕೊಂಡು, ಮಗಳು ಸ್ವತಂತ್ರವಾಗಿ ಯುನಿವರ್ಸಿಟಿಗೆ ಹೋಗುವ ಸಮಯದಲ್ಲಿ, ಮನೆ ಮಾರಿಸಿ (ಮನೆ ಇಬ್ಬರ ಹೆಸರಲ್ಲೂ ಇದೆ), ನನಗೆ ಡೈವೋರ್ಸ್ ಕೊಡಲು ತಯಾರಾಗಿ ನಿಂತಿದ್ದಾಳೆ! ನನಗೆ ನನ್ನ ಹೆಂಡತಿ ಬೇಕು, ಮಗಳು ಬೇಕು, ಇಷ್ಟಪಟ್ಟು ಪ್ರತಿ ರೂಮನ್ನೂ ಬಾತ್-ರೂಮನ್ನೂ ಮತ್ತೆ ಸಜ್ಜು ಮಾಡಿದ ಈ ಮನೆಯೂ ಬೇಕು, ಎಲ್ಲ ಮೊದಲಿನ ಹಾಗೆಯೇ ಇರಬೇಕು. ಹಾಗೆ ಆಗಬೇಕೆಂದರೆ ನಾನು ನಿರಪರಾಧಿ ಅಂತ ಸಾಧಿಸಿ ತೋರಿಸಬೇಕು. ಆದರೆ ಹೇಗೆ?

ನನ್ನೊಳಗೆ ಕೋಪ, ಹತಾಶೆ, ನಶ್ವರತೆ ಎಲ್ಲ ಒಟ್ಟಿಗೇ ಕೂಡಿ ಹೊರಬಂದವು, `ಏನ್ ಮಾಡ್ತೀಯೋ ಮಾಡ್ಕೋ ಹೋಗು. ನಿನ್ನ ಮುಖ ತೋರಿಸ್ಬೇಡ,` ಎಂದು ಕಿರುಚಿ, ಅವಳ ರಟ್ಟೆ ಹಿಡಿದು ರೂಮಿನಿಂದ ಹೊರಹಾಕಿ ಬಾಗಿಲು ಮುಚ್ಚಿಕೊಂಡೆ. ಕೋಪದಲ್ಲಿ ಮೈ ಥರಥರ ನಡುಗುತ್ತಿತ್ತು.

ಡೈವೋರ್ಸ್ ಪೇಪರ್-ಗಳು ಬಂದವು. ಲಾಯರ್ ಹತ್ತಿರ ಮಾತಾಡಿದೆವು. ಎಲ್ಲ ಇತ್ಯರ್ಥವಾಗುವ ಸಮಯ ಬಂತು.

ಎಲ್ಲರಿಗೂ ನಾವು `ಮಾದರಿ ಸಂಸಾರ` ಎನ್ನುವ ಹಾಗೆ ಇದ್ದೆವು, ಹಾಗಂತೆ ಗೆಳೆಯರೆಲ್ಲರೂ ಹೇಳುತ್ತಿದ್ದರು ಕೂಡ. ಆಪ್ತ ಗೆಳೆಯರಿಗೆ ಈ ಸುದ್ದಿ ಕೇಳಿ ಶಾಕ್! ನನ್ನ ಅಫೇರ್ ಬಗ್ಗೆ ಆಗಲೇ ನನ್ನ ಮಿತ್ರಮಂಡಲಿಗೆಲ್ಲ ರೆಕ್ಕೆ ಪುಕ್ಕ ಸೇರಿಸಿ ಸುದ್ದಿ ಹೋಗಿಯಾಗಿತ್ತು. ನನ್ನ ಹೆಂಡತಿಯ ಬಗ್ಗೆ ಅವರಿಗೆಲ್ಲ ಕನಿಕರ, ನನ್ನ ಬಗ್ಗೆ ತಾತ್ಸಾರ!

ನನ್ನ ಹೆಂಡತಿ ನನ್ನ ಅತ್ತೆ ಮಾವನಿಗೆ ಹೇಳಿದಳು. ತನ್ನ ಅಣ್ಣನಿಗೆ ಹೇಳಿದಳು. ನನ್ನ ಅಫೇರನ್ನು ಅವಳೇ ಕಣ್ಣಿಂದ ನೋಡಿರುವಂತೆ ಬಣ್ಣಿಸಿದಳು. ಮಾವ ನಾನು ಏನು ಹೇಳೀದರೂ ನಂಬದೇ, `ನೀವು ಹೀಗೆ ಮಾಡ್ತೀರಿ ಅಂತ ಖಂಡಿತ ಎಣಿಸಿರಲಿಲ್ಲ,` ಎಂದರು, ಅತ್ತೆ ಫೋನಿನಲ್ಲಿ ಅತ್ತಿದ್ದೇ ಆಯಿತು.

ನಾನು ಇಂಡಿಯಾದಲ್ಲಿರುವ ನನ್ನ ತಮ್ಮನಿಗೆ ರಾಂಗ್ ನಂಬರಿನಿಂದ ಹಿಡಿದು ಡೈವೋರ್ಸ್ ಆಗುತ್ತಿರುವರೆಗೆ ಆಗಿರುವುದೆಲ್ಲವನ್ನೂ ಹೇಳಿದೆ. ಅಲ್ಲಿಂದ ಅಪ್ಪ ಅಮ್ಮನಿಗೆ ಸುದ್ದಿ ಹೋಯಿತು.  ಅಪ್ಪ, `ನಿನ್ನ ಸೊಕ್ಕು, ಇಂಗ್ಲಂಡಿಗೆ ಹೋದೆ. ಅನುಭವಿಸು,` ಎಂದರು. ಅಮ್ಮ, `ಹೇಳಿದೆ, ಬೇರೆ ಜಾತಿ ಹುಡುಗಿಯ ಜೊತೆ ಲವ್ ಮ್ಯಾರೇಜ್ ಆಗಬೇಡಾ ಎಂದು, ನೀನು ಕೇಳಲಿಲ್ಲ. ಇರಲಿ. ಆಗಿದ್ದು ಆಗಿಹೋಯಿತು. ಅಲ್ಲಿದ್ದು ಇನ್ನೇನು ಮಾಡ್ತೀಯಾ, ಇಲ್ಲಿಗೇ ಬಂದು ಬಿಡು,` ಅಂದಳು. ತಮ್ಮ, `ಹೇಗಿದ್ದಾಳೋ ನಿನ್ನ ಮಿಸ್ಟ್ರೆಸ್ಸು? ಇನ್ನೂ ನಡಿತಾ ಇದೆಯಾ ಅಥವಾ ಬ್ರೇಕ್ ಆಯ್ತಾ?` ಎಂದ.

ಮನೆ ಮಾರಿದೆವು. ದುಡ್ಡನ್ನು ಲಾಯರ್ ಹೇಳಿದಂತೆ ಪಾಲು ಮಾಡಿಕೊಂಡೆವು. ರಜೆಗೆ ಬಂದಾಗ ಅಪ್ಪ ಅಪ್ಪ ಇಬ್ಬರನ್ನೂ ಭೇಟಿಯಾಗುತ್ತೇನೆ ಎಂದು ಮಗಳು ಭರವಸೆ ಕೊಟ್ಟು ಯುನಿವರ್ಸಿಟಿಗೆಂದು ಊರು ಬಿಟ್ಟು ಹೋದಳು.

ಅಧಿಕೃತವಾಗಿ ಡೈವೋರ್ಸ್ ಆಯಿತು.

ಡೈವೋರ್ಸ್ ಆಗಿ ಎರಡು ತಿಂಗಳಾಗಿತ್ತ ಬಂದಿದೆ.

ಹೀಗೊಂದು ಶುಕ್ರವಾರದ ಸಂಜೆ, ನಾನು ಶಾಂ ಇಂಡಿಯಾದ ಕ್ರಿಕೆಟ್ ಮ್ಯಾಚ್ ನೋಡುತ್ತ ಮಾತಾಡುತ್ತ ಕೂತಿದ್ದೆವು. ನಾನು ಸ್ಕಾಚ್ ಕುಡಿಯುತ್ತಿದ್ದೆ. ಶಾಂ ಆನ್-ಕಾಲ್ ಇದ್ದುದರಿಂದ ಜ್ಯೂಸ್ ಹಿಡಿದುಕೊಂಡು ಕೂತಿದ್ದ. ಮತ್ತೆ ಆಸ್ಪತ್ರೆಯ ಕರೆ ಬರುವವರೆಗೆ ಸ್ವಲ್ಪ ಕ್ರಿಕೆಟ್ಟು ಮತ್ತು ಹರಟೆ ಆಯಿತೆಂದು ತನ್ನ ಮನೆಗೆ ಹೋಗದೇ, ಆಸ್ಪತ್ರೆಯ ಹತ್ತಿರದಲ್ಲೀ ಇದ್ದ ನನ್ನ ಒಂದು ಬೆಡ್-ರೂಮಿನ ಬಾಡಿಗೆ ಮನೆಗೆ ಬಂದಿದ್ದ.

`ಟಂಗ್` ಎಂದು ನನ್ನ ಮೊಬೈಲಿನಲ್ಲಿ ನೋಟಿಫಿಕೇಷನ್ನು ಬಂತು. ನನ್ನ ಹೆಂಡತಿಯ ಇಮೇಲು! ಡೈವೋರ್ಸ್ ಆದ ಮೇಲೆ ನಾನು ಮತ್ತು ನನ್ನ ಹೆಂಡತಿಯ ಸಂಪರ್ಕ ಏನಿದ್ದರೂ ಬರೀ ಮೆಸೇಜುಗಳಲ್ಲಿ, ಆಗಾಗ ಫೋನಿನಲ್ಲಿ. ಮುಖ್ಯವಾಗಿ ಮಗಳ ಬಗ್ಗೆ, ಹಣಕಾಸಿನ ಬಗ್ಗೆ. ಈಗ ಮೊಟ್ಟಮೊದಲ ಬಾರಿಗೆ ಇಮೇಲು ಬಂದಿತ್ತು. ಶಾಂ ಪಕ್ಕದಲ್ಲೇ ಇದ್ದರೂ, ಕುತೂಹಲ ತಡೆಯಲಾರದೇ ಇಮೇಲನ್ನು ತೆರೆದೆ.  ಮೆಸೇಜು ಅಥವಾ ಕರೆ ಮಾಡುವುದನ್ನು ಬಿಟ್ಟು ನನ್ನ ಹೆಂಡತಿ ಇಮೇಲ್ ಯಾಕೆ ಮಾಡಿರಬಹುದು? ಇಮೇಲು ದೊಡ್ಡದಾಗಿತ್ತು, ಸುಮಾರು ಒಂದು ಪುಟವಾಗುವಷ್ಟು!

ಅದರ ಸಾರಾಂಶ ಹೀಗಿತ್ತು:

`ನಿನ್ನ ಅಫೇರ್ ಬಗ್ಗೆ ಗೊತ್ತಾದ ಮೇಲೆ ನನಗೆ ಎಲ್ಲ ಶೂನ್ಯ ಅನಿಸಲು ಶುರುವಾಯಿತು. ಎಷ್ಟೋ ಸಲ ಬದುಕಿ ಏನು ಪ್ರಯೋಜನ ಎಂದು ಕೂಡ ಯೋಚನೆ ಮಾಡುತ್ತಿದ್ದೆ. ಎಲ್ಲ ಬಿಟ್ಟು ಇಂಡಿಯಾಗೆ ಹೋಗಿಬಿಡಲಾ ಅನಿಸುತ್ತಿತ್ತು. ಆದರೆ ಜೋ ಸಲುವಾಗಿಯಾದರೂ ನಾನು ಬದುಕಬೇಕು, ಇಲ್ಲೇ ಇರಬೇಕು ಎಂದುಕೊಂಡೆ.  ರಾತ್ರಿ ಸರಿ ನಿದ್ದೆ ಬರುತ್ತಿರಲಿಲ್ಲ. ಕೆಲಸದಲ್ಲಿ ಇಂಟರೆಸ್ಟ್ ಬರುತ್ತಿರಲಿಲ್ಲ. ಎಷ್ಟೊಂದು ಸಲ ಕೆಲಸಕ್ಕೆ ಲೇಟಾಗಿ ಹೋಗುತ್ತಿದ್ದೆ, ಕೆಲಸ ನಿಧಾನವಾಯಿತು, ತಪ್ಪುಗಳು ಶುರುವಾದವು. ಸರಿಯಗಿ ಮೇಕಪ್ ಕೂಡ ಮಾಡುತ್ತಿರಲಿಲ್ಲ, ಯವುದೋ ಟಾಪಿಗೆ ಯಾವುದೋ ಸ್ಕರ್ಟ್ ಹಾಕುತ್ತಿದ್ದೆ. ಇದನ್ನೆಲ್ಲ ಗಮನಿಸಿದ ಮಾರ್ಕ್ ಎಲ್ಲ ಸರಿಯಾಗಿದೆಯೇ ಎಂದು ವಿಚಾರಿಸಿದ. ಅವನಿಗೆ ನಿನ್ನ ಅಫೇರ್ ಬಗ್ಗೆ ಹೇಳಿದೆ, ನಮ್ಮ ಜಗಳದ ಬಗ್ಗೆ ಹೇಳಿದೆ. ಜಗಳ ಡೈವೋರ್ಸಿನವರೆಗೂ ಹೋಗಿರುವುದರ ಬಗ್ಗೆ ಹೇಳಿದೆ.

ಅವನ ಡೈವೋರ್ಸ್ ಆಗಿ ಹತ್ತಿರ ಒಂದು ವರ್ಷವಾಗಿದೆ, ನಿನಗೂ ಗೊತ್ತಲ್ಲ. ನಮ್ಮ ಡೈವೋರ್ಸಿಗೂ ಅವನೇ ಅಲ್ಲವೇ ಸಹಾಯ ಮಾಡಿದ್ದು. ಅವನ ಅನುಭವ ದೊಡ್ಡದು. ಅವನಲ್ಲಿ ನನಗೆ ಸ್ವಲ್ಪ ಹಿತ ಅನಿಸಿತು. ಮತ್ತೆ ಬದುಕುವ ಆಸೆ ಮೂಡಿತು. ನಿಂಗೇ ಗೊತ್ತಲ್ಲ. ಒಂದರಿಂದ ಇನ್ನೊಂದೇನೋ ಆಯಿತು, ಅದು ಇನ್ನೆಲ್ಲಿಗೋ ಕರೆದುಕೊಂಡು ಹೋಯಿತು. ಈಗ ನಾವಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದೇವೆ. ಮುಂದಿನ ತಿಂಗಳು ನಮ್ಮ ಮದುವೆ. ಜೋಗೆ ಆಗಲೇ ಹೇಳಿದ್ದೇನೆ. ಸಾಧ್ಯವಾದರೆ ಮದುವೆಗೆ ಬಾ! ವಿವರಗಳನ್ನು ಆಮೇಲೆ ಹೇಳುತ್ತೇನೆ. ನನಗಿದನ್ನೆಲ್ಲ ಫೋನಿನಲ್ಲಿ ಮಾತಾಡುವುದು ಇಷ್ಟವಿಲ್ಲ. ಮುಂದಿನ ಸಲ ಫೋನು ಮಾಡಿದಾಗ ದಯವಿಟ್ಟು ಈ ವಿಷಯದ ಬಗ್ಗೆ ಮಾತಾಡಬೇಡ, ಕೆದಕಬೇಡ.`

ಟಿವಿಯ ಕ್ರಿಕೆಟ್ಟಿನಲ್ಲಿ ವಿಕೆಟ್ ಬಿತ್ತು, ಶಾಂ ಚಪ್ಪಾಳೆ ತಟ್ಟಿ ಕಿರುಚಿದ. ನಾನು ಆ ವಿಕೆಟ್ಟಿಗೆ ಯಾವದೇ ಪ್ರತಿಕ್ರಿಯೆ ಕೊಡದಿರುವುದನ್ನು ಗಮನಿಸಿ, ನನ್ನ ಕಡೆ ತಿರುಗಿ, ನನ್ನ ಮುಖ ನೋಡಿ, ‘Is everything alright (ಎಲ್ಲ ಸರಿಯಾಗಿದೆಯೇ)?’ ಎಂದ.

ಇನ್ನೂ ಇಷ್ಟರವರೆಗೆ ಆಗಿರುವುದನ್ನು ತಡೆದುಕೊಳ್ಳಲು ಹೆಣಗಾಡುತ್ತಿರುವಾಗ, ಇನ್ನೊಂದು ಶಾಕ್! ನಾನು ಗರಬಡಿದವನಂತಾಗಿ ಹೋದೆ. ಸ್ವಲ್ಪ ಸಾವರಿಸಿಕೊಂಡು, ನಾನು ನನ್ನ ಹೆಂಡತಿ ಬರೆದ ಇಮೇಲಿನ ವಿಷಯವನ್ನು ಸಂಕ್ಷಿಪ್ತವಾಗಿ ಶಾಂಗೆ ಹೇಳಿದೆ.

ಶಾಂ, `ನಿಜಾನಾ! ಅದೂ ಅವಳ ಕೊಲೀಗ್ ಮಾರ್ಕ್ ಜೊತೆ!!` ಎಂದು ಹೌಹಾರಿದ.

ನಾನು, `ನಿಂಗೇ ಗೊತ್ತಲ್ಲ, ಮಾರ್ಕ್, ಅವಳಿಗಷ್ಟೇ ಅಲ್ಲ, ನನಗೂ ಫ್ರೆಂಡೇ (ಬೋ..ಮಗ, ಎದುರಿಗೆ ಸಿಕ್ಕರೆ ಚಪ್ಪಲಿಯಿಂದ ಹೊಡೀಬೇಕು, ಕ್ಯಾಕರಿಸಿ ಉಗೀಬೇಕು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ). ಅವನ ಪರಿಚಯ ಆಗಿ ಈಗ ಮರ್ನಾಕು ವರ್ಷ ಆಗಿರಬೇಕು. ಅವನದು ಹೋದ ವರ್ಷ ಡೈವೋರ್ಸ್ ಆಯ್ತು, ಇವಳದು ಈ ವರ್ಷ, ಡೈವೋರ್ಸಿಗೂ ಹೆಲ್ಪ್ ಮಾಡಿದ್ದಾನೆ, ಇಬ್ರೂ ಸಮಾನ ದುಃಖಿಗಳು. ಅದಕ್ಕೇ ಇದೆಲ್ಲ ಇಷ್ಟು ಬೇಗ ನಡೆದುಹೋಗಿದೆ ಅನಿಸುತ್ತೆ,` ಎಂದೆ.

ಶಾಂ ಇಲ್ಲ ಇಲ್ಲ ಎನ್ನುವಂತೆ ತಲೆಯಾಡಿಸುತ್ತ, `ಮಾರ್ಕ್ ಹೇಳೀ ಕೇಳೀ ಇಲ್ಲಿ ಹುಟ್ಟಿ ಬೆಳೆದವ, ಅದೂ ಹಾಫ್-ಇಂಡಿಯನ್. ಅವನ ಮತ್ತು ಭಾಬಿಯ ನಡುವೆ ಲವ್ವೇ ಆಗಿರಲಿ, ಇಷ್ಟು ಬೇಗ ಅವನು ಮದುವೆಗೆ ಹೇಗೋ ಒಪ್ಪಿಕೋತಾನೆ? ಮೊದಲು ಲಿವಿನ್ ರಿಲೇಷನ್ ಮಾಡಿ, ನಾಕಾರು ವರ್ಷ ಒಟ್ಟಿಗೆ ಇದ್ದು, ಒಬ್ಬರಿಗೊಬ್ಬರು ಹೊಂದಾಣಿಕೆ ಆಗುತ್ತೋ ಇಲ್ಲವೋ ನೋಡಿಕೊಂಡ ಮೇಲೆ ತಾನೆ ಇಲ್ಲಿಯವರು ಮದುವೆಯಾಗೋದು? ಅದೂ ಅವನ ಡೈವೋರ್ಸ್ ಆಗಿ ಒಂದು ವರ್ಷವಷ್ಟೇ ಆಯಿತು ಅಂತೀಯಾ, ಅವನು ಇಷ್ಟು ಬೇಗ ಇನ್ನೊಂದು ಮದುವೆಗೆ ರೆಡಿ ಇರ್ತಾನಾ? ಯಾಕೋ ಎಲ್ಲಾ ವಿಚಿತ್ರವಾಗಿದೆಯಪ್ಪಾ!` ಎಂದು ಸಂಶಯದ ಹುಳವನ್ನು ಹರಿಬಿಟ್ಟ.

ಅಷ್ಟರಲ್ಲಿ ಅವನಿಗೆ ಆಸ್ಪತ್ರೆಯಿಂದ ಕರೆ ಬಂತು. ಮ್ಯಾಚನ್ನು ನನ್ನನ್ನು ಅರ್ಧಕ್ಕೆ ಬಿಟ್ಟು ಹೊರಟ, `ತುಂಬಾ ತಲೆ ಕೆಡಿಸಿಕೊಳ್ಳಬೇಡ. ಆಗಿದ್ದು ಆಗಿಹೋಯಿತು. ನಾಳೆ ಕನ್ನಡ ಬಳಗದ ಪ್ರೋಗ್ರಾಂಗೆ ನೀನು ಹೋಗ್ತಾಯಿದ್ದೀ ತಾನೆ? ವೀಕೆಂಡ್ ಆನ್-ಕಾಲ್ ಇಲ್ಲದಿದ್ದರೆ ನಾನೂ ಬರ್ತಿದ್ದೆ. ಆಗಲೇ ಮಧ್ಯರಾತ್ರಿಯಾಗ್ತಾ ಬಂತು. ಬೇಗ ಮಲಕ್ಕೋ. ನಾನು ನಾಳೆ ಫೋನ್ ಮಾಡುತ್ತೇನೆ. ತುಂಬಾ ವರಿ ಮಾಡಬೇಡ. ನಾಳೆ ಎಲ್ಲ ಮಾತಾಡೋಣ. ಗುಡ್ ನೈಟ್.`

ಅವನು ಹೋಗುತ್ತಿದ್ದಂತೆ, ಟಿವಿ ಆಫ್ ಮಾಡಿ, ಕಂಪ್ಯೂಟರ್ ಆನ್ ಮಾಡಿ, ಇನ್ನೆರೆಡು ಕ್ವಾರ್ಟರ್ ಸ್ಕಾಚ್ ಹಿಡಿದುಕೊಂಡು ಬಂದು, ಕಂಪ್ಯೂಟರಿನಲ್ಲಿ ಫೋನ್ ಬಿಲ್ಲಿನ ಫೈಲುಗಳನ್ನು ತೆರೆಯುತ್ತ ಹೋದೆ. ನನ್ನ ಹೆಂಡತಿಯ ಕಳೆದ ಎರಡು ಮೂರು ವರ್ಷದ ಮೊಬೈಲ್ ಕರೆ ಮತ್ತು ಮೆಸೇಜ್ ಇರುವ ಪುಟಗಳನ್ನು ನೋಡುತ್ತ ಹೋದೆ.

ಹೆಚ್ಚುಕಮ್ಮಿ ಎರಡು ವರ್ಷದಿಂದ ಪ್ರತಿದಿನ ನನ್ನ ಹೆಂಡತಿ ಮಾರ್ಕ್-ಗೆ ಫೋನ್ ಮಾಡಿದ್ದಾಳೆ: ಕೆಲಸಕ್ಕೆ ಹೊರಡುವ ಮೊದಲು, ಕೆಲಸ ಮುಗಿಸಿ ಮನೆಗೆ ಬಂದ ಮೇಲೆ, ರಾತ್ರಿ ಮಲಗುವ ಸಮಯದಲ್ಲಿ, ವೀಕೆಂಡುಗಳಲ್ಲಿ! ತಿಂಗಳಿಗೆ ಐನೂರರಿಂದ ಸಾವಿರ ಮೆಸೇಜು ಕಳಿಸಿದ್ದಾಳೆ! ನನಗೆ ಒಂದೇ ಒಂದು ಸಲ ಸುಳಿವು ಸಿಕ್ಕಿಲ್ಲ! ನಾನು ಒಂದೇ ಒಂದು ದಿನ ಅವಳ ಮೊಬೈಲನ್ನು ಅವಳ ಮೊಬೈಲ್ ಬಿಲ್ಲುಗಳನ್ನು ಚೆಕ್ ಮಾಡಿಲ್ಲ!

ಶಾಂನ ಸಂದೇಹ ನಿಜ ಹಾಗಾದರೆ! ಇಮೇಲಿನಲ್ಲಿ ಅವಳು ಬರೆದಿರುವಂತೆ ಅವಳ ಮತ್ತು ಮಾರ್ಕ್ ಸಂಬಂಧ ಶುರುವಾದದ್ದು ಆ ರಾಂಗ್ ನಂಬರ್ `ಬಂದ ಮೇಲೆ` ಅಲ್ಲವೇ ಅಲ್ಲ! ಅವಳ ಅಫೇರ್ ಶುರುವಾಗಿ ಈಗಾಗಲೇ ಎರಡು ವರ್ಷದ ಮೇಲಾಗಿದೆ. ಬಹುಷಃ ಅದೇ ಕಾರಣಕ್ಕೆ ಮಾರ್ಕ್ ಕಳೆದ ವರ್ಷ ಡೈವೋರ್ಸ್ ಕೊಟ್ಟಿದ್ದಾನೆ, ಅಥವಾ ಅವನ ಹೆಂಡತಿಗೆ ಅವನ ಅಫೇರ್ ಬಗ್ಗೆ ಗೊತ್ತಾಗಿ ಡೈವೋರ್ಸ್ ಕೊಟ್ಟಿದ್ದಾಳೆ (ಬಹುಷಃ ಮಾರ್ಕ್ ತನ್ನ ಹೆಂಡತಿಗೆ ಯಾರ ಜೊತೆ ಅಫೇರ್ ಇತ್ತು ಎನ್ನುವುದನ್ನು ಬಚ್ಚಿಟ್ಟಿದ್ದಾನೆ ಅನಿಸುತ್ತೆ, ಇಲ್ಲದಿದ್ದರೆ ಮರ್ಕ್-ನ ಹೆಂಡತಿ ನನಗೆ ಹೇಳದೇ ಇರುತ್ತಿರಲಿಲ್ಲ). ನನ್ನ ಹೆಂಡತಿ ನನಗೆ ಡೈವೋರ್ಸ್ ಕೊಟ್ಟು, ಡೈವೋರ್ಸ್ ಕೊಟ್ಟಾದ ಮೇಲೆಯಷ್ಟೇ ಮಾರ್ಕ್ ಮೇಲೆ ಪ್ರೇಮವಾಗಿರುವ ಹಾಗೆ ಇಮೇಲ್ ಮಾಡಿ, ಈಗ ಇಬ್ಬರೂ ಮದುವೆಗೆ ಅಣಿಯಾಗುತ್ತಿದ್ದಾರೆ! ನಾನೆಂಥಾ ಮೋಸಹೋದೆ!!

ಹಾಗಾದರೆ ನನಗೆ ಅವತ್ತು ಬಂದಿದ್ದು ರಾಂಗ್ ನಂಬರ್ ಅಲ್ಲವೇ ಅಲ್ಲ! ಯಾರೋ ತನ್ನ ಕನ್ನಡದ ಫ್ರೆಂಡಿಗೆ ಹೇಳಿಸಿ ನನ್ನ ಮೊಬೈಲಿಗೆ ರಾತ್ರಿ ಹೊತ್ತು ತಾನು ಪಕ್ಕದಲ್ಲಿ ಮಲಗಿರುವಾಗ ಫೋನು ಮಾಡಿಸಿದ್ದಾಳೆ. ಮಗಳು, ಅಪ್ಪ-ಅಮ್ಮ, ಅತ್ತೆ-ಮಾವ, ಅವಳ ಅಣ್ಣ, ನನ್ನ ತಮ್ಮ, ಇಲ್ಲಿರುವ ಎಲ್ಲ ಫ್ರೆಂಡ್ ಸರ್ಕಲ್ ಮುಂದೆ ನನ್ನ ಹೆಸರು ಹಾಳುಮಾಡಲು ಇಲ್ಲದ ಅಫೇರನ್ನು ಸೃಷ್ಟಿಸಿದ್ದಾಳೆ! ಡೈವೋರ್ಸು ತೆಗೆದುಕೊಂಡಿದ್ದಾಳೆ! ಡೈವೋರ್ಸ್ ತೆಗೆದುಕೊಂಡಾದ ಮೇಲೆಯಷ್ಟೇ ಮಾರ್ಕ್ ಜೊತೆ ತನ್ನ ಸಂಬಂಧ ಶುರುವಾಗಿದೆ ಎಂದು ಈಗ ನನಗೆ ಬರೆದಿದ್ದಾಳೆ, ಹಾಗಂತೆ ಇನ್ನು ಎಲ್ಲರಿಗೂ ಕತೆ ಕಟ್ಟಿ ಹೇಳುತ್ತಾಳೆ! ಹೀಗಾಗಿ ಅವಳು ಇಂಡಿಯಾದಲ್ಲಿ ಇಂಗ್ಲಂಡಿನಲ್ಲಿ ಒಳ್ಳೆಯವಳಾಗೇ ಕಾಣುತ್ತಾಳೆ; ನಾನು ಮಾತ್ರ, ಬೆಳೆದು ನಿಂತ ಮಗಳಿದ್ದೂ, ಅಫೇರ್ ಇಟ್ಟುಕೊಂಡ, ನೈತಿಕತೆಯಿಲ್ಲದ, ಮೂರೂ ಬಿಟ್ಟ, ಕೆಟ್ಟುಹೋದ, ಲಂಪಟ ನಡುವಯಸ್ಕ! ಅಫೇರ್ ಇಟ್ಟುಕೊಂಡಿದ್ದು ಅವಳು, ಹೆಸರು ಕೆಡಿಸಿಕೊಂಡಿದ್ದು ನಾನು. ಯಾವ ಕರ್ಮಕ್ಕೆ ನನಗೀ ಶಿಕ್ಷೆ ಕೊಡುತ್ತಿದ್ದಾಳೆ?

ಕ್ರಿಕೆಟ್ ನೋಡುವಾಗಿನಿಂದ ಇಲ್ಲಿಯವರೆಗೆ ಕುಡಿದಿದ್ದು ಮತ್ತು ನನ್ನ ಈ ಹೊಸ ಅವಿಷ್ಕಾರ ಎರಡೂ ಸೇರಿ ಕೋಪದಲ್ಲಿ ಕುದಿಯತೊಡಗಿದೆ. ಮಧ್ಯರಾತ್ರಿಯೆಂದು ಲೆಕ್ಕಿಸದೇ ಫೋನನ್ನು ಎತ್ತಿಕೊಂಡೆ. ಅವಳಿಗೆ ಮನಸ್ಪೂರ್ತಿ ಬಯ್ಯಲೇಬೇಕು. ನಾನು ಫೋನು ಮಾಡಿದ್ದು ಗೊತ್ತಾದರೆ ಅವಳು ಈ ಅಪರಾತ್ರಿಯಲ್ಲಿ ಫೋನು ಎತ್ತದಿರಬಹುದೆಂದು, ಕಾಲರ್ ಐಡಿಯನ್ನು ಬ್ಲಾಕ್ ಮಾಡಿ, ನನ್ನ ಹೆಂಡತಿಗೆ ಮೊಬೈಲಿಗೆ ಫೋನಿಸಿದೆ.

ಫೋನನ್ನು ಆ ಕಡೆಯಿಂದ ಎತ್ತಿಕೊಳ್ಳುತ್ತಿದ್ದಂತೆಯೇ, `ನನಗೆ ನಿನ್ನ ನಿಜವೆಲ್ಲ ಗೊತ್ತಾಗಿದೆ. ನಿನಗೂ ಅವನಿಗೂ ನಮ್ಮ ಡೈವೋರ್ಸ್ ಆಗುವ ಮೊದಲಿನಿಂದಲೂ ಸಂಬಂಧವಿತ್ತು ಅಂತನೂ ಗೊತ್ತಾಗಿದೆ. ನಿಜ ಹೇಳು, ಅವತ್ತು ರಾತ್ರಿ ನಿನ್ನ ಯಾರೋ  ಫ್ರೆಂಡಿಂದ ಫೋನ್ ಮಾಡಿಸಿದ್ದಲ್ವೇ? ಯಾರತ್ರ ಈ ಫೋನು ಮಾಡಿಸಿದೆ? ಯಾಕೆ ನನಗೆ ಹೀಗೆ ಮಾಡಿದೆ? …` ಎಂದು ಹೇಳಿ ಕನ್ನಡದಲ್ಲಿ ನನಗೆ ಗೊತ್ತಿರುವ ಎಲ್ಲ ಕೆಟ್ಟ ಶಬ್ದಗಳನ್ನು ಬಳಸಿ ಎಗ್ಗಿಲ್ಲದೇ ಉಗಿಯತೊಡಗಿದೆ.

`Sorry, who’s it (ಕ್ಷಮಿಸಿ, ಯಾರಿದು)?,’ ಎಂದು ಅತ್ತ ಕಡೆಯಿಂದ ಅಚ್ಚ ಇಂಗ್ಲೀಷ್ ಎಕ್ಸೆಂಟಿನಲ್ಲಿ ಗಂಡು ಧ್ವನಿಯೊಂದು ಕೇಳಿ ಬಂತು. ಅದು ಮಾರ್ಕ್-ನ ಧ್ವನಿ ಎಂದು ಆ ಎರಡೇ ಶಬ್ದಗಳಲ್ಲಿ ಗೊತ್ತಾಗಿ ಹೋಯಿತು.

ಮಧ್ಯರಾತ್ರಿಯಲ್ಲಿ ನನ್ನ ಹೆಂಡತಿ ಮತ್ತು ಮಾರ್ಕ್ ಒಟ್ಟಿಗೇ ಇದ್ದಾರೆ ಎನ್ನುವ ಕಲ್ಪನೆಯೇ ನನಗೆ ಹೊಟ್ಟೆ ತೊಳಿಸಿದಂತಾಯಿತು. ಮಾರ್ಕ್ ಅವಳ ಮನೆಯಲ್ಲಿದ್ದಾನೆ ಅಥವಾ ಅವಳು ಅವನ ಮನೆಯಲ್ಲಿದ್ದಾಳೆ. ನನ್ನ ಹೆಂಡತಿ ಬಾತ್-ರೂಮಿಗೆ (ಕಾಮಕೇಳಿ ಮುಗಿದ ಮೇಲೆ) ಹೋಗಿರಬಹುದು ಅನಿಸುತ್ತೆ, ಮೊಬೈಲ್ ಬೆಡ್ ಪಕ್ಕದಲ್ಲೇ ಇಟ್ಟಿದ್ದಾಳೆ, ಮಾರ್ಕ್ ಬೆಡ್-ರೂಮಿನಲ್ಲೇ ಇದ್ದಾನೆ, ಫೋನು ರಿಂಗಾಗುತ್ತಿದ್ದಂತೇ ಎತ್ತಿಕೊಂಡಿದ್ದಾನೆ!

ಮಾರ್ಕ್-ನ ಧ್ವನಿ ಕೇಳುತ್ತಿದ್ದಂತೆ, ಅವರಿಬ್ಬರೂ ಈ ಅಪರಾತ್ರಿಯಲ್ಲಿ ಒಂದೇ ಮನೆಯಲ್ಲಿ ಇರುವುದು ಅರಿವಾಗುತ್ತಿದ್ದಂತೆ, ನನ್ನ ಕೋಪವೆಲ್ಲ ಇಳಿದು ತಲೆಸುತ್ತು ಬಂತು. ನಾನು ಪ್ರಾಣಾಂತಕ ಪೆಟ್ಟುತಿಂದು ನೆಲಕ್ಕೆ ಬಿದ್ದ ಸೈನಿಕನಂತೆ, ಮಾರ್ಕ್ ಮತ್ತು ನನ್ನ ಹೆಂಡತಿ ಯುದ್ಧ ಗೆದ್ದ ಅಟ್ಟಹಾಸದಲ್ಲಿ ಬಂದೂಕಿನ ನಳಿಕೆಯನ್ನು ನನ್ನ ಎದೆಗೆ ನೆಟ್ಟಂತೆ ಭಾಸವಾಯಿತು,

`ಸಾರಿ, ರಾಂಗ್ ನಂಬರ್,` ಎಂದು ಫೋನನ್ನು ಡಿಸ್-ಕನೆಕ್ಟ್ ಮಾಡಿ, ವಾಂತಿ ಬಂತಂತಾಗಿ, ಸಿಂಕಿನಲ್ಲಿ ತಲೆ ತಗ್ಗಿಸಿ ನಿಂತೆ.

ನಾನು ಇದುವರೆಗೆ ಆದ ವೃತ್ತಾಂತವನ್ನು, ಮಾರನೇ ದಿನವೇ, ಯು.ಕೆ ಕನ್ನಡ ಬಳಗದ ಕಾರ್ಯಕ್ರಮದಲ್ಲಿ, ಮಾಲಿನಿಯವರಿಗೆ, ಅದೂ ಮೊಟ್ಟಮೊದಲ ಬಾರಿಗೆ ಭೇಟಿಯಾದಾಗಲೇ ಹೇಳುತ್ತೇನೆ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಅಷ್ಟಕ್ಕೂ ಈ ಮಾಲಿನಿ ಯಾರು ಅಂತ ನನಗೆ ಈ ಕನ್ನಡ ಬಳಗದ ಕಾರ್ಯಕ್ರಮಕ್ಕೆ ಬರುವ ಮೊದಲು ಗೊತ್ತೇ ಇರಲಿಲ್ಲ.

ಅಲ್ಲಿ ದೂರದ ಗೆಳೆಯರು, ಕನ್ನಡ ಬಳಗದಲ್ಲಿ ಮಾತ್ರ ಸಿಗುವ ಪರಿಚಿತರು `ಯಾಕೋ ನಿನ್ನ ಹೆಂಡತಿಯನ್ನು ಕರೆದುಕೊಂಡು ಬಂದಿಲ್ಲ,` ಎಂದು ವಿಚಾರಿಸಿದರು. ನನ್ನ ಪರಿಸ್ಥಿತಿ ಗೊತ್ತಿದ್ದ ಗೆಳೆಯರು ಅನುಕಂಪ ತೋರಿಸಿದರು, ಹುರಿದುಂಬಿಸಿದರು. ಬಂದಿದ್ದ ಪರಿಚಿತರಿಂದ ಗೆಳೆಯರಿಂದ ಮತ್ತೆ ಕೆಲವು ಹೊಸ ಮುಖಗಳ ಪರಿಚಯವಾಯಿತು. ಅಂಥ ಹೊಸಮುಖಗಳಲ್ಲಿ ಒಂದು ಮುಖ, ಈ ಮಾಲಿನಿ.

ಇಂಗ್ಲಂಡಿನ ಕನ್ನಡ ಬಳಗದ ಕಾರ್ಯಕ್ರಮ ಎಂದರೆ ಮದುವೆ ಮನೆ ಇದ್ದಂತೆ; ಬಹುತೇಕ ಎಲ್ಲ ಹೆಂಗಸರು ರೇಷ್ಮೆ ಸೀರೆಯನ್ನೋ, ಇನ್ನಾವುದೋ ನಾರ್ತ್ ಇಂಡಿಯನ್ ಪಾರ್ಟಿಡ್ರೆಸ್ಸನ್ನೋ ಹಾಕಿಕೊಂಡು, ಬಂಗಾರ-ವಜ್ರಗಳ ಥರಾವರಿ ಆಭರಣಗಳನ್ನು ಧರಿಸಿ, ಪಾರ್ಲರಿನಲ್ಲಿ ಮೇಕಪ್ ಮಾಡಿಸಿಕೊಂಡು ಬರುವವರೇ! ಆದರೆ ಈ ಮಾಲಿನಿ ಮಾತ್ರ ಜೀನ್ಸ್ ಪ್ಯಾಂಟು, ಶಾರ್ಟ್-ಕುರ್ತಾ ತೊಟ್ಟು, ಚೂರೇ ಚೂರು ಮೇಕಪ್ ಹಾಕಿಕೊಂಡಿದ್ದರು. ಆಸುಪಾಸು ನನ್ನಷ್ಟೇ ವಯಸ್ಸಿರಬಹುದು. ನೋಡಿದರೆ ಇನ್ನೊಮ್ಮೆ ನೋಡಬೇಕು ಅನಿಸುವಂಥ ಮುಖ ಮತ್ತು ಮೈಮಾಟ.

ತುಂಬಾ ದಿನಗಳಾದ ಮೇಲೆ ಸಿಕ್ಕ ಗೆಳೆಯನೊಬ್ಬ ನನ್ನನ್ನು ತೋರಿಸಿ, `ಇವರು ಉಮೇಶ್ ಅಂತ. ಸರ್ಜನ್, ತುಂಬಾ ಚೆನ್ನಾಗಿ ಸಿತಾರ್ ಕೂಡ ಬಾರಿಸ್ತಾರೆ. ಆಗಾಗ ಕನ್ನಡದಲ್ಲಿ ಕತೆ ಕವನಾನೂ ಬರೀತಾರೆ,` ಎಂದು ನನ್ನ ಪರಿಚಯನ್ನು ಮಾಲಿನಿಗೆ ಮಾಡಿಸಿ, `ಇವರು ಮಾಲಿನಿ ಅಂತ. ನಿಮ್ಮೂರಿನ ಯುನಿವರ್ಸಿಟಿನಲ್ಲೇ ಸೋಷಿಯಲ್ ಸೈಕಾಲಾಜಿಸ್ಟ್. ಇವರೂ ಅಷ್ಟೇ ಉಮೇಶಾ. ತುಂಬಾ ಚೆನ್ನಾಗಿ ಹಾಡ್ತಾರೆ, ಇಂಗ್ಲೀಷಿನಲ್ಲಿ ಬಹಳಷ್ಟು ಬರೆದಿದ್ದಾರೆ,` ಎಂದು ಮಾಲಿನಿಯ ಪರಿಚಯ ಮಾಡಿಕೊಟ್ಟ. ಮೂವರೂ ನಿಂತುಕೊಂಡು ಸಂಗೀತ, ಸಾಹಿತ್ಯ, ಕರ್ನಾಟಕ, ಇಂಗ್ಲಂಡು, ಕನ್ನಡ, ಇಂಗ್ಲೀಷು, ಜನರೇಷನ್ ಗ್ಯಾಪು, ಮೊಬೈಲ್ ಸಂಸ್ಕೃತಿ… ಅಂತೆಲ್ಲ ಒಂದೈದು ನಿಮಿಷ ಮಾತಾಡಿ ಬೀಳ್ಕೊಟ್ಟೆವು.

ಕರ್ನಾಟಕದಿಂದ ಬಂದಿದ್ದ ಸಾಹಿತಿಗಳ ಭಾಷಣ ಮುಗಿದು, ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು. ಚಿಕ್ಕ ಚಿಕ್ಕ ಮಕ್ಕಳು ಯಾವುದೋ ಗೊತ್ತಿರದ ಹೊಸ ಕನ್ನಡ ಸಿನೆಮಾ ಹಾಡಿಗೆ ಕುಣಿಯುತ್ತಿದ್ದವು. ಪಕ್ಕದಲ್ಲಿ ಕೂತಿದ್ದ ನನ್ನ ಗೆಳೆಯನ ಕೊನೆ ಮಗಳೂ ಕುಣಿಯುತ್ತಿದ್ದಳು. ಅವನು ಕ್ಯಾಮರಾ ಹಿಡಿದುಕೊಂಡು ಸ್ಟೇಜಿನ ಹತ್ತಿರ ಹೋದ. ನಾನು ಟೀ ಕುಡಿದು ಬರೋಣ ಎಂದು ಅಲ್ಲಿಂದ ಎದ್ದು ಟೀ ರೂಮಿಗೆ ಹೋದೆ. ಅಲ್ಲಿ ಮಾಲಿನಿ ಒಬ್ಬರೇ ಕೂತು ಟೀ ಕುಡಿಯುತ್ತಿದ್ದರು. ನಾನು ರೂಮಿಗೆ ಬಂದದ್ದನ್ನು ನೋಡಿ ಮುಗುಳ್ನಕ್ಕರು. ನಾನು ಟೀ ಮಾಡಿಕೊಂಡು, `ಕೂರಬಹುದಾ?` ಎಂದು, ಅವರು `ಹುಂ` ಎಂದು ತಲೆ ಅಲ್ಲಾಡಿಸಿದ ಮೇಲೆ, ಅವರ ಪಕ್ಕದ ಕುರ್ಚಿಯಲ್ಲಿ ಕೂತೆ.

ಅದೂ ಇದೂ ಮಾತಾಡುತ್ತಿರಬೇಕಾದರೆ, ವಿಷಯ ಅವರ ಕೆಲಸದತ್ತ ಹೋಯಿತು. ಸೋಷಿಯಲ್ ಸೈಕಾಲಾಜಿ ಅಂದರೆ ಸರ್ಜನ್ ಆದ ನನಗೆ ಏನೂ ಗೊತ್ತಿರಲಿಲ್ಲ. ಸ್ವಲ್ಪ ಹೊತ್ತು ಮಾತಾಡಿದಂತೆಯೂ ಆಯಿತು, ಸ್ವಲ್ಪ ಕಣ್ಣು ತಂಪಾದಂತೆಯೂ ಆಯಿತು ಅಂದುಕೊಂಡು ಅವರ ಕೆಲಸದ ವಿವರಗಳ ಬಗ್ಗೆ ಕುತೂಹಲ ತೋರಿಸಿದೆ. ಮಾಲಿನಿ ಉತ್ಸಾಹದಿಂದ ಸೋಷಿಯಲ್ ಸೈಕಾಲಾಜಿಯ ಬಗ್ಗೆ ಮಾತಾಡಿದರು. ಮನುಷ್ಯನ ಭಾವನೆಗಳು, ಚಿಂತನೆಗಳು, ನಡುವಳಿಕೆಗಳು ಹೇಗೆ ನೈಜ, ಊಹಿತ ಮತ್ತು ಇತರರ ಹಾಜರಿಗಳ ಸಮ್ಮಿಶ್ರಣದಲ್ಲಿ ರೂಪುಗೊಳ್ಳುತ್ತವೆ ಎಂದು ವಿವರಿಸಿದರು. ಹಳೆಯ ಮೌಲ್ಯಗಳ ಮಧ್ಯಮ ವರ್ಗದ ಭಾರತೀಯ ಸಮಾಜದಲ್ಲಿ ಓದಿ ಬೆಳೆದ ಜನ, ಮುಕ್ತ ಆಧುನಿಕ ಪಾಶ್ಚಾತ್ಯ ದೇಶಗಳಿಗೆ ಬಂದಾಗ, ಅದನ್ನು ಹೇಗೆ ಎದುರಿಸುತ್ತಾರೆ, ಅವರ ಸಂಸಾರಗಳ ಮೇಲೆ ಅದರ ಪರಿಣಾಮ ಏನಾಗುತ್ತದೆ, ಅವರ ಮಕ್ಕಳು ಅದಕ್ಕೆ ಹೇಗೆ ಪ್ರತಿಕ್ರಯಿಸಿ ಬೆಳೆಯುತ್ತಾರೆ ಎನ್ನುವುದರ ಬಗ್ಗೆ ರಿಸರ್ಚ್ ಮಾಡುತ್ತಿರುವುದನ್ನು ಹೇಳಿದರು. ಅವರ ಕೆಲಸದ ಮತ್ತು ರಿಸರ್ಚಿನ ವಿವರಗಳನ್ನು ಕೇಳುತ್ತ ಕೇಳುತ್ತ, ಇವರ ಸಲಹೆ ಕೇಳಿದರೆ ಈಗಿರುವ ನನ್ನ ಮನಸ್ಥಿತಿಗೆ ಸ್ವಲ್ಪವಾದರೂ ಸಮಾಧಾನ ಸಿಗಬಹುದು ಎಂದು ಅನಿಸಿತು.

`ಮಾಲಿನಿಯವ್ರೇ, ನಿಮ್ಗೆ ಟೈಮಿದ್ರೆ, ಬೇಜಾರಿಲ್ಲಾಂದ್ರೆ, can I ask your advice as a psychologist (ಮಾನಸಿಕ ತಜ್ಞರಾಗಿ ನಿಮ್ಮ ಹತ್ತಿರ ಸಲಹೆ ಕೇಳಬಹುದಾ)? ನಿಮ್ಮ ರಿಸರ್ಚಿಗೂ ಉಪಯೋಗವಾಗಬಹುದು,’ ಎಂದೆ.

`ನನ್ನ ಫೀಸು ತುಂಬಾ ದುಬಾರಿ!` ಎಂದು ನಕ್ಕು, `ಹೇಳಿ` ಎಂದು ನನ್ನ ಕತೆ ಕೇಳಲು ಸಜ್ಜಾದರು.

ಹೀಗೆ ನಾನು ಮಾಲಿನಿಯವರನ್ನು ಮೊಟ್ಟಮೊದಲ ಬಾರಿ ಭೇಟಿಯಾದಾಗಲೇ ಇದುವರೆಗೆ ನಡೆದದ್ದೆಲ್ಲವನ್ನೂ ಹಸಿಹಸಿಯಾಗಿ ಭಾವುಕನಾಗಿ ಹೇಳಿದ್ದು.

ಮಾಲಿನಿ ನನ್ನ ಕತೆ ಕೇಳಿ ಗಂಭೀರರಾದರು, `ರಾಂಗ್ ನಂಬರ್ ಬರುವುದಕ್ಕಿಂತ ಮೊದಲೇ ನಿಮ್ಮ ಹೆಂಡತಿಗೆ ಅವಳ ಕೊಲೀಗ್ ಜೊತೆ ಸಂಬಂಧ ಇರುವುದು ನಿಜವಿರಬಹುದೇನೋ. ಆದರೆ ನಿಮ್ಮ ಹೆಂಡತಿ ಅವರ ಗೆಳತಿಗೆ ಹೇಳಿಸಿ ನಿಮ್ಮ ಮೊಬೈಲಿಗೆ ಫೋನು ಮಾಡಿಸಿದ್ದು ಮಾತ್ರ ಯಾಕೋ ಅತಿಯಾದ ಇಮ್ಯಾಜಿನೇಷನ್ ಅನಿಸುತ್ತೆ`, ಎಂದರು.

`ಅದೇಕೆ ಹಾಗೆ ಹೇಳ್ತೀರಿ?` ಎಂದು ಕೇಳಿದೆ.

`ಏಕೆಂದರೆ…` ಎಂದು ತಡೆದು, ಚಕ್ಕನೇ ನನ್ನ ಕೈ ಹಿಡಿದುಕೊಂಡು, `I am so sorry. Please forgive me (ನನ್ನದು ತಪ್ಪಾಯಿತು, ದಯವಿಟ್ಟು ಕ್ಷಮಿಸಿಬಿಡಿ), ಅವತ್ತು ಫೋನ್ ಮಾಡಿದ್ದು ನಾನು,’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು.

ನಾನು ಅವರ ಕೈಹಿಡಿದುಕೊಂಡು ಹಾಗೇ ಕೂತುಬಿಟ್ಟೆ! ಅವತ್ತು ರಾತ್ರಿ ಫೋನು ಮಾಡಿಸಿದ್ದು ನನ್ನ ಹೆಂಡತಿಯಲ್ಲ, ಅದು ನಿಜವಾಗಿತೂ ರಾಂಗ್ ನಂಬರೇ! ಇಷ್ಟರವರೆಗೆ ಸೈಕಾಲಾಜಿಸ್ಟ್ ಆಗಿ ನನ್ನ ಕತೆ ಕೇಳಿಸಿಕೊಂಡ, ನನ್ನ ಎದುರಿಗೆ ಕೂತ ಈ ಹೆಂಗಸು, ನನಗೆ ಫೋನು ಮಾಡಿದ್ದು!! ನನಗೆ ನಂಬಿಕೆಯೇ ಬರುತ್ತಿರಲಿಲ್ಲ. ಒಂದರ ಮೇಲೆ ಇನ್ನೊಂದು, ಮುಗದೊಂದು ಶಾಕ್ ಬೀಳುತ್ತಿರುವ ನನ್ನ ಸ್ಥಿತಿಯಲ್ಲಿ, ನನಗೆ ನಗಬೇಕೋ, ಅಳಬೇಕೋ, ಕೋಪಿಸಿಕೊಳ್ಳಬೇಕೋ ಒಂದೂ ಗೊತ್ತಾಗಲಿಲ್ಲ.

ಮಾಲಿನಿಯೇ ಸುಧಾರಿಸಿಕೊಂಡು, ಕೈ ಬಿಡಿಸಿಕೊಂಡು ಹಾಗೇಕೆ ಮಾಡಿದೆನೆಂದು  ಹೇಳತೊಡಗಿದರು.

ಅದರ ಒಟ್ಟು ಸಾರ ಇಷ್ಟು:

`ನಾನು ಇಂಗ್ಲಂಡಿಗೆ ಬಂದು ನಾಕು ವರ್ಷ ಆಯಿತು. ಮೊಟ್ಟಮೊದಲು ಇಂಗ್ಲಂಡಿಗೆ ಬರುವ ಸಮಯದಲ್ಲಿ ನನ್ನ ಅಣ್ಣನ ಗೆಳೆಯರೊಬ್ಬರು ನಿಮ್ಮ ಹೆಸರು ಮತ್ತು ನಂಬರನ್ನು ನನಗೆ ಕೊಟ್ಟಿದ್ದರು, ಏನಾದರೂ ಸಹಾಯಕ್ಕೆ ಬೇಕಿದ್ದರೆ ಇರಲಿ ಎಂದು. ಆದರೆ ಸಹಾಯ ಕೇಳುವ ಪ್ರಸಂಗವೇ ಬರಲಿಲ್ಲ.

ನೀವು ಇವತ್ತು ನಿಮ್ಮ ಕತೆ ಹೇಳುವವರೆಗೆ ನಿಮ್ಮ ನಂಬರ್ ಇನ್ನೂ ನನ್ನ ಮೊಬೈಲಿನಲ್ಲಿ ಇರಬಹುದು ಎನ್ನುವ ಕಲ್ಪನೆ ಕೂಡ ಇರಲಿಲ್ಲ.

ಇಷ್ಟೆಲ್ಲ ಅನಾಹುತ ಆಗಲು ಕಾರಣ, ನನ್ನ ಬಾಯ್-ಫ್ರೆಂಡ್ ಮತ್ತು ನಿಮ್ಮ ಹೆಸರು ಒಂದೇ, ಉಮೇಶ!

ಉಮೇಶ ಸೈಕಿಯಾಟ್ರಿ ಕನ್ಸಲ್ಟಂಟ್. ನಾನು ಕೆಲಸ ಮಾಡುವ ಯುನಿವರ್ಸಿಟಿಯ ಡಿಪಾರ್ಟುಮೆಂಟಿಗೆ ಆಗಾಗ ರಿಸರ್ಚ್ ವಿಷಯದ ಸಲುವಾಗಿ ಬಂದು ಹೋಗುತ್ತಿದ್ದ. ಪರಿಚಯವಾಯಿತು. ಇಬ್ಬರೂ ಕನ್ನಡದವರಲ್ವೇ? ಪರಿಚಯ ಗೆಳೆತನವಾಯಿತು. ನಾನೂ ಅದೇ ತಾನೇ ಇಂಗ್ಲಂಡಿಗೆ ಬಂದಿದ್ದೆನಲ್ಲ. ಅವನು ತನ್ನ ಬೆಂಝ್ ಕಾರಿನಲ್ಲಿ ಊರು ತೋರಿಸಿದ. ಇಟಾಲಿಯನ್, ಥಾಯ್, ಮೆಡಿಟರೇನಿಯನ್, ಲೆಬನೀಸ್ ಅಂತೆಲ್ಲ ಥರಾವರಿ ರೆಸ್ಟೋರಂಟುಗಳಲ್ಲಿ ಊಟ ಮಾಡಿಸಿದ. ಹಳೆಕಾಲದ ಪಬ್ಬುಗಳಿಗೆ ಕರೆದುಕೊಂಡು ಹೋದ. ವೀಕೆಂಡಿನಲ್ಲಿ ಶಾಪಿಂಗ್ ಕರೆದುಕೊಂಡು ಹೋದ, ಕಂಟ್ರಿ ಸೈಡ್ ತೋರಿಸಿದ, ನೈಟ್ ಕ್ಲಬ್ಬುಗಳಿಲ್ಲಿ ಕುಣಿಸಿದ. ಗೆಳೆತನ ಪ್ರೇಮವಾಗಿ ಹೋಗಿತ್ತು. ಅವನಿಗೆ ಮದುವೆಯಾಗಿರುವುದು, ಮಕ್ಕಳಿರುವುದು, ಯಾವುದೂ ನನಗೆ ಮುಖ್ಯ ಅನಿಸಲೇ ಇಲ್ಲ.

ಮೊದಮೊದಲು, ತನ್ನ ಹೆಂಡತಿಗೆ ಡೈವೋರ್ಸ್ ಮಾಡಿ ನನ್ನನ್ನು ಮದುವೆಯಾಗುತ್ತೇನೆ ಅನ್ನುತ್ತಿದ್ದ. ಆದರೆ ದಿನ ಹೋದಂತೆ ಮೋಹ, ಪ್ರೀತಿ ಕಡಿಮೆಯಾಗಲು ಶುರುವಾಯಿತು. ಪ್ರೀತಿಗಿಂತ ಜಗಳವೇ ಜಾಸ್ತಿಯಾಯಿತು. ನನಗಿಂತ ಅವನಿಗೆ ಅವನ ಸಂಸಾರ, ಮಕ್ಕಳು ಹೆಚ್ಚು ಮುಖ್ಯ ಅನ್ನುವುದನ್ನು ಮತ್ತೆ ಮತ್ತೆ ತೋರಿಸಲು ಶುರು ಮಾಡಿದ, ಅಥವಾ ಹಾಗಂತ ನನಗೆ ಅನ್ನಿಸಲು ಹತ್ತಿತು.

ಅವತ್ತೊಂದು ದಿನ ತುಂಬಾ ಜಗಳವಾಯಿತು. ಅವತ್ತೇ ನಿರ್ಧಾರ ಮಾಡಿಬಿಟ್ಟೆ, ಇವತ್ತೇ ಕಡೆ, ಇನ್ನೆಂದೂ ಅವನನ್ನು ನೋಡುವುದಿಲ್ಲ, ಮಾತಾಡಿಸುವುದಿಲ್ಲ ಎಂದು. ಅವನ ಬದುಕು ಅವನಿಗೆ, ನನ್ನ ಬದುಕು ನನಗೆ. ಅವತ್ತು ರಾತ್ರಿ, ನನ್ನ ಮೊಬೈಲಿನ `ಕಾಲರ್ ಐಡಿ`ಯನ್ನು ಬ್ಲಾಕ್ ಮಾಡಿ, ಫೋನ್ ಮಾಡಿದೆ, ಅತ್ತ ಕಡೆಯಿಂದ ನೀವು `ರಾಂಗ್ ನಂಬರ್` ಅಂದಿರಿ. ನನಗೆ ಇನ್ನೂ ಕೋಪ ಬಂತು. ಕನ್ನಡದಲ್ಲಿ ಮಾತಾಡಿ ಕೂಡ `ರಾಂಗ್ ನಂಬರ್` ಅಂದಿರಿ. ನನ್ನ ಕೋಪ ಇನ್ನೂ ಜಾಸ್ತಿಯಾಯಿತು. ನೀವು ಫೋನನ್ನ ಡಿಸ್-ಕನೆಕ್ಟ್ ಮಾಡಿದಿರಿ. ನಾನು ರಿ-ಡಯಲ್ ಮಾಡಿ ಮತ್ತೆ ರೇಗಾಡಿದೆ.

ನಿಮ್ಮ ಮತ್ತು ನನ್ನ ಬಾಯ್-ಫ್ರೆಂಡಿನ ಹೆಸರು ಒಂದೇ ಆಗಿರುವುದರಿಂದ, ಕುದಿಯುತ್ತಿದ್ದ ಕೋಪದಲ್ಲಿ, ಕಾಲರ್ ಐಡಿಯನ್ನು ಬ್ಲಾಕ್ ಮಾಡುವ ಭರದಲ್ಲಿ, ನಾನು ಅವನ ಬದಲು ನಿಮ್ಮ ಹೆಸರನ್ನು ನನ್ನ ಮೊಬೈಲಿನಲ್ಲಿ ಒತ್ತಿದ್ದೇನೆ. ಆದರೆ ನೀವು ನಿಮ್ಮ ಕತೆಯನ್ನು ಇವತ್ತು ಹೇಳುವವರೆಗೂ ನಾನು ರಾಂಗ್ ನಂಬರ್ ಡಯಲ್ ಮಾಡಿರುವುದು ನನಗೇ ಗೊತ್ತೇ ಇರಲಿಲ್ಲ.

ಏಕೆಂದರೆ, ನಾನು ಫೋನಿನಲ್ಲಿ ಮಾತಾಡಿದ ಮಾರನೇ ದಿನ ಅವನ ಫೋನ್ ಬಂತು. ಆದರೆ ನಾನು ನಿರ್ಧರಿಸಿಯಾಗಿತ್ತು. ಅವನು ಫೋನು ಮಾಡಿ ಸಬೂಬು ಹೇಳಿ ಮತ್ತೆ ನನ್ನನ್ನು ರಮಿಸಲು ಶುರು ಮಾಡುತ್ತಾನೆ ಎಂದು ಗೊತ್ತಿತ್ತು. ನಾನು ಫೋನ್ ಎತ್ತಲಿಲ್ಲ, ಮತ್ತೆ ಮತ್ತೆ ಫೋನ್ ಮಾಡಿದ, ಮೆಸೇಜುಗಳ ಮೇಲೆ ಮೆಸೇಜು ಮಾಡಿದ, ಯಾವುದಕ್ಕೂ ಉತ್ತರಿಸಲಿಲ್ಲ. ನಾಕಾರು ದಿನ ಆದ ಮೇಲೆ ಅವನ ಕರೆಗಳು ಮೆಸೇಜುಗಳು ಕಡಿಮೆಯಾಗಿ ಹದಿನೈದು ದಿನಗಳಾಗುವಷ್ಟರಲ್ಲಿ ಪೂರ್ತಿ ನಿಂತವು.

ನಾನು ಅವತ್ತು ಫೋನು ಮಾಡಿದ್ದು ಅವನಿಗಲ್ಲ, ನಿಮಗೆ ಅಂತ ಗೊತ್ತಾಗಿದ್ದರೆ, ನಿಮಗೆ ಆಗಲೇ ಫೋನ್ ಮಾಡಿ ಖಂಡಿತ ಸಾರಿ ಕೇಳುತ್ತಿದ್ದೆ, ನಿಮ್ಮ ಹೆಂಡತಿಗೂ ನಿಜ ಏನು ಅಂತ ಗೊತ್ತಾಗುತ್ತಿತ್ತು. ನಿಮ್ಮ ಸಂಸಾರವೂ ಉಳಿಯುತ್ತಿತ್ತು.

ಆದರೆ ನೀವು ಇವತ್ತು ಇದನ್ನು ಹೇಳುವವರೆಗೂ ನಾನು ಅವತ್ತು ಫೋನ್ ಮಾಡಿದ್ದು ಆ ಉಮೇಶನಿಗಲ್ಲ, ಈ ಉಮೇಶನಿಗೆ ಅನ್ನುವುದು ಗೊತ್ತೇ ಇರಲಿಲ್ಲ.`

ಅದಿಷ್ಟು ಕತೆ ಹೇಳಿ ಮಾಲಿನಿ, `I am really sorry (ನನ್ನಿಂದ ನಿಜವಾಗಿಯೂ ತಪ್ಪಗಿದೆ), ಸಾಧ್ಯವಾದರೆ ಕ್ಷಮಿಸಿಬಿಡಿ,` ಎಂದರು.

ನಾನು, `ನಿಮ್ಮ ರಾಂಗ್ ನಂಬರ್ ಬಂದಿದ್ದು ಒಳ್ಳೆಯದೇ ಆಯಿತು ಬಿಡಿ. ಇಲ್ಲಾಂದ್ರೆ ನನ್ನ ಹೆಂಡತಿ ಮತ್ತೆ ಮಾರ್ಕ್-ನ ಕಣ್ಣುಮುಚ್ಚಾಲೆ ಆಟ ಇನ್ನೂ ಎಷ್ಟು ವರ್ಷ ನನ್ನ ಹಿಂದೆ ನಡೆಯುವುದಿತ್ತೋ ಯಾರಿಗೆ ಗೊತ್ತು? ನಾನು ಮಾತ್ರ  ಪೂರ್ತಿ ನಾಶವಾಗಿ ಹೋಗುತ್ತಿದ್ದೆ. ನಿಜ ಹೇಳಬೇಕೆಂದರೆ, ನೀವು ಸಾರಿ ಕೇಳಬಾರದು. ನಾನು ನಿಮಗೆ ಥ್ಯಾಂಕ್ಸ್ ಹೇಳಬೇಕು, ಅಫೇರ್ ಇಟ್ಟುಕೊಂಡ ಹೆಂಡತಿಯಿಂದ ನನ್ನನ್ನ ರಿಲೀಸ್ ಮಾಡಿಸಿದ್ದಕ್ಕೆ,` ಎಂದು ನಕ್ಕೆ.

ಮಾಲಿನಿ ಕಣ್ಣನ್ನು ಒದ್ದೆ ಮಾಡಿಕೊಂಡು, `ಇಲ್ಲರೀ, ಹಾಗೆಲ್ಲ ಹೇಳಬೇಡಿ. ನಿಮ್ಮ ಲೈಫೇ ನನ್ನಿಂದಾಗಿ ಹಾಳಾಗಿ ಹೋಯ್ತು. ಬದುಕನ್ನು ರಿವೈಂಡ್ ಮಾಡಲು ಬರುವುದಿಲ್ಲವಲ್ಲ! I am feeling immensely guilty (ನನಗೆ ಅಪರಾಧೀ ಮನೋಭಾವ ಬರುತ್ತಿದೆ). ಏನು ಮಾಡಬೇಕು ಹೇಳಿ,` ಎಂದು ತಮ್ಮ ಎರಡೂ ಕೈಗಳನ್ನು ಪೋಲೀಸರ ಮುಂದೆ ಬೇಡಿ ಹಾಕುವಂತೆ ಹಿಡಿದರು.

ನಾನು, `ಪ್ಲೀಸ್, ಹಾಗೆಲ್ಲ ಹೇಳಬೇಡಿ. ಆದರೆ ನಿಮ್ಮ ಈ ಗಿಲ್ಟಿ ಫೀಲಿಂಗ್ ಹೋಗಿಸಲು can I ask you something (ನಿಮಗೆ ನಾನು ಏನನ್ನೋ ಕೇಳಬಹುದಾ)?` ಎಂದೆ.

`ಹೂಂ, ಕೇಳಿ,` ಎಂದರು ಮಾಲತಿ.

`Are you still single (ನೀವು ಇನ್ನೂ ಒಂಟಿಯಾಗಿದ್ದೀರಾ)?’ ಎಂದು ನನ್ನ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಕೇಳಿದೆ.

4 thoughts on “ರಾಂಗ್ ನಂಬರ್ – ಕೇಶವ ಕುಲಕರ್ಣಿ ಬರೆದ ಕತೆ

 1. ಕಥೆ ತುಂಬಾ ಚೆನ್ನಾಗಿದೆ.ನಿರ್ದೇಶಕರ ಕೈಗೆ ಸಿಕ್ಕರೆ ಉತ್ತಮ ಸಿನಿಮಾ ಕೂಡ ಮಾಡಬಹುದು.
  ಆಧುನಿಕ ಜಗತ್ತಿನ ಮೆಟೀರಿಯಲಿಸಮ್ ಅನ್ನು ಚೆನ್ನಾಗಿ ಪ್ರತಿಪಾದಿಸುತ್ತದೆ.

  Liked by 1 person

 2. ಕೇಶವ್, ಸರಾಗವಾಗಿ ಓದಿಸಿಕೊಂಡು ಹೋಗುವ ಈ gripping ಕಥೆ ತುಂಬಾ ತುಂಬಾ ಚೆನ್ನಾಗಿದೆ. ಹೃತ್ಪೂರ್ವಕ ಅಭಿನಂದನೆಗಳು.
  ನಿಮ್ಮ ಲೇಖನಿಯಿಂದ ಇನ್ನೂ ಹೆಚ್ಹಿನ ಬರವಣಿಗೆಯನ್ನ ಅಪೇಕ್ಷಿಸುವಂತೆ ಮಾಡಿದೆ.

  ಆನಂದ ಕೇಶವಮೂರ್ತಿ

  Liked by 1 person

 3. ಸಣ್ಣ ಕತೆಯ ಎಲ್ಲ ಅಂಗಗಳಿಂದ ಕೂಡಿದೆ ಈ ಕತೆ: ಅವೆಂದರೆ ಡ್ರಮ್ಯಾಟಿಕ್ ಪ್ರಾರಂಭ, ಮಧ್ಯ, ಕ್ಲೈಮ್ಯಾಕ್ಸ್ ಮತ್ತು ಕೊನೆ ಅಂತೆ. ಇದು ಹಳೆಯ ಮಾತು, ಆದರೆ ಕಥಾವಸ್ತು ಮಾತ್ರ ಇಂದಿನದ್ದು. ಈಗಿನ ಬದುಕಿಗೆ ಕನ್ನಡಿ, ನಿರೂಪಣೆಯಲ್ಲಿ ಹೆಚ್ಚಾಗಿಯೇ ಬರುವ ಇಂಗ್ಲಿಷ್ ಪದಗಳು ನಮ್ಮ ಆಡುಮಾತನ್ನೇ ಪ್ರತಿಬಿಂಬಿಸುತ್ತದೆ. ಕುತೂಹಲವನ್ನು ಕಾಯ್ದುಕೊಂಡು ಕೊನೆಯ ಟ್ವಿಸ್ಟಿನ ವರೆಗೆ ಓದುಗನನ್ನು ಓಡಿ(ದಿ)ಸಿಕೊಂಡು ಹೋಗುತ್ತದೆ. ಸಿಂಚನದಲ್ಲಿ ಪ್ರಕಟವಾದದ್ದು ಇದರ ಸಂಕ್ಷಿಪ್ತ ರೂಪವಾದರೂ ಅದೂ ಅರ್ಧಕ್ಕೆ ನಿಂತಂತೆ ಅನಿಸದೇ ಮುಗಿದಿತ್ತು. ಇದು ಹಲವು ತಿರುವುಗಳನ್ನೊಳಗೊಂಡ ವಸ್ತುವಿಗೆ ಲೇಖಕರು ಬಳಸಿದ ಕಥಾತಂತ್ರದ ಯಶಸ್ಸನ್ನು ಹೇಳುತ್ತದೆ. ಇಲ್ಲಿಯ ವರೆಗೆ ಕೇಶವ ಅವರ ಕವನಗಳನ್ನಷ್ಟೆ ಪರಿಚಯವಾಗಿದ್ದ ‘ಅನಿವಾಸಿ’ ಓದುಗರಿಗೆ ಅವರ ಬರವಣಿಗೆಯ ಇನ್ನೊಂದು ವೈಖರಿ ನೋಡಿದ್ದಾಯಿತು. ಮುಂದೆ ಇನ್ನೂ ನಿಮ್ಮ ಕತೆಗಳು ಬರಲಿ. We are giving you the right call 

  Liked by 2 people

 4. ಕೇಶವ್ ನಿಜಾ ಹೇಳಬೇಕಂದ್ರೆ ಮಜಾ ಬಂತ್ರಿ. ಆಧುನಿಕ ಪ್ರಪಂಚದಲ್ಲಿ ಒಂದು ಫೋನ್ ಕಾಲಿನಿಂದ ಜೀವನದಲ್ಲಿ ಏಳಬಹುದಾದ ಅಲ್ಲೋಲಕಲ್ಲೋಲದ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ಅದೂ ಕಡಿಮೆ ಪುಟಗಳಲ್ಲಿ. ಜೊತೆಗೆ ಒಂದು ಸಂಸಾರದಲ್ಲಿ ಮಧ್ಯವಯಸ್ಸಿನಲ್ಲಿ ನಡೆಯಬಹುದಾದ, ಮತ್ತು ಸದ್ದಿಲ್ಲದೆ ನಡೆಯುತ್ತಿರುವ ಸಮಸ್ಯೆಗಳನ್ನು ಚೆನ್ನಾಗಿ ಅಳವಡಿಸಿದ್ದೀರಿ. ಈ ಕಥೆಯನ್ನು ತೀರ್ಪುಗಾರರು ಆಯ್ಕೆ ಮಾಡಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಮತ್ತೊಮ್ಮೆ ಅಭಿನಂದನೆಗಳು. ಈ ಕಥಾವಸ್ತುವಿಗೆ ಓದುಗರು ಚೆನ್ನಾಗಿ ಸ್ಪಂದಿಸುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆಧುನಿಕ ತಂತ್ರಜ್ನಾನ ಹಲವೊಮ್ಮೆ ತರಬಹುದಾದ ಪರಿಸ್ಥಿತಿಯನ್ನು ಸರಿಯಾಗಿ ಬೆರಸಿದ್ದೀರಿ.
  ಉಮಾ ವೆಂಕಟೇಶ್

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.