ನನ್ನಜ್ಜ, ಅಜ್ಜನ ಕೃತಿಗಳು

ನನ್ನಜ್ಜನ ಜನ್ಮಶತಾಬ್ಧಿ ಈ ವರ್ಷ. ಈ ಲೇಖನ ಓದುತ್ತ ಹೋದಂತೆ ಇವರು ಯಾರು ಅಂತ ನಿಮಗೆ ಗೊತ್ತಾಗುತ್ತೆ. ಅವರ ವ್ಯಕ್ತಿತ್ವವನ್ನು ಪ್ರತಿಫಲಿಸುವ ಎರಡು ಕೃತಿಗಳ ಪರಿಚಯ ಮಾಡಿಕೊಡುತ್ತಾರೆ ಪ್ರತಿಭಾ ಭಾಗ್ವತ್. ಪ್ರತಿಭಾ ನನ್ನಕ್ಕ; ಅಜ್ಜನ ನೂರನೇ ಹುಟ್ಟುಹಬ್ಬದ ಸದವಕಾಶದಲ್ಲಿ ಕನ್ನಡಿಗರಿಗೆ ಅವರ ನೆನಪು ಮಾಡಿಕೊಡುತ್ತಾ, ಇನ್ನೂ ಎಲೆಯ ಮರೆಯಲ್ಲಿರುವ ಮಹತ್ವದ ಕಾದಂಬರಿಗಳನ್ನು ಪರಿಚಯ ಮಾಡಿಕೊಡುವ ಮೊಮ್ಮಕ್ಕಳ ಪ್ರಯತ್ನ ಇದು.

ಪ್ರತಿಭಾ ಭಾಗ್ವತ್ ಅಮೇರಿಕೆಯಲ್ಲಿ ನೆಲೆಸಿರುವ ಅಭಿಯಂತೆ. ಸಾಹಿತ್ಯ ಪ್ರೇಮಿ, ಕನ್ನಡ ಹಾಗೂ ಆಂಗ್ಲ ಭಾಷೆಯ ಕಥೆ, ಕಾದಂಬರಿ ಓದುವುದು ಅವರ ಹವ್ಯಾಸ. ಇದು ಅಂತರ್ಜಾಲದಲ್ಲಿ ಪ್ರಕಟವಾಗುತ್ತಿರುವ ಅವರ ಚೊಚ್ಚಲ ಲೇಖನ.

ಲೇಖನದ ಮೊದಲ ಭಾಗ, ಕನ್ನಡ ಬಳಗ (ಯು.ಕೆ) ಯ “ಸಂದೇಶ”ದಲ್ಲಿ ಪ್ರಕಟವಾಯಿತು, ಈಗ ಅನಿವಾಸಿಯಲ್ಲಿ ವಿಶ್ವದಾದ್ಯಂತ. ಅಜ್ಜನ ಜನ್ಮ ಶತಾಬ್ದಿಯಂದು ಈ ಸದವಕಾಶ ಸಿಕ್ಕಿದ್ದು ನನ್ನ ಪುಣ್ಯ, ಹೃದಯ ತುಂಬಿ ಬರುತ್ತಿದೆ; ಅವಕಾಶ ದೊರಕಿಸಿಕೊಟ್ಟ ಕನ್ನಡ ಬಳಗ (ಯು.ಕೆ) ಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

(೧೫.೫.೧೫ - ೪.೪.೭೬)
(೧೫.೫.೧೫ – ೪.೪.೭೬)

ರಾತ್ರೆ ಮಲಗೋ ಮೊದಲು ಅಜ್ಜಿ ಪಕ್ಕ ಬಿದ್ಕೊಂಡು ಕಥೆ ಕೇಳೋದನ್ನ ಕತ್ಲೆ ಆಗ್ತಾ ಇದ್ದ ಹಾಗೇ ಎದುರು ನೋಡ್ತಾ ಇರ್ತಿದ್ವು. ಹಾಗೊಂದು ರಾತ್ರೆ ಅಜ್ಜಿ ಹೇಳಿದ ಅಜ್ಜನ ಕಥೆ ನಿಮ್ಮ ಜೊತೆಗೆ ಹಂಚಿಕೊಳ್ಳೋಣ ಅಂತ ಅನ್ನಿಸ್ತಿದೆ. ಈ ವರ್ಷ ಅಜ್ಜನ ಜನ್ಮ ಶತಾಬ್ಧಿ. ಇದಕ್ಕಿಂತ ಒಳ್ಳೇ ಮುಹೂರ್ತ ಬರೋದಿಲ್ಲ. ನಾವು ಆರು ಜನ ಮೊಮ್ಮಕ್ಕಳಲ್ಲಿ ಕಿರಿಯ ಮೂರು ಜನ ಹುಟ್ಟೇ ಇರಲಿಲ್ಲ. ನಾವು ಮೂವರಲ್ಲಿ ನನ್ನಕ್ಕ, ಅಜ್ಜ-ಅಜ್ಜಿ ಜೊತೆ ಬೆಳೆದವಳು. ಅಜ್ಜಿ ಜೊತೆ ಅವಳೂ ಧ್ವನಿಗೂಡಿಸ್ತಿದ್ಲು. ಜೊತೆಗೆ ಅಮ್ಮ, ಚಿಕ್ಕಮ್ಮಂದ್ರೂ ಸೇರ್ಕೊಂಡ್ರು. ಅವರೆಲ್ಲರ ಮನದಲ್ಲಿ ಅಜ್ಜನ ಛಾಪು ಗಾಢ್ವಾಗಿದ್ರೂ; ಮನೆಯ ಹಜಾರದ ಮೂಲೆಯ ಮೇಜು, ಅಲ್ಲಿ ಕೂತು ಬರಿತಾ ಇರ್ತಿದ್ದ ಅಜ್ಜನ ಮಸುಕಾದ ಬಿಂಬ ಮಾತ್ರ ನನ್ನ ಮನಸಿನ ಪರದೆ ಮೇಲೆ. ಈ ಅಜ್ಜ ಯಾರೂ ಅಂತ ಒದ್ತಾ ಹೋದ ಹಾಗೇ ನಿಮಗೂ ಗೊತ್ತಾಗುತ್ತೆ.

“ಅವರಿಗಿನ್ನೂ ಹದಿ ಹರೆಯ, ಮೀಸೆ ಮೂಡ್ತಿತ್ತು. ಒಂದೆಡೆ ಶಾಲೆ ಕರೀತಿತ್ತು, ಅಮ್ಮನ ಕನಸು ನನಸಾಗುವ ಕ್ಷಣ ಹತ್ತಿರ ಬರ್ತಾ ಇತ್ತು. ಅಪ್ಪಯ್ಯ ಅವರು ಏಳು ವರ್ಷದವನಿದ್ದಾಗ್ಲೇ ಜ್ವರಕ್ಕೆ ಬಲಿಯಾಗಿದ್ರು. ತನ್ನ ಮಗನ್ನ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಓದಿಸ್ಬೇಕು ಅಂತ ಅವರಿಗಾಸೆ. ಓದ್ನಲ್ಲಿ ಚುರುಕಾಗಿದ್ದ ಮಗನನ್ನ ಓದಿಸಿ, ಗಂಡನ ಕನಸನ್ನ ತನ್ನ ಕನಸಾಗಿ ಬೆಳಿಸಿ, ಗದ್ದೆಯಲ್ಲಿ ದುಡಿದು, ಅವನನ್ನ ಬೋರ್ಡಿಂಗ್ ಶಾಲೆಗೆ ಕಳಿಸ್ತಾ ಇದ್ದಾಳೆ ನಿನ್ನ ಮುತ್ತಜ್ಜಿ. ಇನ್ನೊಂದ್ಕಡೆ ತಾಯ್ನೆಲ ಹೊತ್ತುರಿತಾ ಇದೆ, ಪರಕೀಯರ ಆಳ್ವಿಕೆಯ ಬೇಡಿ ಹರಿಯಲು ನಾಯಕರು ರಣ ಕಹಳೆ ಊದಿದ್ದಾರೆ. ನಾಡಿನ ಜನರನ್ನೆಲ್ಲ ಹುರಿದುಂಬಿಸುತ್ತಿದ್ದಾರೆ. ಇದೊಂದು ಕವಲು ದಾರಿ. ಓದು ಮುಂದುವರೆಸಿ ಮ್ಯಾಟ್ರಿಕ್ ಪಾಸ್ ಆದರೆ ಉದ್ಯೋಗ ಖಚಿತ, ಅಮ್ಮ, ತಮ್ಮನ ಬಡತನ ಹರಿದು ನೆಮ್ಮದಿಗೆ ಅವಕಾಶ.   ಇದು ೧೯೩೦, ಅಸಹಕಾರ ಆಂದೋಲನಕ್ಕೆ ಗಾಂಧೀಜಿ ಕರೆ ಕೊಟ್ಟಿದ್ದಾರೆ. ಮಡಿಕೇರಿಯ ಸೆಂಟ್ರಲ್ ಸ್ಕೂಲಿನಲ್ಲಿ ಓದುತ್ತಿದ್ದ ನಾರಾಯಣರಾಯ ಚೋಟುದ್ದವಿದ್ದರೂ ಗಾಂಧಾರಿ ಮೆಣಸು. ಆದರ್ಶಾನೇ ಹಾಸಿ ಹೊದೆಯುವ ಸಾಹಸಿ. ಹೆತ್ತ ತಾಯಿಯಷ್ಟೇ ಹುಟ್ಟಿದ ದೇಶದ ಮೇಲೆ ಪ್ರೀತಿ, ಅಭಿಮಾನ. “ಭಾರತ ಮಾತೆಗೆ ಜೈ, ಗಾಂಧೀಜಿಗೆ ಜೈ,” ಎಂದು ಘೋಷಿಸಿದ್ದಕ್ಕೆ, ಛಡಿ ಏಟು ತಿಂದರೂ ಬಗ್ಗದೇ, ಡಿಬಾರ್ ಆಗಿ, ಸ್ವಾತಂತ್ರ್ಯ ಚಳುವಳಿಗೆ ಹಿಂದೆ ಮುಂದೆ ನೋಡದೇ ಧುಮುಕಿದ್ರು. ಅಮ್ಮನಿಗೆ ತಾಳಲಾರದ ಆಘಾತ. ನಾರಾಯಣನಿಗೆ ಮನೆಯಿಂದ, ಸಮಾಜದಿಂದ ಬಹಿಷ್ಕಾರ. ಬ್ರಿಟಿಷ್ ಸರಕಾರದ ವಿರುದ್ಧ ನಡೆಸಿದ ಹೋರಾಟದ ಪರಿಣಾಮ ಕೇರಳದಲ್ಲಿ ತುರಂಗವಾಸ.

“ಅಜ್ಜ ಹುಟ್ಟಿ ಬೆಳೆದದ್ದು ಮಡಿಕೇರಿ ಬಳಿ ಹಳ್ಳಿ ಬಿಳಿಗೇರಿಯಲ್ಲಿ. ಓದಿನಲ್ಲಿ ಬಹಾಳ ಚುರುಕು. ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಪಂಜೆ ಮಂಗೇಶರಾಯರಿಂದ ಪ್ರಭಾವಿತರಾಗಿ ಕಥೆ ಬರ್ದು ಸೈ ಎನಿಸಿಕೊಂಡಿದ್ರು. ಸಾಹಿತ್ಯ ಕೂಟ ಕಟ್ಟಿ, ಕಥೆ, ಕವನಗಳನ್ನು ರಚಿಸಿ ಗೆಳೆಯರನ್ನೂ ಹುರಿದುಂಬಿಸ್ತಿದ್ರು. ಶಾಲೇಲಿದ್ದಾಗ್ಲೇ “ಪೃಥ್ವಿರಾಜ” ಎನ್ನೊ ಕಾದಂಬರಿ ಬರದ್ರು. ಸ್ವಾತಂತ್ರ್ಯ ಸಂಗ್ರಾಮದ ಗರಡಿಯಲ್ಲಿ ಪಳಗಿ; ಮಾರ್ಕ್ಸ್, ಲೆನಿನ್, ಟೊಲ್ಸ್ಟಾಯ್ರನ್ನೆಲ್ಲ ಅಧ್ಯಯನ ಮಾಡಿ; ನಂಬೂದರಿಪಾಡ್, ಪೂಣಚ್ಚರಂಥ ನಾಯಕರೊಡನೆ ಚರ್ಚಿಸಿ ಹೊರಬಂದ ಅಜ್ಜ “ಭಾರತೀಸುತ” ಎಂದು ತನ್ನನ್ನು ಕರೆದುಕೊಂಡಿದ್ದು ಸಹಜವೇ.

“ಜೈಲಿನಿಂದ ಹೊರ ಬಂದ ಮೇಲೆ ಅವರಿಗೆ ಹಿಂದಿಲ್ಲ, ಮುಂದಿಲ್ಲ. ಕಲ್ಲಿಕೋಟೆಯ ಬಂದರಿನಲ್ಲಿ ಕೂಲಿ ಕೆಲಸ. ಬಡತನದ ಜೀವನ, ಸಮಾಜದ ಕೆಳಸ್ತರದಲ್ಲಿ ಬಾಳುವ ಜನರ ಬದುಕಿನ ಬವಣೆ ಅವರಿಗೆ ಸ್ವಾನುಭವ. ಅಲ್ಲಿಂದ ಹೊರಟು ಮುಂದೆ ವೈನಾಡಿಗೆ ಪಯಣ. ಅಲ್ಲಿ ಜಿನರಾಜ ಗೌಡರ ಕಾಫಿ ತೋಟದಲ್ಲಿ ರೈಟರ್ ಆಗಿ ಉದ್ಯೋಗ, ಗಿರಿಜನ ಫಣಿಯರ ಸಹವಾಸ; ಅವರ ನೋವು, ಬವಣೆ ಇದೆಲ್ಲ ಹತ್ತಿರದಿಂದ ನೊಡುವ, ಅನುಭವಿಸುವ ಅವಕಾಶ. ವೈನಾಡಿನಿಂದ ಕೊಡಗಿಗೆ ಮರಳಿದಾಗ, ತಾಯಿಯಾಗಲಿ, ಸಮಾಜವಾಗಲಿ ಅವರನ್ನು ಬರಮಾಡಿಕೊಳ್ಳಲಿಲ್ಲ. ಆಗ ಹಿತೈಷಿ ರಘುನಾಥರಾಯರು ಆಶ್ರಯ ಕೊಟ್ಟು, ಮುಂದೆ ನಿಂತು ಮದುವೆ ಮಾಡಿದ್ರು. ವೈನಾಡಿಗೆ ವಾಪಾಸ್ ಆಗುವಾಗ, ಆನೆ ಬೆನ್ಹತ್ತಿ, ಅಜ್ಜ ತಪ್ಪಿಸಿಕೊಂಡು ಬಂದ ಮೇಲೆ, ಅಜ್ಜಿ ಒತ್ತಾಸೆಗೆ, ಕನ್ನಡ ಶಿಕ್ಷಕರಾಗಿ ಕೊಡಗು ಬಿಟ್ಟು ಹೋಗಲಿಲ್ಲ.

“ಅಜ್ಜ-ಅಜ್ಜಿ ಜೋಡಿ ಸ್ವರ್ಗದಲ್ಲಿ ಮಾಡಿದಂತಿತ್ತು. ಅಜ್ಜ ಒಂದು ಸಲಾನೂ ನನ್ನ ಮೇಲೆ ಧ್ವನಿ ಎತ್ತಿದವರಲ್ಲ,” “ಅವರಿಬ್ಬರೂ ಜಗಳ ಮಾಡಿದ್ದನ್ನ ನಾವು ಮಕ್ಕಳು ನೋಡೇ ಇರಲಿಲ್ಲ,” ಅಂತ ಅಮ್ಮ ಟಿಪ್ಪಣಿ ಹಾಕಿದ್ಲು. “ಅವರ ಬರಹಕ್ಕೆಲ್ಲ ನಾನೇ ಮೊದಲ ವಿಮರ್ಶಕಿ. ಮಿತ ಭಾಷಿಯಾದರೂ ಮಹಾನ್ ಸ್ನೇಹ ಜೀವಿ. ಜಾತಿ, ಅಂತಸ್ತು ನೋಡದೇ ಎಲ್ಲರೊಟ್ಟಿಗೂ ಬೆರೆತು ಗೆಳೆತನ ಬೆಳೆಸುವ ಕಲೆ  ಅವರಿಗೆ ಕರಗತವಾಗಿತ್ತು. ಅಜ್ಜ ಹೆಣ್ಣು-ಗಂಡು ಮಕ್ಕಳಲ್ಲಿ ಭೇದ ಕಂಡವರಲ್ಲ. ಮನೆ ತುಂಬಾ ಮಕ್ಕಳಿದ್ದರೂ ಎಲ್ಲರಿಗೂ ತಮಗೆ ಶಕ್ತಿ ಇದ್ದಷ್ಟು ಓದಿಸಿ, ಸ್ವಾವಲಂಬಿಗಳನ್ನಾಗಿ ಬೆಳೆಸಿದರು. ಅವರು ಯಾವಾಗಲೂ ಸ್ವಂತ ಲಾಭಕ್ಕಾಗಿ ಪರ ಯಾಚನೆ ಮಾಡಿದವರಲ್ಲ, ಸ್ವಾತಂತ್ರ್ಯೋತ್ತರ ಕೊಡಗಿನ ಮುಖ್ಯಮಂತ್ರಿ ಪೂಣಚ್ಚನವರೇ ಮುಂದೆ ಬಂದು ಸರಕಾರಿ ಹುದ್ದೆ ಕೊಟ್ಟರೂ ನಯವಾಗೇ ತಿರಸ್ಕರಿಸಿದ ಸ್ವಾಭಿಮಾನಿ. ಕೊನೇ ಉಸಿರಿನವರೆಗೂ ಖಾದಿ ತೊಟ್ಟಿದ್ದು ತೋರಿಕೆಗಲ್ಲ; ಬೆನ್ನ ಮೇಲೆ ಚಳುವಳಿಯಲ್ಲಿ ತಿಂದ ಲಾಠಿ ಏಟಿನ ಕಲೆ, ತನ್ನ ಮೇಲಲ್ಲ, ಭಾರತ ಮಾತೆಯ ಮೇಲಾದ ದೌರ್ಜನ್ಯದ ಕುರುಹು ಎಂದ ದೇಶಾಭಿಮಾನಿ. “ನಾನು ಹೋರಾಡಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ, ಪಿಂಚಣಿಗಲ್ಲ,” ಅಂತ ಸ್ವಾತಂತ್ರ್ಯ ಯೋಧರ ಪೆನ್ಶನ್ ಕೂಡ ತೊಗೊಳ್ಲಿಲ್ಲ. ಇದೇ ಆದರ್ಶಗಳನ್ನ ತನ್ನ ಮಕ್ಕಳಲ್ಲೂ ಬೆಳೆಸಿದ್ರು.” ಅದನ್ನ ಇಂದಿಗೂ ನಾನು ನನ್ನಮ್ಮನಲ್ಲಿ ಕಾಣ್ತೇನೆ.

“ಸಾಹಿತ್ಯದ ಕಾರ್ಯಕ್ಕೆ ಮೈಸೂರು, ಬೆಂಗಳೂರಿಗೆ ಹೋದಾಗಲೆಲ್ಲ ದೇಶ-ವಿದೇಶದ ಪ್ರಮುಖ ಲೇಖಕರ ಮಣಗಟ್ಟಲೆ ಪುಸ್ತಕಗಳನ್ನ ತಂದು ಓದಿದ್ದಲ್ದೆ, ಮಕ್ಕಳ ಪುಸ್ತಕಗಳನ್ನೂ ತಂದು ಮಕ್ಕಳಲ್ಲೂ ಓದುವ ಗೀಳು ಹಚ್ಚಿದ್ರು.” “ನಾನು ಕಥೆ ಹೇಳು ಅಂದಾಗ್ಲೆಲ್ಲ, ತನ್ನ ಕೋಣೆಗೆ ಕರ್ಕೊಂಡು ಹೋಗಿ, ಕಥೆ ಪುಸ್ತಕ ಕೊಟ್ಟು, ಒದಿಸ್ತಿದ್ರು,” ಅಂತ ಅಕ್ಕ ನೆನಪು ಮಾಡ್ಕೊಂಡ್ಲು. “ಮತ್ತೆ, ಅಜ್ಜ ಯಾಕೆ ಅಷ್ಟೊಂದು ಕಥೆ ಬರದ್ರು?” ನನ್ನ ತಮ್ಮನ ಪ್ರಶ್ನೆ. “ತಾನು ಕಂಡ ದಲಿತರ ಬವಣೆ; ಗಿರಿಜನರ ದುಃಸ್ಥಿತಿ; ಮಹಿಳೆಯರ ಮೇಲೆ ಆಗುವ ದಬ್ಬಾಳಿಕೆ, ಅತ್ಯಾಚಾರ ಇದನ್ನೆಲ್ಲ ಹೇಳಿಕೊಳ್ಬೇಕು, ತೋಡಿಕೊಳ್ಬೇಕು ಎನ್ನೊದೇ ಅವರ ಬರಹಗಳ ಹಿಂದಿನ ಸ್ಫೂರ್ತಿ. ಯಾವ ಇಸಂಗಳಿಗೂ ಒಳಗಾಗ್ದೇ, ಕಂಡ ಸತ್ಯನ ಬರೆಯೋ ಛಾತಿ ಅವರಿಗಿತ್ತು. ತಾನೇ ಕಂಡ ನಾಡು, ನುಡಿ,ಜೀವನ ಆಧಾರಿಸಿ ಬರೆದ ಅವರ ಕೃತಿಗಳಲ್ಲಿ ಮಣ್ಣಿನ ಸೊಗಡು ಸಹಜವಾಗೇ ಅಡಕವಾಗಿತ್ತು. ಹೆಣ್ಣಿನ ನೋವನ್ನ ಬಿಂಬಿಸಿ ಬರೆದ “ಎಡಕಲ್ಲು ಗುಡ್ಡದ ಮೇಲೆ” ಕಾದಂಬರಿಗೆ ಸುಧಾ ಪತ್ರಿಕೆ ನಡೆಸಿದ ಕಾದಂಬರಿ ಸ್ಫರ್ದೆಯಲ್ಲಿ ಮೊದಲ ಬಹುಮಾನ ಸಿಕ್ತು. ಕನ್ನಡದಲ್ಲಿ ಗಿರಿಜನರ ಮೇಲೆ ಮೊಟ್ಟ ಮೊದಲು “ಗಿರಿಕನ್ನಿಕೆ” ಎನ್ನೋ ಕಾದಂಬರಿ ಬರೆದ್ರು. ಬಂಡಾಯ ಸಾಹಿತ್ಯ ಅನ್ನೋ ಮಾಧ್ಯಮ ಬರೋ ಎಷ್ಟೊ ವರ್ಷಗಳ ಮೊದಲೇ ಬಂಡಾಯ ಸಾಹಿತ್ಯ ಸೃಷ್ಟಿ ಮಾಡಿದ್ರು ನಿನ್ನಜ್ಜ. ಓದೋ ಚಟ ಮಕ್ಕಳಲ್ಲಿ ಬೆಳೆಸ್ಬೇಕು ಅಂತ ೨೦ಕ್ಕೂ ಹೆಚ್ಚು ಮಕ್ಕಳ ಕಥೆ ಪುಸ್ತಕಗಳನ್ನ ಬರೆದ್ರು. ನಿನಗೆ ತುಂಬಾ ಪ್ರೀತಿಯಾಗಿರೋ “ಸಿಗೋರ” ಬರೆದದ್ದೂ ನಿನ್ನಜ್ಜಾನೇ. ಓದು ಬರದ ವಯಸ್ಕರಿಗೂ ಓದು ಕಲಿಸ್ಬೇಕೂ ಅಂತ ಶಾಲೆ ಮಾಡಿದ್ದಲ್ದೇ ಅದಕ್ಕಾಗೇ ಪುಸ್ತಕಗಳನ್ನ ರಚಿಸಿದ್ರು.

“ಬಾಲ್ಯದಲ್ಲಿ ಹೇಗೆ ಸಾಹಿತ್ಯ ಕೂಟ ಕಟ್ಟಿದ್ರೋ, ಹಾಗೇ ಕಾವೇರಿ ಪ್ರಕಾಶನ ಕಟ್ಟಿ, ತಾನು ಬರೆದದ್ದು, ಗೆಳೆಯರು ಬರೆದಿದ್ದನ್ನೆಲ್ಲ ಪ್ರಿಂಟ್ ಹಾಕ್ಸಿ, ಹೊತ್ತು ಮಾರ್ತಿದ್ರು. ರಿಟೈರ್ ಆದ್ಮೇಲೆ ತನ್ನ ಪಾಲಿಗೆ ಬಂದ ಬರಡು ಗುಡ್ಡದಲ್ಲಿ ಕಾಫಿ ತೋಟ ಸಸಿ ನೆಟ್ಟು ಮಾಡಿದ್ರು.” ಪಾಲಿಥಿನ್ ಚೀಲಗಳಲ್ಲಿ ಮಣ್ಣು ತುಂಬಿ ಸಣ್ಣ ಕಾಫಿ ಸಸಿಗಳನ್ನ ನೆಡ್ತಿದ್ದದ್ದು ನನ್ನ ಕಣ್ಣ ಮುಂದೆ ಈಗಲೂ ಕುಣಿತಾ ಇದೆ. “ಕಾಫಿ ತೋಟದಲ್ಲಿ ಕೆಲಸದವರಿಗೆ ಅಂತ ಮನೆ ಕಟ್ಟಿ ಕೊಟ್ರು. ಒಂದಿನಾನೂ ಪ್ರಶಸ್ತಿ ಬೇಕು, ಹುದ್ದೆ ಬೇಕು ಅಂತ ರಾಜಕೀಯ ಮಾಡ್ದೇ, ಆದರ್ಶ ಬಿಡ್ದೆ ನನ್ಗಂಡ ಬಾಳಿದ್ದಲ್ದೇ, ನನ್ಜೊತೆ ತುಂಬಾ ಪ್ರೀತ್ಯಿಂದ ಸಂಸಾರ ಮಾಡಿದ್ರು. ಇನ್ನೂ ತುಂಬಾ ಬರೀಬೇಕು, ಓದ್ಬೇಕು ಅಂತ ಆಸೆ ಇದ್ದಾಗ್ಲೇ ೬೧ರ ವಯಸ್ಸಿಗೇ ಪಾರ್ಶ್ವವಾಯುಗೆ ತುತ್ತಾಗಿ ದೂರ ಹೋಗ್ಬಿಟ್ರು,” ಅಂತ ಅಜ್ಜಿ ಕಥೆ ಮುಗ್ಸಿದಾಗ ಎಲ್ಲರ ಕಣ್ಣಲ್ಲಿ ನೀರು. ಆದ್ರೆ ಅಜ್ಜಿ ಕಣ್ಣಂಚಿನ ಹನಿ ಹೊಳಿತಾ ಇತ್ತು, ತುಟಿಯಂಚಲ್ಲಿ ತೃಪ್ತಿಯ ಮುಗುಳ್ನಗೆ ಇತ್ತು.

ಅಜ್ಜನ ಕಥೆ ನನ್ನಜ್ಜಿಯ ಬಾಯಲ್ಲಿ ಕೇಳಿದ್ರಿ. ಚಲನಚಿತ್ರಗಳಾದ ಎಡಕಲ್ಲು ಗುಡ್ಡದ ಮೇಲೆ, ಬಯಲು ದಾರಿ, ಗಿರಿಕನ್ಯೆ ಹಾಗೂ ಹುಲಿಯ ಹಾಲಿನ ಮೇವು ಅವರ ಚಿರಪರಿಚಿತ ಕಾದಂಬರಿಗಳು. ಅಜ್ಜ ಬರೆದ ಕೃತಿಗಳು ೭೩; ೩೩ ಕಾದಂಬರಿಗಳು, ೩ ಅನುವಾದಗಳು, ೧೦ ಸಣ್ಣ ಕಥೆಗಳ ಗುಛ್ಛ, ೨೪ ಮಕ್ಕಳ ಕೃತಿಗಳು ಹಾಗೂ ೩ ವಯಸ್ಕರ ಶಿಕ್ಷಣಕ್ಕಾಗಿ ರಚಿಸಿದ ಪುಸ್ತಕಗಳು. ಅಜ್ಜನ ಕಾದಂಬರಿಗಳಲ್ಲಿ ನನಗೆ ತುಂಬಾ ಇಷ್ಟವಾದವು ವಕ್ರರೇಖೆ, ವೈದ್ಯನ ಮಗಳು ಹಾಗೂ ಬಂಗಾರದ ಕುಲುಮೆ.

ಅಜ್ಜನ ಪರಿಚಯ ಕನ್ನಡಿಗರಿಗೆ ಹೆಚ್ಚಾಗಿ ಅವರ ಚಲನಚಿತ್ರಗಳಾದ ಕಾದಂಬರಿಗಳ ಮೂಲಕ. ಅವರ ಕಾದಂಬರಿಗಳು ಜೀವನದ ಹಲವು ಆಯಾಮಗಳನ್ನು, ಸೂಕ್ಷ್ಮತೆಗಳನ್ನು ಅನ್ವೇಷಿಸುತ್ತವೆ. ಈ ಲೇಖನದ ಎರಡನೆ ಭಾಗದಲ್ಲಿ ನನ್ನಕ್ಕ ಅವಳ ಮನಕ್ಕೆ ಹತ್ತಿರದ ಎರಡು ಕಾದಂಬರಿಗಳ ಪರಿಚಯ ಮಾಡಿಕೊಡುತ್ತಿದ್ದಾಳೆ…

ಗಿಳಿ ಪಂಜರದೊಳಿಲ್ಲ

ಹಿಂದೆ ಕೇರಳಕ್ಕೆ ದಕ್ಷಿಣ-ಕನ್ನಡದ ಪುರೊಹಿತರು ಪೌರೋಹಿತ್ಯಕ್ಕೆ ಹೋಗೋದು ವಾಡಿಕೆ ಇತ್ತು. ಅವರು ಅಲ್ಲಿಯ ನಾಯರ್ ಜನಾಂಗಕ್ಕೆ ಸೇರಿದ ಹುಡುಗಿಯರನ್ನು ಮದುವೆಯಾಗುವ ಪದ್ಧತಿಯನ್ನು ಮುಂದಿಟ್ಟುಕೊಂಡು ಬರೆದ ಕಾದಂಬರಿಯಿದು.  ಕಥೆಯ ನಾಯಕ ಮಾಧವ ಯಂಬ್ರಾದ್ರಿಯ ತಂದೆಯೂ ಕೇರಳ ದೇಶಕ್ಕೆ ಹೋದ ಬ್ರಾಹ್ಮಣ.  ಮಾಧವ ದೊಡ್ಡವನಾಗುವಾಗಲೇ ಆತನ ತಂದೆಯೂ ಗತನಾಗಿದ್ದಾನೆ.  ಆತನಿಗೆ ಆತನ ತಂದೆಯ ಪರಿಚಯ, ಅಟ್ಟದಲಿಟ್ಟ ತಂದೆ ಬರೆದ ತಾಳೆಯ ಎಲೆಯ ಮೇಲೆ ಬರೆದ ಶಾಸ್ತ್ರ ಗ್ರಂಥಗಳಿಂದಲಷ್ಟೇ.  ಹೊಟ್ಟೆ ಪಾಡಿಗೆ ಮಾಧವನೂ ಕೇರಳ ದೇಶಕ್ಕೆ ಹೊರಡುತ್ತಾನೆ.  ಅಲ್ಲೊಂದು ದೇವಸ್ಥಾನ ಅವನಿಗೊಂದು ನೆಲೆ ಕೊಡುತ್ತದೆ. ಮಾಧವ, ಮಾಧವ ಯಂಬ್ರಾದ್ರಿ ಆಗುತ್ತಾನೆ. ಗಿಳಿಯೊಂದನ್ನು ಸಾಕುತ್ತಾನೆ. ಜೀವನ ಆರಕ್ಕೇಳದೇ ಮೂರಕ್ಕಿಳಿಯದೇ ಇರುವಾಗಲೇ, ಆತನಿಗೆ ನಾಯರ್ ಹುಡುಗಿಯ ಮದುವೆಯ ಪ್ರಸ್ತಾಪ ಬರುತ್ತದೆ. ಗುಪ್ತವಾಗಿ ಇಷ್ಟಪಟ್ಟ ಹುಡುಗಿಯದೇ ಪ್ರಸ್ತಾಪವದು. ಈ ಮದುವೆ ಹುಡುಗಿಯ ಅಣ್ಣನಿಗಾಗಲೀ, ಹುಡುಗಿಗಾಗಲೀ ಇಷ್ಟವಿಲ್ಲ. ಏಕೆಂದರೆ ಯಂಬ್ರಾದ್ರಿಗಳು ಹಗಲಿಗೆ ಈ ಹುಡುಗಿಯರನ್ನು ಮುಟ್ಟುವುದಿರಲೀ, ಮಾತೂ ಆಡಿಸಲಾರರು. ಇಬ್ಬರ ಸಂಬಂಧ ಹಾಸಿಗೆಗಷ್ಟೇ ಮೀಸಲು. ಈ ಇಬ್ಬರ ವಿರೋಧದ ನಡುವೆಯೂ ಮದುವೆಯಾಗುತ್ತದೆ. ಮಾಧವ ಹೆಂಡತಿಯನ್ನು ಸಂಪ್ರದಾಯಕ್ಕೆ ಮೀರಿ ಪ್ರೀತಿಯಿಂದ ಕಾಣುತ್ತಾನೆ. ಇಬ್ಬರೂ ಸಂತೋಷವಾಗಿ ಜೀವನ ಮಾಡುತ್ತಿರುತ್ತಾರೆ. ಒಮ್ಮೆ ಮಾಧವ ಹೆಂಡತಿಯ ತವರು ಮನೆಯ ಅಟ್ಟ ಹತ್ತಿದಾಗ, ಅವನಿಗಲ್ಲಿ ತಾಳೆಗರಿಯ ಶಾಸ್ತ್ರ ಪುಸ್ತಕಗಳು ಸಿಗುತ್ತದೆ. ಆತನ ಪತ್ನಿ, ನನ್ನ ಅಪ್ಪನೂ ದಕ್ಷಿಣ-ಕನ್ನಡದ ಬ್ರಾಹ್ಮಣ,  ಅವೆಲ್ಲಾ ಅವನ ಪುಸ್ತಕಗಳು ಎಂದು ತಿಳಿಸುತ್ತಾಳೆ. ಮಾಧವ ಅದನ್ನೆಲ್ಲ ಅಭ್ಯಸಿಸಲು ಮನೆಗೆ ತರುತ್ತಾನೆ.  ಅದೇ ರೀತಿಯ ಪುಸ್ತಕಗಳನ್ನು, ಆತ ಕನ್ನಡ ಜಿಲ್ಲೆಯ ತನ್ನ ಮನೆಯಲ್ಲಿ ಅಭ್ಯಸಿಸಿದ್ದ; ಅದೇ ಬರವಣಿಗೆ. ಅವನಿಗೆ ತಾನು ಮದುವೆಯಾದ ಹುಡುಗಿ ತನ್ನ ತಂಗಿಯೇ ಎಂದು ತಿಳಿಯುತ್ತದೆ. ಏನೂ ಮಾಡಲು ತೋಚದೇ ಹೋಗುತ್ತದೆ. ತನ್ನ, ದುಃಖ, ದಿಗ್ಭ್ರಮೆ, ಅಸಹಾಯಕತೆಗಳನ್ನು ಮನಸಾ ಪ್ರೀತಿಸಿದ ಪತ್ನಿಯೊಂದಿಗೆ ತೋಡಿಕೊಳ್ಳಲಾರ, ಬಿಡಲಾರ. ಈ ಸಂಧಿಗ್ದತೆಯಿಂದ ಹೊರಬರಲಾರದೆ, ಮರುದಿನ ಬಿದಿರಿನ ಹಿಂಡಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅವನು ಸಾಕಿದ ಪ್ರೀತಿಯ ಗಿಳಿಯೂ ಬೆಕ್ಕಿಗೆ ಆಹಾರವಾಗುತ್ತದೆ.

ಭಾರತೀಸುತರು ಪ್ರಾಯಶಃ ಈ ಪುಸ್ತಕ ಬರೆದಿದ್ದು 50 ಯಾ 60ರ ದಶಕದಲ್ಲಿ. ಭಾರತದಲ್ಲೇನೂ, ಪಾಶ್ಚಾತ್ಯ ದೇಶದಲ್ಲೂ ಇನಸೆಸ್ಟ್ (ಆಗಮ್ಯಗಮನ) ಬಗ್ಗೆ ಮಾತನಾಡದ ಕಾಲವಾದು. ಕಠಿಣವಾದ ವಿಷಯನ್ನು ಸೂಕ್ಷ್ಮವಾಗಿ ಬರೆದದ್ದು ಅವರ ವಿಶೇಷ. ಕಥೆ ಓದಿ ಪುಸ್ತಕ ಕೆಳಗಿಟ್ಟ ಮೇಲೆ, ಬಹುದಿನಗಳವರೆಗೆ ಮನಸ್ಸು ನಿರ್ದೋಷಿಗಳಾದ ಮಾಧವ, ಮತ್ತು ಆತನ ಮುದ್ದಿನ ಮಡದಿಯರಿಗಾಗಿ ಕಂಬನಿಗರೆಯುತ್ತದೆ. ಮಾಧವನನ್ನು ನೆನಪಿಸಿಕೊಂಡು ಕರಳು ಕಿವುಚುತ್ತದೆ.

ವಕ್ರರೇಖೆ

ವಕ್ರರೇಖೆ ಉತ್ತರ-ಕನ್ನಡದ ಹವ್ಯಕ ಸಮಾಜದ ಮೇಲೆ ಆಧಾರಿತ ಕಾದಂಬರಿ. ಕಥೆಯ ಮೂಲಪಾತ್ರವೇ ಎಂಟು ವರ್ಷದ ಬಾಲೆ ವೇಣಿ. ಆಕೆ ತಂದೆ ತಾಯಿಯರಿಲ್ಲದ ಅನಾಥೆ. ಆದರೆ, ಅವಳ ಅಣ್ಣ ದೇವರು ಹೆಗಡೆಯಾಗಲೀ, ಬಾಲವಿಧವೆ ಪರಮತ್ತೆಯಾಗಲೀ, ಅಪ್ಪ, ಅಮ್ಮನಿಗೆ ಏನೂ ಕಡಿಮೆ ಇಲ್ಲದಂತೆ ಅವಳನ್ನು ಸಾಕುತ್ತಾರೆ. ದೇವರು ಹೆಗಡೆಗೆ ತಂಗಿ ಎಂದರೆ ಬಲು ಪ್ರೀತಿ, ಪರಮತ್ತೆ ಎಂದರೆ ಪ್ರೀತಿ, ಹಾಗೂ ಗೌರವ, ಆದರೆ ಹೆಂಡತಿ ಎಂದರೆ ಮಾತ್ರ ಅಸಡ್ಢೆ. ಆತನಿಗೆ ಜಾಜಿ ಎಂಬ ಗೋಕರ್ಣದ ವೇಶ್ಯೆಯ ಸಂಬಂಧ. ಎಷ್ಟೋ ಬಾರಿ ಗೋಕರ್ಣಕ್ಕೆ ಹೋಗುವಾಗ, ಪರಮತ್ತೆ, ವೇಣಿ, ಹಾಗೂ ಮಗ ಶೀನನನ್ನು ಜಾಜಿಯ ಮನೆಯಲ್ಲಿ ಉಳಿಸಿ ತನ್ನ ಕೆಲಸಕ್ಕೆ ಹೋದ ದಿವಸಗಳೆಷ್ಟೋ. ಬಾಲವಿವಾಹದ ಕಾಲವದು. ವೇಣಿಗೆ ಗಂಡು ಹುಡುಕುವ ಸಿದ್ಧತೆ ಮನೆಯಲ್ಲಿ. ತಮ್ಮ ಅಂತಸ್ತಿಗೆ ತಕ್ಕುದಾದ ಹುಡುಗನನ್ನೇ ಹೆಗಡೇರು ಹುಡುಕುತ್ತಾರೆ. ಭಟ್ಟರ ಮಗ ಶಿವರಾಮ 14-15ರ ಹರೆಯದವನು. ವೇಣಿಗೆ ಅವನೆಂದರೆ ಬಲು ಸಲಿಗೆ. ಶಿವರಾಮನಿಗೆ ವೇಣಿಯನ್ನು ವರಿಸುವ ಇಚ್ಛೆ. ಆದರೆ ಅವನಿಗೆ ಗೊತ್ತು, ಅವನಂಥ ಬಡವನಿಗೆ ದಕ್ಕದ ಹೆಣ್ಣು ವೇಣಿಯೆಂದು. ಪರಮತ್ತೆಯ ಸೂಕ್ಷ್ಮ ಕಣ್ಣಗಳು ಈ ಪ್ರೀತಿಯ ದೃಷ್ಟಿ ತಪ್ಪಿಸಿಕೊಳ್ಳಲಾರದು. ಈ ಸಂದರ್ಭ ಪರಮತ್ತೆಯನ್ನು ತನ್ನ ಮದುವೆಯ ದಿನಗಳಿಗೆ ಕೊಂಡೊಯ್ಯುತ್ತದೆ.  ಅವಳು ಇಷ್ಟಪಟ್ಟ ಹುಡುಗನೊಬ್ಬ, ಆದರೆ ಮದುವೆಯಾದದ್ದೇ ಮತ್ತೊಬ್ಬ. ಆಕೆ ಮದುವೆಯಾದ ಹುಡುಗ, ಮದುವೆಯಾಗಿ ವಾರದೊಳಗೇ ತೀರಿ ಹೋಗುತ್ತಾನೆ. ವಯಸ್ಸಿಗೆ ಬಂದೊಡನೇ ಪರಮತ್ತೆ ತಲೆ ಬೋಳಿಸಬೇಕಾಗುತ್ತದೆ. ಹರೆಯದಲ್ಲಿ ಅವಳೂ, ಅವಳ ಬಾಲ್ಯದ ಪ್ರೇಮಿ ಹಲವು ಬಾರಿ ದೈಹಿಕವಾಗಿಯೂ ಒಂದಾದನ್ನು ಪರಮತ್ತೆ ನೆನಪಿಸಿಕೊಳ್ಳುತ್ತಾಳೆ. ಆದರೆ ಈಗ ಆಕೆ ಅಸಹಾಯಕಿ. ವೇಣಿಯ ಮದುವೆ ಭರ್ಜರಿಯಾಗಿ 4 ದಿವಸ ನಡೆಯುತ್ತದೆ. ಮದುವೆ ಮುಗಿದ ಮೇಲೆ ವೇಣಿಯ ಗಂಡ ತೆಂಗಿನ ಮರದಿಂದ ಬಿದ್ದು ತೀರಿ ಹೋಗುತ್ತಾನೆ. ಮದುವೆ ಅಂದರೇ ಏನು ಎಂದು ತಿಳಿಯದ ಮುಗ್ಧೆ ವೇಣಿ ವಿಧವೆಯಾಗುತ್ತಾಳೆ.

ಸರಳವಾಗಿ ಬರೆದ ಈ ಕಾದಂಬರಿ ನಮಗೆ ಉತ್ತರ-ಕನ್ನಡದ ಅಡಿಕೆ ತೋಟ, ಪ್ರಕೃತಿ ಸೌಂದರ್ಯದ ದರ್ಶನ ಮಾಡಿಕೊಡುತ್ತದೆ. ವೇಣಿಯ ಬಾಲ್ಯ ನಮ್ಮ ಬಾಲ್ಯಕ್ಕೆ ಹತ್ತಿರವಾದದ್ದರಿಂದ ಅವಳು ನಮ್ಮವಳೆನಿಸಿ ಬಿಡುತ್ತಾಳೆ. ಅವಳು ನಗುವಾಗ ನಾವೂ ನಗುತ್ತೇವೆ, ಅತ್ತಾಗ ಅಳುತ್ತೇವೆ.  ದೇವರು ಹೆಗಡೆ ಹೆಂಡತಿಯನ್ನು ದನದಂತೆ ಹೊಡೆದಾಗ ನಮಗೂ ಆತನಿಗೆ ಹೊಡೆಯಬೇಕೆನಿಸಿದರೆ; ಆತ ತಂಗಿಯನ್ನು, ಅತ್ತೆಯನ್ನು ಪ್ರೀತಿಯಿಂದ ಕಂಡಾಗ ಮನುಷ್ಯ ಅಡ್ಡಿಯಿಲ್ಲ ಅನಿಸುತ್ತಾನೆ. ಪರಮತ್ತೆ ಎಲ್ಲರನ್ನೂ ಪ್ರೀತಿಯಿಂದ ನೋಡುವಾಗ ಮನಸ್ಸಲ್ಲಿ ಎಷ್ಟು ದು:ಖವಿದ್ದರೂ ಬದುಕನ್ನು ಪ್ರೀತಿಸುವ ಅವಳ ಸ್ವಭಾವಕ್ಕೆ ಕಣ್ಣು ತೇವವಾಗುತ್ತದೆ. ಅವಳು ಓದುಗನೊಡನೆ ವಿಧವೆಯಾದ ಮೇಲೆ ಮಾಡಿದ ದೈಹಿಕ ಸಂಬಂಧ ಹಂಚಿಕೊಂಡಾಗ ಅವಳ ಮೇಲೆ ತಿರಸ್ಕಾರ ಹುಟ್ಟುವುದಿಲ್ಲ. ವೇಣಿಯ ಗಂಡ ತೀರಿದಾಗ ಎಲ್ಲರೊಡನೆ ಓದುಗನ ಮನಸ್ಸು ಬಿಕ್ಕಿ ಬಿಕ್ಕಿ ಅಳುತ್ತದೆ. ಈ ಅನ್ಯಾಯಕ್ಕೆ ಕೊನೆ ಇಲ್ಲವೇ ಎಂದು ಆಕ್ರೋಷಗೊಳ್ಳುತ್ತದೆ. ಅವಳನ್ನು ಅಷ್ಟೊಂದು ಪ್ರೀತಿಸಿದ ಶಿವರಾಮ ಸಮಾಜವನ್ನು ಮೀರಿ ಮದುವೆಯಾಗಬಾರದೇ ಎಂಬ ಆಸೆ ಆಸೆಯಾಗಿಯೇ ಉಳಿಯುತ್ತದೆ. 

– ರಾಂ ಹಾಗೂ ಪ್ರತಿಭಾ ಭಾಗ್ವತ್ 

7 thoughts on “ನನ್ನಜ್ಜ, ಅಜ್ಜನ ಕೃತಿಗಳು

 1. ನಮಸ್ತೆ , ಸಾರ್ ಲೇಖನ ಓದಿದ ನಂತರ ಖುಷಿಯಾಯಿತು, ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಸುತರ ಇಬ್ಬರು ಶಿಷ್ಯರು ಬಹಳ ಯಶಶ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ , ಭಾರತೀಸುತರ ಬಗ್ಗೆ ನಾವು ಪ್ರಮುಖವಾಗಿ ಇತ್ತೀಚೆಗೆ ನಿಧನರಾದ ಕಯ್ಯಾರ ಕಿಞ್ಞಣ್ಣ ರೈ , ಅಧ್ಯಕ್ಷತೆಯಲ್ಲಿ ಭಾರತೀಸುತ ಸಂಸ್ಮರಣೆ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಮಾಡಿದೆವು, ಮುಂದಿನ ತಿಂಗಳು ೧೯/೯/೨೦೧೫ ರಂದು ಕೊಡಗು ಜಿಲ್ಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಸುತ್ತದೆ ಎಂದು ತಿಳಿಸಲು ಹರ್ಷಿಸುತ್ತೇನೆ.ನಾನು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ.ಈ ಕಾರ್ಯಕ್ರಮಕ್ಕೆ ಅವರ ಪುತ್ರ ಮಡಿಕೇರಿ ಕೆನರಾ ಬ್ಯಾಂಕ್ ಉದ್ಯೋಗಿ ವಿಜಯಶಂಕರ್ ಅವರ ಬಳಿಯೂ ಮಾತಾನಾಡಿದ್ದೇವೆ. ನಿಮ್ಮ ಈ ಲೇಖನ ಭಾರತಿಸುತರ ಬಗ್ಗೆ ನಮಗೆ ಹೆಚ್ಚು ತಿಳಿದುಕೊಳ್ಳಲು ಸಹಕಾರಿಯಾಯಿತು ಧನ್ಯವಾದಗಳು…

  Like

 2. ನಮಸ್ತೆ , ಸಾರ್ ಲೇಖನ ಓದಿದ ನಂತರ ಖುಷಿಯಾಯಿತು, ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಸುತರ ಇಬ್ಬರು ಶಿಷ್ಯರು ಬಹಳ ಯಶಶ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ , ಭಾರತೀಸುತರ ಬಗ್ಗೆ ನಾವು ಪ್ರಮುಖವಾಗಿ ಇತ್ತೀಚೆಗೆ ನಿಧನರಾದ ಕಯ್ಯಾರ ಕಿಞ್ಞಣ್ಣ ರೈ , ಅಧ್ಯಕ್ಷತೆಯಲ್ಲಿ ಭಾರತೀಸುತ ಸಂಸ್ಮರಣೆ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಮಾಡಿದೆವು, ಮುಂದಿನ ತಿಂಗಳು ೧೯/೯/೨೦೧೫ ರಂದು ಕೊಡಗು ಜಿಲ್ಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಸುತ್ತದೆ ಎಂದು ತಿಳಿಸಲು ಹರ್ಷಿಸುತ್ತೇನೆ.ನಾನು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ.ಈ ಕಾರ್ಯಕ್ರಮಕ್ಕೆ ಅವರ ಪುತ್ರ ಮಡಿಕೇರಿ ಕೆನರಾ ಬ್ಯಾಂಕ್ ಉದ್ಯೋಗಿ ವಿಜಯಶಂಕರ್ ಅವರ ಬಳಿಯೂ ಮಾತಾನಾಡಿದ್ದೇವೆ. ನಿಮ್ಮ ಈ ಲೇಖನ ಭಾರತಿಸುತರ ಬಗ್ಗೆ ನಮಗೆ ಹೆಚ್ಚು ತಿಳಿದುಕೊಳ್ಳಲು ಸಹಕಾರಿಯಾಯಿತು ಧನ್ಯವಾದಗಳು…

  Like

 3. ಕನ್ನಡದ ಜನಪ್ರಿಯ ಲೇಖಕರಲ್ಲಿ ಒಬ್ಬರಾದ ಭಾರತೀಸುತ ಅವರ ಪುಸ್ತಕಗಳನ್ನು ಓದುತ್ತಲೇ ಬೆಳೆದ ನನಗೆ, ಅವರ ಪುಸ್ತಕಗಳು ಪ್ರಸಿದ್ಧ ಚಲನಚಿತ್ರಗಳಾಗಿ ಪರಿವರ್ತಿತವಾದ ವಿಷಯ ಗೊತ್ತಿತ್ತು. ಆದರೆ ಅವರ ಅಪರೂಪದ, ಎರಡು ಪುಸ್ತಕಗಳ ಬಗ್ಗೆ, ಅವರ ಮೊಮ್ಮಕ್ಕಳಾದ ರಾಮಶರಣ್ ಮತ್ತು ಅವರ ಅಕ್ಕ ಪ್ರತಿಭಾ ಭಾಗವತ್ ಅವರು ಸುಂದರವಾದ ಲೇಖನವನ್ನು ರಚಿಸಿ ನಮ್ಮ ಮುಂದಿಟ್ಟಿದ್ದಾರೆ. ಅಜ್ಜನ ಜೀವನದ ಅಪರೂಪದ ಸುದ್ದಿಗಳನ್ನು, ತಮ್ಮ ಅಜ್ಜಿಯ ಕೈಯಲ್ಲಿ ಕೇಳಿ ತಮ್ಮ ನೆನಪುಗಳನ್ನು ನಮ್ಮೊಡನೆ, ಅನಿವಾಸಿಯಲ್ಲಿ ಹಂಚಿಕೊಂಡದ್ದಕ್ಕಾಗಿ ಅವರಿಗೆ ನನ್ನ ಧನ್ಯವಾದಗಳು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಕಠಿಣ ಪರಿಸ್ಥಿತಿಗಳ ನಡುವೆ ಬೆಳೆದ ಭಾರತಿಸುತರ ಜೀವನ ನಿಜಕ್ಕೂ ಆದರ್ಶಪ್ರಾಯವಾಗಿದೆ. ಶೋಷಣೆಗೊಳಗಾದ ವರ್ಗದ ಜನಜೀವನವನ್ನು ತಮ್ಮ ಕಾದಂಬರಿಗಳಲ್ಲಿ ಮನಮುಟ್ಟುವಂತೆ ರಚಿಸಿರುವ ಭಾರತೀಸುತರ ಜೀವನ ನಿಜಕ್ಕೂ ಆಸಕ್ತಿಪೂರ್ಣವಾಗಿದೆ. ಅದನ್ನು ನಮಗೆ ತಿಳಿಸಿಕೊಟ್ಟಿರುವ ಅಕ್ಕ-ತಮ್ಮರ ಜೋಡಿಯ ಲೇಖನಿಯಿಂದ ಮತ್ತಷ್ಟು ಬರಹಗಳು ಹೊರಬರಲಿ.
  ಉಮಾ ವೆಂಕಟೇಶ್

  Like

 4. ಭಿನ್ನವಾದ ಶೈಲಿಯಲ್ಲಿ ವ್ಯಕ್ತಿಪರಿಚಯ!
  ಭಾರತೀಸುತರ ವಯಕ್ತಿಕ ಬದುಕಿನ ಬಗ್ಗೆ ಬಹಳ ತಿಳಿಯಿತು.

  Like

 5. ಅಕ್ಕ- ತಮ್ಮ ತಮ್ಮ ಸುಪ್ರಸಿದ್ಧ ತಾತನ ಬಗ್ಗ್ಗೆ , ಇಬ್ಬರೂ ತಮ್ಮದೇ ಶೈಲಿಯಲ್ಲಿ ಬರೆದು ಪರಿಚಯವಿರದ ಓದುಗರಿಗೆ ಬರಹಗಾರ ಮತ್ತವರ ಸಾಹಿತ್ಯದ ಕಿರು ಪರಿಚಯ ಕೊಟ್ಟದ್ದಕ್ಕೆ ಧನ್ಯವಾದಗಳು.

  Like

 6. ಆಪ್ತವೆನ್ನಿಸುವ ಬರಹ. ನನಗೆ ಭಾರತೀಸುತ ಅವರ ಬಗ್ಗೆ ತಿಳಿದೇ ಇರಲಿಲ್ಲ. ಧನ್ಯವಾದ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.