ವಿರೋಧಾಭಾಸಗಳು ಜೀವನದಲ್ಲಿ ಹಾಸುಹೊಕ್ಕಾಗಿರುತ್ತವೆ. ಯಾವುದು ಸರಿ, ಯಾವುದು ತಪ್ಪು? ಯಾವುದು ಒಳ್ಳೆಯದು, ಯಾವುದು ಕೆಟ್ಟದು? ಪ್ರಪಂಚ ಕಪ್ಪು-ಬಿಳುಪೇ ಯಾ ಹಲವು ವರ್ಣಗಳ ಛಾಯೆಯೇ? ಪ್ರೇಮಲತಾರ ಚುಟುಕಗಳು ಥಟ್ಟನೆ ನಿಮ್ಮನ್ನು ಆಕ್ರಮಿಸದೇ ಹೋದರೂ, ಕೀಟದಂತೆ ಕೊರೆದು ಈ ತರಹದ ವಿಚಾರಗಳನ್ನು ನಿಮ್ಮ ತಲೆಯಲ್ಲಿ ಮೊಳಕೆಯೆಬ್ಬಿಸಿ ಮರವಾಗಿಸುವುದರಲ್ಲಿ ಸಂದೇಹವಿಲ್ಲ.
ವಿರಕ್ತಿ
ಅಮ್ಮನೆಂದಳು,
ಮದುವೆ,ಸಂಸಾರ.ಮಕ್ಕಳು
ಏನೆಲ್ಲ ಪರಿಪಾಟ,ಮಾಯೆ
ಇಷ್ಟೆಲ್ಲ ಜನ, ಎಷ್ಟೊಂದು ತ್ಯಾಜ್ಯ
ಯಾಕೆ ಬೇಕೋ, ಕಾಣೆ!!
ಹದಿನಾರಕ್ಕೆ ಮದುವೆ,ನಾಕು ಮಕ್ಕಳು
ಎಂಟು ಮೊಮ್ಮಕ್ಕಳ ಪಡೆದ ಮೇಲೆ!!!
ಮಹಿಮೆ
ಅಪ್ಪನೆಂದನು
ಜೀವನವೆಲ್ಲ ಬರಿ ದುಡಿಮೆ
ಮಕ್ಕಳ ಪಾಲನೆಯ ಗೊಡವೆ
ಹೆತ್ತಪ್ಪನಿಗೆ ದುಡಿದು ತರುವ
ಗಂಡುಸಂತಾನ ನನ್ನೊಡವೆ
ಬೀಗರೆದುರು ಬೀಗಿ ಮದುವೆ
ಮಾಡಿದೊಡನೆ ಗೊತ್ತಾಯ್ತು ಮಗನ ಮಹಿಮೆ!!
ವಿ-ರಾಗ
ಅವನು;
ಬಂಗಾರದ ಗೊಡವೆಯೇಕೆ ಪ್ರಿಯೆ
ಅದು ಬರಿ ಹಳದಿ ಲೋಹ!!
ಅವಳು;
ಮುತ್ತೇಕೆ, ಮತ್ತೇಕೆ ಬಿಡು ನಿನ್ನ
ಸಂಗವೇಕೆ, ನಶ್ವರ ಈ ಲೋಕ!!!
ನಾ-ಆಸ್ತಿಕ
ಆಸ್ತಿಕನೊಬ್ಬ ನಾಸ್ತಿಕನಲ್ಲಿ ಕೇಳಿದನೊಮ್ಮೆ
’ನೀವು ನಾಸ್ತಿಕರಾಗಲು ಕಾರಣ?’
ನಾಸ್ತಿಕ ಕಣ್ಮುಚ್ಚಿ ತಡವರಿಸದೆ ಉತ್ತರಿಸಿದ
’ಅದೆಲ್ಲ ದೈವ ನಿಯಾಮಕ’!!!
-ಡಾ. ಪ್ರೇಮಲತ ಬಿ.