ವಿಜ್ಞಾನ ಮತ್ತು ಕಾಲ್ಪನಿಕ-ವಿಜ್ಞಾನದ ನಡುವಣ ಅನ್ಯೋನ್ಯತೆಯ ಪ್ರತೀಕವೆನಿಸಿದ ಒಂದು ಅದ್ಭುತ ಚಲನಚಿತ್ರ-“Interstellar”! — ಉಮಾ ವೆಂಕಟೇಶ್

 ಸುಮಾರು ೧೮ ವರ್ಷಗಳ ಹಿಂದೆ,ಕ್ಯಾಲಿಫೋರ್ನಿಯಾದ ಮಹಾನಗರ ಲಾಸ್ ಏಂಜಲೀಸ್ ಪಟ್ಟಣದ ಹೊರವಲಯದ ಪಸಡೀನಾದಲ್ಲಿರುವ, ಜಗತ್ಪ್ರಸಿದ್ಧ ಕ್ಯಾಲಿಫೋರ್ನಿಯಾದ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ (California Institute of Technology, CALTECH) ಸಂದರ್ಶಕ ವಿಜ್ಞಾನಿಯಾಗಿದ್ದ ನನ್ನ ಪತಿಯ ಜೊತೆಯಲ್ಲಿ ಸಹಭಾಗಿತ್ವ ಸಂಶೋಧನೆ ನಡೆಸಿದ್ದ ಅಲ್ಲಿನ ಪ್ರಸಿದ್ಧ ಸೈದ್ಧಾಂತಿಕ ಖಭೌತವಿಜ್ಞಾನಿ, ಪ್ರೋಫೆಸ್ಸರ್  ಕಿಪ್ ಥಾರ್ನ್, ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಸಿದ್ಧಿಯಾದವರು.

With Professor Kip Thorne,  (from left 5 th) Theoretical Astrophysicist, CALTECH, Pasadena, Scientific advisor & Executive producer Interstellar movie. at his house party
With Professor Kip Thorne, ( 5 th from left) Theoretical Astrophysicist, CALTECH, Pasadena, Scientific advisor & Executive producer Interstellar movie. at his house party. (CC. Prof. Bangalore Sathyaprakash)

1991ರಿಂದಲೇ, ಈ ವಿಜ್ಞಾನಿಯ ಹೆಸರು ನನಗೆ ಪರಿಚಿತವಿದ್ದು, 1996ರಲ್ಲಿ ಕಿಪ್ ಥಾರ್ನ್ ಅವರನ್ನು ಮುಖತಃ ಭೇಟಿಯಾಗುವ ಸೌಭಾಗ್ಯ ದೊರೆತಿತ್ತು. ಸಾಮಾನ್ಯ ಸಾಪೇಕ್ಷತೆ (General relativity),  ಗುರುತ್ವದ ಅಲೆಗಳು (Gravitational waves), ಹಾಗೂ ಕಪ್ಪು-ಕುಳಿಗಳ (Black holes) ಬಗ್ಗೆ ಅತ್ಯುನ್ನತ ಮಟ್ಟದ ಸಂಶೋಧನೆಯಲ್ಲಿ, ಸುಮಾರು ೪೦ ವರ್ಷಗಳಿಂದ ಕಾರ್ಯನಿರತರಾಗಿರುವ, ಈ ಖಭೌತವಿಜ್ಞಾನಿ, 2006 ರ ಸಮಯದಲ್ಲಿ ಹಾಲಿವುಡ್ಡಿನ ಚಲನಚಿತ್ರವೊಂದರಲ್ಲಿ, ವೈಜ್ಞಾನಿಕ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿ ಭೌತಶಾಸ್ತ್ರ ವಲಯದಲ್ಲಿ ಕಲರವವನ್ನೆಬ್ಬಿಸಿತ್ತು. ಈಗ ೮ ವರ್ಷಗಳಿಂದ ಆ ಚಿತ್ರದ ತಯಾರಿಕೆಯ ಬಗ್ಗೆ ನಮ್ಮ ಕುತೂಹಲ ಬಹಳವಾಗಿದ್ದು, ಇದರ ಬಿಡುಗಡೆಗಾಗಿ ನಾವೆಲ್ಲಾ ಕಾಯುತ್ತಿದ್ದೆವು. “Interstellar” ಅಂದರೆ, ಅಂತರತಾರಾ, ಅಥವಾ ಅಂತರನಕ್ಷತ್ರೀಯ, ಎಂಬ ಅರ್ಥವನ್ನು ಕೊಡುವ ಹೆಸರಿನ ಈ ಚಲನಚಿತ್ರ, ಕಳೆದ ನವೆಂಬರ್ ೫ನೆಯ ತಾರೀಖು,ಕ್ಯಾಲಿಫೋರ್ನಿಯಾ ಮತ್ತು ನವೆಂಬರ್ ೭ರಂದು ಜಗತ್ತಿನ ಎಲ್ಲೆಡೆ ಬಿಡುಗಡೆಯಾಯಿತು.

Christopher Nolan's Interstellar
Christopher Nolan’s Interstellar, Cc-Wikipedia

ಈಗ ಮತ್ತೊಮ್ಮೆ, ಇದೇ ಸಂಸ್ಥೆಯಲ್ಲಿ ತಮ್ಮ ಆರು ತಿಂಗಳಿನ ಸಬಾಟಿಕಲ್ ಅಧ್ಯಯನಕ್ಕಾಗಿ ನನ್ನ ಪತಿ ಇಲ್ಲಿರುವ ಕಾರಣ, ಈ ಚಲನಚಿತ್ರವನ್ನು ಇಲ್ಲಿಯೇ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಉದ್ಯಮವಾದ “ಯೂನಿವರ್ಸಲ್ ಸ್ಟೂಡಿಯೋ” ಆವರಣದಲ್ಲಿರುವ, 70MM ಪರದೆಯ IMAX ಸಿನಿಮಾ ಮಂದಿರವೊಂದರಲ್ಲಿ ವೀಕ್ಷಿಸುವ ಸುವರ್ಣಾವಕಾಶವೊಂದು ನನಗೆ ಲಭ್ಯವಾಯಿತಲ್ಲದೇ, ಪ್ರೋಫೆಸ್ಸರ್ ಕಿಪ್ ಥಾರ್ನ್ ಅವರ ಮನೆಯಲ್ಲಿ ನಡೆದ ಸಂತೋಷಕೂಟವೊಂದರಲ್ಲೂ ಭಾಗವಹಿಸಿ, ಅವರೊಡನೆ ಮುಖತಃ ಈ ಚಿತ್ರದ ಬಗ್ಗೆ ಮಾತನಾಡುವ ಅಪರೂಪದ ಅವಕಾಶವೂ ದೊರೆಯಿತು. ಮೂರು ಗಂಟೆಗಳ ಅವಧಿಯ ಈ ಚಲನಚಿತ್ರದಲ್ಲಿ, ಗಂಭೀರವಾದ ವಿಜ್ಞಾನವನ್ನು, ಕಾಲ್ಪನಿಕ-ವಿಜ್ಞಾನದ ಚಲನಚಿತ್ರವೊಂದರಲ್ಲಿ, ಅತ್ಯಾಧುನಿಕವಾದ ದೃಶ್ಯ-ಪರಿಣಾಮ ತಂತ್ರಜ್ಞಾನದೊಂದಿಗೆ ಅಳವಡಿಸಿದ್ದು, ಈ ಚಲನಚಿತ್ರವು ವಿಜ್ಞಾನಪ್ರಿಯರಿಗೆ, ಅದರಲ್ಲೂ ಕಾಲ್ಪನಿಕ-ವಿಜ್ಞಾನ ಚಲನಚಿತ್ರಗಳಲ್ಲಿ ಆಸಕ್ತಿಯುಳ್ಳವರಿಗೆ, ಒಂದು ವಿಶೇಷವಾದ ಅನುಭವವನಿಸುತ್ತದೆ. ಈಗಾಗಲೇ ಅನೇಕ ಭೌತ ವಿಜ್ಞಾನಿಗಳು, ಈ ಚಲನಚಿತ್ರದಲ್ಲಿ ಅಳವಡಿಸಿರುವ ಖಭೌತವಿಜ್ಞಾನದ ಸೈದ್ಧಾಂತಿಕ ತತ್ವಗಳನ್ನು ಬಹಳ ಪ್ರಶಂಸಿದ್ದಾರೆ.

“ವೈಪರೀತ್ಯ ಹವಾಮಾನಕ್ಕೆ ತುತ್ತಾದ ಭೂಮಿಯಲ್ಲಿ, ಬೆಳೆಗಳು “ಬ್ಲೈಟ್” (Blight)  ರೋಗಕ್ಕೆ ತುತ್ತಾಗುತ್ತಿವೆ, ಧೂಳಿನ ಬಿರುಗಾಳಿ ಸುನಾಮಿಯ ತೆರದಲ್ಲಿ, ಉತ್ತರ ಅಮೆರಿಕೆಯಲ್ಲಿರುವ ಮಧ್ಯ ಪಶ್ಚಿಮ ಪ್ರಾಂತದ ಮಹಾನ್ ಬಯಲುಭೂಮಿಯಲ್ಲೆಲ್ಲಾ ಆವರಿಸಿ, ಅಲ್ಲಿನ ರೈತಾಪಿ ಜನಗಳ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಭೂಮಿಯಲ್ಲಿನ್ನು ಮಾನವನ ಅಳಿವಿನ ದಿನಗಳು ದೂರ ಉಳಿದಿಲ್ಲ.” ಅಂತಹ ಪರಿಸ್ಥಿತಿಯಲ್ಲಿ ಮಾನವ ತನ್ನ ಸಂತತಿಯನ್ನು ಕಾಪಾಡಬೇಕಾದರೆ, ಅವನಿಗಿರುವ ದಾರಿ ಒಂದೇ. ಈ ಸೌರವ್ಯೂಹದ ಇನ್ನಿತರ ಗ್ರಹಗಳಿಗೆ ಹಾರಿ, ಅಲ್ಲಿರುವ ಯಾವುದಾರೊಂದು ಗ್ರಹದಲ್ಲಿ ತನ್ನ ಸಂತತಿಯನ್ನು ಮುಂದುವರೆಸಬೇಕು, ಇಲ್ಲಾ ಈ ತಾರಾಗಣದಿಂದಲೇ (Galaxy) ದೂರ ನಡೆದು, ಮತ್ತೊಂದು ತಾರಾಗಣದಲ್ಲಿರುವ ಗ್ರಹವೊಂದರಲ್ಲಿ ತನ್ನ ವಾಸ್ತವ್ಯವನ್ನು ಹೂಡಬೇಕು. ಇದನ್ನು ಸಾಧಿಸುವುದಾದರೂ ಹೇಗೆ? ಅಮೆರಿಕಾ ಅಂತರಿಕ್ಷ ಸಂಶೋಧನಾ ಸಂಸ್ಥೆ, ನಾಸಾ, ಈಗಾಗಲೇ ಇದಕ್ಕೆ ಅವಶ್ಯವಾದ ದೊಡ್ಡ ಅಂತರಿಕ್ಷನೌಕೆಯನ್ನು ರಹಸ್ಯವಾದ ತನ್ನ ಸೌಲಭ್ಯವೊಂದರಲ್ಲಿ ನಿರ್ಮಿಸುತ್ತಿರುವ ಸಮಯದಲ್ಲಿ, ತಜ್ಞ ಅಂತರಿಕ್ಷನೌಕೆಯ ಪೈಲಟ್ ಮತ್ತು ಇಂಜಿನೀಯರ್, ಕೂಪರ್ (Matthew McMconaughey) ತನ್ನ ಪರಿಣಿತಿಯಿಂದ ಈ ಸಂಶೋಧನೆಯ ರಹಸ್ಯ ಸ್ಥಳವನ್ನು ಪತ್ತೆಹಚ್ಚುತ್ತಾನೆ. ಅಲ್ಲಿರುವ ಪ್ರಸಿದ್ಧ ಸೈದ್ಧಾಂತಿಕ ಭೌತವಿಜ್ಞಾನಿ, ಪ್ರೋಫೆಸ್ಸರ್ ಬ್ರಾಂಡ್ (Michel Caine)  ಈ ಅಪರೂಪದ ಅಂತರತಾರಾ ಯಾನಕ್ಕೆ, ಪ್ರಮುಖ ಪೈಲಟ್ ಆಗಿ ತಮ್ಮ ಕನಸಿನ ಕೂಸಾದ ಆ ಅಂತರಿಕ್ಷನೌಕೆಯ ಪ್ರಮುಖ ಪೈಲಟ್ ಕಾರ್ಯವನ್ನು ಅವನಿಗೆ ಒಪ್ಪಿಸಲು ಯತ್ನಿಸುತ್ತಾರೆ. ನಮ್ಮ ತಾರಾಗಣದಿಂದ ಹೊರಗಿರುವ ಸೌರಮಂಡಲಗಳಲ್ಲಿ ಇರಬಹುದಾದ, ಮಾನವನ ವಾಸ್ತವ್ಯಕ್ಕೆ ಅನುಕೂಲವಾದ ವಾತಾವರಣವನ್ನು ಹೊಂದಿರಬಹುದಾದ, ಗ್ರಹವನ್ನು ಪತ್ತೆಹಚ್ಚಿ ಮಾನವ ಸಂತತಿಯನ್ನು ಉಳಿಸಲು ತಮ್ಮೊಡನೆ ಸಹಕರಿಸಲು ಮನವೊಲಿಸುತ್ತಾರೆ. Endurance ಎಂಬ ಹೆಸರಿನ ಈ ಅಂತರಿಕ್ಷ-ಯಾನವು, ಇನ್ನೂ ಮೂವರು ವಿಜ್ಞಾನಿಗಳು, TARS & CASE ಎಂಬ ಎರಡು ಉತ್ಕೃಷ್ಟ ಕಂಪ್ಯೂಟರ್+ರೋಬೋಟುಗಳನ್ನು ಒಳಗೊಂಡ ಒಂದು ತಂಡವಾಗಿರುತ್ತದೆ. ತನ್ನ ಮಾವ, ಹದಿಹರಯದ ಮಗ ಹಾಗೂ ಹತ್ತು ವರ್ಷ ವಯಸ್ಸಿನ ಮಗಳನ್ನು ಭೂಮಿಯಲ್ಲೇ ಬಿಟ್ಟು, ಅನಿಶ್ಚಿತವಾದ ಈ ಅಂತರಿಕ್ಷ-ಪ್ರವಾಸಕ್ಕೆ ಹೊರಡಲು ಕೂಪರ್ ಮೊದಲು ತಿರಸ್ಕರಿಸಿದರೂ, ಮಾನವ ಸಂತತಿಯ ಭವಿಷ್ಯದ ದೃಷ್ಟಿಯಿಂದ ಒಪ್ಪಿಕೊಳ್ಳುತ್ತಾನೆ. ಆದರೆ ಅವನ ಈ ನಿರ್ಣಯ, ಆ ಕುಟುಂಬದ ಅದರಲ್ಲೂ ಅವನ ಮಗಳು ಮರ್ಫಿಯ ಮನಸ್ಸನ್ನು ಬಹಳ ಘಾಸಿಗೊಳಿಸುತ್ತದೆ. ತಂದೆ -ಮಗಳ ನಡುವಿನ ಮಧುರ ಬಾಂಧವ್ಯವನ್ನು ಇಲ್ಲಿ ಅತ್ಯಂತ ನಾಜೂಕಾಗಿ ಚಿತ್ರಿಸಲಾಗಿದೆ.

ಪ್ರೋಫೆಸ್ಸರ್ ಬ್ರಾಂಡನ ಸೈದ್ಧಾತಿಕ ಲೆಕ್ಕಾಚಾರಗಳ ಪ್ರಕಾರ, ಶನಿಗ್ರಹದ ಹತ್ತಿರದಲ್ಲಿ ಅನ್ಯಲೋಕಜೀವಿಗಳು ಸೃಷ್ಟಿಸಿರಬಹುದಾದ ಒಂದು ವರ್ಮಹೋಲ್ (Wormhole), ಭೂಲೋಕದ ವಿಜ್ಞಾನಿಗಳು ನಮ್ಮ ತಾರಾಗಣವನ್ನು ದಾಟಿ ಮುಂದಕ್ಕೆ ಹೋಗಲು ಆಸ್ಪದವೀಯುತ್ತದೆ. ಅದನ್ನು ದಾಟಿದ ಮೇಲೆ, ಅದರಾಚೆಯಿರುವ ಗಾರ್ಗಾನ್ಚುವಾ (Gargantua) ಎಂಬ ಕಪ್ಪುಕುಳಿಯ (Black hole) ಸುತ್ತಾ ಸುತ್ತುತ್ತಿರುವ, ಮಿಲ್ಲರ್, ಎಡ್ಮಂಡ್ಸ್, ಹಾಗೂ ಮಾನ್ ಎಂಬ ಮೂರು ವಾಸಯೋಗ್ಯವಾದ ಸಂಭಾವ್ಯ ಗ್ರಹಗಳನ್ನು ತಲುಪಲು ಸಹಾಯಕಾರಿಯಾಗಬಹುದು ಎಂಬ ತಿಳುವಳಿಕೆ ಹಾಗೂ ವಿವರಗಳನ್ನು ನೀಡಲಾಗಿರುತ್ತದೆ. ಈ ಮಾಹಿತಿಯನ್ನು ಇದಕ್ಕೂ ಮುಂಚಿನ ಯಾನಗಳಲ್ಲಿ ಸಂಚರಿಸಿದ್ದ ವಿಜ್ಞಾನಿಗಳು ಸಂಗ್ರಹಿಸಿ ಭೂಮಿಗೆ ಕಳಿಸಿದ್ದು, ಆ ಗ್ರಹಗಳಿಗೆ ಅವರದೇ ಹೆಸರನ್ನು ನೀಡಲಾಗಿರುತ್ತದೆ. ಕೂಪರನ ಈ ಅಂತರಿಕ್ಷಯಾನದ ತಂಡವು, ಅಲ್ಲಿನ ವಾತಾವರಣದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ನಂತರ, ಭೂಮಿಯಲ್ಲಿನ ಮಾನವ ಸಂಕುಲ ಅಲ್ಲಿ ಹೋಗಿ ನೆಲಸುವ ವ್ಯವಸ್ಥೆಯನ್ನು ಮಾಡಬಹುದು ಎನ್ನುವ ಯೋಜನೆಯಿರುತ್ತದೆ.

from wiki

ನಮ್ಮ ತಾರಾಗಣವನ್ನು ದಾಟಿ ಮತ್ತೊಂದು ತಾರಾಗಣವನ್ನು ತಲುಪಲು, ಬೆಳಕಿನ ವೇಗಕ್ಕೆ ಹತ್ತಿರವಾದ ವೇಗದಲ್ಲಾದರೂ ಚಲಿಸಬೇಕಲ್ಲದೇ, ಎರಡರ ಮಧ್ಯದಲ್ಲಿರುವ ವರ್ಮ್-ಹೋಲ್ ಅಥವಾ ಐನಸ್ಟೈನ್-ರೋಸೆನ್ ಸೇತುವೆ, (Wormhole or Einstein-Rosen bridge) ಎಂಬ ವ್ಯೋಮ-ಸಮಯದಲ್ಲಿನ (Space-time) ಸಮೀಪ ಮಾರ್ಗದ ಮೂಲಕ ಹಾಯ್ದು ಹೋಗಬೇಕು. ಈ ವರ್ಮಹೋಲ್ ಎನ್ನುವುದು ಹೆಚ್ಚುಕಡಿಮೆ ಒಂದು ಸುರಂಗದಂತಿದ್ದು, ಇದರ ಎರಡು ತುದಿಗಳು, ವ್ಯೋಮಸಮಯದಲ್ಲಿನ ಎರಡು ಭಿನ್ನವಾದ ಸ್ಥಳಗಳಾಗಿರುತ್ತದೆ. ಆದರೆ ಇವೆಲ್ಲವೂ ಕೇವಲ ಸೈದ್ಧಾಂತಿಕವಾಗಿ ಪ್ರತಿಪಾದಿಸಿರುವ ವಿಷಯವಾಗಿದೆ. ಇದರ ಅಸ್ತಿತ್ವದ ಬಗ್ಗೆ ಪ್ರಸ್ತುತದಲ್ಲಿ ಯಾವುದೇ ರೀತಿಯ ಪ್ರಾಯೋಗಿಕವಾದ, ಖಗೋಳವೀಕ್ಷಕರ ಸಾಕ್ಷ್ಯಾಧಾರಗಳು ಇಲ್ಲ. ಆದರೆ, ಖಭೌತಶಾಸ್ತ್ರಜ್ಞರ ಸೈದ್ಧಾಂತಿಕ ಲೆಕ್ಕಾಚಾರಗಳ ಪ್ರಕಾರ, ಇದೇನೂ ಪೂರ್ಣವಾಗಿ ಅಲ್ಲಗೆಳೆಯುವಂತಹ ಕಲ್ಪನೆಯೂ ಅಲ್ಲ.

Endurance ಅಂತರಿಕ್ಷನೌಕೆಯಲ್ಲಿನ ವಿಜ್ಞಾನಿಗಳ ತಂಡವು, ವರ್ಮಹೋಲಿನ ಮೂಲಕ ಹಾಯ್ದು, ಗಾರ್ಗಾನ್ಚುವಾ ಕಪ್ಪುಕುಳಿಗೆ ಹತ್ತಿರವಿರುವ ಮಿಲ್ಲರ್ ಗ್ರಹವನ್ನು ತಲುಪಿ, ಅದರ ಸುತ್ತಾ ಇರುವ ಪ್ರಬಲವಾದ ಗುರುತ್ವದ ಕಾರಣದಿಂದ ಉತ್ಪನ್ನವಾಗುವ ವೈಪರೀತ್ಯಗಳಲ್ಲಿ ಸಿಲುಕುತ್ತಾರೆ. ಆ ಗ್ರಹದಲ್ಲಿ, ತೀವ್ರ ಗುರುತ್ವ ಕಾಲ ಹಿಗ್ಗುವಿಕೆಯ (Severe gravitational time dilation) ಅನುಭವವಾಗುತ್ತದೆ. ಆ ಗ್ರಹದ ಮೇಲ್ಮೈ ಮೇಲಿನ ಪ್ರತಿ ಒಂದು ಗಂಟೆ ಸಮಯವು, ಭೂಮಿಯಲ್ಲಿನ ಏಳು ವರ್ಷಗಳಿಗೆ ಸಮ. ಜೊತೆಗೆ ಅಲ್ಲಿನ ಆಳವಿಲ್ಲದ ಸಮುದ್ರದಲ್ಲಿ ಏಳುವ ಸುನಾಮಿಯಂತಹ ಬೃಹತ್ ಅಲೆಗಳು, ವಾಸಿಸಲು ಯೋಗ್ಯವಲ್ಲ ಎಂದು ತಿಳಿದು, ಅಲ್ಲಿಂದ ಹೊರಗೆ ಹಾರಬೇಕಾಗುತ್ತದೆ. ತಂಡದಲ್ಲಿನ ಒಬ್ಬ ವಿಜ್ಞಾನಿ ಅದಕ್ಕೆ ಬಲಿಯಾದ ನಂತರ, ಉಳಿದವರು ಅಲ್ಲಿಂದ ನಿರ್ಗಮಿಸಬೇಕಾಗುತ್ತದೆ. ವೈಪರೀತ್ಯದ ಸನ್ನಿವೇಶದಿಂದಾಗಿ, ಅವರು ಅಲ್ಲಿ ಕಳೆದ ಮೂರು ಗಂಟೆಗಳಿಗಿಂತ ಹೆಚ್ಚಿನ ಸಮಯವು, ಭೂಮಿಯ ಮೇಲಿನ ೨೩ ವರ್ಷಗಳಿಗೆ ಸಮನಾಗಿರುತ್ತದೆ. ಆ ೨೩ ವರ್ಷಗಳಲ್ಲಿ, ಕೂಪರನಿಗೆ ಅವನ ಮಗನಿಂದ ದೊರೆಯುವ ಒಂದು ಸಂದೇಶದ ಪ್ರಕಾರ, ಅವನ ಮಾವ ಸತ್ತುಹೋಗಿರುತ್ತಾನೆ, ಅವನ ಮಗಳು ನಾಸಾದಲ್ಲಿ ವಿಜ್ಞಾನಿಯಾಗಿ, ಪ್ರೋಫೆಸ್ಸರ್ ಬ್ರಾಂಡ್ ಜೊತೆಯಲ್ಲಿ ಸಂಶೋಧನೆ ನಡೆಸಿರುತ್ತಾಳೆ. ಆದರೆ, ಸಾಯುವ ಸಮಯದಲ್ಲಿ ಪ್ರೋಫೆಸ್ಸರ್ ಬ್ರಾಂಡ್, ಗುರುತ್ವದ ಬಲದಿಂದ ನಾಸಾದ ಬೃಹತ್ ಅಂತರಿಕ್ಷನೌಕೆಗಳನ್ನು ಹಾರಿಬಿಡುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ತಾನು ವಿಫಲನಾಗಿದ್ದೇನೆ ಎನ್ನುವ ಸಂಗತಿಯನ್ನು ಬಹಿರಂಗಪಡಿಸುತ್ತಾನೆ. ಆದರೆ ಮರ್ಫಿ ಕೂಪರ್, ಕಪ್ಪುಕುಳಿಯ ಏಕತೆಯ (Black hole’s singularity) ಬಗ್ಗೆ ಹೆಚ್ಚುವರಿ ದತ್ತಾಂಶ ದೊರಕಿದಲ್ಲಿ, ಪ್ರೋಫೆಸ್ಸರ್ ಬ್ರಾಂಡನ ಸಮೀಕರಣ ಯಶಸ್ವಿಯಾಗಬಹುದು ಎಂದು ನಿರ್ಧರಿಸುತ್ತಾಳೆ.

ಈ ಮಧ್ಯೆ, Endurance ನೌಕೆಯಲ್ಲಿ ಇಂಧನ ಕಡಿಮೆಯಾದ ಕಾರಣದಿಂದ, ಆ ತಂಡಕ್ಕೆ ಕೇವಲ ಇನ್ನೊಂದು ಗ್ರಹವನ್ನು ಮಾತ್ರಾ ಅನ್ವೇಷಿಸುವ ಸಾಧ್ಯತೆ ಇರುತ್ತದೆ. ವಿಜ್ಞಾನಿ, ಅಮೀಲಿಯಾ ಬ್ರಾಂಡ್ (Anne Hathaway) ಎಡ್ಮಂಡ್ಸ್ ಗ್ರಹವನ್ನು ಬೆಂಬಲಿಸಿದರೆ, ಕೂಪರ್, ಮಾನ್ ಗ್ರಹವನ್ನು ಅನ್ವೇಷಿಸುವ ನಿರ್ಧಾರವನ್ನು ಬೆಂಬಲಿಸುತ್ತಾರೆ. ಹಿಮಗಟ್ಟಿದ, ವಿಪರೀತ ಶೈತ್ಯ ವಾತಾವರಣದ ಮಾನ್ ಗ್ರಹದಲ್ಲಿ ನಡೆಯುವ ವಿದ್ಯಮಾನಗಳು, ತಂಡವನ್ನು ಮತ್ತಷ್ಟು ಘಾಸಿಗೊಳಿಸುತ್ತದೆ. ಅಲ್ಲಿ ನಡೆಯುವ ಅಪಘಾತಗಳಲ್ಲಿ, ಇಬ್ಬರು ವಿಜ್ಞಾನಿಗಳು ಸತ್ತು, ಕೇವಲ ಕೂಪರ್ ಮತ್ತು ಅಮೀಲಿಯಾ ಮಾತ್ರಾ ಬದುಕಿ ಉಳಿಯುತ್ತಾರೆ. ಇಂಧನವನ್ನು ಕಳೆದುಕೊಂಡ ಆ ನೌಕೆಯನ್ನು, ಕವೆಗೋಲು ಪರಿಣಾಮ ಎಂಬ (Slingshot effect) ತಂತ್ರವನ್ನು ಬಳಸಿ, ನೌಕೆಯನ್ನು ಕಪ್ಪುಕುಳಿಯ ಸುತ್ತಲೂ ಬಳಸಿ ನಡೆಸಿ, ಎಡ್ಮಂಡ್ ಗ್ರಹದತ್ತ ನಡೆಸಲು ನಿರ್ಧರಿಸುತ್ತಾರೆ. ಮುಂದೆ ಆಮೀಲಿಯಾ ಎಡ್ಮಂಡ್ ಗ್ರಹವನ್ನು ತಲುಪಿ ಅಲ್ಲಿ ತನ್ನ ವಾಸ್ತವ್ಯವನ್ನು ಹೂಡುವುದಲ್ಲದೇ, ಆ ಗ್ರಹವು ಮಾನವನ ವಾಸಕ್ಕೆ ಯೋಗ್ಯವೆಂದು ನಿರ್ಧರಿಸುತ್ತಾಳೆ. ಆದರೆ ಕೂಪರ್ ಮತ್ತು TARS, ನೌಕೆಯಿಂದ ಪ್ರತ್ಯೇಕಗೊಂಡು, ನೇರವಾಗಿ ಕಪ್ಪುಕುಳಿಯೊಳಕ್ಕಿಳಿದು, Singularity ಬಗ್ಗೆ ದತ್ತಾಂಶವನ್ನು ಸಂಗ್ರಹಿಸಿ, ಅಮೀಲಿಯಾಳನ್ನು ಕಪ್ಪುಕುಳಿಯ ಬಾವಿಯಿಂದ ಹೊರಕ್ಕೆ ಚಿಮ್ಮಿಸಿ ತಳ್ಳಿದಾಗ, ಕೂಪರ್ ನ್ಯೂಟನ್ನಿನ ಚಲನಶಾಸ್ತ್ರದ ನಿಯಮಗಳನ್ನು ಪಠಿಸುತ್ತಾ, ತನ್ನ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳುತ್ತಾನೆ. ಅವನು ಮತ್ತು TARS ಇಬ್ಬರೂ ಕಪ್ಪುಕುಳಿಯ ಒಳಗಿಂದ ಹೊರಕ್ಕೆ ಹೆಚ್ಚುವರಿ ಆಯಾಮದ (Extra dimensional tesseract) ಆರು ಮುಖದ ಘನವನ್ನು ಪ್ರವೇಶಿಸುತ್ತಾರೆ. ಈ ಆಯಾಮದಲ್ಲಿ, ರೇಡಿಯೋ ಸಂಕೇತಗಳನ್ನು ಬಳಸಿ, ಮೂರು ಅಯಾಮದ ಭೂಮಿಯೊಡನೆ ಸಂವಹನ ನಡೆಸುವುದು ಸಾಧ್ಯವಿಲ್ಲ. ಆದ್ದರಿಂದ ಕೂಪರ್ ತನ್ನ ಮಗಳು ಮರ್ಫಿಯೊಡನೆ ಸಂವಹಿಸಲು ಗುರುತ್ವದ ಅಲೆಗಳನ್ನು (Gravitational waves) ಬಳಸಬೇಕು.

ಇಲ್ಲಿ ಸಮಯವು ಒಂದು ಪ್ರಾದೇಶಿಕ ಆಯಾಮವಾಗಿ ಕಾಣಿಸಿಕೊಳ್ಳುತ್ತದೆ, ಹಾಗೂ ಅಲ್ಲಿನ ಹೆಬ್ಬಾಗಿಲುಗಳು ಅವನನ್ನು, ಅವನ ಮಗಳು ಮರ್ಫಿ, ಬಾಲ್ಯದಲ್ಲಿ ಮಲಗುವ ಕೋಣೆಯಲ್ಲಿ ಕಳೆದ ಅನೇಕ ಕ್ಷಣಗಳನ್ನು ಸಂದರ್ಶಿಸಲು ಆಸ್ಪದವೀಯುತ್ತದೆ. ಗುರುತ್ವದ ಅಲೆಗಳನ್ನು ಬಳಸಿಕೊಂಡು, ಅವನು ತನ್ನ ಹತ್ತಿರದಲ್ಲೇ ಇದ್ದ TARS ರೋಬೋಟಿನ ಸಹಾಯದಿಂದ, ಕಪ್ಪುಕುಳಿಯ ಏಕತೆಯ ಬಗ್ಗೆ ಸಂಗ್ರಹಿಸಿದ ದತ್ತಾಂಶಗಳನ್ನು, ಮೋರ್ಸ್ ಸಂಕೇತ ಲಿಪಿಯ ಮೂಲಕ, ಈಗ ಪ್ರೌಢ ಮಹಿಳೆಯಾಗಿದ್ದ ತನ್ನ ಮಗಳು ಮರ್ಫಿಯ ಕೈಯ್ಯಲ್ಲಿರುವ ಕೈಗಡಿಯಾರದ ಸೆಕೆಂಡಿನ ಮುಳ್ಳುಗಳ ಲಯಬದ್ಧ ಶಬ್ದಗಳ ಮಾಧ್ಯಮದಲ್ಲಿ ರವಾನಿಸುತ್ತಾನೆ. ಅದರ ಸಹಾಯದಿಂದ ಅವಳು, ಅಪೂರ್ಣವಾಗಿದ್ದ ಪ್ರೋಫೆಸ್ಸರ್ ಬ್ರಾಂಡನ ಸಮೀಕರಣವನ್ನು ಬಿಡಿಸಿ, ಭೂಮಿಯಲ್ಲಿನ ಮಾನವರನ್ನು ಅಲ್ಲಿಂದ ಹೊರಕ್ಕೆ ವರ್ಗಾಯಿಸಲು ಸಹಾಯಮಾಡುತ್ತಾಳೆ. ಅನೇಕ ವರ್ಷಗಳ ನಂತರ ಕೂಪರ್, ಶನಿಗ್ರಹದ ಬಳಿಯಿರುವ ನಾಸಾ ಸಂಸ್ಥೆಯ ಒಂದು ಅಂತರಿಕ್ಷ ನಿಲ್ದಾಣದೊಳಗೆ ಎಚ್ಚರಗೊಳ್ಳುತ್ತಾನೆ. ಮುಂದೆ ಅಲ್ಲಿಯೇ ಇರುವ, ಈಗ ವೃದ್ಧೆಯಾದ ತನ್ನ ಮಗಳು ಮರ್ಫಿಯನ್ನು ಭೇಟಿಯಾಗುತ್ತಾನೆ. ಅವಳು ತನ್ನ ಸಂಶೋಧನೆಯ ಮೂಲಕ ಮಾನವ ಕುಲದ ವಲಸೆಗೆ ಕಾರಣವಾಗಿರುತ್ತಾಳೆ. ಅವಳ ಸಲಹೆಯ ಮೇರೆಗೆ, ಕೂಪರ್ ಮತ್ತು TARS, ಅಮಿಲಿಯಾಳನ್ನು ಹುಡುಕಲು ಮತ್ತೊಮ್ಮೆ ಎಡ್ಮಂಡ್ ಗ್ರಹದತ್ತ ಪ್ರಯಾಣ ಬೆಳಸುತ್ತಾರೆ ಎನ್ನುವಲ್ಲಿ ಚಲನಚಿತ್ರವನ್ನು ಅಂತ್ಯಗೊಳಿಸಲಾಗಿದೆ.

ಈ ಚಿತ್ರದ ನಿರ್ದೇಶಕ ಕ್ರಿಸ್ಟೋಫರ್ ನೋಲನ್, ತನ್ನ ವೈವಿಧ್ಯಮಯ ಚಿತ್ರಗಳಿಗೆ ಪ್ರಸಿದ್ಧನಾದ ಪ್ರತಿಭಾವಂತ ವ್ಯಕ್ತಿ. ಈ ಚಿತ್ರದ ತಯಾರಿಕೆಯಲ್ಲಿ, ಇದರ ಕಥೆ ಮತ್ತು ಹಸ್ತಪ್ರತಿಯ ತಯಾರಿಕೆಯಲ್ಲಿ, ಚಿತ್ರದಲ್ಲಿ ಅಳವಡಿಸಿರುವ ಪ್ರತಿಯೊಂದು ವೈಜ್ಞಾನಿಕ ವಿಷಯದ ಅಳವಡಿಕೆಯಲ್ಲೂ, ಒಬ್ಬ ತಜ್ಞ ಖಭೌತಶಾಸ್ತ್ರ ಸಂಶೋಧಕನ ಸಲಹೆ ತುಂಬಿದೆ ಎನ್ನುವುದು ಈ ಚಿತ್ರವನ್ನು ನೋಡಿದಾಗ ತಿಳಿಯುತ್ತದೆ. ಇದರಲ್ಲಿರುವ ಅನೇಕ ಅಂಶಗಳು, ಇನ್ನೂ ಸೈದ್ಧಾಂತಿಕವಾದರೂ, ಅದನ್ನು ತಪ್ಪೆಂದು ಅಲ್ಲಗೆಳೆಯುವಂತಿಲ್ಲ. ಸಾಪೇಕ್ಷತಾ ಸಿದ್ಧಾಂತದಲ್ಲಿ, ಐನಸ್ಟೈನನು ಪ್ರತಿಪಾದಿಸಿರುವ, ವ್ಯೋಮಸಮಯದ ವಕ್ರತೆ, ವರ್ಮಹೋಲ್, ಕಪ್ಪುಕುಳಿಗಳು (Space time warping, Wormhole, Black holes) ಇವೆಲ್ಲವನ್ನೂ ಆದಷ್ಟೂ ನಿಖರವಾಗಿ, ಚಿತ್ರದ ವೈಜ್ಞಾನಿಕ ಸಲಹೆಗಾರ, ಪ್ರೋಫೆಸ್ಸರ್  ಕಿಪ್ ಥಾರ್ನ್ ಅವರು ನಿರೂಪಿಸಿದ್ದಾರೆ. ಇವರ ಜೊತೆಗೆ, ನಾಸಾ ಸಂಸ್ಥೆಯ ಅನೇಕ ವಿಜ್ಞಾನಿಗಳು, ಕ್ಯಾಲಟೆಕ್ ಸಂಸ್ಥೆಯ ಖಗೋಳಶಾಸ್ತ್ರಜ್ಞರು, ಹಾಗೂ ಸಿದ್ಧಾಂತಿಗಳ ಒಂದು ತಂಡವೇ ಕೆಲಸ ಮಾಡಿದೆ. ಈ ಚಿತ್ರದಲ್ಲಿನ ಅತಿ ಮುಖ್ಯ ಭಾಗವಾದ, ದೃಶ್ಯ ಪ್ರಭಾವಗಳನ್ನು, ಲಂಡನ್ನಿನಲ್ಲಿರುವ ಅತ್ಯುತ್ತಮ ಕಂಪನಿ Double negative ನಲ್ಲಿ ಕೆಲಸ ಮಾಡುವ ವೃತ್ತಿಪರರು ಅದ್ಭುತ ರೀತಿಯಲ್ಲಿ ಅಳವಡಿಸಿದ್ದಾರೆ. ಚಿತ್ರದಲ್ಲಿ ತೋರಿಸಿರುವ, ವರ್ಮಹೋಲ್ ದೃಶ್ಯ, ಕಪ್ಪುಕುಳಿಯ ಪ್ರಭಾವದ ಸನ್ನಿವೇಶಗಳು, ಸುನಾಮಿ ಅಲೆಗಳ ಸಂದರ್ಭ, ಮಾನ್ ಗ್ರಹದ ವಿಪರೀತ ಶೈತ್ಯ-ವಾತಾವರಣದ ದೃಶ್ಯಗಳು, ಕಪ್ಪುಕುಳಿಯೊಳಗಿನ ಹೆಚ್ಚುವರಿ ಆಯಾಮದ ಸನ್ನಿವೇಶ, ಹೀಗೆ ಹಲವಾರು ದೃಶ್ಯ ಪ್ರಭಾವಗಳು, ಪ್ರೇಕ್ಷಕರನ್ನು ಸಂಪೂರ್ಣವಾಗಿ ಅಂತರಿಕ್ಷದಲ್ಲಿರುವಂತಹ ಭಾವನೆಯನ್ನೇ ಮೂಡಿಸುವುದರಲ್ಲಿ ಯಶಸ್ವಿಯಾಗಿದೆ. ಅಂತರಿಕ್ಷನೌಕೆ, ವ್ಯೋಮದಲ್ಲಿ ಚಲಿಸುವಾಗ ನೀಡಿರುವ ಒಂದು ವಿಶಿಷ್ಟವಾದ ಹಿನ್ನೆಲೆ ಸಂಗೀತವಂತೂ ಅತ್ಯಂತ ಪ್ರಭಾವಶಾಲಿಯಾಗಿದೆ. ನಿರ್ದೇಶಕ ನೋಲನ್ ಬಳಸಿರುವ 70MM ಕ್ಯಾಮೆರಾ ಮತ್ತು ಛಾಯಾಗ್ರಹಣ, ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತದೆ. ನೋಲನ್ ಒಬ್ಬ ಪರಿಪೂರ್ಣತಾವಾದಿ ನಿರ್ದೇಶಕ, ಚಿತ್ರದ ಪ್ರತಿ ಮೂರು ನಿಮಿಷದ ಚಿತ್ರಣಕ್ಕೂ, ಸುಮಾರು ಹತ್ತು ಗಂಟೆಗಳ ಕಾಲ ಚಿತ್ರೀಕರಣ ನಡೆಸುತ್ತಾರೆ. ಪ್ರತಿ ದೃಶ್ಯವನ್ನೂ, ಕಡಿಮೆ ಎಂದರೆ ೮-೧೦ ಬಾರಿ ವಿವಿಧ ಕೋನಗಳಲ್ಲಿ ಸತತವಾಗಿ ಚಿತ್ರೀಕರಿಸುತ್ತಾರೆ ಎನ್ನುವ ಸಂಗತಿಯನ್ನು, ಕಿಪ್ ಥಾರ್ನ್ ನಮ್ಮೊಂದಿಗೆ ನಡೆಸಿದ ಮಾತುಕತೆಯ ಸಮಯದಲ್ಲಿ ವಿವರಿಸಿ ಹೇಳಿದರು.

Professor Kip Thorne
Professor Kip Thorne Cc:B.S.Sathyaprakash

ಇದೊಂದು ವಿಜ್ಞಾನ ಪ್ರಧಾನವಾದ ಕಥಾವಸ್ತುವುಳ್ಳ ಚಿತ್ರವಾದರೂ, ಇಲ್ಲಿ ಒಂದು ಕುಟುಂಬದಲ್ಲಿನ ಸದಸ್ಯರ ನಡುವಿರುವ ಒಂದು ನಿಕಟ ಸಂಬಂಧವನ್ನು, ನಿರ್ದೇಶಕ ನೋಲನ್ ಅನೇಕ ಸನ್ನಿವೇಶಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಹೊರತಂದಿದ್ದಾರೆ. ವಿಜ್ಞಾನಿಗಳು ಕೇವಲ ಮನುಶ್ಯರೇ, ಅವರ ಹೃದಯಗಳೂ ಸಾಮಾನ್ಯರಂತೇ ಮಿಡಿಯುತ್ತದೆ ಎನ್ನುವ ಅಂಶವನ್ನು, ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಅಂತ್ಯದಲ್ಲಿ, ಮಾನವ ಸಂತತಿಯ ಉಳಿಯುವಿಕೆ ಎಲ್ಲಕ್ಕಿಂತಲೂ ಪ್ರಮುಖವಾದ ವಿಷಯ, ವಿಜ್ಞಾನಿಗಳು ಅದನ್ನು ಸಾಧಿಸುವ ಹಾದಿಯಲ್ಲಿ, ಮಕ್ಕಳು ಮತ್ತು ಕುಟುಂಬವನ್ನು ಪಕ್ಕಕ್ಕೆ ಸರಿಸಿ, ತಮ್ಮ ಕಾರ್ಯವನ್ನು ಸಾಧಿಸಲು ಮುನ್ನಡೆಯುತ್ತಾರೆ ಎನ್ನುವ ವಾಸ್ತವ ಸಂಗತಿಯನ್ನೂ ನಮ್ಮ ಮುಂದಿಡುತ್ತಾರೆ. ಚಿತ್ರದಲ್ಲಿ ತೋರಿಸುವ, ಮಾನ್ ಎಂಬ ಗ್ರಹದ ವೈಪರೀತ್ಯ ಶೀತವನ್ನು ತೋರಿಸಲು, ಐಸಲ್ಯಾಂಡಿನಲ್ಲಿರುವ ಹಿಮಗಟ್ಟಿದ ಪ್ರದೇಶಗಳಲ್ಲಿ ಚಿತ್ರಣ ನಡೆಸಿದ್ದಾರೆ. ಈ ಜಾಗವಂತೂ ಮೈನವಿರೇಳಿಸುವಂತಿದೆ.

ಚಿತ್ರದ ನಟನಟಿಯರ ಅಭಿನಯವೂ ನೈಜವಾಗಿದ್ದು, ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕೂಪರ್ ಪಾತ್ರದಲ್ಲಿ ಮ್ಯಾಥ್ಯೂ ಮ್ಯಾಕನಾಹಿ, ಅಮೀಲಿಯಾ ಪಾತ್ರದ ನಟಿ ಆನ್ ಹ್ಯಾಥವೇ, ಪ್ರೋಫೆಸ್ಸರ್  ಬ್ರಾಂಡ್ ಪಾತ್ರದ ಮೈಕೆಲ್ ಕೇಯ್ನ್, ಕೂಪರ್ ಮಗಳು ಮರ್ಫ್ ಪ್ರೌಢಪಾತ್ರದಲ್ಲಿ, ಜೆಸ್ಸಿಕಾ ಚಾಸ್ಟನ್, ಅದೇ ಪಾತ್ರದ ಬಾಲ ನಟಿ, ಮೆಕಂನ್ಜಿ ಫಯ್, ಮತ್ತು ಇನ್ನಿತರ ನಟವರ್ಗ ತಮ್ಮ ಅಭಿನಯದಲ್ಲಿ ಮಿಂಚಿದ್ದಾರೆ. ಭೌತಶಾಸ್ತ್ರ ಮತ್ತು ಖಭೌತಶಾಸ್ತ್ರವನ್ನು ಬಲ್ಲವರಿಗೆ, ಈ ಚಿತ್ರವು ನಿಜಕ್ಕೂ ಅನನ್ಯ ಅನುಭವ. ಇತರ ಪ್ರೇಕ್ಷಕವರ್ಗಕ್ಕೆ, ಮೈಝುಮ್ಮೆನಿಸುವ ಅನುಭವವೆಂದು ನನ್ನ ಅನಿಸಿಕೆ. ಮಾನವ ಶುರುವಿನಿಂದಲೂ, ಆಕಾಶ, ಗ್ರಹಗಳು, ನಕ್ಷತ್ರಗಳು, ಸೌರಮಂಡಲ, ಧೂಮಕೇತು, ಉಲ್ಕಾಪಾತಗಳು, ಕ್ಷುದ್ರಗ್ರಹಗಳು, ಹೀಗೆ ಹಲವು ಹತ್ತು ಆಕಾಶಕಾಯಗಳ ಬಗ್ಗೆ ತನ್ನ ಕುತೂಹಲದಿಂದ ಜ್ಞಾನವನ್ನು ಬೆಳೆಸಿಕೊಂಡೇ ಬಂದಿದ್ದಾನೆ. ಕಳೆದ ನೂರು ವರ್ಷಗಳಲ್ಲಿ, ಈ ವಿಜ್ಞಾನಗಳಲ್ಲಿ ಅವನು ಸಾಧಿಸಿರುವ ಅಪಾರ ಪ್ರಗತಿ ನಿಜಕ್ಕೂ ತಲೆಬಾಗುವಂತಹುದು. ಇತ್ತೀಚಿಗೆ ನಡೆಸುತ್ತಿರುವ ಹಲವಾರು ಪರಮಾವಧಿಯ ಪ್ರಯೋಗಗಳು, ದೂರದರ್ಶಕದ ವೀಕ್ಷಣೆಗಳು, ಅಂತರಿಕ್ಷಯಾನಗಳು, ದೂರಗ್ರಹಗಳ ಅನ್ವೇಷಣಾ ಕಾರ್ಯಕ್ರಮಗಳು ಹೀಗೆ ಹಲವು ಹತ್ತು ವೈಜ್ಞಾನಿಕ ಬೆಳವಣಿಗೆಗಳು, ಅವನ ಬುದ್ಧಿಮತ್ತೆಗೆ ಕಲಶಪ್ರಾಯವಾಗಿದೆ. ಅಂತರಿಕ್ಷಯಾನ ಈಗ ಒಂದು ವಾಸ್ತವ ಸಂಗತಿ. ಅದೇನೂ ಕಲ್ಪನೆಯಾಗಿ ಉಳಿದಿಲ್ಲ. ಚಂದ್ರನ ಮೇಲೆ ಕಾಲಿರಿಸಿದ ಮಾನವ, ಅಲ್ಲಿಂದ ಮುಂದಕ್ಕೂ ಹಾರಿ, ನಮ್ಮ ತಾರಾಗಣವನ್ನು ದಾಟಿ, ದೂರಕ್ಕೆ ನಡೆಯುತ್ತಿದ್ದಾನೆ. ಭೂಮಿಯ ಮೇಲೆ ಪ್ರಕೃತಿ ಸಹಜವಾದ, ಮತ್ತು ಹಲವು ಮಾನವ ಚಟುವಟಿಕೆಗಳ ಕಾರಣದಿಂದ ಸಂಭವಿಸುತ್ತಿರುವ ಬದಲಾವಣೆಗಳು, ನಮ್ಮನ್ನು ಸಧ್ಯದಲ್ಲೇ ತೀವ್ರವಾಗಿ ಪರೀಕ್ಷೆಗೆ ಒಳಪಡಿಸಲಿವೆ. ಭವಿಶ್ಯದಲ್ಲಿ, ನಮ್ಮ ಸಂತತಿಯನ್ನು ಉಳಿಸಬೇಕಾದಲ್ಲಿ, ಮಾನವ ಇತರ ತಾರಾಗಣಗಳಲ್ಲಿರುವ ವಾಸಯೋಗ್ಯವಾದ ಗ್ರಹಗಳನ್ನು ಹುಡುಕಿ, ಅಲ್ಲಿಗೆ ಸ್ಥಳಾಂತರವಾಗಬೇಕಾದ ಸಮಯವೇನೂ ದೂರವಿಲ್ಲ.

ನಿರ್ದೇಶಕ ಕ್ರಿಸ್ಟೋಫರ್ ನೋಲನ್, ತಮ್ಮ ಈ ಚಿತ್ರದಲ್ಲಿ ಅಂತಹುದೇ ಸನ್ನಿವೇಶವನ್ನು, ವೈಜ್ಞಾನಿಕ ನಿಖರತೆಯೊಂದಿಗೆ ಪ್ರೇಕ್ಷಕರ ಮನಗೆಲ್ಲಲು ಒಂದು ಉತ್ತಮ ಪ್ರಯತ್ನ ಮಾಡಿದ್ದಾರೆ. ಈ ವರ್ಷದ ಅಕ್ಯಾಡೆಮಿ ಪ್ರಶಸ್ತಿಗಳಲ್ಲಿ, ಹಲವಾರು ಪ್ರಶಸ್ತಿಗಳು ಈ ಚಿತ್ರಕ್ಕೆ ಸಂದರೆ ಆಶ್ಚರ್ಯವೇನೂ ಇಲ್ಲ! ಕುಟುಂಬದವರೆಲ್ಲಾ ಒಟ್ಟಿಗೆ ನೋಡಬಹುದಾದ, ಒಂದು ಉತ್ಕೃಷ್ಟ ತಂತ್ರಜ್ಞಾನವನ್ನಳವಡಿಸಿರುವ ಚಲನಚಿತ್ರವಾಗಿದೆ. ಈ ಚಿತ್ರದ ಕಥಾವಸ್ತುವು ಸಂಕೀರ್ಣವೆನಿಸಿದರೂ, ಅದನ್ನು ಎಚ್ಚರಿಕೆಯಿಂದ, ಬಹಳ ಕೌಶಲ್ಯವಾದ ರೀತಿಯಲ್ಲಿ, ಖಭೌತಶಾಸ್ತ್ರದ ಹಲವು ಪ್ರಮುಖ ಸೈದ್ಧಾಂತಿಕ ನಿಯಮಗಳೊಡನೆ ಹೆಣೆದು, ಒಂದು ಉತ್ತಮ ಕಾಲ್ಪನಿಕ-ವಿಜ್ಞಾನದ ಚಲನಚಿತ್ರವನ್ನಾಗಿ ಪರಿವರ್ತಿಸಿದ್ದಾರೆ ಎನ್ನಬಹುದು.

9 thoughts on “ವಿಜ್ಞಾನ ಮತ್ತು ಕಾಲ್ಪನಿಕ-ವಿಜ್ಞಾನದ ನಡುವಣ ಅನ್ಯೋನ್ಯತೆಯ ಪ್ರತೀಕವೆನಿಸಿದ ಒಂದು ಅದ್ಭುತ ಚಲನಚಿತ್ರ-“Interstellar”! — ಉಮಾ ವೆಂಕಟೇಶ್

  1. ಸುದೀರ್ಘ ಹಾಗೂ ಸುಸಂಬದ್ಧ ವಿಮರ್ಷೆ. ಚಿತ್ರ ಇನ್ನೂ ನೋಡಿಲ್ಲ. ಹಾಗಾಗಿ ಕೆಲವು ವಿಚಾರಗಳು ಸ್ಪಷ್ಟ ಆಗಿಲ್ಲ.
    ಆಸಕ್ತಿಯನ್ನು ಹೆಚ್ಚಿಸಿದೆ.

    Like

    • ಸುದರ್ಶನ್ ನಿಮಗೆ ಭೌತಶಾಸ್ತ್ರದಲ್ಲಿ ಆಸಕ್ತಿ ಇದೆ ಎಂದು ನೀವು ಹೇಳಿದೆ ನೆನಪು. ಇದೊಂದು ಗಂಭೀರವಾದ ಚಲನಚಿತ್ರ. ನಿರ್ದೇಶಕ ಚಿತ್ರದ ವಸ್ತುವನ್ನು ಎಲ್ಲಿಯೂ ನಿಸ್ಸಾರಗೊಳಿಸಿಲ್ಲ. ನಿಮಗೆ ಖಂಡೀತಾ ಇಷ್ಟವಾಗುತ್ತದೆ.
      ಉಮಾ

      Like

  2. ಆತ್ಮೀಯ ಉಮಾ ಅವರೆ
    ಖಭೌತ ಹಾಗು ಖಗೋಳಶಾಸ್ತ್ರದ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ ಇಲ್ಲ. ನನಗೆ ಗೆಳೆಯರ ಒತ್ತಾಯದಿಂದಾಗಿ Sheffield IMAX ನಲ್ಲಿ Interstellar ಚಿತ್ರವನ್ನು ನೋಡಿ ಬೆರಗಾದೆ! ಮೊದಲನೆ ಬಾರಿ ನೊಡಿದಾಗ ಕಥೆಯ ಹೊರನೋಟದ ಅರಿವಾದರೂ scientific ಮಾಹಿತಿಗಳನ್ನು ಜೀರ್ಣಿಸಿಕೋಳ್ಳಲು ಸ್ವಲ್ಪ ಕಷ್ಟವೆನಿಸಿತು. ಮೊದಲಬಾರಿಗೆ ಬಹಳಷ್ಟು ಆಸಕ್ತಿಯನ್ನು ಕೆರಳಿಸಿದ ಈ ಚಿತ್ರವನ್ನು ನನ್ನ ಮಗಳ ಜೊತೆ ಇನ್ನೊಮ್ಮೆ ನೋಡುವ ಅವಕಾಶವನ್ನು ಗಿಟ್ಟಿಸಿಕೊಂಡು ಎರಡನೆ ಬಾರಿ ನೋಡಿದ ಮೇಲೆ ಬಹಳಷ್ಟು ಗ್ರಹಿಸಲು ಸಾಧ್ಯವಾಯಿತು. ನಿಮ್ಮ ಚಿತ್ರವಿಮರ್ಶೆಯನ್ನು ಓದಿದ ಮೇಲೆ ಸೂಕ್ಷ್ಮವಿಚಾರಗಳು ಹಾಗು ಕಲ್ಪನೆಗೆ ಒದಗದಿರುವ ಕೆಲವು ವಿಚಾರಗಳ ಅರಿವಾಯಿತು. ತಾಂತ್ರಿಕ ದೃಷ್ಟ್ಟಿಯಿಂದ ಬಹಳ ಉತ್ತಮವಾದ ಈ ಚಿತ್ರವನ್ನು IMAX ಸಿನಿಮಾದಲ್ಲಿ ನೋಡುವುದು ಒಂದು ಅಪೂರ್ವ ಅನುಭವ. ನಾನು ಹಿಂದೆ ನೋಡಿದ Gravity ಚಿತ್ರಕ್ಕಿಂತ ಉತ್ತಮವಾದ ಚಿತ್ರವೆಂದು ನನ್ನ ಅನಿಸಿಕೆ.
    ಭೂಮಿಯಿಂದ ದೂರವಾಗಿ ಯಾವುದೊ ಗ್ರಹದಲ್ಲಿ ಕಾಲಿಟ್ಟ ಮಾನವನ ಮೂಲಭೂತ ಗುಣಗಳಾದ ಪ್ರೀತಿ, ದ್ವೇಷ, ಅಸೂಯೆ ಬದಲಾಗುವುದಿಲ್ಲವೆಂಬ ವಿಚಾರ ಕೂಪರ್ ಮತ್ತು ಡಾ. ಮಾನ್ ನಡುವಿನ ಹಗೆತನ ಹಾಗು ಹೊಡೆದಾಟದಲ್ಲಿ ಕಾಣಬಹುದು. ಹಾಗೆಯೆ ಪ್ರೀತಿಗಿರುವ ಶಕ್ತಿಯನ್ನು ಬರಿ ವ್ಯಕ್ತಿ ಸಂಭಂದ ಭಾವನೆಗಳಾಗದೆ, Gravity ಹಾಗೂ Time ಗಳನ್ನು ಮೀರಿ ಅದ್ದಕ್ಕೆ ತನ್ನದೆ ಒಂದು ಅಯಾಮವಿರುವುದರ ಬಗ್ಗೆ ಅಮಿಲಿಯಾ ತನ್ನ instinct ನಂಬಿಕೊಂಡು ತನ್ನ ಪ್ರಯಾಣದ ಗುರಿಗೆ ಬದ್ಧಳಾಗುವ ಸನ್ನಿವೇಶದಲ್ಲಿ ಹಾಗೂ ಅವಳ ಆಲೋಚನೆಗಳಲ್ಲಿ ಗೋಚರಿಸುತ್ತದೆ. ನುರಿತ ಪೈಲೇಟ್ ಕೂಪರ್ ಹಾಗೂ ತಾಯಿಯನ್ನು ಕಳೆದುಕೊಂಡ ಮಗಳು ಮರ್ಫ್ ನಡುವಿನ ಪ್ರೀತಿ, ಸಲಿಗೆ ಹಾಗು ಅನ್ಯೋನ್ಯತೆ ಕೆಲವು ಸನ್ನಿವೇಶಗಳಲ್ಲಿ ಬಹಳ ಹೃದಯ ಸ್ಪರ್ಶಿಯಾಗಿದೆ. ಹೀಗೆ ಬರಿಯ futuristic science fiction, alien fights ಇತ್ಯಾದಿಗಳನ್ನು ಬದಿಗೊತ್ತಿ, ಒಂದು ಉತ್ತಮ ಕಲಾತ್ಮಕವಾದ ಚಿತ್ರವನ್ನು ನೋಲನ್ ಅವರು ನೀಡಿರುವುದಲ್ಲದೆ ಸ್ಪಿಲ್ ಬರ್ಗ್ ಗುಣಮಟ್ಟಕ್ಕೆ ತೆಗೆದು ಕೊಂಡು ಹೋಗಿರುವುದನ್ನು ಗಮನಿಸಬಹುದು
    ಜನಸಾಮಾನ್ಯರ ಕಲ್ಪನೆಗೆ ಈ ಚಿತ್ರದ ಕೆಲವು ಸೂಕ್ಷ್ಮ ಅಂಶಗಳು ಒದಗುವುದು ಕಷ್ಟ. ನಿಮ್ಮ ಈ ವಿಮರ್ಶೆ, ಚಿತ್ರವನ್ನು ನೋಡಿದವರಿಗೂ, ಇನ್ನು ನೋಡಬೇಕೆಂಬ ಉದ್ದೇಶ ಉಳ್ಳವರಿಗೂ ಒಂದು ಒಳ್ಳೆ ಪರಿಚಯ ಹಾಗು ಉತ್ತಮ ಕೈಪಿಡಿ. ಇದನ್ನು ಕನ್ನಡದ ಇತರ ದೈನಂದಿಕ ಪತ್ರಿಕೆಯಲ್ಲಿ ಪ್ರಕಟಿಸುವ ಪ್ರಯತ್ನ ತಾವು ಕೈಗೊಂಡರೆ ಇನ್ನೂ ಹೆಚ್ಚಿನ ಜನರನ್ನು ತಲುಪಬಹುದು.
    ಕೊನೆಯದಾಗಿ ಖಭೌತಶಾಸ್ತ್ರದ scientist ಹಾಗೂ ಪ್ರಾಧ್ಯಾಪಕರ ಪತ್ನಿಯಾದ ತಮ್ಮಿಂದ ಈ ಉತ್ತಮ ವಿಮರ್ಶೆ ಬಂದಿರುವುದು ಸೂಕ್ತ. ಚಿತ್ರದ ನಿರ್ಮಾಪಕ ಪ್ರಖ್ಯಾತ scientist ಪ್ರೊಫ಼ೆಸರ್ ಕಿಪ್ ಥಾರ್ನ್ ಒಡನಾಟ, ಭೇಟಿ ಮತ್ತು ಅವರೂಡನೆ ಚರ್ಚಿಸುವ ಅವಕಾಶ ನಿಮ್ಮ ವಿಮರ್ಶೆಗೆ ಹೆಚ್ಚಿನ ಮೆರುಗನ್ನು ಮತ್ತು ಮಹತ್ವವನ್ನು ತಂದು ಕೊಟ್ಟಿದೆ. ನಾನು ಈ ಚಿತ್ರದ ವಿಮರ್ಶೆಯನ್ನು ಈ ಹಿಂದೆ ನಿರೀಕ್ಷಿಸಿದ್ದು, ಜಾಲಜಗುಲಿಯಲ್ಲಿ ಪ್ರಕಟವಾದ ಕೂಡಲೆ ಅತ್ಯಂತ ಆಸಕ್ತಿಯಿಂದ ಒದಿ ಮುಗಿಸಿದೆ. ಇದರಲ್ಲಿ ಡಾ. ಸತ್ಯ ಪ್ರಕಾಶ್ ಅವರ ಮಾರ್ಗದರ್ಶನ ಹಾಗು ಸಲಹೆ ಅಡಗಿರಬಹುದು. ನಿಮಗೂ ಹಾಗು ಸತ್ಯ ಅವರಿಗೂ ಧನ್ಯವಾದಗಳು.
    ಶಿವಪ್ರಸಾದ್

    Like

    • ನಮಸ್ಕಾರ ಶಿವಪ್ರಸಾದ್ ಅವರೆ. ನಿಮ್ಮ ಹಿನ್ನುಣಿಕೆಗೆ ಬಹಳ ಧನ್ಯವಾದಗಳು. ನೀವು ಈ ಚಿತ್ರವನ್ನು ಎರಡು ಬಾರಿ ನೋಡಿದ್ದೀರಿ ಎಂದು ತಿಳಿದು ನಿಜಕ್ಕೂ ಆಶ್ಚರ್ಯ ಮತ್ತು ಸಂತೋಷಗಳೆರಡೂ ಒಟ್ಟಿಗೆ ಆದವು. ಈ ಚಿತ್ರವನ್ನು ೮ ವರ್ಷಗಳಿಂದಲೂ ನಿರೀಕ್ಷಿಸುತ್ತಿದ್ದ ನಮಗೆ, ಮೊದಲ ಬಾರಿ ನೋಡಿದಾಗ , ಮತ್ತೊಮ್ಮೆ ನೋಡಲೇ ಬೇಕೆಂಬ ಅಭಿಲಾಷೆ ಉಂಟಾಯಿತು. ನೀವು ಬರೆದಿರುವಂತೆ, ಈ ಚಿತ್ರ ಕೇವಲ ಒಂದು ಸಾಧಾರಣವಾದ ಕಾಲ್ಪನಿಕ -ವೈಜ್ಞಾನಿಕ ಕಥೆಯಲ್ಲ. ಇಲ್ಲಿ ವಿಜ್ಞಾನವನ್ನು ಮನುಷ್ಯನ ಮಧುರ ಬಾಂಧವ್ಯ ಹಾಗೂ ಭಾವನೆಗಳೊಡನೆ ಸೊಗಸಾಗಿ ಹೆಣೆದಿದ್ದಾರೆ. ನುರಿತ ತಜ್ಞ ನಿರ್ದೇಶಕ ನೋಲನ್, ಮರ್ಪ್ಹ್ ಮತ್ತು ಕೂಪರ್ ನಡುವಿನ ತಂದೆ ಮಗಳ ಮಧುರ ಸಂಬಂಧವನ್ನು ಅತ್ಯಂತ ಸೂಕ್ಷ್ಮತೆಯಿಂದ ಹೊರತಂದಿದ್ದಾರೆ. ಈ ಚಿತ್ರದ ವಿಮರ್ಶೆಯನ್ನು ಬರೆಯುವ ನಿರ್ಧಾರವನ್ನು, ನಾನು ಮತ್ತು ಸತ್ಯ ಬಹಳ ಹಿಂದೆಯೇ ಮಾಡಿದ್ದೆವು. ಚಿತ್ರವನ್ನು ಪ್ರೊಫೆಸರ್ ಕಿಪ್ ಥಾರ್ನ್ ಅವರ ಸಲಹೆಯಂತೆ, ಯೂನಿವರ್ಸಲ್ ಸ್ಟೂಡಿಯೋದಲ್ಲಿರುವ ಸಿನಿಮಾ ಮಂದಿರದಲ್ಲಿ ಎರಡನೆಯ ಬಾರಿ ನೋಡುವ ಉದ್ದೇಶವೂ ಅದೇ ಇತ್ತು. ಈ ಚಿತ್ರದಲ್ಲಿ ಅಳವಡಿಸಿರುವ, ಖಭೌತ-ವಿಜ್ಞಾನದ ಬಗ್ಗೆ ತಜ್ಞ ಸಲಹೆ ಮಾರ್ಗದರ್ಶನ ಸತ್ಯ ಅವರದ್ದು. ಹಾಗಾಗಿ ಇದರ ಮನ್ನಣೆ ಅವರಿಗೆ ಸಲ್ಲಬೇಕು. ಇದನ್ನು ಕನ್ನಡ ವೃತ್ತಪತ್ರಿಕೆಗೆ ಕಳಿಸಲು ಪ್ರಯತ್ನಿಸುತ್ತೇನೆ. ಮತ್ತೊಮ್ಮೆ ನಿಮ್ಮ ಮೆಚ್ಚುಗೆಯ ನುಡಿಗಳಿಗೆ ನನ್ನ ಧನ್ಯವಾದಗಳು.
      ಉಮಾ

      Like

  3. Kip Thorne has written a book called “Science of Interstellar” (available on Amazon). The book is very readable and explains the intricacies behind the story, what is currently known to be true and what is taken from speculative physical theories.

    Like

  4. ನಾನು ಮೊನ್ನೆ‍ತಾನೇ ಎಸ್ ಎಲ್ ಭೈರಪ್ಪನವರ ’ಯಾನ’ ಕಾದಂಬರಿಯ ಪುಸ್ತಕವನ್ನು ಕೊಂಡಿದ್ದೇನೆ. ಈಗ ಇಪ್ಪತ್ತೈದು ಪುಟಗಳಷ್ಟೇ ಓದಿದ್ದೇನೆ. ಪ್ರಾರಂಭದಲ್ಲಿ ಯಾನ ಮತ್ತು ಇಂಟರ್‌ಸ್ಟೆಲ್ಲಾರ್ ಎರಡೂ ಒಂದೇ ತರಹ ಇದೆ. ಯಾನವನ್ನು ನಾನು ಓದಿಮುಗಿಸಿದಮೇಲೇ ಈ ಚಲನಚಿತ್ರದ ಬಗ್ಗೆ ನನ್ನ ಅಭಿಪ್ರಾಯಯನ್ನು ಹೇಳಲು ಅನುವಾಗುವುದು. ಆದರೆ ಯಾನವನ್ನು ಪೂರ್ತಿ ಓದಿದ ನಮ್ಮ ಈ ಬ್ಲಾಗಿನ ಮಾನ್ಯ ಭಾಗಿಗಳು ತಮ್ಮ ಅಭಿಪ್ರಾಯಗಳನ್ನು ಹೇಳಬಲ್ಲರು.
    –ರಾಜಾರಾಮ ಕಾವಳೆ.

    Like

  5. ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. ನಾನೇ ಕುಳಿತು ಚಿತ್ರ ನೋಡಿದಂತೆನಿಸಿತು. ಪ್ರೊ. ಥೋರ್ನ್ ಅವರ ಹಾಲಿವುಡ್ ಅನುಭವವನ್ನೂ ಬಣ್ಣಿಸಿದ್ದರೆ ಹೊಸ ಆಯಾಮ ಲೇಖನಕ್ಕೆ ಸಿಗುತ್ತಿತ್ತು. ಇಂಗ್ಲೀಷ್ ನ ವೈಜ್ಞಾನಿಕ ಶಬ್ದಗಳನ್ನು ಕನ್ನಡದಲ್ಲಿ ಸಮರ್ಥವಾಗಿ ಬಳಸಿದ್ದೀರಿ. ವರ್ಮ್ ಹೋಲನ್ನು ಹುಳ ಬಿಲ/ ಕುಳಿ ಎಂದು ಕರೆಯೋಣವೇ!

    ವೈಜ್ಞಾನಿಕ ಕಥೆಯಲ್ಲಿ ಮನೋಭಾವನೆಗಳನ್ನು ಬಿಂಬಿಸಿದ್ದು ಇದರ ವೈಶಿಷ್ಟ್ಯ ಎಂದು ನಿಮ್ಮ ಲೇಖನ ಓದಿ ಅನಿಸುತ್ತದೆ. ವಿಜ್ಞಾನಿಗೆ ಮಾನವೀಯತೆ ಇಲ್ಲವಾಗಿದ್ದರೆ ಮನುಕುಲದ ಏಳಿಗೆ ಆಗುತ್ತಿರಲಿಲ್ಲ. ನಮ್ಮನ್ನು ಈಗಿನ ಸ್ಥಿತಿಯಿಂದ ಉಧ್ಧಾರ ಮಾಡಲು ವಿಜ್ಞಾನವೇ ಬೇಕು.

    Like

    • ಾಮ್ ಶರಣ್ ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ನನ್ನ ಧನ್ಯವಾದಗಳು. ಪ್ರೊಫ಼ೆಸರ್ ಕಿಪ್ ಥಾರ್ನ್ ಅವರ ಹಾಲಿವುಡ್ ಅನುಭವಗಳು ಬೇಕಾದಷ್ಟಿವೆ. ಅದರ ಬಗ್ಗೆ ಪುಸ್ತಕವನ್ನೇ ಪ್ರಕಟಿಸಿದ್ದಾರೆ. ನಮ್ಮೊಡನೆಯೂ ಹಲವಾರು ಘಟನೆಗಳನ್ನು ಹಂಚಿಕೊಂಡರು. ಈ ಚಲನಚಿತ್ರವನ್ನು ವಾಸ್ತವದಲ್ಲಿ ಸ್ಟೀವನ್ ಸ್ಪಿಲ್ಬರ್ಗ್ ನಿರ್ದೇಶಿಸ ಬೇಕಾಗಿತ್ತು. ಆದರೆ ಸ್ಪಿಲ್ಬರ್ಗ್ ಅವರಿಗೂ , ಚಿತ್ರದ ನಿರ್ಮಾಣ ಕಂಪನಿ ಪ್ಯಾರಾಮೌಂಟ್ ಉದ್ಯಮಿಗಳಿಗೂ ಭಿನ್ನಾಭಿಪ್ರಾಯ ಉಂಟಾಗಿ , ಸ್ಪಿಲ್ಬರ್ಗ್ ಈ ಚಿತ್ರದಿಂದ ನಿರ್ಗಮಿಸಿದರಂತೆ. ಆಗ ಕ್ರಿಸ್ಟೋಫರ್ ನೋಲನ್ ಇದರ ಹೊಣೆಯನ್ನು ಹೊತ್ತು ಕೇವಲ ಒಂದು ವರ್ಷದಲ್ಲಿ ಇದರ ಚಿತ್ರೀಕರಣವನ್ನು ಮುಗಿಸಿದರು ಎಂದು ಕಿಪ್ ಥಾರ್ನ್ ನಮ್ಮೊಡನೆ ಹೇಳಿದರು. ಸಧ್ಯದಲ್ಲಿ ಕಿಪ್ ಥಾರ್ನ್, ಸ್ಟೀವನ್ ಸ್ಪಿಲ್ಬರ್ಗ್ ಅವರ ಸಹಭಾಗಿತ್ವದಲ್ಲಿ, ಮತ್ತೊಂದು ಕಾಲ್ಪನಿಕ ವಿಗ್ಹ್ನ್ಯಾನ ಚಿತ್ರದ ತಯಾರಿಕೆಯ ಸಿದ್ಧತೆಯಲ್ಲಿ ಇದ್ದಾರೆ ಎಂದೂ ನಮಗೆ ತಿಳಿಸಿದರು. ನೀವು ಸೂಚಿಸಿರುವಂತೆ ವರ್ಮ್-ಹೋಲ್ ಪದಕ್ಕೆ, ಹುಳ-ಬಿಲ ಎಂತಲೂ ಕರೆಯಬಹುದು. ವೈಘ್ನಾನಿಕ ಪದಗಳಿಗೆ, ನಮ್ಮದೇ ಆದ , ಆದರೆ ಅರ್ಥ ನೀಡುವ ಪದಗಳನ್ನು ಬಳಸಿದರೆ ಯಾವ ತೊಂದರೆಯೂ ಇಲ್ಲ. ಸಾಮಾನ್ಯ ಜನಗಳಿಗೆ, ವಿಘ್ನಾನದಲ್ಲಿ್ ಆಂಗ್ಲ ಪದದ ಹಿನ್ನೆಲೆ ತಿಳಿದಿರುವಷ್ಟು ಕನ್ನಡದ ಪರ್ಯಾಯ ಪದಗಳು ತಿಳಿದಿರುವುದು ಕಡಿಮೆ. ಹಾಗಾಗಿ ವರ್ಮ್-ಹೋಲ್ ಪದವನ್ನು ಕನ್ನಡದಲ್ಲೂ ಅದೇ ರೀತಿ ಬರೆದಿದ್ದೇನೆ.

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.