ವಿಜ್ಞಾನ ಮತ್ತು ಕಾಲ್ಪನಿಕ-ವಿಜ್ಞಾನದ ನಡುವಣ ಅನ್ಯೋನ್ಯತೆಯ ಪ್ರತೀಕವೆನಿಸಿದ ಒಂದು ಅದ್ಭುತ ಚಲನಚಿತ್ರ-“Interstellar”! — ಉಮಾ ವೆಂಕಟೇಶ್

 ಸುಮಾರು ೧೮ ವರ್ಷಗಳ ಹಿಂದೆ,ಕ್ಯಾಲಿಫೋರ್ನಿಯಾದ ಮಹಾನಗರ ಲಾಸ್ ಏಂಜಲೀಸ್ ಪಟ್ಟಣದ ಹೊರವಲಯದ ಪಸಡೀನಾದಲ್ಲಿರುವ, ಜಗತ್ಪ್ರಸಿದ್ಧ ಕ್ಯಾಲಿಫೋರ್ನಿಯಾದ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ (California Institute of Technology, CALTECH) ಸಂದರ್ಶಕ ವಿಜ್ಞಾನಿಯಾಗಿದ್ದ ನನ್ನ ಪತಿಯ ಜೊತೆಯಲ್ಲಿ ಸಹಭಾಗಿತ್ವ ಸಂಶೋಧನೆ ನಡೆಸಿದ್ದ ಅಲ್ಲಿನ ಪ್ರಸಿದ್ಧ ಸೈದ್ಧಾಂತಿಕ ಖಭೌತವಿಜ್ಞಾನಿ, ಪ್ರೋಫೆಸ್ಸರ್  ಕಿಪ್ ಥಾರ್ನ್, ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಸಿದ್ಧಿಯಾದವರು.

With Professor Kip Thorne,  (from left 5 th) Theoretical Astrophysicist, CALTECH, Pasadena, Scientific advisor & Executive producer Interstellar movie. at his house party
With Professor Kip Thorne, ( 5 th from left) Theoretical Astrophysicist, CALTECH, Pasadena, Scientific advisor & Executive producer Interstellar movie. at his house party. (CC. Prof. Bangalore Sathyaprakash)

1991ರಿಂದಲೇ, ಈ ವಿಜ್ಞಾನಿಯ ಹೆಸರು ನನಗೆ ಪರಿಚಿತವಿದ್ದು, 1996ರಲ್ಲಿ ಕಿಪ್ ಥಾರ್ನ್ ಅವರನ್ನು ಮುಖತಃ ಭೇಟಿಯಾಗುವ ಸೌಭಾಗ್ಯ ದೊರೆತಿತ್ತು. ಸಾಮಾನ್ಯ ಸಾಪೇಕ್ಷತೆ (General relativity),  ಗುರುತ್ವದ ಅಲೆಗಳು (Gravitational waves), ಹಾಗೂ ಕಪ್ಪು-ಕುಳಿಗಳ (Black holes) ಬಗ್ಗೆ ಅತ್ಯುನ್ನತ ಮಟ್ಟದ ಸಂಶೋಧನೆಯಲ್ಲಿ, ಸುಮಾರು ೪೦ ವರ್ಷಗಳಿಂದ ಕಾರ್ಯನಿರತರಾಗಿರುವ, ಈ ಖಭೌತವಿಜ್ಞಾನಿ, 2006 ರ ಸಮಯದಲ್ಲಿ ಹಾಲಿವುಡ್ಡಿನ ಚಲನಚಿತ್ರವೊಂದರಲ್ಲಿ, ವೈಜ್ಞಾನಿಕ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸುದ್ದಿ ಭೌತಶಾಸ್ತ್ರ ವಲಯದಲ್ಲಿ ಕಲರವವನ್ನೆಬ್ಬಿಸಿತ್ತು. ಈಗ ೮ ವರ್ಷಗಳಿಂದ ಆ ಚಿತ್ರದ ತಯಾರಿಕೆಯ ಬಗ್ಗೆ ನಮ್ಮ ಕುತೂಹಲ ಬಹಳವಾಗಿದ್ದು, ಇದರ ಬಿಡುಗಡೆಗಾಗಿ ನಾವೆಲ್ಲಾ ಕಾಯುತ್ತಿದ್ದೆವು. “Interstellar” ಅಂದರೆ, ಅಂತರತಾರಾ, ಅಥವಾ ಅಂತರನಕ್ಷತ್ರೀಯ, ಎಂಬ ಅರ್ಥವನ್ನು ಕೊಡುವ ಹೆಸರಿನ ಈ ಚಲನಚಿತ್ರ, ಕಳೆದ ನವೆಂಬರ್ ೫ನೆಯ ತಾರೀಖು,ಕ್ಯಾಲಿಫೋರ್ನಿಯಾ ಮತ್ತು ನವೆಂಬರ್ ೭ರಂದು ಜಗತ್ತಿನ ಎಲ್ಲೆಡೆ ಬಿಡುಗಡೆಯಾಯಿತು.
Read More »

ಲಲಿತಾ ಚಂದ್ರಶೇಖರ್: ಮೇಧಾವಿಯ ಹಿಂದಿನ ಸುಪ್ತ ಚೇತನ! – ಉಮಾ ವೆಂಕಟೇಶ್

“ಹೆಣ್ಣಿನಿಂದಲಿ ಇಹವು, ಹೆಣ್ಣಿನಿಂದಲಿ ಪರವು, ಹೆಣ್ಣಿಂದ ಸಕಲ ಸಂಪದವು ಹೆಣ್ಣೊಲ್ಲದಣ್ಣಗಳು ಎಲ್ಲಿ ಸರ್ವಜ್ಞ” ಹೆಣ್ಣಿನ ಹಿರಿಮೆಯ ಬಗ್ಗೆ ಕನ್ನಡದ ಆಶು-ಕವಿ ಸರ್ವಜ್ಞನಾಡಿದ ನುಡಿಮುತ್ತುಗಳು ಕಾಲ ದೇಶಗಳನ್ನು ಮೀರಿ ನಿಜವೆಂದು ಸಾಬೀತಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. “Behind every successful man there is always a woman,” ಎಂಬ ಆಂಗ್ಲ ನಾಣ್ಣುಡಿ ಕೇಳಲು ಕಿವಿಗಳಿಗೆ ಮಾರ್ದವವೆನಿಸಿದರೂ, ಮಹಾವ್ಯಕ್ತಿಗಳ ಸತಿಯರ ಜೀವನದ ನಿಜಾಂಶವನ್ನು, ಅವರನ್ನು ಬಲ್ಲವರಿಂದಲೇ ತಿಳಿಯಬೇಕು. ತಮ್ಮ ೧೦೨ ವರ್ಷಗಳ ದೀರ್ಘಾವಧಿಯ ಜೀವನವನ್ನು ಕಳೆದು, ಇತ್ತೀಚೆಗೆ (ಸೆಪ್ಟಂಬರ್ ೨೦೧೩) ಚಿಕಾಗೋದಲ್ಲಿ ನಿಧನಹೊಂದಿದ ಭಾರತೀಯ ಮೂಲದ ಲಲಿತಾ ಚಂದ್ರಶೇಖರ್ ಅವರ ಜೀವನ ವೃತ್ತಾಂತವೂ ಕೂಡಾ, ಅಂತಹುದೇ ಅಪರೂಪವಾದ ಸಂಗತಿಗಳಲ್ಲಿ ಒಂದು. ೨೦ನೆಯ ಶತಮಾನದ ಅಭೂತಪೂರ್ವ ಖಭೌತಶಾಸ್ತ್ರಜ್ಞರಲ್ಲಿ ಒಬ್ಬರೆನಿಸಿದ್ದ ದಿವಂಗತ ಡಾ ಸುಬ್ರಮಣ್ಯ ಚಂದ್ರಶೇಖರ್ ಅವರ ಹೆಸರನ್ನು ಕೇಳದ ವಿಜ್ಞಾನಿಗಳು ಮತ್ತು ವಿಜ್ಞಾನಪ್ರಿಯರು ಬಹಳ ವಿರಳ. ಭಾರತೀಯ ಮೂಲದ ಉಜ್ವಲ ಪ್ರತಿಭೆಯೊಂದು, ತಾರಾಲೋಕದ ರಹಸ್ಯಗಳನ್ನು, ತಾರೆಗಳ ಹುಟ್ಟು, ರಚನೆ, ಬೆಳವಣಿಗೆ  ಮತ್ತು ಅಂತ್ಯಗಳ ಬಗ್ಗೆ ಅರಿಯುವ ಸಲುವಾಗಿ ಅತ್ಯುನ್ನತ ಸಂಶೋಧನೆಗಳನ್ನು ನಡೆಸಿ, ತನ್ನ ಜೀವನವನ್ನೇ ಆ ಕಾರ್ಯಕ್ಕಾಗಿ ಮುಡಿಪಾಗಿಸಿ, ಖಭೌತಶಾಸ್ತ್ರ ಪ್ರಪಂಚದಲ್ಲಿ ನಭೂತೋ, ನಭವಿಶ್ಯತಿ ಎನ್ನುವ ಮಟ್ಟಿಗೆ ತನ್ನ ಹೆಸರನ್ನು ಅಮರವಾಗಿಸಿದೆ. ಈ ವ್ಯಕ್ತಿಯ ಕುಟುಂಬದಲ್ಲಿ ಬುದ್ಧಿಮಾನ್ಯರ ತಂಡವೇ ಜನ್ಮವೆತ್ತಿ, ತಮ್ಮ ಮೇಧಾವಿತನವನ್ನು ಪ್ರಪಂಚಕ್ಕೆ ತೋರಿದ ಹೆಗ್ಗಳಿಕೆಯೂ ಇದೆ. ಸರ್.ಸಿ.ವಿ.ರಾಮನ್ ಅಂತಹ ಮತ್ತೊಬ್ಬ ಅಪರೂಪದ ಭೌತಶಾಸ್ತ್ರಜ್ಞನ ಸೋದರಳಿಯನಾದ, ಡಾ ಸುಬ್ರಹ್ಮಣ್ಯ ಚಂದ್ರಶೇಖರ್ ಅಥವಾ “ಚಂದ್ರ” ಎಂದು ಪ್ರಪಂಚದಲ್ಲೇ ಹೆಸರುವಾಸಿಯಾದ ಇವರನ್ನು, ಇಂದಿಗೂ ಭೌತಶಾಸ್ತ್ರವಲಯದಲ್ಲಿ ಸ್ಮರಿಸಲಾಗುತ್ತದೆ. ” Chandrasekhar limit” ಅಥವಾ “ಚಂದ್ರ ಪರಿಮಿತಿ” ಎಂಬ ಅಸಾಮಾನ್ಯ ಸಂಶೋಧನೆಗೆ, ನೋಬೆಲ್ ಪ್ರಶಸ್ತಿಯಿಂದ ಪುರಸ್ಕೃತರಾದ ಚಂದ್ರ, ತಮ್ಮ ಜೀವಿತಕಾಲದಲ್ಲೇ ದಂತಕಥೆಯಾದ ವ್ಯಕ್ತಿ. ತಮ್ಮ 50 ವರ್ಷಗಳ ಸಂಶೋಧನೆಯ ವೃತ್ತಿ ಜೀವನದಲ್ಲಿ, ಖಭೌತಶಾಸ್ತ್ರ (Astrophysics) ಕ್ಷೇತ್ರದ ವಿವಿಧ ವಿಷಯಗಳ ಬಗ್ಗೆ, ಅಸಾಧಾರಣ ಗುಣಮಟ್ಟದ ಅನ್ವೇಷಣೆಯನ್ನು ನಡೆಸಿ, ತಮ್ಮ ಛಾಪನ್ನು ಒತ್ತಿ, ತಮ್ಮ ಪುಸ್ತಕಗಳ ಮೂಲಕ ಇಂದಿಗೂ ತರುಣ ಪೀಳಿಗೆಯನ್ನು ಪ್ರೇರೇಪಿಸುತ್ತಿರುವಂತಹ ಸಾಧನೆ ಗೈದ ಚಂದ್ರರ ಬಗ್ಗೆ ಬರೆಯಲು ವಿಷಯದ ಕೊರತೆಯಿಲ್ಲ.

Young Chandra and Lalitha after their marriage in 1936 Cc:Wiki
Young Chandra and Lalitha after their marriage in 1936
Cc:Wiki

Read More »