ವೈಕುಂಠದಲ್ಲಿ ಕೋಲಾ(ಕ್ಲೋನಾ)ಹಲ! – ಸುದರ್ಶನ್ ಗುರುರಾಜರಾವ್ ಹರಟೆಕಟ್ಟೆ

ಕ್ಷೀರ ಸಾಗರದ ಮಧ್ಯದಲ್ಲಿ ಶೇಷ ಶಾಯಿಯಾಗಿ ಶ್ರೀ ಲಕ್ಷ್ಮಿಯ ಸೇವೆ ಪಡೆಯುತ್ತಿದ್ದ ಶ್ರೀಮನ್ನಾರಾಯಣನಿಗೆ ಡಿಸ್ಟರ್ಬ್ ಮಾಡುವ ಇರಾದೆ ಜಯ ವಿಜಯರಿಗೆ ಖಂಡಿತಾ ಇರಲಿಲ್ಲ. ತ್ರೇತಾ ದ್ವಾಪರ ಯುಗಗಳಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡಿದ ನಂತರ ದೀರ್ಘ ವಿಶ್ರಾಂತಿಯಲ್ಲಿದ್ದ ಅವನು ಯಾವ ಕಿರಿ ಕಿರಿಯನ್ನೂ ನಿರೀಕ್ಷಿಸುತ್ತಿರಲಿಲ್ಲ. ಜಾಗತಿಕ ತಾಪಮಾನ ಏರುತ್ತಿರುವ ತೆರದಲ್ಲೇ ಮಾನವರ ಅನಾಚಾರಗಳೂ ಹೆಚ್ಚುತ್ತಿರುವುದು ಅವನಿಗೆ ತಿಳಿಯದ ವಿಷಯವಾಗಿರದಿದ್ದರೂ ಪ್ರಪಂಚವನ್ನು ಹಾಲು ಕಾಯಿಸಿದಂತೆ ತನ್ನಷ್ಟಕ್ಕೆ ತಾನು ಕಾಯ್ದು ಕೊಳ್ಳಲಿ, ಉಕ್ಕಿದಾಗ ನೋಡೋಣ ಎಂಬ ಎಣಿಕೆ ಅವನದು.ಅದೂ ಅಲ್ಲದೆ ದೇವಸ್ಥಾನಗಳ ಹುಂಡಿಯಲ್ಲಿ ಹಣದ ಮಹಾಪೂರವೇ ಹರಿಯುತ್ತಿರಲಾಗಿ ಧರ್ಮಕ್ಕೆ ಚ್ಯುತಿ ಬಂದಿರಲಾರದೆಂದು ಅವನ ಊಹೆ. ಇಷ್ಟಕ್ಕೂ ತಿರುಪತಿಯ ಹುಂಡಿಯಿಂದ ಕುಬೇರನ ಸಾಲಕ್ಕೆ ಹಣ ಚುಕ್ತಾ ಆಗುತ್ತಿರಲು ಒಂದು ರೀತಿಯ ನಿರಾಳವೇ ಅವನಲ್ಲಿತ್ತು.

ಆದರೆ ಅಂದು ಬೆಳ್ಳಂಬೆಳಿಗ್ಗೆಯೇ ಭೂದೇವಿ ಬಹಳ ಅಸ್ತವ್ಯಸ್ತ ವೇಷದಲ್ಲಿ ವಿಷ್ಣುದರ್ಶನಕ್ಕಾಗಿ ಬಂದಳು. ಸ್ವಾಮಿ ಇನ್ನೂ ಮಲಗಿರಬಹುದೆಂದೇ ದ್ವಾರಪಾಲಕರ ಎಣಿಕೆ. ತಾನು ತನ್ನ ಪತಿಯೊಡನೆ ಮಾತುಕತೆ ನಡೆಸಬೇಕಾಗಿದೆಯೆಂದೂ, ತುರ್ತಾಗಿ ತನಗೆ ಬಾಗಿಲು ತೆಗೆಯಬೇಕೆಂದೂ ಆಗ್ರಹಿಸಿದಳು. ಜಯ-ವಿಜಯರಿಗೆ ಧರ್ಮ ಸಂಕಟ. ಬಿಟ್ಟ್ರೂ ತೊಂದರೆ ಬಿಡದೇ ಇದ್ದರೂ ತೊಂದರೆ.’ಇತ್ತ ಹಾವು ಅತ್ತ ಹುಲಿ ’ ಎಂಬ ಪರಿಸ್ಥಿಗೆ ಸಿಲುಕಿ ಹಲುಬಿದರು. ಸನಕಾದಿ ಮುನಿಗಳ ಶಾಪಕ್ಕೆ ತುತ್ತಾಗಿ, ಭೂಭಾರ ಇಳಿಸಲು ದುಷ್ಟಾತಿ ದುಷ್ಟರಾಗಿ ಜನ್ಮ ತಾಳಿ ಹತರಾಗಿದ್ದ ನೆನಪು ಇನ್ನೂ ಮಾಸಿರಲಿಲ್ಲ. ಮುಖ ಮುಖ ನೋಡಿಕೊಂಡು ತಮ್ಮ ಹಣೆ ಬರಹವನ್ನು ಹಳಿಯುತ್ತಾ ಬಾಗಿಲು ತೆಗೆದು ಭೂದೇವಿಯನ್ನು ಒಳಗೆ ಬಿಟ್ಟರು.

ಲಕ್ಷ್ಮಿಯೊಡನೆ ನಸುನಗುತ್ತಾ ಹರಟುತ್ತಿದ್ದ ನಾರಾಯಣ ಭೂದೇವಿಯನ್ನು ಕಂಡು ಧಿಗ್ಗನೆದ್ದು ಕುಳಿತ. ಸಾವಿರಾರು ವರ್ಷಗಳ ಕೆಳಗೆ ಭೂದೇವಿಯ ಸಂಪರ್ಕಕ್ಕೆ ಬಂದಿದ್ದನಾಗಿ , ಅನಂತರದಲ್ಲಿ ಅತ್ತ ತಲೆಯನ್ನೂ ಹಾಕದ ಅಪಚಾರಕ್ಕಾಗಿ ಇನ್ನೇನು ದೋಷಾರೋಪಣೆ ಕಾದಿದೆಯೋ ಎಂಬ ಭಾವನೆಯೊಂದಿಗೆ ಅಪರಾಧೀ ಭಾವವೂ ಕಾಡದಿರಲಿಲ್ಲ. ಅವಳನ್ನು ಕಂಡು ಕರುಣೆಯೂ ಮೂಡಿತು. ನಳನಳಿಸುವ ಭೂರಮೆ ಯಾಗಿ ಅವಳು ಉಳಿದಿರಲಿಲ್ಲ. ಸ್ವಾಗತಿಸಿ ಕುಳ್ಳಿರಿಸಿ ಉಪಚರಿಸಿದ. ಲಕ್ಷ್ಮಿ, ಸವತಿ ಮಾತ್ಸರ್ಯ ತೋರಲಿಲ್ಲ!

ನಿಧಾನವಾಗಿ ನಿಟ್ಟುಸಿರು ಬಿಟ್ಟ ಭೂದೇವಿ ಆಕ್ಷೇಪಿಸುವ ದನಿಯಲ್ಲಿ ಮಹಾಸ್ವಾಮಿಯು ತನ್ನನ್ನು ಮರೆತ ಕಾರಣವಾದರೂ ಏನು? ಯಜಮಾನನಿಲ್ಲದ ಮನೆಯಂತಾಗಿರುವ ಭೂಮಿಯನ್ನು ಕಡೆಗಣಿಸಿದ್ದಾದರೂ ಏಕೆ? ಹೆತ್ತಮ್ಮನನ್ನೇ ಗೋಳು ಹುಯ್ದುಕೊಳ್ಳುವ ಮಕ್ಕಳಂತೆ ಮನುಷ್ಯರು ವರ್ತಿಸಿರುವುದನ್ನು ಕಂಡೂ ಕಾಣದಂತಿರುವುದರ ರಹಸ್ಯವಾದರೂ ಏನು? ಇದೋ ಈ ಲಕ್ಷ್ಮಿಯ ದಾಸರಾಗಿ ತನ್ನ ಒಡಲನ್ನೇ ಬಗೆಯುತ್ತಿದ್ದರೂ, ತನ್ನ ಸುಂದರ ಕೇಶರಾಶಿಗಳಾದ ಕಾಡುಗಳನ್ನು ಧ್ವಂಸಗೊಳಿಸುತ್ತಿದ್ದರೂ, ಆಳಕ್ಕೆ ಕೊಳವೆಗಳನ್ನು ತನ್ನ ಗರ್ಭಕ್ಕಿಳಿಸಿ ತನ್ನ ಜೀವರಸವನ್ನು ಹೀರುತ್ತಿದ್ದರೂ, ಕೆರೆ, ಕಟ್ಟೆ ನದಿಗಳಿಂದ ಮರಳನ್ನು ಬಗೆದು ತನ್ನ ಬಾಯಿ ಪಸೆ ಆರಿಸುತ್ತಿದ್ದರೂ, ಯಾವ ಧರ್ಮ ಕರ್ಮಗಳ ಹಂಗಿಲ್ಲದಂತೆ ಅಕ್ರಮ ಎಸಗುತ್ತಿದ್ದರೂ ದಿವ್ಯ ನಿರ್ಲಕ್ಷ್ಯ ವಹಿಸಿದ ಹಿಂದಿನ ಆಂತರ್ಯವಾದರೂ ಏನು” ಎಂದು ಮೇಘಸ್ಫೋಟದಂತಹ ಪ್ರಶ್ನೆಗಳ ಮಳೆಸುರಿಸಿದಳು.

ಪ್ರಶ್ನಾವಳಿಗಳ ಧಾಳಿಗೆ ತತ್ತರಿಸಿದ ನಾರಾಯಣ ಸಮಜಾಯಿಷಿ ಕೊಡಲು ತಡಬಡಾಯಿಸುತ್ತಿರುವುದನ್ನು ಮನಗಂಡು ಭೂದೇವಿ ತನ್ನ ಹಿಡಿತ ಬಿಗಿಗೊಳಿಸತೊಡಗಿದಳು. ಆಕ್ಷೇಪಣೆಯಲ್ಲಿ ತನ್ನ ಹೆಸರೂ ಸೇರಿದ್ದಕ್ಕೆ ಲಕ್ಷ್ಮಿಗೆ ಅಸಮಾಧಾನವಾಯ್ತು. ಅದರೆ ಸುಮ್ಮನಿದ್ದಳು.

ಭೂದೇವಿ ಮುಂದುವರಿದು, “ದಾಮೋದರನೇ ಈ ಭೂಮಿಯ ಮೇಲಿನ ಪ್ರಾಣಿಗಳೆಲ್ಲರೂ ನನ್ನ ಮಕ್ಕಳೇ.. ಅವರು ಮಾಡುವ ಕೆಲಸ ಕೆಲವೊಮ್ಮೆ ತುಂಟಾಟ, ಕೆಲವೊಮ್ಮೆ ಪುಂಡಾಟದಂತೇ ಕಾಣುವುದು. ಆದರೆ ಈಗ ಮಿತಿ ಮೀರಿದೆ. ಮನುಷ್ಯವರ್ಗದ ಮಕ್ಕಳುಗಳು ನನ್ನ ಬೇರೆ ವರ್ಗದ ಪ್ರಾಣಿ-ಪಕ್ಷಿವರ್ಗದ ಮಕ್ಕಳನ್ನು ಉಳಿಯಗೊಡುತ್ತಿಲ್ಲ. ಸಬಲರಾದ ಇವರುಗಳು ದುರ್ಬಲರಾದ ಅವರಗಳನ್ನು ಕೀಚಕರೋಪಾದಿಯಲ್ಲಿ ಕಾಡುತ್ತಿದ್ದಾರೆ. ಹೋಗಲಿ ತಮ್ಮ ತಮ್ಮಲ್ಲೇ ಸೌಹಾರ್ದದಿಂದಿದ್ದಾರೋ ಎಂದರೆ ಅದೂ ಇಲ್ಲ. ಕಿತ್ತಾಡುತ್ತಿದ್ದಾರೆ,. ನನ್ನ ಗುಡುಗು, ಸಿಡಿಲನಂಥ ಬೈಗುಳಕ್ಕೂ ಬೆಲೆ ಇಲ್ಲ, ಭೊರ್ಗರೆದು ಪ್ರವಾಹವಾಗುವಂತೆ ಅತ್ತರೂ ಲೆಕ್ಖಕ್ಕಿಲ್ಲ. ‘ಹೆತ್ತಮ್ಮನನ್ನು ತಿಂದೋರು ಅತ್ತ್ಯಮ್ಮನನ್ನು ಬಿಟ್ಟಾರ್ಯೇ’ ಎಂಬ ಗಾದೆಯೇ ಇಲ್ಲವೇ. ತಮ್ಮ ನಿಜ ತಾಯಿಗೇ ಮರ್ಯಾದೆ ಕೊಡುತ್ತಿಲ್ಲ ಇನ್ನು ಮಹಾತಾಯಿಯಾದ ನನಗೆಲ್ಲಿಯದು? ಅಪ್ಪನಾದ ನೀನೇ ಇಲ್ಲದ ಮೇಲೆ ನನಗೆಲ್ಲಿಯ ಮರ್ಯಾದೆ? ? ಇದಷ್ಟೇ ಆಗಿದ್ದಲ್ಲಿ ಹೋಗಲಿ ಎಂದೆನ್ನಬಹುದಿತ್ತು. ಇತ್ತೀಚೆಗೆ ಹೊಸ ಕುಚೇಷ್ಟೆ ಶುರು ಹಚ್ಚಿಕೊಂಡಿದ್ದಾರೆ. ಅದನ್ನು ಮಾತ್ರ ನನ್ನಿಂದ ಸರ್ವಥಾ ಸಹಿಸಲು ಸಾಧ್ಯವಿಲ್ಲ. ಏಳು, ಎದ್ದೇಳು, ಏನಾದರೂ ವ್ಯವಸ್ಥೆ ಮಾಡು” ಎಂದು ಹೇಳುತ್ತಿರುವಷ್ಟರಲ್ಲಿ ಜಯ-ವಿಜಯರನ್ನು ಆಚೆ-ಈಛೆ ತಳ್ಳಿ ಬಾಗಿಲನ್ನು ಧಡಾರನೆ ದೂಡಿಕೊಂಡು ಬ್ರಹ್ಮ ಒಳಗೆ ಬಂದ! ಬಿದ್ದೆದ್ದ ಜಯ ವಿಜಯರು ಮೈಮೇಲಿನ ಧೂಳು ಕೊಡವಿಕೊಂಡು ಎಲಾ ಇವನಾ!! ಮೀಸೆ ಗಡ್ದ ಬಿಳಿಯಾದರೂ ಕೈ ಕಸುವಿಗೇನೂ ಕಡಿಮೆಯಿಲ್ಲ ಎಂದು ಯೋಚಿಸಿಕೊಂಡರು!

“ಸೃಷ್ಟಿಕಾರ್ಯವನ್ನಷ್ಟೇ ಮಾಡಿಕೊಂಡು, ಜೀವಿಗಳೆಂಬೊ ಬೊಂಬೆಯ ಮಾಡಿ ಅವುಗಳ ಹಣೆಬರಹ ಬರೆದು, ಭೂಲೋಕಕ್ಕೆ ಸಾಗ ಹಾಕುತ್ತಿದ್ದ ಬ್ರಹ್ಮ ಸಿಟ್ಟಾದದ್ದೇ ಕಡಿಮೆ. ಅಂಥದ್ದರಲ್ಲಿ ಇಂದು ಹೀಗೆ ಬರಬೇಕಾದರೆ…” ಎಂದು ವಿಷ್ಣು ಯೋಚಿಸುತ್ತಿರುವಾಗಲೇ, ಮುಖ ಕೆಂಪು ಮಾಡಿಕೊಂಡು, ಗಡ್ಡ ಮೀಸೆ ಕುಣಿಸುತ್ತ ಬ್ರಹ್ಮ ಹೇಳತೊಡಗಿದ, “ಕೇಶವಾ, ಅವೇಳೆಯಲ್ಲಿ ಬಂದಿದ್ದಕ್ಕೆ ಕ್ಷಮಿಸು.ಈಗ್ಗೆ ಕೆಲವು ತಿಂಗಳುಗಳಿಂದ ನನ್ನ ಕೆಲಸ ತೀವ್ರವಾಗಿ ಏರುಪೇರಾಗಿದೆ. ಈ ರೀತಿಯ ತೊಂದರೆ ಮೊದಲು ನನ್ನ ಗಮನಕ್ಕೆ ಕೆಲವು ವರ್ಷಗಳ ಹಿಂದೆಯೇ ಬಂದಿತ್ತು. ಆದರೆ ಅದು ಎಲ್ಲೋ ನನ್ನ ಭ್ರಮೆ ಅಥವಾ ಆಯಾಸದಿಂದಾದ ಅಚಾತುರ್ಯವೆಂದು ತಳ್ಳಿ ಹಾಕಿದ್ದೇ ಸುಮ್ಮನೆ ಬಿಟ್ಟಿದ್ದೆ. ಮತ್ತೆ ಕೆಲವು ಕಾಲ ಏನೂ ಸಮಸ್ಯೆ ಇರಲಿಲ್ಲ. ಈಗ ಮತ್ತೆ ಬಹಳ ಕ್ಲಿಷ್ಟ ಸಮಸ್ಯೆಯಾಗಿ , ಪೆಡಂಭೂತವಾಗಿ ನಿಂತುಬಿಟ್ಟಿದೆ. ಇದೋ ನೋಡು, ಹುಟ್ಟು ಹಣೆ ಬರಹ ದಾಖಲಿಸುವ ಪುಸ್ತಕ. ನನಗೆ ಅರಿವೇ ಇಲ್ಲದೆ ಎಷ್ಟೊಂದು ಎಂಟ್ರಿ ಗಳು- ನೊಂದಾವಣೆ ಯಾಗಿರುವ, ಆಗುತ್ತಿರುವ ಜೀವಗಳು! ನನ್ನ ಕೆಲಸದ ಪ್ರಕಾರ ಜೀವಿಗಳ ಕರ್ಮ ಕಾಂಡ, ಪಾಪ ಪುಣ್ಯ, ಜೀವನ ಚಕ್ರದಲ್ಲಿ ತಿರುಗಿಬಂದ ಅವರ ಜನಮಗಳ ಸಂಖ್ಯೆ, ಇವನ್ನೆಲ್ಲಾ ಪರಿಗಣಿಸಿ ಮುಂದಿನ ಜನ್ಮದ ರೂಪು ರೇಷೆ (ಫ಼್ಲೋ ಚಾರ್ಟ್) ತಯಾರಿಸಿ ಅದಕ್ಕೆ ಸೂಕ್ತ ಆಕಾರ ಕೊಟ್ಟು ಹಣೆ ಬರಹ ಬರೆದು, ಜನ್ಮಕ್ಕೆ ಹೊಂದಿಕೆ ಯಾಗುವ ಆತ್ಮವನ್ನು ಚಿತ್ರಗುಪ್ತ-ಯಮಧರ್ಮರು ನಿಯೋಜಿಸಿದ ನಂತರ ಆ ಜೀವಿಯು ಭೂಮಿಯಲ್ಲಿ ತನ್ನ ಆಟ ಆಡಲು ತೆರಳುವುದು ನಿನಗೆ ಗೊತ್ತೇ ಇದೆ. ಆದರೆ ನನ್ನ ಅರಿವಿಗೆ ಬಾರದೆ ಧರೆಯಲ್ಲಿರುವ ಜೀವಿಗಳ ಸಂಖ್ಯೆ ನೋಡು, ಅವುಗಳ ಪಟ್ಟಿ ನೋಡು! ಇವು ಯಾವುದರ ಪೂರ್ವಾ ಪರವೂ ನನಗೆ ತಿಳಿಯದು. ಸರಿ ಹಣೆ ಬರಹ ಬರೆಯೋಣವೆಂದರೆ ಆಯುಸ್ಸು ಸೊನ್ನೆಯಿಂದ ಶುರು ಆಗುತ್ತಿಲ್ಲ. ಎಲ್ಲೆಲಿಂದಲೋ ಶುರು ಆಗುತ್ತಿವೆ. ಒಂದದಕ್ಕೂ ಒಂದೊಂದು ವಿಭಿನ್ನ .ಇವರುಗಳ ಆಯಸ್ಸು ನಿರ್ಧರಿಸುವುದೇ ಕಷ್ಟಕರವಾಗಿಬಿಟ್ಟಿದೆ. ನನ್ನ ಅರಿವನ್ನೂ ಮೀರಿದೆ ಇವುಗಳ ಜೀವನದ ಪಟ. ಕೆಲವರಿಗೆ ಯಾವು ಯಾವುದೋ ಖಾಯಿಲೆ ಕಸಾಲೆ,ಕೆಲವರ ಆಯುಷ್ಯ ರೇಖೆ ಮುಗಿಯುತ್ತಲೇ ಇಲ್ಲ- ಅನಂತವಾಗಿರುವಂತೆ ತೋರುತ್ತಿದೆ. ಹೇ ಅನಂತಾ, ನಿನ್ನ ಹೆಸರಿಗೇ ಸಂಚಾಕಾರ ಬರುವಂತಿದೆ! ಈ ಜೀವಿಗಳಿಗೆಲ್ಲಾ ನಿಯೋಜಿಸುವಷ್ಟು ಆತ್ಮಗಳ ದಾಸ್ತಾನು ನನ್ನಲ್ಲಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ, ನನ್ನ ಕೆಲಸಕ್ಕೇ ಸಂಚಾಕಾರ ಬಂದಿದೆ. ನಾನು ನಿರುದ್ಯೋಗಿ ಆಗಬಹುದು ಅಥವಾ, ನೀನು ಇದಕ್ಕೊಂದು ಪರಿಹಾರ ತೊರದಿದ್ದಲ್ಲಿ, ಹೈರಾಣಾಗಿ ನಾನೇ ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕಾಗಬಹುದು” ಎಂದು ಅಲವತ್ತುಕೊಂಡ.

ವಿಷ್ಣು, ನೆಟ್ಟಗೆ ಕುಳಿತು, ” ಅಯ್ಯಾ ಬ್ರಹ್ಮ, ನೀನು ನನ್ನ ನಾಭಿಯಿಂದ ಜನಿಸಿ ಪದ್ಮನಾಭನೆಂಬ ಸುಂದರ ಹೆಸರು ನನಗೆ ಬರುವಂತೆ ಮಾಡಿದ್ದೀಯೆ. ನನ್ನ ಈ ಜಗನ್ನಿಯಾಮಕ ಕಾರ್ಯದಲ್ಲಿ ಸೃಷ್ಟಿಯ ವಿಭಾಗವನ್ನು ಎಷ್ಟೋ ಕಲ್ಪಗಳಿಂದ ದಕ್ಷವಾಗಿ ನಡೆಸಿಕೊಂಡು ಬರುತ್ತಿದ್ದೀಯೆ. ಆಗಾಗ ಕೆಲವು ಅಪಾತ್ರರಿಗೆ ಕೇಳಿದ ವರಗಳನ್ನು ಹಿಂದು-ಮುಂದು ನೋಡದೆ ಕರುಣಿಸಿ ಸಮಸ್ಯೆಗೆ ಸಿಕ್ಕಿದ್ದನ್ನು ಬಿಟ್ಟರೆ ನೀನು ಮಹಾ ನಿರುಪದ್ರವಿ. ನಿನ್ನಿರುವೇ ನಮಗೆ ಗೊತ್ತಿರುವುದಿಲ್ಲ; ಹಾಗಿರುತ್ತೀಯ. ನಿನಗೆ ತಿಳಿಯದೆ ನಡೆದಿರುವ, ನಿನಗೇ ಕೋಪ ತರಿಸುತ್ತಿರುವ ಈ ಪರಿಸ್ಥಿತಿಯಾದರೂ ಏನದು. ಹಿಂದೆ ರಕ್ತ ಬಿಜಾಸುರನಿಗೆ ಕೊಟ್ಟಂಥ ವರದಂತೆ ಇನ್ಯಾರಿಗೂ ಏನೂ ಕೊಟ್ಟಿಲ್ಲ ತಾನೆ? ಎಂದು ಹೊಗಳುತ್ತಲೇ ಕೆದಕಿದ.

ಇಲ್ಲವೆಂದು ತಲೆಯಾಡಿಸುತ್ತಾ, ” ಅಯ್ಯಾ ಪುರುಷೋತ್ತಮ, ಅಂಥಾ ತಪಸ್ಸನ್ನು ಮಾಡಬಲ್ಲ ಯೋಗ್ಯತೆ ಇರುವ ಯಾವ ಜೀವಿಯ ಸೃಷ್ಟಿಯೂ ಇತ್ತೀಚೆಗೆ ತನ್ನಿಂದ ಅಗಿಲ್ಲ..ಇನ್ನು ವರಕೊಡುವುದೆಲ್ಲಿಂದ…”. ಎಂದು ಹೇಳುತ್ತಿರುವಾಗಲೇ ಯಮ, ಯಮದೂತರು, ಚಿತ್ರಗುಪ್ತ ಎಲ್ಲರೂ ಓಡೋಡುತ್ತಾ, ಏದುಸಿರು ಬಿಡುತ್ತಾ ಒಳಬಂದರು. ಬ್ರಹ್ಮನಿಂದ ತಳ್ಳಿಸಿಕೊಂಡಾದ ಮೇಲೆ ಯಾರನ್ನೂ ತಡೆಯುವ ಸಾಹಸ ಆ ದ್ವಾರಪಾಲಕರು ಮಾಡಲಿಲ್ಲ ಪಾಪ!.

ಇದೇನು ಹೊಸ ತಲೆನೋವು ಬಂತಪ್ಪಾ.. ನಾನು ಈಗಾಗಲೇ ಒಂಭತ್ತು ಅವತಾರಗಳನ್ನು ಎತ್ತಿ ಭೂಭಾರ ಇಳುಹಿದ್ದಾಯ್ತು. ಇನ್ನೇನು ಸ್ವಲ್ಪ ಆರಾಮವಾಗಿರೋಣ ಎಂದರೆ ಈ ದೇವ ದೇವತೆಗಳು ಒಂದಲ್ಲಾ ಒಂದು ಕಿರಿ ಕಿರಿ ತಂದಿಡುತ್ತಿದ್ದಾರೆ. ಛೇ, ಇವರಿಗೆ ಕರ್ತವ್ಯ ದಕ್ಷತೆ, ಕಾರ್ಯ ಕ್ಷಮತೆ ಒಂದೂ ಇಲ್ಲ. ಮೇಲ್ವಿಚಾರಕರಿಲ್ಲದ ಕಚೇರಿಯಂತಾಗಿದೆ ಈ ವಿಶ್ವ. ಎಷ್ಟೆಲ್ಲ ತಯಾರಿ ಕೊಟ್ಟು ಅನುಭವಸ್ಥರನ್ನಾಗಿ ಮಾಡಿದರೂ ತಮ್ಮ ಪ್ರೋಟೊಕಾಲ್ ನಿಂದ ಅಚೆಗೆ ಯೋಚಿಸುವುದೇ ಇಲ್ಲ!! ಎಲ್ಲಕ್ಕೂ ನಾನೇ ತಲೆ ಕೊಡಬೇಕಾಗಿದೆ ಎಂದು ಚಿಂತಿಸುತ್ತಲೇ ಈ ಹೊಸಬರ ಅಹವಾಲು ಕೇಳಲು ಕಿವಿಯಾಗತೊಡಗಿದ.

ಮೊದಲು ಮಾತನಾಡಿದವನು ಯಮದೂತ! ಅವನ ಫೀರ್ಯಾದು ಯಮ ಧರ್ಮನ ಮೇಲೇ ಇತ್ತು. ” ಸ್ವಾಮಿ ನಿಮಗೆ ತಿಳಿಯದ್ದೇನಿದೆ? ಜೀವಿಗಳು ಜನ್ಮ ತಾಳಿದ ತಕ್ಷಣ ಅವರ ಜೀವಿತದ ಕಾಲ, ವೇಳಾಪಟ್ಟಿ, ಬ್ರಹ್ಮದೇವರಿಂದ ನಮಗೆ ರವಾನೆಯಾಗುವುದು ನಿಜವೇ. ಆಯಾ ಕಾಲಕ್ಕೆ , ಅಯುಷ್ಯಕ್ಕೆ ಅನುಗುಣವಾಗಿ ನಾವು ಪ್ರತೀ ದಿನಾಂಕದಲ್ಲೂ ಯಾರ್ಯಾರನ್ನು ಹೊತ್ತು ತರಬೇಕೆಂಬುದು ನೋಡಿಕೊಂಡು, ಅವುಗಳು ತಮ್ಮ ಸ್ಥೂಲ ರೂಪವನ್ನು ತ್ಯಜಿಸಿದ ನಂತರ ಸೂಕ್ಷ್ಮರೂಪವನ್ನು ಎಳೆದು ತರುವುದಲ್ಲವೇ ನಮ್ಮ ಕೆಲಸ?ನಮ್ಮ ಕೆಲಸದ ಪಾಳಿಯ ಪ್ರಕಾರ ಇಂತಿಂಥಾ ದಿನ ಇಷ್ಟಿಷ್ಟೇಂದು ಸೂಕ್ಷ್ಮ ರೂಪದ ಜೀವಿಗಳನ್ನು ಎಳೆದು ತರುತ್ತಿದ್ದೆವು. ಪಾಳಿಯ ನಂತರ ನಮಗೂ ವಿಶ್ರಾಂತಿ ಬೇಡವೇ? ಇತ್ತೀಚೆಗೆ ಲೆಕ್ಖಕ್ಕೇ ಇಲ್ಲದ ಎಷ್ಟೊ ಜೀವಿಗಳು ತಮ್ಮ ಹೊರ ಶರೀರವನ್ನು ಅಕಾಲದಲ್ಲಿ ತ್ಯಜಿಸುತ್ತಿವೆ. ಇದರಿಂದ ನಮಗೆ ಹೆಚ್ಚುವರಿ ಕೆಲಸ ಬಿದ್ದಿದೆ. ಅದೂ ಅಲ್ಲದೆ ಈ ಹೊಸ ಬಗೆಯ ಸೂಕ್ಷ್ಮ ಶರೀರಿಗಳು ನಮಗೂ ನವನವೀನ. ನೋಡಲು ಬಹುತೇಕ ಮನುಷ್ಯರಂತೆ ಕಂಡರೂ ಪೂರ್ತಿ ಅವರಲ್ಲ. ಅದೂ ಅಲ್ಲದೆ ನಮ್ಮ ನಿಯಮಗಳಿಗನುಸಾರವಾಗಿ ಅವರು ನಡೆಯದೆ ಹೇಳಲಾದದಷ್ಟು ಕಷ್ಟಕೋಟಲೆ ಕೊಡುತ್ತಾರೆ. ನಮ್ಮ ಪಾಶಕ್ಕೆ ಸಿಕ್ಕದೆ ಕೋಡಂಗಿಗಳಂತೆ ತಪ್ಪಿಸಿಕೊಳ್ಳುತ್ತವೆ. ಅವುಗಳನ್ನು ಹಿಡಿದು ಹೆಡೆಮುರಿ ಕಟ್ಟಿ ತರುವಷ್ಟರಲ್ಲಿ ನಮ್ಮ ಹೆಣವೇ ಬಿದ್ದು ಹೋಗಿರುತ್ತದೆ. ಸಾವಿತ್ರಿಯ ಗಂಡ ಸತ್ಯವಾನನ ನಂತರದಲ್ಲಿ ನಾವಿಷ್ಟು ಪರಿಪಾಟಲು ಪಟ್ಟಿರಲೇ ಇಲ್ಲ. ಅದಾದರೂ ಎಂಥ ಶ್ರೇಯಸ್ಕರ ಅನುಭವವಾಗಿತ್ತು. ಉಳಿದ ಪ್ರಾಣಿಗಳಲ್ಲೂ ಆಗಾಗ ಈ ರೀತಿ ಆಗುವುದುಂಟು ;ಅದರೆ ಅವು ಇಷ್ಟೊಂದು ಹೈರಾಣ ಮಾಡುವುದಿಲ್ಲ. ಈ ಕೆಲಸ ಸಾಕೆನಿಸಿದೆ. ನಾವೆಲ್ಲ ಕೂಡಿ ರಾಜಿನಾಮೆ ಕೊಡಬೇಕೆಂದಿದ್ದೇವೆ” ಎಂದ ಒಂದೇ ಉಸಿರಿಗೆ.

ವಿಷ್ಣುವಿಗೆ ಬ್ರಹ್ಮನ ಮೇಲೆ ಅನುಮಾನ ಹೆಚ್ಚಾಯ್ತು. ಇವನೆಲ್ಲೊ ಮತ್ತೊಬ್ಬ ಹಿರಣ್ಯ ಕಶ್ಯಪುವಿಗೋ ಇಲ್ಲ ರಕ್ತಬೀಜಾಸುರನಿಗೋ ವರವಿತ್ತು ಪರಪಟ್ಟು ಮಾಡಿಕೊಂಡಿರಬೇಕೆಂದೇ ಅನುಮಾನದಿಂದ ಅವನತ್ತ ನೋದಿದ. ಬ್ರಹ್ಮನ ಮುಖದಲ್ಲಿ ದುಗುಡ ಮಡುಗಟ್ಟಿತ್ತೇ ವಿನಃ ಅಪರಾಧಿ ಮನೋಭಾವ ಕಾಣಲಿಲ್ಲ.


“ಸರಿ”, ಯಮಧರ್ಮನ ಕಡೆಗೆ ತಿರುಗಿದ ವಿಷ್ಣು, “ನಿನ್ನದೇನು ಹೇಳಿಬಿಡು; ಅದೂ ಕೇಳಿ ಬಿಡುತ್ತೇನೆ” ಎಂಬಂತೆ ಸನ್ನೆ ಮಾಡಿದ.

ದೊಡ್ದದೊಂದು ಉಸಿರೆಳೆದುಕೊಂಡ ಯಮಧರ್ಮ ತನ್ನನ್ನು ದೂರುವ ತೆರದಲ್ಲಿ ಫೀರ್ಯಾದು ಮಾಡಿದ ಯಮಭಟರ ಕಡೆಗೂ,ಎಲ್ಲ ತಪ್ಪೂ ಬ್ರಹ್ಮನದೇ ಎಂಬ ಅನುಮಾನದಿಂದ ಬ್ರಹ್ಮನ ಕಡೆಗೂ ನೋಡಿ ತನ್ನ ಪ್ರವರ ಶುರು ಹಚ್ಚಿಕೊಂಡ, ” ಮಹಾದೇವ, ಇವರುಗಳು ಹೇಳೀದ್ದೆಲ್ಲಾ ನೀನೇ ಕೇಳಿರುವೆ.ಇತ್ತೀಚೆಗೆ ಯಮಭಟರು ಎಲ್ಲಾ ವಿಷಯಕ್ಕೂ ನನ್ನನ್ನೇ ಕರೆಯುವ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ. ಇದೇನು ಅವರ ಕಾರ್ಯಕ್ಷಮತೆ ಕಡಿಮೆಯಾಗಿರುವ ಕುರುಹೋ ಇಲ್ಲಾ ಕರ್ತವ್ಯ ದಕ್ಷತೆ ಕ್ಷೀಣಿಸುತ್ತಿರುವ ಸೂಚನೆಯೊ,ಇಲ್ಲ ನನ್ನ ನಿರ್ದೇಶನ, ನಿಭಾವಣೆಗಳು ನಿರ್ನಾಮ ಅಗುತ್ತಿರುವ ಲಕ್ಷಣವೋ, ಅಥವಾ ಈ ಜೀವಿಗಳು ನಿಜವಾಗಿಯೂ ನಮ್ಮ ಪಟ್ಟಿಗೆ ಜಗ್ಗದ ವಿಲಕ್ಷಣ ಪ್ರಭೇದವೋ ಒಂದೂ ತಿಳಿಯದಾಗಿದೆ. ಈ ಯಮ ಭಟರು ನನ್ನನ್ನು ಕರೆದಾಗ ಹೋಗಿ ಆ ವಿಲಕ್ಷಣ ಜೀವಿಗಳನ್ನು ಹಿಡಿಯುವುದು ಒಂದು ಪ್ರಯಾಸಕರವಾದ ಕೆಲಸವಾಗಿಬಿಟ್ಟಿದೆ. ಅವುಗಳನ್ನು ಕೋಳಿ, ನಾಯಿ, ಹಂದಿಗಳಂತೆ ಅಟ್ಟಾಡಿಸಿಕೊಂಡು ಹಿಡಿಯುವುದರಲ್ಲಿ ಸಾಕು ಬೇಕಾಗಿಹೋಗಿದೆ. ನಾವು ಪಡುವ ಪರಿಪಾಟಲಿಗೆ ನನಗೇ ಒಮ್ಮೊಮ್ಮೆ ನಗು ಬರುವಂತಾಗುತ್ತದೆ.ಯಾರಾದರೂ ನೋಡಿಬಿಟ್ಟಲ್ಲಿ ನಗೆಪಾಟಲಿಗೀಡಾಗಿ ನನ್ನ ಮೇಲಿನ ಭಯ ಭಕ್ತಿಗಳನ್ನು ಎಲ್ಲಿ ಕಳೆದುಕೊಳ್ಳುವುನೋ ಎಂಬ ಚಿಂತೆಯೂ ಕಾಡುತ್ತಿದೆ. ದೇವಾ, ಇವು ಬಹಳ ಕುತಂತ್ರಿ ಜೀವಿಗಳು.ಅಷ್ಟೆಲ್ಲಾ ಕಷ್ಟ ಪಟ್ಟು ಹೆಡೆಮುರಿಕಟ್ಟೀ ಹಿಡಿದು ತಂದು ವಿಚಾರಣೆಗೆ ನಿಲ್ಲಿಸಿದೆವೋ,ಈ ಚಿತ್ರಗುಪ್ತ ಕೈಕೊಡುತ್ತಾನೆ. ಅವನ ದಫ್ತರಿನ ದೊಡ್ಡ ಪುಸ್ತಕಗಳಲ್ಲಿ ಅವುಗಳ ನಮೂದೇ ಇರುವುದಿಲ್ಲ. ನಾವೇ ಕಪಿಗಳಂತೆ ಮಿಕ ಮಿಕ ನೋಡುವುದಾಗುತ್ತದೆ. ಆ ಕಟಕಟಯಲ್ಲಿ ನಿಂತು ನಮ್ಮನ್ನೇ ನೋಡಿ ಗಹಗಹಿಸಿ ನಗುತ್ತವೆ.ನಮ್ಮನ್ನೇ ಪರಿಹಾಸ್ಯ ಮಾಡುತ್ತವೆ. ಧರ್ಮಪಾಲನೆಗೆ ನಿಂತ ನಾನು ಅವುಗಳ ಮೇಲಿನ ದಾಖಲೆ ಇಲ್ಲದೆ ಅಪವಾದ ಹೊರಿಸುವುದಾದರೂ ಹೇಗೆ, ವಿಚಾರಣೆ ಮಾಡುವುದಾದರೂ ಎಲ್ಲಿಂದ. ಭೋಲೋಕದಲ್ಲಿದಾಗ ಅವು ಮಾಡಿದ ಕುಚೇಷ್ಟೆಗಳೇನು ಕಡಿಮೆಯಿಲ್ಲ. ನ್ಯಾಯಯುತ , ಸಾಮಾನ್ಯ ಜೀವಿಗಳಿಗೆ ಇವು ಕೊಡುತ್ತಿರುವ ಕೋಟಲೆಗಳು ಒಂದೆರೆಡಲ್ಲ. ಆದರೆ ನಮಗೆ ಸೂಕ್ತ ದಾಖಲೆಗಳೇ ಇಲ್ಲದೆ ನಾವು ಮುಂದುವರಿಯುವುದಾದರೂ ಹೇಗೆ. ನಮ್ಮ ನಿಜ ಮಾನವರನ್ನು ನಾವು ಕಾಯಲಾಗದಂತಾಗಿದೆ.ನನಗೆ ಬರುವ ಸಿಟ್ಟಿಗೆ ಕಾದ ಎಣ್ಣೆ ಕೊಪ್ಪರಿಗೆಯಲ್ಲಿ ಎಸೆಯುವ ಬಯಕೆ ಆಗುತ್ತಿದೆ. ಕಷ್ಟಪಟ್ಟು ಗುರುತು ಹಿಡಿದು ಅವರ ಕರ್ಮ ಕಾಂಡಗಳ ಪಟ್ಟಿ ತೆಗೆದೆವೋ,ಅದರಲ್ಲಿನ ದಿನ, ಮಾಸ, ವಾರ, ತಿಥಿ, ವೇಳೆ ಇವೆಲ್ಲ ತಾಳೆ, ಹೊಂದಾಣಿಕೆ ಅಗುವುದಿಲ್ಲ. ಎಲ್ಲ ಅಯೋಮಯ. ನಮಗೇ ತಿರುಗಿ ಸವಾಲು ಹಾಕುತ್ತವೆ. ಈ ಚಿತ್ರಗುಪ್ತನಿಗೂ ಅರುಳು ಮರುಳೆಂದು ಕಾಣುತ್ತದೆ. ಒಟ್ಟಿನಲ್ಲಿ ನಾನೇ ನರಕ ವಾಸಿಯಾಗಿಬಿಟ್ಟಿದ್ದೇನೆ ನೋಡು. ಸಾವಿತ್ರಿ, ಸತ್ಯವಾನ, ನಚಿಕೇತ, ಧರ್ಮರಾಯ,ಭೀಷ್ಮನೇ ಮೊದಲಾದ ಮಹಾನ್ ವ್ಯಕ್ತಿಗಳೊಡನೆ ವ್ಯವಹರಿಸಿದ ನಾನು ಯಕಃಶ್ಚಿತ್ “ಬೇವಾರ್ಸಿ”ಗಳಂತಿರುವ ಈ ಸೂಕ್ಷ್ಮಜೀವಿಗಳಿಂದ ಅಪಹಾಸ್ಯಕ್ಕೊಳಗಾಗುವುದೆಂದರೇನು? ಇವರುಗಳನ್ನು ನಿಯಂತ್ರಿಸಲಾಗದೆ ಲೋಕದ ಪರಿಹಾಸ್ಯಕ್ಕೆ ಗುರಿಯಗುವೆನೆಂಬುವುದೇ ನೋವಿನ ಸಂಗತಿ ” ಎಂದೆಂದು ನಿಲ್ಲಿಸಿದ.

’ಬೇವಾರ್ಸಿ’ ಅಂತೇಕೆ ಅವುಗಳನ್ನು ಕರೆದ ಎಂದು ವಿಷ್ಣು ಚಿಂತಿಸುತ್ತಿರವಲ್ಲಿ, ತನ್ನ ಕರ್ತವ್ಯ ಪ್ರಜ್ಞೆಗೇ ಕೊಡಲಿಯೇಟು ಹಾಕಿದ ಯಮಧರ್ಮನನ್ನು ಮನದಲ್ಲೇ ನಿಂದಿಸುತ್ತಾ,, ಚಿತ್ರಗುಪ್ತ ತನ್ನ ಅಹವಾಲನ್ನೂ ಆಲಿಸಬೇಕೆಂದು ಸಣ್ನದನಿಯಲ್ಲಿ ಕೋರಿದ. ಎಂಥೆಂಥಾ ಹೇಮಾಹೇಮಿ ವ್ಯಕ್ತಿಗಳನ್ನೂ ಬಿಡದೆ ನಿರ್ದಾಕ್ಷಿಣ್ಯವಾಗಿ ಅವರುಗಳ ಧರ್ಮ-ಕರ್ಮಗಳನ್ನು ಬಯಲಿಗೆಳೆದು ಬೆತ್ತಲು ಮಾಡುತ್ತಿದ್ದ ಚಿತ್ರಗುಪ್ತ ಈಗ ತನ್ನ ಪರಿಣತಿಯನ್ನೇ ಸಂದೇಹಿಸುವ ಪರಿಸ್ಥಿತಿಯಲ್ಲಿ ಸಿಲುಕಿದ್ದ. ಈ ಲೋಕ ಸೃಷ್ಟಿಯಾಗಿ ಹಲವಾರು ಬ್ರಹ್ಮ ಕಲ್ಪಗಳು ಕಳೆದಿದ್ದರೂ, ಲೆಕ್ಖವಿಲ್ಲದಷ್ಟು ಜೀವಿಗಳ ಜೀವನದ ಲೆಕ್ಖಾಚಾರವನ್ನು ಕರಾರವಾಕಕಾಗಿ ಸೂಪರ್ ಕಂಪ್ಯೂಟರ್ನಂತೆ ದಾಖಲಿಸಿ ,ಬೇಕೆಂದಾಗ ಮಿಂಚಿನೋಪಾದಿಯಲ್ಲಿ ಹೊರಗಳೆದು ಪ್ರಸ್ತುತಪಡಿಸುತ್ತಿದ್ದ ತಾನು ಇತ್ತೀಚಿನ ಕೆಲವೇ ವರ್ಷಗಳಲ್ಲಿ ಈ ರೀತಿ ತಲೆ ಬುಡಗಳು ಹೊಂದಾಣಿಕೆಯಾಗದಂತೆ ದಾಖಲಿಸುವುದೆಂದರೇನು? ತಾನು ಎಷ್ಟೇ ಪ್ರಯತ್ನ ಪಟ್ಟರೂ ಇದರ ಮರ್ಮ ತನಗೆ ಅರ್ಥವಾಗದೆ ಹೋದದ್ದೇನು?ಮೊದಲ ಹೆಜ್ಜೆಯಲ್ಲಿ ತಪ್ಪು ಮಾಡಿದ ಗಣಿತಜ್ಞ್  ಕಡೆಯಲ್ಲಿ ಉತ್ತರವನ್ನು ತಪ್ಪೇ ಪಡೆಯುವಂತೆ ಬ್ರಹ್ಮ ಕೊಟ್ಟ ಲೆಕ್ಖವೇ ತಪ್ಪಿದ್ದರೆ ಅದು ತನ್ನ ದೋಷವಾಗುವುದಾರರೂ ಎಂತು? ತನ್ನ ಯಾವ ಪಾಪಕಾರ್ಯಕ್ಕೆ ತನಗೀ ಪರೀಕ್ಷೆಯನ್ನು ಈ ವಿಧಿ ತಂದೊಡ್ಡಿರಬಹುದು?ಎಂಬೆಲ್ಲಾ ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಂಡು, ಉತ್ತರ ಸಿಗದೆ ತಡಕಾಡುತ್ತಾ ತಳಮಳಗೊಳ್ಳುತ್ತಿದ್ದ.
ವಿಷ್ಣುವು ತಲೆಯಾಡಿಸಿ ನೀನೂ ಅರುಹೆನ್ನಲು,, ತನ್ನೆಲ್ಲ ಸಂದೇಹಗಳನ್ನು ವಿಷ್ಣುವಿಗೆ ವರ್ಗಾಯಿಸಿ ಇದರಲ್ಲಿ ತನ್ನ ತಪ್ಪಿಲ್ಲವೆಂದೂ,ಇದೇನೋ ಮಾಯೆಯ ಮಸಲತ್ತೇ ಇರಬೇಕೆಂದೂ,ತನ್ನ ತಲೆ ಕೆಟ್ಟು ಗೊಬ್ಬರವಾಗುವುದರೊಳಗೆ ಇದಕ್ಕೊಂದು ಪರಿಹಾರ ಸೂಚಿಸಬೇಕೆಂದೂ,ಇಲ್ಲವಾದರೆ ತನ್ನನ್ನು ವಜಾ ಮಾಡಿ ಮನೆಗೆ ಕಳಿಸಬೇಕೆಂದೂ ಕೋರಿದ.

ವಿಷ್ಣುವಿಗೆ ಪೀಕಲಾಟಕ್ಕಿಟ್ಟುಕೊಂಡಿತು.ಆಗ ಇಲ್ಲಿಯವರೆಗೂ ಸುಮ್ಮನಿದ್ದು ತನ್ನ ಸಮಸ್ಯೆಯನ್ನು ಪೂರ್ಣ ಹೇಳಿಕೊಂಡಿರದ ಭೂದೇವಿಯು “ದೇವಾ ನಾನು ಕಡೆಯಲ್ಲಿ ಹೇಳಬೇಕಾದದ್ದು ಇದೇ ಸಮಸ್ಯೆಗೆ ತಳುಕು ಹಾಕಿಕೊಂಡಿದೆ. ಈ ಹೊಸ ಬೆಳವಣಿಗೆಯು ನನಗೆ ಬಹಳ ತಳಮಳ ಉಂಟುಮಾಡಿದೆ. ಇದು ಹೀಗೇ ಮುಂದುವರಿದಲ್ಲಿ ನನ್ನನ್ನು ಕಾಡುತ್ತಿರುವ ಇವರುಗಳು ನಿಯಂತ್ರಣಕ್ಕೆ ಸಿಗದೆ ಜೀವಸಹಿತ ತಿಂದುಬಿಡುವರು.ನಿನ್ನ ಸೃಷ್ಟಿಯಲ್ಲಿಯೇ ಅತೀ ಸುಂದರಳೆಂದು ಖ್ಯಾತಿವೆತ್ತಿದ್ದ ನಾನು ಈಗ ಕುರೂಪಿಯಾಗುತ್ತ ನಡೆದಿದ್ದೇನೆ. ಅದಕ್ಕೇ ನಿನಗೆ ನನ್ನ ಮೇಲಿನ ವ್ಯಾಮೋಹ ಹೊರಟು ಹೋಯಿತೋ?” ಎಂದೆನ್ನುತ್ತಾ ಅವನ ಅಂತರಾಳಕ್ಕೆ ಕೈಹಾಕಿ ಚಿವುಟಿದಳು.

ಮುಖ ಹುಳ್ಳಗೆ ಮಾಡಿದ ವಿಷ್ಣು ಲಕ್ಷ್ಮಿಯ ಕಡೆಗೊಮ್ಮೆ ಕಳ್ಳನೋಟ ಬೀರಿದ. ಅವಳು ಸಮಸ್ಯಯಲ್ಲಿ ತಾನೂ ಕುತೂಹಲಗೊಂಡಿದ್ದು ಭೂದೇವಿಯ ಮರ್ಮಾಘಾತ ಮಾತಿಗೆ ಸವತಿ ಪ್ರತಿಕ್ರಿಯೆ ನೀಡಲಿಲ್ಲ. ನಿರಾಳವಾದ ವಿಷ್ಣುವು ಯೋಚಿಸಿದ.’ ಇವರೆಲ್ಲರ ಪರಿಪಾಟಲಿನ ಕಷ್ಟಕೋಟಲೆಗಳ ಮೂಲಕಾರಣ ಒಂದೇ ಇರಬೇಕು. ಅದನ್ನು ಕಂಡು ಹಿಡಿದರೆ ಅರ್ಧ ಕೆಲಸ ಮುಗಿದಹಾಗೆ’ ಎಂದುಕೊಂಡು ಎಲ್ಲಿಂದ ಶುರು ಮಾಡಲೀಯೆಂದು ಯೊಚಿಸತೊಡಗಿದ.

ಆದಿಶೇಷನ ಮೇಲೆ ಒರಗಿದ್ದ ವಿಷ್ಣು ಎದ್ದು ಸರಿಯಾಗಿ ಕುಳಿತು ಅವರನ್ನೆಲ್ಲ ಉದ್ದೇಶಿಸಿ ನುಡಿದ ” ನಿಮ್ಮೆಲ್ಲಾ ಸಮಸ್ಯೆಗಳ ಮೂಲ ಒಂದೇ ಸಾಮಾನ್ಯಕಾರಣದಿಂದ ಉದ್ಭವಿಸಿರಬೇಕು. ಎಲ್ಲರ ಸಮಸ್ಯೆಗಳು , ಅದರ ಕಥೆಗಳನ್ನು ಇದುವರೆಗೂ ಕೇಳಿದಿರಿ. ಅದರಿಂದ ಈಗ ನಿಮಗೇನಾದರೂ ಹೊಳೆಯಿತೋ?”.

ಬಸವಳಿದು ಹೈರಾಣವಾಗಿದ್ದ ಅವರ್ಯಾರೂ ಯೋಚಿಸುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲರೂ ಒಕ್ಕೊರಲಿನಿಂದ, ” ದೇವಾ ಜಗದೋದ್ಧಾರನೂ,ಸರ್ವಾಂತರ್ಯಾಮಿಯೂ,ಜಗನ್ನಿಯಾಮಕನೂ,ನಮ್ಮೆಲ್ಲರನ್ನು ಆಡಿಸುವ ಸೂತ್ರಧಾರಿಯೂ ಆಗಿರುವ ನೀನೇ ಇದಕ್ಕೆ ಸಮರ್ಪಕ ಪರಿಹಾರ ಕೊಡಿಸಬೇಕು. ನಾವೆಲ್ಲಾ ಅಸಹಾಯಕರು” ಎಂದು ಉದ್ಘೊಷಿಸುತ್ತಾ ಅವನ ಕಾಲಿಗೆ ಬಿದ್ದರು.

ಅಷ್ಟರಲ್ಲಿ ನಾರದರ ಆಗಮನ ಆಯ್ತು, “ನಾರಾಯಣ, ಇದೇನು ಎಲ್ಲರೂ ನಿನ್ನ ವೈಕುಂಠದಲ್ಲಿ ಠಿಕಾಣಿ ಹಾಕಿಬಿಟ್ಟಿದ್ದಾರೆ? ಕೆಲಸಕಾರ್ಯಗಳಿಗೆಲ್ಲ ಇವತ್ತು ರಜೆಯೋ ಹೇಗೆ” ಎಂದು ಕೀಟಲೆ ಮಾಡಿದರು.

ವಿಷ್ಣುವು ಅವರನ್ನು ಕುರಿತು, ” ನಾರದರೇ ಇವರಿಗೆ ಬಂದಿರುವ ಕಷ್ಟ ನಿಮಗೆ ತಿಳಿದೇ ಇರುತ್ತದೆ. ಇದೆಲ್ಲದರ ಕಾರಣ ನಿಮಗೆ ತಿಳಿದಿದೆಯೋ?” ಕೇಳಿದ.

ನಾರದರಿಗೆ ಆಶ್ಚರ್ಯ,, ಸಂಬಂಧದಲ್ಲಿ ನಾನು ಕಿರಿಯ, ಬ್ರಹ್ಮನ ಮಗನಾದ ನಾನು ಇವನಿಗೆ ಮೊಮ್ಮಗನಾಗಬೇಕು. ಯಾವಾಗಲೂ ನೀನು, ತಾನು ಎಂದು ಏಕವಚನದಲ್ಲಿ ಕರೆಯುತ್ತಿದ್ದ ಇವತ್ತು ನೀವು, ನಿಮಗೆ ಎಂಬ ಬಹುವಚನ ಪ್ರಯೋಗ ಮಾಡುತ್ತಿದ್ದಾನಲ್ಲ!, ತಲೆ ಬಿಸಿ ಆಗಿರಲೇ ಬೇಕು ಎಂದು ಅವರಿಗೆ ಗೊತ್ತಾಯಿತು.

ಕಬ್ಬಿಣ ಕಾದಿರುವಾಗಲೇ ಬಡಿಯಬೇಕೆಂದು ತಮ್ಮ ಎಂದಿನ ಧಾಟಿಯಲ್ಲಿ ಹೇಳಿದರು, “ಹೇ ಭಗವಂತಾ, ಬ್ರಹ್ಮಾಂಡವೇ, ಆ ದೇವನಾಡುವ ಬೊಂಬೆಯಾಟವಯ್ಯ, ಅಂಬುಜ ನಾಭನ, ಅಂತ್ಯವಿಲ್ಲದಾತನ ತುಂಬು ಮಾಯವಯ್ಯಾ… ಈ ಲೀಲೆಯು …ಎಂದು ನಾನು ನಿನ್ನನ್ನು ಯಾವತ್ತಿನಿಂದಲೂ, ಅದೆಷ್ಟು ಬಾರಿ ಸ್ತುತಿಸಿಲ್ಲ. ಈಗ ನೋಡಿದರೆ ಭೂಮಿಯಲ್ಲಿ ಬೇರೆಯೇ ಆಟ ನಡೆದಿದೆ. ಅಲ್ಲಿ, ಆ ಭೂಮಿಯಲ್ಲಿ, ನೀನು ಸೂತ್ರ ಕಟ್ಟಿರದ, ನಿನ್ನ ರಾಗದಾ ಭೋಗದಾ ಉರುಳಲ್ಲಿ ಸಿಕ್ಕಿರದ ಅದೆಷ್ಟೋ ಬೊಂಬೆಗಳು ಅವತರಿಸಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.ಅವು ಇವರೆಲ್ಲರ ಕಾರ್ಯವಿಧಾನಕ್ಕೆ ಕೊಡಲಿ ಪೆಟ್ಟು ಕೊಡುತ್ತಿರುವುದೂ ನೋಡಿದ್ದೇನೆ. ಇದು ಹೀಗೇ ಮುಂದುವರಿದರೆ ನನ್ನ ಈ ಹಾಡಿಗೆ ಅರ್ಥವಿಲ್ಲದೆ ಹೋಗುತ್ತದೆ. ಅದರ ಸಾಹಿತ್ಯ ಬದಲಾಯಿಸಬೇಕಾಗುವುದು. ನಾನು ಕೇವಲ ಸುದ್ದಿಗಾರನಷ್ಟೇ. ನನಗೆ ಕಾರ್ಯಕಾರಣ ಸಂಬಂಧ ತಿಳಿಯದು. ಆದರೂ ಇದು ಮಾನವರು ಕಲಿತುಕೊಂಡಿರುವ ವೈದ್ಯವಿಜ್ಞ್ನಾನದ ಕರಾಮತ್ತೆಂದು ತೋರುತ್ತಿದೆ. ಯಾವುದಕ್ಕೂ ಅಶ್ವಿನೀ ದೇವತೆಗಳನ್ನು ಕರೆಸಿ ನೋಡು” ಎಂದರು. ಯಾವತ್ತಿನಂತೆ ಅಪೂರ್ಣ ಸಲಹೆ ನೀಡಿ ಮತ್ತಷ್ಟು ಮಜಾ ಪಡೆಯುವ ನಾರದರ ಬುದ್ಧಿ ಅಲ್ಲೂ ಸುಮ್ಮನಿರಲಿಲ್ಲ,. ಈ ನಾರದ ನನ್ನ ಪಾರಮ್ಯವನ್ನೇ ಪ್ರಶ್ನಿಸಬಲ್ಲ ಸನ್ನಿವೇಶದ ಮಾತಾನಾಡುತ್ತಿದ್ದಾನಲ್ಲ. ಇದೇನಿರಬಹುದು. ಸ್ವಲ್ಪ ಮೈಮರೆತಿದ್ದಕ್ಕೆ ಏನೇನೋ ನಡೆದು ಹೋಗಿದೆ ಎಂದು ಕಿರೀಟ ತೆಗೆದು, ತಲೆ ಕೆರೆದುಕೊಂಡು ಅಶ್ವಿನೀದೇವತೆಗಳನ್ನು ಕರೆಸಿದ.

ಅವರುಗಳಿಬ್ಬರೂ ಬಂದರು. ಈ ನಡುವೆ ಕೆಲಸವಿಲ್ಲದ್ದಕ್ಕೋ ಏನೋ ಒಂದು ರೀತಿಯ ಆಲಸ್ಯ ಅವರ ಮುಖದಲ್ಲಿ ಮನೆ ಮಾಡಿತ್ತು. ದೇಹವೂ ಸ್ವಲ್ಪ ಸ್ಥೂಲವಾದ್ದು ಮುರಾರಿಯ ಗಮನಕ್ಕೆ ಬಾರದಿರಲಿಲ್ಲ. “ಏನ್ರೀ ಸಮಾಚಾರ. ಏನಾಗ್ತಿದೆ ಅಲ್ಲಿ, ಅ ಭೂಲೋಕದಲ್ಲಿ” ಎಂದು  ಕೇಳಿದ.

ಅವರು ” ದೇವಾಧಿದೇವಾ, ಮಾನವರು ಬಹಳವಾಗಿ ಮುಂದುವರಿದಿದ್ದಾರೆ. ಬಗೆ ಬಗೆಯ ಔಷಧಿಗಳನ್ನೂ, ಶಸ್ತ್ರಚಿಕಿತ್ಸಾ ವಿಧಾನಗಳನ್ನೂ ಕಂಡುಹಿಡಿದುಕೊಂಡಿದ್ದಾರೆ. ಬಹಳಷ್ಟು ಖಾಯಿಲೆಗಳಿಗೆ ಮದ್ದು ಸಿಕ್ಕಿರುವುದರ ಪರಿಣಾಮ, ಮಕ್ಕಳಿಗೆ ಖಾಯಿಲೆಯಾದಾಗ ತಾಯಂದಿರು ನಮ್ಮನ್ನು ನೆನೆಯುವುದೇ ಇಲ್ಲ. ’ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊ’ ಎಂಬಿತ್ಯಾದಿ ಹಾಡುಗಳು ಅವರ ನೆನಪಿನಲ್ಲೇ ಇಲ್ಲ. ಅವರುಗಳು ಕರೆಯುತ್ತಿಲ್ಲವಾಗಿ ನಾವು ಆಕಡೆ ತಲೆ ಹಾಕದೆ ವರ್ಷಗಳೆ ಉರುಳಿಹೋದವು. ’ಬರೆಯದೆ ಓದುವನ, ಕರೆಯದೇ ಹೊಗುವನ ಬರಿಗಾಲಿನೋಲ್ ತಿರುಗುವನ ಹಿಡಿದು’ ಎಂಬ ವಚನವೇ ಇದೆಯಲ್ಲ. ನಾವಾದರೂ ಏನು ಮಾಡಬಹುದು. ಎಲ್ಲ ನಿನ್ನ ನಿಯಾಮಕವೇ ಇರಬಹುದೆಂದು ನಾವು ಸುಮ್ಮನಿದ್ದೆವು’” ಎಂದು ಹೇಳಿ ತಮ್ಮ ಬೆನ್ನ ಮೇಲಿನ ಭಾರ ಇಳಿಸಿಕೊಂಡರು.!

ಈಗ ಬಂದಿರುವ ಹೊಸ ಸಮಸ್ಯೆಯನ್ನು ಅವರಿಗೆ ವಿವರಿಸಿ,ಈಗಿಂದೀಗಲೇ ಭೂಮಿಗೆ ತೆರಳಿ ಮಾನವರೂಪದಲ್ಲಿದ್ದು,ಅವರ ಎಲ್ಲ ಕಾರ್ಯಕಲಾಪಗಳನ್ನೂ, ಈ ಎಲ್ಲ ಅಯೋಮಯವಾಗಿರುವ ಪರಿಸ್ಥಿತಿಯ ಕಾರ್ಯಕಾರಣ ಸಂಬಂಧಗಳನ್ನೂ ಕೂಲಂಕುಷವಾಗಿ ವಿಶ್ಲೇಷಿಸಿ ತಂದು ತನಗೆ ಕರಾರುವಾಕ್ ವರದಿ ಒಪ್ಪಿಸಬೇಕೆಂದು ಆಜ್ಞಾಪಿಸಿ ಕಳಿಸಿದ. ಹಿಂದೆ ಸಂಜೀವಿನಿ ವಿದ್ಯೆ ಕಲಿಯಲೆಂದು ದೈತ್ಯ ಗುರು ಶುಕ್ರಾಚಾರ್ಯನ ಬಳಿಗೆ ಹೋದ ದೇವಗುರು ಬೃಹಸ್ಪತಿಯ ಮಗ ಕಚ ಅಲ್ಲಿ ದೇವಯಾನಿಯ ಪ್ರೇಮಪಾಶದಲ್ಲಿ ಸಿಕ್ಕು , ಪ್ರೇಮ ನಿಭಾಯಿಸದೆ ಅವಳಿಂದ ದೂರವಾಗಿ, ಮತ್ತೆ ಶಾಪಕ್ಕೆ ತುತ್ತಾಗಿ ಕೈಗೆ ಬಂದದ್ದು ಬಾಯಿಗೆ ಬರದಂತೆ ಆದಹಾಗೆ ಮಾಡಿಕೊಳ್ಳಬಾರದೆಂದೂ, ಹೆಣ್ಣು ಹೊನ್ನುಗಳ ಜೇನಿನ ಜೇಡರಬಲೆಯನ್ನು ನೇಯುವುದರಲ್ಲಿ ಮನುಷ್ಯರು ದಾನವರನ್ನೂ ಮೀರಿಸುವವರಾಗಿದ್ದಾರೆಂದೂ, ಯಾವ ಅವಘಡದಲ್ಲೂ ಸಿಲುಕದಂತೆ ಜಾಗ್ರತೆಯಿಂದ ಜಾಗರೂಕರಾಗಿ ನಿಭಾಯಿಸಿಕೊಂಡು ಬರಬೇಕೆಂಬ ಎಚ್ಚರಿಕೆಯನ್ನು ಕೊಡೊವುದನ್ನು ಮರೆಯಲಿಲ್ಲ.


ಅಶ್ವಿನೀ ದೇವತೆಗಳು ಅವಳಿ -ಜವಳಿ ವಿಜ್ಞ್ನಾನಿಗಳ ರೂಪದಲ್ಲಿ ಇಳೆಗಿಳಿದು ಜೀವ ವಿಜ್ಞ್ನಾನ ಪ್ರಯೋಗಶಾಲೆಯೊಂದರಲ್ಲಿ ತಮ್ಮ ಅಪ್ರತಿಮ ಪ್ರತಿಭೆ ಪ್ರದರ್ಶಿಸಿ ಕೆಲಸಕ್ಕೆ ಸೇರಿದರು. ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಎಲ್ಲ ಒಳಮರ್ಮ ತಿಳಿದು ದಿಗ್ಭ್ರಮೆಗೊಂಡರು. ಬ್ರಹ್ಮನನ್ನು ಹೊರತು ಪಡಿಸಿದರೆ ಈ ಪ್ರಪಂಚದ ಸೃಷ್ಟಿಗೆ ಕೈಹಾಕಿದವನು ವಿಶ್ವಾಮಿತ್ರ ಮಾತ್ರನಾಗಿದ್ದ. ಅವನನ್ನು ಆ ಕೆಲಸದಿಂದ ವಿಮುಖಗೊಳಿಸಿದ ಇಂದ್ರ ತನ್ನ ಸ್ವರ್ಗಾಧಿಪತ್ಯವನ್ನು ಅನನ್ಯವಾಗಿ ಉಳಿಸಿಕೊಂಡಿದ್ದ. ಈಗ ನೋಡಿದರೆ ಒಬ್ಬಿಬ್ಬರಲ್ಲ ಎಷ್ಟೋ ಜನಗಳು ತಾವೇ ವಿಶ್ವಾಮಿತ್ರರಾಗುವ ಹವಣಿಕೆಯಲ್ಲಿದ್ದಾರೆ.! ನೇರವಾಗಿ ವೈಕುಂಠಕ್ಕೆ ನಡೆದರು.

ವಿಷ್ಣು ಲಗುಬಗೆಯಿಂದ ಬರಮಾಡಿಕೊಂಡ. ಆದಿಶೇಷ, ತನ್ನ ಬಾಲವನ್ನು ಎಳೆದು ಅವರಿಬ್ಬರಿಗೂ ಕುಳಿತುಕೊಳ್ಳಲು ಆಸನವನ್ನಾಗಿ ಮಾಡಿಕೊಟ್ಟ. ಅವರು ಕುಳಿತು ಸುಧಾರಿಸಿಕೊಂದು ಹೇಳತೊಡಗಿದರು, “ದೇವಾಧಿದೇವಾ.. ನೀನೇಕೆ ಇಷ್ಟುದಿನ ಈ ಮನುಷ್ಯರಿಗೆ ಲಂಗು ಲಗಾಮಿಲ್ಲದೆ ಬಿಟ್ಟುಬಿಟ್ಟೆ? “ಎಂದು ಕೇಳಿದರು

ವಿಷ್ಣುವಿನ ಕೋಪ ನೆತ್ತಿಗೇರಿತು. “ಎಲ್ಲಾ ನಾನೇ ಮಾಡಿದರೆ ನಿಮಗೆಲ್ಲ ದೇವತೆಗಳ ಸ್ಥಾನ ಯಾಕೆ ಕೊಡಬೇಕ್ರಯ್ಯಾ? ನನ್ನನ್ನೇ ದೂಷಿಸುತ್ತೀರಲ್ಲ. ನೀವುಗಳು ಎಚ್ಚರಿಕೆಯಿಂದ ಗಸ್ತು ತಿರುಗಿ ವಿಷಯ ಸಂಗ್ರಹಿಸಿ ನನಗೆ ತಂದರಲ್ಲವೇ ನಾನು ಅದಕ್ಕೆ ತಕ್ಕಂತೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಸಾವಿರಾರು ವರ್ಷಗಳಿಂದ ನಿಮ್ಮಗಳ ಸುಳಿವೇ ಇಲ್ಲ.ಭೂಲೋಕದ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಭರದಿಂದ ನಡೆದು, ನನ್ನ ಹುಂಡಿಗಳು ತುಂಬುತ್ತಿರುವುದರಿಂದ ನಾನೂ ಧರ್ಮ ಇರಬಹುದೆಂದು ಸುಮ್ಮನೆ ದೀರ್ಘ ವಿಶ್ರಾಂತಿಯಲ್ಲಿದ್ದೆ. ಸರಿ ಈಗ ನೀವು ತಿಳಿದುಬಂದ ವಿಷಯವೇನು ಅದನ್ನು ಮೊದಲು ಹೇಳಿ ” ಎಂದ.

ಅಶ್ವಿನಿಗಳು ಗಂಟಲು ಸರಿ ಮಾಡಿಕೊಂಡು ಹೇಳಲುಪಕ್ರಮಿಸಿದರು. “ದೇವಾ ಎಲ್ಲಿಂದ ಹೇಗೆ ಶುರು ಮಾಡಬೇಕೆಂದು ತೋರುತ್ತಿಲ್ಲ. ಸರಿ ಇಲ್ಲಿ ಕೇಳು, ಈ ಎಲ್ಲ ಅವಾಂತರದ ಮೂಲ ಮನುಷ್ಯರು ವಿಶ್ವಾಮಿತ್ರರಂತೆ ವಿಶ್ವ ಸೃಷ್ಟಿಯ ಸಾಹಸಕ್ಕೆ ಕೈಹಾಕುತ್ತಿರುವುದೇ ಆಗಿದೆ. ಇರುವ ಪ್ರಾಣಿ ಪಕ್ಷಿಗಳನ್ನು ಕೊಂದುಹಾಕುತ್ತಿದ್ದಾರೆ. ಭೂದೇವಿ ಹೇಳಿದಂತೆ ಹಣ ಐಷಾರಾಮಕ್ಕಾಗಿ ಏನೆಲ್ಲವನ್ನೂ ಮಾಡುತ್ತಿದ್ದಾರೆ. ತಾವಿದ್ದಲ್ಲಿಯೇ ಸ್ವರ್ಗ ಸೃಷ್ಟಿಯ ಹವಣಿಕೆಯಲ್ಲಿದ್ದಾರೆ. ಸತ್ತು ಹೇಳ ಹೆಸರಿಲ್ಲದಂತೆ ನಶಿಸಿ ಹೋಗಿರುವ ಜೀವಿಗಳನ್ನೂ ಭೂ ಗರ್ಭದಿಂದ ಹೊರಗೆಳೆದು ಅವುಗಳ ಪಳೆಯುಳಿಕೆಗಳಿಂದಲೇ ಮರುಸೃಷ್ಟಿಸುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಇದೆಲ್ಲಕ್ಕೂ ಕಳಶಪ್ರಾಯವೆಂಬಂತೆ ರಕ್ತಾಬೀಜಾಸುರನ ತೆರದಲ್ಲಿ ತಾವೇ ಅಭಿವೃದ್ಧಿ ಪಡಿಸಿಕೊಂಡಿರುವ ತಾಂತ್ರಿಕ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಜೀವಕೋಶಾಸುರರಾಗಿ ಮೆರೆಯಲು ಹೊರಟಿದ್ದಾರೆ. ಬ್ರಹ್ಮದೇವರ ವರವೋ,ಇಲ್ಲಾ ಶಂಕರನ ಅನುಗ್ರಹವೋ ತಿಳಿಯದು. ಅವರ ಈ ಕಾರ್ಯ ನೋಡಿದರೆ ನಮಗೇಕೋ ಅನುಮಾನ. ಈ ಎಲ್ಲಾ ಬ್ರಹ್ಮ ರುದ್ರಾದಿ ದೇವಾನುದೇವತೆಗಳ ಪರಿಪಾಟಲುಗಳಷ್ಟೂ ಮನುಷ್ಯರ ಈ ಕ್ರಿಯೆಯಿಂದಲೇ ಉದ್ಭವವಾಗಿರುವುದು. ಅವರನ್ನು ಹುಲುಮಾನವರೆಂದಾಗಲೀ, ನರಜಂತುಗಳೆಂದಾಗಲೀ ಕರೆಯುವುದು ಕಷ್ಟಕರವಾಗುವುದು ನೋಡು” ಎಂದಂದು ನಿಲ್ಲಿಸಿದರು.

ವಿಷ್ಣುವು ತಲೆದೂಗುತ್ತಾ,, ಅವರು ಈ ದುಸ್ಸಹಸಕ್ಕೆ ಕೈಹಾಕಿದ್ದ್ದಾದರೂ ಹೇಗೆ, ಅವರಿಗೆ ಈ ಉಪಾಯಗಲೆಲ್ಲ ಹೇಗೆ ಹೊಳೆಯಿತು,ಅವರು ಇವುಗಳನ್ನು ಸಾಧಿಸುತ್ತಿರುವ ವಿಧಿ ವಿಧಾನಗಳೇನು ವಿವರಿಸುವಂಥವನಾಗು ಎಂದು ಅಪ್ಪಣೆ ಕೊಡಿಸಿದನು.


“ಅನಿರುದ್ಧನೇ, ನಾವು ಈಗ ಹೇಳುವುದನ್ನು ಕೇಳಿ, ಯಾವುದೋ ಕಪೋಲ ಕಲ್ಪಿತ ಕಥೆ ಹೇಳುತ್ತಿದ್ದೇವೆಂದು ನಮ್ಮನ್ನು ದೂರಬೇಡ. ಊಹಿಸಲಸದಳ ರೀತಿಯಲ್ಲಿ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ. ವಿಶ್ವಾಮಿತ್ರನಾದರೋ ತನ್ನ ತಪೋ ಬಲದಿಂದ ವರವನ್ನು ಪಡೆದಿದ್ದ. ಅವನು ಕಲಿತ ವಿದ್ಯೆ ಅವನಿಗಷ್ಟೆ ಸೀಮಿತವಾಗಿತ್ತು. ಇಲ್ಲಿ ಹಾಗಲ್ಲ.ಒಮ್ಮೆ ಕರಗತವಾದರೆ ಹಲವರು ಅದನ್ನು ಕಲಿಯಬಹುದಾಗಿದೆ.ಅವರ ಈ ಎಲ್ಲ ಕೈಂಕರ್ಯಕ್ಕೆ ತ್ರಿಮೂರ್ತಿಗಳಾದ ನೀವು ಹಾಗೂ ನಿಮ್ಮ ಪತ್ನಿಯರೇ ಪ್ರೇರಣೆಯಂತೆ. ಅವರಿಗೆ ಈ ಎಲ್ಲ ಯೋಚನೆಗಳೂ ಪುರಾಣಗಳ ಮುಲಕವೇ ಬಂದವಂತೆ. ಅವರು ನಡೆಸುತ್ತಿರುವ ಈ ಕ್ರಿಯೆಗೆ ತದ್ರೂಪುತಳಿ ಸೃಷ್ಟಿಯೆಂದು ಕರೆಯಬಹುದು- ಅಂದರೆ, ರಕ್ತಬೀಜಾಸುರನ ಪ್ರತಿ ಹನಿ ರಕ್ತಕ್ಕೂ ಅವನಂತೆಯೇ ಇದ್ದ ರಾಕ್ಷಸ ಹುಟ್ಟುವಂತೆ, ಈ ಮಾನವರು ತಮ್ಮ ದೇಹದ ಜೀವಕೋಶವೊಂದನ್ನು ತೆಗೆದು ಅದನ್ನು ಸಂಸ್ಕರಿಸಿ, ಅದರಿಂದ ತಮ್ಮಂತೆಯೇ ಇರಬಲ್ಲ ಜೀವಿಯೊಂದರ ಸೃಷ್ಟಿಮಾಡಲು ಕೈಹಾಕುತ್ತಿರುವುದೇ ಇವೆಲ್ಲಾ ಅವಗಢಗಳಿಗೆ ಕಾರಣ. ಇದಕ್ಕೆ ಅವರು ಠೀವಿಯಿಂದ ”ಕ್ಲೋನಿಂಗ್” ಎಂದು ಕರೆಯುತ್ತಿದ್ದಾರೆ. ನಿನ್ನ ನಾಭಿಯಿಂದ, ಅಂದರೆ ಅಗಾಧ ಸಾಧ್ಯತೆಗಳಿರಬಲ್ಲ ಜೀವಕೋಶಗಳನ್ನು ಹೊಂದಿರುವ ಹೊಕ್ಕುಳುಬಳ್ಳಿಯಿಂದ ಬ್ರಹ್ಮ ಹುಟ್ಟಿದ್ದೂ, ಪಾರ್ವತಿಯ ಮೈ ಮಣ್ಣಿನಿಂದ ಗಣೇಶ ಹುಟ್ಟಿದ್ದೂ, ವಿಶ್ವಾಮಿತ್ರಸೃಷ್ಟಿಯ ಸಾಧ್ಯತೆಯ ಕಥೆಯೂ, ರಕ್ತ ಬೀಜನ ಕಥೆಯೂ ಅವರಿಗೆ ಸ್ಫೂರ್ತಿಯಂತೆ. ಇದೇ ಕಾರಣಕ್ಕೆ ಬ್ರಹ್ಮನ ಲೆಕ್ಕಕ್ಕೆ ಸಿಗದ, ಯಮಧರ್ಮನ ಪಾಶಕ್ಕೆ ಮಣಿಯದ, ಚಿತ್ರಗುಪ್ತನ ಕರ್ಮಾವಳಿಯ ತಾಳ ಮೇಳ ತಪ್ಪಿಸುತ್ತಿರುವ, ಭೂ ಸಂಪತ್ತಿನ ನಾಶಕ್ಕೂ, ಭೂ ದೇವಿಯ ಕ್ಲೇಶಕ್ಕೂ ಕಾರಣವಾದ ಜೀವಿಗಳ ಸೃಷ್ಟಿಯು ಭೂ ಲೋಕದಲ್ಲಿ ಆಗುತ್ತಿದೆ. ಇದರಲ್ಲಿ ಮನುಜಮಾತ್ರರು ಪೂರ್ತಿ ಸಫಲರಾಗಿದ್ದರೆ ಎಂದಲ್ಲ. ಇದು ಇನ್ನೂ ನಿಧಾನವಾಗಿ ವಿಕಾಸಗೊಳ್ಳುತ್ತಿರುವ ತಂತ್ರ. ಹಾಗಾಗಿ ಅಲ್ಲಲ್ಲಿ ನಿಯಂತ್ರಣಕ್ಕೆ ಸಿಗದೆ ಕೆಲವು ಪೂರ್ತಿ ಸರಿಯಾಗಿ, ಕೆಲವು ಕುರೂಪಿಗಳಾಗಿ, ಕೆಲವು ವಿಕಾರಗಳಿಂದ ಕೂಡಿದವರಾಗಿ, ಹೇಗೋ-ಹೇಗೋ ಇರುವಂಥವರಾಗಿ, ಯಾವ ಯಾವುದೂ ಖಾಯಿಲೆ ಕಸಾಲೆಗಳಿಂದ ನರಳುತ್ತಿರುವವರಾಗಿ , ಕೆಲವು ದೀರ್ಘಾಯುಗಳಾಗಿ, ಕೆಲವು ಅಲ್ಪಾಯುಗಳಾಗಿ,ವಿವಿಧತೆ ವೈಶಿಷ್ಟ್ಯಗಳಿಂದ ಕೂಡಿದ ಜೀವಿಗಳೆಲ್ಲ ಉದಯವಾಗಿವೆ. ಈ ಜೀವಿಗಳೆಲ್ಲ ಬ್ರಹ್ಮನ ಕೈಯಿಂದ ಬಂದವರಲ್ಲವಾದ್ದರಿಂದ ಅವರುಗಳ ಲೆಕ್ಖಾಚಾರ ಬೇರೆಯೆ ಇದೆ. ಹೀಗಾಗಿ ತಲ್ಲಣ ಉಂಟಾಗಿದೆ” ಎಂದರು.

“ಅಲ್ರಯ್ಯಾ ಹೀಗೆ ತದ್ರೂಪು ತಳಿ ಸೃಷ್ಟಿ ಅನ್ನುತ್ತೀರಾ.. ಆದರೂ ಹೀಗೆ ವಿಚಿತ್ರ ರೂಪ ಗುಣಗಳು, ಅವರ ಆಯುರಾರೋಗ್ಯಗಳಲ್ಲಿ ಅಸಮತೋಲನವೂ ಇರುವುದೂ ಏತಕ್ಕೆ.ಅವರ ಲೆಕ್ಖ ಇವರಿಗೇಕೆ ಸಿಗುತ್ತಿಲ್ಲ?’” ವಿಷ್ಣು ಕೇಳಿದ.

” ಇಲ್ಲಿ ಕೇಳು ಮಾಧವ,. ಈಗ ಒಬ್ಬ ನಲವತ್ತು ವಯಸ್ಸಿನ ಗಂಡಸು ಇದ್ದಾನೆಂದಿಟ್ಟುಕೋ. ಅವನು ತನ್ನಂಥದೇ ಜೀವಿಯನ್ನು ಹುಟ್ಟುಹಾಕಲು ಹೆಣ್ಣೊಂದನ್ನು ಅರಸಿ ಹೋಗಬೇಕಾದ್ದಿಲ್ಲ. ತನ್ನ ದೇಹದ ಜೀವಕೋಶವೊಂದನ್ನು ತೆಗೆದು, ಅದನ್ನು ಪ್ರಯೋಗಶಾಲೆಗೆ ಒಯ್ದು ಅದರಿಂದ ತನ್ನಂತೆಯೇ ಇರುವ ಜೀವಿಯೊಂದನ್ನು ಪಡೆಯಬಲ್ಲ. ಇವನಂತೆಯೇ ಜೀವತಂತುಗಳನ್ನು ಹೊಂದಿರುವ ಹೊಸ ಜೀವಿಯನ್ನು ಇವನ ಮಗ ಎನ್ನುವೆಯೋ? ಅಥವಾ, ತಮ್ಮ ಎನ್ನುವೆಯೋ? ಮಗ ಎನ್ನುವುದಾದರೆ ಅದರ ಅಮ್ಮ ಯಾರು? ತಮ್ಮ ಎನ್ನುವುದಾದರೆ, ಮೊದಲ ವ್ಯಕ್ತಿಯ ಅಮ್ಮ ಇವನಿಗೆ ಅಮ್ಮ ನಾಗುವಳೋ ಇಲ್ಲಾ ಅಜ್ಜಿಯಾಗುವಳೋ? ಇವರಪ್ಪ ಅವನಿಗೇನಾಗಬೇಕು. ಹೀಗೆ ಒಂದು ಹೆಣ್ಣು ಕೂಡಾ ಗಂಡಿನ ಹಂಗಿಲ್ಲದೆ ಮಗುವನ್ನು ತನ್ನ ದೇಹದಿಂದಲೇ ಪಡೆಯಬಹುದು. ಈ ರೀತಿ ಹುಟ್ಟಿದ ಜೀವಿಗೆ ಸೋದರಿಕೆ, ಎಲ್ಲಿಂದ ಬರಬೇಕು? ಈ ರೀತಿಯ ಜಿಜ್ಞಾಸೆಗಳು ಏಳುವುದರಿಂದ ಕುಟುಂಬದ ವ್ಯವಸ್ಥೆ ಬುಡಮೇಲಾಗುತ್ತದೆ. ’ಹಿರಿಯ ನಾಗನ ನಂಜು ಕಿರಿಯ ನಾಗನ ಪಾಲು ತಂದೆ ಮಾಡಿದ ಪಾಪ ಕುಲದ ಪಾಲು’ ಎಂಬ ಗಾದೆಗೆ ಅರ್ಥ ಸಡಿಲವಾಗುತ್ತಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನಾಣ್ಣುಡಿ ಅರ್ಥ ಕಳೆದುಕೊಳ್ಳುತ್ತಿದೆ. ಅದೂ ಅಲ್ಲದೆ ಗಂಡು ಹೆಣ್ಣುಗಳ ಭಾವಪೂರ್ಣ ಮಿಲನದ ಪರಾಕಾಷ್ಠೆಯಲ್ಲಿ ಕೈಗೂಡಬೇಕಾಗಿದ್ದ ಈ ಜೀವ ಸೃಷ್ಟಿಯ ಪ್ರಕ್ರಿಯೆ ಕಾಮನೆ ಭಾವನೆಗಳಿಲ್ಲದ ನಿರ್ಜೀವ ಪ್ರಯೋಗಶಾಲೆಯಲ್ಲಿ ಆಗುತ್ತಿದೆ. ಹೀಗೆ ಬಂದ ಜೀವಿಗಳಲ್ಲಿ ಸ್ಥಾಪನೆಯಾಗಲು ಆತ್ಮಗಳು ಒಪ್ಪುತ್ತಿಲ್ಲ. ಸನಾತನಿಗಲಾದ ಅವು, ಇಂಥಾ ಜೀವಿಗಳು ತಮ್ಮ ಕಾರ್ಯಕ್ಷೇತ್ರವಲ್ಲ ಎಂದು ಹೋಗಲು ವಿರೋಧಿಸುತ್ತಿವೆ. ಹಾಗೂ ಹೋದಂಥ ಆತ್ಮಗಳು ಸಂಪೂರ್ಣ ಭ್ರಮಾಧೀನವಾಗುತ್ತಿವೆ. ಆತ್ಮವೇ ಇರದ ಜೀವಿಗಳಲ್ಲಿ ಇನ್ನು ಆತ್ಮಸಾಕ್ಷಿ ಎಲ್ಲಿಂದ ಬಂದೀತು? ಮಾತೃ ವಾತ್ಸಲ್ಯ ಇಲ್ಲದ ತಂದೆಯ ಮಾರ್ಗದರ್ಶನ ಪಡೆಯದ ಜೀವಿಗಳು ಪ್ರಯೋಗಶಾಲೆಯಲ್ಲಿ ಹುಟ್ಟುತ್ತಿರುವುದರಿಂದ ಇವು ’ಬೇವಾರ್ಸಿ’ ಜೀವಗಳಾಗಿ ಕೇವಲ ಐಹಿಕ ಸುಖಕ್ಕಷ್ಟೆ ತಮ್ಮ ಅನುಭವ ಸೀಮಿತಗೊಳಿಸಿಕೊಂಡುಬಿಟ್ಟಿವೆ.ಇದರಿಂದ ಭೂದೇವಿಯ ಕಷ್ಟ ನೂರ್ಮಡಿಗೊಂಡಿದೆ” ಎಂದರು.

“ಇವನಮ್ಮ ಅವನಿಗೇನಾಗಬೇಕು, ಇದರಪ್ಪ ಅದಕ್ಕೇನಾಗಬೇಕು? .. ನನ್ನ ತಲೆ ತಿರುಗುತ್ತಿದೆ. ಇದೊಳ್ಳೆ ತಾಯಿ-ಮಗಳನ್ನು ಮದುವೆಯಾದ ಮಗ -ಅಪ್ಪನ ಬೇತಾಳದ ಕಥೆಯಂತಿದೆಯಲ್ರಯ್ಯಾ? ಸರಿ ಈ ಜೀವ ವೈಚಿತ್ರ್ಯದ ಕಾರಣವಾದರೂ ಏನು?” ವಿಷ್ಣು ಕೇಳಿದ.

“ಅದೋ ಹೇಳಲು ಮರೆತಿದ್ದೆವು. ಈ ನಲವತ್ತು ವಯಸ್ಸಿನ ಮನುಶ್ಯನ ಜೀವಕೋಶಕ್ಕೂ ಅಷ್ಟೇ ವಯಸ್ಸಲ್ಲವೇ. ಅದನ್ನು ದೇಹದಿಂದ ತೆಗೆದು ಸಂಸ್ಕರಿಸುವಾಗ ಏನು ಬದಲಾವಣೆಗಳಾಗುವುದೋ ಅದು ಯಾರಿಗೂ ತಿಳಿದಿಲ್ಲ- ಸ್ವತಃ ಮಾನವರಿಗೂ.ಅದರ ನಿಯಂತ್ರಣ ಸಧ್ಯಕ್ಕೆ ಯಾರ ಕೈಲೂ ಇಲ್ಲ.ಹೀಗಾಗಿ ಅ ಹೊಸ ಜೀವಿಯ ಆಯಸ್ಸು ನಲತ್ವತ್ತೋ, ಐವತ್ತೋ, ಇಲ್ಲ ಯಾವುದೋ ಋಣಾತ್ಮಕ ಸಂಖ್ಯೆಯಿಂದಲೂ ಶುರುವಾಗಬಹುದು. ಇದೆಲ್ಲವೂ ಜೀವಿಯ ಜೀವಿತಾವಧಿಯನ್ನು ನಿರ್ದೇಶಿಸುವ ಜೀವತಂತುವಿನಲ್ಲಿ ಅಂದರೆ ಜೀನ್ಸ್ ಗಳಲ್ಲಿ ಆಗಬಹುದಾದ ಬದಲಾವಣೆಗಳು. ಹೀಗೆ ಗೊತ್ತು ಗುರಿ ಇಲ್ಲದ ಜೀವಿಗಳು ಯಾವಾಗಲೆಂದರೆ ಅವಾಗ ಸಾಯುವುದರಿಂದ ಯಮದೂತರ ಕೆಲಸ ಹೆಚ್ಚಾಗಿರುವುದು. ಭಯ ಭಕ್ತಿಯ ಚೌಕಟ್ಟಿಲ್ಲದೆ ಆತ್ಮರಹಿತವಾದ ಈ ಜೀವಿಗಳ ಸೂಕ್ಷ್ಮ ಸ್ವರೂಪಗಳು ಇವರನ್ನು ಆಟ ಆಡಿಸುವವು. ಅದೇ ರೀತಿ, ಸಂಸ್ಕರಣ ಪ್ರಕ್ರಿಯೆಯಲ್ಲಿ ವರ್ಣತಂತುಗಳಲ್ಲಿ ಅಂದರೆ ಕ್ರೋಮೊಸೋಮ್ ಗಳಲ್ಲಿ ಏರುಪೇರಾದರೆ ವಿಚಿತ್ರ ಸ್ವರೂಪದ ಜೀವಿಗಳು ಹುಟ್ಟುವವು. ಹೇ, ತ್ರಿವಿಕ್ರಮ, ಉಪೇಂದ್ರ, ಇಲ್ಲಿ ಕೇಳು, ಆ ನರಜಂತುಗಳು ಈ ಬೇಡದ ನ್ಯೂನತೆಗಳನ್ನು,ಬದಲಾವಣೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೋ, ಯೋಚಿಸಲೂ ನಮ್ಮ ಎದೆ ನಡುಗುತ್ತಿದೆ. ಆಗತಾನೆ ಹುಟ್ಟಿದ ಮಗುವಿನಿಂದ ಹಿಡಿದು, ಆಗಲೋ ಈಗಲೋ ಎನ್ನುವಂತಿರುವ ವೃದ್ಧರ ಜೀವಕೋಶಗಳನ್ನೂ ಹೆಕ್ಕಿ ತೆಗೆದು ತದ್ರೂಪು ತಳಿ ಸೃಷ್ಟಿಸಿ ನಿನ್ನನ್ನೇ ತಿಂದಾರು.” ಎಂದು ಹೇಳಿ ನಿಲ್ಲಿಸಿದರು.

ವಿಷ್ಣುವಿಗೆ ಎಲ್ಲವೂ ಅರ್ಥವಾಯಿತು. ಅಷ್ಟರಲ್ಲಿ ಕೈಲಾಸವಾಸಿಯಾದ ಈಶ್ವರ ಪಾರ್ವತಿಯೊಡನೆ ಅಲ್ಲಿಗೆ ಬಂದ ಅವನೂ ಆತಂಕಗೊಂಡಿದ್ದು ಎಲ್ಲರಿಗೂ ತಿಳಿಯಿತು. ಅವನೂ ಪಾರ್ವತಿಯೂ ಆದರ್ಶ ದಾಂಪತ್ಯಕ್ಕೆ ಮೂರ್ತರೂಪ ಕೊಟ್ಟ ದೇವಾಧಿದೇವತೆಗಳು. ಅವರು ಕೂಡಾ ಜಗಳವಾಡಿ ಮುನಿಸಿಕೊಂಡದ್ದು ಮೇಲುನೋಟಕ್ಕೇ ಕಂಡುಬಂತು. ವಿಷ್ಣು ಅವರನ್ನು ಬರಮಾಡಿಕೊಂಡು, ಇದುವರೆಗೂ ಆದ ಕಥೆ ಹೇಳಿ, ಬಂದ ಕಾರಣವೇನೆಂದು ಕೇಳಿದ.

ಪರಮೇಶ್ವರನು ಸಿಟ್ಟಿನಿಂದಲೇ ಹೇಳತೊಡಗಿದ. “ನೋಡು ವಿಷ್ಣು, ಸ್ಮಶಾನವಾಸಿಯಾದ ನನಗೆ,ನಿಜ ರೂಪದಲ್ಲಿ ಪೂಜೆ ಪುನಸ್ಕಾರಗಳಿಲ್ಲದೆ ಕೇವಲ ಯೋನಿ-ಲಿಂಗರೂಪದಲ್ಲಿ ಮಾತ್ರವೇ ಪೂಜೆ ಎನ್ನುವುದು ನಿನಗೆ ಗೊತ್ತೇ ಇದೆ. ಈಗ ಭೂಮಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪರಂಪರಾಗತವಾಗಿ , ಎಲ್ಲ ಜೀವಿಗಳಲ್ಲೂ ಅಂತರ್ಗತವಾಗಿ ಬಂದಿರುವ ಸಂತಾನೋತ್ಪತ್ತಿಯ ನಿಯಮಗಳನ್ನು, ಪೀಳಿಗೆಯನ್ನು ಉಳಿಸಿ ಬೆಳೆಸುವ ಪ್ರಕ್ರಿಯೆಯನ್ನು ಗಾಳಿಗೆ ತೂರುತ್ತಿವೆ. ಗಂಡಾಗಲೀ, ಹೆಣ್ಣಾಗಲೀ, ಇನ್ನೊಂದು ಲಿಂಗದ ಸಂಪರ್ಕವಿಲ್ಲದೆ ಮಕ್ಕಳನ್ನು ಪಡೆಯುವುದು ಸಾಧ್ಯವಾಗಿದೆ. ಹೀಗಿದ್ದಾಗ ಪ್ರೀತಿ, ಪ್ರೇಮ, ಪ್ರಣಯ,ಮಮತೆ, ವಾತ್ಸಲ್ಯ,ತ್ಯಾಗ, -ಈ ಎಲ್ಲ ತಂತುಗಳಿಂದಾಗುತ್ತಿರುವ ಜೀವಸೃಷ್ಟಿ ನಶಿಸಿ,ಕೇವಲ ನಿರ್ಜೀವಕ್ರಿಯೆಯಿಂದ ಜನಿಸಿದ ಜೀವಿಗಳೇ ಜಗದಾದ್ಯಂತ ತುಂಬಿಹೋಗುವ ದಿನ ದೂರವಿಲ್ಲ. ಈ ಪಾಠಕ್ಕೆ ಪೀಠಿಕೆ ಹಾಕಿದ ಪಾರ್ವತಿಯನ್ನು ನಾನು ದೂಷಿಸಿದ್ದಕ್ಕೆ, ನಾನು ಕೊಡುತ್ತಿರುವ ಕಾರಣ ನಿಜವಾಗಿದ್ದಾಗ್ಯೂ ನನ್ನಮೇಲೆ ಸಿಟ್ಟಾಗಿದ್ದಾಳೆ. ಭೂಮಿಯ ಮೇಲಿನ ಗಂಡಂದಿರು ಕಾರಣವಿಲ್ಲದೆ ಸಿಟ್ಟಾಗುವ ಹೆಂಡಿರನ್ನು ಅದು ಹೇಗೆ ನಿಭಾಯಿಸುವರೋ ನನಗೆ ಇವತ್ತು ಅವರ ಕಷ್ಟ ಅರ್ಥವಾಯ್ತು. ಅದಿರಲಿ, ತ್ರಿಮೂರ್ತಿಗಳಲ್ಲಿ ಬ್ರಹ್ಮನಿಗೆ ಈಗಾಗಲೇ ಭೂಮಿಯ ಮೇಲೆ ಪೂಜೆಯಿಲ್ಲ. ಇನ್ನು ಯೋನಿ-ಲಿಂಗದ ಆಕಾರದಲ್ಲಿ ಪೂಜಿಸಲ್ಪಡುತ್ತಿರುವ ನನಗೂ ಅದೇ ಗತಿ ಎಂದು ಕಾಣುತ್ತದೆ” ಎಂದ.

ವಿಷ್ಣುವಿಗೆ ಪರಿಸ್ಥಿತಿಯ ಗಂಭೀರತೆ ಸಂಪೂರ್ಣವಾಗಿ ಅರಿವಿಗೆ ಬಂತು. ಪರಿಹಾರ ತುರ್ತಾಗಿ ಹುಡುಕಬೇಕಾಗಿತ್ತು. ಅವನ ಮುಂದಿದ್ದ ಆಯ್ಕೆಗಳನ್ನು ಅವಲೋಕಿಸತೊಡಗಿದ. ಒಂದು ಮಾನವರಿಗೆ ತಾವೇ ಕಂಡುಹಿಡಿದ ಈ ಸೃಷ್ಟಿಕಾರ್ಯವನ್ನು ಒಳ್ಳೆಯ ಉದ್ದೇಶಗಳಿಗೆ ಬಳಸುವಂಥ ಸದ್ಬುದ್ಧಿ ಕೊಡುವುದೋ, ಇಲ್ಲವೇ ಅವನ ಬೆರಳಿನಿಂದ ಅವನ ಕಣ್ಣನ್ನೇ ತಿವಿಸಿಬಿಡುವುದೋ, ಮೋಹಿನಿಯಂತೆ ಹೋಗಿ ಭಸ್ಮಾಸುರನನ್ನು ಸುಟ್ಟ್ಂತೆ ಸುಡುವುದೋ, ತಾನೇ ಈ ಕೆಲಸ ಮಾಡುವುದೋ ಇಲ್ಲಾ ಬೇರೆ ಯಾರನ್ನಾದರೂ ಕಳಿಸುವುದೋ, ಅಥವಾ ಇದೊಂದು ಹೊಸದೇ ರೀತಿಯ ಸಮಸ್ಯೆಯಾದ್ದರಿಂದ ಇದಕ್ಕೆ’ ಔಟ್ ಆಫ ದ ಬಾಕ್ಸ್ ’ ಯೋಚನೆಯಿಂದ ಹೊಸದೇ ಪರಿಹಾರ ಹುಡುಕಬೇಕೋ ಎಂದು ಚಿಂತೆಯಲ್ಲಿ ಮುಳುಗಿದವನನ್ನು ಕಂಡು ತಮ್ಮ ಭಾರವನ್ನು ವರ್ಗಾಯಿಸಿದ ಇತರ ದೇವತೆಗಳು ಹಗುರಾಗಿ ಹೊರನಡೆಯುವಲ್ಲಿ ’ಸಂಭವಾಮಿ ಯುಗೇ ಯುಗೇ’ ಎಂಬ ಉದ್ಘೋಷ ಅವರೆಲ್ಲರ ಕಿವಿಯಲ್ಲೂ ಮೊಳಗಿದಂತಾಯ್ತು.

10 thoughts on “ವೈಕುಂಠದಲ್ಲಿ ಕೋಲಾ(ಕ್ಲೋನಾ)ಹಲ! – ಸುದರ್ಶನ್ ಗುರುರಾಜರಾವ್ ಹರಟೆಕಟ್ಟೆ

 1. ಮಾನವ, ಸೃಷ್ಟಿಗೆ ಸಂಭಂದ ಪಟ್ಟ cloning, test tube babies, surrogate motherhood ಇತ್ಯಾದಿ ಪ್ರಯೋಗಗಳನ್ನು ಸಾಧನೆಗಳನ್ನು ಕೈಗೊಂಡಿದ್ದಾನೆ. ಈ ದಿಶೆಯಲ್ಲಿ ಕೆಲವು ಸಫಲತೆಗಳನ್ನು ಸಾಧ್ಯತೆಗಳನ್ನು ಕಂಡುಕೊಂಡಿದ್ದರೂ ಇದರಿಂದ ಸಂಭವಿಸಬಹುದಾದ ಕೆಲವು ನೈತಿಕ ಸರಿ ತಪ್ಪು ಕಲ್ಪನೆಗಳನ್ನು ( Ethical Dilemmas) ಇಂದಿನ ಸಾಮಜಿಕ ಚೌಕಟ್ಟಿನ ಒಳಗೆ ಅಂಗೀಕರಿಸುವುದು ಹಾಗು ಬಗೆಹರಿಸುವುದ ಬಹಳ ಕಷ್ಟದ ಕೆಲಸ. ವಿಷ್ಣುವೇ ಅವತರಿಸಿಬಂದರೂ ಇದಕ್ಕೆ ಸಮಂಜಸವಾದ ಪರಿಹಾರ ಸಿಗುವುದರ ಬಗ್ಗೆ ಸುದರ್ಶನ್ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ. ನಮ್ಮ ನೈತಿಕ Bench mark ಕಾಲ ಕಾಲಕ್ಕೆ ಬದಲಾಗುತ್ತ ಮಂದೊಮ್ಮೆ ನಮ್ಮ ನೈತಿಕ ದ್ವಂದ್ವಗಳು ಬಗೆಹರಿಯಬಹುದು. ಇಂತಹ ಒಂದು ಗಂಭೀರವಾದ ವಿಚಾರವನ್ನು ಸುದರ್ಶನ್ ಅವರು ತಮ್ಮ ವಿಡಂಬ ಬರಹದಲ್ಲಿ ಪೌರಣಿಕ ಪಾತ್ರಗಳನ್ನು ಬಳಸಿಕೊಂಡು ನಮನ್ನೆಲ್ಲ ರಂಜಿಸಿದ್ದಾರೆ. ಮುಂದೊಂಮ್ಮೆ ಇದನ್ನು ಯಾರದರು ಸಿನಿಮಾದಲ್ಲಿ ಬಳಸಿಕೊಳ್ಳಲು ಒಳ್ಳೆ ಸರಕು!

  – ಶಿವಪ್ರಸಾದ್

  Like

 2. ಎಲ್ಲರಿಗೂ ಧನ್ಯವಾದಗಳು. ನಾಟಕದ ಬಗ್ಗೆ ಉಮಾ ಅವರು ಹಾಗೂ ಅನ್ನಪೂರ್ಣ ಅವರು ಸೂಚಿಸಿದ್ದು ಸಂತೋಷ. ನಿರೂಪಣೆ ಹಾಗೂ ಪ್ರಸ್ತುತ ಪಡಿಸುವ ಅನುಭವ ಇದ್ದವರು ಈ ಕಥೆಯನ್ನು ನಾಟಕಕ್ಕೆ ಅಳವಡಿಸುವಲ್ಲಿ ಸಹಾಯ ಮಾಡಿದರೆ, ನನ್ನ ಕಡೆಯಿಂದ ಮಾಡಬಹುದಾದ ಸಹಾಯ ಮಾಡಬಲ್ಲೆ. ನನಗೆ ನಾಟಕದ ಅನುಭವ ಇಲ್ಲ.
  ಸಮಸ್ಯೆಯ ಪರಿಪೂರ್ಣ ಸ್ವರೂಪ ಇನ್ನೂ ನಮಗೆ ಗೊತ್ತಿಲ್ಲ. ಈಗಿನ್ನೂ ರೂಪು ತಳೆಯುತ್ತಿರುವ ನವವಿಧಾನವಾದರಿಂದ ಯಾವುದೇ ಪರಿಹಾರ ಸೂಚಿಸುವುದು ಬಾಲಿಶವಾಗುತ್ತದೆ. ಹಾಗಾಗಿ ಇದನ್ನು ತೆರೆದ ಪ್ರಶ್ನೆಯ ರೂಪದಲ್ಲಿ ಮುಕ್ತಾಯಗೊಳಿಸಿದ್ದೇನೆ.

  Like

  • ನಮ್ಮ ಕನ್ನಡ ಬಳಗದಲ್ಲಿ ನಾಟಕದ ಬಗ್ಗೆ ಒಲವಿರುವ ವ್ಯಕ್ತಿಗಳು ಕಡಿಮೆ. ಈ ಲೇಖನಕ್ಕೆ ನಾಟಕದ ಸಾಹಿತ್ಯ-ಪ್ರತಿಯನ್ನು ಬರೆದು, ಸಂಭಾಷಣೆಗಳನ್ನು ಅಳವಡಿಸುವ ಜವಾಬ್ದಾರಿಯನ್ನು ಯಾರಾದರೂ ಹೊತ್ತರೆ ಇದನ್ನು ನಾಟಕಕ್ಕೆ ಅಳವಡಿಸಬಹುದು. ನಮ್ಮ ವೇದಿಕೆಯ ಸದಸ್ಯರಲ್ಲಿ ಇದರ ಅಭಿರುಚಿ ಮತ್ತು ಪ್ರತಿಭೆ ಇರುವವರು ಮುಂದೆ ಬಂದರೆ ಸಾಧ್ಯ.
   ಉಮಾ ವೆಂಕಟೇಶ್

   Like

 3. GSS Prasad comments:
  ಮಾನವ, ಸೃಷ್ಟಿಗೆ ಸಂಭಂದ ಪಟ್ಟ cloning, test tube babies, surrogate motherhood ಇತ್ಯಾದಿ ಪ್ರಯೋಗಗಳನ್ನು ಸಾಧನೆಗಳನ್ನು ಕೈಗೊಂಡಿದ್ದಾನೆ. ಈ ದಿಶೆಯಲ್ಲಿ ಕೆಲವು ಸಫಲತೆಗಳನ್ನು ಸಾಧ್ಯತೆಗಳನ್ನು ಕಂಡುಕೊಂಡಿದ್ದರೂ ಇದರಿಂದ ಸಂಭವಿಸಬಹುದಾದ ಕೆಲವು ನೈತಿಕ ಸರಿ ತಪ್ಪು ಕಲ್ಪನೆಗಳನ್ನು ( Ethical Dilemmas) ಇಂದಿನ ಸಾಮಜಿಕ ಚೌಕಟ್ಟಿನ ಒಳಗೆ ಅಂಗೀಕರಿಸುವುದು ಹಾಗು ಬಗೆಹರಿಸುವುದ ಬಹಳ ಕಷ್ಟದ ಕೆಲಸ. ವಿಷ್ಣುವೇ ಅವತರಿಸಿಬಂದರೂ ಇದಕ್ಕೆ ಸಮಂಜಸವಾದ ಪರಿಹಾರ ಸಿಗುವುದರ ಬಗ್ಗೆ ಸುದರ್ಶನ್ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ. ನಮ್ಮ ನೈತಿಕ Bench mark ಕಾಲ ಕಾಲಕ್ಕೆ ಬದಲಾಗುತ್ತ ಮುಂದೊಮ್ಮೆ ನಮ್ಮ ನೈತಿಕ ದ್ವಂದ್ವಗಳು ಬಗೆಹರಿಯಬಹುದು. ಇಂತಹ ಒಂದು ಗಂಭೀರವಾದ ವಿಚಾರವನ್ನು ಸುದರ್ಶನ್ ಅವರು ತಮ್ಮ ವಿಡಂಬ ಬರಹದಲ್ಲಿ ಪೌರಣಿಕ ಪಾತ್ರಗಳನ್ನು ಬಳಸಿಕೊಂಡು ನಮನ್ನೆಲ್ಲ ರಂಜಿಸಿದ್ದಾರೆ. ಮುಂದೊಮ್ಮೆ ಇದನ್ನು ಯಾರದರು ಸಿನಿಮಾದಲ್ಲಿ ಬಳಸಿಕೊಳ್ಳಲು ಒಳ್ಳೆ ಸರಕು!
  ಜಿ ಎಸ್ ಎಸ್ ಪ್ರಸಾದ

  Like

 4. ಸುದರ್ಶನ್ ನಿಮ್ಮ ಈ ಪ್ರಯೋಗಕ್ಕೆ hats off.
  ಸ್ವಲ್ಪ ಧೀರ್ಘವಾದರೂ ಓದಿಸಿಕೊಂಡು ಹೋಗುವ ಈ ಹರಟೆ ಒಳ್ಳೆ time pass.

  Like

 5. ಹರಟೆ ಸಿಕ್ಕಾಪಟ್ಟೆ ಚೆನ್ನಾಗಿದೆ 🙂 kssvv ಮೂಲಕ ಇದನ್ನ ಕನ್ನಡ ಬಳಗದಲ್ಲಿ ನಾಟಕವಾಗಿ ಪ್ರದರ್ಶಿಸೋಣ. Soooper hit ಆಗೋದ್ರಲ್ಲಿ ಸಂಶಯವಿಲ್ಲ! Hats off to Sudarshan. ನಿಮ್ಮ ಕಲ್ಪನೆಗೆ ತಲೆಬಾಗುವೆ 🙂

  Like

 6. ಹರಟೆ ಸಿಕ್ಕಾಪಟ್ಟೆ ಚೆನ್ನಾಗಿದೆ 🙂 ನಾಟಕವಾಗಿ ಇದನ್ನ ಕನ್ನಡ ಬಳಗದಲ್ಲಿ ದಯವಿಟ್ಟು ಪ್ರದರ್ಶಿಸಿ. Soooper hit ಆಗೋದ್ರಲ್ಲಿ ಸಂಶಯವಿಲ್ಲ!

  Like

 7. ರಾಜಾರಾಮ ಕಾವಳೆ comments:
  ಸುದರ್ಶನ್ ಅವರು ಬರೆದ ’ವೈಕುಂಠದಲ್ಲಿ ಕ್ಲೋನಾಹಲ’ ಲೇಖನವು ಅವರು ಹೋದ ವರ್ಷ ಆಗಸ್ಟಿನಲ್ಲಿ ಬರೆದ ’ತೀರ್ಪು’ ಎಂಬ ಲೇಖನದಹಾಗೆಯೇ ಬಹು ವಾಸ್ತವಿಕವಾದ ಸನ್ನಿವೇಶವನ್ನು ಕಲ್ಪಿಸಿ ಓದುಗರನ್ನು ಅವರಿಗೆ ಅರಿವಿಲ್ಲದೇ ಆ ಕಥಾಸನ್ನಿವೇಶಕ್ಕೆ ಕೊಂಡೊಯ್ದು ಅಲ್ಲಿ ನಡೆಯುವ ಆಗುಹೋಗುಗಳನ್ನು ಅಜ್ಞಾತವಾಗಿ ವೀಕ್ಷಿಸುವ ಒಂದು ಸುಯೋಗವನ್ನು ಒದಗಿಸುತ್ತದೆ. ಓದುಗನು, ’ಈ ಲೇಖನವು ಕೇವಲ ಒಂದು ಕಟ್ಟುಕಥೆ’ ಎಂದು ಎಷ್ಟೇ ನಂಬಿದ್ದರೂ, ಕಥಾಸನ್ನಿವೇಶವು ನಿಜವೆಂದು ಅವನನ್ನು ಕಡ್ಡಾಯವಾಗಿ ನಂಬಿಸಿ ಜೀವಂತವಾಗಿರುವ ಕೈಲಾಸಕ್ಕೆ ಕೊಂಡೊಯ್ಯುವುದು, ವೈಕುಂಠ ಏಕಾದಶಿಯದಿನ ಭೂಲೋಕದ ದೇವಸ್ಥಾನಗಳಲ್ಲಿ ನಿರ್ಮಿಸಿದ ಸ್ವರ್ಗದ್ವಾರದಲ್ಲಿ ನಡೆದು ವೈಕುಂಠವನ್ನು ನೋಡಿ ಜೀವಂತವಾಗಿ ಭೂಲೋಕಕ್ಕೆ ಹಿಂತಿರುಗುವಹಾಗೆ! ಇದು ಲೇಖಕನ ನೈಪುಣ್ಯತೆಯನ್ನು ತೋರುತ್ತದೆ.
  ಸನ್ನಿವೇಶವು ಅಷ್ಟು ರಭಸವಾಗಿ ಸಾಗುತ್ತಿರಲು ಓದುಗನು ಶ್ರೀಮನ್ನಾರಾಯಣನು ತನ್ನಮುಂದೆ ದೇವಾದಿದೇವಗಳು ಮಂಡಿಸಿದ ಕ್ಲೋನಾಹಲದ ಸಮಸ್ಯೆಗೆ ಹೇಗೆ ಪರಿಹಾರಗಳನ್ನು ಸೂಚಿಸುತ್ತಾನೆ ಎಂಬ ಕುತೂಹಲದಿಂದ ಕಾದಿರುವಾಗ, ಶ್ರೀವತ್ಸ ದೇಸಾಯಿಯವರು ಹೇಳಿದಹಾಗೆ ಪರಿಹಾರಕ್ಕೆ ಬ್ರೇಕ್ ಹಾಕಿರುವುದು, ತೇಜಸ್ವಿಯವರ ’ಅಬಚೂರಿನ ಪೋಸ್ಟ್ ಆಫೀಸು’ ಎಂಬ ಕಾದಂಬರಿಯಲ್ಲಿ ಮುಖ್ಯಪಾತ್ರ ಬೋಪಣ್ಣನು ಆತನು ನಿರ್ಮಿಸಿದ ಸಮಸ್ಯೆಯನ್ನು ಎದುರಿಸಲಾರದೆ ಎತ್ತುಗಳಿಗೆ ಒದ್ದು ತನ್ನ ಹಳ್ಳಿಯಿಂದ ಪರಾರಿಯಾದುದನ್ನು ನೆನೆಪಿಗೆ ತರುವುದು.
  ಬ್ರಹ್ಮನು ಎಲ್ಲಾಜೀವಿ-ನಿರ್ಜೀವಿಗಳ ಗತಿಗಳನ್ನು ಅವುಗಳ ’ಹಣೇಬರಹದಲ್ಲಿ’ ಬರೆದಿರುವಾಗ ಈ ಕ್ಲೋನಾಜೀವಿಗಳ ಗತಿಯನ್ನೂ ಬರೆದಿರುವುದು ಅವನಿಗೆ ಮರೆತಿರುವುದು, ಓದುಗನ ಮತ್ತು ಲೇಖಕನ ದೃಷ್ಟಿಯಲ್ಲಿ ಕಥೆಗೆ ಬ್ರೇಕ್ ಹಾಕಿರುವುದು ಒಂದು ಒಳ್ಳೆಯದೇ. ಇಲ್ಲದೇ ಹೋದರೆ ಲೇಖನವು ಕೊನೆಯಿಲ್ಲದೆ ಒಂದು ’ರನ್‍ಅವೇ’ ಲೇಖನವಾಗಿ ಓದಿ ಮುಗಿಸಲು ಅಸಾಧ್ಯವಾಗಬಹುದು. ಆದುದರಿಂದ ಸುದರ್ಶನ್ ಅವರು ಬ್ರೇಕ್ ಹಾಕಿರುವುದು ಬಹು ಸಮಂಜಸವೇ.
  ಇದೇ ರೀತಿಯಲಿ ಇನ್ನೂ ಅನೇಕ ಲೇಖನಗಳು ಬರಲಿ!
  ರಾಜಾರಾಮ ಕಾವಳೆ

  Like

 8. ಸುದರ್ಶನ್ ಅವರ ವೈಕುಂಠದ “ಕ್ಲೋನಾಯಣ“ ದ ಪ್ರಸಂಗ ನಿಜಕ್ಕೂ ವಿನೋದಮಯವಾಗಿದೆ. ಇದರಲ್ಲಿ ಸಂಭಾಷಣೆಗಳನ್ನು ಮತ್ತಷ್ಟು ಸೇರಿಸಿ, ನಮ್ಮ ಬಳಗದ ಸಮಾರಂಭದಲ್ಲಿ ನಾಟಕದ ರೂಪದಲ್ಲಿ ಪ್ರದರ್ಶಿಸಬಹುದು. ಭಲೇ ಸುದರ್ಶನ್ ಅವರೆ. ನಿಮ್ಮ ಲೇಖನಗಳ ವೈವಿಧ್ಯತೆಗೆ ತೆಲೆತೂಗಲೇ ಬೇಕು.
  ಉಮಾ

  Like

 9. ಸುದರ್ಶನರ ವೈಕುಂಠದಲ್ಲಿಯ ಕ್ಲೋನಾಹಲದ ವೃತ್ತಾಂತ ಅವರ ಎಂದಿನ ಶೈಲಿಯಲ್ಲಿ ಸಮೃದ್ಧವಾಗಿ ಬಂದಿದೆ. ವಿಷ್ಣು, ಭೂದೇವಿ, ಬ್ರಹ್ಮ, ಯಮ ನಾರದರನ್ನೆಲ್ಲ ಬುಡಸಮೇತ ಅಲುಗಾಡಿಸಿದ ವೈಯ್ಜ್ನಾನಿಕ ಆವಿಷ್ಕಾರದ ಮೇಲೆ ಟೆಲಿಸ್ಕೊಪಿಕ್ ದೃಷ್ಟಿಯಿಂದ ನೋಡಿ ಸ್ವಾರಸ್ಯಕರವಾಗಿ ಬರೆದ ಕಥೆ/ ಹರಟೆ ಓದುಗರನ್ನು ತನ್ನೊಂದಿಗೆ ಎಳೆದುಕೊಂಡು ಹೋಗಿ ಕೊನೆಗೆ ಚಾತುರ್ಯದಿಂದ ಸಮಸ್ಯೆಗೆ ಪರಿಹಾರ ಹುಡುಕದೆ ಬ್ರೇಕ್ ಹಾಕಿ ತಮಾಷೆ ನೋಡುತ್ತಿದ್ದಾರೆ. ಮೆಚ್ಚಿದೆ!

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.