ನೋಡು ಬಾ ನಮ್ಮೂರ ಸರಣಿ: ನಾನು ಕನ್ನಡಿಗ, ನನ್ನ ಊರು ಬೆಂಗಳೂರು – ರಾಜಾರಾಮ ಕಾವಳೆ.

House+SR
ನಾನು ಹುಟ್ಟಿದ ಮನೆ ಮತ್ತು ಅದನ್ನು ಭಾಡಿಗೆಗೆ ತಗೊಂಡ    ಡಾ S ರಾಧಾಕೃಷ್ಣನ್ Photo: CC Author

ನನ್ನ ಊರು ಬೆಂಗಳೂರು, ಹುಟ್ಟಿದ್ದು ಬೆಂಗಳೂರಿನ ಬಸವನಗುಡಿಯ ಮನೆಯಲ್ಲೇ. ಆ ಮನೆಯನ್ನು ನೀವು ಸ್ವತಃ ನೋಡಿಲ್ಲದಿದ್ದರೂ ಅದನ್ನು ದೂರದರ್ಶನದಲ್ಲಿ ನೀವು ನೋಡಿರಲೇಬೇಕು! ನೀವೇನಾದರೂ ಶಂಕರ್‌ನಾಗ್‌ ಅವರ ’ಮಾಲ್‍ಗುಡಿ ಡೇಸ್’ನ ’ಮಿಠಾಯಿ ವಾಲ’ ಎಂಬ ಧಾರಾವಾಹಿಯನ್ನು ನೋಡಿದ್ದರೆ ಅದರಲ್ಲಿ ಇದ್ದ ಮನೆಯೇ ನಾನು ಹುಟ್ಟಿದ ಮನೆ. ನಾನು ಬೆಳೆದು ದೊಡ್ಡವನಾಗಿ ವೈದ್ಯಕೀಯ ಕಾಲೇಜಿನಲ್ಲಿ ಓದಿ ವೈದ್ಯನಾಗಿದ್ದೂ ಅದೇ ಮನೆಯಿಂದಲೇ.

ನಮ್ಮ ತಾತನವರು ಆ ಮನೆಯನ್ನು ಕಟ್ಟಿದ್ದು 1918ರಲ್ಲಿ. ಆಗ ತಾನೆ ಮೈಸೂರು ವಿಶ್ವವಿದ್ಯಾನಿಲಯದ ಹೊಸದಾಗಿ ಆರಂಭಿತವಾದ ಮಹಾರಾಜಾ ಕಾಲೇಜಿನ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಆ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಸುಮಾರು ಆರು ತಿಂಗಳುಗಳಕಾಲ ಆ ಮನೆಯಲ್ಲಿ ಆ ವಾಸವಾಗಿದ್ದರು. 1962ರಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯವರಾದ ಮೇಲೆ ನಮ್ಮ ತಂದೆಯವರು ಅವರಿಗೆ ಒಂದು ಅಭಿನಂದನ ಪತ್ರವನ್ನು ಬರೆದಾಗ ರಾಷ್ಟ್ರಪತಿಯವರು ಉತ್ತರಿಸಿ ತಮ್ಮ ಪತ್ರದಲ್ಲಿ ಆ ಮನೆಯನ್ನು ನೆನಪಿಸಿಕೊಂಡರು. ಅಂದಿನಿಂದ ಆ ಮನೆಗೆ ನಮ್ಮ ತಂದೆಯವರು ’ರಾಧಾಕೃಷ್ಣ ವಿಲ್ಲಾ’ ಎಂದು ನಾಮಕರಣ ಮಾಡಿದ್ದರು.

ನಮ್ಮ ತಂದೆಯವರು ತುಮಕೂರಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ವಾಸಮಾಡಿದವರು. ಅವರ ತಂದೆ ಮತ್ತು ಅವರ ಮೂರು ತಲೆಮಾರಿನವರೂ ಬೆಂಗಳೂರಿನ ಹಳೇ ಪೇಟೆಯ ಸಿದ್ದೀಕಟ್ಟೆಯ ನಿವಾಸಿಗಳು. ನನ್ನ ಮಾತೃಭಾಷೆ ಕನ್ನಡ ಇಷ್ಟೆಲ್ಲಾ ಬೆಂಗಳೂರಿನ ವಂಶ ಚರಿತ್ರೆ ಇದ್ದೂ ಕನ್ನಡ ಮಾತಾಡುವ ಕನ್ನಡಿಗನಾಗಿದ್ದರೂ ನನ್ನ ಕುಲನಾಮ ಅಥವ ಅಡ್ಡಹೆಸರು ಏಕೆ ’ಕಾವಳೆ’ಯಾಗಿದೆ? ನಾನೇನು ಮರಾಠಿಯವನೆ? ಅಥವ ’ಕವಳ’ ಬೇಡುತ್ತಿದ್ದ ಭಿಕ್ಷುಕ ವಂಶದವನೇ?

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬೆಂಗಳೂರಿನ ಚರಿತ್ರೆಯನ್ನು ತಿಳಿಯಲೇಬೇಕು. ಜನಪ್ರಿಯ ಚರಿತ್ರೆಯಲ್ಲಿ ನಾವೆಲ್ಲ ತಿಳಿದಹಾಗೆ. ಹನ್ನೆರಡನೆಯ ಶತಮಾನದಲ್ಲಿ ಹೊಯ್ಸಳ ರಾಜ-2, ಬೇಟೆಯಾಡಿ ದಾರಿ ತಪ್ಪಿ ಬಳಲುತ್ತಿದ್ದಾಗ  ಅಲ್ಲಿದ ಒಂದು ಗುಡಿಸಲಿನಲ್ಲಿ ವಾಸಮಾಡುತ್ತಿದ್ದ ಒಂದು ಮುದುಕಿಯು ಅವನಿಗೆ ತಾನು ಬೇಯಿಸಿಟ್ಟಿದ್ದ ಬೆಂದಕಾಳನ್ನು ಅವನಿಗೆ ಬಡಿಸಿದಳು. ಅದನ್ನು ಉಂಡು ತೃಪ್ತಿಗೊಂಡು ಆ ಊರಿಗೆ ‘ಬೆಂದಕಾಳೂರು’ ಎಂದು ಕರೆದನು. ಕ್ರಮೇಣ ಆ ಊರು ‘ಬೆಂಗಳೂರು’ ಆಯಿತು. ಈ ಕತೆಯು ಸ್ವಾರಸ್ಯವಾಗಿದ್ದರೂ ಅದು ಕೇವಲ ಕಟ್ಟು ಕಥೆಯೆಂದು ತಿಳಿದುಬಂದಿದೆ. ಈಗ ಚರಿತ್ರಕಾರರು ನಡೆಸಿದ ಸಂಶೋಧನೆಯಲ್ಲಿ ಬೆಂಗಳೂರಿನ ಹೆಸರು ಒಂಭತ್ತನೆಯ ಶತಮಾನದ ‘ಗಂಗ’ ಸಾಮ್ರಾಜ್ಯಕ್ಕೆ ಸೇರಿದ ಒಂದು ವೀರಗಲ್ಲಿನಮೇಲೆ ‘ಬೆಂಗಾವಲೂರು’ ಎಂಬ ಹೆಸರು ಅದರ ಶಾಸನದಲ್ಲಿ ಬರೆದಿದೆಯೆಂದೂ, ಆಗ ಅಲ್ಲಿ ನಡೆದ ಯುದ್ಧದಲ್ಲಿ ಪಾತ್ರ ವಹಿಸಿದ ಬೆಂಗಾವಲಿಗರು ಅಲ್ಲಿ ವಾಸಿಸುತ್ತಿದರು ಎಂದು ಸಿದ್ಧಪಡಿಸಿದರು.ಈ ಬೆಂಗಾವಲೂರು ಕ್ರಮೇಣ ಬೆಂಗಳೂರಾಯಿತು.

ಹಿರಿಯ ಕೆಂಪೇಗೌಡ-1 (1510-1565) ಬಂದ ಸಮಯದಲ್ಲಿ ದಕ್ಷಿಣ ಭಾರತವೆಲ್ಲವೂ ವಿಜಯನಗರ ಸಾಮ್ರಾಜ್ಯದ ಆಡಳಿತಲ್ಲಿದ್ದಿತು. ಕೆಂಪೇಗೌಡನು ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ವಿಜಯನಗರ ಸಾಮ್ರಾಜ್ಯದ ಸಲುವಾಗಿ ಊಳಿಗಮಾನ್ಯದಲ್ಲಿ ಆಳುತ್ತಿದ್ದನು. (ಇದೆಲ್ಲಾ ಇರಲಿ, ನಿಮ್ಮ ಅಡ್ಡಹೆಸರು ‘ಕಾವಳೆ’ ಎಂದು ಏಕೆ ಬಂದಿತು? – ಸ್ವಲ್ಪ ತಾಳಿ, ಮುಂದಿನ ಕಥೆಯನ್ನು ಓದಿ). ಪಕ್ಕದಲ್ಲೇ ಸ್ವತಂತ್ರವಾಗಿ ಮೈಸೂರು ರಾಜ್ಯವು ಪುರಾತನ ಓಡೆಯರ್ ರಾಜವಂಶದ ಯದುರಾಯರು-(1399) ಮತ್ತು ಅವರ ಮುಂದಿನ ಸಂತತಿಗಳಿಂದ ಯಾವತಡೆಯೂ ಇಲ್ಲದೆ ಒಡೆಯರ್ ಆಳ್ವಿಕೆಯಲ್ಲಿದ್ದಿತು (ಆಮೇಲೆ ಜಯಚಾಮರಾಜ ಒಡೆಯರು (1947) ಅವರ ವರೆಗೂ ಒಡೆಯರ್ ರಾಜರು ಆಳುತ್ತಿದ್ದರು). ಕೆಂಪೇಗೌಡನ ಮನೆತನದ  ಕೊನೆಯ ವರುಷಗಳಲ್ಲಿ (ಕೆಂಪೇಗೌಡ-2 ಮತ್ತು3), ವಿಜಯನಗರ ಸಾಮ್ರಾಜ್ಯವು 1565ರಲ್ಲಿ ಉರುಳಿತು. ಆ ಸಮಯದಲ್ಲಿ ದಕ್ಷಿಣಭಾರತವು ಮೂರು ಸುಲ್ತಾನರ ಅಧೀನದಲ್ಲಿದ್ದವು – ಬಿಜಾಪುರ, ಅಹ್ಮದ್‍ನಗರ ಮತ್ತು ಗೋಲ್ಕಂಡ ಸುಲ್ತಾನರು. ಈ ಸಮಯದಲ್ಲಿ ಶಾಹಜಿ ಭೋಂಸ್ಲೆ ಎಂಬಾತನು  ಮೂವರು ಸುಲ್ತಾನರ ದಳವಾಯಿ ಅಥವ ಸೇನಾಧಿಪತಿಯಾಗಿ ವಿವಿಧ ಸಮಯಗಳಲ್ಲಿ ಯಾವಸ್ವಾಮಿ ನಿಷ್ಠೆಯಿಲ್ಲದೆ ದುಡಿಯುತ್ತಿದ್ದನು. ಈ ಶಾಹಜಿಯೇ ಛತ್ರಪತಿ ಶಿವಾಜಿಯ ತಂದೆ. (‘ಬಂತಲ್ಲಾ ಮರಾಠಿ ಸಂಬಂಧ’. ತಾಳ್ರಿ, ಇವನಿಂದಲೇನೂ ನಮ್ಮ ವಂಶಕ್ಕೆ ‘ಕಾವಳೆ’ಎಂಬ ಹೆಸರು ಬರಲಿಲ್ಲ). ಆದರೆ ಶಾಹಜಿಯು ಕರ್ನಾಟಕವನ್ನು ನೋಡಿಕೊಳ್ಳುವ ಕಾರ್ಯನಿರ್ವಾಹಕ ಯೋಜನೆಯು ಬಂದುದರಿಂದ ತನ್ನ ಮಗ ಶಿವಾಜಿ ಮತ್ತು ಅವನ ತಾಯಿ ಜೀಜಾಬಾಯಿಯನ್ನು ತನ್ನ ಜಹಗೀರಾದ ಪುಣೆ(ಪೂನಾ)ಯಲ್ಲೇ ಬಿಟ್ಟು ಬೆಂಗಳೂರಿಗೆ ಬಂದನು.  ಅವನಿಗೆ ಬೆಂಗಳೂರು ಮತ್ತು ಸರಹದ್ದಿನಲಿದ್ದ ಪ್ರಾಂತ್ಯಗಳನ್ನು ನೋಡಿಕೊಳ್ಳುವ ಹೊಣೆ ಬಂದಿತು. ಈಗಾಗಲೇ  ಶಾಹಜಿಯು ತುಕಾಬಾಯಿ ಮೋಹಿತೆ ಎಂಬಾಕೆಯನ್ನು ತನ್ನ ಎರಡನೆಯ ಹೇಂಡತಿಯಾಗಿ ಮದುವೆಯಾಗಿದ್ದನು. ಈ ಎರಡನೆಯ ಹೆಂಡತಿಯೊಂದಿಗೆ ಶಾಹಜಿಯು ಹಳೆಯ ಕೋಟೆಯಲ್ಲಿದ್ದ ಬೆಂಗಳೂರಿನಿಂದ ಆಡಳಿತ ನಡೆಸುತ್ತಿದ್ದನು. ಈ ಎರಡನೆಯ ಹೆಂಡತಿಗೆ ಒಂದು ಗಂಡು ಮಗುವಾಗಿ ಅದಕ್ಕೆ ವೆಂಕೋಜಿ (ಅಡ್ಡ ಹೆಸರು ಇಕೋಜಿ) ಎಂದು ಹೆಸರಿಡಲಾಯಿತು.

Shivaji_
Chatrapati Shivaji CC Wiki

ಶಿವಾಜಿಯು ತನ್ನ 12ನೆಯ ವಯಸ್ಸಿನಲ್ಲಿ ತನ್ನ ಅಣ್ಣ ಸಂಬಾಜಿಯೊಂದಿಗೆ ಬೆಂಗಳೂರಿಗೆ ಬಂದನು. ಇಲ್ಲಿ ತನ್ನ ಅಣ್ಣ ಮತ್ತು ಮಲಸಹೋದರ ಇಕೋಜಿಯೊಂದಿಗೆ ನಿಯಮಾನುಸಾರವಾಗಿ ಇವನಿಗೆ ಮಲ್ಲಯುದ್ಧ, ಗುಪ್ತಯುದ್ಧ ಮತ್ತು ಇತರ ಯುದ್ಧಗಳ ತರಬೇತಿಯನ್ನು ಕೊಡಲಾಯಿತು. ಸರಿ, ಇವರನ್ನು ನಾವು ಇಲ್ಲೇ ಬಿಡೋಣ. ರಭಸವಾಗಿ ಮುಂದುವರೆದು (ಫ಼ಾಸ್ಟ್ ಫ಼ಾರ್ವರ್ಡ್) ಹದಿನೈದು ವರುಷಗಳ ನಂತರ ತಮಿಳುನಾಡಿನ ತಂಜಾವೂರಿಗೆ ಬರೋಣ. ಅಲ್ಲಿ ತಂಜಾವೂರು ರಾಜ್ಯಕ್ಕೂ ಮತ್ತು ಮಧುರೈ ರಾಜ್ಯಕ್ಕೂ ಘೋರವಾದ ಕದನ ನಡೆಯುತ್ತಿದೆ. ತಂಜಾವೂರಿನ ವಿಜಯರಾಘವ ನಾಯಕ ಎಂಬ ರಾಜನಿಗೂ ಮತ್ತು ಮಧುರೈ ರಾಜ ಚೊಕ್ಕನಾಥನಿಗೂ ಆಗುತ್ತಿದ್ದ ಆ ಯುದ್ಧದಲ್ಲಿ ಚೊಕ್ಕನಾಥನು ಮಡಿದು ಅವನ ತಮ್ಮನಾದ ಅಳಗಿರಿಯನ್ನು ಪಟ್ಟಕ್ಕೇರಿಸಿದ್ದರು. ಇವನಿಂದ ತಂಜಾವೂರಿನ ರಾಜನು ಸೋಲುವುದು ಖಚಿತವಾಗಲು ಅವನು ಬಿಜಾಪುರದ ಸುಲ್ತಾನ ಆದಿಲ್‍ಶಾ ಅವನ ಸಹಾಯ ಬೇಡಿದನು. ಬಿಜಾಪುರದ ಸುಲ್ತಾನ ಬೆಂಗಳೂರಿನಲ್ಲಿದ್ದ ಶಾಹಜಿ ಮಗ ವೆಂಕೋಜಿಯನ್ನು  ತಂಜಾವೂರಿಗೆ ಆತನ ಸೈನ್ಯದೊಂದಿಗೆ ಕಳುಹಿಸಿದನು. ಆದರೂ, ಈ ಯುದ್ಧದಲ್ಲಿ ತಂಜಾವೂರಿನ ರಾಜ ಮತ್ತು ಆತನ ಸಂಪೂರ್ಣ ಸಂಸಾರವು ನಿರ್ನಾಮವಾಯಿತು. ಇದರಿಂದ ವೆಂಕೋಜಿಯು ತಂಜಾವೂರಿನ ರಾಜ್ಯಭಾರವನ್ನು 1674ರಲ್ಲಿ ವಹಿಸಿದನು. ಇವನು ಸ್ಥಾಪಿಸಿದ ತಂಜಾವೂರು ಮರಾಠ ಸಾಮ್ರಾಜ್ಯವು 1855ರ ವರೆಗೂ ಅಸ್ತಿತ್ವದಲ್ಲಿದ್ದಿತು. ಈ ಮರಾಠ ಸಾಮ್ರಾಜ್ಯವನ್ನು ನಡೆಸಲು ವೆಂಕೋಜಿ ಮತ್ತು ಅವನ ಮುಂದಿನ ಸಂತತಿಯವರು ಪುಣೆ ಯಿಂದ ಬ್ರಾಹ್ಮಣ ಗುಮಾಸ್ತರನ್ನು, ಆಡಳಿತಗಾರರನ್ನು ಮತ್ತು ಮರಾಠ ಸೈನಿಕರನ್ನು ಕರೆತಂದರು. ತಂಜಾವೂರಿನ ಕಡೆಯ ರಾಜ ಎರಡನೆಯ ಶಿವಾಜಿ-2(1832-1855) ಯಾವ ಹಕ್ಕುದಾರರಿಲ್ಲದೆ ಮಡಿಯಲು 1855ರಲ್ಲಿ ತಂಜಾವೂರು ಬ್ರಿಟಿಶರ ವಶಕ್ಕೆ ಬಂದಿತು.

Birds
CC: S Desai

ಈ ಬ್ರಾಹ್ಮಣ ಗುಮಾಸ್ತರೇ ನನ್ನ ಪೂರ್ವಿಕರು. ಈ ಗುಮಾಸ್ತರು ಪೂನಾದ ಎರಡು ಭಾಗಗಳಾದ ಕೊಂಕಣ (ಪಶ್ಚಿಮ) ಮತ್ತು ಒಳದೇಶ ಪ್ರದೇಶಗಳಲ್ಲಿ ವಾಸವಾಗಿದ್ದರು. ಇವರು ‘ಕೊಂಕಣಸ್ಥ’ ಮತ್ತು ‘ದೇಶಸ್ಥ’ ಬ್ರಾಹ್ಮಣರೆಂದು ಕರೆಯಲ್ಪಟ್ಟರು. ಈ ದೇಶಸ್ಥ ಬ್ರಾಹ್ಮಣರೇ ಉತ್ತಮ ಆಡಳಿತಗಾರರಾಗಿ ಅವರಲ್ಲಿ ಕೆಲವರು ಕರ್ನಾಟಕಕ್ಕೆ ವಲಸೆ ಬಂದರು. ಇವರಲ್ಲಿ ಕೆಲವು ಸಂಸಾರಗಳು ಬಹು ದೊಡ್ಡ ಕೂಡೊಕ್ಕಲಾಗಿ ಅವರ ಗ್ರಾಮಗಳಲ್ಲಿ ‘ಕಾಗೆಯ  ಬಳಗದವರು’ ಎಂದು ಕರೆಯಲ್ಪಟ್ಟರು. ಯಾವುದಾದರೂ ಮದುವೆ ಮುಂಜಿ ಮುಂತಾದ ಸಂಭ್ರಮಗಳ ಊಟದ ಸಮಯದಲ್ಲಿ ಈ ಬಳಗದವರು ಎಲ್ಲರೂ ಒಟ್ಟಿಗೆ ಉನ್ನತ ಧ್ವನಿಗಳಲ್ಲಿ ಮಾತಾಡುತ್ತಿದ್ದರಂತೆ. ‘ಕಾಗೆಗಳಹಾಗೆ ಕೂಗಾಡಬೇಡಿ’ ಎಂದರೂ ಅವರು ಸುಮ್ಮನಿರುತ್ತಿರಲಿಲ್ಲ. ಊಟವು ಬಡಿಸಿದೊಡನೇ ಎಲ್ಲರೂ ನಿಶ್ಶಬ್ದವಾಗಿ ಊಟಮಾಡುತ್ತಿದ್ದರಂತೆ! ಈಗಲೂ ಸಹ ನಮ್ಮಮನೆಗಳಲ್ಲಿ ಹಾಗೆಯೇ, ಊಟಕ್ಕೆಮೊದಲು ಮಾತುಗಳು ಜಾಸ್ತಿ!   ಮರಾಠಿಯಲ್ಲಿ ‘ಕಾವಳೆ’ ಎಂದರೆ ಕಾಗೆಗಳು ಎಂದರ್ಥ. ಆದುದರಿಂದ ನಮ್ಮ ವಂಶಕ್ಕೆ ‘ಕಾವಳೆ’ ಎಂಬ ಕುಲನಾಮ ಬಂದಿದೆ. ನಮ್ಮ ಹತ್ತಿರದ ಬಂಧು-ಬಳಗದವರಲ್ಲಿ ಅನೇಕರು ಈಗಲೂ ತಂಜಾವೂರು ಮರಾಠಿಯಲ್ಲಿ ಮಾತನಾಡುತ್ತಾರೆ. ಆದರೆ ನಮ್ಮ ಮನೆಯಲ್ಲಿ ಮತ್ತು ಹಲವು ಸಂಸಾರಗಳಲ್ಲಿ ಮಾತ್ರ  ಕನ್ನಡವು ಮಾತೃಭಾಷೆಯಾಗಿದೆ. ಈಗ ಬಹು ಹೆಮ್ಮೆ ಮತ್ತು ಗೌರವದಿಂದ ‘ನಾನು ಕನ್ನಡಿಗ’ ಎಂದು ಹೇಳಬಲ್ಲೆ!

 • ರಾಜಾರಾಮ ಕಾವಳೆ.

14 thoughts on “ನೋಡು ಬಾ ನಮ್ಮೂರ ಸರಣಿ: ನಾನು ಕನ್ನಡಿಗ, ನನ್ನ ಊರು ಬೆಂಗಳೂರು – ರಾಜಾರಾಮ ಕಾವಳೆ.

 1. ರಾಜಾರಾಮ ಕವಳೆಯವರ ಬರಹ ಬಹಳ ಮಾಹಿತಿಪೂರ್ಣವಾಗಿದೆ. ಷಿವಾಜಿಯ ಇತಿಹಾಸದ ಪರಿಚಯವೂ ಇವರಿಂದ ಆಯಿತು.
  ನೀವು ಬೆಂಗಳೂರಿನ ಇತಿಹಾಸದ ಒಂದು ಪುಟ್ಟ ಪರಿಚಯಲೇಖನ ಬರೆದರೆ ನಮಗೆಲ್ಲ ಸಹಾಯವಾಗಬಹುದು. ಲಘು ಹಾಸ್ಯ ಹಾಗೂ ಹಗುರವಾದ ನಿರೂಪಣೆಯಿಂದ ಓದಿನ ಲಹರಿ ಚೆನ್ನಾಗಿ ಓಡುತ್ತದೆ. ಉತ್ತಮವಾದ ಬರಹ.

  Like

  • ದೆಸಾಯಿಯವರೇ,
   ನಾನು ಬರೆದುದು ಭೀಮಸೇನ ಜೋಶಿಯವರ ’ಮನೆ ಭಾಷೆ’ ಮರಾಠಿಯಾಗಿತ್ತು ಎಂದು, ಯಾಕೆಂದರೆ ಅವರ ಎರಡನೆಯ ಹೆಂಡತಿಯವರು ಮಹಾರಾಷ್ಟ್ರೀಯದವರು, ಅವರು ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳೊಂದಿಗೆ ಮರಾಠಿಯಲ್ಲಿ ಮಾತನಾಡುತ್ತಿದ್ದರು. ಇದಕ್ಕೆ ಒಬ್ಬರ ಪುರಾವೆಯೂ ಇದೆ. ಈ ವಾದ ಸರಣಿಯನ್ನು ಇಲ್ಲಿಗೇ ಮುಕ್ತಾಯಗೊಳಿಸುವುದು ಸರಿಯೆಂದು ತೋರುತ್ತದೆ.

   Like

 2. ಬೆಂಗಳೂರಿನ ಹೆಸರಿನ ಮೂಲ ನಿಮ್ಮ ಲೇಖನ ಓದಿದ ಮೇಲೇ ಗೊತ್ತಾಯ್ತು. ಸ್ವಾರಸ್ಯಕರ ಲೇಖನ. ತಲತಲಾಂತರಗಳಿಂದ ನಮ್ಮ ರಾಜಧಾನಿ ಕೊಸ್ಮೊಪಾಲಿಟನ್ ಆಗಿತ್ತು ಎಂದು ಹೆಮ್ಮೆ ಎನಿಸುತ್ತದೆ. ನಿಮ್ಮ ಹಿಂದಿನ ಬರಹವೊಂದರಲ್ಲಿ ನೀವು ವಿಶ್ವೇಶ್ವರಯ್ಯನವರನ್ನು ಭೇಟಿಯಾಗಿದ್ದನ್ನ ಬರೆದಿದ್ದಿರಿ. ಇನ್ನುೂ ಹಲವಾರು ಲೇಖನಗಳು ಹೊಮ್ಮಲಿ.

  ಭೀಮಸೇನ ಜೋಷಿಯವರು ಗದುಗಿನವರು. ಮಹಾರಾಷ್ಟ್ರದವರು ಅವರಿಗೆ ಆಶ್ರಯ. ಕೊಟ್ಟು ಪ್ರೋತ್ಸಾಹಿಸಿದರು. ಅವರನ್ನು ಮಹಾರಷ್ಟ್ರಕ್ಕೆ ಕೊಟ್ಟು ಬಿಡಬೇಡಿ.

  ಕೆಟ್ಟು ಇನ್ಸಾನುೂ

  Like

  • ಭೀಮಸೇನ ಜೋಶಿಯವರು ಕರ್ನಾಟಕದ ಗದುಗಿನಲ್ಲಿ ಹುಟ್ಟಿದರೂ ಅವರ ಮನೆ ಭಾಷೆ ಮರಾಠಿಯಾಗಿದ್ದಿತೆಂದು ನನ್ನ ನಂಬಿಕೆ. ಆ ಕಾರಣದಿಂದ ಅವರು ಮರಾಠಿಗರು ಎಂದು ಬರೆದೆ.
   ರಾಜಾರಾಮ ಕಾವಳೆ.

   Like

 3. ರಾಜಾರಾಮರೆ, ಇವೆಲ್ಲ ವಿಷಯ ವೇದಿಕೆಯವರಿಗಷ್ಟೇ ಅಲ್ಲ, ಬೇರೆ ಕೆಲವರಿಗೂ ಗೊತ್ತಿರಲಿಕ್ಕಿಲ್ಲವೆಂದು ನನ್ನ ಭಾವನೆ. ಬೆಂಗಳೂರಿನ ರಾನಡೆ ಎಂಬೊಬ್ಬರು ನನಗೆ ಗೊತ್ತು. ಅವರೂ ನಿಮ್ಮಿಬ್ಬರಂತೆಯೇ ಕನ್ನಡದಲ್ಲಿ ಅಸ್ಖಲಿತರು. ನಿಮ್ಮ ಬರವಣಿಗೆಗಳಿಂದಲೇ ಎಲ್ಲರ ಮೂಲ ಗೊತ್ತಾದುದು. ಋಗ್ವೇದದ ಹೇಳಿಕೆಯನ್ನು ಸ್ವಲ್ಪ ಬದಲಿಸಿ ಸ್ವಾಗತಿಸುವೆ: ಆ ನೋ ಭದ್ರಾಃ ಮನುಷ್ಯೋ ಯಂತು ವಿಶ್ವತಃ! ಧನ್ಯವಾದಗಳು.

  Like

 4. ರಾಮಮೂರ್ತಿಯವರೇ,

  ನೀವೂ ನನ್ನ ಹಾಗೆ ಕರ್ನಾಟಕಕ್ಕೆ ವಲಸೆ ಬಂದ ತಮಿಳು-ಮರಾಠಿ ವಂಶಸ್ಥರ ಮೂಲದವರು ಎಂದು ನನಗೆ ತಿಳಿದಿದೆ ಆದರೆ ನಮ್ಮ ವಿಚಾರವೇದಿಕೆಯ ಸದಸ್ಯರಿಗೆ ಅದು ತಿಳಿಯಲಾರದು. ನಮ್ಮ ಮನೆತನದ ದೇವರೂ ಘಟಿಕಾಚಲದ ಬೆಟ್ಟದ ಮೇಲಿರುವ ’ಯೋಗಾ ನರಸಿಂಹದೇವರು’.ಈ ವಿಚಾರ ವೇದಿಕೆಯಿಂದ ಇವರಿಗೆ ಈಗ ತಿಳಿದಿದೆಯೆಂಬುದು ಸಂತೋಷದ ಸಂಗತಿ. ಇನ್ನು ನೀವುಕೇಳಿದ, ’ನಮ್ಮ ಪೂರ್ವಿಕರು ತಮಿಳುನಾಡುಬಿಟ್ಟು ಏಕೆ ಕರ್ನಾಟಕಕ್ಕೆ ಬಂದರು?’ ಪ್ರಷ್ನೆಗೆ ಉತ್ತರವಾಗಿ ನನಗೆ ಸ್ವಲ್ಪ ವಿಚಾರಗಳು ನಮ್ಮ ತಂದೆಯವರಿಂದ ತಿಳಿದಿದೆ. 1674ರಿಂದ ಹಿಡಿದು1855ರವರೆಗೂ ತಂಜಾವೂರನ್ನು ಬಹು ಏಳಿಗೆಯಿಂದ ಮರಾಠಾಸಾಮ್ರಾಜ್ಯವು ಆಳಿತು. ವೆಂಕೋಜಿಯನಂತರ ಪೇಶ್ವೆಗಳು ಮತ್ತು ಮರಾಠಿ ಆಡಳಿತಗಾರರಲ್ಲದೆ ಕೊನೆಯಲ್ಲಿ ಶಿವಾಜಿ2 ರಾಜನು 1855ರಲ್ಲಿ ಗಂಡುಮಕ್ಕಳಿಲ್ಲದೆ ಮಡಿದನು. ಆಗ ಇಂಗ್ಲೀಷಿನವರು ‘Doctrine of Lapse’ಎಂಬ ಕಾನೂನಿನ ಮೇರೆಗೆ ರಾಜ್ಯವನ್ನು ವಹಿಸಿದರು. ಹಲವು ವರುಷಗಳನಂತರ ಮೈಸೂರು ಸಂಸ್ಥಾನದಲ್ಲಿ ಶೇಶಾದ್ರಿ ಅಯ್ಯರ್ (1883 ರಿಂದ 1901) ಎಂಬುವರು ದಿವಾನರಾಗಿದ್ದರು. ಇವರ ಕಾಲದಲ್ಲಿ ತಂಜಾವೂರು ಮತ್ತು ತಿರುವಾಂಕೂರುಗಳಲ್ಲಿ ಆಡಳಿತ, ಸಾಹಿತ್ಯ, ಸಾಹಿತ್ಯ ಮತು ಸಂಸ್ಕೃತಿಗಳಲ್ಲಿ ಬಹಳ ಪ್ರಗತಿ ಹೊಂದಿದ್ದಿತು. ಇವರಕಾಲದಲ್ಲಿ ಕೃಷ್ಣರಾಜ ಒಡೆಯರು (4) ಇನ್ನೂ ಬಾಲಕರಾಗಿದ್ದರಿಂದ ಅವರ ತಾಯಿ ನಂಜರಾಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರು ರೀಜೆಂಟ್ ರಾಣಿಯಾಗಿ ರಾಜ್ಯಭಾರವನ್ನು ನಡೆಸುತ್ತಿದ್ದರು. ಈ ಸಮಯದಲ್ಲಿ ದಿವಾನ ಶೇಷಾದ್ರಿ ಅಯ್ಯರವರು ರಾಣಿಯವರ ಆದೇಶದಮೇರೆಗೆ ತಂಜಾವೂರಿನ ಮಹಾರಾಜರನ್ನು ಮೈಸೂರು ರಾಜ್ಯವನ್ನು ಆಳಲು ಆಡಳಿತಗಾರರನ್ನು ಕಳುಹಿಸಲು ವಿನಂತಿಸಿದರು. ಇದರ ಮೇರೆಗೆ ತಂಜಾವೂರಿನ ಮಹಾರಾಜರು ಮರಾಠಾ ಸಾಮ್ರಾಜ್ಯವನ್ನು ಆಳುತ್ತಿದ್ದ ಪೇಶ್ವೆಗಳನ್ನು ಕೇಳಿಕೊಂಡರು, ಅದಕ್ಕೆ ಅವರು ಕೊಲ್ಲಾಪುರ ಮತ್ತು ಸತಾರ ದೇಶಸ್ಥ ವಲಯಗಳಿಂದ 30 ಕುಟುಂಬಗಳನ್ನು ಮೈಸೂರು ರಾಜ್ಯಕ್ಕೆ ಕಳುಹಿಸಿದರು (Lent service).ಅವರಲ್ಲಿ ’ಗುಂಡೋಪಂತ್’, ’ನಾರಾಯಣ ಶರ್ಮ’(ನಮ್ಮ ಮೂಲ) ಎಂಬ ವೈದ್ಯ ಕುಟುಂಬ, ’ಸರ್ಪೇಶಕರ್’ ಎಂಬ ಸೈನ್ಯಾಧಿಕಾರಿಗಳು, ’ಭಾಂದು’ಗಳೆಂಬ ನಕ್ಷಬಂಧಿಗಳು, ’ಪಾಠಂಕರ್’ ಎಂಬ ಅಧ್ಯಾಪಕ ಮೊದಲಾದ ಸಂಸಾರಗಳು ಮೈಸೂರಿಗೆ ವಲಸೆ ಬಂದವು. ನಾವು ಈ ಸಂಸಾರಗಳ ಮುಂದಿನ ಪೀಳಿಗೆಯ ಕನ್ನಡಿಗರು!!
  –ರಾಜಾರಾಮ ಕಾವಳೆ.

  Like

  • ನನ್ನ ಅಭಿಪ್ರಾಯ ಬೇರೆ, ತಪ್ಪು ಇರಬಹುದು. ನಮ್ಮ ಪೂರ್ವಿಕರು, ನನಗೆ ತಿಳಿದಹಾಗೆ ವೈದ್ಯರು ಅಥವಾ ಸೇನಾಧಿಕಾರ ದ ಅನುಭವ ಇರಲಿಲ್ಲ. ಇವರು ಬಂದು ಕಾವೇರಿ ದಡದ ಹಸಸೋಗೆ ಎಂಬ ಊರಿನಲ್ಲಿ ನೆಲಸಿದರು, ದೇವರ ಪೂಜೆ ಮತ್ತು ವ್ಯವಸಾಯ ಮಾಡಿ ಜೀವನ ನಡೆಸಿದರು. ಇವರು ಬಂದ ಉದ್ದೇಶ, ನನ್ನ ಪ್ರಕಾರ ಮತ್ತೇನೋ ಕಾರಣ ಇರಬೇಕು.
   ನೀವು ಸಿಕ್ಕಿದಾಗ ಮಾತನಾಡೋಣ
   Sent from http://bit.ly/KIoyYL

   Like

 5. ನಿಮ್ಮ ಮತ್ತೊಂದು ವೈಚಾರಿಕ ಲೇಖನಕ್ಕೆ ಧನ್ಯವಾದ.
  ಬೆಂಗಳೂರಿನ ಇತಿಹಾಸವನ್ನು ಎಷ್ಟು ಚೆನ್ನಾಗಿ ಹೇಳಿದ್ದೀರೊ ,ನಿಮ್ಮ ಪೂರ್ವಿಕರ ವಿಚಾರವನ್ನೂ ಅಷ್ಟೇ ಚೆನ್ನಾಗಿ ವಿವರಿಸಿದ್ದೀರಿ.
  ಬೆಂಗಳೂರಿನ ಬಗ್ಗೆ ನಮಗೆ ಖಂಡಿತಾ ನಮಗೆ ಇಷ್ಟೊಂದು ತಿಳಿದಿರಲಿಲ್ಲ!

  Like

 6. ಕಾವಳೆ ಅವರೇ,
  ನಿಮ್ಮ ಮನೆತನ ಮೇಲೆ ಬರದಿರುವುದು ಬಹಳ ಚೆನ್ನಾಗಿದೆ. ನಿಮ್ಮ ಹಾಗೆ ನಾನು ಈ ಮೂಲದವನು.
  ನಮ್ಮ ವಂಶಸ್ತರು ತಮಿಳುನಾಡಿನವರು ಒಂದು ಕಡೆ ಮತ್ತು ಮರಾಟಿ ಇನ್ನೊಂದು ಕಡೆ ಅಂತ ನಮ್ಮತಂದೆ ಹೇಳಿದ್ದು ನನಗೆ ಜ್ಞಾಪಕ ಇದೆ. ನಿಮ್ಮಹಾಗೆ ನಮ್ಮಮನೆದೇವರು ಗಟಗಾಚಲ ದಲ್ಲಿ. ಇದು ಈಗ ತಮಿಳುನಾಡಿನಲ್ಲಿ ಇದೆ.
  ಆದರೆ ನಮ್ಮ. ಪೂರ್ವಿಕರು ತಮಿಳುನಾಡು ಬಿಟ್ಟು ಮೈಸೂರು ದೇಶಕ್ಕೆ ಏಕೆ ಬಂದರು ಅನ್ನುವುದು ನನ್ನ ಶಂಷಯ. ಇದರ ಬಗ್ಗೆ ನಾವು ಭೇಟಿ ಆದಾಗ ಡಿಸ್ಕಸ್ ಮಾಡೋಣ.
  ರಾಮಮೂರ್ತಿ

  Sent from http://bit.ly/KIoyYL

  Like

 7. ನನ್ನ ತಾತನವರ ಮೂರು ಅಥವ ನಾಲ್ಕನೆಯ ಹಿಂದಿನ ತಲೆಮಾರಿನ ಸಮಯದಲ್ಲಿ ಹೊರನಾಡಿನಿಂದ ಮೈಸೂರು ಸಂಸ್ಥಾನಕ್ಕೆ ವಲಸೆಬಂದ ಜನಾಂಗವು ಬಹು ಹೆಮ್ಮೆಯಿಂದ ಸ್ಥಳೀಯ ಜನಾಂಗದೊಡನೆ ಸಮಗ್ರವಾಗಿ ಸೇರಿದರಲ್ಲದೇ ಸ್ಥಳೀಯಭಾಷೆಯನ್ನೂ (ಕನ್ನಡ) ಆಲಂಗಿಸಿ ಅದರಲ್ಲಿ ಪರಿಣಿತ್ಯವನ್ನು ಗಳಿಸಿರುವುದನ್ನು ನೋಡಿ ನನಗೆ ಬಹು ಆಶ್ಚರ್ಯ ಮತ್ತು ಹೆಮ್ಮೆಯೂ ಆಗುವುದು. ಈಗಿನಕಾಲದಲ್ಲಿ ಹೊರನಾಡಿನಿಂದ ಬಂದ ಜನರು ಕನ್ನಡಭಾಷೆಯನ್ನು ಕಲಿಯದೆ ಅದನ್ನು ಅಸಡ್ಡೆಯಿಂದ ಕಡೆಗಣಿಸುತ್ತಿರುವುದು ವಿಷಾದಕರವಲ್ಲವೇ? ಅದಲ್ಲದೆ ಸ್ಥಳೀಯ ಕನ್ನಡಿಗರೂ ಹೀಗೆ ಕನ್ನಡವನ್ನು ಕಡೆಗಣಿಸುವುದು ಇನ್ನೂ ದುಃಖಕರ.
  ಇನ್ನೊಂದು ವಿಶಯ ನಾನು ನೋಡಿರುವುದೇನೆಂದರೆ, ಮಾತೃಭಾಷೆ ಕನ್ನಡವಲ್ಲದವರಲ್ಲಿ ಅನೇಕ ಸಾಹಿತ್ಯಕಾರರೂ, ಕವಿಗಳೂ, ಸಾಹಿತಿಗಳು ಇರುವುದನ್ನು ನೋಡಿದರೆ ಆಶ್ಚರ್ಯವಾಗುವುದು. ನಮಗೆ ತಿಳಿದಿರುವಂತೆ, ನಿಸಾರ ಅಹಮದ್ ಅವರ ಮಾತೃಭಾಷೆ ಉರ್ದು, ಜಿ ಪಿ ರಾಜರತ್ನಮ್ ಅವರ ಮಾತೃಭಾಷೆ ತಮಿಳು, ಕೈಲಾಸಂ, ಕೆ ವಿ ಅಯ್ಯರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇವರೆಲ್ಲರೂ ತಮಿಳರು, ನಾ ಕಸ್ತೂರಿಯವರ ಭಾಷೆ ಮಲೆಯಾಳಿ, ಕಾರಂತರ ಭಾಷೆ ತುಳು, ಭೀಮಸೇನ ಜೋಶಿಯವರು ಅಲ್ಲದೆ ಪುರಂದರ ದಾಸರೂ ಮರಾಠಿಗರು. ಈ ಹೊರನಾಡಿನ ಕನ್ನಡಿಗರೆಲ್ಲರೂ ಹೀಗೆ ಕನ್ನಡದ ಪ್ರವೀಣರಾಗಿರುವಾಗ ನಮ್ಮ ಕನ್ನಡಿಗರೇ ಯಾಕೆ ಹೀಗೆ? ಅವರಿರುವುದೇ ಹಾಗೆ.

  Like

 8. ಕಾವಳೆ ಅವರೆ, ನಿಮ್ಮ ಮೂಲ ಮರಾಠಿಯಾದರೂ, ಕನ್ನಡದ ಕಣ್ಮಣಿಯಾಗಿರುವಿರಿ. ಕಾವಳೆ ಎಂದರೆ ”ಕಾಗೆ ಬಳಗದವರು” ಎಂಬ ಅಡ್ಡಹೆಸರಿಂದ ಕೂಗಲ್ಪಟ್ಟವರಾದರೂ, ಕನ್ನಡ ಬಳಗಕ್ಕೆ , ಕನ್ನಡ ಬಳಗದ ಜಾಲತರಂಗಕ್ಕೆ ಕೋಗಿಲೆಯಂತಿರುವಿರಿ. ನಿಮ್ಮ ಮನೆತನದ ಇತಿಹಾಸ ಬಹು ಸ್ವಾರಸ್ಯಕರವಾಗಿದೆ. ನಿಮ್ಮ ಸೇವೆ ಕನ್ನಡಕ್ಕೆ ಹೀಗೆಯೇ ಮುಂದುವರೆಯಲಿ.
  ಉಮಾ ವೆಂಕಟೇಶ್

  Like

 9. Rajaramarige,
  Anant pranamgalu. Nimma lekhan nanna manassannu aralisi,shoorthi, tanditu.namma hagu nimma bhettiyadagella “Nimma heasru Marthi hage iddaru,neevu marathi yake mataduvadilla ” yendu prashnisuttidde. Yeega arthavayitu. Adaroo,nimma matu,nadate yella balu mrudi.kake kooguva dhwani yellastuu yilla. Kogileyantha mrudi dhwani tumbiddannu keluva yella shrotugalannella Anand taruttiddiri .nimma yella lekhanagalu balu swarasyagive.heegeye bareyuttaliri. Navella Kannada abhimanigaliye shramisona.
  Aravind

  Like

 10. ಕಾವಳೆಯವರೇ, ನಿಮ್ಮ ಹೆಸರು, ನಿಮ್ಮ ಮನೆ ಮತ್ತು ನಿಮ್ಮ ಮನೆತನದ ಇತಿಹಾಸವಲ್ಲದೇ ಬೆಂಗಳೂರಿನದೂ ಬಹಳೇ ಸ್ವಾರಸ್ಯಕರವಾಗಿದೆ. ನಿಮ್ಮನ್ನು ಮೊದಲ ಸಲ ಕಂಡಾಗಿನಿಂದಲೂ ಈ ಮರಾಠಿಯವನಿಗೇಕೆ ಇಷ್ಟು ಕನ್ನಡದ ಅಭಿಮಾನ, ಆ ಭಾಷೆಯ ಮೇಲೆ ಹಿಡಿತ ಎಂದು ಯೋಚಿಸುತ್ತಿದ್ದೆ. ಈಗ ಅರ್ಥವಾಯಿತು, ಅದು ಬರೀ ಕಾಕತಾಳೀಯವಲ್ಲ ಎಂದು! ನಮ್ಮ ಕನ್ನಡ ಬಳಗದ ಸಮಾರಂಭಗಳಲ್ಲಿ ನಮ್ಮವರು ಮಾಡುವ ಗುಲ್ಲು ಕಾವಳೆ ‘ಸ್ಟೈಲಿ‘ನಲ್ಲೇ! ಇನ್ನಷ್ಟು ಬರಲಿ ನಿಮ್ಮಿಂದ ಬರಹಗಳು. (ಇದು ಕಾಗೆಗೆ ಪಂಚತಂತ್ರದ ನರಿಯ ಪ್ರಶಂಸೆಯಲ್ಲ!)

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.