ಮಿಂಚಿ ಮಾಯವಾದ ಮ್ಯಾಂಡೋಲೀನ್ ಮಾಂತ್ರಿಕ ಯು. ಶ್ರೀನಿವಾಸ್ – ಉಮಾ ವೆಂಕಟೇಶ್

೧೯೮೩ರ ರಾಮನವಮಿ ಸಂಗೀತ ಕಛೇರಿಗಳ ಸುಗ್ಗಿಯ ಕಾಲವದು. ಮೈಸೂರಿನ ಕರ್ನಾಟಕ ಸಂಗೀತ ಪರಂಪರೆಯನ್ನು ಹಲವಾರು ದಶಕಗಳಿಂದ ಅವ್ಯಾಹತವಾಗಿ ನಡೆಸಿಕೊಂಡು ಬರುತ್ತಿದ್ದ ಟಿ.ಚೌಡಯ್ಯ ಸ್ಮಾರಕ ಸಂಗೀತ ಸಭೆಯಲ್ಲಿ, ಆ ವರ್ಷ ೧೪ ವರ್ಷದ ಹುಡುಗನೊಬ್ಬ ಮ್ಯಾಂಡಲೀನ್ ನುಡಿಸಲು ಬರುತ್ತಿರುವನಂತೆ ಎಂಬ ಸುದ್ದಿ, ಮೈಸೂರಿನಲ್ಲೆಲ್ಲಾ ಹರಡಿತ್ತು. ನನ್ನಂತಹ ಸಂಗೀತ ಪ್ರೇಮಿಗಳಿಗೆ ಈ ಸುದ್ದಿ  ಸ್ಥಳೀಯ ಪತ್ರಿಕೆಯ ಮೂಲಕ ತಿಳಿದು ಬಂದಿದ್ದು, ಆ ಹುಡುಗನನ್ನು ನೋಡಲು ಕಾತುರಳಾಗಿದ್ದೆ. ಸರಿ ಚಾಮರಾಜಪುರಂ ಬಡಾವಣೆಯಲ್ಲಿ, ಪ್ರಖ್ಯಾತ ವಕೀಲರಾದ ದಿ.ಪುಟ್ಟೂರಾಯರ ಮನೆಯ ಅಂಗಳದಲ್ಲಿ ನಡೆಯುತ್ತಿದ್ದ ಪ್ರಸಿದ್ಧ ರಾಮನವಮಿ ಸಂಗೀತೋತ್ಸವದ ಆರಂಭದಲ್ಲೇ ಇದ್ದ ಆ ಕಛೇರಿಗೆ ನಮ್ಮ ಮನೆಯವರೆಲ್ಲಾ ಧಾವಿಸಿದೆವು. ಅಷ್ಟು ಹೊತ್ತಿಗೆ ನಮ್ಮ ಪರೀಕ್ಷೆಗಳೆಲ್ಲಾ ಮುಗಿದು, ಬೇಸಿಗೆ ರಜೆಯ ಸವಿಯನ್ನು ನಮ್ಮದೇ ಶೈಲಿಯಲ್ಲಿ ಅನುಭವಿಸುತ್ತಿದ್ದ ಹಾಯಾದ ದಿನಗಳವು.

U Shrinivas
Cc: Wiki

ಪುಟ್ಟೂರಾಯರ ಮನೆಯ ವಿಶಾಲವಾದ ಅಂಗಳದಲ್ಲಿ, ಅಲ್ಲಿದ್ದ ಸುಂದರವಾದ ಫಲ-ಪುಷ್ಪಗಳ ಗಿಡ-ಮರಗಳು, ತರುಲತೆಗಳ ಮಧ್ಯೆ, ನಿರ್ಮಿಸಿರುತ್ತಿದ್ದ, ಆ ಶಾಮಿಯಾನಾದ ಸೊಬಗು ನನ್ನ ಕಣ್ಣಿಗೆ ಕಟ್ಟಿದಂತಿದೆ. ಸಂಪ್ರದಾಯಸ್ಥ ಮೈಸೂರಿನ ಎಲ್ಲಾ ರೂಪ-ವೈಷಿಷ್ಟ್ಯಗಳನ್ನೂ, ಆ ಚಪ್ಪರದಲ್ಲಿ ಕಾಣಬಹುದಾಗಿತ್ತು. ಪ್ರತೀ ಕಂಬದ ಮೇಲೂ ನೇತು ಹಾಕಿದ್ದ ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧರಾಗಿದ್ದ ಕಲಾವಿದರ ಛಾಯಾಚಿತ್ರಗಳು,  ಚಪ್ಪರದ ಒಂದು ಮೂಲೆಯಲ್ಲಿ ಭವ್ಯವಾದ ಕರಿಮರದ ಮಂಟಪದಲ್ಲಿ ವಿಜೃಂಭಿಸಿದ್ದ ಸೀತಾರಾಮ ಪಟ್ಟಾಭಿಷೇಕದ ಸುಂದರವಾದ ಪಟ. ಅದನ್ನಲಂಕರಿಸಿದ್ದ  ಗಮಗಮಿಸುವ ಮಲ್ಲಿಗೆ ಮಾಲೆ, ಊದು ಬತ್ತಿಯ ಸುವಾಸನೆಗಳು ಅಲ್ಲೆಲ್ಲಾ ಆವರಿಸಿ, ಪ್ರೇಕ್ಷಕರಲ್ಲಿ, ಮುಂದೆ ಸವಿಯಬಹುದಾದ ಸಂಗೀತಕ್ಕೆ, ಉತ್ತಮವಾದ ವಾತಾವರಣವನ್ನು ಕಲ್ಪಿಸುವುದರಲ್ಲಿ ಯಶಸ್ವಿಯಾಗಿತ್ತು. ಪ್ರತೀ ವರ್ಷ ಅಲ್ಲಿ ನೆರೆಯುತ್ತಿದ್ದ, ಮೈಸೂರಿನ ಸಂಗೀತ ಕಲಾಭಿಮಾನಿಗಳ ಚಿರಪರಿಚಿತ ಮುಖಾರವಿಂದಗಳು, ಸ್ನೇಹಿತರ ಮತ್ತು ನೆಂಟರುಗಳ ನಗುಮುಖಗಳು, ಇವನ್ನೆಲ್ಲಾ ನೋಡುತ್ತಾ ಸರಿಯಾದ ಜಾಗದಲ್ಲಿ (ನೆಲದ ಮೇಲೆ) ಚಕ್ಕಳ-ಮಕ್ಕಳ ಹಾಕಿ ಕುಳಿತೆವು.

ಪುಟ್ಟೂರಾಯರ ಮಗ, ವಕೀಲರಾದ ಶ್ರೀಕಂಠಯ್ಯ ತನ್ನ ಶಿಸ್ತು ಮತ್ತು ಸಮಯ-ಪ್ರಜ್ಞೆಗಳಿಗೆ ಹೆಸರುವಾಸಿ. ಸರಿಯಾಗಿ ಸಂಜೆ ೬ ಗಂಟೆಗೆ, ಕಲಾವಿದರು ವೇದಿಕೆಯ ಮೇಲೆ ಹಾಜರಾಗುತ್ತಿದ್ದರು. ಸರಿ ನಾವೆಲ್ಲಾ  ನಮ್ಮ ಕತ್ತುಗಳನ್ನು ಎತ್ತಿ, ದೃಷ್ಟಿ ಹರಿಸಿ ಕಾಯುತ್ತಿದ್ದಂತೆ, ಸಿಲ್ಕ್ ಪೈಜಾಮಾ ಮತ್ತು ಜುಬ್ಬಾ ಧರಿಸಿದ, ಅಲೆಗೂದಲ, ಮುಗ್ಧ ಮುಖದ, ಚಂಚಲಕಣ್ಣುಗಳ ಬಾಲಕ, ತನ್ನ ಮ್ಯಾಂಡಲೀನ್ ಹೊತ್ತು ವೇದಿಕೆಯನ್ನೇರಿದ. ಅವನು ಆ ವಿಶಾಲವಾದ ವೇದಿಕೆಯ ಮೇಲೆ ಕಾಣುತ್ತಲೇ ಇರಲಿಲ್ಲ. ಅವನ ಪಕ್ಕವಾದಕರು ಅವನಿಗಿಂತ ಪ್ರಾಮುಖ್ಯರಾಗಿ ಕಾಣುತ್ತಿದ್ದರು. ಪ್ರೇಕ್ಷಕರ ಬಾಯಿಂದ ಬಾಲಕನನ್ನು ಕಂಡಾಗ ಹೊರಟ ಉದ್ಗಾರ ನನ್ನ ಕಿವಿಗಳಲ್ಲಿ ಇನ್ನೂ ಗುಯ್ಗುಡುತ್ತಿದೆ. ಅಲ್ಲಿ ನೆರದಿದ್ದವರಲ್ಲಿ ಹಲವರು, ”ಅಯ್ಯೋ ಇದೇನ್ರೀ ಇಷ್ಟು ಸಣ್ಣ ಹುಡುಗ ಎಂದವರು ಹಲವರು, ನೋಡಿದ್ರಾ, ಈ ವಯಸ್ಸಿಗೇ ಈ ಮಗು ಇಲ್ಲಿಗೆ ಬಂದಿದೆಯಲ್ಲಾ ಎಂದವರು ಬಹಳ ಮಂದಿ, ಎನ್ನಾ ಇಂದೆ ಪೈಜೆ” ಎಂದು ತಮಿಳಿನಲ್ಲಿ ಗುನುಗುನಿಸಿದ ಅಯ್ಯಂಗಾರ್ ಕುಟುಂಬದ ಹಿರಿಯರು , ಹೀಗೆ ಎಲ್ಲರ ಪ್ರತಿಕ್ರಿಯೆಗಳನ್ನೂ ಕೇಳಿ, ಆ ಶಬ್ದ ಅಡಗಿದ ನಂತರ ತಂಬೂರಿಯ ಝೇಂಕಾರ ಶುರುವಾಯಿತು.

ತನ್ನ ಮ್ಯಾಂಡಲೀನ್ ಶ್ರುತಿ ಮಾಡಿ, ಹಂಸಧ್ವನಿ ರಾಗದ ಸಣ್ಣ ಆಲಾಪನೆಯೊಂದಿಗೆ ಅಲ್ಲಿದ್ದ ಪ್ರೇಕ್ಷಕ ವರ್ಗಕ್ಕೆ ತನ್ನ ಪ್ರತಿಭೆಯ ಪರಿಚಯ ಮಾಡಿದ ಆ ಬಾಲಕನೇ,  ”ಮ್ಯಾಂಡೋಲೀನ್ ಕಲಾವಿದ, ಯು.ಶ್ರೀನಿವಾಸ್”. ತನ್ನ ವಾದ್ಯವನ್ನು ಆ ಹುಡುಗ ನೋಡದೇ, ತನ್ನ ಎಳೆಯ ಬೆರಳುಗಳನ್ನು ಲೀಲಾಜಾಲವಾಗಿ, ವಾದ್ಯದ ತಂತಿಗಳ ಮೇಲೆ ಹರಿಸಿ, ಅಧ್ಭುತ ನಾದದ ಹೊಳೆ ಹರಿಸುತ್ತಿದ್ದ, ಅವನ ಪ್ರತಿಭೆಗೆ ಏನನ್ನಬೇಕೋ ತಿಳಿಯದು.  ೨೦ರ ಹರಯದಲ್ಲಿದ್ದ ನನಗೆ,  ಹೀಗೂ ಉಂಟೇ ಎನ್ನಿಸಿತು. ವಾತಾಪಿ ಗಣಪತಿಯಿಂದ ಶುರುವಾದ ಆ ಸಂಗೀತದ ರಸಸಂಜೆ, ನನ್ನ ಮೆಚ್ಚಿನ ಅನೇಕ ರಾಗಗಳಲ್ಲಿ ರಚಿತವಾದ ಕೃತಿಗಳಲ್ಲಿ ಮುಂದುವರೆಯಿತು. ಪ್ರತೀ ಹಾಡಿನ ಅಂತ್ಯದಲ್ಲಿ ಕಿವಿಗಡಚಿಕ್ಕುವ ಕರತಾಡನ ನನ್ನ ಕಿವಿಗಳನ್ನು ಮೊರೆಯುತ್ತಿತ್ತು. ಆ ಬಾಲಕನ ಪ್ರತಿಭೆ ಕಂಡು ಬೆರಗಾದ ಎಲ್ಲರ ಹೃದಯಗಳೂ ತುಂಬಿ ಬಂದು, ಹೆಮ್ಮೆಯಿಂದ ಬೀಗುತ್ತಿದ್ದವು ಎನ್ನುವುದರಲ್ಲಿ ಯಾವ ಸಂಶಯವೂ ಇರಲಿಲ್ಲ. ಹಲವು ಹಿರಿಯರಂತೂ ಕಣ್ಣಿರಿಡುತ್ತಿದ್ದರು. ಕದನಕುತೂಹಲ ರಾಗದಲ್ಲಿರುವ ಪ್ರಸಿದ್ಧ ಕೃತಿ, ”ರಘುವಂಶಸುಧಾಂಭುಧಿ” ನುಡಿಸಿದಾಗ ಎದ್ದು ಕುಣಿಯುವ ಭಾವನೆ ಪ್ರೇಕ್ಷಕರಲ್ಲಿ. ಬ್ರೋಚೇವಾರೆವರು ರಾ, ಜಗದೋದ್ಧಾರನಾ, ಹೀಗೆ ಒಂದೇ ಎರಡೇ! ಕಡೆಯಲ್ಲಿ ಧೇನುಕಾ ರಾಗದ ತಿಲ್ಲಾನದಲ್ಲಿ ತನ್ನ ಕಛೆರಿಯನ್ನು ಮುಗಿಸಿದ ಆ ಬಾಲಕನನ್ನು, ಅಲ್ಲಿದ್ದ ಹಿರಿಯ ಸಂಗೀತ ಕಲಾವೀದರೊಬ್ಬರು ವೇದಿಕೆಯ ಮೇಲೆ ಬಂದು ಬಿಗಿಯಾಗಿ ಅಪ್ಪಿಕೊಂಡರು. ಆಗ ಅಲ್ಲಿದ್ದವರ ಕಣ್ಗಳಲ್ಲಿ ನೀರಾಡಿತು ಎಂದು ಮತ್ತೊಮ್ಮೆ ಹೇಳಲೇ ಬೇಕಿಲ್ಲ.

ಈ ಪ್ರತಿಭೆ ಮುಂದೆ ಹಿಮಾಲಯದೆತ್ತರಕ್ಕೆ ಬೆಳೆದು, ಪ್ರಪಂಚದ ಮೂಲೆ ಮೂಲೆಯಲ್ಲಿ ಚಿರಪರಿಚಿತವಾಗಿ, ಅನೇಕ ಬಿರುದು ಬಾವಲಿಗಳನ್ನು ಧರಿಸಿತು. ಪ್ರಪಂಚದ ಸುಪ್ರಸಿದ್ಧರೊಂದಿಗೆ ತನ್ನ ವಾದ್ಯವನ್ನು ಬೆರೆಸಿ, ನುಡಿಸಿ, ಮ್ಯಾಂಡೋಲಿನ್ ಎಂದರೆ, ಶ್ರೀನಿವಾಸ್ ಎನ್ನುವ ಮಟ್ಟಿಗೆ ತನ್ನ ಕಲೆಯನ್ನು ಮೆರೆಸಿದ ಈ ವ್ಯಕ್ತಿ, ಇಂದು ಬೆಳಿಗ್ಗೆ ತನ್ನ ೪೫ನೆಯ ವಯಸ್ಸಿನಲ್ಲಿ, ಈ ಪ್ರಪಂಚದದಿಂದಲೇ ಮರೆಯಾಯಿತು ಎಂದರೆ, ನಂಬಲು ಸಾಧ್ಯವೇ? ಇಂದು ಬೆಳಿಗ್ಗೆ ಈ ಸುದ್ದಿಯನ್ನು ಕೇಳಿ ದಿಘ್ಬ್ರಾಂತರಾದ, ಸಂಗೀತ ಕಲಾಭಿಮಾನಿಗಳ ಅಶ್ರುತರ್ಪಣವನ್ನು ಓದಿ, ನನ್ನ ಮನಸ್ಸು ನಿಜಕ್ಕೂ ದಿಕ್ಕೆಟ್ಟಿದೆ ಎನ್ನಬಹುದು. ಈ ಕಲಾವಿದನ ಬೆರಳುಗಳಿಂದ, ಇನ್ನು ಆ ನಾದದ ಹೊನಲು ಹರಿಯುವುದಿಲ್ಲ ಎನ್ನುವ ಆಲೋಚನೆಯೇ ಅತ್ಯಂತ ದುಃಖಕರವಾದ ಸಂಗತಿ. ಇಂತಹ ಸಣ್ಣವಯಸ್ಸಿನಲ್ಲಿ ಸಾವಿಗೀಡಾಗುವ ಪರಿಸ್ಥಿತಿಯಾದರೂ ಏನಿತ್ತು? ಅವನಿಲ್ಲದಿದ್ದರೂ, ಆತನ ಸಂಗೀತದ ನಾದಸುಧೆಯನ್ನು ನಾವು ಸವಿಯಬಹುದಾದರೂ, ಆತನ ಸಂಗೀತ ಕಛೇರಿಗಳನ್ನು ಇನ್ನು ಸವಿಯುವ ಅವಕಾಶವಿಲ್ಲ.  ಪ್ರಸಿದ್ಧ ಪಿಟೀಲು ವಾದಕ ಯಹುದಿ ಮೆನುಹಿನ್ನಿಗೆ, ಸಮನಾದ ಭಾರತದ ಪ್ರತಿಭೆ ಎಂದು ಹೆಸರುಗಳಿಸಿದ ಶ್ರೀನಿವಾಸ್, ಅಕಾಲ ಮರಣಕ್ಕೀಡಾದನಲ್ಲಾ ! ಪ್ರಪಂಚಾದಾದ್ಯಂತ ತನ್ನ ಸಂಗೀತದಿಂದ, ಕಲಾಭಿಮಾನಿಗಳನ್ನು ತಣಿಸಿದ ಆತನ ಸ್ವರಸುಧೆ, ನಮ್ಮೆಲ್ಲರ  ಮನಗಳಲ್ಲೂ ಶಾಶ್ವತವಾಗಿ ನೆಲಸಿದೆ.

3 thoughts on “ಮಿಂಚಿ ಮಾಯವಾದ ಮ್ಯಾಂಡೋಲೀನ್ ಮಾಂತ್ರಿಕ ಯು. ಶ್ರೀನಿವಾಸ್ – ಉಮಾ ವೆಂಕಟೇಶ್

 1. Uma knows that I am great fan of Srinivas. He had come to MES college, Malleswaram, Bangalore, in 1987 where I was teaching for a year before going to Pune. Although I had heard him before on radio, that face-to-face kacheri was truly melodious and enthralling. Since then I have listened to a number of his CDs and live concerts. It is remarkable Srinivas achieved so much in his short life span; he has left behind a decent number of disciples who will carry his creation.

  Like

 2. ಎಷ್ಟೂ ಉತ್ಪ್ರೇಕ್ಷೆ ಇಲ್ಲ . ತಾನು ಅಂತರಂಗದಲ್ಲಿ ದುಃಖವನ್ನು ತುಂಬಿಕೊಂಡು ಜಗತ್ತಿಗೆ ಸಂಗೀತ ಸುಧೆ ಉಣಿಸಿದ ಮಾಂತ್ರಿಕ.

  ತೆರವಾಗಿ ಎನ್ನೆದೆಯು ಧರೆಯೆದೆಯು ಉಕ್ಕಿರಲಿ
  ಧರೆಯೋಳಗೆ ತೇಲಿಸುವೆ ಎನ್ನೆದೆಯನು
  ಧರೆ ಬತ್ತಿ ಎನ್ನೆದೆಯು ಉಕ್ಕಲೇನು (ಈಶ್ವರ ಸಣಕಲ್ಲ )

  ಎಂಬ ಕವಿವಾಣಿಯ ನಿಜರೂಪ.
  ಸಕಾಲಿಕ , ಸ್ವಾನುಭವರೂಪಿತ ಬರಹ.

  Like

 3. ಮ್ಯಾಂಡೋಲಿನ್ ಎಂದರೆ ಶ್ರಿನಿವಾಸನ್ನೇ ಎಂದೇ ನಾನೂ ತಿಳಿದವ. ಅವನ ಇಪ್ಪತ್ತೈದರ ಹರೆಯದಲ್ಲಿ ನ್ಯೂಕಾಸಲ್ಲಿನಲ್ಲಿ ಅವನ ಸಂಗೀತ ಕೇಳಿ ಬೆರಗಾಗಿದ್ದೆ, ತಲೆದೂಗಿದ್ದೆ. ಅವನ ಮೇಲೆ ಮಳೆಗರೆದ ಪ್ರಶಂಸೆಯಲ್ಲಿ ಎಳ್ಳಷ್ಟೂ ಅತಿರೇಕವಿಲ್ಲವೆಂದರಿತೆ. ಕಣ್ಮರೆಯಾದ ಮಹಾ ಕಲಾವಿದನಿಗೆ ನಿಮ್ಮ ಹೃದಯಾಳದಿಂದ ಬಂದ ಅಶ್ರುತರ್ಪಣೆಯಲ್ಲಿ ನನ್ನದೂ ಕೂಡಿಸುವೆ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.