ನೋಡು ಬಾ ನಮ್ಮೂರ ಸರಣಿ: ನಾನು ಕನ್ನಡಿಗ, ನನ್ನ ಊರು ಬೆಂಗಳೂರು – ರಾಜಾರಾಮ ಕಾವಳೆ.

House+SR
ನಾನು ಹುಟ್ಟಿದ ಮನೆ ಮತ್ತು ಅದನ್ನು ಭಾಡಿಗೆಗೆ ತಗೊಂಡ    ಡಾ S ರಾಧಾಕೃಷ್ಣನ್ Photo: CC Author

ನನ್ನ ಊರು ಬೆಂಗಳೂರು, ಹುಟ್ಟಿದ್ದು ಬೆಂಗಳೂರಿನ ಬಸವನಗುಡಿಯ ಮನೆಯಲ್ಲೇ. ಆ ಮನೆಯನ್ನು ನೀವು ಸ್ವತಃ ನೋಡಿಲ್ಲದಿದ್ದರೂ ಅದನ್ನು ದೂರದರ್ಶನದಲ್ಲಿ ನೀವು ನೋಡಿರಲೇಬೇಕು! ನೀವೇನಾದರೂ ಶಂಕರ್‌ನಾಗ್‌ ಅವರ ’ಮಾಲ್‍ಗುಡಿ ಡೇಸ್’ನ ’ಮಿಠಾಯಿ ವಾಲ’ ಎಂಬ ಧಾರಾವಾಹಿಯನ್ನು ನೋಡಿದ್ದರೆ ಅದರಲ್ಲಿ ಇದ್ದ ಮನೆಯೇ ನಾನು ಹುಟ್ಟಿದ ಮನೆ. ನಾನು ಬೆಳೆದು ದೊಡ್ಡವನಾಗಿ ವೈದ್ಯಕೀಯ ಕಾಲೇಜಿನಲ್ಲಿ ಓದಿ ವೈದ್ಯನಾಗಿದ್ದೂ ಅದೇ ಮನೆಯಿಂದಲೇ.

ನಮ್ಮ ತಾತನವರು ಆ ಮನೆಯನ್ನು ಕಟ್ಟಿದ್ದು 1918ರಲ್ಲಿ. ಆಗ ತಾನೆ ಮೈಸೂರು ವಿಶ್ವವಿದ್ಯಾನಿಲಯದ ಹೊಸದಾಗಿ ಆರಂಭಿತವಾದ ಮಹಾರಾಜಾ ಕಾಲೇಜಿನ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಆ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಸುಮಾರು ಆರು ತಿಂಗಳುಗಳಕಾಲ ಆ ಮನೆಯಲ್ಲಿ ಆ ವಾಸವಾಗಿದ್ದರು. 1962ರಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯವರಾದ ಮೇಲೆ ನಮ್ಮ ತಂದೆಯವರು ಅವರಿಗೆ ಒಂದು ಅಭಿನಂದನ ಪತ್ರವನ್ನು ಬರೆದಾಗ ರಾಷ್ಟ್ರಪತಿಯವರು ಉತ್ತರಿಸಿ ತಮ್ಮ ಪತ್ರದಲ್ಲಿ ಆ ಮನೆಯನ್ನು ನೆನಪಿಸಿಕೊಂಡರು. ಅಂದಿನಿಂದ ಆ ಮನೆಗೆ ನಮ್ಮ ತಂದೆಯವರು ’ರಾಧಾಕೃಷ್ಣ ವಿಲ್ಲಾ’ ಎಂದು ನಾಮಕರಣ ಮಾಡಿದ್ದರು.

ನಮ್ಮ ತಂದೆಯವರು ತುಮಕೂರಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ವಾಸಮಾಡಿದವರು. ಅವರ ತಂದೆ ಮತ್ತು ಅವರ ಮೂರು ತಲೆಮಾರಿನವರೂ ಬೆಂಗಳೂರಿನ ಹಳೇ ಪೇಟೆಯ ಸಿದ್ದೀಕಟ್ಟೆಯ ನಿವಾಸಿಗಳು. ನನ್ನ ಮಾತೃಭಾಷೆ ಕನ್ನಡ ಇಷ್ಟೆಲ್ಲಾ ಬೆಂಗಳೂರಿನ ವಂಶ ಚರಿತ್ರೆ ಇದ್ದೂ ಕನ್ನಡ ಮಾತಾಡುವ ಕನ್ನಡಿಗನಾಗಿದ್ದರೂ ನನ್ನ ಕುಲನಾಮ ಅಥವ ಅಡ್ಡಹೆಸರು ಏಕೆ ’ಕಾವಳೆ’ಯಾಗಿದೆ? ನಾನೇನು ಮರಾಠಿಯವನೆ? ಅಥವ ’ಕವಳ’ ಬೇಡುತ್ತಿದ್ದ ಭಿಕ್ಷುಕ ವಂಶದವನೇ?

Read More »