ನೋಡು ಬಾ ನಮ್ಮೂರ ಸರಣಿ – ನನ್ನ ಊರು ಊಟಿ – ಶ್ರೀವತ್ಸ ದೇಸಾಯಿ

ನನ್ನ ಊರಿನ ಬಗ್ಗೆ ಬರೆಯಬೇಕೆಂದೊಡನೆ ನನ್ನ ಮನದಲ್ಲಿ ದ್ವಂದ್ವ ಶುರುವಾಗುತ್ತದೆ. ದ್ವಂದ್ವ ಎರಡು ಬಗೆಯಾದರೆ, ’ಮೂರು ಬಗೆ’ಗೆ ಏನಾದರೂ ಶಬ್ದವಿದ್ದರೆ ಅದನ್ನು ಬಳಸಿಯೇನು. ಇದೇ ಜಗಲಿಯಲ್ಲಿ ಮಿತ್ರ ’ಉಪ್ಪಿನಕಾಯಿ’ ರಾಜಾರಾಮ್ ಕಾವಳೆಯವರು ಬರೆದಂತೆ ನನಗೆ ಮೂರು ಊರುಗಳಲ್ಲಿ ’ನಮ್ಮಮನೆ’ಯಿದೆ/ಇತ್ತು. ಏಕೆಂದರೆ ನಾನು ಹುಟ್ಟಿದ್ದೂರಿನಲ್ಲಿ(ಧಾರವಾಡ) ಹೆಚ್ಚು ದಿನ ಕಳೆಯಲಿಲ್ಲ, ಅಂದಮೇಲೆ ಅದು ನನ್ನೂರಾಗಲಿಲ್ಲ. ನನ್ನ ಜೀವನದ ಅತಿ ಹೆಚ್ಚಾದ ವರ್ಷಗಳನ್ನು ಪರದೇಶದಲ್ಲಿ ಕಳೆದುದು ಈಗಲೂ ವಾಸವಾಗಿರುವ ಡೋಂಕಾಸ್ಟರಿನಲ್ಲಿಯೇ. ಈಗ ಈ ಮನೆ ’ನಮ್ಮ ಮನೆ’. ಆದರೂ ಬಾಲ್ಯದ ಅತ್ಯಂತ ಸಂತೋಷದ ದಿನಗಳನ್ನು ಕಳೆದ ತಮಿಳು ನಾಡಿನ ಊಟಿಯನ್ನೇ ನಾನು ನನ್ನ ಊರು ಎಂದು ಎತ್ತಿಕೊಂಡು

wikiOotyviewpanaromaracecourse003pan ಅದರ ಬಗೆಗೆ ಹೇಳುವೆ.

Ooty Panoramic view : CC Wiki

ಚಂದದ ಸ್ವಚ್ಛಂದ ದಿನಗಳು

ನಾನು 1946 ರಲ್ಲಿ ಹುಟ್ಟಿದ್ದರಿಂದ ನಾನೂ ಒಂದು ರೀತಿಯಿಂದ Midnight Children ಗುಂಪಿಗೆ ಸೇರಿದವನೆನ್ನಬಹುದು. ಸ್ವಾತಂತ್ರ್ಯ ಸಿಕ್ಕ ದಿನದ ಮಧ್ಯರಾತ್ರಿ ಹದಿನೆಂಟು ತಿಂಗಳ ಕೂಸಾಗಿದ್ದರಿಂದ ನನಗೆ ನೆಹರೂವರ ಭಾಷಣ (“We made tryst with destiny”) ನೆನಪಿನಲ್ಲಿಲ್ಲ. ಆದರೆ ಎರಡನೆಯ ಮಹಾಯುದ್ಧದ ನೆರಳು ನಮ್ಮ ಜೀವನದ ಮೇಲೆ ಇತ್ತು; ಇನ್ನೂ ಇದೆ. 1942 ರಲ್ಲಿ ಜಪಾನೀಯರು ಮದರಾಸಿನ ಮೇಲೆ ಬಾಂಬ್ ಹಾಕುವವರಿದ್ದಾರೆಯೆಂಬ ಸುದ್ದಿ ಹರಡಿದ ಕೂಡಲೆ ಬ್ರಿಟಿಷ್ ಸರಕಾರ ತನ್ನ ಮುಖ್ಯ ಸರಕಾರಿ ಕಛೇರಿಗಳನ್ನು ಹಾನಿಗೀಡಾಗಗೊಡದೆ ಸ್ಥಳಾಂತರಗೊಳಿಸಲು ನಿರ್ಧರಿಸಿತು. ಆಗಿನ ಅರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರದ ಮುಖ್ಯಸ್ಠನಾಗಿದ್ದವ ಮೋರ್ಟಿಮರ್ ವ್ಹೀಲರ ಸಾಹೇಬ. ಅವನಷ್ಟೇ ಅವನ  ಮೀಸೆಯೂ ಪ್ರಸಿದ್ಧ. ಅದರ ಮುಖ್ಯ ಕಚೇರಿಗಳಲ್ಲೊಂದಾದ ಮದ್ರಾಸ್ ಶಾಖೆಯಲ್ಲಿ ನನ್ನ ತಂದೆಯ ಕೆಲಸ. ಅವರ ಕಚೇರಿಯನ್ನೂ ಮದರಾಸಿನಿಂದ ಕಿತ್ತು  ಊಟಿ ಅಥವಾ ಉದಕಮಂಡಲಕ್ಕೆ ಕೊಂಡೊಯ್ದರು. ಹೀಗಾಗಿ ಅವರೊಂದಿಗೆ ನಾವು (ಒಟ್ಟು ಐವರಲ್ಲಿ) ಮೂವರು ಕಿರಿಯ ಮಕ್ಕಳೂ ಊಟಿಯಲ್ಲಿ ಬೆಳೆಯುವ ಪ್ರಸಂಗ ಬಂದಿತು. ಅದೊಂದು ನನ್ನ ಸುದೈವ ಎಂದುಕೊಳ್ಳುತ್ತೇನೆ. ಏಕೆಂದರೆ ಆಗಿನ ಸದ್ದು ಗದ್ದಲವಿಲ್ಲದ ಚಿಕ್ಕ ಜನಸಂಖ್ಯೆಯ ಸುಂದರ ಮಲೆನಾಡಿನ ರಾಣಿ ಎಂದೆನಿಸಿಕೊಂಡ ಊಟಿ ಎಷ್ಟು ಚಂದವೋ, ಅದಕ್ಕೆ ಸರಿಸಾಟಿಯಾಗಿತ್ತು ಅಲ್ಲಿ ಕಳೆದ ನಮ್ಮ ಬಾಲ್ಯದ ದಿನಗಳು. ಬಿಳಿಯರಿಗೆ ಪ್ರಿಯವಾದ ತಂಪು ಹವೆಯ ಈ ಊರನ್ನು ”Snooty OOty” ಎಂದೂ ” A piece of Malvern in South India” ಎಂದೂ ವರ್ಣಿಸಿದ್ದುಂಟು.

ಆದಿವಾಸಿಗಳು

Toda mundg

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ರಾಜ-ಮಹಾರಾಜರು ತಮ್ಮ ಸ್ವಂತ ರಾಜ್ಯಗಳನ್ನು ಕಳೆದುಕೊಂಡ ಸಮಯದಲ್ಲಿ ನೀಲಗಿರಿ ಜಿಲ್ಹೆ ಆಗಿನ ಮೈಸೂರು ಸಂಸ್ಥಾನದ ಅವಿಭಾಜ್ಯ ಭಾಗವಾಗಿತ್ತು. ನಂತರ ತಮಿಳು ನಾಡಿಗೆ ಸೇರಿತು. ತಮಿಳಿನ ಪ್ರಭಾವ ಹೆಚ್ಚುವ ಮೊದಲು ಜಿಲ್ಹೆಯ ರಾಜಧಾನಿಯಾಗಿದ್ದ ಊಟಿಯಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ಜನಕ್ಕೆ ಕನ್ನಡ ಬರುತ್ತಿತ್ತು. ನೀಲಗಿರಿಯ ಆದಿವಾಸಿ ಜನಾಂಗದಲ್ಲೊಂದಾದ ಬಡಗರ ಭಾಷೆ ನಾವು ಮನೆಯಲ್ಲಿ ಆಡುತ್ತಿದ್ದ ಕನ್ನಡಕ್ಕೆ ಹೋಲುತ್ತಿದ್ದಂತೆ ನನ್ನ ನೆನಪು. ನೀಲಗಿರಿಯ ಇನ್ನೊಂದು ಆದಿವಾಸಿ ಜನಾಂಗವೆಂದರೆ ತೋಡರು ಅಥವಾ ತೊದವರು. ಗಂಡಸರು ತಮ್ಮ ಉದ್ದ ಗಡ್ಡ ಮೀಸೆಗಳಿಂದ ಬೇಗನೆ ಗುರುತಿಸಿಲ್ಪಡುತ್ತಿದ್ದರು. ಅವರ ಭಾಷೆ ಭಿನ್ನವಾಗಿತ್ತು. ಅವರು ಅಲ್ಲಲ್ಲಿ ಗುಂಪಾಗಿ ಮನೆಮಾಡಿ ಗುಡ್ಡದ ಮೇಲೆ ತಮ್ಮ ಜನಗಳೊಂದಿಗೆ ವಾಸಿಸುತ್ತಿದ್ದರು. ಅವುಗಳನ್ನು”ಮಂದು’ಗಳೆಂದು ಕರೆಯುವ ವಾಡಿಕೆ. ಹಿಂದೆ ತಮಿಳಿನಲ್ಲಿ ಊಟಿಗೆ ’ಉದಗಮಂದು’ ಎಂದು ಹೆಸರಿತ್ತು. ಅದು ’ಒತ್ತ ಕಲ್ ಮಂದು’ವಿನ (’ಒಂದು ಕಲ್ಲಿನ ಹಳ್ಳಿ”) ಅಪಭ್ರಂಶ ಎಂದು ಪ್ರತೀತಿ. ಪೀಪಾಯಿಯಾಕಾರದ ಮನೆಗಳಲ್ಲಿ ಅವಿಭಕ್ತ ಕುಟುಂಬಗಳು ವಾಸಿಸುತ್ತಿದ್ದರು. ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಯುಗ್ಮದಲ್ಲಿಯ ನೀಲಗಿರಿ ಮಲೆನಾಡು. ಸುತ್ತಲೂ ದಟ್ಟ ಮರಗಳ ಅರಣ್ಯ (’ಶೋಲೈ’ ಅಥವಾ ಶೋಲಾ). ಸ್ವೇಚ್ಛೆಯಾಗಿ ಓಡಾಡುತ್ತಿದ್ದ ಕಾಡುಪ್ರಾಣಿಗಳಿಂದ ರಕ್ಷಣೆಗೋಸ್ಕರ ಅವರ ಮನೆಗಳ ಬಾಗಿಲು ಮಾತ್ರ (ಮೂರಡಿ) ಅತಿ ಚಿಕ್ಕದು. ಬಗ್ಗಿಯೇ ಅಥವಾ ಹೊಟ್ಟೆ ಹೊಸೆದುಕೊಂಡು ಒಳನುಗ್ಗಬೇಕೇನೋ ಎನ್ನುವಂತಿತ್ತು. ಜನೆವರಿ ತಿಂಗಳಿನ ಬೆಳಗಿನ ಜಾವದ ಚಳಿಯಲ್ಲಿ ಅವರದೊಂದು ಉತ್ಸವ. ಆಗ ತೇರನ್ನು ಎಳೆದುಕೊಂದು ಗುಂಪಾಗಿ ಕುಣಿಯುತ್ತಾ ”ಓ ಹೌ ಹೌ” ಎಂದು ಧ್ವನಿಸುವ ’ಮಂತ್ರ’ ಘೋಷದೊಂದಿಗೆ ಫರ್ನ್ಹ್ ಹಿಲ್ ಮುಖಾಂತರ ಹೋಗುತ್ತಿದ್ದರೆ ನಸುಕಿನ ಕಡುಚಳಿಯಲ್ಲಿ ನಡುಗುತ್ತ ನಾವು ಹುಡುಗರು ಅದರ ಆಗಮನಕ್ಕೆ ಕಾಯ್ದುಕೊಂಡಿರುತ್ತಿದ್ದೆವು. ಅಲ್ಲಿ ತೇರು  ನಿಂತು ಹತ್ತು ನಿಮಿಷ ಪೂಜೆ, ಗಂಟೆ, ಆರತಿಯ ನಂತರ ಮುಂದೆ ಹೋಗುವದು. ಎಲ್ಲಿಗೆ ಎಂದು ನನಗೆ ನೆನಪಿಲ್ಲ. ಆ  ತೋಡರಿಗೆ ಉದ್ದನೆಯ ಗಡ್ಡ ಮತ್ತು ಮೀಸೆ; ಕೆಂಪು, ನೀಲಿ ಮತ್ತು ಕರಿ ಬಣ್ಣದ ಅಂಚಿನ ಬಿಳಿವಸ್ತ್ರದ ಪಂಚೆ ಮತ್ತು ಶಾಲು ಧರಿಸುವರು. ಆ ಕಡುಚಳಿಯಲ್ಲೂ ಬರಿಗಾಲು.  ಆ ದೃಶ್ಯ ಈಗಲೂ ನನ್ನ ಕಣ್ಣಮುಂದೆ ಕಟ್ಟಿದೆ.

ನಮ್ಮ  ಫರ್ನ್ಹ್ ಹಿಲ್ ಮನೆಯಿಂದ ಐದು ನಿಮಿಷದಷ್ಟು ದೂರದಲ್ಲಿ ತೇರು ಬಂದು ನಿಲ್ಲುವ ಸ್ಟಾಪ್ ವಿಶಾಲವಾದ ಚೌಕಾಂಗಣದಲ್ಲಿ. ಅಲ್ಲಿ ನಾಲ್ಕು ಮುಖ್ಯ ರಸ್ತೆಗಳು ಬಂದು ಕೂಡುತ್ತಿದ್ದವು. ಒಂದು ಕುಂದಾ ’ಮಂದೆ’ಗೆ ಹೋಗುವದು. ಅಲ್ಲಿಂದಲೇ ತೇರು ಬಂದಿರಬೇಕು. ಎರಡು ಬೇರೆ ಬೇರೆ ಮಹಾರಾಜರ ಪ್ಯಾಲಸುಗಳಿಗೆ ಹೋಗುವ ಹೆದ್ದಾರಿಗಳು ಅಲ್ಲಿಗೇ ಬಂದು ಕೂಡುತ್ತಿದ್ದವು. ಒಂದು ಕುಂದಾ ’ಮಂದೆ’ಗೆ ಹೋಗುವದು. ಅಲ್ಲಿಂದಲೇ ತೇರು ಬಂದಿರಬೇಕು. ಎರಡು ಬೇರೆ ಬೇರೆ ಮಾಹಾರಾಜರ ಪ್ಯಾಲಸುಗಳಿಗೆ ಹೋಗುವ ಹೆದ್ದಾರಿಗಳು ಅಲ್ಲಿಗೇ ಬಂದು ಕೂಡುತ್ತಿದ್ದವು. ಅವುಗಳಲ್ಲಿ ಒಂದು ಕೂಚ್ ಬಿಹಾರಿಂದೋ ಏನೋ. ಇನ್ನೊಂದು ಮೈಸೂರಿನ ಮಹಾರಾಜರ ಪ್ಯಾಲೆಸ್ಸಿನದು. ನನಗೆ ಆ ಪ್ಯಾಲೆಸ್ಸಿನ ವೈಭವದ ನೆನಪು ಮಸಕು ಮಸಕಾಗಿದೆ. ಭವ್ಯವಾದ ಕಟ್ಟಡ. ಸುಂದರವಾದ ಮಜಲುಗಳುಳ್ಳ ಹೂವಿನ ತೋಟ. ಗಂಭೀರವಾಗಿ ತಲೆಯೆತ್ತಿ ನಿಂತ ಕೆಂಪು-ಬಿಳಿ ಬಣ್ಣದ ಕಟ್ಟಡ, ಒಳಗೆ ಮಹಾರಾಜರ ವೈಭವವನ್ನು ಸಾರಿ ಹೇಳುವ ಭವ್ಯ ಬಾಲ್ ರೂಮು. ಇದು ಗತಕಾಲದ ಕಥೆ. ಏಕೆಂದರೆ ಈಗ ಅದು ಎಲ್ಲ ಹಿಂದಿನ ರಾಜಮಲುಗಳ ಗತಿಯಂತೆ ಲಗ್ಝರಿ  ಹೋಟೆಲ್ ಆಗಿದೆಯಂತೆ!

ಗಂಡಭೇರುಂಡ

Gandabherunda Ravindra's picWith permission from: https://www.flickr.com/photos/rednivaram/8119323911/

ನಮಗೆ ಬೇಸಗೆಯಲ್ಲಿ ಶಾಲೆಗೆ ರಜೆ ಇದ್ದಾಗ ಊಟಿಗೆ ”ಸೀಸನ್”, ಅಂದರೆ ಕೆಳಗಿನ ಉಷ್ಣ ಪ್ರದೇಶಗಳಿಂದ ಜನರು ತಿಂಗಳೆರಡು ತಿಂಗಳ ವಾಸಕ್ಕೆ ವಲಸೆ ಬರುವದು ವಾಡಿಕೆ. ಮೈಸೂರಿನ ಮಹಾರಾಜರೂ ತಪ್ಪದೆ ಬರುತ್ತಿದ್ದರು. ಅವರ ಕಾರಿಗೆ  ನಂಬರ್ ಪ್ಲೇಟ ಇರಲಿಲ್ಲ. ಅದರ ಬದಲು ಒಡೆಯರರ ಲಾಂಛನ, ಕಾಲ್ಪನಿಕ ಪಕ್ಷಿ – ಗಂಡಭೇರುಂಡ ಮಾತ್ರ ಇರುತ್ತಿತ್ತು. ಆಗಿನ್ನೂ ಕರ್ನಾಟಕದ ಏಕೀಕರಣ ಪೂರ್ತಿಯಾಗಿರಲಿಲ್ಲ. ಅದಾದ ಮೇಲೆ ಕರ್ನಾಟಕ ಸರಕಾರ ಒಂದೇ ದೇಹ ಎರಡುತಲೆಯ ಅದೇ ಪಕ್ಷಿಯನ್ನು ರಾಜ್ಯದ ಲಾಂಛನದಲ್ಲಿ ತೆಗೆದುಕೊಂಡರು. ಅದಕ್ಕೆ 500 ವರ್ಷಗಳ ಇತಿಹಾಸ ಉಂಟು. ವಿಜಯನಗರ ಅರಸರ ನಾಣ್ಯಗಳಲ್ಲಿ ಆ ಚಿಹ್ನೆಯ ದಾಖಲಾಗಿದೆಯಂತೆ. ಆದರೆ ಅದರ ಉಗಮ ಪುರಾಣಕಾಲದಲ್ಲಿ ಎಂದು ಹೇಳುತ್ತಾರೆ. ಪ್ರಹ್ಲಾದನ ರಕ್ಷಣೆಗೆ ಹಿರಣ್ಯಕಶಪುವನ್ನು ಸಂಹಾರಮಾಡಿದ ನರಸಿಂಹರ ಉಪಟಳವನ್ನು ಅಡಗಿಸಲು ಶಿವ ಅರ್ಧ ಪಕ್ಷಿ-ಅರ್ಧ ಸಿಂಹರೂಪದ ಶರಭನ ರೂಪದಲ್ಲಿ ಬಂದನೆಂದೂ,  ಅವನ ಶಕ್ತಿಯನ್ನು ಹತ್ತಿಕ್ಕಲು ವಿಷ್ಣು ಎರಡು ತಲೆಯ ಹಕ್ಕಿ ಗಂಡಭೇರುಂಡನಾಗಿ ಬಂದನೆಂದಲೂ ಕಥೆಗಳಿವೆ. ಇದರಲ್ಲಿ ಎರಡು ತರದ ಮತಗಳುಂಟು. ಆದರೆ ಈ ತರದ ಹಕ್ಕಿ ಮಾತ್ರ ಪುರಾತನ ಕಾಲದಿಂದ ಕಂಡುಬಂದಿದೆ. ಹಿಟ್ಟೈಟ್, ಮೆಸೋಪಟೋಮಿಯಾ, ತುರ್ಕಿ, ಬೈಝೈಂಟೈನ್ ಸಂಸ್ಕೃತಿಗಳಲ್ಲಿ, ಜರ್ಮನ್, ಆಸ್ಟ್ರಿಯಾ ದೇಶಗಳಲ್ಲಿ ಹೀಗೆ ಜಗತ್ತಿನಲ್ಲೆಲ್ಲ ಇದರ ಕುರುಹಿದೆ. ನಾವು ಹುಡುಗರು ಅಲ್ಲಿ ಆಟವಾಡುತ್ತಿದ್ದಾಗ ಮಹಾರಾಜರ ಕಾರನ್ನು ನೋಡಿದೊಡನೆ ಅದರತ್ತ ಓಡಿ ಹೋಗುತ್ತಿದ್ದೆವು. ಒಳಗೆ ಗಂಭೀರರಾಗಿ ಭದ್ರವಾಗಿ ಕುಳಿತ ಭೂಮಿಪಾಲರನ್ನು ನೋಡಲು. ಆ ಫಾರಿನ್ ಕಾರು ಭೂಮಿಯನ್ನು ಕಚ್ಚಿಕೊಂಡೇ ಚಲಿಸಿದಂತೆ ನಮ್ಮ ಭ್ರಮೆಯೋ ಅಥವಾ ಒಳಗೆ ಕುಳಿತ ಜಯಚಾಮರಾಜರ ತೂಕದಿಂದಲೋ ಎಂಬುದು ನಮ್ಮ ಮಕ್ಕಳ ಬುದ್ಧಿಗೆ ನಿಲುಕದ ಮಾತಾಗಿತ್ತು!

ಬಂದನಾ ಹುಲಿರಾಯ!  ಅಥವಾ ಅಲ್ಪಪಾಣಿ ಕಂಡ ಮಹಾಪ್ರಾಣಿ.

ನಾವು ಶಾಲೆಯಲ್ಲಿ ಕಲಿತದ್ದು ತಮಿಳು. ತಮಿಳಿನಲ್ಲಿ ಮಹಾಪ್ರಾಣವಿಲ್ಲ. ಕ, ಖ, ಗ, ಘ ಇವೆಲ್ಲಕ್ಕೂ ಒಂದೇ ಅಕ್ಷರ (’க’). ಹಾಗೆಯೇ ಉಳಿದ ವ್ಯಂಜನಗಳೂ. ಮನೆಯಲ್ಲಿ ಮಾತೃಭಾಷೆ ಕನ್ನಡದಲ್ಲಿ ಮಾತಾಡುವಾಗ ಒಮ್ಮೊಮ್ಮೆ ತಾಕಲಾಟವಾದಾಗ ಲೇಖಕರಾದ ನಮ್ಮ ತಂದೆ ನಮ್ಮನ್ನು ”ನೀವೆಲ್ಲ ಅಲ್ಪಪ್ರಾಣಿಗಳು” ಎಂದು ಛೇಡಿಸುವ ವಾಟಿಕೆ್!

ಹೆಬ್ಬುಲಿ!

ಆಗ ಊಟಿಯ ಸುತ್ತಲಿನ ದಟ್ಟವಾದ ಕಾಡಿನಲ್ಲಿ ಅನೇಕ ವನ್ಯ ಮೃಗಗಳ ವಾಸವಿತ್ತು. ರಾತ್ರಿ ಬಸ್ಸಿಗೆ ಅಡ್ಡ ಬಂದ  ಅಡ್ಡ ಬಂದ ಹುಲಿ, ಚಿರತೆ  ಕಾಡುಮೃಗಗಳ ಸಾಕಷ್ಟು ಕಥೆಗಳನ್ನು ನಾವು ಕೌತುಕದಿಂದಲೂ ಅಂಜಿಕೊಂಡೂ ಕೇಳುತ್ತಿದ್ದೆವು. ಬಸ್ಸಿನ ದೀಪದಲ್ಲಿ ಅವುಗಳ ಕಣ್ಣುಗಳು ಇಲೆಕ್ಟ್ರಿಕ್ ಬಲ್ಬಿನಂತೆ ಹೊಳೆಯುತ್ತಿದ್ದವಂತೆ. ನಮಗೆ ನಮ್ಮದೇ ಮನೆಯಲ್ಲಿ ರಾತ್ರಿ ಕಿಡಕಿಯ ಹೊರಗೆ ನೋಡಲೂ ಭಯವಾಗುತ್ತಿತ್ತು, ಅಕಸ್ಮಾತ್ತಾಗಿ ದಾರಿ ತಪ್ಪಿದ ಹುಲಿ ಅಂಗಳದಲ್ಲಿ ಬಂದು ಕೂತಂತೆ, ಅದನ್ನು ಕಂಡುಬಿಟ್ಟರೆ? ಎಂದು ಎಳೆಯ ಮಕ್ಕಳ ಕಲ್ಪನಾ ವಿಲಾಸ! ಸಾಮಾನ್ಯವಾಗಿ ಹುಲಿ ಕಾಡಿನಿಂದ ಊರೊಳಗೆ ಬರುವದಿಲ್ಲವಂತೆ. ಆದರೂ ಉರಗ ಪತಾಕನಂತೆ ’’ಊರೊಳಗಿರ್ದುಂ ಬೆಮರ್ದಂ’’ ಎಂಬಂತೆ ನಮ್ಮ ಪಾಡು! ಊಟಿಯ ಚಳಿಯಲ್ಲಿ ನಮಗೆ ಕೊಟ್ಟ ಕಂಬಳಿಯ ಹೊದಿಕೆಯನ್ನು ಪೂರ್ತಿ ಮುಸುಕು ಹಾಕಿ ಮಲಗಿದ್ದೇ ತಡ, ನಿದ್ರೆ! ಒಂದು ದಿನ ಶಾಲೆಯಲ್ಲಿ ಏನೋ ಅಲ್ಲೋಲ ಕಲ್ಲೋಲ. ಪಕ್ಕದಲ್ಲೇ ಇದ್ದ ಪ್ಯಾಲೆಸಿನವರು ಈಗ ತಾನೆ ಹುಲಿಯನ್ನು ಬೇಟೆಯಾಡಿ ತಂದಿದ್ದಾರಂತೆ. ದೊಡ್ಡ ಹುಲಿಯಂತೆ ಎಂದು ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ. ಹೋಗಿ ನೋಡಲು ಟೀಚರ ಪರವಾನಗಿ ಕೊಟ್ಟದ್ದೇ ಆಶ್ಚರ್ಯ. ನಾವೆಲ್ಲ ಅಲ್ಲಿಗೆ ಒಂದೇ ನೆಗತಕ್ಕೆ  ಮುಟ್ಟಿದ್ದೇ. ದೊಡ್ಡದಾದ  ಕರಿಯ ಬಣ್ಣದ ಗೇಟಿಗೆ ನಿಂತ ಜವಾನ ಒಳಗೆ ಬಿಟ್ಟದ್ದು ಈ ಮಕ್ಕಳ ಉತ್ಸಾಹ ನೋಡಿ. ಅಂದು ನಮ್ಮ ಪ್ರಥಮ ಹುಲಿಯ ದರ್ಶನ ಆಗುವದಿದೆ. ಹೇಗಿರ ಬಹುದು? ನಿಜವಾಗಿಯೂ ಸತ್ತಿದೆಯೋ? ಅರ್ಧಜೀವ ಇದ್ದರೆ ಏನು ಮಾಡುವದು? ಬಿಳಿ ಗೋಡೆಯ ಮನೆಯ ಹೊರಾಂಗಣದಲ್ಲಿ ಹುಲ್ಲಿನ ಮೇಲೆ ’ಮಲಗಿದೆ’ ಹತ್ತಡಿ ಉದ್ದದ ಹುಲಿ. ಅಚ್ಚ ಹಳದಿ-ಕಪ್ಪು ಪಟ್ಟೆಗಳು. ನಿಜವಾಗಿಯೂ ನಮ್ಮ ಕಣ್ಣೆದುರಿಗೇ ಇದೆ. ಶಾಂತ ಮುಖಚರ್ಯೆ. ಗುಂಡಿನ ಗಾಯ, ತೂತು ಎಲ್ಲೂ ಕಾಣುವದಿಲ್ಲ. ದಪ್ಪನ್ನ ಉದ್ದನ್ನ ಬಿಳಿ ಮೀಸೆ; ಒಂದಡಿ ಉದ್ದ ಇರಬಹುದೋ? ”ಮುಟ್ಟ ಬೇಡಿ” ಎಂದು ಗದರಿಸಿದ ಕೋವಿ ಹಿಡಿದ ಜವಾನ. ಎಚ್ಚರವಾಯಿತು. ”ದೂರ ಸರಿದು ನಿಲ್ಲಿರಿ!” ಯಾಕೆ, ಇನ್ನೂ ಸ್ವಲ್ಪ ಜೀವ ಇದೆಯೇ? ನಾನು ಕೇಳಿದ ಆ ಕಥೆಯಲ್ಲಿ ಸತ್ತಿದೆ ಎಂದು ಹತ್ತಿರ ಹೋಗಿ ಮೇಲೆ ಎಗರಿದ ಹುಲಿಯಿಂದ ಪ್ರಾಣ ಕಳೆದು ಕೊಂಡ ಮನುಷ್ಯನ ಅವಸ್ಥೆ ಓದ್ದಿದ್ದೆನಲ್ಲ! ಹೀಗೇ ಏನೇನೊ, ಚಿಕ್ಕ ತಲೆಯಲ್ಲಿ ವಿಚಾರ; ಎದೆಯಲ್ಲಿ ಡವ ಡವ. ಒಮ್ಮೆ ಮೆಲ್ಲಗೆ ಹತ್ತರ ಸುಳಿದು ಅದರ ಕಾಲನ್ನು ಮುಟ್ಟಿ ಬೇಗನೆ ಕೈಯನ್ನು ಹಿಂದಕ್ಕೆ ಎಳೆದುಕೊಂಡು ಸುತ್ತಿದ ಗುಂಪಿನ ಹಿಂದೆ ಬಂದು ನಿಂತುಕೊಂಡಾಗ ಅದೆಂಥ ಅನುಭವ! ನಾನೇ ಹುಲಿಯನ್ನು ಕೊಂದು ಸೆಡ್ಡು ಹೊಡೆದಂತೆ!

ಸ್ನೂಕರ್

ಊಟಿಯ ಮನ್ಸೂನಿನಲ್ಲಿ ತೋಯಿಸಿಕೊಂಡವ  ಮಹಾಪೂರದ ತುಂಬು ನದಿಯ ಧಬಧಭೆಯ ಅಡಿಯಲ್ಲಿ ನಿಂತು ಬಂದಂತೆ. ಅಂಥ ರಭಸ. ಅದನ್ನಾಗಲಿ, ಬೊಟಾನಿಕಲ್ ಗಾರ್ಡನ್ನಿನ ವರ್ಣನೆಯಾಗಲಿ ಅಲ್ಲಿಗೇ ಬಿಟ್ಟು ಈ ಆಟದ ಕಥೆ ಹೇಳಿ ಮುಗಿಸುವೆ

.Snooker CC -Wiki

ಸ್ನೂಕರ್ ಆಟ 13-14ನೆಯ ಶತಮಾನದಿಂದಲೂ ಆಡುತ್ತಿದ್ದ ಬಿಲ್ಲಿಯರ್ಡ್ಸ್ನಿಂದ ಜನ್ಯ ಎನ್ನುತ್ತಾರೆ. ಇದು ಹುಟ್ಟಿದ್ದು ಊಟಿಯಲ್ಲಿ ಅಲ್ಲವಾದರೂ ಅದರ ನಿಯಮಗಳ ಉಗಮ ಅಥವಾ ಅವುಗಳ  ಪ್ರಥಮ ಸಾರ್ವತ್ರಿಕ ಪ್ರಕಟನೆಯ ಶ್ರೇಯಸ್ಸು ಮಾತ್ರ ಊಟಿಯ ಜಿಮ್ಖಾನಾ ಕ್ಲಬ್ಬಿಗೇ ಸೇರಿದ್ದು.  ಅಫಘಾನ ಯುದ್ಧದಲ್ಲಿ ಗಾಯಗೊಂಡು ಆರೈಕೆಗೆಂದು ಜಬಲಪುರದಿಂದ  ಊಟಿಗೆ ಬರುವಾಗ ತನ್ನ ಜೊತೆಗೆ ಈ ಆಟವನ್ನು ತಂದವನು ಸರ್ ನೆವಿಲ್ ಚೇಂಬರ್ಲಿನ್. ’ಕದನ ಕುತೂಹಲಿ’ ಎರಡನೆಯ ಮಹಾಯುದ್ಧದ ಬ್ರಿಟನ್ನಿನ ಪ್ರಧಾನಿಗೂ ಇವನಿಗೂ ಸಂಬಂಧವಿಲ್ಲ ಎನ್ನಿ. ಜಬಲಪುರಕ್ಕೆ ಲಂಡನ್ನಿನ ಊಲಿಚಿನ ಮಿಲಿಟರಿ ಅಕಾಡಮಿಯಿಂದ ಬಂದ ಒಬ್ಬ ಸಿಪಾಯಿ ಮೊದಲ ವರ್ಷದ ಸೈನಿಕರಿಗೆ ’ಸ್ನೂಕರ್’ ಎಂದು ಕರೆಯುವದಾಗಿ ಹೇಳಿದ. ’ಪೂಲ್’ ಆಟದಲ್ಲಿ ತಪ್ಪು ಮಾಡಿದವರಿಗೆ ”ನೀನು ಸ್ನೂಕರನಾದಿ” ಎಂದು ಹೀಯಾಳಿಸುವ ಪರಿಪಾಠ ಶುರುವಾಗಿ ಆ ಆಟಕ್ಕೆ ಆ ಹೆಸರು ಬಂತಂತೆ. 1885ರಲ್ಲಿ ಊಟಿಗೆ ಭೆಟ್ಟಿಕೊಟ್ಟ ಜಾನ್ ರಾಬರ್ಟ್ಸ್ ಎಂಬ ಬಿಲ್ಲಿಯರ್ಡ್ಸ್ ಪಟು,  ಚೇಂಬರ್ಲಿನ್ ಜೊತೆಗಿದ್ದ  ಕೂಚ್ ಬಿಹಾರಿನ ಮಹಾರಾಜ ಅವರನ್ನು ಕೇಳಿ ಈ ಆಟದ ನಿಯಮಗಳನ್ನು ಇಂಗ್ಲಂಡಿಗೆ ತಂದ. ಮುಂದೆ ಅದರ ಜನಪ್ರಿಯತೆ ಬೆಳೆದಂತೆ ಅದರ ಉಗಮದ ಊಟಿಯ, ನನ್ನ ಊರಿನ, ಖ್ಯಾತಿಯೂ ಬೆಳೆಯಿತೆನ್ನ ಬಹುದು.

ಶ್ರೀವತ್ಸ ದೇಸಾಯಿ.

 

5 thoughts on “ನೋಡು ಬಾ ನಮ್ಮೂರ ಸರಣಿ – ನನ್ನ ಊರು ಊಟಿ – ಶ್ರೀವತ್ಸ ದೇಸಾಯಿ

 1. ಈ ಲೇಖನ ಸರಣಿಗೆ ತುಂಬ ಉತ್ತಮ ಆರಂಭ ನೀಡಿದ್ದೀರಿ.
  ಊಟಿಯ ಸೊಬಗು, ನಿಮ್ಮ ಬಾಲ್ಯದ ನೆನಪುಗಳು ಮತ್ತು ಊಟಿಯ ವಿಷಿಷ್ಟತೆಗಳು ಇವೆಲ್ಲ ತುಂಬಾ ಸುಂದರವಾಗಿವೆ.
  ನಿಮ್ಮ ಲೇಖನದಿಂದ ಊಟಿಯ ಬಗ್ಗೆ ಬಹಳ ವಿಷಯಗಳು ತಿಳಿದವು..

  Like

 2. ದೇಸಾಯಿ ಅವರೆ, ಮೈಸೂರಿನಲ್ಲಿ ಹುಟ್ಟಿ ಬೆಳೆದರೂ ಊಟಿಯನ್ನೂ ಇನ್ನೂ ನೋಡಿಲ್ಲ. ಆದರೆ ನಿಮ್ಮ ಲೇಖನವನ್ನು ಓದಿದ ನಂತರ, ನಿಮ್ಮ ಬಾಲ್ಯದ ಸವಿ ನೆನಪುಗಳನ್ನು ಹೊತ್ತ ಆ ಊರನ್ನು ಈಗಾಗಲೇ ನೋಡಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ಮೂಡಿತು. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ “ಕುಂತಿ ಪುಷ್ಪ“ ಅಲ್ಲಿನ ಬೆಟ್ಟವನ್ನು ಸಂಪೂರ್ಣವಾಗಿ ನೀಲಿ ವರ್ಣಕ್ಕೆ ತಿರುಗಿಸುತ್ತದೆ. ಆದ್ದರಿಂದಲೇ ಅದಕ್ಕೆ ನೀಲಗಿರಿ ಎಂಬ ಹೆಸರಿದೆಯಂತೆ. ನೀವು ಬರೆದಿರುವ ನಿಮ್ಮೂರಿನ ಇತಿಹಾಸ, ಸೌಂಧರ್ಯ, ಮತ್ತು ನಿಮ್ಮ ಮನೆಯ ವಿಷಯಗಲನ್ನು ಬಹಲ ಸ್ವಾರಸ್ಯವಾಗಿ ತಿಳಿಸಿದ್ದೀರಿ. ಹುಲಿಯನ್ನು ಮುಟ್ಟಿ ನೋಡಿದ ನಿಮ್ಮ ಅನುಭವ ನಿಜಕ್ಕೂ ಜುಮ್ಮೆನಿಸುವಂತಿದೆ.
  ಉಮಾ ವೆಂಕಟೇಶ್

  Like

 3. ಇಬ್ಬರಿಗೂ ಧನ್ಯವಾದಗಳು. ಕಾಣದವರಿಗೆ ತೋರಿಸಿ ಪರಿಚಯಿಸುವ, ದೃಷ್ಟಿ-ಮನಸ್ಸನ್ನು ವಿಕಾಸಗೊಳಿಸಿದರೆ ಜಾಲದ, ಮತ್ತು ಈ ಸರಣಿಯ ಉದ್ದೇಶ ಪೂರ್ತಿಯಾಗುತ್ತದೆಯಲ್ಲವೆ? ನಿಮ್ಮೂರಿನ ವರ್ಣನೆಗೆ ಈ ಸರಣಿಯ ಹೆಬ್ಬಾಗಿಲು ತೆರೆದೇ ಇದೆ! ಸದ್ಯದಲ್ಲೇ ಎದುರು ನೋಡೋಣವೆ?

  Like

 4. ಎಂದೂ ಊಟಿ ನೋಡದವನಿಗೆ ಊರು, ಅದರ ಸೊಬಗು, ಇತಿಹಾಸವನ್ನೆಲ್ಲ ನವಿರು ಹಾಸ್ಯದ ಒಗ್ಗರಣೆ ಹಾಕಿ ಉಣಬಡಿಸಿದ್ದೀರಿ.
  ನನ್ನ ಮೆಚ್ಚಿನ ವಾಕ್ಯ: ನೆಲ ತಾಕಿ ಚಲಿಸಿದ ಮಹರಾಜರ ಕಾರಿನ ಬನ್ನಣೆ.
  ಙ್ನ

  Like

 5. ದೇಸಾಯಿಯವರ ಉದಕಮಂಡಲದ ಪರಿಚಯ ಚೆನ್ನಾಗಿ ಮೂಡಿಬಂದಿದೆ. ಬಾಲ್ಯದ ಕೌತುಕಗಳು, ಹುಲಿಯನ್ನು ಮುಟ್ಟುವಾಗ ಚಿಕ್ಕ ಹುಡುಗನ ಮನಸ್ಸಿನಲ್ಲಿ ಆಗುವ ಹೊಯ್ದಾಟಗಳನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ. ಅದರ ಕಾಲು ಮುಟ್ಟುವ ವಿವರಣೆ ಕಣ್ಣುಮುಂದೆ ಬಂದು ನಗು ಮೂಡಿಸದೆ ಇರಲಿಲ್ಲ.
  ಇನ್ನು ಅಲ್ಲಿನ ಜನಜೀವನದ ವೈಶಿಷ್ಟ್ಯತೆ, ಮನೆಗಳ ವಿಚಿತ್ರ ವಿನ್ಯಾಸ ಇವೆಲ್ಲವೂ ಹೊಸ ವಿಚಾರಗಳೆ ನನ್ನ ಪಾಲಿಗೆ. ಸಾಹಿತ್ಯದ ಉದ್ದೇಶ ಹೊಸ ವಿಚಾರಗಲನ್ನು ತಿಳಿಸಿ ಮನಸ್ಸನ್ನು ಹಿಗ್ಗಿಸುವುದೇ ಅಲ್ಲವೆ!
  ಸಂತೋಷವಾಯ್ತು.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.