ಸುದರ್ಶನ ಗುರುರಾಜರಾವ್ ಅವರಿಂದ ‘ಗುರುವಂದನೆ’

ಇಂದು ಗುರು ಪೌರ್ಣಮಿಯ ದಿನದ ಕಾಣಿಕೆ.

ಗುರುವಂದನೆ

ನಮ್ಮ ವೈದ್ಯಕೀಯ ಶಿಕ್ಷಣಾರಂಭದ ೨೫ ನೇ ವರ್ಷ ತುಂಬಿದ, ಬೆಳ್ಳಿ ಹಬ್ಬದಾಚರಣೆಯ ಸಂದರ್ಭದಲ್ಲಿ ಗುರುವಂದನೆ ಹಮ್ಮಿಕೊಂಡಿದ್ದೆವು. ಆ ದಿನ ನಾನು ಮಾಡಿದ ಸ್ವಾಗತ ಭಾಷಣದ ಲೇಖನ ರೂಪ

ಪೂರ್ವ ಪೀಠಿಕೆ

(ಸೆಪ್ತೆಂಬರ್ ೫ನೇ ತಾರೀಖು ಶಿಕ್ಷಕರ ದಿನ ನಮ್ಮ ಹೆಮ್ಮೆಯ  ಡಾ. ರಾಧಾಕೃಷ್ಣನ್ ಅವರ ಜನ್ಮದಿನದ ಸಂದರ್ಭದಲ್ಲಿ ಆಚರಿಸಲ್ಪಡುವ ದಿನ .  ಇದಕ್ಕೆ ಸ್ವಲ್ಪ ಮೊದಲಲ್ಲಿ  ಗುರುಪೂರ್ಣಿಮೆಯೂ ನಮ್ಮ ಪರಂಪರೆಯಲ್ಲಿ ಆಚರಿಸಲ್ಪಡುತ್ತದೆ. ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಒಂದು ವಿಶಿಷ್ಟ ಅಂಗ. ಚೀನಾ ನಾಗರೀಕತೆಯಲ್ಲಿ ಹೊರತು ಬೇರೆಲ್ಲ  (ಪ್ರಮುಖವಾಗಿ ಯೂರೋಪದಲ್ಲಿ) ನಾಗರೀಕತೆಗಳಲ್ಲಿ ಶಿಕ್ಷಣ ಎನ್ನುವುದು ಒಂದು ವಹಿವಾಟಿನಂತೆ ಆಚರಿಸಲ್ಪಡುತ್ತಿದ್ದ ಕಾಲದಲ್ಲಿ ಹಾಗೂ ಅದಕ್ಕೆ ಬಹಳ ಹಿಂದೆ ಭಾರತದಲ್ಲಿ ವಿದ್ಯೆಯನ್ನು ವಿದ್ಯೆ ಕಲಿಸುವುದಕ್ಕಾಗಿಯೇ, ಯಾವ ಪ್ರತಿಫಲದ ಅಪೇಕ್ಷೆ ಇಲ್ಲದೆ ಕಲಿಯುವುದಕ್ಕೆ ಹಾಗೂ ಕಲಿಸುವುದಕ್ಕೆ ತಕ್ಕ ವಿದ್ಯಾರ್ಥಿ ಸಿಕ್ಕಲ್ಲಿ ಹೇಳಿಕೊಡುವ ಪರಿಪಾಠ ಇತ್ತು; ಕಡಿಮೆಯಾದರೂ ಈಗಲೂ ಇದೆ. ಗುರು ಶಿಷ್ಯ ಸಂಬಂಧಿತ ಕಥೆಗಳು ನಮ್ಮ ಪುರಾಣದಲ್ಲಿ ಸಾಕಷ್ಟಿವೆ.)

ಸಾಮಾನ್ಯವಾಗಿ ಗುರುವಂದನೆಯ ಪ್ರಾರ್ಥನೆ ಹಯಗ್ರೀವಾದಿ ಸ್ತೋತ್ರದಿಂದ ಶುರುವಾಗುತ್ತದೆ.

ಜ್ಞ್ನಾನಾನಂದಮಯಂ ದೇವಂ ನಿರ್ಮಲ ಸ್ಫಟಿಕಾಕೃತಿಂ

ಆಧಾರಂ ಸರ್ವ ವಿದ್ಯಾನಾಂ ಹಯಗ್ರೀವ ಮುಪಾಸ್ಮಹೆ

ಎಂದು ಶುರುವಾಗುವ ಈ ಸ್ತೋತ್ರ, ಹೊಳೆಯುವ ಬೆಳಕಿನ ರೂಪದಲ್ಲಿರುವ ದೇವರನ್ನು ಯಾವ ವಿಘ್ಹ್ನವೂ ಇಲ್ಲದೆ ನೆರವೇರಿಸಬೇಕೆಂದು ಕೋರುತ್ತದೆ. ಅದೇವನು ವಿಶ್ವಕ್ಸೇನನ ರೂಪದಲ್ಲಿ ಬರಲೆಂದು ಪ್ರಾರ್ಥಿಸುತ್ತದೆ.

ಎರಡನೇ ಚರಣ ಎಲ್ಲರಿಗೂ ಪರಿಚಿತವಾದ,

ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ ಎಂಬುದು.

ಮೂರನೇ ಚರಣದಲ್ಲಿ ಪ್ರಮುಖ, ಆದರ್ಶಪ್ರಾಯರಾಗಿರುವ ಭಾಗವತ- ಪುರಾಣ ಪಾತ್ರಗಳನ್ನು ನೆನೆಯುತ್ತದೆ

ಪ್ರಹ್ಲಾದ ನಾರದ ಪರಾಶರ ಪುಂಡರೀಕ

ವ್ಯಾಸಾಂಬರೀಶ ಶುಕ ಶೌನಕ ಭೀಷ್ಮದಾಲ್ಭ್ಯಾಂ

ರುಕ್ಮಾಂಗದಾರ್ಜುನ ವಸಿಷ್ಠ ವಿಭೀಷಣಾದೀಂ

ಪುಣ್ಯಾಮಾಂ ಪರಮಭಾಗವತಾಮ್ ಸ್ಮರಾಮಿಎಂಬುದು ಮೂರನೇ ಚರಣ.

ಈ ಶ್ಲೋಕ ಪಠಣೆಯ ಹಿಂದೆ ಇರುವ ಕಲಿಕೆಯ ವೈಜ್ಞಾನಿಕ ಕ್ರಮ – ಆಧುನಿಕ ವಿಶ್ಲೇಷಣೆಗೆ ಅನುಸಾರವಾಗಿ- ಗಮನಿಸಬೇಕು.

ಮೊದಲನೆಯದು ಮನುಷ್ಯನನ್ನು ಮೀರಿದ ಶಕ್ತಿಯನ್ನು ಪೂಜಿಸುತ್ತಾ, ತನಗೆ ಕಲಿಯುವ ಬುದ್ಧಿಯನ್ನೂ, ಅದಕ್ಕೆ ಅನುಕೂಲವನ್ನೂ, ತಕ್ಕ ಪರಿಶ್ರಮ ಹಾಕುವ ಮನೋಭಾವನೆಯನ್ನೂ ಕೊಡು ಎಂದು ಕೇಳುತ್ತಾ ಕಲಿಯುವ ಸಂಕಲ್ಪಕ್ಕೆ ಪ್ರೇರೇಪಿಸುತ್ತದೆ. ಆಧುನಿಕ ವಾಗಿ ಇದು cognitive learning theory (ಕಾಗ್ನಿಟಿವ್ ಲರ್ನಿಂಗ್ ಥಿಯರಿ)ಯ ಸನಾತನ ರೂಪ.

ಎರಡನೆಯ ಚರಣ, ಮಾನವ ರೂಪದಲ್ಲಿರುವ ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿ ಕಲಿಸಲು ಪ್ರಾಥಿಸುತ್ತದೆ. ಗುರು ತನ್ನ ಸ್ಫೂರ್ತಿ ನೀಡಿ ಪ್ರಚೋದಿಸಿ ವಿದ್ಯಾರ್ಥಿಯಲ್ಲಿ ಕಲಿಯುವ ಪ್ರತಿಕ್ರಿಯೆಯನ್ನು ಮೂಡಿಸುವ ಕಲಿಕಾ ಪ್ರಕ್ರಿಯೆಯನ್ನು ಪ್ರತಿನಿಧಿಸುತ್ತದೆ.  ಇದು ಅಧುನಿಕ ಪರಿಭಾಷೆಯಲ್ಲಿ behavioral learning theory (ಬಿಹೇವಿಯೊರಲ್ ಲರ್ನಿಂಗ್ ಥಿಯರಿ) ಯ ಸನಾತನ ರೂಪ

ಮೂರನೆಯ ಚರಣ, ಸಮಾಜದಲ್ಲಿನ ಉನ್ನತ ವ್ಯಕ್ತಿತ್ವಗಳನ್ನು ನೋಡಿ ಕಲಿಯಲು ಪ್ರೇರೇಪಿಸಿ ಅಂಥ ಆದರ್ಶಗಳನ್ನು ನೆನೆಪಿನ್ನಲ್ಲಿಡಲು ಒಂದು ಶ್ಲೋಕರೂಪವಾಗಿ ಹೆಣೆಯಲ್ಪಟ್ಟಿದೆ. ಇದು  social theory of learning (ಸೋಷಿಯಲ್ ಥಿಯರಿ ಒಫ಼್ ಲರ್ನಿಂಗ್) ಎಂದೆನ್ನಬಹುದು.

ಹೀಗೆ ಕಲಿಸುವ -ಕಲಿಯುವ ಪ್ರಕ್ರಿಯಲ್ಲಿ ಬರುವ ಎರೆಡು ಪಾತ್ರಗಳು ಗುರು ಹಾಗೂ ಶಿಷ್ಯ. ಈ ಗುರು ಶಿಷ್ಯ ಪರಂಪರೆಯ ಹಲವಾರು ಅತ್ಯುನ್ನತ ನಿದರ್ಶನಗಳು ನಮಗೆ ಸಿಗುತ್ತವೆ

ಯಮ-ನಚಿಕೇತ

ದ್ರೋಣ- ಅರ್ಜುನ

ವಿಶ್ವಾಮಿತ್ರ- ರಾಮ

ವಲ್ಲಭಾಚರ್ಯ- ಸೂರದಾಸ

ಗೋವಿಂದ ಗುರು-ಶಿಶುನಾಳ ಶರೀಫ, ಹೀಗೆ ಇನ್ನೂ ಪಟ್ಟಿಮಾಡಬಹುದು

ಈ ಗುರು-ಶಿಷ್ಯ ಪರಮ್ಪರೆಗೆ, ಆ ಪರಿಕಲ್ಪನೆಗೆ ನಮ್ಮ ಹಿರಿಯರು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಏಕೆ ಅಂತಹ ಉನ್ನತ ಸ್ಥಾನ ನೀಡಿ ಗೌರವಿಸಿದ್ದಾರೆ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದೇ ಇರುತ್ತದೆ

ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ

ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನ ಗಣಿಯೋ ”

ಎಂದು ಮಾರ್ಮಿಕವಾಗಿ ಹೇಳಿದ್ದಾರೆ ಪೂಜ್ಯರಾದ ಜಿ.ಎಸ್.ಶಿವರುದ್ರಪ್ಪನವರು. ಹೀಗೆ ನಮ್ಮ ಬಾಳು ಒಂದು ಋಣದ ರತ್ನದ ಗಣಿ. ಹುಟ್ಟಿದಾರಭ್ಯ ನಾವು ಜನ್ಮ ಋಣ, ಅನ್ನದ ಋಣ, ಮಣ್ಣಿನ ಋಣ, ಭಾಷೆಯ ಋಣ, ಸಮಾಜದ ಋಣ ಹೀಗೆ ಋಣ ಸಂಚಯ ಮಾಡುತ್ತಲೇ ಬೆಳೆಯುತ್ತೇವೆ ಮೊದಲಿನ ೩೦-೪೦ ವರ್ಷಗಳು. ಈ ಅವಧಿಯಲ್ಲಿ ನಮ್ಮ ಜೀವನದ ಹಾದಿಗಳನ್ನು ಅರಿತು ದುಡಿದು ಆ ಋಣಗಳನ್ನು ತೀರಿಸುವ ಸಾಮರ್ಥ್ಯ ಪಡೆದಿರುತ್ತೇವೆ. ನಾವು ಈ ಸಾಮರ್ಥ್ಯವನ್ನು ಪಡೆಯುವಲ್ಲಿ ಮಹತ್ತರ ಪಾತ್ರ ವಹಿಸುವ, ಮೇಲೆ ಹೇಳಿದ ಎಲ್ಲ ಋಣಗಳ  ಜೊತೆಯಿರುವ ಬಹು ಮುಖ್ಯವಾದ ಋಣ ವಿದ್ಯಾ ಋಣ ಅದೇ ಗುರುವಿನ ಋಣ. ಗುರುವಂದನೆ ಈ ಋನ ಸಂಚಯವನ್ನು ಸಂದಾಯ ಮಾಡುವ ನಿಟ್ಟಿನಲ್ಲಿ ಒಂದು ಪುಟ್ಟ ಪ್ರಯತ್ನವೆನ್ನಬಹುದು.

*****************

 

ಹಾಗಾದರೆ “ಗುರು” ಎಂಬ ಪದದ ಅರ್ಥವೇನು?

ಗು- ಎಂದರೆ ಅಂಧಕಾರ/ಕತ್ತಲು; ರು- ಎಂದರೆ ಕಳೆಯುವವನು. ಅಜ್ಞ್ನಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ನೀಡಬಲ್ಲ ಪೂಜ್ಯನೀಯ ವ್ಯಕ್ತಿಯೇ ಗುರು. ಹಾಗಾಗಿಯೇ ತಮಸೋಮಾ ಜ್ಯೋತಿರ್ಗಮಯ ಎಂಬ ಉಕ್ತಿಯೂ ಇದೆ. ಅದು ಹೇಗೆ ಎನ್ನುವುದನ್ನು ನೋಡೋಣ.

“ಅನ್ನದಾನಂ ಪರಂ ದಾನಂ ವಿದ್ಯಾದಾನಮತ್ಃ ಪರಂ

ಅನ್ನೇನ ಕ್ಷಣಿಕಾತೃಪ್ತಿಃ ಯಾವಜ್ಜೀವಂಚ ವಿದ್ಯಯಾತ್”

ಎಂಬ ಶ್ಲೋಕ ಹೇಳುವಂತೆ ಜೀವನ ಪೂರ್ತಿ ನಮ್ಮನ್ನು ಪೊರೆಯಬಲ್ಲ ವಿದ್ಯೆ ಅನ್ನದಾನಕ್ಕಿಂತಲೂ ಉನ್ನತವಾದದ್ದು. ಇಂತಹ ವಿದ್ಯೆಯನ್ನು ನಮಗೆ ದಯಪಾಲಿಸಿದ ಗುರುಗಳ ಋಣ ದೊಡ್ಡದಲ್ಲದೆ ಇನ್ನೇನು?

ಹೀಗೆ ಕಲಿತ ವಿದ್ಯೆಯಿಂದಲೇ ನಾವು ಸಮಾಜದಲ್ಲಿ ಆದರಣೀಯರಾಗಿ ಇಂದು ಜೀವನ ನಡೆಸಲು ಸಾಧ್ಯವಾಗುತ್ತಿದೆ. ಗುರುಗಳು ಕಲಿಸಿದ ವಿದ್ಯೆಯಿಂದ ನಾವು ನಮ್ಮ ದೇಶದಲ್ಲಿಅ ಮಾತ್ರವಲ್ಲದೆ, ಬ್ರಿಟನ್, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ , ಪ್ರಪಂಚದ ಎಲ್ಲೆಡೆ ಹರಡಿ ಅಲ್ಲಿಯು ನಮ್ಮ ನಮ್ಮ ಚಾಪು ಮೂಡಿಸಿದ್ದೇವೆ,. ನಾವಿರುವಲ್ಲಿ, ಭಿನ್ನ ಸಂಸ್ಕೃತಿಯ ಸಮಾಜದಲ್ಲೂ ನಾವು ಗೌರವಾದರಗಳಿಗೆ ಪಾತ್ರರಾಗಿದ್ದೇವೆ. ಇದು ನಾವು ಗಳಿಸಿದ ಸಂಪತ್ತಿನ ಪರಿಣಾಮವಲ್ಲ; ಬದಲಿಗೆ ನಮ್ಮ ವಿದ್ಯೆಯ ಪರಿಣಾಮ. ಅದಕ್ಕೆಂದೇ

ವಿದ್ವತ್ವಂಚ ನೃಪತ್ವಂಚ ನೈವತುಲ್ಯಂ ಕದಾಚನ

ಸ್ವದೇಶೇ ಪೂಜ್ಯತೇ ರಾಜಾನ್ ವಿದ್ವಾನ್ ಸರ್ವತ್ರ ಪೂಜ್ಯತೇ”.

ಎಂದಿದೆ ಇನ್ನೊಂದು ಶ್ಲೋಕ. ರಾಜನಾದವನು /ಅಧಿಕಾರಿಯಾದವನು ತನ್ನ ಜಾಗದಲ್ಲಿ ಮಾತ್ರವೇ ಗೌರವ ಪಡೆಯುತ್ತಾನೆ ಆದರೆ ವಿದ್ಯಾವಂತ ಅದನ್ನು ಜಗದೆಲ್ಲೆಡೆ ಪಡೆಯುತ್ತಾನೆ. ಹಾಗಾಗಿ ಅವರಿಬ್ಬರನ್ನೂ ಹೊಲಿಸಬೇಡ ಎಂದಿದರ ಅರ್ಥ,. ಹೊರದೇಶಗಳಲ್ಲಿ ನೆಲೆಸಿರುವ ನಮಗೆ ಇದರ ಮಹತ್ವ ಅರಿವಾಗದೇ ಇಲ್ಲ.

ಗುರುಗಳು ಪಾಥ ಮಾಡುವಾಗ ನಮಗೆ ಕೇವಲ ವಿದ್ಯೆಯನ್ನಷ್ಟೇ ಕಲಿಸುವುದಿಲ್ಲ. ಆದರ್ಶಪ್ರಾಯರಾಗಿ ನಮಗೊಂದು ಧ್ಯೇಯ, ಶಿಸ್ತು, ಬದ್ಧತೆ, ಪಾಠ ಮಾಡುವ ಕೌಶಲ್ಯ, ಬೋಧನಾ ವಿಧಾನ ಇವೆಲ್ಲವುಗಳನ್ನೂ ಕಲಿಸುತ್ತಾರೆ. ಇದರಿಂದ ನಾವು ಪ್ರೇರಿತರಾಗಿ ಮುಂದಿನ ಪೀಳಿಗೆಗೆ ಗುರುಗಳಾಗಿ ಆ ಪರಂಪರೆಯನ್ನು ಮುಂದುವರಿಸುತ್ತೇವೆ. ಮಾನ್ಯರಾದ ಜಿ.ಟಿ.ನಾರಾಯಣರಾವ್ ಅವರು ಈ ಗುರು-ಶಿಷ್ಯ ಪರಂಪರೆಯ ನಿರತಚಕ್ರವನ್ನು ಹೀಗೆ ವರ್ಣಿಸುತ್ತಾರೆ

ಹೊಸ ಬೆಳಕನರಸುವವ ಋಷಿ

ಋಷಿಕಂಡ ಬೆಳಕನ್ನು ಬೀರುವವನಾಚಾರ್ಯ

ಆಚಾರ್ಯ ತೋರಿಸಿದ ಪಥದಿ ನಡೆದವ ಶಿಷ್ಯ

ಶಿಷ್ಯ ಗುರುವಾಗುವುದೆ ಋಜುವಿದ್ಯೆ ಅತ್ರಿಸೂನು”

ಹೀಗೆ ಶಿಷ್ಯನಾದವನು ಗುರುವಿನ ಪದಕ್ಕೆ ಏರಿದಾಗ ಅದು ನಿಜವಾದ ವಿದ್ಯೆ ಎನ್ನುತ್ತಾರೆ ಅವರ ಅತ್ರಿಸೂನು ಕಗ್ಗ ದಲ್ಲಿ. ನಮ್ಮಲ್ಲಿ ಬಹುತೇಕ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಕಲಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ಇಂತಹ ಭಾಗ್ಯವನ್ನು ನಮ್ಮ ಪಾಲಿಗೆ ಕೊಟ್ಟಿದ್ದರಿಂದಲೇ ನಮ್ಮ ಗುರುಗಳು ವಂದನೀಯರಾಗಿದ್ದಾರೆ.

ಕಡೆಯದಾಗಿ, ನಾವು ಗುರುಗಳಿಂದ ಪಡೆದ ವಿದ್ಯೆ ನಮ್ಮ ಸಂಗಾತಿ. ನಾವು ದುಡಿದು ಕೂಡಿಸಿಟ್ಟ ಹಣ, ಒಡವೆ, ಭೂಮಿ, ಕಾಣಿ, ಮನೆ, ಇತ್ಯಾದಿಗಳೆಲ್ಲವೂ ನಾವು ನಮ್ಮದೆಂಬ ಭ್ರಮೆ ಹುಟ್ಟಿಸುತ್ತವೆಯೆ ಹೊರತು ನಮ್ಮದಲ್ಲ. ಬದಲಾದ ರಾಜಕೀಯ ಪರಿಸ್ಥಿತಿ, ಕಳ್ಳರು ,ಕಾಕರು ಕೊನೆಗೆ ನಮ್ಮ ಬಂಧುಗಳೇ ಮೋಸಮಾಡಿ ಹೊಡೆದುಕೊಂಡು ಹೋಗಬಹುದಾದ ಸ್ವತ್ತುಗಳು. ಆದರೆ ಯಾರೂ ಕದಿಯಲಾಗದ, ಕೊಟ್ಟಷ್ಟೂ ವೃದ್ಧಿಸುವ ಸಂಪತ್ತು ವಿದ್ಯೆ ಮಾತ್ರವೇ. ಸರ್ವಜ್ಞ ಹೇಳುವಂತೆ

ಒಡಲಡಗಿಹ ವಿದ್ಯೆ ಒಡಗೂಡಿ ಬರುತಿರಲು

ಒಡಹುಟ್ಟಿದವರು, ಕಳ್ಳರು, ನೃಪರದನು

ಪಡೆವರೆಂತೆಂದ ಸರ್ವಜ್ಞ.

ಇಂತಹ ಸಂಪತ್ತನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಔಪಚಾರಿಕವಾಗಿ, ಅನೌಪಚಾರಿಕವಾಗಿ, ಜೀವನದ ವಿವಿಧ ಹಂತಗಳಲ್ಲಿ ನಮಗೆ ಕಲಿಸಿ ನಮ್ಮನ್ನು ಇಂದು ಸಮಾಜಮುಖಿಗಳು, ಸತ್ಪ್ರಜೆಗಳು ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಮಾನವರನ್ನಗಿ ಉಳಿಸಿದ ಹಿರಿಯ ಜೀವಗಳನ್ನು  ನೆನೆಯುತ್ತಾ ಈ ಗುರುಪೂರ್ಣಿಮೆಯ ದಿನ ವಂದಿಸೋಣ.

ಸುದರ್ಶನ.

 

 

4 thoughts on “ಸುದರ್ಶನ ಗುರುರಾಜರಾವ್ ಅವರಿಂದ ‘ಗುರುವಂದನೆ’

  1. ನೆನೆಯಬಲ್ಲ ಗುರುಗಳು ನನ್ನ ಬದುಕಲ್ಲಿ ಬಹಳ ಕಡಿಮೆ .
    ಈ ಕಾಲದಲ್ಲಿ ನಮ್ಮ ಬದುಕನ್ನೇ ಬದಲಿಸಬಲ್ಲ ಗುರುಗಳು ವಿರಳವಾಗುತ್ತಿರುವುದು
    ವಿಶಾದದ ವಿಚಾರ.
    ಇದ್ದಲ್ಲಿ ಗುರುವಂದನೆ ಎಲ್ಲ ರೀತಿಯಿಂದ ಅರ್ಥಪೂರ್ಣವಾದ್ದೆ.

    Like

  2. 25 ಏನು ನೂರು ವರ್ಷದ ಮೇಲೂ ಗುರುವನ್ನು ನಿತ್ಯ ನೆನೆಸುವದು, ವರ್ಷಕ್ಕೊಮ್ಮೆಯಾದರೂ ಸ್ಮರಿಸುವದು ಕರ್ತವ್ಯವಲ್ಲವೇ? ಋಣವನ್ನು ನೆನೆಸುವದು ದೊಡ್ಡ ಗುಣ, ಈಗಿನ ಕಾಲದಲ್ಲಿ! ಇದೇ ಮನುಷ್ಯತ್ವ, ಇಂಥ ವಂದನೆಯನ್ನೋದಿದ ಮೇಲೆ ಕಲಿಸಿದ ಅಂಥ ಗುರುವಿನ ( ಗುರುಗಳ) ವಂದನೆ ಸರಿಯೇ. ಬಹಳೇ ಚೆನ್ನಾಗಿ ಬರೆದ ಈ ವಂದನೆಯೇ ನಮ್ಮೆಲ್ಲರ ಗುರುಗಳಿಗೂ ಮುಟ್ಟಲಿ! ಬರೆಸಿದ ನಿಮ್ಮ ಗುರುಗಳೂ ಧನ್ಯರು, ಸುದರ್ಶನರೆ!

    Like

  3. ಸುದರ್ಶನ್ ಅವರೆ, ಉಪಾಧ್ಯಾರ ದಿನದಂದು ಪ್ರಕಟವಾಗಿರುವ ನಿಮ್ಮ ಲೇಖನ ಜಗತ್ತಿನ ಗುರುಗಳೆಲ್ಲರಿಗೂ ಅನ್ವಯವಾಗುವುದು. ಕೇವಲ ಒಂದಕ್ಷರವನ್ನು ಕಲಿಸಿದವನೂ ಗುರುವೆ ಎಂಬ ಪರಂಪರೆಯಿಂದ ಬಂದ ನಮಗೆ ಗುರುವಿನ ಮಹತ್ವ ಬಾಲ್ಯದಿಂದಲೂ ತಿಳಿದ ವಿಷಯ. ನಮ್ಮ ಅಜ್ಜಿ, ಅಜ್ಜ, ತಂದೆ ತಾಯಿಗಳ ಮೂಲಕ ಪುರಾಣದ ಕಥೆಗಳಲ್ಲಿರುವ ಆದರ್ಶಪ್ರಾಯರಾದ ಗುರು-ಶಿಷ್ಯ ಸಂಬಂಧದ ಕಥೆಗಳನ್ನು ಕೇಳುತ್ತಾ, ಓದುತ್ತಾ ಬೆಳೆದ ನಮಗೆ, ಇಂದಿಗೂ ನಮ್ಮ ಶಾಲಾ-ಕಾಲೇಜುಗಳ ಉಪಾದ್ಯಾಯರುಗಳು ಬಹಳ ಪವಿತ್ರರು. ಅವರ ನೆನಪು ಚಿರಂತನವಾಗಿ ನಮ್ಮಲ್ಲಿ ಉಳಿದಿದೆ. ಅಂತಹ ಸಂಬಂಧವನ್ನು ಉಲ್ಲೇಖಿಸಿ ನೀವು ಬರೆದ ಈ ಲೇಖನ ಮತ್ತೊಮ್ಮೆ ನಮ್ಮೆಲ್ಲರ ಮನಗಳಲ್ಲಿ ಆ ಸಂಬಂಧದ ಮಹತ್ವವನ್ನು ಎತ್ತಿಹಿಡಿಯುವ ಸತ್ಕಾರ್ಯವನ್ನು ಮಾಡಿದೆ.
    ಉಮಾ ವೆಂಕಟೇಶ್

    Like

  4. I love your article in Kannada.Please keep writing in Kannada news papers.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.