ವನ್ಯ ಜೀವಿಗಳ ಜಾಡುಹಿಡಿದು- ಕರ್ನಾಟಕದ ವನಜೀವ ಜಾಲದ ತೌಲನಿಕ ಅವಲೋಕನ – ಸುದರ್ಶನ ಗುರುರಾಜರಾವ್ ಬರೆಯುತ್ತಾರೆ

ವನ್ಯ ಜೀವಿಗಳ ಜಾಡುಹಿಡಿದು- ಕರ್ನಾಟಕದ ವನಜೀವ ಜಾಲದ ತೌಲನಿಕ ಅವಲೋಕನ.
ಲೇಖಕರು: ಶ್ರೀಯುತ ಸಂಜಯ್ ಗುಬ್ಬಿ

vanyajeevi

vanyajeevi2

“ಜಯ ಸುಂದರ ನದಿವನಗಳ ನಾಡೆ” – ಕುವೆಂಪು
”ಬೆಳುವಲ ಮಲೆ-ಕರೆ ಸುಂದರ ಸೃಷ್ಟಿ”- ಚನ್ನವೀರ ಕಣವಿ
”ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ”- ನಿಸಾರ್ ಅಹ್ಮದ್
”ಚಿಮ್ಮುತ ಓಡಿವೆ ಜಿಂಕೆಗಳು-ಕುಣಿದಾಡುತ ನಲಿದಿವೆ ನವಿಲುಗಳು” ಗಂಧದ ಗುಡಿ
“ಹಸಿರೊಡೆದು ಉಸಿರಾಡಿ ನಗುತಿರುವ ನೆಲದಲ್ಲಿ ಕಾವೇರಿ ಮೈದೋರಿ ನಲಿದಿರುವಳು”- ಮಾಗಿಯ ಕನಸು
“ಮುಗಿಲೇರಿ ಮುತ್ತಿಡುವ ಆಗಸದ ಆಚೆಗೆ ಗಿರಿ ಸಾಲು ತಾನಾಗಿ ಮೆರೆದಾಡಿದೆ
ಚೆಲುವಿನ ರಾಶಿಯ ಗೆಲುವನೂ ಕಾಣಲು ಮಲೆನಾಡ ಮೈಸಿರಿಯು ನೆಲೆ ನಿಂತಿದೆ ..ಎಲ್ಲೆಲ್ಲೂ ನೀನೆ”- ಮಾಗಿಯ ಕನಸು

ಈ ಹಾಡುಗಳನ್ನು, ಕವಿತೆಯ ಸಾಲುಗಳನ್ನು ನಾವು ಓದಿ ಕೇಳಿ, ಸ್ವಲ್ಪ ಮಟ್ಟಿಗೆ ನೋಡಿ ಬಲ್ಲೆವು. ಈ ಸೌಂದರ್ಯದ ಒಳಗಿನ ನಿಜ ಆಳ ಅಗಲಗಳನ್ನು, ಅದರ ಸಂರಕ್ಷಣೆಗೆ ಇರುವ ಸವಾಲುಗಳನ್ನು, ತನು ಮನಗಳನ್ನು ಧಾರೆಯೆರೆದು ಇವುಗಳನ್ನು ಕಾಯಲು ನಡೆಯುತ್ತಿರುವ ತೆರೆಮರೆಯ ಪ್ರಯತ್ನಗಳನ್ನೂ ಸ್ವಂತ ಅನುಭವಗಳ ಮೂಲಕ, ದೃಷ್ಟಾಂತಗಳ ಮೂಲಕ ಉತ್ತಮ ಛಾಯಾಚಿತ್ರಗಳ ಮೂಲಕ ನಮ್ಮ ಮುಂದೆ ಅನಾವರಣಗೊಳಿಸುತ್ತಾ ಸ್ವಾರಸ್ಯಕರ ಭಾಷೆಯ ಲಹರಿಯಲ್ಲಿ ಓದಿಸಿಕೊಂಡು ಹೋಗುವ ಈ ಪುಸ್ತಕ ಅಕಸ್ಮಾತಾಗಿ ನನಗೆ ಸಿಕ್ಕಿದ್ದು ನಿಮಗೆ ಅದರ ಪರಿಚಯ ಮಾಡಿಸಲು ಈ ಲೇಖನ.

ಸಂಜಯ್ ಅವರು ತುಮಕೂರೆಂಬ ಬಯಲು ಸೀಮೆಯ ನಾಡಿನಿಂದ ಬಂದಿದ್ದರೂ ಅವರ ಈ ಕಾಡು ಸಂರಕ್ಷಣೆಯ ” ಹುಚ್ಚು” ಹೇಗೆ ಬೆಳೆಯಿತೆಂಬುದನ್ನು ವಿವರಿಸುತ್ತಾ ಸಮಾಜದಲ್ಲಿರುವ ಕೆಲವು ಉನ್ನತ ಜೀವಗಳು ನಮ್ಮ ಮನೋಭಾವನಗಳನ್ನು ಹೇಗೆ ಬದಲಾಯಿಸುತ್ತವೆ ಎಂಬುದನ್ನು ತಿಳಿಸುತ್ತಾರೆ. ನಾಗರಹೊಳೆಯ ಮಾಯಾಲೋಕದ ಪರಿಚಯವೂ ಸ್ಥೂಲವಾಗಿ ಮಾಡಿಕೊಡುತ್ತಾರೆ.
ಮುಂದಿನ ಅಧ್ಯಾಯಗಲಲ್ಲಿ ವನ್ಯಜಿವಿಗಳು ಮನುಷ್ಯನಿಗೆ ಹೇಗೆ ಸಹಾಯಕಾರಿಯಾಗಿವೆ ಎಂಬುದನ್ನು ತಿಳಿಸುತ್ತಲೇ ಮನುಷ್ಯ ನಿರ್ಮಿತ ಯೊಜನೆಗಳು, ಕೇವಲ ಸ್ವಾರ್ಥ, ಆರ್ಥಿಕ ಕಾರಣಗಳಿಗಾಗಿ ನಿರ್ದಾಕ್ಷಿಣ್ಯವಾಗಿ ಅರಣ್ಯ ಹನನ ಆಗುತ್ತಿರುವ ಪ್ರಕ್ರಿಯೆಯನ್ನೂ ವಿವರಿಸುತ್ತಾರೆ. ಎಲ್ಲವೂ ಅಂಕಿ-ಅಂಶಗಳ ಸಹಿತ ವಿವರಿಸಿದ್ದರೂ ಅವುಗಳು ಓದಿನ ರೋಚಕೆತೆ ಹಾಗೂ ಲಹರಿಯನ್ನು ಹಾಳುಗೆಡವದಂತೆ ಬರದಿರುವುದು ಲೇಖಕರ ಜಾಣ್ಮೆ ಹಾಗೂ ಆಳವಾದ ಅರಿವಿನ ಸಂಕೇತ. ಯಾವ ವಿಷಯವೂ ಒಣ ಮಾಹಿತಿಯೆಂದಿನಿಸುವುದಿಲ್ಲ.
ಕೇವಲ ಮಲೆನಾಡಿನ ಕಾಡುಗಳಲ್ಲಿ ಮಾತ್ರವೇ ವನ್ಯ ಜೀವಿಗಳಿರುತ್ತಾವೆಂದು ನಂಬಿದವರು ಬಹಳ. ಬಯಲು ಹಾಗೂ ಕುರುಚಲ ಕಾಡಿನ ವಿಶಿಷ್ಟ ಜೀವಸಂಕುಲವನ್ನೂ ಅಪ್ಯಾಯತೆಯಿಂದ ವಿವರಿಸುವ ಅಧ್ಯಾಯ ಪಶ್ಚಿಮಘಟ್ಟಗಳಿಂದಾಚೆ; ಚಿತ್ರಸಹಿತ, ಆಸಕ್ತಿ ಪೂರ್ಣ.

ವನ್ಯ ಜೀವಿ ಸಂಶೋಧಕರಾಗಿ ಸಂಜಯ ಗುಬ್ಬಿ ಅವರು ಕಂಡ, ಕಾಡು ಪ್ರಾಣಿಗಳನ್ನು ಕೊಲ್ಲುವ ವಿಧಾನಗಳು, ಉಳಿಸಲು ಮಾಡಿದ ಚಿಕ್ಕ ಪುಟ್ಟ ಹೋರಾಟಗಳು,ಎದುರಾಗುವ ಸವಾಲುಗಳು, ಸ್ಪಂದಿಸಿದ ಅಧಿಕಾರಿಗಳು, ಸಾಮಾನ್ಯ ಜನಗಳು ಕೆಲವೊಮ್ಮೆ ನೀಡಿದ ಸಹಾಯ ಹಸ್ತಗಳು, ಎಲ್ಲವನ್ನೂ ವಿವರಿಸುತ್ತಾ ನಮ್ಮ ಸಂಸ್ಕೃತಿಯ ಬಗೆಗೆ ಅಭಿಮಾನವನ್ನೂ ಮೂಡಿಸುತ್ತಾರೆ.
ವನ್ಯ ಜೀವಿಗಳ ಜೀವನಕ್ರಮವನ್ನು ಅರಿತು, ಆ ಮಾಹಿತಿಯನ್ನು ವೈಜ್ಞಾನಿಕವಾಗಿ ಅವುಗಳ ಸಂರಕ್ಷಣೆಗೆ ಹೇಗೆ ಬಳಸಿಕೊಳ್ಳಲಾಗುತ್ತಿದೆಯೆಂಬ ವಿಚಾರಗಳನ್ನೂ ವಿವರಿಸಿ ನಮ್ಮ ಮುಂದೆ ಹೊಸದೊಂದು ಲೋಕವನ್ನೇ ತೆರೆದಿಡುತ್ತಾರೆ.
ಎಲ್ಲವೂ ನಿರಾಶಾದಾಯಕವಾಗಿಲ್ಲ ;ಹತ್ತು ಹಲವು ಯೊಜನೆಗಳು ಇಂದು ವನ್ಯಜೀವಿ ರಕ್ಷlಣೆಗೆ ಪೂರಕವಾಗಿಯೂ ಅನುಷ್ಠಾನಗೊಳ್ಳುತ್ತಿವೆ;ಅವುಗಳ ವಿವರಗಳೂ ಇವೆ. ಆದರೆ ಇದಕ್ಕೆ ಸಾರ್ವಜನಿಕರೂ ಸಹಕರಿಸಿ ಕೈಜೋಡಿಸಬೇಕೆಂಬ ಕೆಲವು ಮನವಿಗಳೊಂದಿಗೆ ಪುಸ್ತಕ ಮುಗಿಯುತ್ತದೆ.

ಸ್ವತಃ ಇಂಜಿನಿಯರಿಂಗ್ ಪದವಿ ಪಡೆದು, ತಮ್ಮದೇ ಲಾಭದಾಯಕ iಉದ್ಯಮ ನಡೆಸುತ್ತಿದ್ದಾಗ್ಯೂ ಅವೆಲ್ಲವನ್ನು ಬಿಟ್ಟು ತಮ್ಮ ಹೃದಯದ ಕರೆಗೆ ಓ ಗೊಟ್ಟು ವನ್ಯಜೀವಿ ಸಂರಕ್ಷಣೆ ಮತ್ತು ಸಂಶೋಧನೆಯನ್ನು ತಮ್ಮ ಜೀವನವನ್ನಾಗಿಸಿಕೊಂಡಿರುವ ಸಂಜಯ್ ಹತ್ತರಲ್ಲಿ ಹನ್ನೊಂದನೆಯವರಾಗದೆ ಭಿನ್ನವಾಗಿ ನಿಂತು ಮಾದರಿಯಾಗಿರುವದಷ್ಟೇ ಅಲ್ಲ, ಕನ್ನಡದಲ್ಲಿ ಇಂಥ ಒಂದು ಅಪರೂಪದ ಪುಸ್ತಕವನ್ನೂ ಬರೆದಿದ್ದಾರೆ. ಇವರು ಕನ್ನಡದ ಕೆಚ್ಚೆದೆಯ ಪ್ರೇಮಿಯೂ ಹೌದು. ಇತ್ತಿಚೆಗೆ ಇವರ ಮುಖತಃ ಪರಿಚಯ ಆಗಿದ್ದು ನನ್ನ ಅದೃಷ್ಟ. ನವಕರ್ನಾಟಕ ಪುಸ್ತಕ ಪ್ರಕಾಶನದವರು ತಂದಿರುವ ಈ ಹೊತ್ತಗೆ, ಎರಡನೆಯ ಮುದ್ರಣ ಕಂಡಿರುವುದು ಇದರ ಜನಪ್ರಿಯತೆ ತೋರಿಸುತ್ತದೆ.

(ಚೊಕ್ಕ ಪುಸ್ತಕಕ್ಕೊಂದು ಚಿಕ್ಕ ಕವಿತೆ )

“ನಿಲ್ಲಿಸಿ ನಮ್ಮೆಲ್ಲ ಈ ಪ್ರಕೃತಿಯ ಕಗ್ಗೊಲೆ
ನೀಡೋಣ ಅದಕೆಮ್ಮ ಜೀವದಷ್ಟೇ ಬೆಲೆ
ಹಾಕೋಣ ಪ್ರಕೃತಿಗೆ ನಮ್ಮ ಜೀವದ ಕಾವಲು
ಕಾಣೋಣ ಭವ್ಯ ಹೊಸ ಹಗಲು-
ಅಂಧ ಅಸ್ತಮಾನದಾ ಬದಲು!!”
(ಸುದರ್ಶನ)

 

 

6 thoughts on “ವನ್ಯ ಜೀವಿಗಳ ಜಾಡುಹಿಡಿದು- ಕರ್ನಾಟಕದ ವನಜೀವ ಜಾಲದ ತೌಲನಿಕ ಅವಲೋಕನ – ಸುದರ್ಶನ ಗುರುರಾಜರಾವ್ ಬರೆಯುತ್ತಾರೆ

  1. ವನ್ಯಜೀವಿಗಳಿಗೆ ಗಂಡಾಂತರ ಬಂದ ಈಗಿನ ಕಾಲದಲ್ಲಿ ನನ್ನ ಬಾಲ್ಯದ ಊಟಿಯ ಅನುಭವವನ್ನು ನೆನೆದರೆ (ನಮ್ಮೂರು ಸರಣಿಯಲ್ಲಿ ಮೇಲೆ ಬರೆದಂತೆ) ಮೈ ‘ಜುಮ್ಮೆ’ನುತ್ತದೆ. ಆಗ ಹಿಂದು ಮುಂದು ನೋಡದೆ ವನ್ಯಮೃಗಗಳ ಬೇಟೆಯಾಡಿ ಮಾನವ ಈ ಸ್ಥಿತಿಗೆ ತಂದಿರುವಾಗ ಸಂಜಯ ಗುಬ್ಬಿಯಂಥವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಮತ್ತು ನಮ್ಮ ಕರ್ನಾಟಕದವರಿಗೆ ಹೆಮ್ಮೆ. ನಮಗೆ ಅವರ ಕೆಲಸದ ಪರಿಚಯ ಮಾಡಿಸಿದ್ದಕ್ಕೆ, ಈ ಸಮಸ್ಯೆಯತ್ತ ನಮ್ಮ ಗಮನ ಸೆಳೆದದ್ದಕ್ಕೆ ಧನ್ಯವಾದಗಳು.

    Like

  2. ಸುದರ್ಶನ್ ಅವರ ಪುಸ್ತಕದ ವಿಮರ್ಶೆ ಬಹಳ ಸಮಯೋಚಿತವಾಗಿದೆ. ನಮ್ಮ ಪರಿಸರ ಮತ್ತು ಪ್ರಕೃತಿಯ ಸಂರಕ್ಷಣಯ ಜವಾಬ್ದಾರಿ ಎಲ್ಲಾ ಪ್ರಜೆಗಳಿಗೂ ಸೇರಿದೆ. ಸಂಜಯ್ ಅವರಂತಹ ಸಹೃದಯೀ ವನ್ಯರಕ್ಷಣಾ ಪ್ರೇಮಿ, ನಮ್ಮ ಸಮಾಜದಲ್ಲಿ ತಮ್ಮ ಕಾರ್ಯ ಮತ್ತು ಲೇಖನಗಳ ಮೂಲಕ ಬಹಳಷ್ಟು ಬದಲಾವಣೆಗಳನ್ನು ತರಲು ಸಹಾಯವಾಗಬಹುದು. ಸಂಜಯ್ ಅವರ ಈ ಕಾರ್ಯ ನನಗೆ, ೭೦ರ ದಶಕದಲ್ಲಿ, ಮೈಸೂರಿನಲ್ಲಿರುವ ಖ್ಯಾತ ನಿಸರ್ಗ ರಕ್ಷಣಾ ತಘ್ನ್ಯ ಡಾ ಉಲ್ಲಾಸ್ ಕಾರಂತರ ಸಂಶೋಧನಾ ಕಾರ್ಯವನ್ನು ನೆನಪಿಗೆ ತಂದಿತು. ಅವರು ಕನ್ನಡದ ಕಡಲ ತೀರದ ಭಾರ್ಗವ ಶಿವರಾಮ ಕಾರಂತರ ಸುಪುತ್ರರು. ಇಂದು ಉಲ್ಲಾಸ್ ಕಾರಂತರ ಸುಪುತ್ರಿಯೂ ಅದೇ ನಿಸರ್ಗ ಸಂರಕ್ಷಣೆಯ ಕಾರ್ಯದಲ್ಲೇ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ನಮ್ಮ ಪರಿಸರ ರಕ್ಷಣೆಯಲ್ಲಿ, ಸಾಮಾನ್ಯ ಜನಗಳ ಸಹಾಯ ಹಸ್ತ ಅತ್ಯಂತ ನಿರ್ಣಾಯಕವಾದದ್ದು. ಸಂಜಯ್ ಅವರಂತಹ ವನ್ಯ ಪ್ರೇಮಿಗಳು, ಇಂತಹ ಹಲವಾರು ಪುಸ್ತಕಗಳ್ನನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿದರೆ, ಸಾಮಾನ್ಯ ಜನರಲ್ಲಿ ಪ್ರಕೃತಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡುವುದರಲ್ಲಿ ಸ್ವಲ್ಪ ಮಟ್ಟಿಗೆ ಸಹಾಯಕಾರಿಯಾಗಬಹುದು. ಸುದರ್ಶನ್ ಅವರು ಮತ್ತೊಮ್ಮೆ ನಮಗೆ ಸಂಜಯ್ ಅವರಂತಹ ಅಪರೂಪ ವ್ಯಕ್ತಿಯ ಪರಿಚಯ ಮಾಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
    ಉಮಾ ವೆಂಕಟೇಶ್

    Like

  3. “ee naada anda ee sobagu chanda”.
    Vanya jeevigala bagge pustakagaLu kadime. Lekhakara shrama prashamsanege arha. Sudharshana avare, ee pustakavannu vimarshidakke dhanyavaadagaLu.
    Giridhara

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.