ಖಾಲಿದ್ ಹೊಸ್ಸೇನಿಯವರ ಹೊಸ ಕಾದಂಬರಿ – ದಾಕ್ಷಾಯಿಣಿ ಅವರು ಬರೆದ ಪುಸ್ತಕ ವಿಮರ್ಶೆ

ಭಾಷೆ, ಬರಹ ಮತ್ತು ಪುಸ್ತಕ

ಖಾಲಿದ್ ಹೊಸ್ಸೇನಿಯವರ ಹೊಸ ಕಾದಂಬರಿ And the Mountains Echoed  ಪುಸ್ತಕವನ್ನು ಓದುತ್ತ ಇದ್ದೀನಿ ಎಂದು ಬಳಗದ ಸ್ನೇಹಿತರಲ್ಲಿ ಹೇಳಿದಾಗ ಪುಸ್ತಕ ವಿಮರ್ಶೆಯನ್ನು ಬರೆಯಬಹುದೆಂದು ಸಲಹೆ ಮಾಡಿದರು.  ನಾನು ಬರೆಯಲು ಶುರುಮಾಡಿದ್ದು  ವಿಮರ್ಶೆಯಾದರೂ,  ಅದರ ಜೊತೆಗೆ ಬಂದಿತು ಈ ವಿಚಾರ.

AndTheMountainsEchoed-cvr-thumb

ಲಗೇಜ್, ಸೆಕ್ಯೂರಿಟಿ ಎಲ್ಲ ದಾಟಿ, ಬೆಂಗಳೂರಿನ ಏರಪೋರ್ಟಿನ  ಡಿಪಾರ್ಚರ್ ಲೌಂಜ್ಗೆ ಬಂದಾಗ ವಿಮಾನ ಹೊರಡಲು ಇನ್ನೂ ಎರಡು ಗಂಟೆಗೂ ಮಿಕ್ಕಿ ಸಮಯವಿತ್ತು. ಗಡಿಬಿಡಿ ಮಾಡಿ ಹೊರಡಿಸಿದ ಪತಿರಾಯರ ಮೇಲೆ ಸಾಕಷ್ಟು ಅಸಮಾಧಾನ ವ್ಯಕ್ತ ಪಡಿಸಿ, ಹೊಸದಾಗಿ ಬಂದಿರುವ ಅಂಗಡಿಗಳನ್ನು ನೋಡಹೊರಟೆ. ಪುಸ್ತಕದ ಅಂಗಡಿಯನ್ನು ನೋಡಿ ಆದ ಖುಷಿ,  ಅಲ್ಲಿ ಕನ್ನಡ ಪುಸ್ತಕದ ಸುದ್ದಿಯೇ ಇಲ್ಲದ್ದನ್ನು ನೋಡಿ ತಣ್ಣಗಾಯಿತು!
“ಇದೇನು ನಮ್ಮ ರಾಜಧಾನಿಯಲ್ಲಿ ಕನ್ನಡದ ಪುಸ್ತಕವಿಲ್ಲ?” ಅನ್ನುವ ನನ್ನ ಅಸಮಧಾನದ ನುಡಿಗೆ “ಇಲ್ಲಿ ಬರುವವರೆಲ್ಲ ಫಾರಿನ್ನವರು ಮೇಡ೦ ಕನ್ನಡ ಖರ್ಚು ಆಗಲ್ಲ” ಅನ್ನುವ ಉತ್ತರ ಸಿಕ್ಕಿತು. ಬೆಂಗಳೂರಿನಲ್ಲಿ ಕನ್ನಡದವರು ಪರದೇಶಿಗಳು ಅನ್ನುವ ಸತ್ಯ ಮತ್ತೊಮ್ಮೆ ಮನವರಿಕೆಯಾಯಿತು. ನನ್ನ ಗಮನ ಸೆಳೆದಿದ್ದು ಬಹಳಷ್ಟು ಹೊರನಾಡಿನ ಭಾರತೀಯ ಲೇಖಕರ ಹೆಸರುಗಳು. ಹುಟ್ಟಿದ ನಾಡಿನ ಜೀವನ, ಧರ್ಮ ಮತ್ತು ಸಂಸ್ಕೃತಿಗಳನ್ನು,  ಇವರು ಹೊಸ ರೀತಿಯಲ್ಲಿ  ಪ್ರಪಂಚಕ್ಕೆ ಪರಿಚಯ ಮಾಡಿಕೊಡುತ್ತಿದ್ದಾರೆ. ಈ ಸಾಹಿತ್ಯಕ್ಕೆ ಭವಿಷ್ಯವಿದೆ. ಕರ್ನಾಟಕ ಸರ್ಕಾರ ಹಳ್ಳಿಗಳಲ್ಲೂ ಮುಚ್ಚಿಹೊಗುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ನಮ್ಮ ಭಾಷೆಯ ಭವಿಷ್ಯವನ್ನು ನೆನೆದು ಮನಸ್ಸು ಖೇದಗೊಂಡಿತು. ಪರಿಚಿತ ಲೇಖಕ ಹೊಸ್ಸೇನಿಯವರ ಹೊಸ ಪುಸ್ತಕ ಮತ್ತು ಅಪರಿಚಿತ ಹೆಸರಿನ ಭಾರತೀಯನ ಪುಸ್ತಕ ಎರಡನ್ನೂ ಕೊಂಡು ಹೊರಬಂದೆ.

ಖಾಲಿದ್ ಹೊಸ್ಸೇನಿ ಆಫ್ಘಾನಿಸ್ತಾನ ಮೂಲದ ಅಮೆರಿಕನ್ನರು. ಅವರ ಪುಸ್ತಕಗಳನ್ನು ಓದುವ ಶಿಫಾರಸ್ಸನ್ನು, ಐದು ವರ್ಷಗಳ ಹಿಂದೆ ನನ್ನ ಮಗಳು ಮಾಡಿದ್ದಳು. ಅವರ ಮೊದಲ ಕಾದಂಬರಿ kite runner ಓದಲೇ ಬೇಕಾದ ಪುಸ್ತಕವೆಂದು ಹೇಳಬಹುದು. Thousand Splendid Suns ಸಹ ಬಹಳ ಸೊಗಸಾದ ಪುಸ್ತಕ. ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ನಿರಂತರ ಹೋರಾಟದ ಪಕ್ಷಿನೋಟದ ಜೊತೆಗೆ, ಅದರಿಂದ ಜನಸಾಮಾನ್ಯರ ಮೇಲಾಗಿರುವ  ಪರಿಣಾಮವನ್ನು, ಮತ್ತು ನಾವು ಯೋಚಿಸಿರದ ವಿಷಯಗಳನ್ನು ಅಂತಃಕರಣ ಮುಟ್ಟುವ ರೀತಿಯಲ್ಲಿ ಬರೆಯುವ ಕಲೆ ಈ ಸಾಹಿತಿಗಿದೆ. ಒಮ್ಮೆ ಓದಲು ಶುರುಮಾಡಿದರೆ ನಿಲ್ಲಿಸಲು ಮನಸ್ಸಾಗುವುದಿಲ್ಲ. And the Mountains Echoed ಅದೇ ಶೈಲಿಯಲ್ಲಿ ಬರೆದ ಪುಸ್ತಕವಾದರೂ, ಮೊದಲೆರಡು ಪುಸ್ತಕಗಳ ತೀಕ್ಷ್ಣತೆಯನ್ನು ಉಳಿಸಿಕೊಳ್ಳುವುದರಲ್ಲಿ ವಿಫಲವಾಗಿದೆಯೆಂದು ಹೇಳಬಹುದು. ಸುಲಭವಾಗಿ ಓದಿಸಿಕೊಂಡು ಹೋಗುವ ಪುಸ್ತಕ. ಪಾತ್ರಗಳ ಬಗ್ಗೆ ಬರೆಯುವುದು ಸಮಂಜಸವೆ ಎನ್ನುವುದರ ಬಗ್ಗೆ ನನಗೆ ಅನುಮಾನ. ನಿಮ್ಮಗಳ ಕುತೂಹಲವನ್ನು ಕಡಿಮೆ ಮಾಡಬಾರದು ಅನ್ನುವ ಅಭಿಪ್ರಾಯ. ಹೊರನಾಡಿನಲ್ಲಿ ವಿದ್ಯೆ ಕಲಿತು ಹುಟ್ಟಿದ ನಾಡಿನ ಬಗ್ಗೆ ಬರೆಯುವ ಈ ಹೊಸ ಪೀಳಿಗೆಯ ಬರಹಗಾರರು, ಪರದೇಶದಲ್ಲಿ ಬದುಕುವ ನನ್ನ ಮನಸ್ಸನ್ನು ಬಹಳ ಸುಲಭವಾಗಿ ತಟ್ಟುತ್ತಾರೆ. ನಮ್ಮ ಭಾರತದ ಸುತ್ತಮುತ್ತಲ ದೇಶಗಳ ಸ೦ಸ್ಕ್ರುತಿ ನಮಗಿಂತ ಬಹಳ ವಿಭಿನ್ನವಾಗಿಲ್ಲದಿರುವುದರಿಂದ, ನನಗದು ಪರದೇಶದ ಬಗ್ಗೆ ಬರೆದ ಲೇಖನವೆ೦ದೆನಿಸುವುದಿಲ್ಲ.

And the mountains Echoed, ನಲ್ಲಿ ಬಹಳಷ್ಟು ಪಾತ್ರಗಳಿವೆ, ಲೇಖಕನ ಉದ್ದೇಶ ಅಬ್ದುಲ್ಲ ಮತ್ತು ಪಾರಿಯರ ಕತೆಯನ್ನು ಪೋಷಕ ಪಾತ್ರಗಳೊಂದಿಗೆ ಹೇಳುವುದಾದರೂ, ಡಾ. ಮರ್ಕೂಸ್ ಮತ್ತವನ ತಾಯಿ ಓಡಿಯ ಪಾತ್ರವು ಮುಖ್ಯ ಪಾತ್ರದಷ್ಟೇ ಮನಸ್ಸಿನಲ್ಲಿ ಉಳಿಯುತ್ತದೆ. ಕತೆಗಾರ ಯುದ್ದದಲ್ಲಿ ನಲುಗಿದ ಆಫ್ಘಾನಿಸ್ತಾನದ ಜೊತೆಗೆ, ಈಗಿನ ಪರಿಸ್ಥಿತಿಯನ್ನೂ ಹೇಳುವ ಪ್ರಯತ್ನ ಮಾಡಿದ್ದಾನೆ. ಈ ಕಾದಂಬರಿ ಓದುಗಾರನನ್ನು ಏಷ್ಯಾ, ಯುರೋಪ್ ಮತ್ತು ಅಮೇರಿಕಾ ಎಂದೆಲ್ಲ ಬೇರೆ, ಬೇರೆ ಸ್ಥಳಗಳಿಗೆ ಕರೆದೊಯ್ಯುತ್ತದೆ. ಹೊಸ್ಸೇನಿ ಯವರ ಭಾವುಕ ಬರವಣಿಗೆ ಆಗಾಗ್ಗೆ ಓದುಗರ ಕಣ್ಣು ಒದ್ದೆಮಾಡುತ್ತದೆ. ಒಡಹುಟ್ಟಿದವರ ನಿಷ್ಕಳಂಕ ಪ್ರೀತಿ ಪಾರಿ ಅಬ್ದುಲ್ಲದಾದರೆ, ತಾಲಿಯಾ, ಮಾರ್ಕೊಸ್ ಮತ್ತು ಓಡಿಯ ಸಂಬಂಧದ ಪರಿಯೇ ಬೇರೆ. ಕೆಲವೊ೦ದು ಪಾತ್ರಗಳು, ಉದಾಹರಣೆಗೆ ಬಶೀರ ಮತ್ತವನ ಸೋದರ, ಈ ಕತೆಗೆ ಯಾವ ರೀತಿಯಲ್ಲಿ ಪೂರಕ ಅನ್ನುವ ಅನುಮಾನ ಮೂಡುತ್ತದೆ. ಕತೆಯ ಕೊನೆಯ ಭಾಗವನ್ನು ಬರಹಗಾರ ಚಿಕ್ಕ ಹುಡುಗ ಇಕ್ಬಾಲ ಮೂಲಕ ನಮಗೆ ಹೇಳುವ ರೀತಿ ಪ್ರಶ೦ಸನೀಯ. ಒಟ್ಟಿನಲ್ಲಿ ಹೇಳುವುದಾದರೆ ಸೊಗಸಾದ ಬರವಣಿಗೆ, ಆದರೆ ಮೊದಲೆರಡು ಪುಸ್ತಕಗಳ ಮಟ್ಟವನ್ನು ನೀವು ಬಯಸಿದರೆ ನಿಮಗೆ ಸ್ವಲ್ಪ ಮಟ್ಟಿಗೆ, ನಿರಾಸೆಯಾಗಬಹುದು. ಇನ್ನೊ೦ದು ವಿಷಯವೆ೦ದರೆ ಲೇಖಕರು ಓದುಗನ ಆಸಕ್ತಿಯನ್ನು ಕೊನೆಯವರೆಗೂ ಉಳಿಸಿಕೊ೦ಡು ಹೋಗುತ್ತಾರೆ. ನಿಮ್ಮ ಊಹೆಯ ಪ್ರಕಾರ ಯಾವ ಪಾತ್ರವೂ ಬದಲಾಗುವುದಿಲ್ಲ, ಹಾಗೆಯೆ ಓದುಗನ ಬುದ್ದಿವ೦ತಿಕೆಯನ್ನು ಮತ್ತು ವಿಚಾರಶಕ್ತಿಯನ್ನು ಬರಹಗಾರ ಗೌರವಿಸುತ್ತಾನೆ. ನನಗೆ ಇದು ಬಹಳ ಮುಖ್ಯ. ಇನ್ನೂ ಹೆಚ್ಚಿನ ವಿಮರ್ಶೆ ನಿಮ್ಮಗಳ ಕುತೂಹಲವನ್ನು  ಕಡಿಮೆ ಮಾಡಬಹುದು. ನೀವು ಈ ಪುಸ್ತವನ್ನು ಅಂಗಡಿಯಲ್ಲೋ ಅಥವಾ ಲೈಬ್ರರಿಯಲ್ಲೋ ಕಂಡರೆ ಖಂಡಿತಾ ತಂದು ಓದಿನೋಡಿ, ನಿಮಗೆ ಯಾವ ರೀತಿಯಲ್ಲೂ ನಿರಾಸೆಯಾಗುವುದಿಲ್ಲ. ಈ ಕಾದ೦ಬರಿ ಎಲ್ಲಾ ವಯಸ್ಸಿನ ಓದುಗರ ಆಸಕ್ತಿಯನ್ನು ಉಳಿಸಿಕೊ೦ಡು ಹೋಗಬಲ್ಲದು.

ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

ದಾಕ್ಷಾಯಿಣಿ.

 

9 thoughts on “ಖಾಲಿದ್ ಹೊಸ್ಸೇನಿಯವರ ಹೊಸ ಕಾದಂಬರಿ – ದಾಕ್ಷಾಯಿಣಿ ಅವರು ಬರೆದ ಪುಸ್ತಕ ವಿಮರ್ಶೆ

  1. Nanu Saha Kite Runner Mattu Thousand Splendid suns
    Books ode dene . Nagantu kanniru tadedu kollalu. kasha vayetu. I felt helpless as well. Adakke Nanu 3rd book odalilla. Ega nevu barada. Vimarshe noddedamele odbeku endu ase agide.

    Nevu yaradaru Two States. Cinema nodera? Adu Saha Namma. Deshada. North Southdevision mattu lack of. understanding. Each other,s. Customs intolerance thumba chennagi toresedare. Nanna abipraya nam mail thumba discrimination ede. Navu discuss maduvudilla allava?.. . But Booknastu Cinema chennagila.Hogi Nodi.
    Next time Kannadadalle bereyutene.

    Like

  2. ಖಾಲಿದ್ ಹುಸೇನಿಯವರು ಬರೆದ And the mountains echoed ಎಂಬ ಪುಸ್ತಕದಮೇಲೆ ದಾಕ್ಷಾಹಿಣಿಯವರು ಬರೆದ ವಿಮರ್ಶೆಯನ್ನು ಓದಿದೆ. ಅವರು ಹೇಳಿದ ಪ್ರಕಾರ ’ಹುಟ್ಟಿದನಾಡಿನ ಜೀವನ, ಧರ್ಮ ಮತ್ತು ಸಂಸ್ಕೃತಿಗಳನ್ನು ಇವರು ಹೊಸರೀತಿಯಲ್ಲಿ ಪ್ರಪಂಚಕ್ಕೆ ಪರಿಚಯ ಮಾಡಿಕೊಡುತ್ತಿದ್ದಾರೆ’ ಎಂಬ ಅವರ ಮಾತು ಬಳ ನಿಜ. ಈ ಜೀವನ ಮತ್ತು ಸಂಸ್ಕೃತಿಗಳನ್ನು ಅರಿಯದ ಪ್ರಪಂಚಕ್ಕೆ ಅವರ ವಿವರಣೆ ಬಹಳ ಕುತೂಹಲವನ್ನು ನೀಡುವುದು. ಆದರೆ ಆ ಸಂಸ್ಕೃತಿಯಿಂದ ಸರಿದು ಹೊರನಾಡಿನಲ್ಲಿ ಜೀವಿಸುವಾಗ ಆ ಜೀವನ ಮತ್ತು ಸಂಸ್ಕೃತಿಗಳು ಬಹು ಭಾವುಕವಾಗಿ ಮತ್ತು ದೇಶಾಭಿಮಾನವಾಗಿ ತೋರುವುವು, ಹೊರದೇಶದಲ್ಲಿ ಜೀವಿಸುವ ನಮ್ಮಗಳಿಗೆ ತೋರುವ ಕನ್ನಡಾಭಿಮಾನದ ಹಾಗೆ. ಅದೇರೀತಿಯಲಿ ತಮ್ಮ ದೇಶ ಮತ್ತು ಸಂಸ್ಕೃತಿಯನ್ನು ಬಿಟ್ಟುಬಂದು ಹೊರದೇಶದಲ್ಲಿ ಜೀವಿಸುತ್ತಿರುವ ಖಾಲಿದ್ ಹುಸೇನಿಯವರ ಕಾದಂಬರಿಗಳು, ಓದುಗರ ಮನಸ್ಸನ್ನು ಉದ್ರೇಕಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ದಾಕ್ಷಾಹಿಣಿಯವರು ಹೇಳಿದಹಾಗೆ, “ಹೊರನಾಡಿನಲ್ಲಿ ವಿದ್ಯೆ ಕಲಿತು ಹುಟ್ಟಿದ ನಾಡಿನ ಬಗ್ಗೆ ಬರೆಯುವ ಈ ಹೊಸ ಪೀಳಿಗೆಯ ಬರಹಗಾರರು, ಪರದೇಶದಲ್ಲಿ ಬದುಕುವ ನನ್ನ ಮನಸ್ಸನ್ನು ಬಹಳ ಸುಲಭವಾಗಿ ತಟ್ಟುತ್ತಾರೆ” ಎಂಬುದರಲ್ಲಿ ಏನೂ ಆಶ್ಚರ್ಯವಿಲ್ಲ. ಆದರೆ ಅವರು ಹೇಳಿದಹಾಗೆ, ನಮ್ಮ ಭಾರತದ ಸುತ್ತಮುತ್ತಲ ದೇಶಸಂಸ್ಕೃತಿ ನಮಗಿಂತ ಬಹಳ ವಿಭಿನ್ನವಾಗಿರುವುದಿಲ್ಲ..” ಎಂಬ ಅಭಿಪ್ರಾಯವನ್ನು ನಾನು ಅಷ್ಟು ಒಪ್ಪುವುದಿಲ್ಲ. ಆ ದೇಶಗಳ ಸಂಸ್ಕೃತಿಗಳಲ್ಲಿ ನಮ್ಮ ಭಾರತದೇಶದ ಸಂಸ್ಕೃತಿಗಿಂತ ಬಹಳ ವ್ಯತ್ಯಾಸಗಳಿವೆ. ಒಂದೆರಡು ವಾರಗಳ ಪ್ರವಾಸಗಳ ಸಮಯಗಳಲ್ಲಿ ನಾವು ಪರದೇಶಗಳ ಸಂಸ್ಕೃತಿಗಳ ಸ್ಪಂಧನಮಾಡಿರಬಹುದು. ಆದರೆ ಈ ಸಂಸ್ಕೃತಿಗಳ ನಿಜ ಅನುಭವಗಳನ್ನು ಪಡೆಯಬೇಕಾದರೆ, ಸ್ವದೇಶವನ್ನು ಬಿಟ್ಟು ಎರಡನೆಯ ಅಲ್ಲದೆ ಮೂರನೆಯ ಪರಸಂಸ್ಕೃತಿಯ ದೇಶದಲ್ಲಿ ಹಲವಾರು ವರುಷಗಳು ಜೀವಿಸಿದರೆ ಮನದಟ್ಟಾಗುವುದು. ಆಫ್ಘಾನಿಸ್ಥಾನ ಮತ್ತು ಮಧ್ಯಪ್ರಾಚ್ಯದೇಶಗಳ ಸಂಸ್ಕೃತಿಯು ಭಾರತದ ಸಂಸ್ಕೃತಿಯು ಧಾರ್ಮಿಕವಾಗಿ ಬಹಳ ವಿಭಿನ್ನವಾಗಿವೆ. ಅತಿ ಸಾಂಪ್ರದಾಯಿಕ ಮತ್ತು ವಿಭಿನ್ನ ಧಾರ್ಮಿಕ ಸಾಂಪ್ರದಾಯಿಕ ದೇಶವಾದ ಸೌದೀ ಅರೇಬಿಯ ದೇಶದಲ್ಲಿ ಹತ್ತು ವರುಷಗಳು ನನ್ನ ಸತಿಯೊಡನೆ ಜೀವಿಸಿದ ಅನುಭವ ನನಗಿದೆ. ಅಲ್ಲಿನ ಒಂದು ಆಸ್ಪತ್ರೆಯ ಎಲ್ಲಾ ಉದ್ಯೋಗಿಗಳ ಮತ್ತು ಅವರ ಸಂಸಾರಗಳ ಆರೋಗ್ಯಪಾಲನ ಕೇಂದ್ರದ ವೈದ್ಯನಾಗಿ ಕೆಲಸಮಾಡುವಾಗ ಹೊರದೇಶದ ಉದ್ಯೋಗಿಗಳ ಅಲ್ಲದೆ ಅಲ್ಲಿನ ಸ್ವದೇಶೀ ಉದ್ಯೋಗಿಗಳ ಸಾಂಪ್ರದಾಯಿಕ ಜೀವನದ ಹಾಸುಹೊಕ್ಕುಗಳ ಪರಿಚಯವು ನನಗೆ ದೊರಕಿದವು. ನನ್ನ ಸತಿಗಿಂತ ನನಗೆ ಈ ಅನುಭವಗಳು ನೇರವಾಗಿ (firsthand) ಅಲ್ಲಿನ ಸ್ಥಳೀಯ ಉದ್ಯೋಗಿಗಳಿಂದ ನನಗೆ ದೊರತವು.
    ಈ ಆಂಗ್ಲದೇಶಕ್ಕೆ ಹಲವು ಕಾಲದಮೇಲೆ ಮರಳಿ ಬಂದಾಗ, ‘Kite runner & Thousand splendid suns’ , ಪುಸ್ತಕಗಳು ನನಗಿಂತಲೂ ನನ್ನ ಸತಿಗೆ ಮನಸ್ಸನ್ನು ಅತಿಯಾಗಿ ಭಾವುಕಗೊಳಿಸಿದವು. ಹುಸೇನಿಯವರ ಹೊಸ ಪುಸ್ತಕ And the mountains Echoed’ಬಂದಿದೆ ಅದನ್ನು ನಮ್ಮ ಲೈಬ್ರರಿಯಿಂದ ತರಲೆ? ಎಂದು ನನ್ನ ಸತಿಗೆ ಕೇಳಿದಾಗ ಅದಕ್ಕೆ ಅವಳು, ’ಹುಸೇನಿಯವರ ಪುಸ್ತಕಗಳನ್ನು ನನಗೆ ಓದುವುದಕ್ಕಾಗುವುದಿಲ್ಲ, ಆಫ್ಘಾನಿಸ್ಥಾನದ ಮಹಿಳೆಯರಿಗಾಗುತ್ತಿರುವ ಅನ್ಯಾಯದ ಬಗ್ಗೆ ಅಷ್ಟು ವಿವರವಾಗಿ ನನಗೆ ಓದುವುದಕ್ಕಾಗುವುದಿಲ್ಲ, ’ಅವರ ‘Thousand splendis Suns’ ಪುಸ್ತಕವನ್ನು ಪೂರ್ತಿ ಓದದೆ ಲೈಬ್ರರಿಗೆ ವಾಪಸ್ಸು ಕೊಟ್ಟೆ’ ಎಂದಳು.

    Like

    • ರಾಜಾರಾಮ್ ಅವರ ಪ್ರತಿಕ್ರಿಯೆ ಸತ್ಯವಾದ ಮತು. ಆ ದೇಶದಲ್ಲಿ ಹ್ಕಲ್ಸವಾರು ವರ್ಷಗಳು ಕೆಲಸ ಮಾಡಿ ಅಲ್ಲಿಯ ಜನರೊಡನೆ ಜೀವಿಸಿದಾಗಲೆ, ನಿಜ ಪರಿಸ್ಥಿತಿಯ ಅರಿವಾಗುವುದು. ಅವರ ಪತ್ನಿ ಹೊಸ್ಸೇನಿಯವರ ಪುಸ್ತಕವನ್ನು ಓದಲು ಬಹಳ ಮನಸ್ಸಿಗೆ ತೊಂದರೆಯಾಗುತ್ತದೆ ಎಂದಿದ್ದರೆ ಆಶ್ಚ್ರರ್ಯವೇನಿಲ್ಲ. ಅಲ್ಲಿನ ಮಹಿಳೆಯರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.
      ಉಮ ವೆಂಕಟೇಶ್

      Like

  3. ನಿಮ್ಮಗಳ ಅನಿಸಿಕೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಮನದಲ್ಲಿ ಮೂಡುವ ಹಲವಾರು ವಿಷಯಗಳನ್ನು ಲೇಖನಿಗೆ ಇಳಿಸಿವ ಪ್ರಯತ್ನ ಮಾಡಲು ಈ ವೇದಿಕೆ ಒಂದು ಅವಕಾಶವನ್ನು ತಂದುಕೊಟ್ಟಿದೆ. ಉಮ ಮತ್ತು ಶ್ರೀವತ್ಸ ದೇಸಾಯಿಯವರು ಈ ವೇದಿಕೆಗೆ ನನ್ನನ್ನು ಪರಿಚಯಿಸಿ, ಬಹಳ ಬೆಂಬಲವನ್ನು ಕೊಟ್ಟಿದ್ದಾರೆ. thank you.

    Sent from http://bit.ly/hsR0cS

    Like

    • ಸಂತೋಷ.
      ಉತ್ಸಾಹ ಇರುವಾಗಲೇ ಆ ವಿಷಯಗಳ ಮೇಲಿನ ಬರಹಗಳ ಭಟ್ಟಿಯನ್ನೂ ಇಳಿಸಿಬಿಡಿರಿ!
      ಶ್ರೀವತ್ಸ.

      Like

  4. Dakshayanirige
    Dhanyavadgalu.Neevu vimarshisida pustuka odalu prerane neediruviri. Yee bageya vividha Sahitya baravanigeyinda namma KSVV. Prgatiyaguvadu khandita.Namma Sahitya abhimanigalalli,vividha skhetregalalli prarangitaragiddudu shlaghaneeyadu.
    Aravind

    Like

  5. ಈ ವೇದಿಕೆಯ ಮೊದಲ ಪುಸ್ತಕ ವಿಮರ್ಶೆ ನಿಮ್ಮಿಂದ ಪ್ರಾರಭ. ಮುಂದೆಯೂ ಅವು ಬರಲಿ, ಬರುತ್ತವೆ. ಇವು ಓದಲಿಕ್ಕೆ ಹುರಿದುಂಬಿಸುತ್ತವೆ. ಕನ್ನಡದ ಬಗೆಗಿನ ಕಳಕಳಿ ( ಮೇಲೆ ಕಂಡಂತೆ) ಹೊರಗಿನವರಿಗೆ ಹೆಚ್ಚೇನೋ. ಇನ್ನಷ್ಟು ಬರಹ ಬರಲಿದೆ ನಿಮ್ಮ ‘ಲೇಖನಿ’ ಯಿಂದ!

    Like

  6. ದಾಕ್ಷಾಯಣಿ ನಿಮ್ಮ ವಿಮರ್ಶೆ ಖಲೀದ್ ಹೊಸ್ಸೇನಿಯವರ ಮತ್ತೊಂದು ಪುಸ್ತಕ ”ದಿ ಕೈಟ್ ರನ್ನರ್” ಪುಸ್ತಕದ ನೆನಪನ್ನು ತಿಂದಿತು. ಖಂಡಿತಾ ನೀವು ವಿಮರ್ಷಿಸಿರುವ ಪುಸ್ತಕವನ್ನೂ ಓದಲು ಪ್ರಯತ್ನಿಸುವೆ. ಆಫ಼್ಘಾನಿಸ್ತಾನ ಕಳೆದ ೧೩ ವರ್ಷಗಳ ಯುದ್ಧವಲ್ಲದೇ, ೮೦ರ ದಶಕದಿಂದಲೂ, ರಶ್ಯನ್ನರ ದಾಳಿಯಲ್ಲಿ ಸಿಲುಕಿ ಬೆಂದಿದೆ. ಮಹಿಳೆಯರ ಜೀವನವಂತೂ ಬಹು ದುಸ್ತರವಾಗಿದೆ. ಇಂತಹ ಸನ್ನಿವೇಶಗಳನ್ನು, ಹೊಸ್ಸೇನಿಯವರ ಪುಸ್ತಕಗಳಲ್ಲಿ ಬಹಳ ಚೆನ್ನಾಗಿ ವಿವರಿಸಲಾಗಿದೆ. ನಮ್ಮ ದೇಶಗಳ ಮೂಲದ ಈ ಹೊಸ ಅಲೆಯ ಬರಹಗಾರರು ತಮ್ಮ ಪುಸ್ತಕಗಳಲ್ಲಿ, ನಮ್ಮ ದೇಶ ಮತ್ತು ಸಂಸ್ಕೃತಿಯ ಬಗ್ಗೆ ಹೊಸ ಆಯಾಮವನ್ನೇ ಸೃಷ್ಟಿಸಿದ್ದಾರೆ ಎಂದು ನನ್ನ ಅನಿಸಿಕೆ. ನೀವು
    ಜುಂಪಾ ಲಹಿರಿ, ಕಿರಣ್ ದೇಸಾಯಿ, ವಿಕ್ರಮ್ ಸೇಟ್, ದೀಪಕ್ ಚೋಪ್ರಾ ಅವರ ಪುಸ್ತಕಗಳಲ್ಲೂ ಇಂತಹುದೇ ಅನುಭವಗಳನ್ನು ಕಾಣಬಹುದಾಗಿದೆ. ಈ ಅಲೆಯ ಬರಹಗಾರರಂತೆ, ಒಂದು ದಿನ ನಮ್ಮ ಅನಿವಾಸಿ ಕನ್ನಡ ಬರಹಗಾರರೂ, ಇಂತಹುದೇ ಉತ್ತಮ ಬರಹಗಳನ್ನು ಕನ್ನಡದಲ್ಲಿ ಸೃಷ್ಟಿಸುವರೆಂದು ಆಶಿಸುವೆ.
    ಉಮಾ ವೆಂಕಟೆಶ್

    Like

  7. ದಾಕ್ಷಾಯಿಣಿಯವರೆ,
    ಹೊಸ ಪುಸ್ತಕದ ವಿಮರ್ಶೆಯ ಹಿನ್ನೆಲೆಯಲ್ಲಿ ಹಲವು ವಿಚಾರಗಳ ವಿಶ್ಲೇಷಣೆ ಬಹಳ ಚೆನ್ನಾಗಿದೆ. ನನಗೆ ಕನ್ನಡೇತರ ಲೇಖಕರ ಪರಿಚಯ ಕಡಿಮೆ.ಇಂತಹ ಲೇಖನಗಳು ನಮ್ಮನ್ನು ಓದಲು ಪ್ರಚೋದಿಸುವಲ್ಲಿ ಸಂದೇಹವಿಲ್ಲ. ಕನ್ನಡವನ್ನು ಕನ್ನಡಿಗರೇ ಕಡೆಗಣಿಸಿದರೆ ಕಡೆಗುಳಿಯುವುದು ಅದರ ನೆನಪೊಂದೆ. ನಿಮ್ಮ ಕಳಕಳಿ ನನ್ನದೂ ಸಹ.
    ಇನ್ನೂ ಬಹಳ ಬರೆಯುತ್ತಿರಿ.
    ಸುದರ್ಶನ ಗುರುರಾಜರಾವ್

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.