ಹುಡುಗ ಮತ್ತು ಮರ – ಸುದರ್ಶನ ಗುರುರಾಜರಾವ್ ಬರೆದ ಕಥನ ಕವನ

’’ಕೊಟ್ಟದ್ದು ತನಗೆ-ಬಚ್ಚಿಟ್ಟದ್ದು ಪರರಿಗೆ ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ” ಹಾಡನ್ನು ಎಲ್ಲರೂ ಕೇಳಿರಬಹುದು. ಪಿ.ಬಿ.ಶ್ರೀನಿವಾಸರ ಸಿರಿಕಂಠದಲ್ಲಿ ಮೂಡಿ ಬಂದ ಹಾಡು ಸುಂದರ ಹಾಗೂ ಮಧುರ. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಈ ಹಾಡಿನ ಅರ್ಥವನ್ನು ನಾನೊಮ್ಮೆ ೬-೭ ವಯಸ್ಸಿನಲ್ಲಿ ನನ್ನ ತಾಯಿಗೆ ಕೇಳಿದಾಗ ಆಕೆ ಒಂದು ಮರ ಹಾಗೂ ಹುಡುಗನ ನಡುವೆ ನಡೆದ ಈ ಕಥೆಯನ್ನು ಹೇಳಿದ್ದಳು. ನನ್ನ ಮಕ್ಕಳಿಗೆ ಒಮ್ಮೆ ಅದೇ ಕಥೆಯನ್ನು ಹೇಳುವಾಗ ಇದನ್ನು ಕವಿತೆಯ ರೂಪದಲ್ಲಿ ಬರೆಯಬಾರದೇಕೆಂದಿನಿಸಿ ಕವನೀಕರಿಸುವೆ ಪ್ರಯತ್ನ ಮಾಡಿದ್ದೇನೆ.

ನಾನು ಇದು ಭಾರತದ/ಕರ್ನಾಟಕದಲ್ಲಿ ಪ್ರಚಲಿತವಿರುವ ಕಥೆ ಎಂದೇ ಇಲ್ಲಿಯವರೆಗೂ ನಂಬಿದ್ದೆ, ಏಕೆಂದರೆ ನನ್ನ ತಾಯಿ ಇಂಗ್ಲೀಷನ್ನು ಹೆಚ್ಚು ಓದಿದವಳಲ್ಲ. ಆದರೆ ಇದು ಅಮೇರಿಕಾದ ಕವಿ ಶೆಲ್ ಸಿಲ್ವೆರ್ಸ್ಟೀನ್ ಎಂಬಾತ ಇದನ್ನು ಇಂಗ್ಲೀಷಿನಲ್ಲಿ ಬರೆದದ್ದನ್ನು ನನ್ನ ಗಮನಕ್ಕೆ ಕೇಶವ್ ತಂದದ್ದು ಒಳ್ಳೆಯದಾಯಿತು. ಈ ಕವನದ ಹೆಗ್ಗಳಿಕೆ ಅವನಿಗೇ ಸಲ್ಲಬೇಕು; ’’ The Giving Tree’’ ಎಂಬುದು ಅವನ ಕವಿತೆಯ ಹೆಸರು. ಅದು ತಿಳಿದ ನಂತರ ಈ ಕವಿತೆಯ ಶೀರ್ಷಿಕೆ ” ಕಲ್ಪವೃಕ್ಷ” ಎಂದೇಕೆ ಇಡಬಾರದೆಂದು ನನಗನಿಸಿದರೂ ನನ್ನ ಹಳೆಯ ಶೀರ್ಷಿಕೆಯನ್ನೆ ಮುಂದುವರಿಸಲು ನನ್ನ ಹೃದಯ ಹೇಳಿದ್ದರಿಂದ ಅದನ್ನೇ ಮುಂದುವರಿಸಿದ್ದೇನೆ. ನಾನು ಈ ಕವನವನ್ನು ಬರೆದಾಗ ಇದಕ್ಕೊಂದು ಮೂಲ ಕವನ ಇದೆ ಎನ್ನುವುದೇ ಗೊತ್ತಿರಲಿಲ್ಲ. ಹಾಗಾಗಿ ಈ ಕವನ ಅನುವಾದವಲ್ಲ, ಭಾವಾನುವಾದ ಎನ್ನಬಹುದು.

CC- Wiki

ಹುಡುಗ ಮತ್ತು ಮರ

ಬೆಟ್ಟದಾ ತಪ್ಪಲಲಿ ಸುಂದರ ಬಯಲೊಂದು
ಬಯಲ ಮಧ್ಯದಲಿತ್ತು ಒಂದು ಮರವು
ಕೂಗಳತೆ ದೂರದಲಿ ಪುಟ್ಟದೊಂದು ಮನೆಯು
ಮನೆಯ ಕಣ್ಮಣಿಯಾಗಿ ಗಂಡು ಮಗುವು

ತಂದೆ ತಾಯಿಯರೆಂದು ಹೊಲದಲ್ಲಿ ದುಡಿದಿರಲು
ದುಡಿಯುವಾ ಸಮಯದಲಿ ಪುಟ್ಟ ಮಗುವು
ಮರದ ಬಳಿಯಲಿ ಬಂದು ಆಟವಾಡುತಲಿರಲು
ಆಟ ಪಾಠವ ಕಂಡು ನಲಿದು ಮರವು

ತನ್ನ ಮೌನವ ಮುರಿದು ಮಾತುಗಳನಾಡುತಲಿ
ಮಾತು ಬಾರದ ಕಂದಗದನು ಕಲಿಸಿ
ಹಸಿವಿಂದ ಮಗುವೆಂದು ಬಳಲಿದರೆ ಅದ ಕಂಡು
ಬಳಲಿಕೆಯ ಮರೆಸುಸುವುದು ಹಣ್ಣ ತಿನಿಸಿ

ದಿನಮಾಸ ಉರುಳಿರಲು ಮಗುವು ತಾ ಬೆಳೆದಿರಲು
ಬೆಳೆವ ಮಗುವನು ಕಂಡು ಮರವು ನಲಿದು
ಮಗುವಿಗೀಯುತ ನೆರಳು ಹಣ್ಣು ಬಲು ರುಚಿಯಿರಲು
ಬೆಳೆಸಿತ್ತು ತನ್ನೆದೆಯ ಸಾರ ಬಸಿದು

ಬೆಳೆದ ಬಾಲಕನಾಗಿ ಮರದ ಬಳಿ ಬಂದೊಂದು
ದಿನ ಮುಖವ ಬಾಡಿಸುತ ಕುಳಿತು ಕೊಳಲು
ದುಗುಡ ತಾಳಿದ ಮರವು ಬಾಲಕನ ಬೇಸರಕೆ
ಕಾರಣವು ಏನೆಂದು ತಾ ಕೇಳಲು

ಹಣ್ಣುಗಳು ಸಾಕಾಯ್ತು ತಿಂದು ಬೇಸರವಾಯ್ತು
ಬರಿಮಾತು ನಿನ್ನೊಡನೆ ದಿನವೆಲ್ಲವೂ
ದಿನ ದಿನಕು ಹೊಸ ಆಟ ಪಾಠಗಳು ಬೇಕೆಂದು
ಪರಿತಪಿಸಿ ಕಾಡುತಿದೆ ನನ್ನ ಮನವು

ಬಾಲಕನ ಅಭಿಲಾಷೆಯನ್ನು ಮರ ಅರಿಯುತಲಿ
ಅರಿಕೆ ಮಾಡಿತು ಅವಗೆ ಪ್ರೀತಿಯಿಂದ
ನನ್ನ ಕೊಂಬೆಗೆ ಗಟ್ಟಿ ಹಗ್ಗವನು ನೀ ಕಟ್ಟಿ
ಆಡುತಿರು ಉಯ್ಯಾಲೆ ಹರುಷದಿಂದ

ಮರದ ತ್ಯಾಗದ ಅರಿವಿ ಇಲ್ಲದೆಯೆ ಬಾಲಕನು
ಸುಖಕಾಗಿ ವೃಕ್ಷದಾ ತೋಳನ್ನು ಬಳಸಿ
ಉಯ್ಯಾಲೆಯಲಿ ಕುಳಿತು ಆಡಿದನು ತೂಗಿದನು
ದೇಹ ಮನಸುಗಳನ್ನು ಏರಿಸುತ ಇಳಿಸಿ

ರೆಂಬೆ ಕೊಂಬೆಗಳೆಲ್ಲ ಜಗ್ಗಿ ಮೈ ನೋವಾಗಿ
ನಲುಗಿತದು ಮರ ತಾನು ದಿನರಾತ್ರಿಯು
ಮರದ ಪರಿವೆಯೆ ಇರದ ಬಾಲಕನು ಅನುದಿನವು
ಆಡುತಲಿ ನಲಿದಿದ್ದ ಪ್ರತಿಬಾರಿಯು

ಋತು ಚಕ್ರಗಳು ಉರುಳಿ ಕುಡಿ ಮೀಸೆಯದು ಚಿಗುರಿ
ಬಾಲಕನು ಬೆಳೆದಾದ ನವತರುಣನು
ಆಟ ಪಾಠಗಳವಗೆ ರುಚಿಸದಿರೆ ಮರದೊಡನೆ
ಆಗ್ರಹದಿ ಹಣಕಾಗಿ ಕೇಳುತಿಹನು

ನನ್ನ ಬಳಿ ಬಹಳಿರುವ ಹಣ್ಣುಗಳ ನೀ ಕೊಯ್ದು
ಪಟ್ಟಣಕೆ ಕೊಂಡೊಯ್ದು ವಿಕ್ರಯಿಸಲು
ಸಿಗಬಹುದು ಬಹಳ ಹಣ ನೀ ಒಂದು ಕೈ ನೋಡು
ಎಂದು ಆ ಮರಹೇಳಿ ಸಂಭ್ರಮಿಸಲು

ಹಣ್ಣುಗಳ ಕೊಯ್ಯುತಲಿ ಯುವಕ ತಾ ತವಕದಲಿ
ಕೊಂಡೊಯ್ದ ಪಟ್ಟಣಕೆ ಮಾರಿ ಬರಲು
ಹಣಗಳಿಸಿ ಮರಳಿದನು ಸಿಹಿತಿನಿಸು ತಿನ್ನುತಲಿ
ಮರಕೇನು ಬೇಕೆಂದು ಕೇಳದಿರಲು

ತನಗೇನು ಬೇಕಿಲ್ಲ ಭೂ ತಾಯಿ ಪೊರೆದಿಹಳು
ನೀನು ಸಂತಸ ಪಡಲು ನನಗೆ ಸಾಕು
ಗೆಳೆಯನಾ ಸುಖವೆನ್ನ ಸುಖದಂತೆ ಸಂಭ್ರಮಿಸಿ
ಮರಗಳಿಸಿ ಪುಣ್ಯವನು ಇಹಕು ಪರಕು

ಯುವಕಗಾಯಿತು ಮದುವೆ ಮುಂದೆ ಮಕ್ಕಳುಗಳು
ಸಂಸಾರ ಬೆಳೆದಿತ್ತು ದೊಡ್ಡದಾಗಿ
ಮನೆ ಚಿಕ್ಕದೆನಿಸಿರಲು ವಿಸ್ತರಿಸೆ ಮನೆಯನ್ನು
ಕೇಳಿದನು ಮರದ ಬಳಿ ಹಲಗೆಗಾಗಿ

ಕೆಳಗಿನಾ ಕೊಂಬೆಗಳು ಅಗಲ ಇರುವವು ಬಹಳ
ನೀ ಕಡಿಯೆ ಸಿಗುವವು ಬಹಳ ಹಲಗೆ
ಮನೆ ದೊಡ್ಡದಾದಂತೆ ಮನಸು ಮುದುಡುವುದೆಂಬ
ಮಾತನ್ನು ಮರೆಯಬೇಡೆಂದು ಕೊನೆಗೆ

ವಾರ ಮಾಸಗಳಾಗಿ ಯುವಕನಾ ಕುರುಹಿರದೆ
ಒಂದು ದಿನ ಕುಳಿತನವ ಮರದೆಡೆಗೆ ಬಂದು
ಜೋಲು ಮೋರೆಯ ಕಂಡು ಮರವು ತಾ ಬಲು ನೊಂದು
ಕೇಳಿರಲು ಅವನ ಕ್ಲೇಶವದೇನೆಂದು

ಖರ್ಚು ಬೆಳೆಯುತಲಿಹುದು ನಿನ್ನ ಹಣ್ಣುಗಳಿಂದ
ನೀಸದಾಗದು ನನ್ನ ಸಂಸಾರವನ್ನು
ಕೊಡು ನಿನ್ನ ಬೊಡ್ಡೆಯನು ನಾ ಕಟ್ಟಿ ಹಡಗನ್ನು
ದುಡಿಯುತಲಿ ಮಾಡುವೆನು ವ್ಯಾಪಾರವನ್ನು

ಇಷ್ಟು ಮಾಡಿದ ನಾನು ಅಷ್ಟನ್ನೂ ಮಾಡದಿರೆ
ನಮ್ಮ ಸ್ನೇಹಕೆ ಇರುವ ಅರ್ಥವೇನು
ಕಡಿದು ನೀ ನನ್ನನ್ನು ಕಟ್ಟು ಕನಸಿನ ಹಡಗು
ದುಡಿದು ನೀ ಅನುಭವಿಸು ಸಿರಿತನವನು

ವರ್ಷಗಳು ಉರುಳಿದವು ಯುವಕ ಮರಳಿದ
ಮನೆಗೆ ಗಳಿಸುತ್ತ ಅಪಾರ ಧನರಾಶಿಯ
ಸಂಸಾರದೊಡಗೂಡಿ ಅನುಭವಿಸಿ ಸಿರಿತನವ
ಮರೆತಿರಲು ತ್ಯಾಗಮಯಿ ಮರದ ಇರುವ

ವೃಧ್ಧಾಪ್ಯ ಆವರಿಸಿ ದೇಹ ತಾ ಹಣ್ಣಾಗಿ
ಹೆಂಡತಿಯು ತ್ಯಜಿಸಿರಲು ಇಹಲೋಕವ
ಮಕ್ಕಳೆಲ್ಲರು ತಮ್ಮ ವ್ಯವಹಾರದಲಿ ಮುಳುಗಿ
ಕೆಡೆಗಣಿಸಿರಲು ಈ ಮುದುಕನಿರುವ

ಒಂಟಿತನವದು ಕಾಡಿ ಮನಸು ಮುದುಡುತಲಿರಲು
ಆಗಾಯ್ತು ಅವನಿಗಾ ಮರದ ನೆನಪು
ಮನದಲ್ಲಿ ಬೆಳಕೊಂದು ಹೊಳೆದಂತೆ ನಡೆದಿರಲು
ಹೆಜ್ಜೆಗಳಿಗಂದಿತ್ತು ಹೊಸದೆ ಹುರುಪು

ಕತ್ತರೈಸಿದಾ ಬೊಡ್ಡೆ ಹಾಗೆಯೇ ಉಳಿದಿತ್ತು
ಕುಳಿತುಕೊಳ್ಳಲು ಕಲ್ಲು ಹಾಸಿನಂತೆ
ಮುದುಕನನು ಕಂಡಾಗ ನಸು ನಗುತ
ಸ್ವಾಗತಿಸಿ ಹೇಳಿತ್ತು ತನಮೇಲೆ ಕುಳ್ಳುವಂತೆ

ಕೊಡುವುದನು ಕಲಿಯದಲೆ ಬರಿದೆ ಕೇಳುತ ತನ್ನ
ಜೀವನವನ್ನೆಲ್ಲ ಬಸಿದ ಮುದುಕ
ಒಂದು ಘಳಿಗೆಯು ತನ್ನ ಮನದಲ್ಲಿ ಸಂತೋಷ
ಅನುಭವಿಸದೆಯೆ ಕಳೆದ ತನ್ನ ಬದುಕ

ಪರರ ಬೇಡಿಕೆಗಳಿಗೆಂದು ಸ್ಪಂದಿಸುತ ತನ್ನ
ತಾನೇ ಅವಗೆ ಧಾರೆ ಎರೆದು
ಮರತಾನು ಬದುಕಿತ್ತು ಬೊಡ್ಡೆಯಾ ಸ್ಥಿತಿಯಲ್ಲಿ
ಜಗದೆಲ್ಲ ಸಂತೋಷ ಸೂರೆ ಹೊಡೆದು.!!

(Shel Silverstein ಬರೆದ ಮೂಲ ಕವನ ಇಲ್ಲಿದೆ: ಇಲ್ಲಿ ಒತ್ತಿ)

7 thoughts on “ಹುಡುಗ ಮತ್ತು ಮರ – ಸುದರ್ಶನ ಗುರುರಾಜರಾವ್ ಬರೆದ ಕಥನ ಕವನ

 1. I have attempted to translate the poem ‘Tree’ written by Harsha Aanand. Here it is if it gets pasted correctly:-

  ವೃಕ್ಷ

  – ಹರ್ಷ ಆನಂದ್

  (ಕನ್ನಡಕ್ಕೆ ಅನುವಾದ- ರಾಜಾರಾಂ ಕಾವಳೆ)

  ತಂಗಾಳಿಗೆ ಓಲಾಡುವೆನು
  ಗಮನಿಸರು ಈ ಜನತೆಯು,
  ಎರಗುವರು ಸದಾ ಮೇಲೆನ್ನ
  ಹಿಂಬದಿಯಿಂ ಕಳೆಯ ಕಳೆಚುವರು ಅವರು.

  ಗತಕಾಲದಿಂ ಇಲ್ಲ ನಾನಿಲ್ಲಿ, ಆದರೂ
  ಅದೆಷ್ಟೋ ಕಣ್ಣಿರ ಸೂಸಿರುವೆ ನಾನು,
  ನನ್ನ ಸಂತತಿಯ ಮೊಟಕುಗೊಳಿಸುವುದ
  ಕಂಡು ಬಹು ಖಿನ್ನಗೊಂಡಿರುವೆ ನಾನು.

  ಅದೆಷ್ಟು ಮನೆಗಳಿಲ್ಲಿವೆ;
  ಅದೆಷ್ಟು ಜನ ಸೇವಿಸುವರು ಪಾನೀಯವನು!
  ಅವರಿಗೆಲ್ಲಿದೆ ಇರಲು ಅಷ್ಟು ಸ್ಥಳವು?
  ಕಳಿಸುವರು ನಮ್ಮನು ಕಡಿದು ಪರನಾಡಿಗೆ.

  ಇದ್ದಿತು ಒಂದುಕಾಲದಲಿ ಈ ಭೂಮಿಯು
  ನಮ್ಮಂಥಹ ಮರಗಳ ತುಂಬಿ,
  ಕಳಚುವರು ಸುಲಿದು ಕವಚಗಳ ನಮ್ಮ
  ಕೊಡುವುದೆಮಗೆ ಅದು ಶೀತ ಕೆಮ್ಮ.

  ಸರಿ ನಾನಿನ್ನು ಹೊರಡುವುದು ಅನಿವಾರ್ಯ
  ಯಾವಜಾಗಕೆಂದು ನಾ ಕಾಣೆ,
  ಈ ಪದಗಳಿರುವ ಹಾಳೆಯೇ
  ನಾನದೋ ಈ ಗೀತೆಯಲಿರುವ ವೃಕ್ಷ.

  Like

 2. I remember an English poem written by Harsha Anand (son of Anand Keshavmurthy?) some time ago that he sent to Kannada Balaga UK for publication in a souvenir or newsletter and it went out of sight and so out of mind and was not published. I searched my computer and found a copy of it again. I think it is still worth printing in one of the futer edition of ‘Sandesha’. This poem ‘The Tree’ by Harsha Anand has a striking similarity to the poem ‘the tree and the boy ‘ written by Shel Silverstein’.

  The Tree- By Harsha Anand

  I sway in the breeze,
  People don’t notice me.
  I always get climbed,
  And weed on from behind.

  I haven’t been here for years,
  And yet I have cried so many tears.
  The way they cut down my family,
  Deeply saddens me.

  So many houses are here,
  And lots of people drink beer.
  They don’t have enough space,
  So they cut us down and send us to another place.

  This earth use to be,
  Full of us trees.
  Our armour they peel of,
  It gives us a cough.

  And now I must go,
  To a place I’ll never know.
  And the paper these words are on,
  It’s me the tree in the song.

  Like

 3. ಸುದರ್ಷನ್ ನಿಮ್ಮ ಕವನದ ಆಂಗ್ಲಭಾಷೆಯ ಮೂಲ ಕವನವನ್ನೂ ಓದಿದೆ. ಎರಡು ಭಾಷೆಗಳಲ್ಲಿ ಇದರ ಸೊಗಸನ್ನು ಸವಿಯಲು ಸಾಧ್ಯವಾಯಿತು. ಮೂಲವನ್ನು ಹುಡುಕಿ ಅದನ್ನು ಇಲ್ಲಿ ನಮಗೆ ಓದಲು ಅನುವು ಮಾಡಿಕೊಟ್ಟ ಕೇಶವ್ ಅವರಿಗೂ ನನ್ನ ಧನ್ಯವಾದಗಳು. ನಿಮ್ಮ ಕವನ ಓದಿದ ನಂತರ ರಾಜಕುಮಾರ್ ನಟಿಸಿರುವ ಕಸ್ತೂರಿ ನಿವಾಸದ ಚಿತ್ರವೂ ನೆನಪಿಗೆ ಬಂತು. ತಾನು ಸಾಯುವವರೆಗೂ ತನ್ನಲ್ಲಿರುವ ಎಲ್ಲವನ್ನೂ ದಾನ ಮಾಡಿದ ಮುಖ್ಯ ಪಾತ್ರ ಈ ಮರವನ್ನೇ ಹೋಲುತ್ತದೆ. ಸದಾ ಕಾಲ ಇತರರಿಗೆ ಆಶ್ರಯವನ್ನೇ ಒದಗಿಸುವ ತ್ಯಾಗಮಯಿ ಆತ್ಮ.
  ಉಮಾ ವೆಂಕಟೇಶ್.

  Like

 4. ಮಾನವನ ಗುಣ, ವಿಚಾರಗಳು ಜಗತ್ತಿನಾದ್ಯಂತ ಒಂದೇ ತರಹ ವಿವಿಧ ರೀತಿಯಲ್ಲಿ ಹೇಗೆ ವ್ಯಕ್ತವಾಗುತ್ತದೆ ಎನ್ನುವುದಕ್ಕೆ ನಿಮ್ಮ ಸುಂದರ ಕವನಕ್ಕೆ ಸ್ಫೂರ್ತಿಯಾದ ನಿಮ್ಮಮ್ಮನ ಕಥೆ ಹಾಗೂ ಕೇಶವ ಕಳಿಸಿರುವ ಕವನಗಳೆರಡೂ ದ್ಯೋತಕ.

  Like

 5. “ಮರತಾನು ಬದುಕಿತ್ತು ಬೊಡ್ಡೆಯಾ ಸ್ಥಿತಿಯಲ್ಲಿ
  ಜಗದೆಲ್ಲ ಸಂತೋಷ ಸೂರೆ ಹೊಡೆದು.!!”
  ಸುಂದರ ಕವನದ ಮಾರ್ಮಿಕ ಸಾಲುಗಳು. ಅದಕ್ಕೆ ಇದನ್ನು ಜೋಡಿಸುವಾ!
  ಮರ್ ತಾನ ಮುದುಕ ಕೊಡುವುದನ
  ಮರ ಮರ ಮರುಗುತ್ತ ಕುಂತಾನ!
  ಮೂಲ, ಗದ್ಯ ಪದ್ಯದಂತಿದೆ. ನೀವು ನಿಮ್ಮದೇ ಶೈಲಿಯಲ್ಲಿ ಇನ್ನೂ ಚಂದ ಮಾಡಿದಿರಿ. ನಿಮ್ಮಿಬ್ಬರಿಗೂ (K K ಸಹಿತ ) ಶಭಾಷ್ !
  ಮಕ್ಕಳ ಪಠ್ಯಪುಸ್ತಕದಲ್ಲಷ್ಟೇ ಅಲ್ಲ ಎಲ್ಲರೂ ಓದಿ ಕಲಿಯ ಬೇಕಾದದ್ದು. ಮತ್ತೊಮ್ಮೆ ಧನ್ಯವಾದಗಳು ಸುದರ್ಶನ ಗುರುರಾಜ ಅವರೆ, ಎಲ್ಲರಿಗೂ ಪರಿಚಯ ಮಾಡಿಸಿದ್ದಕ್ಕೆ. ಇದಕ್ಕೆ ಹುಡುಗ ಮತ್ತು ಕವನ ಅನ್ನ ಬಹುದು!
  ಶ್ರೀವತ್ಸ

  Like

 6. ನೀವು ಈ ಕವನೆವನ್ನು ಬರೆದಾಗ ನನಗೆ ಈ ಕವನದ ಮೂಲ ಕವನ ನೆನಪಾಯಿತು. ಗೂಗಲಿಸಿದೆ, ಸಿಕ್ಕೂ ಬಿಟ್ಟಿತು. ಆಶ್ಚರ್ಯವೆಂದರೆ ನಿಮಗೆ ಈ ಕವಿತೆ ಇರುವುದು ಗೊತ್ತಿಲ್ಲದೇ ಇರುವುದು. ಈ ಕವನದ ಕತೆಯನ್ನು ನಿಮ್ಮ ತಾಯಿ ನೀವು ಚಿಕ್ಕವರಿದ್ದಾಗ ಹೇಳಿದ್ದು, ಅದಕ್ಕೆ ಪದ್ಯರೂಪ ತಂದಿದ್ದು ಓದಿ ತುಂಬ ಖುಶಿಯಾಯಿತು. ನಿಮ್ಮ ಕವನ ಸೊಗಸಾಗಿ ಮೂಡಿಬಂದಿದೆ.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.