ಸಾಹಸ (ಅತಿಸಾಹಸ) ಕ್ರೀಡೆಗಳ ಹೊರ ಮೈ, ಒಳಮನಸ್ಸು

ಇಂಗ್ಲೆಂಡ್ ಮತ್ತು ಯುರೋಪಿನಲ್ಲಿ ಈಗ ವಸಂತಮಾಸ ಶುರುವಾಗಿದೆ. ಹಿಮಕಾಲುಜಾರು (skiing), ಹಿಮಹಲಗೆಯ ಜಾರು Image result for extreme sports(snowboarding), ಹಿಮಬಂಡಿಜಾರು (sledging) ಮುಂತಾದ ಹಿಮಸಾಹಸ ಕ್ರೀಡೆಗಳ ಋತುವಿಗೆ ಪರದೆ ಬಿದ್ದಿದೆ. ಜನರು ಮತ್ತೊಂದು ರೀತಿಯ ಸಾಹಸ ಕ್ರೀಡೆಗಳಿಗೆ ಸಜ್ಜಾಗುತ್ತಿದ್ದಾರೆ. ಅವು ಪರ್ವತ ಕಾಲುಬಂಡಿ (mountain biking), ನದಿನೀರಿನ ಕಯಕಿಂಗ್ (whitewater kayaking), ತೆಪ್ಪದಾಟ (rafting), ಪರ್ವತದ ಮೇಲು ಮತ್ತು ಕೆಳ ಓಡುವಿಕೆ (mountain trail running), ಪರ್ವತ ಚಾರಣ (trekking) … ತರತರಹದ್ದು. ನಾವೂ ಕೂಡ ನಮ್ಮ ಹಿಮಸಾಹಸ ಕ್ರೀಡೆಗಳನ್ನು ಮುಗಿಸಿಕೊಂಡು ಬಂದು ಬರಲಿರುವ ಬೇಸಗೆಯ ರಜದಲ್ಲಿ ಮೇಲೆ ಹೇಳಿದ ಕೆಲ ಸಾಹಸಕ್ರೀಡೆಗಳಿಗೆ ತಯಾರು ಮಾಡಿಕೊಳ್ಳುತ್ತಿದ್ದೀವಿ. ನಿಮ್ಮ ಕುಟುಂಬದಲ್ಲೂ, ನೀವೂ ಕೂಡ ಸಾಹಸ ಕ್ರೀಡೆಗಳ ಪ್ರಿಯರಾಗಿರಬಹುದು.

 

ಏನೀ ಸಾಹಸ ಕ್ರೀಡೆ (adventure sports) ಗಳೆಂದರೆ? ಹಾಗೆ ಕೆಲವರು ಮಾತನಾಡುವ ಅತಿಸಾಹಸ ಕ್ರೀಡೆಗಳು (extreme sports) ಎಂದರೆ ಏನು?  ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.

 

ದೃಶ್ಯ ೧: ಬೆಂಗಳೂರಿನಿಂದ ಹೊರಟ ಆ ಆರು ಯುವಕರು/ಯುವತಿಯರು ವಾರಾಂತ್ಯದ ಜೊತೆಗೆ ಸಿಕ್ಕಿರುವ ಎರಡು ದಿನಗಳ ಹೆಚ್ಚುವರಿ ರಜೆಯನ್ನು ಸೇರಿಸಿ ನಾಲ್ಕು ದಿನಗಳ ಕಾಲ ಇಡಿಯಾಗಿ ಸಾಹಸ ಕ್ರೀಡೆಗಳಲ್ಲಿ (adventure sports) ತೊಡಗಿಸಿಕೊಳ್ಳುವ ಸೂಕ್ತ ಯೋಜನೆಯನ್ನೇ ಹೊಂದಿದ್ದರು. ದಾಂಡೇಲಿಯ ಕಾಳಿ ನದಿಯಲ್ಲಿ ಪ್ರವಾಹದ ಜೊತೆ ಬಳುಕಿ ಬಳುಕಿ ಜಾರುತ್ತಿರುವ ತೆಪ್ಪ. ನದಿಯ ನೀರಿಗುಂಟ ಸಾಗುತ್ತಿರುವ ಆರು ಸಾಹಸಿಗರು. ಜೊತೆಗೆ ಒಬ್ಬ ಮಾರ್ಗದರ್ಶಕ. ಎಲ್ಲರೂ ಜೀವರಕ್ಷಕ ಎದೆಕವಚವನ್ನು ಧರಿಸಿದ್ದಾರೆ. Image result for extreme sportsತೆಪ್ಪದ ಮೇಲೆ ಕಾಲಿಡುವ ಮುನ್ನ ಎಲ್ಲಾ ರೀತಿಯ ಸೂಚನೆಗಳನ್ನೂ ಪಡೆದು ನದಿ ತೆಪ್ಪ ಸಾಹಸ ಕ್ರೀಡೆ ಅಂದರೆ ಏನು, ಯಾವ ರೀತಿಯ ಅನುಭವವನ್ನು ಅದು ಕೊಡುತ್ತದೆ, ಯಾವ ಯಾವ ಗಂಡಾಂತರಗಳನ್ನು,  ಅಪಾಯಗಳನ್ನು ಒಳಗೊಂಡಿದೆ ಎಂದೆಲ್ಲ ತಾವೇ ಸ್ವತಹ ಸಾಕಷ್ಟು ವಿಷಯ ಸಂಗ್ರಹದಿಂದ ತಯಾರಾಗಿದ್ದು ಅಲ್ಲದೆ ತಾವು ಹಣ ಕೊಟ್ಟು ಆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಯೋಜಿಸಿರುವ ಸಂಸ್ಥೆಯಿಂದಲೂ ಸೂಕ್ತ ಮಾರ್ಗದರ್ಶನವನ್ನು ಪಡೆದಿದ್ದಾರೆ. ಸಾಗುತ್ತಾ ಜಾರುತ್ತಾ  ಆ ನದಿ ತೆಪ್ಪದಾಟದ ರೋಚಕ ಅನುಭವ ತೆಪ್ಪದ ಮೇಲಿರುವ ಆರು ಜನರಿಗೂ ಜೀವನದಲ್ಲಿ ಮರೆಯಲಾಗದಂಥದ್ದು. ನದಿ ತೆಪ್ಪದಾಟದ ನಂತರ ಉತ್ತರ ಕನ್ನಡ ಜಿಲ್ಲೆಯ ಮನಮೋಹಕ ಪಶ್ಚಿಮಘಟ್ಟಗಳ ಚಾರಣವನ್ನು ಕೈಗೊಳ್ಳುತ್ತಾರೆ. ಮಧ್ಯದಲ್ಲಿ ಅಲ್ಲೆಲ್ಲೋ ಕಿರುದೋಣಿ ಪ್ರವಾಸವನ್ನು (kayaking) ಕೈಗೊಳ್ಳುತ್ತಾರೆ. ಮತ್ತೊಂದು ಕಡೆ ನಿಂತು ಅವರಲ್ಲಿ ಮೂವರು ಪರ್ವತ ಕಾಲಬಂಡಿ (ಮೌಂಟನ್ ಬೈಕಿಂಗ್) ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಹೀಗೆ ಮನಸ್ಸು ತೃಪ್ತಿಯಾಗಿ, ಆತ್ಮಕ್ಕೆ ಸಂತೋಷವಾಗಿ, ಮೈಗೆ ಚೆನ್ನಾಗಿ ಕಸರತ್ತಾಗಿ ಮನೆಗೆ ಮರಳುತ್ತಾರೆ.

 

ದೃಶ್ಯ ೨: ವರ್ಷ 2014. ತಿಂಗಳು ಜನವರಿ. ಸ್ಥಳ ಸೇಲಂ, ತಮಿಳು ನಾಡು. ಹೆಸರು ರಮ್ಯ. ವಯಸ್ಸು ೨೬. ತನ್ನ ಬೋಧಕರು, ಸಹಪಾಠಿಗಳ ಜೊತೆ ಚಿಕ್ಕ ಸೆಸ್ನ ವಿಮಾನವೇರಿ ಆಕಾಶ ನೆಗೆತದಲ್ಲಿ ಪಾಲ್ಗೊಂಡ ಬೆಂಗಳೂರಿನ ರಮ್ಯ ೧೦,೦೦೦ ಅಡಿಯಿಂದ ಧುಮುಕಿ ಮಧ್ಯದಲ್ಲಿ ತನ್ನ ಗಾಳಿಕೊಡೆಯನ್ನು (ಪ್ಯಾರಚುಟ್) ಪೂರ್ತಿಯಾಗಿ ಬಿಚ್ಚಲಾಗದೆ, ಅದು ಸರಿಯಾದ ಸಮಯದಲ್ಲಿ ಬಿಚ್ಚಿಕೊಳ್ಳದೆ, ಭೂಮಿಗೆ ಬಿದ್ದು ಮೃತಪಟ್ಟರು. ಆ ಚಿಕ್ಕ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಗಂಡ ವಿನೋದ್ ತನ್ನ ಸರದಿಗೆ ಸಿದ್ಧರಾಗುತ್ತಿದ್ದರು. ಅವರ ಹಾಗೆ ಇನ್ನೂ ಹಲವಾರು ಮಂದಿ ದಿನದಿನವೂ ತಯಾರಿ ನಡೆಸಿ ಅವರ ಕನಸಿನ ಅತಿ(ತೀವ್ರ)/ಸಾಹಸ ಕ್ರೀಡೆಯ (extreme sports) ಅನುಭವವನ್ನು ಪಡೆಯಲು ಕಾತರಿಸುತ್ತಿದ್ದರು. ದುರಾದೃಷ್ಟವಶಾತ್, ವಿನೋದ್ ತಮ್ಮ ಹೆಂಡತಿ ಆಕಾಶದಿಂದ ನೆಗೆದು ನೆಲಕ್ಕೆ ತಲುಪುವ ಕೊಂಚ ಮುನ್ನವೇ ತಮ್ಮ ಸಾವಿನೆಡೆಗೆ ಬಿದ್ದದ್ದನ್ನು ಕಣ್ಣಾರೆ ನೋಡುವಂತಾಯಿತು.

 

Image result for extreme sportsಭಾರತದಲ್ಲಿ ಅಂತಹ ಅತಿ ಸಾಹಸ ಕ್ರೀಡೆಗಳ ಪರಿಸರ ಚೆನ್ನಾಗಿಲ್ಲಾ, ಬೇಕಾದ ತರಬೇತಿ ಕೊಡುವ ತರಬೇತಿದಾರರು ಮತ್ತು ಸಂಸ್ಥೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿದಲ್ಲಿರುವ ಗುಣಮಟ್ಟವನ್ನು ಹೊಂದಿಲ್ಲ, ಕಡ್ಡಾಯವಾಗಿ ಪಡೆಯಬೇಕಾದ ತರಬೇತಿ ಅವಧಿಯಲ್ಲಿ ಮತ್ತು ಅರ್ಹತಾ ಪತ್ರ ಕೊಡುವ ಸಂಸ್ಥೆಗಳಲ್ಲಿ ಇರುವ ರಾಜಕೀಯ … ಹೀಗೆ ಏನೇನೋ ವಿವಾದಗಳು ಎದ್ದವು. ಅದಕ್ಕೆ ಉತ್ತರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಹೊಂದಿ, ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವ ಬೆಂಗಳೂರಿನ ಹಲವಾರು ಅತ್ಯುತ್ತಮ ಮತ್ತು ಉತ್ತಮ ತರಬೇತಿದಾರರು ಬನ್ನಿ, ನಮ್ಮ ತರಬೇತಿಯನ್ನು ನೋಡಿ, ನಾವು ಕೆಲಸ ಮಾಡುತ್ತಿರುವುದು ಅತ್ಯಂತ ಜವಾಬ್ದಾರಿಯಿಂದ ಮತ್ತು ಅತ್ಯುತ್ತಮ ಮಟ್ಟದಿಂದ, ಒಂದು ಅವಗಢದಿಂದ ಇಡಿ ಸಾಹಸ ಮತ್ತು ಅತಿಸಾಹಸ ಕ್ರೀಡೆಗಳ ರಂಗವನ್ನೇ ಬಯ್ಯಬೇಡಿ ಎಂದು ಆಕ್ಷೇಪಣಾದಾರರಿಗೆ ಚುರುಕು ಮುಟ್ಟಿಸಿದರು.

 

ದೃಶ್ಯ ೩: ನಾನು ಒಮ್ಮೆ ಇಂಗ್ಲೆಂಡಿನ ಲೇಕ್ ಡಿಸ್ಟ್ರಿಕ್ಟ್ ನಲ್ಲಿ (Lake District) ಇರುವ Tree Tops ಸಂಸ್ಥೆ ನಡೆಸುವ ಆಕಾಶದಲ್ಲಿನ ಹಗ್ಗಗಳ ಕಸರತ್ತನ್ನು (high ropes course) ಮಾಡಿ ಆನಂದಪಟ್ಟೆ. ನನಗೆ ಸಂತೋಷವಾಗಿದ್ದು ಆ ಸಂಸ್ಥೆ ನಮಗೆಲ್ಲಾ ಹೇಗೆ ಒಂದು ಅನುಭವದ ಬಗ್ಗೆ ಮಾಹಿತಿ ಕೊಟ್ಟರು, ತಯಾರು ಮಾಡಿದರು, ನಮ್ಮನಮ್ಮ ಕ್ಷೇಮವನ್ನು ಕುರಿತು, ಎತ್ತರದ ಬಗ್ಗೆ ಕೆಲವರಿಗೆ ಇರುವ ಭಯವನ್ನು ಹೇಗೆ ಹೋಗಲಾಡಿಸಿದರು ಮತ್ತು ನಮ್ಮ ಕ್ಷೇಮಕ್ಕೆಂದೇ ಇರುವ ಸಾಧನಗಳನ್ನು, ನಮ್ಮ ದೇಹವನ್ನು ಹೇಗೆ ಆ ಸಾಧನಗಳಿಂದ ಸುರಕ್ಷಿತವಾಗಿ ಇತರ ಸಾಧನಗಳಿಗೆ ಕೊಂಡಿ ಹಾಕಿರುತ್ತಾರೆ, ಆದ್ದರಿಂದ ನಾವು ಕೈ ಬಿಟ್ಟರೂ ಕೆಳಗೆ ಬೀಳುವುದು ಸಾಧ್ಯವೇ ಇಲ್ಲ ಎಂದು ಧೈರ್ಯ ತುಂಬಿ, ಪ್ರೋತ್ಸಾಹವನ್ನು ಕೊಡುತ್ತಾರೆ ಎನ್ನುವುದು. ಮಕ್ಕಳು, ಮಹಿಳೆಯರು, ಆ ಬಗ್ಗೆ ಸುಳಿವೇ ಇಲ್ಲದವರು, ಸ್ವಲ್ಪ ಗೊತ್ತಿದ್ದವರು ಎಂಬಂತೆ ಎಲ್ಲಾರೂ ಖುಷಿಪಟ್ಟೆವು.

ಕರ್ನಾಟಕದಲ್ಲಿ ಕಳೆದ ಇಪ್ಪತ್ತು/ಹದಿನೈದು ವರ್ಷಗಳಲ್ಲಿ ಸಾಹಸ ಕ್ರೀಡೆಗಳ ಗಮ್ಮತ್ತು ಏರಿದ್ದೇ ಏರಿದ್ದು. ಎಲ್ಲಿ ನೋಡಿದರೂ ಈಗ ನಾನಾ ತರಹದ ಸಾಹಸ ಕ್ರೀಡೆಗಳು, ಅವನ್ನು ನಡೆಸುವ ಸಂಸ್ಥೆಗಳು ಇವೆ. ಕರ್ನಾಟಕದ ಪಶ್ಚಿಮ ಘಟ್ಟಗಳು, ಮನ ಮೋಹಕ ನದಿಗಳು, ವಿಶಾಲ ಹೃದಯವುಳ್ಳ ಜನರು, ಪ್ರಾಪಂಚಿಕ ಮಟ್ಟದ ಬೆಂಗಳೂರು – ಈ ಎಲ್ಲ ಅಂಶಗಳು ಸಾಹಸ ಕ್ರೀಡೆಗಳನ್ನು ಹುಟ್ಟು ಹಾಕಿ, ಬೆಳೆಸಿವೆ. ಕಾವೇರಿಯಿಂದ ಹಿಡಿದು, ಕುದುರೆಮುಖ ಸರಹದ್ದಿನಿಂದ, ಮೇಕೆದಾಟು, ರಾಮನಗರ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಘಟ್ಟಗಳು … ಒಂದೇ ಎರಡೇ, ಎಲ್ಲವೂ ಸಾಹಸಕ್ಕೆಂದೇ ಇರುವ ಸ್ವರ್ಗಗಳು. ಸ್ನೇಹಿತರಾದ ಎಸ್ ಎಲ್ ಎನ್ ಸ್ವಾಮಿ ಮತ್ತು ನೋಮಿತೋ ಕಾಮ್ದಾರ್ ಸುಮಾರು ಇಪ್ಪತೈದು ವರ್ಷಗಳಿಂದಲೂ ಹೊನ್ನೇಮರಡುವಿನಲ್ಲಿ ನದಿನೀರಿನ ತೆಪ್ಪದಾಟ, ಕಯಕಿಂಗ್ ಮುಂತಾದ ಸಾಹಸ ಕ್ರೀಡೆಗಳನ್ನು ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಜನರಲ್ ತಿಮ್ಮಯ್ಯ ಅಡ್ವೆಂಚರ್ ಸ್ಪೋರ್ಟ್ಸ್ ಅಕಾಡೆಮಿ ಮೂರು ದಶಕಗಳಿಂದಲೂ ಕೆಲಸ ಮಾಡುತ್ತಿವೆ. ಹಿಂದೆ ನಾನು ಹೋಗುತ್ತಿದ್ದ ಸ್ಪಾರ್ಕ್ (SPAARK) ಸಂಸ್ಥೆ ಕೂಡ ಇತ್ತು. ಯುಕೆ ಮತ್ತು ಯುರೋಪಗಳ ಸಾಹಸಪಟುಗಳಿಗೆ ಭಾರತದ, ಹಿಮಾಲಯದ ನದಿಗಳು ಪರ್ವತಗಳು ಎಂದರೆ ಸಕ್ಕರೆಗೆ ಇರುವೆ ಹತ್ತಿದಂತೆ. ಹಾಗೆ ಅವರುಗಳು ಪರ್ವತ ಚಾರಣವನ್ನು ಮತ್ತು ಸಾಹಸ ಕ್ರೀಡೆಗಳನ್ನು ಭಾರತ ಮತ್ತು ಮತ್ತಿತರ ದೇಶಗಳಿಗೆ ಸಾಂಪ್ರದಾಯಕವಾಗಿ, ವೈಜ್ಞಾನಿಕವಾಗಿ ಪರಿಚಯಿಸಿದರು. ಉದಾಹರಣೆಗೆ, ೧೯೯೦ರ ದಶಕದಲ್ಲಿ ಇಂಗ್ಲೆಂಡಿನಿಂದ ಕರ್ನಾಟಕಕ್ಕೆ ಹೋದ ಜಾನ್ ಪೋಲ್ಲರ್ಡ್ ಎಂಬಾತ ದಾಂಡೇಲಿಯಲ್ಲಿ ನೆಲೆ ನಿಂತು, ಕಾಳಿ ನದಿಯನ್ನು ಮನೆ ಮಾಡಿಕೊಂಡು, ಜಂಗಲ್ ಲಾಜ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡು ವೈಟ್ ವಾಟರ್ ರಾಫ್ಟಿಂಗ್ ಪರಿಚಯಿಸಿದ. ಅಲ್ಲಿಂದ ಶುರುವಾದ ನೀರಿನ ಸಾಹಸಕ್ರೀಡೆಗಳು ದಿನದಿನಕ್ಕೂ ಹೆಚ್ಚಿವೆ. ಈಗ ಕರ್ನಾಟಕದ ಬೇರೆ ಬೇರೆ ಕಡೆ ಅಡ್ವೆಂಚರ್ ಸ್ಪೋರ್ಟ್ಸ್ ಸಂಸ್ಥೆಗಳಿವೆ, ಹಾಗೆ whitewater rafting/kayaking, paragliding, parasailing, rock climbing, parachute jumping, sky diving, angling, mountain biking, zorbing, base jumping, motorcross racing, BMX, hang gliding, ಮುಂತಾದ ಸಾಹಸಕ್ರೀಡೆಗಳ ತಾಣಗಳು, ಸಂಸ್ಥೆಗಳು ಇವೆ. ಆದರಿನ್ನೂ ಪಶ್ಚಿಮ ದೇಶಗಳಲ್ಲಿ ಇರುವಂತೆ ಸಮುದ್ರದಲ್ಲಿ ಸುರಕ್ಷಿತವಾಗಿ ಸರ್ಫಿಂಗ್ (surfing) ಮಾಡಲು ಅನುಕೂಲ/ಸಂದರ್ಭಗಳು ನನಗೆ ತಿಳಿದ ಮಟ್ಟಿಗೆ ಬಹಳಷ್ಟು ಇಲ್ಲ.

 

ಈಗ ಸುಮಾರು ಮಟ್ಟದ ಸಾಹಸ ಕ್ರೀಡೆಗಳು ಬಹಳಾ ಜನಪ್ರಿಯವಾಗಿ, ವಿವಿಧ ವಯಸ್ಸಿನ ಜನರು ಪಾಲ್ಗೊಳ್ಳುವಂಥದ್ದು. ನೂರರಿಂದ ಹಿಡಿದು ಸಾವಿರಾರು, ಅದು ಯಾಕೆ, ಲಕ್ಷಾಂತರ ರೂಪಾಯಿ ಕೊಟ್ಟು ಸಾಹಸದ ಅನುಭವ ಮತ್ತು ವೈಪುಣ್ಯವನ್ನು ಪಡೆಯುತ್ತಾರೆ. ಅನೇಕ ಯುವತಿ/ಯುವಕರು ಹಾತೊರೆದು ಪಾಲ್ಗೊಳ್ಳುವ ಈ ಕ್ರೀಡೆಗಳನ್ನು ನುರಿತ ಪಟುಗಳು ಮತ್ತು ತರಬೇತಿದಾರರು ಸಂಯೋಜಿಸುತ್ತಾರೆ. ಶಾಲಾಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಈಗ ಸಾಹಸಕ್ರೀಡೆಗಳು ಲಭ್ಯವಾಗಿವೆ, ಎಟುಕುವಂತಿದೆ, ಸುಲಭವಾಗಿದೆ, ಮತ್ತು ಎಂಜಾಯ್ ಮಾಡುವಂತಿದೆ. ಬೆಂಗಳೂರಿನ ಕೆಲ ಶಾಲೆಗಳಲ್ಲಿ ಹೊರಾಂಗಣ ಶಿಕ್ಷಣದ ಕುರಿತು ಈಗ ಪಾಠದ ಅಳವಡಿಕೆಯೂ ಆಗಿದೆ.

 

ಸಾಹಸ ಕ್ರೀಡೆಗಳ ಬಗ್ಗೆ ಸಾಮಾನ್ಯ ಜನರ ಗ್ರಹಿಕೆ, ಅರ್ಥವೆಂದರೆ ಥ್ರಿಲ್ಲೋ ಥ್ರಿಲ್ಲು. ಎಲ್ಲರಿಗೂ ಎದೆ ಬಡಿತ ಹೆಚ್ಚು; ಕೂಗಾಟ, ಕಿರುಚಾಟ ನಿಲ್ಲದೆ, ಎಡಬಿಡದ ಮನರಂಜನೆ ಪಡೆಯುವುದು ಸಾಹಸ ಕ್ರೀಡೆಗಳು ಎಂದು ಎಲ್ಲರ ಭಾವನೆ. ಮತ್ತೊಂದೆಡೆ ಸಾಹಸ ಕ್ರೀಡಾಳುಪಟುಗಳ ಬಗ್ಗೆ ಸಾಮಾನ್ಯ ಜನರಿಗೆ ತಿರಸ್ಕಾರವಿದೆ, ತಲೆ ಕೆಟ್ಟವರು ಎಂಬ ಭಾವನೆಯಿದೆ, ಹುಚ್ಚು ಅವರಿಗೆ ಎನ್ನುವ ನೋಟವಿದೆ, ಕೇಳಿ ಕೇಳಿ ದುಡ್ದು ಕೊಟ್ಟು ಹೋಗಿ ಸಾಯುತ್ತಾರೆ ಎನ್ನುವ ಅಭಿಪ್ರಾಯವೂ ಇದೆ. ಅಡ್ರಿನಲಿನ್ ರಶ್, ಥೂ ಎನ್ನುವ ಜನರೇ ಹೆಚ್ಚು.

 

ಇಲ್ಲಿ ಎಲ್ಲರಿಗೂ ನೆನಪಿರಲೇಬೇಕಾದ ವಿಷಯವೆಂದರೆ ಎಲ್ಲರೂ ಸಾಕಷ್ಟು ತರಬೇತಿ ಅಥವಾ ಮಾಹಿತಿ, ತಯ್ಯಾರಿ ಪಡೆದಿರಬೇಕು, ಇಲ್ಲವಾದರೆ ಅದು ಬರೀ ಹುಡುಗಾಟಿಕೆಯಾಗುತ್ತದೆ. ಅಪಾಯವುಂಟಾಗುತ್ತದೆ. “ಬರೀ ಥ್ರಿಲ್ಲಿಗಾಗಿ ಅಡ್ರಿನಲಿನ್ ರಶ್” ಎಂಬ ಕಣ್ಣ ಮುಂದಿನ ಪರದೆಯನ್ನು ನಾವು ಸರಿಸಿದಾಗ ಆ ಸಾಹಸ ಕ್ರೀಡಿಗಳ ಒಳಮನಸ್ಸು ನಮಗೆ ಅರ್ಥವಾಗುತ್ತದೆ.

 

ಉದಾಹರಣೆಗೆ, ಅತ್ತ ಕಡೆ ಇರುವ ಅತಿ ಸಾಹಸ ಕ್ರೀಡಿಗಳನ್ನ ಕೇಳಿ. “ಯಾಕ್ ಸ್ವಾಮಿ ದುರುಗುಟ್ ತೀರ? ಸಾಯೊ ಆಸೆ ಇದ್ರೆ ನಾವ್ಯಾಕೆ ಆ ಪಾಟಿ ದುಡ್ಡ ಸುರಿದು, ಎದ್ದು ಬಿದ್ದು ಕಷ್ಟದಿಂದ ಟ್ರೇನಿಂಗ ಮಾಡಿ, ಇನ್ನೂ ಅಷ್ಟು ದುಡ್ ಕೊಟ್ಟು ಆ ಪಾಟಿ ಪರಿಕರಗಳು, ಸಾಧನಗಳು, ಬಟ್ಟೆ ಬರಿ ಎಲ್ಲ ಹೊಂದಿಸ್ ಕೊಳ್ತೀವಿ? ಏನ ಹುಚ್ಚಾ ಬೆಪ್ಪಾ ನಮಗೆ! ನೋಡಿ ಸ್ವಾಮಿ, ನಾವಿರೋದೆ ಹೀಗೆ,” ಅಂತಾರೆ.

 

ಸಾಹಸ ಕ್ರೀಡೆಗಳು ಅಂದರೆ ಸಾಮಾನ್ಯಕ್ಕಿಂತಲೂ ಹೆಚ್ಚಿನ ತೀವ್ರತೆಯನ್ನು, ಎತ್ತರವನ್ನು, ತಯಾರಿಯನ್ನು, ವೇಗವನ್ನು, ಕುಶಲತೆಯನ್ನು, ತರಬೇತಿಯನ್ನು, ಮತ್ತು ದೈಹಿಕ ಕಸರತ್ತನ್ನು ಹೊಂದಿರುವ ಕ್ರೀಡೆಗಳು. ಅವು ಕ್ರೀಡಾಪಟುವಿಗೆ ಹೊಸ ಸವಾಲನ್ನು ಒಡ್ಡುತ್ತವೆ. ಬುಂಗೀ ಜಂಪಿಂಗ್ ಅಂತಹ ಹಳೆಯದಾದ ಅದರೂ ಅದನ್ನು ಇಷ್ಟಪಡುವ, ಹಕ್ಕಿಯಂತೆ ಪಕ್ಕಕ್ಕೆರಡು ರೆಕ್ಕೆಗಳನ್ನು ಜೋಡಿಸಿಕೊಂಡು ಅತಿ ಎತ್ತರದಿಂದ ಜೆಗಿದು ಹಾರಿ ಪ್ಯಾರಾಚುಟ್ ಬಿಚ್ಚಿ ಹೂವಂತೆ ನೆಲಕ್ಕಿಳಿಯುವ ಸಾಹಸಿಗಳಿದ್ದಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ Image result for extreme sportsಕ್ರೀಡಾಳು ಆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಅದಕ್ಕೆ ಬೇಕಾದ ವಿಶಿಷ್ಟ ಸಾಧನಗಳನ್ನು ಮತ್ತು ನಿರ್ದಿಷ್ಟ ಕುಶಲತೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಬಹಳ ಜವಾಬ್ದಾರಿಯಿಂದ ವರ್ತಿಸಬೇಕು. ಅವನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಿಸಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟದ್ದು ಅಲ್ಲವೇ. ಅಂತಹ ಸಾಹಸ ಕ್ರೀಡೆಯಲ್ಲಿ ಅದರ ಜೊತೆ ಇರುವ, ಬರುವ ಗಂಡಾಂತರವನ್ನು, ಅಪಾಯವನ್ನು, ಹಾನಿಯನ್ನು ಮತ್ತು ಕುತ್ತುಗಳನ್ನು ಕ್ರೀಡಾಳು ಕೂಲಂಕಶವಾಗಿ ಅಭ್ಯಸಿಸಿ, ಅವನ್ನು ಎದುರಿಸಲು ಮತ್ತು ಕ್ಷೇಮದಿಂದ ಆ ಸಾಹಸ ಕ್ರೀಡೆಯ ಅನುಭವವನ್ನು ಪಡೆದು, ಆನಂದವನ್ನು ಗಳಿಸಲು ಅದಕ್ಕೆ ಬೇಕಾದ ಸಮರ್ಪಕ ರೀತಿಯ ತಯಾರಿಯನ್ನೂ, ತರಬೇತಿಯನ್ನೂ ಪಡೆದಿರಬೇಕು.

 

ಸಾಹಸ ಕ್ರೀಡೆಗಳು ನಮ್ಮ ಜೀವನದಲ್ಲಿ, ಅಂದರೆ ಮಾನವರ ಜೀವನದಲ್ಲಿ ಬಹಳಷ್ಟು ಆದಿಯಿಂದಲೂ ಜೀವಂತವಾಗಿವೆ. ಬಹು ಹಿಂದಿನ ಕಾಲದಲ್ಲಿ ಜನರು ತೆಪ್ಪಗಳ ಮೇಲೆ ಕೂತು ನದಿಗಳ, ಸಮುದ್ರಗಳ ಸಂಚಾರವನ್ನು ಮಾಡುತ್ತಿದ್ದರು. ಎತ್ತರವಾದ ಪರ್ವತ ಪ್ರಾಂತ್ಯಗಳನ್ನು ಹತ್ತಿ, ನಡೆದು, ಆಳವಾದ ಗುಹೆಗಳನ್ನು ಕಂಡುಕೊಂಡು ಅವುಗಳಲ್ಲಿ ಜೀವನ ಮಾಡಿ ಕುರುಹುಗಳನ್ನೂ ಬಿಟ್ಟು ಹೋಗಿದ್ದಾರೆ. ನದಿಯಾಳದಲ್ಲಿ ಈಜಿದ್ದಾರೆ, ತೇಲಿದ್ದಾರೆ, ಎತ್ತರದ ಕಮರಿಗಳನ್ನು ಹತ್ತುವ, ಬೆಟ್ಟಗಳ ಮೈಯನ್ನು ಓತಿಕ್ಯಾತನಂತೆ ಹತ್ತುವ ಸಾಹಸಗಳನ್ನೂ ಮಾಡಿದ್ದಾರೆ. ಅದೇನೂ ಇತ್ತೀಚಿಗೆ ಜಾರಿಗೆ ಬಂದ ಹೊಸ ಅನುಭವವೇನೂ ಅಲ್ಲ.

 

ಆದರೆ, ೧೯೮೦ / ೧೯೯೦ರ ನಂತರ ಅಂತಹ ಸಾಹಸ ಕ್ರೀಡೆಗಳಲ್ಲಿ ಹೊಸ ಚಲನ ಉಂಟಾಗಿ, ಹೊಸ ಸಾಹಸ ಕ್ರೀಡೆಗಳು ಮತ್ತು ಸಾಧನಗಳು ಹುಟ್ಟಿಕೊಂಡು ಪ್ರಪಂಚದಾದ್ಯಂತಾ ಜನರು ಅಬ್ಬಾ ಇದೇನು ಸಾಹಸ ಎಂದು ನಿಬ್ಬೆರಗಾಗುವಂತೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಆಗಿದೆ. ಇದಕ್ಕೆ ನೂರಾರು ಟೆಲಿವಿಷನ್ ಚಾನೆಲ್ ಗಳು, ಸಾಹಸ ಕ್ರೀಡೆಗಳಿಗೆಂದೇ ಮೀಸಲಿರುವ ಗುಂಪುಗಳು, ಕ್ಲಬ್, ಪತ್ರಿಕೆಗಳು, ಮತ್ತು ಅಂತಹ ಗುಂಪುಗಳಿಗೆ, ಸಾಹಸ ಕ್ರೀಡಾ ಪಟುಗಳಿಗೆ ಉತ್ತೇಜನ ಕೊಡುವ ಮತ್ತು ಸಾಧನಗಳ ಆವಿಷ್ಕಾರಕ್ಕೆ, ಸಂಶೋಧನೆಗೆ, ಅವುಗಳ ಮಾರಾಟಕ್ಕೆ ಮುಂದೆ ಬಿದ್ದು ಹಣ ಸುರಿಯುತ್ತಿರುವ ನೂರಾರು ವ್ಯಾಪಾರೀ ಸಂಸ್ಥೆಗಳು. ೧೯೯೦ ರ ದಶಕದಲ್ಲಿ ಅಂತಹ ಹೊರಾಂಗಣ ಆಟಗಳ, ಚಟುವಟಿಕೆಗಳ ಮತ್ತು ಸಾಹಸ ಕ್ರೀಡೆಗಳಿಗೆ ಬೇಕಾದ ಸಾಧನಗಳನ್ನು ಮಾರುವ ವ್ಯಾಪಾರೀ ಸಂಸ್ಥೆಗಳು ಕೆಲವೇ ಇದ್ದವು. ಈಗ ಎಲ್ಲೆಲ್ಲೂ ಇವೆ.

 

ನಮ್ಮ ಈಗಿನ ಕಾಲದಲ್ಲಿ ಸಾಹಸ ಕ್ರೀಡೆಗಳ ತವರಾದ ಮತ್ತು ಎಲ್ಲರೂ ಹೋಗಿ ತರಬೇತಿ ಪಡೆಯುವ, ಹಾಗೂ ಅತ್ಯಂತ ಸುರಕ್ಷಿತವಾಗಿ ಅಂತಹ ಕ್ರೀಡೆಗಳನ್ನು ಸಂಯೋಜಿಸಿ, ಸಂಭಾಳಿಸುವ ಪಶ್ಚಿಮ ದೇಶಗಳಲ್ಲಿ ಕೆಲ ಸಾಹಸ ಕ್ರೀಡೆಗಳಿಗೆ ಮಾತ್ರ ಮಕ್ಕಳನ್ನು ಕಳಿಸಲು ಮತ್ತು ಅವರು ಕಲಿಯಲು ಅನುಮತಿ ಇದೆ.

 

ಅದೇ ಸಾಹಸ ಕ್ರೀಡೆಗಳ ಮತ್ತೊಂದು ಭಾಗವಾದ ಅತಿಸಾಹಸ ಕ್ರೀಡೆಗಳಿಗೆ ಮಕ್ಕಳ ಪ್ರವೇಶವಿಲ್ಲ. ಈ ಒಂದು ವಿಭಜನೆಯೇ ಆ ಎರಡೂ ಕ್ರೀಡೆಗಳ ಬಗ್ಗೆ ಸೂಚನೆ ನೀಡುತ್ತವೆ. ಒಂದು, ಸುಮಾರು ಮಟ್ಟದ ಅಪಾಯವನ್ನು, ಹಾನಿಯನ್ನು, ಗಂಡಾಂತರವನ್ನೂ ಸುಮಾರು ಮಟ್ಟದ ತರಬೇತಿ ಅಥವಾ ತಯಾರಿಯನ್ನು ಹೊಂದಿದ್ದರೆ (ಉದಾಹರಣೆಗೆ, ಸ್ಕೀಯಿಂಗ್); ಮತ್ತೊಂದು ಲೆಕ್ಕಾಚಾರ ತಪ್ಪದೆ, ತೀವ್ರವಾಗಿ ತರಬೇತಿ ಪಡೆದು ಮತ್ತು ಹುಡುಗಾಟ ಆಡದೆ ಬಹಳಾ ಜಾಗರೂಕತೆಯಿಂದ, ಕೆಲವರು ಮಾತ್ರ ತಮ್ಮ ನಿಪುಣ್ಯತೆಯಿಂದ, ಏಕಲವ್ಯನ ಧ್ಯಾನದಿಂದ, ಅತ್ಯಂತ ಜಾಗರೂಕರಾಗಿ ಕೈಗೊಳುವ ಕ್ರೀಡೆ. ಉದಾಹರಣೆಗೆ, ಸ್ಕೈ ಡೈವಿಂಗ್ (sky diving). ಬೋಧಕರು “ಪರವಾಗಿಲ್ಲ, ತಮ್ಮ ವಿದ್ಯಾರ್ಥಿ ಆಕಾಶದಿಂದ ನೆಗೆದು, ಹಾರಾಡಿ, ಗಾಳಿ ಕೊಡೆಯನ್ನು ಬಿಚ್ಚಿ ಸುಸೂತ್ರವಾಗಿ, ಕ್ಷೇಮವಾಗಿ ಭೂಮಿಯ ಮೇಲೆ ಕಾಲಿಟ್ಟು ತಲುಪುತ್ತಾರೆ, ಅಷ್ಟು ಆತ್ಮ ವಿಶ್ವಾಸ ಮತ್ತು ಅಂತಹ ಸಾಹಸಕ್ಕೆ ಬೇಕೇ ಬೇಕಾದ  ಸಂಪೂರ್ಣ ತರಬೇತಿಯನ್ನು  ಅವರು ಪೂರ್ತಿಯಾಗಿ ಪಡೆದಿದ್ದಾರೆ” ಎಂದು ಖಚಿತವಾಗಿ ಪ್ರಮಾಣಿಸುವ ತನಕ ವಿದ್ಯಾರ್ಥಿ ಆಕಾಶ ನೆಗೆತದಲ್ಲಿ ಪಾಲ್ಗೊಳ್ಳುವಂತಿಲ್ಲ.

 

ಅತಿ ಸಾಹಸ ಕ್ರೀಡೆಗಳಲ್ಲಿ (extreme sports) ಭಾಗವಹಿಸುವವರು ನಿರ್ದಿಷ್ಟ ಗುಂಪಿಗೆ ಸೇರಿದ ಜನ. ಸುಮ್ಮನೆ ಹುಚ್ಚು ಹುಚ್ಚಾಗಿ ಥ್ರಿಲ್ ಗೋಸ್ಕರ ಎಂದು ಹುಡುಗಾಟದಿಂದ ಜೀವಿಸುವ ಮಂದಿ ಅವರಲ್ಲ. ಅಪಾಯವನ್ನು ಜಾಗರೂಕತೆಯಿಂದ ಅಳೆಯುವ ಅವರುಗಳು ಹೇಳುವಂತೆ ಅತಿ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ಬಹಳಷ್ಟು ತರಬೇತಿಯ ಜೊತೆ ಮಾನಸಿಕ ಸಿದ್ದತೆಯೂ ಬೇಕು. ಮೊತ್ತಮೊದಲಾಗಿ ತಾನು ಏಕೆ ಈ ರೀತಿಯ ಸಾಹಸದಲ್ಲಿ ತೊಡಗಿದ್ದೀನಿ ಎಂಬುದರ ಬಗ್ಗೆ ನಿರ್ದಿಷ್ಟವಾದ, ಖಚಿತವಾದ ಅರ್ಥ (meaningfulness) ಸಿಕ್ಕಬೇಕು, ಅವರನ್ನು ಅವರು ಚೆನ್ನಾಗಿ ಬಹಳ ಚೆನ್ನಾಗಿ ಅರಿತಿರಬೇಕು (self-awareness). ಅವರುಗಳು, ತಾನು ಕೈಗೊಳ್ಳುವ ಈ ಸಾಹಸದಲ್ಲಿ ಏನೆಲ್ಲಾ ಅಡಗಿದೆ, ಅದಕ್ಕೆ ಜೊತೆಯಾಗುವ ನನ್ನ ಮನಸ್ಸು ಹೇಗಿದೆ, ನನ್ನ ಭಾವನೆಗಳು, Image result for yogaನಂಬಿಕೆಗಳು, ಜೀವನವನ್ನು ತಾನು ನೋಡುವ ದೃಷ್ಟಿ ಯಾವುದು ಎಂದೆಲ್ಲ ಮನಸ್ಸಿನ ಆಳವನ್ನು ಹೊಕ್ಕು ಪದರ ಪದರವಾಗಿ “ನಾನು” ಎನ್ನುವುದನ್ನು ಬಿಚ್ಚಿ ಆತ್ಮಾವಲೋಕನ (exploring the “I and Me”, introspection) ಮಾಡಿಕೊಳ್ಳುತ್ತಾರೆ. ಆ ಆತ್ಮಾವಲೋಕನದಲ್ಲಿ ಅವರಿಗೆ ಅನೇಕ ಉತ್ತರಗಳು ಸಿಕ್ಕುತ್ತವೆ. ವರ್ಷಗಳ ಕಾಲ ತಮ್ಮ ಸಾಹಸ ಕ್ರೀಡೆಯ ಬೆಗ್ಗೆ ದ್ಯಾನಿಸುವ, ಅವರು ಮಾಡುವ ಆ ತಪಸ್ಸಿನ ಘಟ್ಟಗಳಲ್ಲಿ ಅವರು ಯೋಗಿಗಳಾಗುತ್ತಾರೆ, ದುರ್ವ್ಯಸನಗಳನ್ನು ಬಿಡುತ್ತಾರೆ, ಯೋಗ, ಧ್ಯಾನ, ಮುಂತಾದುವುದರಲ್ಲಿ ಕಠಿಣವಾಗಿ ತೊಡಗುತ್ತಾರೆ. ಕಷ್ಟಪಟ್ಟು ದುಡಿದು ಹಣವನ್ನು ಸಂಗ್ರಹಿಸಿ ತಮ್ಮ ತರಬೇತಿಗೆ ಬಳಸುತ್ತಾರೆ. ತಪಸ್ಸು ಮಾಡುತ್ತಾ ತಮ್ಮ ಭಯವನ್ನು ಗೆಲ್ಲುತ್ತಾರೆ, ಗೆಲುವು ಸೋಲು ಶಾಶ್ವತವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸ್ವಶಿಸ್ತಿನಿಂದ, ಗಟ್ಟಿ ಮನಸ್ಕರಾಗುತ್ತಾರೆ. ಪೂರ್ಣ ಮನಸ್ಸಿನಿಂದ “ನಿನ್ನ ಕೆಲಸವನ್ನು, ನೀನು ನಂಬಿರುವುದನ್ನು, ನಿನ್ನ ಪೂರ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಡು” ಅನ್ನುವ ತತ್ವವನ್ನು ಜಾರಿಗೊಳಿಸುತ್ತಾರೆ. ತಾನು ಏನನ್ನೋ ಗೆಲ್ಲಲು ಹೊರಟಿಲ್ಲ; ಕಲಿಯಲು, ಪರಿಸರದೊಂದಿಗೆ ಒಮ್ಮತದಿಂದ ಜೀವಿಸಲು, ಈ ದೊಡ್ಡ ಜೀವ ಜಾಲದಲ್ಲಿ ನಾನು ತೃಣ ಮಾತ್ರ ಎನ್ನುವ ತತ್ವವನ್ನು ಅನುಭವದಿಂದ ಕಲಿಯುತ್ತಾರೆ. ವಿಶ್ವ ಪ್ರಕೃತಿಯ ಹಿರಿದಾದ ಚಿತ್ರದಲ್ಲಿ ತಾನು ಅಲ್ಪ ಮಾತ್ರ, ತನ್ನನ್ನು ಮೀರಿ ಮತ್ತೇನೋ ಶಕ್ತಿ ಇದೆ ಎಂದು ಅರಿಯುತ್ತಾರೆ.  ಒಂದು ರೀತಿಯಲ್ಲಿ ಅವರು ತತ್ವ ಜ್ಞಾನಿಗಳು, ಆಳವಾದ ಯೋಗಿಗಳು. ನಿಮಗೆ ಅಂತಹವರ ಬಗ್ಗೆ, ಅವರ ಅತಿ ಸಾಹಸ ಕ್ರೀಡೆಗಳ ಬಗ್ಗೆ, ಅಂತಹವರ ಒಳಮನಸ್ಸಿನ ಮನಃಶಾಸ್ತ್ರದ ತಿರುಳನ್ನು ತಿಳಿಯಬೇಕಾದರೆ “Transcendence” ಎಂಬ ಚಿಕ್ಕ ಒಂದು ಘಂಟೆ ಅವಧಿಯ ಡಾಕ್ಯುಮೆಂಟರಿಯನ್ನು ನೋಡಬಹುದು. (“Transcendence” ಕಿರು ಸಾಕ್ಷ್ಯಚಿತ್ರವನ್ನು ಯೂ ಟ್ಯೂಬ್ ನಲ್ಲಿ ನೋಡಲು ಈ ಕೊಂಡಿ ಬಳಸಿ: http://youtu.be/K9J0tgQ_dBQ , http://youtu.be/U_mvzaTbnqA) ಎರಿಕ್ ಬ್ರ್ಯಮೆರ್ ಅನ್ನುವವರು ತಮ್ಮ ಸಂಶೋಧನೆಯಲ್ಲಿ ವಿಶಿಷ್ಟ ಸಂಶೋಧನಾ ವಿಧಾನವನ್ನು ಅಳವಡಿಸಿ ಕೆಲ ಅತಿಸಾಹಸ ಕ್ರೀಡಾಳುಗಳನ್ನು ಮಾತನಾಡಿಸಿ ಮನೋಶಾಸ್ತ್ರದ ವಿಭಾಗದಲ್ಲಿ ಪ್ರಕಟಪಡಿಸಿರುವ ಸಂಶೋಧನೆಯನ್ನು ಆಧರಿಸಿದ ಆ ಡಾಕ್ಯುಮೆಂಟರಿಯನ್ನು ನ್ಯೂಸಿಲ್ಯಾಂಡ್ ನವರು ಸಿದ್ಧಪಡಿಸಿದ್ದಾರೆ. ಎರಿಕ್ ಅವರು ಪ್ರತಿಪಾದಿಸಿರುವಂತೆ ಮಾನವನ ಹೊರಗ್ರಹಿಕೆಗೆ ಮೀರಿದ ಕೆಲ ಅತ್ಯಂತ ಆಳ ಅನುಭವಗಳು ಕೇವಲ ಒಳಜಾಗೃತ ಮನಸ್ಸಿಗೆ ಮಾತ್ರ ತಟ್ಟಿ ಅವು ಅನುಭೂತಿಯ ಅಭೂತಪೂರ್ವ ಅನುಭವಗಳಾಗುತ್ತವೆ. ಅಂದರೆ ಒಂದು ರೀತಿಯ ಧ್ಯಾನ. ಹಾಗೆ ಅತಿಸಾಹಸ ಕ್ರೀಡಿಗಳ ಮನಸ್ಸು ಕೂಡ.

 

ಎರಿಕ್ ಹೇಳುವಂತೆ ಸಾಹಸ ಮತ್ತು ಅತಿಸಾಹಸ ಕ್ರೀಡೆಗಳಲ್ಲಿ ಸಮರ್ಪಕವಾಗಿ ಭಾಗವಹಿಸುವವರಿಗೆ ಮಾನಸಿಕ ಒತ್ತಡ, ಆತಂಕ, ಭಯಗಳು, ಖಿನ್ನತೆ ಮುಂತಾದ ಮಾನಸಿಕ ಖಾಯಿಲೆಗಳ ಕಾಟ ಅಷ್ಟೊಂದು ಇಲ್ಲ, ಹಾಗೂ ದೈಹಿಕವಾಗಂತೂ ಅವರು ಸದಾ ವ್ಯಾಯಾಮ, ಕಸರತ್ತು ನಡೆಸಿ ಪೂರ್ಣಪ್ರಮಾಣದಲ್ಲಿ ಲಾಭ ಪಡೆಯುತ್ತಾರೆ.

 

ತಮ್ಮ ಒಳಮನಸ್ಸಿನ ಹೆದರಿಕೆಯನ್ನು, ಭಯವನ್ನು ಮೀರಿ ಅದನ್ನು ಗೆದ್ದು, ಅಪಾಯದ ಮಟ್ಟವನ್ನು, ತೀವ್ರ ಹಾನಿಯನ್ನೂ (ಜೀವ ಹೋಗುತ್ತದೆ) ಸಾಕಷ್ಟು ಅಳೆದು, ಅಂದಾಜು ಮಾಡಿ ನಿರ್ಭಯದಿಂದ ಅತಿ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವ ಕೆಲವೇ ಮಂದಿ ನಿಷ್ಣಾತರು ಅಂತಹ ತಮಗೆ ಪ್ರಿಯವಾದ ಸುಲಭವಾಗಿ ಕೈಗೆಟುಕದ ಆ ಕ್ರೀಡೆಗಳನ್ನು ಜೋಪಾನದಿಂದ ಕಾಪಾಡುತ್ತಿದ್ದಾರೆ, ಅವುಗಳ ಬಗ್ಗೆ ಮತ್ತು ಅವರ ಬಗ್ಗೆ ಇರುವ, ಬರುವ ನೂರಾರು ಸಂದೇಹಗಳನ್ನೂ, ಆಕ್ಷೇಪಣೆಗಳನ್ನು, ಬೆಟ್ಟು ಮಾಡುವ ಜನರನ್ನು ಅವರುಗಳು ಒಬ್ಬೊಬ್ಬರೇ ಎದುರಿಸಿ ನಿಂತು ಆ ಕ್ರೀಡೆಗಳನ್ನು ಪೋಷಿಸುತ್ತಿದ್ದಾರೆ. ಅವುಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಗೆ ಸಹಾಯ ಮಾಡುತ್ತಿದ್ದಾರೆ.

 

ಭಾರತದ ಕೆಲ ರಾಜ್ಯಗಳ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಈಗೀಗ ಕ್ರೀಡಾ ಮನಃಶಾಸ್ತ್ರ ವಿಭಾಗಗಳು ತಲೆಯೆತ್ತಿವೆ. ಕ್ರೀಡೆಗಳನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿ ಅವುಗಳ ಹಿರಿಮೆಯನ್ನು, ಆರೋಗ್ಯ ಲಾಭವನ್ನು, ಸಂಶೋಧನೆ ಮಾಡಲು ಇರುವ ಬೇಕಾದಷ್ಟು ವಿಚಾರಗಳನ್ನೂ ಈಗ ಮಾನ್ಯ ಮಾಡಲಾಗುತ್ತಿದೆ. ಅವುಗಳಲ್ಲಿ ಮೆಲ್ಲಮೆಲ್ಲನೆ ಸಾಹಸ ಕ್ರೀಡೆಗಳೂ ಸೇರಿಕೊಳ್ಳುತ್ತಿವೆ. ಅನೇಕ ಖಾಸಗಿ ಶಾಲೆಗಳಲ್ಲಿ ಹೊರಾಂಗಣ ಶಿಕ್ಷಣ ಮತ್ತು ಕ್ರೀಡೆಗಳನ್ನು ಈಗ ಬಹಳ ವೈಜ್ಞಾನಿಕವಾಗಿ ಸೇರಿಸಲ್ಪಟ್ಟಿವೆ. ದೈಹಿಕ ಶಿಕ್ಷಣವೆಂದರೆ ಹಿಂದೆ ನಮ್ಮ ಕಾಲದಲ್ಲಿ ಇದ್ದಂತೆ ಹೆಣ್ಣು ಮಕ್ಕಳು ಭಾಗವಹಿಸದ ವಾರಕ್ಕೊಂದು ಪಿ. ಟಿ. ಪಿರಿಯಡ್ ಅಲ್ಲ – ಅದಕ್ಕೊಂದು ಸರಿಯಾದ ಬೆಲೆ ಸಿಕ್ಕಿದೆ. ಒಳ್ಳೆಯ ದಿಕ್ಕಿನಲ್ಲಿ ಪಾಶ್ಚಾತ್ಯ ದೇಶಗಳ ಪ್ರಭಾವ ಸಾಕಷ್ಟು ಆಗಿದೆ.

 

ಇತ್ತ ಈಗಿನ ನಮ್ಮೂರು ಯುಕೆ ದೇಶದಲ್ಲಿ ಕೂಡ ಹಿಂದಿನಿಂದಲೂ ಸುಮಾರು ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಸಾಹಸ ಕ್ರೀಡೆಗಳ ವಿಷಯದಲ್ಲಿ ಡಿಪ್ಲೋಮಾ, ಡಿಗ್ರಿ, ಸಂಶೋಧನಾ ಡಿಗ್ರಿ ಮುಂತಾದವನ್ನು ಓದಲು ಅವಕಾಶ ಮಾಡಿಕೊಟ್ಟಿವೆ. ಪಕ್ಕದ ಯುರೋಪ್ ನಲ್ಲಿ ಇದನ್ನೂ ಮೀರಿ ಸಾಹಸ ಕ್ರೀಡೆಗಳ ಬಗೆಗಿನ ಸಂಶೋಧನೆಯನ್ನು ಮಾನವರ ತತ್ವ ಜ್ಞಾನಕ್ಕೆ, ಜಿಜ್ಞಾಸೆಗೆ, ನಿದ್ದೆಯ ಬಗ್ಗೆ ಸಂಶೋಧನೆಗೆ, ಪ್ರಕೃತಿಯ ಹಿರಿಮೆಗೆ ಮತ್ತಷ್ಟು ಆಳವಾಗಿ ಅಗೆದು, ಬಗೆದು, ಮಾನವರ ಮನಸ್ಸಿನಲ್ಲಿ ಮಿದುಳಿನಲ್ಲಿ ಸಾಹಸದ ಬಗ್ಗೆ ಏನೆಲ್ಲಾ ತುಂಬಿದೆ, ಎಂದೆಲ್ಲಾ ಏನೇನಕ್ಕೂ ಅಳವಡಿಸಿಕೊಂಡು ಎಲ್ಲರಿಗಿಂತಲೂ ಮುಂದೆ ಸಾಗಿದ್ದಾರೆ.

 

ಒಟ್ಟಿನಲ್ಲಿ ಸಾಹಸವೆಂದರೆ “ಅಡ್ರಿನಲಿನ್ ರಶ್” ಎಂದು ಥೂ ಅನಬೇಡಿ, ನಿಮ್ಮ ಮಕ್ಕಳು ಸಾಹಸ ಕ್ರೀಡೆಗೆ/ತರಬೇತಿಗೆ ಸೇರಿಸಮ್ಮಾ/ಅಪ್ಪಾ ಎಂದರೆ ಬೇಡವೇ/ಬೇಡವೋ ದಡ್ಡ ಎಂದು ಬೇಸರ ಪಡಬೇಡಿ, ಹುಚ್ಚು ಬೆಪ್ಪು ಎನ ಬೇಡಿ, ಹಣ ಕೊಟ್ಟು ಜೀವ ಕಳೆದುಕೊಳ್ಳಲು ಹೋಗುತ್ತಾರೆ ಎಂದು ದೂಷಿಸಬೇಡಿ, ಸರಿಯಾದ ಮಾಹಿತಿ ಪಡೆದು ಅವನ್ನು ಅರ್ಥ ಮಾಡಿಕೊಳ್ಳಿ, ಎಂದು ಆ ಸಂಸ್ಥೆಗಳು, ಸಾಹಸಿಗರು, ಕ್ರೀಡಾಪಟುಗಳು, ತರಬೇತಿದಾರರು ಎಲ್ಲರೂ ಹೇಳುತ್ತಿದ್ದಾರೆ. ಸಾಹಸ ಕ್ರೀಡೆಗಳಿಗೆ ನಾವಿನ್ನೂ ಮಾನ್ಯತೆ ಕೊಡಬೇಕಿದೆ, ಅವುಗಳಿಂದ ನಮಗಾಗುವ ಒಳ್ಳೆಯದನ್ನು ಕುರಿತು ಇನ್ನೂ ಹೆಚ್ಚು ಮಾತನಾಡಬೇಕಿದೆ. ಪೋಷಿಸಬೇಕಿದೆ. ಸಕಾರಾತ್ಮಕ ರೀತಿಯಲ್ಲಿ ಸಲಹಬೇಕಿದೆ.

-ವಿನತೆ ಶರ್ಮ

 

ಚಹಾ ಚಟ ಭಯಂಕರರೇ ಈ ಆಂಗ್ಲರು? – ಉಮಾ ವೆಂಕಟೇಶ

CC-Wikipaedia

 “Could you please put the kettle on?” ಈ ಉಲಿತದೊಂದಿಗೆ ಪ್ರಾರಂಭ ಆಂಗ್ಲರ ಆಫ಼ೀಸ್ ದಿನಚರಿ.

ಪ್ರತಿ ದಿನ ಆಫ಼ೀಸಿನಲ್ಲಿ ಈ ಜನ ಅವರಿರುವ ಸುಮಾರು ೭-೮ ಘಂಟೆಗಳ ಅವಧಿಯಲ್ಲಿ ಅದೆಷ್ಟು ಕಪ್ಪುಗಳ ಚಹಾ ಸೇವಿಸುತ್ತಾರೋ ಆ ದೇವರೇ ಬಲ್ಲ. ಅವರಿಗೆ ಬೇಸರವೇ ಇಲ್ಲವೇ?

ಕಚೇರಿಗಳಲ್ಲಿ ಮತ್ತು ವೈದ್ಯರ ಕ್ಲಿನಿಕ್ಕುಗಳಲ್ಲಿ ಇದಕ್ಕಾಗೇ ಒಂದು ಬಜೆಟ್ಟು. ಇದನ್ನು  Petty cashಎನ್ನುತ್ತಾರೆ. ಕೆಲವು ಡಾಕ್ಟರುಗಳಂತೂ ಅದರಲ್ಲೂ ಭಾರತೀಯ ಮೂಲದವರು ತಲೆ ತಲೆ ಚೆಚ್ಚಿ ಕೊಳ್ಳುತ್ತಾರೆ. ಈ ಜನಗಳ ಚಹಾದ ಕಡೆಗೇ ಎಲ್ಲಾ ಹಣವೂ ಪೋಲಾಗುತ್ತದಲ್ಲ! ಅದರಲ್ಲೂ ಬಹಳಷ್ಟು ಮಹಿಳಾಮಣಿಗಳು ಚಹಾದ ಕಪ್ಪನ್ನು ತಮ್ಮ ಮುಂದೆ ಇರಿಸಿಕೊಂಡು ಸುಮ್ಮನೇ ಅದು ತಣ್ಣಗಾಗುವವರೆಗೂ ಇದ್ದು ಅನಂತರ ತಮಗೆ ಒಂದು ನಿಮಿಷ ಪುರುಸತ್ತಾದಾಗ ಅದರ ಕಡೆ ದೃಷ್ಟಿ ಹರಿಸಿ ” Oh This Tea has gone cold, I should have a new cup !” . ಸರಿ ಮತ್ತೊಮ್ಮೆ ಕೆಟಲ್ ಆನ್, ಮತ್ತೊಮ್ಮೆ A warm cup of Tea. ಎಲ್ಲಾದರೂ ಉಂಟೇ? ಸರಿ ಇದು ಚಹಾ ಸೇವನೆಯ ಪ್ರಮಾಣದ ಪುರಾಣವಾಯಿತು. ಇನ್ನು ಅದನ್ನು ಸೇವಿಸುವ ರೀತಿಯಂತೂ ನೋಡಿಯೇ ತಿಳಿಯಬೇಕು. ಪ್ರತಿಯೊಂದು ಕಚೇರಿಗಳಲ್ಲೂ ಎಲ್ಲರ ಚಹಾ ಕಪ್ಪಿನ ವಿವರಗಳು ಅಂದರೆ ಹಾಲಿನ ಜೊತೆ, ಹಾಲಿಲ್ಲದೇ, ಸಕ್ಕರೆ ಸಹಿತ, ಸಕ್ಕರೆ ರಹಿತ ಹೀಗೆ ಅವರು ಸೇವಿಸುವ ರೀತಿಯ ಒಂದು ಪಟ್ಟಿಯನ್ನು ಚಹಾದ ಕೋಣೆಯಲ್ಲಿ ಟೈಪ್ ಮಾಡಿ ತೂಗು ಹಾಕಿರುತ್ತಾರೆ. ಯಾರು ಚಹಾದ ತಯಾರಿಕೆಯ ಜವಾಬ್ದಾರರೋ, ಅವರು ಆ ಪಟ್ಟಿಯಲ್ಲಿರುವಂತೆ ಎಲ್ಲರ ಚಹಾ ತಯಾರಿಸಬೇಕು. ಇದು ಆಂಗ್ಲ ನಾಡಿನ ಒಂದು ಸಂಪ್ರದಾಯ. ಹಲವು ಸಂಘ ಸಂಸ್ಥೆಗಳಲ್ಲಿ ಸದಸ್ಯರು ವರ್ಷಕ್ಕೊಮ್ಮೆ ಭೇಟಿಯಾದಾಗಲೂ ಅವರು ಇದೇ ರೀತಿ ಮತ್ತು ಶಿಸ್ತನ್ನು ಪಾಲಿಸುತ್ತಾರೆ. ಇದು ಸಮಾನತಾ ವಾದದ ಪರಮಾವಧಿ!

ಇನ್ನು ಚಹಾ ಸೇವಿಸುವ ಬಟ್ಟಲುಗಳನ್ನು ಎಲ್ಲರೂ ತಮ್ಮ ತಮ್ಮ ಮನೆಗಳಿಂದ ತಂದು ಅಲ್ಲಿಡಬೇಕು. ಚಹಾ ಕುಡಿದ ನಂತರ ಅವುಗಳನ್ನು ತೊಳೆಯುವ ಜವಾಬ್ದಾರಿಯೂ ಅವರದೆ. ಜೊತೆಗೆ ಎಲ್ಲಾ ಕಚೇರಿಗಳಲ್ಲೂ ಚಹಾ ತಯಾರಿಕೆಯ ಜವಾಬ್ದಾರಿಯ ಸರದಿ ಎಲ್ಲರಿಗೂ ಬರುತ್ತದೆ. ಇದರಲ್ಲಿ ಮೇಲಿನ ಅಧಿಕಾರಿ, ಅವರ ಕೈಕೆಳಗಿನವರು ಆ ಭೇಧವಿಲ್ಲ. ಇದು ನನಗೆ ಮೆಚ್ಚುಗೆಯಾದ ಒಂದು ಅಂಶ. ಇಲ್ಲಿ ಪ್ರತಿಯೊಬ್ಬರೂ ಒಂದೇ. ಎಲ್ಲರನ್ನೂ ಸಮಾನವಾಗಿ ನೋಡಲಾಗುತ್ತದೆ.

“My Secretary is not my secretary until she has her cup of Tea” ಅನೇಕ ಡಾಕ್ಟರುಗಳ ಆಫ಼ೀಸುಗಳಲ್ಲಿ ಅವರ ಕಾರ್ಯದರ್ಶಿನಿಯರು ತಮ್ಮ ದೈನಂದಿಕ ಕಾರ್ಯಗಳನ್ನು ಒಂದು ಕಪ್ ಚಹಾವಿಲ್ಲದಿದ್ದರೆ ಪ್ರಾರಂಭ ಮಾಡುವುದೇ ಇಲ್ಲ. ಮಧ್ಯಾನ್ಹ ಮೂರು ಘಂಟೆಗೆ ತಲೆ ಮೇಲೆ ತಲೆ ಬಿದ್ದರೂ ಸರಿಯೆ, ಅವರ ಚಹ ಪಾನ ತಪ್ಪುವುದಿಲ್ಲ. ಪ್ರಖ್ಯಾತ ಇಂಗ್ಲೀಷ್ ಕವಿ ರೂಪರ್ಟ್ ಬ್ರೂಕ್ ತನ್ನ ಪದ್ಯದಲ್ಲಿ ಬರೆದಿರುವ ಈ ಸಾಲುಗಳನ್ನು ಓದಿದರೆ ತಿಳಿಯುತ್ತದೆ  “Orchard stands the church clock at ten-to-three And is there honey still for tea? “ ಮಧ್ಯಾನ್ಹದ ಹಿತವಾದ ಬಿಸಿಲಿನಲ್ಲಿ ಕುಳಿತು ತಲಮಾರುಗಳ ಸಂಪ್ರದಾಯವನ್ನು ಮುಂದುವರೆಸುವ ಈ ಚಹಾ ಪಾನದ ರೀತಿ ನಿಜಕ್ಕೂ ಆಂಗ್ಲರ ಜೀವನದ ಮುಖ್ಯ ಅಂಗ.

ಈಗೀಗ ಚಹಾದ ಸ್ಥಾನವನ್ನು ಸ್ವಲ್ಪ ಮಟ್ಟಿಗೆ ಕಾಫ಼ಿ ಆಕ್ರಮಿಸಿ ಕೊಂಡಿದ್ದರೂ, ಚಹಾಕ್ಕೇ ಅಗ್ರ ಸ್ಥಾನ. ಎಲ್ಲಾ ಸೂಪರ್ ಮಾರ್ಕೆಟ್ ಗಳಲ್ಲೂ ಚಹಾ ಮತ್ತು ಕಾಫ಼ಿಯ ವಿಭಾಗಗಳನ್ನು

CC-Wikipaedia

ನೋಡುವುದೇ ಒಂದು ಮೋಜು. ಪ್ರಪಂಚದ ನಾನಾ ಮೂಲೆಗಳಿಂದ ತರಿಸಲಾದ ಅವುಗಳ ವೈವಿಧ್ಯತೆಗೆ ತಲೆ ತೂಗಲೇ ಬೇಕು. ಇನ್ನು ಚಹಾ ಮತ್ತು ಕಾಫ಼ಿ ಸೇವಿಸುವ ಕಪ್ ಮತ್ತು ಅದನ್ನು ತಯಾರಿಸಲು ದೊರೆಯುವ ಸಾಮಗ್ರಿಗಳು – ಟೀ ಪಾಟ್ ಮತ್ತು ಕಾಫ಼ಿ ತಯಾರಿಕೆಯ ಯಂತ್ರಗಳು ಅವುಗಳ ವೈವಿಧ್ಯತೆಯಂತೂ ಇನ್ನೂ ಮನೋಹರ ! ಚಹಾ ಸೆಟ್ಟುಗಳ ತಯಾರಿಕೆ ಆಂಗ್ಲನಾಡಿನ ಹಲವು ಮೂಲೆಗಳಲ್ಲಿ ಪ್ರಪಂಚ ಪ್ರಸಿದ್ಧವಾದದ್ದು. ಅವುಗಳ ಬಣ್ಣ, ಆಕಾರ ಮತ್ತು ಕಲಾತ್ಮಕತೆಗೆ ನಾನಂತೂ ಯಾವಾಗಲೂ ಮಾರು ಹೋಗಿದ್ದೇನೆ. ಡೆನ್ಬಿ, ರಾಯಲ್ ವೂರ್ ಸ್ಟರ್, ಚರ್ಚಿಲ್, ರಾಯಲ್ ಡೋಲ್ಟನ್, ಪೋರ್ಟ್ ಮೈರನ್, ವೆಡ್ಜ್ ವುಡ್, ಸ್ಟಾಫ಼ೋರ್ಡ್ ಶೈರ್ ಎನಾಮಲ್, ರಾಯಲ್ ಸ್ಕಾಟ್, ಜೇಮಿ ಆಲಿವರ್, ವಾಟರ್ ಫ಼ೋರ್ಡ್ ಕ್ರಿಸ್ಟಲ್ ಹೀಗೆ ಒಂದೇ ಎರಡೇ ಅನೇಕ ಬ್ರಾಂಡ್ಗಳು.

ಪ್ರತೀ ಮನೆಯಲ್ಲೂ ಈ ಮನೋಹರ ಸುಂದರ ಬ್ರಾಂಡ್ ಗಳ ಚಹಾ ಮತ್ತು ಕಾಫ಼ಿಯ ಸೆಟ್ಗಳನ್ನು ನೋಡಲೇ ಚೆಂದ. ಆಂಗ್ಲರು ಈ ಪದ್ಧತಿಯನ್ನು ನಿಜಕ್ಕೂ ಬಹಳ ಹೆಮ್ಮೆಯಿಂದ ಮುಂದುವರೆಸಿದ್ದಾರೆ. ಈಗಂತೂ ಆಧುನಿಕ ವೈಜ್ಯಾನಿಕ ಸಂಶೋಧನೆಯ ಪ್ರಕಾರ ಚಹಾದ ಸೇವನೆ ಮಾನವನ ದೇಹಕ್ಕೆ ಉತ್ತಮ ಎಂಬ ಪ್ರಮಾಣ ಮತ್ತು ಪುರಾವೆಗಳ ಕಂತೆಯಂತೂ ಈ ಪಾನೀಯವನ್ನು ಇನ್ನಷ್ಟು ಜನಪ್ರಿಯಗೊಳಿಸಿದೆ. ಯುವ ಪೀಳಿಗೆ ಅದರಲ್ಲೂ ಹುಡುಗಿಯರಂತೂ ಹಸುರು ಚಹಾಕ್ಕೆ ಮುಗಿಬೀಳುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಒಳ್ಳೆಯ ಸುದ್ದಿ. ಹಿಂದುಳಿದ ಮತ್ತು ಮುಂದುವರೆಯುತ್ತಿರುವ ಚಹಾ ತಯಾರಿಕೆ ಮತ್ತು ಬೆಳೆಯುವ ದೇಶಗಳಲ್ಲಿ ಚಹಾದ ವ್ಯಾಪಾರಕ್ಕೆ ಇದಕ್ಕಿಂತ ಒಳ್ಳೆಯ ಸುದ್ದಿ ಇನ್ನೇನಿದೆ? ಲಂಡನ್ನಿನ ಪ್ರಸಿದ್ಧ ಕಾಫ಼ಿ ಮತ್ತು ಚಹಾ ವ್ಯಾಪಾರಿಗಳಾದ ವಿಟ್ಟರ್ಡ್ ಕಂಪನಿಯ ಅಂಗಡಿಗಳಂತೂ ನೋಡಲು ಅತಿ ಸುಂದರ. ಈ ಅಂಗಡಿಯಲ್ಲಂತೂ ಮೊದಲ ಬಾರಿಗೆ ಕನ್ನಡತಿಯಾದ ನಾನು ಚಿಕ್ಕಮಂಗಳೂರು ಮತ್ತು ಕೊಡಗಿನ ಕಾಫ಼ಿಯನ್ನು ನೋಡಿದಾಗ ಬಹಳ ರೋಮಾಂಚಿತಳಾಗಿದ್ದೆ!

ಇನ್ನು ಸ್ಥಳೀಯರು ನಮ್ಮನ್ನು ತಮ್ಮ ಮನೆಗಳಿಗೆ ಊಟಕ್ಕೆ ಕರೆದರೂ ಅದನ್ನು ಸಾಯಂಕಾಲದ ಟೀ ಎಂದೇ ಕರೆಯುತ್ತಾರೆ. ನಮಗಂತೂ ಶುರುವಿನಲ್ಲಿ ಸ್ವಲ್ಪ ಫಜೀತಿಯೇ ಆಯಿತು. ನಾವೇನೋ ಸಾಯಂಕಾಲದ ಟೀ ಎಂದು ಹೋದರೆ, ಅದು ರಾತ್ರಿಯ ಊಟ! ಸರಿ ಊಟದ ನಂತರ ಮತ್ತೊಮ್ಮೆ ಚಹಾದ ಸೇವನೆ. ನಮ್ಮಲ್ಲಿ ರಾತ್ರಿ ಭೋಜನದ ನಂತರ ಕಾಫ಼ಿ ಅಥವ ಟೀ ಕುಡಿಯುವ ಸಂಪ್ರದಾಯವಿಲ್ಲ. ಆದರೆ ಆಂಗ್ಲರಿಗೆ ಅದಿಲ್ಲದೇ ನಡೆಯುವುದೇ ಇಲ್ಲ.

ಬಹುರಾಷ್ಟ್ರೀಯ ವ್ಯಾಪಾರ ವ್ಯವಹಾರಗಳ ಈ ಕಾಲದಲ್ಲಿ ಚಹಾ – ಕಾಫ಼ಿ ಪಾನಿಯಗಳ ಪದ್ಧತಿ ಮತ್ತು ಸಂಸ್ಕೃತಿಗಳು ಆಧುನಿಕ ಮಾನವನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ವ್ಯಾಪಾರ ವ್ಯವಹಾರಗಳ ಸಂಭಂಧದಲ್ಲಿ ಪ್ರಪಂಚದ ನಾನಾ ಮೂಲೆಗಳಿಗೆ ಪ್ರಯಾಣಿಸುವ ಜನಗಳು, ಆಯಾ ದೇಶಗಳಲ್ಲಿನ ಆಚಾರ ವಿಚಾರಗಳನ್ನು ತಿಳಿಯಲು ಬಹಳ ಅನುಕೂಲ. ಮಧ್ಯ ಪ್ರಾಂಚ ದೇಶಗಳಲ್ಲೂ ಚಹಾವನ್ನು ಹೆಚ್ಚಾಗಿ ಬಳಸುತ್ತಾರೆ. ನಾನು ಹೋದ ವರ್ಷ ಟರ್ಕಿ ದೇಶಕ್ಕೆ ಹೋದಾಗ ಅಲ್ಲಿನ ಹಲವು ಬಗೆಯ ಚಹಾವನ್ನು ಸವಿಯುವ ಅವಕಾಶ ಸಿಕ್ಕಿತು. ಇಲ್ಲೂ ಸಹಾ ಜನಗಳು ಈ ಪಾನೀಯವನ್ನು ಸೇವಿಸುವ ಮತ್ತು ಅದಕ್ಕಾಗಿ ಬಳಸುವ ಸಲಕರಣೆಗಳು ವೈವಿಧ್ಯತೆಯನ್ನು ನೋಡಿಯೇ ಅನುಭವಿಸಬೇಕು.

“ಕೆಮೀಲಿಯ ಸೈನೆನ್ಸಿಸ್” ಇದು ಚಹಾ ಗಿಡದ ವೈಜ್ಞ್ಯಾನಿಕ ಹೆಸರು. ಪ್ರಪಂಚದಾದ್ಯಂತ ಸೇವಿಸಲ್ಪಡುವ ಈ ಪಾನೀಯ ಪೂರ್ವ ಮತ್ತು ಪಶ್ಚಿಮಗಳ ಅಪೂರ್ವ ಸಂಗಮದಲ್ಲಿ ಬಹು

CC-Wikimedia

ಮುಖ್ಯ ಪಾತ್ರವನ್ನು ವಹಿಸಿದೆ. ಚಹಾದ ಮೂಲ ದಕ್ಷಿಣ ಮತ್ತು ದಕ್ಷಿಣ ಏಶಿಯಾ ದೇಶಗಳಲ್ಲಿ ಅದರಲ್ಲೂ ಬರ್ಮ ಮತ್ತು ಚೈನಾ ಎಂದು ತಿಳಿದುಬರುತ್ತದೆ. ೧೦ನೆ ಶತಮಾನದಲ್ಲಿ ಚೈನಾದಲ್ಲಿ ಚಹವನ್ನು ಸೇವಿಸಲು ಪ್ರಾರಂಭಿಸಿದ್ದರು ಮತ್ತು ಅಲ್ಲಿಂದ ಈ ಪಾನೀಯ ಜಪಾನ್ ಮತ್ತು ಕೊರಿಯಾ ದೇಶಗಳಿಗೆ ಹರಡಿತೆಂಬುದು ಎಲ್ಲರಿಗೆ ತಿಳಿದಿರುವ ವಿಷಯ. ಸುಮಾರು ೧೯ನೇ ಶತಮಾನದಲ್ಲಿ ಯೂರೋಪಿನ ದೇಶಗಳಿಗೆ ರವಾನಿಸಲ್ಪಟ್ಟ ಚಹಾದ ಜನಪ್ರಿಯತೆ ಪಾಶ್ಚಿಮಾತ್ಯ ದೇಶಗಳಲ್ಲಿ ಬಹಳ ಇತ್ತೀಚಿನದು.

ಜಪಾನ್ ಮತ್ತು ಚೀನಿಯರು ಚಹಾವನ್ನು ಸೇವಿಸುವ ರೀತಿ ರಿವಾಜುಗಳ ಬಗ್ಗೆ ನನ್ನ ಮಗಳು ಯಾವಾಗಲೂ ದೊಡ್ಡ ಉಪನ್ಯಾಸವನ್ನೇ ಕೊಡುತ್ತಿರುತ್ತಾಳೆ. ಜಪಾನೀಯರ ಚಹಾ ಕುದಿಸುವ, ಎರಕಹೊಯ್ದ ಕಬ್ಬಿಣದ ಕೆಟಲ್ ಅಂತೂ ನೋಡಲೇ ಸುಂದರ. ನನ್ನವರು ಟೋಕಿಯೋ ಪಟ್ಟಣಕ್ಕೆ ವೈಜ್ಞ್ಯಾನಿಕ ಸಮ್ಮೇಳನಕ್ಕೆಂದು ಹೋದ ಸಂಧರ್ಭದಲ್ಲಿ ಕೊಂಡು ತಂದ ಅಲ್ಲಿನ ಕೆಟಲ್ ಬಹು ಸುಂದರ ಮತ್ತು ನನ್ನ ಎಲ್ಲಾ ಗೆಳತಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಒಟ್ಟಿನಲ್ಲಿ ಚಹಾದ ಸಂಸ್ಕೃತಿ ಚಹಾ ಬೆಳೆಯುವ ಪೂರ್ವ ದೇಶಗಳಿಂದ ಪಾಶ್ಚಿಮಾತ್ಯ ದೇಶಗಳಿಗೆ ಹಬ್ಬಿ ಅಲ್ಲಿನ ಜನಜೀವನದ ಬಹು ಮುಖ್ಯ ಅಂಗವಾಗಿರುವುದು ಬಹಳ ಕುತೂಹಲಕಾರಿಯಾದ ಸಂಗತಿ. ಇಂಗ್ಲಿಷ್ ಚಹಾಗಳ ಬ್ರಾಂಡ್ ಗಳು ಜಗತ್ ಪ್ರಸಿದ್ಧ. ಅರ್ಲ್ ಗ್ರೆ ಕಂಪನಿಯ ” ಟ್ವಯ್ ನಿಂಗ್ಸ್ “, ಟೈಲರ್ ಆಫ಼್ ಹ್ಯಾರೋ ಗೇಟ್, ಯಾರ್ಕ್ ಶೈರ್ ರೆಡ್ ಟಿ, ಹೀಗೆ ಹಲವಾರು ಇಲ್ಲಿಯ ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ಒಟ್ಟಿನಲ್ಲಿ ಇಲ್ಲಿನ ಪ್ರಜೆಯಾಗಿ ನಾನೂ ಈ ಪರಂಪರೆಯ ಜಾಲದಲ್ಲಿ ಸಿಲುಕಿದ್ದೇನೆ ಆದರೆ ಅದರ ಸಂತೋಷವನ್ನೂ ಅನುಭವಿಸಿದ್ದೇನೆ.

ಇಂಗ್ಲೀಷ್ ಜನಗಳ ಈ ಚಹಾದ ಸಂಪ್ರದಾಯ ಬರೀ ಮನೆ ಮತ್ತು ಕಚೇರಿಗಳಷ್ಟೆ ಅಲ್ಲ, ಕ್ರಿಕೆಟ್ ಮೈದಾನದಲ್ಲಿ, ಮತ್ತು ಆಂಗ್ಲರ ಇನ್ನಿತರ ಜನಪ್ರಿಯ ಆಟಗಳಾದ ಕ್ರೊಕೆ, ಹೊರಾಂಗಣದ ಬೌಲ್ಸ್ ಹೀಗೆ ಹಲವಾರು ಆಟೋಟಗಳಲ್ಲೂ ಮಹತ್ವದ ಪಾತ್ರ ವಹಿಸಿದೆ. ಈಗೀಗ ಕೋಕಾಕೋಲ, ಮತ್ತು ಇತರ ತಂಪು ಪಾನೀಯಗಳು ಚಹಾದ ಸ್ಥಾನವನ್ನು ಕಬಳಿಸುತ್ತಿವೆ. ಆದರೂ ಆಂಗ್ಲ ಸುಸಂಸ್ಕೃತ ವಲಯಗಳಲ್ಲಿ ಇಂದಿಗೂ ಚಹಾವೇ ತನ್ನ ಅಗ್ರಸ್ಥಾನವನ್ನು ಅಲಂಕರಿಸಿದೆ ಮತ್ತು ಇಂಗ್ಲಿಷ್ ನಾಗರೀಕನ ಪ್ರಸಿದ್ಧ ” ಮಧ್ಯಾನ್ಹದ ೩:೩೦ ಘಂಟೆಯ ಚಹಾ ಬ್ರೇಕ್ ” (ಮಳೆ ಬರದಿದ್ದಲ್ಲಿ) ಮುಂದುವರೆಯುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ಒಟ್ಟಿನಲ್ಲಿ Bernard Paul Heroux ನ – “There is no trouble so great or grave that cannot be diminished by a nice cup of Tea” ಉವಾಚ ಬಹುಶಃ ಸರಿಯೆಂದೇ ನನ್ನ ಅನಿಸಿಕೆ!

ಬ್ರಿಟಿಷರು ಚೀನಾದ ಪ್ರಮುಖ ಬಂದರು ಹಾಂಗ್ ಕಾಂಗ್ ನಗರವನ್ನು ತಮ್ಮ ಕುಯುಕ್ತಿ ಮತ್ತು ಬಲ ಪ್ರಯೋಗದಿಂದ ವಶಪಡಿಸಿಕೊಡರೆಂಬುದು ಎಲ್ಲರಿಗೂ ತಿಳಿದೇ ಇದೆ. ತಮಗೆ ವ್ಯಾಪಾರ ರಹದಾರಿಯನ್ನು ಚೀನಾದ ಚಕ್ರವರ್ತಿ ಮಂಜೂರು ಮಾಡಲಿಲ್ಲವೆಂಬ ಕೋಪದಿಂದ, ಚೀನಾ ದೇಶದ ರೈತಾಪಿ ಜನಗಳಿಗೆ ಭಾರತದಲ್ಲಿ ಹೇರಳವಾಗಿ ಬೆಳಸುತ್ತಿದ್ದ ಓಪಿಯಮ್ ಮಾದಕ ದ್ರವ್ಯವನ್ನು ಕಳ್ಳಸಾಗಾಣಿಕೆಯ ಮೂಲಕ ಒದಗಿಸಿ ಅವರನ್ನು ಅದರ ದಾಸಾನುದಾಸರನ್ನಾಗಿ ಮಾಡಿ ಕಡೆಗೆ ವಿಧಿಯಿಲ್ಲದೆ ಚೀನ ತನ್ನ ದೇಶದಿಂದ ಚಹಾವನ್ನು ಬದಲಿ ವ್ಯಾಪಾರ ಮಾಡುವುದಕ್ಕೆ ಒಪ್ಪಿಸಿದ ಬ್ರಿಟಿಷರ ಮೇಲಿನ ಕೋಪ ಚೀನಿಯರಿಗೆ ಇನ್ನೂ ಇದೆ ಎಂಬ ಪ್ರತೀತಿ. ಜೆ.ಬಿ.ಪ್ರೀಸ್ಟಿಲಿ ಹೇಳಿದಂತೆ , “Our trouble is that we drink too much tea, I see in this the slow revenge of the orient, which has diverted the yellow river down our throats”.

ಇದು  ವರ್ತಮಾನದಲ್ಲಿ, ಪ್ರಪಂಚದ ಎಲ್ಲಾ ಮೂಲೆಗಳನ್ನೂ ವಿವಿಧ ರಂಗಗಳಲ್ಲಿ ಹಲವು ಹತ್ತು ರೀತಿಗಳಲ್ಲಿ ನಿಧಾನವಾಗಿ ಆಕ್ರಮಿಸುತ್ತಿರುವ ಚೀನೀಯರ ಪಿತೂರಿ ಇರಬಹುದಲ್ಲವೇ?

“Revenge is a dish that tastes best when served cold.”