ಚಹಾ ಚಟ ಭಯಂಕರರೇ ಈ ಆಂಗ್ಲರು? – ಉಮಾ ವೆಂಕಟೇಶ

CC-Wikipaedia

 “Could you please put the kettle on?” ಈ ಉಲಿತದೊಂದಿಗೆ ಪ್ರಾರಂಭ ಆಂಗ್ಲರ ಆಫ಼ೀಸ್ ದಿನಚರಿ.

ಪ್ರತಿ ದಿನ ಆಫ಼ೀಸಿನಲ್ಲಿ ಈ ಜನ ಅವರಿರುವ ಸುಮಾರು ೭-೮ ಘಂಟೆಗಳ ಅವಧಿಯಲ್ಲಿ ಅದೆಷ್ಟು ಕಪ್ಪುಗಳ ಚಹಾ ಸೇವಿಸುತ್ತಾರೋ ಆ ದೇವರೇ ಬಲ್ಲ. ಅವರಿಗೆ ಬೇಸರವೇ ಇಲ್ಲವೇ?

ಕಚೇರಿಗಳಲ್ಲಿ ಮತ್ತು ವೈದ್ಯರ ಕ್ಲಿನಿಕ್ಕುಗಳಲ್ಲಿ ಇದಕ್ಕಾಗೇ ಒಂದು ಬಜೆಟ್ಟು. ಇದನ್ನು  Petty cashಎನ್ನುತ್ತಾರೆ. ಕೆಲವು ಡಾಕ್ಟರುಗಳಂತೂ ಅದರಲ್ಲೂ ಭಾರತೀಯ ಮೂಲದವರು ತಲೆ ತಲೆ ಚೆಚ್ಚಿ ಕೊಳ್ಳುತ್ತಾರೆ. ಈ ಜನಗಳ ಚಹಾದ ಕಡೆಗೇ ಎಲ್ಲಾ ಹಣವೂ ಪೋಲಾಗುತ್ತದಲ್ಲ! ಅದರಲ್ಲೂ ಬಹಳಷ್ಟು ಮಹಿಳಾಮಣಿಗಳು ಚಹಾದ ಕಪ್ಪನ್ನು ತಮ್ಮ ಮುಂದೆ ಇರಿಸಿಕೊಂಡು ಸುಮ್ಮನೇ ಅದು ತಣ್ಣಗಾಗುವವರೆಗೂ ಇದ್ದು ಅನಂತರ ತಮಗೆ ಒಂದು ನಿಮಿಷ ಪುರುಸತ್ತಾದಾಗ ಅದರ ಕಡೆ ದೃಷ್ಟಿ ಹರಿಸಿ ” Oh This Tea has gone cold, I should have a new cup !” . ಸರಿ ಮತ್ತೊಮ್ಮೆ ಕೆಟಲ್ ಆನ್, ಮತ್ತೊಮ್ಮೆ A warm cup of Tea. ಎಲ್ಲಾದರೂ ಉಂಟೇ? ಸರಿ ಇದು ಚಹಾ ಸೇವನೆಯ ಪ್ರಮಾಣದ ಪುರಾಣವಾಯಿತು. ಇನ್ನು ಅದನ್ನು ಸೇವಿಸುವ ರೀತಿಯಂತೂ ನೋಡಿಯೇ ತಿಳಿಯಬೇಕು. ಪ್ರತಿಯೊಂದು ಕಚೇರಿಗಳಲ್ಲೂ ಎಲ್ಲರ ಚಹಾ ಕಪ್ಪಿನ ವಿವರಗಳು ಅಂದರೆ ಹಾಲಿನ ಜೊತೆ, ಹಾಲಿಲ್ಲದೇ, ಸಕ್ಕರೆ ಸಹಿತ, ಸಕ್ಕರೆ ರಹಿತ ಹೀಗೆ ಅವರು ಸೇವಿಸುವ ರೀತಿಯ ಒಂದು ಪಟ್ಟಿಯನ್ನು ಚಹಾದ ಕೋಣೆಯಲ್ಲಿ ಟೈಪ್ ಮಾಡಿ ತೂಗು ಹಾಕಿರುತ್ತಾರೆ. ಯಾರು ಚಹಾದ ತಯಾರಿಕೆಯ ಜವಾಬ್ದಾರರೋ, ಅವರು ಆ ಪಟ್ಟಿಯಲ್ಲಿರುವಂತೆ ಎಲ್ಲರ ಚಹಾ ತಯಾರಿಸಬೇಕು. ಇದು ಆಂಗ್ಲ ನಾಡಿನ ಒಂದು ಸಂಪ್ರದಾಯ. ಹಲವು ಸಂಘ ಸಂಸ್ಥೆಗಳಲ್ಲಿ ಸದಸ್ಯರು ವರ್ಷಕ್ಕೊಮ್ಮೆ ಭೇಟಿಯಾದಾಗಲೂ ಅವರು ಇದೇ ರೀತಿ ಮತ್ತು ಶಿಸ್ತನ್ನು ಪಾಲಿಸುತ್ತಾರೆ. ಇದು ಸಮಾನತಾ ವಾದದ ಪರಮಾವಧಿ!

ಇನ್ನು ಚಹಾ ಸೇವಿಸುವ ಬಟ್ಟಲುಗಳನ್ನು ಎಲ್ಲರೂ ತಮ್ಮ ತಮ್ಮ ಮನೆಗಳಿಂದ ತಂದು ಅಲ್ಲಿಡಬೇಕು. ಚಹಾ ಕುಡಿದ ನಂತರ ಅವುಗಳನ್ನು ತೊಳೆಯುವ ಜವಾಬ್ದಾರಿಯೂ ಅವರದೆ. ಜೊತೆಗೆ ಎಲ್ಲಾ ಕಚೇರಿಗಳಲ್ಲೂ ಚಹಾ ತಯಾರಿಕೆಯ ಜವಾಬ್ದಾರಿಯ ಸರದಿ ಎಲ್ಲರಿಗೂ ಬರುತ್ತದೆ. ಇದರಲ್ಲಿ ಮೇಲಿನ ಅಧಿಕಾರಿ, ಅವರ ಕೈಕೆಳಗಿನವರು ಆ ಭೇಧವಿಲ್ಲ. ಇದು ನನಗೆ ಮೆಚ್ಚುಗೆಯಾದ ಒಂದು ಅಂಶ. ಇಲ್ಲಿ ಪ್ರತಿಯೊಬ್ಬರೂ ಒಂದೇ. ಎಲ್ಲರನ್ನೂ ಸಮಾನವಾಗಿ ನೋಡಲಾಗುತ್ತದೆ.

“My Secretary is not my secretary until she has her cup of Tea” ಅನೇಕ ಡಾಕ್ಟರುಗಳ ಆಫ಼ೀಸುಗಳಲ್ಲಿ ಅವರ ಕಾರ್ಯದರ್ಶಿನಿಯರು ತಮ್ಮ ದೈನಂದಿಕ ಕಾರ್ಯಗಳನ್ನು ಒಂದು ಕಪ್ ಚಹಾವಿಲ್ಲದಿದ್ದರೆ ಪ್ರಾರಂಭ ಮಾಡುವುದೇ ಇಲ್ಲ. ಮಧ್ಯಾನ್ಹ ಮೂರು ಘಂಟೆಗೆ ತಲೆ ಮೇಲೆ ತಲೆ ಬಿದ್ದರೂ ಸರಿಯೆ, ಅವರ ಚಹ ಪಾನ ತಪ್ಪುವುದಿಲ್ಲ. ಪ್ರಖ್ಯಾತ ಇಂಗ್ಲೀಷ್ ಕವಿ ರೂಪರ್ಟ್ ಬ್ರೂಕ್ ತನ್ನ ಪದ್ಯದಲ್ಲಿ ಬರೆದಿರುವ ಈ ಸಾಲುಗಳನ್ನು ಓದಿದರೆ ತಿಳಿಯುತ್ತದೆ  “Orchard stands the church clock at ten-to-three And is there honey still for tea? “ ಮಧ್ಯಾನ್ಹದ ಹಿತವಾದ ಬಿಸಿಲಿನಲ್ಲಿ ಕುಳಿತು ತಲಮಾರುಗಳ ಸಂಪ್ರದಾಯವನ್ನು ಮುಂದುವರೆಸುವ ಈ ಚಹಾ ಪಾನದ ರೀತಿ ನಿಜಕ್ಕೂ ಆಂಗ್ಲರ ಜೀವನದ ಮುಖ್ಯ ಅಂಗ.

ಈಗೀಗ ಚಹಾದ ಸ್ಥಾನವನ್ನು ಸ್ವಲ್ಪ ಮಟ್ಟಿಗೆ ಕಾಫ಼ಿ ಆಕ್ರಮಿಸಿ ಕೊಂಡಿದ್ದರೂ, ಚಹಾಕ್ಕೇ ಅಗ್ರ ಸ್ಥಾನ. ಎಲ್ಲಾ ಸೂಪರ್ ಮಾರ್ಕೆಟ್ ಗಳಲ್ಲೂ ಚಹಾ ಮತ್ತು ಕಾಫ಼ಿಯ ವಿಭಾಗಗಳನ್ನು

CC-Wikipaedia

ನೋಡುವುದೇ ಒಂದು ಮೋಜು. ಪ್ರಪಂಚದ ನಾನಾ ಮೂಲೆಗಳಿಂದ ತರಿಸಲಾದ ಅವುಗಳ ವೈವಿಧ್ಯತೆಗೆ ತಲೆ ತೂಗಲೇ ಬೇಕು. ಇನ್ನು ಚಹಾ ಮತ್ತು ಕಾಫ಼ಿ ಸೇವಿಸುವ ಕಪ್ ಮತ್ತು ಅದನ್ನು ತಯಾರಿಸಲು ದೊರೆಯುವ ಸಾಮಗ್ರಿಗಳು – ಟೀ ಪಾಟ್ ಮತ್ತು ಕಾಫ಼ಿ ತಯಾರಿಕೆಯ ಯಂತ್ರಗಳು ಅವುಗಳ ವೈವಿಧ್ಯತೆಯಂತೂ ಇನ್ನೂ ಮನೋಹರ ! ಚಹಾ ಸೆಟ್ಟುಗಳ ತಯಾರಿಕೆ ಆಂಗ್ಲನಾಡಿನ ಹಲವು ಮೂಲೆಗಳಲ್ಲಿ ಪ್ರಪಂಚ ಪ್ರಸಿದ್ಧವಾದದ್ದು. ಅವುಗಳ ಬಣ್ಣ, ಆಕಾರ ಮತ್ತು ಕಲಾತ್ಮಕತೆಗೆ ನಾನಂತೂ ಯಾವಾಗಲೂ ಮಾರು ಹೋಗಿದ್ದೇನೆ. ಡೆನ್ಬಿ, ರಾಯಲ್ ವೂರ್ ಸ್ಟರ್, ಚರ್ಚಿಲ್, ರಾಯಲ್ ಡೋಲ್ಟನ್, ಪೋರ್ಟ್ ಮೈರನ್, ವೆಡ್ಜ್ ವುಡ್, ಸ್ಟಾಫ಼ೋರ್ಡ್ ಶೈರ್ ಎನಾಮಲ್, ರಾಯಲ್ ಸ್ಕಾಟ್, ಜೇಮಿ ಆಲಿವರ್, ವಾಟರ್ ಫ಼ೋರ್ಡ್ ಕ್ರಿಸ್ಟಲ್ ಹೀಗೆ ಒಂದೇ ಎರಡೇ ಅನೇಕ ಬ್ರಾಂಡ್ಗಳು.

ಪ್ರತೀ ಮನೆಯಲ್ಲೂ ಈ ಮನೋಹರ ಸುಂದರ ಬ್ರಾಂಡ್ ಗಳ ಚಹಾ ಮತ್ತು ಕಾಫ಼ಿಯ ಸೆಟ್ಗಳನ್ನು ನೋಡಲೇ ಚೆಂದ. ಆಂಗ್ಲರು ಈ ಪದ್ಧತಿಯನ್ನು ನಿಜಕ್ಕೂ ಬಹಳ ಹೆಮ್ಮೆಯಿಂದ ಮುಂದುವರೆಸಿದ್ದಾರೆ. ಈಗಂತೂ ಆಧುನಿಕ ವೈಜ್ಯಾನಿಕ ಸಂಶೋಧನೆಯ ಪ್ರಕಾರ ಚಹಾದ ಸೇವನೆ ಮಾನವನ ದೇಹಕ್ಕೆ ಉತ್ತಮ ಎಂಬ ಪ್ರಮಾಣ ಮತ್ತು ಪುರಾವೆಗಳ ಕಂತೆಯಂತೂ ಈ ಪಾನೀಯವನ್ನು ಇನ್ನಷ್ಟು ಜನಪ್ರಿಯಗೊಳಿಸಿದೆ. ಯುವ ಪೀಳಿಗೆ ಅದರಲ್ಲೂ ಹುಡುಗಿಯರಂತೂ ಹಸುರು ಚಹಾಕ್ಕೆ ಮುಗಿಬೀಳುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಒಳ್ಳೆಯ ಸುದ್ದಿ. ಹಿಂದುಳಿದ ಮತ್ತು ಮುಂದುವರೆಯುತ್ತಿರುವ ಚಹಾ ತಯಾರಿಕೆ ಮತ್ತು ಬೆಳೆಯುವ ದೇಶಗಳಲ್ಲಿ ಚಹಾದ ವ್ಯಾಪಾರಕ್ಕೆ ಇದಕ್ಕಿಂತ ಒಳ್ಳೆಯ ಸುದ್ದಿ ಇನ್ನೇನಿದೆ? ಲಂಡನ್ನಿನ ಪ್ರಸಿದ್ಧ ಕಾಫ಼ಿ ಮತ್ತು ಚಹಾ ವ್ಯಾಪಾರಿಗಳಾದ ವಿಟ್ಟರ್ಡ್ ಕಂಪನಿಯ ಅಂಗಡಿಗಳಂತೂ ನೋಡಲು ಅತಿ ಸುಂದರ. ಈ ಅಂಗಡಿಯಲ್ಲಂತೂ ಮೊದಲ ಬಾರಿಗೆ ಕನ್ನಡತಿಯಾದ ನಾನು ಚಿಕ್ಕಮಂಗಳೂರು ಮತ್ತು ಕೊಡಗಿನ ಕಾಫ಼ಿಯನ್ನು ನೋಡಿದಾಗ ಬಹಳ ರೋಮಾಂಚಿತಳಾಗಿದ್ದೆ!

ಇನ್ನು ಸ್ಥಳೀಯರು ನಮ್ಮನ್ನು ತಮ್ಮ ಮನೆಗಳಿಗೆ ಊಟಕ್ಕೆ ಕರೆದರೂ ಅದನ್ನು ಸಾಯಂಕಾಲದ ಟೀ ಎಂದೇ ಕರೆಯುತ್ತಾರೆ. ನಮಗಂತೂ ಶುರುವಿನಲ್ಲಿ ಸ್ವಲ್ಪ ಫಜೀತಿಯೇ ಆಯಿತು. ನಾವೇನೋ ಸಾಯಂಕಾಲದ ಟೀ ಎಂದು ಹೋದರೆ, ಅದು ರಾತ್ರಿಯ ಊಟ! ಸರಿ ಊಟದ ನಂತರ ಮತ್ತೊಮ್ಮೆ ಚಹಾದ ಸೇವನೆ. ನಮ್ಮಲ್ಲಿ ರಾತ್ರಿ ಭೋಜನದ ನಂತರ ಕಾಫ಼ಿ ಅಥವ ಟೀ ಕುಡಿಯುವ ಸಂಪ್ರದಾಯವಿಲ್ಲ. ಆದರೆ ಆಂಗ್ಲರಿಗೆ ಅದಿಲ್ಲದೇ ನಡೆಯುವುದೇ ಇಲ್ಲ.

ಬಹುರಾಷ್ಟ್ರೀಯ ವ್ಯಾಪಾರ ವ್ಯವಹಾರಗಳ ಈ ಕಾಲದಲ್ಲಿ ಚಹಾ – ಕಾಫ಼ಿ ಪಾನಿಯಗಳ ಪದ್ಧತಿ ಮತ್ತು ಸಂಸ್ಕೃತಿಗಳು ಆಧುನಿಕ ಮಾನವನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ವ್ಯಾಪಾರ ವ್ಯವಹಾರಗಳ ಸಂಭಂಧದಲ್ಲಿ ಪ್ರಪಂಚದ ನಾನಾ ಮೂಲೆಗಳಿಗೆ ಪ್ರಯಾಣಿಸುವ ಜನಗಳು, ಆಯಾ ದೇಶಗಳಲ್ಲಿನ ಆಚಾರ ವಿಚಾರಗಳನ್ನು ತಿಳಿಯಲು ಬಹಳ ಅನುಕೂಲ. ಮಧ್ಯ ಪ್ರಾಂಚ ದೇಶಗಳಲ್ಲೂ ಚಹಾವನ್ನು ಹೆಚ್ಚಾಗಿ ಬಳಸುತ್ತಾರೆ. ನಾನು ಹೋದ ವರ್ಷ ಟರ್ಕಿ ದೇಶಕ್ಕೆ ಹೋದಾಗ ಅಲ್ಲಿನ ಹಲವು ಬಗೆಯ ಚಹಾವನ್ನು ಸವಿಯುವ ಅವಕಾಶ ಸಿಕ್ಕಿತು. ಇಲ್ಲೂ ಸಹಾ ಜನಗಳು ಈ ಪಾನೀಯವನ್ನು ಸೇವಿಸುವ ಮತ್ತು ಅದಕ್ಕಾಗಿ ಬಳಸುವ ಸಲಕರಣೆಗಳು ವೈವಿಧ್ಯತೆಯನ್ನು ನೋಡಿಯೇ ಅನುಭವಿಸಬೇಕು.

“ಕೆಮೀಲಿಯ ಸೈನೆನ್ಸಿಸ್” ಇದು ಚಹಾ ಗಿಡದ ವೈಜ್ಞ್ಯಾನಿಕ ಹೆಸರು. ಪ್ರಪಂಚದಾದ್ಯಂತ ಸೇವಿಸಲ್ಪಡುವ ಈ ಪಾನೀಯ ಪೂರ್ವ ಮತ್ತು ಪಶ್ಚಿಮಗಳ ಅಪೂರ್ವ ಸಂಗಮದಲ್ಲಿ ಬಹು

CC-Wikimedia

ಮುಖ್ಯ ಪಾತ್ರವನ್ನು ವಹಿಸಿದೆ. ಚಹಾದ ಮೂಲ ದಕ್ಷಿಣ ಮತ್ತು ದಕ್ಷಿಣ ಏಶಿಯಾ ದೇಶಗಳಲ್ಲಿ ಅದರಲ್ಲೂ ಬರ್ಮ ಮತ್ತು ಚೈನಾ ಎಂದು ತಿಳಿದುಬರುತ್ತದೆ. ೧೦ನೆ ಶತಮಾನದಲ್ಲಿ ಚೈನಾದಲ್ಲಿ ಚಹವನ್ನು ಸೇವಿಸಲು ಪ್ರಾರಂಭಿಸಿದ್ದರು ಮತ್ತು ಅಲ್ಲಿಂದ ಈ ಪಾನೀಯ ಜಪಾನ್ ಮತ್ತು ಕೊರಿಯಾ ದೇಶಗಳಿಗೆ ಹರಡಿತೆಂಬುದು ಎಲ್ಲರಿಗೆ ತಿಳಿದಿರುವ ವಿಷಯ. ಸುಮಾರು ೧೯ನೇ ಶತಮಾನದಲ್ಲಿ ಯೂರೋಪಿನ ದೇಶಗಳಿಗೆ ರವಾನಿಸಲ್ಪಟ್ಟ ಚಹಾದ ಜನಪ್ರಿಯತೆ ಪಾಶ್ಚಿಮಾತ್ಯ ದೇಶಗಳಲ್ಲಿ ಬಹಳ ಇತ್ತೀಚಿನದು.

ಜಪಾನ್ ಮತ್ತು ಚೀನಿಯರು ಚಹಾವನ್ನು ಸೇವಿಸುವ ರೀತಿ ರಿವಾಜುಗಳ ಬಗ್ಗೆ ನನ್ನ ಮಗಳು ಯಾವಾಗಲೂ ದೊಡ್ಡ ಉಪನ್ಯಾಸವನ್ನೇ ಕೊಡುತ್ತಿರುತ್ತಾಳೆ. ಜಪಾನೀಯರ ಚಹಾ ಕುದಿಸುವ, ಎರಕಹೊಯ್ದ ಕಬ್ಬಿಣದ ಕೆಟಲ್ ಅಂತೂ ನೋಡಲೇ ಸುಂದರ. ನನ್ನವರು ಟೋಕಿಯೋ ಪಟ್ಟಣಕ್ಕೆ ವೈಜ್ಞ್ಯಾನಿಕ ಸಮ್ಮೇಳನಕ್ಕೆಂದು ಹೋದ ಸಂಧರ್ಭದಲ್ಲಿ ಕೊಂಡು ತಂದ ಅಲ್ಲಿನ ಕೆಟಲ್ ಬಹು ಸುಂದರ ಮತ್ತು ನನ್ನ ಎಲ್ಲಾ ಗೆಳತಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಒಟ್ಟಿನಲ್ಲಿ ಚಹಾದ ಸಂಸ್ಕೃತಿ ಚಹಾ ಬೆಳೆಯುವ ಪೂರ್ವ ದೇಶಗಳಿಂದ ಪಾಶ್ಚಿಮಾತ್ಯ ದೇಶಗಳಿಗೆ ಹಬ್ಬಿ ಅಲ್ಲಿನ ಜನಜೀವನದ ಬಹು ಮುಖ್ಯ ಅಂಗವಾಗಿರುವುದು ಬಹಳ ಕುತೂಹಲಕಾರಿಯಾದ ಸಂಗತಿ. ಇಂಗ್ಲಿಷ್ ಚಹಾಗಳ ಬ್ರಾಂಡ್ ಗಳು ಜಗತ್ ಪ್ರಸಿದ್ಧ. ಅರ್ಲ್ ಗ್ರೆ ಕಂಪನಿಯ ” ಟ್ವಯ್ ನಿಂಗ್ಸ್ “, ಟೈಲರ್ ಆಫ಼್ ಹ್ಯಾರೋ ಗೇಟ್, ಯಾರ್ಕ್ ಶೈರ್ ರೆಡ್ ಟಿ, ಹೀಗೆ ಹಲವಾರು ಇಲ್ಲಿಯ ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ಒಟ್ಟಿನಲ್ಲಿ ಇಲ್ಲಿನ ಪ್ರಜೆಯಾಗಿ ನಾನೂ ಈ ಪರಂಪರೆಯ ಜಾಲದಲ್ಲಿ ಸಿಲುಕಿದ್ದೇನೆ ಆದರೆ ಅದರ ಸಂತೋಷವನ್ನೂ ಅನುಭವಿಸಿದ್ದೇನೆ.

ಇಂಗ್ಲೀಷ್ ಜನಗಳ ಈ ಚಹಾದ ಸಂಪ್ರದಾಯ ಬರೀ ಮನೆ ಮತ್ತು ಕಚೇರಿಗಳಷ್ಟೆ ಅಲ್ಲ, ಕ್ರಿಕೆಟ್ ಮೈದಾನದಲ್ಲಿ, ಮತ್ತು ಆಂಗ್ಲರ ಇನ್ನಿತರ ಜನಪ್ರಿಯ ಆಟಗಳಾದ ಕ್ರೊಕೆ, ಹೊರಾಂಗಣದ ಬೌಲ್ಸ್ ಹೀಗೆ ಹಲವಾರು ಆಟೋಟಗಳಲ್ಲೂ ಮಹತ್ವದ ಪಾತ್ರ ವಹಿಸಿದೆ. ಈಗೀಗ ಕೋಕಾಕೋಲ, ಮತ್ತು ಇತರ ತಂಪು ಪಾನೀಯಗಳು ಚಹಾದ ಸ್ಥಾನವನ್ನು ಕಬಳಿಸುತ್ತಿವೆ. ಆದರೂ ಆಂಗ್ಲ ಸುಸಂಸ್ಕೃತ ವಲಯಗಳಲ್ಲಿ ಇಂದಿಗೂ ಚಹಾವೇ ತನ್ನ ಅಗ್ರಸ್ಥಾನವನ್ನು ಅಲಂಕರಿಸಿದೆ ಮತ್ತು ಇಂಗ್ಲಿಷ್ ನಾಗರೀಕನ ಪ್ರಸಿದ್ಧ ” ಮಧ್ಯಾನ್ಹದ ೩:೩೦ ಘಂಟೆಯ ಚಹಾ ಬ್ರೇಕ್ ” (ಮಳೆ ಬರದಿದ್ದಲ್ಲಿ) ಮುಂದುವರೆಯುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ಒಟ್ಟಿನಲ್ಲಿ Bernard Paul Heroux ನ – “There is no trouble so great or grave that cannot be diminished by a nice cup of Tea” ಉವಾಚ ಬಹುಶಃ ಸರಿಯೆಂದೇ ನನ್ನ ಅನಿಸಿಕೆ!

ಬ್ರಿಟಿಷರು ಚೀನಾದ ಪ್ರಮುಖ ಬಂದರು ಹಾಂಗ್ ಕಾಂಗ್ ನಗರವನ್ನು ತಮ್ಮ ಕುಯುಕ್ತಿ ಮತ್ತು ಬಲ ಪ್ರಯೋಗದಿಂದ ವಶಪಡಿಸಿಕೊಡರೆಂಬುದು ಎಲ್ಲರಿಗೂ ತಿಳಿದೇ ಇದೆ. ತಮಗೆ ವ್ಯಾಪಾರ ರಹದಾರಿಯನ್ನು ಚೀನಾದ ಚಕ್ರವರ್ತಿ ಮಂಜೂರು ಮಾಡಲಿಲ್ಲವೆಂಬ ಕೋಪದಿಂದ, ಚೀನಾ ದೇಶದ ರೈತಾಪಿ ಜನಗಳಿಗೆ ಭಾರತದಲ್ಲಿ ಹೇರಳವಾಗಿ ಬೆಳಸುತ್ತಿದ್ದ ಓಪಿಯಮ್ ಮಾದಕ ದ್ರವ್ಯವನ್ನು ಕಳ್ಳಸಾಗಾಣಿಕೆಯ ಮೂಲಕ ಒದಗಿಸಿ ಅವರನ್ನು ಅದರ ದಾಸಾನುದಾಸರನ್ನಾಗಿ ಮಾಡಿ ಕಡೆಗೆ ವಿಧಿಯಿಲ್ಲದೆ ಚೀನ ತನ್ನ ದೇಶದಿಂದ ಚಹಾವನ್ನು ಬದಲಿ ವ್ಯಾಪಾರ ಮಾಡುವುದಕ್ಕೆ ಒಪ್ಪಿಸಿದ ಬ್ರಿಟಿಷರ ಮೇಲಿನ ಕೋಪ ಚೀನಿಯರಿಗೆ ಇನ್ನೂ ಇದೆ ಎಂಬ ಪ್ರತೀತಿ. ಜೆ.ಬಿ.ಪ್ರೀಸ್ಟಿಲಿ ಹೇಳಿದಂತೆ , “Our trouble is that we drink too much tea, I see in this the slow revenge of the orient, which has diverted the yellow river down our throats”.

ಇದು  ವರ್ತಮಾನದಲ್ಲಿ, ಪ್ರಪಂಚದ ಎಲ್ಲಾ ಮೂಲೆಗಳನ್ನೂ ವಿವಿಧ ರಂಗಗಳಲ್ಲಿ ಹಲವು ಹತ್ತು ರೀತಿಗಳಲ್ಲಿ ನಿಧಾನವಾಗಿ ಆಕ್ರಮಿಸುತ್ತಿರುವ ಚೀನೀಯರ ಪಿತೂರಿ ಇರಬಹುದಲ್ಲವೇ?

“Revenge is a dish that tastes best when served cold.” 

5 thoughts on “ಚಹಾ ಚಟ ಭಯಂಕರರೇ ಈ ಆಂಗ್ಲರು? – ಉಮಾ ವೆಂಕಟೇಶ

  1. Novella sannavarinda yemmi halina chaha kudidu raktada caffeine aumsha hecchisi chillata maduttiddevu!! Yeegalu kooda yilli full cream halina masala chaha savisi anandapaduttiruvevu. Chahada chata yendigu tappuvadilla!
    Aravind

    Like

  2. ಉಮ ಅವರ ಈ ಬರಹವನ್ನು ಸಿಂಗಪೂರಿನ ಕನ್ನಡ ಸಂಘದವರು ಹಿಂದೆ ಇದನ್ನು ಬರವಣಿಗೆಯ ಸ್ಪರ್ಧೆಯಲ್ಲಿ ಉತ್ತಮ ಲೇಖನವೆಂದು ಆಯ್ಕೆಮಾಡಿ ಪುರಸ್ಕರಿಸಿದ್ದಾರೆ. ಇಂಗ್ಲೀಷರ ಚಹಾ ಪಾನದ ಚಟಕ್ಕು ನಮ್ಮ ಬೆಂಗಳೊರು ಕನ್ನಡಿಗರ ಕಾಫಿ ಗೀಳಿಗೂ ಬಹಳಷ್ಟು ಹೊಲಿಕೆಗಳಿವೆ. ಅದರೆ ಇಂಗ್ಲೀಷರ ಚಹಪಾನದಲ್ಲಿರುವ ಶಿಷ್ಟಾಚಾರಕ್ಕೆ ನಮ್ಮಲ್ಲಿ ಸಮಯವಿಲ್ಲ. ನಮ್ಮ ಶಿಷ್ಟಾಚಾರ strong coffee ಗೆ ಕಡಿಮೆ ಸಕ್ಕರೆ ಹಾಕಿ ಬೆಳಗಿನ ಪೇಪರ್ ಒದುತ್ತಾ ಬಿಸಿಯಲ್ಲಿ ಹೀರುವುದಕ್ಕೆ ಮಾತ್ರ ಸೀಮಿತವಾಗಿರುವಂತೆ ತೊರುತ್ತದೆ. Uma is indeed a very keen observer and has put her thoughts very well.

    Like

  3. ಏನೇ ಅಂದ್ರೂ ಹಾಲಲ್ಲಿ ಕುದಿಸಿದ ಪೌಡರ್ ಚಹಾದ ರುಚಿಗೆ ಒಗ್ಗಿದ ಮಂದಿ ನಾವು. ಈಗ ಡಿಪ್ ಟೀ ನೂ ಕುಡೀತೀವಿ, ಅನಿರ್ವಾಹ.

    Like

    • ಮಾಡುವುದೇನು ಹೇಳಿ, ಇಲ್ಲೆ ಹಾಲಿನ ಜೊತಿ ಚಹಾ ಕುದಿಸುವ ಪದ್ಧತಿ ಇಲ್ಲಾ. ಧಾರವಾಡದ ಮಂದಿಗೆ ಕಷ್ಟಾನಾ ಆಗ್ತಿರಬೇಕು!

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.