ಲಲಿತಾ ಚಂದ್ರಶೇಖರ್: ಮೇಧಾವಿಯ ಹಿಂದಿನ ಸುಪ್ತ ಚೇತನ! – ಉಮಾ ವೆಂಕಟೇಶ್

“ಹೆಣ್ಣಿನಿಂದಲಿ ಇಹವು, ಹೆಣ್ಣಿನಿಂದಲಿ ಪರವು, ಹೆಣ್ಣಿಂದ ಸಕಲ ಸಂಪದವು ಹೆಣ್ಣೊಲ್ಲದಣ್ಣಗಳು ಎಲ್ಲಿ ಸರ್ವಜ್ಞ” ಹೆಣ್ಣಿನ ಹಿರಿಮೆಯ ಬಗ್ಗೆ ಕನ್ನಡದ ಆಶು-ಕವಿ ಸರ್ವಜ್ಞನಾಡಿದ ನುಡಿಮುತ್ತುಗಳು ಕಾಲ ದೇಶಗಳನ್ನು ಮೀರಿ ನಿಜವೆಂದು ಸಾಬೀತಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. “Behind every successful man there is always a woman,” ಎಂಬ ಆಂಗ್ಲ ನಾಣ್ಣುಡಿ ಕೇಳಲು ಕಿವಿಗಳಿಗೆ ಮಾರ್ದವವೆನಿಸಿದರೂ, ಮಹಾವ್ಯಕ್ತಿಗಳ ಸತಿಯರ ಜೀವನದ ನಿಜಾಂಶವನ್ನು, ಅವರನ್ನು ಬಲ್ಲವರಿಂದಲೇ ತಿಳಿಯಬೇಕು. ತಮ್ಮ ೧೦೨ ವರ್ಷಗಳ ದೀರ್ಘಾವಧಿಯ ಜೀವನವನ್ನು ಕಳೆದು, ಇತ್ತೀಚೆಗೆ (ಸೆಪ್ಟಂಬರ್ ೨೦೧೩) ಚಿಕಾಗೋದಲ್ಲಿ ನಿಧನಹೊಂದಿದ ಭಾರತೀಯ ಮೂಲದ ಲಲಿತಾ ಚಂದ್ರಶೇಖರ್ ಅವರ ಜೀವನ ವೃತ್ತಾಂತವೂ ಕೂಡಾ, ಅಂತಹುದೇ ಅಪರೂಪವಾದ ಸಂಗತಿಗಳಲ್ಲಿ ಒಂದು. ೨೦ನೆಯ ಶತಮಾನದ ಅಭೂತಪೂರ್ವ ಖಭೌತಶಾಸ್ತ್ರಜ್ಞರಲ್ಲಿ ಒಬ್ಬರೆನಿಸಿದ್ದ ದಿವಂಗತ ಡಾ ಸುಬ್ರಮಣ್ಯ ಚಂದ್ರಶೇಖರ್ ಅವರ ಹೆಸರನ್ನು ಕೇಳದ ವಿಜ್ಞಾನಿಗಳು ಮತ್ತು ವಿಜ್ಞಾನಪ್ರಿಯರು ಬಹಳ ವಿರಳ. ಭಾರತೀಯ ಮೂಲದ ಉಜ್ವಲ ಪ್ರತಿಭೆಯೊಂದು, ತಾರಾಲೋಕದ ರಹಸ್ಯಗಳನ್ನು, ತಾರೆಗಳ ಹುಟ್ಟು, ರಚನೆ, ಬೆಳವಣಿಗೆ  ಮತ್ತು ಅಂತ್ಯಗಳ ಬಗ್ಗೆ ಅರಿಯುವ ಸಲುವಾಗಿ ಅತ್ಯುನ್ನತ ಸಂಶೋಧನೆಗಳನ್ನು ನಡೆಸಿ, ತನ್ನ ಜೀವನವನ್ನೇ ಆ ಕಾರ್ಯಕ್ಕಾಗಿ ಮುಡಿಪಾಗಿಸಿ, ಖಭೌತಶಾಸ್ತ್ರ ಪ್ರಪಂಚದಲ್ಲಿ ನಭೂತೋ, ನಭವಿಶ್ಯತಿ ಎನ್ನುವ ಮಟ್ಟಿಗೆ ತನ್ನ ಹೆಸರನ್ನು ಅಮರವಾಗಿಸಿದೆ. ಈ ವ್ಯಕ್ತಿಯ ಕುಟುಂಬದಲ್ಲಿ ಬುದ್ಧಿಮಾನ್ಯರ ತಂಡವೇ ಜನ್ಮವೆತ್ತಿ, ತಮ್ಮ ಮೇಧಾವಿತನವನ್ನು ಪ್ರಪಂಚಕ್ಕೆ ತೋರಿದ ಹೆಗ್ಗಳಿಕೆಯೂ ಇದೆ. ಸರ್.ಸಿ.ವಿ.ರಾಮನ್ ಅಂತಹ ಮತ್ತೊಬ್ಬ ಅಪರೂಪದ ಭೌತಶಾಸ್ತ್ರಜ್ಞನ ಸೋದರಳಿಯನಾದ, ಡಾ ಸುಬ್ರಹ್ಮಣ್ಯ ಚಂದ್ರಶೇಖರ್ ಅಥವಾ “ಚಂದ್ರ” ಎಂದು ಪ್ರಪಂಚದಲ್ಲೇ ಹೆಸರುವಾಸಿಯಾದ ಇವರನ್ನು, ಇಂದಿಗೂ ಭೌತಶಾಸ್ತ್ರವಲಯದಲ್ಲಿ ಸ್ಮರಿಸಲಾಗುತ್ತದೆ. ” Chandrasekhar limit” ಅಥವಾ “ಚಂದ್ರ ಪರಿಮಿತಿ” ಎಂಬ ಅಸಾಮಾನ್ಯ ಸಂಶೋಧನೆಗೆ, ನೋಬೆಲ್ ಪ್ರಶಸ್ತಿಯಿಂದ ಪುರಸ್ಕೃತರಾದ ಚಂದ್ರ, ತಮ್ಮ ಜೀವಿತಕಾಲದಲ್ಲೇ ದಂತಕಥೆಯಾದ ವ್ಯಕ್ತಿ. ತಮ್ಮ 50 ವರ್ಷಗಳ ಸಂಶೋಧನೆಯ ವೃತ್ತಿ ಜೀವನದಲ್ಲಿ, ಖಭೌತಶಾಸ್ತ್ರ (Astrophysics) ಕ್ಷೇತ್ರದ ವಿವಿಧ ವಿಷಯಗಳ ಬಗ್ಗೆ, ಅಸಾಧಾರಣ ಗುಣಮಟ್ಟದ ಅನ್ವೇಷಣೆಯನ್ನು ನಡೆಸಿ, ತಮ್ಮ ಛಾಪನ್ನು ಒತ್ತಿ, ತಮ್ಮ ಪುಸ್ತಕಗಳ ಮೂಲಕ ಇಂದಿಗೂ ತರುಣ ಪೀಳಿಗೆಯನ್ನು ಪ್ರೇರೇಪಿಸುತ್ತಿರುವಂತಹ ಸಾಧನೆ ಗೈದ ಚಂದ್ರರ ಬಗ್ಗೆ ಬರೆಯಲು ವಿಷಯದ ಕೊರತೆಯಿಲ್ಲ.

Young Chandra and Lalitha after their marriage in 1936 Cc:Wiki
Young Chandra and Lalitha after their marriage in 1936
Cc:Wiki

ಆದರೆ ಇಂತಹ ವ್ಯಕ್ತಿಯ ಪತ್ನಿಯಾಗಿ, ೧೯೩೬ರ ಸೆಪ್ಟಂಬರ್ ೧೧ರಿಂದ, ೧೯೯೫ರ ಆಗಸ್ಟ್ ೨೧ರವರೆಗೆ ಅವರೊಡನೆ ಹೆಜ್ಜೆಯಿಟ್ಟು, ದಾಂಪತ್ಯ ಜೀವನ ನಡೆಸಿದ ಅವರ ಪತ್ನಿ ಲಲಿತಾ ದೊರೈಸ್ವಾಮಿ ಅವರ ಬಗ್ಗೆ ತಿಳಿದವರು ಬಹುಶಃ ಕಡಿಮೆಯಿರಬಹುದು. ಚಂದ್ರರ ವೈಜ್ಞಾನಿಕ ಸಾಧನೆಗಳ ಹಿಂದಿನ ಬೆನ್ನಲುಬಾಗಿ, ಅವರ ಸ್ಫೂರ್ತಿಯ ಸೆಲೆಯಾಗಿದ್ದ ಲಲಿತಾ ದೊರೈಸ್ವಾಮಿ ಅವರ ಕುಟುಂಬ, ಚಂದ್ರರ ಕುಟುಂಬದಷ್ಟು ಮೇಧಾವಿಗಳನ್ನು ಹೊಂದದಿದ್ದರೂ ಸಹಾ, ಹೆಣ್ಣು ಮಕ್ಕಳ ವಿಷಯದಲ್ಲಿ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿದ್ದ ಕುಟುಂಬದವರಿಂದ ಬಂದವರಾಗಿದ್ದರು. ವಿದ್ಯಾವಂತೆಯಾರಾದ ಚಿಕ್ಕಮ್ಮ, ಸಹೋದರಿಯರು ಮತ್ತು ಇಂಜಿನೀಯರುಗಳು ಇದ್ದ ಕುಟುಂಬವನ್ನು ಹೊಂದಿದ್ದ ಲಲಿತಾ, ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ವನಿತೆ. ವಿಧವೆಯರ ಶಿಕ್ಷಣಕ್ಕೆ ಆದ್ಯತೆ ನೀಡಿ, ಇಂಗ್ಲೀಷ್ ವಿದ್ಯಾಭ್ಯಾಸವನ್ನು ಪ್ರಾಥಮಿಕ ಶಿಕ್ಷಣದಿಂದಲೇ ಹೆಣ್ಣುಮಕ್ಕಳಿಗೆ ಪರಿಚಯಿಸಿದ್ದ ಲಲಿತಾರ ಅಜ್ಜ ಮತ್ತು ತಂದೆಯವರ ಪ್ರಭಾವ ಅವರ ಕುಟುಂಬದ ಮೇಲಿದ್ದುದರ ಕಾರಣ, ಲಲಿತಾ ಕುಟುಂಬದಲ್ಲಿ ವನಿತೆಯರು, ರಾಷ್ಟ್ರಮಟ್ಟದಲ್ಲಿ ವಿಶ್ವವಿದ್ಯಾಲಯದಿಂದ ಆನರ್ಸ್ ಪದವಿಯನ್ನು ಮೊಟ್ಟಮೊದಲು ಪಡೆದ ಯಶಸ್ಸಿನ ಹೆಗ್ಗಳಿಕೆ ಹೊಂದಿದ್ದರು. ಅಷ್ಟಲ್ಲದೇ, ವಿಧವೆಯರ ವಿಮೋಚನೆ, ಬಾಲ್ಯವಿವಾಹ ಹಾಗೂ ಅಭಾಗ್ಯ ಮಹಿಳೆಯರ ಸುಧಾರಣೆಯಂತಹ ಸಮಾಜ ಸೇವಾಕಾರ್ಯಗಳಲ್ಲಿ ಮುಖ್ಯ ಪಾತ್ರವಹಿಸಿದ ಹಲವೇ ಕುಟುಂಬಗಳಲ್ಲಿ ಒಬ್ಬರಾಗಿದ್ದ ಹೆಮ್ಮೆಯೂ ಇವರದಾಗಿತ್ತು. ತಮ್ಮ ಕಿರಿಯ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಲಲಿತಾರ ಬಾಲ್ಯ ಹೆಚ್ಚು ಕಡಿಮೆ ಮದ್ರಾಸಿನ ಟ್ರಿಪ್ಲಿಕೇನಿನಲ್ಲಿದ್ದ ಅಜ್ಜ-ಅಜ್ಜಿಯ ಮನೆಯಲ್ಲೇ ಕಳೆದಿತ್ತು. ಮೂರು ತಲೆಮಾರಿನ ಸದಸ್ಯರು ಒಟ್ಟಿಗೆ ವಾಸಿಸುತ್ತಿದ್ದ ಅವರ ಮನೆ “ಆನಂದ-ವಿಲಾಸ” ಲಲಿತಾರ ಜೀವನದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿತ್ತು. ಚಂದ್ರಾರ ಮನೆ “ಚಂದ್ರಾ-ವಿಲಾಸದ” ಪಕ್ಕದಲ್ಲೇ ಲಲಿತಾ ವಾಸವಾಗಿದ್ದು, ಅವರಿಬ್ಬರ ಕುಟುಂಬಗಳು ಪರಿಚಿತರಾಗಿದ್ದರೆಂಬುದು ಗಮನಾರ್ಹವಾದ ಸಂಗತಿ. ಸಿ.ವಿ.ರಾಮನ್ ಅಂತಹ ಮಹಾ ಮೇಧಾವಿಯನ್ನು ಹೊಂದಿದ್ದ ಚಂದ್ರರ ಕುಟುಂಬದಂತೇ, ಲಲಿತಾರ ಕುಟುಂಬವೂ ವಿಶೇಷವಾದ ಹಿನ್ನೆಲೆಯನ್ನು ಹೊಂದಿದ್ದು”ತಾವಿಬ್ಬರೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಕುಟುಂಬಗಳ ಕುಡಿಗಳಾಗಿದ್ದೇವೆ” ಎನ್ನುತ್ತಿದ್ದರು ಲಲಿತಾ. ಭೌತಶಾಸ್ತ್ರದ ಆನರ್ಸ್ ಪದವಿಯ ದಿನಗಳಲ್ಲೇ ಚಂದ್ರ ಮತ್ತು ಲಲಿತಾ ಪರಿಚಿತರಾಗಿದ್ದು, ಚಂದ್ರರ ಪ್ರಬಂಧ ಮಂಡನೆಯನ್ನು ಮನಸಾರೆ ಮೆಚ್ಚುತಿದ್ದರು. ಚಂದ್ರ ಕಾಲೇಜಿನಿಂದ ಅವರನ್ನು ಹಿಂಬಾಲಿಸಿ ಅವರಿಗೆ ಮೆಚ್ಚುಗೆಯಾಗಿ ಹೂವು ಕೊಡುತ್ತಿದ್ದ ಪ್ರಸಂಗಗಳು, ಅವರಿಬ್ಬರ ಮಧ್ಯೆ ಓಡಾಡುತ್ತಿದ್ದ ಪ್ರಯೋಗಾಲಯದ ರೆಕಾರ್ಡ್ ಪುಸ್ತಕಗಳ ಘಟನೆಗಳು ಚಂದ್ರಾ ಮತ್ತು ಲಲಿತಾರ ನಡುವೆ ಇದ್ದ ಆಕರ್ಷಣೆಯನ್ನು ತೋರುತ್ತದೆ. ಕೇಂಬ್ರಿಡ್ಜಿನಿಂದಲೂ ಚಂದ್ರಾ ಅವರಿಗೆ ಪತ್ರಗಳನ್ನು ನಿಯಮಿತವಾಗಿ ಬರೆಯುತ್ತಿದ್ದು, ಅವರ ವಿವಾಹಪೂರ್ವ ಸಂಬಂಧ ಕೇವಲ ಅಷ್ಟಕ್ಕೇ ಸೀಮಿತವಾಗಿತ್ತು. ೧೯೩೬ರಲ್ಲಿ ವಿವಾಹಾನಂತರ ವಿದೇಶಕ್ಕೆ ಚಂದ್ರಾ ಅವರೊಡನೆ ತೆರಳಿದ ಲಲಿತಾ ಅವರ ಜೀವನದಲ್ಲಿ ಒಂದು ಪ್ರಮುಖ ಅಧ್ಯಾಯ ಪ್ರಾರಂಭವಾಯಿತು. ಕೇಂಬ್ರಿಡ್ಜಿನಲ್ಲಿ ಹಲವು ತಿಂಗಳುಗಳು ಕಳೆದ ನಂತರ, ಚಂದ್ರರಿಗೆ ನೌಕರಿ ಅಮೆರಿಕೆಯಲ್ಲಿ ದೊರೆತಾಗ, ಅದೊಂದು ತಮ್ಮ ಜೀವನದಲ್ಲಿನ ಮಹತ್ತರ ತಿರುವು ಎಂಬುದರ ಅರಿವು ಬಹುಶಃ ಅವರಿಗಿತ್ತೋ ಇಲ್ಲವೋ ತಿಳಿಯದು! ಹೊಸ ಪರಿಸರ, ವೈಪರೀತ್ಯದ ಹವಾಮಾನ, ಕುಟುಂಬದ ಪ್ರೀತಿ-ವಿಶ್ವಾಸಗಳಿಂದ ದೂರವಾಗಿ, ಲಲಿತಾ ಚಂದ್ರರ ವಿಜ್ಞಾನ ಪ್ರಪಂಚದಲ್ಲಿ ಮುಳುಗಿ ಹೋದರು. ವಿಸ್ಕಾನ್ಸಿನ್ ರಾಜ್ಯದಲ್ಲಿರುವ, ವಿಲಿಯಮ್ಸ್ ಬೇ ಪ್ರದೇಶದಲ್ಲಿ, ಯೆರ್ಕಿಸ್ ವೀಕ್ಷಣಾಲಯದಲ್ಲಿ ನಡೆಯುತ್ತಿದ್ದ ಉಪನ್ಯಾಸಗಳು, ಮಹಿಳಾ ಅಧ್ಯಯನ ಕ್ಲಬ್ಬಿನ ಚಟುವಟಿಕೆ, ಗ್ರಂಥಾಲಯದ ಸದಸ್ಯತ್ವ ಹೀಗೆ ಹಲವು ಹತ್ತು ರೀತಿಯ ಹವ್ಯಾಸಗಳಿಗೆ ತಮ್ಮನ್ನು ತೊಡಗಿಸಿಕೊಂಡ ಲಲಿತಾ, ಸಂಗೀತದ ಪರಿಪಾಠವನ್ನೂ ಮುಂದುವರೆಸಿದ್ದರು. ಮುಂದಿನ ಉನ್ನತ ಅಭ್ಯಾಸಕ್ಕೆ ಹೋಗುವ ವಿಷಯವನ್ನು ಕೈಬಿಟ್ಟ ಲಲಿತಾ ಅವರ ನಿರ್ಧಾರ ಚಂದ್ರರಿಗೆ ಅಸಮಧಾನ ಉಂಟು ಮಾಡಿತ್ತಾದರೂ, ಲಲಿತಾ ತಮ್ಮ ಸಮಯವನ್ನೆಲ್ಲಾ ಅದರಲ್ಲಿ ವಿನಿಯೋಗಿಸದೆ, ಚಂದ್ರರ ವಿಜ್ಞಾನ ಮತ್ತು ಅವರಲ್ಲಿದ್ದ ವಿಜ್ಞಾನಿಯೊಬ್ಬನ ನಿರ್ಮಾಣದಲ್ಲಿ ವಿನಿಯೋಗಿಸುವ ತೀರ್ಮಾನ ಮಾಡಿದರು. ಇದು ಅವರಲ್ಲಿದ್ದ ಸ್ವಾರ್ಥರಹಿತ ತ್ಯಾಗ ಗುಣವನ್ನು ತೋರುತ್ತದೆ. ಇದೇ ಸಮಯದಲ್ಲಿ ಭಾರತಕ್ಕೆ ವಾಪಸ್ ಆಗುವಂತೆ ಕುಟುಂಬದಿಂದ ಬರುತ್ತಿದ್ದ ಒತ್ತಡಗಳು ಮತ್ತು ಚಿಕ್ಕಪ್ಪ ಸಿ.ವಿ. ರಾಮನ್ ಆಂದ್ರಪ್ರದೇಶದ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ವಿಭಾಗದಲ್ಲಿ ರೀಡರ್ ಹುದ್ದೆಯ ಕೆಲಸಕ್ಕೆ ಕಳಿಸಿದ ಪ್ರಸ್ತಾಪದ ಒತ್ತಡಗಳನ್ನು  ಎದುರಿಸಿ, ಅಮೆರಿಕೆಯಲ್ಲೇ ಉಳಿದು, ಉನ್ನತ ಮಟ್ತದ ವಿಜ್ಞಾನವನ್ನು ಮುಂದುವರೆಸುವ ಚಂದ್ರ ನಿರ್ಧಾರಕ್ಕೆ ದೃಢವಾಗಿ ಬೆಂಬಲ ನೀಡಿದ ಲಲಿತಾರ ಆತ್ಮವಿಶ್ವಾಸವನ್ನು ಯಾರಾದರೂ ಮೆಚ್ಚುವಂತಹದೆ.


ಎರಡನೆಯ ಮಹಾಯುದ್ಧದ ಸಮಯದಲ್ಲಿ ಚಂದ್ರ ಅಮೆರಿಕನ್ ಮಿಲಿಟರಿ ವಿಭಾಗದಲ್ಲಿ ತಜ್ಞರಾಗಿ ಮಾಡುತ್ತಿದ್ದ ಹೆಚ್ಚಿನ ಕಾರ್ಯಗಳ ಸಮಯದಲ್ಲಿ, ಮನೆಯ ಎಲ್ಲಾ ಕೆಲಸದ ಒತ್ತದಗಳನ್ನೂ ತಾವೇ ನಿಭಾಯಿಸುವುದಲ್ಲದೇ, ಒಂಟಿತನದ ಬೇಗೆಯನ್ನೂ ಅನುಭವಿಸಿ, ಚಂದ್ರರ ವಿಜ್ಞಾನಕ್ಕೆ ಕೊಟ್ಟ ಬೆಂಬಲವನ್ನು ಚಂದ್ರ ಹಲವಾರು ಕಡೆ ಸ್ಮರಿಸಿದ್ದಾರೆ. ಅಂದಿನ ಅಮೆರಿಕನ್ ಸಮಾಜದಲ್ಲಿ ವ್ಯಾಪಕವಾಗಿ ಅಸ್ತಿತ್ವದಲ್ಲಿದ್ದ ವರ್ಣಭೇದದ ಘಟನೆಗಳಂತೂ ಚಂದ್ರರನ್ನು ದಿಕ್ಕೆಡಿಸಿದ್ದು, ಅದಕ್ಕೆ ಹೆದರಿ ಲಲಿತಾರನ್ನು ಜೊತೆಯಲ್ಲಿ ಹಲವು ಜಾಗಗಳಿಗೆ ಕರೆದುಕೊಂಡು ಹೋಗುವುದನ್ನೇ ನಿಲ್ಲಿಸಿದ್ದರಂತೆ. ಒಮ್ಮೆ ನ್ಯೂಯಾರ್ಕ್ ನಗರದಲ್ಲಿ ಯಾವ ಹೋಟೆಲಿನಲ್ಲೂ ಕೋಣೆ ಸಿಗದೆ, ಮಿತ್ರರೊಬ್ಬರ ನೆರವಿನಿಂದ ಕೋಣೆ ದೊರಕಿಸಿಕೊಂಡ ಅನುಭವ, ಉತ್ತರ ವಿಸ್ಕಾಂನ್ಸಿನ ಕ್ಯಾಂಪಿಂಗ್ ಸಮಯದಲ್ಲಿ ಮತ್ತದೇ ಘಟನೆಯ ಪುನರಾವರ್ತನೆ, ಅಂದು ಅಮೆರಿಕೆಯಲ್ಲಿ ವಿದೇಶಿಯರ ಜೀವನದಲ್ಲಿ ಎದುರಾಗುತ್ತಿದ್ದ ಕ್ಲಿಷ್ಟ ಪರಿಸ್ಥಿತಿಯನ್ನು ತಿಳಿಸುತ್ತದೆ. ಕಾಲೇಜಿನ ಅಧ್ಯಾಪಕವರ್ಗದ ಕುಟುಂಬಗಳ, ಇನ್ನಿತರ ಮಹಿಳೆಯರ ಒಡನಾಟವಿದ್ದರೂ, ಭಾಧಿಸುತ್ತಿದ್ದ ಒಂಟಿತನವನ್ನು ಪರಿಹರಿಸಲು, ಲಲಿತಾ ಬರೆಯುವ ಹವ್ಯಾಸವನ್ನು ಪ್ರಾರಂಭಿಸಿ, ತಮ್ಮ ಅನುಭವಗಳನ್ನು ಪ್ರಭಂಧಗಳ ಮೂಲಕ ಲೇಖನಿಗೆ ಇಳಿಸುತ್ತಿದ್ದದ್ದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯೆನಿಸಿದೆ. ಚಂದ್ರರ ವೈಜ್ಞಾನಿಕ ಕಾರ್ಯಗಳ ಬಗ್ಗೆಯೂ ಬರೆಯುತ್ತಿದ್ದ ಲಲಿತಾ, ಈ ಹವ್ಯಾಸವನ್ನು ಮುಂದುವರೆಸಲು ಬೇಕಾಗಿದ್ದ ಶಿಸ್ತು ತಮ್ಮಲ್ಲಿ ಇರಲಿಲ್ಲವೆಂಬ ಮಾತನ್ನು ಸ್ಪಷ್ಟವಾಗಿ ತಾವೇ ಉಲ್ಲೇಖಿಸಿದ್ದಾರೆ. ಚಂದ್ರರ ಕಾರ್ಯಗಳ ನಡುವೆ ಅವರಿಗಾಗುತ್ತಿದ್ದ ಹತಾಶೆಗಳ ಆಘಾತದ ಹಲವು ಪೆಟ್ಟುಗಳನ್ನು ಲಲಿತಾರೂ ತಡೆದುಕೊಳ್ಳಬೇಕಾಗುತ್ತಿತ್ತು. ಅಂತಹ ಸಂಧರ್ಭಗಳಲ್ಲಿ ದೃತಿಗೆಡದೆ ಅವರಿಗೆ ಆದಷ್ಟೂ ಸಹಕಾರ ನೀಡುತ್ತಿದ್ದ ಲಲಿತಾರ ತಾಳ್ಮೆಯನ್ನು ಮೆಚ್ಚಬೇಕು. ಅವರಿದ್ದ ವಿಲಿಯಮ್ಸ್ ಬೇ ಪ್ರದೇಶದಲ್ಲಿ ಇನ್ನೊಬ್ಬ ಭಾರತೀಯ ವ್ಯಕ್ತಿ ಇರದಿದ್ದ ಆ ಕಠಿಣ ಸಮಯದಲ್ಲಿ, ಈ ದಂಪತಿಗಳು ಅನುಭವಿಸಿದ ಏಕಾಂಗಿತನದ ಅನುಭವ ಮಾತುಗಳಲ್ಲಿ ವ್ಯಕ್ತ ಪಡಿಸಲಾಗದ್ದು ಎನ್ನಬಹುದು. ಚಂದ್ರರ ಸಹೋದ್ಯೋಗಿಯ ಪತ್ನಿ, ಮಹಿಳೆಯರ ಕೂಟವೊಂದರಲ್ಲಿ, ಲಲಿತಾರಿಗೆ ಸರಳವಾದ ಸ್ಯಾಂಡ್-ವಿಚ್ ತರಲು ಹೇಳಿ, ನಂತರ ಭೋಜನದ ಸಮಯದಲ್ಲಿ ಅವನ್ನು ಮೇಜಿನ ಮೇಲೆ ಬಡಿಸಲು ಇಡದೇ ಇದ್ದ ಘಟನೆ, ಅಂದು ಅಮೆರಿಕೆಯ ಸಮಾಜದಲ್ಲಿದ್ದ ಪೂರ್ವಾಗ್ರಹಗಳಿಗೆ ಸಾಕ್ಷಿಯೆನಿಸುತ್ತದೆ. ಇಂತಹ ಹಲವಾರು ಸನ್ನಿವೇಶಗಳಲ್ಲಿ, ಇಂತಹುದೇ ಅನುಭವವಾದರೂ ಸಹಾ, ಲಲಿತಾ ಮನಸ್ಸಿಗೆ ನೋವುಂಟು ಮಾಡಿಕೊಳ್ಳದೇ, ಅಲ್ಲಿನ ಜನರ ಅಜ್ಞಾನಕ್ಕೆ ಮರುಗುತ್ತಿದ್ದರಂತೆ. ಈ ಗುಣ ಅವರಲ್ಲಿದ್ದ ಹೃದಯ ವೈಶಾಲ್ಯತೆಯನ್ನು ಎತ್ತಿ ಹಿಡಿಯುವುದಲ್ಲದೇ, ಅವರಿಗಿದ್ದ ಮಾನವತೆಯ ಅರಿವಾಗುತ್ತದೆ. ಈ ಎಲ್ಲಾ ಸನ್ನಿವೇಶಗಳಲ್ಲೂ, ಪತಿ-ಪತ್ನಿ ಒಬ್ಬರಿಗೊಬ್ಬರು ಸಹಕಾರಿಯಾಗಿ ಜೀವನವನ್ನು ಎದುರಿಸಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಚಂದ್ರರ ವಿಜ್ಞಾನ ಮತ್ತು ಅದರ ಬೆಳವಣಿಗೆಗೆ, ಲಲಿತಾ ಮಾಡಿದ ಇಂತಹ ತ್ಯಾಗ ಅನೇಕರಿಗೆ ತಿಳಿದಿಲ್ಲ. ತಮ್ಮ ಜೀವನವನ್ನು ವಿಜ್ಞಾನಕ್ಕೇ ಮುಡಿಪಾಗಿಟ್ಟು, ಋಷಿಯಂತೆ ಅದರ ತಪಸ್ಸು ಗೈದ ಚಂದ್ರರ ಜೀವನದಲ್ಲಿ, ಇತರ ಸಾಮಾನ್ಯ ಚಟುವಟಿಕೆಗಳಿಗೆ ಸಮಯವೇ ಇರಲಿಲ್ಲಾ. ಲಲಿತಾರಿಗೆ ಮಹಿಳೆಯರ ಗುಂಪಿನಲ್ಲಿ ಆತ್ಮೀಯರು ಎಂದು ಹೇಳಿಕೊಳ್ಳುವಂತಹ ಸ್ನೇಹಿತೆಯರಾರೂ ಇರಲಿಲ್ಲ, ಚಂದ್ರರ ವಿನಃ, ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವ ಮತ್ತೊಂದು ಜೀವ ಆಕೆಗೆ ಗೊತ್ತಿರಲಿಲ್ಲ. ಆಕೆಯ ಮಾತುಗಳಲ್ಲೇ ಹೇಳಬೇಕೆಂದರೆ “ಅಮೇರಿಕ ದೇಶಕ್ಕೆ ಅಷ್ಟೊಂದು ದೂರವನ್ನು ಕ್ರಮಿಸಿ ಹೋಗುತ್ತೀರಿ ನಿಜ, ಆದರೆ ಅದರ ಆತ್ಮವನ್ನು ಪ್ರವೇಶಿಸಲು ಎಂದೂ ಸಾಧ್ಯವೇ ಇಲ್ಲ,” ಅಂದರೆ, ಅಲ್ಲಿರುವ ಯಾವ ವ್ಯಕ್ತಿಯ ಆತ್ಮದೊಳಕ್ಕೂ ಪ್ರವೇಶಿಸಲು ನಮಗೆ ಸಾಧ್ಯವಾಗಲೆ ಇಲ್ಲ, ಅಂತಹ ಆತ್ಮೀಯರು ಸಿಗಲೇ ಇಲ್ಲ ಎಂಬ ಸತ್ಯವನ್ನು ಮನಗಂಡಿದ್ದ ಲಲಿತಾ, ಆ ಸಮಾಜದಲ್ಲಿ ತಮ್ಮ ಉಳಿದ ಜೀವನವನ್ನು ಕಳೆದ ರೀತಿಯನ್ನು ಊಹಿಸಲೇ ಅಸಾಧ್ಯ! ಇದೇ ಅನುಭವ ಚಂದ್ರರಿಗೂ ಆಗಿತ್ತು. ಚಂದ್ರರ ಮೇಧಾವಿತನ, ಅವರ ಉತ್ಕೃಷ್ಟ ಮಟ್ಟದ ಸಂಶೋಧನೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಅವರಿಗಿದ್ದ ಪ್ರಖ್ಯಾತಿ, ಇವೆಲ್ಲ ಗುಣಗಳ ಅರಿವು ಅಲ್ಲಿನ ವೀಕ್ಷಣಾಲಯದ ನಿರ್ದೇಶಕನಿಗೆ ಇದ್ದರೂ ಸಹಾ, ಯೆರ್ಕಿಸ್ ವೀಕ್ಷಣಾಲಯದಲ್ಲಿ ಅವರಿಗಿಂತ ಕಿರಿಯ ಸಹೋದ್ಯೋಗಿಗಳಿಗೆ ಹೆಚ್ಚಿನ ಬಡ್ತಿ ಮತ್ತು ಸಂಬಳವನ್ನು ನೀಡಲಾಗಿತ್ತು. ಇದರ ಅರಿವು ಚಂದ್ರ ಮತ್ತು ಲಲಿತಾರಿಗೆ ಇದ್ದರೂ ಸಹಾ, ಅದಕ್ಕೆಲ್ಲಾ ಬೆನ್ನು ಹಾಕಿ ತಮ್ಮ ಜೀವನವನ್ನು ಕೇವಲ ಉತ್ತಮ ಮಟ್ಟದ ಸಂಶೋಧನೆಗೆ ಮಾತ್ರಾ ಮೀಸಲಾಗಿಟ್ಟು, ಪ್ರಜ್ಞಾಪೂರ್ವಕವಾಗಿ ಸಮಚಿತ್ತತೆಯನ್ನು ಬೆಳೆಸಿಕೊಂಡಿದ್ದ ಚಂದ್ರ ಮತ್ತು ಅವರ ಈ ದೃಢ ನಿಲುವಿಗೆ ಸಂಪೂರ್ಣ ಸಹಕಾರವಿತ್ತಿದ್ದ ಲಲಿತಾರ ಆತ್ಮಸ್ಥೈರ್ಯಕ್ಕೆ ತಲೆಬಾಗಲೇ ಬೇಕು. ಹಾಗಾಗಿ, ಈ ರೀತಿಯ ಸ್ನೇಹಪರವಲ್ಲದ ವಾತಾವರಣದಲ್ಲಿ ತಮ್ಮ ಜೀವನವನ್ನು ಮುಂದುವರೆಸಿದ ಈ ದಂಪತಿಗಳಿಗೆ, ಅವರ ಸಹೋದ್ಯೋಗಿಗಳ ಬಗ್ಗೆ ಇದ್ದ ವಿಶ್ವಾಸದ ಪರದೆ ಕಳಚಿಬಿದ್ದು, ಅವರೊಡನೆಯ ಸಂಬಂಧದಲ್ಲಿ ಕಂಡಿದ್ದ ಗುಲಾಬಿಯ ಬಣ್ಣಗಳು ಮಸುಕಾಗಿ, ಅದರ ಜಾಗದಲ್ಲಿ ಸಿನಿಕತೆ ಆವರಿಸಿತು. ಈ ಕಾರಣಗಳಿಂದಾಗಿ, ಚಂದ್ರ ಮತ್ತು ಲಲಿತಾರ ಪರಸ್ಪರ ಅವಲಂಬನೆ ಸಂಪೂರ್ಣವಾಗಿತ್ತು.

Lalitha Chandrasekhar in 1990's
Lalitha Chandrasekhar in 1990’s Cc:Wiki

ಆದರೆ ಈ ಅಂಶಗಳನ್ನು ಬಹಿರಂಗ ಪಡಿಸಲು ಲಲಿತಾ ಎಂದೂ ಚಂದ್ರರ ಜೀವನಚರಿತ್ರೆಯ ಲೇಖಕರಿಗೆ ಅನುಮತಿ ನೀಡಲೇ ಇಲ್ಲವಂತೆ. ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂದರ್ಭವನ್ನು ಎತ್ತಿ ಅವರನ್ನು ದೂಷಿಸುವ ಅಲ್ಪತನ ಅವರಲ್ಲಿ ಇರಲಿಲ್ಲ.  ಇಂತಹ ಮನ ನೋಯುವಂತಹ ಅನೇಕ ಪ್ರಸಂಗಗಳು ಜರುಗಿದರೂ, ಅದಕ್ಕೆ ಬೆನ್ನು ಮಾಡಿ ಮುಂದುವರೆದ ಆತ್ಮಸ್ಥೈರ್ಯಕ್ಕೆ ಭೇಷ್ ಎನಲೇ ಬೇಕು. ಜೊತೆಗೆ ವರ್ಣಭೇಧದ ನೀತಿಯ ವಿಷಯ ಬಂದಾಗಲೆಲ್ಲ, ಭಾರತದಲ್ಲಿ ಆಳವಾಗಿ ಬೇರೂರಿರುವ ಜಾತಿ ಪದ್ಧತಿಯ ಬಗ್ಗೆ ಮಾತನಾಡಿ, ನಮ್ಮಲ್ಲಿ ಬ್ರಾಹ್ಮಣರು ಕೆಳಗಿನ ಜಾತಿಯವರನ್ನು ಕೀಳಾಗಿ ಕಂಡಾಗ ಅವರಿಗಾಗುವ ನೋವಿನ ಆಳ, ಇಲ್ಲಿ ವಿದೇಶದಲ್ಲಿ ನಮ್ಮ ಮೇಲೆ ವರ್ಣಭೇಧ ತೋರಿದಾಗ ಅರಿವಾಗುತ್ತದೆ ಎಂದು ಹೇಳುತ್ತಿದ್ದರಂತೆ ಲಲಿತಾ. ತಮ್ಮ ಮದುವೆಯ ಮೊದಲ ದಿನಗಳಲ್ಲಿ, ಚಂದ್ರ ತಮ್ಮ ವಿಜ್ಞಾನದಲ್ಲಿ ಯಾವಾಗಲೂ ನಿರತರಾಗಿದ್ದು, ತಮ್ಮ ಕಡೆಗೆ ಅವರಿಗೆ ಗಮನವೇ ಇರಲಿಲ್ಲಾ ಎಂದು ಲಲಿತಾರಿಗೆ ಅರಿವಾಗಿದ್ದರೂ, ಆ ಏಕಾಂಗಿ ಜೀವನಕ್ಕೆ ತಮ್ಮನ್ನು ಒಗ್ಗಿಸಿಕೊಂಡು ಮುಂದೆ ನಡೆದ ಧೀಮಂತ ಮಹಿಳೆ. ಆದರೆ ಮುಂದೆ ಚಂದ್ರ, ಅಮೆರಿಕನ್ ಆಸ್ಟ್ರೋ-ಫಿಸಿಕಲ್ ಜರ್ನಲ್ ನಿಯತಕಾಲಿಕೆಯ ಸಂಪಾದಕರಾಗಿ ೧೯ ವರ್ಷಗಳ ದೀರ್ಘಕಾಲ, ತಮ್ಮ ಕೆಲಸವಲ್ಲದೇ ಬೇರಾವುದಕ್ಕೂ ಬಿಡುವಿಲ್ಲದಂತೆ ದುಡಿಯುತ್ತಿದ್ದಾಗ, ಲಲಿತಾ ತಾಳ್ಮೆ ಕಳೆದುಕೊಂಡ ಪ್ರಸಂಗಗಳಿದ್ದವು. ಚಂದ್ರರನ್ನು ಸಂಪಾದಕರ ಜವಾಬ್ದಾರಿಯನ್ನು ಬಿಟ್ಟು ಬಿಡಲು ಒತ್ತಾಯಿಸಿದ ಘಟನೆ ಲಲಿತಾರ ಕಣ್ಣಲ್ಲಿ ನೀರು ತಂದಿತ್ತಂತೆ. ವಿಜ್ಞಾನದ ಕೆಲಸದ ಮಧ್ಯೆ ತಮ್ಮನ್ನು ಪೂರ್ಣವಾಗಿ ಮರೆತಿದ್ದ ಚಂದ್ರರೆದುರು ನಿಂತು ಸಿಟ್ಟಿನಿಂದ “ನಾನಿಲ್ಲಿ ಜೀವಂತವಾಗಿದ್ದೇನೆ ಎಂಬುದು ನಿಮಗೆ ನೆನಪಿದೆಯೇ” ಎಂದು ಕೂಗಾಡಿದ್ದಾಗ, ಚಂದ್ರರ ಕಣ್ಣಲ್ಲೂ ನೀರೂರಿ, ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದರಂತೆ.


೧೯೫೨ರಿಂದ ೧೯೭೧ರವರೆಗೆ ಆಸ್ಟ್ರೋಫ಼ಿಸಿಕಲ್ ಜರ್ನಲ್ (Astro-Physical Journal) ನಿಯತಕಾಲಿಕದ ವ್ಯವಸ್ಥಾಪಕ ಸಂಪಾದಕರಾಗಿ, ಅದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಚಂದ್ರ ಅವರ ಈ ಕಾರ್ಯಸಾಧನೆಯ ಪರಿಣಾಮ ಅವರ ವೈಯಕ್ತಿಕ ಜೀವನದಲ್ಲಿ ಅಶಾಂತಿ ತಂದಿತ್ತು ಎಂಬುದನ್ನು ಪ್ರತ್ಯೇಕವಾಗಿ ಉಲ್ಲೇಖಿಸುವ ಅಗತ್ಯವಿಲ್ಲ. ಈ ಹತ್ತೊಂಬತ್ತು ವರ್ಷಗಳ ದೀರ್ಘಾವಧಿಯಲ್ಲಿ ಚಂದ್ರ, ಯಾವ ರಜೆಯನ್ನಾಗಲೀ, ಭೋಧನೆಯಲ್ಲಿ ರಿಯಾಯತಿಯನ್ನಾಗಲೀ, ಸಬಾಟಿಕಲ್ ರಜೆಯನ್ನಾಗಲೀ ಪಡೆಯದೇ ಹಾಗೂ ತಮ್ಮ ಉತ್ತಮ ಮಟ್ಟದ ಸಂಶೋಧನೆಯಲ್ಲಿ ಸ್ವಲ್ಪವೂ ರಾಜಿ ಮಾಡಿಕೊಳ್ಳದೆ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಂಡುಬಿಟ್ಟಿದ್ದರು. ಇದರಿಂದಾಗಿ, ಪ್ರವಾಸ ಮಾಡುವ, ಇತರ ಜನರೊಡನೆ ಬೆರೆಯುವ ಮತ್ತು ತಮ್ಮ ಪತ್ನಿ ಲಲಿತಾರೊಡನೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶಗಳನ್ನೆಲ್ಲಾ ನಿರಾಕರಿಸಿಕೊಂಡಿದ್ದರು. ಈ ಪರಿಸ್ಥಿತಿಯಲ್ಲಿ ಲಲಿತಾ ತಮ್ಮ ತಾಳ್ಮೆಯ ಪರೀಕ್ಷೆಯಾಗುತ್ತಿರುವುದನ್ನು ಕಂಡು, ೧೯೬೪ರಿಂದಲೇ ಚಂದ್ರರನ್ನು ಸಂಪಾದಕತ್ವಕ್ಕೆ ರಾಜೀನಾಮೆ ನೀಡಲು ಒತ್ತಾಯಿಸಲಾರಂಭಿಸಿದರು. ಚಂದ್ರರ ಕಾರ್ಯಗಳ ಒತ್ತಡದಿಂದ ಆಕೆಗೆ ತಮ್ಮಿಬ್ಬರ ಸಂಬಂಧದಲ್ಲಿ ಒಂದು ರೀತಿಯ ಶೂನ್ಯತೆ ಆವರಿಸುತ್ತಿರುವುದು ಕಂಡು ಬಂದಿತ್ತು. ಈ ಮಧ್ಯೆ ಜರ್ನಲ್ ಅನ್ನು ಸರಿಯಾದ ರೀತಿಯಲ್ಲಿ ನಡೆಸಲು ವಿಶ್ವವಿದ್ಯಾಲಯಕ್ಕೆ ಸಾಧ್ಯವಾದ ಪರಿಸ್ಥಿತಿ ಉಂಟಾಗುತ್ತಿರುವುದನ್ನು ಗಮನಿಸಿ ಚಂದ್ರ, ಆ ಸಮಯಕ್ಕೆ ಮುಂಚೆಯೇ ೧೯೭೧ರಲ್ಲಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿ ಅದರಿಂದ ಬಿಡುಗಡೆ ಹೊಂದಿದರು. ಈ ರೀತಿಯ ಅಸಾಧಾರಣ ಸೇವೆಯಿಂದ ಅವರಿಗೆ ವೈಜ್ಞಾನಿಕ ಸಮುದಾಯದೊಂದಿಗೆ ಯಾವ ವೈಯಕ್ತಿಕ ಪ್ರೀತಿ ವಿಶ್ವಾಸಗಳು ಉಂಟಾಗಿರಬಹುದೆಂದು ಯಾರಾದರೂ ಯೋಚಿಸಿದ್ದರೆ, ಅದು ಖಂಡಿತಾ ತಪ್ಪು ಅಭಿಪ್ರಾಯವಾಗಿತ್ತು. ಅದಕ್ಕೆ ವಿರುದ್ಧವಾಗಿ, ಈ ಅವಧಿಯಲ್ಲಿ ಈ ಕಾರ್ಯಭಾರಗಳು ಅವರ ವೈಯಕ್ತಿಕ ಜೀವನಕ್ಕೆ ವಿಕೃತ ರೂಪ ನೀಡಿದ್ದಲ್ಲದೇ ಅವರನ್ನು ಸಹೋದ್ಯೋಗಿಗಳಿಂದ ದೂರಗೊಳಿಸಿತು. ಮತ್ತೊಮ್ಮೆ ಪೆಟ್ಟು ಲಲಿತಾರಿಗೇ ಬಿದ್ದಿತ್ತು. ಸಹೋದ್ಯೋಗಿಗಳ ಉದಾಸೀನ ಮತ್ತು ವರ್ಣನೀತಿಯ ಮನೋಭಾವಗಳ ಅನುಭವಗಳ ಮಧ್ಯೆಯೂ, ಲಲಿತಾ ಅನೇಕ ಸಂಧರ್ಭಗಳಲ್ಲಿ, ಚಂದ್ರರ ಈ ಗೆಳೆಯ ವೃಂದ ಮತ್ತು ಅವರ ವಿಧ್ಯಾರ್ಥಿಗಳನ್ನು ಮನೆಗೆ ಕರೆದು ದೋಸೆ ಮತ್ತು ಬೆಣ್ಣೆಗಳನ್ನು ನೀಡಿ ಸತ್ಕರಿಸುತ್ತಿದ್ದದ್ದು ಅವರಿಗಿದ್ದ ಸುಸಂಸ್ಕೃತ ಸ್ವಭಾವಕ್ಕೆ ಸಾಕ್ಷಿಯಾಗಿದೆ. ಇಷ್ಟೆಲ್ಲಾ ಪ್ರತಿಕೂಲ ವಾತಾವರಣಗಳ ಮಧ್ಯೆ, ದಂಪತಿಗಳು ಅಮೆರಿಕೆಯ ಪೌರತ್ವವನ್ನೇ ಸ್ವೀಕರಿಸಿ ೧೯೫೩ರಲ್ಲಿ ಅಲ್ಲಿಯ ಪ್ರಜೆಗಳಾದರು. ಇದಕ್ಕೆ ಕಾರಣ ತಮ್ಮ ೧೯೫೧ರಲ್ಲಿ ಅವರು ಭಾರತಕ್ಕೆ ನೀಡಿದ್ದ ಅಲ್ಪಾವಧಿಯ ಭೇಟಿಯ ಸಮಯದಲ್ಲಿ ನೋಡಿದ್ದ ಬದಲಾವಣೆಗಳು ಮತ್ತು ಉನ್ನತ ಮಟ್ಟದ ವಿಜ್ಞಾನವನ್ನು ಸಾಧಿಸುವಂತಹ ವಾತಾವರಣ ಹಾಗೂ ಅವಕಾಶಗಳ ಕೊರತೆ. ಅವರ ಈ ನಿರ್ಧಾರದಿಂದ ಕುಟುಂಬದಲ್ಲಿನ ಹಿರಿಯರು ಅವರ ಬಗ್ಗೆ ಬಹಳ ಕಟುವಾದ ಮಾತುಗಳನ್ನಾಡಿದರಲ್ಲದೇ, ಮುಂದೆಯೂ ಕುಟುಂಬದ ಸದಸ್ಯರೊಡನೆ ಅವರ ಸಂಬಂಧ ಸೌಹಾರ್ಧಯುತವಾಗಿರಲಿಲ್ಲ ಎಂಬ ಸಂಗತಿ ಕಂಡು ಬರುತ್ತದೆ.  APJ ನಿಯತಕಾಲಿಕ ಕಾರ್ಯಭಾರದ ಹೊಣೆಗಾರಿಕೆಯಿಂದ ಲಲಿತಾರ ತಾಳ್ಮೆಯ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲಿ ಒಮ್ಮೆ ಆಕೆ ಚಂದ್ರರನ್ನು ಕುರಿತು “ನಮ್ಮನ್ನು ಅನೇಕರು ಪಾರ್ಟಿಗಳಿಗೆ ಆಹ್ವಾನಿಸಿದ್ದಾರೆ, ಮತ್ತೆ ಹಲವರು ಊಟಕ್ಕೆ ಆಹ್ವಾನ ನೀಡಿದ್ದಾರೆ, ಈ ಆಹ್ವಾನಗಳನ್ನು ನಾವು ಮನ್ನಿಸಬೇಕಾಗಿದೆ ಎಂದಾಗ,” ಚಂದ್ರ ಉತ್ತರಿಸುತ್ತಾ “ಹೌದು , ಆದರೆ ಬಿಡುವೆಲ್ಲಿದೆ ಎಂದರು.” ಲಲಿತಾರಿಗೆ ನಿಯತಕಾಲಿಕೆ ತಮ್ಮಿಬ್ಬರ ಮಧ್ಯೆ ನಿಂತ ಪರ್ವತವೆಂದು ಭಾಸವಾಗಿ, ಅಸಾಧ್ಯವಾದ ಕ್ರೋಧವುಂಟಾಯಿತು. ಸಂಪಾದಕತ್ವಕ್ಕೆ ರಾಜೀನಾಮೆ ನೀಡಲು ಒತ್ತಾಯಿಸಿದಾಗ, ಒಮ್ಮೆಗೆ ಆ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದರು. ಒಮ್ಮೆಯಂತೂ ಚಿಕಾಗೋದಲ್ಲಿನ ರೆಸ್ಟೋರೆಂಟ್ನಲ್ಲಿ ಊಟದ ಸಮಯದಲ್ಲಿ ಲಲಿತಾರ ತಾಳ್ಮೆ ಮೀರಿ ಚಂದ್ರರ ಮೇಲೆ ಕೂಗಾಡಿ, “ನಾನೆಂದರೆ ನಿಮಗೆ ಅಷ್ಟೊಂದು ನಿಕೃಷ್ಟವೇ, ನಿಮ್ಮ ಜರ್ನಲ್ ಕಡೆಗೆ ಅಷ್ಟೊಂದು ಜವಾಬ್ದಾರಿ ನಿಮಗಿದ್ದರೆ, ನನ್ನ ಕಡೆಗೂ ಅಷ್ಟೇ ಜವಾಬ್ದಾರಿಯೂ ನಿಮಗಿದೆ?, ನಮಗಾಗಲೇ ವಯಸ್ಸಾಯಿತು, ನಾವೆಂದು ದಂಪತಿಗಳಂತೆ ಮಾಮೂಲಿನ ಜೀವನವನ್ನು ನಡೆಸುವುದು?,” ಎಂದು ಹರಿಹಾಯ್ದರು. ಆ ಘಳಿಗೆಯಲ್ಲಿ ಚಂದ್ರರಿಗೆ ತಾವು ಮಾಡುತ್ತಿರುವ ತಪ್ಪು ಅರಿವಾಗಿ ಕಣ್ಣಲ್ಲಿ ನೀರೂರಿತು ಮತ್ತು ೨೫ ವರ್ಷಗಳ ಅವರ ಸೇವೆಯನ್ನು ಕೊನೆಗೊಳ್ಳಿಸುವ ನಿರ್ಧಾರ ಬೀಜದ ಬಿತ್ತನೆಯಾಯಿತು ಎಂದು ಲಲಿತಾ ಮುಂದೆ ನಿಯತಕಾಲಿಕೆಯ ಸಂಪಾದಕತ್ವದಿಂದ ಚಂದ್ರ ರಾಜೀನಾಮೆ ನೀಡಿದ ಸಮಯದಲ್ಲಿ ನೆನಪಿಸಿಕೊಳ್ಳುತ್ತಾರೆ. ಚಂದ್ರರ ಸೇವೆಯನ್ನು ಕೊಂಡಾಡಿ ನೀಡಿದ ಬೀಳ್ಕೊಡುಗೆಯ ಸಮಾರಂಭದ ಸಮಯದಲ್ಲಿ, ಚಿಕಾಗೋ ವಿಶ್ವವಿದ್ಯಾಲಯದ ಅಧ್ಯಕ್ಷ ಲೆವಿ, ಕಡೆಯಲ್ಲಿ ಲಲಿತಾರರೊಡನೆ ಮಾತನಾಡುತ್ತಾ, ಚಂದ್ರರ ಈ ಕಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹೇಳಬೇಕಿತ್ತು ಎಂದರು. ಆದರಿಂದ ಲಲಿತಾರಿಗೆ ಸ್ವಲ್ಪ ಇರುಸು-ಮುರುಸಾಯಿತು. ಆದರೆ ಲೆವಿ ಅವರು ಬಹುಶಃ ಆ ಸಂದರ್ಭದಲ್ಲಿ ಚಂದ್ರರ ಸಾಧನೆಯ ಬಗ್ಗೆ ಲಲಿತಾರ ಅಭಿಪ್ರಾಯವನ್ನು ಕೇಳಿದ್ದರ ಬಹುದು ಎಂದು ನಮಗೆನಿಸಿದರೂ, ಜರ್ನಲ್ ಕಾರ್ಯಗಳ ಒತ್ತಡದಿಂದ ಅವರ ವೈವಾಹಿಕ ಜೀವನದ ಮೇಲಾಗಿದ್ದ ಪರಿಣಾಮವನ್ನು ಬಹುಶಃ ಲಲಿತಾ ಎಂದೆಂದೂ ಬಾಯಿಬಿಡುತ್ತಿರಲಿಲ್ಲವೆಂಬುದು ಅವರ ಸ್ವಭಾವದಿಂದ ನಮಗೆ ತಿಳಿಯುತ್ತದೆ. ಮುಂದೆ ೧೯೭೩ರಲ್ಲಿ ಚಂದ್ರ ಹೃದಯದ ತೊಂದರೆಯಿಂದ ನರಳುತ್ತಿರುವುದಾಗಿ ತಿಳಿದಾಗ ಆದ ಆತಂಕ ಮತ್ತು ಒತ್ತಡಗಳನ್ನು ಲಲಿತಾ ಬಹಳ ಧೈರ್ಯದಿಂದ ಎದುರಿಸಿದರು. ಅವರಿಗಿದ್ದ ಸಮಸ್ಯೆ ಮರಣಾಂತಿಕವಾಗುವ ಪ್ರಮಾಣದ್ದಾಗಿದ್ದು, ಚಂದ್ರರಿಗೆ ಅಂದು ಹಠಾತ್ತನೆ ಲಲಿತಾ ಅವರ ಭವಿಶ್ಯದ ಬಗ್ಗೆ ವಿಪರೀತ ಕಳವಳವಾಗಿತ್ತೆಂದು ಅವರೇ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ಉತ್ತಮ ವೈದ್ಯಕೀಯ ಸೌಲಭ್ಯ ಮತ್ತು ಲಲಿತಾರ ಆರೈಕೆಯಲ್ಲಿ ಅವರ ಆರೋಗ್ಯ ೧೯೭೫ರ ಜನವರಿಯ ಹೊತ್ತಿಗೆ ಸುಧಾರಿಸಿತು. ಆದರೆ ೧೯೭೬ರ ಕಡೆಯಲ್ಲಿ ಮತ್ತೊಮ್ಮೆ ಅವರ ಆರೋಗ್ಯ ಹದಗೆಟ್ತು, ಈ ಬಾರಿ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ಮಾಡ ಬೇಕಾಯಿತು. ಮತ್ತೊಮ್ಮೆ ೧೯೮೦ರ ವೇಳೆಗೆ ಚೇತರಿಸಿಕೊಂಡ ಚಂದ್ರರಿಗೆ, ಆಗ ನಿಜಕ್ಕೂ ಲಲಿತಾರ ಬಗ್ಗೆ ಚಿಂತೆಯಿತ್ತು. ಹಣಕಾಸಿನ ವಿಷಯಗಳಲ್ಲಿ ಯಾವ ತೊಂದರೆಗಳಿಲ್ಲದಿದ್ದರೂ, ಆಕೆಯ ಏಕಾಂಗಿತನದ ಬಗ್ಗೆ ಚಿಂತೆಗೀಡಾಗಿದ್ದರು. ಸುಮಾರು ೫೦ ವರ್ಷಗಳ ಕಾಲ ವಿಜ್ಞಾನಕ್ಕೆ ತಮ್ಮ ಅಮೋಘ ಸೇವೆ ಸಲ್ಲಿಸಿ, ೧೯೯೫ ಆಗಸ್ಟ್ ತಿಂಗಳಲ್ಲಿ ಚಂದ್ರ ನಿಧನರಾದ ನಂತರ ಲಲಿತಾರ ಜೀವನ ಏಕಾಂಗಿತನದಲ್ಲೇ ಕಳೆಯಿತು. ತಾವು ಚಂದ್ರರೊಡನೆ ವಾಸವಿದ್ದ ಚಿಕಾಗೋದ ಮನೆಯನ್ನು ಅವರು ಬಿಡದೇ, ಅಲ್ಲೇ ತಮ್ಮ ಉಳಿದ ಜೀವನವನ್ನು ಕಳೆದರು. ಚಂದ್ರರ ನಿಧನದ ನಂತರ, ಅವರ ಗೌರವಾರ್ಥವಾಗಿ ೧೯೯೬ರಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ವಿಚಾರಗೋಷ್ಠಿಗೆ ಸಂಬಂಧ ಪಟ್ಟ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಲಲಿತಾ, ೧೯೯೭ರಲ್ಲಿ, ಚಂದ್ರರ ವೈಜ್ಞಾನಿಕ ಸಾಧನೆಗಳನ್ನು ಕುರಿತು ಬಿಡುಗಡೆಯಾದ  “The man Behind the Legend” ಪುಸ್ತಕಕ್ಕಾಗಿ ಬರೆದುಕೊಟ್ಟ “My Everlasting Flame”  ಲೇಖನ, ಅವರ ದಾಂಪತ್ಯ ಜೀವನಕ್ಕೆ ಹಿಡಿದ ಕನ್ನಡಿಯಂತಿದೆ. ೧೯೯೯ರ ಜುಲೈ ತಿಂಗಳಲ್ಲಿ, ಅಮೆರಿಕ ದೇಶದ ಬಾಹ್ಯಾಕಾಶ ಸಂಸ್ಥೆ,  NASA,  ಚಂದ್ರರ ಹೆಸರನ್ನು ಅವರ ಅತ್ಯುನ್ನತ ದೂರದರ್ಶಕಗಳಲ್ಲಿ ಒಂದಾದ  “Chandra X-ray Observatory”  ಗೆ ನಾಮಕರಣ ಮಾಡಿದ ಸಮಯದಲ್ಲಿ, ಲಲಿತಾ ಅವರನ್ನು ಆಹ್ವಾನಿಸಿದ್ದರು. ಬಹುಶಃ ಅದು ಲಲಿತಾರ ಕೊನೆಯ ಸಾರ್ವಜನಿಕ ಸಮಾರಂಭವಿದ್ದಂತೆ ಕಾಣುತ್ತದೆ. “ಚಂದ್ರ” ಜೀವನ-ಚರಿತ್ರೆಯ ಲೇಖಕ ಡಾ ಕಾಮೇಶ್ವರ್ ವಾಲಿ ಮತ್ತು ಅವರ ಪತ್ನಿಯೊಡನೆ, ಲಲಿತಾ ಉತ್ತಮ ಸಂಬಂಧವನ್ನು ಹೊಂದಿದ್ದರು. ೨೦೦೦ನೆಯ ಇಸವಿಯಲ್ಲಿ ಚಂದ್ರರ ೯೦ನೆಯ ಜನ್ಮ ದಿನದಂದು, ಲಲಿತಾ ತಮ್ಮ ಗಾಯನ ಗೋಷ್ಠಿಯೊಂದನ್ನು ಏರ್ಪಡಿಸಿದ್ದರು. ಆ ಸಂಧರ್ಭದಲ್ಲಿ ಪ್ರಸಿದ್ಧ ಭೌತ ವಿಜ್ಞಾನಿ ರೋಜರ್ ಪೆನ್ರೋಸ್, ಆಕೆಯನ್ನು ಚಂದ್ರರ ಅಭಿಮಾನಿ ವೃಂದಕ್ಕೆ ಪರಿಚಯಿಸಿದ್ದರು. ಸುಮಾರು ೨೦೦೫ ಆಸುಪಾಸಿನಲ್ಲಿ ಲಲಿತಾರ ಆರೋಗ್ಯ ಸೂಕ್ಷ್ಮವಾಯಿತು.  ಆಗತಾನೆ ಬಿಡುಗಡೆಯಾಗಿದ್ದ ಆರ್ಥರ್ ಮಿಲ್ಲರ್ ರಚಿತ ಪುಸ್ತಕ  “The Empire of Stars; Obsession, Friendship and Betrayal in the quest for Black Holes”  ಬಗ್ಗೆ ಬಹಳ ಅಸಮಧಾನವನ್ನು ವ್ಯಕ್ತ ಪಡಿಸಿದ್ದರು. ಒಮ್ಮೆ ಜಾರಿ ಬಿದ್ದು ದೇಹ ಸ್ಥಿತಿ ಕೆಟ್ಟ ನಂತರ, ಲಲಿತಾರ ಮನಸ್ಸಿನ ಸ್ಥಿತಿಯೂ ಬಹು ಸೂಕ್ಷ್ಮವಾಗಿತ್ತು. ಹಲವು ವರ್ಷ ವೀಲ್ ಚೇರ್ ಮೇಲೆ ಕುಳಿತು ಓಡಾಡುತ್ತಿದ್ದ ಆಕೆ, ತಮ್ಮ ಕಡೆಯ ೩-೪ ವರ್ಷಗಳು, ಪೂರಾ ಹಾಸಿಗೆ ಹಿಡಿದಿದ್ದರು. ೨೦೧೩ರ ಸೆಪ್ಟಂಬರ್ ತಿಂಗಳಲ್ಲಿ, ತಮ್ಮ ೧೦೨ನೆಯ ತುಂಬು ವಯಸ್ಸಿನಲ್ಲಿ ಕೊನೆ ಉಸಿರೆಳೆದ ಲಲಿತಾ, ಕಡೆಗೊಮ್ಮೆ ತಮ್ಮ ಜೀವನ ಸಂಗಾತಿ ಚಂದ್ರರನ್ನು ಸೇರಿದರು. “ಸಮಯ ಮತ್ತು ಸ್ಥಳದ ಎಲ್ಲೆಯನ್ನು ಮೀರಿ ಅತಿಶಯವಾದ ಕಾರ್ಯಗಳನ್ನು ಸಾಧಿಸುವ ಗುಪ್ತ ಸಮುದಾಯವೊಂದು ಅಸ್ತಿತ್ವದಲ್ಲಿದೆ, ಡಾ. ಚಂದ್ರಶೇಖರ್ ಆ ಸಮುದಾಯದ ಸದಸ್ಯರಲ್ಲಿ ಒಬ್ಬರು. ಮಹಾಮೇಧಾವಿಗಳಿಂದ ಕೂಡಿದ ಈ ಉತ್ಕೃಷ್ಟ ಸಮುದಾಯವೇ ನಮ್ಮ ಸಮಾಜದ ಸಂಸ್ಕೃತಿ ಮತ್ತು ಸಭ್ಯತೆಗಳ ರೇಶ್ಮೆಯನ್ನು ನೇಯ್ದು ರಚಿಸುವಲ್ಲಿ ಮಹಾ ಪಾತ್ರವನ್ನು ವಹಿಸಿದೆ.” ಪ್ರಖ್ಯಾತ ಸ್ವಿಸ್ ಭೌತಶಾಸ್ತ್ರಜ್ಞ ರೇ ಜೋಸ್, ತಮಾಲ ಪುರಸ್ಕಾರವನ್ನು ನೋಬೆಲ್ ಪ್ರಶಸ್ತಿ ವಿಜೇತ ಡಾ ಸುಬ್ರಮಣ್ಯ ಚಂದ್ರಶೇಖರ್ ಅವರಿಗೆ ಪ್ರಧಾನಿಸುವ ಸಂದರ್ಭದಲ್ಲಿ ನುಡಿದ ಮಾತುಗಳು. ಅಂತಹ ಗುಪ್ತ ಸಮುದಾಯದ ಸಾಧನೆಗಳ ಹಿಂದಿನ ಪ್ರೇರಣಾ ಶಕ್ತಿಯಾಗಿ, ಆ ವ್ಯಕ್ತಿಗಳ ಜೀವನವೆಂಬ ರೇಶ್ಮೆಯ ನೇಕಾರರಾಗಿದ್ದು, ಸದ್ದಿಲ್ಲದೇ ತಮ್ಮ ಕಾರ್ಯವನ್ನು ಮಾಡಿ ಮುಗಿಸುವ ನಾರೀ ಮಣಿಗಳ ತ್ಯಾಗವನ್ನು ಮೆಚ್ಚಿ, ಪುರಸ್ಕರಿಸುವ ಸಂಸ್ಥೆಗಳು ಇನ್ನೂ ಹುಟ್ಟಿಲ್ಲ! ಸ್ವಯಂ ಪ್ರತಿಭೆಯನ್ನು ಅದುಮಿಟ್ಟು, ತಮ್ಮ ಪತಿಯ ಜೀವನದ ಸಾಧನೆಗಳಲ್ಲಿ ತಮ್ಮ ಸಂತೋಷವನ್ನು ಕಂಡ ಲಲಿತಾ ಚಂದ್ರಶೇಖರ್ ಅಂತಹ ವ್ಯಕ್ತಿ, ಇಂದಿನ ಪೀಳಿಗೆಯ ಮಹಿಳೆಯರಲ್ಲಿ ಕಾಣ ಸಿಗುವುದು ಬಲು ಅಪರೂಪದ ಸಂಗತಿ.

6 thoughts on “ಲಲಿತಾ ಚಂದ್ರಶೇಖರ್: ಮೇಧಾವಿಯ ಹಿಂದಿನ ಸುಪ್ತ ಚೇತನ! – ಉಮಾ ವೆಂಕಟೇಶ್

 1. ಉಮಾ ಅವರ ಸಕಾಲಿಕ ಬರಹ ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ. ಕೆಲವು ವರ್ಷಗಳ ಹಿಂದೆ ಶ್ರೀಯುತ ಜಿ.ಟಿ. ನಾರಾಯಣರಾವ್ ಅವರು ಕನ್ನಡದಲ್ಲಿ ಬರೆದ ಎಸ್. ಚಂದ್ರಶೇಖರ್ ಅವರ ಕುರಿತ ಪುಸ್ತಕ ಓದಿದ್ದೆ. ಅದರಲ್ಲಿ ಅವರ ಶ್ರೀಮತಿಯವರ ಬಗೆಗೂ ಬರೆಯುತ್ತಾರೆ ಆದರೆ ಹೆಚ್ಚಿಲ್ಲ. ಸಂತಾನ ಭಾಗ್ಯ ಇವರಿಗೆ ಇರಲಿಲ್ಲವೆಂದು ನನ್ನ ಅನಿಸಿಕೆ. ಅವರ ಒಂಟಿತನ ಮತ್ತು ಹತಾಶೆಗೆ ಅದೂ ಕಾರಣವಿರಬಹುದು.

  ಅನುಕೂಲಾಂ ವಿಮಲಾಂಗೀಂ ಕುಲಜಾಂ ಕುಶಲಾಂ
  ಸುಶೀಲಸಂಪನ್ನಾಂ ಪಂಚಲಕಾರಾಂ ಭಾರ್ಯಾಂ
  ಪುರುಷಃ ಪುಣ್ಯೋದಯಾಲ್ಲಭತೇII ————-ತ್ರಿಶತೀ ವ್ಯಾಖ್ಯಾ- ವೈರಾಗ್ಯ.

  ಭರ್ತೃಹರಿಯ ಹೇಳಿಕೆ.
  ಇದು ಚಂದ್ರ ಅವರ ಜೀವನಕ್ಕ್ಕೆ ಚೆನ್ನಾಗಿ ಅನ್ವಯವಾಗುತ್ತದೆ.

  ಪರದೇಶಕ್ಕೆ ಬಂದಮೇಲೆ ದೇಶ್ಯರಿಗಿಂತ ಹತ್ತು ಹೆಜ್ಜೆ ಮುಂದೆ ಇದ್ದು ನಮ್ಮ ಘನತೆ ಹಾಗೂ ಅವಕಾಶಗಳನ್ನು ಭದ್ರಪಡಿಸಿಕೊಳ್ಳುವ ಓಟದಲ್ಲಿ ವೈಯಕ್ತಿಕ ಜೀವನದ ಹಲವಾರು ಕೋನಗಳನ್ನು ನಾವು ಅನುಭವಿಸುವುದೇ ಇಲ್ಲ.
  ನಮ್ಮಲ್ಲೂ ಇದರ ಅನುಭವ ಸ್ವಲ್ಪಮಟ್ಟಿಗಾದರೂ ಆಗಿರಬೇಕು ಎಲ್ಲರಿಗೂ,. ಚಂದ್ರ ಅವರ ಸಾಧನೆಯಂತೂ ಅಸದೃಶವಾದ ಕಾರಣ ಅವರ ಪ್ರಯತ್ನವೂ ಅಸದೃಶವಾಗಿಯೇ ಇರಬೇಕು. ಇಂತಹ ಸನ್ನಿವೇಶದಲ್ಲಿ ಒಬ್ಬರು ಮತ್ತೊಬ್ಬರಿಗಾಗಿ ತ್ಯಾಗ ಮಾಡುವುದು ಅನಿವಾರ್ಯವೋ , ಆಕಸ್ಮಿಕವೋ, ಪರ್ಯಾಯಹೀನವೋ ನಿರ್ಧರಿಸುವುದು ಕಷ್ಟ.
  ಇದನ್ನು ಇನ್ನೊಂದು ಕೋನದಿಂದ ನೋಡಿದರೆ, ಲಲಿತಾ ಅವರು ತಾವೇ ಒಂದು ವೃತ್ತಿಯನ್ನು ಹಿಡಿದಿದ್ದರೆ ಏನಾಗುತ್ತಿದ್ದರು ಎಂಬುದು. ಅವರ ಶಕ್ತಿ ಚಂದ್ರ ಅವರ ಹಿಂದೆ ಹರಿದ ಕಾರಣ ಇಂದು ಪತಿ ಪತ್ನಿಯರು ಅರುಂಧತಿ-ವಸಿಷ್ಠರ ರೂಪದಲ್ಲಿ ರಾರಾಜಿಸುತ್ತಿದ್ದಾರೆ.
  ಪುರುಷ ಪ್ರಧಾನವಾದ/ ಅಹಂಕಾರಪೂರಿತ ಹೇಳಿಕೆ ಎನ್ನಿಸಿದರೂ, ಇನ್ನೊಂದು ಶ್ಲೋಕ ಇಲ್ಲಿದೆ,

  ಸ್ತ್ರೀಯೋ ನ ಪುಂಸಾಮುದಯಸ್ಯ ಸಾಧನಂ
  ತ ಏವ ತದ್ಧಾಮವಿಭೂತಿಹೇತವಃ
  ತಡಿದ್ವಿಯುಕ್ತೋsಪಿ ಘನಃ ಪ್ರಜೃಂಭತೇ
  ವಿನಾ ನ ಮೇಘಂ ವಿಲಸಂತಿ ವಿದ್ಯುತಃ

  ಹೆಂಗಸರು ಗಂಡಸರ ಏಳಿಗೆಗೆ ಎಷ್ಟು ಕಾರಣರು?
  ಗಂಡಸರು ಹೆಂಗಸರ ಕಾಂತಿ ವಿಕಾಸಕ್ಕೂ ಕಾರಣರಾಗುವರು
  ಮಿಂಚಿಲ್ಲದಿದ್ದರೂ ಮೋಡವು ತೋರುವುದು
  ಆದರೆ ಮೋಡವಿಲ್ಲದೆ ಮಿಂಚು ಹೊಳೆಯಲಾರದುII

  ನಾನು ಇದನ್ನು ಪೂರ್ತಿಯಾಗಿ ಒಪ್ಪದಿದ್ದರೂ, ಲಲಿತಾ ಚಂದ್ರಶೇಖರರ ವಿಚಾರದಲ್ಲಿ ಸ್ವಲ್ಪವಾದರೂ ಅನ್ವಯವಾಗುವುದೇನೋ!
  ಗಾಯಕಿ ವಾಣಿಜಯರಾಂ ಅವರ ವೃತ್ತಿ ಜೀವನ ಏರುಗತಿ ಹಿಡಿದಾಗ ಅವರ ಪತಿ ಜಯರಾಂ ಅವರು ತಮ್ಮ ಉತ್ತಮವಾದ ಕೆಲಸ ತೊರೆದು ಪತ್ನಿಯ ಹಿಂದೆ ನಿಂತರಲ್ಲ. ಅಕೌಂಟೆಂಟ್ ಆಗಿ ಜಯರಾಮ್ ಎಷ್ಟು ಹೆಸರು ಪಡೆಯುತ್ತಿದ್ದರೋ ತಿಳಿಯದು ಆದರೆ ಇವತ್ತು ವಾಣಿಯವರ ಜೊತೆ ಅವರ ಹೆಸರು ಯಾವಾಗಲೂ ಹೊಳೆದಿದೆ.
  ನಮ್ಮ ಜೀವನದಲ್ಲಿ ನಾವು ಏನನ್ನು ಅನುಭವಿಸಬೇಕು ಹೇಗೆ ಬದುಕಬೇಕೆಂಬ ಆಯ್ಕೆ ಕಷ್ಟಕರ- ಸಂಸ್ಕಾರ, ಪರಿಸರ ಹಾಗೂ ಅದೃಷ್ಟದ ಆಟ-ಓಟ.
  ಉತ್ತಮ ಬರಹ.

  Like

 2. ಇದೇ ರೀತಿಯಲಿ ಹೆಣ್ಣಿನ ತ್ಯಾಗ ಇನ್ನೂ ಅನೇಕ ಮಹಾನುಭಾವರ ಜೀವನದ ಜೀವನದಲ್ಲಿ ನೋಡಬಹುದು. ಉದಾಹರಣೆಗೆ, ಮಹಾತ್ಮಗಾಂಧಿಯವರ ಪತ್ನಿ ಕಸ್ತೂರಿಬಾ ಅವರ ಜೀವನವೂ ಇದೇ ರೀತಿಯಾಗಿದ್ದಿತು. ಗಾಂಧಿಯವರ ಸಾಧನೆಗಳಿಗೆ ಕಸ್ತೂರಿಬಾ ಅವರು ಮಾಡಿದ ತ್ಯಾಗವನ್ನು ಅವರ 5ನೇ ಮೊಮ್ಮಗನಾದ ಅರುಣ್‍ಗಾಂಧಿಯವರ ‘The Forgotten Woman, the untold story of Kastur Gandhi’ ಎಂಬ ಪುಸ್ತಕದಲ್ಲಿ ನೋಡಬಹುದು. ಉಮಾ ಅವರು ಹೇಳಿದಹಾಗೆ, ಈ ವನಿತೆಯರಿಗೆ ಆಗಿನ ಕಾಲದಲ್ಲಿ ಬೇರೆ ಯಾವಮಾರ್ಗವೂ ಇರಲಿಲ್ಲ.

  Like

 3. ಮಾನ್ಯೆ ಲಲಿತಾ ದೊರೆಸ್ವಾಮಿಯವರ ಕ್ಲಿಷ್ಟವಾದ ಜೀವನದ ಒಂದು ಸಮೀಕ್ಷೆಯನ್ನು ಬಹು ಚತುರತೆಯಿಂದ ಉಮಾ ವೆಂಕಟೇಶ್ ಅವರು ವರ್ಣಿಸಿದ್ದಾರೆ.
  ಲಲಿತಾ ದೊರೆಸ್ವಾಮಿಯವರ ಪತಿಯು ವಿಶ್ವವಿಖ್ಯಾತ ನೋಬೆಲ್ ಪಾರಿತೋಶಕ ವಿಜೇತರಾಗಿ ಅವರು ಇಂಗ್ಲೆಂಡಿನಲ್ಲಿ ಮತ್ತು ಅಮೆರಿಕಾದಲ್ಲಿ ಅನುಭವಿಸಿದ ವರ್ಣಭೇದದ ಅನುಭವನ್ನು, ಭಾರತದಲ್ಲಿ ಇದ್ದ ಮತ್ತು ಈಗಲೂ ಇರುವ ಜಾತಿಭೇದಕ್ಕೆ ಹೋಲಿಸಿದುದನ್ನು ಎಲ್ಲರೂ ಶ್ಲಾಘಿಸಲೇಬೇಕು. ಸಾಮಾನ್ಯವಾಗಿ ಎಲ್ಲರೂ ಪ್ರೊಫೆಸರ್ ಚಂದ್ರಶೇಖರ್ ಮತ್ತು ಅವರಂತಹ ಇತರ ಎಲ್ಲಾ ವಲಯದ ಜಯಶಾಲಿಗಳ ಜೀವನ ಚರಿತ್ರೆಯನ್ನು ಓದಿದಾಗ ಅವರು ಪಟ್ಟ ಶ್ರಮ, ಆತಂಕ ಮತ್ತು ಭೇದಭಾವಗಳ ಅನುಭವಗಳನ್ನು ಓದುಗರೂ ಪರೋಕ್ಷವಾಗಿ ಅನುಭವಿಸಿ ಅವರೋಂದಿಗೆ ಎಲ್ಲರೂ ಅನುಕಂಪಿಸುವರೇ ಹರತು, ಆ ವ್ಯಕ್ತಿಯ ಹಿಂದಿರುವ ಹೆಣ್ಣನ್ನು ‘Behind every successful man there is always a woman’ ಎಂದು ಹೇಳಿ, ಆಕೆಯ ಪತಿಯ ಗಳಿಕೆಗಳಿಗೆ ಆಕೆಯ ಶ್ರಮವನ್ನು ಪೂರಕವಾಗಿ ಸೇರಿಸುವರೇಹೊರತು, ಆಕೆ ಪಟ್ಟ ಒಂಟಿತನ, ತ್ಯಾಗ ಮನೋವ್ಯಾತನೆಗಳಿಗೆ ಅನುಕಂಪ ತೋರಿಸುವವರು ಅತಿವಿರಳ. ಇದು ಹೆಚ್ಚಾಗಿ ಪೂರ್ವ ಮತ್ತು ಮಧ್ಯಪೂರ್ವದೇಶಗಳ ವಿದ್ಯಾವಂತರು ಮತ್ತು ಅವಿದ್ಯಾವಂತ ಪುರುಷರಲ್ಲಿ ಹೆಚ್ಚು. ಚಂದ್ರಶೇಖರ ಅವರಲ್ಲೂ ಇದು ಇತ್ತೆಂಬುದನ್ನು ಲಲಿತ ಅವರು ಬರೆದ ಆತ್ಮಕಥೆಯಿಂದ ತಿಳಿಯುವುದು. ಈ ವಿಚಾರವಾಗಿ ಯಾವ ಪುರುಷರ ಆತ್ಮಕಥೆಯಿಲ್ಲಿ ಹೆಚ್ಚಾಗಿ ಕಾಣಿಸುವುದಿಲ್ಲ. ಹೊರದೇಶಗಳಿಗೆ ತನ್ನ ಪತಿಯೊಂದಿಗೆ ಆತನ ಸ್ನಾತಕೋತ್ತರ ವಿದ್ಯೆ ಮತ್ತು ಉದ್ಯೋಗಗಳಿಗೋಸ್ಕರ ತೆರಳಿದ ಸ್ತ್ರೀಯಲ್ಲಿ ಈ ಹೆಣ್ಣಿನ ಯಾತನೆ ಬಹುಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ನನ್ನ ಪ್ರಕಾರ, ‘the original sin.’ ಕ್ರೈಸ್ಥ ಧರ್ಮದ ತತ್ವಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ ಇದು ಕೇವಲ ನನ್ನ ವರ್ಣನೆ. ಸ್ವಸ್ಥವಾಗಿ ತನ್ನ ಸಮುದಾಯದಲ್ಲಿ ನೆಲಸಿದ್ದ ಹೆಣ್ಣನ್ನು ತನ್ನ ನೆಲೆಯಿಂದ ಸ್ಥಳಾಂತರಿಸಿ ಪರದೇಶದಲ್ಲಿ ಒಂಟೀತನದ ಜೀವನಕ್ಕೆ ತರುವುದು ಒಂದು ಪಾಪವೆಂದು ನನ್ನ ಭಾವನೆ. ಈ ನನ್ನ ಮಾತು ಅನೇಕರಿಗೆ ಅಸಮಂಜಸವೆಂದು ತೋರುವುದು. ಇದಕ್ಕೆ ಪರಿಹಾರವೇನೆಂದರೆ ಪುರುಷರು ಇದನ್ನು ತಮ್ಮ ಹೊರದೇಶದ ಜೀವನದ ಮೊದಲಲ್ಲೇ ಅರಿಯುವುದು ಮತ್ತು ಆ ಹೆಣ್ಣಿನೊಂದಿಗೆ ಜೀವನದಲ್ಲಿ ಗುಣಮಟ್ಟದ ಕಾಲವನ್ನು ಕಳೆಯುವುದು. ಚಂದ್ರಶೇಖರ ಅವರಿಗೆ ಈ ಅಂಶವು 1980 ರಲ್ಲಿ ಅವರಿಗೆ ತಮ್ಮ ಹೃದಯಾಘಾತವಾದಮೇಲೆ ತಿಳಿಯಿತು. ಇಂತಹ ಮಹಾನುಭಾವರ ಅನುಭವಗಳಿಂದ ಹೊರದೇಶಗಳಲ್ಲಿ ನೆಲೆಸಿರುವ ಪುರುಷರು ಇದನ್ನು ತಮ್ಮ ಜೀವನದಲ್ಲಿ ಬಹುಮುಂಚಿತವಾಗಿ ಅರಿಯುವರೆಂದು ನನ್ನ ನಂಬಿಕೆ.
  ರಾಜಾರಾಮ ಕಾವಳೆ

  Like

  • ರಾಜಾರಾಮ್ ಅವರೆ, ಹಲವು ಖ್ಯಾತನಾಮರು ತಮ್ಮ ವೃತ್ತಿರಂಗದಲ್ಲಿ ಅಮೋಘವಾದ ಸಾಧನೆಗಳನ್ನು ಮಾಡುವ ಹಾದಿಯಲ್ಲಿ, ಇಂತಹ ಬೆಲೆಯನ್ನು ವೈಯಕ್ತಿಕ ಜೀವನದಲ್ಲಿ ತೆತ್ತಿದ್ದಾರೆ. ಚಂದ್ರಶೇಖರ್ ಅವರ ಕಥೆಯೂ ಇದೇ ರೀತಿಯದಾಗಿದೆ. ಆದರೆ ನೀವು ಈ ಅಪರೂಪದ ಜೀವನಗಳನ್ನು ಗಮನಿಸಿದರೆ, ಅವರಿಗೆ ಬೇರೆ ಯಾವ ಮಾರ್ಗವೂ ಇರಲಿಲ್ಲವೆಂದು ನನ್ನ ಅಭಿಪ್ರಾಯ. ಅಂತಹ ಮೇಧಾವಿಗಳು ತಮ್ಮ ಬುದ್ಧಿಯನ್ನು, ನಿಜಜೀವನದ ಯಾಂತ್ರಿಕತೆಯಲ್ಲಿ ವ್ಯರ್ಥ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಪ್ರಪಂಚದಲ್ಲಿ ಶಾಶ್ವತವಾಗಿ ನಿಲ್ಲುವ ಕಾರ್ಯವನ್ನು ಸಾಧಿಸಲು, ಇಂತಹ ತ್ಯಾಗಗಳು ಅನಿವಾರ್ಯವಲ್ಲವೇ? ಲಲಿತಾರ ಜೀವನವೂ ಇಂತಹುದೇ ಒಂದು ತ್ಯಾಗದ ಉದಾಹರಣೆಯಾಗಿದೆ. ಆದರೆ ಅವರು ವಿದೇಶದಲ್ಲಿದ್ದ ಸಮಯದಲ್ಲಿ, ವರ್ಣೀಯರ ವಿರುದ್ಧ ಇಲ್ಲಿನ ಸಮಾಜದಲ್ಲಿದ್ದ ಪೂರ್ವಾಗ್ರಹಗಳು ಅವರ ಜೀವನವನ್ನು ಇನ್ನಷ್ಟು ಕ್ಲಿಷ್ಟವಾಗಿಸಿದ್ದವು ಎನ್ನುವುದು ನೋವಿನ ಮಾತು. ಆದರೇನು ಇವೆಲ್ಲಾ ಪರಿಸ್ಥಿತಿಗಳನ್ನು ಮೀರಿ ನಿಂತ ಈ ದಂಪತಿಗಳನ್ನು, ಎಷ್ಟು ಮೆಚ್ಚಿದರೂ ಸಾಲದು. ಇಂದು ಅಂತರಿಕ್ಷದಲ್ಲಿ ಚಂದ್ರಶೇಖರ್ ಅವರ ಹೆಸರಿನಲ್ಲಿರುವ
   “ಚಂದ್ರ ಕ್ಷ-ಕಿರಣ ವೀಕ್ಷಣಾಲಯ“ ವಿಜ್ಞಾನ ಲೋಕದಲ್ಲಿ ಅವರನ್ನು ಅಜರಾಮರರನ್ನಾಗಿಸಿದೆ. ಮುಂದಿನ ಪೀಳಿಗೆಯ ಸಹಸ್ರಾರು ಮಂದಿ, ಅದರಿಂದ ಪಡೆಯುವ ಸ್ಫೂರ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಚಂದ್ರ ಮತ್ತು ಲಲಿತಾರ ತ್ಯಾಗ ನಿಜಕ್ಕೂ ಸಾರ್ಥಕವೆಂದು ನಾನು ಭಾವಿಸಿದ್ದೇನೆ.

   Like

 4. ಅತ್ಯುತ್ತಮ ಲೇಖನ.
  ಲಲಿತಾರಿಗೆ ಕೈಯೆತ್ತಿ ಮಿಗಿಯಬಲ್ಲೆನಾದರೂ, ಅವರ ಅನುಭವಿಸಿದ ಒಂಟಿತನದ ಕಲ್ಪನೆ ಮೈನಡುಗಿಸುತ್ತದೆ!.
  ಅವರ ನಡುವಿದ್ದ ಪ್ರೀತಿ ಮತ್ತು ಲಲಿತಾರ ಮನಸ್ಥೈರ್ಯ ಹಾಗೂ ವಿದ್ಯಾಭ್ಯಾಸ ಅವರ ನೆರವಿಗೆ ಬಂತೇನೋ.

  ಕೆಲವು ಜೀವಗಳು ಹುಟ್ಟುವುದೇ ಲೋಕಕಲ್ಯಾಣಕ್ಕಾಗಿ ಮತ್ತು ತ್ಯಗಮಾದುವುದಕ್ಕಾಗಿ ಅನಿಸುತ್ತದೆ.

  Like

 5. ದೈತ್ಯ ಚೇತನ ಚಂದ್ರಶೇಖರರ ಹಿಂದಿನ ಸ್ಫೂರ್ತಿಯ ಬುಗ್ಗೆ ಕೊನೆ ತನಕ ಎಲೆ ಮರೆಯ ಕಾಯಿಯಾಗೇ ಉಳಿದರು. ಲೇಖನ ಸರಳವಾಗಿ ಸುಂದರವಾಗಿ ಮೂಡಿದೆ. ಕೆಲವೊಮ್ಮೆ ವರ್ಷಗಳು ಹಿಂದೆ ಮುಂದಾಗಿ ಸ್ವಲ್ಪ ಗೋಜಲವೆನ್ನಿಸಿತು.

  ಲಲಿತಾರವರ ಭಾರತೀಯರ ಜಾತಿ ಪದ್ಧತಿ ಹಾಗೂ ಪಾಶ್ಚಾತ್ಯರ ವರ್ಣ ಬೇಧಗಳ ಮೇಲಿನ ವಿಚಾರ ಲಹರಿ ಸಮ್ಮತವಾಗಿದೆ.

  ಅಪರೂಪದ ವ್ಯಕ್ತಿ ಪರಿಚಯಕ್ಕೆ ಧನ್ಯವಾದ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.