ಇಕ್ಕಿಗಾಯ್, ಒಂದು ಪರಿಚಯ – ಶ್ವೇತ ಕಿರಣ್

ಪ್ರಿಯರೇ, ಪ್ರತಿಯೊಂದು ಪ್ರಾಚೀನ ಇತಿಹಾಸವುಳ್ಳ ಸಮಾಜದ ಬಗ್ಗೆ, ಅಲ್ಲಿನ ಜನರ ನಡೆ-ನುಡಿಗಳ, ಜೀವನಶೈಲಿಯ ಬಗ್ಗೆ ಜಗತ್ತಿನ ಉಳಿದ ಭಾಗಗಳ ಜನರ ಕುತೂಹಲ ಸಹಜವಾದದ್ದೇ. ಅದರಲ್ಲೂ, ಅಲ್ಲಿನ ಜನರ ಬದುಕಿನ ಮೇಲೆ ಅ ಶೈಲಿಯ ಪರಿಣಾಮ ಒಳ್ಳೆಯದಾಗಿದ್ದು, ಶತಾಯುಷಿಗಳಾಗಿ ಉತ್ತಮ ಅರೊಗ್ಯದಿಂದ ಬದುಕುತ್ತಿದ್ದರಂತೂ, ಸರಿಯೇ ಸರಿ. ಈ ಬಗ್ಗೆ ಅಭ್ಯಸಿಸುವ, ಬರೆಯುವ ಆಸಕ್ತರ ತಂಡವೇ ಹುಟ್ಟಿಬಿಡುತ್ತದೆ. ಮೆಡಿಟರೇನಿಯನ್ ದೇಶಗಳಾಗಲಿ, ಪೂರ್ವ ಏಶಿಯಾದ ದೇಶಗಳಾಗಲಿ ಅಲ್ಲಿಗೆ ಹೋಗಿ, ನೆಲೆಸಿ, ಜೀವನಕ್ರಮವನ್ನು ಅಭ್ಯಾಸ ಮಾಡಿ, ಅದನ್ನು ಉಳಿದ ಜಗತ್ತಿನೊಂದಿಗೆ ಹಂಚುವ ಪ್ರಯತ್ನದ ಬಗೆಗಿನ ಒಂದು ಇಂತಹುದೇ ಪುಸ್ತಕದ ಪರಿಚಯ ಕೊಡಲಿದ್ದಾರೆ, ಶ್ವೇತ ಕಿರಣ್. ಓದಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ - ಸಂಪಾದಕ.

ಕಿರುಪರಿಚಯ: ಶ್ವೇತ ಕಿರಣ್: ನಾನು ಮೂಲತಃ ಬೆಂಗಳೂರಿನ ಹುಡುಗಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಾನು ಎಂ ಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದೆ. ೨೦೧೦ ನೇ ಇಸವಿಯಿಂದ ನಾನು ಇಂಗ್ಲೆಂಡ್‌ನಲ್ಲಿ ನೆಲಸಿದ್ದೇನೆ. ಕಳೆದ ಕೆಲವು ವರ್ಷಗಳಿಂದ, ನಾನು ಸಾಮಾನ್ಯ ವೈದ್ಯೆಯಾಗಿ (GP) ಆಗಿ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ಪತಿ ಹಾಗು ಮಗಳೊಂದಿಗೆ ಲಂಕಾಷೈರಿನ ಒಂದು ಸುಂದರವಾದ ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿದ್ದೇನೆ. ನಾನು ಕೆಲಸದಲ್ಲಿ ಇಲ್ಲದಿರುವಾಗ ಪ್ರಕೃತಿಯ ಮಡಿಲಲ್ಲಿ ಅಥವಾ ಒಳ್ಳೆಯ ಪುಸ್ತಕದಲ್ಲಿ ಮುಳುಗಿರುವುದನ್ನು ನೋಡಬಹುದು. ಇದಲ್ಲದೆ ನೃತ್ಯ, ತೋಟಗಾರಿಕೆ, ವಿವಿಧ ರೀತಿಯ ವ್ಯಾಯಾಮ, ಜೀವನಶೈಲಿ ವಿಧಾನಗಳು- ಇವುಗಳ ಬಗ್ಗೆ ಕೂಡ ಬಹಳ ಆಸಕ್ತಿ ಹೊಂದಿದ್ದೇನೆ.

********************************************************************

೨೦೨೨ ನೇ ವರ್ಷ ಮುಗಿದು ಹೊಸ ವರ್ಷ ಆರಂಭವಾಗಿದೆ. ತಿಳಿದು ತಿಳಿಯದಂತೆ ಕಾಲ ಎಷ್ಟು ವೇಗವಾಗಿ ಸರಿಯುತ್ತಿದೆ ಅಲ್ಲವೇ? ಈಗ ತಾನೆ ೨೦೨೨ ನೇ ವರ್ಷದ ಸಂಕಲ್ಪಗಳನ್ನು ಶುರು ಮಾಡಿದ ಹಾಗಿದೆ. ಆದರೆ ೨೦೨೩ ನೇ ವರ್ಷ ಶುರುವಾಗಿ ಆಗಲೆ ಆರು ತಿಂಗಳು ಕಳೆದಿವೆ. ವರ್ಷಾಂತ್ಯದಲ್ಲಿ ನಾವು ಕಳೆದ ೧೨ ತಿಂಗಳುಗಳ ಬಗ್ಗೆ ಪ್ರತಿಫಲಿಸುತ್ತೇವೆ. ನಾವು ಯಾರು, ಇಲ್ಲಿಗೆ ಬಂದಿರುವ ಉದ್ದೇಶವೇನು? ನಾವು ಏನು ಮಾಡಬೇಕು, ಹೇಗೆ ಬದುಕಬೇಕು, ಜೀವನದ ಅರ್ಥ ಏನು? ಈ ತರಹದ ಪ್ರಶ್ನೆಗಳು ಇಂತಹ ಸಂದರ್ಭದಲ್ಲಿ ನಮ್ಮನ್ನು ಕಾಡುವುದು  ಸಹಜ. ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಈ ವಿಷಯಗಳ ಬಗ್ಗೆ ಬಹಳಷ್ಟು ಪುಸ್ತಕಗಳು ಕೂಡ ಪ್ರಕಟವಾಗಿವೆ. ಸ್ವಸಹಾಯ ಹಾಗೂ ಸ್ವಾವಲಂಬನೆಯನ್ನು ಪ್ರೇರೇಪಿಸುವ ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಗೊಳಿಸಿಕೊಳ್ಳುವುದು ಸಮಂಜಸವೆ. ಇತ್ತೀಚೆಗೆ ನಾನು ಓದಿದ ಪುಸ್ತಕ ಇಕಿಗಾಯ್ ಈ ಗುಂಪಿಗೆ ಸೇರಿದೆ.

ಇಕಿಗಾಯ್‌ ಪುಸ್ತಕವನ್ನು ಬರೆದವರು ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾಂಚೆಸ್ಕ್ ಮಿರಾಯೆ. ಇವರು ಜಪಾನ್ ದೇಶದ “ಒಕಿನಾವ” ಎನ್ನುವ ಪ್ರದೇಶಕ್ಕೆ ಭೇಟಿಕೊಟ್ಟು ಅಲ್ಲಿನ ಜನರ ನಡೆ-ನುಡಿ ದಿನನಿತ್ಯದ ಅಭ್ಯಾಸಗಳನ್ನು ಪರಿಶೀಲಿಸಿ ಇವುಗಳ ಬಗ್ಗೆ ಈ ಕೃತಿಯಲ್ಲಿ ಮಾತನಾಡುತ್ತಾರೆ. ಒಕಿನಾವ ಪ್ರದೇಶದ ವಿಶಿಷ್ಟತೆ ಏನೆಂದರೆ, ಅದು ಜಗತ್ತಿನಲ್ಲಿ ಅತಿ ಹೆಚ್ಚು ದೀರ್ಘಾಯುಷಿಗಳಿರುವಂತಹ ಜಾಗ. ಬಹಳ ಜನ ಅಲ್ಲಿ ಶತಾಯುಷಿಗಳಾಗಿದ್ದಾರೆ. ಇವರುಗಳ ದೀರ್ಘಾಯುಷ್ಯದ ಗುಟ್ಟೇನು ಎನ್ನುವುದೇ ಈ ಪುಸ್ತಕದ ಸಾರಾಂಶ.

ಜನರು ಆರೋಗ್ಯವಂತರಾಗಿ, ಸಂತಸದಿಂದ ದೀರ್ಘಕಾಲ ಬದುಕಿರಬೇಕಾದರೆ ಏನು ಮಾಡಬೇಕು ಎಂಬುದನ್ನು ಲೇಖಕರು ಈ ಪುಸ್ತಕದಲ್ಲಿ ವಿಸ್ತಾರವಾಗಿ ಪ್ರಸ್ತುತಪಡಿಸಿದ್ದಾರೆ. ನಮಗೆಲ್ಲ ಇದರ ಬಗ್ಗೆ ಆಗಲೇ ಅಲ್ಪ ಸ್ವಲ್ಪ ಗೊತ್ತಿರಬಹುದು. ಆದರೆ, ಇವುಗಳ ಬಗ್ಗೆ, ಉದಾಹರಣೆಗಳ ಮೂಲಕ ಅರ್ಥಗರ್ಭಿತವಾಗಿ ಹೇಳುವುದು ಒಂದು ರೀತಿಯ ಕಲೆ ಅಂತಾನೆ ಹೇಳಬಹುದು. ಲೇಖಕರು ಆಹಾರ ಪದ್ಧತಿ, ವ್ಯಾಯಾಮ, ಪ್ರಕೃತಿ, ಸಾಮಾಜಿಕ ಬೆಂಬಲ, ಶಾಂತಿಯುತ ಜೀವನದ ಮೌಲ್ಯಗಳು - ಹೀಗೆ ಹಲವಾರು ವಿಷಯಗಳ ಬಗ್ಗೆ ಬಹಳ ಚೆನ್ನಾಗಿ ವಾದಿಸಿದ್ದಾರೆ. ಉದಾಹರಣೆಗೆ, ನಾವು ವ್ಯಾಯಾಮ ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾವೇನು ಮ್ಯಾರಥಾನ್ ಓಡಬೇಕಿಲ್ಲ ಅಥವಾ ಪ್ರತಿದಿನ ಜಿಮ್ ಗೆ ಹೋಗಿ ಬೆವರು ಸುರಿಸಬೇಕಾಗಿಲ್ಲ. ನಾವು ಆದಷ್ಟು ಸಕ್ರಿಯರಾಗಿರಬೇಕು. ಕಾಲ್ನಡಿಗೆ, ತೋಟಗಾರಿಕೆ, ನೃತ್ಯ, ಯೋಗ ಹಾಗೂ ತಾಯ್‌ಚಿ, ತರಹದ ಸರಳ ಅಭ್ಯಾಸಗಳನ್ನು ಮಾಡಿದರೆ ಸಾಕು, ಎಷ್ಟೊ ಅನುಕೂಲವಾಗುತ್ತದೆ. ಊಟದಲ್ಲಿ ಕೂಡ ವಿಧವಿಧವಾದ ಆಹಾರಗಳನ್ನು ಸೇವಿಸಬೇಕು. ಹೊಟ್ಟೆ ೮೦ ಪ್ರತಿಶತ ತುಂಬಿದಾಗಲೇ ಊಟ ಮಾಡುವುದನ್ನು ನಿಲ್ಲಿಸಬೇಕು. ಈ ರೀತಿ ಹಲವಾರು ಉತ್ತಮ ಅಭ್ಯಾಸಗಳ ಬಗ್ಗೆ ಮಾತನಾಡುತ್ತಾ, ಲೇಖಕರು, ಜಪಾನ್ ದೇಶದ ಜನರ ಅಭಿಪ್ರಾಯಗಳನ್ನು ತಿಳಿಸುತ್ತಾರೆ.

ಇಕಿಗಾಯ್ ಅಂದರೇನು? “ಬದುಕು” ಹಾಗೂ “ಸಾರ್ಥಕ ಪಡಿಸುವುದು” ಎನ್ನುವ ಎರಡು ಪದಗಳ ಜೋಡಣೆಯಿಂದ ಮೂಡಿರುವ ಪದವೇ ಇಕಿಗಾಯ್‌. ಜೀವನದಲ್ಲಿ ನಾವು ಆರೋಗ್ಯವಾಗಿ, ಸಂತೋಷದಿಂದ, ಶಾಂತಿಯುತ ಬಾಳ್ವೆ ನಡೆಸಬೇಕಾದರೆ ನಾವು ನಮ್ಮ ಜೀವನದ ಉದ್ದೇಶವನ್ನು ಹಾಗು ಧ್ಯೇಯವನ್ನು ಕಂಡುಕೊಳ್ಳಬೇಕು. ಇದೇ ನಮ್ಮ ಇಕಿಗಾಯ್‌. ಹಾಗಾದರೆ ನಾವು ಇಕಿಗಾಯನ್ನು ಹೇಗೆ ಹುಡುಕುವುದು? ಇದನ್ನು ಲೇಖಕರು ಪುಸ್ತಕದಲ್ಲಿ ಒಂದು ಚಿತ್ರದ ಮೂಲಕ ವ್ಯಕ್ತಪಡಿಸುತ್ತಾರೆ. ಈ ಕೆಳಕಂಡ ೪ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಹಿಡಿಯಬೇಕಾಗಿದೆ:
೧) ನೀವು ಏನನ್ನು ಪ್ರೀತಿಸುತ್ತೀರಿ? (ಧ್ಯೇಯ)
೨) ನೀವು ಯಾವುದರಲ್ಲಿ ಪರಿಣಿತರಿದ್ದೀರಿ? (ಗೀಳು)
೩) ನಿಮಗೆ ಏತಕ್ಕಾಗಿ ಸಂಭಾವನೆ ನೀಡಬಲ್ಲರು? (ಉದ್ಯೋಗ)
೪) ಲೋಕದ ಅಗತ್ಯವೇನು? (ವೃತ್ತಿ)

ಧ್ಯೇಯ, ಗೀಳು, ಉದ್ಯೋಗ ಹಾಗೂ ವೃತ್ತಿ, ಇವುಗಳಿಗೆ ನಮ್ಮಲ್ಲಿ ಒಂದೇ ಉತ್ತರವಿದ್ದರೆ, ಅದು ನಮ್ಮ ಇಕಿಗಾಯ್ ಆಗುತ್ತದೆ. ಪ್ರತಿಯೊಬ್ಬರ ಇಕಿಗಾಯ್‌ ಬೇರೆಯಾದರೂ ಜೀವನದ ಅರ್ಥದ ಹುಡುಕಾಟದಲ್ಲಿ ನಾವೆಲ್ಲರೂ ಒಂದೇ. ನಿಮ್ಮಲ್ಲಿ ಕೆಲವರಿಗೆ ಆಗಲೇ ಇಕಿಗಾಯ್‌ ದೊರಕಿರಬಹುದು, ಇನ್ನು ಕೆಲವರು ಹುಡುಕಾಡುತ್ತಿರಬಹುದು, ಕೆಲವರಿಗೆ ಇದರ ಬಗ್ಗೆ ಅರಿವಿರದಿರಬಹುದು. ಈ ಪಯಣದಲ್ಲಿ ನಾವು ಎಲ್ಲೇ ಇದ್ದರೂ ಈ ಪುಸ್ತಕ ನಿಮಗೆ ಸ್ಪೂರ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ. ನಿಮಗೆ ಸಾಧ್ಯವಾದಲ್ಲಿ ಈ ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ.

ಇಂತಿ ನಿಮ್ಮ, 
ಶ್ವೇತ

**************************************************************************

ದಿನನಿತ್ಯದ ತತ್ವಜ್ಞಾನ – ರವಿರಾಜ ಉಪ್ಪೂರರ ಕವನಗಳು

ಅನಿವಾಸಿಯ ಬಂಧುಗಳಿಗೆಲ್ಲ ನಮಸ್ಕಾರಗಳು. ಈ ಶುಕ್ರವಾರ ದಿಢೀರ್ ದೋಸೆಯಂತೆ ಕೊನೆಯ ಗಳಿಗೆಯಲ್ಲಿ ಬಡಿಸುತ್ತಿರುವ ಕವನಗಳು, ಡಾ. ರವಿರಾಜ್ ಉಪ್ಪೂರರ ಹಂಚಿನಲ್ಲಿ ತಯಾರಾದವು. ಮೂಲತಃ ಉಡುಪಿಯವರಾದ ರವಿರಾಜ್, ವೃತ್ತಿಯಲ್ಲಿ ಕ್ಷ-ಕಿರಣ ತಜ್ಞರು. 2010ರಿಂದ ಇಂಗ್ಲಂಡಿನಲ್ಲಿ ತಮ್ಮ ಪತ್ನಿ-ಪುತ್ರರೊಂದಿಗೆ ವಾಸವಾಗಿರುವ ರವಿರಾಜ್ ಕವನ ಗೀಚುವುದಲ್ಲದೇ (ಅವರದೇ ಮಾತಿನಲ್ಲಿ), ಯಕ್ಷಗಾನದಲ್ಲೂ ಆಸಕ್ತಿ ಉಳ್ಳವರು. ಬನ್ನಿ, ಏನು ಹೇಳುತ್ತಾರೋ ನೋಡೋಣ – ಲಕ್ಷ್ಮೀನಾರಾಯಣ ಗುಡೂರ, ಸಂಪಾದಕ (ಸಬ್ಸ್ಟಿಟ್ಯೂಟ್).

***********************************************************************

ಪಯಣವೆಲ್ಲಿಗೋ ತಿಳಿಯದೇ ಹೊರಟಿರುವೆ 
ಗಾಣದೆತ್ತಿನಂತೆ ತಿರುಗುತಿರುವೆ ಗುರಿ ಇಲ್ಲದೇ 
ಬಂದಿರುವುದು ಒಬ್ಬನೇ... ಹೋಗುವುದೂ ಒಬ್ಬನೇ 
ನಡುದಾರಿಯಲೊಂದಿಷ್ಟು ನಲಿಯಬಾರದೇ 
ಕಲೆಯಬಾರದೇ ಒಂದಿಷ್ಟು ನಿನ್ನಿಷ್ಟದ ಜೀವಗಳೊಡನೆ ?
ಯಾಕೀ ಬಿಗುಮಾನ ... ಇಲ್ಲಿಯದೇನೂ ನಿನ್ನದಲ್ಲ 
ಜೋಳಿಗೆಯ ಭರಿಸಿಕೋ ಪ್ರೀತಿ ಸ್ನೇಹದ ಭಂಡಾರವ
ನಿನ್ನೀ ಬಾಳಿಗೆ ಅದುವೇ ನಿನಗಾಧಾರವು

*******

ಮೊದಮೊದಲು ತೊದಲಿ ನಡೆಯುವಾಗ 
ಕೈ ಹಿಡಿದು ನಡೆಸಿದೆ ನೀನೆನ್ನ 
ಮಡದಿಯ ಕೈ ಹಿಡಿದೊಡೇ ಮರೆವೆನೇ 
ನೀನಿತ್ತ ಕೈಯ ಆಸರೆಯ?
ನಿನಗಾಗುವೆ ನಾನಾಸರೆ 
ಮುಪ್ಪಿನಲಿ ನಿನ್ನ ಕೈಗೋಲಾಗಿ ತಾಯೆ

*******

ಹಳೆಯ ನೆನಪುಗಳು 
ಸುರುಳಿ ಬಿಚ್ಚಿದರೆ 
ಉರುಳಿ ಹೋಗುವುದು 
ಮರಳಿ ಬಾರದ ಕಾಲದ 
ವಿರಳ ಕ್ಷಣಗಳು ಮನದಾಳದಲ್ಲಿ

*******

ಮಿನುಗುವ ನಕ್ಷತ್ರ ಕಂಡಾಗಲೆಲ್ಲ 
ಮಲಗುವ ಅನಿಸುತ್ತದೆ 
ಮನಸಿನ ತುಂಬೆಲ್ಲ ತುಂಬಿರುತ್ತೆ 
ತಾರೆಯರ ತಾರಾಗಣ 
ಎದ್ದು ನೋಡಿದರೆ ಇನ್ನೂ 
ಬೆಳಕೇ ಹರಿದಿಲ್ಲ .... ಬರೀ ಕನಸುಗಳು 
ರವಿಯ ಆಗಮನಕೆ ಮಾಯವಾಯಿತೆಲ್ಲಾ 
ಕನಸಿನ ತಾರಾಗಣ .... 
ಮರೆಯಾದವು ಎಲ್ಲಾ  ಅಸಂಖ್ಯ ಮಿನುಗುತಾರೆಗಳು 
ಉಳಿದದ್ದು ಬರೀಯ ನಿದ್ರೆಗೆಟ್ಟ ರಾತ್ರಿಯು,
ಹಗಲಿಡೀ ಕಾಯಬೇಕಲ್ಲ ಇನ್ನು 
ಮಿನುಗು ತಾರೆಯರ ನೋಡಲು ... 
ಕನಸಿನ ರಾತ್ರೆಯ ಕಳೆಯಲು

*******

ನೀಲಾಕಾಶ ಹೊಂಬಣ್ಣದ ರಾತ್ರಿಯುಡಿಗೆ ತೊಟ್ಟು 
ಕಾಯುತಿರುವಳು ಪ್ರಣಯಕ್ಕಾಗಿ ತಿಂಗಳೊಂದಿಗೆ 
ಬಾಗಿಲಲಿ ನಿಂತು ಇಣುಕಿ ನೋಡುತಿಹನು ಬೆಳಗಿನ ಗೆಳೆಯ ರವಿ 
ದಣಿವಾಗಿಹ ನಮಗೆಲ್ಲ ಇವರಿಬ್ಬರ ಪ್ರಣಯ ಪ್ರಸಂಗವೇ ಒಂದು ಮನೋರಂಜನೆ ..

*******

ಗೌತಮನಿಗಾಯಿತು ಜೀವನ್ಮರಣದ ಲೆಖ್ಖಾಚಾರ
ಅರಳೀಮರದಡಿಯಲ್ಲಿ 
ನನಗರಿವಾಯಿತು ಮುಂದಿನ ಜೀವನದ ಸಾಕ್ಷಾತ್ಕಾರ 
ಅಡುಗೆಮನೆಯ ಸಿಂಕಿನಲ್ಲಿ 
ಹತ್ತಾರು ಪಾತ್ರೆಗಳ ತಿಕ್ಕಾಟದೊಂದಿಗೆ 
ತಿಳಿದಿರಲಿ ನಿನಗೆ ಸಹಬಾಳ್ವೆಯ ಮರ್ಮ ಇದೆಂದು 
ಆಸೆಯೇ ದುಃಖ್ಖಕ್ಕೆ ಮೂಲ ಎಂಬುದೀಗರಿವಾಯ್ತು 
ಸಾವೇ ಇರದ  ಮನೆಯ ಸಾಸಿವೆಯಂತೆ
ನೀ ಆಸೆ ಪಡದಿರು ಜೀವನದಿ ಬರೀ ಸುಖವ 
ಅದುವೇ ಬುದ್ದನಿಗೆ ನೀ ನೀಡುವ ಗೌರವ

*******

ದಟ್ಟ ಕಾಡಿನಲಿ  ಮದ್ದಾನೆಯ ಮದಿಸಬಲ್ಲೆ 
ಇಟ್ಟ ಬಾಣದ ಗುರಿಯ ಬದಲಿಸಬಲ್ಲೆ 
ಕೊಟ್ಟ ಮಾತನೂ ಮುರಿಯಬಲ್ಲೆ 
ಮಾರುತತನುಜನ ಮುರಿದಿಕ್ಕಬಲ್ಲೆ 
ಆದರೆ ನನ್ನಾಕೆಯನು ಸೋಲಿಸಲಾರೆ, ಮಾತಿನ ಮಲ್ಲೆ 
ಏನಾದರೂ ಆಕೆಯೇ ನನ್ನ ನಲ್ಲೆ

*******

ನಿನ್ನ ಮಡಿಲಲ್ಲಿ ಮರೆಯಾಗಿಸಬಲ್ಲೆ ಪ್ರಖರ ರವಿಕಿರಣವನ್ನೇ 
ಕರಗಿ ನೀರಾಗಿ ಸುರಿಸುವೆ ನೀ ಮಳೆಯ ಬರೀ ವರ್ಷಋತುವಿನಲ್ಲಿ 
ನನ್ನಾಕೆಯೋ ... ಮರೆಯಾಗಿಸಬಲ್ಲಳು ನನ್ನಾಲೋಚನೆಗಳನು 
ತನ್ನ ಮಾತಿನ ಮೋಡಿಯಲ್ಲಿ 
ಮತ್ತೊ ... ಸುರಿಸಬಲ್ಲಳು ಕಣ್ಣೀರಿನ ಮಳೆಯ 
ಸರ್ವ ಋತುಗಳಲ್ಲೂ!

*******

ರೀ... ತರಕಾರಿಯ ತರಲು ಹೊರಟಿರೇ 
ನನ್ನವಳು ಅಡುಗೆಮನೆಯಿಂದಲೇ ಉಲಿದಳು 
ಚರ್ಚೆ ಮಾಡದೆ ತಂದರೆ 
ಸಿಡುಕುವಳು ನಿಮಗೇನೂ ಬಾರದು ಉಳಿಸಲು 
ಮತ್ತೆ ... ತಂದಿರುವ ತರಕಾರಿಗಳೋ ಬರೀ ಹುಳಗಳು !!!.

*******

ಕಾಳ್ಗಪ್ಪು ನಾನು ನಿಶೆ
ಎಂದವಳು ದುಃಖದಲಿ
ಕಣ್ಣೀರ ಸುರಿಸುತಿರೆ
ಅವಳಶ್ರು ಬಿಂದುಗಳು
ಬಾನ ಬಯಲಿನ ತುಂಬ
ನಗೆಯ ನಕ್ಷತ್ರ ಮಿನುಗಿದವು

*************************

- ರವಿರಾಜ್ ಉಪ್ಪೂರ್