♥ ∗ಅನಿವಾಸಿಗೆ ಐದು ವರ್ಷದ ಹರ್ಷ ∗♥
(ಭಾರತೀಯರಿಗೆ ತಮ್ಮನ್ನು ಎರಡು ಶತಮಾನ ಆಳಿದ ಬ್ರಿಟಿಷರು ಠಕ್ಕ ನರಿಗಳಂತೇ ಕಂಡಿದ್ದರೆ ಅಚ್ಚರಿಯಿಲ್ಲ. ಆದರೆ 53 ವರ್ಷಗಳ ಕಾಲ ಇಂಗ್ಲೆಂಡಿನಲ್ಲೇ ನೆಲಸಿರುವ ಸುಶೀಲೇಂದ್ರ ರಾವ್ ರ ಗಾಳಕ್ಕೆ ಬ್ರಿಟಿಷರ ಹಲವು ’ನರಿ ’ಗಳು ಪದಗಳ ’ಮೀನಿಂ’ಗುಗಳಾಗಿ ಸಿಕ್ಕಿ ಬಿದ್ದು ಪದ್ಯರೂಪದಲ್ಲಿ ಮಿದುಳಿನಲ್ಲಿ ಮಿಂಚು ಹರಿಸುತ್ತವೆ.
ಇದೇ ಬಗೆಯ ಒಂದು ಪ್ರಯತ್ನ ವಾಟ್ಸಾಪ್ ನಲ್ಲಿ ಹರಿದಾಡಿದ ನೆನಪಿದೆ. ಆದರೆ, ಅದರ ಜೊತೆಗೆ ಒಂದಷ್ಟು ಕಥೆ, ಮಜಾ ಮತ್ತು ಮೋಜನ್ನು ಹರಿಸಿರುವ ಕವಿಗಳು ತಮ್ಮ ಬದುಕಿನುದ್ದಕ್ಕೂ ಉಳಿಸಿಕೊಂಡ ಮಾತೃ ಭಾಷೆ ಮತ್ತು ಸಂಸ್ಕೃತಿಯ ಬೆಳಕಲ್ಲಿ ಇಲ್ಲಿನವರ ಭಾಷೆಯ ಒಂದು ಸಾಮಾನ್ಯ ಅಂತ್ಯಪ್ರತ್ಯಯವನ್ನು ಕನ್ನಡದ ಕನ್ನಡಕ ಹಾಕಿಕೊಂಡು ಅವಲೋಕಿಸಿದ್ದಾರೆ.
ಇಂಗ್ಲೀಷು ಭಾಷೆಯಲ್ಲಿ 26 ಅಕ್ಷರಗಳಿದ್ದರೆ ಅದರ ಜೊತೆಯಲ್ಲಿ 26 ಸಾಮಾನ್ಯ ಅಂತ್ಯ ಪ್ರತ್ಯಯಗಳಿವೆ. ಅದರ ಜೊತೆಯಲ್ಲಿ ಒಂದೇ ರೀತಿಯಲ್ಲಿ ಕೇಳಿಸುವ ಆದರೆ ಬೇರೆ ಬೇರೆ ಅರ್ಥಗಳಿರುವ ಶಬ್ದಗಳಿವೆ ( HOMONYMS) ಅದರಂತೆ ಒಂದೇರೀತಿ ಕೇಳಿಸುವ ಆದರೆ ಬೇರೆ ಬೇರೆ ಅಕ್ಷರ ಜೋಡಣೆಯ ಪದಗಳಿವೆ (HOMOPHONES).ಇವೆಲ್ಲದರ ಜೊತೆ ಒಂದೇ ಅಕ್ಷರ ಜೋಡನೆಯಿದ್ದು ಬೇರೆ ಬೇರೆ ಅರ್ಥಕೊಡುವ ಪದಗಳೂ ಇವೆ (HOMOGRAPHS) ಇವೆಲ್ಲ ಯಾವುದೇ ಇತರೆ ಭಾಷಿಗರಿಗೆ ಕೆಲವೊಮ್ಮೆ ಅಚ್ಚರಿಯ ಜೊತೆ ತಲೆನೋವಾಗುವುದು ಕೂಡ ನಿಜ. ಈ ಗ-ಪದ್ಯ ದಲ್ಲಿ ಕವಿಗಳು ’ನರಿ ’ಯಿಂದ ಕೊನೆಯಾಗುವ ಪದಗಳ ಬೇಟೆಯಾಡಿ ಅನಿವಾಸಿಯ ಓದುಗರಿಗೆ ಕನ್ನಡದಲ್ಲಿ ಅರ್ಥಗಳ ಊಟ ಬಡಿಸಿದ್ದಾರ.- ಸಂ)
ಪರಿಚಯ
(
ಸಿ. ಹೆಚ್. ಸುಶೀಲೇಂದ್ರ ರಾವ್ ಅನಿವಾಸಿಯ ಪರಿಚಿತ ಬರಹಗಾರರು. ದಾವಣಗೆರೆಯಲ್ಲಿ ಇ೦ಜನೀಯರಿ೦ಗ್ ಪದವಿಯವರೆಗೆ ವಿದ್ಯಾಭ್ಯಾಸ ಮಾಡಿದ ಇವರು 4 ವಷ೯ ಕರ್ನಾಟಕ ಪಿ.ಡಬ್ಲು.ಡಿಯಲ್ಲಿ ಕೆಲಸ ಮಾಡಿದರು. ನಮ್ಮಲ್ಲಿ ಕೆಲವರು ಹುಟ್ಟುವ ಮುನ್ನವೇ ಅಂದರೆ 1966 ರಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದ ಇವರು ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿದವರು. ಮ್ಯಾಕಲ್ಸ ಫೀಲ್ಡ್ ಕೌನ್ಸಿಲ್ ಮತ್ತು ಮ್ಯಾಂಚೆಸ್ಟರ್ ಕೌನ್ಸಿಲ್ ಗಳಲ್ಲಿ ಬಹುಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದರು.
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಅಭಿರುಚಿಯಿರುವ ಇವರ ಹೃದಯ ಮಾತ್ರ ಮಾತೃಭಾಷೆ ಮತ್ತು ಸ್ವದೇಶೀ ಸ್ಪರ್ಷ ಭಾವನೆಗೆಗಳಿಗೆ ಯಾವತ್ತೂ ಆತುಕೊಂಡಿದೆ. ಆಗಾಗ ಮನಸ್ಸಿಗೆ ತೋರಿದ್ದನ್ನು ಬರೆಯುವ ಹವ್ಯಾಸವಿರುವ ಇವರು ನಿವೃತ್ತಿಯ ನಂತರ ಶಾಸ್ತ್ರೀಯ ಸಂಗೀತಾಭ್ಯಾಸಗಳಿಗೂ ತೆರೆದುಕೊಂಡವರು.
ಯು.ಕೆ. ಯ ಹಿರಿಯ ಕನ್ನಡ ಸಂಸ್ಥೆ ಕನ್ನಡ ಬಳಗದ ಮೊಟ್ಟ ಮೊದಲ ಕಾರ್ಯಕಾರೀ ಸಮಿತಿಯ ಸದಸ್ಯರೂ ಮತ್ತು ಸಂಸ್ಥಾಪಕ ಸದಸ್ಯರೂ ಆಗಿ ಕನ್ನಡ ಸೇವೆಗೆ ನಿಂತ ಇವರು 1986 ರಲ್ಲಿ ಕನ್ನಡ ಬಳಗದ ಸಂವಿಧಾನ ರಚನೆಗೆ ಸಹಕರಿಸಿದರು. ನಂತರ ಕನ್ನಡ ಬಳಗದ ಅಧ್ಯಕ್ಷರಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ಅನಿವಾಸಿ ಜಾಲ ಜಗುಲಿಯಲ್ಲಿ ಇವರ ಹಲವು ಕವನಗಳು ಪ್ರಕಟವಾಗಿವೆ. ‘ರಾಜಕೀಯ ‘, ‘ಕವಿ ಆಗಬೇಕೆ? ‘ ‘ಗ್ರೆನ್ಫಲ್ ಟವರ್ ದುರಂತ’ ಮತ್ತು ‘ದೊಂಬರಾಟವಯ್ಯ ‘ ಇವರ ಪ್ರಕಟಿತ ಕವನಗಳು-ಸಂ )
